ಸಾಹಿತ್ಯ ಪಠ್ಯದಲ್ಲಿ ವಸ್ತುವನ್ನು ಗುರುತಿಸುವ ಮೂಲಕವೇ ಸಂಶೋಧನೆ ಮೊದಲಾಗುತ್ತದೆ. ಸಾಹಿತ್ಯ ಪಠ್ಯದಲ್ಲಿ ವಸ್ತುವನ್ನು ಗುರುತಿಸುವುದು ಸುಲಭ ಎಂದು ತಿಳಿಯಲಾಗಿದೆ. ವಸ್ತುವನ್ನು ಗುರುತಿಸುವುದು ಎಂದರೆ ಸಾಹಿತ್ಯ ಪಠ್ಯದ ವಿವರಗಳನ್ನು ಸಂಕ್ಷಿಪ್ತಗೊಳಿಸಿ, ಸಾರಾಂಶ ರೂಪಕ್ಕೆ ತರುವುದು ಎಂದು ಭಾವಿಸಲಾಗಿದೆ. ಮಹಾಕಾವ್ಯ, ಕಾದಂಬರಿ, ನಾಟಕ ಮುಂತಾದ ಪ್ರಕಾರಗಳಲ್ಲಿ ವಸ್ತುವನ್ನು ಗುರುತಿಸುವುದು ಎಂದರೆ ಅದನ್ನು ಸರಳಗೊಳಿಸಿ, ಕಥೆಯ ಚೌಕಟ್ಟಿಗೆ ತರುವುದು ಎಂದು ತಿಳಿಯಲಾಗಿದೆ. ಆದರೆ ಸಾಹಿತ್ಯ ಸಂಶೋಧನೆಗೆ ಈ ಎರಡೂ ವಿಧಾನಗಳು ತೊಡಕಾಗಿವೆ; ಅಡ್ಡಿಯಾಗಿವೆ.

ಕುಸುಮಬಾಲೆಯನ್ನು ಕಥೆಯ ಚೌಕಟ್ಟಿಗೆ ತರಲು ಆಗುವುದಿಲ್ಲ. ಇದೇ ರೀತಿ ಭಾವಗೀತೆ, ವಚನಗಳು ಮುಂತಾದ ಸಾಹಿತ್ಯದ ಉಳಿದ ಕೆಲವು ಪ್ರಕಾರಗಳನ್ನು ಕಥೆಯ ಚೌಕಟ್ಟಿಗೆ ತರಲು ಆಗುವುದಿಲ್ಲ. ಆಗ ಅಲ್ಲಿ ಆ ಅಭಿವ್ಯಕ್ತಿಗಳಲ್ಲಿ ಮೇಲ್ನೋಟಕ್ಕೆ ತೋರುವ ಗ್ರಹಿಕೆಗಳನ್ನು ಹೇಳಿಕೆಗಳ ಹಂತಕ್ಕೆ ಇಳಿಸಲಾಗುತ್ತದೆ. ಆ ಹೇಳಿಕೆಗಳನ್ನು ಅದರ ಆಶಯಗಳು ಎನ್ನಲಾಗುತ್ತದೆ. ಆ ಆಶಯಗಳನ್ನು ಸಿದ್ಧಮಾದರಿಯ ತೀರ್ಮಾನಗಳು ಎನ್ನಬೇಕಾಗುತ್ತದೆ. ಇದನ್ನೇ ಸಂಶೋಧನೆ ಎಂದೂ ಕರೆಯಲಾಗುತ್ತದೆ.

ಕಥೆಯ ಚೌಕಟ್ಟಿಗೆ ತರುವ ವಿಧಾನ ಎಷ್ಟು ಬಲವಾಗಿ ಬೇರೂರಿದೆ ಎಂದರೆ ವಚನಗಳನ್ನು ವಚನಕಾರರ ಜೀವನ ವಿವರಗಳ ಮೂಲಕ ಗ್ರಹಿಸುವ ಕ್ರಮ ಇದೆ. ಕೆಲವು ಭಾವಗೀತೆಗಳನ್ನು ಆಯಾ ಕವಿಗಳ ಜೀವನ ವಿವರದ ಮೂಲಕ ಗ್ರಹಿಸುವ ಕ್ರಮ ಇದೆ. ಹಾಗಾಗಿ ಬರಹಗಾರರ ಜೀವನ ವಿವರದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಎಷ್ಟೋ ಸಲ ಬರಹಗಾರರ ಜೀವನ ವಿವರಗಳಿಗೂ; ಅವರ ಸಾಹತಿಯ ವಿವರಗಳಿಗೂ ತಾಳೆಯಲಾಗುವುದಿಲ್ಲ. ಇದನ್ನು ಸಂಶೋಧನೆ ತೊಡಕು, ಸಮಸ್ಯೆ ಎಂದು ಗ್ರಹಿಸಬೇಕಾಗಿದೆ. ಅದಕ್ಕಾಗಿ ಹೊಸದಾರಿಗಳನ್ನು ಕಂಡುಕೊಳ್ಳಬೇಕಾಗಿದೆ.

ಸಾಹಿತ್ಯ ಪಠ್ಯಗಳನ್ನು ಸರಳೀಕರಿಸಿ ಅವುಗಳ ವಸ್ತುವನ್ನು ಗುರುತಿಸುವ ವಿಧಾನ ಇದೆ. ಸಾಹಿತ್ಯ ಪಠ್ಯವೊಂದರ ವ್ಯಾಪ್ತಿಯಲ್ಲಿ ಬರುವ ಪಾತ್ರಗಳು, ಆ ಪಾತ್ರಗಳ ಪರಸ್ಪರ ಸಂಬಂಧಗಳು, ಸಾಹಿತ್ಯ ಪಠ್ಯವು ಪ್ರತಿನಿಧಿಸುವ ಭೌಗೋಳಿಕ ಪ್ರದೇಶ ಇತ್ಯಾದಿಗಳನ್ನು ಅವಲಂಬಿಸಿ ಇದು ಈ ಪಠ್ಯದ ವಸ್ತು ಎನ್ನಲಾಗುತ್ತದೆ. ಅದರಲ್ಲೂ ಸಾಹಿತ್ಯ ಪಠ್ಯವೊಂದು ಕಥೆಯ ರೂಪದಲ್ಲಿ ಇದ್ದರಂತೂ ಮುಗಿದೇ ಹೋಯಿತು. ಅವರ ಕಥೆಯನ್ನು ಸಂಕ್ಷಿಪ್ತಗೊಳಿಸಿ ಇದೇ ಇದರ ಸಾಹಿತ್ಯ ವಸ್ತು ಎಂದು ತೀರ್ಮಾನಿಸಲಾಗುತ್ತದೆ. ಪಠ್ಯವೊಂದರ ಕಥೆಯೇ ಅಥವಾ ಕಥೆಯ ವಿನ್ಯಾಸವೇ ಸಾಹಿತ್ಯ ಪಠ್ಯದ ವಸ್ತು ಎನ್ನುವುದಾದರೆ ಪಠ್ಯದ ಕಥನದ ವಿನ್ಯಾಸಕ್ಕೂ ಮತ್ತು ಅದರ ಕಥೆಯ ವಸ್ತುವಿಗೂ ಭಿನ್ನತೆಯೇ ಇಲ್ಲವೆಂದು ಸರಳೀಕರಿಸಿದಂತೆ ಆಗುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದಾಗ, ಸಾಹಿತ್ಯದ ವಸ್ತು ಎನ್ನುವುದನ್ನು ಪಠ್ಯವೊಂದು ಒಳಗೊಂಡಿರುವ ಸಂಗತಿಗಳ ಕ್ರಮ ಬದ್ಧವಾದ ಮೊತ್ತ ಎಂಬುದು ಇಲ್ಲಿನ ತೀರ್ಮಾನವಾಗಿದೆ. ಈ ವಿಧಾನದಲ್ಲಿ ಸಾಹಿತ್ಯ ಪಠ್ಯದ ವಸ್ತುವನ್ನು ಗುರುತಿಸುವುದನ್ನು ಮರುಪರಿಶೀಲನೆ ಮಾಡಬೇಕಾಗಿದೆ.

ಸಾಹಿತ್ಯ ಪಠ್ಯದಲ್ಲಿ ಇರುವ ವಸ್ತು: ಸಾಹಿತ್ಯ ಪಠ್ಯಗಳಲ್ಲಿ ಸಾಹಿತ್ಯಕ ವಸ್ತು ಸಿದ್ಧ ಮಾದರಿಯಲ್ಲಿ ಇರುತ್ತದೆ ಎಂದು ಭಾವಿಸಲಾಗಿದೆ; ನಂಬಲಾಗಿದೆ. ಈ ಸರಳ ನಂಬಿಕೆ ಸಂಶೋಧನೆಗೆ ಅಡ್ಡಿಯಾಗಿದೆ. ಚರಿತ್ರೆಯ ಬರವಣಿಗೆಯನ್ನು ಚರ್ಚೆಗೆ ತೆಗೆದುಕೊಳ್ಳೋಣ. ಇದರ ವಿವರಣೆಗಾಗಿ ಚರಿತ್ರೆಯ ಬರವಣಿಗೆಯಲ್ಲಿ ಅಥವಾ ಚರಿತ್ರೆಯ ಪಠ್ಯವೊಂದರಲ್ಲಿ ಅದರ ವಸ್ತು ಯಾವುದು ಎಂದು ಕೇಳಿದರೆ ಅದರಲ್ಲಿಯ ಘಟನಾವಳಿ, ಇಸವಿ ಮತ್ತು ಸಂಗತಿಗಳ ಜೋಡಣೆಯ ಕ್ರಮ ಎಂಬ ನಂಬಿಕೆ ಇದೆ. ಇದು ಚರಿತ್ರೆಯ ಪಠ್ಯವೊಂದರಲ್ಲಿ ವಸ್ತುವಿನ ಸ್ವರೂಪವನ್ನು ಗುರುತಿಸುವ ಒಂದು ವಿಧಾನ. ಆದರೆ ಅದೇ ಚರಿತ್ರೆಯ ಪಠ್ಯವೊಂದರಲ್ಲಿ ವಸ್ತುವನ್ನು ಗುರುತಿಸುವ ಇನ್ನೊಂದು ವಿಧಾನ ಕೂಡ ಸಾಧ್ಯ. ಉದಾಹರಣೆಗೆ ಎ ಎಂಬ ಚರಿತ್ರೆಯ ಪಠ್ಯದಲ್ಲಿ ರಾಜಮಹಾರಾಜರ ವಿವರಗಳು, ಯುದ್ಧದ ವಿವರಗಳು, ಅರಮನೆಗಳು, ಅವರು ಕಟ್ಟಿಸಿದ್ದ ದೇವಾಲಯಗಳ ವಿವರಗಳು ಬರುತ್ತವೆ. ಇವೇ ಆ ಪಠ್ಯದ ವಸ್ತು ಎಂದು ತೀರ್ಮಾನಿಸಬಹುದು. ಹೌದು, ಈ ವಿವರಣೆಯಲ್ಲಿ ಭಿನ್ನಾಭಿಪ್ರಾಯ ಇರಲಾರದು. ಆದರೆ ಭಿನ್ನಾಭಿಪ್ರಾಯ ಕಾಣಲು ಸಾಧ್ಯ. ಅದು ಎರಡು ರೀತಿ ಇರಲು ಸಾಧ್ಯ. ಒಂದು: ಚರಿತ್ರೆಯ ಪಠ್ಯವೊಂದರ ವಸ್ತುವಿನ ಸ್ವರೂಪವು ಆ ಕೃತಿಯಲ್ಲಿ ದಾಖಲಾಗಿರುವ ಘಟನೆಗಳು, ವಿವರಗಳು, ಇಸವಿಗಳು ಇತ್ಯಾದಿಗಳ ಕ್ರಮಬದ್ಧವಾದ ಪಟ್ಟಿ. ಆದರೆ ಅದೇ ಪಠ್ಯದಲ್ಲಿ ದಾಖಲಾಗಬೇಕಾಗಿದ್ದು, ದಾಖಲಾಗದೇ ಇರುವ ಕೆಲವು ಸಂಗತಿಗಳು ಇರಲು ಸಾಧ್ಯ. ಇದು ಮಾಹಿತಿಯ ಕೊರತೆ ಎಂಬ ತಾಂತ್ರಿಕ, ಯಾಂತ್ರಿಕ ಆಯಾಮದ ಪ್ರಶ್ನೆಯಲ್ಲ. ಬದಲಾಗಿ ನಿರೂಪಣೆಯ ಒಳಗೇ ಆ ಭಾಷಿಕ ನಿರೂಪಣೆ ಯಾವುದನ್ನು ಬಿಚ್ಚಿಡುತ್ತದೆ ಮತ್ತು ಯಾವುದನ್ನು ಮುಚ್ಚಿಡುತ್ತಿದೆ ಎಂಬುದಕ್ಕೆ ಸಂಬಂಧಿಸಿದ್ದು. ತಾಜಮಹಲನ್ನು ಕಟ್ಟಿಸಿದವನು ಶಾಹಜಹಾನ್ ಎಂದು, ವಿಧಾನ ಸೌಧವನ್ನು ಕಟ್ಟಿಸಿದವನು ಕೆಂಗಲ್ ಹನುಮಂತಯ್ಯ ಎಂದು, ಕೆಆರ್‌ಎಸ್‌ ಅನ್ನು ಕಟ್ಟಿಸಿದವರು ವಿಶ್ವೇಶ್ವರಯ್ಯ ಎಂದು ಚರಿತ್ರೆಯ ಪಠ್ಯಗಳು ಹೇಳಿವೆ. ಆದರೆ ಅದೇ ನಿರೂಪಣೆಯ ಮತ್ತೊಂದು ಮಗ್ಗುಲನ್ನು ನೋಡಬೇಕು. ತಾಜಮಹಲು, ವಿಧಾನಸೌಧ, ಕೆಆರ್‌ಎಸ್‌ ಅನ್ನು ಕಟ್ಟಿದವರು ಯಾರು? ಎಂದು. ಆಗ ಬೇರೆಯೇ ಆದ ವಾಸ್ತವ ಸಂಗತಿಗಳು ಗಮನಕ್ಕೆ ಬರುತ್ತವೆ. ಹಾಗಾದರೆ ಅದೇ ಚರಿತ್ರೆಯ ಪಠ್ಯದಲ್ಲಿ ಮುಚ್ಚಿಡಲಾಗಿರುವ ಸಂಗತಿಗಳನ್ನು ಅನಾವರಣ ಮಾಡಿದಂತೆ ಆಯಿತು. ಇದೂ ಕೂಡ ಅದೇ ಚರಿತ್ರೆಯ ಪಠ್ಯದ ಮತ್ತೊಂದು ಆಯಾಮದ ವಸ್ತು. ಪಠ್ಯದಲ್ಲಿ ಒಂದೇ ಒಂದು ವಸ್ತು ಇದೆ. ಇರುತ್ತದೆ, ಇರಬೇಕು ಎಂಬ ನಂಬಿಕೆ ಇದೆ. ಇದು ಕೇವಲ ಚರಿತ್ರೆಯ ಪಠ್ಯಕ್ಕೆ ಮಾತ್ರ ಸೀಮಿತವಾದುದಲ್ಲ. ಸಾಹಿತ್ಯ ಪಠ್ಯಗಳಲ್ಲಿಯೂ ಕೂಡ ವಸ್ತುವನ್ನು ಸಿದ್ಧಮಾದರಿಯಲ್ಲಿ ಇರುತ್ತದೆ ಎಂದೇ ನಂಬಿರುವ ಒಂದು ಕ್ರಮವಿದೆ.

ಹಾಗಾಗಿ ಪ್ರತಿಯೊಂದು ಪಠ್ಯದಲ್ಲಿಯೂ ಎಂದೆಂದಿಗೂ ಬದಲಾಗದ, ಎಲ್ಲರ ಅಧ್ಯಯನಕ್ಕೂ ಒಂದೇ ಜಡವಾದ ವಸ್ತು ಇರುತ್ತದೆ. ಅದು ಏಕೈಕ. ಅದು ಸ್ಥಿರವಾದುದು, ಸ್ಥಾವರವಾದುದು, ಜಡವಾದುದು ಆಗುವುದಿಲ್ಲ. ಅಂದರೆ ಇದುವರೆಗಿನ ಚರ್ಚೆಯ ಹಿತಾಸಕ್ತಿ ಏನೆಂದರೆ ಯಾವುದೆ ಪಠ್ಯದಲ್ಲಿ ಎಂದೆಂದಿಗೂ ಬದಲಾಗದ ಸಾಹಿತ್ಯ ವಸ್ತು ಎಂಬುದು ಇರಲು ಸಾಧ್ಯವಿಲ್ಲ; ಹಾಗೆ ಇರುವುದೂ ಇಲ್ಲ. ಹಾಗೆ ಬದಲಾಗದೆ ಇರುತ್ತದೆ ಎಂಬುದು ಸಾಂಪ್ರದಾಯಿಕ ಅಧ್ಯಯನಗಳ ನಂಬಿಕೆಯಾಗಿದೆ.

ಸಾಹಿತ್ಯ ಪಠ್ಯದಲ್ಲಿ ತೋರುವ ವಸ್ತು: ಸಾಹಿತ್ಯ ಪಠ್ಯದಲ್ಲಿ ವಸ್ತು ತೋರಿಕೆಯ ನೆಲೆಯದಾಗಿದ್ದು, ಅದನ್ನೆ ಅದರ ವಸ್ತು ಎಂದು ತೀರ್ಮಾನಿಸಲಾಗಿದೆ. ‘ಗೋವಿನ ಹಾಡ’ನ್ನು ಇಲ್ಲಿ ಚರ್ಚೆಗೆ ತೆಗೆದುಕೊಳ್ಳೋಣ. ಗೋವಿನ ಹಾಡಿನ ವಸ್ತು ಯಾವುದು ಎಂದು ಕೇಳಿದರೆ, ಅದು ಹಸು ಹಾಗೂ ಹುಲಿಯ ಸ್ವಭಾವವನ್ನು, ಆ ಮೂಲಕ ಸಮಾಜದ ಎರಡು ಬಗೆಯ ಧೋರಣೆಗಳನ್ನು, ಮೌಲ್ಯಗಳನ್ನು ವರ್ಣಿಸುವ ವಸ್ತು ಎಂದು ಹೇಳಿಬಿಡಬಹುದು. ಗೋವಿನ ಹಾಡಿನಲ್ಲಿ ಇರುವುದು ಇಷ್ಟೆ. ಒಂದು ಕಡೆ ಹುಲಿಯ ಹಿಂಸಾ ಪ್ರವೃತ್ತಿ ಮತ್ತೊಂದು ಕಡೆ ಹಸುವಿನ ತ್ಯಾಗಮಯ ಪ್ರಕೃತಿ. ಈ ಎರಡನ್ನು ಬಿಟ್ಟು ಇದರಲ್ಲಿ ಇನ್ನೇನಿದೆ ವಸ್ತು ಎನ್ನಬಹುದು. ಆದರೆ ಈ ಎರಡು ಅಂಶಗಳನ್ನು ಒಳಗೊಂಡೂ ಮೂರನೆಯದಾದ ಮತ್ತೊಂದು ವಸ್ತುವನ್ನು ಗುರುತಿಸಬಹುದು. ಅದು ಕಾಳಿಂಗ ಗೊಲ್ಲ. ಗೋವಿನ ಹಾಡಿನ ಪಠ್ಯವೇ ಹೇಳುವಂತೆ ಇದು ಹೇಳಿಕೇಳಿ ಕಾಳಿಂಗ ಗೊಲ್ಲನ ಕಥೆ. ಪಠ್ಯ ಬೆಳೆದಂತೆ ಕಾಳಿಂಗ ಗೊಲ್ಲ ಸಾಕಿದ್ದ ಹಸುಗಳ ವರ್ಣನೆಗೆ ದಾಟುತ್ತದೆ. ಮುಂದುವರಿದು ಆ ಹಸುಗಳಲ್ಲಿ ಒಂದಾದ ಪುಣ್ಯಕೋಟಿಯನ್ನು ಕೊಂದು ತಿನ್ನುವ ಹುಲಿಯೊಂದರ ವರ್ಣನೆ ಬರುತ್ತದೆ. ಪಠ್ಯದಲ್ಲಿ ಯಾವಾಗ ಹುಲಿಯ ಪ್ರವೇಶ ಅಥವಾ ಪ್ರಸ್ತಾವ ಆಯಿತೊ ಆಗ ಕಾಳಿಂಗ ಗೊಲ್ಲನ ಪಾತ್ರ ಮರೆತು ಹೋಗುತ್ತದೆ. ಹೀಗೆ ‘ಮರೆತು ಹೋಗುವಿಕೆ’ಯು ಪಠ್ಯದ ಒಳಗಿನ ಸೂಕ್ಷ್ಮದ ಹುನ್ನಾರವೊ ಅಥವಾ ಓದಬೇಕಾದ ವಿಧಾನದ ಸಮಸ್ಯೆಯೊ ಎಂಬುದನ್ನು ಚರ್ಚಿಸಬೇಕು. ಹುಲಿಯ ಪ್ರಸ್ತಾಪ ಬಂದ ತಕ್ಷಣ ಆ ಚರ್ಚೆ ಹಸು-ಹುಲಿ, ಹುಲಿ-ಹಸು ಕೇವಲ ಈ ವಿನ್ಯಾಸದಲ್ಲಿ ಮಾತ್ರವೇ ಗಿರಕಿ ಹೊಡೆಯುತ್ತದೆ. ಇದು ಬೇರೆ ಕಡೆಗೆ ಹೊರಳುವುದಿಲ್ಲ; ಓಡುವುದಿಲ್ಲ. ಗೋವಿನ ಹಾಡನ್ನು ಕುರಿತ ಬಹಳಷ್ಟು ಅಧ್ಯಯನಗಳು ಇದಿಷ್ಟನ್ನೇ ಅದರ ಮುಖ್ಯ ವಸ್ತು ಎಂದು ತೀರ್ಮಾನಿಸಿವೆ.

ಸಾಹಿತ್ಯ ಪಠ್ಯದಲ್ಲಿ ಕಾಣುವ ವಸ್ತು: ಸಾಹಿತ್ಯ ಪಠ್ಯದಲ್ಲಿ ವಸ್ತುವನ್ನು ಗುರುತಿಸುವಾಗ ಅದರ ತೋರಿಕೆಯ ನೆಲೆಯಲ್ಲಿ ವಿರಮಿಸಿದೆ, ವಸ್ತುವನ್ನು ಕಾಣುವ ಹಾಗೂ ಕಾಣುವ ಪ್ರಯತ್ನ ಮಾಡಬೇಕಾಗುತ್ತದೆ. ಕುಸುಮಬಾಲೆಯ ವಸ್ತು ಯಾವುದು ಎಂದು ಕೇಳಿದರೆ ಬಹಳ ಸುಲಭಕ್ಕೆ ‘ಇದು ಕುಸುಮಬಾಲೆಯ ವಸ್ತು’ ಎಂದು ಹೇಳಲು ಆಗುವುದಿಲ್ಲ. ಅದು ಆ ಕೃತಿಯ ರಚನೆಯ ವಿನ್ಯಾಸಕ್ಕೆ ಮತ್ತು ಅದರ ಸಂಕೀರ್ಣ ಸ್ವರೂಪಕ್ಕೆ ಸಂಬಂಧಿಸಿದುದು. ಹಾಗಾಗಿ ಕುಸುಮಬಾಲೆಯಲ್ಲಿ ಸಿದ್ಧಮಾದರಿಯ ವಸ್ತು ಮತ್ತು ತೋರಿಕೆಯ ನೆಲೆಯ ವಸ್ತು ಇಲ್ಲವೆಂದೂ ಹೇಳಬಹುದು. ಅದರಿಂದ ಕುಸುಮಬಾಲೆಯಲ್ಲಿ ಸಂಶೋಧಕರು ವಸ್ತುವನ್ನು ಶೋಧಿಸಬೇಕಾಗುತ್ತದೆ; ಕಾಣಬೇಕಾಗುತ್ತದೆ. ಈ ಕಾಣುವ ಪ್ರಯತ್ನದಲ್ಲಿ ಪಠ್ಯದ ಸಂಕೀರ್ಣ ಆಯಾಮಗಳನ್ನು, ಅದರ ಮೂಲೆಮುಡುಕುಗಳನ್ನು ತಡಕಿ ಚರ್ಚೆಯ ಚೌಕಟ್ಟಿಗೆ ತರಬೇಕಾಗುತ್ತದೆ. ಪಠ್ಯದಲ್ಲಿ ದೊಡ್ಡ ಸಂಗತಿ, ಸಣ್ಣ ಸಂಗತಿ ಎಂಬಂತೆ ವಸ್ತು ವಿನ್ಯಾಸ ಇರುವುದಿಲ್ಲ. ಕಾಣುವ ಆಯಾಮಗಳೆಲ್ಲ ಚರ್ಚೆಗೆ ಮುಖ್ಯವಾದವೇ. ಲಂಕೇಶ್ ಅವರ ‘ಸಂಕ್ರಾಂತಿ’ ನಾಟಕದಲ್ಲಿ ‘ವಡ್ಡಾರಾಧನೆ’ಯ ‘ಅಗ್ನಿರಾಜನ ಕಥೆ’ಯ ಪ್ರಸ್ತಾಪ ಬರುತ್ತದೆ. ಈ ಕಥೆಯನ್ನು ಬಿಜ್ಜಳನೂ ಉಲ್ಲೇಖ ಮಾಡುತ್ತಾನೆ. ಬಸವಣ್ಣನೂ ಉಲ್ಲೇಖ ಮಾಡುತ್ತಾನೆ. ಆದರೆ ‘ಸಂಕ್ರಾಂತಿ’ಯನ್ನು ಕುರಿತ ಅಧ್ಯಯನಗಳು ಇದನ್ನು ಸಂಕ್ರಾಂತಿಯ ವಸ್ತು ಎಂದು ಪರಿಗಣಿಸಿದಂತೆ ಕಾಣುವುದಿಲ್ಲ. ರಾವಬಹಾದ್ದೂರ ಅವರ ‘ಗ್ರಾಮಾಯಣ’ ಕಾದಂಬರಿಯ ಕೊನೆಯ ಭಾಗದಲ್ಲಿ ದಾದಾ ಇಂದುಪುರದಿಂದ ಪಾದಳ್ಳಿಗೆ ಬರುತ್ತಾನೆ. ಆದರೆ ಮಠವೂ ಸೇರಿದಂತೆ ಇಡೀ ಪಾದಳ್ಳಿ ಬಿಕೊ ಎನ್ನುತ್ತಿರುತ್ತದೆ. ಆಗ ದಾದಾನಿಗೆ ಚಿಕ್ಕಂದಿನಲ್ಲಿ ಕೇಳಿದ್ದ ಒಂದು ಕಥೆ ನೆನಪಾಗುತ್ತದೆ. ಯಾವುದೊ ಒಂದು ಊರು. ಆ ಊರ ಅರಸನ ಪಾಪದ ಫಲವಾಗಿ ಊರಿಗೂರೇ ಶಾಪಗ್ರಸ್ತವಾಗಿತ್ತಂತೆ. ಒಂದು ದಿನ ಇನ್ನೊಂದು ನಗರದ ರಾಜಕುಮಾರನೊಬ್ಬ ಈ ಊರಿಗೆ ಬಂದ. ಆಗ ಹಗಲಾಗಿತ್ತು. ಊರಲ್ಲಿ ಪೇಟೆ, ಕೋಟೆ, ತೋಟಗಳು, ಬೀದಿಗಳು, ಸೌಧಗಳು ಎಲ್ಲ ಇದ್ದವು. ಆದರೆ ಜನರೇ ಇರಲಿಲ್ಲ. ರಾಜಕುಮಾರ ಇಡೀ ದಿನ ತಿರುಗಾಡಿದ. ಒಬ್ಬರೂ ಕಾಣಬರಲಿಲ್ಲ. ಅರಮನೆಯಲ್ಲಿಯೂ ಯಾರೂ ಇರಲಿಲ್ಲವಂತೆ. ರಾಜಕುಮಾರ ಇದೆಲ್ಲವನ್ನೂ ನೋಡಿ ಬೇಸತ್ತು ಹೋದ. ಸಂಜೆಯಾಯಿತು. ಕತ್ತಲೆಯಾಯಿತು. ಊರು ಬಿಟ್ಟು ಹೋಗಬೇಕೆಂದು ರಾಜಕುಮಾರ ಅರಮನೆಯ ಹತ್ತಿರ ನಿಂತಿದ್ದವನು ಮರಳಿದ. ಕತ್ತಲೆಯಾದೊಡನೆ ಗುಡಿಗಳಿಂದ ಗಂಟೆ ಬಾರಿಸುವುದು ಕೇಳಿಸಿತಂತೆ. ಪೇಟೆಯ ತುಂಬ ದೀಪಗಳು  ಬೆಳಗುತ್ತಿದ್ದವು. ಭರದಿಂದ ವ್ಯಾಪಾರ ನಡೆದಿತ್ತು. ವೇಷಭೂಷಣಗಳಿಂದ ಅಲಂಕೃತರಾದ ಜನರು ಓಣಿಗುಂಟ ಬರುತ್ತಿದ್ದರು. ಕೋಟೆಯ ದಿಕ್ಕಿನಿಂದ ಸನ್ನೆಗಹಳೆಯ ಸಪ್ಪಳ ಕೇಳಿಬಂತು. ಅರಮನೆಯಿಂದ ಸಿಂಗರಿಸಿದ ರಥದಲ್ಲಿ ಅರಸ ಬರುತ್ತಿದ್ದ. ಅವನೆದುರು ಸಾಲಾಗಿ ಸೈನಿಕರು ಬರುತ್ತಿದ್ದರು. ರಾಜಕುಮಾರ ಆಶ್ಚರ್ಯದಿಂದ ದಂಗುಬಡಿದು ಹೋದ. ಬೀದಿಯಲ್ಲಿ ಒಬ್ಬ ಯುವಕನನ್ನು ಕಂಡು ಇದೆಲ್ಲ ಏನು? ಎಂದು ಕೇಳಿದ. ಆಗ ಆ ಯುವಕನಿಂದ ತಿಳಿದು ಬಂತು. ಆ ಊರು ಹಗಲಿನಲ್ಲಿ ಸತ್ತು ಇರುಳಿನಲ್ಲಿ ಬದುಕಿರುತ್ತಿತ್ತು. ಅರಸನ ಪಾಪವೇ ಅದಕ್ಕೆ ಕಾರಣವಾಗಿತ್ತಂತೆ. ಗ್ರಾಮಾಯಣ ತನ್ನ ಆಶಯವನ್ನು ನಿರೂಪಿಸಲು ದಾದಾ ಚಿಕ್ಕಂದಿನಲ್ಲಿ ಕೇಳಿದ್ದ ಕಥೆಯೊಂದನ್ನು ಬಳಸಿಕೊಂಡಿರುವುದನ್ನು ಇದು ಸೂಚಿಸುತ್ತಿದೆ. ವಡ್ಡಾರಾಧನೆಯನ್ನು ಕುರಿತ ಕೆಲವು ಅಧ್ಯಯನಗಳು ಅದರಲ್ಲಿ ೧೯ ಕಥೆಗಳಿವೆ ಎಂಬುದನ್ನು ಒಪ್ಪಿಕೊಂಡುಬಿಡುತ್ತವೆ. ನಂತರ ಕಥೆಗಳೊಳಗೆ ಕಥೆಗಳು ಬರುವ ಕ್ರಮವನ್ನು ಕುರಿತು ಮುಖ್ಯ ಕಥೆ, ಉಪ ಕಥೆ, ಅಡ್ಡ ಕಥೆ ಇತ್ಯಾದಿಯಾಗಿ ಅವನ್ನು ವಿಂಗಡಿಸುತ್ತಾರೆ. ಹೀಗೆ ವಿಂಗಡಿಸಲು ಕಾರಣ ಕೃತಿ ಹೇಳುತ್ತಿರುವ ೧೯ ಕಥೆಗಳು ಎಂಬುದನ್ನು ಪ್ರಶ್ನೆ ಮಾಡದೆ ಒಪ್ಪಿಕೊಂಡಿರುವುದೇ ಆಗಿದೆ. ವಿಶೇಷವೆಂದರೆ ವಡ್ಡಾರಾಧನೆಯಲ್ಲಿ ೧೯ ಕ್ಕಿಂತಲೂ ಹೆಚ್ಚು ಕಥೆಗಳಿಗೆ ಎಂದು ಹೊರಡಬೇಕು. ಆಗ ಮುಖ್ಯ ಕಥೆ, ಉಪ ಕಥೆ, ಒಳ ಕಥೆ ಇತ್ಯಾದಿ ಶ್ರೇಣೀಕರಣಗಳು ಬರುವುದಿಲ್ಲ.

ರಾಘವಾಂಕನ ‘ಹರಿಶ್ಚಂದ್ರ ಚಾರಿತ್ರ’ದಲ್ಲಿನ ಒಂದು ಸನ್ನಿವೇಶವನ್ನು ಮೇಲಿನ ಚರ್ಚೆಗೆ ಪೂರಕವಾಗಿ ಅವಲೋಕಿಸಬಹುದು. ಕಾವ್ಯದಲ್ಲಿ ಸರ್ಪ ಕಡಿದು ಲೋಹಿತಾಶ್ವ ಸತ್ತಾಗ ಅವನಿಗೆ ಚಂದ್ರಮತಿಯ ಮೂಲಕ ಶೋಕದ ತೀವ್ರತೆಯ ಮಡುವನ್ನೆ ಕೃತಿಯು ಹರಿಸುತ್ತದೆ. ಸುಮಾರು ೧೫೦ಕ್ಕೂ ಹೆಚ್ಚು ಸಾಲುಗಳ ಮಂದಾನಿಲ ರಗಳೆಯಲ್ಲಿ ಚಂದ್ರಮತಿಯ ಶೋಕ ಓತಪ್ರೋತವಾಗಿ ಹರಿಯುತ್ತದೆ. ಇಡೀ ಕಾವ್ಯದಲ್ಲಿ ಷಟ್ಪದಿಯನ್ನು ಬಿಟ್ಟು ಕವಿ ಈ ಸನ್ನಿವೇಶದ ವರ್ಣನೆಗೆ ಮಂದಾನಿಲ ರಗಳೆಯನ್ನು ಆಯ್ಕೆಮಾಡಿ ಕೊಂಡಿರುವುದು ವಿಶೇಷ. ಪ್ರಾಯಶಃ ಈ ಸನ್ನಿವೇಶದ ಭಾವತೀವ್ರತೆಯನ್ನು ಷಟ್ಪದಿಯಲ್ಲಿ ಅಭಿವ್ಯಕ್ತಿಸಲು ಸಾಧ್ಯವಾಗದು ಎಂಬ ಸಮಸ್ಯೆಯನ್ನು ಕವಿ ಎದುರಿಸಿರಬೇಕು. ಹಾಗಾಗಿಯೇ ಕವಿ ಈ ಸನ್ನಿವೇಶದ ನಿರ್ಮಾಣಕ್ಕೆ ಹೆಚ್ಚು ಕಾಳಜಿಯನ್ನು ಪ್ರಜ್ಞಾಪೂರ್ವಕವಾಗಿ ಕೇಂದ್ರೀಕರಿಸಿದ್ದಾನೆ. ಆದರೆ ಅದೇ ಕಾವ್ಯದಲ್ಲಿ ಕಾಶಿ ರಾಜನ ಮಗನ ಕೊಲೆಯ ಪ್ರಸಂಗವೊಂದು ನಿರೂಪಿತವಾಗಿದೆ. ಆ ಪ್ರಸಂಗದ ವರ್ಣನೆಗೆ ಕಾವ್ಯ ಹೆಚ್ಚು ಒತ್ತು ಕೊಡುವುದಿಲ್ಲ. ಅದಕ್ಕೆ ಈ ಕೆಳಗಿನ ಪದ್ಯವನ್ನು ಗಮನಿಸಬಹುದು.

ಹಸುಳೆಯಂ ಕದ್ದುಕೊಂಡೊಯ್ದು ನೋಯಿಸಿದ
ಕ್ಕಸಿಯ ಹಿಡಿತಂದೆವವಧರಿಸೆನಲು ಕಂಡು ಶಂ
ಕಿಸುತ ನೀನಾರೆತ್ತಣವಳೇಕೆ ಕೊಂದೆ ಸುಕುಮಾರನನೆಂದರಸನು
ಬೆಸಗೊಳಲು ದನುಜೆಯಲ್ಲಾಂ ಮನುಜೆಯಾನರ್ಧ
ವಿಷಯದಾಪೇಕ್ಷೆಯಿಂದ ಕೊಂಡೊಯ್ದು ಕೊಂದೆನೀ
ಶಿಶುವ ನೀನೊಲಿದಂತೆ ಮಾಡೆನ್ನನೆಂದಳಾ
ರಾಣಿ ವಸುಧಾಧಿಪತಿಗೆ | ೧೩೬ |

ಕಾವ್ಯವು ಲೋಹಿತಾಶ್ವನ ಆಕಸ್ಮಿಕ ಸಾವು ಮತ್ತು ಅದಕ್ಕೆ ಚಂದ್ರಮತಿಯ ಪ್ರಲಾಪವನ್ನು ಮುಂಚೂಣಿಗೆ ತರುತ್ತದೆ. ಅದನ್ನು ತೀವ್ರಗೊಳಿಸಿ ವೈಭವೀಕರಿಸುತ್ತದೆ. ಆ ತೀವ್ರತೆ ಓದುಗರ ತೀವ್ರತೆಯಾಗುವಂತೆ ಪ್ರಯತ್ನಿಸುತ್ತದೆ. ಕಾಶಿರಾಜನ ಮಗನ ಅದೇ ರೀತಿಯ ಆಕಸ್ಮಿಕ ಸಾವನ್ನು ಹಿನ್ನೆಲೆಗೆ ತಳ್ಳುತ್ತದೆ. ಕಾಶಿರಾಜನ ಮಗನ ಸಾವೂ ಕೂಡ ಲೋಹಿತಾಶ್ವನ ಸಾವಿನಷ್ಟೆ ಮುಖ್ಯವಾದುದು ಎಂಬ ಯಾವ ಇರಾದೆಯನ್ನೂ ಕಾವ್ಯ ತೋರಿಸುವುದಿಲ್ಲ. (ಚಂದ್ರಮತಿಯಿಂದ ಕೊಲೆಯಾದ ಎಂಬಂತಿರುವ) ಕಾಶಿ ರಾಜನ ಮಗನ ಸಾವು ಕೇವಲ ಅಡಿಟಿಪ್ಪಣಿಯ ರೂಪದಲ್ಲಿ, ಉದಾಹರಣೆಯ ರೀತಿಯಲ್ಲಿ ಬರುತ್ತದೆ. ಈ ಸನ್ನಿವೇಶದ ವರ್ಣನೆ ಹರಿಶ್ಚಂದ್ರ, ಚಂದ್ರಮತಿ ಮತ್ತು ಲೋಹಿತಾಶ್ವರಿಗೆ ಅಧೀನವಾಗಿ ಬರುತ್ತದೆ.

ಗೋವಿನ ಹಾಡಿನಲ್ಲಿ ಹಸು ಹುಲಿ ಮಾತ್ರ ಅದರ ವಸ್ತು ಎಂದು ಗುರುತಿಸುವುದು ಒಂದು ವಿಧಾನ. ಆದರೆ ಕಾಳಿಂಗ ಗೊಲ್ಲನ ಪಾತ್ರವನ್ನು ಅದರ ವಸ್ತು ಎಂದು ತಿಳಿಯುವುದು ಮತ್ತೊಂದು ವಿಧಾನ. ಸಾಹಿತ್ಯ ಪಠ್ಯವೊಂದರಲ್ಲಿ ವಸ್ತುವಿನ ಸ್ವರೂಪ ಜಡವಾಗಿ ಇರುವುದಿಲ್ಲ; ಅದು ನಿರಂತರವಾಗಿ ಬದಲಾಗುತ್ತಾ ಸಾಗುತ್ತದೆ. ಕಾಳಿಂಗ ಗೊಲ್ಲನು ವಸ್ತು ಯಾಕಾಗಬೇಕಾಗಿದೆ ಎಂದರೆ ಅವನೆ ಸಾಕಿರುವ ಹಸುಗಳಲ್ಲಿ ಪುಣ್ಯಕೋಟಿ ಎಂಬ ಹಸುವೊಂದು ಕಾಣೆಯಾದಾಗ, ಹುಲಿಯ ಆಹಾರಕ್ಕೆ ಬಲಿಯಾಗುವ ಸನ್ನಿವೇಶ ನಿರ್ಮಾಣವಾದಾಗ ಕಾಳಿಂಗ ಗೊಲ್ಲನ ಪಾತ್ರ ಏನಾಗಿದೆ? ಅಥವಾ ಪಠ್ಯ ಕಾಳಿಂಗ ಗೊಲ್ಲನ ಪ್ರಸ್ತಾಪವನ್ನು ಆ ಸನ್ನಿವೇಶದಲ್ಲಿ ಮುಂದಕ್ಕೆ ತರುವುದಿಲ್ಲ ಯಾಕೆ? ಪಠ್ಯವು ಕಾಳಿಂಗ ಗೊಲ್ಲನ ಹಕ್ಕನ್ನು ಆರಂಬದಲ್ಲೆ ಪ್ರಸ್ತಾಪಿಸುತ್ತದೆ. ಆದರೆ ಅವನೇ ಸಾಕಿರುವ ಪುಣ್ಯಕೋಟಿ ಎಂಬ ಹಸುವಿನ ಪ್ರಾಣಕ್ಕೆ ಕುತ್ತು ಬಂದಾಗ ಅದನ್ನು ರಕ್ಷಿಸುವ ಕರ್ತವ್ಯ ಮತ್ತು ಹೊಣೆಗಾರಿಕೆ ಅವನದಲ್ಲ ಎಂಬಂತೆ ಚಿತ್ರಿಸುತ್ತದೆ. ಆರಂಭದಲ್ಲಿ ಅಷ್ಟೆಲ್ಲಾ ವರ್ಣನೆಗಳ ಮೂಲಕ ಕಾಳಿಂಗ ಗೊಲ್ಲನನ್ನು ಹಾಡಿಹೊಗಳುವ ಆ ಹಾಡು, ಪುಣ್ಯಕೋಟಿಗೆ ಕುತ್ತು ಬಂದಾಗ ಅವನ  ಪ್ರಸ್ತಾಪವನ್ನೇ ಮಾಡುವುದಿಲ್ಲ. ಯಾಕೆ? ಪುಣ್ಯಕೋಟಿಯ ಪ್ರಾಣ ಉಳಿಸುವುದು ಅವನ ಜವಾಬ್ದಾರಿಯಲ್ಲವೆ? ಅದು ಅವನ ಕರ್ತವ್ಯ ಅಲ್ಲವೆ? ಹಾಗಾದರೆ ಗೋವಿನ ಹಾಡು ಯಾವುದನ್ನು ಬಿಚ್ಚಿಡುತ್ತಿದೆ? ಯಾವುದನ್ನು ಮುಚ್ಚಿಡುತ್ತಿದೆ? ಗೋವಿನ ಹಾಡು ಕಾಳಿಂಗ ಗೊಲ್ಲನ ಹಕ್ಕನ್ನು ಬಿಚ್ಚಿಡುತ್ತಿದೆ. ಆದರೆ ಅವನ ಕರ್ತವ್ಯವನ್ನು, ಹೊಣೆಗಾರಿಕೆಯನ್ನು ಮುಚ್ಚಿಡುತ್ತಿದೆ. ಸಾಹಿತ್ಯ ಪಠ್ಯವೊಂದು ಯಾವುದನ್ನು ಬಿಚ್ಚಿಡುತ್ತಿದೆ ಮತ್ತು ಯಾವುದನ್ನು ಮುಚ್ಚಿಡುತ್ತಿದೆ ಎಂಬುದನ್ನು ಪರಿಶೀಲನೆ ಮಾಡಬೇಕಾಗುತ್ತದೆ. ಸಾಹಿತ್ಯ ಪಠ್ಯಗಳಲ್ಲಿ ಮೇಲ್ನೋಟಕ್ಕೆ ತೋರುವ ವಸ್ತು ಒಂದಿದ್ದರೆ ಅದರ ಒಳಹೊಕ್ಕು ನಾವು ಕಂಡುಕೊಳ್ಳಬೇಕಿರುವ ವಸ್ತು ಹಲವಿರಬಹುದು.

ಸಾಹಿತ್ಯ ಪಠ್ಯದಲ್ಲಿ ವಸ್ತುವನ್ನು ಗುರುತಿಸುವ ವಿಧಾನವು ಓದುಗರ, ಸಂಶೋಧಕರ ದೃಷ್ಟಿಕೋನಕ್ಕೆ ಸಂಬಂಧಿಸಿದೆ. ಸಂಶೋಧಕರ ದೃಷ್ಟಿಕೋನಗಳಿಗೆ ಅನುಗುಣವಾಗಿ ಅದು ನಿರ್ಮಾಣವಾಗುತ್ತಾ, ಮರುನಿರ್ಮಾಣವಾಗುತ್ತ ಸಾಗುತ್ತದೆ. ಸಾಹಿತ್ಯ ಪಠ್ಯದ ವಸ್ತುವನ್ನು ಅದರ ಕರ್ತೃ ನಿರ್ಮಾಣ ಮಾಡುತ್ತಾನೆ ಎಂದು ನಂಬಲಾಗಿದೆ. ಈ ನಂಬಿಕೆ ಸರಳವಾದುದು, ಏಕಮುಖವಾದುದು. ಇದನ್ನು ಒಂದು ಹಂತದವರೆಗೆ ಒಪ್ಪಿಕೊಳ್ಳಬಹುದು. ಆದರೆ ಅದನ್ನು ಪ್ರಶ್ನಾತೀತವಾಗಿ ಒಪ್ಪಿಕೊಳ್ಳಲು ಆಗುವುದಿಲ್ಲ. ಸಾಹಿತ್ಯ ಪಠ್ಯದಲ್ಲಿ ವಸ್ತು ಎಂಬುದು ರೇಖಾಚಿತ್ರದಂತೆ ಇರುತ್ತದೆ. ಆ ರೇಖಾಚಿತ್ರಕ್ಕೆ ಬಣ್ಣ ತುಂಬುವವರು ಓದುಗರು ಇಲ್ಲವೆ ಸಂಶೋಧಕರು. ಸಂಶೋಧಕರು ತಮ್ಮ ದೃಷ್ಟಿಯ ಮೂಲಕ ರೇಖಾಚಿತ್ರಕ್ಕೆ ಬಣ್ಣ ತುಂಬುತ್ತಾರೆ; ತುಂಬಬೇಕು. ಆಗ ರೇಖಾಚಿತ್ರ ಮತ್ತೊಂದು ಆಕಾರವನ್ನು, ಮತ್ತೊಂದು ರೂಪವನ್ನು, ಮತ್ತೊಂದು ಆಯಾಮವನ್ನು ಪಡೆಯಬಲ್ಲದು, ಪಡೆಯಬೇಕು. ಆಗಲೆ ಪಠ್ಯವಸ್ತುವಿನ ಸ್ವರೂಪ ಪೂರ್ಣವಾಗುವುದು. ಇದನ್ನು ಬಿಟ್ಟು ಯಾವುದೇ ಸಾಹಿತ್ಯಕ ಪಠ್ಯದಲ್ಲಿ ಅದರ ವಸ್ತು ಎಂಬುದು ಎಂದೆಂದೂ ಬದಲಾಗದಂತೆ, ನಿಂತ ನೀರಿನಂತೆ ನಿಂತಿರುತ್ತದೆ ಎಂದು ಹೇಳಿದರೆ ಅದು ಏನನ್ನೂ ಹೇಳಿದಂತೆ ಆಗುವುದಿಲ್ಲ. ಹಾಗಾಗಿ ಸಂಶೋಧನೆಯಲ್ಲಿ ಸಾಹಿತ್ಯದ ವಸ್ತುವನ್ನುಗ ಗುರುತಿಸುವುದು ಬಹಳ ಮುಖ್ಯವಾದ ಕೆಲಸ. ಪಠ್ಯದಲ್ಲಿ ಮೊದಲ ಹಂತದಲ್ಲಿ ತೋರುವುದು ಸಮಾಜ ಒಪ್ಪಿರುವ ಸ್ವರೂಪದ ವಸ್ತು. ಆದರೆ ಅದನ್ನೆ ಅದರ ಪೂರ್ಣ ಪ್ರಮಾಣದ ವಸ್ತು ಎಂದು ತೀರ್ಮಾನಿಸಿದರೆ ಅದು ಪಾರ್ಶ್ವಿಕವಾಗುತ್ತದೆ, ಸರಳೀಕರಣವಾಗುತ್ತದೆ. ಹಾಗಾಗಿ ಪಠ್ಯದ ಸಂಕೀರ್ಣತೆಯನ್ನು, ಅದರ ಚಲನಶೀಲತೆಯನ್ನು ಗಮನಿಸಬೇಕು.