‘ಸಂಶೋಧನೆ: ತಾತ್ವಿಕ ಆಯಾಮಗಳು’ ಎನ್ನುವ ಈ ಬರವಣಿಗೆಯು ಸಾಹಿತ್ಯ ಅಧ್ಯಯನ ವಿಭಾಗದ ನನ್ನ ವೈಯಕ್ತಿಕ ಸಂಶೋಧನ ಯೋಜನೆಯಾಗಿ ರೂಪುಗೊಂಡಿದೆ. ನಮ್ಮ ವಿಶ್ವವಿದ್ಯಾಲಯದ ಅಧ್ಯಯನಾಂಗವು ಪ್ರತಿವರ್ಷ ಸಂಶೋಧಕರಿಗೆ ಸಂಶೋಧನ ಕಮ್ಮಟವನ್ನು ನಡೆಸುತ್ತ ಬಂದಿದೆ. ಈ ಸಂಶೋಧನ ಕಮ್ಮಟದಲ್ಲಿ ಸಂಶೋಧನೆಯ ಸಮಸ್ಯೆಗಳು ಮತ್ತು ಸಂಶೋಧನೆಯ ದಾರಿಗಳನ್ನು ಕುರಿತು ಚರ್ಚೆ ನಡೆಸಲಾಗುತ್ತದೆ. ಈಚಿನ ಕೆಲವು ವರ್ಷಗಳಿಂದ ಅಧ್ಯಯನಾಂಗವು ಸಂಶೋಧನ ಕಮ್ಮಟದ ಕೆಲವು ದಿನಗಳನ್ನು ಆಯಾ ವಿಭಾಗಗಳು ನಡೆಸುವಂತೆ ವಿಕೇಂದ್ರೀಕರಿಸಿತು. ಆಗ ನಮ್ಮ ವಿಭಾಗದವರು ಕಮ್ಮಟವನ್ನು ಸಾಮೂಹಿಕ ಚರ್ಚೆಯ ರೂಪದಲ್ಲಿ ನಡೆಸಲು ನಿರ್ಧರಿಸಿದೆವು. ನಮ್ಮ ವಿಭಾಗದ ಎಲ್ಲಾ ಅಧ್ಯಾಪಕರು ಅದರಲ್ಲಿ ಭಾಗವಹಿಸಿ, ಒಂದೊಂದು ಪ್ರಬಂಧ ಮಂಡಿಸುತ್ತಿದ್ದೇವು. ಪ್ರಶ್ನೋತ್ತರ ವೇಳೆಯಲ್ಲಿ ಪ್ರಬಂಧ ಮಂಡಿಸಿದವು ಮಾತ್ರ ಉತ್ತರ ಹೇಳಬೇಕೆಂದಿರಲಿಲ್ಲ. ಅಧ್ಯಾಪಕರೂ ಸೇರಿದಂತೆ ಸಂಶೋಧಕರೂ ಕೂಡ ಅದಕ್ಕೆ ಪ್ರತಿಕ್ರಿಯಿಸುತ್ತಿದ್ದರು. ಅಧ್ಯಯನಾಂಗವು ಆಡಳಿತಾತ್ಮಕವಾಗಿ ಮಾಡಿದ ಕಮ್ಮಟದ ವಿಕೇಂದ್ರೀಕರಣವನ್ನು ನಮ್ಮ ವಿಭಾಗದವರು ಶೈಕ್ಷಣಿಕವಾಗಿ ವಿಕೇಂದ್ರೀಕರಣ ಮಾಡಿದೆವು. ಅಷ್ಟೂ ದಿನಗಳ ಕಮ್ಮಟದಲ್ಲಿ ಸಂಶೋಧಕರೊಂದಿಗೆ ಪ್ರತಿದಿನ ಸರಾಸರಿ ಐದಾರು ಗಂಟೆ ಕಳೆಯುತ್ತಿದ್ದೆವು. ಬೆಳಿಗ್ಗೆಯಿಂದ ಸಂಜೆಯವರೆಗೆ ವಿಭಾಗದ ಅಧ್ಯಾಪಕರೆಲ್ಲ ಕಮ್ಮಟದಲ್ಲಿ ಭಾಗವಹಿಸುತ್ತಿದ್ದುದು ಕೆಲವು ಸಂಶೋಧಕರಿಗೆ ಕುತೂಹಲವೂ; ಆಶ್ಚರ್ಯವೂ ಆಗುತ್ತಿತ್ತು. ಆ ಕಮ್ಮಟಗಳಿಂದ ಸಂಶೋಧಕರಿಗೆ ಆದ ಪ್ರಯೋಜನ ಎಷ್ಟು ಎಂಬುದು ಒಂದು ಆಯಾಮ. ಆದರೆ ನಮಗೆ ಅದರಿಂದ ಶೈಕ್ಷಣಿಕವಾಗಿ ಪ್ರಯೋಜವಾಯಿತು. ನಮ್ಮ ವಿಶ್ವವಿದ್ಯಾಲಯದ ಮಹತ್ವದ ಶೈಕ್ಷಣಿಕ ಕಾರ್ಯ ಕ್ರಮವಾಗಿದ್ದ ‘ದಿನಮಾತು’ ಕಾರ್ಯಕ್ರಮದ ಅಳಿದುಳಿದ ಉತ್ಸಾಹಗಳು ಕೆಲವೊಮ್ಮೆ ತಮ್ಮೆಲ್ಲ ಸ್ಪೂರ್ತಿ ಮತ್ತು ಶಕ್ತಿಯನ್ನು ಒಟ್ಟುಗೂಡಿಸಿಕೊಂಡು ನಮಗೇ ಗೊತ್ತಿಲ್ಲದಂತೆ ನಮ್ಮೊಳಗೆ ಮೈದುಂಬುತ್ತಿದ್ದವು. ಆ ‘ದಿನಮಾತಿ’ನಲ್ಲಿ ಹೇಗೋ, ಹಾಗೆಯೇ ಈ ಕಮ್ಮಟದಲ್ಲೂ ನಾವು ಕಲಿಯುತ್ತಿದ್ದೇವೆ. ಕಮ್ಮಟವನ್ನು ವಿಕೇಂದ್ರೀಕರಿಸಿದ ಅಧ್ಯಯನಾಂಗಕ್ಕೆ ಈ ಮೂಲಕವಾದರೂ ಧನ್ಯವಾದ ಹೇಳಲೇಬೇಕು.

ಈ ಕಮ್ಮಟದಲ್ಲಿ ನಾನು ಒಂದೆರಡು ಸಲ ಸಾಹಿತ್ಯ ಸಂಶೋಧನೆ ಕುರಿತು ಬಂದಿರುವ ಪುಸ್ತಕಗಳನ್ನು ಕುರಿತು ಮಾತಾಡಿದ್ದೆ. ಅವುಗಳ ನಿರೂಪಣೆ ಮತ್ತು ನಿಲುವುಗಳ ಬಗ್ಗೆ ಆ ಕಮ್ಮಟಗಳಲ್ಲಿ ಸಹಮತಗಳಿಗಿಂತ ಭಿನ್ನಮತಗಳೇ ವ್ಯಕ್ತವಾಗಿದ್ದವು. ಇವು ನನ್ನೊಬ್ಬನವೇ ಆಗಿರದೆ ಅವು ಸಾಮೂಹಿಕ ಚರ್ಚೆಯ ಫಲಿತಗಳೂ ಆಗಿದ್ದವು. ಈ ಕಾರಣವೂ ಸೇರಿದಂತೆ ನಾನೂ ಇಂತಹ ಒಂದು ಬರವಣಿಗೆ ಮಾಡಬಹುದಲ್ಲ ಎನಿಸಿತು. ಈ ನಡುವೆ ನಾಡಿನ ಕೆಲವು ಸಂಸ್ಥೆಗಳು ನಡೆಸಿದ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸುವಾಗ, ಉಳಿದಂತೆ ನನ್ನ ಆಲೋಚನೆ ಮತ್ತು ಬರವಣೆಗೆಗಳಲ್ಲಿ ಇದೇ ಆಯಾಮದಲ್ಲಿ ಚಿಂತನೆ ನಡೆಸಿದ್ದೇನೆ.

ವರ್ತಮಾನದ ಸಾಮಾಜಿಕ, ರಾಜಕೀಯ ವಲಯದಲ್ಲಿ ಕೆಲವು ಬದಲಾವಣೆಗಳಾಗಿವೆ; ಆಗುತ್ತಿವೆ. ಬಂಡವಾಳಶಾಹಿ ಮಾರುಕಟ್ಟೆ, ಮಾಹಿತಿ ತಂತ್ರಜ್ಞಾನ ಮತ್ತು ಸಂಪರ್ಕ ವಲಯದಲ್ಲಿ ಬದಲಾವಣೆಗಳು ತೀವ್ರಗತಿಯಲ್ಲಿ ಸಾಗಿವೆ. ಇದರಿಂದ ಒಂದು ಕಡೆ ಏಕಸ್ವಾಮ್ಯ ಬಂಡವಾಳ ಬೆಳೆಯುತ್ತಿದ್ದರೆ ಮತ್ತೊಂದು ಕಡೆ ಬಹುದೊಡ್ಡ ಗ್ರಾಹಕರ ಸಮೂಹ ಬೆಳೆದಿದೆ. ಸಾಹಿತ್ಯ ರಚನೆ, ಅದರ ಓದು ಕೆಲವು ಆಯಾಮಗಳಲ್ಲಿ ಬದಲಾಗುತ್ತ ಸಾಗಿವೆ. ಹಾಗೆಯೇ ಸಾಹಿತ್ಯವನ್ನು ‘ಸಾಂಪ್ರದಾಯಿಕವಾಗಿ ಓದುವ’ ಕ್ರಮಗಳೂ ಜಾರಿಯಲ್ಲಿವೆ. ಸಾಹಿತ್ಯ ರಚನೆ ಮತ್ತು ಅದರ ಓದು ಹೊಸ ಸವಾಲುಗಳನ್ನು ಎದುರಿಸುತ್ತಲೆ ಸಾಗಿವೆ. ಸಮಕಾಲೀನ ಸಮಸ್ಯೆಗಳಿಗೆ ಮತ್ತು ದಮನಿಸಲ್ಪಟ್ಟ ವಿಷಯಗಳಿಗೆ, ಸಮುದಾಯಗಳಿಗೆ ಸಾಹಿತ್ಯ ಅಭಿವ್ಯಕ್ತಿ ನೀಡಬೇಕು ಎಂಬುದು ಅವುಗಳಲ್ಲಿ ಒಂದು. ಅದನ್ನು ಮುಖ್ಯವೆಂದೂ ಪರಿಗಣಿಸಲಾಗಿದೆ. ಆದರೆ ಈ ಕುರಿತ ಚರ್ಚೆಯ ಸ್ವರೂಪ ಇನ್ನೂ ತಾತ್ವಿಕವಾಗಿ ಖಚಿತವಾಗಿಲ್ಲ. ಹಾಗಾಗಿ ಅನೇಕ ಸಲ ಅದೊಂದು ಕೇವಲ ಅಭಿಪ್ರಾಯದ ಇಲ್ಲವೆ ಹೇಳಿಕೆಯ ಮಟ್ಟದಲ್ಲೆ ಸಾಗಿದೆ. ಸಾಹಿತ್ಯ ರಚನೆಗೆ ಯಾವುದು ಮೂಲ ಸಾಮಗ್ರಿಯಾಗಬೇಕು ಎಂಬ ಚರ್ಚೆ ಒಂದು ಕಡೆ ನಡೆದರೆ; ಸಾಹಿತ್ಯ ಓದು ಮತ್ತು ವಿಮರ್ಶೆಗೆ ಪರಿಕರಗಳು ಮತ್ತು ಮಾನದಂಡಗಳು ಯಾವುದಾಗಿರಬೇಕು ಎಂಬ ಚರ್ಚೆಗಳೂ; ಅವನ್ನು ನಿರೂಪಿಸುವ ಪ್ರಯತ್ನಗಳೂ ನಡೆದಿವೆ.

ಸಾಹಿತ್ಯ ಸಂಶೋಧನೆಯನ್ನು ಹೀಗೂ ವಿವರಿಸಬಹುದು. ಸಾಹಿತ್ಯವನ್ನು ಅರ್ಥೈಸುವುದು, ನಿರೂಪಿಸುವುದು, ವ್ಯಾಖ್ಯಾನಿಸುವುದು ಮತ್ತು ಮೌಲ್ಯಮಾಪನ ಮಾಡುವುದು. ಇವನ್ನು ಹೇಗೆ ಮತ್ತು ಯಾಕೆ ಮಾಡಬೇಕು ಎಂಬ ಒಂದೆ ಪ್ರಶ್ನೆಯ ಎರಡು ಆಯಾಮಗಳು ಇದರಲ್ಲಿ ಕ್ರಿಯಶೀಲವಾಗುತ್ತವೆ. ಈ ಪ್ರಶ್ನೆಯ ರೂಪ ಎಲ್ಲರಿಗೂ ಒಂದೇ ಆಗಿದ್ದರೂ ಅದಕ್ಕೆ ಕೊಟ್ಟುಕೊಳ್ಳುವ ಉತ್ತರಗಳು ಮತ್ತು ಕಂಡುಕೊಳ್ಳುವ ವಿವರಣೆಗಳು ಬೇರೆಬೇರೆಯಾಗುತ್ತಾ ಹೋಗುತ್ತವೆ. ಇದು ಒಂದು ಕಡೆ ಸಾಹಿತ್ಯಕ್ಕಿರುವ ಶಕ್ತಿಯನ್ನೂ ಮತ್ತೊಂದು ಕಡೆ ಓದುಗರಿಗಿರುವ ಗ್ರಹಿಕೆಯ ಸಾಮರ್ಥ್ಯವನ್ನೂ ಅವಲಂಬಿಸಿದೆ. ಸಾಹಿತ್ಯ ಓದು ಒಂದು ಖಾಸಗಿ ಬೌದ್ಧಿಕ ಚಟುವಟಿಕೆ ಎನ್ನುವುದರಿಂದ ಮೊದಲುಗೊಂಡು, ಅದನ್ನು ಜಾಗತಿಕ ರಾಜಕೀಯ ವಿದ್ಯಮಾನಗಳು ನಮ್ಮ ಅರಿವು ಮತ್ತು ಆಯ್ಕೆಯನ್ನು ಮೀರಿ ಪ್ರಭಾವಿಸುತ್ತಿವೆ ಎಂಬ ವಾದಗಳೂ ನಡೆದಿವೆ. ಸಾಹಿತ್ಯ ಓದಿನ ಸಂದರ್ಭ, ಉದ್ದೇಶ, ಧೋರಣೆ ಇವುಗಳಿಗೆ ಅನುಗುಣವಾಗಿ ಅದು ಬೇರೆ ಬೇರೆಯಾಗಿ ಕಾಣುತ್ತ ಸಾಗುತ್ತದೆ. ಇದರಲ್ಲಿ ಸಾಹಿತ್ಯ ಕೃತಿಗಳ ಪಾಲಷ್ಟಿದ್ದರೆ; ಓದುಗರ ಪಾಲು ಮತ್ತಷ್ಟಿರುತ್ತದೆ. ಅದರಿಂದ ಭಿನ್ನ ಓದುಗಳು ನಿರ್ಮಾಣವಾಗುತ್ತಾ ಹೋಗುತ್ತವೆ. ಈ ಭಿನ್ನ ಓದುಗಳು ಸಾಹಿತ್ಯ ಪಠ್ಯವನ್ನು ವಿಭಿನ್ನ ಆಯಾಮಗಳಿಗೆ ವಿಸ್ತರಿಸುತ್ತವೆ.

ಸಾಹಿತ್ಯ ಸಂಶೋಧನೆಯಲ್ಲಿ ಆಯ್ಕೆ ಮಾಡಿಕೊಂಡ ಸಾಹಿತ್ಯವನ್ನು ಮತ್ತು ಅದಕ್ಕೆ ಪೂರಕವಾದುದನ್ನು ಓದುವ, ಆಲೋಚಿಸುವ, ಮಾತಾಡುವ ಮತ್ತು ಬರೆಯುವ ಕೆಲಸ ನಡೆಯುತ್ತದೆ. ಸಾಹಿತ್ಯದ ಓದು, ಆಲೋಚನೆ ಮತ್ತು ಬರವಣಿಗೆಯನ್ನು ಎಲ್ಲರೂ ಒಂದೇ ರೀತಿಯಲ್ಲಿ ಮಾಡುವುದಿಲ್ಲ. ಸಾಹಿತ್ಯ ಎಂದರೆ ಯಾವುದು ಮತ್ತು ಯಾವುದು ಅಲ್ಲ ಎಂಬುದು ಇದಕ್ಕೆ ಒಂದು ಕಾರಣವಾದರೆ, ಯಾರಿಗಾಗಿ ಮತ್ತು ಯಾತಕ್ಕಾಗಿ ಬರೆಯುತ್ತೇವೆ ಎಂಬುದು ಮತ್ತೊಂದು ಕಾರಣ. ಸಾಹಿತ್ಯದ ವಸ್ತು, ಆಶಯ ಮತ್ತು ಅಭಿವ್ಯಕ್ತಿಗಳು ಬದಲಾದಂತೆ ಅವುಗಳ ಓದು ಮತ್ತು ಆಲೋಚನೆಗಳೂ ಬದಲಾಗುತ್ತಿವೆ. ಸಾಹಿತ್ಯವನ್ನು ಓದುವ ಧೋರಣೆಗಳು ಬದಲಾದಂತೆ, ಸಾಹಿತ್ಯದ ವಸ್ತು, ಆಶಯ ಮತ್ತು ಅಭಿವ್ಯಕ್ತಿಗಳು ಬೇರೆಬೇರೆಯಾಗಿ ರೂಪುಗೊಳ್ಳುತ್ತಾ ಹೋಗುತ್ತವೆ. ಸಾಹಿತ್ಯವೂ ಕೂಡ ಯಾವುದೋ ಒಂದೇ ಉದ್ದೇಶಕ್ಕೆ ನಿರ್ಮಾಣ ಆಗುತ್ತಿಲ್ಲ. ಇದಕ್ಕೆ ಬರಹಗಾರರ ವೈಯಕ್ತಿಕ ಹಿತಾಸಕ್ತಿ ಒಂದು ಕಡೆ ಒತ್ತಾಸೆಯಾಗಿದ್ದರೆ; ಮತ್ತೊಂದು ಕಡೆ ಅದರಾಚೆಗಿನ ವಿವಿಧ ಸಾಮಾಜಿಕ ಒತ್ತಾಸೆಗಳೂ ಕಾರಣವಾಗಿವೆ. ಸಾಹಿತ್ಯ ರಚನೆಯ ಸಂದರ್ಭದಲ್ಲಿ ಕೃತಿಕಾರರಿಗೆ ಮತ್ತು ಕೃತಿಗಳಿಗೆ ಒಂದು ಉದ್ದೇಶ ಇರುತ್ತದೆ ಎಂಬ ನಿಲುವು ಇತ್ತೀಚಿನ ಓದಿನಲ್ಲಿ ತೆಳುವಾಗುತ್ತಿದೆ; ಕೆಲವೊಮ್ಮೆ ಅದು ಅಂಚಿನ ಪ್ರಶ್ನೆಯಾಗುತ್ತಿದೆ. ಕೃತಿಕಾರರ ಇಲ್ಲವೆ ಕೃತಿಯ ಉದ್ದೇಶ ಏನಾಗಿತ್ತು ಎಂಬುದಕ್ಕಿಂತಲೂ ಅದನ್ನು ಓದುತ್ತಿರುವ ಮತ್ತು ಓದುತ್ತಿರುವವರ ಉದ್ದೇಶ ಯಾವುದು ಎಂಬುದು ಮುಖ್ಯವಾಗುತ್ತಿದೆ. ಇದು ಸಾಹಿತ್ಯ ಓದಿನ ಸ್ವರೂಪವನ್ನು ವಿಸ್ತರಿಸುತ್ತಿದೆ; ನಿರ್ಧರಿಸುತ್ತಿದೆ. ಓದುಗರ ಉದ್ದೇಶವು ಓದುಗರ ವೈಯಕ್ತಿಕ ನೆಲೆಯಲ್ಲೂ ಅದರಾಚೆಗಿನ ವಿಭಿನ್ನ ಸಾಮಾಜಿಕ ನೆಲೆಗಳಿಂದಲೂ ರೂಪಿತವಾಗುತ್ತಿದೆ. ಇದನ್ನೆಲ್ಲ ಗಮನಿಸಿ ಪರಿಶೀಲಿಸಿದರೆ ಸಾಹಿತ್ಯದ ಓದನ್ನು ಕೇವಲ ‘ಸಾಹಿತ್ಯ ಪಠ್ಯದ ಓದು’ ಎಂದು ಸರಳೀಕರಿಸಿ, ಸೀಮಿತ ಮಾಡಲು ಬರುವುದಿಲ್ಲ. ಸಾಮಾಜಿಕ, ರಾಜಕೀಯ ವಿದ್ಯಮಾನಗಳನ್ನು, ಚರಿತ್ರೆ, ಪರಂಪರೆ, ಸಂಸ್ಕೃತಿ, ಸಾಮಾಜಿಕ ಸಂಬಂಧಗಳು, ಮೌಲ್ಯಗಳು ಮುಂತಾದುವನ್ನು ಅರ್ಥಮಾಡಿಸಿರುವ, ಅದನ್ನು ನಂಬಿಸಿರುವ ಒಂದುಕ್ರಮವಿದೆ. ಆ ವಿಧಾನ ಮತ್ತು ಆ ನಂಬಿಕೆ ಸಾಹಿತ್ಯವನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎಂಬುದನ್ನು ಪ್ರಭಾವಿಸಿದೆ; ರೂಪಿಸಿದೆ, ಅದೇ ಕಾಲಕ್ಕೆ ಅವನ್ನು ನಂಬದ, ಅವಕ್ಕೆ ಭಿನ್ನಮತವನ್ನು ಹೂಡುವ, ಭಿನ್ನ ಧೋರಣೆಗಳಿಂದ ಅರ್ಥೈಸಿಕೊಳ್ಳುವ ಕ್ರಮಗಳೂ ಕ್ರಿಯಾಶೀಲವಾಗಿವೆ. ಅಂದರೆ ಲೋಕ ಗ್ರಹಿಕೆ ಮತ್ತು ಸಾಹಿತ್ಯ ಗ್ರಹಿಕೆ ಒಂದೇ ಧೋರಣೆಯನ್ನು ಅವಲಂಬಿಸಿಲ್ಲ. ಇವು ತರಗತಿಗಳ ಸಾಹಿತ್ಯ ಬೋಧನೆಯಿಂದ ಮೊದಲುಗೊಂಡು, ವಿಮರ್ಶೆ ಸಂಶೋಧನೆಯವರೆಗೂ ವ್ಯಾಪಿಸಿವೆ. ಛಂದಸ್ಸು, ವ್ಯಾಕರಣ, ಕಾವ್ಯಮೀಮಾಂಸೆ ಮುಂತಾದ ಶಾಸ್ತ್ರ ಸಾಹಿತ್ಯವನ್ನು ಹೇಗೆ ಬೋಧಿಸಬೇಕು ಎಂಬ ಪ್ರಶ್ನೆಗಳು ಹೊಸದಾಗಿ ಕಾಡುತ್ತಿವೆ. ಆ ಕುರಿತು ಚರ್ಚೆ, ಸಂವಾದಗಳು ಸಾಗಿವೆ. ಮತ್ತೊಂದು ಕಡೆ, ಶಾಸ್ತ್ರ ಸಾಹಿತ್ಯವನ್ನು ‘ಹೇಗೆ ಬೋಧಿಸಬೇಕು’ ಎಂಬ ಪ್ರಶ್ನೆಯನ್ನು ‘ಯಾಕೆ ಬೋಧಿಸಬೇಕು’ ಎಂದೂ ಬದಲಾಯಿಸಿಕೊಳ್ಳಲಾಗಿದೆ. ಈ ಕುರಿತು ಚರ್ಚೆ, ಸಂವಾದಗಳೂ ಸಾಗಿವೆ.

ಸಂಶೋಧಕರು ಎದುರಿಸುತ್ತಿರುವ ಸಮಸ್ಯೆಗಳು ಹಲವು. ಅವರ ಭೌತಿಕ ಸಮಸ್ಯೆಗಳಿಂದ ಮೊದಲುಗೊಂಡು, ಸಂಶೋಧನೆಯ ಕ್ಷೇತ್ರ, ಸಂಶೋಧನ ವಿಷಯದ ಆಯ್ಕೆ, ಶೀರ್ಷಿಕೆಯನ್ನು ಅಂತಿಮಗೊಳಿಸುವಿಕೆ, ಅಧ್ಯಯನ ಪೂರ್ವ ಸಾರಲೇಖ (ಶಿನಾಪ್ಸಿಸ್), ಅಧ್ಯಯನ ವಿಧಾನ, ಅಧ್ಯಾಯಗಳ ವಿಂಗಡಣೆ, ಗ್ರಂಥ ಋಣ ಕೊಡುವ ವಿಧಾನ, ಉಲ್ಲೇಖ ಮತ್ತು ಕೊನೆ ಟಿಪ್ಪಣಿ ಕೊಡುವ ವಿಧಾನ ಇವೇ ಮುಂತಾದುವುಗಳ ಬಗ್ಗೆ ‘ಸ್ಪಷ್ಟತೆ’ಗಳನ್ನು ಅಪೇಕ್ಷಿಸುತ್ತಿದ್ದಾರೆ. ಅವರು ಬಯಸುತ್ತಿರುವ ‘ಸ್ಪಷ್ಟತೆ’ಗಳನ್ನು ಸಮಸ್ಯೆಗಳು ಎಂದು ಹೆಸರಿಸಬೇಕು. ಈ ಒಟ್ಟೂ ಸಮಸ್ಯೆಗಳನ್ನು ಭೌತಿಕವಾದವು ಮತ್ತು ಬೌದ್ಧಿಕವಾದವು ಎಂದು ಗುರುತಿಸಬಹುದು. ಆದರೆ ಇವುಗಳಲ್ಲಿ ಭೌತಿಕವಾದವು ಯಾವುವು ಮತ್ತು ಬೌದ್ಧಿಕವಾದವು ಯಾವುವು ಎಂಬ ಬಗ್ಗೆಯೂ ವಿಂಗಡಣೆಯ ಸ್ಪಷತೆ ಇಲ್ಲದಂತಾಗಿದೆ. ಅನೇಕ ಸಲ ಸಂಶೋಧಕರು ತಮ್ಮ ಭೌದ್ಧಿಕ ಸಮಸ್ಯೆಗಳೆಂದೂ ಪರಿಗಣಿಸುತ್ತಾರೆ. ಹೌದು; ಈ ಎರಡರ ನಡುವೆ ಕೆಲವು ಸಲ ಆಂತರಿಕ ಸಂಬಂಧ ಕೂಡ ಏರ್ಪಟ್ಟಿದೆ. ಬ್ಲಾಗ್ ಲೀಟರೇಚರ್, ವೆಬ್ ಲಿಟರೇಚರ್, ಇ-ಲಿಟರೇಚರ್ ಮುಂತಾದುವುಗಳಿಗೆ ತೆರೆದುಕೊಳ್ಳಲಾಗದ ಸಂಶೋಧಕರೂ ಇದ್ದಾರೆ. ಆರ್ಥಿಕ ಅಸಮಾನತೆ ಮುಂದುವರಿದಿದೆ. ಇದು ಸಂಶೋಧಕರ ಸಮೂಹದಲ್ಲಿ ವರ್ಗಶ್ರೇಣೀಕರಣವೂ ಮುಂದುವರಿದಿದೆ. ಇದು ಸಂಶೋಧಕರಲ್ಲಿ ಮೇಲರಿಮೆ ಕೀಳರಿಮೆಗಳನ್ನು ನಿರ್ಮಾಣ ಮಾಡಿದೆ. ಕನಿಷ್ಠ ಆರ್ಥಿಕತೆಯುಳ್ಳ ವಿದ್ಯಾರ್ಥಿಗಳು ಸಂಶೋಧನೆಗೆ ಬರಲು ಹಿಂಜರಿಯುವ, ಬಂದರೂ ಅದನ್ನು ಮುಂದುವರಿಸದೆ ಅರ್ಧಕ್ಕೆ ನಿಲ್ಲಿಸುತ್ತಿರುವ ಕ್ರೂರ ಮತ್ತು ವಿಷಾದದ ವಾಸ್ತವ ನಮ್ಮ ಮುಂದಿದೆ. ಈ ದೃಷ್ಟಿಯಿಂದ ಕೆಲವು ಸಂಶೋಧಕರ ಭೌತಿಕ ಸಮಸ್ಯೆಯ ಆಯಾಮವು ಅವರ ಬೌದ್ಧಿಕ ಸಮಸ್ಯೆಯೊಂದಿಗೆ ಥಳುಕು ಹಾಕಿಕೊಂಡಿದೆ.

ಸಂಶೋಧಕರು ತಮ್ಮ ಸಂಶೋಧನೆಯ ಸಮಸ್ಯೆಗಳನ್ನು ಪ್ರಶ್ನೆಯಾಗಿ ಭಾವಿಸುತ್ತಿರುವ ಕ್ರಮ ಮತ್ತು ಸಂಶೋಧನೆಗೆ ಮಾರ್ಗದರ್ಶನ ಮಾಡುತ್ತಿರುವ ಕ್ರಮ ಇವೆರಡೂ ಕೂಡ ತರಗತಿಯ ಕೊಠಡಿಯಲ್ಲಿ ಪರೀಕ್ಷೆಗೆ ಸಿದ್ಧಗೊಳಿಸುವ ಸ್ವರೂಪದಲ್ಲೇ ಇವೆ. ಸಂಶೋಧಕರು ತಮ್ಮ ಸಂಶೋಧನ ಸಮಸ್ಯೆಗಳಿಗೆ ಸಿದ್ಧಮಾದರಿಯ ಉತ್ತರಗಳನ್ನು ನಿರೀಕ್ಷಿಸುತ್ತಿದ್ದಾರೆ; ಅಪೇಕ್ಷಿಸುತ್ತಿದ್ದಾರೆ. ಅವರಿಗೆ ಮಾರ್ಗದರ್ಶನ ಮಾಡುವ ಉಪನ್ಯಾಸ, ಚರ್ಚೆ ಸಂವಾದ ಮತ್ತು ಬರವಣಿಗೆಗಳು ಇದೇ ಮಾದರಿಯನ್ನು ಅನುಸರಿಸುತ್ತಿವೆ. ‘ಸಂಶೋಧನೆ ಮಾಡುವುದು ಹೇಗೆ ಎಂಬುದಕ್ಕೆ ಉತ್ತರ ಸಿಕ್ಕಿಬಿಟ್ಟರೆ ಸಾಕು, ಸಂಶೋಧನೆಯನ್ನು ಮಾಡಿ ಮುಗಿಸಿಬಿಡಬಹುದು’ ಎಂಬುದು ಸಂಶೋಧಕರ ಅಪೇಕ್ಷೆ ಮತ್ತು ನಂಬಿಕೆ. ‘ಸಂಶೋಧಕರಿಗೆ ಸಂಶೋಧನೆಯನ್ನು ಹೀಗೆ ಮಾಡಿ ಎಂದು ಹೇಳಿಬಿಟ್ಟರೆ ಸಾಕು, ಅವರು ಸಂಶೋಧನೆ ಮಾಡಿ ಮುಗಿಸುತ್ತಾರೆ’  ಎಂಬುದು ಮಾರ್ಗದರ್ಶನ ಮಾಡುವವರ ತೀರ್ಮಾನ ಮತ್ತು ನಂಬಿಕೆ. ಈ ಎರಡೂ ಕಡೆಯ ಪೂರ್ವ ಅಪೇಕ್ಷೆ ಮತ್ತು ನಂಬಿಕೆಗಳನ್ನು ಆಧರಿಸಿ ಸಂಶೋಧನ ಚಟುವಟಿಕೆಗಳು ಸಾಗಿವೆ. ಪರಿಣಾಮವಾಗಿ ಸಂಶೋಧನೆಯ ಸಮಸ್ಯೆ ಮತ್ತು ಉತ್ತರಗಳನ್ನು ಸರಳವಾಗಿ, ಯಾಂತ್ರಿಕವಾಗಿ ಗ್ರಹಿಸುವಂತೆ ಮಾಡಿದೆ. ಹೀಗಾಗಿ ಇದು ಸಂಶೋಧನೆಗೆ ಕೆಲವು ಸರಳವಾದ ಸವೆದು ಹಳಸಿದ ದಾರಿಗಳನ್ನೂ ಕೊಟ್ಟಿದೆ. ಅದೇ ಕಾಲಕ್ಕೆ ಅದು ಕೆಲವು ಅಡ್ಡ ಗೋಡೆಗಳನ್ನೂ ನಿರ್ಮಾಣ ಮಾಡಿದೆ. ಸಂಶೋಧನೆಗೆ ಸವೆದ ದಾರಿಯನ್ನು ತೋರಿಸುವ ಮತ್ತು ಅದನ್ನು ಆಯ್ಕೆ ಮಾಡಿಕೊಳ್ಳುವ ಕೆಲಸವೂ ನಡೆದಿದೆ. ಇದು ಸರಳವಾದುದು ಮತ್ತು ಸಾಂಪ್ರದಾಯಿಕವಾದುದು. ಆದರೆ ಅಡ್ಡ ಗೋಡೆಗಳ ಸ್ವರೂಪವನ್ನೂ, ಅದನ್ನು ದಾಟುವ ದಾರಿಗಳನ್ನೂ ಕುರಿತು ಆಲೋಚಿಸಬೇಕಾಗಿದೆ.

ಸಂಶೋಧನ ಸಮಸ್ಯೆಯ ಸ್ವರೂಪ ಯಾವುದು ಎಂಬುದನ್ನು ಬಿಡಿಸಿಕೊಂಡಿರುವ ಕ್ರಮದಲ್ಲೆ ಕೆಲವು ಮುಖ್ಯಕೊರತೆಗಳಿವೆ; ದೋಷಗಳಿವೆ. ಸಂಶೋಧನೆಯ ಸಮಸ್ಯೆಗಳಿಗೆ ಸಿದ್ಧಮಾದರಿಯಲ್ಲಿ ಉತ್ತರ ಕೊಡಬಹುದು ಎಂದು ಮಾರ್ಗದರ್ಶನ ಮಾಡುವವರು; ಸಿದ್ಧಮಾದರಿಯಲ್ಲೆ ಉತ್ತರ ಪಡೆಯಬಹುದು ಎಂದು ಸಂಶೋಧಕರು ಗಟ್ಟಿಯಾಗಿ ನಂಬಿದ್ದಾರೆ. ಈ ನಂಬಿಕೆಯೇ ಸಂಶೋಧನೆಗೆ ಬಹಳ ದೊಡ್ಡ ಅಡ್ಡಿಯಾಗಿದೆ; ತೊಡಕಾಗಿದೆ. ಸಂಶೋಧನೆಗೆ ಈ ಸರಳ ನಂಬಿಕೆ ಹೇಗೆ ಅಡ್ಡಿಯಾಗಿದೆ ಎಂಬುದನ್ನು ಬೇರೆ ವಿಷಯಗಳನ್ನು ಚರ್ಚಿಸುವ ಮೂಲಕ ಅರ್ಥಮಾಡಿಕೊಳ್ಳಬಹುದು. ಸಮಾಜದಲ್ಲಿ ಜಾತಿ ಸಮಸ್ಯೆ ಇದೆ. ಅದಕ್ಕೆ ಪರಿಹಾರ ಏನು? ‘ಅಂತರ್ಜಾತಿ ವಿವಾಹ ಆಗುವುದೇ ಅದಕ್ಕೆ ಪರಿಹಾರ’. ಬಡವರಿಗೆ ಕೆಲವು ಸಮಸ್ಯೆಗಳಿವೆ. ಅದಕ್ಕೆ ಪರಿಹಾರ ಏನು? ‘ಅವರಿಗೆ ಶಿಕ್ಷಣ, ಮನೆ, ಲೈಟು, ಎಮ್ಮೆ, ಹಸು ಕೊಡಿಸಬೇಕು’. ಜಾತಿ ಸಮಸ್ಯೆಗೆ ಅಂತರ್ಜಾತಿ ವಿವಾಹ ಒಂದೇ ಪರಿಹಾರ ಎಂಬ ಉತ್ತರ ಹೇಗೆ ಬಂತು? ಜಾತಿ ಸಮಸ್ಯೆಯನ್ನು ಒಂದೇ ಆಯಾಮದಿಂದ, ಯಾಂತ್ರಿಕವಾಗಿ, ಸರಳವಾಗಿ ಗ್ರಹಿಸಿರುವುದರಿಂದ ಬಂದಿದೆ. ಬಡವರಿಗೆ ಶಿಕ್ಷಣ, ಮನೆ, ಲೈಟು, ಹಸು, ಎಮ್ಮೆ ಕೊಡಿಸಿದರೆ ಅವರ ಸಮಸ್ಯೆಗಳು ಪರಿಹಾರ ಆಗುತ್ತವೆ ಎಂಬ ಉತ್ತರ ಹೇಗೆ ಬಂತು? ಬಡವರಿಗೆ ಶಿಕ್ಷಣ, ಮನೆ, ಲೈಟು, ಹಸು, ಎಮ್ಮೆ ಇಲ್ಲದಿರುವುದೇ ಅವರ ಸಮಸ್ಯೆ ಎಂದು ಗ್ರಹಿಸಿರುವುದರಿಂದ ಆ ಉತ್ತರ ಬಂದಿದೆ. ಜಾತಿ ಸಮಸ್ಯೆಗೆ ಒಂದೇ ಆಯಾಮವಿಲ್ಲ. ಆರ್ಥಿಕ, ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಹೀಗೆ ಹಲವು ಮುಖಗಳಿವೆ. ಜೊತೆಗೆ ಅವು ಸಂಕೀರ್ಣವಾಗಿವೆ; ಬದಲಾಗುತ್ತಿವೆ. ಹಾಗಾಗಿ ಜಾತಿ ಸಮಸ್ಯೆಯ ಹಲವು ಆಯಾಮಗಳನ್ನು ಅವು ಪಡೆಯುತ್ತಿರುವ ಹೊಸ ರೂಪಗಳನ್ನು, ಪ್ರಭುತ್ವ ಇದನ್ನು ಬಳಸಿಕೊಳ್ಳುತ್ತಿರುವ ತಂತ್ರ ಹಾಗೂ ಹುನ್ನಾರಗಳನ್ನು ಗಮನಿಸದೆ, ‘ಕೇವಲ ಸಜಾತಿ ವಿವಹಾ ಒಂದೇ ಜಾತಿ ಸಮಸ್ಯೆಗೆ ಕಾರಣವಾಗಿದೆ’ ಎಂದು ಸರಳೀಕರಿಸಲಾಗಿದೆ. ಹೀಗೆ ಸಮಸ್ಯೆಯ ನಾನಾ ಮಗ್ಗುಲುಗಳನ್ನು ಮುಚ್ಚಿಟ್ಟು, ಅದರ ಒಂದು ಆಯಾಮವನ್ನೇ ಅದರ ಸಮಸ್ಯೆ ಎಂದು ತಪ್ಪಾಗಿ ಗ್ರಹಿಸಿರುವುದರಿಂದ, ಅದಕ್ಕೆ ಒಂದೇ ಸಿದ್ಧಮಾದರಿಯ ಉತ್ತವನ್ನು ಹೇಳಲಾಗಿದೆ. ಸಮಸ್ಯೆಯನ್ನು ವಿವರಿಸಿಕೊಂಡಿರುವ, ಅರ್ಥೈಸಿಕೊಂಡಿರುವ ಕ್ರಮವೇ ಯಾಂತ್ರಿಕವೂ, ಪಾರ್ಶ್ವಿಕವೂ ಮತ್ತು ತಪ್ಪಾದುದೂ ಆಗಿದೆ. ಆದ್ದರಿಂದ ಜಾತಿ ಸಮಸ್ಯೆಗೆ ಅಂತರ್ಜಾತಿ ವಿವಾಹವು ಪರಿಹಾರ ಎಂಬುದೂ ಕೂಡ ಯಾಂತ್ರಿಕವೂ, ಪಾರ್ಶ್ವಿಕವೂ ಮತ್ತು ತಪ್ಪಾದುದೂ ಆಗಿದೆ. ಅದೇ ರೀತಿಯಲ್ಲಿ ಬಡವರ ಸಮಸ್ಯೆಗಳನ್ನು ಶಿಕ್ಷಣ, ಮನೆ, ಲೈಟು, ಎಮ್ಮೆ, ಹಸು ಇಲ್ಲದಿರುವುದು ಎಂದು ಅರ್ಥೈಸಿಕೊಂಡಿರುವ ಕ್ರಮವೇ ಯಾಂತ್ರಿಕವೂ, ಪಾರ್ಶ್ವಿಕವೂ ಮತ್ತು ತಪ್ಪಾದುದೂ ಆಗಿದೆ. ಮೇಲಿನ ಎರಡೂ ವಿಷಯಗಳನ್ನು ಒಟ್ಟುಗೂಡಿಸಿ ಹೇಳುವುದಾದರೆ; ಹೀಗೆ ಯಾಂತ್ರಿಕವಾಗಿರುವ, ಪಾರ್ಶ್ವಿಕವಾಗಿರುವ ಮತ್ತು ತಪ್ಪಾಗಿರುವ ಪರಿಹಾರವನ್ನೆ ಸಮಗ್ರವಾದುದು, ಅಂತಿಮವಾದುದು ಎಂದು ತಿಳಿಯುವುದು, ನಂಬುವುದು ಮತ್ತು ನಂಬಿಸುವುದೂ ಕೂಡ ತಪ್ಪಾಗುತ್ತದೆ. ಸಂಕೀರ್ಣವೂ, ಹಲವು ಆಯಾಮಗಳಿಂದ ಕೂಡಿದವೂ, ಬದಲಾಗುತ್ತಲೆ ಸಾಗಿರುವ ಸಮಸ್ಯೆಗಳನ್ನು ಸರಳೀಕರಿಸಿ ಒಂದು ಅಂಶಕ್ಕೆ ಸೀಮಿತ ಮಾಡುವ ಮತ್ತು ಅದಕ್ಕೆ ಸಿದ್ಧಮಾದರಿಯ ಉತ್ತರ ಕೊಡುವ ಧೋರಣೆ ನಿಸ್ಸಂದೇಹವಾಗಿ ಆಳುವ ವರ್ಗದ್ದು ಹಾಗೂ ಪ್ರಭುತ್ವದ್ದು. ಪ್ರಭುತ್ವದ ಆ ಆಲೋಚನ ವಿಧಾನದ ಪ್ರಭಾವ ಶೈಕ್ಷಣಿಕ ವಲಯದಲ್ಲಿದೆ. ಹಾಗಾಗಿ ಶೈಕ್ಷಣಿಕ ವಲಯದ ಒಂದು ಭಾಗವಾದ ಸಂಶೋಧನ ಕ್ಷೇತ್ರದ ಮೇಲೂ ಅದರ ಪ್ರಭಾವ ಆಗಿದೆ. ಆದ್ದರಿಂದಲೆ ಸಂಶೋಧನೆಯ ಸಮಸ್ಯೆಯನ್ನು ಕೇವಲ ಒಂದಂಶಕ್ಕೆಸೀಮಿತ ಮಾಡುವಂತೆ ಮತ್ತು ಅದಕ್ಕೆ ಸಿದ್ಧಮಾದರಿಯಲ್ಲಿ ಉತ್ತರ ಕೊಡುವಂತೆ ಹಾಗೂ ಅಪೇಕ್ಷಿಸುವಂತೆ ಮಾಡಿದೆ. ಪ್ರಭುತ್ವದ ಇಂತಹ ಆಲೋಚನ ಕ್ರಮಗಳು ಹೊಸದಾರಿಗಳನ್ನು ಕಂಡುಕೊಳ್ಳದಂತೆ ಮಾಡಿವೆ. ತನ್ನ ಆಲೋಚನೆಗಳನ್ನೆ ಬೇರೆಯವರು ತಮ್ಮ ಆಲೋಚನೆಗಳೆಂದು ನಂಬುವಂತೆ ಮಾಡಿದೆ. ಈ ಅಂಶದ ಪ್ರಸ್ತಾಪ ಈ ಬರವಣಿಗೆಯ ಉದ್ದಕ್ಕೂ ಅಲ್ಲಲ್ಲಿ ಕಾಣುತ್ತದೆ.

ಸಂಶೋಧನ ವಿಷಯವೊಂದರ ಚರ್ಚೆಯ ಮೂಲಕ ಮೇಲಿನ ಸಮಸ್ಯೆಯನ್ನು ವಿವರಿಸಿಕೊಳ್ಳೋಣ. ಇತ್ತೀಚಿಗೆ ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಒಟ್ಟಿಗೆ ಇಟ್ಟು ನೋಡುವ ಪ್ರವೃತ್ತಿ ಬೆಳದಿದೆ. ಉದಾಹರಣೆಗೆ ಹಳಗನ್ನಡ ಸಾಹಿತ್ಯ ಮತ್ತು ಸಂಸ್ಕೃತಿ, ಮಹಿಳಾ ಸಾಹಿತ್ಯ ಮತ್ತು ಸಂಸ್ಕೃತಿ, ದಲಿತ ಸಾಹಿತ್ಯ ಮತ್ತು ಸಂಸ್ಕೃತಿ, ಮಹಿಳಾ ಸಾಹಿತ್ಯ: ಸಾಂಸ್ಕೃತಿಕ ಅಧ್ಯಯನ, ಬಂಡಾಯ ಸಾಹಿತ್ಯ: ಸಾಂಸ್ಕೃತಿಕ ಅಧ್ಯಯನ ಹೀಗೆ ವಿಷಯಗಳನ್ನು ಕಲ್ಪಿಸಿಕೊಳ್ಳಬಹುದು. ಈ ಶೀರ್ಷಿಕೆಗಳೇ ಅಲ್ಪಸ್ವಲ್ಪ ಬದಲಾಗುತ್ತವೆ. ಇಂತಹ ವಿಷಯಗಳ ಸಂಶೋಧನೆಯಲ್ಲಿ, ಸಂಶೋಧನ ವಿಷಯವನ್ನು ಹೇಗೆ ವಿವರಿಸಿಕೊಳ್ಳಬೇಕು ಎಂಬುದು ಸಮಸ್ಯೆ. ಇದು ಹಲವು ಪ್ರಶ್ನೆಗಳನ್ನು ಹುಟ್ಟಿಸುತ್ತದೆ ಮತ್ತು ಹುಟ್ಟಿಸಬೇಕು. ಅವನ್ನು ಹೀಗೆ ಗುರುತಿಸಬಹುದು.

೧. ಸಾಹಿತ್ಯವನ್ನು ಸಂಸ್ಕೃತಿ ಪರಿಕಲ್ಪನೆಯಲ್ಲಿ ನೋಡುವುದರ ಅಗತ್ಯವೇನು?

೨. ಸಾಹಿತ್ಯಕ್ಕೂ ಸಂಸ್ಕೃತಿಗೂ ಯಾವ ಬಗೆಯಲ್ಲಿ ಸಂಬಂಧವಿದೆ?

೩. ಸಂಸ್ಕೃತಿ ಪರಿಕಲ್ಪನೆಯ ಸ್ವರೂಪ ಯಾವುದು?

೪. ಸಂಸ್ಕೃತಿ ಎಂಬುದಕ್ಕೆ ಸಾಹಿತ್ಯೇತರ ಜ್ಞಾನಶಿಸ್ತುಗಳು ರೂಪಿಸಿರುವ ಪರಿಕಲ್ಪನೆಗಳು ಯಾವುವು?

೫. ಸಂಸ್ಕೃತಿ ಎಂಬುದಕ್ಕೆ ಸಾಹಿತ್ಯಕ ಜ್ಞಾನಶಿಸ್ತು ರೂಪಿಸಿರುವ ಪರಿಕಲ್ಪನೆಗಳು ಯಾವುವು?

೬. ಇವುಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು, ಯಾಕೆ ಆಯ್ಕೆಮಾಡಿಕೊಳ್ಳಬೇಕು?

೭. ಸಂಸ್ಕೃತಿಯನ್ನು ಸಾಹಿತ್ಯ ದಾಖಲಿಸುತ್ತದೊ ಅಥವಾ ನಿರೂಪಿಸುತ್ತದೊ?

೮. ಸಾಹಿತ್ಯದಲ್ಲಿ ಅಥವಾ ಒಂದು ಸಾಹಿತ್ಯ ಕೃತಿಯಲ್ಲಿ ಒಂದೇ ಬಗೆಯ ಸಂಸ್ಕೃತಿ ನಿರೂಪಿತವಾಗಿರುತ್ತದೊ ಅಥವಾ ಒಂದಕ್ಕಿಂತ ಹೆಚ್ಚು ಸಂಸ್ಕೃತಿಗಳು ನಿರೂಪಿತವಾಗಿರುತ್ತವೆಯೊ?

೯. ಸಾಹಿತ್ಯದಲ್ಲಿ ಒಂದಕ್ಕಿಂತ ಹೆಚ್ಚು ಸಂಸ್ಕೃತಿಗಳು ನಿರೂಪಿತವಾಗಿದ್ದರೆ ಅದಕ್ಕೆ ಬರಹಗಾರರ ಯಾವ ಹಿನ್ನೆಲೆಗಳು ಕಾರಣವಾಗಿರುತ್ತವೆ?

೧೦. ಸಾಹಿತ್ಯದಲ್ಲಿ ಒಂದಕ್ಕಿಂತ ಹೆಚ್ಚು ಸಂಸ್ಕೃತಿಗಳು ನಿರೂಪಿತವಾಗಿದ್ದರೆ ಅದಕ್ಕೆ ಕೃತಿ ಮೈದಾಳಿದ ಚರಿತ್ರೆಯ ಯಾವ ಹಿನ್ನೆಲೆಗಳು ಕಾರಣವಾಗಿರುತ್ತವೆ?

೧೧. ಒಂದಕ್ಕಿಂತ ಹೆಚ್ಚು ಸಂಸ್ಕೃತಿಗಳು ನಿರೂಪಿತವಾಗಿದ್ದರೆ ಅವುಗಳ ನಡುವಿನ ಸಂಬಂಧಗಳು ಯಾವುವು?

೧೨. ಆ ಸಂಸ್ಕೃತಿಗಳ ನಡುವೆ ಒಪ್ಪಿತ, ಸಹಬಾಳ್ವೆ, ಸಾಮರಸ್ಯಗಳ ಸಂಬಂಧವಿರುತ್ತದೊ?

೧೩. ಆ ಸಂಸ್ಖೃತಿಗಳ ನಡುವೆ ಅಸಹನೆ, ವಿರೋಧ ಮತ್ತು ಸಂಘರ್ಷಗಳ ಸಂಬಂಧ ವಿರುತ್ತದೊ?

೧೪. ಸಾಹಿತ್ಯವು ಭಿನ್ನ ಸಂಸ್ಕೃತಿಗಳನ್ನು ಅಭಿವ್ಯಕ್ತಿಸಲು ಪಡೆಯುವ ಪರಿಕರಗಳು, ಸಾಮಗ್ರಿಗಳು ಮತ್ತು ನಿರೂಪಣ ಕ್ರಮಗಳು ಯಾವುವು?

೧೫. ಸಾಹಿತ್ಯವು ಭಿನ್ನ ಸಂಸ್ಕೃತಿಗಳನ್ನು ಅಭಿವ್ಯಕ್ತಿಸುವ ಮೂಲಕ ಆಕೃತಿಯಲ್ಲಿ ಮತ್ತು ಆಶಯದಲ್ಲಿ ಮಾಡಿಕೊಳ್ಳುವ ಬದಲಾವಣೆಗಳು ಯಾವುವು?

೧೬. ಸಾಹಿತ್ಯದ ಹಲವು ಅಥವಾ ಭಿನ್ನ ಓದುಗಳ ಮೂಲಕ ಅದರ ಸಾಂಸ್ಕೃತಿಕ ಆಯಾಮಗಳನ್ನು ಶೋಧಿಸಬಹುದೆ?

೧೭. ಆಗ ಸಾಹಿತ್ಯದಲ್ಲಿ ದಾಖಲಾಗಿರುವ ಸಂಸ್ಕೃತಿ ಎನ್ನುವುದಕ್ಕಿಂತಲೂ, ಅದರ ಓದಿನಿಂದ ನಿಷ್ಪನ್ನಗೊಳ್ಳುವ ಸಾಂಸ್ಕೃತಿಕ ಆಯಾಮಗಳು ಎಂದು ಹೇಳಬಹುದೆ?

೧೮. ಭಿನ್ನ ಓದುಗಳನ್ನು ಪ್ರಭಾವಿಸುವ ಅಂಶ ಯಾವುದು?

೧೯. ಸಾಹಿತ್ಯವನ್ನು ಓದುಗರ ಉದ್ದೇಶ, ಕಾಲ ಸಂದರ್ಭದ, ಓದುಗರ ಧೋರಣೆ, ಓದುಗರ ಹಿನ್ನೆಲೆ ಇವುಗಳಲ್ಲಿ ಯಾವುದು ಮುಖ್ಯವಾದುದು?

ಈ ಹಲವು ಆಯಾಮದ ಪ್ರಶ್ನೆಗಳ ಮೂಲಕ ಸಂಶೋಧನ ವಿಷಯವನ್ನು ವಿವರಿಸಿಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಸಾಹಿತ್ಯದಲ್ಲಿ ಸಂಸ್ಕೃತಿ ಇರುತ್ತದೆ, ಅದನ್ನು ಹುಡುಕಿ ಪಟ್ಟಿ ಮಾಡಿದರೆ ಸಂಶೋಧನೆ ಮುಗಿದು ಹೋಗುತ್ತದೆ ಎನ್ನಬೇಕಾಗುತ್ತದೆ. ಸಾಹಿತ್ಯ ಮತ್ತು ಸಂಸ್ಕೃತಿಗಿರುವ ಸಂಬಂಧ ಅಷ್ಟು ಸರಳವಾದುದಲ್ಲ.