ಈಗ ಮತ್ತೆ ಮೊದಲಿನ ಚರ್ಚೆಗೆ ಬರೋಣ. ‘ಸಂಶೋಧನ ವಿಷಯವು  ಸಮಾಜದ ಜ್ವಲಂತ ಸಮಸ್ಯೆಯಾಗಿರಬೇಕು; ಅದರಿಂದ ಸಮಾಜಕ್ಕೆ ಕೊಡುಗೆ ನೀಡಬೇಕು’ ಎಂಬುದು ಆ ಚರ್ಚೆ. ‘ಸಮಾಜದ ಜ್ವಲಂತ ಸಮಸ್ಯೆ’ಯೊಂದರ ಸಂಶೋಧನ ಸ್ವರೂಪಯಾವುದಾಗಿರುತ್ತದೆ ಎಂಬುದು ಇಲ್ಲಿ ಬಹಳ ಮುಖ್ಯ. ಅದು ‘ಜ್ವಲಂತ ಸಮಸ್ಯೆ’ಯ ಬಗೆಗಿನ ಮಾಹಿತಿಗಳ ಸಂಗ್ರಹವೊ, ಅಂತಹ ಮಾಹಿತಿಗಳು ಯಾವ ಮೂಲದವು, ಸಂಶೋಧನ ಬರವೇನಿಗೆಯ ವಿಶ್ಲೇಷಣೆ, ವ್ಯಾಖ್ಯಾನಗಳ ಧೋರಣೆ ಯಾವುದು ಎಂಬುದು ಇಲ್ಲಿ ಮುಖ್ಯ. ‘ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹೇಳುವ ಮೂಲಕ ಸಮಾಜಕ್ಕೆ ಸಂಶೋನೆಯ ಕೊಡುಗೆ ಕೊಡಬೇಕು’ ಎಂಬು ಅಪೇಕ್ಷೆ ಇಲ್ಲಿ ಕೆಲಸ ಮಾಡುತ್ತಿದೆ. ಹಾಗಾಗಿ ‘ಜ್ವಲಂತ ಸಮಸ್ಯೆ’ಗಳಿಗೆ ಸರಳವಾದ ಅವಸರದ ಪರಿಹಾರ ಸೂಚಿಸುವುದು ಸುಲಭವಾಗಿ ನಡೆಯುತ್ತಿದೆ. ‘ಜ್ವಲಂತ ಸಮಸ್ಯೆ’ಯ ಸ್ವರೂಪವನ್ನು ಸರಳವಾಗಿ, ಯಾಂತ್ರಿಕವಾಗಿ ಮತ್ತು ಅವಸರದಲ್ಲಿ ಗ್ರಹಿಸಿರುವುದರಿಂದಲೆ ಅದಕ್ಕೆ ಸೂಚಿಸುವ ಪರಿಹಾರ ಕೂಡ ಸರಳವಾದುದಾಗಿರುತ್ತದೆ. ಈ ಮೊದಲು ಒಂದು ಕಡೆ ಚರ್ಚಿಸಿದ ‘ಜಾತಿ ಸಮಸ್ಯೆಗೆ ಅಂತರ್ಜಾತಿ ವಿವಹಾ ಪರಿಹಾರ’ ಎಂಬುದನ್ನು ಮತ್ತು ‘ಬಡವರಿಗೆ ಶಿಕ್ಷಣ, ಮನೆ ಮುಂತಾದುವನ್ನು ಕೊಡಿಸಬೇಕು’ ಎಂಬುದನ್ನು ಇಲ್ಲಿ ಮತ್ತೆ ನೆನಪು ಮಾಡಿಕೊಳ್ಳುವ ಅಗತ್ಯವಿದೆ. ಹಾಗಾಗಿ ‘ಜ್ವಲಂತ ಸಮಸ್ಯೆ’ಗಳ ಸ್ವರೂಪವನ್ನು ಅವುಗಳ ವಿವೀಧ ಆಯಾಮಗಳ ಹಿನ್ನೆಲೆಯಲ್ಲಿ ವಿವರಿಸಿಕೊಳ್ಳಬೇಕಾದ ಅಗತ್ಯವಿದೆ. ಸಮಸ್ಯೆಯ ಸ್ವರೂಪ ಸರಳವೊ, ಸಂಕೀರ್ಣವೊ; ಜಡವೊ, ಚಲನಶೀಲವೊ ಈ ವಿನ್ಯಾಸಗಳಲ್ಲಿ ಆಲೋಚನೆ ಮಾಡದಿದ್ದರೆ ಅದರ ಸ್ವರೂಪವನ್ನು ತಪ್ಪಾಗಿ ಗ್ರಹಿಸುವ ಸಾಧ್ಯತೆ ಇರುತ್ತದೆ. ಇದನ್ನು ಗ್ರಹಿಸಲು ಸರಳ ಮಾನದಂಡಗಳು ಬೇಕಾದಷ್ಟಿವೆ. ಬಡತನ, ನಿರುದ್ಯೋಗ, ಕೋಮುವಾದ, ಜಾತಿವಾದ ಇವೇ ಮುಂತಾದ ಮಸ್ಯೆಗಳ ಸ್ವರೂಪಗಳನ್ನು ಗ್ರಹಿಸಲು ಮಾನದಂಡಗಳು ಸಿಗುತ್ತವೆ. ಉದಾಹರಣೆಗೆ ಎರಡು ಕೋಮುಗಳನ್ನು ಎದುರು ಬದುರು ಇಟ್ಟುಕೊಂಡೇ ‘ಕೋಮುವಾದ’ವನ್ನು ಗ್ರಹಿಸಲಾಗುತ್ತದೆ. ಅಲ್ಲಿ ಮಾರುಕಟ್ಟೆಯ ಪ್ರಶ್ನೆ, ಸಾಮ್ರಾಜ್ಯಶಾಹಿಯ ಹುನ್ನಾರ ಮತ್ತು ಪಿತೂರಿ, ಆಳುವ ವರ್ಗ ಮತ್ತು ಮಾಧ್ಯಮಗಳ ಪಾತ್ರ, ಸಮುದಾಯಗಳ ಆರ್ಥಿಕ ಬಿಕ್ಕಟ್ಟು ಈ ಯಾವ ಆಯಾಮಗಳೂ ಜಾಗ ಪಡೆಯುತ್ತಿಲ್ಲ. ಎರಡು ಕೋಮುಗಳನ್ನು ಎದುರು ಬದುರು ಇಟ್ಟು ಸಮಸ್ಯೆಯನ್ನು ಯಾಂತ್ರಿಕವಾಗಿ ಗ್ರಹಿಸುವುದರಿಂದ ಅದಕ್ಕೆ ಪರಿಹಾರವೂ ಸರಳವಾಗಿದೆ. ಅದೇನೆಂದರೆ ‘ಕೋಮು ಸೌಹಾರ್ದ’, ‘ಕೋಮು ಸಾಮರಸ್ಯ’ ಎಂಬುದು. ಆದರೆ ಸಾಮ್ರಾಜ್ಯಶಾಹಿ, ಆಳುವ ವರ್ಗ ಮತ್ತು ಮಾರುಕಟ್ಟೆಗಳು ತಮ್ಮ ಉಳಿವಿನ ಭಾಗವಾಗಿ ಕೋಮುವಾದವನ್ನು ಪ್ರಚೋದಿಸುತ್ತ, ವಿಸ್ತರಿಸುತ್ತ ಬರುತ್ತಿವೆ. ಈ ಆಯಾಮಗಳನ್ನು ಗುರುತಿಸಬೇಕಾಗುತ್ತದೆ. ಹಾಗಾಗಿ ‘ಸಂಶೋಧನೆಯಿಂದ ಸಮಾಜಕ್ಕೆ ಕೊಡುಗೆ ನೀಡಬೇಕು’ ಎಂಬುದು ರಾಜಕಾರಣಿಗಳ ಮತ್ತು ಮಾಧ್ಯಮಗಳ ಹೇಳಿಕೆಗಳ ರೂಪ ಪಡೆಯುವ ಮಿತಿ ಮತ್ತು ಅಪಾಯಗಳೇ ಹೆಚ್ಚು. ಈ ಹೇಳಿಕೆಗಳ ಮಟ್ಟದ ಕೊಡುಗೆಗಳು ರಾಜಕಾರಣಿಗಳ ಮತ್ತು ಮಾಧ್ಯಮಗಳ ಆಲೋಚನ ವಿಧಾನಗಳನ್ನು ಸುಲಭವಾಗಿ ಅನುಸರಿಸುತ್ತಿವೆ. ಅದರ ಅನುಕರಣೆಯನ್ನೇ ‘ಸಮಾಜಕ್ಕೆ ಕೊಡುಗೆ’ ಎಂದು ಸರಳೀಕರಿಸಿಕೊಳ್ಳಲಾಗಿದೆ. ‘ಸಮಾಜಕ್ಕೆ ಕೊಡುಗೆ’ ಎನ್ನುವುದಕ್ಕೆ ವಿಶೇಷಣ ಹಾಕಿ ಇದನ್ನು ಬದಲಾಯಿಸಿ ಹೇಳುವುದಾದರೆ, ‘ಸಮಾಜಕ್ಕೆ ಕೊಡುಗೆ ಕೊಡಬೇಕು’ ಎಂಬುದು ಸಂಶೋಧಕರ ಸಕಾರಾತ್ಮಕ ಅಪೇಕ್ಷೆಯಾಗಿರುತ್ತದೆ. ಆದರೆ ವೈಚಾರಿಕ ಪರಿಣಾಮದಲ್ಲಿ ಅದು ನಕಾರಾತ್ಮಕ ಕೊಡುಗೆಯಾಗಿರುತ್ತದೆ. ತಾತ್ವಿಕವಾಗಿ ಈ ಮಿತಿಯನ್ನು ಗ್ರಹಿಸಬೇಕಾಗಿದೆ.

ಸಮಾಜದಲ್ಲಿ ಕೆಲವು ಸಮಸ್ಯೆಗಳನ್ನು ಘಟನೆಗಳು ಎಂಬಂತೆ ನೋಡಲಾಗುತ್ತದೆ. ಉದಾಹರಣೆಗೆ ‘ಸಾಮಾಜಿಕ ಬಹಿಷ್ಕಾರ’ದಂತಹ ಪ್ರಕರಣಗಳನ್ನು ಹಾಗೆ ಪರಿಗಣಿಸಲಾಗಿದೆ. ಹಾಗಾಗಿ ಅಂತಹ ಬಹಿಷ್ಕಾರದ ಒಂದು ಪ್ರಕರಣಕ್ಕೆ ನಿರ್ದಿಷ್ಟವಾದ ಪ್ರತಿಕ್ರಿಯೆಯನ್ನೂ, ಅದರ ವಿರುದ್ಧ ಹೋರಾಟವನ್ನೂ ಸಂಘಟಿಸಲಾಗುತ್ತದೆ. ಇಂತಹ ಬಹಿಷ್ಕಾರಗಳನ್ನು ಆಗಾಗ ಮಾಡಲಾಗುತ್ತಿದೆ. ಅದಕ್ಕೆ ಅನುಗುಣವಾಗಿ ಪ್ರತಿಕ್ರಿಯೆ ಮತ್ತು ಹೋರಾಟಗಳನ್ನೂ ಸಂಘಟಿಸಲಾಗುತ್ತಿದೆ. ಈ ವಿಷಯ ಕುರಿತು ಸಂಶೋಧನೆ ಮಾಡುವವರು, ಬಹಿಷ್ಕಾರದಂತಹ ಪ್ರಕರಣಗಳನ್ನು ಘಟನೆಗಳೆಂದೇ ಪರಿಗಣಿಸುವ ಕ್ರಮವಿದೆ. ಹಾಗಾಗಿ ಅಂತಹ ಸಂಶೋಧನೆಗಳು ‘ಬಿಗಿಯಾದ ಕಾನೂನುಗಳ ಅಗತ್ಯವಿದೆಯೆಂದೂ, ಅಥವಾ ಇರುವ ಕಾನೂನುಗಳನ್ನು ಸರಿಯಾಗಿ ಜಾರಿಗೊಳಿಸಬೇಕೆಂದೂ’ ನಿಲುವು ತಾಳುತ್ತಿವೆ. ಆ ನಿಲುವನ್ನು ‘ಸಮಾಜಕ್ಕೆ ಕೊಡುಗೆ’ ಎಂದು ಹೆಸರಿಸಲಾಗುತ್ತಿದೆ. ಆದರೆ ಈ ನಿಲುವು ಬಹಳ ಸರಳವಾದುದು. ಯಾಕೆಂದರೆ ಬಹಿಷ್ಕಾರಗಳನ್ನು ಕೇವಲ ಸ್ವತಂತ್ರ ಘಟನೆಗಳು ಎಂದು ನೋಡಲಾಗದು. ಯಾಕೆಂದರೆ ಬಹಿಷ್ಕಾರಗಳನ್ನು ಕೇವಲ ಸ್ವತಂತ್ರ ಘಟನೆಗಳು ಎಂದು ನೋಡಲಾಗದು. ಅವು ಭೂಸಂಬಂಧ, ಜಾತಿ ಶ್ರೇಣಿಕರಣ, ಕೆಳಜಾತಿಗಳಲ್ಲಿ ಕೆಲವರ ಚಲನಶೀಲತೆ, ಆ ಸಮುದಾಯಗಳ ಸಾಮಾಜಿಕ ಎಚ್ಚರಿಕೆ, ಸ್ವಾಭಿಮಾನ, ಮೇಲುಜಾತಿಗಳ ಪ್ರತಿಷ್ಠೆಗೆ ಅಡ್ಡಿ ಇವೆ ಮುಂತಾದ ಆಯಾಮಗಳನ್ನು ಒಳಗೊಂಡಿರುತ್ತವೆ. ಹಾಗಾಗಿ ಅವುಗಳನ್ನು ಒಂದು ಪ್ರಕ್ರಿಯೆ ಎಂದು ನೋಡಬೇಕಾಗುತ್ತದೆ. ಈ ಪ್ರಕ್ರಿಯೆ ಸರಳವಾದುದಲ್ಲ; ನಿರ್ದಿಷ್ಟ ಘಟನೆಯೂ ಅಲ್ಲ. ಹಾಗಾಗಿ ಬಹಿಷ್ಕಾರದಂತಹ ಪ್ರಕರಣಗಳಲ್ಲಿ ಪ್ರತಿಭಟನೆ ಮಾಡುವವರು ತಾಲೂಕು ಆಫೀಸಿಗೆ ಸಲ್ಲಿಸುವ ಹಕ್ಕೊತ್ತಾಯ ಪತ್ರವನ್ನೆ ‘ಸಂಶೋಧನೆಯ ಸಾಮಾಜಿಕ ಕೊಡುಗೆ’ ಎಂದು ತೀರ್ಮಾನಿಸಿದರೆ ಅದು ಹಾಸ್ಯಾಸ್ಪದ ಸಂಗತಿಯಾಗುತ್ತದೆ; ಸಂಶೋಧನೆಯ ಕೊಡುಗೆ ಆಗುವುದಿಲ್ಲ. ಯಾಕೆಂದರೆ ‘ಕಾನೂನುಗಳು ಸರಿಯಾಗಿ ಜಾರಿಯಾಗಲಿ’ ಎಂಬ ತೀರ್ಮಾನವು ಸಂಶೋಧನೆಯ ಫಲಿತವಾಗುವುದಿಲ್ಲ; ಅದು ಸಾಮಾಜಿಕ ತೆಳು ಅನಿಸಿಕೆಯ ಒಂದು ಭಾಗವಾಗಿರುತ್ತದೆ ಅಷ್ಟೆ.

ಇದುವರೆಗೆ ಉನ್ನತ ಶಿಕ್ಷಣ ಮತ್ತು ಸಂಶೋಧನೆಗೆ ಬಾರದ ಕೆಲವು ಸಮುದಾಯದವರು ಸಂಶೋಧನೆಗೆ ಬರುತ್ತಿದ್ದಾರೆ. ಅವರ ಸಮುದಾಯಗಳ ವಸ್ತುನಿಷ್ಠ ಪರಿಸ್ಥಿತಿಗಳು ಅವರನ್ನು ಒಂದಿಲ್ಲೊಂದು ಆಯಾಮದಿಂದ ಬಾಧಿಸುತ್ತಿವೆ. ಹಾಗಾಗಿ ತಮ್ಮ ಸಂಶೋಧನೆಗಳು ತಮ್ಮ ಸಮುದಾಯವನ್ನು ಕೇಂದ್ರೀಕರಿಸಿಕೊಂಡಿರಬೇಕೆಂದೂ, ಆ ಸಮುದಾಯಕ್ಕೆ ಏನಾದರು ಕೊಡುಗೆ ನೀಡುವಂತಿರಬೇಕೆಂದೂ ಅವರು ಭಾವಿಸುತ್ತಿದ್ದಾರೆ. ಹಾಗಾಗಿ ತಮ್ಮ ಸಂಶೋಧನೆಯನ್ನು ತಮ್ಮ ಸಮುದಾಯಕ್ಕೆ ಸಂಬಂಧಿಸಿದ ಶೀರ್ಷಿಕೆಯೊಂದಿಗೆ ರೂಪಿಸಿಕೊಳ್ಳುತ್ತಿದ್ದಾರೆ. ಇದರ ಹಿಂದೆ ಕೆಲವೊಮ್ಮೆ ಭಾವನಾತ್ಮಕವೂ, ಮತ್ತೆ ಕೆಲವೊಮ್ಮೆ ವೈಚಾರಿಕವೂ ಆದ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ. ಸಂಶೋಧನ ಬರವಣಿಗೆಯಲ್ಲಿ ಆ ಸಮುದಾಯಗಳ ಚರಿತ್ರೆ, ಪರಂಪರೆಗಳನ್ನು ಪುನರಾಚನೆ ಮಾಡಲಾಗುತ್ತದೆ. ಇದರಲ್ಲಿ ಭಾವನಾತ್ಮಕ ಅಂಶ ಪ್ರಧಾನವಾಗಿ ಕೆಲಸ ಮಾಡಿದರೆ ಆಗ ತಮ್ಮ ಸಮುದಾಯದ ಪರಂಪರೆಯನ್ನು ವೈಭವೀಕರಿಸಲಾಗುತ್ತದೆ. ವೈಚಾರಿಕತೆಯ ಅಂಶ ಪ್ರಧಾನವಾಗಿ ಕೆಲಸ ಮಾಡಿದರೆ ಆಗ ಸಮುದಾಯಕ್ಕೆ ಸರಕಾರಿ ಸವಲತ್ತುಗಳಲ್ಲಿ ತಾರತಮ್ಯ ಆಗಿದೆ ಎಂಬ ಅಭಿಪ್ರಾಯವನ್ನು ತಾಳಲಾಗುತ್ತದೆ. ಜೊತೆಗೆ ಈ ತಾರತಮ್ಯವು ಅಕ್ಕಪಕ್ಕದ ಸಮುದಾಯಗಳಿಂದಲೇ ನಡೆದಿದೆ ಎಂಬ ಅಭಿಪ್ರಾಯವನ್ನೂ ತಾಳಲಾಗುತ್ತದೆ. ಅದಕ್ಕೆ ಸಂಬಂಧಿಸಿದ ಅಂಕಿಅಂಶಗಳನ್ನು ಸಂಗ್ರಹಿಸಲಾಗುತ್ತದೆ. ಇಂತಹ ಕೆಲವು ನಿಲುವುಗಳು ಸಮುದಾಯಗಳ ನಡುವೆ ವೈಮನಸ್ಸಿಗೂ ಕಾರಣವಾಗಬಹುದು. ಇಂತಹ ತಾರತಮ್ಯಗಳನ್ನು ಪ್ರಭುತ್ವ ಹುಟ್ಟುಹಾಕಿದೆ. ಅದು ತನ್ನ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಲು ಈ ಬಗೆಯ ಅನೇಕ ತಾರತಮ್ಯಗಳನ್ನು ಮುಂದುವರಿಸಿಕೊಂಡು ಬರುತ್ತಿದೆ. ಸಂಶೋಧನೆ ಗಳು ಈ ಆಯಾಮದ ಕಡೆಗೆ ಗಮನ ಕೊಡದಿದ್ದರೆ ‘ಸಂಶೋಧನೆಗಳ ಕೊಡುಗೆ’ಯು ಪ್ರಭುತ್ವಕ್ಕೆ ವರವಾಗಿಯೂ; ಸಮುದಾಯಗಳಿಗೆ ಶಾಪವಾಗಿಯೂ ಪರಿಣಮಿಸುತ್ತದೆ. ೯೦ರ ದಶಕ ನಂತರ ಪ್ರಭುತ್ವದ ಧೋರಣೆಯೆ ಈ ಬಗೆಯ ಸಂಶೋಧನೆಗಳನ್ನು ಪ್ರಭಾವಿಸುತ್ತಿದೆ. ಕೆಲವು ಸಂಶೋಧಕರು ಇದು ತಮ್ಮ ಧೋರಣೆ ಎಂದು ತಪ್ಪಾಗಿ ಭಾವಿಸಿ, ಪ್ರಭುತ್ವಕ್ಕೆ ಅನುಕೂಲವಾಗುವ ನಿಲುವುಗಳನ್ನು ಮಂಡಿಸುತ್ತಿದಾರೆ.

ಈ ಬರವಣಿಗೆಯಲ್ಲಿ ಸಂಶೋಧನೆಯನ್ನು ಕೇವಲ ಶೈಕ್ಷಣಿಕ ವಲಯದ ಚಟುವಟಿಕೆ ಎಂದು ಪರಿಗಣಿಸಿಲ್ಲ. ಸಂಶೋಧನೆಯನ್ನು ವಿವಿಧ ರಾಜಕೀಯ ಶಕ್ತಿಗಳು ವಿವಿಧ ನೆಲೆಗಳಲ್ಲಿ ಪ್ರಭಾವಿಸುತ್ತಿವೆ. ಹಾಗಾಗಿ ಸಂಶೋಧಕರ ಮುಂದೆ ಸಂಶೋಧನೆಗೆ ಬೇಕಾದ ಆಲೋಚನ ವಿಧಾನಗಳು, ಮಾನದಂಡಗಳು ತಮ್ಮನ್ನು ಆಯ್ಕೆ ಮಾಡಿಕೊಳ್ಳಲು ಒತ್ತಾಯಿಸುತ್ತಿವೆ. ಪರಿಣಾಮವಾಗಿ ಸಂಶೋಧನೆಗಳು ಸರಳ ತೀರ್ಮಾನದ ದಾರಿಗಳನ್ನು ಹಿಡಿದಿವೆ. ಶಿಕ್ಷಣದ ಮಾರುಕಟ್ಟೆಯ ಹಿತಾಸಕ್ತಿಯೂ ಇದನ್ನು ಪ್ರಭಾವಿಸುತ್ತಿದೆ; ನಿಯಂತ್ರಿಸುತ್ತಿದೆ. ಇಂತಹ ಮಾನದಂಡಗಳ ಬಗ್ಗೆ ಎಚ್ಚರ ವಹಿಸುವ ಅಗತ್ಯವಿದೆ. ಜೊತೆಗೆ ತಾತ್ವಿಕವಾಗಿ ಅವುಗಳ ಅಪಾಯಗಳನ್ನು ಅರಿಯುವ ಅಗತ್ಯವೂ ಇದೆ. ಅದಕ್ಕಾಗಿ ಈ ಬಗ್ಗೆ ಮತ್ತೆ ಮತ್ತೆ ಇಲ್ಲಿ ಚರ್ಚಿಸಲಾಗಿದೆ. ಸಾಹಿತ್ಯವನ್ನು ಸಂಶೋಧನೆಗಾಗಿ ಓದುವಾಗ ಕೇವಲ ಅರ್ಥದ ನೆಲೆಯಲ್ಲಿ ಅರ್ಥೈಸಲು ಆಗುವುದಿಲ್ಲ. ಇದನ್ನೂ ಒಳಗೊಂಡಂತೆ ಧೋರಣೆಯ ನೆಲೆಯಲ್ಲಿ ಅರ್ಥೈಸಬೇಕಾಗುತ್ತದೆ. ಆದರೆ ಸಾಹಿತ್ಯ ಚರಿತ್ರೆಗಳು ಮತ್ತು ಸಾಂಪ್ರದಾಯಿಕ ಓದಿನ ಕ್ರಮಗಳು ಸಾಹಿತ್ಯ ಓದನ್ನು ಒಂದು ಬಗೆಯಲ್ಲಿ ಸ್ಥಗಿತಗೊಳಿಸಿಬಿಟ್ಟಿವೆ. ಈ ಸ್ಥಗಿತ ಓದಿನ ಕ್ರಮಗಳು ಸಂಶೋಧನೆಯಲ್ಲಿ ಕ್ರಿಯಾಶೀಲವಾಗಿವೆ. ಇದರ ಮಿತಿಗಳನ್ನು ಮತ್ತು ಇದರಿಂದ ಪಾರಾಗುವ ಸಾಧ್ಯತೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಚರಿತ್ರೆ ಮತ್ತು ಪರಂಪರೆಗಳ ಮೇಲಿನ ಅಭಿಮಾನ ಮತ್ತು ಗೌರವಗಳು ಸಾಹಿತ್ಯ ಓದನ್ನು ನಿಯಂತ್ರಿಸಿರುವ ಮತ್ತು ಪ್ರಭಾವಿಸುತ್ತಿರುವ ಸಂಗತಿಗಳನ್ನು ಚರ್ಚಿಸಲಾಗಿದೆ. ವಿಚಾರಕ್ಕಿಂತ ವ್ಯಕ್ತಿಗಳ ಮೇಲಿನ ಅಭಿಮಾನ ಮತ್ತು ಗೌರವಗಳಿಂದಾಗಿ ಅವರ ನಿರುಪಯುಕ್ತ ಅಭಿಪ್ರಾಯಗಳು ಸಂಶೋಧನೆಯಲ್ಲಿ ಜಾಗ ಪಡೆಯುತ್ತಿರುವುದರ ಮಿತಿಗಳನ್ನು ಇಲ್ಲಿ ಚರ್ಚಿಸಲಾಗಿದೆ. ಸಾಹಿತ್ಯ ಪಠ್ಯದ ವಸ್ತುವನ್ನು ಸರಳೀಕರಿಸಿ ನೋಡುತ್ತಿರುವುದರ ಮಿತಿಗಳಿಂದಾಗಿ ಅದರ ಆಶಯವನ್ನು ಯಾಂತ್ರಿಕವಾಗಿ ತೀರ್ಮಾನಿಸಲಾಗುತ್ತಿದೆ ಎಂಬುದನ್ನು ಚರ್ಚಿಸಲಾಗಿದೆ. ಸಂಶೋಧಕರಿಗೆ ಅನುಕೂಲವಾಗಲೆಂದು ಇಲ್ಲಿಯ ಚರ್ಚೆಯಲ್ಲಿ ಕೆಲವು ಸಾಹಿತ್ಯ ಕೃತಿಗಳನ್ನು ಮಾತ್ರ ಉದಾಹರಿಸಲಾಗಿದೆ.

ಇಲ್ಲಿಯ ವಿಚಾರ ಮಂಡನೆಗೆ ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರದಂತಹ ಕೆಲವು ಮಾತುಗಳನ್ನು ಬಳಸಲಾಗಿದೆ. ಆಯಾ ವಸ್ತುಸಂಗತಿಗಳ ನಿರೂಪಣ ಕ್ರಮಕ್ಕೆ ಆ ಮಾತುಗಳು ಅಗತ್ಯವಾಗಿದ್ದವು. ಇಲ್ಲಿಯ ನಿರೂಪಣ ಕ್ರಮದಲ್ಲಿ ನಂಬಲಾಗಿದೆ; ನಂಬಿಸಲಾಗಿದೆ ಮುಂತಾದ ಕೆಲವು ಪದಗಳು ಪ್ರಯೋಗವಾಗಿವೆ. ಸಾಮಾಜಿಕ ಗ್ರಹಿಕೆಯ ಮತ್ತೊಂದು ರೂಪವೆ ಸಾಹಿತ್ಯಗ್ರಹಿಕೆ. ಸಾಮಾಜಿಕ ಗ್ರಹಿಕೆಯು ಜಾಗೃತಾವಸ್ಥೆಯಲ್ಲೂ ನಡೆಯುತ್ತದೆ ಇಲ್ಲವೆ ಕೇವಲ ನಂಬಿಕೆಯ ನೆಲೆಯಲ್ಲೂ ನಡೆಯುತ್ತದೆ. ಈ ನಂಬಿಕೆಯ ಹಿಂದೆ ಪ್ರಜ್ಞಾಪೂರ್ವಕವಾದ ಇಲ್ಲವೆ ಅಪ್ರಜ್ಞಾಪೂರ್ವಕವಾದ ಧೋರಣೆ ಇರುತ್ತದೆ. ಆ ಧೋರಣೆಯು ಹೊರಗಿನವರದ್ದಾಗಿದ್ದು, ಅದನ್ನು ನಂಬಿಸಲಾಗಿರುತ್ತದೆ. ಅದನ್ನು ವಿವರಿಸುವಾಗ ಈ ಬಗೆಯ ಪದ ಬಳಕೆ ಅನಿವಾರ್ಯವಾಗಿದೆ. ಮತ್ತೆ ಕೆಲವು ಕಡೆ ಎನ್ನಲಾಗಿದೆ, ಕರೆಯಲಾಗಿದೆ, ಗುರುತಿಸಲಾಗಿದೆ, ವಿಂಗಡಿಸಲಾಗಿದೆ, ನಿರ್ಧರಿಸಲಾಗಿದೆ, ತೀರ್ಮಾನಿಸಲಾಗಿದೆ ಈ ಮುಂತಾದ ಪದಗಳು ಪ್ರಯೋಗವಾಗಿವೆ. ಅವೆಲ್ಲ ನನ್ನ ಧೋರಣೆ ಮತ್ತು ನನ್ನ ದೃಷ್ಟಿಕೋನಕ್ಕಿಂತ ಭಿನ್ನವಾದವು. ಆ ಭಿನ್ನತೆಯನ್ನು ಭಾಷಿಕವಾಗಿ ಮಂಡಿಸುವಾಗ ಈ ಬಗೆಯ ಪದ ಬಳಕೆ ಅನಿವಾರ್ಯವಾಗಿದೆ. ಈ ಬರವಣಿಗೆಯ ಕೊನೆಯಲ್ಲಿ ಗ್ರಂಥ ಋಣ ಎಂಬುದನ್ನು ಕೊಟ್ಟಿಲ್ಲ. ಬರವಣಿಗೆಗೆ ಮಾಹಿತಿ ಪಡೆದ ಕೃತಿಗಳಿದ್ದರೆ ಅಂತವನ್ನು ಅಲ್ಲಿ ಕೊಡಬಹುದು. ಆದರೆ ಇದು ತಾತ್ವಿಕ ಪ್ರಧಾನ ಬರವಣಿಗೆ. ಇಲ್ಲಿ ಪ್ರಯೋಗವಾಗಿರುವ ಆಲೋಚನ ಕ್ರಮವನ್ನು, ಅದರ ಹಿಂದಿರುವ ಧೋರಣೆಗಳನ್ನು ಯಾವುದೊ ಕೆಲವೇ ಕೆಲವು ಪುಸ್ತಕಗಳಿಂದ ಪಡೆದಿದ್ದೇನೆ ಎಂದು ಭಾವಿಸುವುದು ಯಾಂತ್ರಿಕವಾಗುತ್ತದೆ. ಹಲವು ವರ್ಷಗಳಿಂದ ನಾನು ಆಲೋಚಿಸುತ್ತಿರುವ ಮತ್ತು ಆಲೋಚಿಸುವಂತೆ ಮಾಡುತ್ತಿರುವ, ನಾನು ಭಾಗವಹಿಸುತ್ತಿರುವ ಮತ್ತು ಭಾಗವಹಿಸುವಂತೆ ಮಾಡುತ್ತಿರುವ ಎಲ್ಲವೂ ಇಲ್ಲಿ ಗ್ರಂಥ ಋಣಗಳೂ ಹೌದು; ಮೌಖಿಕ ಋಣಗಳೂ ಹೌದು.

ಪ್ರಧಾನವಾಗಿ ಸಂಶೋಧಕರನ್ನು ಗಮನದಲ್ಲಿಟ್ಟುಕೊಂಡು ಈ ಬರವಣಿಗೆಯನ್ನು ರೂಪಿಸಲಾಗಿದೆ. ಸಂಶೋಧಕರು ಎದುರಿಸುತ್ತಿರುವ ಸಂಶೋಧನೆಯ ಸಮಸ್ಯೆಗಳಿಗೆ ರೆಡಿಮೇಡ್ ಉತ್ತರ ಕೊಡುವ ವಿಧಾನ ಇಲ್ಲಿಲ್ಲ. ಬದಲಿಗೆ ಸಂಶೋಧಕರು ಸಂಶೋಧನ ವಿಷಯವನ್ನು ಯಾವ ಯಾವ ಮಗ್ಗುಲುಗಳಿಂದ ನೋಡಬೇಕು, ಗ್ರಹಿಸಬೇಕು ಎಂಬುದರ ಕಡೆಗೆ ಇಲ್ಲಿನ ಚರ್ಚೆ ಆಸಕ್ತಿ ತಾಳಿದೆ. ಯಾವ ಧೋರಣೆಗಳು ಮತ್ತು ಯಾರ ಧೋರಣೆಗಳು ಸಮಾಜವನ್ನು ಹಾಗೂ ಸಾಹಿತ್ಯವನ್ನು ನೋಡಲು ಯಜಮಾನಕೆ  ನಡೆಸುತ್ತಿವೆ, ಅವುಗಳ ಮಿತಿಗಳು ಅಪಾಯಗಳು ಯಾವುವು ಎಂಬುದನ್ನು ವಿವರಿಸುತ್ತಲೆ ನಿರ್ಮಾಣ ಮಾಡಬೇಕಾದ ಧೋರಣೆಗಳ ಕಡೆಗೆ ಆಸಕ್ತಿ ತಾಳಿದೆ. ಆ ಮೂಲಕ ಸಂಶೋಧಕರು ಸಂಶೋಧನೆಯ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬಹುದಾದ ಸಾಧ್ಯತೆಗಳನ್ನು ಚರ್ಚಿಸಲಾಗಿದೆ.

ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ. ಎ. ಮುರಿಗೆಪ್ಪ ಅವರಿಗೆ, ಮಾನ್ಯ ಕುಲಸಚಿವರಾದ ಹಾಗೂ ಪ್ರಸಾರಾಂಗದ ನಿರ್ದೇಶಕರಾದ ಡಾ. ಮಂಜುನಾಥ ಬೇವಿನಕಟ್ಟಿ ಅವರಿಗೆ ವಂದನೆಗಳು. ವಿಭಾಗದ ಸದಸ್ಯರಿಗೆ, ಶೈಕ್ಷಣಿಕ ವಿಚಾರಗಳನ್ನು ಚರ್ಚಿಸುವ ಡಾ. ಶೈಲಜಾ ಹಿರೇಮಠ ಅವರಿಗೆ, ಗೆಳೆಯರಾದ ಡಾ. ಅಶೋಕ ಕುಮಾರ ರಂಜೇರೆ, ಡಾ. ಶಿವಾನಂದ ಎಸ್. ವಿರಕ್ತಮಠ, ಡಾ. ಎ.ಎ.ಸ್. ಪ್ರಭಾಕರ, ಡಾ. ಪ್ರೇಮಕುಮಾರ್ ಅವರಿಗೆ ವಂದನೆಗಳು. ವಿಭಾಗದ ಗುಮಾಸ್ತರಾದ ಗೆಳೆಯ ಡಾ. ಪ್ರೇಮಕುಮಾರ್ ಅವರಿಗೆ ವಂದನೆಗಳು. ವಿಭಾಗದ ಗುಮಾಸ್ತರಾದ ಗೆಳೆಯ ಶ್ರೀ ಶಿವಪ್ಪ ಕೋಳೂರು ಅವರಿಗೆ, ಕರಡು ಹಂತದಲ್ಲಿ ಈ ಬರವಣಿಗೆಯನ್ನು ಗೆಳೆಯರೂ ಮತ್ತು ಅಧ್ಯಯನಾಂಗದ ನಿರ್ದೇಶಕರೂ ಆದ ಡಾ. ವೀರೇಶ ಬಡಿಗೇರ ಅವರು, ಗೆಳೆಯರಾದ ಶ್ರೀ ಡಿ. ಅಂಜಿನಪ್ಪ ಅವರು ಮತ್ತು ಶ್ರೀ ಬಿ.ಸುಧಾಕರ ದೇವಾಡಿಗ ಅವರು ಓದಿ ಪ್ರತಿಕ್ರಿಯಿಸಿದ್ದಾರೆ. ಈ ಬರವಣಿಗೆಗೆ ಸಂಬಂಧಿಸಿ, ಮುಖ್ಯ ಮಾಹಿತಿಯೊಂದನ್ನು ಕೇಳಿದಾಗ ಅದನ್ನು (ಕಷ್ಟಪಟ್ಟು) ಹುಡುಕಿ ಹೇಳಿದ ಡಾ. ಸಬಿತ ಬನ್ನಾಡಿ ಅವರಿಗೆ, ಮುಖಪುಟ ವಿನ್ಯಾಸ ಮಾಡಿದ ಶ್ರೀ ಕೆ.ಕೆ. ಮಕಾಳಿ ಅವರಿಗೆ, ಪುಟವಿನ್ಯಾಸ ಮಾಡಿದ ಶ್ರೀ ಬಿ. ಸುಜ್ಞಾನಮೂರ್ತಿ ಅವರಿಗೆ ವಂದನೆಗಳು. ಈ ಬರವಣಿಗೆಯ ಜನ್ಮಕ್ಕೆ ಕಾರಣವಾದ ವಿಭಾಗದಲ್ಲಿ ನಡೆಸುವ ಸಂಶೋಧನ ಕಮ್ಮಟಕ್ಕೆ ಈ ಕೃತಿಯನ್ನು ಅರ್ಪಿಸದೆ ಇನ್ಯಾವುದಕ್ಕೆ ಅರ್ಪಿಸಲಿ?

ಡಾ. ಬಿ.ಎಂ. ಪುಟ್ಟಯ್ಯ