ಸಾಹಿತ್ಯ ಸಂಶೋಧನೆಯು ಸಾಹಿತ್ಯದ ಸ್ವರೂಪ ಎಂಬುದನ್ನು ನಂಬಿಕೊಂಡು, ಒಪ್ಪಿಕೊಂಡು ಮೊದಲಾಗುತ್ತದೆ. ಸಾಹಿತ್ಯ ಅಭಿವ್ಯಕ್ತಿಗೆ ನಿರ್ದಿಷ್ಟ ಅಥವಾ ಸಿದ್ಧಮಾದರಿಯ ಚೌಕಟ್ಟುಗಳಿವೆ ಎಂಬುದೇ ಇಲ್ಲಿಯ ಮೂಲ ನಂಬಿಕೆಯಾಗಿದೆ. ಹಾಗಾಗಿ ಕಾವ್ಯ, ಕಥೆ, ಕಾದಂಬರಿ, ನಾಟಕ, ಆತ್ಮಚರಿತ್ರೆ, ಜೀವನ ಚರಿತ್ರೆ, ವಿಮರ್ಶೆ ಮುಂತಾದುವನ್ನು ಸಿದ್ಧಮಾದರಿಯ ಪ್ರಕಾರಗಳು ಎಂದು ನಂಬಲಾಗಿದೆ. ಹಳಗನ್ನಡದ ಬಹುತೇಕ ಕೃತಿಗಳು ಕಾವ್ಯ ಮಾಧ್ಯಮಗಳಾಗಿವೆ. ಅವು ಬೇರೆ ಬೇರೆ ಛಂದಸ್ಸುಗಳಲ್ಲಿ ಅಭಿವ್ಯಕ್ತಿಯಾಗಿವೆ. ಈ ನಂಬಿಕೆಯಿಂದಾಗಿ ವಚನಗಳನ್ನು ಸಾಹಿತ್ಯ ಎಂದು ಪರಿಗಣಿಸಲು ನವೋದಯದ ಕೆಲವು ಬರಹಗಾರರಿಗೆ ಸಮಸ್ಯೆಯಾಗಿತ್ತು. ಅನಂತರವಷ್ಟೆ  ವಚನಗಳನ್ನು ಸಾಹಿತ್ಯ ಎಂದು ಪರಿಗಣಿಸಲಾಯತು. ಅಷ್ಟಾಗಿಯೂ ಈಗಲೂ ಕೂಡ ಕೆಲವರು ವಚನಗಳನ್ನು ನೀತಿಬೋಧನೆಯ ಸುಭಾಷಿತಗಳಂತೆ ಬಳಸುತ್ತಿದ್ದಾರೆ.

ಕಾವ್ಯ, ಕಥೆ, ಕಾದಂಬರಿ, ನಾಟಕ ಇವೆಲ್ಲ ಕೆಲವು ನಿರ್ದಿಷ್ಟ ಅಭಿವ್ಯಕ್ತಿಯ ವಿಧಾನಗಳು ಅಷ್ಟೆ. ಅವನ್ನು ಸಾಹಿತ್ಯ ಪ್ರಕಾರಗಳು ಎಂದು ಗುರುತಿಸಲಾಗಿದೆ. ಸಾಹಿತ್ಯ ಎಂದರೆ ಇವಷ್ಟೇ ಅಲ್ಲ. ಸಾಹಿತ್ಯ ಅಭಿವ್ಯಕ್ತಿಯ ಬೇರೆ ಬೇರೆ ವಲಯಗಳನ್ನು ಗಮನಿಸಬೇಕು. ಪತ್ರಿಕೆಗಳು, ಜಾಹೀರಾತುಗಳು, ಗೋಡೆ ಬರಹಗಳು, ಕಟೌಟ್‌ಗಳು, ಬ್ಯಾನರ್‌ಗಳು, ಕರಪತ್ರಗಳು, ಕ್ಯಾಲೆಂಡರ್‌ಗಳು, ಪಂಚಾಂಗಗಳು, ಪ್ರತಗಳು, ವಿಳಾಸಗಳು, ಲಗ್ನ ಪತ್ರಿಕೆಗಳು, ಆಹ್ವಾನ ಪತ್ರಿಕೆಗಳು, ವಿಸಿಟಿಂಗ್ ಕಾರ್ಡುಗಳು, ವರದಿಗಳು, ಭಾಷಣಗಳು, ಘೋಷಣೆಗಳು, ಜೈಕಾರುಗಳು, ಧಿಕ್ಕಾರುಗಳು, ಪಾಠ ಪ್ರವಚನಗಳು, ಬೋಧನೆಗಳು, ಉಪದೇಶಗಳು, ಆದೇಶಗಳು, ವಿವಿಧ ಕರೆನ್ಸಿಗಳು, ಆಡಳಿತದ ಕಡತಗಳು, ಶಾಸನಗಳು ಇವೇ ಮುಂತಾದ ಹಲವು ಅಭಿವ್ಯಕ್ತಿಗಳನ್ನು ಸ್ಥೂಲವಾಗಿ ಸಾಹಿತ್ಯ ಎಂದು ಗುರುತಿಸಲಾಗಿದೆ. ಅಂದರೆ ಇವುಗಳ ಮುಖ್ಯ ಗುಣ ಅವು ಒಟ್ಟಾರೆ ಬರವಣಿಗೆಯಲ್ಲಿ ಇರಬೇಕು ಎಂಬುದು. ಬರವಣಿಗೆಯಲ್ಲಿ ಇಲ್ಲದುದು ಸಾಹಿತ್ಯವಾಗಬಹುದು. ಆದರೆ ಆ ಬಗ್ಗೆ ಸಂಶೋಧನೆ ಮಾಡಲು ಹೊರಟ ಕೂಡಲೆ ಅದು ಬರಹದಲ್ಲಿ ಇರಬೇಕು ಎಂದು ಬಯಸಲಾಗುತ್ತದೆ. ಹೀಗೆ ಸಂಶೋಧನೆ ಮಾಡುವ ವಿಷಯವು ಬರವಣಿಗೆಯಲ್ಲಿ ಇರಬೇಕು ಎಂಬುದಕ್ಕೂ ಮತ್ತು ಒಪ್ಪಿತ ಪ್ರಜಾಪ್ರಭುತ್ವದ ವ್ಯವಸ್ಥೆಗೂ ನೇರ ಸಂಬಂಧವಿದೆ. ಸರಕಾರದ ಎಲ್ಲಾ ಕೆಲಸಗಳೂ ಕೂಡ ಬರವಣಿಗೆಯಲ್ಲೇ ಇರಬೇಕು. ಇದು ಕಡ್ಡಾಯ ಬರವಣಿಗೆಯಲ್ಲಿ ಇಲ್ಲದುದನ್ನು ಸರಕಾರ, ಆಡಳಿತ, ಕೋರ್ಟು, ಇವು ಪರಿಗಣಿಸುವುದಿಲ್ಲ ಮತ್ತು ಮನ್ನಿಸುವುದಿಲ್ಲ.

ಬರವಣಿಗೆಯಲ್ಲಿ ಏನು ಬರೆದಿರುತ್ತದೆ ಎಂಬುದನ್ನು ಅವಲಂಬಿಸಿ ಅದರ ಸಂಶೋಧನೆ ಮೊದಲಾಗುತ್ತದೆ. ಅದರಲ್ಲಿ ಬರೆದಿರುವುದನ್ನು ಮೊದಲು ನಿರ್ದಿಷ್ಟವಾಗಿ ಮತ್ತು ‘ಖಚಿತ’ವಾಗಿ ನಂಬಲಾಗುತ್ತದೆ. ಅದನ್ನು ನಂಬದ ಹೊರತು ಅದರ ಮೇಲಿನ ಸಂಶೋಧನೆ ಮೊದಲಾಗುವುದಿಲ್ಲ. ಉದಾಹರಣೆಗೆ ಕರೆನ್ಸಿಯನ್ನೆ ತೆಗೆದುಕೊಳ್ಳೋಣ.  ನೋಟು ಮತ್ತು ನಾಣ್ಯಗಳ ಮೇಲೆ ಇಂತಿಷ್ಟು ಎಂಬುದಾಗಿ ಅಂಕಿಸಂಕಿಗಳಲ್ಲಿ ನಮೂದಿಸಲಾಗಿರುತ್ತದೆ. ಮೊದಲು ಅದನ್ನು ನಂಬಲಾಗುತ್ತದೆ. ಹಾಗಾಗಿಯೇ ೫ ರೂಪಾಯಿಯ ಒಂದು ನೋಟನ್ನು ಇದು ೧೦ ರೂಪಾಯಿ ಎಂದು ಹೇಳುವುದಿಲ್ಲ ಮತ್ತು ಹಾಗೆಂದು ನಂಬುವುದಿಲ್ಲ. ೫ ರೂಪಾಯಿ ನೋಟನ್ನು ೫ ರೂಪಾಯಿ ಎಂದೇ ಗುರುತಿಸಬೇಕು. ನಂಬಬೇಕು ಮತ್ತು ಹಾಗೆ ಬಳಸಬೇಕು ಎಂಬುದು ಸರಕಾರದ ಆದೇಶ.

ಸಾಹಿತ್ಯ ಅಭಿವ್ಯಕ್ತಿಯ ವಿವಿಧ ಕ್ರಮಗಳನ್ನು ಸಾಹಿತ್ಯದ ವಿವಿಧ ಪ್ರಕಾರಗಳು ಎಂದು ಹೆಸರಿಸಲಾಗಿದೆ. ಮತ್ತು ಅವುಗಳನ್ನುಹಾಗೆಂದು ಒಪ್ಪಲಾಗಿದೆ. ಸಾಹಿತ್ಯದ ವಿವಿಧ ಪ್ರಕಾರಗಳನ್ನು ವಿಭಾಗ ಮಾಡಿರುವುದರ ಜೊತೆಗೆ ಅವುಗಳೊಳಗೆ ಶ್ರೇಣೀಕರಣಗಳನ್ನೂ ಕೂಡ ಮಾಡಲಾಗಿದೆ. ಕಾವ್ಯವನ್ನು ಕಟ್ಟಲು ಮತ್ತು ಓದಲು ಭಾಷಿಕ ಸೂಕ್ಷ್ಮತೆ ಬೇಕು. ಉಳಿದ ಪ್ರಕಾರಗಳನ್ನು ರಚಿಸಲು ಮತ್ತು ಓದಲು ಅಷ್ಟೇನೂ ಕಷ್ಟವಾಗುವುದಿಲ್ಲ ಎಂಬ ಅಭಿಪ್ರಾಯವಿದೆ. ಭಾಷಿಕ ಸೂಕ್ಷ್ಮತೆಯ ಕಾರಣದಿಂದ ಬೇಂದ್ರೆಯವರ ಹಾಗೂ ಅಡಿಗರ ಕೆಲವ ಕವನಗಳು ಓದಲು, ಅರ್ಥಮಾಡಿಕೊಳ್ಳಲು ಕಷ್ಟ ಎಂಬ ಅಭಿಪ್ರಾಯವಿದೆ. ಈ ಅಂಶವನ್ನು ಕಾವ್ಯಕ್ಕೆ ಸಂಬಂಧಿಸಿ ಹೇಳಲಾಗಿದೆ. ಹಾಗೆ ಹೇಳುವ ಮೂಲಕ ಕಾವ್ಯದ ಹೆಚ್ಚುಗಾರಿಕೆಯನ್ನು ಸಮರ್ಥಿಸಲಾಗುತ್ತಿದೆ. ಗದ್ಯ ಪ್ರಕಾರಗಳು ಬರೆಯಲು ಮತ್ತು ಓದಲು ಸುಲಭ ಎಂತಲೂ; ಪದ್ಯ ಪ್ರಕಾರಗಳು ಬರೆಯಲು ಮತ್ತು ಓದಲು ಸುಲಭ ಅಲ್ಲ ಎಂತಲೂ ಹೇಳಲಾಗುತ್ತಿದೆ. ಆ ಮೂಲಕ ಕಾವ್ಯ ಪ್ರಕಾರಗಳು ಶ್ರೇಷ್ಠ ಎಂತಲೂ; ಗದ್ಯ ಪ್ರಕಾರಗಳು ಕನಿಷ್ಠ ಎಂತಲೂ ಬಿಂಬಿಸಲಾಗುತ್ತಿದೆ. ಇನ್ನು ಗದ್ಯದಲ್ಲೆ ಗೋಡೆ ಬರಹಗಳೊ, ಕರಪತ್ರಗಳೊ ಮುಂತಾದವುಗಳನ್ನು ‘ಇವು ಸಾಹಿತ್ಯ ಅಲ್ಲವೇ ಅಲ್ಲ’ ಎಂದು ಹೇಳುವ ಕೆಲವು ಅಭಿಪ್ರಾಯಗಳಿವೆ. ಸಾಹಿತ್ಯದ ಬೇರೆ ಪ್ರಕಾರಗಳಲ್ಲಿ ಸಮಾಜದ ಮತ್ತು ಸಂಸ್ಕೃತಿಯ ಅಂಶಗಳು ಭಾಷಿಕವಾಗಿ ಅಭಿವ್ಯಕ್ತಿ ಆಗಿರುತ್ತವೆ. ಅಂತಹವೇ ಅಂಶಗಳು ಗೋಡೆ ಬರಹ ಮತ್ತು ಕರಪತ್ರಗಳಲ್ಲಿಯೂ ಭಾಷಿಕವಾಗಿ ಅಭಿವ್ಯಕ್ತಿ ಆಗಿರುತ್ತವೆ.ಈ ಹಿನ್ನೆಲೆಯಲ್ಲಿ ಅವುಗಳನ್ನೂ ಕೂಡ ಸಾಹಿತ್ಯ ಎಂದು ಪರಿಗಣಿಸಲಾಗಿದೆ.

ಸಾಹಿತ್ಯದ ಸ್ವರೂಪ ಯಾವುದೇ ಇದ್ದರೂ, ಅದನ್ನು ಓದುವಾಗ ಮತ್ತು ನಂತರ ಓದುಗರ ಕಲ್ಪನೆಯ ಸಾಹಿತ್ಯದ ಸ್ವರೂಪಕ್ಕೆ ಅದು ಬದಲಾಗುತ್ತದೆ. ಕಥೆ, ಕಾದಂಬರಿ, ನಾಟಕ, ಪ್ರಬಂಧ, ಮಹಾಕಾವ್ಯ ಮುಂತಾದವು ಸಂಕ್ಷಿಪ್ತವಾಗಿ ಹಾಗೂ ಸರಳವಾಗಿ ಕಥೆಯ ಚೌಕಟ್ಟನ್ನು ಪಡೆದುಬಿಡುತ್ತವೆ. ತಮ್ಮ ಪೂರ್ವ ಕಲ್ಪನೆಯ ಕಥೆಯ ಚೌಕಟ್ಟಿಗೆ ಸಾಹಿತ್ಯದ ಯಾವುದೇ ಸ್ವರೂಪವನ್ನು ಪರಿವರ್ತಿಸಿಕೊಳ್ಳುವುದೆ ಸಾಹತ್ಯ ಓದಿನ ಜನಪ್ರಿಯ ವಿಧಾನವಾಗಿದೆ. ಆರಂಭಿಕ ಹಂತದಲ್ಲಿ ಸಾಹಿತ್ಯವು ಕಥೆಯ ಚೌಕಟ್ಟಿನಲ್ಲೆ ಅಭಿವ್ಯಕ್ತಿ ಆಗಿರುವುದನ್ನು ಗಮನಿಸಬಹುದು. ಬುದ್ಧನ ಜಾತಕ ಕಥೆಗಳಿಂದಲೂ ಇದಕ್ಕೆ ಉದಾಹರಣೆಗಳು ಸಿಗುತ್ತವೆ. ಇನ್ನು ಔಪಚಾರಿಕ ಶಿಕ್ಷಣದಲ್ಲಿ ಸಾಹಿತ್ಯ ಬೋಧನೆ ಎಂಬುದು ಸಾರಸಂಗ್ರಹದ ಓದು ಆಗಿದೆ. ಸಾಹಿತ್ಯ ಓದಿನ ಈ ಕ್ರಮ ಸಾಹಿತ್ಯ ಸಂಶೋಧನೆಯಲ್ಲಿ ಸಾಹಿತ್ಯ ಪಠ್ಯಗಳ ಬಗ್ಗೆ ಸಾರಸಂಗ್ರಹವನ್ನು ದಾಖಲಿಸುವಂತೆ ಸೀಮಿತ ಮಾಡಿದೆ. ಸಾಹಿತ್ಯದ ಯಾವ ಅಭಿವ್ಯಕ್ತಿಗಳು ಸಾರಸಂಗ್ರಹಕ್ಕೆ ಮತ್ತು ಕಥೆಯ ಚೌಕಟ್ಟಿಗೆ ಸಿಗುವುದಿಲ್ಲವೊ ಅವನ್ನು ಸಂಶೋಧನೆಗೆ ಆಯ್ಕೆ ಮಾಡಿಕೊಳ್ಳುವುದು ಕಡಿಮೆಯಾಗುತ್ತಿದೆ.

ಸಾಹಿತ್ಯ ಅಭಿವ್ಯಕ್ತಿಯ ವಿವಿಧ ಸ್ವರೂಪಗಳು ಸಾಹಿತ್ಯ ಓದಿನಲ್ಲಿ ತಮ್ಮ ಮೂಲ ಸ್ವರೂಪಗಳನ್ನು ಬದಲಾಯಿಸಿಕೊಳ್ಳುತ್ತವೆ. ಉದಾಹರಣೆಗೆ ಕಾವ್ಯದ ಬಗೆಗೆ ಸಂಶೋಧನೆ ಮಾಡಿದರು ಅದನ್ನು ಕುರಿತು ಕಾವ್ಯ ಮಾಧ್ಯಮದಲ್ಲೆ ಬರೆಯುವುದಿಲ್ಲ. ಅದನ್ನು ಸಂಶೋಧನೆ ಎಂಬ ಗದ್ಯ ಪ್ರಕಾರದಲ್ಲೆ ಬರೆಯುತ್ತಾರೆ. ಈ ಮೂಲಕ ಸಾಹಿತ್ಯ ಸ್ವರೂಪವು ಸಂಶೋಧನೆಯಲ್ಲಿ ರೂಪಪರಿವರ್ತನೆ ಆಗುತ್ತದೆ. ಆದರೆ ಸಾಹಿತ್ಯದ ಎಲ್ಲ ಸ್ವರೂಪಗಳನ್ನು ಕಥೆಯ ಚೌಕಟ್ಟಿಗೆ ಪರಿವರ್ತಿಸುವುದು, ಅವುಗಳ ಸಾರಸಂಗ್ರಹವನ್ನು ಬರೆಯುವುದು ಸಂಶೋಧನೆ ಬರವಣಿಗೆ ಆಗುವುದಿಲ್ಲ.