ಸಾಹಿತ್ಯ ಸಂಶೋಧನೆಯಲ್ಲಿ ಅಸ್ಪೃಶ್ಯತೆ ಮತ್ತು ಜಾತಿ ಇವುಗಳ ಬಗ್ಗೆ ಸಾಕಷ್ಟು ಚರ್ಚೆ ನಡೆದಿವೆ; ನಡೆಯುತ್ತಲೂ ಇದೆ. ಇಂತಹ ಅಧ್ಯಯನಗಳ ತಾತ್ವಿಕ ಸಮಸ್ಯೆಗಳು ಮತ್ತು ಸಾಧ್ಯತೆಗಳು ಯಾವುವು ಎಂಬುದನ್ನು ಈ ಭಾಗದಲ್ಲಿ ಚರ್ಚಿಸಲಾಗುವುದು. ಅನಾದಿ ಕಾಲದಿಂದಲೂ ಕನ್ನಡ ಸಾಹಿತ್ಯ ಈ ಸಂಗತಿಗಳನ್ನು ನಿರೂಪಿಸುತ್ತ, ಅಭಿವ್ಯಕ್ತಿ ಸುತ್ತಾ ಬಂದಿದೆ. ಇವುಗಳ ನಿರೂಪಣೆ ಬಹುಶಃ ಎಲ್ಲಾ ಸಾಹಿತ್ಯವನ್ನು ವ್ಯಾಪಿಸಿಕೊಂಡಿದೆ ಎನ್ನಬಹುದು. ಸಾಹಿತ್ಯ ತನ್ನ ವಸ್ತುವಿಗೆ, ಅನುಭವಕ್ಕೆ ಮತ್ತು ನಿರೂಪಣೆಗೆ ಸಂಬಂಧಿಸಿ ಅಸ್ಪೃಶ್ಯತೆ ಮತ್ತು ಜಾತಿಯ ಸಂಗತಿಗಳನ್ನು ಯಾಕೆ ಆಯ್ಕೆಮಾಡಿಕೊಂಡಿತು ಎಂಬ ಪ್ರಶ್ನೆಯನ್ನು ಕುತೂಹಲಕಾರಿಯಾಗಿ ಕೇಳಬಹುದಾದರೂ ಉತ್ತರ ಅಷ್ಟು ಸರಳವಿಲ್ಲ. ಇವುಗಳ ಆಯ್ಕೆಯು ಕೃತಿಕಾರರ ಪ್ರಜ್ಞಾಪೂರ್ವಕ ನೆಲೆಯದೊ, ಕೃತಿ ಮೈದಾಳುವ ಚಾರಿತ್ರಿಕ ಸಂದರ್ಭದ ಒತ್ತಡದ ಫಲವೊ ಎಂಬುದಾಗಿ ಈ ಪ್ರಶ್ನೆಯನ್ನು ಎರಡು ಭಾಗ ಮಾಡಬಹುದು. ಕೃತಿಕಾರರ ಆಯ್ಕೆ ಎನ್ನುವುದಾದರೆ ಅದು ಕೃತಿಕಾರರ ನೇರ ಅನುಭವದಿಂದ ಬಂದುದೊ, ಸಾಮಾಜಿಕ ಅಪೇಕ್ಷೆ ಮತ್ತು ಸಾಮಾಜಿಕ ಹಿತಾಸಕ್ತಿಯಿಂದ ಬಂದುದೊ, ಚಾರಿತ್ರಿಕ ಸಂದರ್ಭದ ಒತ್ತಡದ ಸ್ವರೂಪ ಯಾವುದು ಎಂಬುದಾಗಿ ಈ ಪ್ರಶ್ನೆಯನ್ನು ವಿಸ್ತರಿಸಬಹುದು. ಅಸ್ಪೃಶ್ಯತೆ ಮತ್ತು ಜಾತಿಗೆ ಸಂಬಂಧಿಸಿದಂತೆ ಸಾಹಿತ್ಯ ಪಡೆಯುವ ಪ್ರೇರಣೆ ಯಾವ ರೀತಿಯದು ಎಂಬುದನ್ನೂ ಪರಿಶೀಲಿಸಬಹುದು. ಸಾಮಾಜಿಕ ಚಲನಶೀಲತೆಯನ್ನು ನಿರೂಪಿಸಲು, ಅದನ್ನೊಂದು ಅನುಭವವಾಗಿ ಅಭಿವ್ಯಕ್ತಿಸಲು, ಉಪಮೆ, ರೂಪಕಗಳನ್ನು ರೂಪಿಸಲು, ಸಾಮಾಜಿಕ ಸಾಂಸ್ಕೃತಿಕ ಸ್ಥಾಪಿತ ಮೌಲ್ಯಗಳನ್ನು ನಿರೂಪಿಸಲು, ಈ ಮೌಲ್ಯಗಳನ್ನು ಪಲ್ಲಟ ಮಾಡಲು, ಸಾಮಾಜಿಕ ಸಂಬಂಧಗಳ ನಿಗೂಢಗಳನ್ನು ಶೋಧಿಸಲು, ತೋರಿಕೆಯ ಮಾನವ ಸ್ವಭಾವಗಳನ್ನು ಭೇದಿಸಲು, ಸಾಮಾಜಿಕ ಇರುವಿಕೆಯನ್ನು ಅದರೆಲ್ಲ ಸೂಕ್ಷ್ಮ ಸಂಕಟಗಳ ಮುಖಾಂತರ ಅಭಿವ್ಯಕ್ತಿಸಲು, ಸಾಮಾಜಿಕ ಆಗುವಿಕೆಯ ಸಾಧ್ಯತೆಯನ್ನು ನಿರೂಪಿಸಲು, ಸಾಮಾಜಿಕ ಆಶಯಗಳನ್ನು ಮಂಡಿಸಲು, ಸ್ಥಾಪಿತ ಸಾಮಾಜಿಕ ಧೋರಣೆಗಳನ್ನು ಪಲ್ಲಟ ಮಾಡಲು ಹೀಗೆ ಇದರ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಅಸ್ಪೃಶ್ಯತೆ ಮತ್ತು ಜಾತಿಯ ಯಾವ ಮಗ್ಗುಲನ್ನು, ಯಾವ ಮುಖವನ್ನು ಸಾಹಿತ್ಯ ಆಯ್ಕೆ ಮಾಡಿಕೊಳ್ಳುತ್ತದೆ ಎಂಬುದನ್ನು ಸ್ಪಷ್ಟಮಾಡಿಕೊಳ್ಳಬೇಕು. ಅಸ್ಪೃಶ್ಯತೆ ಮತ್ತು ಜಾತಿಗಳ ಹುಟ್ಟು ಬೆಳವಣಿಗೆ, ಅವುಗಳ ಸಾಮಾಜಿಕ ಸಂಬಂಧಗಳು, ಅವುಗಳ ತೋರಿಕೆಯ ನೆಲೆಗಳು, ಅವು ಬಿಚ್ಚಿಕೊಳ್ಳುವ ಮುಚ್ಚಿಕೊಳ್ಳುವ ಆಯಾಮಗಳು, ಅವುಗಳ ಕೀಳರಿಮೆ ಮೇಲರಿಮೆ, ಜೀವನ ಶೈಲಿ, ಸೌಂದರ್ಯ ಪ್ರಜ್ಞೆ, ಸಾಂಸ್ಕೃತಿಕ ವಿನ್ಯಾಸ, ರಾಜಕೀಯ ಆಶಯ ಇವುಗಳಲ್ಲಿ ಸಾಹಿತ್ಯವು ಯಾವುದನ್ನು ತನ್ನ ವಸ್ತು ಅಭಿವ್ಯಕ್ತಿಗೆ ಆಯ್ಕೆ ಮಾಡಿಕೊಳ್ಳುತ್ತದೆ ಎಂಬುದನ್ನು ಬಿಡಿಸಿ ನೋಡಬೇಕು. ಈ ಪ್ರಶ್ನೆಯನ್ನು ಹೇಗೆ ವಿಸ್ತರಿಸುತ್ತೇವೊ ಅದಕ್ಕೆ ಅನುಗುಣವಾಗಿ ಅದರ ಅಧ್ಯಯನದ ತಾತ್ವಿಕ ಚೌಕಟ್ಟು ನಿರ್ಮಾಣವಾಗುತ್ತಾ ಹೋಗುತ್ತದೆ. ಅಕಡೆಮಿಕ್ ಚರ್ಚೆಗಳಲ್ಲಿ ಎದುರಾಗುವ ಪ್ರಶ್ನೆಗಳ ಸ್ವರೂಪ ಮತ್ತು ಸ್ವಭಾವಗಳನ್ನು ತಾತ್ವಿಕವಾಗಿ ವಿಸ್ತರಿಸಿಕೊಳ್ಳದಿದ್ದರೆ ಚರ್ಚೆಯನ್ನು ಶುರುಮಾಡಲು ಕಷ್ಟವಾಗುತ್ತದೆ.

ಅಸ್ಪೃಶ್ಯತೆ ಮತ್ತು ಜಾತಿ ಇವುಗಳನ್ನು ಚರ್ಚೆ ಮಾಡಲು ಸಾಹಿತ್ಯೇತರ ಚೌಕಟ್ಟುಗಳು ಸಾಕಷ್ಟಿವೆ. ಮಾನವಶಾಸ್ತ್ರ, ಸಮಾಜಶಾಸ್ತ್ರ ಮೊದಲಾದ ಜ್ಞಾನಶಿಸ್ತುಗಳಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ; ನಡೆಯುತ್ತಿವೆ. ಇದಲ್ಲದೆ ಸಾರ್ವಜನಿಕ, ರಾಜಕೀಯ ಮತ್ತು ವೈಚಾರಿಕ ವಲಯದಲ್ಲಿಯೂ ಇವುಗಳ ಚರ್ಚೆಯು ದಿನನಿತ್ಯದ ಭಾಗವಾಗಿದೆ. ಹಾಗಾಗಿ ಇವೆರಡನ್ನೂ ಒಟ್ಟಾಗಿ ಸಾಹಿತ್ಯೇತರ ವಲಯ ಎಂದು ಕರೆಯಬಹುದು. ಈ ವಲಯದಲ್ಲಿ ಅಸ್ಪೃಶ್ಯತೆ ಮತ್ತು ಜಾತಿಯನ್ನು ಸಮಸ್ಯೆಗಳು ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಆ ಸಮಸ್ಯೆಗಳನ್ನು ಹೋಗಲಾಡಿಸುವುದು ಹೇಗೆ ಎಂದು ಆಲೋಚಿಸಲಾಗುತ್ತದೆ. ದಿನನಿತ್ಯ ಅಸ್ಪೃರ್ಶಯತೆ ಮತ್ತು ಜಾತಿಯ ನೆಲೆಗಳು ಬೇರೆಬೇರೆ ಆಯಾಮಗಳನ್ನು, ತಿರುವುಗಳನ್ನು ಪಡೆಯುತ್ತಿರುವುದನ್ನು ಗಮನಿಸಲಾಗುತ್ತದೆ. ಅಸ್ಪೃಶ್ಯತೆಯ ಆಚರಣೆ ನಡೆದುದನ್ನು ಗುರುತಿಸಿ ಅದರ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತದೆ. ಸರಕಾರ, ಆಡಳಿತ ಮುಂತಾದುವುಗಳಿಗೆ ಹಕ್ಕೊತ್ತಾಯ ಪತ್ರ ಕೊಡಲಾಗುತ್ತದೆ. ಜಾತಿಯ ಅಸಮಾನತೆಯ ಸ್ತರಗಳನ್ನು ಸಾಮಾಜಿಕವಾಗಿ ಗುರುತಿಸಲಾಗುತ್ತದೆ. ಆ ಮೂಲಕ ಹಿಂದುಳಿದ ಜಾತಿಗಳು ಮತ್ತು ಮುಂದುವರಿದ ಜಾತಿಗಳು ಎಂದು ವಿಭಾಗ ಮಾಡಲಾಗಿದೆ. ಸರಕಾರ ಜಾತಿ ಸ್ತರಗಳನ್ನು ಗುರುತಿಸಿ ಅವುಗಳನ್ನು ಆಧರಿಸಿ ಕೆಲವು ಯೋಜನೆಗಳನ್ನು ಹಾಕಿಕೊಂಡಿದೆ. ಜಾರಿಗೊಳಿಸದ ಆ ಯೋಜನೆಗಳ ಹೆಸರು ಕೇಳಿ, ಕೆಲವು ಸಮುದಾಯಗಳು ತಮ್ಮ ಜಾತಿ/ಕೋಮನ್ನು ಇಂತಹ ಜಾತಿಯ ಪಟ್ಟಿಯಲ್ಲಿ ಸೇರಿಸಿ ಎಂದು ಒತ್ತಾಯ ಮಾಡುತ್ತಿವೆ. ಅಸ್ಪೃಶ್ಯತೆ ಮತ್ತು ಜಾತಿ ಆಚರಣೆಗೆ ಸಂಬಂಧಿಸಿ ಸಂವಿಧಾನದಲ್ಲಿ ಕೆಲವು ಸೂಚನೆಗಳನ್ನು ಕೊಡಲಾಗಿದೆ. ಜಾತಿಗಳ ಹೆಸರಿನಲ್ಲಿ ಹಲವು ಸಂಘಟನೆ, ಹೋರಾಟಗಳೂ ನಡೆದಿವೆ. ಜಾತಿಗಳ ಹೆಸರಿನಲ್ಲಿ ಸರಕಾರಿ ಸವಲತ್ತುಗಳನ್ನು ಪಡೆಯಲಾಗುತ್ತದೆ ಎಂಬ ಅಭಿಪ್ರಾಯ ಒಂದು ಕಡೆ. ಕೆಳಜಾತಿಗಳಿಗೆ ತೆಗೆದಿಡುವ ಹಣವನ್ನು ನಿಗದಿ ಮಾಡಿದ ಯೋಜನೆಗಳಿಗೆ ಖರ್ಚು ಮಾಡುವುದಿಲ್ಲ ಎಂಬ ವಾಸ್ತವ ಮತ್ತೊಂದು ಕಡೆ. ಶಿಕ್ಷಣ, ಸರಕಾರಿ ನೌಕರಿಗಳ ನೇಮಕಾತಿ, ಚುನಾವಣೆ ಮುಂತಾದ ಕಡೆ ಜಾತಿಯನ್ನು ಒಂದು ಮಾನದಂಡವೆಂದು ಪರಿಗಣಿಸಲಾಗಿದೆ. ಆಯಾ ಜಾತಿಗಳಿಗೆ ಇಂತಿಷ್ಟು ಅವಕಾಶ ಎಂದು ಹಂಚಲಾಗಿದೆ. ರಾಜಕೀಯ ಮತ್ತು ಆರ್ಥಿಕ ಸಮಸ್ಯೆಗಳಿಗೆ ಜಾತಿಯ ಬಣ್ಣ ಬಳಿಯುತ ತಂತ್ರ ಕೂಡ ನಡೆಯುತ್ತಿದೆ. ಕೆಳಜಾತಿಗಳನ್ನು ಜಾತಿ ಪೂರ್ವಗ್ರಹದಿಂದಲೆ ನೋಡಲಾಗುತ್ತಿದೆ. ಈ ದೃಷ್ಟಿಕೋನ ಕೆಳಜಾತಿಗಳಿಗೆ ಅಪಮಾನವನ್ನು ಉಂಟುಮಾಡಿದೆ. ಇದರ ಬಗ್ಗೆ ಪ್ರಜ್ಞಾಪೂರ್ವಕವಾಗಿ ಗಮನ ಕೊಟ್ಟವರು ಬೇರೆಬೇರೆ ನೆಲೆಗಳಲ್ಲಿ ಅದನ್ನು ವಿರೋಧಿಸುತ್ತಲೆ ಬರುತ್ತಿದ್ದಾರೆ. ಒಂದು ಕಡೆ ಅದನ್ನು ವಿರೋಧ ಮಾಡಿದಷ್ಟೂ, ಅಪಮಾನಿಸುವ, ತುಳಿಯುವ, ದಮನಿಸುವ ಮತ್ತು ಅವಕಾಶ ಹಾಗೂ ಸಂಪನ್ಮೂಲಗಳನ್ನು ಕಿತ್ತುಕೊಳ್ಳುವ ತಂತ್ರಗಳು ಹಾಗೇ ಸಾಗಿವೆ. ಸಾಮಾಜಿಕ ಅಸಮಾನತೆಯನ್ನು ಆಳುವ ವರ್ಗ ತನ್ನ ಹಿತಾಸಕ್ತಿಗೆ ಪೂರಕವಾಗಿ ಬಳಸಿಕೊಳ್ಳುತ್ತ, ಮುಂದುವರಿಸುತ್ತ ಬರುತ್ತಿದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಕೆಳಜಾತಿಗಳಿಗೆ ಚಾರಿತ್ರಿಕವಾಗಿ ಮೂಡಿದ ಸಾಮಾಜಿಕ ಎಚ್ಚರ ಅವರಲ್ಲಿ ಸ್ವಾಭಿಮಾನವನ್ನು ಹುಟ್ಟುಹಾಕಿದೆ. ಈ ಬೆಳವಣಿಗೆಯು ಮೇಲುಜಾತಿಗಳಿಗೆ ನುಂಗಲಾರದ ತುತ್ತಾಗಿದೆ. ಒಂದು ಕಾಲದಲ್ಲಿ ಸಾಮಾಜಿಕ ದೌರ್ಜನ್ಯಗಳು ಸಾಂಪ್ರದಾಯಿಕ ಮತ್ತು ಅಸಂಘಟನಾತ್ಮಕ ವಿಧಾನಗಳಲ್ಲಿ ನಡೆಯುತ್ತಿದ್ದವು. ಆದರೆ ಅವು ಇಂದು ಹೆಚ್ಚು ಹೆಚ್ಚು ಸೂಕ್ಷ್ಮವೂ, ಪೂರ್ವನಿಯೋಜಿತವೂ ಮತ್ತು ಸಂಘಟನಾತ್ಮಕವೂ ಆಗುತ್ತಿವೆ. ಹಂಗರವಳ್ಳಿ, ಬದನವಾಳು, ಕಂಬಾಲಪಲ್ಲಿ ಇವು ಇದಕ್ಕೆ ಕೆಲವು ಉದಾಹರಣೆಗಳು ಅಷ್ಟೆ. ಇವೆಲ್ಲವೂ ಅಸ್ಪೃಶ್ಯ ಮತ್ತು ಬ್ರಾಹ್ಮಣೇತರ ಮಧ್ಯಮ ಜಾತಿಗಳ ನಡುವೆ ನಡೆಯುತ್ತಿವೆ. ಆದರೆ ಸೂರ್ಯನಷ್ಟೇ ಸ್ಪಷ್ಟವಿರುವ ಈ ವಾಸ್ತವವನ್ನು ವೈಚಾರಿಕವಾಗಿ ಮುಚ್ಚಿಹಾಕುವ ಪ್ರಯತ್ನಗಳು ಪ್ರಗತಿಪರ ವಿಚಾರರ ವೇಶದಲ್ಲಿ ನಡೆಯುತ್ತಿವೆ. ಎಲ್ಲವನ್ನೂ ಬ್ರಾಹ್ಮಣ ಪುರೋಹಿತಶಾಹಿಗೆ ಕಟ್ಟುವ ವೈಚಾರಿಕ ಮೋಸ ನಡೆಯುತ್ತಲೆ ಇದೆ. ಆ ಮೂಲಕ ಬದಲಾಗುತ್ತಾ ಸಾಗಿರುವ ಜಮೀನ್ದಾರಿ ಶೋಷಣೆಯ ವಿಧಾನಗಳನ್ನು ವೈಚಾರಿಕ ರಂಗದಲ್ಲಿ ನಾಚಿಕೆಬಿಟ್ಟು ಮುಚ್ಚಿಡಲಾಗುತ್ತಿದೆ. ಇದನ್ನು ಮುಚ್ಚಿಡುವ ಸಲುವಾಗಿ ಬ್ರಾಹ್ಮಣ-ಶೂದ್ರ ಎಂಬ ಗ್ರಾಂಥಿಕ ಜೋಡಿಪದವನ್ನು ಬಳಸಲಾಗುತ್ತಿದೆ. ಸಾಮಾಜಿಕ ಅಸಮಾನತೆ ತನ್ನ ಹಳೆಯ ವಿಧಾನಗಳನ್ನು ಬದಲಿಸಿಕೊಳ್ಳುತ್ತಿದೆ. ಹೊಸ ವಿಧಾನಗಳಲ್ಲಿ ಸಾಗಿದೆ. ಇದನ್ನು ಅರ್ಥಮಾಡಿಕೊಳ್ಳದಂತೆ ಮೇಲೆ ಸೂಚಿಸಿದ ಗ್ರಾಂಥಿಕ ಜೋಡಿಪದವನ್ನು ಅಡ್ಡ ಇಡಲಾಗಿದೆ. ಆ ಮೂಲಕ ಅಸ್ಪೃಶ್ಯ ಜಾತಿಗಳ ಅಸಮಾನತೆಯ ವಿರೋಧಿ ದೃಷ್ಟಿಕೋನವನ್ನು ಭ್ರಷ್ಟಗೊಳಿಸಲಾಗಿದೆ. ಅಸ್ಪೃಶ್ಯ ನೆಲೆಯಲ್ಲಿ ನೋಡಬಹುದಾಗಿದ್ದ ದೃಷ್ಟಿಕೋನವನ್ನು ಶೂದ್ರ ನೆಲೆಗೆ ದುರುದ್ದೇಶ ಪೂರ್ವಕವಾಗಿ ಸ್ಥಳಾಂತರಿಸಲಾಗಿದೆ. ಪರಿಣಾಮವಾಗಿ ಅಸ್ಪೃಶ್ಯ ಸಮುದಾಯದ ಚಿಂತಕರು ತಮ್ಮದಲ್ಲದ ಮತ್ತು ತಮಗೆ ವಿರುದ್ಧವಾದ ‘ಶೂದ್ರ ಜಾತಿಗಳ ದೃಷ್ಟಿಕೋನ’ವನ್ನು ತಪ್ಪಾಗಿ ತಿಳಿದು ತಮ್ಮದೆಂದೇ ಭ್ರಮಿಸಿದ್ದಾರೆ. ವೈಚಾರಿಕ ವಲಯದಲ್ಲಿ ಇದನ್ನು ‘ಬ್ರಾಹ್ಮಣ ಪುರೋಹಿತಶಾಹಿ’ಯ ವಿರುದ್ಧ ಎಗ್ಗಿಲ್ಲದೆ ಬಳಸಲಾಗುತ್ತಿದೆ. ಜಾತಿಗಳ ಅಸಮಾನತೆಯನ್ನು ಹಾಗೇ ಉಳಿಸಿ ಮುಂದುವರಿಸಲು ‘ಬ್ರಾಹ್ಮಣಶಾಹಿ ದೃಷ್ಟಿಕೋನವೇ ಕಾರಣ’ ಎಂಬ ಗ್ರಾಂಥಿಕ ಅಭಿಪ್ರಾಯವನ್ನು ಮತ್ತೆ ಮತ್ತೆ ರಿಫ್ರೆಶ್ ಮಾಡಲಾಗುತ್ತಿದೆ. ಅದೇ ಕಾಲಕ್ಕೆ ಜಾತಿಗಳ ಅಸಮಾನತೆಯನ್ನು ಹಾಗೇ ಉಳಿಸಿ ಮುಂದುವರಿಸಲು ‘ಶೂದ್ರ ಹಿತಾಸಕ್ತಿ’ ಮಾಡುತ್ತಿರುವ ತಂತ್ರಗಳನ್ನು ಮುಚ್ಚಿಡಲಾಗಿದೆ. ಫಲವಾಗಿ ಒಬ್ಬ ಮಠಾಧೀಶರ ಮೇಲಿನ ಅಸಹನೆ, ವಿರೋಧಗಳು ಭೂಮಾಲೀಕರ ವಿರುದ್ಧ ಬಳಕೆಯಾಗುವುದಿಲ್ಲ. ಶೂದ್ರ ವೈಚಾರಿಕ ರಾಜಕಾರಣ ಇದನ್ನು ಬಹಳ ಕುತಂತ್ರದಿಂದ ನಯವಾಗಿ ಬಳಸಿಕೊಳ್ಳುತ್ತಿದೆ. ತನ್ನ ಈ ಕುಟಿಲತೆಯನ್ನು ಮುಚ್ಚಿಹಾಕಿಕೊಳ್ಳಲು ಮತ್ತೆ ಪುರೋಹಿತಶಾಹಿಯ ಕಡೆಗೆ ಬೆರಳು ಮಾಡುತ್ತಿದೆ. ಈ ಭಾಗದಲ್ಲಿ ಇಷ್ಟೆಲ್ಲ ವಿವರಣೆ ಮತ್ತು ಚರ್ಚೆ ಮಾಡಲು ಬಲವಾದ ಕಾರಣವಿದೆ. ಸಾಹಿತ್ಯ ಸಂಶೋಧನೆಯಲ್ಲಿ ಅಸ್ಪೃಶ್ಯತೆ ಮತ್ತು ಜಾತಿ ಇವುಗಳನ್ನು ಪರಿಶೀಲಿಸುವ ಮಾನದಂಡಗಳ ಮೂಲ ಬೇರುಗಳು ಇದರಲ್ಲೆ ಇವೆ. ಇಲ್ಲಿಂದಲೆ ಸಾಹಿತ್ಯವನ್ನು ನೋಡುವ ದೃಷ್ಟಿಕೋನಗಳು ಹುಟ್ಟಿವೆ. ಹಾಗಾಗಿ ಸಾಹಿತ್ಯದಲ್ಲಿ ಅಸ್ಪೃಶ್ಯತೆ ಮತ್ತು ಜಾತಿಯ ಪ್ರಶ್ನೆಗಳು ಎಂಬ ಚರ್ಚೆಗಳನ್ನು ಕೇವಲ ಅಕಡೆಮಿಕ್ ಎಂದು ಕರೆಯಲಾಗುವುದು ಔಪಚಾರಿಕ ಚೌಕಟ್ಟಿನಲ್ಲಿ ನಡೆಸಲು ಕಷ್ಟವಾಗಿದೆ. ಆ ಚರ್ಚೆಯಲ್ಲಿ ಪಾಲ್ಗೊಳ್ಳುವವರು ಯಾರು, ಅವರ ಹಿತಾಸಕ್ತಿ ಯಾವುದು ಎಂಬುದನ್ನು ಅವಲಂಬಿಸಿ ಇದರ ಚರ್ಚೆ ಬೇರೆಬೇರೆ ಆಯಾಮಗಳನ್ನು ಪಡೆಯುತ್ತ ಹೋಗುತ್ತದೆ.

ಸಾಹಿತ್ಯ ಸಂಶೋಧನೆಯಲ್ಲಿ ತೊಡಗುವವರ ಸಾಮಾಜಿಕ ಹಾಗೂ ರಾಜಕೀಯ ಧೋರಣೆಯನ್ನು ಅವಲಂಬಿಸಿ ಅಧ್ಯಯನ ವಿಧಾನಗಳು ರೂಪುಗೊಳ್ಳುತ್ತವೆ. ಯಾಕೆಂದರೆ ಸಂಶೋಧಕರು ಯಾವುದಾದರೂ ಒಂದು ಜಾತಿಯನ್ನು ಪ್ರತಿನಿಧಿಸಲೇಬೇಕು. ಇಲ್ಲವೆ ಅಸ್ಪೃಶ್ಯತೆ ಮತ್ತು ಜಾತಿಯನ್ನು ಕುರಿತು ಯಾವುದಾದರೂ ಒಂದು ಧೋರಣೆಯನ್ನು ಅನುಸರಿಸಲೇಬೇಕು. ಸಾಹಿತ್ಯ ಚರ್ಚೆಯಲ್ಲಿ ಇವೆರಡೂ ಒಂದರೊಳಗೊಂದು ಬೆರೆತು ಕೊಳ್ಳುತ್ತವೆ. ಈ ಮುಖ್ಯ ಕಾರಣದಿಂದ ಸಾಮಾಜಿಕ ಜೀವನದಲ್ಲಿ ಅಸ್ಪೃಶ್ಯತೆ ಮತ್ತು ಜಾತಿಯ ವಿಷಯಗಳನ್ನು ಗ್ರಹಿಸಲಾಗಿರುವ ದೃಷ್ಟಿಕೋನಗಳೇ ಸಾಹಿತ್ಯ ಸಂಶೋಧನೆಯಲ್ಲೂ ಮೇಲುಗೈ ಪಡೆದಿವೆ. ಸಾಹಿತ್ಯ ಕೃತಿಗಳಲ್ಲಿ ಅಸ್ಪೃಶ್ಯತೆ ಮತ್ತು ಜಾತಿಯ ವಿಷಯಗಳನ್ನು ಚರ್ಚೆ ಮಾಡುವಾಗ, ಕೆಲವು ಚಿಂತಕರು ಸಾಹಿತ್ಯ ಕೃತಿಯ ಒಡಲನ್ನು ದೈನಂದಿನ ಸಾಮಾಜಿಕ ಜೀವನಕ್ಕೆ  ನೇರವಾಗಿ ರೂಪಾಂತರಿಸಿಕೊಳ್ಳುತ್ತಾರೆ. ದೈನಂದಿನ ಜೀವನದ ಅಸ್ಪೃಶ್ಯತೆ ಮತ್ತು ಜಾತಿಯ ಸಮಸ್ಯೆಗಳ ಕುರಿತ ಗ್ರಹಿಕೆಯೇ ಇದನ್ನು ನಿರ್ವಹಿಸಲು ಮುಂದಾಗುತ್ತದೆ. ಸಾಮಾಜಿಕ ಜೀವನದಲ್ಲಿ ಈ ವಿಷಯಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾರೊ ಅದೇ ವಿದಾನದಲ್ಲಿ ಸಾಹಿತ್ಯಕ್ಕೂ ಪ್ರತಿಕ್ರಿಯಿಸುತ್ತಾರೆ. ಸಾಹಿತ್ಯ ಕೃತಿಗೂ ಸಾಮಾಜಿಕತೆಗೂ ವ್ಯತ್ಯಾಸವನ್ನೆ ಕಲ್ಪಿಸುವುದಿಲ್ಲ. ಸಾಮಾಜಿಕವಾಗಿ ಅಸ್ಪೃಶ್ಯತೆ ಮತ್ತು ಜಾತಿಗಳು ಸಮಸ್ಯೆಗಳಾಗಿರುವುದರಿಂದ ಆ ಸಮಸ್ಯೆಗಳನ್ನು ಸಾಹಿತ್ಯ ಕೃತಿ ಹೇಗೆ ಗ್ರಹಿಸಿದೆ ಮತ್ತು ಹೇಗೆ ಗ್ರಹಿಸಿಲ್ಲ? ಇದು ವಾಸ್ತವವನ್ನು ಎಷ್ಟರಮಟ್ಟಿಗೆ ಪ್ರತಿನಿಧಿಸಿದೆ ಅಥವಾ ಎಷ್ಟರಮಟ್ಟಿಗೆ ಪ್ರತಿನಿಧಿಸಿಲ್ಲ? ಎಂಬ ಪ್ರಶ್ನೆಗಳು ಮುಖ್ಯವಾಗುತ್ತವೆ. ಅಷ್ಟು ಮಾತ್ರವಲ್ಲ; ಅಸ್ಪೃಶ್ಯತೆಯ ಸಮಸ್ಯೆಗೆ ಮತ್ತು ಜಾತಿ ಸಮಸ್ಯೆಗೆ ಸಾಹಿತ್ಯ ಕೃತಿಗಳು ಹಾಗೂ ಕೃತಿಕಾರರು ಯಾವ ಪರಿಹಾರಗಳನ್ನು ಸೂಚಿಸಿದ್ದಾರೆ ಇಲ್ಲವೆ ಸೂಚಿಸಿಲ್ಲ ಎಂಬ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಸಾಮಾಜಕವಾಗಿ, ರಾಜಕೀಯವಾಗಿ ಬಗೆಹರಿಸಬೇಕಾದ ಪ್ರಶ್ನೆಗಳಿಗೆ ಮತ್ತು ಸಮಸ್ಯೆಗಳಿಗೆ ಸಾಹಿತ್ಯ ಹಾಗೂ ಸಾಹಿತಿಗಳು ಯಾವ ಪರಿಹಾರ ಸೂಚಿಸಿದ್ದಾರೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಸಾಹಿತ್ಯವನ್ನು ಓದುವ ಮೂಲಕ ಸಾಮಾಜಿಕ ವಸ್ತುಸ್ಥಿತಿಯ ಅರಿವು ಮಾತ್ರ ಸಿಕ್ಕಿದರೆ ಸಾಲದು. ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಯಾವುದು ಎಂಬುದೂ ಕೂಡ ತಿಳಿಯಬೇಕು. ಇಲ್ಲದಿದ್ದರೆ ಸಾಹಿತ್ಯವನ್ನು ಯಾಕೆ ಓದಬೇಕು ಎಂಬುದು ಈ ಅಧ್ಯಯನ ವಿಧಾನದ ಸ್ವರೂಪ. ಈ ಹಿನ್ನೆಲೆಯಲ್ಲಿ ‘ಸಾಮಾಜಿಕ ವಿದ್ಯಮಾನಗಳಿಗೆ ಸ್ಪಂದಿಸದ ಬರಹಗಳು ಬರಹಗಳೇ ಅಲ್ಲ’ ಎಂಬ ತೀರ್ಮಾನ ಮಾಡಲಾಗುತ್ತದೆ.  ಸಾಮಾಜಿಕ ಬದಲಾವಣೆಗೆ ಸಾಹಿತ್ಯ ಪೂರಕವಾಗಿ ಕೆಲಸ ಮಾಡಬೇಕು ಎಂಬುದು ಇಲ್ಲಿಯ ಅಪೇಕ್ಷೆ. ಅದಕ್ಕೆ ಬೇಕಾದ ವೈಚಾರಿಕ ವಾತಾವರಣವನ್ನು ಸಾಹಿತ್ಯ ಉಂಟುಮಾಡಬಲ್ಲದು; ಉಂಟುಮಾಡಬೇಕು ಎಂಬುದು ಇಲ್ಲಿಯ ಅಪೇಕ್ಷೆ. ಈ ಬಗೆಯ ಅಪೇಕ್ಷೆಯು ಸಾಹಿತ್ಯ ಕೃತಿಗಳ ವೈಚಾರಿಕ ನೆಲೆಗಳಿಗೆ ಸಂಬಂಧಿಸಿದ್ದರೆ ಇಂತಹ ಪ್ರಶ್ನೆಗಳು ಉಪಯೋಗಕ್ಕೆ ಬರುತ್ತವೆ. ಆದರೆ ಓದುಗರ ಪೂರ್ವ ಅಪೇಕ್ಷೆಗಳನ್ನು ಪೂರೈಸುವ ಸಲುವಾಗಿಯೇ ಸಾಹಿತ್ಯ ಬರಬೇಕಿತ್ತು ಎಂಬ ಅಪೇಕ್ಷೆ ತೀರಾ ಯಾಂತ್ರಿಕವಾಗುತ್ತದೆ.

ಆಯಾ ಕಾಲಗಳ ಸಾಮಾಜಿಕ ವಿವರಗಳನ್ನು ಅವು ಇದ್ದಂತೆಯೇ ಸಾಹಿತ್ಯ ದಾಖಲಿಸುತ್ತದೆ ಎಂಬ ವಿಧಾನದಲ್ಲಿ ಸಾಹಿತ್ಯವನ್ನು ಓದುವ ಕ್ರಮವಿದೆ. ಇದನ್ನು ಚಾರಿತ್ರಿಕ ಓದು ಎಂದು ಕರೆಯಲಾಗುತ್ತದೆ. ವಡ್ಡಾರಾಧನೆ, ಪಂಪ ಭಾರತ, ಧರ್ಮಾಮೃತ, ವಚನಗಳು, ಹರಿಶ್ಚಂದ್ರ ಕಾವ್ಯ ಮುಂತಾದ ಕೃತಿಗಳಲ್ಲಿ ಅಸ್ಪೃಶ್ಯತೆ ಮತ್ತು ಜಾತಿಯ ವಿವರಗಳು ದಾಖಲಾಗಿವೆ. ಆ ಕಾಲದ ಸಾಮಾಜಿಕ ವಸ್ತುಸ್ಥಿತಿಯನ್ನು ಗರಹಿಸಬೇಕಾದರೆ ಸಾಹಿತ್ಯ ಕೃತಿಗಳನ್ನು ಮುಖ್ಯ ಆಕರಗಳಾಗಿ ಬಳಸಿಕೊಳ್ಳಬೇಕು. ಜೊತೆಗೆ ಇದಕ್ಕೆ ಪೂರಕವಾಗಿ ಶಾಸನ ಇತ್ಯಾದಿ ಆಕರಗಳನ್ನೂ ಗಮನಿಸಬೇಕು. ಇವುಗಳಲ್ಲಿ ದಾಖಲಾಗಿರುವ ಮಾಹಿತಿಗಳು, ವಿವರಗಳು ಅವು ಆ ಕಾಲದಲ್ಲಿ ಅಸ್ತಿತ್ವದಲ್ಲಿ ಇದ್ದವುಗಳೇ ಆಗಿವೆ. ಆ ಸಾಮಾಜಿಕ ವಸ್ತುಸ್ಥಿತಿಯೇ ನೇರವಾಗಿ ಸಾಹಿತ್ಯ ಕೃತಿಗಳಲ್ಲಿ ದಾಖಲಾಗಿವೆ ಎಂದು ಈ ಅಧ್ಯಯನದಲ್ಲಿ ತಿಳಿಯಲಾಗಿದೆ. ವಡ್ಡಾರಾಧನೆಯ ಕಥೆಯೊಂದರಲ್ಲಿ ‘ಮಕ್ಕಳಿಗೆ ಎದೆ ಹಾಲು ಕೊಡುವಂತಹ ಮಹಿಳಾ ಕೆಲಸಗಾರರ ಎದೆಗಳನ್ನು ಬಟ್ಟೆಯಲ್ಲಿ ಗಟ್ಟಿಯಾಗಿ ಕಟ್ಟುತ್ತಿದ್ದರು’ ಎಂಬ ವಿವರ ಬರುತ್ತದೆ. ಇದನ್ನು ಆಧರಿಸಿ ಆಗ ಮಹಿಳಾ ಕೆಲಸಗಾರರನ್ನು ದುಡಿಸಿಕೊಳ್ಳುತ್ತಿದ್ದ ವಾಸ್ತವ ಚಿತ್ರಣ ಇದು ಎಂದು ತೀರ್ಮಾನಿಸಲಾಗುತ್ತದೆ. ಈ ತೀರ್ಮಾನವು ಅಂತಹ ಸ್ಥಿತಿ ಆ ಕಾಲದಲ್ಲಿ ಮಾತ್ರ ಇತ್ತು ಎಂದು ಸರಳೀಕರಿಸಿದಂತೆ ಆಗುತ್ತದೆ. ಅದೇ ಕಾಲಕ್ಕೆ ಹಂಗವರವಳ್ಳಿಯಲ್ಲಿ ಜೀತ ಮಾಡುವವರ ಕಾಲುಗಳಿಗೆ ಕೋಳ ತೊಡಿಸಿದ ಪ್ರಕರಣವನ್ನು ನೆನಪು ಮಾಡಿಕೊಳ್ಳಬೇಕು. ಹಾಗಿದ್ದರೆ ದುಡಿಯುವ ವರ್ಗದ ಮೇಲೆ ನಡೆಸಿರುವ ಕ್ರೌರ್ಯ ಕೇವಲ ವಡ್ಡಾರಾಧನೆಯ ಕಾಲಕ್ಕೆ ಮಾತ್ರ ಸೀಮಿತವೊ? ಆ ನಂತರದಲ್ಲಿ ಈ ಸ್ಥಿತಿ ದಿಡೀರನೆ ಮಾಯವಾಗಿ ಬಿಟ್ಟಿತೊ? ಹಾಗೆ ಅಂದು ಮಾಯವಾಗಿದ್ದು, ಒಂದೇ ಸಲ ದಿಡೀರನೆ ಹಂಗರವಳ್ಳಿಯಲ್ಲಿ ಕಾಣಿಸಿಕೊಂಡಿತೊ? ಕನ್ನಡದಲ್ಲಿ ದಲಿತೇತರರ ಕಥನಗಳಲ್ಲಿ ಕೆಳಜಾತಿಯ ಮಹಿಳೆಯರ ಮತ್ತು ಮೇಲು ಜಾತಿಯ ಪುರುಷರ ಹಲವು ಸಂಬಂಧದ ವಿವರಗಳು ಬರುತ್ತವೆ. ಆದರೆ ದಲಿತ ಬರಹಗಾರ ಕಥನಗಳಲ್ಲಿ ಮೇಲು ಜಾತಿಯ ಮಹಿಳೆಯರ ಮತ್ತು ಕೆಳಜಾತಿಯ ಪುರುಷರ ಹಲವು ಸಂಬಂಧದ ವಿವರಗಳು ಬರುತ್ತವೆ. ಹಾಗಿದ್ದರೆ ದಲಿತ ಬರಹಗಾರರು ಬರೆಯುವ ತನಕ ಸಾಮಾಜಿಕ ಸಂಬಂಧಗಳು ಆ ಬಗೆಯಲ್ಲಿ ಇರಲಿಲ್ಲ. ದಲಿತ ಬರಹಗಾರರು ಬರೆಯಲು ಶುರುಮಾಡಿದ ಮೇಲೆ ಸಾಮಾಜಿಕವಾಗಿ ಆ ಬಗೆಯ ಸಂಬಂಧಗಳು ಏರ್ಪಟ್ಟವು ಎನ್ನಬಹುದೆ? ದಲಿತ ಆತ್ಮಕಥನಕಾರರು ತಮ್ಮ ಕೃತಿಗಳಲ್ಲಿ ಅವರ ಹಸಿವು, ಅಪಮಾನ ಮತ್ತು ಬಡತನಗಳನ್ನು ಬರೆದಿದ್ದಾರೆ. ಹಾಗಿದ್ದರೆ ಅವರು ಬರೆಯುವ ಮೊದಲು ದಲಿತರಿಗೆ ಈ ಸಮಸ್ಯೆಗಳು ಇರಲಿಲ್ಲವೆ? ಈಗ ಆತ್ಮಕಥನಗಳನ್ನು ಬರೆದಿರುವವರು ಮಾತ್ರ ಹಸಿವು, ಅಪಮಾನ ಮತ್ತು ಬಡತನಗಳನ್ನು ಅನುಭವಿಸಿದ್ದಾರೆಯೆ? ಉಳಿದವರು ಇವನ್ನು ಅನುಭವಿಸುತ್ತಿಲ್ಲವೆ? ‘ಬರಹಗಾರರು ಸಮಾಜದಲ್ಲಿ ಇದ್ದುದನ್ನು ಬರೆಯುತ್ತಾರೆ; ಹಾಗೆ ಬರೆಯುವಾಗ ಅದನ್ನು ಅನುಭವಿಸಿ ಬರೆಯುತ್ತಾರೆ’ ಎಂಬ ಅಭಿಪ್ರಾಯವಿದೆ. ಇದನ್ನು ಪ್ರಶ್ನಾತೀತವಾಗಿ ಮತ್ತು ಸರಳವಾಗಿ ಸ್ವೀರಕಿಸಲಾಗಿದೆ ಹಾಗೂ ನಂಬಲಾಗಿದೆ. ಈ ಕಾರಣದಿಂದ ಸಾಹಿತ್ಯ ಕೃತಿಗಳನ್ನು ಆಯಾ ಕಾಲದ ಸಮಾಜದ ದಾಖಲೆ ಎಂದು ನಂಬಲಾಗಿದೆ.

ಸಾಹಿತ್ಯ ಕೃತಿಗಳಲ್ಲಿ ದಾಖಲಾಗಿರುವ ಅಸ್ಪೃಶ್ಯತೆ ಮತ್ತು ಜಾತಿಯ ವಿವರಗಳನ್ನು ಆಧರಿಸಿ ‘ಆಗಿನ ಸಮಾಜ ಹೀಗಿತ್ತು’ ಎಂದು ಈ ಬಗೆಯ ಸಂಶೋಧನೆಗಳು ತೀರ್ಮಾನಿಸುತ್ತವೆ. ಹಾಗಿದ್ದರೆ ಅಸ್ಪೃಶ್ಯತೆ ಮತ್ತು ಜಾತಿಯ ವಿವರಗಳನ್ನು ದಾಖಲಿಸದ ಸಾಹಿತ್ಯ ಕೃತಿಗಳ ಮಟ್ಟಿಗೆ ಏನು ಹೇಳಬೇಕು? ಅಂತಹ ಕೃತಿಗಳು ರಚನೆಯಾದ ಕಾಲದಲ್ಲಿ ಅಸ್ಪೃಶ್ಯತೆ ಮತ್ತು ಜಾತಿಗಳು ಇರಲಿಲ್ಲ ಎಂದು ಹೇಳಬಹುದೆ? ‘ಹೌದು ಆಗ ಜಾತಿಗಳು ಇರಲಿಲ್ಲ’ ಎಂದು ಹೇಳಿದರೆ ಚರ್ಚೆಯೇ ಇಲ್ಲ. ಹಾಗೆ ಹೇಳಲು ಸಾಧ್ಯವಿಲ್ಲ ಎನ್ನುವುದಾದರೆ ಆಗ ಸಾಹಿತ್ಯ ಕೃತಿಗಳಲ್ಲಿರುವ ಅಸ್ಪೃಶ್ಯತೆ ಮತ್ತು ಜಾತಿಯ ವಿವರಗಳನ್ನು ಕುರಿತ ಸಂಶೋಧನೆಯ ಗ್ರಹಿಕೆಗಳನ್ನು ಬದಲಿಸಿಕೊಳ್ಳಬೇಕಾಗುತ್ತದೆ. ಬರಹಗಾರರು ಸಮಾಜದಲ್ಲಿ ಇದ್ದ ಅಸ್ಪೃಶ್ಯತೆ ಮತ್ತು ಜಾತಿಯ ವಿವರಗಳನ್ನು ದಾಖಲಿಸುತ್ತಾರೊ ಅಥವಾ ಅದನ್ನು ನಿರೂಪಿಸುತ್ತಾರೊ ಎಂಬ ಪ್ರಶ್ನೆಯನ್ನು ಇಲ್ಲಿ ಕೇಳಿಕೊಳ್ಳಬೇಕಾಗಿದೆ. ಅಸ್ಪೃಶ್ಯತೆ ಮತ್ತು ಜಾತಿಯ ವಿವರಗಳನ್ನು ಸಆಹಿತ್ಯದಲ್ಲಿ ದಾಖಲಿಸುವುದು ಎಂದರೆ ಕೆಲವು ಫಾರಮ್‌ಗಳನ್ನು ಭರ್ತಿ ಮಾಡಿದಂತೆ. ಆಡಳಿತದ ಕೆಲವು ಇಲಾಖೆಗಳಲ್ಲಿ ಸಿದ್ಧಮಾದರಿಯ ಫಾರಮ್‌ಗಳಿರುತ್ತವೆ. ಅಲ್ಲಿ ಕೆಲವು ನಿರೀಕ್ಷಿತ ಉತ್ತರದ ಪ್ರಶ್ನೆಗಳಿರುತ್ತವೆ. ಆ ಪೂರ್ವ ನಿರೀಕ್ಷೆಗಳನ್ನು ಪೂರೈಸುವ ಸಲುವಾಗಿ ಅವನ್ನು ಭರ್ತಿ ಮಾಡಲಾಗುತ್ತದೆ. ಹೀಗೆ ಪೂರ್ವ ನಿರೀಕ್ಷೆಗಳನ್ನು ಭರ್ತಿಮಾಡಿದ ಫಾರಮ್‌ಗಳನ್ನೆ ದಾಖಲೆಗಳು ಎಂದು ಕರೆಯಲಾಗುತ್ತದೆ. ಈ ರೀತಿಯಲ್ಲಿ ಸಾಹಿತ್ಯವನ್ನು ಆಯಾ ಕಾಲದ ಸಮಾಜದ ದಾಖಲೆ ಎನ್ನಲಾಗುತ್ತದೆ. ಆದರೆ ಪ್ರಶ್ನೆ ಇರುವುದು ಸಾಹಿತ್ಯ ಕೃತಿಗಳು ಯಾವುದನ್ನು ದಾಖಲಿಸಿವೆ ಮತ್ತು ಯಾವುದನ್ನು ದಾಖಲಿಸಿಲ್ಲ ಎಂಬುದು. ಯಾವುದನ್ನು ದಾಖಲಿಸಬೇಕಿತ್ತೊ, ಅದನ್ನು ದಾಖಲಿಸಲೇಬೇಕಿತ್ತು ಎಂದು ಓದುಗರು ಹಠ ಹಿಡಿಯಲು ಬರುವುದಿಲ್ಲ. ಹಾಗೆ ಒಂದು ವೇಳೆ ಹಠ ಹಿಡಿಯುವುದಾದರೆ ಬರಹಗಾರರಿಗೆ ‘ನೀವು ಇಂತಹದ್ದನ್ನೆ ಬರೆಯಿರಿ’ ಎಂದು ಹೋಮ್‌ವರ್ಕ್ ಕೊಡಬೇಕಾಗುತ್ತದೆ. ಹಾಗಾಗಿ ನಮ್ಮ ನಿರೀಕ್ಷೆಗಳನ್ನು ಸಾಹಿತ್ಯ ಕೃತಿಗಳ ಮೇಲೆ ಹಾಕಲು ಬರುವುದಿಲ್ಲ. ಸಾಹಿತ್ಯ ಕೃತಿ ಏನನ್ನು ದಾಖಲಿಸಿದೆ ಮತ್ತು ಏನನ್ನು ದಾಖಲಿಸಿಲ್ಲ ಎಂಬುವು ಪ್ರತ್ಯೇಕವಾದ ಎರಡು ಪ್ರಶ್ನೆಗಳಲ್ಲ. ಬದಲಿಗೆ ಅದು ‘ಸಾಹಿತ್ಯವು ಸಮಾಜವನ್ನು ದಾಖಲಿಸುತ್ತದೆ’ ಎಂಬುದನ್ನು ಸಾರಾಸಗಟಾಗಿ ಒಪ್ಪಿಕೊಂಡಿರುವ ನಂಬಿಕೆಯದ್ದೇ ಆಗಿದೆ. ಈ ಹಿನ್ನೆಲೆಯಲ್ಲಿ ಅವು ಬೇರೆ ಬೇರೆ ಪ್ರಶ್ನೆಗಳಲ್ಲ. ಆದ್ದರಿಂದ ಸಾಹಿತ್ಯ ಕೃತಿಗಳು ಸಮಾಜವನ್ನು ದಾಖಲಿಸುವ ಕೆಲಸ ಮಾಡುತ್ತವೊ ಅಥವಾ ಆ ಕುರಿತು ನಿರೂಪಿಸುವ ಕೆಲಸ ಮಾಡುತ್ತವೊ ಎಂಬ ಆಯಾಮದ ಕಡೆಗೆ ಚರ್ಚೆಯನ್ನು ತಿರುಗಿಸಬೇಕಾಗುತ್ತದೆ.

ಅಸ್ಪೃಶ್ಯತೆ ಮತ್ತು ಜಾತಿಯನ್ನು ಸಾಹಿತ್ಯ ನಿರೂಪಿಸುತ್ತದೆ ಎಂಬ ಗ್ರಹಿಕೆಯಲ್ಲಿ ಸಾಹಿತ್ಯವನ್ನು ನೋಡುವುದು ಮತ್ತೊಂದು ವಿಧಾನ. ಸಾಮಾಜಿಕ ವಸ್ತುಸ್ಥಿತಿಯನ್ನು ಬರಹಗಾರರು ದಾಖಲಿಸುವುದಿಲ್ಲ; ಬದಲಿಗೆ ಅದನ್ನು ನಿರೂಪಿಸುತ್ತಾರೆ. ಹೀಗೆ ನಿರೂಪಿಸಲು ಭಾಷೆಯನ್ನು ಬಳಸುತ್ತಾರೆ. ಇರುವ ಭಾಷೆಯನ್ನು ಬಳಸುತ್ತಾರೆ ಎಂದು ಹೇಳುವುದು ಒಂದು ಕ್ರಮವಾದರೆ; ಸಾಹಿತ್ಯವನ್ನು ನಿರೂಪಿಸುತ್ತಲೆ ಆ ಭಾಷಿಕ ಸಾಧ್ಯತೆಯನ್ನು ರೂಪಿಸುತ್ತಾ ಹೋಗುತ್ತಾರೆ ಎಂದು ಹೇಳುವುದು ಮತ್ತೊಂದು ಕ್ರಮ. ಸಾಹಿತ್ಯ ನಿರ್ಮಾಣ ಎಂಬ ಸೃಜನಶೀಲತೆಯಲ್ಲಿ ಸಾಮಾಜಿಕ ಚಲನಶೀಲತೆಯನ್ನು ನಿರೂಪಿಸುವ ಭಾಷೆಯು ತನಗೆ ತಾನೇ ಅಸಾಮಾನ್ಯ ಎಂಬಂತೆ ರೂಪುಗೊಳ್ಳುತ್ತಾ ಸಾಗುತ್ತದೆ. ಹೀಗೆ ತಾನು ರೂಪುಗೊಳ್ಳುವಾಗ ಪರಂಪರೆಗಳಿಂದ, ವರ್ತಮಾನದ ಒತ್ತಡಗಳಿಂದ, ಭವಿಷ್ಯದ ಸಾಮಾನ್ಯ ಆಶಯಗಳಿಂದ ಪಡೆಯುತ್ತಾ, ಕಲಿಯುತ್ತಾ ಸಾಗುತ್ತದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಸಂಗತಿಗಳು ಬರಹ ರೂಪಕ್ಕೆ ಬರುವಾಗ ಅವು ಭಾಷಿಕವಾಗಿ ನಿರೂಪಿತವಾಗುತ್ತವೆ. ಆ ಮುಲಕ ಸಾಹಿತ್ಯಕ ಭಾಷೆಯನ್ನೂ/ಭಾಷೆಗಳನ್ನೂ ರೂಪಿಸುತ್ತವೆ. ಆಗ ಸಾಮಾಜಿಕ ವಸ್ತುಸಂಗತಿಗಳು ಸಾಹಿತ್ಯ ಕೃತಿಗಳ ವಸ್ತುಸಂಗತಿಗಳಾಗುತ್ತವೆ. ಆದರೆ ಸಾಮಾಜಿಕ ವಸ್ತುಸ್ಥಿತಿಗೂ ಮತ್ತು ಸಾಹಿತ್ಯಕ ವಸ್ತುಸ್ಥಿತಿಗೂ ಯಾವುದೇ ಸಂಬಂಧವೇ ಇಲ್ಲ. ಅವೆರಡೂ ಪ್ರತ್ಯೇಕವಾದವು ಎಂದು ಸರಳೀಕರಿಸುವಂತಿಲ್ಲ. ಸಾಮಾಜಿಕ ವಸ್ತುಸ್ಥಿತಿಯ ಅರಿವಿನಲ್ಲೆ ಸಾಹಿತ್ಯ ಕೃತಿಗಳನ್ನು ಪರಿಶೀಲಿಸಬೇಕಾಗುತ್ತದೆ. ಈ ವಿಧಾನದಲ್ಲೆ ಪರಿಶೀಲಿಸಲಾಗುತ್ತಿದೆ ಕೂಡ.

ಅಸ್ಪೃಶ್ಯತೆ ಹಾಗೂ ಜಾತಿ ಇವು ಸಾಹಿತ್ಯದಲ್ಲಿ ಭಾಷಿಕವಾಗಿ ನಿರೂಪಿತವಾಗಿರುತ್ತವೆ. ಹಾಗಿದ್ದರೆ ಅವುಗಳನ್ನು ಗುರುತಿಸುವ ವಿಧಾನ ಯಾವುದು? ಒಂದೇ ಸಾಹಿತ್ಯ ಕೃತಿಯನ್ನು ಬೇರೆ ಬೇರೆ ವಿಮರ್ಶಕರು ಅಸ್ಪೃಶ್ಯತೆ ಮತ್ತು ಜಾತಿ ಹಿನ್ನೆಲೆಗಳಿಂದ ಅಧ್ಯಯನ ಮಾಡಿದ್ದಾರೆ ಎಂದು ತಿಳಿಯೋಣ. ಅವರೆಲ್ಲ ಒಂದೇ ತೀರ್ಮಾನಕ್ಕೆ ಬಂದಿರುತ್ತಾರೊ ಅಥವಾ ಭಿನ್ನ ಭಿನ್ನ ನಿಲುವುಗಳನ್ನು ಮಂಡಿಸಿರುತ್ತಾರೊ? ಒಂದೇ ತೀರ್ಮಾನಕ್ಕೆ ಬಂದಿರುತ್ತಾರೆ ಎನ್ನುವುದಾದರೆ ಚರ್ಚೆಯೇ ಇಲ್ಲ. ಆದರೆ ಭಿನ್ನಭಿನ್ನ ನಿಲುವುಗಳನ್ನು ಮಂಡಿಸಿದ್ದಾರೆ ಎನ್ನುವುದಾದರೆ ಅದಕ್ಕೆ ಕಾರಣಗೇನು? ಭಿನ್ನಭಿನ್ನ ದೃಷ್ಟಿಕೋನಗಳ ಮೂಲಕ ಸಾಹಿತ್ಯವನ್ನು ಗ್ರಹಿಸುವುದರಿಂದಲೇ ಭಿನ್ನ ನಿಲುವುಗಳು ಬರುತ್ತವೆ. ಅಂದರೆ ಸಾಹಿತ್ಯವನ್ನು ನೋಡುವ ದೃಷ್ಟಿಕೋನಗಳಿಗೆ ಸಂಬಂಧಿಸಿ, ಸಾಹಿತ್ಯದಲ್ಲಿರುವ ಅಸ್ಪೃಶ್ಯತೆ ಮತ್ತು ಜಾತಿಯ ಪ್ರಶ್ನೆಗಳು ಕಾಣತೊಡಗುತ್ತವೆ. ಅನಂತಮೂರ್ತಿ ಅವರ ‘ಭಾರತೀಯ ಸಾಹಿತ್ಯ ಮತ್ತು ಲೇಖಕ’ ಎಂಬ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಪೂರ್ಣಚಂದ್ರ ತೇಜಸ್ವಿ ಅವರು ‘ಕರ್ನಾಟಕ ಸಂಸ್ಕೃತಿಯ ವಿಶ್ಲೇಷಣೆ’ ಎಂಬ ಲೇಖನವನ್ನು ಬರೆದರು. ಅನಂತಮೂರ್ತಿಯವರು ವಿಶ್ಲೇಷಣ ವಿಧಾನವನ್ನು ತೇಜಸ್ವಿಯರು ತಮ್ಮ ಧೋರಣೆಯ ಮೂಲಕ ವಿರೋಧಿಸಿದರು. ಆದರೆ ತೇಜಸ್ವಿಯವರು ಅನಂತಮೂರ್ತಿಯವರ ವಿಚಾರಗಳನ್ನು ವಿರೋಧಿಸಲು ಬಳಸಿದ ಧೋರಣೆಯಲ್ಲೆ ಕುವೆಂಪು ಕೃತಿಗಳನ್ನು ನೋಡಲಾಗುತ್ತಿತ್ತು. ಆ ಬಗ್ಗೆ ತೇಜಸ್ವಿಯವರು ಎಲ್ಲೂ ವಿರೋಧ ವ್ಯಕ್ತಪಡಿಸಿರುವುದು ಕಾಣುವುದಿಲ್ಲ. ‘ಕುವೆಂಪು ಕೃತಿಗಳಲ್ಲಿ ದಲಿತ ಪಾತ್ರಗಳ ಚಿತ್ರಣ’ ಎಂಬ ಬಿ.ಕೃಷ್ಣಪ್ಪ ಅವರ ಲೇಖನವು ತೇಜಸ್ವಿಯವರ ವಿಶ್ಲೇಷಣ ವಿಧಾನಗಳನ್ನು ತಲೆಕೆಳಗು ಮಾಡಿತು. ಯಾಕೆ ಈ ಮೂರೂ ಜನ ಲೇಖಕರ ವಿಶ್ಲೇಷಣ ವಿಧಾನಗಳು ಬೇರೆಬೇರೆಯಾಗಿವೆ ಎಂಬುದು ಬಹಳ ಮಹತ್ವದ ಪ್ರಶ್ನೆ. ಆ ಮೂವರೂ ತಮ್ಮ ಭಿನ್ನ ಭಿನ್ನ ಧೋರಣೆಗಳಿಂದ ನೋಡಿರುವುದರಿಂದ ಅವರು ಅವರ ವಿಶ್ಲೇಷಣಾ ವಿಧಾನಗಳು ಬೇರೆಬೇರೆಯಾಗಲು ಕಾರಣವಾಗಿದೆ. ಜೊತೆಗೆ ಮೂರೂ ಜನ ಲೇಖಕರು ಸಾಮಾಜಿಕ ಶ್ರೇಣೀಕರಣದಲ್ಲಿ ಭಿನ್ನ ಸ್ತರಗಳಿಂದ ಬಂದವರು ಎಂಬುದನ್ನೂ ಗಮನಿಸಬೇಕು. ಅಂದರೆ ನೋಡುವ ನೋಟದ ಮೂಲಕವೇ ಸಾಹಿತ್ಯ ಕೃತಿಗಳ ಹಲವು ಆಯಾಮಗಳು ಕಾಣುತ್ತವೆ.

ಅಸ್ಪೃಶ್ಯತೆ ಮತ್ತು ಜಾತಿಗೆ ಸಂಬಂಧಿಸಿ ಅದರ ಯಾವ ಆಯಾಮವನ್ನು ಸಾಹಿತ್ಯ ಅಭಿವ್ಯಕ್ತಿಸಿದೆ ಎಂಬುದು ಸಾಹಿತ್ಯ ಸಂಶೋಧನೆಯಲ್ಲಿ ಬಹಳ ಮುಖ್ಯವಾದ ಪ್ರಶ್ನೆ. ಪ್ರಶ್ನೆಯ ಮೂಲಭೂತವಾದ ಈ ತಾತ್ವಿಕ ಸ್ವರೂಪವನ್ನು ಸರಿಯಾಗಿ ಬಿಡಿಸಿ ಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಚರ್ಚೆಯು ತನ್ನ ಚೌಕಟ್ಟಿನ ಆಚೆಗೆ ನಡೆಯುತ್ತಿರುತ್ತದೆ. ಆದರೆ ಕೆಲವು ಸಲ ಅದನ್ನು ಸರಿಯಾದ ಚೌಕಟ್ಟಿನ ಚರ್ಚೆ ಎಂತಲೇ ನಂಬಲಾಗುತ್ತದೆ. ಈ ರೀತಿಯಲ್ಲಿ ದಿಕ್ಕುತಪ್ಪಿದ ಚರ್ಚೆಗಳು ಸಾಕಷ್ಟು ನಡೆಯುತ್ತಿವೆ. ಪಂಪ ಭಾರತದ ಕರ್ಣನ ಪ್ರಸಂಗ ಮತ್ತು ಹರಿಶ್ಚಂದ್ರ ಚಾರಿತ್ರದ ಹೊಲತಿಯರ ಪ್ರಸಂಗ ಇವನ್ನು ಒಂದೇ ಚೌಕಟ್ಟಿನಲ್ಲಿ ಚರ್ಚೆ ಮಾಡಲು ಬರುವುದಿಲ್ಲ. ‘ವಚನಕಾರರು ಜಾತಿಯನ್ನು ವಿರೋಧಿಸಿದರು’ ಎಂದು ರಾಜಕಾರಣಿಗಳ ರೀತಿಯಲ್ಲಿ ಹೇಳಿದ್ದನ್ನೆ ಮತ್ತೆ ಮತ್ತೆ ಹೇಳುವುದು ಬಹಳ ಅಪಾಯಕಾರಿ. ‘ವಿಪ್ರ ಮೊದಲಾಗಿ ಅಂತ್ಯಜ ಕಡೆಯಾಗಿ’ ಎಂಬ ವಚನಗಳ ನಿಲುವು ಜಾತಿ ಶ್ರೇಣೀಕರಣವನ್ನು ಸಮರ್ಥಿಸುವ ಧೋರಣೆಯೇ ಆಗಿದೆ. ಆದರೆ ಇದನ್ನು ಯಾಕೆ ಮುಚ್ಚಿಡಬೇಕು? ಹಾಗಾಗಿ ವಚನಗಳನ್ನು ಜಾತಿ ಕುರಿತ ನಿರೂಪಣೆ ಮತ್ತು ನಿಲುವುಗಳ ಚರ್ಚೆಗೆ ಬೇರೊಂದು ಚೌಕಟ್ಟು ಬೇಕಾಗುತ್ತದೆ. ಕುವೆಂಪು ಕಾದಂಬರಿಗಳಲ್ಲಿ ವಸಾಹತುಶಾಹಿ ಮತ್ತು ಜಮೀನ್ದಾರಿ ವರ್ಗಗಳ ಸಂಬಂಧದಲ್ಲಿ, ಜಮೀನ್ದಾರಿ ವರ್ಗದ ಬಿಕ್ಕಟ್ಟು, ಬಿರುಕು, ದರ್ಪ, ದೌರ್ಜನ್ಯ, ಪ್ರತಿಷ್ಠೆ, ಉದಾರತೆ, ಅಸಹಾಯಕತೆ ಮುಂತಾದುವುಗಳ ಭಾಗವಾಗಿ ಜಾತಿಯ ಪ್ರಶ್ನೆ ಆಕಾರ ಪಡೆಯುತ್ತದೆ. ಆಗ ಕುವೆಂಪು ಕಾದಂಬರಿಗಳನ್ನು ಅಧ್ಯಯನ ಮಾಡಲು ಬೇರೊಂದು ತಾತ್ವಿಕ ಚೌಕಟ್ಟು ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ದಲಿತ ಸಾಹಿತ್ಯ ಕೃತಿಗಳು ಅಸ್ಪೃಶ್ಯತೆ ಮತ್ತು ಜಾತಿಯನ್ನು ಗ್ರಹಿಸುವ ನಿರೂಪಿಸುವ ಕ್ರಮವೇ ಬೇರೆ. ಅವು ಅತ್ಯಂತ ಸ್ಥಳೀಯ ವಿದ್ಯಮಾನಗಳಿಂದ, ದೈನಂದಿನ ಸಂಕಟ ಮತ್ತು ಆತಂಕದಿಂದ, ಅದೊಂದು ತುರ್ತಿನ ಸ್ಥಿತಿ ಎಂಬಂತೆ ಚಿತ್ರಿಸುತ್ತವೆ. ಈ ಚಿತ್ರಣದ ವಿಧಾನ ಮತ್ತೆ ಒಂದೇ ರೀತಿಯದ್ದಲ್ಲ. ಇದರಲ್ಲಿ ಹಲವು ವಿಧಾನಗಳಿವೆ. ಶಿವರುದ್ರ ಕಲ್ಲೋಳಿಕರ ಅವರ ‘ಹೊಲಗೇರಿಯ ರಾಜಕುಮಾರ’ ಕಾದಂಬರಿ ಜಾತಿ ಪ್ರಶ್ನೆಯನ್ನು ನಿರ್ವಹಿಸುವ ಮತ್ತು ನಿರೂಪಿಸುವ ಕ್ರಮವೇ ಬೇರೆ. ಅದರ ಹಿಂದೆ ಹೋರಾಟದ ತೀವ್ರ ತುಡಿತವಿದೆ. ಆದರೆ ದೇವನೂರು ಮಹಾದೇವ ಅವರ ಅಭಿವ್ಯಕ್ತಿ ಕ್ರಮ ಈ ಮಾದರಿಯದ್ದಲ್ಲ. ಈ ಪರಿಸ್ಥಿತಿ ಹೀಗಿದೆಯಲ್ಲ! ಛೆ! ಇಂತಹ ಪರಿಸ್ಥಿತಿ ಇದೆಯಲ್ಲ! ಇಂತಹದನ್ನು ನೋಡು ನೋಡುತ್ತಲೆ ನಾವು ಸುಮ್ಮನಿದ್ದೀವಲ್ಲ! ಛೆ! ಎಂದು ಒಳಗೊಳಗೆ ಕರಗುವ ತೀವ್ರ ವಿಷಾಧದ ಮಾದರಿಯದು. ವಿಷಾದದ ನಿರೂಪಣ ಕ್ರಮದಲ್ಲಿ ಕಥನವನ್ನು ಕಟ್ಟುವುದು ಸುಲಭದ ಮಾತಲ್ಲ. ಹಾಗಾಗಿ ಈ ಅಧ್ಯಯನಕ್ಕೆ ಬೇರೊಂದು ಚೌಕಟ್ಟು ಬೇಕಾಗುತ್ತದೆ.

ಒಂದೊಂದು ಸಾಹಿತ್ಯ ಪ್ರಕಾರ ಒಂದೊಂದು ಬಗೆಯಲ್ಲಿ ಈ ಪ್ರಶ್ನೆಗಳನ್ನು ಗ್ರಹಿಸಿದೆ ಮತ್ತು ನಿರ್ವಹಿಸಿದೆ. ಕಾವ್ಯ, ಕಥೆ, ಕಾದಂಬರಿ, ನಾಟಕ ಇತ್ಯಾದಿ ಸಾಹಿತ್ಯ ಪ್ರಕಾರಗಳು ಅಸ್ಪೃಶ್ಯತೆ ಮತ್ತು ಜಾತಿಯ ಪ್ರಶ್ನೆಯನ್ನು ಗ್ರಹಿಸುವ ಮತ್ತು ಅಭಿವ್ಯಕ್ತಿಸುವ ಕ್ರಮವೇ ಬೇರೆ. ಅಲ್ಲಿ ಇವುಗಳನ್ನು ಕುರಿತು ನಿರೂಪಣೆ ಮುಖ್ಯವಾಗಿರುತ್ತದೆ. ಆ ಬಗೆಗೆ ನಿರ್ಣಯಾತ್ಮಕ ನಿಲುವುಗಳು ಇರಬಹುದು; ಆದರೆ ಅವಕ್ಕೆ ಅದು ಮುಖ್ಯವಾಗುವುದಿಲ್ಲ. ಆದರೆ ವಿಚಾರ ಸಾಹಿತ್ಯ, ವಿಮರ್ಶೆ ಮತ್ತು ಸಂಶೋಧನೆ ಮುಂತಾದ ಬರವಣಿಗೆಗಳು ಅಸ್ಪೃಶ್ಯತೆ ಮತ್ತು ಜಾತಿಗಳನ್ನು ಗ್ರಹಿಸಿರುವ ಮತ್ತು ನಿರೂಪಿಸಿರುವ ಕ್ರಮವೇ ಬೇರೆ. ಈ ಬಗೆಯ ಸಾಹಿತ್ಯ ಪ್ರಕಾರಗಳಲ್ಲಿ ಅಸ್ಪೃಶ್ಯತೆ ಮತ್ತು ಜಾತಿಯ ಪ್ರಶ್ನೆಗಳು ಪಡೆಯುವ ಸ್ವರೂಪಕ್ಕೂ ಉಳಿದ ಪ್ರಕಾರಗಳಲ್ಲಿ ಇವು ಪಡೆಯುವ ಸ್ವರೂಪಕ್ಕೂ ಗುಣಾತ್ಮಕವಾಗಿ ವ್ಯತ್ಯಾಸವಿದೆ. ಈ ಪ್ರಕಾರಗಳಲ್ಲಿ ಅಸ್ಪೃಶ್ಯತೆ ಮತ್ತು ಜಾತಿಯ ಪ್ರಶ್ನೆಗಳನ್ನು ಮೊದಲಿಗೆ ಸಮಸ್ಯೆ ಎಂದು ಸ್ವೀಕರಿಸಲಾಗುತ್ತದೆ. ಹೀಗೆ ಸಮಸ್ಯೆ ಎಂದು ಪರಿಗಣಿಸುವುದರಿಂದ ಅದರ ಹುಟ್ಟು ಬೆಳವಣಿಗೆಯನ್ನು ಶೋಧಿಸುವ ಕಡೆಗೆ ಆಸಕ್ತಿ ಹೋಗುತ್ತದೆ. ವರ್ತಮಾನದಲ್ಲಿ ಇವು ಪಡೆದಿರುವ ಸಮಸ್ಯೆಗಳ ಸ್ವರೂಪ ಯಾವುದು ಎಂಬುದರ ಹುಡುಕಾಟ ಮೊದಲಾಗುತ್ತದೆ. ಆಗ ಜಾತಿ ಶ್ರೇಣೀಕರಣ ಎಂಬುದರಲ್ಲಿ ನಡೆಸುತ್ತಿರುವ ದೌರ್ಜನ್ಯ, ಅಪಮಾನ, ಪ್ರತಿಭಟನೆ ಮುಂತಾದುವುಗಳ ಚರ್ಚೆ ಮುಖ್ಯವಾಗುತ್ತದೆ. ವರ್ತಮಾನದಲ್ಲಿ ಇವುಗಳ ಶ್ರೇಣೀಕರಣದಿಂದ ಯಾರು ಲಾಭ ಪಡೆಯುತ್ತಿದ್ದಾರೆ ಮತ್ತು ಯಾರು ನಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂಬ ಚರ್ಚೆ ಇಲ್ಲಿ ಮುಖ್ಯವಾಗುತ್ತದೆ. ಜಾತಿಯು ಒಂದು ಕಡೆ ಅಪಮಾನವಾಗಿ, ಹಿಂಸೆಯಾಗಿ ಕ್ರಿಯಾಶೀಲವಾಗಿದೆ. ಮತ್ತೊಂದು ಕಡೆ ಅದು ಅಭಿಮಾನವಾಗಿ, ಪ್ರತಿಷ್ಠೆಯಾಗಿ ಕ್ರಿಯಾಶೀಲವಾಗಿದೆ. ಜಾತಿಗೆ ಇರುವಿಕೆಯ ಆಯಾಮ ಒಂದಿದ್ದರೆ ತೋರಿಕೆಯ ಆಯಾಮ ಮತ್ತೊಂದಿದೆ. ಅಸ್ಪೃಶ್ಯತೆ ಮತ್ತು ಜಾತಿಗಳು ವೈವಿಧ್ಯಮಯವಾದವು ಎಂಬುದು ಒಂದು ವಾದವಾದರೆ; ಇಲ್ಲ, ಅವು ಶ್ರೇಣೀಕರಣಗಳಿಂದ ಕೂಡಿವೆ ಎಂಬುದು ಮತ್ತೊಂದು ವಾದ. ಈ ಶ್ರೇಣೀಕರಣವನ್ನು ಮುಂದುವರಿಸುವ ಮೂಲಕ ಅನ್ಯಾಯ ಮತ್ತು ಅಸಮಾನತೆಯನ್ನು ಮುಂದುವರಿಸಲಾಗುತ್ತಿದೆ ಎಂಬುದು ಇಲ್ಲಿಯ ತೀರ್ಮಾನ. ಅನಾದಿ ಕಾಲದಿಂದಲೂ ಇವುಗಳ ವಿರುದ್ಧ ವೈಚಾರಿಕವಾಗಿ ಮತ್ತು ಆಚರಾಣತ್ಮಕವಾಗಿ ಹೋರಾಡುತ್ತ ಬಂದರೂ ಕೂಡ ಯಾಕೆ ಇದರ ಸಮಸ್ಯೆಯ ಸ್ವರೂಪ ಸಡಿಲವಾಗಲಿಲ್ಲ ಎಂಬ ಚರ್ಚೆಯನ್ನು ಈ ಬರವಣಿಗೆಗಳು ನಡೆಸುತ್ತವೆ. ಹಾಗಾಗಿ ಇಂತಹ ಬರವಣಿಗೆಗಳಲ್ಲಿ ಬರಹಗಾರರ ತೀರ್ಮಾನ ಮತ್ತು ನಿಲುವು ಮೂರ್ತವಾಗಿರುತ್ತದೆ. ಕೆಲವೊಮ್ಮೆ ಅವು ಹೇಳಿಕೆಗಳ ರೂಪದಲ್ಲಿಯೂ ಇರುತ್ತವೆ. ಆಗ ಅಂತಹ ಬರಹಗಾರರ ದೃಷ್ಟಿಕೋನ ಹಾಗೂ ಧೋರಣೆ ಯಾವುದು ಎಂಬುದು ಖಚಿತವಾಗುತ್ತದೆ. ಆ ಮೂಲಕ ಅಂತಹ ಬರಹಗಾರರನ್ನು ಪ್ರಗತಿಪರರು ಮತ್ತು ಪ್ರಗತಿ ವಿರೋಧಿಗಳು ಎಂದು ವಿಂಗಡಿಸುವ ಕ್ರಮವಿದೆ. ಈ ವಿಂಗಡಣೆಯ ಕ್ರಮ ಇಂತಹ ಸಾಹಿತ್ಯದ ಮಟ್ಟಿಗೆ ಸರಿ. ಆದರೆ ಇದೇ ತೀರ್ಮಾನದ ಅಭಿಪ್ರಾಯವನ್ನು ಬೇರೆ ಪ್ರಕಾರದ ಸಾಹಿತ್ಯವನ್ನು ಪರಿಶೀಲಿಸಲು ಬಳಸುವುದು ಅಷ್ಟು ಸೂಕ್ತವಾದ ವಿಧಾನವಲ್ಲ. ಆದರೂ ಹಾಗೆ ಬಳಸಲಾಗುತ್ತಿದೆ. ಈ ಕಾರಣದಿಂದ ಸಂಶೋಧನೆಗೆ ಕೆಲವು ತಾತ್ವಿಕ ಸಮಸ್ಯೆಗಳು ಎದುರಾಗಿವೆ.

ಗದ್ಯ ಅಥವಾ ಲೇಖನಗಳಲ್ಲಿ ವಿಷಯವನ್ನು ಕುರಿತು ಬರಹಗಾರರ ತೀರ್ಮಾನ ಮೂರ್ತರೂಪದಲ್ಲಿರುತ್ತದೆ. ಕೆಲವು ಸಲ ತಮ್ಮ ತೀರ್ಮಾನಗಳನ್ನು ಮಂಡಿಸುವ ಸಲುವಾಗಿ, ಹೇರುವ ಸಲುವಾಗಿ ಲೇಖನಗಳನ್ನು ಬರೆಯಲಾಗುತ್ತದೆ. ಅದು ಏನೇ ಇರಲಿ. ಒಟ್ಟಿನಲ್ಲಿ ಲೇಖನಗಳಲ್ಲಿ  ಲೇಖಕರ ತೀರ್ಮಾನಗಳು ಸಿದ್ಧರೂಪದಲ್ಲಿ ಇರುತ್ತವೆ ಎಂಬುದು ಸ್ಪಷ್ಟ. ಇದೇ ರೀತಿಯಲ್ಲಿ ಬೇರೆ ಸಾಹಿತ್ಯ ಪ್ರಕಾರಗಳಲ್ಲಿಯೂ ಲೇಖಕರ ತೀರ್ಮಾನಗಳು ಮೂರ್ತರೂಪದಲ್ಲಿ ಇರುತ್ತವೆ ಎಂದು ನಂಬಲಾಗಿದೆ. ಅದರಲ್ಲೂ ಮುಖ್ಯವಾಗಿ ಅಸ್ಪೃಶ್ಯತೆ, ಜಾತಿ ಮುಂತಾದ ಸಾಮಾಜಿಕ ವಿಷಯಗಳಿಗೆ ಬಂದರಂತೂ ಮುಗಿದೇ ಹೋಯಿತು. ಆಯಾ ಲೇಖಕರ ಧೋರಣೆ, ನಿಲುವು ಏನು ಎಂಬುದನ್ನು ಸಿದ್ಧಮಾದರಿಯಲ್ಲಿ ಇದೆ ಎಂದು ನಂಬಿ ಅದರ ಪಟ್ಟಿಯನ್ನು ಹುಡುಕುವ ಕೆಲಸ ಶುರುವಾಗುತ್ತದೆ. ‘ಕುವೆಂಪು ಕೃತಿಗಳಲ್ಲಿ ಅಸ್ಪೃಶ್ಯತೆ ಮತ್ತು ಜಾತಿಯನ್ನು ಕುರಿತು ಕುವೆಂಪು ಅವರ ನಿಲುವುಗಳೇನು?’, ‘ಅಸ್ಪೃಶ್ಯತೆ ಜಾತಿ ಕುರಿತು ಪಂಪನ ನಿಲುವು ಏನು?’, ‘ಅಸ್ಪೃಶ್ಯತೆ ಜಾತಿ ಕುರಿತು ಬೈರಪ್ಪನವರ ನಿಲುವು ಏನು?’, ‘ಅಸ್ಪೃಶ್ಯತೆ ಜಾತಿ ಕುರಿತು ಲಂಕೇಶ್ ಅವರ ನಿಲುವು ಏನು?’ ಈ ರೀತಿಯಲ್ಲಿ ಪ್ರಶ್ನೆಯನ್ನು ಸರಳವಾಗಿ ಮತ್ತು ಯಾಂತ್ರಿಕವಾಗಿ ನಿರ್ವಹಿಸುವ ರೂಢಿ ಮುಂಚೂಣಿಗೆ ಬಂದಿದೆ. ಪ್ರಶ್ನೆಯನ್ನು ಇಷ್ಟು ಯಾಂತ್ರಿಕವಾಗಿ ಕೇಳಿಕೊಂಡರೆ ಸಾಹಿತ್ಯ ಕೃತಿಗಳಲ್ಲೂ ಅಷ್ಟೇ ಯಾಂತ್ರಿಕ ವಿಧಾನದಲ್ಲಿ ಸಿದ್ಧಮಾದರಿಯ ಹೇಳಿಕೆಗಳನ್ನು ಹುಡುಕಬೇಕಾಗುತ್ತದೆ. ಸಂಶೋಧಕರಿಗೂ ಅಸ್ಪೃಶ್ಯತೆ ಮತ್ತು ಜಾತಿ ಕುರಿತು ಕೆಲವು ತೀರ್ಮಾನಗಳಿರುತ್ತವೆ. ಈ ತೀರ್ಮಾನಗಳು ಒಂದು ಕಡೆ. ಸಾಹಿತ್ಯ ಕೃತಿಗಳ ಸಿದ್ಧಮಾದರಿಯ ತೀರ್ಮಾನಗಳು ಮತ್ತೊಂದು ಕಡೆ. ಇವೆರಡನ್ನೂ ಹೋಲಿಕೆ ಮಾಡಿ, ಈ ಬರಹಗಾರರು ಪ್ರಗತಿಪರರು, ‘ಈ ಬರಹಗಾರರು ಪ್ರಗತಿ ವಿರೋಧಿಗಳು’ ಎಂಬ ಯಾಂತ್ರಿಕ ತೀರ್ಮಾನಕ್ಕೆ ಬರಲಾಘುತ್ತದೆ. ಅದರಲ್ಲೂ ಬರಹಗಾರರು ಬ್ರಾಹ್ಮಣ ಸಮುದಾಯದವರಾಗಿದ್ದರೆ ಮುಗಿದೇ ಹೋಯಿತು. ಅವರಿಗೆ ಒಂದೇ ಏಟು ಸಾಕು. ‘ಶಿವರಾಮ ಕಾರಂತರು, ಚೋಮನ ದುಡಿಯಲ್ಲಿ ಚೋಮನಿಗೆ ಭೂಮಿ ಕೊಡಿಸಲಿಲ್ಲ. ಯಾಕೆಂದರೆ ಅವರು ಬ್ರಾಹ್ಮಣರು. ಚೋಮ ಅಸ್ಪೃಶ್ಯ. ಆದ್ದರಿಂದ ಕಾರಂತರು ಜಾತಿ ಪರವಾಗಿದ್ದಾರೆ’. ಈ ಅಭಿಪ್ರಾಯವನ್ನು ಕೇಳಿಕೇಳಿ ಸಾಕಾಗಿ ಹೋಗಿದೆ. ಹೋಗಲಿ ಕಾರಂತರ ಕಾದಂಬರಿಗಳಲ್ಲಿ ಚೋಮಗೇಣಿ ಭೂಮಿಯನ್ನಾದರೂ ಕೇಳುತ್ತಾನೆ. ಆದರೆ ಕುವೆಂಪು ಕಾದಂಬರಿಗಳಲ್ಲೇಕೆ ದಲಿತರಿಗೆ ಸಂಬಂಧಿಸಿ ಭೂಮಿಯ ಪ್ರಸ್ತಾಪವೇ ಬರುವುದಿಲ್ಲ? ಈ ಪ್ರಶ್ನೆಯನ್ನು ಕೇಳಬಹುದಲ್ಲಾ? ಮತ್ತೆ ವಿಷಯಕ್ಕೆ ಬರೋಣ. ಗದ್ಯ ಪ್ರಕಾರಗಳನ್ನು ಹೊರತುಪಡಿಸಿದ ಸಾಹಿತ್ಯ ಕೃತಿಗಳಲ್ಲಿ ಅಸ್ಪೃಶ್ಯತೆ ಮತ್ತು ಜಾತಿ ಕುರಿತ ಬರಹಗಾರರ ತೀರ್ಮಾನಗಳು, ನಿಲುವುಗಳು ಸಿದ್ಧಮಾದರಿಯಲ್ಲಿ ಇರುವುದಿಲ್ಲ. ಇರಬೇಕೊ ಇರಬಾರದೊ ಎಂಬುದು ಬೇರೆ ಚರ್ಚೆ. ಓದುಗರು ತಮ್ಮ ಧೋರಣೆಯ ಓದಿನ ಮೂಲಕ ಸಾಹಿತ್ಯ ಕೃತಿಗಳ ನಿಲುವುಗಳನ್ನು ಕಂಡುಕೊಳ್ಳುತ್ತಾರೆ. ಹೀಗೆ ಓದುಗರು ತಮ್ಮ ಧೋರಣೆಯ ಮೂಲಕ ಕಂಡುಕೊಳ್ಳುವ ನಿಲುವುಗಳನ್ನು ಯಾಂತ್ರಿಕವಾಗಿ ಬರಹಗಾರರ ತಲೆಗೆ ಕಟ್ಟುವ ಪದ್ಧತಿ ಇದೆ. ಹಾಗೆ ಬರಹಗಾರರ ತಲೆಗೆ ಕಟ್ಟಲು ಬೇರೊಂದು ಕಾರಣವೂ ಇದೆ. ಅದು ಸಾಹಿತ್ಯಕವಾದುದಲ್ಲ. ಸಾಹಿತ್ಯದ ಆಚೆಗೆ ಆ ಬರಹಗಾರರಿಗೂ ಮತ್ತು ಓದುಗರಿಗೂ ಇರುವ ಸಾಮಾಜಿಕ ಸಂಬಂಧದ್ದು. ಆ ಸಾಮಾಜಿಕ ಸಂಬಂಧವು ಅನೇಕ ಒಳವಿನ್ಯಾಸಗಳನ್ನು ಹೊಂದಿರುತ್ತದೆ. ಧರ್ಮ, ಜಾತಿ, ಒಳಜಾತಿ, ಕೋಮು, ಪ್ರದೇಸ, ಲಿಂಗ ಮುಂತಾದ ನೆಲೆಗಳ ಸಂಬಂಧಗಳು ಕೆಲಸ ಮಾಡುತ್ತವೆ. ಪ್ರತಿಫಲ ಅಪೇಕ್ಷೆಗಳು, ವ್ಯಾವಹಾರಿಕ ಲಾಭ ನಷ್ಟಗಳು, ಪ್ರಶಸ್ತಿ ಬಹುಮಾನಗಳ ಅಪೇಕ್ಷೆ ಆಕಾಂಕ್ಷೆಗಳು ಪೂರ್ವ ನಿಯೋಜಿತವಾಗಿ ಕೆಲಸ ಮಾಡುತ್ತವೆ. ಈ ಕಾರಣಗಳೂ ಸೇರಿದಂತೆ ಪ್ರಗತಿಪರ ಬರಹಗಾರರು ಮತ್ತು ಪ್ರಗತಿ ವಿರೋಧಿ ಬರಹಗಾರರು ಎಂದು ಸರಳಿಕರಿಸಲಾಗುತ್ತಿದೆ. ಸಾಹಿತ್ಯೇತರ ಹಿನ್ನೆಲೆಗಳು ಮತ್ತು ಪೂರ್ವಗ್ರಹಗಳು ಸೇರಿ ಸಾಹಿತ್ಯ ಸಂಶೋಧನೆಯಲ್ಲಿ ಅವಸರದ ತೀರ್ಮಾನಗಳನ್ನು ಪ್ರಚೋದಿಸುತ್ತವೆ. ಇಲ್ಲವೆ ಕೆಲವು ‘ಒಪ್ಪಿತ ಸರಳ ತೀರ್ಮಾನ’ಗಳನ್ನು ಪುನರಾವರ್ತನೆ ಮಾಡುತ್ತಿವೆ. ಸಾಹಿತ್ಯ ಸಂಶೋಧಕರು ಈ ‘ಒಪ್ಪಿತ ಸರಳ ತೀರ್ಮಾನ’ಗಳ ಬೆನ್ನು ಹತ್ತಿದ್ದಾರೆ. ಸಾಹಿತ್ಯ ಕೃತಿಗಳ ಬಗ್ಗೆ ತಾವೇನು ಹೇಳಬೇಕು ಎಂಬುದು ಹಿಂದಕ್ಕೆ ಹೋಗುತ್ತಿದೆ. ‘ಒಪ್ಪಿತ ಸರಳ ತೀರ್ಮಾನ’ಗಳು ಸಂಶೋಧನೆಯ ಹೆಸರಿನಲ್ಲಿ ರಿಪೀಟ್ ಆಗುತ್ತಿವೆ. ಸಂಶೋಧನೆ ಇದರಿಂದ ಹೊರಬರಬೇಕಾದ ತುರ್ತು, ಅಗತ್ಯ ಎರಡೂ ಇದೆ.

* * *