ಸಂಶೋಧನೆಯಲ್ಲಿ ಅದರ ವಿಧಾನ ಬಹಳ ಮುಖ್ಯವಾದುದು. ಇದು ಕೇವಲ ಉನ್ನತ ಹಂತದ ಸಂಶೋಧನೆಗೆ ಮಾತ್ರ ಸಂಬಂಧಪಟ್ಟ ಸೀಮಿತ ಹಾಗೂ ನಿರ್ದಿಷ್ಟ ವಿಷಯವಲ್ಲ. ಬದಲಾಗಿ ಜೀವನದ ಪ್ರತಿಯೊಂದು ಚಟುವಟಿಕೆಯಲ್ಲೂ ವಿಧಾನ ಎಂಬುದು ಬಹಳ ಮುಖ್ಯವಾದುದು. ವಿಧಾನವು ಕೇವಲ ಬೌದ್ಧಿಕ ವಿಷಯಗಳಿಗೆ ಮಾತ್ರ ಸೀಮಿತವಾದುದಲ್ಲ. ಭೌತಿಕವಾದ ಹಲವಾರು ಚಟುವಟಿಕೆಗಳಿಗೂ ಈ ವಿಧಾನ ಎಂಬ ಮಾತು ಅನ್ವಯಿಸುತ್ತದೆ. ಪ್ರಕೃತಿಯ ಚಟುವಟಿಕೆಗಳಿಗೆ ಒಂದು ಖಚಿತವಾದ ಮತ್ತು ಸ್ಪಷ್ಟವಾದ ವಿಧಾನ ಎಂಬುದು ಇದೆ. ಪ್ರಕೃತಿಯ ಚಟುವಟಿಕೆಗಳ ಈ ವಿಧಾನವು ನಿಸರ್ಗದತ್ತವಾದ ಕೆಲವು ನಿಯಮಗಳನ್ನು ಹೊಂದಿರುತ್ತದೆ. ಆ ನಿಯಮಗಳ ಪ್ರಕಾರ ಮಾತ್ರವೇ ನೈಸರ್ಗಿಕ ಚಟುವಟಿಕೆಗಳು ನಡೆಯುತ್ತವೆ. ಶಾಖವು ಹೆಚ್ಚಿನ ಪ್ರಮಾಣದ ಕಡೆಯಿಂದ ಕಡಿಮೆ  ಪ್ರಮಾಣದ ಕಡೆಗೆ ಹರಿಯುತ್ತದೆ. ನೀರು ಎತ್ತರದ ಪ್ರದೇಶದಿಂದ ಕೆಳಗಿನ ಪ್ರದೇಶಕ್ಕೆ ಹರಿಯುತ್ತದೆ. ಬೆಂಕಿಯು ಸುಡುತ್ತದೆ. ನೀರು ಹರಿಯುತ್ತದೆ. ಗಾಳಿ ಬೀಸುತ್ತದೆ. ಇದು ಇವುಗಳ ಸ್ವಭಾವ ಮತ್ತು ಕೆಲಸ. ಈ ಕೆಲಸಗಳು ಕೆಲವು ನಿಯಮಗಳಿಗೆ ಅನುಗುಣವಾಗಿಯಷ್ಟೆ ನಡೆಯಲು ಸಾಧ್ಯ. ಆ ನಿಯಮಗಳನ್ನು ಹೊರತುಪಡಿಸಿ ಅಲ್ಲಿಯ ಚಟುವಟಿಕೆಗಳು ನಡೆಯುವುದಿಲ್ಲ. ಹಾಗಾಗಿ ಯಾವುದೆ ಚಟುವಟಿಕೆಯ ಸ್ವರೂಪವನ್ನು ತಿಳಿಯಬೇಕಾದರೆ ಆ ಚಟುವಟಿಕೆಯ ಹಿಂದಿರುವ ನಿಯಮಗಳನ್ನು ಮೊದಲು ತಿಳಿದುಕೊಳ್ಳಬೇಕು. ಆ ನಿಯಮಗಳನ್ನು ತಿಳಿದುಕೊಳ್ಳದೆ ಅದರ ವಿಧಾನವನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ. ಕೆಲವು ಸಸ್ಯಗಳು ಸೂರ್ಯ ಮುಳುಗುತ್ತಿದ್ದಂತೆ ಅಥವಾ ಕತ್ತಲೆಯಾಗುತ್ತಿದ್ದಂತೆ ತಮ್ಮ ಎಲೆಗಳನ್ನು ಮುದುರಿಕೊಳ್ಳುತ್ತವೆ. ಹಾಗೆಯೆ ಸೂರ್ಯ ಹುಟ್ಟುತ್ತಿದ್ದಂತೆ, ಬೆಳಕು ಹರಿಯುತ್ತಿದ್ದಂತೆ ತಮ್ಮ ಎಲೆಗಳನ್ನು ಬಿಚ್ಚಿಕೊಳ್ಳುತ್ತವೆ. ಇದು ಸೂರ್ಯನ ಬೆಳಕಿಗೂ ಆ ಸಸ್ಯಗಳಿಗೂ ಇರುವ ಜೈವಿಕ ಸಂಬಂಧದ ನಿಯಮ. ಕತ್ತಲೆ ಹಾಗೂ ಬೆಳಕು ಮತ್ತು ಆ ಸಸ್ಯಗಳಿಗೆ ಇರುವ ಸಂಬಂಧದ ನಿಯಮ. ಈ ಪ್ರಕ್ರಿಯೆಯ ಕಾರಣದ ಒಂದು ಪ್ರಧಾನ ಮುಖವನ್ನು ನಿಯಮ ಎಂದು ಹೇಳುತ್ತೇವೆ. ಸೂರ್ಯ ಮುಳುಗುತ್ತಿದ್ದಂತೆ ಒಂದು ಬಗೆಯ ಸಸ್ಯ ತನ್ನ ಎಲೆಗಳನ್ನು ಮುದುರಿಕೊಳ್ಳುತ್ತದೆ, ಅದು ಅದರ ನಿಯಮ ಎಂದು ಸಾಮಾನ್ಯೀಕರಿಸುತ್ತೇವೆ. ವಿಧಾನದ ಹಿಂದಿರುವ ನಿಯಮವನ್ನು ಗುರುತಿಸುವಾಗ, ಆ ನಿಯಮದ ಹಿಂದಿರಬಹುದಾದ ಕಾರಣವನ್ನೂ ಕೆಲವು ಸಲ ಪರಿಗಣಿಸಲಾಗುತ್ತದೆ.

ಈಗ ಇದೇ ಅಂಶದ ಚರ್ಚೆಯನ್ನು ಪ್ರಾಣಿ ಸಂಕುಲದ ವಿಷಯಕ್ಕೆ ವರ್ಗಾಯಿಸಿಕೊಳ್ಳೋಣ. ಪಕ್ಷಿಗಳು ಮೊಟ್ಟೆ ಇಡುತ್ತವೆ. ಮೊಟ್ಟೆಗಳಿಗೆ ನಿರ್ದಿಷ್ಟ ಅವಧಿಯವರೆಗೆ ಶಾಖ ಕೊಟ್ಟು ನಂತರ ಅವು ಮರಿ ಮಾಡುತ್ತವೆ. ಇದು ಮೊಟ್ಟೆಯು ಮರಿಯಾಗುವ ಸಾಮಾನ್ಯ ಪದ್ಧತಿ. ಸಸ್ತನಿಗಳು ಮೊಟ್ಟೆ ಇಡುವುದಿಲ್ಲ. ಗರ್ಭ ಧರಿಸಿದ ಮೇಲೆ ನೇರವಾಗಿ ಮರಿ ಹಾಕುತ್ತವೆ. ಮೊಟ್ಟೆಗೆ ಶಾಖ ಕೊಟ್ಟು ಅದು ಮರಿಯಾಗಲು ನಿರ್ದಿಷ್ಟ ದಿನಗಳು ಬೇಕು. ಇದು ಅಲ್ಲಿಯ ಸಾಮಾನ್ಯ ನಿಯಮ. ಸಸ್ತನಿಗಳ ಗರ್ಭ ಧರಿಸಿ ೯ ತಂಗಳು ಕಳೆದ ಮೇಲೆ ಅವು ಮರಿ ಮಾಡುತ್ತವೆ. ಅದು ಅಲ್ಲಿಯ ಸಾಮಾನ್ಯ ನಿಯಮ. ಒಂದು ಕಡೆ ವಿಧಾನ ಎಂಬುದನ್ನು ಚಟುವಟಿಕೆ ನಡೆಯುವ ಕಾರಣದ ಆಧಾರದ ಮೇಲೆ ಪರಿಗಣಿಸಿದರೆ ಮತ್ತೆ ಕೆಲವನ್ನು ಅವುಗಳ ಸಾಮಾನ್ಯ ನಿಯಮ ಎಂದು ಹೇಳಬಹುದು. ಈ ನಿಯಮವನ್ನೇ ವಿಧಾನ ಎಂತಲೂ ಹೇಳಬಹುದು.ವಿಧಾನದ ಭೌತಿಕ ಸ್ವರೂಪವನ್ನು ಸ್ಪಷ್ಟಮಾಡಿಕೊಳ್ಳಲು ಇಟ್ಟಿಗೆ ತಯಾರಿಸುವ ಕೆಲಸವನ್ನು ವಿವರಿಸಿಕೊಳ್ಳೋಣ. ಇಟ್ಟಿಗೆ ಮಾಡಲು ಮಣ್ಣು, ನೀರು, ಇಟ್ಟಿಗೆಯ ಚೌಕಟ್ಟು ಮತ್ತು ಕೆಲಸ ಮಾಡಲು ತಿಳುವಳಿಕೆ ಇರುವ ಜನರು ಬೇಕಾಗುತ್ತಾರೆ. ಮಣ್ಣನ್ನು ಅಗೆದು, ಚೆನ್ನಾಗಿ ಪುಡಿ ಮಾಡಿ, ಅದಕ್ಕೆ ಸೂಕ್ತಪ್ರಮಾಣದಲ್ಲಿ ನೀರು ಹಾಕಿ ಕಲಸಿ, ಅದಕ್ಕೆ ಸೂಕ್ತ ಸಮಯ ಬಿಡುವು ಕೊಟ್ಟು, ನಂತರ ಆ ಮಣ್ಣನ್ನು ಚೌಕಟ್ಟಿನ ಒಳಗೆ ಹಾಕಿ, ಅದನ್ನು ಗಟ್ಟಿಯಾಗಿ ಮೆತ್ತಿ ಉಜ್ಜಿ, ನಂತರ ಚೌಕಟ್ಟನ್ನು ಮೇಲೆ ಎತ್ತಿದರೆ ಹಸಿ ಇಟ್ಟಿಗೆ ನೆಲದ ಮೇಲೆ ರೂಪು ಪಡೆಯುತ್ತದೆ. ನಂತರ ಅವುಗಳನ್ನು ಸೂಕ್ತ ಪ್ರಮಾಣದಲ್ಲಿ ಒಣಗಿಸಿ, ಅವುಗಳನ್ನು ಗೂಡು ಮಾಡಿ, ಆ ಗೂಡಿಗೆ ಬೆಂಕಿ ಹಾಕಿ ಸೂಕ್ತ ಪ್ರಮಾಣದಲ್ಲಿ ಸುಟ್ಟರೆ ಆಗ ಆ ಇಟ್ಟಿಗೆಗಳನ್ನು ಅಗತ್ಯ ಕೆಲಸಗಳಿಗೆ ಬಳಸಲು ಬರುತ್ತದೆ. ಇದೇ ಕ್ರಮವನ್ನು ಬೇರೆ ಬೇರೆ ಕೆಲಸಗಳಿಗೂ ಅನ್ವಯಿಸಬಹುದು. ಸಾರಾಂಶ ಏನೆಂದರೆ ಮನುಷ್ಯರ ಕೆಲಸಗಳಿಗೆ ಅವುಗಳದ್ದೇ ಆದ ನಿರ್ದಿಷ್ಟವೂ, ಸ್ಪಷ್ಟವೂ ಮತ್ತು ಖಚಿತವೂ ಆದ ನಿಯಮಗಳಿರುತ್ತವೆ. ಆ ಪ್ರತಿಯೊಂದು ಕೆಲಸಗಳೂ ಕೂಡ ಆ ನಿಯಮಗಳಿಗೆ ಅನುಗುಣವಾಗಿಯಷ್ಟೆ ನಡೆಯುತ್ತವೆ. ಒಂದು ವೇಳೆ ಆ ಕೆಲಸಗಳು ಆ ನಿಯಮಗಳಿಗೆ ಅನುಗುಣವಾಗಿ ನಡೆಯದಿದ್ದರೆ ಅವು ನಿರೀಕ್ಷಿತ ಫಲಗಳನ್ನು ಕೊಡಲಾರವು. ಅಥವಾ ಇದನ್ನು ಹೀಗೂ ಹೇಳಬಹುದು. ಒಂದು ಕೆಲಸದ ಫಲಿತಾಂಶವು ನಿರೀಕ್ಷೆ ಮಾಡಿದ ರೀತಿಯಲ್ಲಿ ಬಂದಿಲ್ಲ ಎನ್ನುವುದಾದರೆ ಅದು ಆ ಕೆಲಸವನ್ನು ನಡೆಸಿರುವ ಅಥವಾ ಆ ಕೆಲಸವನ್ನು ಮಾಡಿರುವ ವಿಧಾನದಲ್ಲಿ ಆಗಿರುವ/ಮಾಡಿರುವ ತಪ್ಪೂಕೂಡ ಆಗಿರಬಹುದು. ಹಾಗಾಗಿ ಪ್ರತಿಯೊಂದು ಕೆಲಸಕ್ಕೂ ಅದರದ್ದೇ ಆದ ಸಾಮಾನ್ಯ ನಿಯಮಗಳಿರುತ್ತವೆ; ಸಾಮಾನ್ಯ ಪದ್ಧತಿಗಳೀರುತ್ತವೆ. ಪ್ರತಿಯೊಂದು ಕೆಲಸಕ್ಕೂ ಅದರದ್ದೇ ಆದ ಪ್ರತಿಫಲ ಅಪೇಕ್ಷೆಗಳೂ ಇರುತ್ತವೆ. ಬಹುಶಃ ಪ್ರತಿಫಲ ಅಪೇಕ್ಷೆ ಇಲ್ಲದೆ ಯಾವ ಕೆಲಸವೂ ನಡೆಯುವುದಿಲ್ಲ ಮತ್ತು ಯಾವ ಕೆಲಸವನ್ನೂ ಮಾಡುವುದಿಲ್ಲ ಎಂದು ಹೇಳಬಹುದು.

ಸಾಂಪ್ರದಾಯಿಕ ಬೇಸಾಯ ಪದ್ಧತಿಯಲ್ಲಿ ಎತ್ತು ಅಥವಾ ಕೋಣಗಳಿಂದ ಮರದ ನೇಗಿಲಿನಿಂದ ಗದ್ದೆಗಳನ್ನು ಉಳುಮೆ ಮಾಡುತ್ತಾರೆ. ಬತ್ತದ ಸಸಿ ನೆಡುತ್ತಾರೆ. ಬತ್ತ ಕೊಯ್ಲಿಗೆ ಬಂದಾಗ ಕಟಾವು ಮಾಡುತ್ತಾರೆ. ಈ ನಡುವೆ ಗದ್ದೆಗಳಿಗೆ ಗೊಬ್ಬರ ಹಾಕುವುದು, ಕಳೆ ತೆಗೆಯುವುದು ಮುಂತಾದ ಕೆಲಸಗಳನ್ನೂ ಮಾಡಬೇಕಾಗುತ್ತದೆ. ಇದು ಗದ್ದೆಗಳಲ್ಲಿ ಬತ್ತವನ್ನು ಬೆಳೆಯುವ ಪದ್ಧತಿ ಮತ್ತು ವಿಧಾನ. ಇತ್ತೀಚಿಗೆ ಬತ್ತದ ಉತ್ಪಾದನೆಗೆ ಬಳಸುವ ಉಪಕರಣಗಳು ಬದಲಾಗಿವೆ. ಮರದ ನೇಗಿಲಿನ ಜಾಗದಲ್ಲಿ ಕಬ್ಬಿಣದ ನೇಗಿಲು ಬಂದಿದೆ. ಎತ್ತು ಅಥವಾ ಕೋಣಗಳ ಜಾಗದಲ್ಲಿ ಟ್ರ್ಯಾಕ್ಟರ್ ಹಾಗೂ ಟಿಲ್ಲರ್‌ಗಳು ಬಂದಿವೆ. ಸಸಿ ಕೀಳುವ ಮತ್ತು ನಾಟಿ ಮಾಡುವ ಮಿಶನ್‌ಗಳು ಬಂದಿವೆ. ಕೊಟ್ಟಿಗೆ ಗೊಬ್ಬರದ ಜಾಗದಲ್ಲಿ ಕಾರ್ಖಾನೆಯ ಗೊಬ್ಬರಗಳು ಬಂದಿವೆ. ಕಳೆ ನಾಶಕಗಳು ಬಂದಿವೆ. ಈ ಬದಲಾವಣೆಗಳನ್ನು ಗಮನಿಸಿದರೆ ಇಲ್ಲಿ ಬಳಸುತ್ತಿರುವ ಉಪಕರಣಗಳಲ್ಲಿ ಮಾತ್ರ ಬದಲಾವಣೆಗಳು ಕಾಣುತ್ತವೆ. ಈ ಬದಲಾವಣೆಯ ಸ್ವರೂಪವನ್ನು ಎಂತಹ ಬದಲಾವಣೆ ಎಂದು ಗುರುತಿಸಬೇಕು? ಗದ್ದೆ ಬದಲಾಗಿಲ್ಲ. ಎತ್ತುಗಳ ಜಾಗದಲ್ಲಿ ಮಿಶನ್ ಬಂದಿದೆ. ಸಸಿ ಬದಲಾಗಿಲ್ಲ; ಅದನ್ನು ಕೀಳುವ ಅಥವಾ ನೆಡುವ ಜಾಗದಲ್ಲಿ ಮಿಶನ್ ಬಂದಿದೆ. ಗೊಬ್ಬರ ಬದಲಾಗಿಲ್ಲ; ಕೊಟ್ಟಿಗೆ ಗೊಬ್ಬರದ ಜಾಗದಲ್ಲಿ ಕಾರ್ಖಾನೆಯ ಗೊಬ್ಬರ ಬಂದಿದೆ. ಇದು ಬಳಕೆಯ ಉಪಕರಣಗಳಲ್ಲಿ ಮಾಡಿರುವ, ಆಗಿರುವ ಬದಲಾವಣೆ ಎಂದು ಗುರುತಿಸಬಹುದು. ಇದು ಒಟ್ಟಾರೆ ಕೃಷಿ ಉತ್ಪಾದನೆಯಲ್ಲಿ ಮಾಡಿದ ಬದಲಾವಣೆ ಎನ್ನಬಹುದೇ? ಮೇಲೆ ಗುರುತಿಸಿದ ಬದಲಾವಣೆಯಲ್ಲಿ ಗುರುತಿಸದೇ ಉಳಿದಿರುವ ಒಂದು ಮುಖ್ಯವಾದ ಅಂಶವಿದೆ. ಅದು ಯಾವುದು ಎಂದರೆ ಕೈಯಲ್ಲಿ ಮಾಡಬಹುದಾಗಿದ್ದ ಕೆಲಸವು ಯಂತ್ರಗಳಿಗೆ ಬದಲಾಗುತ್ತಾ ಬಂದಿದೆ. ಅಂದರೆ ಬಳಕೆಯ ಉಪಕರಣಗಳಲ್ಲಿ ನಡೆದಿರುವ ಬದಲಾವಣೆಯು ಆ ಉಪಕರಣಗಳನ್ನು ಹಿಡಿದು ಯಾರು ಕೆಲಸ ಮಾಡುತ್ತಿದ್ದರೊ ಅವರ ಪಾತ್ರದ ಮೇಲೆ ಪರಿಣಾಮವನ್ನು, ಬದಲಾವಣೆಯನ್ನು ಉಂಟು ಮಾಡಿದೆ. ಕೃಷಿಯ ಉತ್ಪಾದನೆಗೆ ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಯಂತ್ರದ ಉಪಕರಣಗಳನ್ನು ಬಳಸುತ್ತಾ ಹೋದಂತೆಲ್ಲ; ಆ ಕೆಲಸಗಳನ್ನು ಮಾಡುತ್ತಿದ್ದ ಕೈಗಳಿಗೆ ಕೆಲಸ ಕಡಿಮೆಯಾಗುತ್ತಾ ಹೋಗುತ್ತದೆ. ಕೈಗಳು ಮಾಡುವ ಕೆಲಸ ಕಡಿಮೆಯಾಗುತ್ತಾ ಹೋದಂತೆ ಯಂತ್ರಗಳು ಮಾಡುವ ಕೆಲಸ ಹೆಚ್ಚಾಗುತ್ತಾ ಹೋಗುತ್ತದೆ. ಒಂದು ಕಡೆ ಯಂತ್ರಗಳು ಮತ್ತೊಂದು ಕಡೆ ಕಾರ್ಮಿಕರು. ಈ ಕಾರ್ಮಿಕರು ಮತ್ತು ಯಂತ್ರಗಳ ಬಳಕೆಯ ಪ್ರಮಾಣ ಅಥವಾ ಬಳಕೆಯ ಗಾತ್ರ ಒಂದು ಕಡೆ ದೊಡ್ಡದಾಗುತ್ತಾ ಮತ್ತೊಂದು ಕಡೆ ಸಣ್ಣದಾಗುತ್ತಾ ಸಾಗುತ್ತದೆ. ಯಾವುದು ದೊಡ್ಡದಾಗುತ್ತಾ ಹೋಗುತ್ತದೊ ಅದು ಸಣ್ಣದಾಗುವುದನ್ನು ಇನ್ನೂ ಸಣ್ಣದು ಮಾಡುತ್ತಲೇ ಹೋಗುತ್ತದೆ. ಇದಕ್ಕೆ ವಿರುದ್ಧವಾಗಿ ಯಾವುದು ಸಣ್ಣದಾಗುತ್ತಾ ಹೋಗುತ್ತದೊ ಅದು ಯಾವುದನ್ನು ದೊಡ್ಡದು ಮಾಡುತ್ತದೊ ಅದನ್ನು ಮತ್ತಷ್ಟು ದೊಡ್ಡದು ಮಾಡುತ್ತಾ ಹೋಗುತ್ತದೆ. ಹೀಗೆ ಈ ಎರಡೂ ಕೂಡ ಗಾತ್ರ ಮತ್ತು ಪಾತ್ರ ದೊಡ್ಡದಾಗುವ ಮತ್ತು ಸಣ್ಣದಾಗುವ ಪ್ರಕ್ರಿಯೆ ನಿರಂತರವಾಗಿ ಮುಂದುವರಿಯುತ್ತಾ ಸಾಗುತ್ತದೆ. ಇದನ್ನು ವಿರುದ್ಧ ಸಂಬಂಧದ ಬೆಳವಣಿಗೆ ಎಂದು ಗುರುತಿಸುತ್ತೇವೆ.

ಈಗ ಇದೇ ಪ್ರಕ್ರಿಯೆಯನ್ನು ಇನ್ನೊಂದು ಕೋನದಿಂದ ನೋಡೋಣ. ಗದ್ದೆಗಳ ಕೆಲಸಕ್ಕೆ ಕಾರ್ಮಿಕರು ಕಡಿಮೆಯಾಗುತ್ತಾ ಹೋದಂತೆ ಮಾಲಿಕರು ಅವರಿಗೆ ಕೊಡಬೇಕಿದ್ದ ಕೂಲಿಯ ಪ್ರಮಾಣವು ಕಡಿಮೆಯಾಗುತ್ತಾ ಹೋಗುತ್ತದೆ. ಕೂಲಿಯ ಪ್ರಮಾಣವು ಕಡಿಮೆಯಾಗುತ್ತಾ ಹೋದಂತೆ ಮಾಲಿಕರ ಲಾಭದ ಪ್ರಮಾಣ ಅಥವಾ ಲಾಭದ ಗಾತ್ರ ಹೆಚ್ಚಾಗುತ್ತಾ ಹೋಗುತ್ತದೆ. ಯಾವುದು ಮಾಲಿಕರಿಗೆ ಲಾಭವನ್ನು ತರಬಲ್ಲುದೊ ಅಂತಹ ವಿಧಾನವನ್ನು ಮಾಲಿಕರು ಬಳಸುತ್ತಾರೆ. ಆದರೆ ಈ ವಿಧಾನವು ಕಾರ್ಮಿಕರಿಗೆ ಸೂಕ್ತವಾದ ವಿಧಾನವಲ್ಲ. ಯಾಕೆಂದರೆ ಕೆಲಸದ ಪ್ರಮಾಣ ಕಡಿಮೆ ಆದಾಗ ಕೆಲಸದಲ್ಲಿ ಸ್ಪರ್ಧೆ ಶುರುವಾಗುತ್ತದೆ. ಕೆಲಸದಲ್ಲಿ ಸ್ಪರ್ಧೆ ಶುರುವಾದಾಗ ಕೆಲಸಗಾರರು ಕಡಿಮೆ ಕೂಲಿಗೆ ಕೆಲಸ ಮಾಡುವ ಅನಿವಾರ್ಯತೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಕಾರ್ಮಿಕರಿಗೆ ಕಡಿಮೆ ಕೂಲಿಗೆ ಕಾರಣವಾಗಿರುವ ಸಂಗತಿಯೇ ಬಳಕೆಯ ಉಪಕರಣಗಳಿಗೆ ಸಂಬಂಧಿಸಿದಂತೆ ಒಂದರ ಜಾಗದಲ್ಲಿ ಮತ್ತೊಂದನ್ನು ಬಳಸಿರುವ ಸಂಗತಿಯಾಗಿದೆ. ಅಂದರೆ ಉಪಕರಣಗಳ ಬಳಕೆಯಲ್ಲಿ ನಡೆದಿರುವ ಬದಲಾವಣೆಯೊಂದು ಕಾರ್ಮಿಕರ ಕೆಲಸದ ಗಾತ್ರದ ಮೇಲೂ, ಅವರು ಪಡೆಯಬಹುದಾದ ಕೂಲಿ ಪ್ರಮಾಣದ ಮೇಲೂ, ಮಾಲೀಕರು ಪಡೆಯುವ ಲಾಭದ ಮೇಲೂ ಏಕಕಾಲಕ್ಕೆ ಪರಿಣಾಮಗಳನ್ನು ಉಂಟುಮಾಡುತ್ತದೆ. ಅಂದರೆ ವಿಧಾನ ಎಂದು ಹೇಳುವ ತತ್ವ ಅಥವಾ ನಿಯಮವು ಒಂದು ಕಡೆ ಮಾಲಿಕರಿಗೆ ಲಾಭವನ್ನೂ; ಮತ್ತೊಂದು ಕಡೆ ಕಾರ್ಮಿಕರಿಗೆ ನಷ್ಟವನ್ನೂ ಉಂಟುಮಾಡುತ್ತದೆ ಎಂದಾಯಿತು. ಹಾಗಾದರೆ ಈ ಚರ್ಚೆಯ ಸಾರಾಂಶ ಏನೆಂದರೆ ವಿಧಾನದ ಸ್ವರೂಪದಲ್ಲಿ ಮಾಡುವ ಬದಲಾವಣೆಯ ಸ್ವರೂಪವು ಕೆಲವರಿಗೆ ಲಾಭವನ್ನೂ ಮತ್ತೆ ಕೆಲವರಿಗೆ ನಷ್ಟವನ್ನೂ ಉಂಟುಮಾಡುತ್ತದೆ. ಹಾಗಿದ್ದರೆ ಯಾವುದೆ ಕೆಲಸದ ಯಾವುದೆ ವಿಧಾನದ ಪರಿಣಾಮಕ್ಕೆ ಒಂದೇ ಒಂದು ಮುಖ ಇರುವುದಿಲ್ಲ ಎಂದಾಯಿತು. ವಿಧಾನವು ಭೌತಿಕ ಮತ್ತು ಬೌದ್ಧಿಕ ಕೆಲಸಗಳನ್ನು ಹೇಗೆ ಮಾಡಬೇಕು ಮತ್ತು ಹೇಗೆ ಮಾಡಬಾರದು ಎಂಬ ಸಾಮಾನ್ಯ ಪದ್ಧತಿಗಳನ್ನು, ಸಾಮಾನ್ಯ ನಿಯಮಗಳನ್ನು ಒಳಗೊಂಡಿರುತ್ತದೆ. ವಿಧಾನದ ಸ್ವರೂಪದಲ್ಲಿ ನಡೆಯುವ ಬದಲಾವಣೆಯು ಅದರ ಪರಿಣಾಮ ಮತ್ತು ಫಲಿತಾಂಶದಲ್ಲಿ ಬದಲಾವಣೆಯನ್ನು ಉಂಟುಮಾಡುತ್ತದೆ.