ಸಂಶೋಧನೆಯಲ್ಲಿ ವಿಧಾನವು ಮುಖ್ಯವೆಂದೂ, ಆ ವಿಧಾನವನ್ನು ರೂಪಿಸುವ ಸಂಶೋಧನೆಯ ಧೋರಣೆ ಅಥವಾ ಸಂಶೋಧನೆಯ ತಾತ್ವಿಕತೆಯು ಅದಕ್ಕೆ ಆಧಾರವೆಂದೂ ಚರ್ಚೆ ಮಾಡಿದೆವು. ಹಾಗಿದ್ದರೆ ಈ ಚರ್ಚೆಯಲ್ಲಿ ಎದುರಾಗುವ ಮುಖ್ಯ ಪ್ರಶ್ನೆ ಸಂಶೋಧನೆಗಾಗಿ ವಿಧಾನವೊ ಅಥವಾ ವಿಧಾನಕ್ಕಾಗಿ ಸಂಶೋಧನೆಯೊ ಎಂಬುದು. ಇದನ್ನೆ ಬೇರೆ ಮಾತುಗಳಲ್ಲಿ ವಿವರಿಸುವುದಾದರೆ ಸಂಶೋಧನೆಯಲ್ಲಿ ಒಂದು ಕಡೆ ಸಂಶೋಧನೆಯ ವಿಷಯ ಇದ್ದು ಮತ್ತೊಂದು ಕಡೆ ಅದನ್ನು ನಡೆಸುವ ಸಂಶೋಧನಾ ವಿಧಾನ ಇದೆ. (ಇವೆರಡೂ ಬೇರೆಬೇರೆ ಇರುವುದಿಲ್ಲ) ಈ ಎರಡಲ್ಲಿ ಯಾವುದು ಯಾವುದನ್ನು ಅವಲಂಬಿಸಿದೆ ಎಂಬುದನ್ನು ಗಮನಿಸಬೇಕು. ಅಂದರೆ ಸಂಶೋಧನೆಯ ಮೇಲೆ ವಿಧಾನ ನಿಂತಿದೆಯೊ ಅಥವಾ ವಿಧಾನದ ಮೇಲೆ ಸಂಶೋಧನೆ ನಿಂತಿದೆಯೊ ಎಂಬುದನ್ನು ಕುರಿತು ಚರ್ಚೆ ಮಾಡಬೇಕು. ಸಂಶೋಧನಾ ವಿಷಯವು ವಿಧಾನವನ್ನು ನಿರ್ಧರಿಸುತ್ತದೆಯೊ ಅಥವಾ ಸಂಶೋಧನಾ ವಿಧಾನವು ಸಂಶೋಧನಾ ವಿಷಯವನ್ನು ನಿರ್ಧರಿಸುತ್ತದೆಯೊ ಎಂಬುದಾಗಿಯೂ ಕೂಡ ಮೇಲಿನ ಪ್ರಶ್ನೆಯನ್ನು ವಿವರಿಸಿಕೊಳ್ಳಬಹುದು.

ಇದನ್ನು ಒಂದು ಉದಾಹರಣೆಯ ಮೂಲಕ ಚರ್ಚೆಗೆ ಎತ್ತಿಕೊಳ್ಳುವುದು ಸೂಕ್ತ. ‘ಕನ್ನಡ ಸಣ್ಣ ಕಥೆಗಳಲ್ಲಿ ಸಂಸ್ಕೃತಿ ಕುರಿತ ಪ್ರಶ್ನೆಗಳು’ ಎಂಬ ವಿಷಯವನ್ನು ಸಂಶೋಧನೆಗೆ ಆಯ್ಕೆ ಮಾಡಿಕೊಂಡಿದ್ದೇವೆ ಎಂದು ತಿಳಿಯೋಣ. ಈ ವಿಷಯವನ್ನು ನಿರ್ಧರಿಸಿರುವುದು ಅಥವಾ ಈ ವಿಷಯವನ್ನು ಸಂಶೋಧನೆಗೆಂದು ಆಯ್ಕೆ ಮಾಡಿರುವುದು ಸಂಶೋಧಕರ ಧೋರಣೆ. ಕನ್ನಡ ಸಣ್ಣ ಕಥೆಗಳು ಎಂಬುದು ಸಂಶೋಧನೆ ನಡೆಸಲು ಅವರು ಆಯ್ಕೆ ಮಾಡಿಕೊಂಡಿರುವ ಕ್ಷೇತ್ರ. ಆದರೆ ಆ ಕ್ಷೇತ್ರದಲ್ಲಿ ಅವರು ಯಾವ ಪ್ರಶ್ನೆಗಳನ್ನು ಅಥವಾ ಯಾವ ಅಂಶಗಳನ್ನು ಕುರಿತು ಚರ್ಚೆ ಮಾಡಬೇಕು ಎಂಬ ಅವರ ಪ್ರಶ್ನೆಗೆ ಅವರ ಆಯ್ಕೆ ಸಂಸ್ಕೃತಿಯ ಪ್ರಶ್ನೆಗಳು ಎಂಬುದಾಗಿದೆ. ಇದೇ ವಿಷಯವನ್ನು ಬೇರೊಬ್ಬ ಸಂಶೋಧಕರು ‘ಕನ್ನಡ ಸಣ್ಣ ಕಥೆಗಳಲ್ಲಿ ಅಸ್ಪೃಶ್ಯತೆಯ ಪ್ರಶ್ನೆಗಳು’ ಎಂದು ತೆಗೆದುಕೊಳ್ಳಬಹುದು. ಮಗದೊಬ್ಬರು ಇದೇ ವಿಷಯವನ್ನು ‘ಕನ್ನಡ ಸಣ್ಣ ಕಥೆಗಳಲ್ಲಿ ಲಿಂಗ ಸಂಬಂಧದ ನೆಲೆಗಳು’ ಎಂದು ತೆಗೆದುಕೊಳ್ಳಬಹುದು. ಮೂವರು ಸಂಶೋಧಕರ ಸಂಶೋಧನಾ ವಿಷಯವು ಒಂದೇ ಆಗಿದೆ. ಆದರೆ ಆ ಮೂವರ ಸಂಶೋಧನೆಯ ಪರಿಕಲ್ಪನೆ ಮಾತ್ರ ಬೇರೆ ಬೇರೆ ಆಗಿದೆ. ಹೀಗೆ ಮೂವರು ಸಂಶೋಧಕರ ಸಂಶೋಧನೆಯ ಪರಿಕಲ್ಪನೆ ಬೇರೆ ಬೇರೆ ಆಗಿರಲು ಕಾರಣ ಆ ಮೂವರ ಧೋರಣೆಗಳಲ್ಲಿ ವ್ಯತ್ಯಾಸವಿರುವುದೇ ಆಗಿದೆ. ಒಬ್ಬರಿಗೆ ‘ಅಸ್ಪೃಶ್ಯತೆಯ ಪ್ರಶ್ನೆಗಳು’ ಮುಖ್ಯವಾದರೆ ಮತ್ತೊಬ್ಬರಿಗೆ ‘ಸಂಸ್ಕೃತಿಯ ಪ್ರಶ್ನೆಗಳು’ ಮುಖ್ಯವಾಗಿವೆ. ಮಗದೊಬ್ಬರಿಗೆ ‘ಲಿಂಗ ಸಂಬಂಧದ ನೆಲೆಗಳು’ ಮುಖ್ಯವಾಗಿವೆ. ಹೀಗೆ ಸಂಶೋಧಕರ ಸಂಶೋಧನಾ ಧೋರಣೆ ಅಥವಾ ಸಂಶೋಧಕರ ಲೋಕದೃಷ್ಟಿ ಬದಲಾದಂತೆ ಅವರು ಆಯ್ಕೆಮಾಡಿಕೊಳ್ಳುವ ಸಂಶೋಧನಾ ವಿಷಯದ ಶೀರ್ಷಿಕೆಯ ಸ್ವರೂಪದಲ್ಲಿಯೂ ಬದಲಾವಣೆಗಳು ನಡೆಯುತ್ತವೆ. ಬದಲಾವಣೆಯ ಈ ಸ್ವರೂಪವನ್ನು ಮುಖ್ಯ ಚರ್ಚೆಗೆ ತೆಗೆದುಕೊಳ್ಳುವುದರ ಮೂಲಕ ಸಂಶೋಧನಾ ವಿಷಯವು ಸಂಶೋಧನಾ ವಿಧಾನವನ್ನು ರೂಪಿಸುತ್ತದೆಯೊ ಅಥವಾ ಸಂಶೋಧನಾ ವಿಧಾನವು ಸಂಶೋಧನೆಯ ವಿಷಯವನ್ನು ರೂಪಿಸುತ್ತದೆಯೊ ಎಂಬುದನ್ನು ಚರ್ಚಿಸಬಹುದು.

ಸಾಮಾನ್ಯವಾಗಿ ಪ್ರತಿಯೊಂದು ವಿಷಯದಲ್ಲಿಯೂ ಅದನ್ನು ಅಧ್ಯಯನ ಮಾಡಬಹುದಾದ ಅಧ್ಯಯನ ವಿಧಾನಗಳು ಇರುತ್ತವೆ ಎಂದೂ, ಆಯಾ ವಿಷಯಗಳನ್ನು ಕುರಿತು ಅಧ್ಯಯನ ಮಾಡುವಾಗ ಆ ಅಧ್ಯಯನದ ವಿಷಯಗಳ ಒಳಗಿನಿಂದಲೇ ವಿಧಾನಗಳನ್ನು ರೂಪಿಸಿಕೊಳ್ಳಬೇಕು ಎಂದೂ ಹೇಳುವುದಿದೆ. ಹಾಗಿದ್ದರೆ ಯಾವುದೆ ಸಂಶೋಧನಾ ವಿಷಯದಲ್ಲಿ ಅದನ್ನು ಕುರಿತು ಅಧ್ಯಯನ ಮಾಡುವ ಸಂಶೋಧನಾ ವಿಧಾನಗಳು ಸಿದ್ಧಮಾದರಿಯಲ್ಲಿ ಇರುತ್ತವೊ ಅಥವಾ ಸಂಶೋಧಕರು ಆಯಾ ವಿಷಯಗಳನ್ನು ಕುರಿತು ಅಧ್ಯಯನ ಮಾಡುವಾಗ ಅಂತಹ ಸಂಶೋಧನಾ ವಿಧಾನಗಳನ್ನು ರೂಪಿಸಿಕೊಳ್ಳುತ್ತಾರೊ ಎಂಬ ಮತ್ತೊಂದು ಪ್ರಶ್ನೆಯನ್ನು ಕೇಳಿಕೊಳ್ಳಬಹುದು. ಸಂಶೋಧನಾ ವಿಷಯದಲ್ಲಿ ಆಯಾ ವಿಷಯವನ್ನು ಕುರಿತು ಅಧ್ಯಯನ ಮಾಡುವ ಸಂಶೋಧನಾ ವಿಧಾನಗಳು ಸಿದ್ಧಮಾದರಿಯಲ್ಲಿ ಇರುವುದಿಲ್ಲ. ಬದಲಿಗೆ ಅವುಗಳನ್ನು ಕುರಿತು ಅಧ್ಯಯನ ನಡೆಸುವ ಸಂಶೋಧಕರು ತಮ್ಮ ಹಿತಾಸಕ್ತಿಗೆ, ಧೋರಣೆಗೆ ತಕ್ಕಂತೆ ಸಂಶೋಧನೆಯ ವಿಧಾನಗಳನ್ನು ರೂಪಿಸಿಕೊಳ್ಳುತ್ತಾರೆ. ಒಬ್ಬರೇ ಸಂಶೋಧಕರು ಒಂದೇ ವಿಷಯವನ್ನು ಕುರಿತು ಬೇರೆ ಬೇರೆ ಕಾಲಘಟ್ಟದಲ್ಲಿ ಬೇರೆ ಬೇರೆ ನಿಲುವುಗಳನ್ನು ತಾಳುವ ಸಂಶೋಧನೆ ನಡೆಸಬಹುದು. ಇದಕ್ಕೆ ಪ್ರಧಾನವಾಗಿ ಮೂರು ಕಾರಣಗಳು ಇರಬಹುದು.

ಒಂದು : ಸಂಶೋಧಕರ ಗ್ರಹಿಕೆಯಲ್ಲಿ, ಲೋಕದೃಷ್ಟಿಯಲ್ಲಿ, ಅವರ ಧೋರಣೆಯಲ್ಲಿ, ಆಲೋಚನಾ ಕ್ರಮದಲ್ಲಿ, ಚಿಂತನಾ ವಿಧಾನದಲ್ಲಿ ಆಗಬಹುದಾದ ಬದಲಾವಣೆ ಇರಬಹುದು. ಎರಡು: ಸಂಶೋಧಕರು ಸಂಶೋಧನೆ ಮಾಡುವ ಕಾಲದ ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಮತ್ತಿತರೆ ಕಾರಣಗಳಿಂದಲೂ ಈ ಬದಲಾವಣೆ ನಡೆಯಬಹುದು. ಮೂರು : ಸಂಶೋಧಕರು ಯಾವ ವಿಷಯವನ್ನು ಕುರಿತು ಸಂಶೋಧನೆ ನಡೆಸುತ್ತಾರೊ ಆ ವಿಷಯದಲ್ಲಿಯೇ ನಿರ್ದಿಷ್ಟವಾಗಿ ನಡೆದಿರಬಹುದಾದ ಆಂತರಿಕ ಬದಲಾವಣೆಗಳೂ ಇರಬಹುದು. ಈ ಮೂರು ಮುಖ್ಯ ಕಾರಣಗಳಿಂದಾಗಿ ಒಬ್ಬರೇ ಸಂಶೋಧಕರು ಒಂದೇ ವಿಷಯವನ್ನು ಕುರಿತು ಬೇರೆ ಬೇರೆ ಕಾಲದಲ್ಲಿ ಸಂಶೋಧನೆ ನಡೆಸಿದಾಗ ಅವರ ಗ್ರಹಿಕೆಯ ಸ್ವರೂಪ ಮತ್ತು ಅವರು ನಡೆಸಿದ ಸಂಶೋಧನೆಯ ಫಲಿತಗಳಲ್ಲಿ ಬದಲಾವಣೆಗಳು ನಡೆಯುತ್ತವೆ. ಅಂದರೆ ಸಂಶೋಧಕರ ಸಾಹಿತ್ಯಕ ಗ್ರಹಿಕೆಯಲ್ಲಿ ಆಗುವ ಬದಲಾವಣೆಗಳು ಅವರ ಸಂಶೋಧನೆಯ ವಿಧಾನಗಳನ್ನು ಬದಲಾಯಿಸುತ್ತವೆ ಎಂದಾಯಿತು.

ಸಾಹಿತ್ಯ ಸಂಶೋಧನೆಯಲ್ಲಿ ಸಾಹಿತ್ಯವನ್ನು ನೋಡುವ, ಗ್ರಹಿಸುವ, ನಿರೂಪಿಸುವ ಮತ್ತು ಅದನ್ನು ಸಂಶೋಧನೆಯಲ್ಲಿ ತಾತ್ವೀಕರಿಸುವ ವಿಧಾನಗಳು ಜಡವಾಗಿ ಇರಬೇಕಾಗಿಲ್ಲ; ಇರುವುದೂ ಇಲ್ಲ. ಈ ಹಿನ್ನೆಲೆಯಲ್ಲಿ ಸಾಹಿತ್ಯ ಸಂಶೋಧನೆಯಲ್ಲಿ ಸಂಶೋಧನೆಗಾಗಿ ವಿಧಾನವೊ ಅಥವಾ ವಿಧಾನಕ್ಕಾಗಿ ಸಂಶೋಧನೆಯೊ ಎಂಬ ಅನುಮಾನಿತ ಹಾಗೂ ಊಹಾತ್ಮಕ ಪ್ರಶ್ನೆಯನ್ನು ನಿರ್ದಿಷ್ಟವಾಗಿ ಹೀಗೇ ಎಂದು ಹೇಳಲು ಬರುವುದಿಲ್ಲ. ಆದರೆ ಸಂಶೋಧನೆಯ ತಾತ್ವಿಕತೆಯ ಮೇಲೆ ಸ್ಥಾಪಿತ ಧೋರಣೆಗಳು, ವ್ಯವಸ್ಥೆಯ ಪರವಾದ ಆಲೋಚನಾ ಕ್ರಮಗಳು ಹಾಗೂ ಪ್ರಭುತ್ವದ ಆಲೋಚನಾ ವಿಧಾನಗಳು ಪ್ರಭಾವ ಬೀರಿದ್ದರೆ, ಸಂಶೋಧನೆಗಳು ಆ ವಿಧಾನಗಳನ್ನು ಯಥಾವತ್ತಾಗಿ ಸ್ವೀಕರಿಸಿ, ನಂಬಿ ನಡೆಯುತ್ತವೆ. ಆಗ ಮಾತ್ರ ವಿಧಾನಕ್ಕಾಗಿ ಸಂಶೋಧನೆ ಎಂಬ ಜಡಸೂತ್ರ ಅನ್ವಯವಾಗುತ್ತದೆ. ಆಗ ಎಲ್ಲಾ ಸಾಹಿತ್ಯಕ ಕೃತಿಗಳಿಗೂ, ಎಲ್ಲಾ ಕಾಲದ ಸಾಹಿತ್ಯ ಕೃತಿಗಳಿಗೂ ಒಂದೇ ಮಾದರಿಯ, ಒಂದೇ ವಿನ್ಯಾಸದ, ಒಂದೇ ರೂಪದ ಸಂಶೋಧನೆ ಮಾತ್ರ ಇರುತ್ತದೆ ಇರಬೇಕು ಎಂಬ ಧೋರಣೆ ಮುಂಚೂಣಿಗೆ ಬರುತ್ತದೆ. ಸಾಹಿತ್ಯವನ್ನು ಜಡ ಆಕೃತಿ ಎಂದು ತೀರ್ಮಾನಿಸಿ, ಅದಕ್ಕೆ ಎಲ್ಲಾ ಕಾಲಕ್ಕೂ ಸಲ್ಲುವ ಸಾರ್ವಕಾಲಿಕವಾದ ಅರ್ಥಗಳು, ಮೌಲ್ಯಗಳು ಇರುತ್ತವೆ. ಅವುಗಳನ್ನು ದಾಖಲಿಸುವ ಮೂಲಕ ಸಾಹಿತ್ಯ ಕೃತಿಗಳನ್ನು ಅರ್ಥೈಸಬೇಕು. ಇದುವೇ ಸಾಹಿತ್ಯವನ್ನು ಸಂಶೋಧನೆ ಮಾಡಲು ಸರಿಯಾದ ಮತ್ತು ಸೂಕ್ತವಾದ ದಾರಿ ಎನ್ನುವ ಧೋರಣೆಗಳು ಜಾರಿಯಾಗುತ್ತವೆ. ಅವು ಸಾಹಿತ್ಯ ಕೃತಿಗಳಿಗೆ ನಿಘಂಟಿನಲ್ಲಿ ಅರ್ಥಗಳು ಇರುತ್ತವೆ, ಆ ಅರ್ಥಗಳನ್ನು ಅರಿತುಕೊಂಡು, ಅವುಗಳನ್ನು ಸೂಕ್ತವಾದ ಕ್ರಮದಲ್ಲಿ ಜೋಡಿಸುವ ಮೂಲಕ ಸಾಹಿತ್ಯವನ್ನು ಅಧ್ಯಯನ ಮಾಡಬಹುದು ಎಂಬ ನಂಬಿಕೆಯ ಮಾದರಿಯವು. ಇಂತಹ ಅಧ್ಯಯನ ಮಾದರಿಗಳು ಸಾಹಿತ್ಯ ಯಾವುದೇ ಇರಲಿ, ಸಾಹಿತಿ ಯಾರೇ ಇರಲಿ, ಸಾಹಿತ್ಯ ಯಾವುದೇ ಕಾಲದ್ದಿರಲಿ, ಅದನ್ನು ಸಂಶೋಧನೆ ಮಾಡಲು ಎಲ್ಲರಿಗೂ ಹಾಗೂ ಎಲ್ಲಾ ಕಾಲಕ್ಕೂ ಸಲ್ಲುವ ಸಿದ್ಧಮಾದರಿಯ ಒಂದೇ ಒಂದು ವಿಧಾನ ಇದೆ, ಅದನ್ನು ಬಳಸುವ ಮೂಲಕ ಮಾತ್ರವೇ ಸಾಹಿತ್ಯವನ್ನು ‘ಸರಿಯಾದ ಕ್ರಮದಲ್ಲಿ’ ಸಂಶೋಧನೆ ಮಾಡಿದಂತೆ ಆಗುತ್ತದೆ ಎಂದು ನಂಬಿಸಲು ಪ್ರಯತ್ನಿಸುತ್ತವೆ. ಇಂತಹ ಸಂಶೋಧನೆಗಳು ವಿಧಾನಕ್ಕಾಗಿ ಸಂಶೋಧನೆ ಎಂಬ ತತ್ವವನ್ನು, ವಿಧಾನಕ್ಕಾಗಿ ಸಂಶೋಧನೆ ಎಂಬ ಸೂತ್ರವನ್ನು ಪ್ರಶ್ನಾತೀತವಾಗಿ ಒಪ್ಪುತ್ತವೆ. ಅವನ್ನು ಸಂಶೋಧಕರ ಮುಂದಿಡುತ್ತವೆ.

ಕೆಲವು ಸಂಶೋಧನೆಗಳಲ್ಲಿ ಪ್ರಶ್ನಾವಳಿಯ ವಿಧಾನವನ್ನು ಅನುಸರಿಸುವುದುಂಟು. ಅಂತಹ ಪ್ರಶ್ನಾವಳಿಯ ತಯಾರಿಕೆಯ ಹಿಂದೆ ಕೆಲವು ಸಾಮಾನ್ಯ ಪೂರ್ವಗ್ರಹಗಳಿರುತ್ತವೆ. ಪ್ರಶ್ನಾವಳಿಯನ್ನು ಸಂಬಂಧಪಟ್ಟವರ ಮುಂದೆ ತೆಗೆದುಕೊಂಡು ಹೋದಾಗ ಅದಕ್ಕೆ ಉತ್ತರವನ್ನು ಹೇಳಿಯೇ ಹೇಳುತ್ತಾರೆ ಎಂಬುದು ಮೊದಲ ಒಪ್ಪಿತ ಗ್ರಹಿಕೆ. ಜೊತೆಗೆ ಪ್ರಶ್ನಾವಳಿ ಇಂತಹ ಪ್ರಶ್ನೆಯೊಂದಕ್ಕೆ ಇಂತಹದ್ದೇ ಉತ್ತರವನ್ನು ಹೇಳಬಹುದು ಎಂಬ ಊಹೆಯ ಎರಡನೆ ಒಪ್ಪಿತ ಗ್ರಹಿಕೆ. ಪ್ರಶ್ನಾವಳಿ ತಯಾರಿಕೆಯಲ್ಲಿ ಈ ಎರಡು ಸಾಧ್ಯತೆಗಳಲ್ಲದೆ ಮೂರನೆಯ ಮತ್ತೊಂದು ಸಾಧ್ಯತೆ ಕೂಡ ಇರಲು ಸಾಧ್ಯವಿದೆ. ಪ್ರಶ್ನಾವಳಿಯಲ್ಲಿ ಕೇಳಲಾಗಿರುವ ಒಂದು ಪ್ರಶ್ನೆಗೆ ಸಂಭವನೀಯವಾದ ನಾಲ್ಕು ಆಯ್ಕೆಗಳನ್ನು ಕೊಟ್ಟಿರುತ್ತಾರೆ. ಅದೂ ಕೂಡ ಈ ನಾಲ್ಕರಲ್ಲಿ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರ ಸೂಚಿಸಿಯೇ ಸೂಚಿಸುತ್ತಾರೆ ಎಂದು ಮೊದಲೇ ಗ್ರಹಿಸಿಕೊಳ್ಳಲಾಗಿರುತ್ತದೆ. ಇದಕ್ಕೆ ಕೆಲವು ಉದಾಹರಣೆಗಳನ್ನು ನೋಡೋಣ. ಪ್ರಶ್ನೆ: ‘ನೀವು ಬೈರಪ್ಪನವರ ಕಾದಂಬರಿಗಳನ್ನು ಯಾಕೆ ಓದುತ್ತೀರಿ?’ ಆಯ್ಕೆ ಉತ್ತರ ೧. ಬೈರಪ್ಪನವರ ಕಾದಂಬರಿಗಳ ಶೈಲಿ ಪರಿಣಾಮಕಾರಿಯಾಗಿರುತ್ತದೆ. ಅದಕ್ಕಾಗಿ ನಾನು ಅವರ ಕಾದಂಬರಿಗಳನ್ನು ಓದುತ್ತೇನೆ. ಆಯ್ಕೆ ಉತ್ತರ ೨. ಬೈರಪ್ಪನವರ ಕಾದಂಬರಿಗಳ ಜಗತ್ತು ನಿಜಜೀವನಕ್ಕೆ ಬಹಳ ಹತ್ತಿರದ್ದು ಎನಿಸುತ್ತದೆ. ಅದಕ್ಕಾಗಿ ನಾನು ಅವರ ಕಾದಂಬರಿಗಳನ್ನು ಓದುತ್ತೇನೆ. ಆಯ್ಕೆ ಉತ್ತರ ೩. ಬೈರಪ್ಪನವರು ತಮ್ಮ ನೇರ ಅನುಭವಗಳನ್ನು ಕುರಿತು ಕಾದಂಬರಿಗಳನ್ನು ಬರೆಯುತ್ತಾರೆ. ಅದಕ್ಕಾಗಿ ನಾನು ಅವರ ಕಾದಂಬರಿಗಳನ್ನು ಓದುತ್ತೇನೆ. ಆಯ್ಕೆ ಉತ್ತರ ೪. ಬೈರಪ್ಪನವರು ಕಾದಂಬರಿಯ ವಸ್ತು ಯಾವುದೇ ಇರಲಿ. ಅದನ್ನು ಸತ್ಯದ ಒರೆಗೆ ಹಚ್ಚಿ ಸೃಜನಾತ್ಮಕವಾಗಿ ನಿರೂಪಿಸುತ್ತಾರೆ. ಅದಕ್ಕಾಗಿ ನಾನು ಅವರ ಕಾದಂಬರಿಗಳನ್ನು ಓದುತ್ತೇನೆ. ಹೀಗೆ ಪ್ರಶ್ನಾವಳಿಯನ್ನು ಆಧರಿಸಿದ ಸಂಶೋಧನೆಯ ಸಂದರ್ಭದಲ್ಲಿ ಪ್ರಶ್ನಾವಳಿಯ ಸ್ವರೂಪ ಮೇಲಿನಂತೆ ಇರಬಹುದು. ಮೇಲಿನ ಸಾಧ್ಯತಾ ಪ್ರಶ್ನಾವಳಿಯಲ್ಲಿ ಬೈರಪ್ಪನವರ ಜಾಗದಲ್ಲಿ ರವಿಬೆಳಗೆರೆ, ಶಿವರಾಮ ಕಾರಂತ ಹೀಗೆ ಯಾರೇ ಬರಹಗಾರರನ್ನಾದರೂ ಹಾಕಬಹುದು. ಪ್ರಶ್ನಾವಳಿಯಲ್ಲಿ ಬರಹಗಾರರ ಹೆಸರು ಬದಲಾಗಬಹುದು. ಆದರೆ ಪ್ರಶ್ನಾವಳಿಯ ಸೂತ್ರ ಮಾತ್ರ ಹಾಗೇ ಇರುತ್ತದೆ.

ಈಗ ಅಂತಹ ಪ್ರಶ್ನಾವಳಿಗೆ ‘ಬರಬಹುದಾದ’ ಉತ್ತರಗಳ ಸ್ವರೂಪಗಳನ್ನು ಗಮನಿಸೋಣ. ಇಲ್ಲಿ ‘ಬರಬಹುದಾದ’ ಎಂಬುದು ಬಹಳ ಮುಖ್ಯವಾದುದು. ಯಾಕೆಂದರೆ ಪ್ರಶ್ನಾವಳಿಯನ್ನು ತಯಾರು ಮಾಡಿದವರು ಓದುಗರನ್ನು ಕೇಳಿಕೊಂಡು ಪ್ರಶ್ನಾವಳಿಯನ್ನು ತಯಾರು ಮಾಡಿರುವುದಿಲ್ಲ. ಅದು ಸಾಧ್ಯವಿಲ್ಲ ಎಂಬ ಮಾತು ಬೇರೆ.  ಹಾಗಾಗಿ ಓದುಗರನ್ನು ವಿಚಾರಿಸಿಕೊಂಡು ಪ್ರಶ್ನಾವಳಿಯನ್ನು ತಯಾರು ಮಾಡಿಲ್ಲವಾದ ಕಾರಣ, ಓದುಗರ ಮುಂದೆ ಈ ಪ್ರಶ್ನಾವಳಿಯನ್ನು ತೆಗೆದುಕೊಂಡು ಹೋದಾಗ, ಆ ಓದುಗರು ಈ ಪ್ರಶ್ನಾವಳಿಗೆ ಇಂತಿಂತಹ ಉತ್ತರಗಳನ್ನು ಹೇಳಬಹುದು ಎಂದು ಪ್ರಶ್ನಾವಳಿ ತಯಾರು ಮಾಡಿರುವವರು ಮೊದಲೇ ಊಹಿಸಿಕೊಂಡಿರುತ್ತಾರೆ. ಈ ಊಹೆಯನ್ನು ಕಲ್ಪಿತ ಓದುಗರ ಮುಂದಿಟ್ಟು ಅದನ್ನು ಅವರಿಂದ ನಿರೀಕ್ಷೆ ಮಾಡುತ್ತಾರೆ. ಹಾಗಾಗಿ ಪ್ರಶ್ನಾವಳಿಯನ್ನು ತಯಾರು ಮಾಡುವಾಗ ಮೊದಲ ಹಂತದಲ್ಲಿ ಊಹಾತ್ಮಕ ಉತ್ತರವಾಗಿದ್ದುದು, ಎರಡನೇ ಹಂತದಲ್ಲಿ ಅದು ಅಪೇಕ್ಷಿತ ಉತ್ತರವಾಗಿ ರೂಪಾಂತರ ಹೊಂದುತ್ತದೆ. ಈ ಅಪೇಕ್ಷಿತ ಉತ್ತರ ಎಂಬುದು ಒಪ್ಪಿತ ಉತ್ತರವಾಗಿ ಮಾರ್ಪಾಟಾಗುತ್ತದೆ. ಅಷ್ಟು ಮಾತ್ರವಲ್ಲ; ಕಾದಂಬರಿಕಾರರ ಬಗ್ಗೆ ಪ್ರಶ್ನಾವಳಿಯನ್ನು ತಯಾರು ಮಾಡಿದವರು ಯಾವ ಅಭಿಪ್ರಾಯ, ಯಾವ ನಿಲುವು, ಯಾವ ತೀರ್ಮಾನವನ್ನು ತಾಳಿದ್ದಾರೊ ಅದೇ ತೀರ್ಮಾನವನ್ನು ಓದುಗರು ತಾಳಿರುತ್ತಾರೆ ಎಂಬ ಪೂರ್ವಕಲ್ಪನೆ ಕೆಲಸ ಮಾಡಿರುತ್ತದೆ ಪ್ರಶ್ನಾವಳಿಯಲ್ಲಿ ಕೇಳಲಾಗಿರುವ ಕಾದಂಬರಿಕಾರರ ಕಾದಂಬರಿಗಳನ್ನು ಓದುಗರು ಓದಿಯೇ ಓದಿರುತ್ತಾರೆ ಎಂದು ತಿಳಿಯಲಾಗಿರುತ್ತದೆ. ಓದುಗರು ಕೆಲವರ ಕಾದಂಬರಿಗಳನ್ನು ಓದಿರಬಹುದು. ಮತ್ತೆ ಕೆಲವರು ಕಾದಂಬರಿಗಳನ್ನು ಓದದೆ ಇರಬಹುದು. ಆದರೆ ಪ್ರಶ್ನಾವಳಿಯಲ್ಲಿ ಮಾತ್ರ ಓದುಗರು ‘ನಾವು ಕೇಳುವ ಕಾದಂಬರಿಕಾರರ ಕಾದಂಬರಿಗಳನ್ನು ಓದಿಯೇ ಓದಿರುತ್ತಾರೆ’ ಎಂದು ಮೊದಲೇ ತೀರ್ಮಾನಿಸಲಾಗಿರುತ್ತದೆ. ಈ ಪೂರ್ವ ತೀರ್ಮಾನವೇ ಪಾರ್ಶ್ವಿಕವಾದುದು ಇಲ್ಲವೆ ತಪ್ಪಾದುದು. ಯಾಕೆಂದರೆ ಓದುಗರು ಪ್ರಶ್ನಾವಳಿಯಲ್ಲಿ ಕೇಳಲಾಗಿರುವ ಕಾದಂಬರಿಗಳನ್ನು ಓದಿರಬಹುದು ಇಲ್ಲವೆ ಓದದೆ ಇರಬಹುದು. ಈ ಓದದೆ ಇರಬಹುದು ಎಂಬುದು ಮತ್ತೊಂದು ಸಾಧ್ಯತೆ. ಆದರೆ ಪ್ರಶ್ನಾವಳಿಯಲ್ಲಿ ಮಾತ್ರ ಈ ಸಾಧ್ಯತೆಯನ್ನು ಹತ್ತಿಕ್ಕಲಾಗಿದೆ. ಜೊತೆಗೆ ಪ್ರಶ್ನಾವಳಿಯನ್ನು ಯಾರು ತಯಾರು ಮಾಡಿದ್ದಾರೊ ಅವರ ತೀರ್ಮಾನವನ್ನೇ ಓದುಗರು ನಂಬುತ್ತಾರೆ ಮತ್ತು ಒಪ್ಪುತ್ತಾರೆ ಎಂಬ ಪೂರ್ವಗ್ರಹ ಕೂಡ ಇಲ್ಲಿ ಕೆಲಸ ಮಾಡಿದೆ. ಅಂದರೆ ಓದುಗರ ಅಭಿಪ್ರಾಯಕ್ಕೆ, ಓದುಗರ ಆಲೋಚನೆಗೆ ಇದರಲ್ಲಿ ಅವಕಾಶವನ್ನೆ ಕೊಡಲಾಗಿಲ್ಲ. ಬದಲಾಗಿ ಸಂಶೋಧಕರು ತಮ್ಮ ಅಭಿಪ್ರಾಯವನ್ನೆ ಓದುಗರ ಅಭಿಪ್ರಾಯವೆಂದೂ, ತಮ್ಮ ಆಲೋಚನೆಯನ್ನೆ ಓದುಗರ ಆಲೋಚನೆ ಎಂದೂ ತೀರ್ಮಾನಿಸುತ್ತಾರೆ. ಹಾಗಾಗಿಯೇ ಸಂಭವನೀಯ ಉತ್ತರಗಳಲ್ಲಿ ಕೇವಲ ನಾಲ್ಕನ್ನು ಮಾತ್ರ ಕೊಡಲಾಗಿರುತ್ತದೆ. ಇದು ಯಾವುದೆ ಪ್ರಶ್ನಾವಳಿಯ ಸಾಮಾನ್ಯ ಸೂತ್ರ ಮತ್ತು ಸಾಮಾನ್ಯ ತಿರುಳು. ಆದರೆ ಓದುಗರಲ್ಲಿ ಸಂಭವನೀಯವಾದ ನಾಲ್ಕು ಉತ್ತರಗಳಲ್ಲದೆ ಐದನೆಯ ಉತ್ತರವೊ, ಆರನೆಯ ಉತ್ತರವೊ ಇರಬಹುದು. ಆ ಊಹೆಗೊ ಅಥವಾ ಅಂತಹ ಒಂದರ ಸಾಧ್ಯತೆಗೊ ಇಲ್ಲಿ ಅವಕಾಶವೆ ಇರುವುದಿಲ್ಲ. ಹಾಗಾಗಿ ಇಂತಹ ಸಂಶೋಧನೆಗಳು ವಿಧಾನಕ್ಕಾಗಿ ಸಂಶೋಧನೆ ಎಂಬ ರೀತಿಯಲ್ಲಿ ನಡೆಯುತ್ತವೆ.

ಸಾಹಿತ್ಯ ಸಂಶೋಧನೆಯು ನಿರ್ವಾತದಲ್ಲಿ ನಡೆಯುವುದಿಲ್ಲ. ಅದರ ಮೇಲೆ ಶಿಕ್ಷಣ ವ್ಯವಸ್ಥೆಯ ಮತ್ತು ಪ್ರಭುತ್ವದ ಧೋರಣೆಗಳು ಪ್ರಭಾವ ಬೀರುತ್ತಲೆ ಇರುತ್ತವೆ. ಈ ಕಾರಣವೂ ಸೇರಿದಂತೆ ಸಂಶೋಧನೆಯ ಪ್ರಶ್ನಾವಳಿಯು ರೂಪು ಪಡೆಯುತ್ತದೆ. ವಿವಿಧ ಹಂತಗಳ ಶೈಕ್ಷಣಿಕ ಪರೀಕ್ಷೆಗಳಲ್ಲಿ ಮತ್ತಿತರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇದೇ ಮಾದರಿಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಅಲ್ಲಿ ಪರೀಕ್ಷೆ ನಡೆಸುವವರು ತಮ್ಮ ಆಯ್ಕೆಯ ಉತ್ತರವನ್ನೇ ಪರೀಕ್ಷಾರ್ಥಿಗಳ ಉತ್ತರವೆಂದು ಪರಿಗಣಿಸುತ್ತಾರೆ. ಪರೀಕ್ಷಾರ್ಥಿಗಳೂ ಕೂಡ ತಮ್ಮದಲ್ಲದ ಉತ್ತರವನ್ನು ತಮ್ಮ ಉತ್ತರವೆಂದು ನಂಬುತ್ತಾರೆ. ಅಂದರೆ ಪರೀಕ್ಷೆ ನಡೆಸುವವರು ತಮ್ಮ ಧೋರಣೆಯನ್ನು ಪರೀಕ್ಷಾರ್ಥಿಗಳ ಮುಂದಿಟ್ಟು ಅದಕ್ಕೆ ಅವರ ಒಪ್ಪಿಗೆಯನ್ನೂ, ಸಮರ್ಥನೆಯನ್ನೂ ಪಡೆಯುವ ಕ್ರಮವಿದು. ಇದೇ ಮಾದರಿ ಸಂಶೋಧನೆಯ ಪ್ರಶ್ನಾವಳಿಯಲ್ಲೂ ಕೆಲಸ ಮಾಡುತ್ತದೆ.

* * *