ಸಾಹಿತ್ಯ ಸಂಶೋಧನೆಯು ಸಾಹಿತ್ಯ ಎಂದರೇನು? ಎಂಬ ಪ್ರಶ್ನೆಯನ್ನು ಎದುರುಗೊಳ್ಳುತ್ತದೆ. ಅದನ್ನು ವಿವರಿಸಲು, ವ್ಯಾಖ್ಯಾನಿಸಲು ಪ್ರಯತ್ನಿಸುತ್ತದೆ. ಆ ವಿವರಣೆಯಲ್ಲಿ ಸಾಹಿತ್ಯ ರಚನೆ ಎಂಬುದು ಒಂದು ಮುಖ್ಯವಾದ ಆಯಾಮ. ಇದನ್ನು ಸಾಹಿತ್ಯ ರಚನೆ, ಸಾಹಿತ್ಯ ನಿರ್ಮಾಣ, ಸಾಹಿತ್ಯ ಸೃಷ್ಟಿ, ಸಾಹಿತ್ಯ ಉತ್ಪಾದನೆ ಮುಂತಾದ ಪದಗಳಲ್ಲಿ ಹೆಸರಿಸಲಾಗಿದೆ. ಈ ಪದಗಳು ಸಮಾನಾರ್ಥಕ ಪದಗಳಂತೆ ಕಂಡರೂ ಅವುಗಳ ನಡುವೆ ವ್ಯತ್ಯಾಸಗಳಿವೆ, ಭಿನ್ನತೆಗಳಿವೆ. ರಚನೆ, ನಿರ್ಮಾಣ. ಸೃಷ್ಟಿ ಮತ್ತು ಉತ್ಪಾದನೆ ಈ ಪದಗಳು ಬೇರೆ ಬೇರ ವಿವರಣೆ ಹಾಗೂ ನಿರೂಪಣೆಗಳನ್ನು ಕೊಡುತ್ತವೆ. ಅಥವಾ ಈ ಪದಗಳನ್ನು ಬೇರೆ ಬೇರೆ ರೀತಿಗಳಲ್ಲಿ ವಿವರಿಸಲು, ವ್ಯಾಖ್ಯಾನಿಸಲು ಸಾಧ್ಯವಿದೆ. ಭಾಷೆಯೊಂದರ ಎಲ್ಲಾ ಪದಗಳೂ ಎಲ್ಲರಿಗೂ ಒಂದೇ ರೀತಿಯ ಅರ್ಥ ವಿವರಣೆ ಕೊಡುವುದಿಲ್ಲ; ಹಾಗೆಯೇ ಎಲ್ಲರೂ ಎಲ್ಲಾ ಪದಗಳನ್ನೂ ಒಂದೇ ರೀತಿಯಲ್ಲಿ ಅರ್ಥಮಾಡಿಕೊಳ್ಳುವುದಿಲ್ಲ. ರಚನೆ, ನಿರ್ಮಾಣ ಮತ್ತು ಉತ್ಪಾದನೆ ಈ ಪದಗಳು ಭೌತಿಕ ಮತ್ತು ಅಭೌತಿಕ ಎರಡೂ ನೆಲೆಗಳಿಗೆ ಸಂಬಂಧಿಸಿದಂತೆ ಕಾಣುತ್ತದೆ. ಹಾಗೆ ನೋಡಿದರೆ ಸಾಹಿತ್ಯ ರಚನೆ ಈ ಎರಡು ನೆಲೆಗಳಲ್ಲಿ ನಡೆಯುವುದಾಗಿದೆ. ಇದರಲ್ಲಿ ಎಷ್ಟು ಭೌತಿಕ ಎಷ್ಟು ಅಭೌತಿಕ ಎಂದು ಗೆರೆ ಕೊರೆದಂತೆ ಪ್ರತ್ಯೇಕ ಮಾಡಿ ಹೇಳಲು ಬರುವುದಿಲ್ಲ.

ಸಾಹಿತ್ಯ ರಚನೆ ಮಾಡಿದವರು ಯಾರು, ಹೇಗೆ ಮತ್ತು ಯಾಕೆ ಎಂಬ ಆಯಾಮವನ್ನು ಸಂಶೋಧನೆಯಲ್ಲಿ ಚರ್ಚಿಸಲಾಗುತ್ತದೆ. ಆಧುನಿಕ ಪೂರ್ವ ಕನ್ನಡ ಸಾಹಿತ್ಯದ ಕರ್ತೃಗಳು ಮತ್ತು ಕೃತಿಗಳ ಬಗ್ಗೆ ‘ಸ್ಪಷ್ಟ ಮಾಹಿತಿ’ಗಳು ಲಭ್ಯವಿಲ್ಲದ ಸಂದರ್ಭದಲ್ಲಿ ಆ ಮಾಹಿತಿಗಳನ್ನು ಹಾಗೂ ಅಂಕಿಸಂಕಿಗಳನ್ನು ಸಂಗ್ರಹಿಸಲಾಯಿತು. ಅವನ್ನು ಸಂಶೋಧನೆ ಎಂದು ಹೆಸರಿಸಲಾಗಿದೆ. ಕರ್ತೃಗಳ ಧಾರ್ಮಿಕ ಮತ್ತು ಸಾಮಾಜಿಕ ಹಿನ್ನೆಲೆಗಳು ಹಾಗೂ ಅವರು ಯಾವ ರಾಜರ ಆಶ್ರಯದಲ್ಲಿ ಇದ್ದರು ಅಥವಾ ಇರಲಿಲ್ಲ ಎಂಬ ಮಾಹಿತಿಗಳು, ಜೊತೆಗೆ ಯಾವ ರಾಜರು ಸಾಹಿತ್ಯಕ್ಕೆ ಮತ್ತು ಕವಿಗಳಿಗೆ ಆಶ್ರಯ, ಪ್ರೋತ್ಸಾಹ ಕೊಟ್ಟಿದ್ದರು ಅಥವಾ ಕೊಟ್ಟಿರಲಿಲ್ಲ ಎಂಬ ಮಾಹಿತಿಗಳ ಸಂಗ್ರಹ ಕೂಡ ಸಂಶೋಧನೆಯ ಹೆಸರಿನಲ್ಲಿ ಬಂದಿದೆ. ಸಾಹಿತ್ಯ ಕೃತಿಗಳ ವಸ್ತು ಯಾವುದು ಮತ್ತು ಅದು ಅರ್ಥವಾಗಬೇಕಾದರೆ ಮೇಲಿನ ಮಾಹಿತಿಗಳ ಅಗತ್ಯ ಎಂಬ ನಂಬಿಕೆ ಅವುಗಳಲ್ಲಿ ಕೆಲಸ ಮಾಡಿದೆ.

ಆಧುನಿಕ ಸಾಹಿತ್ಯ ಸಂದರ್ಭದಲ್ಲಿಯೂ ಸಾಹಿತ್ಯ ರಚನೆ ಮಾಡಿದವರ ಧಾರ್ಮಿಕ, ಆರ್ಥಿಕ, ಸಾಮಾಜಿಕ ಹಾಗೂ ಲಿಂಗಸಂಬಂಧಿ ಮಾಹಿತಿಗಳು ಸಂಶೋಧನೆಗೆ ಹಿನ್ನೆಲೆಯಾಗಿ ಬೇಕು ಎಂದು ಭಾವಿಸಲಾಗಿದೆ. ಬರಹಗಾರರ ಹಿನ್ನೆಲೆಗಳು ಸ್ಪಷ್ಟವಾಗಿ ತಿಳಿದಿದ್ದರೆ, ಅವರ ಕೃತಿಗಳ ವಸ್ತು ಸ್ವರೂಪ, ಅರ್ಥಸ್ವರೂಪ ಮತ್ತು ಧೋರಣೆ ಸ್ಪಷ್ಟವಾಗುತ್ತದೆ ಎಂದು ಭಾವಿಸಲಾಗಿದೆ. ಸಾಹಿತ್ಯ ಕೃತಿಗಳ ವಸ್ತು ಮತ್ತು ಅದರ ಧೋರಣೆ ಬರಹಗಾರರ ಹಿನ್ನೆಲೆಗಳೊಂದಿಗೆ ಕರುಳುಬಳ್ಳಿ ಸಂಬಂಧ ಹೊಂದಿದೆ  ಎಂದು ತಿಳಿಯಲಾಗಿದೆ. ಹಾಗಾಗಿ ಕೃತಿಯ ಧೋರಣೆಯನ್ನು ಬರಹಗಾರರ ಹಿನ್ನಲೆಗಳೊಂದಿಗೆ ತಳುಕು ಹಾಕುವ ಕ್ರಮ ರೂಢಿಯಲ್ಲಿದೆ. ಈ ದೃಷ್ಟಿಕೋನದಲ್ಲೆ ದಲಿತ ಸಾಹಿತ್ಯ, ಬ್ಯಾರಿ ಸಾಹಿತ್ಯ, ಕೊಂಕಣಿ ಸಾಹಿತ್ಯ, ಮುಸ್ಲಿಂ ಬರಹಗಾರರು ಎಂಬ ವಿಂಗಡಣೆಗಳನ್ನು ಮಾಡಲಾಗಿದೆ.

ಸಾಹಿತ್ಯ ಹೇಗೆ ಹುಟ್ಟಿತು/ಹುಟ್ಟುತ್ತದೆ ಮತ್ತು ಯಾಕೆ ಹುಟ್ಟಿತು/ಹುಟ್ಟುತ್ತದೆ ಎಂಬ ಚರ್ಚೆ ನಡೆದಿದೆ; ನಡೆಯುತ್ತಲೂ ಇದೆ. ಸಾಹಿತ್ಯ ರಚನೆ ಯಾಕೆ ನಡೆಯುತ್ತದೆ ಅಥವಾ ಸಾಹಿತ್ಯವನ್ನು ಯಾಕೆ ಬರೆದರು ಎಂಬ ಚರ್ಚೆಯನ್ನು ಬೇರೆ ಬೇರೆ ಆಯಾಮಗಳಲ್ಲಿ ನಡೆಸಲಾಗಿದೆ. ಚರಿತ್ರೆ, ಸಮಾಜ, ಸಂಸ್ಕೃತಿ, ಆರ್ಥಿಕತೆ, ರಾಜಕೀಯ, ಧರ್ಮ, ಜಾತಿ, ಲಿಂಗ ಇವುಗಳ ಪಲ್ಲಟ ಮತ್ತು ಸಂಘರ್ಷಗಳ ಪರಿಣಾಮಗಳ ಫಲವಾಗಿ ಆಯಾ ಕಾಲದ ಸಾಹಿತ್ಯ ರಚನೆಯಾಗಿದೆ ಎಂದು ಚರ್ಚಿಸಲಾಗಿದೆ. ಕೆಲವು ಬರಹಗಾರರು ತಮ್ಮ ವೈಯಕ್ತಿಕ ಹಿನ್ನೆಲೆಗಳನ್ನು ಮತ್ತು ತಮ್ಮ ಬರವಣಿಗೆಯ ಹಿನ್ನೆಲೆಗಳನ್ನು ಕುರಿತು ಉಲ್ಲೇಖಿಸಿರುವುದುಂಟು. ಮೇಲಿನ ಪ್ರಶ್ನೆಗಳನ್ನು ಒಂದು ಕಡೆ ಬರಹಗಾರರ ವೈಯಕ್ತಿಕ ಹಿನ್ನೆಲೆಯಲ್ಲೂ ಮತ್ತೊಂದು ಕಡೆ ವಿಶಾಲವಾಗಿ ಸಾಮಾಜಿಕ ಹಿನ್ನೆಲೆಯಲ್ಲೂ ಚರ್ಚಿಸಿರುವುದಿದೆ.

ಸಾಹಿತ್ಯ ರಚಿಸುವವರು ಅಸಾಮಾನ್ಯರು, ಬುದ್ಧಿವಂತರು, ಪ್ರತಿಭಾವಂತರು, ಪಂಡಿತರು, ಅಕ್ಷರಸ್ಥರು ಎಂಬುದು ಒಂದು ಒಂದು ಬಗೆಯ ನಂಬಿಕೆ ಮತ್ತು ಅದೊಂದು ಮೂಢನಂಬಿಕೆ. ಯಾಕೆಂದರೆ ಸಾಹಿತ್ಯ ಎಂದರೆ ಕೇವಲ ಬರೆದಿರುವ ಸಾಹಿತ್ಯವನ್ನು ಗಮನದಲ್ಲಿ ಇಟ್ಟುಕೊಂಡು ಮಾಡಿರುವ ಹೇಳಿಕೆಗಳು ಅವು. ಆದರೆ ಅಪಾರವಾದ ಜನಪದ ಸಾಹಿತ್ಯವನ್ನು ಗಮನಿಸಿದಾಗ ಸಾಹಿತ್ಯ ನಿರ್ಮಾಣಕ್ಕೆ ಅಕ್ಷರಸ್ಥರು ಮಾತ್ರ ಕಾರಣರಲ್ಲ ಎಂಬುದು ತಿಳಿಯುತ್ತದೆ. ಇದನ್ನೆ ಬೇರೆ ಮಾತುಗಳಲ್ಲಿ ಹೇಳುವುದಾದರೆ ಸಾಹಿತ್ಯ ರಚನೆಯ ಹೆಸರಿನಲ್ಲಿ ಸಮಾಜದ ಜನರನ್ನು ತಾರತಮ್ಯ ಮಾಡಿ ನೋಡುವ ಪರಂಪರೆಯೊಂದನ್ನು ಗಟ್ಟಿಯಾಗಿ ನಿರ್ಮಾಣ ಮಾಡಲಾಗಿದೆ. ಹಾಗಾಗಿ ಬುದ್ಧಿವಂತಿಕೆ ಎಂದರೆ ಏನು? ಪ್ರತಿಭೆ ಎಂದರೆ ಯಾವುದು? ಈ ಪ್ರಶ್ನೆಗಳನ್ನು ಕೇಳಬೇಕಾಗಿದೆ. ಅಂದರೆ ಸಾಹಿತ್ಯ ರಚನೆಯಲ್ಲಿ ಕೆಲಸ ಮಾಡುವ ಪಾಂಡಿತ್ಯ, ಬುದ್ಧಿವಂತಿಕೆ ಹಾಗೂ ಪ್ರತಿಭೆಗಳು ಎಲ್ಲರಿಗೂ ಒಂದೇ ರೀತಿಯಲ್ಲಿರಿವುದು ಇಲ್ಲ. ಮರದಿಂದ ನೇಗಿಲು ಮಾಡುವ ಕಲೆ ಮತ್ತು ಕೌಶಲ್ಯ, ಮಣ್ಣಿನಿಂದ ಮಡಕೆ ಮಾಡುವ ಕಲೆ ಮತ್ತು ಕೌಶಲ್ಯ, ಚರ್ಮದಿಂದ ಹಲಗೆ ಮಾಡುವ ಕಲೆ ಮತ್ತು ಕೌಶಲ್ಯ ಇಂತಹ ಹಲವಾರು ವಸ್ತು ಸೃಷ್ಟಿಗಳನ್ನು ಗಮನಿಸಬೇಕು. ಅಲ್ಲೆಲ್ಲ ಮೂಲ ವಸ್ತುಗಳ ರೂಪ ಮತ್ತು ಸ್ವರೂಪಗಳನ್ನು ಮಾರ್ಪಡಿಸಿ ಮತ್ತೊಂದು ಹೊಸ ವಸ್ತುವನ್ನು ನಿರ್ಮಾಣ ಮಾಡಲಾಗುತ್ತದೆ. ಹಾಗಿದ್ದರೆ ಸಾಹಿತ್ಯ ನಿರ್ಮಾಣಕ್ಕೆ ಬಳಸುವ ಭಾಷೆಯನ್ನು ಅದರ ರೂಪ ಹಾಗೂ ಸ್ವರೂಪವನ್ನು ಮಾರ್ಪಡಿಸಿ, ಅದನ್ನು ಅತ್ಯಂತ ಸೂಕ್ಷ್ಮಗೊಳಿಸಿ, ಹೊಸದೊಂದು ಭಾಷೆಯನ್ನು ನಿರ್ಮಾಣ ಮಾಡಲಾಗುತ್ತದೆ. ಇದರ ನಿರ್ಮಾಣಕ್ಕೆ ಅದರ ಅನಂತ ಸಾಧ್ಯತೆಗಳನ್ನು ಹಲವು ಮೂಲಗಳಿಂದ ಪಡೆಯಲಾಗುತ್ತದೆ. ಸಾಮಾನ್ಯ ವಿವರಣೆಯಲ್ಲಿ ಇದನ್ನೆ ಸಾಹಿತ್ಯ ಎಂದು ಕರೆಯಲಾಗಿದೆ. ಈ ಕೆಲಸವನ್ನು ಪಾಮರರೂ ಮಾಡುತ್ತಾರೆ. ಪಂಡಿತರೂ ಮಾಡುತ್ತಾರೆ. ಹಾಗಾಗಿ ಸಾಹಿತ್ಯ ನಿರ್ಮಾಣದಲ್ಲಿ ಅನಕ್ಷರಸ್ಥರು, ಅಕ್ಷರಸ್ಥರು ಪ್ರತಿಭೆಯುಳ್ಳವರು, ಪಾಂಡಿತ್ಯ ಉಳ್ಳವರು ಎಂಬುದರ ಬಗೆಗಿನ ಮಾನದಂಡಗಳು ಶಾಶ್ವತ ಅಲ್ಲ.

ಸಾಹಿತ್ಯವನ್ನು ರಚನೆ ಮಾಡಿದವರು ಯಾರು ಎಂಬುದನ್ನು ಅವಲಂಬಿಸಿ ಸಾಹಿತ್ಯದ ರಚನೆಯ ಚರ್ಚೆಯ ಸ್ವರೂಪ ತೀರ್ಮಾನವಾಗುತ್ತದೆ. ಸಧ್ಯಕ್ಕೆ ಬಳಕೆಯಲ್ಲಿರುವ ಪದಗಳನ್ನೆ ಗಮನಿಸೋಣ. ಕವಿಗಳು, ಪಂಡಿತರು, ಸಾಹಿತಿಗಳು, ಬರಹಗಾರರು ಎಂದು ಸ್ಥೂಲವಾಗಿ ಹೆಸರಿಸಲಾಗಿದೆ. ಆದರೆ ಇದು  ಇಲ್ಲಿಗೆ ನಿಲ್ಲುವುದಿಲ್ಲ. ಅವರ ಜೊತೆಗೆ ವಿಮರ್ಶಕರು, ಸಂಶೋಧಕರು, ವಿಚಾರವಂತರು, ಪತ್ರಕರ್ತರು, ಇತಿಹಾಸಕಾರರು, ವಿಜ್ಞಾನಿಗಳು, ಅರ್ಥಶಾಸ್ತ್ರಜ್ಞರು ಹೀಗೆ ಇದರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಆಗ ಸಾಹಿತ್ಯದ ಸ್ವರೂಪವೂ ಬೇರೊಂದು ಬಗೆಯದು ಎಂಬುದು ತಿಳಿಯುತ್ತದೆ. ಮೇಲಿನ ಎಲ್ಲಾ ಪದಗಳೂ ಕೂಡ ಬರೆಯುವ ಸಾಹಿತ್ಯ ನಿರ್ಮಾಣದ ಕೆಲಸವನ್ನು ಸೂಚಿಸುತ್ತವೆ. ಆದರೆ ಮೌಖಿಕ ಸಾಹಿತ್ಯ ನಿರ್ಮಾಣ ಮಾಡುವವರನ್ನು ಮೇಲಿನ ಪದಗಳು ಪ್ರತಿನಿಧಿಸುವುದಿಲ್ಲ. ಅಷ್ಟೇ ಅಲ್ಲ. ಅವು ಮಹಿಳಾ ಸಮೂಹವನ್ನು ಪ್ರತಿನಿಧಿಸುವುದಿಲ್ಲ. ಹಾಗಾಗಿ ಇದು ಲಿಂಗ ತಾರತಮ್ಯವನ್ನು ಒಪ್ಪಿಕೊಂಡ ವಿವರಣೆಯಾಗಿದೆ. ಸಾಹಿತ್ಯದ ವಿಷಯ ಯಾವುದು ಎಂಬುದನ್ನು ಆಧರಿಸಿ ಬರಹಗಾರರನ್ನು ಗುರುತಿಸುವುದು ಒಂದು ಕ್ರಮ. ಅಷ್ಟಲ್ಲದೆ ಸಾಹಿತ್ಯದ ಯಾವ ಪ್ರಕಾರ ಎಂಬುದನ್ನು ಆಧರಿಸಿ ಬರಹಗಾರರನ್ನು ಗುರುತಿಸುವುದು ಮತ್ತೊಂದು ಕ್ರಮ. ಜೊತೆಗೆ ಲಿಂಗವನ್ನು ಆಧರಿಸಿ ಮಹಿಳಾ ಬರಹಗಾರ್ತಿಯರು ಎಂದು ಗುರುತಿಸಲಾಗುತ್ತದೆ. ಸಾಮಾಜಿಕ ತಾರತಮ್ಯವನ್ನು ಆಧರಿಸಿ ಬ್ರಾಹ್ಮಣ ಸಾಹಿತಿಗಳು, ಜೈನ ಸಾಹಿತಿಗಳು, ಶೂದ್ರ ಸಾಹಿತಿಗಳು, ದಲಿತ ಸಾಹಿತಿಗಳು ಎಂದು ವಿಭಾಗ ಮಾಡಲಾಗಿದೆ. ಆಧುನಿಕ ಕನ್ನಡ ಸಾಹಿತ್ಯವನ್ನು ಗಮನದಲ್ಲಿಟ್ಟುಕೊಂಡು ನವೋದಯ ಸಾಹಿತಿಗಳು, ಪ್ರಗತಿಶೀಲ ಸಾಹಿತಿಗಳು, ನವ್ಯ ಸಾಹಿತಿಗಳು, ದಲಿತ ಬಂಡಾಯ ಸಾಹಿತಿಗಳು ಎಂದು ವಿಭಾಗ ಮಾಡಲಾಗಿದೆ. ಸಾಮಾಜಿಕ ಸಮೂಹಗಳು ಅವಲಂಬಿಸಿ ಮುಸ್ಲಿಂ ಬರಹಗಾರರು, ಬುಡಕಟ್ಟು ಬರಹಗಾರರು ಎಂದು ಗುರುತಿಸಲಾಗಿದೆ.

ಸಾಹಿತ್ಯ ಅಂದರೆ ಕೇವಲ ಕಥೆ, ಕಾದಂಬರಿ, ಕಾವ್ಯ ಈ ಪ್ರಕಾರಗಳ ಒಳಗೆ ಮಾತ್ರ ಗಿರಕಿ ಹೊಡೆದಾಗ ಮೇಲಿನ ಸಮಸ್ಯೆಗಳು ಎದುರಾಗುತ್ತವೆ. ಆದರೆ ಸಾಹಿತ್ಯದ ಬೇರೆ ವಲಯಗಳನ್ನು ಗಮನಿಸಿದಾಗ ಚಿತ್ರಣ ಬದಲಾಗಿ ಕಾಣುತ್ತದೆ. ಉದಾಹರಣೆಗೆ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಕಾನೂನುಶಾಸ್ತ್ರ, ಲೈಂಗಿಕ ಸಾಹಿತ್ಯ, ಸ್ಪರ್ಧಾತ್ಮಕ ಪರೀಕ್ಷೆಗಳ ಸಾಹಿತ್ಯ ಇವನ್ನು ಗಮನಿಸೋಣ. ಅವನ್ನು ಅಧ್ಯಯನ ಮಾಡುವಾಗ ಅದರ ಬರಹಗಾರರ ಸಾಮಾಜಿಕ ಹಿನ್ನೆಲೆ ಮತ್ತು ಲಿಂಗ ಸಂಬಂಧಿ ಹಿನ್ನೆಲೆಗಳು ಮುಖ್ಯ ಪ್ರಶ್ನೆಗಳಾಗುವುದೇ ಇಲ್ಲ. ಕೆಲವು ಜನಪದ ಸಾಹಿತ್ಯ ಪ್ರಕಾರಗಳಿಗೂ ಈ ಮಾತು ಅನ್ವಯಿಸುತ್ತದೆ.

ಸಾಮಾನ್ಯವಾಗಿ ಸಾಹಿತ್ಯ ಎಂದ ತಕ್ಷಣ ಕಾವ್ಯ, ಕಾದಂಬರಿ, ಕಥೆ, ನಾಟಕ, ಜೀವನ ಚರಿತ್ರೆ, ಆತ್ಮ ಚರಿತ್ರೆ ಇವೇ ಮುಂತಾದ ಪ್ರಸಿದ್ಧ ಪ್ರಕಾರಗಳು ಮೂರ್ತರೂಪದಲ್ಲಿ ಗಮನಕ್ಕೆ ಬರುತ್ತವೆ. ಆದರೆ ವಾಚಕರವಾಣಿಯ ಪತ್ರಗಳು, ಕರಪತ್ರಗಳು, ಗೋಡೆ ಬರಹಗಳು, ಬ್ಯಾನರ್‌ಗಳು, ಕಟೌಟ್‌ಗಳು, ಆಹ್ವಾನ ಪತ್ರಿಕೆಗಳು, ಪತ್ರಗಳು, ಜಾಹೀರಾತು ಬರಹಗಳು, ಹಕ್ಕೊತ್ತಾಯ ಪತ್ರಗಳು, ಪತ್ರಿಕಾ ಗೋಷ್ಠಿಯ ಪ್ರಗಳು, ಭಾಷಣಕ್ಕೆ ಸಿದ್ಧಮಾಡಿಕೊಳ್ಳುವ ಟಿಪ್ಪಣಿಗಳು, ಇತ್ತೀಚಿಗಿನ ಬ್ಲಾಗ್ ಸಾಹಿತ್ಯ ಇವೆಲ್ಲವನ್ನೂ ಗಮನಿಸಿದಾಗ ಸಾಹಿತ್ಯ ಎಂದು ಸಿದ್ಧರೂಪದಲ್ಲಿ ಯಾವ ಪ್ರಕಾರಗಳನ್ನು ಕರೆಯಲಾಗಿದೆಯೋ, ಅದರ ಆಚೆಗೂ ವಿವಿಧ ಮಾಧ್ಯಮಗಳಲ್ಲಿ ಸಾಹಿತ್ಯ ಅಭಿವ್ಯಕ್ತಿ ಆಗುತ್ತಿದೆ; ಸಾಹಿತ್ಯ ರಚನೆ ಆಗುತ್ತಿದೆ ಎಂಬುದು ತಿಳಿಯುತ್ತದೆ. ಅದಕ್ಕೆ ಸಾಕಷ್ಟು ಪ್ರಮಾಣದ ಓದುಗರೂ ಇದ್ದಾರೆ. ಆದರೆ ಸಿದ್ದಮಾದರಿಯ ಸಾಹಿತ್ಯ ಪ್ರಕಾರಗಳ ಬಗೆಗಿನ ನಂಬಿಕೆ ಗಟ್ಟಿಯಾಗಿ ಬೇರೂರಿರುವುದರಿಂದ ಆ ಬಹು ಬಗೆಯ ಅಭಿವ್ಯಕ್ತಿಗಳನ್ನು ಅಧ್ಯಯನದಲ್ಲಿ ಮುಖ್ಯ ಕಕ್ಷೆಗೆ ತರುವ ಆಸಕ್ತಿ ಕಾಣುತ್ತಿಲ್ಲ. ಈ ಬಗೆಯ ಸಾಹಿತ್ಯಕ ಅಭಿವ್ಯಕ್ತಿಗಳನ್ನು ಸಂಶೋಧನೆಯಲ್ಲಿ ಅಂಚಿನ ವಿಷಯಗಳೆಂದೇ ಪರಿಗಣಿಸಲಾಗಿದೆ. ಇದರ ಜೊತೆಗೆ ಅವುಗಳನ್ನು ಬರೆಯುವ ಬರಹಗಾರರನ್ನೂ ಕೂಡ ಅದೇ ಧೋರಣೆಯಿಂದ ಪರಿಗಣಿಸಲಾಗುತ್ತಿದೆ. ಸಮಾಜವನ್ನು ನೋಡುವ ಮೇಲು ಕೀಳು, ಶ್ರೇಷ್ಠ ಕನಿಷ್ಠ ಎಂಬ ತರತಮ ಧೋರಣೆ ಹಾಗೂ ತರತಮ ಮೌಲ್ಯಪ್ರಜ್ಞೆ ಇಲ್ಲಿಯೂ ಕ್ರಿಯಾಶೀಲವಾಗಿದೆ.

ಸಾಹಿತ್ಯ ಬರೆದವರನ್ನು ಆಧರಿಸಿ ಎಡಪಂಥೀಯ ಬರಹಗಾರರು, ಬಲಪಂಥೀಯ ಬರಹಗಾರರು ಎಂದು ಗುರುತಿಸುವ ಪರಿಪಾಠವಿದೆ. ಇದೇ ರೀತಿಯಲ್ಲಿ ಶೋಷಕ ಸಾಹಿತಿಗಳು, ಶೋಷಿತ ಸಾಹಿತಿಗಳು ಎಂಬ ವಿಂಗಡಣೆಗಳೂ ಸಾಧ್ಯ. ಆದರೆ ಬರಹಗಾರರ ಧೋರಣೆಯನ್ನು ಮೊದಲೇ ಈ ರೀತಿಯಲ್ಲಿ ತೀರ್ಮಾನಿಸಿದರೆ ಸಂಶೋಧನೆಗೆ ಅಡ್ಡಿಯಾಗುತ್ತದೆ. ಈ ತೀರ್ಮಾನವೆ ಸಂಶೋಧನೆಯ ಧೋರಣೆಯನ್ನು ನಿಯಂತ್ರಿಸಿಬಿಡುತ್ತದೆ.

ಮೇಲಿನ ಎಲ್ಲಾ ವಿಂಗಡಣೆಗಳು ಸಾಹಿತ್ಯ ಸಂಶೋಧನೆಗೆ ಕೆಲವು ತಾತ್ವಿಕ ತೊಡಕುಗಳನ್ನು ಉಂಟುಮಾಡಿವೆ. ಉದಾಹರಣೆಗೆ ಬ್ರಾಹ್ಮಣ ಸಾಹಿತಿಗಳು ಅಂದಾಕ್ಷಣ ಆ ಸಾಹಿತ್ಯವೆಲ್ಲ ಬ್ರಾಹ್ಮಣರ ಪರವಾಗಿದೆ ಎಂತಲೂ, ದಲಿತ ಸಾಹಿತ್ಯ ಅಂದಾಕ್ಷಣ ಆ ಸಾಹಿತ್ಯವೆಲ್ಲಾ ದಲಿತರ ಪರವಾಗಿದೆ ಎಂತಲೂ ತೀರ್ಮಾನಿಸಲಾಗಿದೆ. ಹಾಗಾಗಿ ಸಾಹಿತ್ಯವನ್ನು ಯಾರು ಬರೆದಿದ್ದಾರೆ ಎಂಬುದನ್ನು ಮೊದಲೇ ತೀರ್ಮಾನ ಮಾಡಿರುವುದರಿಂದ ಅಂತಹ ಸಾಹಿತ್ಯದ ಸಂಶೋಧನೆಯು ನಿರ್ದಿಷ್ಟವಾಗಿ ಸಾಹಿತ್ಯದ ಸಂಶೋಧನೆ ಆಗುವ ಬದಲು ಸಾಹಿತಿಗಳ ಬಗೆಗಿನ ಪೂರ್ವಗ್ರಹಿಕೆಗಳ ಮಂಡನೆಗೆ ಅನುಮಾಡಿಕೊಡುವ ಮಿತಿಗಳೆ ಹೆಚ್ಚಾಗಿವೆ. ಹಾಗಾಗಿ ಸಾಹಿತ್ಯ ಸಂಶೋಧನೆಯಲ್ಲಿ ಸಾಹಿತ್ಯವನ್ನು ಯಾರು ಬರೆದಿದ್ದಾರೆ ಎಂಬ ಒಂದೇ ಅಂಶವನ್ನು ಮುಖ್ಯವಾಗಿಟ್ಟುಕೊಂಡು ಸಂಶೋಧನೆಗೆ ತೊಡಗಿದಾಗ ಹೊಸದಾದ ಒಳನೋಟಗಳು ಕಾಣದಾಗುತ್ತವೆ. ಅದನ್ನು ಬರೆದಿರುವವರ ಬಗೆಗಿನ ಪೂರ್ವ ತೀರ್ಮಾನಗಳು ಮೇಲುಗೈ ಪಡೆಯುತ್ತವೆ. ಈ ಮಿತಿಯನ್ನು ಸಂಶೋಧನೆಯಲ್ಲಿ ದಾಟಬೇಕಾಗಿದೆ. ಯಾಕೆಂದರೆ ಜನಪದ ಸಾಹಿತ್ಯ ಹೋರಾಟದ ಹಾಡುಗಳು ಮತ್ತು ಹೋರಾಟದ ಸಾಹಿತ್ಯ, ಅನುವಾದ ಸಾಹಿತ್ಯ ಮುಂತಾದ ಅಧ್ಯಯನಗಳಲ್ಲಿ ಅವನ್ನು ಯಾರು ಬರೆದರು ಎಂಬುದು ಮುಖ್ಯ ಪ್ರಶ್ನೆಯಾಗಿ ಬರುವುದಿಲ್ಲ.