ಮುದ್ರಣವಾದ ಸಾಹಿತ್ಯ ಅಥವಾ ಸಾಹಿತ್ಯಕ ಪಠ್ಯ ಪ್ರಸಾರವಾಗಬೇಕು. ಅದು ಪ್ರಸಾರವಾಗದ ಹೊರತು ಅದು ಓದಿಗೆ ಮತ್ತು ಸಂಶೋಧನೆಗೆ ಒಳಗಾಗುವುದಿಲ್ಲ. ಹಾಗಾಗಿ ಸಾಹಿತ್ಯ ಪಠ್ಯಗಳ ನಿರ್ಮಾಣಕ್ಕೂ ಮತ್ತು ಅವುಗಳ ಮುದ್ರಣಕ್ಕೂ; ಅವುಗಳ ಮುದ್ರಣಕ್ಕೂ ಮತ್ತು ಅವುಗಳ ಪ್ರಸಾರಕ್ಕೂ ನೇರವಾದ ಸಂಬಂಧವಿದೆ. ಮತ್ತು ಈ ಸಂಬಂಧವನ್ನು ಸರಳ ರೇಖೆಯ ಹಾಗೆ ಮೊದಲು ಸಾಹಿತ್ಯದ ನಿರ್ಮಾಣ, ನಂತರ ಅವುಗಳ ಮುದ್ರಣ, ಆ ನಂತರ ಅವುಗಳ ಪ್ರಸಾರ ಎಂದು ತಿಳಿಯಬೇಕಾಗಿಲ್ಲ. ಈ ಕ್ರಮ ಹಿಂದುಮುಂದು ಕೂಡ ಆಗಬಹುದು. ಅಂದರೆ ಪ್ರಸಾರ ಮಾಡುವ ಸಲುವಾಗಿ ಮುದ್ರಿಸಿರಬಹುದು. ಮುದ್ರಿಸುವ ಸಲುವಾಗಿ ನಿರ್ಮಾಣ ಮಾಡಬಹುದು. ಒಟ್ಟು ಈ ಪ್ರಕ್ರಿಯೆಯಲ್ಲಿ ಒಂದರ ಮೇಲೆ ಒಂದು ನಡೆಯುತ್ತವೆ ಎಂದು ಹೇಳಲು ಬರುವುದಿಲ್ಲ. ಇದರ ಹಾಗೆಯೆ ಬರೆದಂತಹ ಕೃತಿಗಳೆಲ್ಲ ಪ್ರಕಟವಾಗುತ್ತವೆ ಎನ್ನಲು ಬರುವುದಿಲ್ಲ. ಜೊತೆಗೆ ಪ್ರಕಟವಾದವೆಲ್ಲ ಪ್ರಸಾರ ಆಗುತ್ತವೆ ಎನ್ನಲು ಬರುವುದಿಲ್ಲ. ಪ್ರಸಾರ ಆದ ಕೃತಿಗಳೆಲ್ಲ ಸಂಶೋಧನೆಗೆ ಒಳಗಾಗುತ್ತವೆ ಎನ್ನಲು ಬರುವುದಿಲ್ಲ.

ಸಾಹಿತ್ಯದ ಪ್ರಸಾರಕ್ಕೂ ಮತ್ತು ಅದರ ಮಾರುಕಟ್ಟೆಗೂ ನೇರವಾದ ಸಂಬಂಧವಿದೆ. ಲೇಖಕರಿಗೂ ಮತ್ತು ಮಾರುಕಟ್ಟೆಗೂ ನೇರವಾದ ಸಂಬಂಧವಿದೆ. ಅಷ್ಟು ಮಾತ್ರವಲ್ಲ. ಮಾರುಕಟ್ಟೆಗೂ ಮತ್ತು ಸಂಶೋಧನೆಗೂ ಸಂಬಂಧವಿದೆ. ಮಾರುಕಟ್ಟೆಯ ಲಾಭ ನಷ್ಟಗಳನ್ನು ನೋಡಿಕೊಂಡು ಸಾಹಿತ್ಯ ವಿಮರ್ಶೆ ನಡೆಯುತ್ತದೆ. ಇದನ್ನೆ ಬೇರೆ ಮಾತುಗಳಲ್ಲಿ ಹೇಳುವುದಾದರೆ ಸಾಹಿತ್ಯವನ್ನು ಮುದ್ರಣ ಮಾಡುವ ಪ್ರಕಾಶನ ಸಂಸ್ಥೆಗಳಿಗೂ ಮತ್ತು ಅದನ್ನು ಕುರಿತ ಸಂಶೋಧನೆಗೂ ಕೆಲವು ಸಲ ನೇರ ಸಂಬಂಧ ಏರ್ಪಡುವುದುಂಟು.

ಒಂದು ಕಡೆ ಸಾಹಿತ್ಯದ ನಿರ್ಮಾಣ ನಡೆದರೆ ಮತ್ತೊಂದು ಕಡೆ ಅದನ್ನು ಪ್ರಕಟಿಸುವ ಕೆಲಸವೂ ನಡೆಯಬೇಕು. ಇದು ಸಾಮಾನ್ಯ ತರ್ಕ. ಒಂದು ಕಾಲದಲ್ಲಿ ಬರೆಯಲ್ಪಟ್ಟ ಸಾಹಿತ್ಯವೆಲ್ಲ ಪ್ರಕಟವಾಗಲು ಅನೇಕ ಸಮಸ್ಯೆಗಳಿದ್ದವು. ಒಂದು ಕಾಲದಲ್ಲಿ ಪ್ರಕಾಶನ ಸಂಸ್ಥೆಗಳು ಕಡಿಮೆ ಇದ್ದವು. ಪ್ರಕಟಿಸಿದ ಪುಸ್ತಕಗಳನ್ನು ಮಾರಾಟ ಮಾಡುವುದು ಪ್ರಕಾಶಕರಿಗೆ ಸಂಕಟದ ಕೆಲಸವಾಗಿತ್ತು. ಆದರೆ ಇಂದು ಸಾಹಿತ್ಯದ ಪ್ರಕಟಣೆ ಮತ್ತು ಮಾರಾಟದ ಪ್ರಕ್ರಿಯೆ ಸಾಹಿತ್ಯ ನಿರ್ಮಾಣದ ಪ್ರಮಾಣವನ್ನು ನಾಚಿಸುವ ಗಾತ್ರದಲ್ಲಿ ಬೆಳೆದಿದೆ; ಬೆಳೆಯುತ್ತಲೆ ಇದೆ. ಕನ್ನಡದಲ್ಲಿ ಒಂದು ದಿನಕ್ಕೆ ಸರಾಸರಿ ೨೦ ಪುಸ್ತಕಗಳು ಪ್ರಕಟವಾಗುತ್ತವೆ ಎಂಬ ಒಂದು ಅಂದಾಜಿದೆ. ಈ ಅಂಕಿಸಂಕಿ ಏನೇ ಇದ್ದರೂ ಸಾಹಿತ್ಯದ ಪ್ರಕಟಣೆಗೂ ಮತ್ತು ಅದನ್ನು ಕುರಿತ ಸಂಶೋಧನೆಗೂ ನೇರವಾದ ಸಂಬಂಧವಿದೆ ಎಂಬುದನ್ನು ಗಮನಿಸಬೇಕು.

ಸಾಹಿತ್ಯ ಪ್ರಸಾರಕ್ಕೆ ಇನ್ನೊಂದು ಆಯಾಮವಿದೆ. ಕೆಲವು ಸ್ಥಾಪಿತ ಐಡಿಯಾಲಜಿಗಳನ್ನು ಸಮಾಜದ ವಿವಿಧ ಜನರಲ್ಲಿ ಹರಿಯಬಿಟ್ಟು ಅವುಗಳನ್ನು ಮತ್ತಷ್ಟು ಗಟ್ಟಿಗೊಳಿಸಿ, ನಂಬಿಸಿ, ಒಪ್ಪಿಸಿ, ಅವುಗಳನ್ನು ಸಾರ್ವಕಾಲಿಕ ಮೌಲ್ಯಗಳನ್ನು ಎಂದು ವರ್ಣಿಸುವ ಚರ್ಚೆ ಸಂವಾದಗಳು ನಡೆಯುತ್ತಿರುತ್ತವೆ. ಕೆಲವು ಕಾರ್ಯಕ್ರಮಗಳಲ್ಲಿ ಕೆಲವು ಸ್ಥಾಪಿತ ಐಡಿಯಾಲಜಿಗಳನ್ನು ಪ್ರಸಾರ ಮಾಡುವ ಸಲುವಾಗಿ ಸಾಹಿತ್ಯ ಪಠ್ಯಗಳ ಉಲ್ಲೇಖಗಳನ್ನು ಅನಾಮತ್ತಾಗಿ ಬಳಸಿಕೊಳ್ಳಲಾಗುತ್ತದೆ. ಗೋವಿನ ಹಾಡು, ಜನಪದ ತ್ರಿಪದ ಇವನ್ನು ಬಳಸಿಕೊಳ್ಳಲಾಗುತ್ತದೆ. ವಚನಗಳನ್ನು, ಮಂಕುತಿಮ್ಮನ ಕಗ್ಗವನ್ನು, ಆಧುನಿಕ ಕನ್ನಡ ಕವನಗಳನ್ನು ಬಳಸಿಕೊಳ್ಳಲಾಗುತ್ತದೆ. ವಾಸ್ತವವಾಗಿ ತಮ್ಮ ಸ್ಥಾಪಿತ ಐಡಿಯಾಲಜಿಯೇ ಅಲ್ಲಿ ಅಂತಿಮ ಅಸ್ತ್ರ. ಅದನ್ನು ಪರಿಚಯಿಸಲು ಮಾತ್ರ ಸಾಹಿತ್ಯದ ಉಲ್ಲೇಖವನ್ನು ಬಳಸಲಾಗುತ್ತದೆ. ಈ ಬಗೆಯ ಸಾಹಿತ್ಯ ಪ್ರಸಾರದಲ್ಲಿ ನೈತಿಕ ಮೌಲ್ಯಗಳು ಮೇಲುಗೈ ಪಡೆದಿರುತ್ತವೆ. ಸಮಾಜದಲ್ಲಿ ನೈತಿಕ ಮೌಲ್ಯಗಳು ಮೇಲಿನವರು ಕೆಳಗಿನವರಿಗೆ ಉಪದೇಶ ಮಾಡುವ ರೂಪದಲ್ಲಿ ಇರುತ್ತವೆ. ಮೇಲು ಜಾತಿಯವರು ಕೆಳಜಾತಿಯವರಿಗೆ, ಪುರುಷರು, ಮಹಿಳೆಯರಿಗೆ, ತಂದೆ ತಾಯಿಗಳು ಮಕ್ಕಳಿಗೆ, ಶ್ರೀಮಂತರು ಬಡವರಿಗೆ, ಅಧ್ಯಾಪಕರು ವಿದ್ಯಾರ್ಥಿಗಳಿಗೆ, ಗುರುಗಳು ಶಿಷ್ಯರಿಗೆ, ಆಳುವವರು ಆಳಿಸಿಕೊಳ್ಳುವವರಿಗೆ ಹೀಗೆ ಇದರ ವಿನ್ಯಾಸ ಇದೆ.  ಈ ಬಗೆಯ ಸಾಹಿತ್ಯ ಹೆಚ್ಚು ಪ್ರಮಾಣದಲ್ಲಿ ಮುದ್ರಣವಾಗುತ್ತಿದೆ.

ಸಾಹಿತ್ಯ ಪ್ರಸಾರದ ಪ್ರಕ್ರಿಯೆ ಸಮುದಾಯಗಳಲ್ಲಿಯೂ ಇದೆ. ಆದರೆ ಅದು ಅಲ್ಲಿ ಇನ್ನೂ ಮಾರುಕಟ್ಟೆಯ ಏಕೈಕ ಲಾಭದ ಗುರಿಯನ್ನು ಹೊಂದಿಲ್ಲ. ಸಮಾಜಕ್ಕೆ ಅರಿವು ಉಂಟುಮಾಡಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ಇಲ್ಲವೆ ನೈತಿಕ ಸಂದೇಶವನ್ನು ಹೇಳಬೇಕು ಎಂಬ ಉದ್ದೇಶದಲ್ಲಿ ಸಾಹಿತ್ಯ ಪ್ರಸಾರ ಮಾಡುವುದಿದೆ. ಸಾಮಾಜಿಕ ಅಸಮಾನತೆ ಮತ್ತು ಶೋಷಣೆಗಳ ಬಗ್ಗೆ ಶೋಷಿತರಿಗೆ ಜಾಗೃತಿ ಮೂಡಿಸಲು ಹಾಗೂ ಅವರನ್ನು ಸಂಘಟಿಸಿ ಹೋರಾಟಕ್ಕೆ ಸಿದ್ಧಗೊಳಿಸುವ ಉದ್ದೇಶದಿಂದ ಸಾಹಿತ್ಯ ಪ್ರಸಾರ ಮಾಡುವುದಿದೆ. ಅದು ಹೋರಾಟದ ಹಾಡುಗಳು, ಕ್ರಾಂತಿ ಗೀತೆಗಳು ಇರಬಹುದು ಇಲ್ಲವೆ ವೈಚಾರಿಕ ಸಾಹಿತ್ಯವೂ ಇರಬಹುದು.