ಸಂಶೋಧಕರ ಮುಂದೆ ಇತ್ತೀಚೆಗೆ ಒಂದು ಗುಮ್ಮವನ್ನು ಬಿಡಲಾಗಿದೆ. ಬೇರೊಂದು ಗುಮ್ಮದ ಕತೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿದೆ. ಎಳೆ ಮಗುವಿಗೆ ಊಟ ಮಾಡಿಸುವಾಗ, ಅದು ಉಣ್ಣದಿದ್ದರೆ ‘ಗುಮ್ಮ ಬಂತು ನೋಡು!’ ಎಂದು ಹೆದರಿಸುವುದಿದೆ. ಹಾಗಾದರೆ ಅದರ ಹಿಂದಿರುವ ತರ್ಕ ಯಾವುದು? ಮಗು ಗುಮ್ಮ ಎಂಬುದಕ್ಕೆ ಹೆದರುತ್ತದೆ ಎಂಬುದು ನಂಬಿಕೆಯೊ ಅಥವಾ ಅದನ್ನು ಹೆದರಿಸಿ ಉಣಿಸಬೇಕು ಎಂಬುದು ಗುರಿಯೊ? ಈ ನಂಬಿಕೆ ಮತ್ತು ಗುರಿ ಎರಡೂ ಒಂದೇ ಅಲ್ಲ; ಬೇರೆ ಬೇರೆ. ಮಗು ಹೆದರುತ್ತದೆ ಎಂಬುದು ನಂಬಿಕೆಯಾದಾಗ, ಮಗು ಹೆದರದೆ ಕೂಡ ಇರಬಹುದು ಎಂಬ ಸಾಧ್ಯತೆಯೊಂದರ ಎಚ್ಚರಿಕೆ ಬೇಕಾಗುತ್ತದೆ. ಹೆದರಿಸಿ ಉಣಿಸಬೇಕು ಎಂಬುದು ಗುರಿಯಾದಾಗ, ಒಂದು ವೇಳೆ ಆ ಗುರಿಗೆ ಬಗ್ಗದಿದ್ದರೆ, ಆಗ ಅದಕ್ಕೆ ಗುಮ್ಮವನ್ನು ಬಿಟ್ಟು ಬೇರೆ ದಾರಿ ಹಿಡಿಯುವುದೇ ಹೆಚ್ಚು. ಅಂತಹ ಬೇರೆ ದಾರಿಗಳು ಯಾವುದಾಗಿರುತ್ತವೆ ಎಂಬುದನ್ನು ಮಾತ್ರ ಸೂಚಿಸಬಹುದು. ಹೌದು, ಇದು ಮಗುವಿನ ಮುಂದೆ ಬಿಡುವ ಗುಮ್ಮದ ವಿಷಯವಾಯಿತು. ಸಂಶೋಧಕರ ಮುಂದೆ ಬಿಟ್ಟಿರುವ ಗುಮ್ಮ ಯಾವುದು?

‘ಸಮಸ್ಯೀಕರಣ ಎಂದರೆ ಏನು?’ ಎಂಬುದೇ ಸಂಶೋಧಕರ ಮುಂದೆ ಬಿಡಲಾಗಿರುವ ಗುಮ್ಮ. ಈ ಬಗ್ಗೆ ಅನೇಕ ಸಂಶೋಧಕರು ತಾವು ಸಂಶೋಧನೆ ಶುರುಮಾಡಿದ್ದಲ್ಲಿಂದ ಮೊದಲುಗೊಂಡು ಕೊನೆಯವರೆಗೂ ಕೇಳುತ್ತಲೇ, ತಲೆಕೆಡಿಸಿಕೊಳ್ಳುತ್ತಲೇ ಇರುತ್ತಾರೆ. ಅದಕ್ಕೆ ಉತ್ತರವೆಂದು ವಿವರಿಸುವವರೂ ಕೂಡ ಸಂಶೋಧನೆ ಶುರುವಾದಲ್ಲಿಂದ ಅವಾರ್ಡ್‌ ಆಗುವವರೆಗೆ ವಿವರಿಸುತ್ತಲೇ ಇರುತ್ತಾರೆ. ಕೊನೆಗೂ ಅದು ಎರಡೂ ಕಡೆಯವರಿಗೆ ಮನವರಿಕೆಯಾಗಿದೆ, ಸ್ಪಷ್ಟವಾಗಿದೆ ಎಂದು ತೀರ್ಮಾನಿಸುವುದು ಕಷ್ಟವೆ. ಯಾಕೆಂದರೆ ಗುಮ್ಮಕ್ಕೆ ಮಗು ಹೆದರುತ್ತದೆ ಎಂಬುದು ನಂಬಿಕೆಯೊ ಅಥವಾ ಅದನ್ನು ಹೆದರಿಸಬೇಕು ಎಂಬುದು ಗುರಿಯೊ? ಎಂಬುದನ್ನು ಇಲ್ಲಿಗೆ ತಂದು ವಿವರಿಸಿದರೆ ಒಂದು ಸಲ ಎರಡೂ ಆಗಿರುವಂತೆ, ಮತ್ತೊಂದು ಸಲ ಎರಡೂ ಆಗಿಲ್ಲದಂತೆ ಕಾಣುತ್ತದೆ. ಆದರೂ ‘ಸಮಸ್ಯೀಕರಣ’ ಎಂಬುದು ಸಂಶೋಧಕರ ಮುಂದೆ ಕೇವಲ ಗುಮ್ಮವಾಗಿ ಕಾಡುತ್ತಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ಅದು ಅವರಿಗೆ ‘ಭಯೋತ್ಪಾದನ ಪರಿಕಲ್ಪನೆ’ಯಾಗಿಯೂ ಕಾಡುತ್ತಿದೆ. ಅಥವಾ ಅವರಿಗೆ ಹಾಗೆ ಕಾಡುವಂತೆ ಮಾಡಲಾಗಿದೆ. ಈ ಕಾರಣದಿಂದ ಉದ್ದೇಶಪೂರ್ವಕವಾಗಿಯೇ ಈ ಬರವಣಿಗೆಯ ಪರಿವಿಡಯಲ್ಲಿ ‘ಸಮಸ್ಯೀಕರಣ’ ಎಂಬ ಉಪ ಅಧ್ಯಾಯವನ್ನು ಬರೆಯಲು ಹೋಗಿಲ್ಲ.

ಹಿಂದಿನ ಕೆಲವು ವರ್ಷಗಳಲ್ಲಿ ಬೇರೆ ಗುಮ್ಮವನ್ನು ಬಿಡಲಾಗಿತ್ತು. ‘ನಿರಚನಾವಾದ’, ‘ಸಂಸ್ಕೃತೀಕರಣ’ ಮುಂತಾದ ಗುಮ್ಮಗಳನ್ನು ಬಿಡಲಾಗಿತ್ತು. ಅವಕ್ಕೆ ತಲೆಕೊಟ್ಟು, ತಲೆಕೆಡಿಸಿಕೊಂಡವರು ಕೆಲವರು; ಅವಕ್ಕೆ ತಲೆಕೊಡದೆ, ತಲೆ ಕೆಡಿಸಿಕೊಳ್ಳದೆ ಉಳಿದವರು ಕೆಲವರು. ಇಲ್ಲಿ ಅವುಗಳ ಚರ್ಚೆ ಅಗತ್ಯವಿಲ್ಲ. ಮತ್ತೆ ‘ಸಮಸ್ಯೀಕರಣ’ದ ವಿಷಯಕ್ಕೆ ಬರೋಣ. ‘ಸಮಸ್ಯೀಕರಣ ಎಂದರೇನು?’ ಎಂದು ಕೇಳುವಂತೆ ಸಂಶೋಧಕರನ್ನು ಪರೋಕ್ಷ ಬಲಾತ್ಕಾರದಿಂದ ಪ್ರಚೋದಿಸಲಾಗುತ್ತಿದೆ. ‘ನೀವು ಅದನ್ನು ಕೇಳಿದರೆ ನಾವು ಅದಕ್ಕೆ ಉತ್ತರ ಹೇಳುತ್ತೇವೆ’ ಎಂಬ ತರ್ಕ ಅಲ್ಲಿ ಕೆಲಸ ಮಾಡುತ್ತಿದೆ. ಸಂಶೋಧನೆ ಮಾಡುವ ಮೂಲಕ ಕೆಲವು ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬಹುದು ಎಂಬುದು ಸಂಶೋಧಕರ ನಿರೀಕ್ಷೆ ಮತ್ತು ಅಪೇಕ್ಷೆ. ಆದರೆ ಈ ‘ಸಮಸ್ಯೀಕರಣ’ ಎಂಬುದು ಸಮಸ್ಯೆಗೆ ಉತ್ತರ ಹೇಳುವ ಬದಲು ಸಮಸ್ಯೆಯನ್ನ ಜಾಸ್ತಿ ಮಾಡುತ್ತಿದೆಯಲ್ಲ ಎಂಬುದು ಸಂಶೋಧಕರ ಸಮಸ್ಯೆ ಮತ್ತು ಕೊರಗು. ಹೀಗೆ ಸಂಶೋಧಕರು ಇಟ್ಟುಕೊಂಡಿದ್ದ ನಿರೀಕ್ಷೆ ಮತ್ತು ಅಪೇಕ್ಷೆ ತಿರುಗಿ ಅವರಿಗೇ ಸಮಸ್ಯೆಯಾಗಿ ಮುಳುವಾಗಿದೆ. ಅಥವಾ ಮುಳವಾಗುವಂತೆ ಮಾಡಲಾಗಿದೆ.

‘ಸಮಸ್ಯೀಕರಣ’ ಎಂಬುದರ ಆಯಾಮಗಳು ಏನಿರಬಹುದು? ‘ಸಮಸ್ಯೀಕರಣ’ ಎಂಬ ಪದಕ್ಕೆ ಅರ್ಥ ಬೇಕಾ? ಅದರ ಪರಿಚಯ ಬೇಕಾ? ಅದರ ವ್ಯಾಖ್ಯಾ ಬೇಕಾ? ಈ ನಾಲ್ಕರಲ್ಲಿ ಸಂಶೋಧಕರು ಯಾವುದನ್ನು ಅವಲಂಬಿಸಿ ತಮ್ಮ ಅಪೇಕ್ಷೆಯನ್ನು ರೂಪಿಸಿಕೊಳ್ಳುತ್ತಿದ್ದಾರೆ ಎಂಬುದು ಅವರಿಗೆ ಸ್ಪಷ್ಟವಿಲ್ಲ. ಜೊತೆಗೆ ಮಾರ್ಗದರ್ಶನ ಮಾಡುವವರು ಈ ನಾಲ್ಕರಲ್ಲಿ ಯಾವುದನ್ನು ಪರಿಗಣಿಸಿದ್ದಾರೆ ಎಂಬುದೂ ಸ್ಪಷ್ಟವಿಲ್ಲ. ಅಲ್ಲದೆ ‘ಸಮಸ್ಯೀಕರಣ ಎಂಬುದು ಚರ್ಚೆ ಮಾಡಬೇಕಾದ ಒಂದು ವಸ್ತುವಿಷಯ’ವೊ ಅಥವಾ ‘ಅದು ಒಂದು ಆಲೋಚನ ಕ್ರಮ’ವೊ? ಈ ಎರಡರಲ್ಲಿ ಯಾವುದು ಎಂಬುದನ್ನು ಬಗೆಹರಿಸಿಕೊಳ್ಳಬೇಕು. ‘ಸಮಸ್ಯೀಕರಣ ಎಂಬುದು ಒಂದು ವಸ್ತುವಿಷಯ’ ಎಂದಾಗ ಅದನ್ನು ಪರಿಭಾವಿಸುವ ಆಲೋಚನ ಕ್ರಮ ಯಾವುದು ಎಂಬ ಪ್ರಶ್ನೆ ಬರುತ್ತದೆ. ಇಲ್ಲ ‘ಸಮಸ್ಯೀಕರಣ ಎಂಬುದು ಒಂದು ಆಲೋಚನ ಕ್ರಮ’ ಎನ್ನುವುದಾದರೆ, ಆ ಆಲೋಚನೆ ಕ್ರಮದ ಸ್ವರೂಪ ಮತ್ತು ಅದರ ಧೋರಣೆಯನ್ನು ವಿವರಿಸಬೇಕಾಗುತ್ತದೆ. ಆದರೆ ‘ಸಮಸ್ಯೀಕರಣ’ ಎಂಬುದರ ಸ್ವರೂಪವನ್ನು ವಿವರಿಸಿಕೊಳ್ಳುವ ಕೆಲಸವನ್ನೆ ಮಾಡಿಲ್ಲವೆಂದು ಕಾಣುತ್ತದೆ. ಈ ಹಿಂದಿನ ಭಾಗದಲ್ಲಿ ಜಾತಿ ಸಮಸ್ಯೆ ಮತ್ತು ಬಡವರ ಸಮಸ್ಯೆಗಳನ್ನು ತಪ್ಪಾಗಿ ವಿವರಿಸಿಕೊಳ್ಳಲಾಗಿದೆ ಎಂಬುದನ್ನು ಚರ್ಚಿಸಲಾಗಿದೆ. ಅದೇ ರೀತಿಯಲ್ಲಿ ‘ಸಮಸ್ಯೀಕರಣದ ಸ್ವರೂಪ’ವನ್ನು ವಿವರಿಸಿಕೊಂಡಿಲ್ಲ. ಹೀಗೆ ವಿವರಿಸಿಕೊಂಡಿಲ್ಲದೆ ಇರುವುದರಿಂದ ಆ ಕುರಿತು ಪ್ರಶ್ನೆ ಕೇಳುವವರಿಗೆ ಅದರ ಯಾವ ಆಯಾಮವನ್ನು ಕುರಿತು ಪ್ರಶ್ನೆ ಕೇಳುತ್ತಿದ್ದೇವೆ ಎಂಬುದು ಸ್ಪಷ್ಟವಾಗಿಲ್ಲ. ಜೊತೆಗೆ ಅದಕ್ಕೆ ಉತ್ತರ ಹೇಳುವವರಿಗೂ ಅದರ ಯಾವ ಆಯಾಮವನ್ನು ಪರಿಗಣಿಸಿದ್ದೇವೆ ಎಂಬುದು ಮನವರಿಕೆಯಾಗಿಲ್ಲ. ಹಾಗಾಗಿ ಎರಡೂ ಕಡೆಯವರಿಂದ ಎಷ್ಟೋ ಸಲ ಅದು ಕೇವಲ ಒಂದು ಪದವಾಗಿ ಅದಕ್ಕಿಂತ ಹೆಚ್ಚಾಗಿ ಅದು ಒಂದು ಶಬ್ದವಾಗಿ ಮಾತ್ರ ತನ್ನ ಜಾಗವನ್ನು ದಿನೇದಿನೇ ವಿಸ್ತರಿಸಿಕೊಳ್ಳುತ್ತಲೇ ಇದೆ. ಇದರ ವಿಸ್ತಾರ ಜಾಸ್ತಿಯಾದಷ್ಟೂ ಅದರ ವ್ಯಾಪ್ತಿಗೆ ಬರುವ ಸಂಶೋಧಕರ ಪ್ರಮಾಣ ಜಾಸ್ತಿಯಾಗುತ್ತಲೆ ನಡೆದಿದೆ.

‘ಸಮಸ್ಯೀಕರಣ’ ಎಂಬುದನ್ನು ಅರ್ಥ ಹೇಳಬೇಕಾದ ಒಂದು ಪದವೆಂದು, ಅದು ಚರ್ಚೆ ಮಾಡಬೇಕಾದ ವಸ್ತುವಿಷಯ ಎಂದು ಗುರುತಿಸಿದೆ, ಅದನ್ನು ಒಂದು ದೃಷ್ಟಿಕೋನ ಎಂದೇ ಕರೆಯುವುದು ಹೆಚ್ಚು ಸೂಕ್ತ. ಸಾಮಾಜಿಕ, ರಾಜಕೀಯ, ಸಾಹಿತ್ಯಕ ಮೊದಲಾದ ವಸ್ತುಸ್ಥಿತಿಯ ಸಮಸ್ಯೆಯಗಳನ್ನು ವಿವರಿಸಲಾಗುತ್ತದೆ. ಹಾಗೆ ವಿವರಿಸಲು ಕೆಲವು ಮಾನದಂಡಗಳನ್ನು ಬಳಸಲಾಗುತ್ತದೆ. ಅವೆಲ್ಲವನ್ನೂ ಎಲ್ಲರೂ ಒಂದೇ ಬಗೆಯಲ್ಲಿ ವಿವರಿಸುವುದಿಲ್ಲ. ಬೇರೆಬೇರೆಯಾಗಿ ವಿವರಿಸುತ್ತಾರೆ. ಬೇರೆ ಬೇರೆ ಮಾನದಂಡಗಳನ್ನು ಬಳಸುವುದರಿಂದ ವಿವರಣೆಗಳು ಬೇರೆಬೇರೆಯಾಗುತ್ತವೆ. ಆದರೆ ಕೆಲವು ಸಲ ಒಂದೇ ಅರ್ಥ, ಒಂದೇ ವಿವರಣೆ, ಒಂದೇ ವ್ಯಾಖ್ಯಾನ ಮೇಲುಗೈ ಸಾಧಿಸಿಬಿಟ್ಟಿರುತ್ತದೆ. ಅದನ್ನು ಎಲ್ಲರೂ ಒಪ್ಪುವಂತೆ, ನಂಬುವಂತೆ ಮಾಡಲಾಗಿರುತ್ತದೆ. ಈ ಒಂದೇ ವಿವರಣೆ ಮತ್ತು ವ್ಯಾಖ್ಯಾನದ ತಾತ್ವಿಕತೆಗಳು ಸಂಶೋಧನ ವಲಯದಲ್ಲಿ ಕ್ರಿಯಾಶೀಲವಾಗಿವೆ. ಹಾಗಾಗಿ ಸಂಶೋಧನೆಯಲ್ಲಿಯೂ ಒಂದೇ ವಿವರಣೆ ಮತ್ತು ವ್ಯಾಖ್ಯಾನವನ್ನು ಒಪ್ಪುವಂತಹ ಪರಿಸ್ಥಿತಿ ಇದೆ. ಹೀಗೆ ಒಪ್ಪಿಸಲಾಗಿರುವ ಮತ್ತು ನಂಬಿಸಲಾಗಿರುವ ವ್ಯಾಖ್ಯಾನಗಳಿಗೆ ಯಾವ ಮಾನದಂಡಗಳನ್ನು ಬಳಸಲಾಗಿದೆ ಎಂಬುದನ್ನು ಸಂಶೋಧನೆಯಲ್ಲಿ ಗುರುತಿಸಬೇಕು. ಆ ಮಾನದಂಡಗಳನ್ನು ಗುಣಾತ್ಮಕವಾಗಿ ಮೌಲ್ಯಮಾಪನ ಮಾಡಬೇಕು. ಅದೇ ವಿಷಯವನ್ನು ಬೇರೆ ದೃಷ್ಟಿಕೋನ ಮತ್ತು ಬೇರೆ ಮಾನದಂಡಗಳಿಂದ ವಿವರಿಸಲು ಮುಂದಾಗಬೇಕು. ಭಿನ್ನ ದೃಷ್ಟಿಕೋನದಿಂದ ಮಾನದಂಡಗಳನ್ನು ನಿರ್ಮಾಣ ಮಾಡಬೇಕು. ಈ ಹಿಂದಿನ ಚರ್ಚೆಯಲ್ಲಿ ‘ಸಾಹಿತ್ಯಕ್ಕೂ ಸಂಸ್ಕೃತಿಗೂ’ ಏರ್ಪಡುವ ಸಂಬಂಧಗಳನ್ನು ಸಂಶೋಧನೆ ಮಾಡಲು ತಾತ್ವಿಕ ಚೌಕಟ್ಟೊಂದನ್ನು ರೂಪಿಸಲಾಯಿತು. ಅದನ್ನು ಹಲವು ಪ್ರಶ್ನೆಗಳ ರೂಪದಲ್ಲಿ ನಿರ್ಮಾಣ ಮಾಡಲಾಯಿತು. ಬೇರೆ ಮಾತುಗಳಲ್ಲಿ ಹೇಳುವುದಾದರೆ ಇದು ‘ಸಮಸ್ಯೀಕರಣ’ದ ಒಂದು ಮಾದರಿ; ಒಂದು ಉದಾಹರಣೆ.

ಬಹುಪಕ್ಷಗಳಿರುವ ಪ್ರಜಾಪ್ರಭುತ್ವದಲ್ಲಿ ಚುನಾವಣೆಯ ಮೂಲಕ ಪ್ರತಿನಿಧಿಗಳನ್ನು ಮತ್ತು ಆಳುವ ಸರಕಾರವನ್ನು ಆಯ್ಕೆಮಾಡುವ ಪದ್ಧತಿ ಇದೆ. ಅಲ್ಲಿ ಚುನಾವಣೆಗೆ ಎಷ್ಟು ಜನ ಅಭ್ಯರ್ಥಿಗಳಾದರೂ ಸ್ಪಧಿಸಬಹುದು. ಮತಗಳ ಎಣಿಕೆಯ ನಂತರ, ಒಬ್ಬ ಅಭ್ಯರ್ಥಿ ಗೆದ್ದರೆಂದೂ, ಉಳಿದವರು ಸೋತರೆಂದೂ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ಗೆದ್ದ ಅಭ್ಯರ್ಥಿ ಮತದಾರರ ಅಥವಾ ಮತ ಹಾಕಿದವರ ಪ್ರತಿನೀಧಿ ಎಂದು ತೀರ್ಮಾನಿಸಿ, ಘೋಷಿಸಲಾಗುತ್ತದೆ. ಗೆದ್ದ ಅಭ್ಯರ್ಥಿಯನ್ನು ‘ಪ್ರತಿನಿಧಿ’ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಯಾವ ಅನುಮಾನವೂ ಇಲ್ಲ; ಯಾವ ಸಂದೇಹವೂ ಇಲ್ಲ. ಯಾವುದೇ ಭಿನ್ನಮತ, ತಕರಾರುಗಳೂ ಇಲ್ಲ. ಇದು ಒಂದು ಬಗೆಯ ಅಭಿಪ್ರಾಯ, ಒಂದು ಬಗೆಯ ನಂಬಿಕೆ. ಇದು ಎಲ್ಲರಿಗೂ ಒಪ್ಪಿಯಾಗಿದೆ; ಎಲ್ಲರೂ ಇದನ್ನು ಒಪ್ಪಿಕೊಂಡಿದ್ದಾರೆ. ಹಾಗಾಗಿ ಇದು ಒಪ್ಪಿತ ವಿಚಾರ; ಒಪ್ಪಿಸಿದ ವಿಚಾರ. ಯಾಕೆಂದರೆ ಇದು ಪ್ರಜಾಪ್ರಭುತ್ವದ ವಾಸ್ತವ. ಹಾಗಾಗಿಯೆ ಇದರ ಬಗ್ಗೆ ಯಾರಿಗೂ ಭಿನ್ನ ಅಭಿಪ್ರಾಯ ಇರಲು ಸಾಧ್ಯವಿಲ್ಲ. ಈಗ ಚುನಾವಣೆಯಲ್ಲಿ ತೀರ್ಮಾನಿಸುವ ‘ಸೋಲು-ಗೆಲುವು’ಗಳನ್ನು ಬೇರೊಂದು ದೃಷ್ಟಿಕೋನದಿಂದ ನೋಡೋಣ. ಯಾವುದೊ ಒಂದುಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿದೆ ಎಂದು ತಿಳಿಯೋಣ. ಆ ಕ್ಷೇತ್ರದಲ್ಲಿ ೪ ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಅಲ್ಲಿ ೧೨೦ ಜನ ಮತದಾರರು (ಮತದಾರರ ಸಂಖ್ಯೆಯನ್ನು ಸಾವಿರ ಇತ್ಯಾದಿಗಳಿಗೆ ಬದಲಾಯಿಸಿ ಕೊಳ್ಳಬೇಕು) ಇದ್ದಾರೆ. ಇವರಲ್ಲಿ ೧೦೦ ಜನ ಮತದಾರರು ಮತ ಹಾಕಿದ್ದಾರೆ. ಉಳಿದ ೨೦ ಜನ ಮತದಾರರು ಮತ ಹಾಕಿಲ್ಲ. ಚುನಾವಣೆಯ ನಂತರ ಮತಗಳ ಎಣಿಕೆ ನಡೆಯುತ್ತದೆ. ೧೦೦ ಮತಗಳು ೪ ಜನ ಅಭ್ಯರ್ಥಿಗಳಿಗೆ ಬೇರೆಬೇರೆ ಪ್ರಮಾಣದಲ್ಲಿ ಹಂಚಿಹೋಗಿರುತ್ತವೆ. ಹಂಚಿಹೋಗಿರುವ ಪ್ರಮಾಣ ಹೀಗಿರಬಹುದು. ೪ ಜನ ಅಭ್ಯರ್ಥಿಗಳಲ್ಲಿ ಒಬ್ಬ ಅಭ್ಯರ್ಥಿಗೆ ೨೬ಜನರು, ಮತ್ತಿಬ್ಬರು ಅಭ್ಯರ್ಥಿಗಳಿಗೆ ೨೫ ಮತ್ತು ೨೫ ಜನರು ಮತ ಹಾಕಿದ್ದಾರೆ. ಇನ್ನೊಬ್ಬ ಅಭ್ಯರ್ಥಿಗಳಿಗೆ ಈ ಮುಂದಿನಂತೆ ಹಂಚಿಹೋಗಿವೆ. ೨೬+೨೫+೨೫+೨೪=೧೦೦. ಇದರಲ್ಲಿ ೨೬ ಮತ ಪಡೆದ ಅಭ್ಯರ್ಥಿ ಗೆದ್ದರೆಂದೂ, ಉಳಿದವರು ಸೋತರೆಂದೂ ಚುನಾವಣಾ ಆಯೋಗ ಘೋಷಿಸುತ್ತದೆ. ಮತ ಹಾಕುವವರು, ಯಾರು ನಮ್ಮ ಪ್ರತಿನಿಧಿ ಆಗಬೇಕು ಮತ್ತು ಯಾರು ನಮ್ಮ ಪ್ರತಿನಿಧಿ ಆಗಬಾರದು ಎಂದು ತೀರ್ಮಾನಿಸಿಯೇ ಮತ ಹಾಕಿರುತ್ತಾರೆ. ಇದರ ಪ್ರಕಾರ ೨೬ ಮತ ಪಡೆದ ಅಭ್ಯರ್ಥಿಯು, ೧೨೦ ಮತದಾರರಲ್ಲಿ ಕೇವಲ ೨೬ ಜನ ಮತದಾರರ ಪ್ರತಿನಿಧಿ ಮಾತ್ರ. ಇನ್ನುಳಿದ ೯೪ ಜನ ಮತದಾರರ ಪ್ರತಿನಿಧಿ ಅಲ್ಲ. ಯಾಕೆಂದರೆ ಒಟ್ಟು ೧೨೦ ಜನ ಮತದಾರರಲ್ಲಿ ೯೪ ಜನರು ಈ ಅಭ್ಯರ್ಥಿ ನಮ್ಮ ಪ್ರತಿನಿಧಿ ಅಲ್ಲವೆಂದು ತೀರ್ಮಾನಿಸಿಯೇ ಮತ ಹಾಕಿದ್ದಾರೆ. ಹೀಗೆ ೯೪ ಜನ ಮತದಾರರಿಂದ ತಿರಸ್ಕೃತಗೊಂಡ ಅಭ್ಯರ್ಥಿಯನ್ನು ‘ಮತದಾರರ ಪ್ರತಿನಿಧಿ’ ಎಂದು ಆಯೋಗ ಘೋಷಣೆ ಮಾಡುತ್ತದೆ. ಹೀಗೆ ಬಹುಸಂಖ್ಯೆಯ ಮತದಾರರಿಂದ ತಿರಸ್ಕೃತಗೊಂಡವನೇ/ಳೇ ಪ್ರತಿನಿಧಿ ಆಗುತ್ತಿರುವುದು ವಿಪರ್ಯಾಸ. ಇದು ಪ್ರಜಾಪ್ರಭುತ್ವದ ಮತ್ತೊಂದು ವಾಸ್ತವ. ಚುನಾವಣೆಯಲ್ಲಿ ‘ಈ ಅಭ್ಯರ್ಥಿ ಗೆದ್ದ, ಈತನೆ ಪ್ರತಿನಿಧಿ’ ಎಂಬುದನ್ನು ತೀರ್ಮಾನಿಸಲು ಆಳುವ ವರ್ಗ (ಚುನಾವಣ ಆಯೋಗ) ಒಂದು ಮಾನದಂಡವನ್ನು ಬಳಸುತ್ತದೆ. ಬಹುಸಂಖ್ಯಾತ ಮತದಾರರಿಂದ ತಿರಸ್ಕೃತಗೊಂಡ ಒಳವರ್ಮವನ್ನು ಮುಚ್ಚಿಡುತ್ತದೆ. ‘ಈ ಅಭ್ಯರ್ಥಿ ಗೆದ್ದ’ ಎಂಬುದನ್ನು ಘೋಷಿಸಿ, ಒಪ್ಪಿಸುತ್ತದೆ. ಆದರೆ ಮತದಾರರು ಮತ ಹಾಕಿರುವ ಒಳವರ್ಮವನ್ನು ಪರಿಶೀಲಿಸಿದರೆ, ಆಳುವ ವರ್ಗ ತೀರ್ಮಾಣಿಸುವ ‘ಪ್ರತಿನಿಧಿ’ ೯*೪ ಜನ ಮತದಾರರಿಂದ ತಿರಸ್ಕರಿಸಲ್ಪಟ್ಟವನೇ ಆಗಿರುತ್ತಾನೆ. ಹೀಗೆ ಒಬ್ಬ ಅಭ್ಯರ್ಥಿ ‘ಆಯ್ಕೆಯಾದ ಪ್ರತಿನಿಧಿ’ ಎಂದು ತೀರ್ಮಾನಿಸಲು ಪ್ರಭುತ್ವ ಒಂದು ಬಗೆಯ ಮಾನದಂಡವನ್ನು ಬಳಸುತ್ತದೆ. ಅದೇ ತೀರ್ಮಾನವನ್ನು ಬೇರೆ ಮಾನದಂಡಗಳ ಮೂಲಕ ನೋಡಿದರೆ ‘ಆಯ್ಕೆಯಾದ ಪ್ರತಿನಿಧಿ’ ಬಹು ಸಂಖ್ಯಾತರಿಂದ ತಿರಸ್ಕರಿಸಲ್ಪಟ್ಟವನು ಎಂಬುದು ತಿಳಿಯುತ್ತದೆ. ಅಂದರೆ ಚುನಾವಣೆಯ ಫಲಿತಾಂಶವನ್ನು ಎರಡು ಧೋರಣೆಗಳ ಮೂಲಕ ನೋಡಬಹುದು. ಪ್ರಭುತ್ವದ ಕಡೆಯಿಂದ ನೋಡಿದಾಗ ‘ಆಯ್ಕೆಯಾದ ಪ್ರತಿನಿಧಿ’. ಮತದಾರರ ಕಡೆಯಿಂದ ನೋಡಿದಾಗ ‘ಬಹುಸಂಖ್ಯಾತರಿಂದ ತಿರಸ್ಕೃತಗೊಂಡ ಅಭ್ಯರ್ಥಿ’. ಹೀಗೆ ಬೇರೆ ಬೇರೆ ಮಾನದಂಡಗಳಿಂದ ಪ್ರಜಾಪ್ರಭುತ್ವದಲ್ಲಿ ಮುಚ್ಚಿಡಲಾಗಿರುವ ಮತ್ತೊಂದು ವಾಸ್ತವವನ್ನು ಗ್ರಹಿಸಬಹುದು; ಅರಿಯಬಹುದು. ಹಾಗಾಗಿ ಒಂದು ಪದವೊ, ವಾಕ್ಯವೊ, ಹೇಳಿಕೆಯೊ, ತೀರ್ಮಾನವೊ ಯಾವುದೇ ಇರಬಹುದು. ಅದನ್ನು ವಿರಿಸಲು, ಪರಿಚಯಿಸಲು ಯಾವ ಮಾನದಂಡಗಳನ್ನು ಬಳಸಿದ್ದಾರೆ ಎಂಬುದನ್ನು ತರ್ಕಬದ್ಧವಾಗಿ ಪತ್ತೆ ಹಚ್ಚಿ ಅದನ್ನು ಬೇರೆ ದೃಷ್ಟಿಕೋನದಲ್ಲಿ ನೋಡಬೇಕಾಗುತ್ತದೆ. ಸಂಶೋಧನೆಯಲ್ಲಿ ಈ ಬಗೆಯ ದೃಷ್ಟಿಕೋನಗಳನ್ನು ನಿರ್ಮಾಣ ಮಾಡಬೇಕಾಗಿದೆ; ಪ್ರಯೋಗಿಸಬೇಕಾಗಿದೆ.

ಮೇಲಿನ ಚರ್ಚೆಯಲ್ಲಿ ಇನ್ನೊಂದು ಮುಖ್ಯವಾದ ಅಂಶವಿದೆ. ಅದು ೨೦ ಜನ ಮತದಾರರು ಮತ ಹಾಕದೆ ಇರುವ ಸಂಗತಿ. ಈ ೨೦ಜನ ಮತದಾರರ ಪ್ರಕಾರ ಚುನಾವಣೆಗೆ ಸ್ಪರ್ಧಿಸಿರುವ ೪ ಜನ ಅಭ್ಯರ್ಥಿಗಳು ಯಾವ ಆಯಾಮದಿಂದಲೂ ‘ಪ್ರತಿನಿಧಿಗಳಾಗಲು’ ಅರ್ಹರಾದವರೇ ಅಲ್ಲ. ಹಾಗಾಗಿ ಈ ೨೦ ಜನ ಮತದಾರರು ಯಾರಿಗೂ ಮತ ಹಾಕದೆ ಚುನಾವಣೆಯಿಂದ ಹೊರಗುಳಿದಿದ್ದಾರೆ. ಇವರ ಪಾತ್ರವೂ ಪ್ರಜಾಪ್ರಭುತ್ವವು ಅಧೋಗತಿಗೆ ಇಳಿದಿರುವುದನ್ನು, ಅದು ನಿಜವಾಗಿ ತನ್ನ ಅಸ್ತಿತ್ವ ಕಳೆದುಕೊಂಡಿರುವುದನ್ನು ತೋರಿಸುತ್ತಿದೆ. ಆದರೆ ಚುನಾವಣೆಯ ಫಲಿತಾಂಶವನ್ನು ಕುರಿತ ಪ್ರಭುತ್ವದ ಲೆಕ್ಕಾಚಾರವು ಈ ೨೦ ಜನ ಮತದಾರರ ರಾಜಕೀಯ ಧೋರಣೆಯನ್ನು ಪರಿಗಣಿಸುವುದೇ ಇಲ್ಲ. ಆದರೆ ಸಂಶೋಧನೆಯ ದೃಷ್ಟಿಕೋನ ಮತ್ತು ಸಂಶೋಧನೆಯ ಧೋರಣೆಯು ಈ ಆಯಾಮವನ್ನೂ ಮುಖ್ಯವೆಂದು ಪರಿಗಣಿಸಬೇಕಾಗುತ್ತದೆ.

‘ಚುನಾವಣೆಯಲ್ಲಿ ಇಂತಹ ಅಭ್ಯರ್ಥಿ ಗೆದ್ದ’ ಎಂದು ತೀರ್ಮಾನ ಮಾಡಲು ಮತದಾರರ ಮಾನದಂಡಗಳನ್ನು ಪ್ರಭುತ್ವ ಬಳಸಿಲ್ಲ. ತನ್ನ ಹಿತಾಸಕ್ತಿಯ ಮಾನದಂಡಗಳನ್ನು ಬಳಸಿ, ೯೪ ಜನ ಮತದಾರರಿಂದ ತಿರಸ್ಕೃತಗೊಂಡವನ್ನು ‘ಪ್ರತಿನಿಧಿ’ ಎಂದು ತೀರ್ಮಾನಿಸಿದೆ. ತಮ್ಮದಲ್ಲದ ಈ ತೀರ್ಮಾನವನ್ನು ಪ್ರಜೆಗಳು ಒಪ್ಪಿಕೊಳ್ಳುವಂತೆ ಮಾಡಿದೆ. ಅದು ಚರ್ಚೆಯಿಲ್ಲದ ಮತ್ತು ವಿಮರ್ಶೆಯಿಲ್ಲದ ಕೇವಲ ಒಂದು ನಂಬಿಕೆಯಾಗಿ ಮಾರ್ಪಟ್ಟಿದೆ. ಸಾಹಿತ್ಯಕ, ವೈಚಾರಿಕ ಮತ್ತು ಸಂಶೋಧನೆಯ ವಲಯಗಳಲ್ಲಿಯೂ ಈ ಬಗೆಯ ಚರ್ಚೆಯಿಲ್ಲದ ಮತ್ತು ವಿಮರ್ಶೆಯಿಲ್ಲದ ನಂಬಿಕೆಗಳು ಯಜಮಾನಿಕೆ ನಡೆಸಿವೆ. ಆ ಯಜಮಾನಿಕೆಯ ನಂಬಿಕೆಗಳನ್ನು, ಆ ನಂಬಿಕೆಗಳ ಹಿಂದಿನ ಧೋರಣೆಗಳ ಮಿತಿಗಳನ್ನು ಮತ್ತು ಅಪಾಯಗಳನ್ನು ಸಂಶೋಧನೆಗಳು ಅರಿಯಬೇಕಾಗಿದೆ. ಆ ಮಿತಿಗಳನ್ನು ಅರಿಯುವುದು ಎಂದರೆ ಹೊಸ ದೃಷ್ಟಿಕೋನಗಳ ನಿರ್ಮಾಣ ಮತ್ತು ಪ್ರಯೋಗ ಎಂದೇ ಅರ್ಥ. ಇದನ್ನು ‘ಸಮಸ್ಯೀಕರಣ’ದ ಸಾಮಾನ್ಯ ಸ್ವರೂಪ ಎಂದು ಕರೆಯಬಹುದು.

ಸಂಶೋಧನೆಯಲ್ಲಿ ‘ಭಾವನಾತ್ಮಕವಾದ ಅತಿ ಹೆಚ್ಚು ಉತ್ಸಾಹ’ ಹೊಂದಿರುವ ಕೆಲವರು ಸಂಶೋಧಕರು, ‘ಸಮಕಾಲೀನ ಸಮಸ್ಯೆಗಳ ಬಗ್ಗೆ ಸಂಶೋಧನೆ ಮಾಡಬೇಕೆಂದೂ, ಸಂಶೋಧನೆಯ ಮೂಲಕ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೆಂದೂ’ ಅಭಿಪ್ರಾಯ ಪಡುತ್ತಾರೆ. ಹಾಗಾಗಿ ತಾವು ಸಂಶೋಧನೆಗೆ ಆಯ್ಕೆಮಾಡಿಕೊಳ್ಳುವ ಸಂಶೋಧನ ಶೀರ್ಷಿಕೆಗೂ ಸಾಮಾಜಿಕ ಸಮಸ್ಯೆಗಳಿಗೂ ಸಂಬಂಧ ಕಲ್ಪಿಸಲು ಪ್ರಯತ್ನಿಸುತ್ತಾರೆ. ಎಷ್ಟೊ ಸಲ ತಾವು ಸಂಶೋಧನೆಗೆ ಆಯ್ಕೆಮಾಡಿಕೊಂಡಿರುವ ಶೀರ್ಷಿಕೆಗೂ, ಸಾಮಾಜಿಕ ಸಮಸ್ಯೆಗಳಿಗೂ ತಾಳಮೇಳವೇ ಬೀಳುತ್ತಿಲ್ಲವಲ್ಲ ಎಂದು ಪರಿತಪಿಸುತ್ತಾರೆ. ಹಾಗಾಗಿ ಇಂತಹವರಲ್ಲೆ ಕೆಲವರು ಸಾಧ್ಯವಾದಷ್ಟೂ ಸಮಾಜವನ್ನು ಬಾಧಿಸುತ್ತಿರುವ ಸ್ವರೂಪದ ಕೆಲವು ಕೊರತೆಗಳನ್ನಿಲ್ಲ ಪರಿಶೀಲಿಸಬಹುದು. ‘ಸಂಶೋಧನ ವಿಷಯ ಸಮಾಜದ ಜ್ವಲಂತ ಸಮಸ್ಯೆಯಾಗಿರಬೇಕು’ ಎಂಬುದು ಒಂದು. ‘ಅದರಿಂದ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು’ ಎಂಬುದು ಮತ್ತೊಂದು. ಸಂಶೋಧನೆಯಿಂದ ಜ್ವಲಂತ ಸಮಸ್ಯೆಯೊಂದಕ್ಕೆ ಪರಿಹಾರ ಹೇಳಬೇಕು; ಹೇಳಲೇಬೇಕು ಎಂಬುದು ಅಂತವರ ಅಪೇಕ್ಷೆ ಮತ್ತು ಉದ್ದೇಶ.

ಈಗ ಅಂತಹ ಸಂಶೋಧಕರ ಗಮನದಲ್ಲಿರುವ ‘ಜ್ವಲಂತ ಸಮಸ್ಯೆ’ಗಳನ್ನು ಹೆಸರಿಸೋಣ. ಜಾಗತೀಕರಣ, ವಿಶೇಷ ಆರ್ಥಿಕ ವಲಯಗಳು, ಕೋಮುವಾದ, ಭಯೋತ್ಪಾದನೆ, ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ, ಸಾಮಾಜಿಕ ಬಹಿಷ್ಕಾರ, ಮಹಿಳೆಯರ ಮೇಲಿನ ಅತ್ಯಾಚಾರ ಇವೇ ಮುಂತಾದ ಕೆಲವು ‘ಜ್ವಲಂತ ಸಮಸ್ಯೆ’ಗಳು ಸಂಶೋಧಕರ ಗಮನದಲ್ಲಿವೆ. ಇವುಗಳನ್ನು ಸಂಶೋಧನೆಗೆ ಆಯ್ಕೆಮಾಡಿಕೊಂಡರೆ ಅವಕ್ಕೆ ಪ್ರಸ್ತುತತೆ ಬರುತ್ತದೆ ಎಂಬುದು ನಂಬಿಕೆ. ಇವುಗಳನ್ನು ಬಿಟ್ಟು‘ವಡ್ಡಾರಾಧನೆಯಲ್ಲಿ ಭವಾಳಿಗಳು’, ‘ಧರ್ಮಾಮೃತದಲ್ಲಿ ಮಾಲೋಪಮೆಗಳು’, ‘ಕುವೆಂಪುಕೃತಿಗಳಲ್ಲಿ ನಿಸರ್ಗ’, ‘ಕುಸುಮಬಾಲೆಯ ನಿರೂಪಣೆಗಳು’ ಈ ಮುಂತಾದವು ವರ್ತಮಾನಕ್ಕೆ  ಪ್ರಸ್ತುತವಲ್ಲ; ಅವು ಅಪ್ರಸ್ತುತ ಎಂಬುದು ಇಲ್ಲಿಯ ಖಂಡತುಂಡವಾದ ತೀರ್ಮಾನ. ಹಾಗಾಗಿ ಸಂಶೋಧಕರು ಸಾಧ್ಯವಾದಷ್ಟೂ ಸಂಶೋಧನೆಯ ಶೀರ್ಷಿಕೆಯನ್ನು ‘ಜ್ವಲಂತ ಸಮಸ್ಯೆ’ಗಳ ಶೀರ್ಷಿಕೆಯೊಂದಿಗೆ ಜೋಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಫಲವಾಗಿ ‘ಸಾಹಿತ್ಯದಲ್ಲಿ ಕೋಮುವಾದ’, ‘ಸಾಹಿತ್ಯದಲ್ಲಿ ಸಂಘರ್ಷದ ನೆಲೆಗಳು’ ಇತ್ಯಾದಿ ಶೀರ್ಷಿಕೆಗಳು ರೂಪುಗಳ್ಳುತ್ತವೆ. ಸಂಶೋಧನೆಯ ಶೀರ್ಷಿಕೆಯಲ್ಲೆ ‘ವರ್ತಮಾನದ ಜ್ವಲಂತ ಸಮಸ್ಯೆಗಳು’ ಬಂದಿರುವುದರಿಂದ, ಸಮಕಾಲೀನ ಸಮಸ್ಯೆಗಳ ಬಗ್ಗೆ ಸಂಶೋಧನೆ ಮಾಡಬೇಕು ಎಂಬ ಮೊದಲ ಅಪೇಕ್ಷೆ ಈಡೇರಿತು. ಈಗ ಉಳಿದಿರುವುದು ಅದರಿಂದ ಸಮಾಜಕ್ಕೆ ಕೊಡಬೇಕಾಗಿರುವ ಕೊಡುಗೆ ಮಾತ್ರ. ಈ ಎರಡೂ ಅಂಶಗಳನ್ನು ಚರ್ಚಿಸುವ ಮೊದಲು, ಕೆಲವು ಸಂಶೋಧಕರು ಯಾಕೆ ಆ ಬಗೆಯ ಆಯ್ಕೆಗಳಿಗೆ ಆಸಕ್ತಿ ತೋರಿಸುತ್ತಿದ್ದಾರೆ ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ.

‘ಸಾಹಿತ್ಯವನ್ನು ಸಮಕಾಲೀನ ಒತ್ತಡಗಳಲ್ಲಿ ಓದಬೇಕು, ನೋಡಬೇಕು’ ಎಂಬ ಅಭಿಪ್ರಾಯ ಮತ್ತು ಹೇಳಿಕೆಗಳು ಬರುತ್ತಿವೆ. ಸಮಾಜದ ಸುತ್ತಮುತ್ತಲಿನ ಸಕಲ ತಲ್ಲಣಗಳ, ಒತ್ತಡಗಳ, ಸಮಸ್ಯೆಗಳ ಬೆಳಕಿನಲ್ಲಿ ಸಾಹಿತ್ಯವನ್ನು ಓದಬೇಕು. ಇದರಿಂದ ಆ ಸಾಹಿತ್ಯ ವರ್ತಮಾನಕ್ಕೆ ಸ್ಪಂದಿಸುತ್ತದೊ ಇಲ್ಲವೊ ಎಂಬುದು ತಿಳಿಯುತ್ತದೆ. ಇಲ್ಲದಿದ್ದರೆ ‘ಶಾಂತಿಪುರಾಣ: ಒಂದು ಅಧ್ಯಯನ’, ‘ಡಿ.ಎಸ್. ಕರ್ಕಿ: ಬದುಕು ಬರಹ’ ಮುಂತಾದುವು ವರ್ತಮಾನದ ಯಾವ ಸಮಸ್ಯೆಗಳಿಗೂ ಸ್ಪಂದಿಸುವುದಿಲ್ಲ. ಹಾಗಾಗಿ ಅಂತಹ ಸಂಶೋಧನೆಗಳ ಪ್ರಯೋಜನವಾದರೂ ಏನು? ಎಂಬುದು ಇಲ್ಲಿಯ ಪ್ರಶ್ನೆ. ಹಾಗಾಗಿ ಸಾಹಿತ್ಯ ಯಾವುದೇ ಕಾಲದ್ದಿರಲಿ, ಅದನ್ನು ವಿಮರ್ಶೆ ಮಾಡುವಾಗ ಸಮಕಾಲೀನ ಒತ್ತಡದಲ್ಲಿ ಅಧ್ಯಯನ ಮಾಡುವಂತೆ, ಅದರ ಶೀರ್ಷಿಕೆಯನ್ನು ರೂಪಿಸಿಕೊಳ್ಳಬೇಕು ಎಂಬುದು ಇಲ್ಲಿಯ ತರ್ಕ. ‘ವಡ್ಡಾರಾಧನೆಯಲ್ಲಿ ಭವಾವಳಿಗಳು’ ಎಂಬ ವಿಷಯದ ಬದಲು, ‘ವಡ್ಡಾರಾಧನೆಯಲ್ಲಿ ಮಹಿಳಾ ಪ್ರಶ್ನೆಗಳು’, ‘ವಡ್ಡಾರಾಧನೆಯಲ್ಲಿ ಜಾತಿಯ ಪ್ರಶ್ನೆಗಳು’, ‘ವಡ್ಡಾರಾಧನೆಯಲ್ಲಿ ಮತೀಯ ಸಂಘರ್ಷ’, ‘ದಲಿತ ಸಾಹಿತ್ಯದಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆ’, ‘ಬಂಡಾಯ ಸಾಹಿತ್ಯದಲ್ಲಿ ಜಾತಿ ವಿರೋಧಿ ನೆಲೆಗಳು’ ‘ಬಂಡಾಯ ಸಾಹಿತ್ಯದಲ್ಲಿ ವರ್ಗ ಸಂಘರ್ಷ’ ಇವೇ ಮುಂತಾದ ಶೀರ್ಷಿಕೆಗಳಲ್ಲಿ ವರ್ತಮಾನದ ಪ್ರಸ್ತುತತೆ ಇದೆ ಎಂದು ಭಾವಿಸಲಾಗಿದೆ. ನಾವಿಲ್ಲ ಚರ್ಚೆ ಮಾಡಬೇಕಾದುದು, ‘ವರ್ತಮಾನದ ಒತ್ತಡಗಳ/ಸಮಸ್ಯೆಗಳ ನೆಲೆಯಲ್ಲಿ ಓದುವುದು’ ಎಂದರೇನು? ಎಂಬುದು. ಸ್ಥೂಲಾರ್ಥದಲ್ಲಿ ಓದುವುದು ಎಂದರೆ ಗ್ರಹಿಸುವುದು, ಅರ್ಥೈಸುವುದು, ನಿರೂಪಿಸುವುದು ಮತ್ತು ಪ್ರತಿಕ್ರಿಯಿಸುವುದು ಎಂಬುದೇ ವಿವರಣೆ. ಇಲ್ಲಿ ಓದು ಎಂಬುದನ್ನು ಕೇವಲ ಅಕ್ಷರಗಳ ಓದು ಎಂದು ಮಾತ್ರ ತಿಳಿಯಬೇಕಿಲ್ಲ. ಶಾಬ್ದಿಕ ಮತ್ತು ಅಶಾಬ್ದಿಕ ನೆಲೆಗಳ ಪ್ರತಿಯೊಂದರ ನೋಟ ಮತ್ತು ಅದಕ್ಕೆ ಪ್ರತಿಕ್ರಿಯಿಸುವ ಕ್ರಮಗಳು ಓದು ಎನಿಸಿಕೊಳ್ಳುತ್ತವೆ. ಈ ಹಿನ್ನಲೆಯಲ್ಲಿ ಯಾವುದೇ ವಸ್ತುವಿಷಯವನ್ನು ನಮ್ಮ ಧೋರಣೆಗಳ ಹಿನ್ನೆಲೆಯಲ್ಲಿ ಗ್ರಹಿಸುತ್ತೇವೆ ಮತ್ತು ಅದಕ್ಕೆ ಪ್ರತಿಕ್ರಿಯಿಸುತ್ತೇವೆ. ಯಾವುದೇ ಕಾಲದ ವಸ್ತುವಿಷಯವನ್ನು ನಮ್ಮ ಕಾಲದ ಒತ್ತಡದಲ್ಲಿ ಗ್ರಹಿಸುತ್ತೇವೆ ಮತ್ತು ಅದಕ್ಕೆ ಪ್ರತಿಕ್ರಿಯಿಸುತ್ತೇವೆ. ಇದು ಮನುಷ್ಯ ಜೀವಿಗಳ ಸಾಮಾನ್ಯ ಸ್ವಭಾವ. ಹಾಗಾಗಿ ‘ನಮ್ಮ ಕಾಲದ ಒತ್ತಡದಲ್ಲಿ ಓದಬೇಕು’ ಎಂಬ ಅಭಿಪ್ರಾಯವೇ ಎಲ್ಲೋ ಒಂದು ಕಡೆ ತೆಳುವಾದುದು ಎನಿಸುತ್ತದೆ. ‘ಪಂಪನ ಕೃತಿಗಳಲ್ಲಿ ‘ಧಾರ್ಮಿಕ ಸಂಘರ್ಷ’ ಎಂಬ ವಿಷಯವನ್ನು ಚರ್ಚಿಸಬೇಕು ಎನ್ನುವಾಗ, ಪಂಪನ ಕಾಲದಲ್ಲಿ ಇತ್ತು ಎಂದು ತಿಳಿಯಲಾಗಿರುವ ಧಾರ್ಮಿಕ ಸಂಘರ್ಷವನ್ನು ಪುನಾರಚನೆ ಮಾಡಬಹುದು. ಇಲ್ಲವೆ ಅದನ್ನು ವರ್ತಮಾನದ ನೆಲೆಗೆ ತಂದು ಚರ್ಚೆ ಮಾಡಲೂಬಹುದು. ಈ ಎರಡೂ ಧೋರಣೆಗಳ ಅಧ್ಯಯನಗಳನ್ನು ವರ್ತಮಾನವೇ ಪ್ರಭಾವಿಸಿದೆ ಮತ್ತು ಒತ್ತಾಯಿಸಿದೆ ಎಂಬುದನ್ನು ಒತ್ತಿ ಹೇಳಬೇಕಾಗಿದೆ. ಕೆಲವರಿಗೆ ಗತಿಸಿ ಹೋಗಿದೆ ಎಂಬುದನ್ನು ಪುನಾರಚನೆ ಮಾಡುವುದೇ ವರ್ತಮಾನದ ಒತ್ತಡ. ಮತ್ತೆ ಕೆಲವರಿಗೆ ಪುನಾರಚನೆ ಮಾಡುವುದನ್ನು ವರ್ತಮಾನವು ವಿರೋಧಿಸುತ್ತಿದೆ ಎಂಬುದೇ ವರ್ತಮಾನದ ಒತ್ತಡ. ಹಾಗಿದ್ದರೆ ಇದು ‘ಗತಿಸಿ ಹೋದ ಸಂಗತಿ’ಗೆ ಸಂಬಂಧಿಸಿದ ಸಂಗತಿ ಎಂಬುದಾಗಲಿ; ವಸ್ತುವಿಷಯಗಳನ್ನು ವರ್ತಮಾನದ ಒತ್ತಡಗಳಲ್ಲಿ ನೋಡಬೇಕು ಎಂಬುದಾಗಲಿ ಅಲ್ಲ. ಬದಲಾಗಿ ವರ್ತಮಾನವನ್ನು ಹೇಗೆ ಪರಿಭಾವಿಸುತ್ತೇವೆ ಎನ್ನುವುದಕ್ಕೆ ಸಂಬಂಧಿಸಿದುದು. ಭವಿಷ್ಯಕ್ಕೆ ಬೇಕಾದ ಉತ್ತರಗಳು/ಪರಿಹಾರಗಳು ಗತಿಸಿ ಹೋದ ಚರಿತ್ರೆಯಲ್ಲಿ ಇವೆ. ಅವನ್ನು ಗುರುತಿಸಿ ಮತ್ತೆ ಜಾರಿಗೆ ತರಬೇಕು/ಪಾಲಿಸಬೇಕು ಎಂಬುದು ಒಂದು ಗುಂಪಿನ ಧೋರಣೆ. ಭವಿಷ್ಯಕ್ಕೆ ಬೇಕಾದ ಉತ್ತರಗಳು/ಪರಿಹಾರಗಳು ಚರಿತ್ರೆಯಲ್ಲಿ ಇಲ್ಲ; ಬದಲಾಗಿ ಆಗುತ್ತಿರುವ ವರ್ತಮಾನ ಅಥವಾ ಬದಲಾಗುತ್ತಿರುವ ವರ್ತಮಾನದ ಸ್ವರೂಪದಲ್ಲೆ ಭವಿಷ್ಯಕ್ಕೆ ಬೇಕಾದ ಉತ್ತರಗಳು/ಪರಿಹಾರಗಳು ಇವೆ ಎಂಬುದನ್ನು ಇನ್ನೊಂದು ಗುಂಪಿನ ಧೋರಣೆ. ಮೊದಲ ಗುಂಪಿನವರನ್ನು ಗುರಿ ಮಾಡಿಕೊಂಡಿರುವ ಕೆಲವರು ‘ವರ್ತಮಾನದ ಒತ್ತಡಗಳಲ್ಲಿ ಓದಬೇಕು’ ಎನ್ನುತ್ತಿದ್ದಾರೆ. ವರ್ತಮಾನದ ಒತ್ತಡಗಳನ್ನು ಯಾವ ಶಕ್ತಿಗಳು, ಯಾವ ಹಿತಾಸಕ್ತಿಗಳು ಪ್ರಭಾವಿಸುತ್ತಿವೆ ಮತ್ತು ರೂಪಿಸುತ್ತಿವೆ ಎಂಬ ಚರ್ಚೆಯನ್ನೂ ಇಲ್ಲಿ ಮಾಡಬೇಕಾಗುತ್ತದೆ. ಸಾಮ್ರಾಜ್ಯಶಾಹಿ ಶಕ್ತಿಗಳು, ಆಳುವ ವರ್ಗ, ಪ್ರಭುತ್ವ ಇವು ಒತ್ತಾಯಿಸುವ ಮತ್ತು ರೂಪಿಸುವ ವರ್ತಮಾನದ ಒತ್ತಡಗಳು ಒಂದು ಬಗೆಯವು. ಜನತೆ ಮತ್ತು ವಿವಿಧ ಸಮುದಾಯಗಳು ಒತ್ತಾಯಿಸುವ ಮತ್ತು ರೂಪಿಸುವ ವರ್ತಮಾನದ ಒತ್ತಡಗಳು ಬೇರೊಂದು ಬಗೆಯವು. ಹಾಗಾಗಿ ‘ವರ್ತಮಾನದ ಒತ್ತಡ’ ಎಂಬುದು ಒಮ್ಮುಖವಾದುದಲ್ಲ; ಏಕಮುಖವಾದುದಲ್ಲ; ಸರಳವಾದುದಲ್ಲ. ಅದು ಸಂಕೀರ್ಣವಾಗಿದೆ; ವಿಭಿನ್ನ ಆಯಾಮಗಳಿಂದ ಕೂಡಿದೆ; ಚಲನಶೀಲವಾಗಿದೆ.