ಸಾಹಿತ್ಯ ವಿಮರ್ಶೆ ಮತ್ತು ಸಾಹಿತ್ಯ ಸಂಶೋಧನೆ ಇವುಗಳಿಗೆ ವ್ಯತ್ಯಾಸ ಇದೆಯೊ ಇಲ್ಲವೊ ಎಂಬುದು ಒಂದು ಪ್ರಶ್ನೆ. ಇದು ಪದಪ್ರಯೋಗಕ್ಕೆ ಸಂಬಂಧಿಸಿದ ಪ್ರಶ್ನೆ ಅಲ್ಲ. ಬದಲಾಗಿ ಇದು ಶೈಕ್ಷಣಿಕ ಆಲೋಚನೆಗಳ ಸ್ವರೂಪಕ್ಕೆ ಸಂಬಂಧಿಸಿದುದು. ಕನ್ನಡದಲ್ಲಿ ಇವೆರಡೂ ಪರಸ್ಪರ ಬೆರೆತಿವೆ. ಹಾಗಾಗಿ ಇವೆರಡನ್ನೂ ಕೂಡಿಸಿ ಸಾಹಿತ್ಯ ಅಧ್ಯಯನ ಎಂದು ಕರೆಯಲಾಗುತ್ತಿದೆ. ಇಲ್ಲಿಯ ಚಚೆ ಇದನ್ನು ಏನೆಂದು ಕರೆಯಬೇಕು ಎಂಬ ‘ಪದ ಶುದ್ಧತೆ’ಯನ್ನು ಗುರುತಿಸುವ ಅಥವಾ ಸೂಚಿಸುವ ಕೆಲಸವಲ್ಲ. ಕನ್ನಡದಲ್ಲಿ ಸಾಹಿತ್ಯ ವಿಮರ್ಶೆಯು ಸಂಶೋಧನೆಯ ರೂಪದಲ್ಲೂ; ಸಾಹಿತ್ಯ ಸಂಶೋಧನೆಯು ವಿಮರ್ಶೆಯ ರೂಪದಲ್ಲಿಯೂ ಪ್ರಕಟವಾಗಿದೆ. ಇದನ್ನು ಇದರ ಮಿತಿ, ದೌರ್ಬಲ್ಯ ಎಂದು ಗುರುತಿಸಬೇಕಿಲ್ಲ. ಇದು ಇದರ ಸ್ವಭಾವ ಮತ್ತು ಸಾಮಾನ್ಯ ಸ್ವರೂಪ.

ಸಾಹಿತ್ಯ ಅಧ್ಯಯನದ ಬಹಳಷ್ಟು ಬರವಣಿಗೆ, ಸಾಹಿತ್ಯವನ್ನು ಸಾಮಾಜಿಕ ನೆಲೆಯಲ್ಲಿ ಗ್ರಹಿಸಿರುವ ಕ್ರಮದಿಂದ ಬಂದಿದೆ. ಸಾಮಾಜಿಕ ನೆಲೆಯಿಂದ ಸಾಹಿತ್ಯವನ್ನು ಗ್ರಹಿಸುವಾಗ, ಭಾರತೀಯ ಕಾವ್ಯ ಮೀಮಾಂಸೆಯ ಸ್ಥಾಪಿತ ಮತ್ತು ಯಜಮಾನಿಕೆಯ ಪರಿಕಲ್ಪನೆಗಳಾಗಲಿ ಅಥವಾ ಸಾಹಿತ್ಯ ವಿಮರ್ಶೆಯ ಪರಿಕಲ್ಪನೆಗಳ ‘ಶುದ್ಧ ಸಾಹಿತ್ಯಕ ಮಾನದಂಡ’ ಗಳಾಗಲಿ ಪ್ರಯೋಗ ಆಗಿಲ್ಲ. ಹಾಗೆ ನೋಡಿದರೆ ಸಾಮಾಜಿಕ ನೆಲೆಯಿಂದ ಸಾಹಿತ್ಯವನ್ನು ಗ್ರಹಿಸಿರುವ ಕೆಲವು ಪ್ರಯತ್ನಗಳು ಈ ಎರಡೂ ಬಗೆಯ ಯಜಮಾನಿಕೆಯ ಸಾಹಿತ್ಯ ಗ್ರಹಿಕೆಯ ನೆಲೆಗಳನ್ನು ಎಂದೋ ಉಪೇಕ್ಷೆ ಮಾಡಿವೆ; ಬದಿಗೆ ಸರಿಸಿವೆ. ಹೀಗೆ ಸ್ಥಾಪಿತ ಪರಿಕಲ್ಪನೆಗಳನ್ನು ಅಸಹನೆಯಿಂದ ನೋಡುತ್ತ, ಅವನ್ನು ಅಂಚಿಗೆ ತಳ್ಳುತ್ತಾ, ಅಪ್ರಜ್ಞಾಪೂರ್ವಕ ನೆಲೆಯಲ್ಲೆ ಅವನ್ನು ಭಗ್ನಗೊಳಿಸುತ್ತ ಸಾಗಿವೆ. ಈ ಮೂಲಕ ಸಾಹಿತ್ಯ ವಿಮರ್ಶೆ ಹಲವು ಕವಲುಗಳಾಗಿ, ಹಲವು ದಾರಿಗಳಾಗಿ ಚದುರಿ ಬೆಳೆಯಿತು. ಈ ಚದುರುವಿಕೆಯು ತನ್ನ ಆಂತರಿಕ ಸ್ವರೂಪದಲ್ಲ ಒಂದು ಕಡೆ, ಸಾಹಿತ್ಯದ ಬಗ್ಗೆ ಹಾಗೂ ಸಾಹಿತ್ಯ ಪಠ್ಯಗಳ ಬಗ್ಗೆ ಸಹಮತಗಳನ್ನೂ, ಮತ್ತೊಂದು ಕಡೆ ಭಿನ್ನಮತಗಳನ್ನೂ ಪ್ರಕಟಿಸುತ್ತಲೆ ಬೆಳೆಯಿತು. ವೈಚಾರಿಕವಾದ ಈ ಸಾಹಿತ್ಯ ಗ್ರಹಿಕೆಯು ತೀವ್ರವಾದ ಸಾಮಾಜಿಕ ಕಳಕಳಿಯನ್ನು ತನ್ನ ಆಳದಲ್ಲಿ ಹೊಂದಿದೆ. ಸಾಮಾಜಿಕವಾದ ಕಳಕಳಿಯ ಸ್ವರೂಪ ಒಂದು ಕಡೆ ಸಾಹಿತ್ಯವನ್ನು ಸರಳವಾಗಿ ಗ್ರಹಿಸಬಹುದಾದ ಮಿತಿಗೆ ಹೊಗಿದ್ದೂ ಇದೆ. ಅದೇ ಕಾಲಕ್ಕೆ ತನ್ನ ಆಳದ ಸಾಮಾಜಿಕ ಕಳಕಳಿಯು ಹರಿತವಾದ ವೈಚಾರಿಕ ನೆಲೆಗೂ ಹೊರಳಿತು. ಒಂದು ಆಯಾಮದಲ್ಲಿ ಸಾಹಿತ್ಯ ವಿಮರ್ಶೆ ಮತ್ತು ಸಾಹಿತ್ಯ ಸಂಶೋಧನೆಗಳು ಬೇರ್ಪಡದಂತೆ ಬೆಸೆದುಕೊಂಡವು. ಈ ಬೆಸೆಯುವಿಕೆಯ ಹಿಂದೆ ವೈಚಾರಿಕ ಬರವಣಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕ್ರಿಯಾಶೀಲವಾಗಿತ್ತು. ಹಾಗಾಗಿ ಕನ್ನಡ ಸಾಹಿತ್ಯ ಅಧ್ಯಯನ ಎಂದು ಕರೆಯಬಹುದಾದ ಬರವಣಿಗೆಯಲ್ಲಿ ಒಂದು ಕಡೆ ಸಾಹಿತ್ಯ ವಿಮರ್ಶೆಯೂ, ಮತ್ತೊಂದು ಕಡೆ ಸಾಹಿತ್ಯ ಸಂಶೋಧನೆಯೂ ಮೇಳೈಸಿವೆ.

ಸಾಹಿತ್ಯ ವಿಮರ್ಶೆ ಹಾಗೂ ಸಾಹಿತ್ಯ ಸಂಶೋಧನೆಗಳು ಕೆಲವು ಸಲ ತಾವು ಯಾವ ನಿಲುವು ತಾಳಬೇಕು ಎಂಬುದನ್ನು ಪ್ರಜ್ಞಾಪೂರ್ವಕವಾಗಿ ಕೇಳಿಕೊಳ್ಳುವುದಿಲ್ಲ. ವಿಮರ್ಶೆ ಮತ್ತು ಸಂಶೋಧನ ಬರವಣಿಗೆಯಲ್ಲಿ ಸಾಮಾಜಿಕ, ರಾಜಕೀಯ ನಿಲುವುಗಳಿರುತ್ತವೆ ಎಂಬ ಮಾತು ಬೇರೆ. ಅವು ಪ್ರಜ್ಞಾಪೂರ್ವಕವಾಗಿಯೂ, ಅಪ್ರಜ್ಞಪೂರ್ವಕವಾಗಿಯೂ ಇರಬಹುದು. ಆದರೆ ವೈಚಾರಿಕ ಬರವಣಿಗೆ ಮಾತ್ರ ತನ್ನ ಧೋರಣೆಗೆ ಸಂಬಂಧಿಸಿ ಮತ್ತು ತನ್ನ ನಿಲುವುಗಳಿಗೆ ಸಂಬಂಧಿಸಿ ಪ್ರಜ್ಞಾಪೂವ್ಕವಾಗಿ ಧೋರಣೆಗಳನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಇದು ವೈಚಾರಿಕ ಬರವಣಿಗೆಯ ಸಾಮಾನ್ಯ ಸ್ವರೂಪವೂ ಹೌದು; ಅದೇ ಕಾಲಕ್ಕೆ ಇದು ಅದರ ಸಾಮಾನ್ಯ ಸ್ವಭಾವವೂ ಹೌದು. ಯಾಕೆ ಹೀಗೆ ಧೋರಣೆಗಳನ್ನು ಪ್ರಜ್ಞಾಪೂರ್ವಕವಾಗಿ ಆಯ್ಕೆಮಾಡಿಕೊಳ್ಳಲಾಗುತ್ತದೆ ಎಂಬುದು ಕುತೂಹಲವೂ ಆಸಕ್ತಿದಯಕವೂ ಆದ ಸಂಗತಿ. ಈ ಆಲೋಚನೆ ಮತ್ತು ಬರವಣಿಗೆಗೆ ವಿಮರ್ಶೆ ಮಾಡಲು ಸಾಹಿತ್ಯ ಮಾತ್ರ ಕೇಂದ್ರ ವಸ್ತುವೂ ಅಲ್ಲ; ಅದೇ ಕಾಲಕ್ಕೆ ಸಾಹಿತ್ಯ ಮಾತ್ರ ಕೇಂದ್ರ ಗುರಿಯೂ ಅಲ್ಲ. ಇದಕ್ಕೆ ಮುಖ್ಯ ಆಸಕ್ತಿ ಇರುವುದು ಸಾಹಿತ್ಯದ ಆಚೆಗೆ. ಅಥವಾ ಇದನ್ನು ಹೀಗೂ ಹೇಳಬಹುದು. ಸಾಹಿತ್ಯ ನಿರ್ಮಾಣದ ಹಿಂದಿನ ಧೋರಣೆಗಳು, ಸಾಹಿತ್ಯ ಅಭಿವ್ಯಕ್ತಿ, ಸಾಹಿತ್ಯ ಪರಿಸರದಲ್ಲಿ ಅದರ ಪ್ರಸಾರ, ಆ ಸಾಹಿತ್ಯವನ್ನು ಪ್ರಕಟಿಸುವ, ಅದನ್ನು ಪ್ರಸಾರ ಮಾಡುವ, ಅದರ ಮೌಲ್ಯಗಳನ್ನು ವಿವರಿಸಿ ಸಮರ್ಥಿಸುವ ಧೋಣೆಗಳು ಯಾವುದಾಗಿರುತ್ತವೆ? ಅವು ಯಾರ ಮತ್ತು ಯಾವ ಹಿತಾಸಕ್ತಿಗಳನ್ನು ಕಾಯುತ್ತವೆ? ಇವೇ ಮೊದಲಾದ ವಿಭಿನ್ನ ಆಯಾಮಗಳಿಂದ ಅಷ್ಟೆ ಎಚ್ಚರಿಕೆಯಿಂದ ಇದನ್ನು ಗಮನಿಸುತ್ತದೆ. ಇದು ಇದರ ಒಂದು ಮುಖ್ಯವಾದ ಆಸಕ್ತಿ. ಈ ಆಲೋಚನೆ ಮತ್ತು ಬರವಣಿಗೆ ಸಾಹಿತ್ಯವನ್ನಲ್ಲದೆ, ಪ್ರಭುತ್ವ, ಆಳುವ ವರ್ಗ, ಎಲ್ಲಾ ಬಗೆಯ ಸಾಂಸ್ಥಿಕ ನೆಲೆಗಳು, ಶೋಷಕ ಮತ್ತು ಯಜಮಾನಿಕೆಯ ಮೌಲ್ಯಗಳು ಇವನ್ನು ತೀಕ್ಷ್ಣವಾಗಿ ಮತ್ತು ಕೆಲವು ಸಲ ಕಟುವಾಗಿ ಟೀಕಿಸುವ, ವಿಮರ್ಶಿಸುವ ವಿಧಾನ ಈ ಬರವಣಿಗೆಯದು. ಎಲ್ಲಾ ಬಗೆಯ ಅಸಮಾನತೆ, ಅನ್ಯಾಯ, ಶೋಷಣೆ, ದಮನ, ದಬ್ಬಾಳಿಕೆಗಳನ್ನು ವಿವರಿಸುವ ಮತ್ತು ವಿರೋಧಿಸುವ ಧೋರಣೆ ಇಲ್ಲಿಯದು. ಶೋಷಕ ವರ್ಗಗಳು ತಮ್ಮ ಶೋಷಣೆಯ ನೆಲೆಗಳನ್ನು ಮುಚ್ಚಿಡುವ ಸಲುವಾಗಿ, ಶೋಷಣೆಯ ವಿಧಾನಗಳನ್ನು ಸಹಜವೆಂದು ನಂಬಿಸುವ ಕೆಲಸ ಮಾಡುತ್ತವೆ. ಅದನ್ನು ಒಪ್ಪಿಕೊಳ್ಳುವಂತೆ ಪರೋಕ್ಷ ವಿಧಾನದಲ್ಲಿ ಸಾಮಾಜಿಕ ಪ್ರಜ್ಞೆಯನ್ನು ರೂಪಿಸುತ್ತವೆ. ಆಳುವ ವರ್ಗ ತನ್ನ ಶೋಷಕ ಮೌಲ್ಯಗಳನ್ನು ಮತ್ತು ಶೋಷಕ ನಂಬಿಕೆಗಳನ್ನು ಜನರ ಮೇಲೆ ಹೇರಿ ಜನತೆ ಅವುಗಳನ್ನು ತಮ್ಮವೆಂದೇ ಭಾವಿಸುವಂತೆ ಮಾಡುತ್ತದೆ. ಆ ಮೂಲಕ ಅಸಮಾನತೆ, ಅನ್ಯಾಯ ಮತ್ತು ಶೋಷಣೆಗಳನ್ನು ಮುಂದುವರಿಸುತ್ತದೆ. ಈ ರೀತಿಯಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಆಳುವ ವರ್ಗವು ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ಮೂಲಕ ಬಿತ್ತರಿಸುತ್ತದೆ. ಹಾಗಾಗಿ ಆಳುವ ವರ್ಗದ ಮತ್ತು ಎಲ್ಲಾ ಬಗೆಯ ಶೋಷಕ ಶಕ್ತಿಗಳ ಧೋರಣೆಗಳು ಸಾಹಿತ್ಯದಲ್ಲಿ ಪ್ರಕಟವಾಗಿ, ಪ್ರಸಾರ ಆಗುವುದರಿಂದ, ಆ ಮೂಲಕ ಸಾಮಾಜಿಕ ಪ್ರಜ್ಞೆಯು ರೂಪುಗೊಳ್ಳುವುದರಿಂದ ಅದರ ಬಗ್ಗೆ ಎಚ್ಚರ ವಹಿಸಬೇಕಾಗುತ್ತದೆ. ಎಚ್ಚರ ವಹಿಸುವುದರ ಜೊತೆಗೆ ಆ ಧೋರಣೆಗಳ ವಿರುದ್ಧ ವೈಚಾರಿಕ ಸಂಘರ್ಷಕ್ಕೆ ಮುಂದಾಗಬೇಕಾಗುತ್ತದೆ. ಪರಂಪರೆಯಲ್ಲಿ ಈ ಶೋಷಕ ಕುತಂತ್ರಗಳ ವಿರುದ್ಧ ಶಕ್ತಿಶಾಲಿಯಾದ ತಾತ್ವಿಕ ಸಂಘರ್ಷ ನಡೆದಿದೆ. ಬಹುಶಃ ಭಾರತದ ಮಟ್ಟಿಗೆ ಚಾರ್ವಾಕರೆ ಇದಕ್ಕೆ ಮೊದಲಿಗರು ಎನ್ನಬಹುದು. ಆದಿವಾಸಿ, ಬುಡಕಟ್ಟು ಮತ್ತು ಜನಪದರ ಅಭಿವ್ಯಕ್ತಿಗಳು ಇದೇ ಕೆಲಸವನ್ನು ಬೇರೆ ರೂಪಗಳಲ್ಲಿ ನಡೆಸಿವೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ರಾಮಾಯಣ ಮತ್ತು ಮಹಾಭಾರತದ ಬಗ್ಗೆ ಬರೆದ ವಿಮರ್ಶೆಯನ್ನು ಈ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕು. ಕನ್ನಡದಲ್ಲೂ ಈ ಬಗೆಯ ಸಾಕಷ್ಟು ಪ್ರಯತ್ನಗಳು ನಡೆದಿವೆ. ಪೋಲಂಕಿ ರಾಮಮೂರ್ತಿಯವರ ‘ಸೀತಾಯಣ’ ಇಂತಹ ಒಂದು ಪ್ರಯತ್ನ. ಇಂತಹ ಹಲವಾರು ಬಿಡಿ ಪ್ರಯತ್ನಗಳನ್ನು ಉದಾಹರಿಸಬಹುದು, ಉಲ್ಲೇಖಿಸಬಹುದು.

ಸಾಹಿತ್ಯವನ್ನು ಬಲಪಂಥ ಇಲ್ಲವೆ ಎಡಪಂಥ ಎಂದು ಗ್ರಹಿಸುವ ಸಾಹಿತ್ಯ ಗ್ರಹಿಕೆಯ ಈ ವಿಧಾನವು, ಬರಹಗಾರರನ್ನು ಮತ್ತು ಸಾಹಿತ್ಯ ಕೃತಿಯನ್ನು ಒಂದು ಪೂರ್ವ ಗ್ರಹದಿಂದಲೇ ಆಯ್ಕೆಮಾಡಿಕೊಳ್ಳುತ್ತದೆ. ಕೆಲವು ಲೇಖಕರನ್ನು ಮತ್ತು ಕೃತಿಗಳನ್ನು ಎಡಪಂಥ ಇರಬಹುದೆ?, ಬಲಪಂಥ ಇರಬಹುದೆ? ಎಂಬ ಗುಮಾನಿ ಮತ್ತು ಅನುಮಾನದಿಂದಲೆ ಆಯ್ಕೆಮಾಡಲಾಗುತ್ತದೆ. ಅದರಲ್ಲಿ ಬಲಪಂಥೀಯ ಎನ್ನುವ ವೈಚಾರಿಕ ಧೋರಣೆಗಳು, ಮೌಲ್ಯಗಳು, ಆ ಬಗೆಯ ಪ್ರಚೋದನೆಗಳು ಕಂಡುಬಂದರೆ (ಇದ್ದರೆ ಎಂದು ಹೇಳುವುದು ಸ್ವಲ್ಪ ಕಷ್ಟ) ಅವುಗಳನ್ನು ವಿವರಿಸಿ, ವಿರೋಧಿಸಲಾಗುವುದು ಇದಕ್ಕೆ ಆ ಸಾಹಿತ್ಯ ಕೃತಿಯ ಸಂಬಂಧಿತ ಸಾಕಷ್ಟು ಪೂರಕ ಓದು, ಅಧ್ಯಯನ ಬೇಕಾಗುತ್ತದೆ. ಈ ಪೂರ್ವ ಸಿದ್ಧತೆ ಇಲ್ಲದೆ ಇಲ್ಲಿ ರಣರಂಗಕ್ಕೆ ಇಳಿಯಲು ಆಗುವುದಿಲ್ಲ. ಇದೊಂದು ಸ್ಪಷ್ಟವಾದ ಮತ್ತು ನೇರವಾದ ವೈಚಾರಿಕ ಸಂಘರ್ಷ ಹಾಗೂ ತಾತ್ವಿಕ ಸಂಘರ್ಷ. ಇದಕ್ಕೆ ತಮ್ಮ ವಾದವನ್ನು ತಾರ್ಕಿಕವಾಗಿ ಬೆಳೆಸಲು ಸಾಹಿತ್ಯ ಪಠ್ಯ ಮತ್ತು ಪೂರಕ ಅಧ್ಯಯನಗಳ ನೆರವಿನಿಂದ ಸೂಕ್ತ ಆಧಾರಗಳನ್ನು ಒದಗಿಸಬೇಕಾಗುತ್ತದೆ. ಎದುರಿಗಿರುವ ಆಲೋಚನೆಯ, ಧೋರಣೆಯ ವಿರುದ್ಧ ಸೆಣಸುವುದು ಸರಳವಾದುದಲ್ಲ. ಇದು ಕೇವಲ ಅನಿಸಿಕೆ ಮತ್ತು ಅಭಿಪ್ರಾಯದ ಮಟ್ಟದಲ್ಲಿ ನಡೆಯುವ ಕೆಲಸವಲ್ಲ. ಆಳವಾದ ಅಧ್ಯಯನ, ಸೂಕ್ಷ್ಮವಾದ ಗ್ರಹಿಕೆ ಬೇಕಾಗುತ್ತದೆ. ಭಾಷೆ ಮತ್ತು ವಿಚಾರ ಮಂಡನೆಯ ಮೇಲೆ ತೂಕ ತಪ್ಪದ ಹಿಡಿತ ಬೇಕಾಗುತ್ತದೆ. ಈ ಅಂಶವನ್ನು ಇಲ್ಲಿ ಒತ್ತಿ ಹೇಳಬೇಕಾಗಿದೆ. ಯಾಕೆಂದರೆ ಅನೇಕ ಸಲ ಅನಿಸಿಕೆ ಮತ್ತು ಅಭಿಪ್ರಾಯಗಳನ್ನೆ ವಿಮರ್ಶೆ ಎಂದೂ, ಸಂಶೋಧನೆ ಎಂದೂ ಕರೆಯಲಾಗುತ್ತಿದೆ. ಅಥವಾ ಅನಿಸಿಕೆ ಮತ್ತು ಅಭಿಪ್ರಾಯಗಳೇ ಅನೇಕ ಸಲ ವಿಮರ್ಶೆ ಹಾಗೂ ಸಂಶೋಧನೆ ಎಂಬ ಹೆಸರಿನಲ್ಲಿ ಪ್ರಕಟವಾಗುತ್ತಿವೆ. ಸಾಹಿತ್ಯ ಸಂಶೋಧನೆ ಇದರಿಂದ ಕಲಿಯುವುದು ಇದೆ.

ಎಡಪಂಥ ಅಥವಾ ಬಲಪಂಥ ಇರಬಹುದೆ ಎಂದು ಊಹಿಸಿ ಚರ್ಚೆಗೆ ಇಳಿಯುವುದು ಒಂದು ಕ್ರಮ. ಎಡಪಂತ ಅಥವಾ ಬಲಪಂಥ ಎಂದು ತೀರ್ಮಾನಿಸಿ ತೀರ್ಮಾನವನ್ನು ಸಮರ್ಥಿಸಲು ಮುಂದಾಗುವುದು ಇನ್ನೊಂದು ಕ್ರಮ. ಈ ಎರಡನೇ ಕ್ರಮವೂ ಸಾಕಷ್ಟು ವಿಶಾಲವಾಗಿ ಬೆಳೆದಿದೆ. ಇದಕ್ಕೆ ಅಧ್ಯಯನ, ಸೂಕ್ಷ್ಮ ಗ್ರಹಿಕೆ ಇತ್ಯಾದಿಗಳೇನೂ ಬೇಕಾಗುವುದಿಲ್ಲ. ಕೇವಲ ಒಂದೇ ಮಗ್ಗುಲಿನಿಂದ ಏಕಮುಖಿ ವಿರೋಧವೇ ಇದರ ಜೀವಾಳವಾಗಿರುತ್ತದೆ. ಈ ವಿರೋಧವನ್ನು ವ್ಯಕ್ತಪಡಿಸಲು ಕೇವಲ ಪದಗಳು ಬಳಕೆಯಾಗುತ್ತವೆ. ಆದರೆ ಆಲೋಚನೆ, ಚಿಂತನೆ, ತಾರ್ಕಿಕ ಬೆಳವಣಿಗೆ ಈ ಯಾವುವೂ ಇರುವುದಿಲ್ಲ. ಇದು ಪೂರ್ವ ತೀರ್ಮಾನದಿಂದಲೆ ಹೊರಡುತದೆ. ಈ ತೀರ್ಮಾನವನ್ನು ಚರ್ಚೆಯಿಲ್ಲದೆ ಒಪ್ಪುವ ಓದುಗರೂ ಇರುತ್ತಾರೆ. ಹಾಗಾಗಿ ಅಂತಹ ಸಂದರ್ಭದಲ್ಲಿ ಈ ಅಭಿಪ್ರಾಯ ಆಲೋಚನೆಯಾಗದೆ, ತಾರ್ಕಿಕ ವಾದವಾಗದೆ, ಗಂಭೀರ ಅದ್ಯಯನದ ಗೈರುಹಾಜರಿಯಲ್ಲಿ ಒಂದು ಸರಳ ಹಾಗೂ ದುರ್ಬಲ ಅನಿಸಿಕೆಯಾಗಿ ಪ್ರಕಟವಾಗುತ್ತದೆ. ಅದನ್ನು ಮೊದಲೆ ನಂಬಿದವರು ಈ ದುರ್ಬಲ ಅನಿಸಿಕೆಯಲ್ಲಿ ಸಮರ್ಥನೆಯನ್ನು, ಆಧಾರವನ್ನು ಕಂಡುಕೊಳ್ಳುತ್ತಾರೆ. ಈ ಬಗೆಯ ಅನಿಸಿಕೆ, ಅಭಿಪ್ರಾಯಗಳು ‘ಹೆಸರಾಂತ ಮುದ್ರಣ’ (ಪತ್ರಿಕೆ, ಪುಸ್ತಕ, ಟಿ.ವಿ. ಮತ್ತು ಬ್ಲಾಗ್‌)ಗಳಲ್ಲಿ ಬರಬೇಕೆಂದೂ, ಅವು ‘ಹೆಸರಾಂತ’ ವ್ಯಕ್ತಿಗಳಿಂದ ಬರಬೇಕೆಂದೂ ಯೋಜಿಸಲಾಗುತ್ತದೆ ಮತ್ತು ಅಪೇಕ್ಷಿಸಲಾಗುತ್ತದೆ. ಈ ಬಗೆಯ ಕೆಲವು ಉದ್ದೇಶಗಳಿಗೆ ಸಹಿ ಸಂಗ್ರಹಣೆ ಮಾಡುವುದನ್ನು ಗಮನಿಸಬಹುದು. ‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಬೇಕು’ ಎಂಬುದಕ್ಕೆ ಶಿವರಾಮ ಕಾರಂತರು ಸಹಿ ಹಾಕಿದ್ದನ್ನು ಈ ಚರ್ಚೆಯ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಬೇಕು.

ಎಡಪಂಥ ಅಥವ ಬಲಪಂಥ ಎಂಬ ಈ ಚರ್ಚೆಯು ವೈಚರಿಕ ನೆಲೆಯಿಂದ ವೈಯಕ್ತಿಕ ನೆಲೆಗೆ ಜಾರಿರುವ ಮಿತಿಯೆ ಹೆಚ್ಚು. ವೈಚಾರಿಕವಾಗಿ ಚರ್ಚೆ ಮಾಡುವಷ್ಟು ಅಧ್ಯಯನಶೀಲತೆಯ ಶಕ್ತಿ ಕಡಿಮೆ ಇದ್ದಾಗ, ವ್ಯಕ್ತಿಗಳ ಬಗ್ಗೆ ಪೂರ್ವಗ್ರಹ  ಇದ್ದಾಗ ಇದು ಸಾಮಾನ್ಯವಾಗಿ ನಡೆಯುತ್ತದೆ. ವ್ಯಕ್ತಿಗಳನ್ನು ನಿಂದಿಸುವ, ಟೀಕಿಸುವ, ಲೇವಡಿ ಮಾಡುವ, ಗೇಲಿ ಮಾಡುವ ಸಣ್ಣತನಗಳನ್ನೂ ಈ ಬರವಣಿಗೆ ಒಳಗೊಂಡಿರುತ್ತದೆ. ಚರ್ಚೆಯು ವೈಚಾರಿಕತೆಯಿಂದ ವ್ಯಕ್ತಿಗತ ನೆಲೆಗೆ ಇಳಿದಾಗ, ಅಂತಹ ವ್ಯಕ್ತಿಗಳ ಬಗ್ಗೆ ಬೇರೆ ಬೇರೆ ಕಾರಣಗಳಿಗೆ ಮೊದಲೇ ಅಸಹನೆ ಇದ್ದವರು ಇದನ್ನು ಮೈದುಂಬಿ ಪುರಸ್ಕರಿಸುತ್ತಾರೆ. ಯಾಕೆಂದರೆ ತಾವು ಹೇಳಬಹುದಾದದ್ದನ್ನು ಈ ಬರವಣಿಗೆ ಹೇಳಿದೆಯಲ್ಲ ಎಂದು ಸಂಭ್ರಮ ಪಡುತ್ತಾರೆ. ಈ ಸಂಭ್ರಮದ ಹಿಂದೆ ಸಿನಿಕತನವಿರುತ್ತದೆ. ಈ ಚರ್ಚೆ ಬರಹಗಾರರ ವೈಯಕ್ತಿಕ/ಖಾಸಗಿ ಬದುಕಿಗೂ ಮತ್ತು ಅವರ ಬರವಣಿಗೆಗೂ ಹೋಲಿಕೆಯನ್ನು ಕಲ್ಪಿಸುತ್ತದೆ. ‘ಬದುಕಿದಂತೆಯೇ ಬರೆಯಬೇಕು; ಬರೆದಂತೆಯೇ ಬದುಕಬೇಕು. ಬದುಕುವುದೊಂದು ಬರೆಯುವುದೊಂದು ಆಗಬಾರದು’ ಎಂಬ ಸರಳ ಸೂತ್ರವನ್ನು ಮುಂದಿಡುತ್ತದೆ. ಈ ಹೋಲಿಕೆಯಲ್ಲಿ ವ್ಯತ್ಯಾಸವನ್ನು ಗುರುತಿಸಿ ಬರಹಗಾರರನ್ನು ಟೀಕಿಸಲಾಗುತ್ತದೆ ನಂತರ ಇದು ‘ನೈತಿಕ’ ಆಯಾಮಕ್ಕೆ ತಿರುಗುತ್ತದೆ. ಬರಹಗಾರರ ‘ನೈತಿಕತೆ’ಯ ಬಗೆಗೆ ಅಭಿಪ್ರಾಯ (ಇದು ಚರ್ಚೆಯಲ್ಲ) ಮಂಡನೆಯಾಗುತ್ತವೆ.

ವೈಚಾರಿಕ ವಾಗ್ವಾದಗಳಿಂದ ಶುರುವಾದ ಈ ಚರ್ಚೆ ಬರಹಗಾರರ ವೈಯಕ್ತಿಕ ನೆಲೆಗೂ ನಂತರ ಅವರ ‘ನೈತಿಕ’ ನೆಲೆಗೂ ಯಾಕೆ ಜಾರುತ್ತದೆ ಎಂಬುದು ಚರ್ಚೆಯ ವಿಷಯ. ‘ಬರೆದಂತೆ ಬದುಕಬೇಕು ಎಂಬುದು ಒಂದು ಸಾಮಾಜಿಕ ಆಲೋಚನ ಕ್ರಮ. ಇದು ಕೇವಲ ಸಾಹಿತ್ಯಕ ಮತ್ತು ವೈಚಾರಿಕ ವಲಯಕ್ಕೆ ಸೀಮಿತವಾದುದಲ್ಲ. ‘ಅವೊತ್ತು ನೀನು ಹಾಗಂತ ಹೇಳಿದ್ದೆ. ಆದರೆ ಇವತ್ತು ಯಾಕೆ ಹೀಗೆ ಮಾಡಿದೆ?’ ಎಂಬ ಪ್ರತಿಕ್ರಿಯೆಗಳನ್ನು ದೈನಂದಿನ ಬದುಕಿನಲ್ಲಿ ಆಗಾಗ ಕೇಳುತ್ತಿರುತ್ತೇವೆ. ಇದರರ್ಥ ಈ ಆಲೋಚನ ವಿಧಾನ ದೈನಂದಿನ ಬದುಕಿನಲ್ಲೂ ಇದೆ. ‘ಬರೆದಂತೆ ಬದುಕಬೇಕು’ ಎಂಬುದು, ವಚನಕಾರರ ‘ನುಡಿದಂತೆ ನಡೆಯಬೇಕು’ ಎಂಬ ಆಶಯವನ್ನು ನೆನಪಿಗೆ ತರುತ್ತದೆ. ಇಲ್ಲಿ ನುಡಿ ಮತ್ತು ನಡೆ ಎರಡು ಇವೆ. ಇದರಲ್ಲಿ ಯಾವುದು ಯಾವುದನ್ನು ಅನುಸರಿಸಬೇಕು ಎಂಬುದು ಮುಖ್ಯ ನುಡಿಯನ್ನು ನಡೆ ಅನುಸರಿಸಬೇಕು, ಅವಲಂಬಿಸಬೇಕು ಎಂಬುದು ಅಲ್ಲಿಯ ತೀರ್ಮಾನ ಇಲ್ಲವೆ ಆಶಯ. ಅಥವಾ ನಡೆಯನ್ನು ನುಡಿಯು ನಿರ್ಧರಿಸುತ್ತದೆ, ನಿರ್ಧರಿಸಬೇಕು ಎಂಬುದು ಇಲ್ಲಿಯ ಸೂತ್ರ, ತರ್ಕ ಮತ್ತು ನಂಬಿಕೆ. ಇದರ ಪ್ರಕಾರ ಸಮಸ್ಯೆಯನ್ನು ಎಲ್ಲಿ ಗುರುತಿಸಲಾಗುತ್ತಿದೆ? ನಡೆಯಲ್ಲೊ, ನುಡಿಯಲ್ಲೊ? ನುಡಿಯಲ್ಲಿ ಸಮಸ್ಯೆಯನ್ನು ಗುರುತಿಸಲಾಗಿದೆ. ಹಾಗಾಗಿ ಸಮಸ್ಯೆಯು ನುಡಿಯಲ್ಲಿ ಇರುವುದರಿಂದ ನುಡಿಯು ಚೆನ್ನಾಗಿರಬೇಕು, ಶುದ್ಧವಾಗಿರಬೇಕು ಎಂಬುದು ಇಲ್ಲಿಯ ತರ್ಕ. ‘ನುಡಿದರೆ ಮುತ್ತಿನ ಹಾರದಂತಿರಬೇಕು’ ಎಂಬ ವಚನ ಸಾಲನ್ನು ನೆನಪು ಮಾಡಿಕೊಳ್ಳಬಹುದು. ನುಡಿದಂತೆ ನಡೆಯದಿದ್ದರೆ ಕೂಡಲ ಸಂಗಮದೇವ ಮೆಚ್ಚುವುದಿಲ್ಲ. ‘ಸತ್ಯ ವಾಕ್ಯಕೆ ತಪ್ಪಿ  ನಡೆದರೆ ಮೆಚ್ಚನು ಆ ಪರಮಾತ್ಮನು’ ಎಂಬ ಗೋವಿನ ಹಾಡಿನ ಸಾಲನ್ನು ನೆನಪು ಮಾಡಿಕೊಳ್ಳಬಹುದು. ಅಂದರೆ ನುಡಿ, ಆಲೋಚನೆ ಹಾಗೂ ಬರವಣಿಗೆ ಇವನ್ನು ನಡೆಯು ಅಂದರೆ ಬದುಕು ಆಧರಿಸಬೇಕು, ಅನುಸರಿಸಬೇಕು, ಅವಲಂಬಿಸಬೇಕು ಎಂಬುದು ಇಲ್ಲಿಯ ನಿರೀಕ್ಷೆ. ಸುಧಾರಣವಾದಿ, ಪರಿಷ್ಕರಣ ವಾದಿ ಹಾಗೂ ಕ್ರಾಂತಿಕಾರಿ ಹೋರಾಟ ಹಾಗೂ ಚಳುವಳಿಗಳಲ್ಲಿ ಮೇಲಿನ ಸಂಗತಿಯು ಸಿದ್ಧಾಂತ ಮತ್ತು ಆಚರಣೆ ಎಂಬ ಸಂಬಂಧದಲ್ಲಿ ಇರುತ್ತದೆ. ಅಲ್ಲಿಯೂ ಕೂಡ ಸಿದ್ಧಾಂತವನ್ನು ಆಚರಣೆಯು ಆಧರಿಸಬೇಕು, ಅನುಸರಿಸಬೇಕು, ಅವಲಂಬಿಸಬೇಕು ಎಂಬ ತರ್ಕವಿದೆ. ಸಿದ್ಧಾಂತವನ್ನು ಆಚರಣೆಗೆ ತರಬೇಕು ಎಂಬುದು ತತ್ವ ಹಾಗೂ ಪೂರ್ವ ನಂಬಿಕೆ. ಆದರೆ ಸಿದ್ಧಾಂತ ಹೇಗೆ ರೂಪುಗೊಳ್ಳುತ್ತದೆ? ಸಾಮಾಜಿಕ ಚಲನಶೀಲ ವಸ್ತುಸ್ಥಿತಿಯ ಇರುವಿಕೆ ಮತ್ತು ಆಗುವಿಕೆಯನ್ನು ರಾಜಕೀಯವಾಗಿ ಅವಲೋಕನ ಮಾಡಿ, ಮೌಲ್ಯಮಾಪನ ಮಾಡುವ ಮೂಲಕ ಸಿದ್ಧಾಂತ ಹುಟ್ಟುತ್ತದೆ. ಸಾಮಾಜಿಕ ಚಲನಶೀಲ ವಸ್ತುಸ್ಥಿತಿಯು ನಿರಂತರವಾಗಿ ಬದಲಾಗುತ್ತ, ಪರಿವರ್ತನೆಯಾಗುತ್ತ ಸಾಗುತ್ತದೆ. ಹಾಗಾಗಿ ಒಂದು ಕಾಲದ ಸಾಮಾಜಿಕ ವಸ್ತುಸ್ಥಿತಿಯನ್ನು ಆಧರಿಸಿದ ಸಿದ್ಧಾಂತಗಳೂ ಬದಲಾಗುತ್ತ, ಪರಿವರ್ತನೆಯಾಗುತ್ತ ಸಾಗಬೇಕಾಗುತ್ತದೆ. ನಿರಂತರವಾಗಿ ಬದಲಾಗುತ್ತ, ಪರಿವರ್ತನೆಯಾಗುತ್ತ ಸಾಗುವ ಸಾಮಾಜಿಕ ಪ್ರಕ್ರಿಯೆಯು ಎಷ್ಟೋ ಸಲ ಆ ಮೊದಲು ರಚನೆಯಾಗಿದ್ದ ಸಿದ್ಧಾಂತಗಳನ್ನು ಮರುವಿಮರ್ಶೆಗೆ ಒಡ್ಡಲು ಒತ್ತಾಯಿಸುತ್ತಿರುತ್ತವೆ. ಈ ಹಿನ್ನೆಲೆಯಲ್ಲಿ ಆಚರಣೆಯು ಸಿದ್ಧಾಂತವನ್ನು ಪುನರ್‌ಪರಿಶೀಲನೆ ಮಾಡಬೇಕಾಗುತ್ತದೆ, ಪರಿಷ್ಕಾರ ಮಾಡಬೇಕಾಗುತ್ತದೆ. ಇದನ್ನು ಮಾಡದೆ ಇದ್ದಾಗ ಅದೊಂದು ಯಾಂತ್ರಿಕ ಸಿದ್ಧಾಂತವಾಗಿ ಸಾಗುತ್ತದೆ. ಇದಕ್ಕೆ ಸಾಕಷ್ಟು ಉದಾಹರಣೆಗಳಿದ್ದರೂ ಅದು ಪ್ರತ್ಯೇಕ ಚರ್ಚೆಯನ್ನು ಬೇಡುತ್ತದೆ.

ಎಡಪಂಥ  ಮತ್ತು ಬಲಪಂಥ ಇವನ್ನು ಪರಸ್ಪರ ವಿರುದ್ಧ ಎಂದು ತಿಳಿಯಲಾಗಿದೆ. ಎಡಪಂಥವು ಪ್ರಗತಿಪರ, ಜನತೆಯ ಪರ ಎಂದೂ; ಬಲಪಂಥವು ಪ್ರಗತಿ ವಿರೋಧಿ, ಜನತೆಯ ವಿರೋಧಿ ಎಂತಲೂ ಅಭಿಪ್ರಾಯ(ಯಾಕೆಂದರೆ ಇದು ಚಿಂತನೆ ಅಲ್ಲ)ಪಡಲಾಗಿದೆ. ಇದನ್ನು ಆಳುವ ವರ್ಗದ ರಾಜಕೀಯ, ವೈಚಾರಿಕ ವಲಯ ಮತ್ತು ಅಕಡೆಮಿಕ್ ವಲಯದಲ್ಲಿ ಮೇಲಿನಂತೆ ಗ್ರಹಿಸಲಾಗುತ್ತಿದೆ. ಮೇಲಿನ ಎರಡೂ ಪಂಥಗಳಿಗೆ ನಿರ್ದಿಷ್ಟವಾದ, ಖಚಿತವಾದ ಮತ್ತು ಎಂದಿಗೂ ಬದಲಾಗದ ವೈಚಾರಿಕ ಧೋರಣೆಗಳಿವೆ ಎಂದು ತಿಳಿಯಲಾಗಿದೆ. ಇದು ಒಂದು ಬಗೆಯಲ್ಲಿ ಸರಳ ತೀರ್ಮಾನ. ಸಾಮಾಜಿಕ ಸಂಗತಿಗಳ ಚರ್ಚೆಯಲ್ಲಿ ‘ಪುರೋಹಿತಶಾಹಿ, ಬ್ರಾಹ್ಮಣಶಾಹಿ’ಗಳನ್ನು, ಮಹಿಳಾ ವಿಷಯಗಳ ಚರ್ಚೆಯಲ್ಲಿ ‘ಮನುಧರ್ಮಶಾಸ್ತ್ರ’ವನ್ನು ಪ್ರಸ್ತಾಪ ಮಾಡಲಾಗುತ್ತಿದೆ. ವಾಸ್ತವವಾಗಿ ‘ಬ್ರಾಹ್ಮಣಶಾಹಿ’ ಮತ್ತು ‘ಮನುಧರ್ಮಶಾಸ್ತ್ರ’ ಎರಡೂ ಅಪ್ರಸ್ತುತವಾಗಿ ಎಷ್ಟೋ ವರ್ಷ ಕಳೆದುಹೋದವು. ಆದರೆ ‘ಎಡಪಂತ ಬಲಪಂಥಗಳ ಮೇಲಿನ ಸ್ಥಾವರ ನಂಬಿಕೆಗಳು ಅವುಗಳ ಅಪ್ರಸ್ತುತತೆಯ ಸೂಕ್ಷ್ಮವನ್ನು ಅರಿಯದಂತೆ ಮಾಡಿವೆ. ಬ್ರಾಹ್ಮಣಶಾಹಿ ಮತ್ತು ಮನುಧರ್ಮಶಾಸ್ತ್ರಗಳನ್ನು ವಿರೋಧಿಸುವುದು ಪ್ರಸ್ತುತವೆಂದೂ, ಎಡಪಂಥದ ಕೆಲಸವೆಂದೂ ಭಾವಿಸುತ್ತಿರುವಾಗಲೇ ಅವುಗಳ ಪ್ರಸ್ತಾಪವೇ ಅಪ್ರಸ್ತುತವಾಗಿದೆ ಎಂಬುದನ್ನು ಒತ್ತಿ ಹೇಳಬೇಕಾಗಿದೆ. ಹೀಗೆ ಎಡಪಂಥದ ಹೆಸರಿನಲ್ಲಿ ಅಪ್ರಸ್ತುತ ವೈಚಾರಿಕತೆಗಳ ಪ್ರಸ್ತಾಪಕ್ಕೆ ಹೆಚ್ಚು ಒತ್ತುಕೊಡುತ್ತಿರುವುದು ಆಳುವ ವರ್ಗಕ್ಕೆ ಒಂದು ವರವೇ ಆಗಿದೆ.

ಎಡಪಂಥ ಮತ್ತು ಬಲಪಂಥಗಳನ್ನು ಕೇವಲ ವೈಚಾರಿಕ ಹಾಗೂ ಅಕಡೆಮಿಕ್ ವಲಯದಲ್ಲಿ ಮಾತ್ರ ಸೀಮಿತವಾಗಿ ಗುರುತಿಸಲಾಗುತ್ತಿದೆ. ಯಾವುದೊ ಒಂದು ಬರವಣಿಗೆಯನ್ನು ಆಳುವ ವರ್ಗದ ಪ್ರಭುತ್ವ ನಿಷೇಧ ಮಾಡಿದಾಗ ‘ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ಹಲ್ಲೆ’ ಎಂದು ಬಣ್ಣಿಸಿ, ಅದಕ್ಕೆ ದೊಡ್ಡ ಮಟ್ಟದ ವಿರೋಧವನ್ನು ಸಂಘಟಿಸಲಾಗುತ್ತದೆ. ಆದರೆ ಈ ನಾಡಿನಲ್ಲಿ ಅಗುಳು ಅನ್ನಕ್ಕಾಗಿ ಜೀತ ಮಾಡುವ, ಕೂಲಿ ಮಾಡುವ, ಮನೆ ಕೆಲಸ ಮಾಡುವ ಕೋಟಿ ಕೋಟಿ ಜನರಿಗೆ ಎಂತಹ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ? ಎಂಬ ಪ್ರಶ್ನೆಯನ್ನು ಗಂಭೀರವಾಗಿ ಕೇಳಿಕೊಳ್ಳಬೇಕಾಗಿದೆ. ಈ ಸಂದರ್ಭದಲ್ಲಿ ಬಲಪಂಥವನ್ನು ಮಾತ್ರ ‘ಪರಮ ಶತ್ರು’ ಎಂದು ವರ್ಣಿಸುವುದು ಕೇವಲ ಮಾತುಗಳ ಲೋಲುಪತೆಯಾಗಿ ಕಾಣುತ್ತದೆ. ‘ಬಲಪಂಥದ ಪ್ರತಿಪಾದನೆ ನಡೆಯುತ್ತಿದೆ’ ಎಂಬುದಾಗಿ ಕೆಲವು ಬರಹಗಾರರನ್ನೊ, ಕೆಲವು ಕೃತಿಗಳನ್ನೊ ಆರೋಪ ಪಟ್ಟಿಯಲ್ಲಿ ನಿಲ್ಲಿಸಲಾಗುತ್ತಿದೆ. ಆದರೆ ಅದೇ ಹೊತ್ತಿನಲ್ಲೆ, ಹಂಪಿ ಮುಂತಾದ ಪ್ರವಾಸ ಸ್ಥಳಗಳಲ್ಲಿ ಒಂದು ವರ್ಷಕ್ಕೆ ಕನಿಷ್ಠ ಐದಾರು ಲಕ್ಷ ಜನ ಪ್ರವಾಸಿಗರಿಗೆ, ಅದೇ ‘ಬಲಪಂಥ’ದ ಚರಿತ್ರೆಯು ಗೈಡ್‌ಗಳ ಮೂಲಕ ಮೌಖಿಕವಾಗಿ ರವಾನೆಯಾಗುತ್ತಿದೆ. ಈ ಅಂಶ ಮಾತ್ರ ಕೆಲವರ ಗಮನಕ್ಕೇ ಬರುವುದಿಲ್ಲ. ‘ಬಲಪಂಥವನ್ನು ವಿರೋಧಿಸುವುದೇ ಪ್ರಗತಿಪರ ಕೆಲಸ’ ಎನ್ನುತ್ತಿರುವಾಗಲೆ ಸಾಮ್ರಾಜ್ಯಶಾಹಿಯ ಸುತ್ತುವರೆದ ದಾಳಿ ಏಕಕಾಲಕ್ಕೆ ಈ ‘ಎಡಪಂಥ ಹಾಗೂ ಬಲಪಂಥ’ ಎರಡನ್ನೂ ಬೇರೆಬೇರೆ ಮಾಡದೆ ಒಂದೇ ತೆಕ್ಕೆಗೆ ತೆಗೆದುಕೊಳ್ಳುತ್ತಿರುವುದು ಗಮನಕ್ಕೇ ಬರುವುದಿಲ್ಲ. ಸಾಮ್ರಾಜ್ಯಶಾಹಿಯ ರಾಜಕೀಯ ತಂತ್ರ, ಕುತಂತ್ರ, ಜಾಣ್ಮೆ, ದಾಳಿ, ಲೂಟಿ ಇವುಗಳ ಎದುರಿನಲ್ಲಿ ಎಡಪಂಥ ಹಾಗೂ ಬಲಪಂಥಗಳ ಶಕ್ತಿ ಮತ್ತು ಸಾಮರ್ಥ್ಯ ಎಷ್ಟು ಮತ್ತು ಎಂತಹದ್ದು ಎಂಬುದನ್ನು ಮರುವಿಮರ್ಶೆ ಮಾಡುವ ತುರ್ತು ಮತ್ತು ಅಗತ್ಯ ಇದೆ.