ಕೆಲವು ವೈಚಾರಿಕ ಮತ್ತು ಸಂಶೋಧನ ಬರವಣಿಗೆಗಳಲ್ಲಿ ಕೋಮುವಾದದ ಪ್ರಸ್ತಾಪ ಹಾಗೂ ಆ ಕುರಿತ ಚರ್ಚೆಗಳು ನಡೆಯುತ್ತಿವೆ. ಸಾಮಾಜಿಕ ಜೀವನ, ಸಂಸ್ಕೃತಿ ವಲಯ ಹಾಗೂ ಸಾಹಿತ್ಯ ಕೃತಿಗಳಲ್ಲಿ ಕೋಮುವಾದದ ಸಂಗತಿಗಳನ್ನು ಗುರುತಿಸಿ ಅವುಗಳನ್ನು ಚರ್ಚಿಸಲಾಗುತ್ತಿದೆ. ಕೋಮುವಾದ ಎಂಬುದನ್ನು ಮತೀಯ ಹಾಗೂ ಧಾರ್ಮಿಕ ಚೌಕಟ್ಟುಗಳಲ್ಲಿ ಗುರುತಿಸಲಾಗುತ್ತಿದೆ. ಅದರ ಅಪಾಯಗಳ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿ ಅವುಗಳ ವಿವರಗಳನ್ನು ದಾಖಲಿಸುವ, ನಿರೂಪಿಸುವ ಹಾಗೂ ಚರ್ಚಿಸುವ ಪ್ರಯತ್ನಗಳೂ ನಡೆಯುತ್ತಿವೆ. ಇಂತಹ ಚರ್ಚೆಗಳು ಕೋಮುವಾದವನ್ನು ಧಾರ್ಮಿಕ ಮತೀಯ ವಿದ್ಯಮಾನವೆಂದು ತೀರ್ಮಾನಿಸಿವೆ.

ಸಾಹಿತ್ಯದ ವೈಚಾರಿಕ ಪ್ರಕಾರವು ಈ ಬಗೆಗೆ ಹೆಚ್ಚು ಆಸಕ್ತಿ ತೋರಿದೆ. ೧೯೯೨ರ ನಂತರದ ರಾಜಕೀಯ ಹಾಗೂ ಸಾಮಾಜಿಕ ಬದುಕಿನಲ್ಲಿ ಕೋಮುವಾದದ ಪ್ರಚೋದನೆಗಳು, ಬೆಳವಣಿಗೆಗಳು, ಪರಿಣಾಮಗಳು ಮತ್ತು ಅದರ ಅಪಾಯಗಳನ್ನು ಕುರಿತು ಈ ಬರವಣಿಗೆಗಳು ವಿಶ್ಲೇಷಣೆ ಮಾಡುತ್ತಿವೆ. ಇದರಲ್ಲೆ ಕೆಲವು ಬರವಣಿಗೆಗಳು ಕೋಮುವಾದದ ಬೇರುಗಳನ್ನು ಬ್ರಿಟೀಶರ ಒಡೆದು ಆಳುವ ನೀತಿಯಲ್ಲಿ ಗುರುತಿಸುವ ಪ್ರಯತ್ನ ಮಾಡಿವೆ. ೯೦ರ ದಶಕದ ನಂತರದ ಸಾರ್ವಜನಿಕ ಜೀವನದಲ್ಲಿ ಕೋಮುವಾದದ ಪರಿಣಾಮಗಳನ್ನು ಕುರಿತ ಚರ್ಚೆಗಳೂ ನಡೆದಿವೆ. ಸೃಜನಶೀಲ ಸಾಹಿತ್ಯವು ಕೋಮುವಾದವನ್ನು, ಅದರ ವಿವಿಧ ಮುಖಗಳನ್ನು ಗ್ರಹಿಸಿರುವ ಮತ್ತು ಅಭಿವ್ಯಕ್ತಿಸಿರುವ ಕ್ರಮಗಳ ಕುರಿತೂ ಚರ್ಚೆಗಳು ನಡೆಯುತ್ತಿವೆ. ಅಲ್ಲೆಲ್ಲ ಬರಹಗಾರರ ಧೋರಣೆ ಮತ್ತು ನಿಲುವು ಯಾವುದಾಗಿದೆ ಎಂಬುದನ್ನು ಗುರುತಿಸಲು ಪ್ರಧಾನ ಒತ್ತುಕೊಡಲಾಗಿದೆ.

ಸಾರ್ವಜನಿಕ ಮತ್ತು ಸಾಹಿತ್ಯಕ ವಲಯಗಳಲ್ಲಿ ‘ಕೋಮು ಸೌಹಾರ್ದ’ ಎಂಬ ಚರ್ಚೆಗಳೂ ನಡೆಯುತ್ತಿವೆ. ‘ವಿವಿಧ ಕೋಮುಗಳ ನಡುವೆ ಸಹಬಾಳ್ವೆ, ಸಾಮರಸ್ಯ ಹಾಗೂ ಸೌಹಾರ್ದ ಇತ್ತು ಎಂದು ಮತ್ತು ಇದೆ ಎಂದು ಮೊದಲೇ ತೀರ್ಮಾನಿಸಿ ಈ ಚರ್ಚೆಗಳು ನಡೆಯುತ್ತಿವೆ. ಹಾಗಾಗಿ ‘ಕೋಮು ಗಲಭೆ’, ‘ಕೋಮು ಸಮಸ್ಯೆ’ ಮುಂತಾದುವು ಮತೀಯವಾದದಿಂದ ಹುಟ್ಟಿವೆ ಅಥವಾ ಅದನ್ನು ಹುಟ್ಟಿಸಲಾಗಿದೆ ಎಂಬ ಚರ್ಚೆಗಳೂ ನಡೆಯುತ್ತಿವೆ. ಅದಕ್ಕೆ ‘ಪರಿಹಾರ’ ಎಂಬಂತೆ ಅಥವಾ ‘ಪರ್ಯಾಯ’ ಎಂಬಂತೆ ವಿವಿಧ ಕೋಮುಗಳ ನಡುವೆ ಇತ್ತೆಂದು ಭಾವಿಸಲಾಗಿರುವ ‘ಸಹಬಾಳ್ವೆ ಮತ್ತು ಸೌಹಾರ್ದ’ವನ್ನು ಮುಂದುವರಿಸಬೇಕು ಎಂಬ ಚರ್ಚೆಗಳು ನಡೆಯುತ್ತಿವೆ.

ಕೋಮುವಾದದ ಬೇರುಗಳನ್ನು ಸ್ಥಾಪಿತ ಮತೀಯ ಹಾಗೂ ಧಾರ್ಮಿಕ ಚೌಕಟ್ಟಿನಲ್ಲಿ ಗುರುತಿಸಲಾಗಿದೆ. ಅದರ ಬೆಳವಣಿಗೆ, ಪರಿಣಾಮ ಹಾಗೂ ಅದರ ಚರ್ಚೆಯನ್ನು ಮತ್ತೊಂದು ಆಯಾಮದಿಂದ ನೋಡಲು ಸಾಧ್ಯವಿದೆ. ‘ವಿಭಿನ್ನ ಸಮುದಾಯಗಳ ನಡುವೆ ಸಹಬಾಳ್ವೆ ಹಾಗೂ ಸೌಹಾರ್ದ ಇತ್ತು, ಇದೆ’ ಎಂಬ ಈ ಪೂರ್ವ ತೀರ್ಮಾನವನ್ನು ಪ್ರಶ್ನೆ ಮಾಡಲು ಸಾಧ್ಯವಿದೆ. ಇದಕ್ಕೆ ಸಾಹಿತ್ಯೇತರ ಎಂದು ಕರೆಯಲಾಗುವ ಆಕರಗಳಿಗೆ ಹೋಗುವುದು ಒಂದು ಸಾಧ್ಯತೆಯಾದರೆ, ಕನ್ನಡ ಸಾಹಿತ್ಯ ಪರಂಪರೆಯನ್ನು ಸೂಕ್ಷ್ಮವಾಗಿ ಗಮನಿಸುವ ಮೂಲಕವೂ ಇದರ ಚರ್ಚೆಗೆ ಹೋಗಬಹುದು. ಹಳಗನ್ನಡ ಹಾಗೂ ವಚನ ಸಾಹಿತ್ಯವು ಚಾರ್ವಾಕ, ಬೌದ್ಧ, ಜೈನ, ಶೈವ, ವೀರಶೈವ, ಕಾಪಲಿಕ, ಕಾಳಾಮುಖ, ಬ್ರಾಹ್ಮಣ ಇವೇ ಮುಂತಾದುವುಗಳ ನಡುವಿನ ಪೈಪೋಟಿಗಳನ್ನು ಮತ್ತು ಸಂಘರ್ಷಗಳನ್ನು ಅತ್ಯಂತ ಸೂಕ್ಷ್ಮವಾಗಿ ಹಾಗೂ ಅಷ್ಟೇ ಗಂಭೀರವಾಗಿ ನಿರೂಪಿಸಿವೆ. ಇವುಗಳ ಪರಸ್ಪರ ಪೈಪೋಟಿ, ಸೆಣಸಾಟ ಹಾಗೂ ಸಂಘರ್ಷಗಳಲ್ಲಿ ಸಾಮಾನ್ಯ ಜನಪದರ ಹಾಗೂ ಬುಡಕಟ್ಟುಗಳ ಅತಿಸೂಕ್ಷ್ಮ ನಿರೂಪಣೆಗಳೂ ಆ ಸಾಹಿತ್ಯದಲ್ಲಿ ನಿರೂಪಿತವಾಗಿವೆ. ಯಾವುದನ್ನು ಸ್ಥಾಪಿಸಲು ಯಾವುದನ್ನು ವಿರೋಧಿಸಲಾಯಿತು; ಯಾವುದನ್ನು ನಿರಾಕರಿಸಲಾಯಿತು; ಯಾವುದನ್ನು ಅತ್ಯಂತ ಕೀಳೆಂದು, ಹೊಲಸು ಎಂದು ಪರಿಗಣಿಸಲಾಯಿತು ಎಂಬುದಕ್ಕೆ ಆ ಸಾಹಿತ್ಯದ ಪುಟಪುಟಗಳಲ್ಲಿ ವಿವರಗಳು, ನಿರೂಪಣೆಗಳು ಸಿಗುತ್ತವೆ. ಜೊತೆಗೆ ವರ್ತಮಾನದ ಬದುಕಿನಲ್ಲಿ ವಿಭಿನ್ನ ಕೋಮುಗಳ ನಡುವೆ ಯಾವ ಬಗೆಯಲ್ಲಿ ಸೌಹಾರ್ದ, ಸಹಬಾಳ್ವೆ ಎಂಬುದು ಇದೆ? ಎಂಬ ಪ್ರಶ್ನೆಯನ್ನು ಕೇಳಬೇಕಾಗಿದೆ. ವಡ್ಡಾರಾಧನೆ ಮತ್ತು ಧರ್ಮಾಮೃತದ ಕಥೆಗಳಲ್ಲಿ ಹೊಲೆಯರು, ಮಾದಿಗರು, ಡೊಂಬರು ಹಾಗೂ ಸೂಳೆಯರನ್ನು ‘ಅತ್ಯಂತ ಹೀನ ಮತ್ತು ನೀಚ’ ಹೋಲಿಕೆಗಳಿಗೆ ಬಳಸಿಕೊಂಡಿರುವುದು ನಿರೂಪಿತವಾಗಿದೆ. ಇದೇ ಧೋರಣೆಯ ಉಪಮೆಗಳು ವಚನಗಳಲ್ಲಿಯೂ ನಿರೂಪಿತವಾಗಿವೆ. ‘ಹರಿಶ್ಚಂದ್ರ ಚಾರಿತ್ರ’ದ ಹರಿಶ್ಚಂದ್ರನು ‘ಹೊಲತಿಯರನ್ನು ಮದುವೆಯಾಗುವುದಿಲ್ಲ’ ಎಂದು ನಿರಾಕರಿಸುತ್ತಾನೆ. ಆದರೆ ವಶಿಷ್ಟನು ‘ಹೊಲತಿಯರನ್ನು ಮದುವೆಯಾಗು’ ಎಂಬುದಾಗಿ ಹರಿಶ್ಚಂದ್ರನಿಗೆ ಒತ್ತಾಯ ಮಾಡುವುದು ಆತನ ಹಕ್ಕೊತ್ತಾಯದಂತೆ ಕಾಣುತ್ತದೆ. ಕನ್ನಡದ ಕಥೆ, ಕಾದಂಬರಿಗಳಲ್ಲಿ ಶ್ರೇಣೀಕೃತ ಜಾತಿ, ಸಮುದಾಯಗಳ ಅಸಮಾನತೆ, ಶೋಷಣೆ ಹಾಗೂ ಸಂಘರ್ಷಗಳೇ ನಿರೂಪಿತವಾಗಿವೆ. ಇದು ಸಾಹಿತ್ಯ ಕೃತಿಗಳಲ್ಲಿ ನಿರೂಪಿತವಾಗಿರುವ ಜಗತ್ತಾಯಿತು. ಇನ್ನು ಸಾಹಿತ್ಯೇತರ ಎಂದು ಕರೆಯಲಾಗುವ ಆಕರಗಳ ಮೂಲಕವೂ ಇದಕ್ಕಿಂತ ಭಿನ್ನವಾದ ಲೋಕ ವಿವರಗಳು ಸಿಗಲಾರವು. ಚಲನಶೀಲ ವಾಸ್ತವ ಹೀಗಿದ್ದಾಗಲೂ ‘ಕೋಮು ಸಹಬಾಳ್ವೆ, ಕೋಮು ಸೌಹಾರ್ದ ಇತ್ತು. ಇದೆ’ ಎಂಬ ತೀರ್ಮಾನ ಸರಳವಾಗಿಯೂ, ದುರ್ಬಲವಾಗಿಯೂ ಮತ್ತು ಯಾಂತ್ರಿಕವಾಗಿಯೂ ಕಾಣುತ್ತದೆ.

‘ಸಹಬಾಳ್ವೆ, ಸಾಮರಸ್ಯ ಮತ್ತು ಸೌಹಾರ್ದ’ ಇವು ಸಾಮಾಜಿಕವಾಗಿ ಇರುವ ವಾಸ್ತವಗಳು ಎನ್ನುವುದಕ್ಕಿಂತ ಹೆಚ್ಚಾಗಿ, ಅವು ಪರ್ಯಾಯ ಎಂಬ ಆಶಯದಿಂದ ಬಂದಂತೆ ಕಾಣುತ್ತಿದೆ. ಈ ಪೂರ್ವ ಅಪೇಕ್ಷೆಗಳ ಮೂಲಕ ಏನು ಆಗಬೇಕು ಎಂಬುದನ್ನು ವಿವರಿಸಿ ಸಮರ್ಥಿಸಲಾಗುತ್ತದೆ. ಈ ಸಮರ್ಥನೆಗೆ ವರ್ತಮಾನದಿಂದ ಹಾಗೂ ಪರಂಪರೆಯಿಂದ ಕೆಲವು ಆಕರಗಳನ್ನು/ಉದಾಹರಣೆಗಳನ್ನು ಕೊಡಲಾಗುತ್ತದೆ. ಅಂದರೆ ವಾಸ್ತವ (‘ಸಹಬಾಳ್ವೆ, ಸಾಮರಸ್ಯ ಮತ್ತು ಸೌಹಾರ್ದ’ ಇವುಗಳನ್ನು ಆಕರಗಳಲ್ಲಿ/ ಉದಾಹರಣೆಗಳಲ್ಲಿ ಗುರುತಿಸಲಾಗುತ್ತಿದೆಯೊ ಅಥವಾ ಪೂರ್ವ ತೀರ್ಮಾನದ ಚೌಕಟ್ಟುಗಳಲ್ಲಿ ನಿರ್ಧರಿಸಲಾಗುತ್ತಿದೆಯೊ ಎಂಬ ಪ್ರಶ್ನೆಯನ್ನು ಕೇಳಬೇಕಾಗಿದೆ. ಸಧ್ಯಕ್ಕೆ ಯಾವುದು ಬೇಕು ಎಂಬ ಆಶಯವನ್ನೆ ಅದು ಇತ್ತು, ಇದೆ ಎಂದು ವಿವರಿಸಲಾಗುತ್ತಿದೆ.

‘ಕೋಮು’ ಎಂಬುದರ ಚರ್ಚೆಗಳು ‘ಹಿಂದೂ-ಮುಸ್ಲಿಂ’ ಎಂಬ ಎರಡು ಪೂರ್ವ ನಿರ್ಧಾರಿತ ಚೌಕಟ್ಟುಗಳಲ್ಲಿ ನಡೆಯುತ್ತಿವೆ. ಕೆಲವು ಚಿಂತನೆಗಳು ಕೇವಲ ‘ಹಿಂದೂ ಮೂಲಭೂತವಾದ’ ವನ್ನು ಮಾತ್ರ ಗುರಿಯಾಗಿಸಿಕೊಂಡಿದ್ದರೆ, ಮತ್ತೆ ಕೆಲವು ಚಿಂತನೆಗಳು ‘ಹಿಂದೂ-ಮುಸ್ಲಿಂ’ ಈ ಎರಡೂ ಮೂಲಭೂತವಾದಗಳನ್ನು ಗುರಿಯಾಗಿಸಿಕೊಂಡಿವೆ. ‘ಹಿಂದೂ’ ಎಂಬುದು ಒಂದು ಕಲ್ಪಿತ ಸ್ಥಿತಿಯಾಗಿದ್ದು, ಅದು ಮೂರ್ತರೂಪಕ್ಕೆ ಸರಳವಾಗಿ ಸಿಗುತ್ತಿಲ್ಲ. ಹಾಗಾಗಿ ಅದನ್ನು ಕೆಲವು ಕಡೆ ಸರಳೀಕರಿಸಿ, ಬ್ರಾಹ್ಮಣಶಾಹಿ, ವೈದಿಕಶಾಹಿ, ಪುರೋಹಿತಶಾಹಿ ಎಂದೂ ವಿವರಿಸಿಕೊಳ್ಳಲಾಗುತ್ತಿದೆ. ಈ ಎರಡರ ಮುಖಾಮುಖಿಯಲ್ಲಿ ಈ ಎರಡೂ ಕೋಮುಗಳಲ್ಲದ ವಿವಿಧ ಜನಸಮುದಾಯಗಳ ಪ್ರಸ್ತಾಪ ಆಗುತ್ತಿಲ್ಲ. ಸಾಮಾಜಿಕ ಚಲನಶೀಲತೆಯ ಸಂಕೀರ್ಣ ಸ್ವರೂಪ ಮತ್ತು ಸ್ವಭಾವ ಹೀಗೆ ಎಂದರೆ ಒಂದಲ್ಲ ಬಿಚ್ಚಿಡಲು ಹೋದರೆ ಮತ್ತೊಂದನ್ನು ಮುಚ್ಚಿಟ್ಟಂತೆ ಆಗುತ್ತಿದೆ. ಆಗ ಹಂಗರವಳ್ಳಿ, ಬದನವಾಳು, ಕಂಬಾಲಪಲ್ಲಿ, ಸವಣೂರು ಮುಂತಾದುವು ಚರ್ಚೆಯ ಪ್ರಜ್ಞೆಯ ಭಾಗವಾಗುವುದಿಲ್ಲ. ‘ಹಿಂದೂ ಕೋಮುವಾದ’ದ ವಿರೋಧದ ಭರಾಟೆಯಲ್ಲಿ ಅವು ಅಸ್ಪೃಶ್ಯವೆನಿಸಿ, ಅಂಚೆಗೆ ಹೋಗುತ್ತವೆ.

‘ಕೋಮುವಾದ’ ಎಂಬುದು ಜನಜೀವನದ ಇಡಿಯಾದ ವಸ್ತುಸ್ಥಿತಿಯೊ, ವಸ್ತುಸ್ಥಿತಿಯ ಒಂದು ಭಾಗವೊ, ಒಂದು ಆಲೋಚನೆಯೊ, ಒಂದು ಧೋರಣೆಯೊ, ಯಾವುದು ಎಂಬುದರ ಬಗೆಗೆ ಗೊಂದಲಗಳಿವೆ. ಅವು ಹಾಗೆ ಮುಂದುವರಿದಿವೆ. ೯೦ರ ದಶಕದ ನಂತರ ಈ ಬಗೆಗೆ ಹೆಚ್ಚು ಆಸಕ್ತಿ ಹಾಗೂ ಚರ್ಚೆಗಳು ನಡೆಯುತ್ತಿವೆ. ಸಾಮ್ರಾಜ್ಯಶಾಹಿಯ ಜಾಗತೀಕರಣ ನೀತಿಗಳನ್ನು ಜಾರಿ ಮಾಡಿದ್ದಕ್ಕೂ ಮತ್ತು ಕೋಮು ಗಲಭೆ, ಕೋಮು ಸಮಸ್ಯೆ ಹಾಗೂ ಆ ಕುರಿತ ಚರ್ಚೆಗಳಿಗೂ ರಾಜಕೀಯವಾಗಿ ಮತ್ತು ಚಾರಿತ್ರಿಕವಾಗಿ ಕೆಲವು ಸಂಬಂಧಗಳಿವೆ. ‘ಕೋಮುವಾದ’ ಎಂಬುದು ಕೇವಲ ಮತಧರ್ಮಗಳನ್ನು ಆಧರಿಸಿಲ್ಲ. ಬದಲಾಗಿ ಅದು ಅಂತರರಾಷ್ಟ್ರೀಯ ಮಾರುಕಟ್ಟೆಯ ನೇರ ಸಂಬಂಧಗಳನ್ನು ಹೊಂದಿದೆ. ೧೯೯೨ ರಲ್ಲಿ ಬಾಬರಿ ಮಸೀದಿಯನ್ನು ಧ್ವಂಸ ಮಾಡಿದ್ದಕ್ಕೂ ಮತ್ತು ಸಾಮ್ರಾಜ್ಯಶಾಹಿಯ ಸುಲಿಗೆಕೋರ ನೀತಿಗಳನ್ನು ಜಾರಿ ಮಾಡಿದ್ದಕ್ಕೂ ಇರುವ ಸಂಬಂಧಗಳನ್ನು ಈ ಹಿನ್ನೆಲೆಯಲ್ಲೆ ಅರ್ಥಮಾಡಿಕೊಳ್ಳಬೇಕು. ಜಾಗತಿಕ ಮಾರುಕಟ್ಟೆಯು ಕೋಮುವಾದವನ್ನು ಪ್ರಚೋದಿಸುತ್ತ, ಬೆಳೆಸುತ್ತ, ವಿಸ್ತರಿಸುತ್ತ ತಾನು ಬೆಳೆಯುತ್ತಿದೆ; ವಿಸ್ತಾರವಾಗುತ್ತಿದೆ. ಅದೇ ರೀತಿಯಲ್ಲಿ ಕೋಮುವಾದವು ತಾನು ಬೆಳೆಯುತ್ತ, ವಿಸ್ತಾರವಾಗುತ್ತ ಜಾಗತಿಕ ಮಾರುಕಟ್ಟೆಯನ್ನು ಬೆಳೆಸುತ್ತಿದೆ. ಸೃಜನಶೀಲ ಇಲ್ಲವೆ ವೈಚಾರಿಕ ಸಾಹಿತ್ಯಗಳು ಈ ಪ್ರಕ್ರಿಯೆಯ ಸ್ವರೂಪವನ್ನು ಹೇಗೆ ಗ್ರಹಿಸುತ್ತಿವೆ, ಹೇಗೆ ಅಭಿವ್ಯಕ್ತಿಸುತ್ತಿವೆ ಎಂದು ಆಲೋಚಿಸುವುದಕ್ಕೆ ಸಾಹಿತ್ಯ ಸಂಶೋಧನೆಯಲ್ಲಿ ಆಯಾಮವನ್ನು ಸೃಷ್ಟಿಮಾಡಿಕೊಳ್ಳಬೇಕಾಗಿದೆ. ‘ಕೋಮುವಾದ’ವನ್ನು ಮಾಧ್ಯಮಗಳು ಬಿಂಬಿಸಲು ಯಾವೆಲ್ಲ ಪ್ರಚೋದನೆ, ತಂತ್ರ, ವಿಧಾನಗಳನ್ನು ಬಳಸುತ್ತಿವೆ ಎಂಬುದರ ಕಡೆಗೆ ಗಮನ ಕೊಡಬೇಕಾಗಿದೆ. ಇದಕ್ಕೆ ಮಾಧ್ಯಮಗಳು ಸೃಷ್ಟಿಮಾಡುತ್ತಿರುವ ಪದಗಳು, ಪರಿಭಾಷೆಗಳು, ಅದನ್ನು ಗ್ರಹಿಸುತ್ತಿರುವ ಕ್ರಮಗಳು ಸಾಹಿತ್ಯ ರಚನೆ ಹಾಗೂ ಸಂಶೋಧನೆಗಳ ಮೇಲೆ ಯಾವ ಪರಿಣಾಮವನ್ನು ಉಂಟುಮಾಡಿವೆ ಎಂಬುದನ್ನು ಚರ್ಚಿಸಬೇಕಾಗಿದೆ. ನಡೆದ ಘಟನೆಗಳಿಗೆ ಮಾಧ್ಯಮಗಳು ಯಾವ ಭಾಷಿಕ ರೂಪಗಳನ್ನು ಕೊಡುತ್ತಿವೆ? ಆ ಮೂಲಕ ಸಾಮಾಜಿಕ ಗ್ರಹಿಕೆಯ ಸ್ವಭಾವಗಳನ್ನು ಹೇಗೆ ರೂಪಿಸುತ್ತಿವೆ ಎಂಬುದು ಆಸಕ್ತಿಯ ವಿಷಯ. ಈ ಗ್ರಹಿಕೆಗಳಿಂದ ಸಾಹಿತ್ಯ ಗ್ರಹಿಕೆ ಹಾಗೂ ಅಭಿವ್ಯಕ್ತಿಯ ಸವಾಲುಗಳು ಹಾಗೂ ಸಾಧ್ಯತೆಗಳು ಯಾವುವಾಗಿವೆ ಎಂಬುದೂ ಕೂಡ ಚರ್ಚೆ ಮಾಡಬೇಕಾದ ಸಂಗತಿ.