ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರಧಾನವಾಗಿ ಎರಡು ಬಗೆಯ ತಾತ್ವಿಕತೆಗಳು ನಿರಂತರವಾಗಿ ಕ್ರಿಯಾಶೀಲವಾಗಿರುತ್ತವೆ. ಹಾಗಿದ್ದರೆ ಬದುಕಿಗೆ, ರಾಜಕೀಯ ಬದುಕಿಗೆ ಅಥವಾ ಸಂಶೋಧನೆಗೆ ತಾತ್ವಿಕತೆಗಳ ಅಗತ್ಯವಿದೆಯೆ? ಎಂಬ ಪ್ರಶ್ನೆ ಎದುರಾಗುತ್ತದೆ. ಅಷ್ಟು ಮಾತ್ರವಲ್ಲ; ಸಾಹಿತ್ಯವನ್ನು ಕುರಿತ ಸಂಶೋಧನೆಯ ಸಂದರ್ಭದಲ್ಲಿ ಇಂತಹ ತಾತ್ವಿಕತೆಗಳ ಅಗತ್ಯವಿದೆಯೆ ಎಂಬ ಪ್ರಶ್ನೆ ಕೂಡ ಎದುರಾಗುತ್ತದೆ.

ಮನುಷ್ಯರಿಗೆ ಜೀವಂತವಾಗಿ ಬದುಕಲು ಗಾಳಿ, ನೀರು, ಆಹಾರ ಪ್ರಾಥಮಿಕ ಅಗತ್ಯ ಮತ್ತು ಕಡ್ಡಾಯವಾಗಿ ಇವು ಬೇಕು. ಮನುಷ್ಯರು ಮೂಲತಃ ಆಲೋಚನಾ ಜೀವಿಗಳು. ಅವರ ಮೆದುಳಿನಲ್ಲಿ ಬಗೆಬಗೆಯ ಆಲೋಚನೆಗಳು, ಕಲ್ಪನೆಗಳು, ಚಿಂತನೆಗಳು, ಕನಸುಗಳು, ಕಲ್ಪನೆಗಳು, ಚಿಂತೆಗಳು, ಯಾತನೆ ವೇದನೆಗಳು ನಿರಂತರವಾಗಿ ಸಾಗಿರುತ್ತವೆ. ಒಂದು ನಿಮಿಷ, ಒಂದು ಸೆಕೆಂಡೂ ಕೂಡ ಮನುಷ್ಯರ ಮೆದುಳಿಗೆ ಬಿಡುವು ಎಂಬುದು ಇರುವುದಿಲ್ಲ. ಅಷ್ಟು ಪ್ರಮಾಣದಲ್ಲಿ ಆಲೋಚನೆಗಳು, ಚಿಂತನೆಗಳು, ಕಲ್ಪನೆಗಳು, ಊಹೆಗಳು, ನೆನಪುಗಳು, ಅಂದಾಜುಗಳು, ಆಸೆಗಳು, ಯೋಜನೆಗಳು, ಯಾತನೆಗಳು, ವೇದನೆಗಳು ಹೀಗೆ ಏನೇನೊ ಮೆದುಳಿನಲ್ಲಿ ಮನುಷ್ಯರ ಆಯ್ಕೆಯನ್ನೂ ಮೀರಿ ನಡೆದೇ ಇರುತ್ತವೆ. ಸಮಾಜ, ಸಮುದಾಯ, ಸಂಸ್ಕೃತಿ, ಸುತ್ತಲ ವಾತಾವರಣ, ಪರಿಸರವನ್ನು ನೋಡುವ ಹಾಗೂ ಗ್ರಹಿಸುವ ಒಂದು ನಿಲುವು ಎಂಬುದು ಬೇಡವೆಂದರೂ ಬೇಕಾಗುತ್ತದೆ. ಹಾಗಾಗಿ ಸಮಾಜದ ಪ್ರತಿಯೊಬ್ಬರೂ ಅಥವಾ ಪ್ರತಿಯೊಂದು ಹಿತಾಸಕ್ತಿಯ ಗುಂಪುಗಳು, ಸಂಘಟನೆಗಳು, ಸಂಸ್ಥೆಗಳು, ರಾಜಕೀಯ ವ್ಯವಸ್ಥೆಗಳು, ಹೋರಾಟಗಳು, ಚಳುವಳಿಗಳು ತಮ್ಮವೇ ಆದ (ಅವುಗಳಿಗೆ ಖಚಿತ ಎನಿಸುವ) ತಾತ್ವಿಕತೆಯನ್ನು ಹೊಂದಿರುತ್ತವೆ. ಈ ತಾತ್ವಿಕತೆ ಎನ್ನುವುದು ಒಂದು ಬಗೆಯಲ್ಲಿ ಕನ್ನಡಿ ಇದ್ದಂತೆ. ಯಾವ ರೂಪದ, ಯಾವ ವಿನ್ಯಾಸದ ಕನ್ನಡಿ ಇರುತ್ತದೊ ಅದಕ್ಕೆ ಅನುಗುಣವಾಗಿ ಅದರಿಂದ ನೋಡುವ ವಸ್ತುಜಗತ್ತು ಕಾಣುತ್ತದೆ. ಕನ್ನಡಿಯ ರೂಪ ಮತ್ತು ಅದರ ವಿನ್ಯಾಸ ಬದಲಾಗುತ್ತಾ ಹೋದಂತೆ ಅದರ ಮೂಲಕ ನೋಡುವ ನೋಟದ ವಿನ್ಯಾಸ ಮತ್ತು ಸ್ವರೂಪ ಬದಲಾಗುತ್ತಾ ಹೋಗುತ್ತದೆ. ಹಾಗಾಗಿ ಸಾಮಾಜಿಕ ಸಂಗತಿಗಳು, ರಾಜಕೀಯ ವಿಷಯಗಳು ಮತ್ತು ಸಾಹಿತ್ಯಕ ವಿಚಾರಗಳು ಇವುಗಳನ್ನು ನೋಡಲು, ಗ್ರಹಿಸಲು ನೋಟಕ್ರಮಗಳು ಬೇಕಾಗುತ್ತವೆ. ಇದು ಹೆಚ್ಚು ಪಕ್ವಗೊಂಡರೆ ಅದು ಒಂದು ದೃಷ್ಟಿಕೋನವಾಗಿ ಬೆಳೆಯುತ್ತದೆ. ಈ ದೃಷ್ಟಿಕೋನವು ಮುಂದೆ ತನ್ನ ಆಳವಾದ ತರ್ಕ ಮತ್ತು ಗಟ್ಟಿಯಾದ ಸುಸಂಬದ್ಧತೆಯಿಂದ ತಾತ್ವಿಕತೆಯಾಗಿ ಅರಳುತ್ತದೆ. ತಾತ್ವಿಕ ವಿನ್ಯಾಸವಾಗಿ ರೂಪಾಂತರ ಪಡೆಯುತ್ತದೆ. ಹಾಗಾಗಿ ಸಾಮಾಜಿಕ, ರಾಜಕೀಯ ಬದುಕಿನಲ್ಲಿ ಮತ್ತು ಸಾಹಿತ್ಯಕ ಸಂಶೋಧನೆಯಲ್ಲಿ ತಾತ್ವಿಕತೆಯ ಅಗತ್ಯವಿದೆ. ಈ ತಾತ್ವಿಕತೆಯ ನೆರವು ಇಲ್ಲದೆ ಹೋದರೆ ಸಮಾಜದ ಎಲ್ಲಾ ಸಂಗತಿಗಳನ್ನೂ ಸರಳವಾಗಿ ಮತ್ತು ಎಲ್ಲವನ್ನೂ ನಯವಾಗಿ, ಹೊರನೋಟದಿಂದ ಮಾತ್ರವೇ ಗ್ರಹಿಸುವ ವೈಚಾರಿಕ ಮಿತಿ ಬಂದುಬಿಡುತ್ತದೆ. ಸಂಶೋಧನೆಯಲ್ಲಿ ತಾತ್ವಿಕತೆಯ ಅಗತ್ಯವಿದ್ದು, ಅದರ ಅಗತ್ಯದ ಸ್ವರೂಪವು ಪ್ರಜ್ಞಾಪೂರ್ವಕವೊ ಅಥವಾ ಅಪ್ರಜ್ಞಾಪೂರ್ವಕವೊ ಆಗಿರುತ್ತದೆ. ಈ ಎರಡರ ನಡುವೆ ಸ್ಪಷ್ಟವಾದ ವ್ಯತ್ಯಾಸಗಳಿವೆ. ಎಲ್ಲಿ ತಾತ್ವಿಕತೆಯ ಅಗತ್ಯ ಎಂದು ಪ್ರಜ್ಞಾಪೂರ್ವಕವಾಗಿರುತ್ತದೊ ಅದು ಅವರ ಅಥವಾ ಆ ಗುಂಪಿನ ಪ್ರಜ್ಞಾಪೂರ್ವಕವಾದ ಆಯ್ಕೆಯಾಗಿರುತ್ತದೆ. ಈ ಆಯ್ಕೆಯ ಹಿಂದೆ ಓದು, ಅಧ್ಯಯನ, ಚರ್ಚೆ ಸಂವಾದಗಳ ನೆರವು ಹಿನ್ನೆಲೆಯಾಗಿರುತ್ತದೆ. ಇದು ಒಂದು ಬಗೆಯ ಔಪಚಾರಿಕವಾದ ಅಥವಾ ಅನೌಪಚಾರಿಕವಾದ ಶೈಕ್ಷಣಿಕ ತರಬೇತಿಯಿಂದ ರೂಪು ಪಡೆಯುತ್ತದೆ. ವಿವಿಧ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳು, ವಿವಿಧ ಹೋರಾಟ ಹಾಗೂ ಚಳುವಳಿಗಳು ಈ ತಾತ್ವಿಕತೆಯ ಅಗತ್ಯವನ್ನು ಒತ್ತಿ ಹೇಳುವುದರ ಜೊತೆಗೆ ಅವುಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳುವ ವಿಧಾನಗಳ ಬಗ್ಗೆ ನಿರಂತರವಾದ ಕಾಳಜಿ ವಹಿಸುತ್ತವೆ. ಕೆಲವರಿಗಂತೂ ತಾವು ನಂಬಿಕೊಂಡಿರುವ ತಾತ್ವಿಕತೆ ಎಷ್ಟು ಮುಖ್ಯವೆಂದರೆ ಜೀವವನ್ನೆ ಪಣಕ್ಕಿಟ್ಟು ತಮ್ಮ ವರ್ಗಹಿತಾಸಕ್ತಿಯ ತಾತ್ವಿಕತೆಯನ್ನು ಉಳಿಸಲು ಹೋರಾಡುತ್ತಾರೆ. ಈ ವಿಷಯದಲ್ಲಿ ಆಳುವ ವರ್ಗದ ರಾಜಕೀಯ ಪಾತ್ರ ಒಂದು ಬಗೆಯದಾದರೆ, ಧಾರ್ಮಿಕ ಗುಂಪುಗಳದ್ದು ಇನ್ನೊಂದು ಬಗೆಯದು. ಹೋರಾಟಗಳು, ಚಳುವಳಿಗಳು ತಮ್ಮವೇ ಆದ ತಾತ್ವಿಕತೆಯನ್ನು ಹೊಂದಿದ್ದು ಅವುಗಳನ್ನು ರಾಜಕೀಯ ವ್ಯವಸ್ಥೆಯಲ್ಲಿ ಹಾಗೂ ಸಾಮಾಜಿಕ ಜೀವನದಲ್ಲಿ ಪ್ರಭಾವಿಸಲು, ಹರಡಲು ಹಾಗೂ ಅದನ್ನು ನಿರಂತರವಾಗಿ ಮುಂದುವರಿಸಲು ಪಣತೊಟ್ಟು ನಿಂತಿವೆ.

‘ಸಂಶೋಧನೆಗೆ ಯಾವುದೆ ತಾತ್ವಿಕತೆಯ ಅಗತ್ಯ ಬೇಕಾಗಿಲ್ಲ. ಯಾವುದಾದರೂ ಒಂದು ತಾತ್ವಿಕತೆಯನ್ನು ಇಟ್ಟುಕೊಂಡರೆ ಸಾಕು’ ಎಂದು ಕೆಲವರು ಹೇಳುವುದುಂಟು. ಆದರೆ ಆಳುವ ವರ್ಗದ ರಾಜಕೀಯ ತಾತ್ವಿಕತೆ, ಶೋಷಕರ ತಾತ್ವಿಕತೆ, ಪುರುಷ ಪ್ರಧಾನ ತಾತ್ವಿಕತೆ, ಬಂಡವಾಳಶಾಹಿ ಮಾರುಕಟ್ಟೆಯ ತಾತ್ವಿಕತೆ, ಸಾಮ್ರಾಜ್ಯಶಾಹಿಯ ತಾತ್ವಿಕತೆ, ಧಾರ್ಮಿಕ ಮೂಲಭೂತವಾದಿ ತಾತ್ವಿಕತೆ ಇವು ಇಡೀ ವ್ಯವಸ್ಥೆಯನ್ನು ನೋಡುವ ನೋಟಕ್ರಮಗಳನ್ನು ಉನ್ನತ ರೂಪದಲ್ಲಿ ಪ್ರಭಾವ ಮಾಡುತ್ತಿವೆ. ಈ ಸಂದರ್ಭದಲ್ಲಿ ಆ ತಾತ್ವಿಕತೆಗಳ ಮಿತಿಗಳನ್ನು, ಅವುಗಳ ಉಪಾಯಗಳನ್ನು ಮತ್ತು ಅವುಗಳ ವಿನಾಶಕಾರಿ ಪ್ರವೃತ್ತಿಗಳನ್ನು ಗುರುತಿಸಬೇಕಾಗಿದೆ. ಇದು ಸಾಹಿತ್ಯ ಸಂಶೋಧನೆಯ ಅಗತ್ಯ ಭಾಗ ಕೂಡ ಹೌದು. ಅಂದರೆ ತಾತ್ವಿಕತೆಯ ಅಗತ್ಯ ಎಂಬುದು ಕೇವಲ ಸಾಹಿತ್ಯಕ ಸಂಶೋಧನೆಯ ವ್ಯಾಪ್ತಿಗೆ ಮಾತ್ರ ಸೀಮಿತವಾಗಿರದೆ ಅದು ವಿಶಾಲವಾಗಿ ಸಾಮಾಜಿಕ ಜೀವನಕ್ಕೂ ಅನ್ವಯಿಸುತ್ತದೆ.

ಕೆಲವರು ‘ನಾನು ಯಾವ ವಾದಕ್ಕೂ (ಬೇರೆ ಮಾತುಗಳಲ್ಲಿ ಹೇಳುವುದಾದರೆ ಯಾವ ತಾತ್ವಿಕತೆಗೂ) ಗಂಟುಬಿದ್ದವನ/ಳಲ್ಲ; ಒಂದು ವಾದಕ್ಕೆ ಗಂಟುಬಿದ್ದರೆ ಅದು ಕುದುರೆಯ ಕಣ್ಣಿಗೆ ಪಟ್ಟಿ ಕಟ್ಟಿದಂತೆ. ಹಾಗಾಗಿ ಹಾಗೆ ಪಟ್ಟಿ ಕಟ್ಟಿಕೊಳ್ಳದೆ ಎಲ್ಲದರ ಬಗ್ಗೆಯೂ ವಿಶಾಲವಾಗಿ ಆಲೋಚನೆ ಮಾಡುತ್ತೇನೆ. ಎಲ್ಲಾ ವಾದಗಳನ್ನೂ ಕಿತ್ತು ಒಗೆಯುತ್ತೇನೆ’ ಎಂದು ಹೇಳುತ್ತಾರೆ. ಮತ್ತೆ ಕೆಲವರು ‘ಎಲ್ಲಾ ವಾದಗಳಿಂದಲೂ ಕಲಿಯುವುದು ಇರುತ್ತದೆ. ಹಾಗಾಗಿ ಎಲ್ಲಾ ವಾದಗಳಿಂದಲೂ ಸ್ವಲ್ಪ ಸ್ವಲ್ಪ ಕಲಿತು ಕೊಳ್ಳುವುದು ಒಳ್ಳೆಯದು’ ಎಂದು ಹೇಳುತ್ತಾರೆ. ಮೇಲಿನ ಎರಡು ಅಭಿಪ್ರಾಯಗಳು ಬೇರೆ ಬೇರೆಯಾಗಿ ತೋರುತ್ತಿವೆ. ಆಳದಲ್ಲಿ ಅವೆರಡೂ ಬೇರೆಬೇರೆಯಾಗಿಲ್ಲ. ಅವೆರಡೂ ಒಂದೆ. ವಾದಗಳನ್ನು ಒಪ್ಪಿಕೊಂಡು, ಅರ್ಥೈಸಿಕೊಂಡು ಅವನ್ನು ಬಳಸುವುದು ಕುದುರೆಯ ಕಣ್ಣಿಗೆ ಪಟ್ಟಿಕಟ್ಟಿದಂತೆ ಎಂಬುದಕ್ಕೊ, ಎಲ್ಲಾ ವಾದಗಳಿಂದಲೂ ಸ್ವಲ್ಪ ಸ್ವಲ್ಪ ಕಲಿಯುವುದು ಇರುತ್ತದೆ ಎಂಬುದಕ್ಕೂ ಬಹಳ ವ್ಯತ್ಯಾಸವಿಲ್ಲ.

ತಾತ್ವಿಕತೆಯನ್ನು, ಸ್ಥೂಲವಾಗಿ ಲೋಕವನ್ನು ತಾರ್ಕಿಕವಾಗಿ ನೋಡುವ, ಗ್ರಹಿಸುವ ಮತ್ತು ಪ್ರತಿಕ್ರಿಯಿಸುವ ಸಂಕೀರ್ಣವಾದ ಆಲೋಚನೆಗಳ ಗುಚ್ಛ ಎಂದು ವಿವರಿಸಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ನೋಡಿದಾಗ ಎಲ್ಲರೂ ಲೋಕವನ್ನು ಒಂದೇ ರೀತಿಯಲ್ಲಿ ನೋಡುವುದಿಲ್ಲ, ಗ್ರಹಿಸುವುದಿಲ್ಲ ಮತ್ತು ಪ್ರತಿಕ್ರಿಯಿಸುವುದಿಲ್ಲ. ಮಹಿಳೆಯರು ಮತ್ತು ಪುರುಷರು ತಮ್ಮ ಲಿಂಗ ತಾರತಮ್ಯಗಳಿಗೆ ಅನುಗುಣವಾಗಿ, ಮಕ್ಕಳು, ಪ್ರೌಢ ವಯಸ್ಸಿನವರು, ಮುದುಕ ಮುದುಕಿಯರು ತಮ್ಮ ವಯೋಮಾನಕ್ಕೆ ಅನುಗುಣವಾಗಿ ಲೋಕವನ್ನು ನೋಡುತ್ತಾರೆ, ಗ್ರಹಿಸುತ್ತಾರೆ ಮತ್ತು ಪ್ರತಿಕ್ರಿಯಿಸುತ್ತಾರೆ. ಅಸ್ಪೃಶ್ಯರು, ಕೆಳಜಾತಿಗಳು, ಮಧ್ಯಮ ಜಾತಿಗಳು ಮತ್ತು ಮೇಲು ಜಾತಿಗಳು ತಮ್ಮ ಜಾತಿ ಶ್ರೇಣೀಕರಣದ ಸಾಮಾಜಿಕ, ಆರ್ಥಿಕ ಅಂತಸ್ತಿಗೆ ಅನುಗುಣವಾಗಿ; ಬಡವರು, ಮಧ್ಯಮ ವರ್ಗದವರು ಮತ್ತು ಶ್ರೀಮಂತ ವರ್ಗದವರು ತಮ್ಮ ಆರ್ಥಿಕ ಸ್ಥಿತಿಗತಿಗೆ ಅನುಗುಣವಾಗಿ  ಲೋಕವನ್ನು ನೋಡುತ್ತಾರೆ, ಗ್ರಹಿಸುತ್ತಾರೆ ಮತ್ತು ಪ್ರತಿಕ್ರಿಯಿಸುತ್ತಾರೆ. ಇದಕ್ಕೆ ಕೆಲವು ಅಪವಾದಗಳೂ ಇರಬಹುದು. ಆಳುವ ವರ್ಗಗಳು,  ಮಾರುಕಟ್ಟೆಯ ಶಕ್ತಿಗಳು, ಸಾಮ್ರಾಜ್ಯ ಶಾಹಿ ಶಕ್ತಿಗಳು, ಧಾರ್ಮಿಕ ಮೂಲಭೂತವಾದಿ ಶಕ್ತಿಗಳು, ವಿವಿಧ ಲೂಟಿಕೋರ ಶಕ್ತಿಗಳು ತಮ್ಮ ವರ್ಗಹಿತಾಸಕ್ತಿಗಳಿಗೆ ಅನುಗುಣವಾಗಿ; ಶೋಷಿತ, ದಮನಿತ, ಅಪಮಾನಿತ ಮತ್ತು ಬಲಾತ್ಕಾರವಾಗಿ ಹತ್ತಿಕ್ಕಲ್ಪಟ್ಟ ಸಮುದಾಯಗಳು ಮತ್ತು ಅವರ ಪರವಾದ ಸಂಘಟನೆಯ ಹಾಗೂ ಹೋರಾಟದ ಶಕ್ತಿಗಳು, ಈ ಸಮುದಾಯಗಳ ಹಿತಾಸಕ್ತಿಗೆ ಅನುಗುಣವಾಗಿ ಲೋಕವನ್ನು ನೋಡುತ್ತಾರೆ, ಗ್ರಹಿಸುತ್ತಾರೆ ಮತ್ತು ಪ್ರತಿಕ್ರಿಯಿಸುತ್ತಾರೆ.

ಹೀಗೆ ವಯಸ್ಸಿನ ವ್ಯತ್ಯಾಸ, ಲಿಂಗ ತಾರತಮ್ಯ, ಜಾತಿ-ವರ್ಗ ಶ್ರೇಣೀಕರಣಗಳ ಹಿನ್ನೆಲೆಯಲ್ಲಿ ಕೆಲವರು, ಸಾಮ್ರಾಜ್ಯಶಾಹಿ ಹಾಗೂ ಮಾರುಕಟ್ಟೆಯ ಶಕ್ತಿಗಳು, ವ್ಯವಸ್ಥೆಯ ವಿರೋಧಿ ಶೋಷಿತ ಜನತೆಯ ಪರವಾದ ಶಕ್ತಿಗಳು ತಮ್ಮ ತಮ್ಮ ದೃಷ್ಟಿಕೋನಗಳಲ್ಲಿ ಕೆಲವರು ಲೋಕವನ್ನು ಭಿನ್ನಭಿನ್ನವಾಗಿ ಗ್ರಹಿಸುತ್ತಾರೆ ಮತ್ತು ಪ್ರತಿಕ್ರಿಯಿಸುತ್ತಾರೆ. ಇದು ಒಂದು ಕಡೆ ಲೋಕದ ವಸ್ತುಸ್ಥಿತಿಯ ಭಿನ್ನತೆ ಹಾಗೂ ತಾರತಮ್ಯವೂ ಹೌದು; ಮತ್ತೊಂದು ಕಡೆ ಅದನ್ನು ಗ್ರಹಿಸಿ ಪ್ರತಿಕ್ರಿಯಿಸುವವರ ದೃಷ್ಟಿಕೋನಗಳ ಫಲವೂ ಹೌದು. ಇದು ಸಹಜವೂ ಸಾಮಾನ್ಯವೂ ಆದ ಪ್ರಕ್ರಿಯೆ. ಈ ಭಿನ್ನತೆ, ವ್ಯತ್ಯಾಸ ಮತ್ತು ತಾರತಮ್ಯಗಳು ಸರಿಯಲ್ಲ ಎಂದು ಹೇಳಲು ಬರುವುದಿಲ್ಲ. ಹಾಗಾಗಿ ಲೋಕವನ್ನು ನೋಡಲು, ಗ್ರಹಿಸಲು ಮತ್ತು ಪ್ರತಿಕ್ರಿಯಿಸಲು ಒಂದೇ ಒಂದು ದೃಷ್ಟಿಕೋನ ಇದೆ, ಇರಬೇಕು ಎನ್ನುವುದು; ‘ನಾನು ಯಾವ ವಾದಕ್ಕೂ (ಬೇರೆ ಮಾತುಗಳಲ್ಲಿ ಹೇಳುವುದಾದರೆ ಯಾವ ತಾತ್ವಿಕತೆಗೂ) ಗಂಟುಬೀಳಲ್ಲ. ಒಂದು ವಾದಕ್ಕೆ ಗಂಟುಬಿದ್ದರೆ ಅದು ಕುದುರೆಯ ಕಣ್ಣಿಗೆ ಪಟ್ಟಿ ಕಟ್ಟಿದಂತೆ’ ಎನ್ನುವುದು; ‘ಎಲ್ಲಾ ವಾದಗಳಿಂದಲೂ ಕಲಿಯುವುದು ಇರುತ್ತದೆ. ಹಾಗಾಗಿ ಎಲ್ಲಾ ವಾದಗಳಿಂದಲೂ ಸ್ವಲ್ಪಸ್ವಲ್ಪ ಕಲಿತು ಕೊಳ್ಳುವುದು ಒಳ್ಳೆಯದು’ ಎನ್ನುವುದು ಇವೆಲ್ಲ ಬಹಳ ದುರ್ಬಲವಾದ ಅಭಿಪ್ರಾಯಗಳು. ಅಷ್ಟು ಮಾತ್ರವಲ್ಲ, ಇವು ಅತ್ಯಂತ ಅಪಾಯಕಾರಿ ಹೇಳಿಕೆಗಳೂ ಹೌದು. ಹೇಗೆಂದರೆ ಶೋಷಕರು ತಮ್ಮ ಮೇಲೆ ನಡೆಯುತ್ತಿರುವ ಶೋಷಣೆಗಳ ವಿರುದ್ಧವಾಗಿ ಆಲೋಚನೆ ಮಾಡಬೇಕೆ ಹೊರತು, ಶೋಷಣೆಯನ್ನು ಮುಂದುವರಿಸುವುದು ಹೇಗೆ ಎಂದು ಶೋಷಕರಾಗಿ ಆಲೋಚನೆ ಮಾಡಲು ಆಗುವುದಿಲ್ಲ, ಹಾಗೆ ಆಲೋಚನೆ ಮಾಡಲೂ ಬಾರದು. ಹಾಗಾಗಿ ‘ನಾನು ಯಾವ ವಾದಕ್ಕೂ ಗಂಟುಬೀಳಲ್ಲ’ ಎಂದು ಹೇಳುವವರು ಶೋಷಕರ ಪರವೊ, ಶೋಷಿತರ ಪರವೊ; ಪುರುಷ ಶೋಷಣೆಯ ಪರವೊ, ಮಹಿಳಾ ಪರವೊ ಎಂಬುದನ್ನು ಖಚಿತಪಡಿಸಬೇಕಾಗುತ್ತದೆ. ಈ ಖಚಿತತೆ ಇಲ್ಲದಿದ್ದರೆ ಇಂತಹ ಅಭಿಪ್ರಾಯವುಳ್ಳವರು ಅಸಮಾನತೆ ಮತ್ತು ಅನ್ಯಾಯಗಳನ್ನು ಸಮರ್ಥಿಸುವ ಭಾಗವಾಗಿ ಬಿಡುತ್ತಾರೆ. ‘ನಾನು ಯಾವ ವಾದಕ್ಕೂ ಗಂಟುಬೀಳಲ್ಲ’ ಎಂಬ ಹೇಳಿಕೆ ಮುಗ್ಧತೆಯಿಂದ, ವೈಚಾರಿಕ ದೌರ್ಬಲ್ಯದಿಂದ, ವೈಯಕ್ತಿಕ ಅವಕಾಶವಾದಿತನದಿಂದ, ತೋರಿಕೆಯ ಉದಾರ ವಾದದಿಂದ ಕೂಡಿರುವ ಅಪಾಯವಿರುತ್ತದೆ. ಅದರ ಮೂಲ ಏನೇ ಇರಲಿ, ಅದರ ಪರಿಣಾಮ ಮಾತ್ರ ಅತ್ಯಂತ ಅಪಾಯಕಾರಿಯಾದುದು.

ಸಾಹಿತ್ಯ ಸಂಶೋಧನೆ ಮಾಡುವಾಗ ತಾತ್ವಿಕತೆಗಳ ಸ್ವರೂಪವನ್ನು ಅರಿಯುವ ಅಗತ್ಯವಿದೆ. ಸಾಹಿತ್ಯ ಕೃತಿಯೊಂದನ್ನು ಭಿನ್ನ ಭಿನ್ನ ದೃಷ್ಟಿಕೋನಗಳಿಂದ ಮತ್ತು ವಿವಿಧ ಆಯಾಮಗಳಿಂದ ಗ್ರಹಿಸುವಾಗ ಇವುಗಳ ಸ್ಪಷ್ಟತೆಯ ಅಗತ್ಯವಿದೆ. ಸಾಹಿತ್ಯ ಕೃತಿಯ ಸಾರಸಂಗ್ರಹ ಮಾಡಲ ತಾತ್ವಿಕತೆಯ ಅಗತ್ಯ ಬೀಳದೆ ಹೋಗಬಹುದು. ಆದರೆ ಕೃತಿಯ ಸಾರಸಂಗ್ರಹ ಮಾಡುವುದು ಸಂಶೋಧನೆಯ ಕೆಲಸ ಅಲ್ಲ. ಬೇರೆಬೇರೆ ದೃಷ್ಟಿಕೋನಗಳಿಂದ ಸಾಹಿತ್ಯ ಕೃತಿಗಳನ್ನು ಅರಿಯುವ, ವಿವರಿಸುವ ಮತ್ತು ವಿಸ್ತರಿಸುವ ಕೆಲಸ ಸಂಶೋಧನೆಯದು. ಲೋಕವನ್ನು ಗ್ರಹಿಸಿ ಪ್ರತಿಕ್ರಿಯಿಸಲು ತಾತ್ವಿಕತೆಯ ಅಗತ್ಯವಿದೆ. ಅದೇ ರೀತಿಯಲ್ಲಿ ಸಾಹಿತ್ಯ ಸಂಶೋಧನೆಗೆ ತಾತ್ವಿಕತೆಯ ಅಗತ್ಯವಿದೆ.