ಸಂಶೋಧನೆ ಎಂದರೆ ಏನು ಎಂಬುದನ್ನು ವಿವರಿಸುವಾಗ ‘ಸತ್ಯವನ್ನು ಕಂಡು ಹಿಡಿಯವುದು’ ಎಂಬ ವಿವರಣೆಯನ್ನು ಬಳಸಲಾಗುತ್ತದೆ. ಈ ಹೇಳಿಕೆಯಲ್ಲಿರುವ ಎರಡು ಅಂಶಗಳನ್ನು ಚರ್ಚಿಸಬೇಕು. ಮೊದಲನೆಯದು ಸತ್ಯ ಎಂದರೆ ಏನು, ಸತ್ಯದ ಸ್ವರೂಪ ಯಾವುದು ಎಂಬುದು. ಎರಡನೆಯದು ಅದನ್ನು ಕಂಡುಹಿಡಿಯುವುದು ಎಂದರೆ ಏನು ಎಂಬುದು. ಸತ್ಯ ಎಂದರೆ ಏನು? ಎಂದು ಕೇಳಿದರೆ ಅದಕ್ಕೂ ಹಲವು ವಿವರಣೆಗಳು ಸಾಧ್ಯ. ಅ. ಎಲ್ಲರೂ ಒಪ್ಪುವಂತಹದ್ದು. ಆ ಎಲ್ಲರೂ ನಂಬುವಂತಹದ್ದು, ಇ. ಸಾರ್ವಕಾಲಿಕವಾದುದು. ಈ. ವೈಜ್ಞಾನಿಕವಾದುದು. ಉ. ಪ್ರಾಯೋಗಿಕವಾಗಿ ಸಾಬೀತು ಆಗುವಂತಹದ್ದು. ಊ. ಪಂಚೇಂದ್ರಿಯಗಳ ಅನುಭವಕ್ಕೆ ಬರುವಂತಹದ್ದು. ಈ ಪಟ್ಟಿಯನ್ನು ಇನ್ನೂ ಬೆಳೆಸಬಹುದು. ಅದು ಏನೇ ಇರಲಿ. ಸತ್ಯ ಎಂಬುದರ ಒಟ್ಟು ಸ್ವರೂಪವೇ ಬೇರೆ. ಸತ್ಯ ಎಂಬುದರ ಒಂದು ಬಿಡಿ ಅಂಶದ ವಿವರಣೆಯೇ ಬೇರೆ. ಮೇಲಿನ ವಿವರಣೆಗಳು ಸತ್ಯ ಎಂಬುದರ ಬಿಡಿ ಅಂಶದ ವಿವರಣೆಗಳಾಗಿವೆ. ಅವು ಸತ್ಯದ ಸ್ವರೂಪವನ್ನು ತಿಳಿಸುತ್ತಿಲ್ಲ. ಸತ್ಯ ಎಂಬುದು ವೈಜ್ಞಾನಿಕವಾದುದು ಎಂಬುದನ್ನು  ಚರ್ಚಿಸಬೇಕು. ಸತ್ಯವನ್ನು ವಿಜ್ಞಾನದ ವಾರಸುದಾರಿಕೆಗೆ ಬಿಡಲಾಗಿದೆ. ಅಥವಾ ಸತ್ಯದ ವಾರಸುದಾರಿಕೆಯನ್ನು ವಿಜ್ಞಾನ ವಹಿಸಿಕೊಂಡಿದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ; ವಿಜ್ಞಾನ ಮಾತ್ರ ಸತ್ಯವನ್ನು ಹೇಳುತ್ತದೆ, ವಿಜ್ಞಾನವೆಂದರೆ ಸತ್ಯ. ಸತ್ಯವೆಂದರೆ ವಿಜ್ಞಾನ ಎಂಬ ಹೇಳಿಕೆಗಳು ಜನಜನಿತ. ಈ ನಂಬಿಕೆ ಎಷ್ಟು ಬಲವಾಗಿ ಬೇರೂರಿದೆ ಎಂದರೆ ಅದಕ್ಕೆ ಸಣ್ಣ ಭಿನ್ನಮತವನ್ನೂ ಒಡ್ಡಲಾರದ ಸ್ಥಿತಿ ಇದೆ. ಕನ್ನಡ ಸಾಹಿತ್ಯದ ಹಲವು ವಸ್ತು ವಿಷಯಗಳಲ್ಲಿ ವಿಜ್ಞಾನವೂ ಒಂದು ಆ ಕುರಿತ ಬರಹಗಳನ್ನು ವಿಜ್ಞಾನ ಬರವಣಿಗೆ ಎಂದು ಕರೆಯಲಾಗುತ್ತದೆ. ಆದರೆ ಕೆಲವು ವಿಚಾರ, ವಿಮರ್ಶೆ ಬರವಣಿಗೆಗಳಲ್ಲಿ ‘ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಬೇಕು’, ‘ವೈಜ್ಞಾನಿಕವಾಗಿ ಆಲೋಚನೆ ಮಾಡಬೇಕು’ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇದು ಆಲೋಚನೆ ಮತ್ತು ವಿಶ್ಲೇಷಣೆಯ ಮೌಲ್ಯವನ್ನು ಕುರಿತದ್ದು. ಹಾಗಿದ್ದರೆ ‘ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡುವುದು’ ಎಂದರೇನು, ‘ವೈಜ್ಞಾನಿಕವಾಗಿ ಆಲೋಚನೆ ಮಾಡುವುದು’ ಎಂದರೇನು ಎಂದು ಕೇಳಬೇಕಾಗಿದೆ. ತಾತ್ವಿಕವಾಗಿ ಅವುಗಳ ಸ್ವರೂಪ ಯಾವುದು ಎಂಬುದನ್ನು ಚರ್ಚಿಸಬೇಕಾಗಿದೆ. ವಿಜ್ಞಾನಕ್ಕೆ ಸತ್ಯದ ಪರಾಕಾಷ್ಠೆಯನ್ನು ಪ್ರತಿನಿಧಿಸುವ ಪಟ್ಟವಾದರೂ ಯಾಕೆ ಬಂತು? ಅದಕ್ಕೆ ಚಾರಿತ್ರಿಕವಾದ ಕಾರಣಗಳಾದರೂ ಇವೆಯೆ ಎಂಬುದನ್ನು ಪರಿಶೀಲಿಸಬಹುದು.

ವಿಜ್ಞಾನಕ್ಕೆ ಸತ್ಯದ ಪರಾಕಾಷ್ಠೆಯನ್ನು ಪ್ರತಿನಿಧಿಸುವ ಸ್ಥಾನ ಅಥವಾ ಹಕ್ಕು ತಾನೇ ತಾನಾಗಿ ಬರಲಿಲ್ಲ ಅಥವಾ ಅದು ವಿಜ್ಞಾನ ಎಂಬ ಜ್ಞಾನಶಾಸ್ತ್ರದ ಸಾಮರ್ಥ್ಯದಿಂದಲೂ ಬರಲಿಲ್ಲ. ಚಾರಿತ್ರಿಕವಾಗಿ ಅದಕ್ಕೆ ಬೇರೆಯೇ ಕಾರಣಗಳಿವೆ. ಯುರೋಪ್‌ನಲ್ಲಿ ಕೈಗಾರಿಕಾ ಕ್ರಾಂತಿಗೂ ಮೊದಲು ಸತ್ಯವನ್ನು ಪ್ರತಿನಿಧಿಸುತ್ತಿದ್ದುದು ಚರ್ಚ್ ಮತ್ತು ಬೈಬಲ್. ಬೇರೆ ಮಾತುಗಳಲ್ಲಿ ಹೇಳುವುದಾದರೆ ಧಾರ್ಮಿಕ ಗ್ರಂಥಗಳು. ಧಾರ್ಮಿಕ ಗ್ರಂಥಗಳು ಯಾವುವೇ ಇರಲಿ, ಆ ಗ್ರಂಥಗಳ ಒಟ್ಟು ವೈಚಾರಿಕ ಚೌಕಟ್ಟು ಯಾವುದೇ ಇರಲಿ, ಅವು ಕಡ್ಡಾಯವಾಗಿ ಎರಡು ಅಂಶಗಳನ್ನು ಪ್ರತಿಪಾದಿಸುತ್ತವೆ ಮತ್ತು ಅವುಗಳನ್ನು ಒತ್ತಿ ಹೇಳುತ್ತವೆ. ಅದರಲ್ಲಿ ಮೊದಲನೆಯದು ಇಡೀ ವಿಶ್ವಕ್ಕೆ ಭೂಮಿಯೇ ಕೇಂದ್ರ ಎಂಬುದು. ಎರಡನೆಯದು ಜೀವ ಸಂಕುಲವನ್ನು ದೇವರು ಸೃಷ್ಟಿಸಿದ ಎಂಬುದು. ಈ ಎರಡು ವಿಚಾರಗಳ ಬಗ್ಗೆ ಯುರೋಪಿನಲ್ಲಿ ಕೈಗಾರಿಕಾ ಕ್ರಾಂತಿ ನಡೆಯುವವರೆಗೆ ಮತ್ತು ಆ ಕೈಗಾರಿಕಾ ಕ್ರಾಂತಿಯ ನಂತರ ನಡೆಸಿದ ಕೆಲವು ಅನ್ವೇಷಣೆಗಳವರೆಗೆ ಆ ವಿಚಾರಗಳನ್ನು ಅನುಮಾನಾತೀತವಾಗಿ ಮತ್ತು ಪ್ರಶ್ನಾತೀತವಾಗಿ ಒಪ್ಪಿಕೊಳ್ಳಲಾಗಿತ್ತು. ಹಾಗೂ ಅವುಗಳನ್ನು ಗಟ್ಟಿಯಾಗಿ ನಂಬಿಕೊಳ್ಳಲಾಗಿತ್ತು. ಆದರೆ ಕೈಗಾರಿಕಾ ಕ್ರಾಂತಿಯ ನಂತರ ಇಡೀ ವಿಶ್ವಕ್ಕೆ ಭೂಮಿ ಕೇಂದ್ರವಲ್ಲ; ಇಡೀ ವಿಶ್ವಕ್ಕೆ ಸೂರ್ಯ ಕೇಂದ್ರ ಉಳಿದ ಗ್ರಹಗಳು ಸೂರ್ಯನ ಸುತ್ತ ಸುತ್ತುತ್ತವೆ. ಹಾಗೆ ಸೂರ್ಯನ ಸುತ್ತ ಸುತ್ತುತ್ತವೆ. ಹಾಗೆ ಸೂರ್ಯನ ಸುತ್ತ ಸುತ್ತುವ ಗ್ರಹಗಳಲ್ಲಿ ಭೂಮಿ ಕೂಡ ಒಂದಾಗಿದ್ದು, ಅದು ತನ್ನ ಕಕ್ಷೆಯ ಮೇಲೆ ತಾನೇ ಸುತ್ತಾತ್ತಾ, ಅದು ಸೂರ್ಯನ ಸುತ್ತ ಸುತ್ತುತ್ತವೆ ಎಂಬ ವಿಚಾರವನ್ನು ಮಂಡಿಸಲಾಯಿತು. ಇದು ಅದುವರೆಗೆ ಧಾರ್ಮಿಕ ಗ್ರಂಥಗಳು ಪ್ರತಿಪಾದನೆ ಮಾಡುತ್ತಿದ್ದ ‘ಇಡೀ ವಿಶ್ವಕ್ಕೆ ಸೂರ್ಯನೇ ಕೇಂದ್ರ’ ಎಂಬ ವಿಚಾರವನ್ನು ಒಮ್ಮೆಲೆ ತಲೆಕೆಳಗು ಮಾಡಿತು. ಆ ನಂತರದ ವೈಚಾರಿಕ ಪ್ರಕ್ರಿಯೆಯಲ್ಲಿ ಸತ್ಯದ ಮಂಡನೆ, ಪ್ರತಿಪಾದನೆ ಮತ್ತು ಸಮರ್ಥನೆ ಧಾರ್ಮಿಕ ಗ್ರಂಥಗಳಿಂದ ವಿಜ್ಞಾನದ ಸಂಶೋಧನೆಗಳಿಗೆ ಮತ್ತು ವಿಜ್ಞಾನದ ಬರವಣಿಗೆಗೆ ಸ್ಥಳಾಂತರವಾಯಿತು. ಇದು ಒಂದು ಹಂತದ ಮುಖ್ಯವಾದ ನೆಲೆ.

ಇನ್ನು ‘ಜೀವ ಸಂಕುಲವನ್ನು ದೇವರೇ ಸೃಷ್ಟಿಸಿದ’ ಎಂಬ ಸಂಗತಿಗೆ ಸಂಬಂಧಿಸಿದುದು. ಧಾರ್ಮಿಕ ಗ್ರಂಥಗಳ ಈ ವಿಚಾರವನ್ನು ತಲೆಕೆಳಗು ಮಾಡಿದ್ದು, ಡಾರ್ವಿನ್‌ನ ವಿಕಾಸವಾದ. ದೇವರು ಮನುಷ್ಯನನ್ನಾಗಲಿ, ಅಥವಾ ಇಡೀ ಪ್ರಾಣಿ ಸಂಕುಲವನ್ನಾಗಿ ಸೃಷ್ಟಿ ಮಾಡಲಿಲ್ಲ. ಇಡೀ ಬ್ರಹ್ಮಾಂಡದ ಶಾಖದಿಂದಲೇ ಭೂಮಿ ಸಿಡಿದು ಹೊರಗೆ ಬಂತು. ನಂತರ ಸೃಷ್ಟಿಯ ಹಂತಗಳು ಈ ರೀತಿ ಉಂಟಾದವು. ಮೊದಲು ಜಲಜ, ನಂತರ ಅಂಡಜ, ಆಮೇಲೆ ಪಿಂಡಜ, ಅಂದರೆ ಜೀವಿಗಳು ಮೊದಲು ಹುಟ್ಟಿದ್ದು ನೀರಿನಲ್ಲಿ (ಜಲ-ಜ=ಜಲದಲ್ಲಿ ಜನಿಸಿದ್ದು), ನಂತರ ಜೀವಿಗಳು ಹುಟ್ಟಿದ್ದು ಮೊಟ್ಟೆ (ತತ್ತಿ)ಯಲ್ಲಿ (ಅಂಡ-ಜ=ಅಂಡದಲ್ಲಿ ಜನಿಸಿದ್ದು), ಕೊನೆಯದಾಗಿ ಜೀವಿಗಳು ಹುಟ್ಟಿದ್ದು ಹೊಟ್ಟೆ (ಪಿಂಡ-ಜ=ಪಿಂಡದಲ್ಲಿ ಜನಿಸಿದ್ದು)ಯಲ್ಲಿ. ಇದನ್ನು ಡಾರ್ವಿನ್‌ನ ವಿಕಾಸವಾದ ಮೊದಲ ಬಾರಿಗೆ ಹೇಳಿತು. ಈ ಪಿಂಡಜವನ್ನು ಸಸ್ತನಿಗಳು ಎಂದು ಕರೆಯಲಾಗುತ್ತದೆ. ಸಸ್ತನಿಗಳು ಮೊಟ್ಟೆ ಇಡುವುದಿಲ್ಲ. ಹೊಟ್ಟೆಯಲ್ಲಿ ಗರ್ಭ ಕಟ್ಟಿ ಮರಿ ಮಾಡುತ್ತವೆ. ಇದರಲ್ಲಿ ಮನುಷ್ಯ ಕುಲವೂ ಒಂದು. ಅಲ್ಲಿಗೆ ಎರಡನೇ ಹಂತದ ಧರ್ಮ ಗ್ರಂಥಗ ಸತ್ಯದ ವಾರಸುದಾರಿಕೆ ವಿಜ್ಞಾನಕ್ಕೆ  ಬದಲಾಯಿತು. ಅಲ್ಲಿಂದ ಮುಂದೆ ಅದು ಯುರೋಪನ್ನು ದಾಟಿ ವಿವಿಧ ಜ್ಞಾನಶಾಖೆಗಳಿಗೆ ರವಾನೆಯಾಯಿತು. ಆ ನಂತರ ವಿಜ್ಞಾನದ ಬರವಣಿಗೆಯ ನೆರವಿನಿಂದ ಉಳಿದ ಜ್ಞಾನದ ಬರವಣಿಗೆಗಳನ್ನು ಮೌಲ್ಯಮಾಪನ ಮಾಡುವ ಧೋರಣೆಯೊಂದು ರೂಢಿಗೆ ಬಂತು. ಅದರ ಪ್ರಕಾರ ಧರ್ಮ ಗ್ರಂಥಗಳು ಸುಳ್ಳು ಪ್ರಮೇಯಗಳನ್ನು ಹೇಳಿದರೆ, ಕಾವ್ಯ ಅಥವಾ ಸಾಹಿತ್ಯ ಕೃತಿಗಳು ಪ್ರಧಾನವಾಗಿ ಕಲ್ಪನೆಯನ್ನು ಆಧರಿಸಿವೆ. ಹಾಗಾಗಿ ಆ ಎರಡೂ ಬಗೆಯ ಬರವಣಿಗೆಗೆ ಸತ್ಯವನ್ನು ಆಧರಿಸುವ, ಸತ್ಯವನ್ನು ಪ್ರತಿನಿಧಿಸುವ ಮತ್ತು ಸತ್ಯವನ್ನು ಮಂಡಿಸುವ ಆಂತರಿಕ ಸಾಮರ್ಥ್ಯ ಇಲ್ಲ ಎಂಬುದನ್ನು ವ್ಯಾಪಕವಾಗಿ ಹರಡಲಾಯಿತು. ಈ ವ್ಯಾಪಕವಾದ ಅಬ್ಬರದ ಪ್ರಚಾರವು ಕೇವಲ ವಿಜ್ಞಾನದ ಬರವಣಿಗೆಯನ್ನು ಮಾತ್ರ ಅವಲಂಬಿಸಿರಲಿಲ್ಲ; ಬದಲಾಗಿ ಈ ಆಲೋಚನೆಗಳು ಬಂಡವಾಳಶಾಹಿ ಮಾರುಕಟ್ಟೆಗೆ ಲಾಭ ತರುವ ಸೈದ್ಧಾಂತಿಕ ಸಂಬಂಧವನ್ನೂ ಹೊಂದಿದ್ದವು. ಕೈಗಾರಿಕಾ ಕ್ರಾಂತಿಯ ನಂತರ ಕೈಗಾರಿಕಾ ಬಂಡವಾಳಶಾಹಿ ಬೆಳೆಯಿತು. ಅದು ಊಳಿಗಮಾನ್ಯಶಾಹಿಯ ಸಂಬಂಧಗಳನ್ನು, ಮೌಲ್ಯಗಳನ್ನು ಮತ್ತು ನಂಬಿಕೆಗಳನ್ನು ಹುಸಿ ಎಂದು ಹೇಳಲೇಬೇಕಾದ ಚಾರಿತ್ರಿಕ ಒತ್ತಡ ಹಾಗೂ ಆರ್ಥಿಕ ಒತ್ತಡ ಇತ್ತು. ಕೈಗಾರಿಕಾ ಬಂಡವಾಳಶಾಹಿಯು ಬಂಡವಾಳಶಾಹಿ ವೈಚಾರಿಕತೆಯನ್ನು ಸೃಷ್ಟಿಸಿತು. ಈ ಬಂಡವಾಳಶಾಹಿ ವೈಚಾರಿಕತೆಯು ಊಳಿಗಮಾನ್ಯಶಾಹಿಯ ಉತ್ಪಾದನ ವಿಧಾನಗಳನ್ನು ಗೇಲಿಮಾಡಲು ಶುರುಮಾಡಿತು. ಊಳಿಗಮಾನ್ಯಶಾಹಿ ಹಳೆಯ ಉತ್ಪಾದನ ವಿಧಾನವು ಕೈಗಾರಿಕ ಉತ್ಪಾದನೆಗಳನ್ನು ಅವಲಂಬಿಸುವಂತೆ ಪ್ರಚೋದಿಸಿತು. ಅದರ ಭಾಗವಾಗಿ ಊಳಿಗಮಾನ್ಯಶಾಹಿ ಮೌಲ್ಯಗಳನ್ನು ವಿರೋಧಿಸುವ ಮತ್ತು ಅವನ್ನು ‘ಅನಾಗರಿಕ’ವೆಂದು ಪರಿಗಣಿಸುವ ಕೆಲಸ ಮಾಡಿತು. ಪರಿಣಾಮವಾಗಿ ಈ ಬಗೆಯ ವೈಚಾರಿಕತೆ ಒಂದು ಕಡೆ ಧರ್ಮ ಗ್ರಂಥಗಳ ವಿಚಾರಗಳನ್ನು ಹುಸಿ ಎಂದು ಹೇಳತೊಡಗಿತು. ಕಾವ್ಯ ಅಥವಾ ಸಾಹಿತ್ಯದ ಜೊತೆಯಲ್ಲಿ ಓದಗೆ ಒಳಗಾಗಿದ್ದ ಪುರಾಣಗಳನ್ನೂ ಕೂಡ ಹುಸಿ ಸಂಗತಿಗಳನ್ನು ಮತ್ತು ಕಲ್ಪನೆಗಳನ್ನು ನಿರೂಪಿಸುವ ವ್ಯರ್ಥ ಪ್ರಯತ್ನಗಳು ಎಂಬಂತೆ ಬಿಂಬಿಸತೊಡಗಿತು. ಈ ವೈಚಾರಿಕ ಇಕ್ಕಟ್ಟಿನಲ್ಲಿ ಸಾಹಿತ್ಯಕ್ಕೆ ಮತ್ತು ಪುರಾಣಗಳಿಗೆ ಸತ್ಯವನ್ನು ಪ್ರತಿನಿದಿಸುವ, ಸತ್ಯವನ್ನು ನಿರೂಪಿಸುವ ಆಂತರಿಕ ಸಾಮರ್ಥ್ಯ ಇಲ್ಲ ಎಂದು ನಂಬಿಸಲಾಯಿತು. ಪರಿಣಾಮವಾಗಿ ಪುರಾಣ, ಸಾಹಿತ್ಯ, ಜಾನಪದ ಇವನ್ನು ಕುರಿತು ಅಧ್ಯಯನ ಮಾಡಲು ಮಾನವಶಾಸ್ತ್ರ, ಸಮಾಜಶಾಸ್ತ್ರ ಮೊದಲಾದುವನ್ನು ಬಳಸಲಾಯಿತು. ಅವುಗಳ ಬಳಕೆಯನ್ನು ‘ವೈಜ್ಞಾನಿಕ ಅಧ್ಯಯನಗಳು’ ಎಂದು ಕರೆಯಲಾಯಿತು. ಅವುಗಳನ್ನು ಪೂರ್ವ ದೇಶಗಳ ಮೇಲೆ ಹೇರಲಾಯಿತು. ಪರಿಣಾಮವಾಗಿ ‘ಪುರಾಣ, ಸಾಹಿತ್ಯ, ಜಾನಪದ ಇವನ್ನು ಕುರಿತ ಅಧ್ಯಯನಗಳು ವೈಜ್ಞಾನಿಕವಾಗಿ ನಡೆಯಬೇಕು’ ಎಂಬ ಪ್ರಮೇಯವನ್ನು ತಮಗೆ ತಾವೇ ಹೇರಿಕೊಂಡವು. ವಾಸ್ತವವಾಗಿ ಈ ರೀತಿ ಹೇರಿಕೊಂಡ ಚಾರಿತ್ರಿಕ ಒತ್ತಡವು ನೇರವಾಗಿ ಸಾಹಿತ್ಯ ನಿರ್ಮಾಣ ಹಾಗೂ ಸಾಹಿತ್ಯ ಅಧ್ಯಯನಕ್ಕೆ ಸಂಬಂಧಿಸಿರಲಿಲ್ಲ. ಬದಲಾಗಿ ಅದು ಒಂದು ಚಾರಿತ್ರಿಕ ಘಟ್ಟದಲ್ಲಿ ವಿಜ್ಞಾನದ ಬರವಣಿಗೆಯೊಂದಿಗೆ ಸದ್ದಿಲ್ಲದೆ ಸ್ಪರ್ಧೆಗೆ ಇಳಿದ ಚಾರಿತ್ರಿಕ ಅನಿವಾರ್ಯತೆಯಾಗಿತ್ತು. ಪರಿಣಾಮವಾಗಿ ಸಾಹಿತ್ಯವನ್ನೂ ಕೂಡ ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕು ಎಂಬ ಕಲ್ಪನೆಗಳು ಮತ್ತು ಅಭಿಪ್ರಾಯಗಳು ಮುಂಚೂಣಿಗೆ ಬಂದವು. ಅದರ ಭಾಗವಾಗಿ ಸಾಹಿತ್ಯವನ್ನು ಸಂಶೋಧನೆ ಮಾಡುವಾಗ ಅದನ್ನು ವೈಜ್ಞಾನಿಕವಾಗಿ ಮಾಡಬೇಕು; ಅಷ್ಟು ಮಾತ್ರವಲ್ಲ; ಅಲ್ಲಿ ಸತ್ಯವನ್ನು ಹುಡುಕಬೇಕು ಹಾಗೂ ಸಂಶೋಧನೆಯ ಮೂಲಕ ಸತ್ಯವನ್ನು ಕಂಡುಹಿಡಿಯಬೇಕು ಎಂಬ ನಂಬಿಕೆಗಳು ಬೆಳೆದುಬಂದವು. ಈ ನಂಬಿಕೆ ಅಕಡೆಮಿಕ್ ವಲಯದಲ್ಲಿ ಎಷ್ಟು ಗಟ್ಟಿಯಾಗಿ ಬೇರೂರಿದೆ ಎಂದರೆ, ಎಲ್ಲವನ್ನೂ ಸತ್ಯದ ಒರೆಗಲ್ಲಿಗೆ ಹಚ್ಚಿನೋಡುವ ಪ್ರವೃತ್ತಿ ಬೆಳೆದಿದೆ. ವೈಜ್ಞಾನಿಕವಾಗಿ ಇದ್ದರೇನೆ ಅದು ಸ್ವೀಕಾರಯೋಗ್ಯ ಎಂತಲೂ, ವೈಜ್ಞಾನಿಕವಾಗಿ ಇದ್ದರೇನೆ ಅದು ಪರಿಗಣಿಸಲು ಯೋಗ್ಯ ಎಂತಲೂ ಬಣ್ಣಿಸಲಾಗುತ್ತಿದೆ.

ವಿಜ್ಞಾನ ಬರವಣಿಗೆಯಲ್ಲಿ ಅಥವಾ ಇನ್ಯಾವುದೇ ಬರವಣಿಗೆಯಲ್ಲಿ ‘ಇದು ಸತ್ಯ’ ಎಂದು ಹೇಳಿದರೆ, ‘ಉಳಿದವು ಸತ್ಯ ಅಲ್ಲ’ ಎಂದು ಹೇಳಿದಂತಾಗುತ್ತದೆ. ಉದಾಹರಣೆಗೆ ‘ಸೂರ್ಯ ಪೂರ್ವದಲ್ಲಿ ಹುಟ್ಟುತ್ತಾನೆ’ ಎಂಬುದು ಖಗೋಳಶಾಸ್ತ್ರ ನಿರೂಪಿಸುವ ಸತ್ಯ. ಅದರ ಜಾಗದಲ್ಲಿ ‘ಸೂರ್ಯ ಪೂರ್ವದಲ್ಲಿ ಹುಟ್ಟುವುದಿಲ್ಲ’ ಎಂದು ಹೇಳಿದರೆ ಅದು ಸುಳ್ಳು ಎನಿಸುತ್ತದೆ. ಹಾಗಾಗಿ ಇದನ್ನು ಬದಲಾಯಿಸಲು ಸಾಧ್ಯವೇ ಇಲ್ಲ ಎಂಬ ನಂಬಿಕೆ ಇದೆ. ಆದರೆ ಸಾಹಿತ್ಯ ಎಂಬುದು, ಸಾಹಿತ್ಯಕ ಭಾಷೆ ಎಂಬುದು ಅದನ್ನು ಬದಲಾಯಿಸಬಲ್ಲದು. ‘ಸೂರ್ಯ ಪೂರ್ವದಲ್ಲಿ ಹುಟ್ಟುವುದಿಲ್ಲ’ ಎಂಬುದನ್ನು ಸಾಹಿತ್ಯಕ ಭಾಷೆ ಹೀಗೆ ನಿರೂಪಿಸುತ್ತದೆ. ‘ಸೂರ್ಯ ಹುಟ್ಟುವ ದಿಕ್ಕನ್ನು ನಾವು ಪೂರ್ವ ಎಂದು ಕರೆಯುತ್ತೇವೆ’ ಅಥವಾ ‘ಸೂರ್ಯ ಹುಟ್ಟುವ ದಿಕ್ಕಿಗೆ ನಾವು ಪೂರ್ವ ಎಂದು ಹೆಸರಿಟ್ಟಿದ್ದೇವೆ’. ಈ ಎರಡೂ ಹೇಳಿಕೆಗಳ ಸಾಮಾನ್ಯ ಸಾರಾಂಶವೆಂದರೆ ಪೂರ್ವದಲ್ಲಿ ಹುಟ್ಟುತ್ತಾನೆ’ ಎಂಬುದನ್ನು ಪೂರ್ಣವಾಗಿ ನಂಬಬೇಕಿಲ್ಲ ಮತ್ತು ಒಪ್ಪಬೇಕಿಲ್ಲ. ಸೂರ್ಯನಿಗೆ ಸೂರ್ಯ ಎಂದು ಹೆಸರಿಟ್ಟುದು ಮನುಷ್ಯ. ದಿಕ್ಕುಗಳಿಗೆ ಹೆಸರಿಟ್ಟುದು ಮನುಷ್ಯ. ಹೀಗೆ ಹೆಸರಿಡುವುದಕ್ಕೆ ಬಳಸಿರುವುದು ಭಾಷೆಯನ್ನು. ಹಾಗಾಗಿ ಮೇಲಿನ ಹೇಳಿಕೆಯಲ್ಲಿ ಸೂರ್ಯ ಮತ್ತು ಪೂರ್ವ ಎಷ್ಟು ಮುಖ್ಯವೊ, ಅದಕ್ಕೆ ಭಾಷಿಕ ನಿರೂಪಣೆ ಮಾಡಿರುವ ನಾವು ಎಂಬುದೂ ಅಷ್ಟೇ ಮುಖ್ಯವಾದುದು. ಈ ಚರ್ಚೆಯ ಸಾರಾಂಶವೇನೆಂದರೆ ಸತ್ಯದ ಸ್ವರೂಪ ಎಂಬುದು ಅಖಂಡವಾಗಿ ಇರುವುದಿಲ್ಲ. ಸಾರ್ವಕಾಲಿಕವಾಗಿ ಇರುವುದಿಲ್ಲ. ಎಲ್ಲರಿಗೂ ಒಂದೇ ಬಗೆಯ ಸತ್ಯ ಎಂಬುದು ಇರುವುದಿಲ್ಲ. ಮತ್ತು ಸತ್ಯದ ವಾರಸುದಾರಿಕೆ ಕೇವಲ ವಿಜ್ಞಾನದ ಖಾಸಗಿ ಸೊತ್ತಲ್ಲ.

ವಿಜ್ಞಾನವು ಯಾವ ವಿಷಯದಲ್ಲಿ ಕುರುಡಾಗುತ್ತದೊ, ಅಲ್ಲಿ ಮಾನವಿಕಗಳು ಮತ್ತು ಕಲೆ ಹಾಗೂ ಸಾಹಿತ್ಯ ಪ್ರವೇಶ ಮಾಡುತ್ತವೆ. ಇದಕ್ಕೆ ಒಂದು ಉದಾಹರಣೆಯನ್ನು ನೋಡಬಹುದು. ಕಣ್ಣಿಗೆ ದೃಷ್ಟಿದೋಷ ಬರುವ ಕಾರಣವನ್ನು ಮಾನವಿಕಗಳಾಗಲಿ ಅಥವಾ ಕಲೆ ಹಾಗೂ ಸಾಹಿತ್ಯಗಳಾಗಲಿ ತೀರ್ಮಾನಿಸಲಾರವು. ಇದು ಸತ್ಯ. ನಂತರ ಕಣ್ಣಿನ ದೃಷ್ಟಿದೋಷಕ್ಕೆ ಕನ್ನಡಕ ಹಾಕುವುದು ಸರಿಯಾದ ಪರಿಹಾರ ಎಂಬುದನ್ನೂ ಗುರುತಿಸಿ ಹೇಳುವ ಆಂತರಿಕ ಸಾಮರ್ಥ್ಯ ಇರುವುದು ವೈದ್ಯಕೀಯ ವಿಜ್ಞಾನಕ್ಕೆ ಮಾತ್ರ. ಇದನ್ನು ಯಾರೂ ಅಲ್ಲಗಳೆಯಲಾರರು. ಯಾವುದು ಮಾನವಿಕ ಹಾಗೂ ಕಲೆ ಮತ್ತು ಸಾಹಿತ್ಯಗಳಿಗೆ ಅಸಾಧ್ಯವೊ ಅದನ್ನು ವೈದ್ಯ ವಿಜ್ಞಾನ ಗುರುತಿಸಬಲ್ಲದು. ಈಗ ಇದೇ ಸಂಗತಿಯನ್ನು ಇನ್ನೊಂದು ಕೋನದಿಂದ ನೋಡೋಣ. ಕಣ್ಣಿನ ದೃಷ್ಟಿದೋಷ ಇರುವವರು ಕನ್ನಡಗಳನ್ನು ಕೊಂಡುಕೊಂಡು ಅವನ್ನು ಹಾಕಿಕೊಳ್ಳಬೇಕು. ಕನ್ನಡವನ್ನು ಕೊಳ್ಳುವುದು ಕಣ್ಣಿನ ದೃಷ್ಟಿಕೋಷಕ್ಕೆ ಪರಿಹಾರ. ಸರಿ, ಸಮಾಜದಲ್ಲಿ ಬಿಕ್ಷುಕರು, ಕಡುಬಡವರು, ಮಧ್ಯಮ ವರ್ಗದವರು ಮತ್ತು ಶ್ರೀಮಂತ ವರ್ಗದವರು ಇದ್ದಾರೆ. ಬಿಕ್ಷುಕರಿಗೆ ಮತ್ತು ಕಡುಬಡವರಿಗೆ ಕನ್ನಡ ಕೊಳ್ಳಲು ಆಗುವುದಿಲ್ಲ. ಕನ್ನಡಕ ಕೊಳ್ಳುವಷ್ಟು ಹಣ ಇವರಲ್ಲಿ ಇಲ್ಲ. ಭಾರತದಲ್ಲಿ ಇವರು ೪೦ ಕೋಟಿಗೂ ಹೆಚ್ಚಿದ್ದಾರೆ. ಹಾಗಾಗಿ ಯಾರಿಗೆ ಕನ್ನಡಕ ಕೊಳ್ಳಲು ಆಗುವುದಿಲ್ಲವೊ ಅವರ ಪಾಲಿಗೆ ವೈದ್ಯ ವಿಜ್ಞಾನ ಹೇಳಿದ ಪರಿಹಾರ ಸುಳ್ಳಾಯಿತು. ಕನ್ನಡಕ ಕೊಳ್ಳುವ ಶಕ್ತಿ ಯಾರಿಗಿದೆಯೊ ಅವರ ಪಾಲಿಗೆ ಮಾತ್ರ ವೈದ್ಯ ವಿಜ್ಞಾನ ಹೇಳಿದ್ದು ನಿಜವಾಯಿತು; ಸತ್ಯವಾಯಿತು. ಯಾಕೆಂದರೆ ಆರ್ಥಿಕ ಏರುಪೇರು ವೈದ್ಯಕೀಯ ವಿಜ್ಞಾನಕ್ಕೆ ಕಾಣುವುದಿಲ್ಲ. ಇದನ್ನು ಮಾನವಿಕಗಳು, ಕಲೆ ಹಾಗೂ ಸಾಹಿತ್ಯ ಗುರುತಿಸುತ್ತವೆ. ಹಾಗಾಗಿ ಸತ್ಯ ಎಂಬುದು ಅಖಂಡವಾಗಿ, ಎಲ್ಲರ ಪಾಲಿಗೂ ಒಂದೇ ಬಗೆಯಲ್ಲಿ ಇರುವುದಿಲ್ಲ. ಜೊತೆಗೆ ವಿಜ್ಞಾನ ಮಾತ್ರ ಸತ್ಯ ಹೇಳುತ್ತದೆ ಎಂಬ ಹೇಳಿಕೆಯನ್ನು ಪೂರ್ಣ ನಂಬಲೂಬೇಕಿಲ್ಲ. ಮಾಲೀಕರಿಗೆ ಯಾವುದು ಸತ್ಯವೊ ಅದು ಕಾರ್ಮಿಕರಿಗೆ ಸುಳ್ಳಾಗಿರುತ್ತದೆ. ಬಡವರಿಗೆ ಯಾವುದು ಸತ್ಯವೊ ಅದು ಶ್ರೀಮಂತರಿಗೆ ಹುಸಿಯಾಗಿರುತ್ತದೆ. ಇದೇ ರೀತಿಯಲ್ಲಿ ಮೇಲುಜಾತಿಯವರಿಗೆ ಸತ್ಯವೆನಿಸಿದ್ದು ಕೆಳಜಾತಿಗಳಿಗೆ ಸುಳ್ಳು, ಅಧಿಕಾರಿಗಳಿಗೆ ಸತ್ಯವೆನಿಸಿದ್ದು ನೌಕರರಿಗೆ  ಸುಳ್ಳು, ಆಳುವವರಿಗೆ ಸತ್ಯವೆನಿಸಿದ್ದು ಆಳಿಸಿಕೊಳ್ಳುವವರಿಗೆ ಸುಳ್ಳು, ಗಂಡಸರಿಗೆ ಸತ್ಯವೆನಿಸಿದ್ದು ಮಹಿಳೆಯರಿಗೆ ಸುಳ್ಳು, ನ್ಯಾಯಾಧೀಶರಿಗೆ ಸತ್ಯವೆನಿಸಿದ್ದು ಕಕ್ಷಿದಾರನಿಗೆ ಸುಳ್ಳು ಹೀಗೆ ಈ ಪಟ್ಟಿ ಬೆಳೆಯುತ್ತದೆ. ಸತ್ಯ ಎಂಬುದು ಛಿದ್ರಛಿದ್ರವಾಗಿರುತ್ತದೆ. ತೋರುವಿಕೆಯ ಸತ್ಯ ಒಂದಾದರೆ ಇರುವಿಕೆಯ ಸತ್ಯ ಮತ್ತೊಂದಾಗಿರುತ್ತದೆ. ಇರುವಿಗೆ ಸತ್ಯದ ಒಂದು ಸಾಧ್ಯತೆ. ತೋರುವಿಕೆ ಸತ್ಯದ ಮತ್ತೊಂದು ಸಾಧ್ಯತೆ. ಆಗುವಿಕೆ ಸತ್ಯದ ಇನ್ನೊಂದು ಸಾಧ್ಯತೆ. ಈ ಎಲ್ಲಾ ಅಂಕುಡೊಂಕುಗಳನ್ನು ಮರೆತು ಸತ್ಯ ಎಂಬುದು ಒಂದು ಇದೆ. ಅದು ಸಮಾಜದಲ್ಲಿ ಎಲ್ಲರಿಗೂ ಒಂದೇ ಆಗಿರುತ್ತದೆ ಎಂದು ಹೇಳಲು ಬರುವುದಿಲ್ಲ. ಹಾಗಾಗಿ ಸಾಮಾಜಿಕ ನೆಲೆಯಲ್ಲೆ ಎಲ್ಲರಿಗೂ ಅನ್ವಯವಾಗುವ ಒಂದು ಸತ್ಯ ಇರಲು ಸಾಧ್ಯವಿಲ್ಲ.

ಸಾಹಿತ್ಯದಲ್ಲಿ ಸತ್ಯವನ್ನು ಹುಡುಕುವುದು ಎಂದರೆ ಏನು? ಸಾಹಿತ್ಯ ಎಂಬುದು ಭಾಷಿಕ ಅಭಿವ್ಯಕ್ತಿಯ ಒಂದು ವಿಶೇಷ ಕಲೆ. ಅಥವಾ ಸಾಹಿತ್ಯ ಎಂಬುದು ಭಾಷಿಕವಾಗಿ ಅಭಿವ್ಯಕ್ತಿ ಪಡೆದಿರುವ ಒಂದು ವಿಶಿಷ್ಟವಾದ ಭಾಷಿಕ ರೂಪ. ಅದರಲ್ಲಿ ಪ್ರಧಾನವಾಗಿ ಸಾಹಿತ್ಯಕ ಲೋಕ ಅನಾವರಣ ಆಗಿರುತ್ತದೆ. ಸಾಹಿತ್ಯಕ ಪಠ್ಯಗಳನ್ನು ಹಲವು ನೆಲೆಗಳಲ್ಲಿ ಸಂಶೋಧನೆ ಮಾಡಲಾಗುತ್ತದೆ. ಒಂದು : ಸಾಹಿತ್ಯ ಪಠ್ಯದ ವಿವರಗಳನ್ನು ಕೇವಲ ಸಾಹಿತ್ಯಕ ಪಠ್ಯದ ವಿವರಗಳಾಗಿ ಮಾತ್ರ ಗ್ರಹಿಸುವುದು. ಎರಡು: ಸಾಹಿತ್ಯ ಪಠ್ಯದ ವಿವರಗಳನ್ನು ಕೇವಲ ಸಾಮಾಜಿಕ ವಿವರಗಳಾಗಿ ಮಾತ್ರ ಗ್ರಹಿಸುವುದು. ಮೂರು: ಸಾಹಿತ್ಯ ಪಠ್ಯದ ವಿವರಗಳನ್ನು ಸಾಮಾಜಿಕ ವಿವರಗಳೊಂದಿಗೆ ತುಲನೆ ಮಾಡುವುದು. ನಾಲ್ಕು: ಸಾಹಿತ್ಯ ಪಠ್ಯದ ವಿವರಗಳನ್ನು ಸಾಮಾಜಿಕ ವಿವರಗಳೊಂದಿಗೆ ತುಲಮೆ ಮಾಡಿ, ಆ ಸಾಮಾಜಿಕ ವಿವರಗಳನ್ನು ಸಾಹಿತ್ಯಕ ಪಠ್ಯದ ವಿವರಗಳು ಪೂರ್ಣ ಮಾಡಿಲ್ಲ ಎಂದು ತೀರ್ಮಾನಿಸುವುದು. ಐದು: ಸಾಹಿತ್ಯ ಪಠ್ಯದ ವಿವರಗಳಿಗೂ ಮತ್ತು ಸಾಮಾಜಿಕ ವಿವರಗಳಿಗೂ ಕೇವಲ ಯಾಂತ್ರಿಕವಾಗಿ ಸಂಬಂಧಗಳನ್ನು ಕಲ್ಪಿಸುವುದು. ಆರು: ಸಾಹಿತ್ಯ ಪಠ್ಯದ ವಿವರಗಳಿಗೂ ಮತ್ತು ಸಾಮಾಜಿಕ ವಿವರಗಳಿಗೂ ದ್ವಂದ್ವಾತ್ಮಕ ಸ್ವರೂಪದಲ್ಲಿ ಸಂಬಂಧಗಳನ್ನು ಕಲ್ಪಿಸುವುದು. ಏಳು: ಸಾಹಿತ್ಯ ಪಠ್ಯದ ವಿವರಗಳು ಬರಹಗಾರರ ಸ್ವತಂತ್ರ ಅನುಭವಗಳು ಎಂದು ತೀರ್ಮಾನಿಸುವುದು. ಅಥವಾ ಬರಹಗಾರರು ಏನನ್ನು ಬರೆದಿದ್ದಾರೊ ಅದು ಅವರ ಅನುಭವದಿಂದಲೇ ಬಂದಿದೆ ಎಂದು ತೀರ್ಮಾನಿಸುವುದು.

ಮೇಲಿನ ವಿವರಣೆಗಳಿಂದ ನಮಗೆ ತಿಳಿಯುವುದೇನೆಂದರೆ, ಸಾಹಿತ್ಯ ಪಠ್ಯಗಳ ಓದಿನ ಕ್ರಮಗಳಲ್ಲಿ ಹಲವು ಸಾಧ್ಯತೆಗಳಿವೆ. ಸಾಹಿತ್ಯ ಪಠ್ಯಗಳ ಸಂಶೋಧನೆಯ ಕ್ರಮಗಳಲ್ಲಿ ಹಲವು ಸಾಧ್ಯತೆಗಳಿವೆ. ಅವುಗಳಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬುದು ಮುಖ್ಯವಲ್ಲ. ಸಾಹಿತ್ಯ ಸಂಶೋಧನೆಯಲ್ಲಿ ಹುಡುಕುವ ಸತ್ಯದ ಸ್ವರೂಪ ಸಾಧ್ಯತೆಗಳು ಮೈದಾಳುತ್ತವೆ. ಸಾಹಿತ್ಯ ಪಠ್ಯದ ವಿವರಗಳನ್ನು ಅದರ ಒಳಗಿನ ವಿನ್ಯಾಸಗಳೊಂದಿಗೊ ಅಥವಾ ಸಾಮಾಜಿಕ ವಿವರಗಳೊಂದಿಗೊ ತುಲನೆ ಮಾಡುವಾಗ ಅದು ಹಲವು ಆಕಾರಗಳ, ವಿಭಿನ್ನ ಮುಖಗಳ ಸಂಕೀರ್ಣ ರೂಪವನ್ನು ಪಡೆಯುತ್ತದೆ. ಹಾಗಿರುವಾಗ ಸಾಹಿತ್ಯ ಸಂಶೋಧನೆಯಲ್ಲಿ ಸತ್ಯದ ಹುಡುಕಾಟ, ಸತ್ಯವನ್ನು ಕಂಡುಹಿಡಿಯುವುದು ಎಂಬ ಮಾತುಗಳಿಗೆ ಅರ್ಥವೇ ಇಲ್ಲ. ಈ ಅರ್ಥವಿಲ್ಲದ ಮಾತುಗಳನ್ನೇ ಸಾಹಿತ್ಯ ಸಂಶೋಧನೆ ಕುರಿತ ಕೆಲವು ಕೃತಿಗಳಲ್ಲಿ ಪ್ರಸ್ತಾಪ ಮಾಡಲಾಗಿದೆ. ಕೆಲವು ಸಂಶೋಧಕರು ಅವನ್ನು ಕಣ್ಣುಮುಚ್ಚಿಕೊಂಡು ಒಪ್ಪಿಕೊಂಡಿದ್ದಾರೆ. ಆ ಹೇಳಿಕೆಗಳನ್ನು ಸಂಶೋಧನೆ ಎಂದರೇನು ಎಂಬ ಭಾಗದಲ್ಲಿ ನಮೂದಿಸುತ್ತಾರೆ.