ಸಾಹಿತ್ಯ ಸಂಶೋಧನೆಯಲ್ಲಿ ಜಾಗತೀಕರಣದ ಪ್ರಸ್ತಾಪ ಮತ್ತು ಚರ್ಚೆ ನಡೆಯುತ್ತಿದೆ. ಜಾಗತೀಕರನವನ್ನು ಒಂದು ಸ್ವತಂತ್ರವಾದ ಆರ್ಥಿಕ ವಿದ್ಯಮಾನವೆಂದೂ, ಅದು ಭಾರತದ ಆರ್ಥಿಕತೆ ಮತ್ತು ಸಂಸ್ಕೃತಿಯ ಮೇಲೆ ದಾಳಿ ಮಾಡುತ್ತಿದೆ ಎಂದೂ ಪರಿಭಾವಿಸಲಾಗಿದೆ. ಆರ್ಥಿಕ ವಿದ್ಯಮಾನ ಮತ್ತು ಸಂಸ್ಕೃತಿಯ ಮೇಲಿನ ದಾಳಿ ಇವುಗಳಿಂದ ಸಾಹಿತ್ಯದ ಮೇಲೆ ಉಂಟಾಗಿರುವ ಪರಿಣಾಮಗಳನ್ನೂ, ಕೆಲವು ಪರ್ಯಾಯಗಳನ್ನೂ ಕುರಿತು ಚರ್ಚೆ ಮಾಡಲಾಗಿದೆ. ಇಂತಹ ಚರ್ಚೆಗಳು ಜಾಗತೀಕರಣವನ್ನು ಕಳೆದ ಶತಮಾನದ ೯೦ರ ದಶಕದ ವಿದ್ಯಮಾನವೆಂದು ಪರಿಗಣಿಸಿವೆ.

ಜಾಗತೀಕರಣವು ೯೦ರ ದಶಕದ ಸ್ವತಂತ್ರವಾದ ಆರ್ಥಿಕ ವಿದ್ಯಮಾನವೆಂದು ಪರಿಗಣಿಸಿರುವುದನ್ನು ಚರ್ಚಿಸಬೇಕಾಗಿದೆ. ಎರಡನೇ ಪ್ರಪಂಚ ಯುದ್ಧ ಸಂದರ್ಭದಲ್ಲಿ ಸಾಮ್ರಾಜ್ಯಶಾಹಿಗೆ ಎದುರಾದ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಲು ಅದು ಕೆಲವು ತಂತ್ರಗಳನ್ನು ಸೃಷ್ಟಿಸಿಕೊಂಡಿತು. ಅಂತಹ ತಂತ್ರಗಳಲ್ಲಿ ಮುಖ್ಯವಾದುದು ಅಧಿಕಾರವನ್ನು ಆಯಾ ವಸಾಹತು ದೇಶಗಳ ಊಳಿಗಮಾನ್ಯಶಾಹಿಗಳಿಗೆ ಮತ್ತು ಬಂಡವಾಳಶಾಹಿಗಳಿಗೆ ವಹಿಸುವುದು. ಹಾಗಾಗಿಯೇ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡದ ಬರ್ಮಾ ದೇಶಕ್ಕೂ ಅಧಿಕಾರ ಹಸ್ತಾಂತರ ಮಾಡಲಾಯಿತು. ಇದರ ಭಾಗವಾಗಿ ವಸಾಹತು ದೇಶಗಳಿಗೆ ಅಭಿವೃದ್ಧಿಯ ಹೆಸರಿನಲ್ಲಿ ಧನಸಹಾಯ ಮಾಡುವುದು. ಈ ಎರಡೂ ಒಂದಕ್ಕೊಂದು ಪೂರಕವಾಗಿದ್ದವು. ಅದಕ್ಕಾಗಿ ಐ.ಎಂ.ಎಫ್., ವಿಶ್ವಬ್ಯಾಂಕ್ ಮತ್ತು ಗ್ಯಾಟ್‌ಗಳನ್ನು ತೆರೆಯಲಾಯಿತು. ಇವುಗಳ ಮೂಲಕ ವಸಾಹತು ದೇಶಗಳನ್ನು ‘ಅಭಿವೃದ್ಧಿ ಮಾಡಲು’ ಧನ ಸಹಾಯ ಕೊಡುವುದನ್ನು ಆರಂಭಿಸಲಾಯಿತು. ಜೊತೆಗೆ ‘ಅಭಿವೃದ್ಧಿ’ಯ ಮಾದರಿಗಳ ಯೋಜನೆಗಳನ್ನು ರೂಪಿಸಿ ವಸಾಹತು ದೇಶಗಳಿಗೆ ರವಾನಿಸಲಾಯಿತು. ಪರಿಣಾಮವಾಗಿ ಅಧಿಕಾರ ಹಸ್ತಾಂತರದ ನಂತರ ಭಾರತದ ‘ಅಭಿವೃದ್ಧಿ ಮಾದರಿ’ ಮತ್ತು ಆರ್ಥಿಕ ಯೋಜನೆಗಳನ್ನು ವಿಶ್ವಬ್ಯಾಂಕ್ ಮತ್ತು ಐ.ಎಂ.ಎಫ್‌.ಗಳು ನೇರವಾಗಿ ರೂಪಿಸತೊಡಗಿದವು ಹಾಗೂ ನಿಯಂತ್ರಿಸತೊಡಗಿದವು. ಇದು ಕೇವಲ ಆರ್ಥಿಕ ಕಾರ್ಯಕ್ರಮವಾಗಿರಲಿಲ್ಲ. ಬದಲಾಗಿ ಇದು ರಾಜಕೀಯ ಕಾರ್ಯಕ್ರಮವಾಗಿತ್ತು. ಸಾಮ್ರಾಜ್ಯಶಾಹಿಗಳು ಅಮೇರಿಕಾದ ಶ್ವೇತಭವನದಲ್ಲಿ ಕೂತು ದೆಹಲಿ ರಾಜಕೀಯವನ್ನು ನೇರವಾಗಿ ನಿಯಂತ್ರಿಸತೊಡಗಿದರು. ೧೯೪೫ರ ಚರ್ಚಿಲ್ ಅಗ್ರಿಮೆಂಟ್ ಮತ್ತು ಬ್ರಿಟನ್‌ವುಡ್ ಅಗ್ರಿಮೆಂಟ್ ಇವುಗಳ ಪ್ರಕಾರ ಭಾರತದ ಆಳುವ ವರ್ಗಕ್ಕೆ ಇದರಿಂದ ಹೊರಬರಲು ಆಗಲಿಲ್ಲ.

ಕಳೆದ ಶತಮಾನದ ೬೦ರ ದಶಕದ ನಂತರ ಭಾರತದ ಕೃಷಿ ರಂಗವನ್ನು ಸಾಮ್ರಾಜ್ಯ ಶಾಹಿ ಮಾರುಕಟ್ಟೆಯ ಷರತ್ತು ಮತ್ತು ಹಿತಾಸಕ್ತಿಗೆ ಅನುಗುಣವಾಗಿ ಔದ್ಯಮೀಕರಿಸಲಾಯಿತು. ಅದಕ್ಕೂ ಮೊದಲು ಕೈಗಾರಿಕಾ ವಲಯವು ಕೃಷಿ ವಲಯವನ್ನು ತನ್ನ ಕಚ್ಛಾ ಸರಕು ಮುಂತಾದುವುಗಳಿಗಾಗಿ ಅವಲಂಬಿಸಿತ್ತು. ಅನಂತರ ಕೃಷಿ ವಲಯವು ಉತ್ಪಾದನ ಯಂತ್ರಗಳು, ಬೀಜ, ಗೊಬ್ಬರ, ರಾಸಾಯನಿಕಗಳಿಗೆ ಸಂಬಂಧಿಸಿದಂತೆ ಕೈಗಾರಿಕಾ ವಲಯವನ್ನು ಅವಲಂಬಿಸಬೇಕಾಯಿತು. ಕೃಷಿ ಉತ್ಪಾದನೆಯಲ್ಲಿ ಯಂತ್ರಗಳ ಬಳಕೆ, ಬೀಜ ಗೊಬ್ಬರ ಮತ್ತು ರಾಸಾಯನಿಕಗಳ ಬಳಕೆಯನ್ನು ನಯವಾದ ದಬ್ಬಾಳಿಕೆಯ ಮೂಲಕವೇ ಜಾರಿಗೊಳಿಸಲಾಯಿತು. ನಂತರ ‘ಇವುಗಳ ಬಳಕೆಯಿಲ್ಲದೆ ಕೃಷಿ ಉತ್ಪಾದನೆ ನಡೆಯುವುದಿಲ್ಲ’ ಎಂಬಂತಹ ಪರಿಸ್ಥಿತಿಯನ್ನು ಬಲಾತ್ಕಾರವಾಗಿ ನಿರ್ಮಾಣ ಮಾಡಲಾಯಿತು.  ಭೂಮಾಲೀಕರು ಮತ್ತು ರೈತರಿಗೆ ಇದರಲ್ಲಿ ಯಾವ ಆಯ್ಕೆಗಳೂ ಇರಲಿಲ್ಲ. ಅವರು ಸಾಮ್ರಾಜ್ಯಶಾಹಿಯ ಮಾರುಕಟ್ಟೆಯ ಆಯ್ಕೆಯನ್ನೆ ತಮ್ಮ ಆಯ್ಕೆ ಎಂದು ಭಾವಿಸುವಂತೆ, ನಂಬುವಂತೆ ಮಾಡಲಾಯಿತು. ಪರಿಣಾಮವಾಗಿ ಆಹಾರ ಬೆಳೆಗಳ ಬದಲು ಹಣಕಾಸಿನ ಬೆಳೆಗಳನ್ನು ಬೆಳೆಯಲೇಬೇಕಾದ ಒತ್ತಡ ಮತ್ತು ಅನಿವಾರ್ಯತೆಯನ್ನು ನಿರ್ಮಾಣ ಮಾಡಲಾಯಿತು. ಕೃಷಿ ಉತ್ಪಾದನೆಯ ಉತ್ಪಾದನಾ ವೆಚ್ಚಕ್ಕೆ ಬ್ಯಾಂಕುಗಳ ಮೂಲಕ ಸಾಲ ಕೊಡುವ ಯೋಜನೆಗಳನ್ನು ಜಾರಿಗೊಳಿಸಲಾಯಿತು. ಭೂಮಾಲೀಕರು ಮತ್ತು ರೈತರು ಬ್ಯಾಂಕುಗಳ ಸಾಲದ ಮೇಲೆ ಅವಲಂಬಿತರಾಗುವಂತೆ ಮಾಡಲಾಯಿತು. ಪರಿಣಾಮವಾಗಿ ಬ್ಯಾಂಕುಗಳ ಪ್ರಮಾಣವು ಹೆಚ್ಚಾಗತೊಡಗಿತು. ಆಕಾಶವಾಣಿಯ ಮೂಲಕ ‘ರೈತರಿಗೆ ಸಲಹೆ’ ಕಾರ್ಯಕ್ರಮವನ್ನು ವ್ಯಾಪಕವಾಗಿ ಬಿತ್ತರಿಸಲಾಯಿತು. ಕೃಷಿ ಉತ್ಪಾದನೆಯ ಚಟುವಟಿಕೆಗಳನ್ನು ಮತ್ತು ಕೃಷಿ ಉತ್ಪಾದನೆಯ ವಿಧಾನಗಳನ್ನು ಕೈಗಾರಿಕ ಉತ್ಪಾದನೆಯ ಮಾದರಿಗೆ ಪರಿವರ್ತಿಸಲು ಪ್ರಯತ್ನಿಸಲಾಯಿತು. ಅಂದರೆ ಕೃಷಿ ಉತ್ಪಾದನೆಗೆ ಯಂತ್ರಗಳನ್ನು ಬಳಸುವಂತೆಯೂ, ರಸಗೊಬ್ಬರ ಹಾಗೂ ರಾಸಾಯನಿಕಗಳನ್ನು ಬಳಸುವಂತೆಯೂ ಪ್ರಚೋದಿಸಲಾಯಿತು. ಯಾವುದನ್ನು ಬಳಸಿದರೆ ಹೆಚ್ಚು ‘ಇಳುವರಿ’ ಎಂಬುದನ್ನು ಭೂಮಾಲೀಕರ ಮತ್ತು ರೈತರ ಪ್ರಜ್ಞೆಗೆ ತುಂಬಲಾಯಿತು. ಅದು ರೈತರದೇ ಆಯ್ಕೆ ಎನ್ನುವಂತೆ ಮಾಡಲಾಯಿತು.

೮೦ರ ದಶಕದಲ್ಲಿ ಭಾರತದ ಕೃಷಿ, ಕೈಗಾರಿಕೆ, ಆಡಳಿತ, ಶಿಕ್ಷಣ, ವೈಚಾರಿಕ ಮತ್ತು ಅಕಡೆಮಿಕ್ ವಲಯದಲ್ಲಿ ‘ಹೊಸ’ ಎಂಬ ಮಂತ್ರೋಪದೇಶವನ್ನು ಜಾರಿ ಮಾಡಲಾಯಿತು. ‘ಹೊಸ ಕೃಷಿ ನೀತಿ’, ‘ಹೊಸ ಕೈಗಾರಿಕಾ ನೀತಿ’, ‘ಹೊಸ ಶಿಕ್ಷಣ ನೀತಿ’ ಮುಂತಾದುವುಗಳನ್ನು ‘ಅಭಿವೃದ್ಧಿ’ಯ ಹೆಸರಿನಲ್ಲಿ ನಯವಾದ ವಿಧಾನಗಳಲ್ಲಿ ಜಾರಿಗೊಳಿಸಲಾಯಿತು. ಹೈನುಗಾರಿಕೆ, ಮೀನುಗಾರಿಕೆ, ಪುಷ್ಪೋದ್ಯಮ ಮುಂತಾದ ಉತ್ಪಾದನ ವಿಭಾಗಗಳನ್ನು ರೂಪಿಸಲಾಯಿತು. ಇವುಗಳಿಗೆ ವಿಶ್ವಬ್ಯಾಂಕ್ ಮತ್ತು ವಿದೇಶಿ ನೇರ ಹೂಡಿಕೆಗಳಿಂದ ಬಂಡವಾಳ ಹೂಡಲಾಯಿತು. ‘ಉಳುವವನೆ ಹೊಲದ ಒಡೆಯ’ (ಈ ಘೋಷಣೆಯನ್ನು ಕೊಟ್ಟಿದ್ದು ಕಾಗೋಡು ಸತ್ಯಾಗ್ರಹ ಅಲ್ಲ. ಈ ಘೋಷಣೆಯನ್ನು ೧೯೪೬ ರಿಂದ ೧೯೫೨ರ ವರೆಗೆ ಹೈದರಾಬಾದ್ ನಿಜಾಮನ ವಿರುದ್ಧ ರೈತರು ನಡೆಸಿದ ‘ವೀರ ತೆಲಂಗಾಣ ಸಶಸ್ತ್ರ ಹೋರಾಟ’ ಕೊಟ್ಟಿದ್ದು). ಎಂಬುದರ ಜಾಗದಲ್ಲಿ ‘ಬಂಡವಾಳ ಹೂಡುವವನೆ ಕೃಷಿ ಭೂಮಿಗೆ ಒಡೆಯ’ ಎಂಬಂತೆ ಪರಿವರ್ತಿಸಲಾಯಿತು. ಕಳೆದ ಶತಮಾನದ ೯೦ರ ದಶಕದಲ್ಲಿ ಜಾಗತೀಕರಣ, ಖಾಸಗೀಕರಣ, ಉದಾರೀಕರಣ ಮತ್ತು ಆಧುನೀಕರಣಗಳನ್ನು ಜಾರಿ ಮಾಡಲಾಯಿತು. ಇವು ಭಾರತದ ವಿವಿಧ ವಲಯಗಳ ಸಾಮಾನ್ಯ ಬೇಡಿಕೆಯೆ ಆಗಿತ್ತು ಎಂದು ಬಿಂಬಿಸಲು ಪ್ರಯತ್ನಿಸಲಾಯಿತು. ಇದಕ್ಕೆ ಕನಿಷ್ಠ ಎರಡು ದಶಕಗಳಿಂದ ಸಾಮಾಜಿಕ ಬುನಾದಿಯನ್ನು ರಚಿಸಲಾಗಿತ್ತು. ‘ಸಾರ್ವಜನಿಕ ವಲಯಗಳು ಕಷ್ಮಲೀಕರಣಗೊಂಡಿವೆ’ ಎಂದು ಜಾಹೀರಾತು ಮಾಡಲಾಯಿತು. ಸಾರ್ವಜನಿಕ ವಲಯಗಳ ಬಗ್ಗೆ ಜನರಿಗೆ ತಾತ್ಸಾರ, ಭಿನ್ನಮತ ಮತ್ತು ಅಸಹನೆ ಬರುವಂತಹ ವಾತಾವರಣವನ್ನು ನಿರ್ಮಾಣ ಮಾಡಲಾಯಿತು. ನಂತರ ಸಾರ್ವಜನಿಕ ವಲಯಗಳನ್ನು ಖಾಸಗೀಕರಣ ಮಾಡುವ ಪ್ರಕ್ರಿಯೆ ಶುರುವಾಯಿತು. ಜನರು ಖಾಸಗೀಕರಣದ ಪರವಾಗಿದ್ದಾರೆ ಎಂದು ಪ್ರಚಾರ ಮಾಡಲಾಯಿತು. ಅಕಡೆಮಿಕ್ ವಲಯದಲ್ಲಿ ಕೆಲವರು ಬುದ್ಧಿಜೀವಿಗಳನ್ನು ಈ ಕೆಲಸಕ್ಕೆ ಬಳಸಿಕೊಳ್ಳಲಾಯಿತು. ಈ ಬುದ್ಧಿಜೀವಿಗಳು ಭಾರತದ ಸಾಮಾನ್ಯ ರೈತರು, ವಿಶಾಲವಾದ ದುಡಿಯುವ ವರ್ಗಗಳಿಗೆ ಯಾವ ರಾಜಕೀಯ ಆರ್ಥಿಕ ದಬ್ಬಾಳಿಕೆ ಮತ್ತು ಲೂಟಿ ಶಾಪವಾಗಿತ್ತೊ, ಅದನ್ನು ವರ ಎಂದು ಬಣ್ಣಿಸತೊಡಗಿದರು. ಖಾಸಗೀಕರಣ ಮಾಡಿದ ವಲಯಗಳಲ್ಲಿ ವಿದೇಶಿ ನೇರ ಹೂಡಿಕೆಯನ್ನು ಹೂಡಲಾಯಿತು. ಆ ಮೂಲಕ ಹಣಕಾಸು ಬಂಡವಾಳ ಮತ್ತು ಏಕಸ್ವಾಮ್ಯ ಬಂಡವಾಳ ಬೆಳೆಯಿತು.

ಇದುವರೆಗಿನ ಸಂಕ್ಷಿಪ್ತ ಚರ್ಚೆಯಿಂದ ತಿಳಿಯುವುದು ಇಷ್ಟು. ಜಾಗತೀಕರಣವು ಕೇವಲ ೯೦ರ ದಶಕದಲ್ಲಿ ಜಾರಿ ಮಾಡಲಾದ ಕೇವಲ ಆರ್ಥಿಕ ಕಾರ್ಯಕ್ರಮವಾಗಿರಲಿಲ್ಲ. ಅದಕ್ಕೆ ಎರಡನೇ ಪ್ರಪಂಚ ಯುದ್ಧದ ನಂತರದಿಂದಲೂ ಬಹಳ ದೀರ್ಘವಾದ ಚರಿತ್ರೆ ಇದೆ. ಸಾಮ್ರಾಜ್ಯಶಾಹಿ ಲೂಟಿಯನ್ನು ‘ಅದು ಲೂಟಿ ಅಲ್ಲ’ ಎಂಬಂತೆ ಒಪ್ಪಿಕೊಳ್ಳುವಂತಹ ಸಾಮಾಜಿಕ ಪ್ರಜ್ಞೆಯನ್ನು ಕನಿಷ್ಠ ಎರಡು ದಶಕಗಳಿಂದ ರೂಪಿಸಲು ಸಾಮಾಜಿಕ ಬುನಾದಿಯನ್ನು ನಿರ್ಮಾಣ ಮಾಡಲಾಯಿತು. ಸಾಮ್ರಾಜ್ಯಶಾಹಿಯ ಶೋಷಣೆಯನ್ನು ‘ಶೋಷಣೆಯಲ್ಲ; ಸುಧಾರಣೆ ಮತ್ತು ಅಭಿವೃದ್ಧಿ’ ಎಂಬ ಹೆಸರಿನಲ್ಲಿ ಜಾರಿ ಮಾಡಲಾಯಿತು. ಈ ಹಿನ್ನೆಲೆಯಲ್ಲಿ ಜಾಗತೀಕರಣವು ಸ್ವತಂತ್ರವಾದ ಆರ್ಥಿಕ ಕಾರ್ಯಕ್ರಮವಲ್ಲ. ಬದಲಾಗಿ ಅದು ಸಾಮ್ರಾಜ್ಯಶಾಹಿಯ ಜಾಗತೀಕರಣ. ಹಾಗಾಗಿ ಜಾಗತೀಕರಣವನ್ನು ಒಂದು ಬಿಡಿಯಾದ ಆರ್ಥಿಕ ಕಾರ್ಯಕ್ರಮವೆಂದು ಪರಿಗಣಿಸಬಾರದು. ಅದು ಸಾಮ್ರಾಜ್ಯಶಾಹಿ ಶೋಷಣೆಯ ಮತ್ತು ದಬ್ಬಾಳಿಕೆಯ ಒಂದು ಭಾಗ. ಅದು ವಿಶಾಲವಾದ ಸಾಮಾಜಿಕ ಭಾವನೆಯಾಗಿ, ಮನೋಧರ್ಮವಾಗಿ, ಮಾರುಕಟ್ಟೆ ಜೀವನ ಶೈಲಿಯ ಪ್ರಜ್ಞೆಯಾಗಿ ಬರುತ್ತಿದೆ. ಇದರಲ್ಲಿ ಆಯ್ಕೆ ಮತ್ತು ನಿರಾಕರಣೆಗಳಿಗೆ ಅವಕಾಶವಿಲ್ಲದಂತೆ ಮಾಡಲಾಗಿದೆ.

ಎರಡನೇ ಸಾಮ್ರಾಜ್ಯಶಾಹಿ ಯುದ್ಧದ ನಂತರ ಸಾಮ್ರಾಜ್ಯಶಾಹಿಯು, ವಸಾಹತು ದೇಶಗಳ ವೈಚಾರಿಕ ವಲಯ ಮತ್ತು ಅಕಡೆಮಿಕ್ ವಲಯದ ಪ್ರಜ್ಞೆಯನ್ನು ತನ್ನ ಹಿತಾಸಕ್ತಿಗೆ ಪೂರಕವಾಗಿ ಮಾರ್ಪಡಿಸಲು ನಿರಂತರವಾಗಿ ಪ್ರಯತ್ನಿಸುತ್ತಲೆ ಬಂತು. ಸಾಮ್ರಾಜ್ಯಶಾಹಿಯ ಅಕಡೆಮಿಕ್ ಶಿಬಿರ ಇದಕ್ಕೆ ತರಾವರಿ ಯೋಜನೆಗಳನ್ನು ಹಾಕಿಕೊಂಡಿತು. ಅದು ವಸಾಹತು ದೇಶಗಳ ಅಥವಾ ‘ಹಿಂದುಳಿದ ದೇಶಗಳ’ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಅಧ್ಯಯನ ಮಾಡಲು ಒಂದು ಕಡೆ ಧನ ಸಹಾಯವನ್ನೂ ಮತ್ತೊಂದು ಕಡೆ ‘ಅಂತರ ರಾಷ್ಟ್ರೀಯ ಫೆಲೊಶಿಪ್‌’ ಅನ್ನು ಕೊಡುವ ಯೋಜನೆಗಳನ್ನು ಹಾಕಿಕೊಂಡಿತು. ಆ ಮೂಲಕ ಸಾಹಿತ್ಯ ಹಾಗೂ ಸಾಂಸ್ಕೃತಿಕ ವಲಯದಲ್ಲಿ ಸಾಮ್ರಾಜ್ಯ ಶಾಹಿಯ ಪರವಾದ ಆಲೋಚನೆಯನ್ನು ರೂಪಿಸಲು ಪ್ರಯತ್ನಿಸಲಾಯಿತು. ಎರಡನೇ ಸಾಮ್ರಾಜ್ಯ ಶಾಹಿ ಯುದ್ಧದ ನಂತರ ಸಾಮ್ರಾಜ್ಯಶಾಹಿ ಹೊಸ ಬಗೆಯ ಲೂಟಿಗೆ ತಂತ್ರಗಳನ್ನು, ವಿಧಾನಗಳನ್ನು ಹುಡುಕತೊಡಗಿತು. ಅವುಗಳನ್ನು ಹೆಚ್ಚು ಹರಿತಗೊಳಿಸಿ, ಸೂಕ್ಷ್ಮಗೊಳಿಸತೊಡಗಿತು. ದುರಂತವೆಂದರೆ ಈ ಚಾರಿತ್ರಿಕ ಬೆಳವಣಿಗೆಯನ್ನು ‘ರಾಷ್ಟ್ರೀಯ’ ಮತ್ತು ‘ಅಂತರ ರಾಷ್ಟ್ರೀಯ ಮಟ್ಟ’ದಲ್ಲಿ ಕೆಲವು ಬುದ್ಧಿ ಧಾನಗಳಿಗೆ ವಿಕೃತವಾಗಿ ಬಳಸಿಕೊಳ್ಳಲು ಮುಂದಾಯಿತು. ಅಸ್ಪೃಶ್ಯ ಜಾತಿಗಳು, ಕೆಳಜಾತಿಗಳು, ಆದಿವಾಸಿ ಮತ್ತು ಬುಡಕಟ್ಟು ಜನರು ‘ಮುಖ್ಯವಾಹಿನಿಗೆ ಬರಬೇಕು’ ಎಂಬ ಘೋಷಣೆಯನ್ನು ಹೊರಡಿಸಲಾಯಿತು. ಅದಕ್ಕೆ ಅವರು ಆಧುನಿಕತೆಗೆ ತೆರೆದುಕೊಳ್ಳಬೇಕು. ಜಾಗತೀಕರಣ, ಖಾಸಗೀಕರಣ, ಉದಾರೀಕರಣ ಮತ್ತು ಆಧುನೀಕರಣ ನೀತಿಗಳು ಈ ಸಮುದಾಯಗಳನ್ನು ‘ಮುಖ್ಯ ವಾಹಿನಿಗೆ ತರುತ್ತವೆ’ ಎಂದೂ, ಜೊತೆಗೆ ‘ಈ ನೀತಿಗಳೆಲ್ಲವೂ ಭಾರತದಲ್ಲಿ ಹಿಂದುಳಿದಿರುವ ಸಮುದಾಯಗಳನ್ನು ಮೇಲೆತ್ತುವ ಏಕೈಕ ಗುರಿ ಹೊಂದಿವೆ’ ಎಂದೂ ವಿಚಾರಗಳನ್ನು ಹರಡಲಾಯಿತು. ‘ಈ ವಿಚಾರಗಳು ನಿಜವಿದ್ದರೂ ಇರಬಹುದು, ಇಲ್ಲ ಈ ವಿಚಾರಗಳು ಮಾತ್ರವೇ ನಿಜವಿರುವಂತಹವು’ ಎಂದು ಕೆಲವರು ಬುದ್ಧಿಜೀವಿಗಳು ಈ ಕುಟಿಲ ವಿಚಾರಗಳನ್ನು ಪ್ರಶ್ನಾತೀತವಾಗಿ ನಂಬಿದರು. ಪರಿಣಾಮವಾಗಿ ತಮ್ಮದಲ್ಲದ ಸಾಮ್ರಾಜ್ಯಶಾಹಿಯ ಈ ಧೋರಣೆಯನ್ನೆ ಅಕಡೆಮಿಕ್ ವಲಯದಲ್ಲಿ ತಮ್ಮ ಧೋರಣೆಯೆಂದು ಭಾವಿಸಿ, ಸಾಮ್ರಾಜ್ಯಶಾಹಿಯ ವಿಚಾರಗಳಿಗೆ ಅಭಿವ್ಯಕ್ತಿ ನೀಡಿದರು. ‘ಜಾಗತೀಕರಣವು ಹಿಂದುಳಿದ, ಜಾತಿ, ವರ್ಗಗಳನ್ನು ಮುಖ್ಯವಾಹಿನಿಗೆ ಕೊಂಡೊಯುತ್ತದೆ. ಅಲ್ಲಿ ಅವರ ಬಿಡುಗಡೆ ಇದೆ’ ಎಂಬ ಅಭಿಪ್ರಾಯಗಳು ಮಂಡನೆಯಾಗತೊಡಗಿದವು. ಬೌದ್ಧಿಕ ವಲಯದ ಒಂದು ವಿಭಾಗದ ಮೂಲಕ ತನ್ನ ಶೋಷಣೆಯ ವಿಧಾನ ಮತ್ತು ತಂತ್ರಗಳಿಗೆ ಸಮರ್ಥನೆಯನ್ನು ಒದಗಿಸಿಕೊಳ್ಳುವುದು ಸಾಮ್ರಾಜ್ಯಶಾಹಿಯ ಉದ್ದೇಶವಾಗಿತ್ತು. ಈ ಉದ್ದೇಶಕ್ಕೆ ಎಲ್ಲಾ ಬಗೆಯ ಮಾಧ್ಯಮಗಳನ್ನೂ, ಎನ್.ಜಿ.ಓ.ಗಳನ್ನೂ, ಸಾಹಿತ್ಯ, ಸಾಂಸ್ಕೃತಿಕ ವಲಯದ ಒಂದು ಭಾಗವನ್ನೂ, ಬುದ್ಧಿಜೀವಿಗಳ ಒಂದು ವಿಭಾಗವನ್ನೂ ಬಳಸಿಕೊಂಡಿತು. ಪರಿಣಾಮವಾಗಿ ವೈಚಾರಿಕ ಮತ್ತು ಸಂಶೋಧನ ವಲಯದಲ್ಲಿ ಒಂದೇ ಸಮನೆ ಜಾಗತೀಕರಣದ ಸಮರ್ಥನೆ ನಡೆಯತೊಡಗಿತು.

ಒಂದು ಕಡೆ ಅಕಡೆಮಿಕ್ ವಲಯದಲ್ಲಿ ಜಾಗತೀಕರಣದ ಸಮರ್ಥನೆಯ ಸಂಭ್ರಮದಿಂದ ನಡೆಯತೊಡಗಿತು. ಮತ್ತೊಂದು ಕಡೆ ಭಾರತದ ಶ್ರೀಮಂತ ಸಂಪನ್ಮೂಲಗಳನ್ನು ನೇರವಾಗಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಸಾಮ್ರಾಜ್ಯಶಾಹಿಯು ಮುಂದಾಯಿತು. ಪರಿಣಾಮವಾಗಿ ರಾಷ್ಟ್ರೀಯ ಉದ್ಯಾನವನಗಳು, ವಿಶೇಷ ಆರ್ಥಿಕ ವಲಯಗಳು ಮುಂತಾದ ಯೋಜನೆಗಳನ್ನು ಜಾರಿಗೊಳಿಸಲಾಯಿತು. ಚುನಾವಣೆಯ ಸಂದರ್ಭದಲ್ಲಿ ಮತ ಹಾಕಿಸಿಕೊಳ್ಳುವಾಗ ‘ಮತ ಚಲಾಯಿಸುವುದು ನಿಮ್ಮ ಹಕ್ಕು’ ಎಂದು ತನ್ನ ಸಮರ್ಥನೆಗೆ ಆದಿವಾಸಿ, ಬುಡಕಟ್ಟು ಜನರನ್ನು ಬಳಸಿಕೊಳ್ಳುವ ಪ್ರಭುತ್ವವು, ರಾಷ್ಟ್ರೀಯ ಉದ್ಯಾನವನ ಮತ್ತು ವಿಶೇಷ ಆರ್ಥಿಕ ವಲಯಗಳನ್ನು ಜಾರಿಗೊಳಿಸುವಾಗ ಅದೇ ಆದಿವಾಸಿ ಹಾಗೂ ಬುಡಕಟ್ಟು ಜನರನ್ನು ‘ನಿಮಗೆ ಅಲ್ಲಿ ವಾಸ ಮಾಡಲು ಹಕ್ಕು ಇಲ್ಲ’ ಎಂದು ಕ್ರೂರವಾಗಿ ಸ್ಥಳಾಂತರಿಸಲು ಮುಂದಾಗಿದೆ. ಇಂತಹ ಸಂಕೀರ್ಣ ಪರಿಸ್ಥಿತಿಯಲ್ಲಿ ಆದಿವಾಸಿ, ಬುಡಕಟ್ಟು ಜನರ ಅಸ್ತಿತ್ವವನ್ನೇ ಪ್ರಭುತ್ವ ಕ್ರೂರವಾಗಿ ಅಲ್ಲಗಳೆಯುತ್ತಿದ್ದರೆ, ಮತ್ತೊಂದು ಕಡೆ ಇದು ಗೊತ್ತಿದ್ದೂ ಕೂಡ ಅದೇ ‘ಆದಿವಾಸಿ ಬುಡಕಟ್ಟು ಜನರ ಕಲೆ, ಸಾಹಿತ್ಯ ಉಳಿಯಬೇಕು, ಅವರು ಮುಖ್ಯವಾಹಿನಿಗೆ ಬರಬೇಕು’ ಎಂಬ ಆಲೋಚನೆಗಳು ಅಕಡೆಮಿಕ್ ವಲಯದಲ್ಲಿ ಕ್ರಿಯಾಶೀಲವಾಗಿವೆ.

ಸಾಮ್ರಾಜ್ಯಶಾಹಿಯ ಜಾಗತೀಕರಣವು ಕೇವಲ ಒಂದು ಬಿಡಿಯಾದ ಆರ್ಥಿಕ ಕಾರ್ಯಕ್ರಮವಲ್ಲ. ಅದೊಂದು ಕೇವಲ ಭೌತಿಕ ಲೂಟಿಯೂ ಅಲ್ಲ. ಇವೆಲ್ಲ ಆಗಿಯೂ, ಅದು ಒಂದು ಆಲೋಚನ ಕ್ರಮವಾಗಿ, ಬದುಕನ್ನು ಗ್ರಹಿಸುವ ವಿಧಾನವಾಗಿ, ಜಗತ್ತನ್ನು ನೋಡುವ ದೃಷ್ಟಿಕೋನವಾಗಿ ವಿವಿಧ ಪಾತ್ರಗಳಲ್ಲಿ ಕ್ರಿಯಾಶೀಲವಾಗಿದೆ. ಸಾಮ್ರಾಜ್ಯ ಶಾಹಿಯು ವಿಶ್ವ ಮಾರುಕಟ್ಟೆಯಾಗಿ, ಹಣಕಾಸು ಬಂಡವಾಳ ಹಾಗೂ ಏಕಸ್ವಾಮ್ಯ ಬಂಡವಾಳವಾಗಿ ಅದಕ್ಕಿಂತಲೂ ಹೆಚ್ಚಾಗಿ ಅದೊಂದು ಸಾಮಾಜಿಕ ವ್ಯವಸ್ಥೆಯಾಗಿ ಏಕಮುಖವಾಗಿ ಬೆಳೆಯುತ್ತಿದೆ. ತನ್ನ ಈ ಬೆಳವಣಿಗೆಗೆ ಪೂರಕವಾಗಿ ಜಗತ್ತಿನ ಮೂಲೆ ಮೂಲೆಯ ಭೌತಿಕ ಹಾಗೂ ಅಭೌತಿಕ (ಕಲೆ, ಸಾಹಿತ್ಯ, ಸಂಶೋಧನೆ, ಜನಸಮುದಾಯಗಳ ಆಲೋಚನೆಗಳು, ಆಚರಣೆಗಳು, ನಂಬಿಕೆಗಳು ಇತ್ಯಾದಿ) ಸಂಪನ್ಮೂಲಗಳನ್ನು ವಿವಿಧ ತಂತ್ರ, ಕುತಂತ್ರ ಮತ್ತು ವಿಧಾನಗಳ ಮೂಲಕ ಬಳಸಿಕೊಳ್ಳುತ್ತಿದೆ. ಅದೇ ಕಾಲಕ್ಕೆ ತನ್ನ ಈ ಬೆಳವಣಿಗೆಗೆ ಬೇರೆ ಬೇರೆ ನೆಲೆಗಳಲ್ಲಿ ವಿರೋಧ ವ್ಯಕ್ತವಾಗುತ್ತಿರುವ ಜಗತ್ತಿನ ಮೂಲೆ ಮೂಲೆಯ ಭೌತಿಕ ಹಾಗೂ ಅಭೌತಿಕ (ಕಲೆ, ಸಾಹಿತ್ಯ, ಸಂಶೋಧನೆ, ಜನಸಮುದಾಯಗಳ ಆಲೋಚನೆಗಳು, ಆಚರಣೆಗಳು, ನಂಬಿಕೆಗಳು ಇತ್ಯಾದಿ) ಸಂಪನ್ಮೂಲಗಳನ್ನು ತನ್ನ ಹಿತಾಸಕ್ತಿಗಳಿಗೆ ಪೂರಕವಾಗಿ ತಿರುಚುವ, ಮಾರ್ಪಡಿಸುವ, ಶಮನ ಮಾಡುವ ಇಲ್ಲವೆ ಹತ್ತಿಕ್ಕುವ ಕೆಲಸಗಳನ್ನು ಮಾಡುತ್ತಿದೆ. ಸಾಹಿತ್ಯ ಸಂಶೋಧನೆಗಳ ಧೋರಣೆ ಮತ್ತು ವಿಧಾನಗಳು ಇದರ ಸಂಕೀರ್ಣ ಬಿಕ್ಕಟ್ಟಿನಲ್ಲಿವೆ. ಈ ಬಿಕ್ಕಟ್ಟಿನಲ್ಲಿ ಮುಖ್ಯವಾಗಿ ನಾಲ್ಕು ಮಾದರಿಗಳನ್ನು ಗುರುತಿಸಬಹುದು. ಒಂದು: ಸಾಹಿತ್ಯ ಸಂಶೋಧನೆಗಳಲ್ಲಿ ಈ ಎರಡರಲ್ಲಿ (ಜಾಗತೀಕರಣದ ವಿರೋಧ ಮತ್ತು ಸಮರ್ಥನೆ) ಯಾವುದನ್ನು ನಂಬಬೇಕು, ಒಪ್ಪಬೇಕು ಮತ್ತು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲದ ಮಾದರಿ. ಈ ಮಾದರಿಯ ಸಂಶೋಧನ ಬರವಣಿಗೆಗಳು ಜಾಗತೀಕರಣದ ಬಗ್ಗೆ ಈಗಾಗಲೆ ಕೆಲವು ಬರವಣಿಗೆಗಳಲ್ಲಿ ತಾಳಲಾಗಿರುವ ಅಭಿಪ್ರಾಯಗಳನ್ನು ಪ್ರಶ್ನಾತೀತವಾಗಿ ಒಪ್ಪಿಕೊಳ್ಳುತ್ತಿವೆ ಮತ್ತು ಅವನ್ನು ಇಡಿಯಾಗಿ ನಂಬುತ್ತಿವೆ. ಆ ಬಗೆಯ ಹೇಳಿಕೆಗಳ ಹಿಂದಿರುವ ಸತ್ಯಾಸತ್ಯತೆಯನ್ನು ಪರಿಶೀಲಿಸುವ ರಾಜಕೀಯ ತಿಳುವಳಿಕೆಯ ಗೈರುಹಾಜರಿ ಒಂದು ಕಡೆ. ಸಮುದಾಯಗಳ ಬದುಕು ನುಚ್ಚುನೂರಾಗಿದ್ದರೂ ಅದನ್ನು ವಿವೇಕದ ನೆಲೆಯಲ್ಲಿ ಪರಿಗಣಿಸದಿರುವ ಕುರುಡುತನ ಮತ್ತೊಂದು ಕಡೆ. ಎರಡು: ಜಾಗತೀಕರಣದ ಪರ ಹಾಗೂ ವಿರೋಧ ಈ ಎರಡರಲ್ಲಿ ಜಾಗತೀಕರಣದ ಸಮರ್ಥನೆಯ ಅಭಿಪ್ರಾಯವನ್ನು ನಂಬುವ, ಒಪ್ಪುವ ಮತ್ತು ಆಯ್ಕೆ ಮಾಡಿಕೊಂಡಿರುವ ಮಾದರಿ. ಈ ಮಾದರಿಯಲ್ಲಿ ಜಾಗತೀಕರಣದ ಬಗೆಗಿನ ಅಭಿಪ್ರಾಯವನ್ನು ಯಾರು ಹೇಳಿದರು ಎಂಬುದು ಮುಖ್ಯವಾಗುತ್ತಿದೆ. ಉದಾಹರಣೆಗೆ ಪೂರ್ಣಚಂದ್ರ ತೇಜಸ್ವಿ ಅವರು ತಮ್ಮ ಕೆಲವು ಬರಹಗಳಲ್ಲಿ ಜಾಗತೀಕರಣವನ್ನು ಸಮರ್ಥಿಸಿದರು. ತೇಜಸ್ವಿ ಅವರಿಗೆ ವ್ಯಕ್ತಿಯಾಗಿ ಗೌರವ ಕೊಡುವಂತಹವರೆಲ್ಲ ಅವರ ಆ ಅಭಿಪ್ರಾಯಗಳನ್ನು ಕೊಂಡಾಡಿದರು. ವಿಚಾರಕ್ಕಿಂತಲೂ ವ್ಯಕ್ತಿಗಳಿಗೆ ಗೌರವ ಕೊಡುವ ವೈಚಾರಿಕ ಗುಲಾಮತನ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡುತ್ತಿದೆ. ಪರಿಣಾಮವಾಗಿ ವ್ಯಕ್ತಿಗಳಿಗೆ ಕೊಡುವ ಗೌರವದ ಕಾರಣಕ್ಕೆ ಜಾಗತೀಕರಣದ ಕುರುಡು ಸಮರ್ಥನೆ ನಡೆಯುತ್ತಿದೆ. ಮೂರು: ಈ ಎರಡೂ ಧೋರಣೆಗಳ ರಾಜಕೀಯ ಮತ್ತು ವೈಧಾನಿಕ ಪರಿಚಯವಿಲ್ಲದೆ ಮುಗ್ಧತೆಯಿಂದ ಮತ್ತು ದುರ್ಬಲ ಆಲೋಚನೆಯಿಂದ ಈ ಎರಡೂ ಧೋರಣೆಗಳ ತೆಳುವಾದ ಅಭಿಪ್ರಾಯಗಳನ್ನು ಮಾತ್ರ ಉಲ್ಲೇಖದ ರೂಪದಲ್ಲಿ ಬಳಸಿಕೊಳ್ಳುತ್ತಿರುವ ಮಾದರಿ. ಈ ಮಾದರಿಯ ಬರವಣಿಗೆಗಳು ಸಂಶೋಧನೆಯಲ್ಲಿ ಜಾಗತೀಕರಣದ ‘ಸಕಾರಾತ್ಮಕ ಮತ್ತು ನಕಾರಾತ್ಮಕ’ ಅಭಿಪ್ರಾಯಗಳನ್ನು ಉಲ್ಲೇಖ ಮಾಡುತ್ತಿವೆ. ಅಂತಿಮವಾಗಿ ತಮ್ಮ ನಿಲುವು ಯಾವುದು ಎಂಬುದನ್ನು ಅವಕ್ಕೆ ರಾಜಕೀಯವಾಗಿ ನಿರೂಪಿಸಲು ಸಾಧ್ಯವಾಗುತ್ತಿಲ್ಲ. ನಾಲ್ಕು: ಸಾಮ್ರಾಜ್ಯಶಾಹಿಯ ರಾಜಕೀಯ ಬಿಕ್ಕಟ್ಟು ಮತ್ತು ಅದರ ಆಂತರಿಕ ವೈರುಧ್ಯಗಳಿಂದ ಅದು ಹೊರಬರಲು ಪ್ರಯತ್ನಿಸುತ್ತಿರುವ ಭಾಗವಾಗಿ ಜಾಗತೀಕರಣವನ್ನು ಗ್ರಹಿಸುವುದು. ಸಾಮ್ರಾಜ್ಯಶಾಹಿಯ ನಂತರದ ರಾಜಕೀಯ ಪ್ರಕ್ರಿಯೆಯನ್ನು ಚಾರಿತ್ರಿಕ ಭೌತವಾದ ಮತ್ತು ಗತಿತಾರ್ಕಿಕ ಭೌತವಾದದ ನೆರವಿನಿಂದ ಅಂದಾಜಿಸುತ್ತಿರುವುದು. ಕೆಲವು ಸಂಶೋಧನ ಬರವಣಿಗೆಗಳಲ್ಲಿ ಈ ಆಯಾಮದ ಚಿಂತನೆಗಳೂ ಮಂಡನೆಯಾಗುತ್ತಿವೆ. ಈ ನಾಲ್ಕನೇ ಮಾಧರಿಯು ಜಾಗತೀಕರಣದ ರಾಜಕೀಯ ಹುನ್ನಾರಗಳಿಗೂ ಮತ್ತು ಸೃಜನಶೀಲ ಸಾಹಿತ್ಯ ಹಾಗೂ ಸಂಸ್ಕೃತಿಯ ಚಲನಶೀಲತೆಗೂ ಏರ್ಪಡುತ್ತಿರುವ ಗತಿತಾರ್ಕಿಕ ಸಂಬಂಧವನ್ನು ಗುರುತಿಸುತ್ತಿವೆ.