ಸಾಹಿತ್ಯ ಸಂಶೋಧನೆಯಲ್ಲಿ ಸಂಶೋಧನೆಗೆ ಆಯ್ಕೆ ಮಾಡಿಕೊಳ್ಳುವ ಪ್ರಕಾರ ಯಾವುದಾಗಿರಬೇಕು ಮತ್ತು ಯಾವುದಾಗಿರಬಾರದು ಎಂಬ ಆಯ್ಕೆ ಮತ್ತು ನಿರಾಕರಣೆಯ ಪ್ರಶ್ನೆಗಳು ಸಂಶೋಧನಾ ವಿಷಯದ ಆಯ್ಕೆಯ ಸಮಯದಲ್ಲೇ ತೀರ್ಮಾನವಾಗುತ್ತವೆ. ಇದು ಸಂಶೋಧಕರು ತಮ್ಮ ಸಂಶೋಧನೆಗೆ ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ವಿಷಯಕ್ಕೆ ಮಾತ್ರ ಸೀಮಿತವಾಗಿರದೆ ಅದು ಪರೋಕ್ಷವಾಗಿ ಸಾಹಿತ್ಯ ಪ್ರಕಾರದ ಸ್ವರೂಪವನ್ನು ಕುರಿತ ಸ್ಥಾಪಿತ ನಿಲುವಿನ ಸಮರ್ಥನೆಯೂ ಆಗಿರುತ್ತದೆ.

ಸಾಮಾನ್ಯವಾಗಿ ಸಂಶೋಧಕರು ಸಂಶೋಧನೆಗೆ ಎತ್ತಿಕೊಳ್ಳುವ ಸಾಹಿತ್ಯ ಪ್ರಕಾರಗಳ ಬಗ್ಗೆ ಮತ್ತು ಅವುಗಳ ಸ್ವರೂಪದ ಬಗ್ಗೆ ವ್ಯಾಖ್ಯಾನ ಮಾಡಲು ಪ್ರಯತ್ನಿಸುತ್ತಾರೆ. ಅಂತಹ ಪ್ರಯತ್ನಗಳು ಬಹುತೇಕ ಈಗಾಗಲೆ ಆಯಾ ಪ್ರಕಾರಗಳಿಗೆ ಮಾಡಲಾಗಿರುವ ಜನಪ್ರಿಯ ಹಾಗೂ ದುರ್ಬಲ ಹೇಳಿಕೆಗಳನ್ನು ಅವಲಂಬಿಸಿರುತ್ತವೆ. ಅದರಿಂದ ಸಂಶೋಧನ ಬರವಣಿಗೆಗೆ ಯಾವುದೇ ಹೊಸ ಹೊಳವು ಸಿಗುವುದಿಲ್ಲ. ಆದರೂ ಇದನ್ನು ಒಂದು ಕಡ್ಡಾಯ ಪದ್ಧತಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಒಂದು ಕಡೆ ಪ್ರಸಿದ್ಧ ಮತ್ತು ಜನಪ್ರಿಯ ಸಾಹಿತ್ಯ ಪ್ರಕಾರಗಳನ್ನು ಮೇಲಿಂದ ಮೇಲೆ ವ್ಯಾಖ್ಯಾನ ಮಾಡಲಾಗುತ್ತಿದೆ. ಈ ರೀತಿ ವ್ಯಾಖ್ಯಾನ ಮಾಡಲು ಎರಡು ಕಾರಣಗಳಿವೆ. ಒಂದು: ವಿಷಯದ ಆಯ್ಕೆಯಲ್ಲೆ ಈಗಾಗಲೆ ಪ್ರಸಿದ್ಧವಾಗಿರುವ ಮತ್ತು ಜನಪ್ರಿಯ ಎಂದು ಕರೆಯಲಾಗುವ ಪ್ರಕಾರಗಳನ್ನು ಸಂಶೋಧಕರು ಆಯ್ಕೆಮಾಡಿಕೊಳ್ಳುತ್ತಾರೆ. ಹೀಗೆ ಆಯ್ಕೆಮಾಡಿಕೊಳ್ಳಲು ಮತ್ತೊಂದು ಕಾರಣ ಇದೆ. ಜನಪ್ರಿಯವಾಗಿರುವ ಮತ್ತು ಪ್ರಸಿದ್ಧವಾಗಿರುವ ಸಾಹಿತ್ಯ ಪ್ರಕಾರಗಳನ್ನು ಸಂಶೋಧನೆಗೆ ಆಯ್ಕೆಮಾಡಿಕೊಂಡರೆ ಆಯಾ ಪ್ರಕಾರದಲ್ಲಿ ಆ ಕುರಿತು ನಡೆದಿರುವ ಸಂಶೋಧನೆಯ ಜಾಡು ಹಿಡಿದು ಸಂಶೋಧನಾ ಬರವಣಿಗೆಯನ್ನು ಮುಗಿಸಬಹುದು ಎಂಬುದು. ಇದರ ಜೊತೆಗೆ ಮತ್ತೊಂದು ಕಾರಣವೂ ಇದೆ. ಸಾಮಾನ್ಯವಾಗಿ ಪದವಿ ತರಗತಿ ಮತ್ತು ಸ್ನಾತಕ ತರಗತಿಗಳಲ್ಲಿ ಸಾಹಿತ್ಯವನ್ನು ಪರಿಚಯ ಮಾಡುವಾಗ ಒಪ್ಪಿತವಾಗಿರುವ ಸಾಹಿತ್ಯ ಪ್ರಕಾರಗಳನ್ನು ಅಲ್ಲಿ ಪಠ್ಯಕ್ರಮವನ್ನಾಗಿ ಇಡಲಾಗಿರುತ್ತದೆ. ಅದರ ಬೋಧನಾ ಕ್ರಮ ಹಾಗೂ ಪರೀಕ್ಷಾ ಪದ್ಧತಿ ಅದನ್ನು ಪ್ರಶ್ನೆ ಮಾಡದ ಹಾಗೆ ಮಾಡಿದೆ. ಇದೂ ಸೇರಿದಂತೆ ಪದವಿ ಹಾಗೂ ಸ್ನಾತಕ ತರಗತಿಗಳಲ್ಲಿ ಒಪ್ಪಿತ ಸಾಹಿತ್ಯ ಪ್ರಕಾರಗಳನ್ನು ಮಾತ್ರವೇ ಸಾಹಿತ್ಯ ಎಂದು ಪರಿಚಯಿಸಲಾಗುತ್ತಿದೆ. ಇದನ್ನು ನಂಬಿ ನಡೆಯುವ ಸಂಶೋಧಕರು ಈ ಸೀಮಿತ ಗ್ರಹಿಕೆಯಿಂದ ಹೊರಬರಲು ಆಗುತ್ತಿಲ್ಲ.

ಈ ಅಂಶದ ಚರ್ಚೆಯನ್ನು ಇನ್ನೊಂದು ಆಯಾಮದಿಂದ ನೋಡಬಹುದು. ಸಾಹಿತ್ಯವು ಒಪ್ಪಿತವಾಗಿರುವ ಸಿದ್ಧಮಾದರಿಯ ಪ್ರಕಾರಗಳಲ್ಲಿ ಮಾತ್ರ ಪ್ರಕಟವಾಗುತ್ತಿಲ್ಲ. ಅದು ಇಂತಹ ಪ್ರಕಾರ ಎಂದು ಸುಲಭವಾಗಿ ಗುರುತಿಸಲಾಗದಂತಹ ರೂಪಗಳಲ್ಲಿ ಅಭಿವ್ಯಕ್ತಿ ಆಗುತ್ತಿದೆ. ಇತ್ತೀಚಿನ ಬಹುತೇಕ ಬರವಣಿಗೆ ಒಪ್ಪಿತ ಪ್ರಕಾರಗಳಲ್ಲಿ ಮಾತ್ರವೇ ಪ್ರಕಟವಾಗುತ್ತಿಲ್ಲ. ಅದು ಸಾಹಿತ್ಯ ನಿರ್ದಿಷ್ಟ ಪ್ರಕಾರಗಳ ಹಂಗು ತೊರೆದು ಪ್ರಕಟವಾಗುತ್ತಿದೆ. ಅಂತಹ ಸಾಹಿತ್ಯದ ಪ್ರಮಾಣ ಬಹಳ ದೊಡ್ಡದೂ ಇದೆ. ಸಾಹಿತ್ಯ ಸಂಶೋಧನೆಗಳು ಆ ಕಡೆ ಗಮನ ಹರಿಸುವ ಆಸಕ್ತಿ ತೋರಬೇಕಾಗಿದೆ. ಇದು ಸಾಹಿತ್ಯವು ಅಭಿವ್ಯಕ್ತಿ ಆಗುತ್ತಿರುವ ಸ್ವರೂಪ ಅಥವಾ ಪ್ರಕಾರದ ಪ್ರಶ್ನೆಯನ್ನು ಕುರಿತ ಚರ್ಚೆ ಮಾತ್ರವಲ್ಲ. ಅದಕ್ಕಿಂತಲೂ ಮುಖ್ಯವಾದ ಚರ್ಚೆಯನ್ನು ಇಲ್ಲಿ ಮಾಡಬೇಕಾಗಿದೆ. ಸ್ಥಾಪಿತ ಪ್ರಕಾರಗಳ ಹಂಗಿಲ್ಲದ ಅಭಿವ್ಯಕ್ತಿಗಳಿಗೆ ಕಾರಣಗಳೇನಿರಬಹುದು? ಅದು ಸಾಹಿತ್ಯದ ವಸ್ತುವಿನ ಪ್ರಶ್ನೆಯೊ, ಬರಹಗಾರರ ಆಯ್ಕೆಯ ಪ್ರಶ್ನೆಯೊ, ಅಥವಾ ಸಾಹಿತ್ಯ ಪ್ರಕಾರಗಳ ಮೇಲಿನ ಉಪೇಕ್ಷೆಯ ಪ್ರಶ್ನೆಯೊ ಯಾವುದು ಎಂಬುದು ಚರ್ಚೆಯ ವಿಷಯ. ಸಾಹಿತ್ಯಕವಾದ ಈ ಪ್ರಶ್ನೆಯ ಚರ್ಚೆಯು ಬೇಡವೆಂದರೂ ಸಾಮಾಜಿಕ ಚಲನಶೀಲ ಚೌಕಟ್ಟಿಗೆ  ದಾಟುತ್ತದೆ. ಸಮಾಜದ, ಸಮುದಾಯಗಳ ಒಳತುಡಿತಗಳನ್ನು ಸಿದ್ಧಮಾದರಿಯ ಸಾಹಿತ್ಯ ಪ್ರಕಾರಗಳಲ್ಲಿ ಅಭಿವ್ಯಕ್ತಿಸಲು ಆಗದೇ ಇರುವುದಕ್ಕೆ ಇರುವ ಬಲವಾದ ಕಾರಣಗಳಾದರೂ ಏನು? ಸಮಾಜದ ಆಗುಹೋಗುಗಳನ್ನು ಬರಹಗಾರರು ಗ್ರಹಿಸುತ್ತಿರುವ ಕ್ರಮಗಳಲ್ಲಿ ಯಾವ ರೀತಿಯ ಬದಲಾವಣೆಗಳು ಆಗಿವೆ, ಆಗುತ್ತಿವೆ ಎಂಬುದನ್ನು ಚರ್ಚಿಸಬೇಕು. ಸಮಾಜದ, ಸಮುದಾಯಗಳ ಆಗುಹೋಗುಗಳು ಬರಹಾರರ ಮೇಲೆ ಯಾವ ರೀತಿಯ ಒತ್ತಡಗಳನ್ನು, ಪ್ರಭಾವಗಳನ್ನು, ಪ್ರಚೋದನೆಗಳನ್ನು ಮತ್ತು ಜವಾಬ್ದಾರಿಗಳನ್ನು ಉಂಟುಮಾಡುತ್ತಿವೆ ಎಂಬುದನ್ನು ಚರ್ಚಿಸಬೇಕು. ಈ ಹಿನ್ನೆಲೆಯಲ್ಲಿ ಸಾಹಿತ್ಯದ ನಿರೂಪಣೆ ಯಾಕೆ ತಮ್ಮ ಅಭಿವ್ಯಕ್ತಿಗಳಿಗೆ ಬೇರೆ ಬೇರೆ ದಾರಿಗಳನ್ನು ಕಂಡುಕೊಳ್ಳುತ್ತಿವೆ ಎಂಬ ಬಗ್ಗೆ ಆಲೋಚನೆ ಮಾಡಬೇಕಾಗಿದೆ.

ಸಾಹಿತ್ಯ ರಚನೆಯಾಗಲಿ, ಸಂಶೋಧನೆಯಾಗಲಿ ಕೇವಲ ಅದೊಂದು ಖಾಸಗಿ ಕೆಲಸವಾಗಿ ಉಳಿದಿಲ್ಲ. ವೈಯಕ್ತಿಕ ಜೀವನದ ಜೊತೆಗೆ ಸಮುದಾಯಗಳ ಅನಂತ ಅಲ್ಲೋಲ ಕಲ್ಲೋಲಗಳು, ತಲ್ಲಣಗಳು, ಆತಂಕಗಳು ತೀವ್ರವಾಗಿ ಬಾಧಿಸುತ್ತಿರುವಾಗ, ಸಾಹಿತ್ಯ ಅಭಿವ್ಯಕ್ತಿಗಳು ಸ್ಥಾಪಿತ ಪ್ರಕಾರಗಳ ಹಂಗು ತೊರೆಯುವುದು ಅನಿವಾರ್ಯವಾಗುತ್ತದೆ. ಜೊತೆಗೆ ಹೊಸ ಬಗೆಯಲ್ಲಿ ಅಭಿವ್ಯಕ್ತಿ ಆಗಬೇಕಾಗುತ್ತದೆ. ಇದು ಬರಹಗಾರರ ವೈಯಕ್ತಿಕ ಆಯ್ಕೆಯ ಆಚೆಗೆ ನಡೆಯುತ್ತದೆ. ‘ವಾಚಕರವಾಣಿ’ಯಂತಹ ವಿಭಾಗದಲ್ಲಿ ವರ್ತಮಾನದ ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಕ ವಿದ್ಯಮಾನಗಳ ಭಿನ್ನ ಧೋರಣೆಗಳ ವೈಚಾರಿಕ ಸಂಘರ್ಷಗಳು ನಡೆಯುತ್ತಿವೆ. ವರ್ತಮಾನದ ಹಲವು ಒತ್ತಡಗಳಿಗೆ ಅಕ್ಷರ ಮಾಧ್ಯಮದಲ್ಲಿ ಪ್ರತಿಕ್ರಿಯಿಸುವುದು ಇಂದಿನ ಅನಿವಾರ್ಯತೆಯಾಗಿದೆ. ಅದು ಯಾವುದೇ ವಿಷಯವಿರಬಹುದು. ಅದಕ್ಕೆ ಸಿದ್ಧಮಾದರಿಯ ಸಾಹಿತ್ಯ ಪ್ರಕಾರವನ್ನು ಆಯ್ಕೆಮಾಡಿಕೊಳ್ಳಲು ಬರಹಗಾರರಿಗಿಂತಲೂ ಆ ವಸ್ತುವೇ ಅದರ ಅಭಿವ್ಯಕ್ತಿ ಕ್ರಮವನ್ನು ರೂಪಿಸುತ್ತಿದೆ; ಪ್ರಭಾವಿಸುತ್ತಿದೆ.

ಸಂಶೋಧನೆಗೆ ಆಯ್ಕೆಮಾಡಿಕೊಳ್ಳುವ ಒಂದು ಸಾಹಿತ್ಯ ಪ್ರಕಾರದಲ್ಲಿ ಬೇರೆಬೇರೆ ಸಾಹಿತ್ಯ ಪ್ರಕಾರಗಳು ಬೆರೆತಿರಬಹುದು. ಪ್ರಬಂಧ ಸಾಹಿತ್ಯ ಪ್ರಕಾರವನ್ನು ಸಂಶೋಧನೆಗೆ ಆಯ್ಕೆಮಾಡಿಕೊಂಡರೆ, ಆ ಪ್ರಕಾರದ ಒಳಗೆ ಭಾವಗೀತೆ, ಜೀವನ ಚಿತ್ರಣ, ವ್ಯಕ್ತಿ ಚಿತ್ರ, ಆತ್ಮಚರಿತ್ರೆ ಈ ಪ್ರಕಾರಗಳ ತುಣುಕುಗಳನ್ನು ಶೋಧಿಸಲು, ಕಾಣಲು ಸಾಧ್ಯ. ಒಂದೇ ಪ್ರಕಾರದೊಳಗೆ ಹಲವು ಸಾಹಿತ್ಯ ಪ್ರಕಾರಗಳು ಬೆರೆತಿರುವ ಇದನ್ನು ಸಾಹಿತ್ಯದ ಅಂತರ್‌ಪ್ರಕಾರ ಎಂದು ಗುರುತಿಸಬಹುದು. ಹೀಗೆ ಗುರುತಿಸುವ ಮೂಲಕ ಅದರ ಅಭಿವ್ಯಕ್ತಿ ಮತ್ತು ವಸ್ತು ಯಾವ ಧೋರಣೆಯಲ್ಲಿ ಹಾಗೂ ಯಾವ ಆಯಾಮದಲ್ಲಿ ಭಿನ್ನವಾಗುತ್ತ ಹೋಗುತ್ತದೆ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಆ ಮೂಲಕ ಸಾಹಿತ್ಯ ಪ್ರಕಾರವೊಂದರ ವಿಸ್ತರಣಾ ಸ್ವಭಾವವನ್ನು ಸಾಂಸ್ಕೃತಿಕವಾಗಿ ಚರ್ಚಿಸಬಹುದು. ಬೇರೊಂದು ಕಡೆ ಪ್ರಸ್ತಾಪ ಮಾಡಿದ್ದನ್ನು ಇಲ್ಲಿ ಮತ್ತೆ ಉಲ್ಲೇಖಿಸಬಹುದು. ‘ಸಂಕ್ರಾಂತಿ’ ನಾಟಕವು ‘ವಡ್ಡಾರಾಧನೆ’ಯ ಕಾರ್ತಿಕ ಋಷಿ ಕಥೆಯ, ಅಗ್ನಿರಾಜನ ಕಥೆಯನ್ನು ಯಾಕೆ ಬಳಸಿಕೊಳ್ಳುತ್ತದೆ? ಇಂತಹವೇ ಹಲವು ಪ್ರಶ್ನೆಗಳನ್ನು ಸಾಹಿತ್ಯ ಪ್ರಕಾರದ ಚರ್ಚೆಯಲ್ಲಿ ಕೇಳಬೇಕಾಗುತ್ತದೆ. ಸಾಹಿತ್ಯ ಪಠ್ಯವು ಸಂಶೋಧನೆಯಲ್ಲಿ ತನ್ನ ಪ್ರಕಾರವನ್ನು ಸಮರ್ಥಿಸಲು ಮಾತ್ರ ಒತ್ತಾಯಿಸುತ್ತಿರುವುದಿಲ್ಲ. ಅದನ್ನು ಬೇರೆಬೇರೆ ಆಯಾಮಗಳಿಗೆ ವಿಸ್ತರಿಸಲೂ ಒತ್ತಾಯಿಸುತ್ತಿರುತ್ತದೆ.

* * *