ಬಹುರಾಷ್ಟ್ರೀಯ ಕಂಪನಿಗಳು ಹಣಕಾಸು ಬಂಡವಾಳದಲ್ಲಿ, ಅದರಲ್ಲೂ ಏಕಸ್ವಾಮ್ಯ ಹಣಕಾಸು ಬಂಡವಾಳದಲ್ಲಿ ಕ್ರಿಯಾಶೀಲವಾಗಿವೆ. ಆದರೆ ಅವು ಸಾಹಿತ್ಯ ಹಾಗೂ ಸಾಂಸ್ಕೃತಿಕ ವಲಯದಲ್ಲಿ ಹರಿಯಬಿಟ್ಟಿರುವ ವೈಚಾರಿಕತೆಯನ್ನು ಇಲ್ಲಿ ಚರ್ಚಿಸಲಾಗುವುದು. ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಬಂಡವಾಳ ಹಾಕುವುದು ಐ.ಟಿ., ಬಿ.ಟಿ. ಮುಂತಾದ ಕ್ಷೇತ್ರಗಳಿಗೆ ಮಾತ್ರ. ಅವು ಅಪ್ಪಿತಪ್ಪಿಯೂ ಕೂಡ ಸಾಹಿತ್ಯ ಹಾಗೂ ಸಂಸ್ಕೃತಿ ವಲಯಕ್ಕೆ ಬಂಡವಾಳವನ್ನು ಹಾಕುವುದಿಲ್ಲ. ಆದರೆ ಸಾಹಿತ್ಯ ಸಂಶೋಧನೆ ಎಂಬ ಈ ಭಾಗದಲ್ಲಿ ಬಹುರಾಷ್ಟ್ರೀಯ ಕಂಪನಿಗಳ ವೈಚಾರಿಕ ಪಾತ್ರವನ್ನು ಕುರಿತು ಚರ್ಚೆ ಮಾಡುವ ಅಗತ್ಯವಿದೆ. ಬಹುರಾಷ್ಟ್ರೀಯ ಕಂಪನಿಗಳ ಆರ್ಥಿಕ ಲೂಟಿಗಿಂತಲೂ ಹೆಚ್ಚಾಗಿ ಅದರ ವೈಚಾರಿಕತೆಯ ಸ್ವರೂಪ ಮತ್ತು ಅದು ಇಡಿಯಾಗಿ ಜನತೆಯ ಮೇಲೆ ಉಂಟುಮಾಡುತ್ತಿರುವ ಪರಿಣಾಮಗಳು, ಕೆಲವರು ಬುದ್ಧಿಜೀವಿಗಳು ಬಹುರಾಷ್ಟ್ರೀಯ ಕಂಪನಿಗಳ ಬಂಡವಾಳ ಹೂಡಿಕೆಯ ಬಗ್ಗೆ ತಾಳುತ್ತಿರುವ ತಾತ್ವಿಕ ನಿಲುವುಗಳ ಬಗೆಗೆ ಚರ್ಚೆ ಮಾಡಬೇಕಿದೆ.

ಬಹುರಾಷ್ಟ್ರೀಯ ಕಂಪನಿಗಳು ಭಾರತದ ಸಾರ್ವಜನಿಕ ವಲಯಗಳನ್ನು ರೋಗಗ್ರಸ್ತವೆಂದು ಸಾರಿ, ಜನರು ಅವುಗಳ ಬಗ್ಗೆ ಆಸಕ್ತಿ ತಾಳದಂತಹ ಸನ್ನಿವೇಶವನ್ನು ಮೊದಲು ಸೃಷ್ಟಿಮಾಡಿವೆ. ಜನರಿಗೆ ಸಾರ್ವಜನಿಕ ವಲಯದ ಬಗ್ಗೆ ಬೇಸರ ಹಾಗೂ ತಾತ್ಸಾರ ಬರುವ ಅಭಿಪ್ರಾಯವನ್ನು ನಿರ್ಮಿಸಿವೆ. ಸಾರ್ವಜನಿಕ ವಲಯದ ಮೇಲೆ ಜನರು ಇಟ್ಟಿರುವ ನಂಬಿಕೆಯನ್ನು ಅವುಗಳಿಂದ ಬೇರ್ಪಡಿಸಿವೆ. ಹಾಗೆ ಬೇರ್ಪಡಿಸಿದ ಜಾಗದಲ್ಲಿ ತಮ್ಮ ಹಿತಾಸಕ್ತಿಯ ಬಗ್ಗೆ ಜನರು ಆಸಕ್ತಿ ತಾಳುವಂತೆ ಮಾಡುತ್ತಿವೆ. ಇದನ್ನು ನಾಗರೀಕತೆ, ಆಧುನಿಕತೆ, ಮುಖ್ಯವಾಹಿನಿ, ಆಧುನಿಕ ತಂತ್ರಜ್ಞಾನ ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ.

ಸಾಹಿತ್ಯ, ಸಂಸ್ಕೃತಿ ಮತ್ತು ವೈಚಾರಿಕ ವಲಯಗಳಲ್ಲಿ ಈಗ ಆಧುನಿಕತೆ, ಮುಖ್ಯವಾಹಿನಿ ಮತ್ತು ತಂತ್ರಜ್ಞಾನದ ಚರ್ಚೆ ನಿರಂತರವಾಗಿ ನಡೆದಿದೆ. ಮುಖ್ಯವಾಗಿ ಸಾಹಿತ್ಯ ಸಂಶೋಧನೆಯ ತಾತ್ವಿಕತೆಗಳಲ್ಲಿ ಆಧುನಿಕತೆಯನ್ನು ಕುರಿತ ಪರಿಕಲ್ಪನೆಯು ಬಹುರಾಷ್ಟ್ರೀಯ ಕಂಪನಿಗಳ ತಾತ್ವಿಕ ಚಿಂತನೆಗಳಿಂದ ಸುತ್ತುವರಿದಿರುವುದನ್ನು ಗುರುತಿಸಬಹುದು. ಅಂಚಿನ ಸಮುದಾಯಗಳು ಮುಖ್ಯವಾಹಿನಿಯನ್ನು ಸೇರಬೇಕು ಎಂಬ ಹೇಳಿಕೆ ಇರಬಹುದು, ಹಳೆಯದರ ಜಾಗದಲ್ಲಿ ಹೊಸ ಆಧುನಿಕತೆಯನ್ನು ಕೆಳಸಮುದಾಯಗಳು ಮೈಗೂಡಿಸಿಕೊಳ್ಳಬೇಕು ಎನ್ನುವ ಹೇಳಿಕೆ ಇರಬಹುದು. ಈ ಎಲ್ಲವೂ ಕೂಡ ಬಹುರಾಷ್ಟ್ರೀಯ ಕಂಪನಿಗಳ ತಾತ್ವಿಕ ಧೋರಣೆಗಳಾಗಿವೆ.

ಸಾಹಿತ್ಯ ಹಾಗೂ ಸಾಂಸ್ಕೃತಿಕ ವಲಯದಲ್ಲಿ ನಡೆಯುತ್ತಿರುವ ಸಂಶೋಧನೆಗಳು ಮುಖ್ಯವಾಹಿನಿ ಹಾಗೂ ಆಧುನಿಕತೆ ಎಂಬ ಪರಿಕಲ್ಪನೆಗನ್ನು ಹಾಗೂ ಅವುಗಳ ತಾತ್ವಿಕ ಪ್ರಮೇಯಗಳನ್ನು ಬಳಸುತ್ತಿವೆ. ಈ ಬಳಕೆಯ ವಿಧಾನವು ಒಂದು ಕಡೆ ಅವು ಮಾಹಿತಿಗಳ ವಿಶಾಲ ಚೌಕಟ್ಟುಗಳಾಗಿ ಬರುತ್ತಿವೆ ಮತ್ತೊಂದು ಕಡೆ ಅವು ಸಂಶೋಧನೆಗೆ ತಾತ್ವಿಕ ದೃಷ್ಟಿಕೋನಗಳಾಗಿ ಬರುತ್ತಿವೆ. ಈ ಎರಡೂ ಕೂಡ ಬಹುರಾಷ್ಟ್ರೀಯ ಕಂಪನಿಗಳ ಹಿತಾಸಕ್ತಿಗಳನ್ನು ಪರೋಕ್ಷವಾಗಿ ಬೆಂಬಲಿಸುತ್ತಾ, ಅವುಗಳ ಹಿತಾಸಕ್ತಿಗಳನ್ನು ನಯವಾಗಿ ವಿವರಿಸಿ, ಸಮರ್ಥಿಸು‌ತ್ತಾ ಸಾಗಿವೆ. ಹಾಗಾಗಿ ಬಹುರಾಷ್ಟ್ರೀಯ ಕಂಪನಿಗಳು ಎಂದಾಕ್ಷಣ ಅವುಗಳು ಬಂಡವಾಳ ಹೂಡುವ ಆರ್ಥಿಕ ವಲಯಗಳನ್ನು ಮಾತ್ರ ಪರಿಗಣಿಸಿ, ಅವುಗಳು ವೈಚಾರಿಕ ರಂಗದಲ್ಲಿ ಸಂಪೂರ್ಣ ಗೈರುಹಾಜರಾಗಿವೆ ಎಂದು ತೀರ್ಮಾನಿಸುವಂತಿಲ್ಲ.

ಬಹುರಾಷ್ಟ್ರೀಯ ಕಂಪನಿಗಳ ವೈಚಾರಿಕತೆ ಮೂಲತಃ ಮಾರುಕಟ್ಟೆಯ ವೈಚಾರಿಕತೆ, ಮಾರಕಟ್ಟೆಯ ಹಿತಾಸಕ್ತಿಗೆ ಅನುಗುಣವಾಗಿ ಸಾಮಾಜಿಕ ಪ್ರಜ್ಞೆಯನ್ನು, ಸಾಮಾಜಿಕ ಅಭಿರುಚಿಯನ್ನು ರೂಪಿಸುವುದು ಅದರ ಮುಖ್ಯ ತಂತ್ರ ಮತ್ತು ಉದ್ದೇಶ. ಆಧುನಿಕರಾಗುವುದು, ನಾಗರಿಕರಾಗುವುದು ಎಂದರೆ ಮತ್ತೊಂದು ಆಯಾಮದಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಮಾರುಕಟ್ಟೆಯ ಗ್ರಾಹಕರಾಗುವುದು ಎಂದೇ ಅರ್ಥ. ಈ ಗ್ರಾಹಕತನವನ್ನು ವ್ಯಕ್ತಿಗಳ ಹಾಗೂ ಸಮುದಾಯಗಳ ಪ್ರಜ್ಞೆಯೊಳಗೆ, ಸ್ವಭಾವದೊಳಗೆ, ಅಭಿರುಚಿಯೊಳಗೆ ಮತ್ತು ಆಲೋಚನ ಕ್ರಮದೊಳಗೆ ಅಳವಡಿಸುವ ಹುನ್ನಾರ ಇವುಗಳದು. ಮಾನವ ಸಂವೇದನೆಗಳನ್ನು ಕಳೆದುಕೊಂಡು ಕೇವಲ ಗ್ರಾಹಕರಾದರೆ ಅದು ಮಾರುಕಟ್ಟೆಗೆ ದೊಡ್ಡ ಲಾಭವಾಗುತ್ತದೆ. ಮಾರುಕಟ್ಟೆಗೆ ಲಾಭವಾಗುವುದನ್ನೆ ಮತ್ತೊಂದು ಆಯಾಮದಲ್ಲಿ ‘ಆಧುನಿಕತೆ’ ‘ಮುಖ್ಯವಾಹಿನಿ’ ಎಂದು ಬಿಂಬಿಸುತ್ತವೆ. ಹೀಗೆ ಮುಖ್ಯವಾಹಿನಿಯ ಭಜನೆ ಮಾಡುತ್ತಲೆ ವಿಶೇಷ ಆರ್ಥಿಕ ವಲಯಗಳನ್ನು, ರಾಷ್ಟ್ರೀಯ ಉದ್ಯಾನವನಗಳನ್ನು ಆದಿವಾಸಿ ಬುಡಕಟ್ಟು ಜನರ ವಿರೋಧಗಳ ನಡುವೆಯೇ ನಿರ್ಮಿಸುತ್ತವೆ. ಜನರ ವಿರೋಧಗಳನ್ನು ಮುಚ್ಚಿಡುವ ಸಲುವಾಗಿ, ಆಧುನಿಕತೆ ಮತ್ತು ಮುಖ್ಯವಾಹಿನಿಗಳ ಬಗ್ಗೆ ಜನರೇ ಸಹಮತ ತೋರುತ್ತಿದ್ದಾರೆ ಎಂದು ತೋರಿಸಲಾಗುತ್ತದೆ. ಹಾಗಾಗಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ವಲಯಗಳಲ್ಲಿ ನಡೆಯುತ್ತಿರುವ ಸಂಶೋಧನೆಗಳು ಅಪ್ರಜ್ಞಾಪೂರ್ವಕವಾಗಿ ಮಾರುಕಟ್ಟೆಯ ಆಲೋಚನಾ ಕ್ರಮಗಳನ್ನು ಮತ್ತು ಪರಿಭಾಷೆಗಳನ್ನು ಪರೋಕ್ಷ ವಿಧಾನದಲ್ಲಿ ಪಡೆಯುತ್ತಿವೆ. ಅದರಲ್ಲೂ ವಿಶೇಷವಾಗಿ ತಳಸಮುದಾಯಗಳ ಬಗೆಗಿನ ಹಿತಾಸಕ್ತಿಯ ಸಂಶೋಧನ ಆಶಯಗಳ ಹಿಂದೆ ಇವು ಗುಪ್ತವಾಗಿ ಕೆಲಸ ಮಾಡುತ್ತಿವೆ. ಶೋಷಿತಪರ ಆಲೋಚನೆ ಎಂಬ ಹಣೆಪಟ್ಟಿಯಲ್ಲಿ ಮಾರುಕಟ್ಟೆಯ ಪರವಾದ ವೈಚಾರಿಕತೆ ನಯವಾಗಿ ಕ್ರಿಯಾಶೀಲವಾಗಿದೆ.

* * *