ದೇಸಿಯತೆ ಎಂಬುದು ಸಾರ್ವಜನಿಕ ಜೀವನ, ರಾಜಕೀಯ, ಆರ್ಥಿಕತೆ, ಉತ್ಪಾದನೆ, ವಿವಿಧ ಉತ್ಪಾದನೆಗಳಿಗೆ ಬಳಸುವ ಉಪಕರಣಗಳು, ಉತ್ಪಾದನ ಸಾಧನಗಳು, ಉಡುಪು, ಕಟ್ಟಡಗಳು, ಆಹಾರ ಪದ್ಧತಿ, ಔಷಧ, ಕ್ರೀಡೆಗಳು, ಸಂಗೀತ, ಕಲೆ, ಅಲಂಕಾರ, ಮನರಂಜನೆ, ಅಭಿರುಚಿ, ಆಸ್ವಾದನೆ ಮುಂತಾದ ವಲಯಗಳಲ್ಲಿ ಪ್ರಸ್ತಾಪವಾಗುತ್ತಿದೆ. ದೇಸಿಯತೆಯ ಚರ್ಚೆಯು ವಾಗ್ವಾದ, ಒಪ್ಪಿಗೆ, ಅನುಮೋದನೆ, ಅನುಮಾನ, ನಂಬಿಕೆ, ಅಪನಂಬಿಕೆ, ತಿರಸ್ಕಾರ ಈ ಆಯಾಮಗಳಲ್ಲಿ ಸ್ಥಾನ ಪಡೆದಿದೆ. ಸಾಹಿತ್ಯ ನಿರ್ಮಾಣ, ವಿಮರ್ಶೆ, ಸಂಶೋಧನೆಗಳಲ್ಲೂ ಇದರ ಚರ್ಚೆ ನಡೆಯುತ್ತಿದೆ. ಅಕಡೆಮಿಕ್ ವಲಯದಲ್ಲಿ ದೇಸಿಯತೆಯನ್ನು ಬೇರೆ ಬೇರೆ ಬಗೆಯಲ್ಲಿ ವಿವರಿಸಿಕೊಳ್ಳಲಾಗಿದೆ. ದೇಸಿ ಎಂಬುದು ಒಂದು ಮೌಲ್ಯ, ಪ್ರಜ್ಞೆ, ಗುಣ, ಸ್ವಭಾವ ಎಂದು ಪರಿಗಣಿಸಲಾಗಿದೆ. ದೇಸಿ ಎಂಬುದು ಚಲನಶೀಲತೆಯುಳ್ಳದ್ದು, ಪ್ರಗತಿಪರವಾದುದು ಎಂದು ತೀರ್ಮಾನಿಸಲಾಗಿದೆ. ದೇಸಿ ಎಂಬುದು ಆಧುನಿಕ ಪೂರ್ವದ್ದು, ಸ್ಥಗಿತವಾದುದು, ಪುರಾತನವಾದುದು, ಹಳೆಯದು, ಪ್ರಗತಿ ವಿರೋಧಿಯಾದುದು ಎಂದು ತಿಳಿಯಲಾಗಿದೆ. ಅಂತಹ ಕೆಲವು ಮುಖ್ಯ ಆಯಾಮಗಳನ್ನು ಗಮನಿಸಬಹುದು. ದೇಸಿಯತೆ ಎಂಬುದನ್ನು ಸಿದ್ಧವಸ್ತು ಎಂದು ತಿಳಿಯುವುದು ಮತ್ತು ಅದನ್ನು ಬಳಸುವುದು. ಉದಾಹರಣೆಗೆ: ಕೆಲವು ಸಿದ್ಧಪಡಿಸಿದ ಆಹಾರಗಳು, ಕೆಲವು ಔಷಧಿಗಳು, ಉಡುಪುಗಳು, ಕಟ್ಟಡಗಳು, ಪೀಠೋಪಕರಣಗಳು ಇತ್ಯಾದಿ. ದೇಸಿಯತೆ ಎಂಬುದನ್ನು ಸಿದ್ಧಮಾಡಬೇಕಾದ ವಸ್ತು ಎಂದು ತಿಳಿಯುವುದು. ಹಾಗೆ ಸಿದ್ಧಮಾಡಲು ವಿಧಾನಗಳನ್ನು ಅರಸುವುದು. ಅಥವಾ ಲಭ್ಯ ವಿಧಾನಗಳಲ್ಲಿ ಕೆಲವನ್ನು ಆಯ್ಕೆಮಾಡಿಕೊಳ್ಳುವುದು. ಉದಾಹರಣೆಗೆ: ಕೆಲವು ಆಹಾರ, ಉಡುಪು, ಕೆಲವು ಬೆಳೆಗಳು ಮುಂತಾದುವನ್ನು ತಯಾರಿಸಲು/ ಬೆಳೆಯಲು ಸೂಕ್ತ ವಿಧಾನಗಳನ್ನು ಆಯ್ಕೆ ಮಾಡಿಕೊಂಡು ಅವನ್ನು ಅನುಸರಿಸುವುದು. ದೇಸಿಯತೆ ಎಂಬುದನ್ನು ಗುರುತಿಸುವಾಗ, ಯಾವುದು ದೇಸಿಯತೆ ಅಲ್ಲ ಎಂಬ ‘ಖಚಿತ ನಿರ್ಧಾರದಿಂದ’ಲೆ ಹೊರಡಲಾಗುತ್ತದೆ. ಹಾಗಾಗಿ ಯಾವುದು ದೇಸಿಯತೆ ಎಂಬುದು, ಯಾವುದು ದೇಸಿಯತೆ ಅಲ್ಲ ಎಂಬ ತರ್ಕದೊಂದಿಗೆ ಥಳುಕು ಹಾಕಿಕೊಂಡಿದೆ. ಇವೆರಡರ ಸಂಬಂಧದಲ್ಲೆ ದೇಸಿಯತೆಯನ್ನು ಗುರುತಿಸಲಾಗುತ್ತದೆ.

ಮೇಲಿನ ವಿವರಣೆಯಿಂದ ಮೂರು ಅಂಶಗಳನ್ನು ಚರ್ಚೆಗೆ ತೆಗೆದುಕೊಳ್ಳಬಹುದು. ಒಂದು: ದೇಸಿಯತೆ ಎಂಬುದು ತಯಾರಿಸಬೇಕಾದುದು, ರಚನೆ ಮಾಡಬೇಕಾದುದು. ಹಾಗೆ ತಯಾರಿಸಲು ಇರುವ ವಿಧಾನಗಳಲ್ಲೆ ಕೆಲವನ್ನು ಆಯ್ಕೆ ಮಾಡಿಕೊಳ್ಳಬೇಕು; ಜೊತೆಗೆ ಕೆಲವನ್ನು ನಿರಾಕರಿಸಬೇಕು. ಈ ಕೆಲಸದಲ್ಲಿ ತೊಡಗುವವರನ್ನು ಉತ್ಪಾದಕರು, ಸೃಜನಶೀಲರು ಎನ್ನಬಹುದು. ಎರಡು: ದೇಸಿಯತೆ ಎಂಬುದು ಈಗಾಗಲೆ ತಯಾರಿಸಿ, ಸಿದ್ಧಮಾಡಿರುವಂತಹದ್ದು. ಹಾಗಾಗಿ ಅದನ್ನು ಬಳಸುವುದು ಮಾತ್ರ ಮುಖ್ಯ. ಈ ಕೆಲಸದಲ್ಲಿ ತೊಡಗುವವರನ್ನು ಗ್ರಾಹಕರು, ಬಳಕೆದಾರರು, ಪ್ರೇಕ್ಷಕರು ಎನ್ನಬಹುದು. ಮೂರು: ಯಾವುದು ದೇಸಿಯತೆ ಮತ್ತು ಯಾವುದು ದೇಸಿಯತೆ ಅಲ್ಲ ಎಂದು ಗುರುತಿಸುವುದು, ನಿರ್ಧರಿಸುವುದು. ಇದು ರಚನೆ ಮಾಡುವ ಮತ್ತು ಬಳಸುವ ಎರಡೂ ವಲಯಗಳಲ್ಲಿ ನಡೆಯುತ್ತದೆ. ಇದನ್ನು ನೋಡುವಿಕೆ, ಗ್ರಹಿಸುವಿಕೆ ಎನ್ನಬಹುದು. ನಾಲ್ಕು: ಹೀಗೆ ನೋಡುವ, ಗ್ರಹಿಸುವ ಹಿತಾಸಕ್ತಿ, ದೃಷ್ಟಿಕೋನ ಯಾವುದು ಎಂಬುದರ ಬಗ್ಗೆ ಎಚ್ಚರವಹಿಸುವುದು. ಇದನ್ನು ಧೋರಣೆ ಎನ್ನಬಹುದು.

ಮೇಲಿನ ನಾಲ್ಕು ಅಂಶಗಳಲ್ಲಿ ಸಾಹಿತ್ಯಕ್ಕೆ ಮತ್ತು ಸಾಹಿತ್ಯ ಸಂಶೋಧನೆಗೆ ಸಂಬಂಧಿಸಿದುದು ಯಾವುದು ಎಂಬುದನ್ನು ಸ್ಪಷ್ಟಮಾಡಿಕೊಳ್ಳಬೇಕಾಗುತ್ತದೆ. ಹೀಗೆ ಸ್ಪಷ್ಟಮಾಡಿಕೊಳ್ಳದಿದ್ದರೆ ಚರ್ಚೆ ಗೊಂದಲದ ಗೂಡಾಗುತ್ತದೆ. ಏನನ್ನು ಕುರಿತು ಚರ್ಚೆ ಮಾಡುತ್ತೇವೆ  ಎನ್ನುವುದಕ್ಕಿಂತಲೂ, ಅದನ್ನು ಯಾವ ಚೌಕಟ್ಟಿನಲ್ಲಿ ಚರ್ಚೆ ಮಾಡುತ್ತೇವೆ ಎಂಬುದು ಬಹಳ ಮುಖ್ಯ. ಹಾಗಾಗಿ ವಿಷಯದ ಚರ್ಚೆಗೆ ಸೂಕ್ತವಾದ ಚೌಕಟ್ಟು ಯಾವುದು ಎಂಬುದನ್ನು ಬಗೆಹರಿಸಿಕೊಳ್ಳಬೇಕು. ವಿಷಯಕ್ಕೆ ಅನುಗುಣವಾದ ಅಥವಾ ಸೂಕ್ತವಾದ ಚೌಕಟ್ಟನ್ನು ನಿರ್ಮಿಸಿಕೊಳ್ಳುವುದು ಒಂದು ಸಾಧ್ಯತೆಯಾದರೆ, ವಿಷಯಕ್ಕೆ ಅನುಗುಣವಲ್ಲದ ಅಥವಾ ಸೂಕ್ತವಲ್ಲದ ಚೌಕಟ್ಟನ್ನು ನಿರ್ಮಿಸಿಕೊಳ್ಳುವುದು ಮತ್ತೊಂದು ಸಾಧ್ಯತೆ. ಮೊದಲೇ ಸಾಧ್ಯತೆಯಲ್ಲಿ ಚೌಕಟ್ಟಿನ ಒಳಗೆ ಚರ್ಚೆ ನಡೆಯುತ್ತದೆ. ವಿಷಯ ಮತ್ತು ಅದರ ಚೌಕಟ್ಟಿನ ಒಳಗಿನಿಂದಲೆ ಫಲಿತಗಳು ಬರುತ್ತವೆ. ಎರಡನೇ ಸಾಧ್ಯತೆಯಲ್ಲಿ ಚೌಕಟ್ಟಿನ ಹೊರಗೆ ಚರ್ಚೆ ನಡೆಯುತ್ತದೆ. ವಿಷಯ ಮತ್ತು ಚೌಕಟ್ಟಿನ ಹೊರಗಿನಿಂದಲೆ ಫಲಿತಗಳು ಬರುತ್ತವೆ. ಈ ಕಾರಣಕ್ಕಾಗಿ ಎರಡರ ಫಲಿತಗಳೂ ಭಿನ್ನವಾಗಿರುತ್ತವೆ ಇಲ್ಲವೆ ತದ್ವಿರುದ್ಧವಾಗಿರುತ್ತವೆ. ಆದರೆ ಆ ಫಲಿತಗಳ ನಿರೀಕ್ಷೆ ಮತ್ತು ಅದನ್ನು ಗುರುತಿಸುವ ವಿಧಾನಗಳು ಕೆಲವು ಸಲ ವಿಚಿತ್ರವಾಗಿರುತ್ತವೆ. ವಿಷಯ ಮತ್ತು ಚೌಕಟ್ಟಿನ ಒಳಗಿನಿಂದ ಬಂದ ಫಲಿತಗಳನ್ನು ಹೊರಗಿನಿಂದ ಬರಬೇಕೆಂದು ಇಲ್ಲವೆ ಹೊರಗಿನಿಂದ ಬಂದವೆಂದು ಗುರುತಿಸಲಾಗುತ್ತದೆ. ಅದೇ ರೀತಿಯಲ್ಲಿ ವಿಷಯ ಮತ್ತು ಚೌಕಟ್ಟಿನ ಹೊರಗಿನಿಂದ ಬಂದ ಫಲಿತಗಳನ್ನು ಒಳಗಿನಿಂದ ಬರಬೇಕೆಂದು ಇಲ್ಲವೆ ಒಳಗಿನಿಂದ ಬಂದವೆಂದು ಗುರುತಿಸಲಾಗುತ್ತದೆ.

ಸಾಹಿತ್ಯ ಸಂಶೋಧನೆಯಲ್ಲಿ ದೇಸಿಯತೆ ಎಂಬುದರ ಚರ್ಚೆಯು ಗ್ರಾಹಕರು, ಬಳಕೆದಾರರು ಎಂಬ ನೆಲೆಯದೊ; ಉತ್ಪಾದಕರು, ಸೃಜನಶೀಲರು ಎಂಬ ನೆಲೆಯದೊ; ಗ್ರಹಿಕೆಯ ನೆಲೆಯದೊ; ದೃಷ್ಟಿಕೋನ, ಧೋರಣೆಯ ನೆಲೆಯದೊ ಎಂಬುದು ಮುಖ್ಯ. ಸಾಹಿತ್ಯ ಸಂಶೋಧನೆ ಎಂಬ ಶೈಕ್ಷಣಿಕ ಚಟುವಟಿಕೆಯು ತಾತ್ವಿಕವಾಗಿ ಧೋರಣೆಯ ನೆಲೆಗೆ ಸಂಬಂಧಿಸಿದುದು. ಆದ್ದರಿಂದ ದೇಸಿಯತೆಯನ್ನು ಮೇಲೆ ವಿಶ್ಲೇಷಿಸಿದ ಧೋರಣೆಯ ನೆಲೆಯಲ್ಲಿ ಚರ್ಚಿಸಬೇಕಾಗುತ್ತದೆ. ಸಾಹಿತ್ಯ ಕೃತಿಗಳಲ್ಲಿ ದೇಸಿಯತೆಯನ್ನು ನಿರೂಪಿಸುವಾಗ ಅಥವಾ ಗುರುತಿಸುವಾಗ ಅದು ಸಾಹಿತ್ಯದ ವಸ್ತುವಿಗೆ ಸಂಬಂಧಿಸಿದ್ದೊ, ಸಾಹಿತ್ಯದ ಆಶಯಕ್ಕೆ ಸಂಬಂಧಿಸಿದ್ದೊ ಅಥವಾ ಸಾಹಿತ್ಯದ ನಿರೂಪಣೆಗೆ ಸಂಬಂಧಿಸಿದ್ದೊ ಎಂಬ ಪ್ರಶ್ನೆ ಮುಖ್ಯವಾದುದು. ಸಾಹಿತ್ಯದ ವಸ್ತು ಅಖಿಲ ಭಾರತೀಯ ವ್ಯಾಪ್ತಿಯದ್ದೊ, ಪ್ರಾದೇಶಿಕವೊ, ಮೇಲುಜಾತಿಗಳಿಗೆ ಸಂಬಂಧಿಸಿದ್ದೊ, ಕೆಳಜಾತಿಗಳಿಗೆ ಸಂಬಂಧಿಸಿದ್ದೊ ಎಂಬುದನ್ನು ಆಧರಿಸಿ ದೇಸಿಯತೆಯನ್ನು ಗುರುತಿಸುವ ವಿಧಾನವಿದೆ. ಇಂತಹ ಅಧ್ಯಯನಗಳು ಪ್ರಾದೇಶಿಕವಾದುದು, ಸ್ಥಳೀಯವಾದುದು, ಕೆಳಜಾತಿಗಳಿಗೆ ಸಂಬಂಧಿಸಿದುದನ್ನು ದೇಸಿ ಎಂದು ಗುರುತಿಸುತ್ತವೆ. ಆದರೆ ಹೀಗೆ ಗುರುತಿಸುವಾಗ ಕೆಲವು ಸಮಸ್ಯೆಗಳಿಗೆ. ಉದಾಹರಣೆಗೆ: ರಾಮಾಯಣ ಮತ್ತು ಮಹಾಭಾರತಗಳನ್ನು ಏನೆಂದು ಪರಿಗಣಿಸಬೇಕು? ಭಾರತದಲ್ಲಿ ಒಂದೇ ರಾಮಾಯಣ ಮತ್ತು ಒಂದೇ ಮಹಾಭಾರತ ಎಂಬುವು ಇಲ್ಲ. ಭಾರತದಲ್ಲಿ ಹಲವು ರಾಮಾಯಣಗಳು, ಹಲವು ಮಹಾಭಾರತಗಳು ಇವೆ. ಸಂಶೋಧನೆಗೆ ಸಂಬಂಧಿಸಿದಂತೆ ಇವುಗಳನ್ನು ಲಿಖಿತ ಮತ್ತು ಮೌಖಿಕ ಎಂದು ವಿಭಾಗ ಮಾಡುವುದರಲ್ಲಿ ಹೆಚ್ಚು ಪ್ರಯೋಜನ ಇಲ್ಲ. ಈ ದೃಷ್ಟಿಯಲ್ಲಿ ಅವು ಒಂದು ಕಡೆ ಅಖಿಲ ಭಾರತೀಯವೂ ಹೌದು; ಅದೇ ಕಾಲಕ್ಕೆ ಅವುಗಳ ಪ್ರಾದೇಶಿಕವೂ, ಸ್ಥಳೀಯವೂ ಹೌದು. ಆದ್ದರಿಂದಲೆ ಪಂಪ ಭಾರತ ಮತ್ತು ಕುಮಾರವ್ಯಾಸ ಭಾರತಗಳು ಸೃಷ್ಟಿಯಾಗಲು ಸಾಧ್ಯವಾಯಿತು. ಅದೇ ರೀತಿಯಲ್ಲಿ ಪಂಪ ರಾಮಾಯಣ, ಶ್ರೀ ರಾಮಾಯಣ ದರ್ಶನಂ ಕಾವ್ಯಗಳು ಸೃಷ್ಟಿಯಾಗಲು ಸಾಧ್ಯವಾಯಿತು. ಜೊತೆಗೆ ವಸ್ತುವಿಗೆ ಸಂಬಂಧಿಸಿದಂತೆ ಸಾಹಿತ್ಯ ಕೃತಿಗಳಲ್ಲಿ ಕೇವಲ ಮೇಲುಜಾತಿಗಳ ವಿವರಗಳು ಮಾತ್ರವಿರದೆ, ಕೆಳಜಾತಿಗಳ ವಿವರಗಳೂ ಇರಲು ಸಾಧ್ಯವಿದೆ. ಕುಸುಮಬಾಲೆಯು ಕರ್ನಾಟಕದ ಒಂದು ಪ್ರಾದೇಶಿಕ ಅನುಭವವನ್ನು, ಅದರದೇ ಭಾಷಿಕ ನಿರೂಪಣೆಯಲ್ಲಿ ಕಟ್ಟಿಕೊಡುತ್ತದೆ ಎಂದು ಹೇಳಲಾಗುತ್ತದೆ. ಆದರೆ ಅದೇ ಕುಸುಮಬಾಲೆ ಬಾಂಬೆಯ ಪ್ರಸ್ತಾಪ ಮಾಡುತ್ತದೆ. ಆಗ ಏನು ಮಾಡುವುದು? ಆದ್ದರಿಂದ ಸಾಹಿತ್ಯದ ವಸ್ತು ಕೇವಲ ಪ್ರದೇಶಬದ್ಧ ಮತ್ತು ಜಾತಿಬದ್ಧ ಎಂದು ಸರಳವಾಗಿ ಮತ್ತು ಏಕಮುಖವಾಗಿ ತೀರ್ಮಾನಿಸಲು ಆಗುವುದಿಲ್ಲ. ಆ ಬಗೆಯ ಕೃತಿಗಳು ಇರಲೂಬಹುದು. ಆದರೆ ಎಲ್ಲವನ್ನೂ ಅದೇ ಚೌಕಟ್ಟಿನಲ್ಲಿ ಗ್ರಹಿಸಲು ಆಗುವುದಿಲ್ಲ.

ಸಾಹಿತ್ಯದ ಆಶಯ ಮತ್ತು ಧೋರಣೆಗೆ ಸಂಬಂಧಿಸಿ ದೇಸಿಯತೆಯನ್ನು ಗುರುತಿಸುವ ವಿಧಾನವಿದೆ. ಸಾಹಿತ್ಯದಲ್ಲಿ ಆಶಯ ಮತ್ತು ಧೋರಣೆಯನ್ನು ಗುರುತಿಸುವಾಗ ಇವು ಸಾಹಿತ್ಯ ಕೃತಿಯಲ್ಲಿ ಸಿದ್ಧರೂಪದಲ್ಲಿ ಇರುತ್ತವೆ ಎಂದು ತಿಳಿಯುವ ಒಂದು ಮಾದರಿ ಇದೆ. ಜೊತೆಗೆ ಒಂದು ಕೃತಿಯಲ್ಲಿ ಒಂದೇ ಪ್ರಧಾನ ಆಶಯ ಮತ್ತು ಧೋರಣೆ ಇರುತ್ತದೆ ಎಂದು ನಂಬಲಾಗಿದೆ. ಅಲ್ಲದೆ ಕೆಲವು ಕೃತಿ ಸಮೂಹಗಳಿಗೆ ಸಾಮಾನ್ಯವಾದ ಒಂದು ಆಶಯವಿರುತ್ತದೆ ಎಂದು ತೀರ್ಮಾನಿಸಲಾಗಿದೆ. ವಚನಗಳಿಗೆ ಒಟ್ಟಾರೆಯಾದ ಒಂದು ಆಶಯವಿದೆ, ಅದೇ ರೀತಿಯಲ್ಲಿ ನವೋದಯ, ಪ್ರಗತಿಶೀಲ ಇತ್ಯಾದಿ ಸಾಹಿತ್ಯ ಪಂಥಗಳಿಗೆ ಅವುಗಳದ್ದೇ ಆದ ನಿರ್ದಿಷ್ಟ ಆಶಯ ಇದೆ ಎಂದು ತಿಳಿಯಲಾಗಿದೆ. ಹಾಗೆ ಮೊದಲೇ ನಿರ್ಧಾರ ಮಾಡಿರುವುದರಿಂದ ಅದೇ ಪೂರ್ವಗ್ರಹದಲ್ಲಿ ಓದಿ, ಅದನ್ನೆ ತೀರ್ಮಾನಿಸುವ ಕ್ರಮ ರೂಢಿಯಲ್ಲಿದೆ. ಇದರ ಹಾಗೆ ಒಬ್ಬೊಬ್ಬ ಕೃತಿಕಾರರನ್ನೂ ಇದೇ ದೃಷ್ಟಿಕೋನದಲ್ಲಿ ನೋಡುವ ಕ್ರಮ ಕೂಡ ಇದೆ. ಈ ದೃಷ್ಟಿಕೋನ ಸಾಹಿತ್ಯದಲ್ಲಿ ದೇಸಿಯತೆಯನ್ನು ನಿರೂಪಿಸಲು ತೊಡಕಾಗಿದೆ. ಯಾಕೆಂದರೆ ಒಂದು ಕೃತಿಯಲ್ಲಿ ಒಂದೇ ಒಂದು ಆಶಯ ಮತ್ತು ಧೋರಣೆ ಇರುವುದಿಲ್ಲ. ಹಲವು ಆಶಯಗಳು, ಹಲವು ಧೋರಣೆಗಳು ಇರಲು ಸಾಧ್ಯ. ಇದು ಒಂದು ಆಯಾಮ. ಇನ್ನೊಂದು ಆಯಾಮದಲ್ಲಿ ಹೇಳುವುದಾದರೆ ಓದುಗರು ಸಾಹಿತ್ಯವನ್ನು ಓದುವುದರ ಮೂಲಕ ಹಲವು ಆಶಯಗಳನ್ನು ಕಾಣಲು, ಶೋಧಿಸಲು ಸಾಧ್ಯವಿದೆ. ಒಂದು ಕೃತಿಯ ಬಗ್ಗೆ ನಡೆದಿರುವ ಹಲವು ಧೋರಣೆಗಳ ಬರಹಗಳನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದು. ಹಾಗಾಗಿ ವಚನಗಳಿಗೆ, ನವೋದಯ, ಪ್ರಗತಿಶೀಲ ಮುಂತಾದುವುಗಳಿಗೆ ಇಡಿಯಾಗಿ ಒಂದೇ ಆಶಯ ಇದೆ ಎಂದು ಸರಳೀಕರಿಸಲು ಬರುವುದಿಲ್ಲ. ಅದೇ ರೀತಿಯಲ್ಲಿ ಒಬ್ಬರು ಬರಹಗಾರರನ್ನು ಕುರಿತು ‘ಇವರು ದೇಸಿ ಬರಹಗಾರರು, ಇವರು ದೇಸಿ ಬರಹಗಾರರಲ್ಲ’ ಎಂದು ಸರಳೀಕರಿಸಲು ಬರುವುದಿಲ್ಲ.

ಸಾಹಿತ್ಯದ ಭಾಷಿಕ ನಿರೂಪಣೆ ಯಾವುದು ಎಂಬುದನ್ನು ಆಧರಿಸಿ ದೇಸಿಯತೆಯನ್ನು ಗುರುತಿಸಲಾಗುತ್ತಿದೆ. ಸಾಹಿತ್ಯದ ಕಥನ, ನಿರೂಪಣೆ, ಸಂಭಾಷಣೆ ಮತ್ತು ವರ್ಣನೆ ಇವಕ್ಕೆ ಪ್ರಯೋಗ ಮಾಡಿರುವ ಭಾಷೆ ಇವನ್ನು ಅವಲಂಬಿಸಿ ಅದರ ದೇಸಿಯತೆಯನ್ನು ಗುರುತಿಸುವ ಕ್ರಮವಿದೆ. ಕುಸುಮಬಾಲೆಯನ್ನು ಈ ಹಿನ್ನೆಲೆಯಲ್ಲಿ ಪರಿಗಣಿಸಲಾಗಿದೆ. ಆದರೆ ಎಲ್ಲಾ ಕೃತಿಗಳಿಗೂ ಇವನ್ನು ಒಟ್ಟಿಗೆ ಅನ್ವಯಿಸಲು ಕಷ್ಟವಾಗುತ್ತದೆ. ಕೆಲವು ಸಲ ಹೊರಗಿನಿಂದ ಸಾಹಿತ್ಯಕ್ಕೆ ಇದನ್ನು ಆರೋಪಿಸಲಾಗಿದೆ. ಉದಾಹರಣೆಗೆ: ವಚನಗಳು ಸರಳವಾದ ಭಾಷೆಯಲ್ಲಿವೆ ಎಂದು ತಿಳಿಯಲಾಗಿದೆ. ಆದರೆ ವಚನಗಳಲ್ಲಿರುವ ಸಂಸ್ಕೃತದ ಪೆಡಸುತನ ಕಡಿಮೆಯೇನಲ್ಲ. ಕುವೆಂಪು ಮತ್ತು ಬೇಂದ್ರೆಯವರ ಕೃತಿಗಳ ಬಗೆಗೂ ಇದೇ ಮಾತು ಅನ್ವಯವಾಗುತ್ತದೆ. ಕುಸುಮಬಾಲೆಯ ಭಾಷಿಕ ನಿರೂಪಣೆಗೆ ಸಂಬಂಧಿಸಿ ಅದನ್ನು ದೇಸಿ ಎಂದು ಕರೆಯುತ್ತಿರುವಾಗಲೆ, ಅದರ ಧೋರಣೆಯನ್ನು ಮುಖ್ಯವಾಗಿಟ್ಟುಕೊಂಡು ಓದಿದ ಓದು, ‘ಕುಸುಮಬಾಲೆ ದಲಿತರ ನೇಣುಗಂಬ’ ಎಂಬ ನಿಲುವನ್ನು ತಳೆಯುತ್ತದೆ. ಒಂದು ಕಡೆ, ನಿರೂಪಣೆಗೆ ಸಂಬಂಧಿಸಿ ಒಂದು ಕೃತಿಯಲ್ಲಿ ದೇಸಿಯತೆಯನ್ನು ಗುರುತಿಸಲಾಗುತ್ತದೆ. ಮತ್ತೊಂದು ಕಡೆ, ಧೋರಣೆಗೆ ಸಂಬಂಧಿಸಿದ ಓದು ಅದರ ದೇಸಿಯತೆಯನ್ನು ಒಪ್ಪುವುದಿಲ್ಲ. ದೇಸಿಯತೆಯನ್ನು ಗುರುತಿಸುವಾಗ ಒಂದು ಆಯಾಮದಲ್ಲಿ ಸಾಧ್ಯವಾದುದು ಮತ್ತೊಂದು ಆಯಾಮದಲ್ಲಿ ಸಾಧ್ಯವಾಗದೆಯೂ ಇರಬಹುದು.

ಅಕಡೆಮಿಕ್ ವಲಯದ ವೈಚಾರಿಕ ಆಕೃತಿಗಳು ಮತ್ತು ಧೋರಣೆಗಳು ವರ್ತಮಾನದ ರಾಜಕೀಯ ಆರ್ಥಿಕ ನೆಲೆಯಿಂದ ಪ್ರಭಾವಿತಗೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ದೇಸಿ, ದೇಸಿಯತೆಯ ವೈಚಾರಿಕ ಆಕೃತಿಯನ್ನು ಚರ್ಚಿಸುವ ಅಗತ್ಯವಿದೆ. ದೇಸಿ ಎಂಬ ಅಕಡೆಮಿಕ್ ಪರಿಕಲ್ಪನೆ ೨೦ನೇ ಶತಮಾನದ್ದು. ಕಳೆದ ಶತಮಾನದ ಆರಂಭದ ಕೆಲವು ರಾಜಕೀಯ ವಿಚಾರಧಾರೆಗಳು ಬಂಡವಾಳಶಾಹಿ ಉತ್ಪಾದನೆ, ಅದರ ಮಾರುಕಟ್ಟೆಯ ವೈಚಾರಿಕತೆ ಮತ್ತು ಅದರ ಪ್ರಭುತ್ವ ಮಾದರಿಗಳನ್ನು ಅನುಮಾನಿಸುವ, ಟೀಕಿಸುವ ಮತ್ತು ಮತ್ತು ವಿರೋಧಿಸುವ ಕೆಲಸವನ್ನು ಮಾಡಿದವು. ಆ ಯತಿಹಾಸಿಕ ರಾಜಕೀಯ ಒತ್ತಡದಲ್ಲಿ ಎಂ.ಕೆ. ಗಾಂಧಿಯವರ ‘ಹಿಂದ್ ಸ್ವರಾಜ್’ ಕೃತಿ ಹುಟ್ಟಿತು. ಇಂದು ದೇಸಿಯತೆ ಎಂದು ಕರೆಯುವುದರ ಕೆಲವು ಬೀಜರೂಪಿ ವೈಚಾರಿಕ ಆಕೃತಿಗಳು ‘ಹಿಂದ್ ಸ್ವರಾಜ್’ ಕೃತಿಯಲ್ಲಿವೆ. ಆದರೆ ಅದೇ ಕಾಲದ ಡಾ. ಅಂಬೇಡ್ಕರರ ಆಲೋಚನಾ ಧಾರೆಯ ಸ್ವರೂಪ ಬೇರೆಯದೇ ಆಗಿತ್ತು. ಇದು ‘ಹಿಂದ್ ಸ್ವರಾಜ್’ ಕೃತಿಯ ಆಶಯಕ್ಕಿಂತ ಭಿನ್ನವಾದ ತಾತ್ವಿಕ ನೆಲೆಯನ್ನು ಹೊಂದಿತ್ತು. ಯಾಕೆಂದರೆ ಅಂಬೇಡ್ಕರರ ಪಾಲಿಗೆ ಬ್ರಿಟೀಶರು ಮಾತ್ರ ಸುಲಿಗೆಕೋರರು ಆಗಿರಲಿಲ್ಲ. ಭಾರತದ ಒಳಗಿನವರೇ ಅಂಬೇಡ್ಕರ್ ಪ್ರತಿನಿಧಿಸುತ್ತಿದ್ದ ಜನ ಸಮುದಾಯಗಳ ಮೇಲೆ ದಮನ, ದಬ್ಬಾಳಿಕೆ  ನಡೆಸುತ್ತಿದ್ದರು. ದೇಶದ ಒಳಗಿನ ಶತ್ರುಗಳಿಂದಲೆ ಈ ಶೋಷಿತ ಜನ ಸಮುದಾಯಗಳ ಬಿಡುಗಡೆಯ ಮಾರ್ಗ ಯಾವುದು ಎಂಬುದು ಅಂಬೇಡ್ಕರರ ಹುಡುಕಾಟದ ಮಾದರಿಯಾಗಿತ್ತು. ಈ ಚರ್ಚೆಯಿಂದ ಗೊತ್ತಾಗುವುದೇನೆಂದರೆ ದೇಸಿಯತೆ ಎಂಬ ಪರಿಕಲ್ಪನೆಯ ಹಿಂದೆ ರಾಜಕೀಯ ದೃಷ್ಟಿಕೋನವಿದೆ. ಈ ರಾಜಕೀಯ ದೃಷ್ಟಿಕೋನ ಬೇರೆ ಬೇರೆ ವರ್ಗಹಿತಾಸಕ್ತಿಯಿಂದ ಕೂಡಿರುತ್ತದೆ. ಅಂದರೆ ವರ್ಗಹಿತಾಸಕ್ತಿಯ ರಾಜಕೀಯ ಧೋರಣೆಯನ್ನು ಹೊರತುಪಡಿಸಿ ದೇಸಿಯತೆ ಪೂರ್ಣವಾಗುವುದಿಲ್ಲ.

ಕಳೆದ ಶತಮಾನದ ಕೊನೆಯ ಹೊತ್ತಿಗೆ ಈ ವರ್ಗಹಿತಾಸಕ್ತಿಗಳು ಬೇರೊಂದು ಬಗೆಯಲ್ಲಿ ಕ್ರಿಯಾಶೀಲವಾದವು. ಕಳೆದ ಶತಮಾನದ ೯೦ರ ದಶಕದಲ್ಲಿ ಜಾರಿಮಾಡಲಾದ ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಮತ್ತು ಆಧುನೀಕರಣ ನೀತಿಗಳು ಸಾಮ್ರಾಜ್ಯಶಾಹಿ ಮಾರುಕಟ್ಟೆಯನ್ನು ಜಗತ್ತಿನ ಬೇರೆ ಬೇರೆ ಕಡೆ ವಿಸ್ತರಿಸಲು ನೆರವಾದವು. ಸುಲಿಗೆಯನ್ನು ಸುಲಿಗೆ ಎಂದು ಹೇಳಿದರೆ ಅದಕ್ಕೆ ಸಹಜವಾಗಿ ವಿರೋಧ ಬರುತ್ತದೆ. ಹಾಗಾಗಿ ಸುಲಿಗೆಯನ್ನು ‘ಸುಧಾರಣೆ’ ಎಂದು ವರ್ಣಿಸಲಾಯಿತು. ಆ ಮೂಲಕ ಸಾಮ್ರಾಜ್ಯಶಾಹಿ ಮಾರುಕಟ್ಟೆಯನ್ನು ಮತ್ತು ಅದರ ಲೂಟಿಯನ್ನು ವಿಸ್ತರಿಸಲಾಯಿತು. ಈ ಹುನ್ನಾರಗಳನ್ನು ಕೆಲವು ರಾಜಕೀಯ ಧೋರಣೆಗಳು, ಕೆಲವು ಚಳುವಳಿ ಮತ್ತು ಹೋರಾಟಗಳು ಬಯಲು ಮಾಡತೊಡಗಿದವು. ಅಂತಹ ಸಂದರ್ಭದಲ್ಲಿ ಮತ್ತೆ ಬಂಡವಾಳಶಾಹಿ ಮಾರುಕಟ್ಟೆ ತನ್ನ ವರ್ಣನೆಯನ್ನು ಬದಲಿಸಿಕೊಳ್ಳುವ ದಾರಿ ಹಿಡಿಯಿತು. ಪರಿಣಾಮವಾಗಿ ಬಂಡವಾಳಶಾಹಿಯ ಮಾರುಕಟ್ಟೆಯ ವೈಚಾರಿಕತೆಯೇ ಪರ್ಯಾಯಗಳನ್ನು ತಯಾರು ಮಾಡಿ ಮಾರುಕಟ್ಟೆಗೆ ಬಿಟ್ಟಿತು. ‘ಆಧುನಿಕತೆ’ಯನ್ನು ವಿವರಿಸಲು ಮತ್ತು ವಿರೋಧಿಸಲು ‘ದೇಸಿ’ ಎಂಬ ಪರಿಕಲ್ಪನೆಯನ್ನು ಹುಟ್ಟು ಹಾಕಲಾಯಿತು. ಜಾಗತೀಕರಣ ನೀತಿಗಳನ್ನು ಜಾರಿಮಾಡಿದ ಸಂದರ್ಭದಲ್ಲೆ ‘ದೇಸಿ’ ಎಂಬುದು ಅದಕ್ಕೆ ಒಂದು ಬಗೆಯ ಪರ್ಯಾಯ ಎಂಬ ತೋರಿಕೆಯನ್ನು ನಿರ್ಮಾಣ ಮಾಡಿದ್ದು ರಾಜಕೀಯವಾಗಿ ಆಕಸ್ಮಿಕವೇನೂ ಅಲ್ಲ. (ಕನ್ನಡದ ‘ಅಕ್ಷರ ಚಿಂತನ ಮಾಲೆ’ಯ ಕೆಲವು ಪಠ್ಯಗಳನ್ನು ಈ ಹಿನ್ನೆಲೆಯಲ್ಲೂ ನೋಡಬಹುದು). ಪರಿಣಾಮವಾಗಿ ವರ್ತಮಾನವನ್ನು ವಿವರಿಸಿಕೊಳ್ಳಲು ಮತ್ತು ಎದುರಿಸಲು ಹಿಂದೆ ಆಗಿಹೋಗಿರುವ ಸಂಗತಿಗಳಲ್ಲಿ ಮತ್ತು ಸಂಕೇತಗಳಲ್ಲಿ ಅಗಾಧವಾದ ಶಕ್ತಿ ಇದೆ ಎಂದು ನಂಬಿಸಲಾಯಿತು ಮತ್ತು ನಂಬಲಾಯಿತು. ಫಲವಾಗಿ ಆಧುನಿಕ ಪೂರ್ವ ಸಮಾಜವನ್ನು, ಮಧ್ಯಯುಗದ ಸಾಮಾಜಿಕ ಸಂಬಂಧಗಳನ್ನು, ಅಲ್ಲಿಯ ಕೆಲವು ಮೌಲ್ಯಗಳನ್ನು ಪರ್ಯಾಯ ಶಕ್ತಿ ಎಂಬಂತೆ ಬಿಂಬಿಸಲಾಯಿತು. ಇದು ದೇಶ, ಭಾಷೆ, ಜೀವನ ಕ್ರಮ ಮುಂತಾದುವನ್ನು ಒಳಗೊಂಡಿರುತ್ತದೆ ಎಂದು ವಿವರಿಸಲಾಯಿತು. ಇದರಲ್ಲಿ ಆಧುನಿಕ ಪೂರ್ವದ ಕೆಲವು ಆಚರಣೆಗಳು ಮತ್ತು ಸಾಹಿತ್ಯಕ ಪಠ್ಯಗಳೂ ಸೇರುತ್ತವೆ. ಸಂಸ್ಕೃತಿ ಎಂಬ ವಿವರಣೆಯಲ್ಲಿ ದೇಸಿ ಸಂಸ್ಕೃತಿ, ನೆಲ ಸಂಸ್ಕೃತಿ, ಅವ್ವ ಸಂಸ್ಕೃತಿ ಮುಂತಾದ ಕೆಲವು ಪದಗಳನ್ನು ಬರೆಯಲಾಗಿದೆ ಅಷ್ಟೆ. ಆ ಪದಗಳ ಬಗ್ಗೆ ಗಂಭೀರವಾದ ತಾತ್ವಿಕ ಚರ್ಚೆ ನಡೆದಿಲ್ಲ.

ಬಹುರಾಷ್ಟ್ರೀಯ ಕಂಪೆನಿಗಳ ಉತ್ಪಾದನೆಗಳಿಗೆ ಬದಲಿಯಾಗಿ ದೇಸಿ ಹೆಸರಿನಲ್ಲಿ ಸ್ಥಳೀಯ ಉತ್ಪಾದನೆಗಳನ್ನು ವೈಭವೀಕರಿಸಲಾಯಿತು. ‘ಪೆಪ್ಸಿಯ ಬದಲು ಎಳೆ ನೀರು’, ‘ಬ್ರಾಂದಿ ವಿಸ್ಕಿಯ ಬದಲು ನೀರಾ’, ‘ನೈಸರ್ಗಿಕ ಕೃಷಿ’, ‘ಶೂನ್ಯ ಬಂಡವಾಳ’ ಎಂಬ ಘೋಷಣೆಗಳನ್ನು ‘ದೇಸಿಯತೆ’ಯ ಹೆಸರಿನಲ್ಲಿ ಜಾಹೀರಾತು ಮಾಡಲಾಗುತ್ತಿದೆ. ಆಕರ್ಷಕವಾದ ಈ ಘೋಷಣೆಗಳನ್ನು ಅವುಗಳ ಮುಖ ಬೆಲೆಯಲ್ಲಿ ತೆಗೆದುಕೊಂಡರೆ ದೇಸಿಯತೆ ಎಂದು ಒಪ್ಪಬಹುದು. ಆದರೆ ಇವನ್ನೆಲ್ಲ ಹಾಗೆ ಮುಖ ಬೆಲೆಯಲ್ಲಿ ಒಪ್ಪಬಾರದು. ಅವುಗಳ ತೋರಿಕೆಯ ಮುಖವಾಡವನ್ನು ಮತ್ತು ನಿಜಸ್ಥಿತಿಯ ಮುಖವನ್ನು ಚರ್ಚಿಸಬೇಕು. ಕೃಷಿ ವಲಯದಲ್ಲಿ ಎಳನೀರು ಮತ್ತು ನೀರಾದ ಉತ್ಪಾದನೆ ಹಾಗೂ ಮಾರಾಟವನ್ನು ವಿಸ್ತರಿಸುತ್ತೇವೆ ಎನ್ನಬಹುದು. ಬಹುರಾಷ್ಟ್ರೀಯ ಕಂಪನಿಗಳಿಗೆ ಇದು ಪರ್ಯಾಯ ಎಂದು ನಂಬುವವರಿಗೆ ನಂಬಿಸಲೂಬಹುದು. ಆದರೆ ದೇಸಿಯತೆಯ ಪ್ರಶ್ನೆ ರಾಜಕೀಯವಾಗಿ ಮುಗ್ಗರಿಸುವುದೇ ಇಲ್ಲಿ. ತೆಂಗಿನ ತೋಟದ ಮಾಲೀಕರು ತಮ್ಮ ಉತ್ಪಾದನೆ ಮತ್ತು ಲಾಭವನ್ನು ಹೆಚ್ಚು ಮಾಡಿಕೊಳ್ಳಬಹುದು. ಅದು ಭೂಮಾಲೀಕ ವರ್ಗಕ್ಕೆ ದೇಸಿ ಎನಿಸಬಹುದು. ಆದರೆ ಇದೇ ಪ್ರಶ್ನೆ ಅಲ್ಲಿಯ ದುಡಿಯುವ ವರ್ಗಕ್ಕೆ ಅನ್ವಯವಾಗುತ್ತದೆಯೇ? ದುಡಿಯುವ ಜನರನ್ನು ಹೆಚ್ಚು ಹೆಚ್ಚು ಶೋಷಣೆ ಮಾಡದೆ ಮಾಲೀಕರ ಲಾಭ ಹೆಚ್ಚುವುದಿಲ್ಲ. ಅವರ ಲಾಭ ಹೆಚ್ಚದೆ ಅವರ ದೇಸಿ ಹುಟ್ಟುವುದಿಲ್ಲ. ದುಡಿಯುವವರನ್ನು ಶೋಷಣೆ ಮಾಡದೆ ನೈಸರ್ಗಿಕ ಕೃಷಿ ನಡೆಯಲಾರದು; ಏಳನೀರು, ನೀರಾ ಸೃಷ್ಟಿಯಾಗಲಾರದು. ಅಂದರೆ ದುಡಿಯುವ ಜನರ ಶೋಷಣೆಯನ್ನು ಮಾಲೀಕ ವರ್ಗದ ನೆಲೆಯಲ್ಲಿ ನಿಂತು ದೇಸಿ ಎಂದು ವೈಭವೀಕರಿಸಲಾಗುತ್ತಿದೆ. ಆ ಕಾರಣಕ್ಕೆ ಆ ಘೋಷಣೆಗಳು ಆಕರ್ಷಕವಾಗಿವೆ. ಅವನ್ನು ಜನಪ್ರಿಯಗೊಳಿಸಲಾಗುತ್ತಿದೆ. ಅದೇ ಕಾಲಕ್ಕೆ ದುಡಿಯುವ ಜನರ ಮೇಲೆ ನಡೆಸುವ ಶ್ರಮ ಶೋಷಣೆಯನ್ನು ಈ ಘೋಷಣೆಗಳ ಮುಖವಾಡದಲ್ಲಿ ನಯವಾಗಿ ಮುಚ್ಚಿಡಲಾಗಿದೆ. ‘ಅವರ ತೆಂಗಿನ ತೋಟದಲ್ಲಿ ನಮ್ಮ ರಕ್ತದ ಎಳೆ ನೀರು’ ಎಂಬ ಸಿದ್ಧಲಿಂಗಯ್ಯ ನವರ ಪದ್ಯಭಾಗವನ್ನು ಈ ಹಿನ್ನೆಲೆಯಲ್ಲಿ ಚರ್ಚಿಸಬೇಕು. ‘ನೈಸರ್ಗಿಕ ಕೃಷಿ, ನೀರಾ ಮತ್ತು ಎಳನೀರುಗಳು ಪರ್ಯಾಯ (ದೇಸಿ ಎಂಬ ಅರ್ಥದಲ್ಲಿ) ಎಂಬ ಧೋರಣೆಯ ಹಿಂದೆ ಇವುಗಳ ಉತ್ಪಾದನೆಗಾಗಿ ರಕ್ತ ಬೆವರು ಹರಿಸುವ ಶ್ರಮಜೀವಿಗಳ ಶೋಷಣೆಯ ಸಮರ್ಥನೆ ಕೂಡ ಇದೆ ಎಂಬುದನ್ನು ಒತ್ತಿ ಹೇಳಬೇಕಗಿದೆ. ದುಡಿಯುವ ಜನರನ್ನು ಬಹುರಾಷ್ಟ್ರೀಯ ಕಂಪನಿಗಳು ಸುಲಿಗೆ ಮಾಡಿದರೇನು? ದೇಸಿ ಭೂಮಾಲೀಕರು ಸುಲಿಗೆ ಮಾಡಿದರೇನು? ಅದು ಸುಲಿಗೆ ಸುಲಿಗೆಯೇ. ಯಾಕೆಂದರೆ ‘ಕತ್ತಿ ಪರಕೀಯರದಾದರೆ ಮಾತ್ರ ನೋವೆ? ನಮ್ಮವರೆ ಹದ ಹಾಕಿ ತಿವಿದರೆ ಅದು ಹುವೆ?’ ಹೂವಿನ ರೂಪದ ಕತ್ತಿಯನ್ನೆ ‘ದೇಸಿಯತೆ’ ಎಂದು ಪರಿಗಣಿಸಿದರೆ ದುಡಿಯುವ ವರ್ಗದ ಪಾಲಿಗೆ ಅದಕ್ಕಿಂತ ಅಪಾಯ ಇನ್ನೇನು ಬೇಕು? ದೇಸಿಯತೆಯ ಹಿಂದೆ ಮಾರುಕಟ್ಟೆಯ ಹಿತಾಸಕ್ತಿ ಇದೆ. ಇದು ನಿಸ್ಸಂದೇಹವಾಗಿ ವರ್ಗಹಿತಾಸಕ್ತಿ. ಹಾಗಾಗಿ ಮಾಲೀಕ ವರ್ಗಕ್ಕೆ ಯಾವುದು ದೇಸಿಯೊ ಅದು ಕಾರ್ಮಿಕ ವರ್ಗಕ್ಕೆ ದೇಸಿಯಲ್ಲ; ಶಾಪ. ಕಾರ್ಮಿಕ ವರ್ಗಕ್ಕೆ ದೇಸಿ ಎಂದರೆ ಅವರ ಮೇಲೆ ನಡೆಸಲಾಗುತ್ತಿರುವ ಎಲ್ಲಾ ಶೋಷಣೆಗಳಿಂದ ಅವರು ಬಿಡುಗಡೆ ಪಡೆಯುವುದು. ಮಾರುಕಟ್ಟೆಯು ತನ್ನನ್ನು ವಿಸ್ತರಿಸಿಕೊಳ್ಳಲು ಉತ್ಪಾದಕ ವರ್ಗದ ಮೇಲೆ ನಡೆಸಲಾಗುತ್ತಿರುವ ಶೋಷಣೆಯನ್ನು ಮುಚ್ಚಿಡುತ್ತಿದೆ. ಮಾರುಕಟ್ಟೆಯ ಈ ಧೋರಣೆಯಲ್ಲೆ ದೇಸಿಯತೆಯನ್ನು ವೈಭವೀಕರಿಸುವ ಬೌದ್ಧಿಕ ಕೆಲಸಗಳು ನಡೆಯುತ್ತಿವೆ. ಆದ್ದರಿಂದ ಅಸಲಿ ದೇಸಿಯತೆ ಯಾವುದು ಮತ್ತು ನಕಲಿ ದೇಸಿಯತೆ ಯಾವುದು ಎಂಬುದರ ಬಗ್ಗೆ ಎಚ್ಚರ ವಹಿಸುವ ಅಗತ್ಯವಿದೆ.

ಬಹುರಾಷ್ಟ್ರೀಯ ಕಂಪನಿಗಳ ಮತ್ತು ಕಾರ್ಪೋರೇಟ್ ಪರಿವಾರಗಳ ಮಾರುಕಟ್ಟೆಯ ಮುಂದೆ ಮಧ್ಯಮ ಹಾಗೂ ಕೆಳಮಧ್ಯಮ ಭೂಮಾಲಿಕ ವರ್ಗ ಬಿಕ್ಕಟ್ಟನ್ನು ಎದುರಿಸುತ್ತಿದೆ. ಭೂಮಾಲೀಕ ವರ್ಗ ರಾಜಕೀಯ ಪರ್ಯಾಯದ ಗೊಂದಲದಲ್ಲಿದೆ. ಅದಕ್ಕಾಗಿ ಅದು ಆ ಬಗೆಗೆ ಹುಡುಕಾಟ ನಡೆಸಿದೆ. ಈ ಹುಡುಕಾಟದಲ್ಲಿ ಸಾಮ್ರಾಜ್ಯಶಾಹಿ ಪ್ರಣೀತ ಎನ್.ಜಿ.ಓ.ಗಳು ಸೇರಿಕೊಂಡಿವೆ. ಕೃಷಿ ವಲಯದ ಕೆಲವು ಉತ್ಪಾದನೆಗಳಿಗೆ ಅವು ಸ್ಥಳೀಯ ಮಾರುಕಟ್ಟೆ ಒದಗಿಸಲು ಮುಂದಾಗಿವೆ. ಇದಕ್ಕೆ ಸಂಬಂಧಿಸಿದಂತೆ ಅವು ವೈಚಾರಿಕ ಧೋರಣೆಗಳನ್ನು ತಯಾರು ಮಾಡುತ್ತಿವೆ. ಹಿಗೆ ತಮ್ಮ ಹಿತಾಸಕ್ತಿಯ ಕುಲುಮೆಯಿಂದ ತಯಾರು ಮಾಡಿದ ಧೋರಣೆಗಳನ್ನು ಕೃಷಿ ವಲಯದ ಪರ್ಯಾಯದ ನೆಲೆಯಲ್ಲಿ ಹುಟ್ಟಿದವು ಎಂದು ನಂಬಿಸಲಾಗುತ್ತಿದೆ. ಆ ಕಾರಣಕ್ಕೆ ಹಾಗೆಂದು ನಂಬಲಾಗಿದೆ. ಸಾಮ್ರಾಜ್ಯಶಾಹಿ ರಾಜಕೀಯಕ್ಕೆ ವಿರುದ್ಧವಾಗಿ ಆಲೋಚನೆ ಮಾಡಬಾರದು ಮತ್ತು ಆಚರಣೆಗೆ ಇಳಿಯಬಾರದು ಎಂಬುದೇ ಅವುಗಳ ಕೇಂದ್ರ ತರ್ಕ. ಹಾಗಾಗಿ ಬಹುರಾಷ್ಟ್ರೀಯ ಕಂಪನಿಗಳಿಗೆ ವಿರುದ್ಧವಾಗಿ ಹುಸಿ ಪರ್ಯಾಯಗಳನ್ನು, ನಕಲಿ ಪರ್ಯಾಯಗಳನ್ನು ಸೃಷ್ಟಿ ಮಾಡಲಾಗುತ್ತಿದೆ. ವೈಚಾರಿಕವಾಗಿ ಇದನ್ನು ‘ಶೂದ್ರ’ ‘ಅವೈದಿಕ’ ಮುಂತಾದ ಪದಗಳಲ್ಲಿ ಕರೆಯಲಾಗುತ್ತಿದೆ. ಹೀಗೆ ಕರೆಯುವ ಮೂಲಕ ರಾಜಕೀಯ ಆರ್ಥಿಕ ವಸ್ತುಸ್ಥಿತಿಯ ಬಗೆಗೆ ಗಮನ ಕೊಡದೆ, ಅದನ್ನು ವರ್ಣ ಚೌಕಟ್ಟಿನಲ್ಲಿ ಗ್ರಹಿಸುವಂತೆ ಪ್ರಚೋದಿಸಲಾಗಿದೆ. ಆದ್ದರಿಂದಲೆ ೯೦ರ ದಶಕದ ನಂತರ ಈ ‘ಶೂದ್ರ’ ಮತ್ತು ‘ಅವೈದಿಕ’ ವಿಚಾರಗಳು ಸಾಂಸ್ಕೃತಿಕ ಪರ್ಯಾಯದ ಹಸರಿನಲ್ಲಿ ಕಾಣಿಸಿಕೊಂಡವು. ಆದರೆ ಅವುಗಳ ಅಸಲಿತನ ಏನಾಗಿತ್ತು ಎಂದರೆ ರಾಜಕೀಯ ಆರ್ಥಿಕ ಸುಲಿಗೆಯನ್ನು ನಯವಾಗಿ ಮುಚ್ಚಿಡುವುದೇ ಆಗಿತ್ತು. ಒಬಾಮಾ ಅಮೇರಿಕ ಅಧ್ಯಕ್ಷನಾದಾಗ ಈ ವರ್ಣ ಚೌಕಟ್ಟಿನಲ್ಲೆ ಆತನನ್ನು ಗುರುತಿಸಲಾಯಿತು. ಆತನನ್ನು ಹೊಗಳಿ, ವೈಭವೀಕರಿಸಲಾಯಿತು. ಇದು ವೈಚಾರಿಕ ದೌರ್ಬಲ್ಯಕ್ಕೆ ಮೇರುಸಾಕ್ಷಿ. ಶತ್ರುವನ್ನು ಮಿತ್ರನಂತೆಯೂ, ಮಿತ್ರನನ್ನು ಶತ್ರುವಿನಂತೆಯೂ ಪರಿಗಣಿಸುವ ಎಡಬಿಡಂಗಿತನಕ್ಕೆ ಒಂದು ಉದಾಹರಣೆ. ಈ ಕಾರಣಕ್ಕಾಗಿಯೇ ಸಾಹಿತ್ಯ ರಚನೆ, ಸಾಹಿತ್ಯ ವಿಮರ್ಶೆ ಮತ್ತು ಸಂಶೋಧನೆಗಳನ್ನು ಬಲಾತ್ಕಾರವಾಗಿ ಮತ್ತೊಮ್ಮೆ ಈ ವರ್ಣ ಚೌಕಟ್ಟಿಗೆ ಬಂಧಿಸಲಾಗುತ್ತಿದೆ. ಆದ್ದರಿಂದ ಸಾಹಿತ್ಯದಲ್ಲಿ ದೇಸಿಯತೆಯ ಹುಡುಕಾಟವು ಈ ರಾಜಕೀಯ ಅಪಾಯಗಳನ್ನು ಅರಿಯುವ ಮತ್ತು ಅವುಗಳಿಂದ ಹೊರಬರುವ ಅಗತ್ಯವಿದೆ. ಇಲ್ಲದಿದ್ದರೆ ‘ಪೆಪ್ಸಿಗೆ ಬದಲಾಗಿ ಎಳನೀರು’ ಎಂಬುದು ದುಡಿಯುವ ವರ್ಗದ ಮೇಲಿನ ಶೋಷಣೆಯನ್ನು ಮುಚ್ಚಿಡುವಂತೆ, ‘ಬ್ರಾಹ್ಮಣ ಸಾಹಿತ್ಯಕ್ಕೆ ಬದಲಾಗಿ ಶೂದ್ರ ಸಾಹಿತ್ಯ’ ಎಂಬುದು ಸಾಮ್ರಾಜ್ಯಶಾಹಿ ಶೋಷಣೆಯನ್ನು ಮುಚ್ಚಿಡುತ್ತದೆ. ದೇಸಿಯತೆ ಎಂಬುದರಲ್ಲಿ ದಾರಿಗಳಿಗಿಂತ ಅಪಾಯಕಾರಿ ಆಯ್ಕೆಗಳೆ ಹೆಚ್ಚಾಗಿವೆ. ಈ ಬಗ್ಗೆ ಹೆಚ್ಚುವರಿ ಎಚ್ಚರಿಕೆಯ ಅಗತ್ಯವಿದೆ.