ಸಾಹಿತ್ಯ ಗ್ರಹಿಕೆಯ ಸ್ವರೂಪವನ್ನು ಪ್ರಭಾವಿಸಿರುವ, ಪ್ರಭಾವಿಸುತ್ತಿರುವ ಮತ್ತು ನಿಯಂತ್ರಿಸಿರುವ, ನಿಯಂತ್ರಿಸುತ್ತಿರುವ ಮುಖ್ಯ ಸಾಹಿತ್ಯ ಪ್ರಕಾರವೆಂದರೆ, ಸಾಹಿತ್ಯ ಚರಿತ್ರೆಗಳು. ಸಾಹಿತ್ಯ ಕೃತಿಗಳನ್ನು ಮತ್ತು ಕೃತಿಕಾರರನ್ನು ಕಾಲಕ್ಕೆ, ಧರ್ಮಕ್ಕೆ, ಮತಗಳಿಗೆ, ಜಾತಿಗಳಿಗೆ ಮತ್ತು ಪೂರ್ವ ನಿರ್ಧಾರಿತ ತೀರ್ಮಾನಗಳಿಗೆ ಅನುಗುಣವಾಗಿ ಸಾಹಿತ್ಯ ಚರಿತ್ರೆಗಳು ವಿಭಾಗ ಮಾಡುತ್ತವೆ. ಈ ವಿಭಾಗ ಕ್ರಮ ಸಾಹಿತ್ಯ ಓದುಗರಲ್ಲಿ ಬಹಳ ಗಟ್ಟಿಯಾಗಿ ಕೂತಿದೆ. ಸಾಹಿತ್ಯ ಚರಿತ್ರೆಯಲ್ಲಿ ಸಾಹಿತ್ಯ ಕೃತಿಗಳ ಬಗ್ಗೆ ಮತ್ತು ಕೃತಿಕಾರರ ಬಗ್ಗೆ ಯಾವ ತೀರ್ಮಾನಗಳನ್ನು ಕೊಡಲಾಗಿದೆಯೊ ಅವೆಲ್ಲವನ್ನೂ ಅನಾಮತ್ತಾಗಿ ಒಪ್ಪಲಾಗಿದೆ. ಸಾಹಿತ್ಯ ಚರಿತ್ರೆಯಲ್ಲಿ ಕೊಡಲಾಗಿರುವ ತೀರ್ಮಾನಗಳನ್ನು ಎರಡು ಬಗೆಯಲ್ಲಿ ಗುರುತಿಸಬಹುದು. ಒಂದು : ಕೃತಿಗಳು ಮತ್ತು ಕೃತಿಕಾರರ ಬಗೆಗೆ ಕೊಟ್ಟಿರುವ ಮಾಹಿತಿಗಳು. ಎರಡು: ಕೃತಿಗಳಿಗೆ ಕೊಟ್ಟಿರುವ ಮೌಲ್ಯನಿರ್ಣಯಗಳು. ಕೃತಿಗಳ ಬಗ್ಗೆ ಮತ್ತು ಕೃತಿಕಾರರ ಬಗ್ಗೆ ಕೊಟ್ಟಿರುವ ಮಾಹಿತಿಗಳನ್ನು ಒಂದು ಹಂತದವರೆಗೆ ಅಥವಾ ಅಗತ್ಯವಿದ್ದ ಕಡೆ ಬಳಸಿಕೊಳ್ಳಬಹುದು. ಆದರೆ ಕೃತಿಗಳ ಬಗ್ಗೆ ಕೊಡಲಾಗಿರುವ ಮೌಲ್ಯನಿರ್ಣಯಗಳನ್ನು ಹಾಗೆ ಸ್ವೀಕರಿಸಲು ಸಾಧ್ಯವಿಲ್ಲ.

ವಸಾಹತುಶಾಹಿ ಕಾಲದಲ್ಲಿ ಆ ಕಾಲದ ಸಾಂಸ್ಕೃತಿಕ ಮತ್ತು ಚಾರಿತ್ರಿಕ ಒತ್ತಡಗಳ ಫಲವಾಗಿ ಸಾಹಿತ್ಯ ಚರಿತ್ರೆಗಳನ್ನು ಬರೆಯಲಾಯಿತು. ಆ ಕಾಲದಲ್ಲಿ ಚರಿತ್ರೆಯನ್ನು ಬರೆಯುವಾಗ ಲಿಖಿತ ಆಕರಗಳನ್ನು ಮಾತ್ರವೇ ಪರಿಗಣಿಸಲಾಯಿತು. ಲಿಖಿತವಲ್ಲದ ಆಕರಗಳಿಂದಲೂ ಚರಿತ್ರೆಯ ಬರವಣಿಗೆ ಸಾಧ್ಯವಿತ್ತಾದರೂ ಆ ಕಾಲದಲ್ಲಿ ಅದಕ್ಕೆ ಹೆಚ್ಚಿನ ಒತ್ತು ನೀಡಲಿಲ್ಲ. ವಸಾಹತುಶಾಹಿಗೆ ಪರ್ಯಾಯ ಎಂಬ ಕಲ್ಪನೆಯಲ್ಲಿ ವಸಾಹತುಶಾಹಿಯ ಆಲೋಚನೆಯ ಕ್ರಮದಲ್ಲೆ, ಆ ಆಲೋಚನೆಯ ಚೌಕಟ್ಟಿನಲ್ಲೆ ಇಲ್ಲಿ ಚರಿತ್ರೆಯನ್ನು ಬರೆಯಲಾಯಿತು. ಸಾಹಿತ್ಯದ ವಲಯದಲ್ಲಿ ಲಭ್ಯ ಹಸ್ತಪ್ರತಿ, ತಾಳೆಗರಿ ಮುಂತಾದುವುಗಳ ರೂಪದಲ್ಲಿದ್ದ ಸಾಹಿತ್ಯ ಕೃತಿಗಳನ್ನು ಮುದ್ರಣ ರೂಪಕ್ಕೆ ತರಲಾಯಿತು. ಕೃತಿಕಾರರ ಕಾಲದ ವಿಷಯಕ್ಕೆ ಮತ್ತು ಕೃತಿಗಳ ಒಳವಿವರಗಳಿಗೆ ಸಂಬಂಧಿಸಿದಂತೆ ಬಿಡಿಬಿಡಿಯಾಗಿದ್ದ ಕೃತಿಗಳನ್ನು ಒಂದು ಚೌಕಟ್ಟಿಗೆ ತಂದು ಸಾಹಿತ್ಯ ಚರಿತ್ರೆಯನ್ನು ಬರೆಯಲಾಯಿತು. ಚರಿತ್ರೆಯ ಬರವಣಿಗೆಯಲ್ಲಿ ಹೇಗೆ ಲಿಖಿತ ಆಕರಗಳನ್ನು ಮಾತ್ರ ಪ್ರಧಾನವೆಂದು ಪರಿಗಣಿಸಲಾಯಿತೊ ಹಾಗೆ, ಸಾಹಿತ್ಯ ಚರಿತ್ರೆ ಬರೆಯುವಾಗಲೂ ಲಿಖಿತ ರೂಪದಲ್ಲಿದ್ದ ಕೃತಿಗಳನ್ನು ಮಾತ್ರ ಆಯ್ಕೆಮಾಡಿಕೊಳ್ಳಲಾಯಿತು. ಲಿಖಿತ ರೂಪದಲ್ಲಿ ಇಲ್ಲದ ಕೃತಿಗಳನ್ನು ನಿರಾಕರಿಸಲಾಯಿತು.

ಸಾಹಿತ್ಯ ಚರಿತ್ರೆಯ ಧೋರಣೆಯ ಮತ್ತು ಅದರ ರಚನೆಯ ಚೌಕಟ್ಟು ಸಾಹಿತ್ಯ ಚರಿತ್ರೆಯನ್ನು ಔಪಚಾರಿಕವಾಗಿ ಓದಿದವರ ಮನಸ್ಸಿನಲ್ಲಿ ಬಹಳ ಗಟ್ಟಿಯಾಗಿ ಕೂತಿದೆ. ಅಷ್ಟು ಮಾತ್ರವಲ್ಲ, ಸಾಹಿತ್ಯ ಚರಿತ್ರೆಯು ಸಾಹಿತ್ಯ ಕೃತಿಗಳ ಬಗೆಗೆ ಮಾಡಿರುವ ತೀರ್ಮಾನಗಳು ಇನ್ನೂ ಗಟ್ಟಿಯಾಗಿ ಕೂತಿವೆ. ಸಾಹಿತ್ಯ ಚರಿತ್ರೆ ಎಂದರೆ ಸಾಕು ಒಂದು ರಡಿಮೇಡ್ ಕೋಷ್ಟಕದ ಕಲ್ಪನೆ ಬಂದುಬಿಡುತ್ತದೆ.  ಆ ಕೋಷ್ಟಕವನ್ನು ಎಲ್ಲರಿಗೂ ಒಪ್ಪಿಸಲಾಗಿದೆ, ಆ ಕಾರಣಕ್ಕಾಗಿ ಅದನ್ನು ಒಪ್ಪಿಕೊಳ್ಳಲಾಗಿದೆ. ಆ ಕೋಷ್ಟಕವನ್ನು ಎಲ್ಲರಿಗೂ ನಂಬಿಸಲಾಗಿದೆ, ಆ ಕಾರಣಕ್ಕೆ ಅದನ್ನು ನಂಬಲಾಗಿದೆ. ಕೃತಿ ಮತ್ತು ಕೃತಿಕಾರರ ಕಾಲ, ಅವರ ಮತಧರ್ಮ, ಮತ್ತು ಕೆಲವು ಕೃತಿಗಳ ಆಯ್ಕೆಯ ಉತ್ಕೃಷ್ಟ ಭಾಗಗಳು, ಸನ್ನಿವೇಶಗಳು ಇವಿಷ್ಟು ಸಾಹಿತ್ಯ ಚರಿತ್ರೆಗಳ ಜೀವಾಳ ಮತ್ತು ಇದಿಷ್ಟು ಸಾಹಿತ್ಯ ಚರಿತ್ರೆಗಳ ಚೌಕಟ್ಟು. ಹಾಗಾಗಿ ಪಂಪ ಎಂದ ತಕ್ಷಣ ನೆನಪಿಗೆ ಬರುವುದು ೧೦ನೇ ಶತಮಾನ ಮತ್ತು ಜೈನಧರ್ಮ ಎರಡೇ. ಪಂಪನ ಕೃತಿಗಳು ಎಂದರೆ ಆದಿ ಪುರಾನದ ನೀಲಾಂಜನೆಯ ನೃತ್ಯ, ಭರತ ಬಾಹುಬಲಿಯರ ಪ್ರಸಂಗ, ವಿಕ್ರಮಾರ್ಜುನ ವಿಜಯದ ೧೨ ಮತ್ತು ೧೩ನೇ ಆಶ್ವಾಸಗಳು ಮಾತ್ರ. ಜೈನ ಕವಿಗಳು ಬರೆದುದೆಲ್ಲವೂ ಜೈನಧರ್ಮದ ಸಾಹಿತ್ಯ ಎಂದು ಹೇಳುತ್ತಿರುವಾಗಲೆ, ಲೀಲಾವತಿ ಪ್ರಬಂಧಂ ಅನ್ನು ಎಲ್ಲಿಡಬೇಕು ಎಂಬುದು ತಿಳಿಯುವುದಿಲ್ಲ. ವಚನಗಳು ಎಂದರೆ ೧೨ನೇ ಶತಮಾನ, ಅಲ್ಲಿ ಅದೇ ಬಸವಣ್ಣ, ಅದೇ ಅಲ್ಲಮಪ್ರಭು, ಅಕ್ಕಮಹಾದೇವಿ ಇತ್ಯಾದಿ ವಚನಕಾರರ ಮತ್ತು ಕೆಲವು ವಚನಗಳ ನೆನಪು ಬರುತ್ತದೆ. ಇದೇ ಮಾದರಿ ನಂತರದ ಕೃತಿಗಳು ಮತ್ತು ಕೃತಿಕಾರರಿಗೆ ಅನ್ವಯಿಸುತ್ತದೆ.

ಸಾಹಿತ್ಯ ಚರಿತ್ರೆಯಲ್ಲಿ ಕೃತಿಗಳ ಬಗ್ಗೆ ಕೊಡಲಾಗಿರುವ ಮೌಲ್ಯನಿರ್ಣಯಗಳು ಸಾಹಿತ್ಯ ಓದಿನಲ್ಲಿ ಪ್ರಶ್ನಾತೀತ ಮತ್ತು ಸ್ವೀಕೃತ ನಂಬಿಕೆಗಳಾಗಿವೆ. ಪ್ರಜ್ಞಾಪೂರ್ವಕವಾಗಿ ಮತ್ತು ತರ್ಕಬದ್ಧವಾಗಿ ಅವುಗಳ ಬಗ್ಗೆ ಭಿನ್ನಮತ ಸಾಧ್ಯವಿದೆಯಾದರೂ, ಅದರಾಚೆಗೆ ಅಪ್ರಜ್ಞಾಪೂರ್ವಕವಾಗಿ ಆ ನಿರ್ಣಯಗಳನ್ನು ನಂಬುವ ಸ್ಥಿತಿ ಇದೆ. ಪಂಪ ಯುಗ, ಬಸವ ಯುಗ, ಕುಮಾರವ್ಯಾಸ ಯುಗ ಎಂದು ಹೇಗೆ ಜನಪ್ರಿಯಗೊಳಿಸಲಾಗಿದೆಯೋ ಅದೇ ರೀತಿಯಲ್ಲಿ, ನವೋದಯ, ಪ್ರಗತಿಶೀಲ, ನವ್ಯ, ದಲಿತ ಬಂಡಾಯ ಎಂಬ ಪೂರ್ವ ತೀರ್ಮಾನದ ಚೌಕಟ್ಟುಗಳನ್ನು ಜನಪ್ರಿಯಗೊಳಿಸಲಾಗಿದೆ. ಪೂರ್ವ ತೀರ್ಮಾನದ ಈ ಚೌಕಟ್ಟುಗಳಿಗೆ ತಾತ್ವಿಕವಾದ ಮತ್ತು ತಾರ್ಕಿಕವಾದ ಯಾವ ಅಡಿಪಾಯಗಳೂ ಇಲ್ಲ. ಹಾಗಿದ್ದಾಗಲೂ, ನವೋದಯ ಸಾಹಿತ್ಯದ ಲಕ್ಷಣಗಳು, ಪ್ರಗತಿಶೀಲ ಸಾಹಿತ್ಯದ ಲಕ್ಷಣಗಳು, ನವ್ಯ ಸಾಹಿತ್ಯದ ಲಕ್ಷಣಗಳು ಎಂಬಂತೆ ಅವುಗಳಿಗೆ ಕೆಲವು ವಿಚಾರಗಳನ್ನು ಅತ್ಯಂತ ದುರ್ಬಲವಾಗಿ ಮತ್ತು ಸರಳವಾಗಿ ಆರೋಪಿಸಲಾಗಿದೆ. ಆ ದುಬ್ಲವೂ, ರೋಪಿತವೂ, ಸರಳವೂ ಆದ ಲಕ್ಷಣಗಳನ್ನು ಪರಿಚಯ ಮಾಡಿಕೊಡುವುದೇ ಕನ್ನಡ ಸಾಹಿತ್ಯದ ಪರಿಚಯ ಮಾಡಿಕೊಟ್ಟಂತೆ ಎಂದು ಭಾವಿಸಲಾಗಿದೆ. ಅದೇ ರೀತಿಯಲ್ಲಿ ಆ ಲಕ್ಷಣಗಳನ್ನು ಪರಿಚಯ ಮಾಡಿಕೊಳ್ಳುವುದೇ ಕನ್ನಡ ಸಾಹಿತ್ಯದ ಪರಿಚಯ ಮಾಡಿಕೊಂಡಂತೆ ಎಂದು ಭಾವಿಸಲಾಗಿದೆ. ಉನ್ನತ ಶಿಕ್ಷಣ ಎಂದು ಕರೆಯಲಾಗುವ ಶೈಕ್ಷಣಿಕ ಪಠ್ಯಕ್ರಮದಲ್ಲಿ ಈ ಸಾಹಿತ್ಯ ಚರಿತ್ರೆಯನ್ನು ಬೋಧಿಸಲಾಗುತ್ತಿದೆ. ಸಾಹಿತ್ಯ ಚರಿತ್ರೆಯ ಸಾಹಿತ್ಯಕ ನಂಬಿಕೆಗಳನ್ನು ನಂಬಿಸಲಾಗುತ್ತಿದೆ. ಸಾಹಿತ್ಯ ವಿದ್ಯಾರ್ಥಿಗಳು ಸಾಹಿತ್ಯ ಚರಿತ್ರೆ ಹಾಕಿರುವ ಲಕ್ಷ್ಮಣರೇಖೆಗಳನ್ನು ದಾಟಲು ಸಿದ್ಧರಿಲ್ಲ. ಯಾಕೆಂದರೆ ಅದರ ಲಕ್ಷ್ಮಣರೇಖೆಯನ್ನು ದಾಟದಂತೆ ಅವರಿಗೆ ಸಾಹಿತ್ಯಕ ಲಕ್ಷಣಗಳನ್ನು ಕಂಠಪಾಠ ಮಾಡಿಸಲಾಗಿದೆ.

ನವೋದಯ, ಪ್ರಗತಿಶೀಲ ಮುಂತಾದ ದುರ್ಬಲ ಚೌಕಟ್ಟುಗಳನ್ನು ಮಾಡಿ, ಅದಕ್ಕೆ ಅದರವೇ ಆದ ಶಾಶ್ವತ ಲಕ್ಷಣಗಳನ್ನು ಜೋಡಿಸಿರುವುದರಿಂದ ಅವುಗಳಿಂದ ಹೊರಬರುವ ದಾರಿ ಯಾವುದು ಎಂಬುದು ಸ್ವತಂತ್ರವಾಗಿ ಆಲೋಚನೆ ಮಾಡುವವರಿಗೆ ಸವಾಲಾಗಿದೆ. ಇದಕ್ಕೆ ದಾರಿಗಳು ಇಲ್ಲವೆಂದಲ್ಲ. ಶಿವರಾಮ ಕಾರಂತರನ್ನು ನವೋದಯ ಎಂಬ ಚೌಕಟ್ಟಿನಲ್ಲಿ ಸೇರಿಸಲಾಗಿದೆ. ಆದರೆ ಅವರ ಕೆಲವು ಕಾದಂಬರಿಗಳು ಮತ್ತು ಅವರ ವಿಚಾರ ಸಾಹಿತ್ಯ, ಇನ್ನೂ ಕೆಲವು ಬರವಣಿಗೆಗಳು ಆ ಚೌಕಟ್ಟಿನಲ್ಲಿ ಸೇರುವುದಿಲ್ಲ. ಹಾಗಿದ್ದರೆ ಅವರ ಆ ಬಗೆಯ ಬರವಣಿಗೆಗಳನ್ನು ಎಲ್ಲಿ ಸೇರಿಸುವುದು? ಅಥವಾ ಸ್ವತಃ ಶಿವರಾಮ ಕಾರಂತರನ್ನೇ ಕೇವಲ ನವೋದಯ ಬರಹಗಾರರು ಎಂದು ಸೀಮಿತ ಮಾಡಬಹುದೆ? ಶಿವರಾಮ ಕಾರಂತರು ಮಾತ್ರವಲ್ಲ; ಗೋವಿಂದ ಪೈ, ಪು.ತಿ.ನ. ಮುಂತಾದವರ ಕೆಲವು ಬರವಣಿಗೆಗಳನ್ನು ಎಲ್ಲಿ ಸೇರಿಸುವುದು? ಆದರೂ ಅವರನ್ನೆಲ್ಲ ಕಾಲದ ಚೌಕಟ್ಟಿಗೆ ಕಟ್ಟಿಹಾಕಲಾಗಿದೆ. ಅವರ ಬರವಣಿಗೆಯ ಮೇಲೆ, ಅವರ ಬರವಣಿಗೆಗೆ ಸರಿಹೊಂದದ, ನವೋದಯ ಎಂಬುದನ್ನು ಆರೋಪಿಸಲಾಗಿದೆ.

ಸಾಹಿತ್ಯ ಚರಿತ್ರೆಯ ತಾತ್ವಿಕತೆಯ ಬೆನ್ನೆಲುಬಿನ ಮೂಲ ಎಲ್ಲಿದೆ ಎಂಬುದನ್ನು ಪರಿಶೀಲಿಸಬಹುದು. ಸಾಹಿತ್ಯ ಚರಿತ್ರೆಯ ತಾತ್ವಿಕತೆಯು ಚರಿತ್ರೆ ಬರವಣಿಗೆಯ ತಾತ್ವಿಕ ಚೌಕಟ್ಟಿನಲ್ಲೆ ಇದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ ಚರಿತ್ರೆ ಗ್ರಹಿಕೆಯ ತಾತ್ವಿಕತೆಯೇ ಸಾಹಿತ್ಯ ಚರಿತ್ರೆಯ ತಾತ್ವಿಕತೆಯಾಗಿದೆ. ಚರಿತ್ರೆಯ ಸಂಗತಿಗಳು ಗತಿಸಿ ಹೋದವೆಂದೂ, ಅವು ಜಡವಾದವೆಂದೂ ತೀರ್ಮಾನಿಸಿ, ಅವುಗಳನ್ನು ಕಾಲಾನುಕ್ರಮಣಿಕೆಯಲ್ಲಿ ಜೋಡಿಸುವ ವಿಧಾನ ಚರಿತ್ರೆಯ ಬರವಣಿಗೆಯಲ್ಲಿದೆ. ಚರಿತ್ರೆ ಎಂದರೆ ವರ್ತಮಾನ ಅಲ್ಲ ಎಂಬ ಹೇಳಿಕೆಯ ಮತ್ತೊಂದು ರೂಪ ತಾನೆ? ಹಾಗಾಗಿ ವರ್ತಮಾನದಿಂದ ಸಂಪೂರ್ಣವಾಗಿ ಬೇರ್ಪಟ್ಟ ಸಂಗತಿಗಳ ಮೊತ್ತವೇ ಚರಿತ್ರೆ ಎಂದು ಸರಳೀಕರಿಸಿದಂತೆ ಆಯಿತು. ಚರಿತ್ರೆಯ ನಡಿಗೆಯು ಸರಳ ರೇಖೆಯ ಮಾದರಿಯಲ್ಲಿ ಇರುತ್ತದೆ ಎಂಬುದು ಚರಿತ್ರೆಯ ಗ್ರಹಿಕೆಯ ಮತ್ತೊಂದು ಮುಖ್ಯವಾದ ತಾತ್ವಿಕತೆ. ಹಾಗಾಗಿ ಈ ನಡಿಗೆಯ ಕ್ರಮದಲ್ಲಿ ಸಂಗತಿಗಳು, ಘಟನೆಗಳು ಒಂದಾದ ಮೇಲೆ ಒಂದರಂತೆ ಕ್ರಮವಾಗಿಯೇ ಬರುತ್ತವೆ ಎಂಬುದು ಇಲ್ಲಿಯ ತರ್ಕ. ಇಲ್ಲಿಯ ಕಾಲದ ಕಲ್ಪನೆಯು ಡಾರ್ವಿನ್ ಮಂಡಿಸಿದ ವಿಕಾಸವಾದದ ಮಾದರಿಯದು. ಇಲ್ಲಿಯ ಕಾಲದ ಕಲ್ಪನೆಯು ಅನುಕ್ರಮಣಿಕೆಯದೂ, ಸರಳ ರೇಖೆಯದೂ ಆಗಿದೆ. ಕಾಲದ ಕಲ್ಪನೆಯು ಸರಳ ರೇಖೆಯದ್ದಲ್ಲದೆ ವೃತ್ತಾಕಾರದ ಕಲ್ಪನೆಯಾಗಿದ್ದರೆ, ಆಗ ಚರಿತ್ರೆಯು ಮರುಕಳಿಸುತ್ತದೆ; ಪುನರಾವರ್ತನೆಯಾಗುತ್ತದೆ. ಹಳಗನ್ನಡದ ಕೆಲವು ಕೃತಿಗಳಲ್ಲಿ ಕೆಲವು ಪಾತ್ರಗಳು ಬೇರೆ ಬೇರೆ ಜನ್ಮಗಳನ್ನು ಎತ್ತಿ ಕೊನೆಗೆ ಮೊದಲಿದ್ದ ಸ್ಥಿತಿಗೆ ಬರುವ ನಿರೂಪಣೆಗಳಿವೆ. ಲೋಹಿಯಾ ಅವರು ಚರಿತ್ರೆಯ ನಡಿಗೆಯನ್ನು ವೃತ್ತಾಕಾರದ ಮಾದರಿಯಲ್ಲಿ ನಿರೂಪಿಸಲು ಪ್ರಯತ್ನಿಸಿದರು. ಆದರೆ ಕಾಲದ ಕಲ್ಪನೆ ಮತ್ತು ಅದರ ಚಲನೆ ಸರಳ ರೇಖೆಯದೂ ಅಲ್ಲ; ವೃತ್ತಾಕಾರದ್ದೂ ಅಲ್ಲ. ಅದು ವಕ್ರರೇಖೆಯಿಂದ ಕೂಡಿದ ಸುರುಳಿಯಾಕಾರದ್ದು ಎಂಬುದನ್ನು ಗತಿತಾರ್ಕಿಕ ತತ್ವಶಾಸ್ತ್ರ ಮಂಡಿಸಿದೆ. ಹಾಗಾಗಿ ಚರಿತ್ರೆಯಲ್ಲಿ ಒಂದಾದ ಮೇಲೆ ಒಂದರಂತೆ ಅನುಕ್ರಮವಾಗಿ ಘಟನೆಗಳು ಬರುವುದಿಲ್ಲ. ಚರಿತ್ರೆಯು ಮರುಕಳಿಸುವುದಿಲ್ಲ. ಜನವರಿ ೧ ಎಂಬ ದಿನಾಂಕ ಪ್ರತೀ ವಷ್ವೂ ಬರುತ್ತದೆ. ಇದರ ಹಾಗೇ ಎಲ್ಲಾ ದಿನಾಂಕಗಳೂ ಪ್ರತೀ ವರ್ಷವೂ ಬರುತ್ತವೆ. ಹಾಗಿದ್ದರೆ ಆದಿನಗಳ ಪುನರಾವರ್ತನೆ ಆದವೆಂದು ತೀರ್ಮಾನಿಸಬಹುದೆ? ಅದೂ ಬೇಡ. ಏಳು ದಿವಸಕ್ಕೊಮ್ಮೆ ಅದೇ ದಿನಗಳು, ಅದೇ ಹೆಸರಿನಲ್ಲಿ ಮತ್ತೆ ಮತ್ತೆ ಬರುತ್ತವೆ. ಆದರೆ ಪ್ರತೀ ವಾರದ ಆ ದಿನಗಳು ಪ್ರತಿಯೊಬ್ಬರ ಪಾಲಿಗೂ ಬೇರೆಬೇರೆಯೇ ಆಗಿರುತ್ತವೆ.

ಚರಿತ್ರೆಯ ತಾತ್ವಿಕ ಚೌಕಟ್ಟು ನಂಬಿಸಿ, ಒಪ್ಪಿಸಿರುವ ಸಾಹಿತ್ಯ ಗ್ರಹಿಕೆಯ ವಿಧಾನಗಳನ್ನು ಉದ್ದೇಶಪೂವ್ಕವಾಗಿ ಮತ್ತು ಪ್ರಜ್ಞಾಪೂವ್ಕವಾಗಿ ಬದಿಗಿಟ್ಟು ಸಾಹಿತ್ಯವನ್ನು ಓದಬೇಕು. ಆಗ ಕೃತಿಕಾರರನ್ನು ಮತ್ತು ಕೃತಿಗಳನ್ನು ಕಾಲಾನುಕ್ರಮಣಿಕೆಯ ಸರಳ ರೇಖೆ ಮಾದರಿಯಲ್ಲಿ ಗ್ರಹಿಸಲು ಆಗುವುದಿಲ್ಲ. ಚನ್ನಣ್ಣ ವಾಲೀಕಾರರ ಕೆಲವು ಬರವಣಿಗೆಗಳನ್ನು ಮತ್ತು ನಯಸೇನನ ಧರ್ಮಾಮೃತವನ್ನು ಒಟ್ಟಿಗೆ ಇಟ್ಟು ಓದಬಹುದು. ಕೆಲವು ವೈಚಾರಿಕ ಬರವಣಿಗೆಗಳನ್ನೂ ಮತ್ತು ದೇವಚಂದ್ರನ ರಾಜಾವಳಿ ಕಥಾಸಾರವನ್ನೂ ಒಟ್ಟಿಗೆ ಓದಬಹುದು. ಪ್ರಗತಿಶೀಲ ಆಶಯಗಳ ಕೆಲವು ಕವನಗಳನ್ನೂ ಕೆಲವು ವಚನಗಳನ್ನೂ ಒಟ್ಟಿಗೆ ಓದಬಹುದು. ಇದು ಸಾಮ್ಯತೆ ಇದೆ ಎಂಬ ಅಂಶದ ಮಾತಲ್ಲ. ಬದಲಿಗೆ ಕಾಲದ ಅನುಕ್ರಮಣಿಕೆಯನ್ನು ಸಾಹಿತ್ಯವು ತನ್ನ ಆಳದಲ್ಲೆ ವಿರೋಧಿಸುತ್ತದೆ ಎಂಬುದಕ್ಕೆ ಸಂಬಂಧಿಸಿದ ವಿಚಾರ. ಇಲ್ಲಿಯ ಚರ್ಚೆಗೆ ಪೂರಕವಾಗಿ ಕೆ.ವಿ. ನಾರಾಯಣ ಅವರ ‘ಸಾಹಿತ್ಯದಲ್ಲಿ ಚರಿತ್ರೆ ಅಥವಾ ಸಾಹಿತ್ಯದ ಚರಿತ್ರೆ’ ಎಂಬ ಲೇಖನವನ್ನೂ, ಜೊತೆಗೆ ಅವರ ‘ಬೇರು ಕಾಂಡ ಚಿಗುರು’ ಲೇಖನವನ್ನೂ, ಇ.ಎಚ್.ಕಾರ್‌ ಬರೆದಿರುವ ‘ವಾಟ್ ಈಸ್ ಹಿಸ್ಟರಿ’ (ಅನುವಾದ: ಬಿ.ಸುಜ್ಞಾನಮೂರ್ತಿ) ಬರವಣಿಗೆಯನ್ನೂ ಗಮನಿಸಬಹುದು.

* * *