ಸಾಹಿತ್ಯದ ಮುದ್ರಣಕ್ಕೂ ಮತ್ತು ಅದನ್ನು ಕುರಿತ ಸಂಶೋಧನೆಗೂ ನೇರವಾದ ಸಂಬಂಧವಿದೆ. ಈ ಸಂಬಂಧವು ಹಲವು ಒಳವಿನ್ಯಾಸಗಳನ್ನು ಒಳಗೊಂಡಿದೆ. ಒಂದು ಯಾವುದೇ ಸಾಹಿತ್ಯ ಮುದ್ರಣವಾಗದ ಹೊರತು ಅದನ್ನು ಕುರಿತು ಸಂಶೋಧನೆ ಅಸಾಧ್ಯ ಎನ್ನುವ ವಾತಾವರಣವಿದೆ. ಮುದ್ರಣವಾಗದೆ ಕೇವಲ ಹಸ್ತಪ್ರತಿಯಲ್ಲೊ, ಮೌಖಿಕವಾಗಿಯೊ ಇದರೆ ಅದನ್ನು ಅಧಿಕೃತ ಎಂದು ಪರಿಗಣಿಸುವ ಪರಿಪಾಠ ಇಲ್ಲ. ಎರಡು: ಹಸ್ತಪ್ರತಿಗಳಲ್ಲಿನ ಸಾಹಿತ್ಯ ಕೃತಿಗಳನ್ನು ಮುದ್ರಣ ರೂಪಕ್ಕೆ ತರಲಾಗುತ್ತದೆ ಒಂದೇ ಪಠ್ಯದ ಹಲವು ಹಸ್ತಪ್ರತಿಗಳಿದ್ದರೆ ಅವುಗಳಲ್ಲಿ ‘ಅಧಿಕೃತ’ ಎನ್ನುವ ತೀರ್ಮಾನವೇ ಆ ಎಂದು ತೀರ್ಮಾನಿಸುವ ಪದ್ಧತಿ ಇದೆ. ಈ ‘ಅಧಿಕೃತ’ ಎನ್ನುವ ತೀರ್ಮಾನವೇ ಆ ಸಾಹಿತ್ಯವನ್ನು, ಆ ಪಠ್ಯವನ್ನು ಕುರಿತ ಅಧ್ಯಯನವನ್ನು ಪ್ರಭಾವಿಸುತ್ತದೆ ಮತ್ತು ನಿಯಂತ್ರಿಸುತ್ತದೆ. ಇದರ ಜೊತೆಗೆ ‘ಶುದ್ಧ ಪಠ್ಯ’ ಎನ್ನುವ ತೀರ್ಮಾನ ಕೂಡ ಸಾಮಾಜಿಕವಾಗಿ ಮೇಲಿನವರಿಂದ ಕೆಳಗಿನವರಿಗೆ ಬಲಾತ್ಕಾರವಾಗಿ ಹೇರಲ್ಪಟ್ಟ ಮೌಲ್ಯಪ್ರಜ್ಞೆಯನ್ನು ಒಳಗೊಂಡಿದೆ. ಹಾಗಾಗಿ ಸಾಹಿತ್ಯ  ಪಠ್ಯಗಳನ್ನು ‘ಶುದ್ಧ ಹಾಗೂ ‘ಅಶುದ್ಧ’ ಎಂದು ವಿಂಗಡಿಸುವುದರಿಂದ ಮುಂದೆ ಅವುಗಳನ್ನು ಕುರಿತ ಸಂಶೋಧನೆಯ ಧೋರಣೆಯನ್ನು ಅದು ನಿಯಂತ್ರಿಸುತ್ತದೆ. ಆದ್ದರಿಂದ ಗ್ರಂಥ ಸಂಪಾದನಾಶಾಸ್ತ್ರದ ಸಾಂಪ್ರದಾಯಿಕ ದೃಷ್ಟಿಕೋನಗಳು ಸಂಶೋಧನೆಗಳ ಮೇಲೆ ಕೆಲವು ಪೂರ್ವಗ್ರಹಗಳನ್ನು ಹೇರುತ್ತಿದೆ. ಈ ಪೂರ್ವ ತೀರ್ಮಾನಗಳು ಸಂಶೋಧನೆಗಳ ದಿಕ್ಕು ದೆಶೆಗಳನ್ನು ರೂಪಿಸುತ್ತಿವೆ. ನಂತರ ಆ ಸಾಹಿತ್ಯ ಓದು, ಅಧ್ಯಯನ ಮುಂತಾದವುಗಳಿಗೆ ಒಳಗಾಗುತ್ತದೆ. ಮೂರು ಹಸ್ತಪ್ರತಿ ಇಲ್ಲದ ಅಪಾರವಾಗಿರುವ ಮೌಖಿಕ ಸಾಹಿತ್ಯವನ್ನೂ ಕೂಡ ಸಂಗ್ರಹಿಸಿ ಸಂಪಾದನೆ ಮಾಡಲಾಗುತ್ತದೆ. ಅವುಗಳನ್ನು ಮುದ್ರಣ ರೂಪಕ್ಕೆ ತರಲಾಗುತ್ತದೆ. ಅನಂತರವೇ ಅವು ಅಧ್ಯಯನಕ್ಕೆ ಮತ್ತು ಸಂಶೋಧನೆಗೆ ಯೋಗ್ಯ ಎಂದು ನಂಬಲಾಗಿದೆ.

ಇದುವರೆಗೆ ಮುದ್ರಣಕ್ಕೆ ಬಾರದ ಎಷ್ಟೋ ಪ್ರಾಚೀನ, ಮಧ್ಯಕಾಲೀನ ಪಠ್ಯಗಳನ್ನು ಸಂಪಾದನೆ ಮಾಡಿ, ಅವುಗಳನ್ನು ಮುದ್ರಣ ರೂಪಕ್ಕೆ ತರಲಾಗುತ್ತದೆ. ಜೊತೆಗೆ ಅವುಗಳಿಗೆ ಪ್ರಸ್ತಾವನೆಗಳನ್ನು ಬರೆಯಲಾಗುತ್ತದೆ. ಈ ಪ್ರಸ್ತಾವನೆಗಳು ಕೃತಿಕಾರರ ಬಗೆಗೆ ಕೆಲವು ಮಾಹಿತಿಗಳನ್ನು ಕೊಡುತ್ತವೆ. ಕೃತಿಕಾರರ ಕಾಲ, ಧರ್ಮ, ಜಾತಿ, ಒಳಜಾತಿ, ಅವರ ಲಿಂಗ, ಅವರ ಆರಾಧ್ಯ ದೈವ ಇವೇ ಮೊದಲಾದ ಸಂಗತಿಗಳನ್ನು ಆ ಪ್ರಸ್ತಾವನೆಗಳು ಒಂಗೊಂಡಿರುತ್ತವೆ. ಇದರ ಜೊತೆಗೆ ಆಯಾ ಪಠ್ಯಗಳ ಮೇಲೆ ಸಂಕ್ಷಿಪ್ತ ಪರಿಚಯ, ಆ ಪಠ್ಯಗಳ ‘ಉಕ್ತೃಷ್ಟ’ ಭಾಗಗಳು, ಆ ಪಠ್ಯದ ಪಾತ್ರ ಚಿತ್ರಣ ಇವೇ ಮೊದಲಾದ ಹಲವು ಸಂಗತಿಗಳನ್ನು ಆ ಪ್ರಸ್ತಾವನೆಯಲ್ಲಿ ಬರೆಯಲಾಗಿರುತ್ತದೆ. ಒಂದು ಹಂತದಲ್ಲಿ ಇಂತಹ ಸಂಪಾದನೆಯನ್ನೂ ಕೂಡ ಸಂಶೋಧನೆ ಎಂದು ಕರೆಯಲಾಗುತ್ತದೆ. ಪ್ರಾಚೀನ ಮತ್ತು ಹಳಗನ್ನಡ ಕೃತಿಗಳನ್ನು ಸಂಪಾದಿಸಿ, ಸಂಕಲಿಸಿ, ಮುದ್ರಣಕ್ಕೆ ತಯಾರು ಮಾಡುವ ಕೆಲಸವನ್ನೂ ಕೂಡ ಸಂಶೋಧನೆ ಎಂದೇ ಕರೆಯಲಾಗಿದೆ. ಕನ್ನಡದ ಮೊದಲ ಹಂತದ ಇಂತಹ ಅನೇಕ ಕೆಲಸಗಳನ್ನು ಸಂಶೋಧನೆ ಎಂದು ಕರೆಯಲಾಗಿದೆ. ಅಷ್ಟು ಮಾತ್ರವಲ್ಲ ಆ ಕೆಲಸ ಮಾಡಿದ ವಿದ್ವಾಂಸರನ್ನು ಸಂಶೋಧಕರು ಎಂದು ಕರೆಯಲಾಗಿದೆ. ಮಂಜೇಶ್ವರ ಗೋವಿಂದ ಪೈ, ಆರ್‌. ನರಸಿಂಹಾಚಾರ್, ಡಿ.ಎಲ್.ನರಸಿಂಹಾಚಾರ್, ಫ.ಗು.ಹಳಕಟ್ಟಿ ಮುಂತಾದ ವಿದ್ವಾಂಸರನ್ನು ಕನ್ನಡದ ಮೊದಲ ಹಂತದ ಸಂಶೋಧಕರು ಎಂದು ಕರೆಯಲಾಗಿದೆ.

ಇದೇ ಸ್ವರೂಪವನ್ನು ಜಾನಪದ ಸಾಹಿತ್ಯ ಸಂಗ್ರಹದ ವಿಷಯದಲ್ಲಿಯೂ ಕಾಣಬಹುದು. ಬರಹ ರೂಪಕ್ಕೆ ಇಲ್ಲವೆ ಮುದ್ರಣ ರೂಪಕ್ಕೆ ಬಾರದ ಮೌಖಿಕ ಸಾಹಿತ್ಯವನ್ನು ಸಂಗ್ರಹಿಸಿ, ಅವುಗಳನ್ನು ಬರಹ ರೂಪಕ್ಕೆ ಸಿದ್ಧಮಾಡಿ ನಂತರ ಅವುಗಳನ್ನು ಪ್ರಕಟಿಸಲಾಗುತ್ತದೆ. ಅವುಗಳಿಗೆ ಪ್ರಸ್ತಾವನೆಗಳನ್ನು ಬರೆಯಲಾಗುತ್ತದೆ. ಜಾನಪದದಲ್ಲಿ ನಡೆದಿರುವ ಹಾಗೂ ನಡೆಯುತ್ತಿರುವ ಈ ಕೆಲಸವನ್ನೂ ಕೂಡ ಸಂಶೋಧನೆ ಎಂದು ಕರೆಯಲಾಗಿದೆ. ಮೊದಲ ಹಂತದಲ್ಲಿ ಜಾನಪದವನ್ನೂ ಸಂಗ್ರಹಿಸಿ, ಮುದ್ರಣ ರೂಪಕ್ಕೆ ಸಿದ್ಧಗೊಳಿಸಿದ ವಿದ್ವಾಂಸರನ್ನು ಸಂಶೋಧಕರು ಎಂದು ಕರೆಯಲಾಗುತ್ತಿದೆ. ಅಂದರೆ ಮೌಖಿಕ ರೂಪದಲ್ಲಿದ್ದ ಸಾಹಿತ್ಯ ರೂಪವು ಓದಲು ಮತ್ತು ಅಧ್ಯಯನ ಮಾಡಲು ಆಗುತ್ತಿರಲಿಲ್ಲ. ಆದರೆ ಅದೇ ಸಾಹಿತ್ಯ ಮುದ್ರಣ ರೂಪಕ್ಕೆ ಬಂದರೆ ಅದನ್ನು ಓದಬಹುದು ಹಾಗೂ ಅದನ್ನು ಕುರಿತು ಸಂಶೋಧನೆ ಮಾಡಬಹುದು. ಇದು ಒಂದು ಕಡೆ ಓದುವಿಕೆಗೆ ಹಾಗೂ ಸಂಶೋಧನೆಗೆ ನೆರವಾದರೆ ಮತ್ತೊಂದು ಕಡೆ ಈ ಕೆಲಸವನ್ನೆ ಸ್ವತಂತ್ರವಾಗಿ ಸಂಶೋಧನೆ ಎಂದು ಕರೆಯುವ ರೂಢಿ ಇದೆ.

ಸಾಹಿತ್ಯವು ಮುದ್ರಣಕ್ಕೆ ಬರುವ ಮೊದಲು ಒಂದೊ ಅದು ಹಸ್ತಪ್ರತಿ ರೂಪದಲ್ಲಿ ಇರುತ್ತದೆ ಇಲ್ಲವೆ ಮೌಖಿಕ ರೂಪದಲ್ಲಿ ಇರುತ್ತದೆ. ಹಾಗೇ ಲಿಖಿತ ಮತ್ತು ಮುದ್ರಣ ರೂಫದಲ್ಲಿ ಇಲ್ಲದ ಸಾಹಿತ್ಯವನ್ನು ಮುದ್ರಣ ರೂಪಕ್ಕೆ ತರಲಾಗುತ್ತದೆ. ಹೀಗೆ ಮುದ್ರಣ ರೂಪಕ್ಕೆ ತರುವ ಕೆಲಸವನ್ನು ಆಕರ ಸಾಹಿತ್ಯ ನಿರ್ಮಾಣ ಎಂದು ಕರೆಯಲಾಗುತ್ತದೆ. ಅಂದರೆ ಓದಲು ಮತ್ತು ಅಧ್ಯಯನ ಮಾಡಲು ಯೋಗ್ಯವಾದ ಆಕರವನ್ನು ಈ ಕೆಲಸ ನಿರ್ಮಾಣ ಮಾಡಿರುತ್ತದೆ. ಹಾಗಾಗಿ ಇಂತಹ ಕೆಲಸಗಳನ್ನು ಒಂದು ಕಡೆ ಸಂಶೋಧನೆ ಎಂದು ಕರೆದರೆ ಮತ್ತೊಂದು ಕಡೆ ಇದೇ ಕೆಲಸವನ್ನು ಆಕರ ನಿರ್ಮಾಣದ ಕೆಲಸ ಎಂದೂ ಕರೆಯಲಾಗುತ್ತಿದೆ.

ಸಾಹಿತ್ಯ ಮುದ್ರಣವಾಗುವ ಮೊದಲು ಅದು ಹಸ್ತಪ್ರತಿಯಲ್ಲೊ ಅಥವಾ ಮೌಖಿಕ ರೂಪದಲ್ಲೊ ಇರುತ್ತದೆ. ಅದು ಒಂದು ಬಗೆಯ ಮಾಧ್ಯಮ ಎನ್ನಬಹುದು. ಮೌಖಿಕ ರೂಪದಲ್ಲಿರುವ ಜನಪದ ಸಾಹಿತ್ಯವು ಒಂದು ಮಾಧ್ಯಮ. ಅದನ್ನು ಸಂಗ್ರಹಿಸುವಾಗ ಅದನ್ನು ಬೇರೆ ಬೇರೆ ಮಾಧ್ಯಮಗಳಿಗೆ ರೂಪಾಂತರಿಸಬಹುದು. ಉದಾಹರಣೆಗೆ ಜನಪದ ಕಥೆಯನ್ನೊ, ಹಾಡನ್ನೊ ಹಾಡುವವರಿಂದ ಹಾಡಿಸಿ, ಅದನ್ನು ಬರೆದುಕೊಂಡು ನಂತರ ಅದನ್ನು ಮುದ್ರಿಸಬಹುದು. ಇನ್ನು ಕೆಲವರು ಅದನ್ನು ರೆಕಾರ್ಡ್‌ ಮಾಡಿಕೊಂಡು ಅದನ್ನು ಕ್ಯಾಸೆಟ್ ರೂಪದಲ್ಲೊ, ಸಿಡಿ ರೂಪದಲ್ಲೊ ಪರಿವರ್ತನೆ ಮಾಡಬಹುದು. ಜನಪದರಲ್ಲಿ ಇರುವ ಆಚರಣೆ, ಹಬ್ಬ ಜಾತ್ರೆ, ಕುಣಿತ ಇವನ್ನು ಬರೆದುಕೊಂಡು ಮುದ್ರಣಕ್ಕೆ ತರಲು ಆಗುವುದಿಲ್ಲ. ಯಾಕೆಂದರೆ ಅವು ಶಾಬ್ದಿಕ ರೂಪಗಳಲ್ಲ. ಹಾಗಾಗಿ ಅವುಗಳನ್ನು ರೆಕಾರ್ಡ್ ಮಾಡಿಕೊಂಡು ಅವುಗಳ ಸಿಡಿಯನ್ನು ತಯಾರು ಮಾಡಬೇಕಾಗುತ್ತದೆ. ಇದನ್ನು ಮಾಧ್ಯಮ ಪಲ್ಲಟ ಎನ್ನುತ್ತಾರೆ. ಈ ಮಾಧ್ಯಮ ಪಲ್ಲಟವೂ ಸಂಶೋಧನೆಯ ಒಂದು ಭಾಗವಾಗಿದೆ. ಸಾಹಿತ್ಯವನ್ನು ನಿರೂಪಿಸುವಾಗ ಕೆಲವೊಮ್ಮೆ ಅದರ ದೃಶ್ಯಭಾಗವೂ ಮುಖ್ಯವಾಗಬಹುದು.

ಮಾಹಿತಿಗಳು ಈ ಕಾಲದ ಮುಖ್ಯ ಬೇಡಿಕೆಗಳಲ್ಲಿ ಒಂದು. ಎಲ್ಲಾ ಜ್ಞಾನಶಾಖೆಗಳಲ್ಲೂ ಮಾಹಿತಿಗಳಿಗೆ ಅಪಾರ ಬೇಡಿಕೆ ಇದೆ. ಆ ಮಾಹಿತಿಗಳನ್ನು ನಿರ್ಮಾಣ ಮಾಡಲು, ಸೃಷ್ಟಿ ಮಾಡಲು, ಸಂಗ್ರಹಿಸಲು, ಒದಗಿಸಲು ಮತ್ತು ಪೂರೈಸಲು ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಸಾಹಿತ್ಯವು ತಂತ್ರಜ್ಞಾನ ಮಾಧ್ಯಮದ ಮೂಲಕವೂ ಈ ಮಾಹಿತಿಗಳನ್ನು ಬಿತ್ತರಿಸುತ್ತಿದೆ. ಜೊತೆಗೆ ಮುದ್ರಣ ಮಾಧ್ಯಮದಲ್ಲೂ ಮಾಹಿತಿಗಳನ್ನು ಒದಗಿಸುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳು ಮಾಹಿತಿಗಳನ್ನು ಮುಖ್ಯವಾಗಿ ಅವಲಂಬಿಸಿವೆ. ಈ ಬಗೆಯ ಮಾಹಿತಿಗಳನ್ನು ಒಳಗೊಂಡ ಸಾಹಿತ್ಯ ಸಾಕಷ್ಟು ಪ್ರಮಾಣದಲ್ಲಿ ಮುದ್ರಣವಾಗುತ್ತಿದೆ. ಈ ಮುದ್ರಣಕ್ಕೂ ಮಾರುಕಟ್ಟೆಯ ಲಾಭಕ್ಕೂ ಸಂಬಂಧವಿದೆ. ಮಾರುಕಟ್ಟೆಯ ಲಾಭಕ್ಕೂ ಮತ್ತು ಮಾಹಿತಿಗಳನ್ನೇ ಜ್ಞಾನ ಎಂದು ಹೇಳುತ್ತಿರುವ ಧೋರಣೆಗೂ ಸಂಬಂಧವಿದೆ. ಸಾಮ್ರಾಜ್ಯಶಾಹಿಯು ‘ಜ್ಞಾನದ ಮಾರುಕಟ್ಟೆ’ ಎಂಬ ಪದವನ್ನು ಪ್ರಯೋಗ ಮಾಡಿದೆ. ಮಾರುಕಟ್ಟೆಯಲ್ಲಿ ನಡೆಯುವುದು ವ್ಯಾಪಾರ, ಲಾಭ ಮತ್ತು ನಷ್ಟಗಳು ಅಷ್ಟೆ. ಕನ್ನಡದಲ್ಲೂ ಮಾಹಿತಿ ಪ್ರಧಾನ ಸಾಹಿತ್ಯ ಮುದ್ರಣವಾಗುತ್ತಿದ್ದು, ಅದಕ್ಕೆ ಸಾಕಷ್ಟು ಲಾಭದ ಮಾರುಕಟ್ಟೆ ಇದೆ. ಪರಿಣಾಮವಾಗಿ ಸಾಹಿತ್ಯದ ಹಲವು ಸಂವೇದನೆಗಳನ್ನು ಪ್ರಧಾನವಾಗಿಸದೆ ಅದನ್ನು ಕೇವಲ ಮಾಹಿತಿಯನ್ನಾಗಿ ಮಾರ್ಪಡಿಸಿ ಮುದ್ರಣ ಮಾಡಲಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷಾ ಮಾರುಕಟ್ಟೆಯಲ್ಲಿ ಈ ಬಗೆಯ ಸಾಹಿತ್ಯ ದೊಡ್ಡ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ವಿವಿಧ ನೌಕರಿಗಳ ನೇಮಕಾತಿಗಳಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳ ಸಾಹಿತ್ಯ, ಟೂರಿ‌ಸ್ಟ್ ಗೈಡ್‌ಗಳು, ನಾಡುನುಡಿಯ ಅಭಿಮಾನದಿಂದ ನಾಡನ್ನು ಪರಿಚಯಿಸುವ ಸಾಹಿತ್ಯ,  ಆಟ, ಆಡಿಗೆ, ಷೇರುಪೇಟೆ ಮುಂತಾದವುಗಳನ್ನು ಪರಿಚಯಿಸುವ ಸಾಹಿತ್ಯ. ಇಲ್ಲೆಲ್ಲ ಮಾಹಿತಿಗಳು ಮಾತ್ರ ಮುಖ್ಯವಾಗಿರುತ್ತವೆ.

ಒಂದು ಹಂತದಲ್ಲಿ ಯಾವುದು ಆಕರ ನಿರ್ಮಾಣವೊ ಅದು ಸಂಶೋಧನೆ. ಒಂದು ಹಂತದಲ್ಲಿ ಯಾವುದು ಆಕರ ಸಂಗ್ರಹವೊ ಅದು ಸಂಶೋಧನೆ. ಒಂದು ಹಂತದಲ್ಲಿ ಯಾವುದು ಮಾಧ್ಯಮ ಪಲ್ಲಟವೊ ಅದು ಸಂಶೋಧನೆ. ಒಂದು ಹಂತದಲ್ಲಿ ಯಾವುದು ಗ್ರಂಥ ಸಂಪಾದನೆಯೊ ಅದು ಸಂಶೋಧನೆ. ಹೀಗೆ ಒಂದು ಕಡೆ ಸಂಶೋಧನೆಗೆ ನೆಲೆಯೊಂದನ್ನು ಒದಗಿಸುವ ಆಕರ ನಿರ್ಮಾಣವನ್ನು ಸಂಶೋಧನೆ ಎಂದು ಕರೆದರೆ ಮತ್ತೊಂದು ಕಡೆ ಅದನ್ನು ಕುರಿತ ಅಧ್ಯಯನವನ್ನು ಸಂಶೋಧನೆ ಎಂದು ಕರೆಯಲಾಗುತ್ತಿದೆ.