ಸಾಹಿತ್ಯ ಸಂಶೋಧನೆಗೆ ಸಿದ್ಧಮಾದರಿಯ ಒಂದು ವಿಧಾನ ಇರುತ್ತದೆ, ಇದೆ ಎಂದು ಹೇಳಲು ಆಗುವುದಿಲ್ಲ. ಅಲ್ಲದೆ ಆ ಸಿದ್ಧಮಾದರಿಯ ಸಂಶೋಧನ ವಿಧಾನವನ್ನು ಪರಿಚಯ ಮಾಡುವುದಾಗಲಿ, ವಿವರಿಸುವುದಾಗಲಿ ಆಗದ ಮಾತು. ಸಾಹಿತ್ಯ ಸಂಶೋಧನೆಯ ಮಟ್ಟಿಗೆ ಹೇಳುವುದಾದರೆ, ಸಂಶೋಧನೆಯಲ್ಲಿ ಸಾಹಿತ್ಯವನ್ನು ಓದುವ ಕ್ರಮದಿಂದಲೆ ಅದರ ಸಂಶೋಧನೆಯ ವಿಧಾನ ರೂಪುಗೊಳ್ಳುತ್ತದೆ. ಸಾಹಿತ್ಯವನ್ನು ಓದುವ, ಗ್ರಹಿಸುವ ಮತ್ತು ವಿಶ್ಲೇಷಿಸಿ, ವ್ಯಾಖ್ಯಾನಿಸುವ ಹಲವು ಸಾಧ್ಯತೆಗಳು, ಕ್ರಮಗಳು ಇರುವುದರಿಂದ ಸಂಶೋಧನೆಯ ವಿಧಾನ ಕೂಡ ಜಡವಾಗಿ ಸ್ಥಾವರಗೊಳ್ಳದೆ ನಿರಂತರವಾಗಿ ಬದಲಾಗುತ್ತಾ ಸಾಗುತ್ತದೆ. ಹೀಗೆ ಬದಲಾಗುವ ಸ್ವರೂಪವೇ ಸಾಹಿತ್ಯ ಸಂಶೋಧನ ವಿಧಾನದ ಬಹಳ ಮುಖ್ಯವಾದ ಸ್ವಭಾವ ಎಂಬುದನ್ನು ಒತ್ತಿಹೇಳಬೇಕಾಗಿದೆ. ಜೊತೆಗೆ ಆ ಸ್ವಭಾವವು ಚಲನಶೀಲವಾದುದು ಎಂಬುದನ್ನೂ ಹೇಳಬೇಕಾಗಿದೆ. ಸಾಹಿತ್ಯವನ್ನು ಅರ್ಥೈಸುವ ಮತ್ತು ಗ್ರಹಿಸುವ ಕ್ರಮಗಳಲ್ಲೆ ಭಿನ್ನತೆಗಳು ಇರುವುದು ಸಾಮಾನ್ಯ. ಇದು ಓದುಗರಿಂದ ಓದುಗರಿಗೆ, ಸಂಶೋಧಕರಿಂದ ಸಂಶೋಧಕರಿಗೆ ಬದಲಾಗುವುದು ಒಂದು ಕ್ರಮ. ಇದಲ್ಲದೆ ಒಂದು ಕೃತಿಯನ್ನು ಒಬ್ಬರೆ ಓದುಗರು ಅಥವಾ ಸಂಶೋಧಕರು ಬೇರೆ ಬೇರೆ ಕಾಲಗಳಲ್ಲಿ, ಬೇರೆ ಬೇರೆ ಉದ್ದೇಶಗಳಿಗೆ ಓದಿದಾಗ, ಆ ಒಂದೇ ಕೃತಿಯು ಭಿನ್ನ ಅರ್ಥಸಾಧ್ಯತೆಗಳನ್ನು ಸ್ಫುರಿಸಬಹುದು. ಇದು ಸಾಹಿತ್ಯ ಪಠ್ಯಕ್ಕಿರುವ ಶಕ್ತಿ ಹೇಗೊ, ಹಾಗೆಯೇ ಓದುಗರ ಸೂಕ್ಷ್ಮ ಪಠ್ಯಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ನಾವು ನಿತ್ಯ ನೋಡುವ ಕ್ಯಾಲೆಂಡರ್‌ನಲ್ಲಿ ತಾರೀಖು, ರಜೆಯ ದಿನಗಳು, ಹುಣ್ಣಿಮೆ, ಅಮವಾಸೆ ಮುಂತಾದುವನ್ನು ನಮಗೆ ಬೇಕಾದಂತೆ ಗಮನಿಸುತ್ತೇವೆ. ಅದರಲ್ಲಿ ನಮೂದಾಗಿರುವ ಹಬ್ಬ ಮುಂತಾದುವುಗಳನ್ನು ನಮ್ಮ ಆಯ್ಕೆಗೆ ತಕ್ಕಂತೆ ಗಮನಿಸುತ್ತೇವೆ. ಅಕ್ಟೋಬರ್ ೨ನೇ ತಾರೀಖನ್ನು ಕ್ಯಾಲೆಂಡರ್ ಗಾಂಧಿ ಜಯಂತಿ ಎಂದು ನಮೂದಿಸುತ್ತದೆ. ಅದನ್ನು ನೋಡುವ ನಾವು ಗಾಂಧಿ ಜಯಂತಿಯನ್ನು ಆಚರಿಸುವುದಿಲ್ಲ. ಡಿಸೆಂಬರ್ ೨೫ನ್ನು ಕ್ಯಾಲೆಂಡರ್ ಕ್ರಿಸ್‌ಮಸ್ ಎನ್ನುತ್ತದೆ. ಅಂದು ಎಲ್ಲರೂ ಕ್ರಿಸ್‌ಮಸ್ ಆಚರಿಸುವುದಿಲ್ಲ. ಕೆಲವರು ಆಚರಿಸುತ್ತಾರೆ. ಎಲ್ಲರಿಗೂ ದಿನಾಂಕ ಒಂದೇ. ಆದರೆ ಅದಕ್ಕೆ ಬೇರೆಬೇರೆಯವರು ಬೇರೆಬೇರೆ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ಸಾಹಿತ್ಯವನ್ನು ಓದುವ ಕ್ರಮಗಳೂ ಬಹುತೇಕ ಇದೇ ವಿಧಾನದವು.

ಸಾಹಿತ್ಯದಲ್ಲಿ ಸಿದ್ಧಮಾದರಿಯ ಅರ್ಥವಿವರಣೆಗಳು ಇರುತ್ತವೆ. ಅವನ್ನು ಹುಡುಕಿ ತೆಗೆದು ಆ ಮೂಲಕ ಸಂಶೋಧನೆ ಮಾಡುತ್ತೇವೆ ಎನ್ನುವುದು ಒಂದು ನಂಬಿಕೆ. ಒಂದು ವೇಳೆ ಒಂದು ಸಾಹಿತ್ಯ ಪಠ್ಯ ಎಲ್ಲರಿಗೂ ಒಂದೇ ಬಗೆಯ ಅರ್ಥವಿವರಣೆಗಳನ್ನೊ, ಸಂವೇದನೆಯನ್ನೊ, ಭಾವನೆಗಳನ್ನೊ, ಅನುಭವವನ್ನೊ ಕೊಡುವಂತಿದ್ದರೆ ಆಗ, ಸಾಹಿತ್ಯ ಸಂಶೋಧನೆಗೆ ನಿರ್ದಿಷ್ಟವಾದ ಮತ್ತು ಬದಲಾಗದ ಒಂದು ಸಂಶೋಧನ ವಿಧಾನ ಎಂಬುದು ಇದೆ ಎಂದು ತೀರ್ಮಾನಿಸಿ, ಅಂತಹದ್ದನ್ನು ವಿವರಿಸಬಹುದಿತ್ತು. ಅಂತಹದ್ದನ್ನು ಪರಿಚಯ ಮಾಡಬಹುದಿತ್ತು. ಆದರೆ ಆ ಬಗೆಯ ಸಿದ್ಧಮಾದರಿಯ ಮತ್ತು ಜಡವಾದ ಒಂದು ಸಂಶೋಧನ ವಿಧಾನ ಸಾಹಿತ್ಯಕ್ಕೆ ಸಾಧ್ಯವಾಗುವುದಿಲ್ಲ ಎಂಬುದನ್ನೆ ಇಲ್ಲಿ ಒತ್ತಿ ಹೇಳಬೇಕಾಗಿದೆ. ಹಾಗಿದ್ದರೆ ಸಂಶೋಧನ ವಿಧಾನ ಬದಲಾಗುವ ಮುಖ್ಯ ಪ್ರವೃತ್ತಿಗಳನ್ನು ಗಮನಿಸೋಣ.

ಈ ಮೇಲೆ ಉಲ್ಲೇಖಿಸಿದ ಕ್ಯಾಲೆಂಡರಿನ ವಿಷಯವನ್ನೆ ಮತ್ತೆ ಚರ್ಚೆಗೆ ತೆಗೆದುಕೊಳ್ಳೋಣ. ಕ್ಯಾಲೆಂಡರಿನ ಸಾಮಾನ್ಯ ಉದ್ದೇಶ ದಿನದಿನದ ಮಾಹಿತಿ ಕೊಡುವುದು. ಅದರಲ್ಲಿ ನಮೂದಾಗಿರುವ ಅಂಕಿಗಳು ಎಲ್ಲರಿಗೋ ಒಂದೇ. ಉದಾಹರಣೆಗೆ ಕೆಲವರಿಗೆ ಜನವರಿ ತಿಂಗಳಲ್ಲಿ ೩೧ ದಿನಗಳಿದ್ದು, ಮತ್ತೆ ಕೆಲವರಿಗೆ ೩೦ ದಿನಗಳ ಜನವರಿ ಇರುವುದಿಲ್ಲ. ಈ ಆಯಾಮದಲ್ಲಿ ಕ್ಯಾಲೆಂಡರ್ ಎಲ್ಲರ ಪಾಲಿಗೂ ಒಂದೇ. ಆದರೆ ಇದೇ ಕ್ಯಾಲೆಂಡರ್ ಎಲ್ಲಾ ವಿಷಯಗಳಲ್ಲಿಯೂ, ಎಲ್ಲರ ಪಾಲಿಗೂ ಒಂದೇ ಆಗಿ ಇರುವುದಿಲ್ಲ; ಒಂದೇ ಆಗಿ ಉಳಿಯುವುದಿಲ್ಲ. ಜನವರಿ ೧೪ನ್ನು ಕ್ಯಾಲೆಂಡರ್ ಸಂಕ್ರಾಂತಿ ಎಂದು ಪ್ರಕಟಿಸುತ್ತದೆ. ಅದರ ಅರ್ಥ ಎಲ್ಲರೂ ಸಂಕ್ರಾಂತಿಯನ್ನು ಆಚರಿಸುತ್ತಾರೆ ಎಂದಲ್ಲ. ಜೊತೆಗೆ ಸಂಕ್ರಾಂತಿ ಮುಸ್ಲಿಮರ, ಕ್ರೈಸ್ತರ ಮತ್ತು ಜೈನ ಮುಂತಾದವರ ಹಬ್ಬ ಅಲ್ಲ; ಅದು ಹಿಂದುಗಳ ಹಬ್ಬ. ಹಾಗಾಗಿ ಹಿಂದುಗಳು ಅದನ್ನು ಆಚರಿಸುತ್ತಾರೆ ಎಂದು ಸರಳೀಕರಿಸಲು ಬರುವುದಿಲ್ಲ. ‘ಹಿಂದುಗಳು’ ಎಂದು ಕರೆಯಲಾಗುವ ಸಮೂಹದಲ್ಲೆ ಕೆಲವರು ಆಚರಿಸುತ್ತಾರೆ; ಅನೇಕರು ಆಚರಿಸುವುದಿಲ್ಲ. ಸಂಕ್ರಾಂತಿಯನ್ನು ಆಚರಿಸದವರು, ಆಚರಿಸಿದವರ ಮನೆಗೆ ಊಟಕ್ಕೆ ಮತ್ತೊಂದಕ್ಕೊ ಹೋಗಲೂ ಬಹುದು. ಆಗ ಇದು ಅವರ ಆಂಶಿಕ ಭಾಗವಹಿಸುವಿಕೆಯ ಮಾತಾಗುತ್ತದೆ. ಜೊತೆಗೆ ಯಾರು ಆಚರಿಸುವವರಾಗಿರುತ್ತಾರೊ, ಅವರೇ ಕೆಲವರು ತಮ್ಮವೇ ಕಾರಣಗಳಿಗೆ ಆಚರಿಸದೆ ಕೂಡ ಇರಬಹುದು. ಇದೇ ಮಾತನ್ನು ಕ್ಯಾಲೆಂಡರಿನ ಉಳಿದ ತಾರೀಖುಗಳಿಗೂ ಅನ್ವಯಿಸಿ ಹೇಳಬಹುದು.

ಕ್ಯಾಲೆಂಡರಿನಲ್ಲಿ ವಿಶೇಷವೆಂದು ನಮೂದಾಗದ ದಿನಾಂಕವೊಂದು ನಮ್ಮ ನಮ್ಮ ದೈನಂದಿನ ಅಗತ್ಯಗಳಿಗೆ ಅನುಗುಣವಾಗಿ ಮಹತ್ವ ಎನಿಸಿಬಿಡಬಹುದು. ಜೀವನದಲ್ಲಿ ಲಾಭವೆನಿಸುವ, ಸಂತೋಷವೆನಿಸುವ ಘಟನೆಗಳು ಸಂಭವಿಸಿದಾಗ ಆ ತಾರೀಖು ಮುಖ್ಯ ಎನಿಸಬಹುದು. ಅಥವಾ ಅವರವರ ಹುಟ್ಟು ಹಬ್ಬ ಇತ್ಯಾದಿಗಳ ಕಾರಣಕ್ಕೂ ಕ್ಯಾಲೆಂಡರ್ ವಿಶೇಷವಾಗಿ ನಮೂದಿಸದ ತಾರೀಖು ಅವರವರಿಗೆ ವಿಶೇಷ ಮತ್ತು ಮಹತ್ವ ಎನಿಸುತ್ತದೆ. ಈ ಚರ್ಚೆಯ ಒಟ್ಟು ಸಾರಾಂಶವೇನೆಂದರೆ, ಕ್ಯಾಲೆಂಡರ್‌ ಮುಖ್ಯ, ವಿಶೇಷ, ಮಹತ್ವ ಎಂದು ನಮೂದಿಸಿರುವುದು ನಮಗೆ ಅದೇ ನೇರ ಸ್ವರೂಪದಲ್ಲಿ ಮುಖ್ಯ, ವಿಶೇಷ ಮತ್ತು ಮಹತ್ವ ಎನಿಸದೇ ಇರಬಹುದು. ಕ್ಯಾಲೆಂಡರಿನಲ್ಲಿ ಮುಖ್ಯ, ವಿಶೇಷ ಎಂದು ನಮೂದಾಗದ ತಾರೀಖುಗಳು, ನಮ್ಮ ವೈಯಕ್ತಿಕ ಜೀವನದ ನೆಲೆಯಿಂದ, ಕೌಟುಂಬಿಕ ಮತ್ತು ಸಮುದಾಯದ ನೆಲೆಯಿಂದ, ನಮ್ಮ ಧೋರಣೆಯ ನೆಲೆಯಿಂದ ಮುಖ್ಯ, ವಿಶೇಷ ಎನಿಸಬಹುದು. ಹಾಗಾಗಿ ನಮ್ಮ ನಮ್ಮ ವೈಯಕ್ತಿಕ ಧೋರಣೆಯ ನೆಲೆಯಿಂದಲೆ ಕ್ಯಾಲೆಂಡರನ್ನು ಪರಿಭಾವಿಸುತ್ತೇವೆ. ಈ ಹಿನ್ನೆಲೆಯಲ್ಲಿ ಕ್ಯಾಲೆಂಡರನ್ನು ನೋಡುವ, ಪರಿಭಾವಿಸುವ ವಿಧಾನ ಒಬ್ಬರಿಂದ ಮತ್ತೊಬ್ಬರಿಗೆ ಬದಲಾಗುತ್ತದೆ; ಬದಲಾಗಲೇಬೇಕು. ಈ ಬದಲಾಗುವಿಕೆ ಕ್ಯಾಲೆಂಡರನ್ನು ನೋಡುವವರ ಆಸಕ್ತಿ, ಉದ್ದೇಶ, ಹಿನ್ನೆಲೆ ಮತ್ತು ಆಯ್ಕೆಯನ್ನು ಅವಲಂಬಿಸಿರುತ್ತದೆ. ಸಾಹಿತ್ಯ ಓದು, ಸಾಹಿತ್ಯ ಗ್ರಹಿಕೆ ಎಂಬುದೂ ಕೂಡ ಇದೇ ರೀತಿಯಲ್ಲಿ ಒಬ್ಬರಿಂದ ಒಬ್ಬರಿಗೆ ಬದಲಾಗುತ್ತದೆ; ಬದಲಾಗಲೇಬೇಕು. ಈ ಬದಲಾಗುವಿಕೆ ಸಾಹಿತ್ಯವನ್ನು ಓದುವವರ ಅಭಿರುಚಿ, ಆಸಕ್ತಿ, ಆಶಯ, ಉದ್ದೇಶ ಮತ್ತು ಧೋರಣೆಯನ್ನು ಅವಲಂಬಿಸಿದೆ. ಈ ಬಗೆಯ ಬದಲಾವಣೆ ನಡೆಯುತ್ತಿರುವುದರಿಂದಲೇ ಸಾಹಿತ್ಯ ಸಂಶೋಧನೆಗೆ ಒಂದೇ ಒಂದು ಸಂಶೋಧನ ವಿಧಾನ ಇದೆ ಎಂದು ಹೇಳಲು ಆಗುವುದಿಲ್ಲ.

ಈ ಮೊದಲಿನ ಚರ್ಚೆಯೊಂದರಲ್ಲಿ ‘ಕನ್ನಡ ಕಾದಂಬರಿಗಳಲ್ಲಿ ದುಡಿಯುವ ವರ್ಗ’ ಎಂಬ ವಿಷಯದ ಮೇಲಿನ ಸಂಶೋಧನೆಯು ಭಿನ್ನಭಿನ್ನವಾಗುತ್ತ ಹೋಗುವುದನ್ನು ಚರ್ಚಿಸಲಾಗಿದೆ. ಅಲ್ಲಿಯ ಕೊನೆಯ ಭಾಗವನ್ನು ಮತ್ತೆ ಇಲ್ಲಿ ಚರ್ಚೆಗೆ ತೆಗೆದುಕೊಳ್ಳೋಣ. ಆ ಸಂಶೋಧನ ಬರವಣಿಗೆಯು ೧: ಮಾಹಿತಿ ಪ್ರಧಾನ ವಿವರಣಾತ್ಮಕ ಮಾದರಿ, ೨: ವಿಶ್ಲೇಷಣ ಮಾದರಿ, ೩: ಮುಖಾಮುಖಿ ಮಾದರಿ, ೪: ಪೋಷಕ-ಪೋಷಿತ ಸಂಬಂಧದ ಮಾದರಿ, ೫: ಶೋಷಕ-ಶೋಷಿತ ಸಂಬಂಧದ ಮಾದರಿ. ಹೀಗೆ ಮುಖ್ಯವಾಗಿ ಐದು ಆಯಾಮಗಳಲ್ಲಿ ರೂಪುಗೊಳ್ಳಬಹುದು ಎಂದು ಗುರುತಿಸಲಾಗಿದೆ. ಆ ಐದೂ ಬಗೆಯ ಸಂಶೋಧನ ಮಾದರಿಗಳು ಏನಿವೆಯೊ ಅವು, ಐದೂ ಬಗೆಯ ಸಂಶೋಧನ ವಿಧಾನಗಳು ಎಂದು ತಿಳಿಯಬೇಕು. ಸಂಶೋಧನ ವಿಧಾನಗಳು ಯಾಕೆ ಆ ರೀತಿಯಲ್ಲಿ ಬದಲಾಗುತ್ತವೆ ಎಂಬುದನ್ನು ಚರ್ಚಿಸೋಣ. ಆಗಲೆ ಪ್ರಸ್ತಾಪ ಮಾಡಿದಂತೆ ಸಂಶೋಧನ ವಿಧಾನಗಳು ಸಂಶೋಧಕರ ಧೋರಣೆಯನ್ನು ಅವಲಂಬಿಸಿರುತ್ತವೆ. ಅವರ ಧೋರಣೆಗಳಿಗೆ ಅನುಗುಣವಾಗಿ ಸಂಶೋಧನ ವಿಧಾನಗಳು ಬದಲಾಗುತ್ತಾ, ಸೃಷ್ಟಿಯಾಗುತ್ತಾ ಹೋಗುತ್ತವೆ. ಮೇಲೆ ಉಲ್ಲೇಖಿಸಿದ ಐದು ಮಾದರಿಗಳಲ್ಲಿ ಕೊನೆಯ ಎರಡನ್ನು ಪರಿಶೀಲಿಸೋಣ. ‘ಕನ್ನಡ ಕಾದಂಬರಿಗಳಲ್ಲಿ ದುಡಿಯುವ ವರ್ಗ’ ಎಂಬ ವಿಷಯದ ಮೇಲಿನ ಸಂಶೋಧನೆಯು, ದುಡಿಯುವ ವರ್ಗಕ್ಕೂ ಮತ್ತು ಮಾಲಿಕ ವರ್ಗಕ್ಕೂ ಪೋಷಕ-ಪೋಷಿತ ಸಂಬಂಧವಿದೆ ಎಂದು ತೀರ್ಮಾನಿಸುವುದು ಒಂದು ಕ್ರಮ. ದುಡಿಯುವ ವರ್ಗಕ್ಕೂ ಮತ್ತು ಮಾಲಿಕ ವರ್ಗಕ್ಕೂ ಶೋಷಕ-ಶೋಷಿತ ಸಂಬಂಧವಿದೆ ಎಂದು ತೀರ್ಮಾನಿಸುವುದು ಮತ್ತೊಂದು ಕ್ರಮ. ತದ್ವಿರುದ್ಧವಾದ ಈ ಎರಡೂ ತೀರ್ಮಾನಗಳು ಕಾದಂಬರಿಗಳಲ್ಲಿ ಸಿದ್ಧಮಾದರಿಯಲ್ಲಿ ಇದ್ದವುಗಳಲ್ಲ. ಒಬ್ಬ ಸಂಶೋಧಕರು ತಮ್ಮ ಧೋರಣೆಯ ಮೂಲಕ ಕಾದಂಬರಿಗಳನ್ನು ಓದಿದಾಗ, ಅವರಿಗೆ ಮಾಲಿಕರ ಆಶ್ರಯದಲ್ಲಿ ದುಡಿಯುವ ವರ್ಗವಿದೆ. ಮಾಲಿಕ ವರ್ಗದ ಅವಲಂಬನೆಯಲ್ಲಿ ದುಡಿಯುವ ವರ್ಗ ನಿಂತಿದೆ. ಮಾಲಿಕ ವರ್ಗವಿಲ್ಲದೆ ಹೋದರೆ ದುಡಿಯುವ ವರ್ಗಕ್ಕೆ ಕೆಲಸವೂ ಇಲ್ಲ; ಅನ್ನ ವಸತಿಗಳೂ ಇಲ್ಲ ಎಂದು ಅನಿಸಿದೆ. ಅವರಿಗೆ ಹಾಗೆ ಅನಿಸಲು ಕಾರಣವೇನೆಂದರೆ ಅವರು ಸಮಾಜವನ್ನು ನೋಡುವ ದೃಷ್ಟಿಕೋನವೇ ಅಂತಹದ್ದು. ಮಾಲಿಕ ವರ್ಗದ ನೆಲೆಯಿಂದ ದುಡಿಯುವ ವರ್ಗವನ್ನು ನೋಡುವ ಕ್ರಮವಿದು. ಇದು ಉದಾರವಾದಿ ಧೋರಣೆ. ಇದು ಮಾಲಿಕ ವರ್ಗದ ಧೋರಣೆ. ಈ ಧೋರಣೆಯೇ ಕಾದಂಬರಿಗಳಲ್ಲಿ ಮಾಲಿಕ ವರ್ಗಕ್ಕೂ ನೋಡುವಂತೆ, ಗ್ರಹಿಸುವಂತೆ ಮಾಡಿದೆ. ಮತ್ತೊಬ್ಬ ಸಂಶೋಧಕರು ಶೋಷಕ-ಶೋಷಿತ ಸಂಬಂಧವಿದೆ ಎಂದು ಗುರುತಿಸಿದ್ದಾರೆ. ಅವರು ಹಾಗೆ ಗುರುತಿಸಲು ಕಾರಣ ಅವರು ಸಮಾಜವನ್ನು ನೋಡುವ ಧೋರಣೆಯೇ ಅಂತಹದ್ದು. ಅವರ ಪ್ರಕಾರ ಮಾಲಿಕ ವರ್ಗದ ಆಶ್ರಯದಲ್ಲಿ ದುಡಿಯುವ ವರ್ಗ ನಿಂತಿದೆ ಎಂಬುದಲ್ಲ. ದುಡಿಯುವ ವರ್ಗವನ್ನು ನಿರಂತರವಾಗಿ ದುಡಿಸಿಕೊಳ್ಳುತ್ತ, ಅವರನ್ನು ಶೋಷಣೆ ಮಾಡುತ್ತ, ದಬ್ಬಾಳಿಕೆ ಮಾಡುತ್ತ ಮಾಲಿಕ ವರ್ಗ ನಿಂತಿದೆ ಎಂಬುದು ಅವರ ಧೋರಣೆ. ಅವರ ಈ ಧೋರಣೆಯೇ ಕಾದಂಬರಿಗಳಲ್ಲಿ ಮಾಲಿಕ ವರ್ಗಕ್ಕೂ ಮತ್ತು ದುಡಿಯುವ ವರ್ಗಕ್ಕೂ ಶೋಷಕ-ಶೋಷಿತ ಸಂಬಂಧವಿದೆ ಎಂದು ವಿಶ್ಲೇಷಿಸುವಂತೆ ಮಾಡಿದೆ.

ಸಂಶೋಧನೆಗೆ ಬರುವವರು ‘ಇಂತಹ ಒಂದು ವಿಷಯವನ್ನು ಯಾವ ವಿಧಾನದಲ್ಲಿ ಸಂಶೋಧನೆ ಮಾಡಬೇಕು’ ಎಂದು ಸಾಮಾನ್ಯವಾಗಿ ಕೇಳುತ್ತಾರೆ. ಅಂತಹ ಸಮಯದಲ್ಲಿ ಎದುರಾಗುವ ಸಮಸ್ಯೆ ಎಂದರೆ, ಸಂಶೋಧನೆಯ ವಿಧಾನವನ್ನು ರೂಪಿಸುವ, ನಿರ್ಮಿಸುವ ಧೋರಣೆ ಯಾವುದಾಗಿರಬೇಕು ಎಂಬುದು. ಜೊತೆಗೆ ಧೋರಣೆಗೆ ಸಂಬಂಧಿಸಿ ಸಂಶೋಧಕರ ಆಯ್ಕೆ ಯಾವುದಾಗಿರುತ್ತದೆ ಎಂಬುದು. ಉದಾಹರಣೆಗೆ: ‘ವಚನಗಳಲ್ಲಿ ಮಹಿಳಾ ಪ್ರಶ್ನೆಗಳು’ ಎಂಬ ವಿಷಯವನ್ನು ಸಂಶೋಧನೆಗೆ ಆಯ್ಕೆ ಮಾಡಿಕೊಂಡರು ಎಂದು ತಿಳಿಯೋಣ. ಆಗ ಸಂಶೋಧಕರು ಏನು ಮಾಡಬಹುದು? ‘ವಚನಗಳಲ್ಲಿ ಮಹಿಳಾ ಸಮಾನತೆ ಇದೆ, ವಚನಕಾರರಲ್ಲಿ ಮಹಿಳಾ ಸ್ವಾತಂತ್ರ್ಯವಿತ್ತು’ ಎಂಬ ಸ್ಥಾಪಿತ ಧೋರಣೆಯನ್ನು ಒಪ್ಪಿಕೊಂಡು, ಅದಕ್ಕೆ ಅನುಗುಣವಾಗಿ ತಮ್ಮ ಸಂಶೋಧನ ವಿಧಾನವನ್ನು ರೂಪಿಸಿಕೊಳ್ಳುತ್ತಾರೆ. ಸಂಶೋಧಕರ ಸಾಮಾಜಿಕ ದೃಷ್ಟಿಕೋನವೇ ಈ ವಿಧಾನವನ್ನು ಆರಿಸಿಕೊಳ್ಳಲು ಮುಖ್ಯ ಕಾರಣವಾಗಿದೆ. ಇಂತಹ ಸಂಶೋಧಕರು ‘ವರ್ತಮಾನದಲ್ಲಿ ಮಹಿಳೆಯರಿಗೆ ಸಮಾನತೆ ಮತ್ತು ಸ್ವಾತಂತ್ರ್ಯವಿದೆ’ ಎಂದು ನಂಬಿದವರಾಗಿದ್ದಾರೆ. ‘೧೯೪೭ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಿದೆ’ ಎಂದು ನಂಬಿದವರಾಗಿದ್ದಾರೆ. ವಚನಕಾರರು ಮತ್ತು ವಚನಗಳ ಬಗ್ಗೆ ಈಗಾಗಲೆ ವೈಭವೀಕರಿಸಿರುವ ವೈಭವೀಕರಣವನ್ನು ಒಪ್ಪಿಕೊಂಡಿದ್ದಾರೆ. ಸಂಶೋಧಕರಿಗೆ ವಚನಗಳು ಮತ್ತು ವಚನಕಾರರ ಬಗ್ಗೆ ಅಪಾರ ಗೌರವ, ಭಕ್ತಿ, ಪೂಜ್ಯ ಭಾವನೆ ಮತ್ತು ಅಭಿಮಾನ ಇದೆ. ಮಹಿಳೆಯರ ಬಗೆಗೆ ವಚನಗಳು ಸಾರ್ವಕಾಲಿಕ ಸತ್ಯವನ್ನು ಹೇಳಿವೆ; ಹಾಗಾಗಿ ಅವರು ಅವನ್ನು ಪಾಲಿಸಬೇಕು ಎಂಬುದನ್ನು ಒಪ್ಪಿಕೊಂಡವರಾಗಿದ್ದಾರೆ. ವಚನಗಳು ಮತ್ತು ವಚನಕಾರರನ್ನು ಬಿಟ್ಟರೆ ಉಳಿದ ಸಾಹಿತ್ಯ ಮಹಿಳೆಯರಿಗೆ ಸಮಾನತೆ ಮತ್ತು ಸ್ವಾತಂತ್ರ್ಯ ಕೊಟ್ಟಿಲ್ಲ ಎಂಬುದರಲ್ಲಿ ಬಲವಾದ ನಂಬಿಕೆಯುಳ್ಳವರಾಗಿದ್ದಾರೆ. ಹಾಗಾಗಿ ಈ ವಿಷಯದಲ್ಲಿ ವಚನಗಳು ಮತ್ತು ವಚನಕಾರರು ಆದರ್ಶ ಎಂದು ನಂಬಿದ್ದಾರೆ. ಸಮಾನತೆ ಮತ್ತು ಸ್ವಾತಂತ್ರ್ಯ ಇವನ್ನು ಕೇವಲ ಮೇಲ್‌ಸ್ತರದ ಗ್ರಹಿಕೆಯಲ್ಲಿ ಸ್ವೀಕರಿಸಿದ್ದಾರೆ. ವಚನಗಳು ಮತ್ತು ವಚನಕಾರರ ಬಗ್ಗೆ ಇಂತಹ ಪ್ರಶ್ನಾತೀತ ದೃಷ್ಟಿಕೋನಗಳು ಸಂಶೋಧಕರ ಪ್ರಜ್ಞೆಯ ಭಾಗವಾಗಿವೆ. ಹಾಗಾಗಿ ಅವರು ಸಂಶೋಧನೆ ಶುರು ಮಾಡುವುದೆ ‘ವಚನಗಳಲ್ಲಿ ಮಹಿಳಾ ಸಮಾನತೆ ಮತ್ತು ಸ್ವಾತಂತ್ರ್ಯ ಇತ್ತು’ ಎಂಬ ಧೋರಣೆಯಿಂದ. ಅವರು ಸಂಶೋಧನೆಯನ್ನು ಮುಗಿಸುವುದೂ ಇದೇ ಧೋರಣೆಯಿಂದ. ‘ವಚನಗಳಲ್ಲಿ ಮಹಿಳಾ ಸಮಾನತೆ ಇದೆ, ವಚನಕಾರರಲ್ಲಿ ಮಹಿಳಾ ಸ್ವಾತಂತ್ರ್ಯವಿತ್ತು’ ಎಂಬ ಸ್ಥಾಪಿತ ಧೋರಣೆಯನ್ನು ಮೊದಲೆ ಒಪ್ಪಿಕೊಂಡಿರುವುದರಿಂದ ಅದನ್ನು ಸಮರ್ಥಿಸುವ ವಿಧಾನವನ್ನು ಅನುಸರಿಸುತ್ತಾರೆ.

‘ವಚನಗಳಲ್ಲಿ ಮಹಿಳಾ ಪ್ರಶ್ನೆಗಳು’ ಎಂಬ ವಿಷಯವನ್ನು ಮೇಲಿನ ವಿಧಾನ ಬಿಟ್ಟು ಬೇರೆ ವಿಧಾನದಲ್ಲಿ ಅಧ್ಯಯನ ಮಾಡಲು ಸಾಧ್ಯವೆ ಎಂಬುದನ್ನು ಪರಿಶೀಲಿಸೋಣ. ವರ್ತಮಾನದಲ್ಲಿ ಮಹಿಳಾ ಸಮಾನತೆ ಮತ್ತು ಸ್ವಾತಂತ್ರ್ಯ, ೧೯೪೭ರ ಸ್ವಾತಂತ್ರ್ಯ, ವಚನಕಾರರು ಮತ್ತು ವಚನಗಳ ವೈಭವೀಕರಣ, ಆ ಬಗ್ಗೆ ಗೌರವ, ಭಕ್ತಿ, ಪೂಜ್ಯ ಭಾವನೆ, ಅಭಿಮಾನ, ವಚನಗಳ ಸಾರ್ವಕಾಲಿಕ ಸತ್ಯ, ವಚನಗಳು ಮತ್ತು ವಚನಕಾರರು ಆದರ್ಶ ಈ ಬಗೆಗಿನ ಒಪ್ಪಿತ ನಿಲುವುಗಳನ್ನು ಮೊದಲು ಬಿಡಬೇಕು. ಅವೆಲ್ಲವನ್ನೂ ಪ್ರಶ್ನಾರ್ಥಕವಾಗಿ ನೋಡಬೇಕು. ಜೊತೆಗೆ ಕೆಳಗಿನ ಕೆಲವು ವಚನಗಳನ್ನು ಗಮನಿಸಬೇಕು.

ಶಿವ ಶಿವ ಎಂಬ ವಚನವ ಬಿಡದಿರು
ಮಡದಿಯರೊಲುಮೆಯ ನಚ್ಚದಿರು
                        – ಅಲ್ಲಮ

ಹೆಣ್ಣ ನಚ್ಚಿ, ಅಶುಭವ ಮೆಚ್ಚಿ, ಮರೆಯಬೇಡ
ಅವಳು ನಿನ್ನ ನಂಬಳು
ನೀನು ತನುಮನ ಧನವನಿತ್ತಡೆಯೂ
ಪರಪುರುಷರ ನೆನವುದ ಮಾಣಳು
                        – ಉರಿಲಿಂಗ ಪೆದ್ದಿ

ನಿನ್ನಮಡದಿಗಿರಲೆಂದಡೆ, ಮಡದಿಯ ಕೃತಕ ಬೇರೆ
ನಿನ್ನೊಡಲು ಕೆಡೆಯಲು ಮತ್ತೊಬ್ಬನಲ್ಲಿ ಗಡಕದೆ ಮಾಣ್ಬಳೆ?
ಹೆರರಿಗಿಕ್ಕಿ ಹೆಗ್ಗುರಿಯಾಗಿ ಕೆಡಬೇಡ
ಕೂಡಲ ಸಂಗನ ಶರಣರಿಗೆ ಒಡನೆ ಸವೆಸುವುದು
– ಬಸವಣ್ಣ

ಅವಳ ವಚನ ಬೆಲ್ಲದಂತೆ, ಹೃದಯದಲ್ಲಿಪ್ಪುದು ನಂಜುಕಂಡಯ್ಯಾ
ಕಂಗಳಲೊಬ್ಬನ ಕರೆವಳು
ಮನದಲೊಬ್ಬನ ನೆರೆವಳು
ಕೂಡಲ ಸಂಗಮ ದೇವ ಕೇಳಯ್ಯ
ಮಾನಿಸಗಳ್ಳಿಯ ನಂಬದಿರಯ್ಯಾ
– ಬಸವಣ್ಣ

ಕೋಣೆಯೊಳಗಣ ಮಿಂಡ
ನಡುಮನೆಯೊಳಗಣ ಗಂಡ
ಇವರಿಬ್ಬರ ಒಡಗೂಡುವಳ ಚಂದವ ನೋಡಾ
ಕೈಯಲ್ಲಿ ಕಣ್ಣು ಹುಟ್ಟಿ, ಬಾಯಲ್ಲಿ ಬಸುರು ಹುಟ್ಟಿ
ಮೊಲೆ ತಲೆಯಲ್ಲಿ ಭಗ ಬೆನ್ನಲ್ಲಿ
ಹಾದರಗಿತ್ತಿಯ ಅಂದವ ಸದಾಶಿವ ಲಿಂಗವೆ ಬಲ್ಲ
                        – ಅರಿವಿನ ಮಾರಿತಂದೆ

ಪತಿಯ ದಾರಿಯಲ್ಲಿ ಸತಿ ನಡೆಯಬೇಕಲ್ಲದೆ
ಸತಿಗೆ ಸ್ವಾತಂತ್ರ್ಯವುಂಟೆ?
            – ಅಕ್ಕಮ್ಮ

ಚರಿತ್ರೆ, ಪರಂಪರೆ ಮತ್ತು ಪ್ರಭುತ್ವಗಳ ಬಗ್ಗೆ ಗೌರವ, ಅಭಿಮಾನ ಮತ್ತು ಪೂಜ್ಯ ಭಾವನೆಗಳಿದ್ದರೆ ಅವನ್ನು ಪ್ರಶ್ನೆ ಮಾಡಲು ಆಗುವುದಿಲ್ಲ. ಅವುಗಳ ಬಗ್ಗೆ ಅಭಿಮಾನದಿಂದ ಮೂಡಿರುವ ಅಭಿಪ್ರಾಯಗಳನ್ನೆ ಚಿಂತನೆಗಳು ಎಂದು ತಪ್ಪು ತಿಳಿಯಬೇಕಾಗುತ್ತದೆ. ಅವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ವರ್ತಮಾನದ ಸಾಮಾಜಿಕ, ರಾಜಕೀಯ ಬದುಕು ‘ಎಲ್ಲವೂ ಚೆನ್ನಾಗಿದೆ’ ಎಂದು ಕುರುಡಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ಹೀಗೆ ಎಲ್ಲದಕ್ಕೂ ಒಪ್ಪಿಗೆ ಸೂಚಿಸುವ, ಸಹಮತ ವ್ಯಕ್ತಪಡಿಸುವ ದೃಷ್ಟಿಕೋನವಿದ್ದರೆ ಯಾವುದನ್ನೂ ಪ್ರಶ್ನೆ ಮಾಡಲು ಆಗುವುದಿಲ್ಲ. ಆಗ ಸಂಶೋಧನೆಗೆ ಸಂಶೋಧನ ವಿಧಾನ ಹುಟ್ಟುವುದಿಲ್ಲ. ‘ವಚನಗಳಲ್ಲಿ ಮಹಿಳಾ ಪ್ರಶ್ನೆಗಳು’ ಎಂಬ ವಿಷಯವನ್ನು ಯಾವ ವಿಧಾನದಲ್ಲಿ ಸಂಶೋಧನೆ ಮಾಡಬೇಕು ಎಂಬ ಪ್ರಶ್ನೆಯು, ಆ ವಿಷಯವನ್ನು ಯಾವ ದೃಷ್ಟಿಕೋನದಲ್ಲಿ ಮತ್ತು ಯಾವ ಧೋರಣೆಯಲ್ಲಿ ನೋಡಬೇಕು ಎಂಬ ನಿಲುವಿನ ಮೇಲೆ ನಿಂತಿದೆ. ವರ್ತಮಾನ, ಚರಿತ್ರೆ, ಪರಂಪರೆ, ಸಾಹಿತ್ಯ ಮತ್ತು ಸಂಸ್ಕೃತಿ ಇವುಗಳ ಬಗ್ಗೆ ಸ್ಥಾಪಿತ ನಿಲುವುಗಳನ್ನು ಒಪ್ಪಿಕೊಳ್ಳದೆ, ಅವನ್ನು ಪ್ರಶ್ನೆ ಮಾಡುವಂತಹ ದೃಷ್ಟಿಕೋನ ಮತ್ತು ಧೋರಣೆಯಲ್ಲಿ ಸಂಶೋಧನೆ ಮಾಡಬೇಕಾಗುತ್ತದೆ. ಆಗ ವಚನಗಳು ಮತ್ತುವಚನಕಾರರ ಮೇಲೆ ಕಟ್ಟಲಾಗಿರುವ ಅಭಿಪ್ರಾಯಗಳು ಎಷ್ಟು ಸಡಿಲವಾದವು ಮತ್ತು ಎಷ್ಟು ಹುಸಿಯಾದವು ಎಂಬುದು ಗೊತ್ತಾಗುತ್ತದೆ. ಮಹಿಳೆಯರನ್ನು ಕೀಳಾಗಿ ಚಿತ್ರಿಸುವ ವಚನಗಳು ಯಾವ ಬಗೆಯಲ್ಲಿ ಅವರ ‘ಸಮಾನತೆ ಮತ್ತು ಸ್ವಾತಂತ್ರ್ಯ’ವನ್ನು ನಿರೂಪಿಸಿರಲು ಸಾಧ್ಯ; ಸಾಧ್ಯವಿಲ್ಲ. ವಚನಗಳು ಮತ್ತು ವಚನಕಾರರಲ್ಲಿ ‘ಮಹಿಳಾ ಸಮಾನತೆ, ಸ್ವಾತಂತ್ರ್ಯ ಇತ್ತು’ ಎಂದು ಹೇಳುವ ಮೂಲಕ ಪರಂಪರೆಯೊಂದನ್ನು ಹುಸಿಯಾಗಿ ವೈಭವೀಕರಿಸಿರುವುದು ತಿಳಿಯುತ್ತದೆ. ಹೀಗೆ ಸಂಶೋಧನೆಯಲ್ಲಿ ಸ್ಥಾಪಿತ ಧೋರಣೆಯ ನೆಲೆಯನ್ನು ಬಿಟ್ಟು, ಆ ಸ್ಥಾಪಿತ ಧೋರಣೆಗಳನ್ನು ಪ್ರಶ್ನೆ ಮಾಡಲು ಮುಂದಾಗಬೇಕು. ಆಗ ಪರ್ಯಾಯ ಧೋರಣೆಗಳು ಕಾಣುತ್ತವೆ. ಆ ಮೂಲಕ ಪರ್ಯಾಯ ಸಂಶೋಧನ ವಿಧಾನಗಳು ರೂಪುಗೊಳ್ಳುತ್ತವೆ.

ಸಾಹಿತ್ಯದಲ್ಲಿ ಸಂಶೋಧನೆ ಮಾಡಲು ಬೇಕಾದ ವಿಧಾನವೆಂದರೆ ಅದು ಲೋಕವನ್ನು ನೋಡುವ ದೃಷ್ಟಿಕೊನವಾಗಿದೆ. ಸಮಾಜವನ್ನು ಗ್ರಹಿಸುವ ಧೋರಣೆಯಾಗಿದೆ. ಹೀಗೆ ಸಮಾಜವನ್ನು, ಸುತ್ತಲ ಬದುಕಿನ ಒಳಗಿನ ಸಂಬಂಧಗಳನ್ನು ಸೂಕ್ಷ್ಮವಾಗಿ ನೋಡುತ್ತಲೆ ಅವುಗಳೊಳಗೆ ಯಾವ ಬಗೆಯ ಸಂಬಂಧವಿದೆ ಎಂಬುದನ್ನು ಅರಿಯುವ ಹಾಗೂ ಅಭಿವ್ಯಕ್ತಿಸುವ ಕ್ರಮವಾಗಿದೆ. ಸಂಶೋಧಕರು ಮತ್ತು ಸಂಶೋಧನೆ ಯಾರ ಪರವಾಗಿ ಮತ್ತು ಯಾವುದರ ಪರವಾಗಿ ಆಲೋಚಿಸಬೇಕು ಎಂಬುದನ್ನು ಆಯ್ಕೆಮಾಡಿಕೊಳ್ಳಬೇಕಾಗಿದೆ. ಈ ಆಯ್ಕೆ ಪ್ರಜ್ಞಾಪೂರ್ವಕವಾಗಿ  ನಡೆಯಬೇಕು. ಯಾಕೆಂದರೆ ಶೋಷಕ ವ್ಯವಸ್ಥೆ ಸಂಶೋಧಕರಿಗೆ ಆಯ್ಕೆಯೇ ಇಲ್ಲದಂತೆ ಮಾಡಿ, ಶೋಷಕರ ಧೋರಣೆಯನ್ನು, ಆಳುವ ವರ್ಗದ ಧೋರಣೆಯನ್ನು ಸಂಶೋಧಕರ ಮೇಲೆ ನಯವಾಗಿಯೊ ಇಲ್ಲವೆ ಬಲಾತ್ಕಾರವಾಗಿಯೊ ಹೇರಿಬಿಟ್ಟಿದೆ. ಸಂಶೋಧಕರು ತಮ್ಮದಲ್ಲದ ಆಳುವ ವರ್ಗದ ಧೋರಣೆಯನ್ನು ತಮ್ಮದೆಂದೇ ಭಾವಿಸಿದ್ದಾರೆ; ನಂಬಿದ್ದಾರೆ. ಆ ನಂಬಿಕೆಯಿಂದ ಸಂಶೋಧನೆ ಮತ್ತು ಸಂಶೋಧಕರು ಹೊರಬರಬೇಕಾಗಿದೆ.