ಸಂಶೋಧನೆಗೆ ಸಂಬಂಧಿಸಿದಂತೆ ಸರಕಾರೇತರ ಸ್ವಯಂಸೇವಾ ಸಂಸ್ಥೆಗಳು ಅಥವಾ ಎನ್‌ಜಿಓಗಳು ಕೆಲಸ ಮಾಡುತ್ತಿವೆ. (ಇನ್ನು ಮುಂದೆ ಎನ್.ಜಿ.ಓ. ಒಂದು ಬಳಸಲಾಗುವುದು). ಸರಕಾರದ ಕೆಲವು ಇಲಾಖೆಗಳು ತಮ್ಮ ವ್ಯಾಪ್ತಿಯ ಸಮೀಕ್ಷೆಯ ಕೆಲಸಗಳನ್ನು ಎನ್.ಜಿ.ಓ.ಗಳಿಗೆ ಕೊಡುತ್ತಿವೆ. ಎನ್.ಜಿ.ಓ.ಗಳು ಮಾಡುತ್ತಿರುವ ಭೌತಿಕ ಚಟುವಟಿಕೆಗಳನ್ನೂ ಮತ್ತು ಅವು ನಡೆಸುವ ಸಂಶೋಧನೆಗಳ ತಾತ್ವಿಕ ಇಲ್ಲವೆ ವೈಧಾನಿಕ ಆಯಾಮಗಳನ್ನು ಕುರಿತು ಚರ್ಚಿಸಬೇಕು. ಮೂಲತಃ ಎನ್.ಜಿ.ಓ.ಗಳು ಸಾಮ್ರಾಜ್ಯಶಾಹಿ ಹಿತಾಸಕ್ತಿಯನ್ನು ಕಾಪಾಡುವ ಗೌಪ್ಯಶಕ್ತಿಗಳು. ಅವುಗಳ ಪರಮ ಉದ್ದೇಶವೇ ಸಮಾಜದಲ್ಲಿ ಸಾಮ್ರಾಜ್ಯಶಾಹಿ ಲೂಟಿಗೆ ಅಡ್ಡಿಯಾಗಿರುವ ಪರಿಸ್ಥಿತಿಗಳನ್ನು, ಸಾಧ್ಯತೆಗಳನ್ನು ಗುರುತಿಸುವುದು. ಸಾಮ್ರಾಜ್ಯಶಾಹಿ ಲೂಟಿಗೆ ಅನುಗುಣವಾಗಿ ಸಮುದಾಯಗಳ, ಶೋಷಿತರ ಆಲೋಚನೆ ಮತ್ತು ಅಭಿರುಚಿಗಳನ್ನು ಮಾರ್ಪಡಿಸಿ, ಅಣಿಗೊಳಿಸುವುದು. ಜನರು ಯಾವುದನ್ನು ಬೇಕು ಎನ್ನುತ್ತಾರೊ ಅದನ್ನು ಅವರ ಬಾಯಿಯಿಂದಲೆ ಬೇಡ ಎನಿಸುವುದು. ಜನರು ಯಾವುದನ್ನು ಬೇಡ ಎನ್ನುತ್ತಾರೊ ಅದನ್ನು ಅವರ ಬಾಯಿಯಿಂದಲೆ ಬೇಕು ಎನಿಸುವುದು. ಇದು ಅವುಗಳ ಸೂಕ್ಷ್ಮವಾದ ತಾತ್ವಿಕ ಹುನ್ನಾರ.

ಪ್ರಗತಿಪರ ಹೋರಾಟಗಳು, ಬುದ್ಧಿಜೀವಿಗಳು ಪ್ರವೇಶ ಮಾಡದ ಸಮಾಜದ ಅಂಚಿನ ಭಾಗಗಳು ಎನ್ನಬಹುದಾದ ಕೊಳೆಗೇರಿಗಳು, ಬಾಲ ಕಾರ್ಮಿಕರು, ಆದಿವಾಸಿಗಳು, ಬಸವಿಯರು, ದೇವದಾಸಿಯರು, ವೇಶ್ಯೆಯರು ಇದೇ ಮುಂತಾದ ವಲಯಗಳನ್ನು ಎನ್.ಜಿ.ಓ.ಗಳು ಪ್ರವೇಶ ಮಾಡಿವೆ. ಅವರ ಬಗ್ಗೆ ತುಟಿ ಮೇಲಿನ ಅನುಕಂಪವನ್ನು ತೋರಿಸಿವೆ. ರೆಪ್ಪೆ ಮೇಲಿನ ಕಣ್ಣೀರನ್ನು ಸುರಿಸಿವೆ. ಪ್ರಭುತ್ವ ಮತ್ತು ಸರಕಾರಗಳು ಈ ವಲಯಗಳ ಬಗ್ಗೆ ಕಿಂಚಿತ್ತೂ ಗಮನ ಹರಿಸದೇ ಇದ್ದಾಗ ತಮ್ಮ ಬಳಿಗೆ ಬಂದವರನ್ನೆ ಪ್ರತ್ಯಕ್ಷ ದೇವರೆಂದು ಭಾವಿಸುವ ಅಸಹಾಯಕತೆ ಅವರದ್ದು. ಆ ಸಮುದಾಯಗಳ ಆರ್ಥಿಕ ಅಭದ್ರತೆ ಮತ್ತು ಅಸಹಾಯಕತೆಗಳನ್ನು  ಬಳಸಿಕೊಂಡು, ಅವರನ್ನು ಮುಖ್ಯವಾಹಿನಿಗೆ ತರುವ ಯೋಜನೆಗಳನ್ನು ರೂಪಿಸುವ ಸಭೆಗಳನ್ನು ಎನ್‌ಜಿಓಗಳು ಐಷಾರಾಮಿ ಹೋಟೆಲ್‌ಗಳಲ್ಲಿ ನಡೆಸುತ್ತವೆ. ಆದಿವಾಸಿ ಮತ್ತು ಬುಡಕಟ್ಟು ಸಮುದಾಯಗಳು ಭಾರತದಾದ್ಯಂತ ರಾಜಿರಹಿತವಾದ ವೀರೋಚಿತ ಹೋರಾಟಗಳಿಗೆ ಮುಂದಾಗಿದ್ದಾರೆ. ವೀರ ತೆಲಂಗಾಣ ಹೋರಾಟದಿಂದೇ ಅವರಿಗೆ ಬಹಳ ದೊಡ್ಡ ಪರಂಪರೆ ಇದೆ. ಈ ಸಮುದಾಯಗಳಲ್ಲಿ ವ್ಯವಸ್ಥೆಯ ಅಸಮಾನತೆ ಮತ್ತು ಶೋಷಣೆಯ ಬಗೆಗೆ ತೀವ್ರವಾದ ಅಸಹನ, ಪ್ರತಿರೋಧಗಳು ಮಡುಗಟ್ಟಿವೆ. ವ್ಯವಸ್ಥೆಯ ಅಸಮಾನತೆ ಮತ್ತು ಶೋಷಣೆಯ ವಿರುದ್ಧದ ಈ ಸಮುದಾಯಗಳ ಪ್ರತಿರೋಧದ ಭಾವನೆಗಳನ್ನು ಮೊಳಕೆಯಲ್ಲೆ ಚಿವುಟುವ ಕೆಲಸವನ್ನು ಎನ್‌ಜಿಓಗಳು ಮಾಡುತ್ತಿವೆ. ಅವರ ಪ್ರತಿರೋಧದ ಭಾವನೆಗಳು ಭೌತಿಕಶಕ್ತಿಯಾಗಿ ಮಾರ್ಪಡದಂತೆ ಮಾಡಲು ಸಾಮ್ರಾಜ್ಯಶಾಹಿಯು ಕೋಟಿಗಟ್ಟಲೆ ಹಣವನ್ನು ಎನ್.ಜಿ.ಓ.ಗಳ ಮೂಲಕ ವ್ಯಯ ಮಾಡುತ್ತಿದೆ. ಎನ್‌.ಜಿ.ಓ.ಗಳು ಇದನ್ನು ತಮ್ಮ ಸ್ವೇಚ್ಚಾಚ್ಚಾರ ಮತ್ತು ಲೋಲುಪತೆಗೆ ಬಳಸುತ್ತಿವೆ. ಸಮಾಜದ ಅಂಚಿನ ಸಮುದಾಯದವರ ಅಸಹನೆ ಮತ್ತು ಆಕ್ರೋಶಗಳನ್ನು ದುರುಪಯೋಗಪಡಿಸಿ ಕೊಂಡು ಅವರಲ್ಲಿ ಸ್ವೇಚ್ಛೆ ಮತ್ತು ಲೋಲುಪತೆಯನ್ನು ಪ್ರಚೋದಿಸುತ್ತಿವೆ. ಉಪಭೋಗ ಸಂಸ್ಕೃತಿಯನ್ನು ಉದ್ದೀಪಿಸಿ, ಪ್ರಚೋದಿಸುತ್ತಿವೆ. ಇದನ್ನು ‘ಸ್ವಾತಂತ್ರ್ಯ’, ‘ಆಧುನಿಕ’, ‘ನಾಗರಿಕತೆ’ ಮುಂತಾದ ನಯವಾದ ಪದಗಳಲ್ಲಿ ಹೆಸರಿಸಿ ಅದನ್ನು ಅವರಿಗೆ ಒಪ್ಪಿಸಲಾಗುತ್ತಿದೆ. ವೇಶ್ಯಾವಾಟಿಕೆಯನ್ನು ಸಾಮ್ರಾಜ್ಯಶಾಹಿ ಮಾರುಕಟ್ಟೆಯ ‘ಸೆಕ್ಸ್‌ಇಂಡಸ್ಟ್ರಿ’ ಎಂದು, ವೇಶ್ಯೆಯರನ್ನು ‘ಸೆಕ್ಸ್‌ವರ್ಕರ‍್ಸ್’ ಎಂದು ಕರೆಯುತ್ತಿದೆ. ಆ ಮೂಲಕ ಅನಾಗರಿಕವೂ, ಹಿಂಸಾತ್ಮಕವೂ ಆದ ಈ ಕ್ರೌರ್ಯವನ್ನು ನಯವಾದುದು ಎಂದು ಭಾವಿಸುವಂತೆ ಮಾಡಲಾಗುತ್ತಿದೆ. ವೇಶ್ಯಾವಾಟಿಕೆಯನ್ನು ಶಾಶ್ವತಗೊಳಿಸುವ ಸಲುವಾಗಿ ಅದನ್ನು ‘ಸೇವೆ’ ಎಂದು ಕರೆಯುತ್ತಿದೆ. ಎನ್.ಜಿ.ಓ.ಗಳ ವೇಶ್ಯಾವಾಟಿಕೆ ಮಾಡುವವರಿಗೆ ‘ಈ ವೃತ್ತಿ ಸಹಜವಾದುದು’ ಎಂದು ಬೋಧನೆ ಮಾಡುತ್ತಿವೆ. ಆ ಮೂಲಕ ಮಾರುಕಟ್ಟೆಯ ವಿಕೃತಿಗಳಿಗೆ ಮತ್ತು ಅದರ ಲಾಭಕೋರತನಕ್ಕೆ ಅಸಹಾಯಕ ಹೆಣ್ಣು ಮಕ್ಕಳನ್ನು ನಯವಾಗಿ ಪುಸಲಾಯಿಸುತ್ತಿವೆ. ಎನ್‌.ಜಿ.ಓ.ಗಳು ಈ ಮಾರುಕಟ್ಟೆಯನ್ನು ವಿಸ್ತರಿಸುತ್ತಿವೆ; ಸಾಮಾಜೀಕರಣಗೊಳಿಸುತ್ತಿವೆ. ಅಂಚಿನ ಸಮುದಾಯಗಳು ಯಾವುದನ್ನು ಅನೈತಿಕವೆಂದೂ, ಅಪಮಾನವೆಂದೂ ಅವನ್ನು ಗಟ್ಟಿಯಾಗಿ ತಿರಸ್ಕರಿಸುತ್ತಿವೆಯೊ ಅವನ್ನೆ ಎನ್.ಜಿ.ಓ.ಗಳು ‘ನೈತಿಕವೆಂದೂ, ಅಭಿಮಾನವೆಂದೂ, ಸೇವೆ ಎಂದೂ, ಅದೇ ನಿಜವಾದ ಬದುಕು ಎಂದೂ’ ಸಾರುತ್ತಿವೆ. ಅಸಹಾಯಕರನ್ನು, ಮುಗ್ಧರನ್ನು ಅದರ ಕೂಪಕ್ಕೆ ನಯವಾದ ಬಲಾತ್ಕಾರದಿಂದ ತಳ್ಳುತ್ತಿವೆ.

ಕಳೆದ ಕನಿಷ್ಠ ಎರಡು ದಶಕಗಳಿಂದ ಕನ್ನಡ ಸಾಹಿತ್ಯ ಸಂಶೋಧನೆಯ ವೈಚಾರಿಕ ಜತ್ತಿನಲ್ಲಿ ಎನ್.ಜಿ.ಓ.ಗಳ ತಾತ್ವಿಕತೆ ಒಂದು ಮುಂಚೂಣಿ ಧೋರಣೆಯಾಗಿ ಮತ್ತು ಅಧ್ಯಯನ ವಿಧಾನವಾಗಿ ನಿಧಾನಕ್ಕೆ ಪ್ರವೇಶ ಪಡೆದಿದೆ. ವಸಾಹತುಶಾಹಿ ಕಾಲದಲ್ಲಿ ಪೂರ್ವವನ್ನು ಅಧ್ಯಯನ ಮಾಡಲು ಬಂದ ಪಶ್ಚಿಮದ ವಿದ್ವಾಂಸರು ತಮ್ಮ ಪಶ್ಚಿಮದ ದೃಷ್ಟಿಕೋನದಲ್ಲೆ ಭಾರತದ ಸಮಾಜ, ಸಂಸ್ಕೃತಿ ಮುಂತಾದುವನ್ನು ಗ್ರಹಿಸಿದರು ಅವರ ಗ್ರಹಿಕೆಗಳನ್ನು ಪ್ರಶ್ನಾತೀತವಾಗಿ ಒಪ್ಪಲಾಗಿದೆ. ಅವು ಭಾರತವನ್ನು ಅಧ್ಯಯನ ಮಾಡಲು ಉಪಯೋಗಕ್ಕೆ ಬರುವುದಿಲ್ಲ. ಹಾಗಾಗಿ ಆ ಗ್ರಹಿಕೆಯ ಕ್ರಮಗಳನ್ನು ಬಿಟ್ಟು ಹೊಸದಾಗಿ ಆಲೋಚನೆ ಮಾಡಬೇಕಾಗಿದೆ ಎಂಬುದು ಎನ್‌ಜಿಓಗಳ ಸಾಮಾನ್ಯ ಗ್ರಹಿಕೆಗಳಲ್ಲಿ ಒಂದು.

ಎನ್‌.ಜಿ.ಓ. ವೈಚಾರಿಕತೆಗೆ ವರ್ತಮಾನಕ್ಕಿಂತ ಭೂತದ ಕಡೆಗೆ ಹೆಚ್ಚು ಆಸಕ್ತಿ ಭೌತಿಕ ಪರಿಸ್ಥಿತಿಗಿಂತ ಅಭೌತಿಕ ಪರಿಸ್ಥಿತಿಯ ಬಗ್ಗೆ ಆಸಕ್ತಿ. ಹಾಗಾಗಿ ಅದು ಸಂಸ್ಕೃತಿಯ ಚರ್ಚೆಯನ್ನು ಕೇಂದ್ರ ಚರ್ಚೆಯನ್ನಾಗಿ ಮತ್ತು ಮುಂಚೂಣಿಯ ಚರ್ಚೆಯನ್ನಾಗಿ ಪರಿಗಣಿಸುತ್ತದೆ. ಶೋಷಿತ ತಳಸಮುದಾಯಗಳು ತಮ್ಮ ಶಕ್ತಿಯನ್ನು ಅವರ ಸಂಸ್ಕೃತಿಯಲ್ಲಿ ಕಂಡುಕೊಳ್ಳಬೇಕು ಎಂಬುದು ಎನ್.ಜಿ.ಓ.ಗಳ ನಿಲುವು. ಹಾಗಾಗಿ ಮಧ್ಯಯುಗದ ಸಾಮಂತಶಾಹಿ ಮತ್ತು ಊಳಿಗಮಾನ್ಯಶಾಹಿ ಜನವಿರೋಧಿ ಮೌಲ್ಯಗಳನ್ನು ಜನರ ಮೌಲ್ಯಗಳೆಂದು ಎನ್.ಜಿ.ಓ. ವೈಚಾರಿಕೆ ವೈಭವೀಕರಿಸುತ್ತಿದೆ. ಶೋಷಿತ ಸಮುದಾಯಗಳಿಗೆ ಅವರ ಸಂಸ್ಕೃತಿಯೇ ಶಕ್ತಿ ಎಂಬ ಹೇಳಿಕೆಯನ್ನು ಶೋಷಿತ ಸಮುದಾಯಗಳ ಬುದ್ಧಿಜೀವಿಗಳಿಂದಲೇ ಹೇಳಿಸುತ್ತಿವೆ.

ಎನ್.ಜಿ.ಓ.ಗಳು ಬೌದ್ಧಿಕ ವಲಯದಲ್ಲಿ ಸರಳವಾಗಿರುವುದನ್ನು ಸರಳವಾಗಿ ಗುರುತಿಸುವುದಿಲ್ಲ. ಸರಳವಾಗಿರುವುದನ್ನು ಸಂಕೀರ್ಣಗೊಳಿಸುವುದು ಇಲ್ಲವೆ ವಿಕೃತಗೊಳಿಸುವುದು ಅವುಗಳ ಗ್ರಹಿಕೆಯ ಸ್ವಭಾವ. ಸಾಮ್ರಾಜ್ಯಶಾಹಿಯ ಆಧುನಿಕೋತ್ತರ ವಾದದ ಮತ್ತೊಂದು ಪ್ರತಿರೂಪ ಈ ಎನ್‌ಜಿಓಗಳ ಐಡಿಯಾಲಜಿ. ಎನ್‌.ಜಿ.ಓ.ಗಳ ಈ ಐಡಿಯಾಲಜಿ ಜನಪರ ವೇಶದಲ್ಲಿ,  ಪ್ರಗತಿಪರ ವೇಶದಲ್ಲಿ, ದಲಿತಪರ ವೇಶದಲ್ಲಿ, ಮಹಿಳಾಪರ ವೇಶದಲ್ಲಿ, ಬುಡಕಟ್ಟು ಆದಿವಾಸಿಪರ ವೇಶದಲ್ಲಿ ವೈಚಾರಿಕ ರಂಗವನ್ನು ಪ್ರವೇಶ ಮಾಡಿದೆ.

ಎನ್‌.ಜಿ.ಓ.ಗಳ ಈ ಐಡಿಯಾಲಜಿಗೆ ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ವರ್ತಮಾನದ ಸಕಲ ಸಂಕಟಗಳಿಗಿಂತಲೂ ವರ್ತಮಾನದಿಂದ ತನ್ನ ಆಸಕ್ತಿಯ ಕ್ಷೇತ್ರವನ್ನು ಕತ್ತರಿಸಿಕೊಳ್ಳುವುದರಲ್ಲಿ ಹೆಚ್ಚು ಕಾಳಜಿ. ಹೀಗೆ ವರ್ತಮಾನದಿಂದ ಕತ್ತರಿಸಿಕೊಂಡು ಅದು ನೇರವಾಗಿ ಮಧ್ಯಯುಗದ ಸಾಮಂತಶಾಹಿ ಹಾಗೂ ಊಳಿಗ ಮಾನ್ಯಶಾಹಿ ಸಂಬಂಧಗಳಿಗೆ ಹಾಗೂ ಮೌಲ್ಯಗಳಿಗೆ ತೆರಳುತ್ತದೆ. ಅಲ್ಲಿ ಭಕ್ತಿ, ಭಜನೆ, ಅಲೌಖಿಕತೆ, ಸಾಧುಗಳು, ಸಂತರು ಇತ್ಯಾದಿ ಲೋಕಕ್ಕೆ ಹೋಗುತ್ತದೆ. ಮತ ಧರ್ಮದ ವಿಚಾರಗಳನ್ನು ಆಧುನಿಕತೆ ಎಂಬ ನೆಪದಲ್ಲಿ ವಿವರಿಸುವ ಎನ್‌ಜಿಓಗಳ ಈ ಐಡಿಯಾಲಜಿ ಸಾಹಿತ್ಯ ಸಂಶೋಧನೆಗಳ ಮೇಲೆ ತೀವ್ರ ಪ್ರಭಾವ ಬೀರುತ್ತಿದೆ. ಅದು ಕಾರ್ಮಿಕ ಹಿತಾಸಕ್ತಿಯ ಪರವಾದ ನೆಪದಲ್ಲಿ ವೈಚಾರಿಕ ರಂಗದಲ್ಲಿ ಕ್ರಿಯಾಶೀಲವಾಗಿದೆ. ಅದು ಮಾರ್ಕ್ಸ್‌‌ವಾದದ ವೇಶದಲ್ಲೂ ವೈಚಾರಿಕ ರಂಗದಲ್ಲಿ ಜಾಗ ಪಡೆಯುತ್ತಿದೆ. ಕಾರ್ಮಿಕ ವರ್ಗದ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಪರ್ಯಾಯಗಳನ್ನು ಹುಡುಕಬೇಕಾಗಿದ್ದ ವೈಚಾರಿಕ ಜಾಗದಲ್ಲಿ ಎನ್‌ಜಿಓ ಧೋರಣೆಯು ಆಧುನಿಕತೆ, ಮುಖ್ಯವಾಹಿನಿ, ಸ್ವಾತಂತ್ರ್ಯ ಮುಂತಾದ ಹೆಸರಿನಲ್ಲಿ ಸಾಮ್ರಾಜ್ಯಶಾಹಿ ಮಾರುಕಟ್ಟೆಯ ವಿಕೃತಿಗಳಿಗೆ ಸಾಮಾಜಿಕ ಬುನಾದಿಯನ್ನು ನಿರ್ಮಾಣ ಮಾಡುತ್ತಿದೆ.

ಮಿತ್ರರ ಸಂಬಂಧವನ್ನು ಶತ್ರು ಸಂಬಂಧವನ್ನಾಗಿಯೂ, ಶತ್ರು ಸಂಬಂಧವನ್ನು ಮಿತ್ರ ಸಂಬಂಧವನ್ನಾಗಿಯೂ ನಿರೂಪಿಸುವುದು ಎನ್.ಜಿ.ಓ. ವೈಚಾರಿಕತೆಯ ಮತ್ತೊಂದು ಅಪಾಯಕಾರಿ ಕುತಂತ್ರ. ಶೋಷಿತ ಮತ್ತು ದಮನಿತ ಸಮುದಾಯಗಳಲ್ಲಿ ಸಾಮಾನ್ಯ ಐಕ್ಯತೆ ಇರುತ್ತದೆ. ಇದರೊಳಗೆ ಆಂತರಿಕ ಭಿನ್ನತೆಗಳಿರಬಹುದು. ಆದರೆ ಶತ್ರು ಸಂಬಂಧ ಇರುವುದಿಲ್ಲ. ಆದರೆ ಅಲ್ಲಿಗೆ ಎನ್.ಜಿ.ಓ. ವೈಚಾರಿಕತೆ ಪ್ರವೇಶ ಮಾಡಿದರೆ ಅದರೊಳಗೆ ಶತ್ರು ಸಂಬಂಧವನ್ನು ಹುಟ್ಟುಹಾಕಿಬಿಡುತ್ತದೆ. ಹೊಲೆ ಮಾದಿಗರನ್ನು ಅನಾದಿಕಾಲದಿಂದ ಜೀಮೀನ್ದಾರಿ ವರ್ಗದವರು ಶೋಷಣೆ ಮಾಡುತ್ತ ಬಂದಿದ್ದಾರೆ. ಕಳೆದ ಶತಮಾನದ ೯೦ರ ದಶಕದ ನಂತರ ಎನ್‌ಜಿಓಗಳು ರಾಜಕಾರಣ, ಅಧಿಕಾರಿ ವರ್ಗ ಮತ್ತು ನೌಕರಿಯಲ್ಲಿ ಹೊಲೆಯರು ಎಷ್ಟಿದ್ದಾರೆ ಮತ್ತು ಮಾದಿಗಳು ಎಷ್ಟಿದ್ದಾರೆ ಎಂಬ ಅಂಕಿಸಂಕಿಗಳನ್ನು ಸಂಗ್ರಹ ಮಾಡಿದವು. ಈ ಅಂಕಿಸಂಕಿಗಳನ್ನು ದಲಿತ ನೌಕರರ ಸಮೂಹಕ್ಕೆ ತಲುಪಿಸಿದವು. ಪರಿಣಾಮವಾಗಿ ಆ ಅಂಕಿಸಂಕಿಗಳ ಏರುಪೇರನ್ನು ಗಮನಿಸಿ ಹೊಲೆಮಾದಿಗರ ನಡುವೆ ಶತ್ರುತ್ವ ಸಂಬಂಧ ಹುಟ್ಟಿತು. ಹೊಲೆಮಾದಿಗರಿಗೆ ಯಾರು ನಿಜ ಶತ್ರುಗಳಿದ್ದಾರೊ ಅವರ ಬಗ್ಗೆ ಗಮನ ಹರಿಸದಂತೆ ಮಾಡಲಾಯಿತು. ಎನ್‌ಜಿಓಗಳ ಈ ವಿಕೃತ ವೈಚಾರಿಕತೆ ಸಾಹಿತ್ಯ ಸಂಶೋಧನೆಯನ್ನು ನಯವಾಗಿ ಪ್ರವೇಶ ಮಾಡಿದೆ.