ಸಾಹಿತ್ಯ ಸಂಶೋಧನೆಯಲ್ಲಿ ಸಂಸ್ಕೃತಿಯ ಚರ್ಚೆ ಒಂದು ಮುಖ್ಯ ಪ್ರವೃತ್ತಿಯಾಗಿದೆ. ಲೇಖನಗಳ ಶೀರ್ಷಿಕೆಗಳಿಂದ ಮೊದಲುಗೊಂಡು, ವಿಚಾರ ಸಂಕಿರಣಗಳು, ಕಮ್ಮಟಗಳು ಹೀಗೆ ಸಾಗಿ, ಸಂಶೋಧನೆಯ ಶೀರ್ಷಿಕೆಯವರೆಗೂ ಸಂಸ್ಕೃತಿ ಕುರಿತ ಚರ್ಚೆಯ ವಿಸ್ತಾರ ಮತ್ತು ವ್ಯಾಪ್ತಿ ಇದೆ. ಸಾಹಿತ್ಯ ಚರ್ಚೆ, ವಿಮರ್ಶೆ ಮತ್ತು ಸಂಶೋಧನೆಗಳ ವ್ಯಾಪ್ತಿಯಲ್ಲಿ ಸಂಸ್ಕೃತಿ ಎಂಬ ಪದವನ್ನು ಬಿಟ್ಟು ಅದನ್ನು ನಡೆಸಾಗದು ಎನ್ನುವಷ್ಟರ ಮಟ್ಟಿಗೆ ಅದರ ಬಳಕೆಯ ದಟ್ಟಣೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಸಂಶೋಧನೆಯಲ್ಲಿ ಸಂಸ್ಕೃತಿ ಎಂಬುದರ ಚರ್ಚೆಯ ತೊಡಕು, ಸವಾಲುಗಳು ಹಾಗೂ ಸಾಧ್ಯತೆಗಳನ್ನು ಕುರಿತು ಚರ್ಚಿಸಲಾಗುವುದು.

ಸಂಶೋಧನ ಬರವಣಿಗೆಗಳಲ್ಲಿ ಸಂಸ್ಕೃತಿ ಎಂದರೆ ಏನು ಎಂಬುದಕ್ಕೆ ಅರ್ಥವಿವರಣೆ, ವಿಶ್ಲೇಷಣೆ ಮತ್ತು ವ್ಯಾಖ್ಯಾನಗಳನ್ನು ಸಂಗ್ರಹಿಸಲಾಗುತ್ತದೆ. ಅವು ಮಾನವಶಾಸ್ತ್ರ, ಸಮಾಜಶಾಸ್ತ್ರ ಮುಂತಾದ ಜ್ಞಾನಶಿಸ್ತುಗಳಲ್ಲಿ ಮಾಡಲಾಗಿರುವ ವ್ಯಾಖ್ಯಾನಗಳಾಗಿರುತ್ತವೆ. ಸಾಹಿತ್ಯ ಸಂಶೋಧನೆಗೆ ಅವು ಸರಿಹೊಂದುತ್ತವೊ ಇಲ್ಲವೊ ಎಂಬ ಪ್ರಶ್ನೆಯನ್ನು ಅಲ್ಲಿ ಕೇಳಿಕೊಳ್ಳುತ್ತಿಲ್ಲ. ಎಷ್ಟೋ ಸಲ ಹೀಗೆ ಆಯ್ಕೆ ಮಾಡುವ ಕೆಲವು ಹೇಳಿಕೆಗಳು ಅತ್ಯಂತ ದುರ್ಬಲ ಬರವಣಿಗೆಗಳಿಂದಲೂ ಎರವಲು ಪಡೆದವುಗಳಾಗಿರುತ್ತವೆ. ಅಥವಾ ಇನ್ನೂ ಕೆಲವು ಸಲ ಇಂತಹ ಹೇಳಿಕೆಗಳು ಎಷ್ಟೋ ಬರವಣಿಗೆಗಳನ್ನು ದಾಟಿಕೊಂಡು ಬಂದವೂ ಆಗಿರುತ್ತವೆ. ಸಂಶೋಧಕರು ಅವನ್ನು ಉಲ್ಲೇಖ ಮಾಡುವ ಹೊತ್ತಿಗೆ ಆ ಹೇಳಿಕೆಗಳಲ್ಲಿ ಕೆಲವು ಪೂರ್ವ ಎಂಬುದು ಪಶ್ಚಿಮ ಎಂಬಂತೆಯೂ, ಪಶ್ಚಿಮ ಎಂಬುದು ಪೂರ್ವ ಎಂಬಂತೆಯೂ ತಿರುಗುಮುರುಗು ಆಗಿರುತ್ತವೆ. ಸಂಸ್ಕೃತಿಯನ್ನು ಕುರಿತು ಹೇಳಿಕೆಗಳನ್ನು ಸಂಗ್ರಹಿಸಿದ ನಂತರ, ಅಂತಹ ಹೇಳಿಕೆಗಳ ದೃಷ್ಟಿಕೋನ, ಮತ್ತು ಅವುಗಳ ಧೋರಣೆಗಳನ್ನು ಚರ್ಚೆ ಮಾಡುವುದಿಲ್ಲ. ಕೊನೆಗೂ ಸಂಶೋಧಕರ ಆಯ್ಕೆಯ ಸಂಸ್ಕೃತಿಯ ವ್ಯಾಖ್ಯಾನ ಯಾವುದು ಎಂಬುದು ಅಥವಾ ಸಾಹಿತ್ಯವು ನಿರೂಪಿಸುವ ಸಂಸ್ಕೃತಿಯ ವ್ಯಾಖ್ಯಾನ ಯಾವುದು ಎಂಬುದು ನಿರೂಪಿತವಾಗುವುದೇ ಇಲ್ಲ. ಸಂಸ್ಕೃತಿ ಎಂಬುದಕ್ಕೆ ಸಾಹಿತ್ಯದ ಮೂಲಕ ಸೃಷ್ಟಿಯಾಗುವ ವ್ಯಾಖ್ಯಾನವೇ ಬೇರೆ; ಸಂಸ್ಕೃತಿಗೆ ಸಾಹಿತ್ಯ ವಿಮರ್ಶಕರು ಕೊಡುವ ವ್ಯಾಖ್ಯಾನವೇ ಬೇರೆ. ಮಾನವಶಾಸ್ತ್ರ ಮತ್ತು ಸಮಾಜ ಶಾಸ್ತ್ರಗಳು ಕೊಡುತ್ತಿರುವ ವ್ಯಾಖ್ಯಾನಗಳೇ ಬೇರೆ. ಆದರೆ ಸಾಹಿತ್ಯ ಸಂಶೋಧನೆಯಲ್ಲಿ ಇವೆಲ್ಲ ಕಲಸುಮೇಲೋಗರವಾಗುತ್ತಿವೆ.

ಸಾಮಾನ್ಯವಾಗಿ ಸಂಸ್ಕೃತಿ ಎಂಬುದನ್ನು ಬದುಕಿನ ವಿವರಗಳು, ಜೀವನ ವಿಧಾನ, ಜೀವನ ಶೈಲಿ ಎಂಬುದಾಗಿ ವಿವರಿಸಿಕೊಳ್ಳಲಾಗುತ್ತದೆ. ಈ ವಿವರಣೆಯು ಸಾಹಿತ್ಯ ಕೃತಿಗಳು ಸಂಸ್ಕತಿಯನ್ನು ಮತ್ತು ಸಂಸ್ಕೃತಿಗಳನ್ನು ದಾಖಲಿಸುತ್ತವೆ ಎಂಬ ಗ್ರಹಿಕೆಗೆ ಎಡೆಮಾಡುತ್ತದೆ. ಹಾಗಾಗಿ ಸಾಹಿತ್ಯ ಕೃತಿಗಳಲ್ಲಿ ದಾಖಲಾಗಿರುವ ಸಂಸ್ಕೃತಿಯ ವಿವರಗಳನ್ನು ಗುರುತಿಸುವ ಮತ್ತು ಅವುಗಳನ್ನು ಅಲ್ಲಿಂದ (ಸಾಹಿತ್ಯ ಪಠ್ಯಗಳಿಂದ) ಆಯ್ಕೆ ಮಾಡುವ ಕೆಲಸ ಮೊದಲಾಗುತ್ತದೆ. ಈ ಗ್ರಹಿಕೆಯ ಪ್ರಕಾರ ಸಾಹಿತ್ಯ ಕೃತಿಯಲ್ಲಿರುವ ಸಂಸ್ಕೃತಿಯ ವಿವರಗಳು ಬಹುತೇಕ ಸಿದ್ಧಮಾದರಿಯವು ಎಂದು ತಿಳಿಯಲಾಗುತ್ತದೆ. ಹಾಗಿದ್ದರೆ ಅವು ಸಾಹಿತ್ಯ ಕೃತಿಗಳಲ್ಲಿ ದಾಖಲಾಗುವ ಇಲ್ಲವೆ ಜಾಗ ಪಡೆಯುವ ಕ್ರಮಗಳನ್ನು ಕೆಲವು ಪೂರ್ವ ತೀರ್ಮಾನಗಳ ಮೂಲಕವೇ ನಂಬಲಾಗುತ್ತದೆ. ಸಾಹಿತ್ಯ ಕೃತಿಗಳು ತಾವು ಹುಟ್ಟುವ ಕಾಲದ (ಚರಿತ್ರೆಯ ಕಾಲದ ಅಥವಾ ವರ್ತಮಾನ ಕಾಲದ) ಸಾಂಸ್ಕೃತಿಕ ವಸ್ತುಸ್ಥಿತಿಯನ್ನು ಅವು ಇದ್ದಂತೆಯೇ ಹೊತ್ತು ತರುತ್ತವೆ. ಸಾಹಿತ್ಯ ಕೃತಿಯಲ್ಲಿನ ಸಂಸ್ಕೃತಿಯ ವಿವರಗಳು ಸಾಹಿತ್ಯ ಕೃತಿ ರಚನೆಯಾದ ಕಾಲದ ಮಾಹಿತಿಯನ್ನು, ವಿವರವನ್ನು ಕೊಡುತ್ತವೆ. ಅಂದರೆ ಕೃತಿಯಲ್ಲಿರುವ ಸಂಸ್ಕೃತಿಯ ವಿವರಗಳು ಆ ಕೃತಿ ರಚನೆಯಾದ ಕಾಲದ ಬಗ್ಗೆಯೂ ನಿರ್ಣಯ ಕೊಡುತ್ತದೆ. ಉದಾಹರಣೆಗೆ ಸಾಹಿತ್ಯ ಕೃತಿಯೊಂದರಲ್ಲಿ ‘ಪೊಳಲು’ ಎಂಬ ಪದಪ್ರಯೋಗ ಬಂದಿದ್ದರೆ ಅದರ ಚರ್ಚೆಯ ಮೂಲಕವೇ ಕೃತಿ ರಚನೆ ಕಾಲದ ನಿರ್ಣಯ ಮಾಡಲಾಗುತ್ತದೆ. ಅದೇ ರೀತಿಯಲ್ಲಿ ‘ಐ ವಾಂಟ್‌ಟುಬಿ ಇನ್‌ಮೈ ಹೌಸ್’ ಎಂಬ ಸಾಲೊಂದು ಬಂದರೆ ಅದರ ಚರ್ಚೆಯ ಮೂಲಕ ಸಾಹಿತ್ಯ ಕೃತಿಯ ಕಾಲ ನಿರ್ಣಯ ಮಾಡಲಾಗುತ್ತದೆ. ಪ್ರತಿಯೊಂದು ಕಾಲಕ್ಕೂ ಅದರದೇ ಆದ ಭಾಷಿಕ ಪ್ರಯೋಗ, ಸಾಮಾಜಿಕ ಸಂಬಂಧ ಮತ್ತು ಜೀವನ ಮೌಲ್ಯಗಳು ಇರುತ್ತವೆ ಎಂಬುದು ಇಲ್ಲಿಯ ನಂಬಿಕೆ.

ಕರ್ತೃ ಯಾರೆಂಬುದನ್ನು ಮೊದಲೇ ತೀರ್ಮಾನಿಸಿಕೊಳ್ಳುವುದು ಅಥವಾ ‘ಖಚಿತ’ ಪಡಿಸಿಕೊಳ್ಳುವುದು ಇಲ್ಲಿಯ ಮತ್ತೊಂದು ಗ್ರಹಿಕೆ. ಕರ್ತೃವಿನ ಸಾಮಾಜಿಕ ಧಾರ್ಮಿಕ ಮೂಲ, ಲಿಂಗ ಸಂಬಂಧದ ಸಂಗತಿಗಳನ್ನು ‘ಖಚಿತ’ಪಡಿಸಿಕೊಳ್ಳಲಾಗುತ್ತದೆ. ಈ ಅಂಶಗಳಿಗೆ ಸಂಬಂಧಿಸಿದಂತೆ ಕರ್ತೃವು ಯಾರು ಎಂಬ ಸಂಗತಿಯನ್ನು ಕೃತಿಯ ಚರ್ಚೆಯಲ್ಲಿ ಸಾಂದರ್ಭಿಕವಾಗಿ ತರಲಾಗುತ್ತದೆ. ಪಂಪನ ಕಾವ್ಯಗಳನ್ನು ಚರ್ಚೆ ಮಾಡುವಾಗ, ಪಂಪ ಬ್ರಾಹ್ಮಣನಾಗಿದ್ದವನು ಜೈನನಾದ ಎಂಬ ಮಾಹಿತಿಯನ್ನು, ಬಸವಣ್ಣ ಬ್ರಾಹ್ಮಣನಾಗಿದ್ದವನು ವೀರಶೈವನಾದ ಎಂಬ ಮಾಹಿತಿಯನ್ನು ಬಳಸಿಕೊಳ್ಳಲಾಗುತ್ತದೆ. ಅಂತೂ ಬರಹಗಾರರ ಧರ್ಮ, ಜಾತಿ ಮತ್ತು ಲಿಂಗ ಈ ಅಂಶಗಳು ಕೃತಿಯನ್ನು ಅರ್ಥೈಸಿಕೊಳ್ಳಲು ಸಮರ್ಥ ಆಧಾರಗಳನ್ನು ಒದಗಿಸುತ್ತವೆ ಎಂಬ ನಂಬಿಕೆ ಇಲ್ಲಿದೆ. ಕರ್ತೃವಿನ ಜೀವನ ವಿವರಗಳಿಗೂ ಕೃತಿಯ ವಿವರಗಳಿಗೂ ತಾಳೆ ಮಾಡಲಾಗುತ್ತದೆ. ಈ ಬಗೆಯ ಓದನ್ನು ಆತ್ಮಕಥನಾತ್ಮಕ ಮಾದರಿ ಎಂದು ಕರೆಯಲಾಗುತ್ತದೆ. ಕೃತಿಯ ಸಂಸ್ಕೃತಿಯ ವಿಶಿಷ್ಟತೆ ಮತ್ತು ಅದರ ಸಾಂಸ್ಕೃತಿಕ ದರ್ಶನವು ಕರ್ತೃವಿನ ಅನುಭವ ಹಾಗೂ ಅವರ ಲೋಕದೃಷ್ಟಿಯ ಫಲವೆಂದು ತಿಳಿಯಲಾಗುತ್ತದೆ. ಅಂದರೆ ಕರ್ತೃವಿನ ಬಗೆಗಿನ ಮಾಹಿತಿಗಳೂ, ವಿವರಗಳು ಕೃತಿಯ ಒಡಲಲ್ಲಿ ದಾಖಲಾಗಿರುತ್ತವೆ ಎಂಬದನ್ನು ಒಪ್ಪಕೊಂಡಿರುವುದರಿಂದ ಈ ಬಗೆಯ ಮಾಹಿತಿ ಇಲ್ಲಿ ಮುಖ್ಯವಾಗಿದೆ.

ಕರ್ತೃವಿನ ಎಲ್ಲಾ ಬಗೆಯ (ಜಾತಿ, ಒಳಜಾತಿ, ಧರ್ಮ, ಸಮುದಾಯ, ಲಿಂಗ, ವೃತ್ತಿ, ಪ್ರದೇಶ ಮುಂತಾದವು) ಮಾಹಿತಿಗಳನ್ನು ಆಧರಿಸಲಾಗುತ್ತದೆ. ಸಾಹಿತ್ಯ ಕೃತಿಗಳು ಈ ಹಿನ್ನೆಲೆಗಳನ್ನು ಆಧರಿಸಿಯೇ ಹುಟ್ಟುತ್ತವೆ ಎಂಬುದು ಇಲ್ಲಿಯ ನಂಬಿಕೆ. ಆ ಹಿನ್ನೆಲೆಗಳಿಂದಲೇ ಸಂಸ್ಕೃತಿಯು ಮೈದಾಳುತ್ತದೆ ಅಥವಾ ಸಾಹಿತ್ಯ ಕೃತಿಗಳಲ್ಲಿ ರೂಪುಗೊಂಡಿರುವ ಸಂಸ್ಕೃತಿ ವಿಶಿಷ್ಟತೆಗೆ ಆ ಹಿನ್ನೆಲೆಗಳೇ ಕಾರಣ. ಅದರಿಂದ ಕೃತಿಲೋಕದ ಸಂಸ್ಕೃತಿಯ ವಿಶಿಷ್ಟತೆಗೂ ಅದರ ಹಿನ್ನೆಲೆಗಳಲ್ಲಿರುವ ಸಂಸ್ಕೃತಿಯ ವಿಶಿಷ್ಟತೆಗೂ ನೇರ ಸಂಬಂಧವಿದೆ ಎಂಬುದು ಇಲ್ಲಿಯ ಗ್ರಹಿಕೆ. ಸಾಹಿತ್ಯ ಕೃತಿಗಳಲ್ಲಿ ಸಂಸ್ಕೃತಿ ಎಂಬುದು ಮಾಹಿತಗಳ ರೂಪದಲ್ಲಿ, ಆಶಯಗಳ ರೂಪದಲ್ಲಿ ವ್ಯಕ್ತವಾಗಿರುತ್ತದೆ ಎಂದು ಇಲ್ಲಿ ತಿಳಿಯಲಾಗುತ್ತದೆ. ಸಾಮಾಜಿಕವಾಗಿ ಬದಲಾವಣೆಗಳು ನಡೆಯುತ್ತಿದ್ದರೂ ಕೂಡ ಸಂಸ್ಕೃತಿಯು ಆ ಸಾಮಾಜಿಕ ಬದಲಾವಣೆಗಳಲ್ಲಿ ‘ಬದಲಾದ ಮೌಲ್ಯಗಳನ್ನು, ನಂಬಿಕೆಗಳನ್ನು, ಪ್ರವೃತ್ತಿಗಳನ್ನು , ಸ್ವಭಾವಗಳನ್ನು ಮತ್ತು ಪ್ರಜ್ಞೆಗಳನ್ನು ದಾಖಲಿಸುತ್ತದೆ ಎಂಬುದು ಇಲ್ಲಿಯ ಗ್ರಹಿಕೆ. ಹೀಗೆ ಬದಲಾಗದ ಅಂಶಗಳೆಲ್ಲವೂ ಕರ್ತೃಕೇಂದ್ರಿತವೇ, ಕರ್ತೃಮೂಲದವೇ ಎಂಬುದು ಇಲ್ಲಿಯ ಮೂಲನಂಬಿಕೆ. ‘ನಾಲಿಗೆ ಕುಲಮಂ ತಬ್ಬುವ ವೋಲ್’ ಎಂಬ ಮಾದರಿ ಇದು.

ಬೇರೆ ಬೇರೆ ಹಿನ್ನಲೆಗಳಿಂದ ಬಂದ ಬರಹಗಾರರು ತಮ್ಮ ಹಿನ್ನೆಲೆಗಳ ಯಥಾವತ್ತಾದ ಸಂಸ್ಕೃತಿಯನ್ನು ತಮ್ಮ ಕೃತಿಗಳಲ್ಲಿ ದಾಖಲಿಸುತ್ತಾರೆ ಎಂಬ ನಂಬಿಕೆಯನ್ನು ಮತ್ತೊಂದು ಆಯಾಮದಿಂದ ಮರುವಿಮರ್ಶೆ ಮಾಡಬಹುದು. ಮಹಿಳೆಯರು ಅತ್ಮಕಥೆಗಳನ್ನು ಪುರುಷರು ಬರೆದಷ್ಟು ಪ್ರಮಾಣದಲ್ಲಿ ಯಾಕೆ ಬರೆದಿಲ್ಲ? ಈ ಪ್ರಶ್ನೆಯನ್ನು ವಿವರಿಸುವುದು ಅಥವಾ ಚರ್ಚಿಸುವುದು ಸುಲಭವೇನೂ ಅಲ್ಲ. ಪುರುಷರು ತಮ್ಮ ಅನುಭವಗಳನ್ನು ಆತ್ಮಕತೆಗಳ ಪ್ರಕಾರದಲ್ಲಿ ಅಭಿವ್ಯಕ್ತಿಸಿದ ಕ್ರಮದಲ್ಲಿ ಮಹಿಳೆಯರಿಗೆ ಅಭಿವ್ಯಕ್ತಿಸಲು ಆಗದೆ ಇರಬಹುದು. ಈ ಸಮಸ್ಯೆ ಸಾಮಾಜಿಕವಾದುದು. ಆಗ ಬರಹಗಾರರು ತಮ್ಮ ಹಿನ್ನೆಲೆಗಳ ಸಂಸ್ಕೃತಿಯ ವಿವರಗಳನ್ನು ಸಾಹಿತ್ಯದಲ್ಲಿ ಅಭಿವ್ಯಕ್ತಿಸುವಾಗ ಕೆಲವನ್ನು ಆಯ್ಕೆಮಾಡಿಕೊಳ್ಳುತ್ತಾರೆ; ಮತ್ತೆ ಕೆಲವನ್ನು ಆಯ್ಕೆಮಾಡಿಕೊಳ್ಳದೆ ನಿರಾಕರಿಸುತ್ತಾರೆ. ಹೀಗೆ ನಿರಾಕರಣೆಗೆ ಒಳಗಾಗುವ ಸಂಸ್ಕೃತಿಯ ವಿವರಗಳು ಸಂಶೋಧನ ಗ್ರಹಿಕೆಗೆ ಸಿಗದೆ ಹೋಗಬಹುದು. ಈ ದೃಷ್ಟಕೋನದಲ್ಲಿ ನೋಡಿದರೆ ಆಯಾ ಹಿನ್ನೆಲೆಗಳ ಬರಹಗಾರರು ತಮ್ಮ ಹಿನ್ನೆಲೆಗಳ ‘ಸಂಸ್ಕೃತಿಯ ಎಲ್ಲ ವಿವರಗಳನ್ನು’ ಸಾಹಿತ್ಯದಲ್ಲಿ ಅಭಿವ್ಯಕ್ತಿಸಿರುತ್ತಾರೆ ಎಂಬುದನ್ನು ಸರಳೀಕರಿಸಲು ಹಾಗೂ ನೇರವಾಗಿ ಒಪ್ಪಲು ಆಗುವುದಿಲ್ಲ. ತಮ್ಮ ಹಿನ್ನೆಲೆಯ ಸಂಸ್ಕೃತಿ ವಿವರಗಳಲ್ಲಿ ಕೆಲವನ್ನು ಸಾಹಿತ್ಯ ಕೃತಿಯಲ್ಲಿ ಬಿಚ್ಚಿಡುತ್ತಾರೆ; ಮತ್ತೆ ಕೆಲವನ್ನು ಮುಚ್ಚಿಡುತ್ತಾರೆ.

ಸಾಹಿತ್ಯ ಕೃತಿಗಳಲ್ಲಿ ಸಂಸ್ಕೃತಿಯ ಸ್ವರೂಪವನ್ನು ತಿಳಿಯುವುದು ಎಂದರೆ ಕೃತಿಗಳ ಆಶಯಗಳನ್ನು ತಿಳಿಯುವುದು ಎಂಬುದೇ ಇಲ್ಲಿಯ ಸರಳ ಸೂತ್ರ ಕೃತಿಗಳ ಆಶಯವು ಕೃತಿಗಳ ಲೋಕದಿಂದ ರೂಪುಗೊಳ್ಳುತ್ತದೆ ಎಂಬುದಕ್ಕಿಂತಲೂ ಹೆಚ್ಚಾಗಿ ಅದು ಕರ್ತೃವಿನ ಉದ್ದೇಶಪೂರ್ವಕ ಮತ್ತು ಪ್ರಜ್ಞಾಪೂರ್ವಕ ನೆಲೆಗಳಿಂದಲೇ ರೂಪುಗೊಳ್ಳುತ್ತದೆ ಎಂಬುದು ಇಲ್ಲಿಯ ತೀರ್ಮಾನ. ಅದರಿಂದ ಸಾಹಿತ್ಯ ಕೃತಿಗಳಲ್ಲಿ ‘ಘೋಷಿತ ಹೇಳಿಕೆಗಳನ್ನು’ ಹುಡುಕಲಾಗುತ್ತದೆ. ಆ ‘ಘೋಷಿತ ಹೇಳಿಕೆಗಳನ್ನೆ’ ಸಾಹಿತ್ಯ ಕೃತಿಯ ಆಶಯಗಳೆಂದು, ಸಂಸ್ಕೃತಿಯ ಸ್ವರೂಪವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಇಂತಹ ಓದುಗಳು ಸಾಹಿತ್ಯ ವಿಶ್ಲೇಷಣೆ ಮಾಡುವಾಗ ‘ಪಂಪ ಹೀಗೆ ಹೇಳಿದ್ದಾನೆ. ಕುವೆಂಪು ಹೀಗೆ ಹೇಳಿದ್ದಾರೆ, ಲಂಕೇಶ್ ಹೀಗೆ ಹೇಳಿದ್ದಾರೆ’ ಎಂದು ಆಶಯಗಳನ್ನು ಗುರುತಿಸುತ್ತವೆ. ಸಾಹಿತ್ಯವನ್ನು ಒಂದು ‘ವಿಚಾರ ಮಂಡನೆಯ’ ಅಥವಾ ‘ವಾದ ಮಂಡನೆಯ’ ಒಣರೂಪ ಎಂತಲೂ ಅಥವಾ ಸಾಹಿತ್ಯವನ್ನು ಒಂದು ದಸ್ತಾವೇಜು, ಪ್ರಣಾಳಿಕೆ ಎಂತಲೂ ಸರಳವಾಗಿ ಹಾಗೂ ಯಾಂತ್ರಿಕವಾಗಿ ಗ್ರಹಿಸಿರುವುದರಿಂದ ಈ ಬಗೆಯ ಗ್ರಹಿಕೆಗಳು ಮುಂಚೂಣೆಗೆ ಬಂದಿವೆ. ಈ ಸ್ವರೂಪದ ಸಾಹಿತ್ಯ ಕೂಡ ಇದೆ ಎಂಬುದನ್ನೂ ಇಲ್ಲಿ ಹೇಳಬೇಕಾಗಿದೆ. ಅದು ಬೇರೆ ಪ್ರಶ್ನೆ. ‘ವಿಚಾರ ಮಂಡನೆ’ಯ, ‘ವಾದ ಮಂಡನೆ’ಯ ಅಥವಾ ‘ಪ್ರಣಾಳಿಕೆ’ಯ ಸ್ವರೂಪದ ಸಾಹಿತ್ಯದಲ್ಲಿ ಸಂಸ್ಕೃತಿಯ ಸ್ವರೂಪವನ್ನು ಗುರುತಿಸುವುದು ಸುಲಭವಿದ್ದೀತು (ಅಥವಾ ಹಾಗೆಂದು ತಿಳಿಯಲಾಗಿದೆ). ಆದರೆ ಈ ‘ಸುಲಭ’ದ ಮಾದರಿಯಲ್ಲೆ ಉಳಿದೆಲ್ಲ ಸಾಹಿತ್ಯ ಕೃತಿಗಳಲ್ಲಿ ಸಂಸ್ಕೃತಿಯ ಸ್ವರೂಪವನ್ನು ಗುರುತಿಸುವುದು ಸರಳ ಹಾಗೂ ಯಾಂತ್ರಿಕವಾಗುತ್ತದೆ. ಪಂಪನ ಕಾವ್ಯಗಳ ಸಂಸ್ಕೃತಿಯ ಸ್ವರೂಪವನ್ನೊ, ಕುವೆಂಪು ಕೃತಿಗಳ ಸಂಸ್ಕೃತಿಯ ಸ್ವರೂಪವನ್ನೊ ಹಾಗೆ ಸರಳೀಕರಿಸುವುದು ಬಹಳ ಯಾಂತ್ರಿಕವೆನಿಸುತ್ತದೆ. ಕರ್ತೃವಿನ ‘ಘೋಷಿತ ಹೇಳಿಕೆ’ಗಳ ಮೂಲಕ ಸಂಸ್ಕೃತಿಯ ಸ್ವರೂಪವನ್ನು ಗ್ರಹಿಸಲು ಆಗುವುದಿಲ್ಲ. ಹಾಗಾಗಿಯೆ ಒಂದು ಕೃತಿ  ಅಥವಾ ಒಬ್ಬ ಕರ್ತೃವಿನ ಹಲವು ಕೃತಿಗಳ, ಹಲವು ಓದುಗಳು ಹಲವು ಸಂಸ್ಕೃತಿ ಸ್ವರೂಪಗಳನ್ನು ಇಲ್ಲವೆ ಭಿನ್ನ ಸಂಸ್ಕೃತಿಯ ಸ್ವರೂಪಗಳನ್ನು ಚರ್ಚಿಸುತ್ತವೆ.

ಸಂಸ್ಕೃತಿಯನ್ನು ಸಾಹಿತ್ಯ ಕೃತಿಗಳು ದಾಖಲಿಸುತ್ತವೆ ಎಂಬುದನ್ನು ಬದಲಾಯಿಸಿಕೊಂಡು, ಸಾಹಿತ್ಯ ಕೃತಿಗಳು ಸಂಸ್ಕೃತಿಯನ್ನು ನಿರೂಪಿಸುತ್ತವೆ ಎಂದು ಆಲೋಚಿಸಲು ಸಾಧ್ಯವಿದೆ. ಈ ಗ್ರಹಿಕೆಯ ಪ್ರಕಾರ ಕರ್ತೃ ಹಿನ್ನೆಲೆಯ ಸಂಸ್ಕೃತಿ ವಿವರಗಳು ಸಿದ್ಧ ರೂಪದಲ್ಲಿ, ನೇರವಾಗಿ ಸಾಹಿತ್ಯ ಕೃತಿಗೆ ದಾಟುತ್ತವೆ ಎಂಬುದು ಇಲ್ಲಿ ಮುಖ್ಯವಾಗುವುದಿಲ್ಲ. ಹಾಗಾಗಿ ಕರ್ತೃ ಹಿನ್ನೆಲೆಯ ಸಾಮಾಜಿಕ ಮತ್ತಿತರೆ ಹಿನ್ನೆಲೆಗಳ ಮಾಹಿತಿಗಳೇ ಸಾಹಿತ್ಯ ಕೃತಿಯಲ್ಲಿ ಸಂಸ್ಕೃತಿಯ ರೂಪವಾಗಿ ದಾಖಲಾಗುವುದಿಲ್ಲ. ಬದಲಾಗಿ ಬರಹಗಾರರ ಸಂಸ್ಕೃತಿಯ ಅಥವಾ ಸಂಸ್ಕೃತಿಗಳ ಗ್ರಹಿಕೆಯ ಭಾಷಿಕ ಅಭಿವ್ಯಕ್ತಿಯ ಮೂಲಕ ‘ಸಾಮಾಜಿಕ ನೆಲೆ’ಯ ಸಂಸ್ಕೃತಿಯ ರೂಪವು ಮಾರ್ಪಾಡಾಗುತ್ತ, ಸಾಹಿತ್ಯ ಕೃತಿಯಾಗಿ ರೂಪುಗೊಳ್ಳುತ್ತದೆ. ಹೀಗೆ ಸಾಹಿತ್ಯ ಕೃತಿಗಳು ರೂಪು ಪಡೆಯುವ ಪ್ರಕ್ರಿಯೆಯನ್ನೆ ಸೃಜನಶೀಲತೆ ಎಂದು ಕರೆಯಲಾಗುತ್ತದೆ. ಸಾಹಿತ್ಯದ ಸೃಜಶೀಲತೆಯ ಅಸಾಮಾನ್ಯ ಸಾಧ್ಯತೆಗಳು ಸಂಸ್ಕೃತಿಯ ಗ್ರಹಿಕೆ ಮತ್ತು ಅಭಿವ್ಯಕ್ತಿಯ ಹಲವು (ಕೆಲವರು ಇದನ್ನು ಅನಂತ ಎಂತಲೂ ಹೇಳಬಹುದು) ಸಾಧ್ಯತೆಗಳನ್ನು ರೂಪಿಸುತ್ತ ಹೋಗುತ್ತವೆ. ಸಾಹಿತ್ಯದಲ್ಲಿ ಸೃಜನಶೀಲತೆ ರೂಪುಗೊಳ್ಳುವ, ಅಭಿವ್ಯಕ್ತಿ ಪಡೆಯುವ ವಿಧಾನಗಳ ಚರ್ಚೆಯು ಸಂಸ್ಕೃತಿ ಅಧ್ಯಯನಗಳಲ್ಲಿ ಬಹಳ ಮುಖ್ಯವಾದ ನೆಲೆ. ಈ ಗ್ರಹಿಕೆ ‘ಘೋಷಿತ ಹೇಳಿಕೆ’ಗಳನ್ನು ಅಥವಾ ಕರ್ತೃಮೂಲಗಳನ್ನು ಬಲವಾಗಿ ನೆಮ್ಮುವುದಿಲ್ಲ. ಅಂತಿಮವೆಂದು ತಿಳಿಯುವುದಿಲ್ಲ. ಬದಲಾಗಿ ಸಾಹಿತ್ಯ ರೂಪದ, ಆಕೃತಿಯ ಚರ್ಚೆ ಇಲ್ಲಿ ಮುಖ್ಯವಾಗುತ್ತದೆ. ಜೊತೆಗೆ ಸಾಹಿತ್ಯ ಕೃತಿಗಳಲ್ಲಿ ಸಂಸ್ಕೃತಿ ರೂಪದ, ಆಕೃತಿಯ ಚರ್ಚೆ ಇಲ್ಲಿ ಮುಖ್ಯವಾಗುತ್ತದೆ. ಜೊತೆಗೆ ಸಾಹಿತ್ಯ ಕೃತಿಗಳಲ್ಲಿ ಸಂಸ್ಕೃತಿ ಎಂಬುದು ಸಿದ್ಧಮಾದರಿಯಲ್ಲಿ ದಾಖಲಾಗಿರುತ್ತದೆ ಎಂಬುದಕ್ಕೆ ಬದಲಾಗಿ, ಅವುಗಳನ್ನು ಓದುವ ಮುಲಕ ಸಂಸ್ಕೃತಿಯ ಸ್ವರೂಪಗಳನ್ನು ಗ್ರಹಿಸುವುದು ಇಲ್ಲಿ ಮುಖ್ಯವಾಗುತ್ತದೆ. ಇದು ‘ಜೈನ ಕೃತಿಗಳಲ್ಲಿ ಜೈನ ಸಂಸ್ಕೃತಿ’ ಇದೆ ಎಂತಲೂ; ‘ವೀರಶೈವ ಸಾಹಿತ್ಯದಲ್ಲಿ ವೀರಶೈವ ಸಂಸ್ಕೃತಿ ಇದೆ’ ಎಂತಲೂ; ‘ಬೇಂದ್ರೆಯವರ ಕಾವ್ಯದಲ್ಲಿ ಬ್ರಾಹ್ಮಣ ಸಂಸ್ಕೃತಿ ಇದೆ’ ಎಂತಲೂ; ‘ಕುವೆಂಪು ಕೃತಿಗಳಲ್ಲಿ ಒಕ್ಕಲಿಗ ಸಂಸ್ಕೃತಿ ಇದೆ’ ಎಂತಲೂ; ‘ದೇವನೂರರ ಸಾಹಿತ್ಯದಲ್ಲಿ ದಲಿತ ಸಂಸ್ಕೃತಿ ಇದೆ’ ಎಂತಲೂ (ಈ ಪಟ್ಟಿಯನ್ನು ಇನ್ನೂ ಬೇರೆಬೇರೆ ಆಯಾಮಗಳಲ್ಲಿ ‘ವಿಸ್ತರಿಸಬಹುದು) ಸರಳೀಕರಿಸುವುದಿಲ್ಲ.

ಸಾಮಾಜಿಕ ಪರಿಸರ ಮತ್ತು ಪ್ರಾಕೃತಿಕ ಪರಿಸರಗಳ ಚಲನಶೀಲತೆಯ ಸಂಬಂಧ ಹಾಗೂ ಅವುಗಳ ನಿರಂತರತೆಯನ್ನು ಗ್ರಹಿಸುತ್ತಲೆ ಅದನ್ನು ಸಾಂಸ್ಕೃತಿಕವಾಗಿ ರೂಪಿಸುವಾಗ ಸಾಹಿತ್ಯ ಪಡೆಯುವ ಆಕಾರ (ಅಥವಾ ಆಕೃತಿ) ಯಾವುದು ಎಂಬ ಚರ್ಚೆ ಇಲ್ಲಿ ಮುಖ್ಯವಾದುದು. ಸಂಸ್ಕೃತಿಯು ಸಾಹಿತ್ಯದ ಭಾಷಿಕ ಶರೀರದಲ್ಲಿ ಆಕಾರ ಪಡೆಯುವುದಕ್ಕೂ ಸಾಹಿತ್ಯದ ಆಕೃತಿ ಬದಲಾಗುವುದಕ್ಕೂ ಒಳಸಂಬಂಧವಿದೆ. ವಚನಗಳ ಅಭಿವ್ಯಕ್ತಿ ವಿಧಾನಗಳಿಗೂ ಮತ್ತು ವಚನಕಾರರನ್ನು ಕುರಿತ ಕಥಾನಕಗಳಿಗೂ ಇರುವ ವ್ಯತ್ಯಾಸಗಳನ್ನು ಈ ಹಿನ್ನೆಲೆಯಲ್ಲಿ ಗ್ರಹಿಸಬೇಕಗುತ್ತದೆ. ಪಂಪನಿಂದ ಮುದ್ದಣನವರೆಗೆ ಸಾಹಿತ್ಯ ಅಭಿವ್ಯಕ್ತಿಯ ಆಕೃತಿಗಳು ಬದಲಾಗಿರುವುದಕ್ಕೂ ಮತ್ತು ಅವು ಸಂಸ್ಕೃತಿಯನ್ನು ಗ್ರಹಿಸಿ, ಅಭಿವ್ಯಕ್ತಿಸಿರುವ ವಿಧಾನಕ್ಕೂ ಇರುವ ಒಳಸಂಬಂಧಗಳನ್ನು ಈ ಹಿನ್ನೆಲೆಯಲ್ಲಿ ಚರ್ಚಿಸಬಹುದು. ಅಲ್ಲದೆ ಆಧುನಿಕ ಎಂದು ಕರೆಯಲಾಗುವ ಸಾಹಿತ್ಯದಲ್ಲಿ ಅಷ್ಟೆಲ್ಲಾ ಪ್ರಕಾರಗಳು ಪ್ರಕಟವಾಗುವುದಕ್ಕೂ ಮತ್ತು ಅವು ಸಂಸ್ಕೃತಿ, ಸಂಸ್ಕೃತಿಗಳ ಏಣಿಶ್ರೇಣಿಗಳ ಒಳಸೂಕ್ಷ್ಮಗಳನ್ನು ಗ್ರಹಿಸಿರುವುದಕ್ಕೂ ಇರುವ ನೆಲೆಗಳನ್ನು ಚರ್ಚಿಸಬಹುದು. ಒಂದು ಘೋಷಣೆ, ಒಂದು ಕರಪತ್ರ, ಒಂದು ಜಾಹೀರಾತ, ಜನಪದ ತ್ರಿಪದಿ, ಕಲ್ಕಿ, ನಾಗಿ, ಸಂಕ್ರಾಂತಿ, ಕುಸುಮಬಾಲೆ, ಚಕೋರಿ, ರಗಳೆ, ರಾಜಾವಳಿ ಕಥಾಸಾರ, ಧರ್ಮಾಮೃತದ ಮಾಲೋಪಮೆಗಳು, ಆದಿಪುರಾಣ ಮುಂತಾದುವನ್ನು ಒಟ್ಟಿಗೆ ಓದಿದಾಗ ಅವುಗಳು ಗ್ರಹಿಸುವ ಸಂಸ್ಕೃತಿ ನೆಲೆಗಳಿಗೂ ಮತ್ತು ಅವುಗಳ ಅಭಿವ್ಯಕ್ತಿ ಸ್ವರೂಪಗಳಿಗೂ ಇರುವ ಸಂಬಂಧಗಳು ಮುಖ್ಯ ಚರ್ಚೆಗೆ ಬರುತ್ತವೆ. ಸಂಸ್ಕೃತಿ ಗ್ರಹಿಕೆಯ ನೆಲೆಗಳೆ ಸಾಹಿತ್ಯ ಅಭಿವ್ಯಕ್ತಿಯ ಕ್ರಮಗಳನ್ನು ರೂಪಿಸುವ ಸೃಜನಶೀಲ ವಿಧಾನಗಳು ಎಂಬುದು ತಿಳಿಯುತ್ತದೆ. ಸಾಹಿತ್ಯದಲ್ಲಿ ಸಂಸ್ಕೃತಿ ಶೋಧನೆ ಕುರಿತ ಅಧ್ಯಯನಗಳು ಈ ಆಯಾಮದಲ್ಲಿ ನಡೆಯಬೇಕಾದ ಅಗತ್ಯವಿದೆ.

ಸಾಹಿತ್ಯ ಸಂಶೋಧನೆಯಲ್ಲಿ ಸಂಸ್ಕೃತಿ ಎಂಬುದು ಒಂದು ಆಕರವೊ? ಒಂದು ಪರಿಕಲ್ಪನೆಯೋ? ಆಲೋಚನೆ ವಿಧಾನವೊ? ಯಾವುದು ಎಂದು ಚರ್ಚೆ ಕೂಡ ಸಾಧ್ಯವಿದೆ. ಸಂಸ್ಕೃತಿಯನ್ನು ಅಧ್ಯಯನಕ್ಕೆ ಆಕರವೆಂದು ತಿಳಿದಾಗ ಅದನ್ನು ಅರಿಯುವ ವಿಧಾನ ಯಾವುದು ಎಂಬ ಪ್ರಶ್ನೆ ಬರುತ್ತದೆ. ಸಂಶೋಧನೆಯಲ್ಲಿ ಸಂಸ್ಕೃತಿ ಒಂದು ಪರಿಕಲ್ಪನೆ ಎಂದು ತಿಳಿದಾಗ ಅದರ ಸ್ವರೂಪವನ್ನು ಚರ್ಚಿಸಬೇಕಾಗುತ್ತದೆ. ಸಂಸ್ಕೃತಿ ಒಂದು ಆಲೋಚನೆ ಎಂದಾಗ, ಸಂಸ್ಕೃತಿಯೂ ಅಥವಾ ಸಂಸ್ಕೃತಿಗಳೂ ಕೂಡ ಆಲೋಚನ ಕ್ರಮಗಳಾಗಿ, ದೃಷ್ಟಿಕೋನಗಳಾಗಿ, ಧೋರಣೆಗಳಾಗಿ ಕ್ರಿಯಾಶೀಲವಾಗುವ ನೆಲೆಗಳು ಯಾವುವು ಎಂಬುದರ ಸಂಕೀರ್ಣ ಆಯಾಮಗಳನ್ನು ವಿವರವಾಗಿ ಚರ್ಚಿಸಬೇಕಾಗುತ್ತದೆ.

ಸಂಸ್ಕೃತಿ ಕುರಿತ ಕೆಲವು ಬರವಣಿಗೆಗಳು ಸಂಸ್ಕೃತಿಯನ್ನು ಬೇರೆಬೇರೆ ಪದಗಳಲ್ಲಿ ಗುರುತಿಸುತ್ತಿವೆ. ಹೀಗೆ ಬೇರೆಬೇರೆ ಪದಗಳಲ್ಲಿ (ಪ್ರಧಾನ ಸಂಸ್ಕೃತಿ, ಕಿರು ಸಂಸ್ಕೃತಿ, ಮಹಿಳಾ ಸಂಸ್ಕೃತಿ, ದಲಿತ ಸಂಸ್ಕೃತಿ, ಉಪಭೋಗ ಸಂಸ್ಕೃತಿ, ಪ್ರಾದೇಶಿಕ ಸಂಸ್ಕೃತಿ, ಮಾರುಕಟ್ಟೆಯ ಸಂಸ್ಕೃತಿ ಇತ್ಯಾದಿ) ಗುರುತಿಸುವಾಗ ಅವುಗಳ ನಡುವೆ ‘ಇರುವ’ ಸಂಬಂಧದ ನೆಲೆಗಳನ್ನು ಕುರಿತು ‘ಬಹು ಸಂಸ್ಕೃತಿಗಳು’ ಎಂದು ತೀರ್ಮಾನಿಸಲಾಗಿದೆ. ಆದರೆ ಆರ್ಥಿಕ, ಸಾಮಾಜಿಕ, ಲಿಂಗ ಮುಂತಾದ ಅಸಮಾನತೆ ಮತ್ತು ಶ್ರೇಣೀಕರಣಗಳ ವ್ಯವಸ್ಥೆಯಲ್ಲಿ ಸಂಸ್ಕೃತಿಗಳ ನಡುವಿನ ಸಂಬಂಧವು ಈ ಶ್ರೇಣೀಕರಣಗಳ ವಿನ್ಯಾಸದಲ್ಲಿ ನಡೆಯುತ್ತದೆ. ಆದರೆ ಅಧ್ಯಯನಗಳಲ್ಲಿ ಈ ಶ್ರೇಣೀಕರಣದ ಸಂಬಂಧಗಳನ್ನು ನಯವಾಗಿ ಮುಚ್ಚಿಡಲಾಗಿದೆ. ಈ ವಸ್ತುಸ್ಥಿತಿಯನ್ನು ಮುಚ್ಚಿಟ್ಟು, ‘ಬಹು ಸಂಸ್ಕೃತಿಗಳು’ ಎಂದು ಹೇಳಲಾಗುತ್ತಿದೆ. ಇದು ಅಸಮಾನತೆ ಮತ್ತು ಶ್ರೇಣೀಕರಣಗಳನ್ನು ನಯವಾಗಿ ಮುಚ್ಚಿಡುವ ಅಪಾಯಕಾರಿ ಹೇಳಿಕೆಯಾಗಿದೆ. ‘ಕೋಮು ಸಾಮರಸ್ಯ’ ಎಂಬ ತೋರಿಕೆಯ ಹೇಳಿಕೆಗೂ ಇದಕ್ಕೂ ವೈಚಾರಿಕವಾಗಿ ನೇರ ಸಂಬಂಧವಿದೆ.

ಸಾಹಿತ್ಯ ಕೃತಿಗಳ ಉದಾಹರಣೆಯ ಮೂಲಕವೆ ಇದನ್ನು ಚರ್ಚಿಸಬಹುದು. ಕುವೆಂಪು (ಮಲೆಗಳಲ್ಲಿ ಮದುಮಗಳು ಮತ್ತು ಕಾನೂರು ಹೆಗ್ಗಡತಿ) ಕಾದಂಬರಿಗಳಲ್ಲೊ ಅಥವಾ ಶಿವರಾಮ ಕಾರಂತರ (ಚೋಮನದುಡಿ) ಕಾದಂಬರಿಯಲ್ಲೊ ಭಿನ್ನ ಸಂಸ್ಕೃತಿಗಳು (ಬಹು ಸಂಸ್ಕೃತಿಗಳು ಅಲ್ಲ) ನಿರೂಪಣೆಯಾಗಿವೆ. ಕಾದಂಬರಿಗಳ ವಿವರಗಳನ್ನು ಗಮನಿಸುವುದಾದರೆ ಭೂಮಾಲಿಕ ವರ್ಗ, ದಲಿತ ಸಮುದಾಯ, ಮಹಿಳಾ ಸಮುದಾಯ, ಕ್ರಿಶ್ಚಿಯಾನಿಟಿ, ಮುಸ್ಲಿಮರು ಇವೇ ಮುಂತಾದ ವಿವರಗಳು ಬರುತ್ತವೆ. ಇಲ್ಲಿ ಅವುಗಳ ನಡುವೆ ಯಾವ ಬಗೆಯ ಸಂಬಂಧಗಳಿವೆ ಎಂಬುದನ್ನು ಚರ್ಚಿಸಬೇಕು. ಆ ಭಿನ್ನ ಸಂಸ್ಕೃತಿಗಳ ನಡುವೆ ಪರಸ್ಪರ ಸಹಕಾರ, ಸಹಬಾಳ್ವೆ ಇದ್ದರೆ ಆಗ ಅದರ ಸಂಬಂಧವನ್ನು ಕುರಿತು ಒಂದು ಬಗೆಯ ನಿಲುವು ತಾಳಬಹುದು. ಅದನ್ನು ಸಹಬಾಳ್ವೆಯ ಸಂಸ್ಕೃತಿ ಎಂದೆ ಕರೆಯಬಹುದೇನೊ. ಆದರೆ ಆ ಸಾಹಿತ್ಯ ಪಠ್ಯಗಳ ಚಲನಶೀಲ ಸಂಸ್ಕೃತಿ ಎಂದೆ ಕರೆಯಬಹುದೇನೊ. ಆದರೆ ಆ ಸಾಹಿತ್ಯ ಪಠ್ಯಗಳ ಚಲನಶೀಲ ಜಗತ್ತು ಅಷ್ಟು ಸರಳವಿಲ್ಲ. ಯಾಕೆಂದರೆ ಅದು ಸಾಮಾಜಿಕ ಚಲನಶೀಲತೆಯ ಒಂದು ಭಾಗವೆ. ಹಾಗಾಗಿ ಆ ಭಿನ್ನ ಸಂಸ್ಕೃತಿಗಳ ನಡುವೆ ಪರಸ್ಪರ ಸಹಕಾರಕ್ಕಿಂತ ಪರಸ್ಪರ ಅಸಹಕಾರ ಮತ್ತು ಸಂಘರ್ಷಗಳೂ ಇವೆ. ಇದರ ಪರಿಣಾಮವಾಗಿಯೆ ಚೋಮನಿಗೆ ಗೇಣಿಭೂಮಿ ದಕ್ಕುವುದಿಲ್ಲ. ಕುವೆಂಪು ಕಾದಂಬರಿಯಲ್ಲಂತೂ ಪ್ರಸಿದ್ಧ ‘ಹೊನ್ನಾಳಿ ದೊಡ್ಡ’ ಈ ಸಂಘರ್ಷಕ್ಕೆ ಮೇರು ಸಾಕ್ಷಿ. ಹಾಗಾಗಿ ಸಾಹಿತ್ಯ ಅಧ್ಯಯನಗಳ ಸಂದರ್ಭದಲ್ಲಿ ಸಂಸ್ಕೃತಿಯನ್ನು ಕುರಿತು ಚರ್ಚಿಸುವಾಗ ಸಂಸ್ಕೃತಿಯನ್ನು ಕೇವಲ ಔಪಚಾರಿಕವಾಗಿ ಮತ್ತು ಅದಕ್ಕಿಂತ ಹೆಚ್ಚಾಗಿ ಉದಾರವಾದಿಯಾಗಿ ಮಂಡಿಸುವ ವಿಧಾನವೆ ಜನಪ್ರಿಯವಾಗಿ ಮೇಲುಗೈ ಸಾಧಿಸಿದೆ. ಈ ಉದಾರವಾದಿ ವೈಚಾರಿಕತೆ ಸಾಹಿತ್ಯದಲ್ಲಿ ಸಂಸ್ಕೃತಿ ವಿಶ್ಲೇಷಣೆ ಮಾಡುವಾಗ ‘ಬಹು ಸಂಸ್ಕೃತಿಗಳು’ ಎಂದು ಭಜನೆ ಮಾಡುತ್ತಿರುತ್ತದೆ. ಹಾಗೆ ಭಜನೆ ಮಾಡುವ ಮೂಲಕ ಸಂಸ್ಕೃತಿಗಳ ಶ್ರೇಣಿಕರಣಗಳನ್ನು ನಯವಾಗಿ ಮುಚ್ಚಿಡುತ್ತಿರುತ್ತದೆ. ‘ನಮ್ಮ ಸಂಸ್ಕೃತಿ ಶ್ರೇಷ್ಠ’ ಅಥವಾ ‘ಈ ಸಂಸ್ಕೃತಿ ಮೇಲು, ಆ ಸಂಸ್ಕೃತಿ ಕೀಳು’ ಎಂಬ ಮೌಲ್ಯಪ್ರಜ್ಞೆಗಳು ಎಷ್ಟು ಅಪಾಯಕಾರಿಯೊ, ‘ಬಹು ಸಂಸ್ಕೃತಿಗಳು’ ಎಂಬುದು ಅದಕ್ಕಿಂತ ಅಪಾಯಕಾರಿ ಎಂಬುದನ್ನು ಗಮನಿಸಬೇಕು. ಹಾಗಾಗಿ ಸಾಹಿತ್ಯದಲ್ಲಿ ನಿರೂಪಣೆಯಾಗಿರುವ ಸಂಸ್ಕೃತಿಯನ್ನು ಕುರಿತು ಸಂಶೋಧನೆ ಮಾಡುವಾಗ ಸಂಸ್ಕೃತಿಯ ಯಾವ ಮೈ ಅಥವಾ ಯಾವ ಆಯಾಮ ಸಾಹಿತ್ಯ ಪಠ್ಯದಲ್ಲಿ ಅನಾವರಣ ಆಗಿದೆ ಎಂಬುದು ಮುಖ್ಯವಾದ ಪ್ರಶ್ನೆ. ಜೊತೆಗೆ ಸಾಹಿತ್ಯ ಪಠ್ಯಗಳಲ್ಲಿ ಸಂಸ್ಕರತಿಗಳು ಅನುಭವಾಗಿ ನಿರೂಪಿತವಾಗಿವೆಯೊ, ಕೇವಲ ಭೌತಿಕ ವಿವರಗಳಾಗಿ ಸಂಗತಿಗಳಾಗಿ ನಿರೂಪಿತವಾಗಿವೆಯೊ ಎಂಬುದು ಮುಖ್ಯ. ಜೊತೆಗೆ ಸಾಹಿತ್ಯ ಪಠ್ಯಗಳ ವಸ್ತು, ನಿರೂಪಣೆ, ಸಂಭಾಷಣೆ ಮತ್ತು ವರ್ಣನೆ ಈ ಆಯಾಮಗಳಲ್ಲಿ ಸಂಸ್ಕೃತಿಯ ವಿವರಗಳು ಅಥವಾ ಅನುಭವಗಳು ಯಾವುದರಲ್ಲಿ ಸೃಜನಶೀಲಗೊಳ್ಳುತ್ತವೆ ಎಂಬುದು ಮುಖ್ಯ ಈ ಆಯಾಮದಲ್ಲಿ ಸಾಹಿತ್ಯ ಕೃತಿಗಳನ್ನು ಪರಿಶೀಲಿಸಬೇಕಾಗುತ್ತದೆ. ಇಲ್ಲದೆ ಹೋದರೆ ಸಾಹಿತ್ಯ ಕೃತಿಗಳ ಕೇವಲ ಭೌತಿಕ ವಿವರಗಳ ವ್ಯಾಪ್ತಿಯಲ್ಲಿ ಮಾತ್ರ ಹೊರಗಿನ ಯಾಂತ್ರಿಕ ಗ್ರಹಿಕೆಗಳನ್ನಷ್ಟೆ ಸಂಸ್ಕೃತಿಯ ವಿವರಗಳು ಎಂದು ಸರಳೀಕರಿಸಿದಂತೆ ಆಗುತ್ತದೆ. ಜೊತೆಗೆ ಸಾಹಿತ್ಯ ಕೃತಿಗಳಲ್ಲಿ ಈಗಾಗಲೆ ಚರ್ಚೆಯಾಗಿ, ‘ಪ್ರಸಿದ್ಧ’ವಾಗಿರುವ ಭಾಗಗಳನ್ನು ಮತ್ತು ಹೇಳಿಕೆಗಳನ್ನು ಆಯ್ದುಕೊಂಡು, ಇವೇ ಈ ಸಾಹಿತ್ಯ ಕೃತಿಯ ಸಂಸ್ಕೃತಿಯ ಪ್ರಾತಿನಿಧಿಕ ಭಾಗ ಎಂದು ಸರಳೀಕರಿಸಿದಂತೆ ಆಗುತ್ತದೆ. ಸಾಹಿತ್ಯದಲ್ಲಿ ಸಂಸ್ಕೃತಿ ಕುರಿತ ಚರ್ಚೆಗಳು ವ್ಯಾಪಕವಾಗಿ ನಡೆಯುತ್ತಿವೆ. ಆದರೆ ಅಲ್ಲೆಲ್ಲ ಕೃತಿಯ ವಿವರಗಳನ್ನು ಯಾಂತ್ರಿಕಗೊಳಿಸಿ, ಕೇವಲ ಹೇಳಿಕೆಗಳ ಮಟ್ಟದಲ್ಲಿ ಚರ್ಚಿಸಲಾಗುತ್ತದೆ. ಸಾಹಿತ್ಯ ಪಠ್ಯಗಳ ಸಂಸ್ಕೃತಿಗಳ ಯಾವ ಆಯಾಮಗಳನ್ನು ಹೇಗೆ ನಿರೂಪಿಸಿವೆ ಮತ್ತು ಆ ಮೂಲಕ ಪಠ್ಯದ ಆಕೃತಿಯಲ್ಲಿ ಆಗಿರುವ ಬದಲಾವಣೆ ಯಾವುದು ಎಂಬುದನ್ನು ಚರ್ಚಿಸಬೇಕಾಗುತ್ತದೆ. ನಯಸೇನನ ಧರ್ಮಾಮೃತದಲ್ಲಿ ಮಾಲೋಪಮೆಗಳು ಆ ಪ್ರಮಾಣದಲ್ಲಿ ಯಾಕೆ ಬರುತ್ತವೆ, ವಚನಗಳ ಕೆಲವು ಆಶಯಗಳನ್ನು ಮರುನಿರೂಪಿಸಲು ಆ ಮುಂದಿನ ಕಾವ್ಯಗಳು ಯಾವ ಅಭಿವ್ಯಕ್ತಿಗಳನ್ನು ಪಡೆದವು, ಆಧುನಿಕ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅಭಿವ್ಯಕ್ತಿಯಾಗಿರುವ ಸಂಸ್ಕೃತಿಯ ಆಯಾಮಗಳಿಗೂ ಮತ್ತು ಆಯಾ ಸಾಹಿತ್ಯ ಪ್ರಕಾರಗಳಿಗೂ ಯಾವ ಬಗೆಯ ಸಂಬಂಧಿವಿದೆ ಈ ಮುಂತಾದ ಚರ್ಚೆಗಳನ್ನು ನಡೆಸುವ ಅಗತ್ಯವಿದೆ.