ಸಂಶೋಧಕರು, ತಮ್ಮ ಸಂಶೋಧನ ವಿಧಾನ ಯಾವುದು, ಅದರ ಸ್ವರೂಪ ಹೇಗಿರುತ್ತದೆ ಹಾಗೂ ಹೇಗಿರಬೇಕು ಎಂಬುದನ್ನು ತಮ್ಮ ಸಂಶೋಧನಾ ಪ್ರಬಂಧದಲ್ಲಿ ಪದ್ಧತಿಯ ಪ್ರಕಾರ ಆರಂಭದಲ್ಲೆ ಬರೆಯುತ್ತಾರೆ. ಸಾಮಾನ್ಯವಾಗಿ ಅಂತಹ ವಿವರಣೆಗಳು ಸಂಶೋಧನೆಗೆ ಬೇಕಾದ ಆಕರಗಳನ್ನು ಯಾವ ಯಾವ ಮೂಲಗಳಿಂದ ಸಂಗ್ರಹಿಸಲಾಗುತ್ತದೆ, ಹಾಗೆ ಸಂಗ್ರಹ ಮಾಡಿದ ಆಕರಗಳನ್ನು ಸಂಶೋಧನೆಯ ವ್ಯಾಪ್ತಿಗೆ ಅನುಸಾರವಾಗಿ ಹೇಗೆ ಆಯ್ಕೆ ಮಾಡಲಾಗುತ್ತದೆ ಮತ್ತು ಹಾಗೆ ಆಯ್ಕೆ ಮಾಡಿದ ಆಕರಗಳನ್ನು ಹೇಗೆ ವಿಂಗಡಿಸಲಾಗುತ್ತದೆ ಮತ್ತು ವಿಂಗಡಿಸಿದ ಆಕರಗಳನ್ನು ಹೇಗೆ ಜೋಡಿಸಲಾಗುತ್ತದೆ ಎಂಬ ವಿವರಣೆಗಳನ್ನು ಬರೆಯುತ್ತಾರೆ. ಇಂತಹ ಸಂಶೋಧನ ಬರವಣಿಗೆಯು ವಾಸ್ತವವಾಗಿ ಸಂಶೋಧನೆಯ ವಿಧಾನವು ಆಕರಗಳ ಸಂಗ್ರಹ ಕಾರ್ಯವನ್ನು ಪ್ರಾಥಮಿಕ ಎಂದು ಪರಿಗಣಿಸುತ್ತದೆ. ಹಾಗೆ ನೋಡಿದರೆ ಸಂಶೋಧನೆಯಲ್ಲಿ ಆಕರಗಳ ಸಂಗ್ರಹ ಪ್ರಾಥಮಿಕ ಅಲ್ಲ. ಎಂತಹ ಆಕರಗಳು ಬೇಕು ಮತ್ತು ಎಂತಹ ಆಕರಗಳು ಬೇಡ ಎಂಬಂತಹ ಪೂರ್ವ ತೀರ್ಮಾನವನ್ನು ಸಂಶೋಧಕರು ಆಯ್ಕೆ ಮಾಡಿಕೊಳ್ಳುವ ವಿಷಯವೆ ಒಂದುಕಡೆ ನಿರ್ಧರಿಸುತ್ತದೆ. ಮತ್ತೊಂದು ಕಡೆ ಸಂಶೋಧನೆಯ ಅಥವಾ ಸಂಶೋಧಕರ ಧೋರಣೆ ಇದನ್ನು ತೀರ್ಮಾನಿಸುತ್ತದೆ. ಹಾಗಾಗಿ ಈ ಭಾಗದಲ್ಲಿ ಚರ್ಚೆ ಮಾಡಬಹುದಾದ ಮುಖ್ಯ ವಿಷಯ ಸಂಶೋಧನೆಯ ವಿಧಾನವು ಸಂಶೋಧನೆಯ ಧೋರಣೆ ಮತ್ತು ಸಂಶೋಧನೆಯ ದೃಷ್ಟಿಕೋನದಿಂದ ತೀರ್ಮಾನಿಸಲ್ಪಡುತ್ತದೆ ಎಂಬುದು. ಹಾಗಾಗಿ ಸಂಶೋಧನೆಯ ಧೋರಣೆಗೂ ಮತ್ತು ಸಂಶೋಧನೆಯ ವಿಧಾನಕ್ಕೂ ಯಾವ ಬಗೆಯ ಸಂಬಂಧ ಇದೆ ಎಂಬುದನ್ನು ಮೊದಲು ಗ್ರಹಿಸಿಕೊಳ್ಳಬೇಕು. ಸಂಶೋಧನೆಯ ವಿಧಾನದಿಂದ ಧೋರಣೆಯೊಂದನ್ನು ರಚನೆ ಮಾಡಲು ಬರುವುದಿಲ್ಲ. ಬದಲಿಗೆ ಸಂಶೋಧನೆಯಲ್ಲಿ ಪ್ರಜ್ಞಾಪೂರ್ವಕವಾಗಿಯೊ ಅಥವಾ ಅಪ್ರಜ್ಞಾಪೂರ್ವಕವಾಗಿಯೊ ಕ್ರಿಯಾಶೀಲವಾಗುವ ಧೋರಣೆಯು ಸಂಶೋಧನ ವಿಧಾನವನ್ನು ನಿರ್ಮಾಣ ಮಾಡುತ್ತದೆ. ಅಂದರೆ ಸಂಶೋಧನ ವಿಧಾನ ರೂಪುಗೊಳ್ಳುವುದು ಸಂಶೋಧಕರ ಇಲ್ಲವೆ ಸಂಶೋಧನೆಯ ಧೋರಣೆಯಿಂದಲೇ.

ಉದಾಹರಣೆಗೆ, ‘ಕನ್ನಡ ಕಾದಂಬರಿಗಳಲ್ಲಿ ದುಡಿಯುವ ವರ್ಗ’ ಎಂಬ ವಿಷಯವನ್ನು ಸಂಶೋಧನೆಗೆ ಆಯ್ಕೆ ಮಾಡಿಕೊಂಡರು ಎಂದು ತಿಳಿಯೋಣ. ಆಗ ಕನ್ನಡ ಕಾದಂಬರಿಗಳಲ್ಲಿ ದುಡಿಯುವ ವರ್ಗ ಅನಾವಣಗೊಂಡಿರುವ ಕ್ರಮಗಳನ್ನು, ಅದರ ವಿನ್ಯಾಸಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕಾಗುತ್ತದೆ. ಈ ಪರಿಶೀಲನೆಗೆ ದುಡಿಯುವ ವರ್ಗ ಎಂದರೆ ಏನು, ದುಡಿಯುವ ವರ್ಗಕ್ಕೂ ಮಾಲಿಕ ವರ್ಗಕ್ಕೂ ಇರುವ ಸಂಬಂಧವೇನು, ಕಾದಂಬರಿಗಳಲ್ಲಿ ಇದು ಹೇಗೆ ವ್ಯಕ್ತವಾಗಿದೆ ಎಂಬ ವಿಷಯಗಳನ್ನು ಕುರಿತು ಆಲೋಚನೆ ಮಾಡಬೇಕಾಗುತ್ತದೆ. ಜೊತೆಗೆ ದುಡಿಯುವ ವರ್ಗಕ್ಕು ಮತ್ತು ದುಡಿಸಿಕೊಳ್ಳುವ ವರ್ಗಕ್ಕೂ ಇರುವ ಸಂಬಂಧದ ಸ್ವರೂಪ ಯಾವುದು ಹಾಗೂ ಆ ಸಂಬಂಧದ ಬದಲಾವಣೆಯ ನೆಲೆಗಳು ಯಾವುವು ಎಂಬುದನ್ನು ಪರಿಶೀಲನೆ ಮಾಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸಂಶೋಧನಾ ವಿಧಾನವನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಮೇಲಿನ ವಿಷಯದಲ್ಲಿ ಸಂಶೋಧಕರ ಧೋರಣೆಗೆ ಅನುಗುಣವಾಗಿ ವಿಧಾನವು ರೂಪುಗೊಳ್ಳುವ ಕೆಲವು ಮಾದರಿಗಳನ್ನು ಗಮನಿಸೋಣ. ಮಾದರಿ ೧: ಕಾದಂಬರಿಗಳಲ್ಲಿ ಎಲ್ಲೆಲ್ಲಿ ದುಡಿಯುವ ವರ್ಗಗಳ ವಿವರಗಳು, ಸನ್ನಿವೇಶಗಳು, ಸಂದರ್ಭಗಳು ಬಂದಿವೆಯೊ ಅವನ್ನು ಆಯ್ಕೆ ಮಾಡಿಕೊಂಡು ಅವನ್ನು ಸಂಶೋಧನ ಬರವಣಿಗೆಯ ಪರಿವಿಡಿಯಲ್ಲಿ ಜೋಡಿಸುತ್ತ ಹೋಗುವುದು. ಇದು ಮಾಹಿತಿ ಪ್ರಧಾನ ವಿವರಣಾತ್ಮಕ ಮಾದರಿ. ಮಾದರಿ ೨: ದುಡಿಯುವ ವರ್ಗದ ಬಗೆಗಿನ ಮಾಹಿತಿಗಳನ್ನು ಕಾದಂಬರಿಗಳಿಂದ ಆಯ್ಕೆಮಾಡಿದ ನಂತರ ಸಂಶೋಧನ ಬರವಣಿಗೆಯಲ್ಲಿ ದುಡಿಯುವ ವರ್ಗದ ಬದುಕು ಬವಣೆಯ ಬಗ್ಗೆ ಆಸಕ್ತಿ ವಹಿಸಿ ಚರ್ಚಿಸುವುದು. ಇದು ವಿಶ್ಲೇಷಣ ಮಾದರಿ. ಮಾದರಿ ೩: ದುಡಿಯುವ ವರ್ಗದ ಬಗೆಗಿನ ವಿವರಗಳನ್ನೂ ಮತ್ತು ಮಾಲಿಕ ವರ್ಗದ ಬಗೆಗಿನ ವಿವರಗಳನ್ನೂ ಕಾದಂಬರಿಗಳಿಂದ ಸಂಗ್ರಹಿಸುವುದು. ಕೇವಲ ದುಡಿಯುವ ವರ್ಗದ ವಿವರಗಳು ಸಂಶೋಧನೆಗೆ ಪಾರ್ಶ್ವಿಕವಾಗುತ್ತವೆ ಎಂದು ತಿಳಿಯುವುದು. ಆ ಕಾರಣದಿಂದ ಎರಡೂ ಕಡೆಯ ವಿವರಗಳನ್ನು ಸಂಗ್ರಹಿಸುವುದು. ದುಡಿಯುವ ವರ್ಗವನ್ನು ಕುರಿತ ವಿವರಗಳನ್ನು ಮತ್ತು ಮಾಲೀಕ ವರ್ಗವನ್ನುಕುರಿತ ವಿವರಗಳನ್ನು ಮುಖಾಮುಖಿ ಮಾಡುವುದು. ಮಾದರಿ ೪: ಹೀಗೆ ಮುಖಾಮುಖಿ ಮಾಡುವಾಗ ಕಾದಂಬರಿಗಳ ಮೂಲಕ ವ್ಯಕ್ತವಾಗುವ ಸೂಕ್ಷ್ಮ ಹಾಗೂ ಅತಿಸೂಕ್ಷ್ಮವಾದ ಚಿತ್ರಣಗಳನ್ನು ಮತ್ತು ಮಾನವ ಸ್ವಭಾವಗಳನ್ನು ಗುರುತಿಸುವುದು. ಹಾಗೆ ಗುರುತಿಸುತ್ತ ಮಾಲಿಕ ವರ್ಗಕ್ಕೂ ಮತ್ತು ದುಡಿಯುವ ವರ್ಗಕ್ಕೂ ಯಾವ ಬಗೆಯ ಸಂಬಂಧ ಏರ್ಪಟ್ಟಿದೆ ಎಂಬುದನ್ನು ಪರಿಶೀಲಿಸುವುದು. ಇದನ್ನು ನಿರ್ವಹಿಸಲು ಕಾದಂಬರಿಯ ಆಕೃತಿ ಹೇಗೆ ರೂಪುಗೊಂಡಿದೆ ಎಂದು ಪರಿಶೀಲಿಸುವುದು. ಈ ಎರಡು ವರ್ಗಗಳ ನಡುವಿನ ಸಂಬಂಧವನ್ನು ಪರಿಶೀಲಿಸುವಾಗ ಸಂಶೋಧಕರು ಎರಡು ಸಾಧ್ಯತೆಗಳನ್ನು ಕಂಡುಕೊಳ್ಳಬಹುದು. ಒಂದು: ಮಾಲೀಕ ವರ್ಗಕ್ಕೂ ಮತ್ತು ದುಡಿಯುವ ವರ್ಗಕ್ಕೂ ಪೋಷಕ-ಪೋಷಿತ ಸಂಬಂಧವಿದೆ ಎಂದು ಗುರುತಿಸುವುದು. ಹೀಗೆ ಆ ಎರಡು ವರ್ಗಗಳ ನಡುವೆ ಪೋಷಕ-ಪೋಷಿತ ಸಂಬಂಧವಿದೆ ಎಂದು ಗುರುತಿಸಿದರೆ ಆ ಎರಡು ವರ್ಗಗಳ ನಡುವೆ ಸಹಬಾಳ್ವೆ ಇದೆ ಎಂದು ತೀರ್ಮಾನಿಸಿದಂತೆ. ೫. ಸಂಶೋಧಕರು ಇನ್ನೊಂದು ಬಗೆಯಲ್ಲೂ ಈ ಎರಡು ವರ್ಗಗಳ ನಡುವಿನ ಸಂಬಂಧ ವನ್ನು ಕೊಂಡುಕೊಳ್ಳಬಹುದು. ಆ ಎರಡು ವರ್ಗಗಳ ನಡುವೆ ಶೋಷಕ-ಶೋಷಿತ ಸಂಬಂಧವಿದೆ ಎಂದು ವಿಶ್ಲೇಷಿಸಬಹುದು. ಸಂಬಂಧವನ್ನು ಹೀಗೆ ಗುರುತಿಸಿದಾಗ, ಆ ಎರಡು ವರ್ಗಗಳ ನಡುವೆ ಸಹಬಾಳ್ವೆ ಇಲ್ಲ; ಅಲ್ಲಿ ಶೋಷಣೆ ಮತ್ತು ಸಂಘರ್ಷ ಇದೆ ಎಂದು ಗುರುತಿಸಿದಂತೆ ಆಗುತ್ತದೆ. ಸಮಾಜವನ್ನು ಗ್ರಹಿಸುವ ಸಂಶೋಧಕರ ಧೋರಣೆಯೆ ಈ ಬಗೆಯಲ್ಲಿ ಕಾದಂಬರಿಗಳಲ್ಲಿ ಅನಾವರಣವಾಗಿರುವ ಎರಡು ಜಗತ್ತುಗಳ ಸಂಬಂಧಗಳನ್ನು ವಿಶ್ಲೇಷಿಸಲು ನೆರವಾಗುತ್ತದೆ. ಈ ಧೋರಣೆಯಿಂದಲೆ ಅಧ್ಯಯನ ವಿಧಾನ ರೂಪುಗೊಳ್ಳುತ್ತದೆ. ಹಾಗಾಗಿ ‘ಕನ್ನಡ ಕಾದಂಬರಿಗಳಲ್ಲಿ ದುಡಿಯುವ ವರ್ಗ’ ಎಂಬ ವಿಷಯವನ್ನು ಕುರಿತು ಯಾವ ವಿಧಾನದಲ್ಲಿ ಅಧ್ಯಯನ ಮಾಡಬೇಕು ಎಂಬ ಪ್ರಶ್ನೆಯು, ದುಡಿಯುವ ವರ್ಗವನ್ನು ಯಾವ ಧೋರಣೆಯಿಂದ ನೋಡುತ್ತೇವೆ ಎಂಬ ದೃಷ್ಟಿಕೋನವನ್ನು ಪ್ರಧಾನವಾಗಿ ಅವಲಂಬಿಸಿದೆ.

ಸಮಾಜ ವಿಜ್ಞಾನಗಳಲ್ಲಿ ಕೆಲವು ನಿರ್ದಿಷ್ಟವಾದ ವಿಧಾನಗಳನ್ನು ಬಳಸಲಾಗುತ್ತದೆ. ಉದಾಹರಣೆಗೆ ಸಮುದಾಯಗಳ ಅಧ್ಯಯನ ಎಂದು ಇಟ್ಟುಕೊಳ್ಳೋಣ. ಯಾವುದೆ ಸಮುದಾಯದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸಾಹಿತ್ಯಕ, ಸಾಂಸ್ಕೃತಿಕ, ಚಾರಿತ್ರಿಕ, ಆಹಾರ ಪದ್ಧತಿ, ಉಡುಗೆ ತೊಡಿಗೆ, ಮದುವೆ-ಹೀಗೆ ಸಂಶೋಧನೆಯ ಪರಿವಿಡಿಯನ್ನು ರಚನೆ ಮಾಡಿಕೊಂಡು, ಕ್ಷೇತ್ರಕಾರ್ಯದಿಂದ ಸಂಗ್ರಹಿಸಿದ ಮಾಹಿತಿಗಳನ್ನು ಸಂಶೋಧನೆಯ ಅಧ್ಯಾಯಗಳ ವಿಂಗಡಣೆಗೆ ಅನುಗುಣವಾಗಿ ವಿಂಗಡಿಸಿ, ವಿವರಿಸುವ ಒಂದು ಮಾದರಿ ಇದೆ. ಇದು ಜನಪ್ರಿಯ ಮಾದರಿ. ಇದನ್ನು ಹೊರತಾಗಿಯೂ ಅಲ್ಲಿ ಸಂಶೋಧನೆ ನಡೆಯುತ್ತಿದೆ. ಈ ಅಧ್ಯಯನ ಚೌಕಟ್ಟಿಗೆ ಯಾವುದೇ ಸಮುದಾಯದ ಮಾಹಿತಿಗಳನ್ನು ಹಾಕಬಹುದು. ಅಲ್ಲಿ ಸಂಶೋಧನೆ ಮಾಡುವ ವಿಧಾನ ಒಂದೇ ಇರುತ್ತದೆ. ಆದರೆ ಸಂಶೋಧನೆ ಮಾಡಬಹುದಾದ ಸಮುದಾಯಗಳು ನಿರಂತರವಾಗಿ ಬದಲಾಗುತ್ತಾ ಹೋದಂತೆ ಅವುಗಳನ್ನು ಅಧ್ಯಯನ ಮಾಡುವ ವಿಧಾನಗಳು ಬದಲಾಗುತ್ತಾ ಹೋಗುವುದಿಲ್ಲ. ಆದರೆ ಸಾಹಿತ್ಯ ಸಂಶೋಧನೆಗಳಲ್ಲಿ ಸಂಶೋಧನೆಯ ವಿಷಯ ಬದಲಾದಂತೆ ಅದನ್ನು ಕುರಿತು ಸಂಶೋಧನೆ ಮಾಡುವ ವಿಧಾನ ಕೂಡ ಬದಲಾಗುತ್ತಾ ಹೋಗಬೇಕಾಗುತ್ತದೆ.

ಉದಾಹರಣೆಗೆ ಈ ಮುಂದಿನ ಕೆಲವು ಸಂಶೋಧನಾ ವಿಷಯಗಳನ್ನು ಗಮನಿಸೋಣ. ೧. ಕುವೆಂಪು ಕೃತಿಗಳಲ್ಲಿ ದಲಿ ಪಾತ್ರಗಳು, ೨. ಕಾರಂತರ ಕೃತಿಗಳಲ್ಲಿ ದಲಿತ ಪಾತ್ರಗಳು, ೩. ಬೈರಪ್ಪನವರ ಕೃತಿಗಳಲ್ಲಿ ದಲಿತ ಪಾತ್ರಗಳು, ೪. ಅನಂತಮೂರ್ತಿ ಅವರ ಕೃತಿಗಳಲ್ಲಿ ದಲಿತ ಪಾತ್ರಗಳು, ೫. ಲಂಕೇಶರ ಕೃತಿಗಳಲ್ಲಿ ದಲಿತ ಪಾತ್ರಗಳು, ೬. ದೇವನೂರ ಮಹಾದೇವರ ಕೃತಿಗಳಲ್ಲಿ ದಲಿತ ಪಾತ್ರಗಳು, ೭. ಚೆನ್ನಣ್ಣ ವಾಲೀಕಾರರ ಕೃತಿಗಳಲ್ಲಿ ದಲಿತ ಪಾತ್ರಗಳು, ೮. ಮನಜ ಅವರ ಕೃತಿಗಳಲ್ಲಿ ದಲಿತ ಪಾತ್ರಗಳು, ೯. ಜಂಬಣ್ಣ ಅಮರಚಿಂತ ಅವರ ಕೃತಿಗಳಲ್ಲಿ ದಲಿತ ಪಾತ್ರಗಳು, ೧೦. ಶಿವರುದ್ರ ಕಲ್ಲೋಳಿಕರ ಅವರ ಕಾದಂಬರಿಯಲ್ಲಿ ದಲಿತ ಪಾತ್ರಗಳು. ಈ ವಿಷಯಗಳನ್ನು ಸಂಶೋಧನೆಗೆ ಆಯ್ಕೆಮಾಡಿಕೊಂಡಾಗ ಮೊದಲ ನೋಟಕ್ಕೆ ಈ ಬೇರೆ ಬೇರೆ ವಿಷಯಗಳನ್ನು ಕುರಿತು ಒಂದೇ ರೀತಿಯಲ್ಲಿ ಅಧ್ಯಯನ ಮಾಡಬಹು ಎನಿಸುತ್ತದೆ. ಆದರೆ ಅದು ಅಷ್ಟು ಸರಳ ಇರುತ್ತದೆಯೇ ಎಂಬುದನ್ನು ಪರಿಶೀಲಿಸಿ ನೋಡಬೇಕು. ಎಲ್ಲಾ ವಿಷಯಗಳಲ್ಲಿಯೂ ‘ದಲಿತ ಪಾತ್ರಗಳು’ ಎಂಬ ಒಂದು ಸಾಮಾನ್ಯ ವಿಷಯ ರಿಪೀಟ್ ಆಗಿದೆ. ದಲಿತರನ್ನು ಬೇರೆ ಬೇರೆ ಬರಹಗಾರರು ಹೇಗೆ ಹೇಗೆ ಚಿತ್ರಿಸಿದ್ದಾರೆ  ಎಂಬುದನ್ನು ಕುರಿತು ಸಂಶೋಧನೆ ಮಾಡಲು ಎಲ್ಲಾ ವಿಷಯಗಳಿಗೂ ಅನ್ವಯವಾಗುವ ಒಂದು ಸಾಮಾನ್ಯ ವಿಧಾನವನ್ನು ಅನುಸರಿಸಬಹುದು ಅಂತ ಅನಿಸುತ್ತದೆ. ಹಾಗಿದ್ದರೆ ಅಂತಹ ಸಂಶೋಧನೆಯ ಪರಿವಿಡಿ ಹೇಗಿರಬಹುದು ಎಂಬುದನ್ನು ನೋಡೋಣ.

ಅಧ್ಯಾಯ ೧: ಅಧ್ಯಯನದ ಉದ್ದೇಶ, ವ್ಯಾಪ್ತಿ, ಸ್ವರೂಪ, ಅಧ್ಯಾಯ ೨: ಅಧ್ಯಯನದ ವಿಧಾನ, ಅಧ್ಯಾಯ ೩: ಇದುವರೆಗೆ ನಡೆದಿರುವ ಅಧ್ಯಯನಗಳ ಸಮೀಕ್ಷೆ, ಅಧ್ಯಾಯ, ೪: ದಲಿತರ ಚಿತ್ರಣ: ಕಾದಂಬರಿಗಳಲ್ಲಿ, ಅಧ್ಯಾಯ ೫: ದಲಿತರ ಚಿತ್ರಣ : ಕಥೆಗಳಲ್ಲಿ ಅಧ್ಯಾಯ ೬ : ದಲಿತರ ಚಿತ್ರಣ : ಇತರೆ ಕೃತಿಗಳಲ್ಲಿ. ಹೀಗೆ ಸಮಶೋಧಕರು ತಮ್ಮ ಸಂಶೋಧನೆಯ ಪರಿವಿಡಿಯನ್ನು ರೂಪಿಸಿಕೊಳ್ಳಬಹುದು. ಇದೇ ಪರಿವಿಡಿಯನ್ನು ಉಳಿದೆಲ್ಲ ವಿಷಯಗಳಿಗೂ ಅನ್ವಯಿಸಲೂ ಬಹುದು. ಆದರೆ ಸಂಶೋಧನೆಗೆ ಆಯ್ಕೆಮಾಡಿ ಕೊಳ್ಳುವ ಬರಹಗಾರರು ಬದಲಾಗುತ್ತಾ ಹೋದಂತೆ ಅವರು ಚಿತ್ರಿಸಿದ ದಲಿತರ ಚಿತ್ರಣಗಳು ಬದಲಾಗುತ್ತಾ ಹೋಗುತ್ತವೆ ಎಂಬುದನ್ನು ಗಮನಿಸಬೇಕು. ಕುವೆಂಪು ಅವರ ಕೃತಿಗಳಲ್ಲಿ ಇನ್ನೂ ಶಿಕ್ಷಣ ಪಡೆಯದ, ಆಧುನಿಕತೆಯ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳದ, ಊಳಿಗಮಾನ್ಯಶಾಹಿ ದಬ್ಬಾಳಿಕೆಗೆ ಹೊಂದಿಕೊಂಡು ಹೋಗುವಂತಹ ದಲಿತ ಪಾತ್ರಗಳ ಅನಾವರಣಗೊಂಡಿವೆ. ಅಲ್ಲದೆ ಕುವೆಂಪು ಅವರ ಕೃತಿಗಳಲ್ಲಿ ಅದರಲ್ಲೂ ವಿಶೇಷವಾಗಿ ಅವರ ಎರಡೂ ಕಾದಂಬರಿಗಳಲ್ಲಿ ದಲಿತರು ಬಹಳ ರೊಮ್ಯಾಂಟಿಕ್ ಆಗಿ ಚಿತ್ರಿತರಾಗಿದ್ದಾರೆ. ಆದರೆ ಕಾರಂತರ ‘ಚೋಮನದುಡಿ’ಯಲ್ಲಿ ಗೇಣಿಗಾಗಿ ಭೂಮಿಯನ್ನು ಕೇಳುವ ದಲಿತ ಚಿತ್ರಿತನಾಗಿದ್ದಾನೆ. ಅದು ಪ್ರಜ್ಞಾಪೂರ್ವಕ ಅಪೇಕ್ಷೆಯೊ ಅಥವಾ ಭೂಮಿಯ ಬಗೆಗಿರುವ ಚೋಮನ ಭಾವನೆಯೊ ಎಂಬುದನ್ನು ಮರುಪರಿಶೀಲಿಸಬೇಕಾಗುತ್ತದೆ. ಯಾಕೆಂದರೆ ಆ ಕಾದಂಬರಿಯ ಚೋಮ ಆಧುನಿಕ ಶಿಕ್ಷಣ ಪಡೆದವನಲ್ಲ; ಅದರ ಜ್ಞಾನದ ಬಲದಿಂದ ಭೂಮಿಯನ್ನು ಗೇಣಿಗೆ ಕೇಳಿದವನಲ್ಲ; ಭೂಮಿಗೆ ತಾನು ಒಡೆಯನಾಗಬೇಕು; ಭೂಮಿಗೆ ತಾನು ಮಾಲೀಕನಾಗಬೇಕು ಎಂಬ ಭೋಗದ ಆಸಕ್ತಿಯಿಂದ ಚೋಮ ಗೇಣಿಗೆ ಭೂಮಿ ಕೇಳಿದವನಲ್ಲ. ಅವನಿಗೆ ಏನೊ ಸಹಜವಾಗಿ ತನ್ನದೆನ್ನುವ ಅಂಗೈಯಗಲ ಭೂಮಿ ಬೇಕೆನಿಸಿತು. ಅದಕ್ಕಾಗಿ ಕೇಳಿದ ಅಷ್ಟೆ. ಆದರೆ ದೇವನೂರು ಮಹಾದೇವ ಅವರು ಆಧುನಿಕ ಉಳ್ಳವರು. ಅದಕ್ಕಾಗಿ ನಡೆಯುವ ಹೋರಾಟಗಳನ್ನು ತಮ್ಮ ಶಕ್ತ್ಯಾನುಸಾರ ಬೆಂಬಲಿಸಿದವರು. ಆದರೆ ಅವರ ಕೃತಿಗಳಲ್ಲೇಕೆ ದಲಿತ ಪಾತ್ರಗಳು ಭೂಮಿಯನ್ನು ಕೇಳುವುದಿಲ್ಲ ಹಾಗೂ ಭೂಮಿ ಬೇಕೆಂದು ಹೋರಾಟ ಮಾಡುವುದಿಲ್ಲ. ಅಥವಾ ಈಗಾಗಲೆ ಕೆಲವು ವಿಮರ್ಶಕರು ಗುರುತಿಸಿರುವಂತೆ ಅವರ ಕೃತಿಗಳಲ್ಲಿನ ದಲಿತ ಪಾತ್ರಗಳು ದೌರ್ಜನ್ಯಗಳ ವಿರುದ್ಧವೊ, ಶೋಷಣೆಯ ವಿರುದ್ಧವೊ ಯಾಕೆ ಪ್ರತಿಭಟನೆ ಮಾಡುವುದಿಲ್ಲ? ಈ ಮುಂತಾದ ಅಂಶಗಳನ್ನು ನಿರ್ದಿಷ್ಟ ಚರ್ಚೆಗೆ ಒಳಪಡಿಸಬೇಕಾಗುತ್ತದೆ. ಜಂಬಣ್ಣ ಅಮರಚಿಂತರ ಕೃತಿಗಳ ಕೆಲವು ದಲಿತ ಪಾತ್ರಗಳು ಯಾಕೆ ಊಳಿಗಮಾನ್ಯಶಾಹಿಯ ಹಳೆಯ ಸಂಬಂಧಗಳನ್ನು ಹಾಗೆಯೇ ಒಪ್ಪಿಕೊಂಡು ಹೋಗುತ್ತವೆ? ಶಿವರುದ್ರ ಕಲ್ಲೋಳಿಕರ ಅವರ ಕಾದಂಬರಿಯ ಪಾತ್ರಗಳು ಯಾಕೆ ಹೋರಾಟ ಹಾಗೂ ಪ್ರತಿಭಟನೆಯಲ್ಲಿ ಕ್ರಿಯಾಶೀಲವಾಗುತ್ತವೆ? ಈ ಮುಂತಾದ ಅಂಶಗಳನ್ನು ಗಮನಿಸಬೇಕಾಗುತ್ತದೆ. ಇದುವರೆಗಿನ ಚರ್ಚೆಯ ಮುಖ್ಯವಾದ ಅಂಶವೇನೆಂದರೆ ಬೇರೆ ಬೇರೆ ಬರಹಗಾರರು ಬೇರೆ ಬೇರೆ ಸ್ವರೂಪದಲ್ಲಿ ದಲಿತರನ್ನು ಚಿತ್ರಿಸಿದ್ದಾರೆ ಎಂಬುದು. ಇದಕ್ಕೆ ಕಾರಣಗಳು ಏನು ಎಂದು ಹುಡುಕಬೇಕಾಗುತ್ತದೆ. ಅಷ್ಟು ಮಾತ್ರವಲ್ಲ; ಎಲ್ಲರ ಕೃತಿಗಳಲ್ಲಿ ಚಿತ್ರಿತವಾಗಿರುವ ದಲಿತ ಪಾತ್ರಗಳನ್ನು ಒಂದೇ ಬಗೆಯಲ್ಲಿ ಗ್ರಹಿಸಲು ಹಾಗೂ ವಿವರಿಸಲು ಬರುವುದಿಲ್ಲ. ಯಾಕೆಂದರೆ ಎಲ್ಲರ ಕೃತಿಗಳ ದಲಿತ ಪಾತ್ರಗಳು ಸ್ವಭಾವದಲ್ಲಿ, ವರ್ತನೆಯಲ್ಲಿ, ಸಾಮಾಜಿಕ ನಡವಳಿಕೆಗಳಲ್ಲಿ ಒಂದೇ ರೀತಿಯಲ್ಲಿ ಇಲ್ಲ. ಹಾಗಾಗಿ ಬೇರೆ ಬೇರೆ ರೀತಿಗಳಲ್ಲಿ ನಿರೂಪಿತವಾಗಿರುವ ದಲಿತ ಪಾತ್ರಗಳನ್ನು ಸಾಮಾನ್ಯೀಕರಿಸಿ ಒಂದೇ ವಿಧಾನದಲ್ಲಿ ಅಧ್ಯಯನ ಮಾಡಲು ಬರುವುದಿಲ್ಲ. ಆಗ ಸಂಶೋಧನಾ ಪರಿವಿಡಿಯನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. ಇದು ಒಂದು ಬಗೆಯ ಬದಲಾವಣೆಯ ಸಾಧ್ಯತೆ. ಸಂಶೋಧನೆಯ ಪರಿವಿಡಿಯನ್ನು ಬದಲಾಯಿಸಿದಾಗ ಅವುಗಳ ಶೀರ್ಷಿಕೆ ಕೂಡ ಪರಿವಿಡಿಗೆ ಅನುಗುಣವಾಗಿ ಬದಲಾಗುತ್ತದೆ. ಅದು ಹೇಗೆ ಬದಲಾಗುತ್ತದೆ ಎಂಬುದನ್ನು ನೋಡೋಣ.

ಈ ಮೇಲೆ ಚರ್ಚೆ ಮಾಡಿದ ಹಾಗೆ ಬೇರೆ ಬೇರೆ ಬರಹಗಾರರ ಕೃತಿಗಳಲ್ಲಿ ಬೇರೆ ಬೇರೆ ಬಗೆಯ ದಲಿತ ಪಾತ್ರಗಳು ಚಿತ್ರಿತವಾಗಿವೆ. ಕೆಲವರ ಕೃತಿಗಳಲ್ಲಿ ಭೂಮಿಯನ್ನು ಗೇಣಿಗೆ ಕೇಳುವ ದಲಿತ ಪಾತ್ರಗಳು, ಮತ್ತೆ ಕೆಲವರಲ್ಲಿ ಶೋಷಣೆ ದಮನ ದಬ್ಬಾಳಿಕೆಗಳಿಗೆ ಹೊಂದಿಕೊಂಡು ಹೋಗುವ ದಲಿತ ಪಾತ್ರಗಳು, ಮತ್ತೆ ಕೆಲವರಲ್ಲಿ ಈ ದಮನ ದಬ್ಬಾಳಿಕೆಗಳನ್ನು ವಿರೋಧಿಸುವ, ಪ್ರತಿಭಟಿಸುವ ದಲಿತ ಪಾತ್ರಗಳು. ಹೀಗೆ ಆ ಪಾತ್ರಗಳ ಬೆಳವಣಿಗೆ ಕೃತಿಕಾರರಿಂದ ಕೃತಿಕಾರರಿಗೆ ಬದಲಾಗುತ್ತಾ ಹೋಗುತ್ತದೆ.  ಹೀಗೆ ಬದಲಾಗುತ್ತಾ ಹೋಗುವುದರಿಂದ ಅದರ ಪರಿವಿಡಿಯನ್ನು ಈ ಮೊದಲು ಕೊಟ್ಟ ಶೀರ್ಷಿಕೆಯಲ್ಲಿ ಏನಿದೆ ಅದೇ ರೀತಿಯಲ್ಲಿ ಉಳಿಸದೆ ಅದನ್ನು ಬದಲಾಯಿಸಬೇಕಾಗುತ್ತದೆ. ಅದನ್ನು ಹೇಗೆ ಬದಲಾಯಿಸಬಹುದು ಎಂಬುದಕ್ಕೆ ಮುಂದಿನ ಸಾಧ್ಯತಾ ಪರಿವಿಡಿಯನ್ನು ಗಮನಿಸಬಹುದು.

ಸಂಶೋಧನ ವಿಷಯದ ಶೀರ್ಷಿಕೆ: ಕಥನ ಸಾಹಿತ್ಯದಲ್ಲಿ ದಲಿತ ಪಾತ್ರಗಳು: ಅಧ್ಯಾಯ ೧: ಅಧ್ಯಯನದ ಉದ್ದೇಶ, ವ್ಯಾಪ್ತಿ, ಸ್ವರೂಪ, ಅಧ್ಯಾಯ ೨: ಅಧ್ಯಯನ ವಿಧಾನ, ಅಧ್ಯಾಯ ೩: ಇದುವರೆಗೆ ನಡೆದಿರುವ ಅಧ್ಯಯನಗಳ ಸಮೀಕ್ಷೆ, ಅಧ್ಯಯನ ೪: ಸಾಹಿತ್ಯದಲ್ಲಿ ದಲಿತ ಪತ್ರ ಚಿತ್ರಣದ ತಾತ್ವಿಕತೆ, ಅಧ್ಯಾಯ ೫: ಊಳಿಗಮಾನ್ಯಶಾಹಿ ಸಂಬಂಧಗಳು ಮತ್ತು ದಲಿತ ಪಾತ್ರಗಳು, ಅಧ್ಯಾಯ ೬: ಎಚ್ಚೆತ್ತ ದಲಿತ ಯುಗ ಮತ್ತು ಕಥನ ಸಾಹಿತ್ಯ, ಅಧ್ಯಾಯ ೭: ದಲಿತ ಪಾತ್ರಗಳ ವಿಕಾಸ ಮತ್ತು ಕಥನ ಸಾಹಿತ್ಯ, ಅಧ್ಯಾಯ ೮: ಸಮಾರೋಪ. ಹೀಗೆ ಅಧ್ಯಯನದ ವಿಧಾನದಲ್ಲಿ ಮಾಡಿಕೊಳ್ಳಬಹುದಾದ ಬದಲಾವಣೆಯು ಅಧ್ಯಯನದ ಧೋರಣೆಯ ಬದಲಾವಣೆಯನ್ನು ಅವಲಂಬಿಸಿರುತ್ತದೆ. ಅಧ್ಯಯನದ ಧೋರಣೆಯಲ್ಲಿನ ಬದಲಾವಣೆಯು ಸಂಶೋಧನಾ ವಿಷಯದ ಬದಲಾವಣೆಯನ್ನು ಅಪೇಕ್ಷಿಸುತ್ತದೆ. ಅಂದರೆ ಇಲ್ಲಿ ವಿಧಾನದಲ್ಲಿ ನಡೆಯಬೇಕಿರುವ ಬದಲಾವಣೆಗಿಂತಲೂ ಹೆಚ್ಚಾಗಿ ಅದು ಸಂಶೋಧನ ಮಾಡುವ ಧೋರಣೆಯ ಬದಲಾವಣೆಯನ್ನು ಪ್ರಧಾನವಾಗಿ ಅವಲಂಬಿಸಿದೆ