ಸಂಶೋಧನೆ ಎಂದರೆ ಏನು? ಎಂಬುದನ್ನು ಹಲವು ಆಯಾಮಗಳಲ್ಲಿ ವಿವರಿಸಿಕೊಳ್ಳಲಾಗಿದೆ. ಅಂತಹ ಹಲವು ವಿವರಣೆಗಳಲ್ಲಿ ಅದರ ಅರ್ಥದ ಆಯಾಯವೂ ಒಂದು. ಸಾಹಿತ್ಯ ಸಂಶೋಧನೆ ಕುರಿತು ಬಂದಿರುವ ಕೆಲವು ಕೃತಿಗಳಲ್ಲಿ ಸಂಶೋಧನೆಯ ಅರ್ಥವಿವರಣೆ ಕೊಡಲಾಗಿದೆ. ಅಂತಹ ಅರ್ಥವಿವರಣೆಗಳಲ್ಲಿ ಮುಖ್ಯವಾಗಿ ೪ ಅಂಶಗಳು ಕಂಡು ಬರುತ್ತವೆ. ೧. ಉಜ್ಜುವುದು, ತೀಡುವುದು ೨. ಹೊಸದಾಗಿ ಕಂಡು ಹಿಡಿಯವುದು, ೩. ಸತ್ಯವನ್ನು ಕಂಡು ಹಿಡಿಯುವುದು, ೪. ವಸ್ತುನಿಷ್ಠ ಸತ್ಯವನ್ನು ಕಂಡು ಹಿಡಿಯುವುದು.

ಸಂಶೋಧನೆ ಎಂದರೆ ಚರಿತ್ರೆ, ಪರಂಪರೆ ಮತ್ತು ಸಂಸ್ಕೃತಿಯಲ್ಲಿ ಮಸುಕು ಮಸುಕಾಗಿರುವುದನ್ನು ಸ್ಪಷ್ಟಗೊಳಿಸುವುದು. ಇದನ್ನೆ ಬೇರೆ ಮಾತುಗಳಲ್ಲಿ ಹೇಳುವುದಾದರೆ ಅಸ್ಪಷ್ಟವಾಗಿರುವ ಅಂಶಗಳನ್ನು ಸ್ಪಷ್ಟಗೊಳಿಸುವುದು. ಅದಕ್ಕಾಗಿಯೇ ಈ ಕೆಲಸಕ್ಕೆ ಉಜ್ಜುವುದು ತೀಡುವುದು ಎಂಬ ಅರ್ಥ ವಿವರಣೆಗಳನ್ನು ಕೊಡಲಾಗಿದೆ. ಮಸುಕು ಮಸುಕಾಗಿರುವುದು ಸ್ಪಷ್ಟವಾಗಬೇಕಾದರೆ, ಅಸ್ಪಷ್ಟವಾಗಿರುವುದು ಸ್ಪಷ್ಟವಾಗಬೇಕಾದರೆ; ಸ್ಪಷ್ಟತೆಯನ್ನು ಅಸ್ಪಷ್ಟವಾಗಿಸಿರುವ ಅಂಶಗಳನ್ನು ಉಜ್ಜಬೇಕು, ತೀಡಬೇಕು. ಇದನ್ನು ಮಾಡದ ಹೊರತು ಅಸ್ಪಷ್ಟವಾಗಿರುವ ಅಂಶವು ಸ್ಪಷ್ಟವಾಗುವುದಿಲ್ಲ. ಹಾಗಾಗಿ ಸಂಶೋಧನೆಯ ಮುಖ್ಯ ಕೆಲಸ ಎಂದರೆ ಉಜ್ಜುವುದು ಮತ್ತು ತೀಡುವುದು ಎಂಬುದು ಮೇಲಿನ ಸಾಮಾನ್ಯ ವಿವರಣೆ.

ಆದರೆ ಸಂಶೋಧನೆಯ ಕೆಲಸ ಆ ರೀತಿ ನಡೆಯುತ್ತದೆಯೇ ಅಥವಾ ಆ ರೀತಿ ಮಾತ್ರ ನಡೆಯುತ್ತದೆಯೋ ಎಂಬುದನ್ನು ಮರುಪರಿಶೀಲಿಸುವ ಅಗತ್ಯವಿದೆ. ಸಂಶೋಧನೆ ಎಂದರೆ ಅಸ್ಪಷ್ಟತೆಯನ್ನು ಸ್ಪಷ್ಟಗೊಳಿಸುವುದು ಎಂದುಕೊಂಡಾಗ, ಅಸ್ಪಷ್ಟತೆಯ ಸ್ವರೂಪ ಯಾವುದು ಎಂಬುದನ್ನು ಚರ್ಚಿಸಬೇಕಾಗುತ್ತದೆ. ಜೊತೆಗೆ ಚರಿತ್ರೆಯಲ್ಲೊ, ಪರಂಪರೆಯಲ್ಲೊ, ಒಂದು ವೇಳೆ ಸ್ಪಷ್ಟವಾಗಿರಬೇಕಾದುದು ಅಸ್ಪಷ್ಟವಾಗಿದ್ದರೆ ಅದಕ್ಕೆ ಚಾರಿತ್ರಿಕ ಕಾರಣಗಳು ಏನು, ಅದರ ಮುಂದಿನ ಪರಿಣಾಮಗಳು ಏನು ಎಂಬುದನ್ನೂ ಕೂಡ ಚರ್ಚಿಸಬೇಕಾಗುತ್ತದೆ. ಮೇಲಿನ ಹೇಳಿಕೆ ಕರ್ತೃ ಬಗೆಗಿನ ಮಾಹಿತಿಗಳು ಹಾಗೂ ಕೃತಿಗಳ ಬಗೆಗಿನ ಮಾಹಿತಿಗಳಿಗೆ ಮಾತ್ರ ಸಂಬಂಧಿಸಿದೆ. ಅದು ಪಠ್ಯಗಳ ಅಂತರಾಳದ ಬಗೆಗಿನ ವಿವರಣೆಗೂ, ವಿಶ್ಲೇಷಣೆಗೊ ಅಥವಾ ವ್ಯಾಖ್ಯಾನಕ್ಕೊ ಸಂಬಂಧಿಸಿಲ್ಲ. ಸಂಶೋಧನೆ ಎಂದರೆ ಕರ್ತೃ ಬಗೆಗಿನ ಮಾಹಿತಿಗಳ ಸ್ಪಷ್ಟನೆಗಳು ಮತ್ತು ಕೃತಿಗಳ ಬಗೆಗಿನ ಸ್ಪಷ್ಟ ಮಾಹಿತಿಗಳು ಎಂದುಕೊಂಡಾಗ ಮಾತ್ರ ಮೇಲಿನ ಹೇಳಿಕೆಯನ್ನು ಒಪ್ಪಬಹುದು. ಆದರೆ ಸಂಶೋಧನೆ ಎಂದರೆ ಕೇವಲ ಕರ್ತೃ ಮತ್ತು ಕೃತಿಗಳ ಬಗೆಗಿನ ಮಾಹಿತಿಗಳು ಮಾತ್ರ ಅಲ್ಲ. ಪಠ್ಯಗಳ ಒಳಗಿನ ಹಲವು ವಿನ್ಯಾಸಗಳ ವಿವರಣೆ, ವಿಶ್ಲೇಷಣೆ ಮತ್ತು ವ್ಯಾಖ್ಯಾನ ಎಂದುಕೊಂಡಾಗ ಈ ಉಜ್ಜುವುದು, ತೀಡುವುದು ಎಂಬ ವಿವರಣೆಗಳು ಸಂಶೋಧನೆಯನ್ನು ಕುರಿತು ಹೊಸದೇನನ್ನೂ ಹೇಳಲಾರವು ಎನಿಸುತ್ತದೆ.

ಸಾಹಿತ್ಯ ಸಂಶೋಧನೆಯಲ್ಲಿ ‘ಹೊಸದಾಗಿ ಕಂಡುಹಿಡಿಯುವುದು’ ಎಂದರೆ ಏನು? ಭೌತವಿಜ್ಞಾನಗಳಿಗೆ ಈ ಮಾತು ಒಪ್ಪುತ್ತದೆ. ಅಲ್ಲಿ ಇನ್‌ವೆನ್‌ಶನ್ ಅಂದರೆ  ಅನ್ವೇಷಣೆ. ಯಾವುದನ್ನಾದರೂ ಹೊಸದಾಗಿ ಕಂಡುಹಿಡಿಯುವುದು. ಉದಾಹರಣೆಗೆ ನಾಯಿ ಕಡಿದುದಕ್ಕೆ ಔಷಧಿ ಕಂಡು ಹಿಡಿದುದು, ಭೂಮಿ ಗುಂಡಾಗಿದೆ ಎಂಬುದನ್ನು ಕಂಡುಹಿಡಿದುದು, ಭೂಮಿಯು ಸೂರ್ಯನ ಸುತ್ತಲು ಸುತ್ತುತ್ತದೆ ಎಂಬುದನ್ನು ಕಂಡುಹಿಡಿದುದು, ಭೂಮಿಗೆ ಗುರುತ್ವಾಕರ್ಷಣ ಶಕ್ತಿ ಇದೆ ಎಂಬುದನ್ನು ಕಂಡು ಹಿಡಿದುದು, ಅಮೇರಿಕಾವನ್ನು ಕಂಡುಹಿಡಿದುದು – ಹೀಗೆ ಇದರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ವಾಸ್ತವವಾಗಿ ಕೈಗಾರಿಕಾ ಕ್ರಾಂತಿಯ ನಂತರ ಹಲವು ಯಂತ್ರಗಳನ್ನು ಕಂಡುಹಿಡಿಯಲಾಯಿತು. ಅವುಗಳ ಬಳಕೆಯ ಕ್ರಮಗಳನ್ನು ಮತ್ತು ಬಳೆಯ ವಿಧಾನಗಳನ್ನು ಕಂಡು ಹಿಡಿಯಲಾಯಿತು. ಹಾಗೆ ನೋಡಿದರೆ  ಅವುಗಳನ್ನು ಕಂಡುಹಿಡಿಯುವ ಮೊದಲೂ ಕೂಡ ಅವುಗಳ ಅಸ್ತಿತ್ವ ಇತ್ತು. ಉದಾಹರಣೆಗೆ ಭೂಮಿಗೆ ಗುರುತ್ವಾಕರ್ಷಣ ಶಕ್ತಿ ಇತ್ತು. ಆದರೆ ಸರ್ ಐಸಾಕ್ ನ್ಯೂಟನ್ ಅದನ್ನು ಕಂಡು ಹಿಡಿದ. ಹೀಗೆ ಕಂಡು ಹಿಡಿಯುವ ವಿಧಾನಕ್ಕೆ ಸಂಶೋಧನೆ ಎಂದು ಕರೆಯಲಾಯಿತು. ಮತ್ತು ಅದನ್ನು ಭಾಷಿಕವಾಗಿ ನಿರೂಪಿಸಲಾಯಿತು. ಭೌತವಿಜ್ಞಾನಗಳಲ್ಲಿ ಇದನ್ನು ಇನ್‌ವೆನ್‌ಶನ್ ಎಂದು ಕರೆಯುತ್ತಾರೆ. ಈ ಇನ್‌ವೆನ್‌ಷನ್ ಎಂಬ ಆಂಗ್ಲಭಾಷೆಯ ಪದದ ಕನ್ನಡದ ಅನುವಾದ ಅನ್ವೇಷಣೆ ಎಂದಾಗುತ್ತದೆ. ಈ ಭಾಷಿಕ ಆಯಾಮವನ್ನು ಬಲವಾಗಿ ನೆಮ್ಮಿಕೊಂಡು ಮೊದಲ ಹಂತದಲ್ಲಿ ಮಾನವಿಕಗಳಲ್ಲಿ ಇದನ್ನು ಸಂಶೋಧನೆ ಎಂದು ಕರೆಯಲಾಯಿತು. ಇದನ್ನೇ ಅನುಸರಿಸಿ ಸಾಹಿತ್ಯದ ಸಂಶೋಧನೆಯಲ್ಲೂ ಪ್ರಶ್ನಾತೀತವಾಗಿ ಅದನ್ನು ಸ್ವೀಕರಿಸಿ ನಿರೂಪಿಸಲಾಯಿತು. ಹಾಗಾಗಿ ಸಂಶೋಧನೆ ಎಂದರೆ ಹೊಸದಾಗಿ ಕಂಡು ಹಿಡಿಯುವುದು ಎಂಬ ನಂಬಿಕೆ ಈಗಲೂ ಅನೇಕ ಸಂಶೋಧನಾ ಬರವಣಿಗೆಗಳ ನಂಬಿಕೆಯಾಗಿದೆ.

ಆಧುನಿಕ ಪೂರ್ವ ಸಾಹಿತ್ಯದ ಮಟ್ಟಿಗೆ ಕರ್ತೃ ವಿವರಗಳ ಬಗೆಗೊ, ಕೃತಿ ವಿವರಗಳ ಬಗೆಗೋ ಮೇಲಿನ ಹೇಳಿಕೆಯನ್ನು ಒಪ್ಪಬಹುದು. ಆದರೆ ಆಧುನಿಕ ಸಾಹಿತ್ಯದಲ್ಲಿ ಅಥವಾ ವರ್ತಮಾನದ ಸಾಹಿತ್ಯದಲ್ಲಿ ಹೊಸದಾಗಿ ಕಂಡು ಹಿಡಿಯುವಂತಹದ್ದು ಏನಿದೆ? ಯಾಕೆಂದರೆ ಕರ್ತೃ ಬಗೆಗಾಗಲಿ, ಕೃತಿಗಳ ಬಗೆಗಾಗಲಿ ಹೊಸದಾಗಿ ಕಂಡು ಹಿಡಿಯುವಂತಹದ್ದು ಏನೂ ಇರುವುದಿಲ್ಲ. ಏನಿದ್ದರೂ ಕೃತಿಗಳ ವಿಶ್ಲೇಷಣೆ ಮತ್ತು ವ್ಯಾಖ್ಯಾನ ಇಲ್ಲಿ ಮುಖ್ಯವೇ ಹೊರತು; ಮಾಹಿತಿಗಳಿಗೆ ಸಂಬಂಧಿಸಿ ಹೊಸದಾಗಿ ಕಂಡು ಹಿಡಿಯುವಂತಹದ್ದು ಏನಿರುತ್ತದೆ? ಈ ಹಿನ್ನೆಲೆಯಲ್ಲಿ ನೋಡಿದಾಗ ಈ ‘ಹೊಸದಾಗಿ ಕಂಡು ಹಿಡಿಯುವುದು’ ಎಂಬ ಅರ್ಥ ವಿವರಣೆ ಸಾಹಿತ್ಯ ಸಂಶೋಧನೆಗಳಿಗೆ ಅಷ್ಟಾಗಿ ಸರಿ ಹೊಂದುವುದಿಲ್ಲ. ಆದರೂ ಸಾಂಪ್ರದಾಯಿಕವಾಗಿ ‘ಸಂಶೋಧನೆ ಎಂದರೆ ಹೊಸದಾಗಿ ಕಂಡು ಹಿಡಿಯುವುದು’ ಎಂಬ ಹೇಳಿಕೆಯನ್ನು ಸಂಶೋಧಕರು ಸಂಶೋಧನೆ ಎಂಬುದನ್ನು ವಿವರಿಸಲು ಯಾವ ಚರ್ಚೆಯೂ ಇಲ್ಲದೆ ಬಳಸುತ್ತಾರೆ. ಈ ಬಳಕೆಗೆ ಯಾವ ಹುರುಳೂ ಇಲ್ಲ.