ಸಂಶೋಧನೆ ಎಂಬ ಅಕಡೆಮಿಕ್ ಆಲೋಚನೆ ಶುರುವಾಗುವುದೆ ವಸ್ತುವಿಷಯವನ್ನು ಕುರಿತು ಪ್ರಶ್ನೆ ಮಾಡುವ, ಗುಮಾನಿ ಪಡುವ, ಸಂದೇಹ ಪಡುವ ಮತ್ತು ಭಿನ್ನಮತವನ್ನು ವ್ಯಕ್ತಮಾಡುವ ಮೂಲಕ. ಸಾಹಿತ್ಯ ಮತ್ತು ಸಾಹಿತ್ಯ ಪಠ್ಯಗಳು ಇದಕ್ಕೆ ಆಹ್ವಾನ ನೀಡುತ್ತವೆ. ಅವು ನೀಡುವ ಆಹ್ವಾನದ ಕ್ರಮಗಳು ಒಂದೇ ರೀತಿಯಲ್ಲಿ ಇರುವುದಿಲ್ಲ. ಅವು ಬೇರೆ ಬೇರೆ ಕ್ರಮಗಳಲ್ಲಿ, ಅಭಿವ್ಯಕ್ತಿಯ ಮತ್ತು ನಿರೂಪಣೆಗಳ ಅನಂತ ಸಾಧ್ಯತೆಗಳಲ್ಲಿ ಕೆಲವು ಕಡೆ ಪ್ರತ್ಯಕ್ಷವಾಗಿಯೂ; ಮತ್ತೆ ಕೆಲವು ಕಡೆ ಪರೋಕ್ಷವಾಗಿಯೂ ಆಹ್ವಾನಿಸುತ್ತವೆ. ಈ ಅರ್ಥದಲ್ಲೆ ಒಂದು ಕೃತಿ ತನ್ನನ್ನು ಹೇಗೆ ನೋಡಬೇಕು ಎಂಬ ಬಹುಸಾಧ್ಯತೆಗಳನ್ನು ತನ್ನ ಒಡಲೊಳಗೇ ಇಟ್ಟುಕೊಂಡಿರುತ್ತದೆ ಎನ್ನುವುದು. ಒಂದು ಸಾಹಿತ್ಯ ಕೃತಿಗೆ ಹಲವು ಪ್ರತಿಕ್ರಿಯೆಗಳು, ಹಲವು ನಿರೂಪಣೆಗಳು ಮತ್ತು ಭಿನ್ನ ನಿಲುವುಗಳು ವ್ಯಕ್ತವಾಗುವುದೆ ಈ ಕಾರಣದಿಂದ.

ವ್ಯವಸ್ಥೆಯನ್ನು ಒಂದೇ ದೃಷ್ಟಿಕೋನದಲ್ಲಿ ನೋಡುವ ಮನೋಧರ್ಮವನ್ನು ವಿದ್ಯಾರ್ಥಿಗಳಿಗೆ ಕಲಿಸುವ ಪ್ರಯತ್ನ ಶಿಕ್ಷಣದಲ್ಲಿ ನಡೆಯುತ್ತಿದೆ. ‘ಸಮಾಜದ ವಿಷಯಗಳು ಹೀಗೇ ಇರುತ್ತವೆ’ ಎಂದು ವಿವರಿಸುವ ಮತ್ತು ನಂಬಿಸುವ ವೈಚಾರಿಕ ಕೆಲಸ ಶಿಕ್ಷಣದಲ್ಲಿ ನಡೆಯುತ್ತಿದೆ. ‘ಶಿಕ್ಷಣ ಎಂದರೆ ಇದು, ಗುರುಗಳು ಎಂದರೆ ಹೀಗೆ, ರಾಷ್ಟ್ರ ಎಂದರೆ ಇದು, ಭಾರತ ಎಂದರೆ ಇದು, ಪಾಕಿಸ್ಥಾನ ಎಂದರೆ ಇದು, ಸಮಾಜ ಎಂದರೆ ಇದು, ಕುಟುಂಬ ಎಂದರೆ ಇದು, ಸರಕಾರದ ಕೆಲಸ ಎಂದರೆ ಇದು, ರಾಷ್ಟ್ರಗೀತೆ ಎಂದರೆ ಇದು, ಭಾರತೀಯ ಸಂಸ್ಕೃತಿ ಎಂದರೆ ಇದು, ರಾಷ್ಟ್ರಭಾಷೆ ಇದು, ಚುನಾವಣೆ ಎಂದರೆ ಇದು, ಗಂಡಸು ಎಂದರೆ ಹೀಗೆ, ಹೆಂಗಸು ಎಂದರೆ ಹೀಗೆ, ಸಾಹಿತ್ಯ ಎಂದರೆ ಇದು, ಸಂಶೋಧನೆ ಎಂದರೆ ಇದು ಈ ರೀತಿಯಲ್ಲಿ ಎಲ್ಲ ವಿಷಯಗಳನ್ನೂ ಒಂದೆ ದೃಷ್ಟಿಕೋನದಲ್ಲಿ ವಿವರಿಸುವ ಮನೋಭಾವ ಶಿಕ್ಷಣದಲ್ಲಿ ಇದೆ. ಪ್ರತಿಯೊಂದು ವಿಷಯಕ್ಕೂ ‘ಒಂದು ಅರ್ಥ, ಒಂದು ವಿವರಣೆ’ಯನ್ನು ಸಾಮಾಜಿಕ ವ್ಯವಸ್ಥೆ ರೂಪಿಸಿರುತ್ತದೆ. ಇದನ್ನು ‘ಸ್ಥಾಪಿತ ಅರ್ಥ, ಸ್ಥಾಪಿತ ವಿವರಣೆ’ ಎಂದು ಕರೆಯಬಹುದು. ಈ ‘ಸ್ಥಾಪಿತ ಅರ್ಥ ವಿವರಣೆ’ಗಳು ಕ್ರಮೇಣ ಎಲ್ಲರ ಒಪ್ಪಿಗೆ ಪಡೆದು ರೂಡಿಗೆ ಬಿದ್ದು, ಸ್ಥಿರೀಕೃತವಾಗಿ ಬಿಡುತ್ತವೆ. ಸಂಶೋಧನೆ ಮಾಡುವವರಿಗೆ ಮೊದಲಿಗೇ ಈ ಸ್ಥಿರೀಕೃತ ವೈಚಾರಿಕ ಚೌಕಟ್ಟುಗಳು ಸುಲಭದ ದಾರಿಗಳಾಗಿಯೂ; ಎದುರಿಸಲಾರದ ಅಡ್ಡ ಗೋಡೆಗಳಾಗಿಯೂ ಬರುತ್ತವೆ. ಅವನ್ನು ಅಡ್ಡ ಗೋಡೆಗಳು ಎಂದು ತಿಳಿಯುವವರು ಅವನ್ನು ಪ್ರಶ್ನಿಸುವ ಮತ್ತು ಅನುಮಾನಿಸುವ ಪ್ರಯತ್ನ ಮಾಡುತ್ತಾರೆ. ಇದನ್ನು ಮಾಡದವರು ಅವನ್ನು ‘ಇದ್ದಂತೆಯೇ’ ಒಪ್ಪಿಕೊಂಡು ಸಂಶೋಧನೆ ಮುಗಿಸುತ್ತಾರೆ.

ಸಮಾಜ ನಿಂತ ನೀರಲ್ಲ; ಅದು ನಿರಂತರವಾಗಿ ಬದಲಾಗುತ್ತಿರುತ್ತದೆ. ಅದಕ್ಕೆ ಹೊರಗಿನ ಪ್ರಭಾವಗಳೂ, ಒಳಗಿನ ಒತ್ತಡಗಳು ಕಾರಣವಾಗಿರುತ್ತವೆ. ಅದರ ಬದಲಾಗುವಿಕೆಯನ್ನು ಯಾರೂ ಅಲ್ಲಗಳೆಯಲಾರರು. ದೇಶ, ಸಮಾಜ, ಕುಟುಂಬ, ಮಾನವರ ಸಂಬಂಧಗಳು, ಸಾಮಾಜಿಕ ಮೌಲ್ಯಗಳು ಇವುಗಳೂ ಬದಲಾಗುತ್ತಿರುತ್ತವೆ. ಆದರೆ ಮುಖ್ಯ ಸಮಸ್ಯೆ ಎಂದರೆ ಈ ಬದಲಾಗುವಿಕೆಯನ್ನು ಎಲ್ಲರೂ ಗುರುತಿಸುವುದಿಲ್ಲ ಎಂಬುದು. ದೇಶ, ಭಾಷೆ, ಕುಟುಂಬ ಇವು ಬದಲಾವಣೆ ಆಗುತ್ತಿರುವಾಗ, ಅವುಗಳನ್ನು ಅರ್ಥೈಸುವ ವಿಧಾನಗಳೂ, ದೃಷ್ಟಿಕೋನಗಳೂ ಬದಲಾಗಬೇಕಾಗುತ್ತದೆ. ಭಾರತವು ರಾಜಮಹಾರಾಜರ ಆಳ್ವಿಕೆ, ವಸಾಹತುಶಾಹಿ ಆಳ್ವಿಕೆಯನ್ನು ದಾಟಿ ಈಗ ಸಾಮ್ರಾಜ್ಯಶಾಹಿ ಆಳ್ವಿಕೆಯ ಯುಗದಲ್ಲಿದೆ. ಈ ಬದಲಾವಣೆಯನ್ನು ವೈಚಾರಿಕವಾಗಿ ಗುರುತಿಸಬೇಕು. ಅದೇ ರೀತಿ ಸಾಹಿತ್ಯ, ಸಂಸ್ಕೃತಿ, ಸಂಶೋಧನೆ, ವೈಚರಿಕ ಆಲೋಚನೆಗಳಲ್ಲೂ ಬದಲಾವಣೆಗಳು ನಡೆಯುತ್ತವೆ. ಅದನ್ನು ಸೂಕ್ಷ್ಮವಾಗಿ ಗಮನಿಸಬೇಕು ಮತ್ತು ಗುರುತಿಸಬೇಕು.

ಸಾಹಿತ್ಯ ಸಂಶೋಧನೆಯಲ್ಲಿ ಸ್ಥಿರೀಕೃತಗೊಂಡಿರುವ ವೈಚಾರಿಕ ಆಕೃತಿಗಳನ್ನು ಅನುಮಾನಿಸಿ, ಹೊಸ ಅರ್ಥಸಾಧ್ಯತೆಗಳನ್ನು ಹುಡುಕಬೇಕಾಗುತ್ತದೆ; ನಿರೂಪಿಸಬೇಕಾಗುತ್ತದೆ. ಹೀಗೆ ಅನುಮಾನಿಸುವುದು ಮತ್ತು ಹೊಸ ಸಾಧ್ಯತೆಗಳನ್ನು ಹುಡುಕುವುದು ಸುಲಭದ ಕೆಲಸವೇನೂ ಅಲ್ಲ. ಸಾಹಿತ್ಯ ಓದಿನ ಮೂಲಕವೆ ಇದಕ್ಕೆ ಹಲವು ದಾರಿಗಳನ್ನು ಕಂಡುಕೊಳ್ಳಬಹುದು. ೧೯೪೭, ಆಗಸ್ಟ್ ೧೫ ಅಂದ ತಕ್ಷಣ ‘ಸ್ವಾತಂತ್ರ್ಯ ದಿನಾಚರಣೆ’ ಎಂಬುದು ನೆನಪಿಗೆ ಬರುತ್ತದೆ; ಅಥವಾ ನೆನಪಿಗೆ ಬರುವಂತೆ ಮಾಡಲಾಗಿದೆ. ಆದರೆ ಭಾರತದ ಎಲ್ಲಾ ಪ್ರಜೆಗಳಿಗೂ ಇದು ನೆನಪಿಗೆ ಬರುವುದಿಲ್ಲ ಎಂಬುದನ್ನೂ ಇದರ ಜೊತೆಗೇ ಗಮನಿಸಬೇಕು. ‘ಯಾರಿಗೆ ಬಂತು ಎಲ್ಲಿಗೆ ಬಂತು ೪೭ರ ಸ್ವಾತಂತ್ರ್ಯ?’ ಎಂಬ ಕವನದ ಸಾಲು ಆಗಸ್ಟ್ ೧೫ರ ಬಗೆಗಿನ ಪ್ರಭುತ್ವದ ಕುರುಡು ನಂಬಿಕೆಯನ್ನು ಪ್ರಶ್ನಿಸಿ, ಅದನ್ನು ತಲೆಕೆಳಗು ಮಾಡಿದೆ. ಇದು ಒಂದು ಉದಾಹರಣೆ ಅಷ್ಟೆ. ಪಿ. ಲಂಕೇಶ್ ಅವರ ‘ಸಂಕ್ರಾಂತಿ’ ನಾಟಕವು ವಚನ ಚಳುವಳಿಯ ಬಗೆಗಿನ ಅಂಧಾಭಿ ಮಾನದ ಕುರುಡು ನಂಬಿಕೆಗಳನ್ನು ಹಾಗೂ ತೀರ್ಮಾನಗಳನ್ನು ಪ್ರಶ್ನಿಸಿದೆ ಮತ್ತು ಅವನ್ನು ತಲೆಕೆಳಗು ಮಾಡಿದೆ. ಎರಿಕ್ ಫ್ರಾಮನ ‘ಪ್ರೀತಿಸುವುದೆಂದರೆ…’ (ಅನುವಾದ ಕೆ.ವಿ. ನಾರಾಯಣ ಮತ್ತು ಎಚ್.ಎಸ್. ರಾಘವೇಂದ್ರರಾವ್) ಕೃತಿಯು ಪ್ರೀತಿ ಎಂಬುದರ ಬಗೆಗಿನ ಭ್ರಮಾತ್ಮಕ ನಂಬಿಕೆಗಳನ್ನು ತಲೆಕೆಳಗು ಮಾಡಿದೆ. ಇಂತಹ ಹಲವು ಉದಾಹರಣೆಗಳನ್ನು ಕೊಡಬಹುದು. ಅಂದರೆ ‘ಸಮಾಜ ಹೀಗಿದೆ, ಅದು ಹೀಗಿದೆ, ಇದು ಹೀಗಿದೆ’ ಎಂಬ ಸ್ಥಿರೀಕೃತ ವೈಚಾರಿಕ ನಂಬಿಕೆಗಳನ್ನು ಸಾಹಿತ್ಯ ಕೃತಿಗಳು ಅನುಮಾನಿಸುತ್ತವೆ, ಅಲ್ಲಾಡಿಸುತ್ತವೆ. ಸ್ಥಾಪಿತ ಸಾಮಾಜಿಕ ಗ್ರಹಿಕೆಯ ಆಚೆಗಿರುವ ಸಾಧ್ಯತೆಗಳನ್ನು ಸಾಹಿತ್ಯ ನಿರೂಪಿಸುತ್ತದೆ. ಇದು ಎಲ್ಲಾ ಸಾಹಿತ್ಯದಲ್ಲಿಯೂ ಮೂರ್ತವಾಗಿ ಮತ್ತು ನೇರವಾಗಿ ಪ್ರಕಟವಾಗುತ್ತದೆ ಎಂದು ಸರಳೀಕರಿಸುವಂತಿಲ್ಲ. ವಿಚಾರ, ವಿಮರ್ಶೆ ಮುಂತಾದ ಬರವಣಿಗೆಯಲ್ಲಿ ಎಂದು ಸರಳೀಕರಿಸುವಂತಿಲ್ಲ. ವಿಚಾರ, ವಿಮರ್ಶೆ ಮುಂತಾದ ಬರವಣಿಗೆಯಲ್ಲಿ ಅದು ನೇರವಾಗಿರಬಹುದು. ಆದರೆ ಸಾಹಿತ್ಯದ ಉಳಿದ ಪ್ರಕಾರಗಳಲ್ಲಿ ಅದು ಅಷ್ಟು ನೇರವಾಗಿ ಇರುವುದಿಲ್ಲ. ಆಗ ಸಾಹಿತ್ಯವು ಸಮಾಜವನ್ನು ಗ್ರಹಿಸುವ ಮತ್ತು ನಿರೂಪಿಸುವ ಹೊಸ ಸಾಧ್ಯತೆಗಳ ಸ್ವರೂಪವನ್ನು ಓದುಗರು ಕಂಡುಕೊಳ್ಳಬೇಕಾಗುತ್ತದೆ.

ಸಾಹಿತ್ಯವು ಸಮಾಜವನ್ನು ಭಿನ್ನವಾಗಿ (ನಮಗೆ ಗೊತ್ತಿದೆ ಎಂದು ತಿಳಿಯಲಾಗಿರುವ ವಸ್ತುಸ್ಥಿತಿಗಿಂತ ಭಿನ್ನವಾಗಿ) ಗ್ರಹಿಸಿ, ನಿರೂಪಿಸುತ್ತದೆ ಎಂಬ ಅದರ ಸ್ವಭಾವವನ್ನು ಪರಿಗಣಿಸಬೇಕು. ಹೀಗೆ ಪರಿಗಣಿಸಲು ಎಲ್ಲ ಸ್ಥಾಪಿತ ಮತ್ತು ಒಪ್ಪಿತ ವೈಚಾರಿಕ ಅರ್ಥವಿವರಣೆಗಳಿಂದ ಮತ್ತು ಈಗಾಗಲೆ ಮಾಡಿರುವ ತೀರ್ಮಾನಗಳಿಂದ ಹೊರಬರಬೇಕಾಗುತ್ತದೆ. ಹೀಗೆ ಹೊರಬರಲು ಅವುಗಳ ಮಿತಿಗಳನ್ನು ಗಮನಿಸಿ ಗುರುತಿಸಬೇಕಾಗುತ್ತದೆ. ಅವುಗಳ ಮಿತಿಗಳನ್ನು ಗುರುತಿಸಲು ಬದಲಿ ಅರ್ಥ ವಿವರಣೆಗಳು, ಬದಲಿ ದೃಷ್ಟಿಕೋನಗಳು ಬೇಕಾಗುತ್ತವೆ. ಹಾಗೆ  ನೋಡಿದರೆ ಎಲ್ಲ ಓದುಗಳೂ ಈ ಕೆಲಸವನ್ನು ಮಾಡುತ್ತಿರುತ್ತವೆ. ಹಾಗೆ ಮಾಡುತ್ತಿವೆ ಎಂಬುದನ್ನು ಗುರುತಿಸಬೇಕಾಗಿದೆ. ಒಂದು ಸಾಹಿತ್ಯ ಕೃತಿಯಲ್ಲಿ, ಒಂದು ಸಾಹಿತ್ಯ ಪಂಥದಲ್ಲಿ ಒಂದೇ ಆಶಯ, ಒಂದೇ ವೈಚಾರಿಕ ಧೋರಣೆ ಇದೆ ಎಂಬಂತೆ ಅವುಗಳ ಬಗೆಗೆ ಸ್ಥಾಪಿತ ತೀರ್ಮಾನಗಳನ್ನು ಮಾಡಲಾಗಿದೆ. ‘ಯಶೋಧರ ಚರಿತೆ’ ಎಂದ ತಕ್ಷಣ ಅದರಲ್ಲಿ ‘ಕಾಮ ಕೇಂದ್ರಿತ’ ಆಶಯವಿದೆ ಎಂದು ತೀರ್ಮಾನಿಸುವುದು, ವಚನಗಳು ಎಂದಾಕ್ಷಣ ಅವುಗಳಲ್ಲಿ ‘ಸಮಾನತೆಯ ನೈತಿಕ ಮೌಲ್ಯಗಳನ್ನು’ ಹುಡುಕುವುದು ಮುಂತಾದವು ಇದಕ್ಕೆ ಕೆಲವು ಉದಾಹರಣೆಗಳು. ಆದರೆ ಒಂದು ಕೃತಿಯಲ್ಲಿ ಹಲವು ಆಶಯಗಳು ಇರಬಹುದು. ಒಂದು ಸಾಹಿತ್ಯ ಪಂಥದಲ್ಲಿ ಹಲವು ಸಾಹಿತ್ಯಕ ಧೋರಣೆಗಳು ಇರಬಹುದು. ಅವನ್ನು ಕಂಡುಕೊಳ್ಳಲು ಆಸಕ್ತಿ ವಹಿಸಬೇಕಾಗುತ್ತದೆ.

ಒಬ್ಬರು ಲೇಖಕರಲ್ಲಿ ‘ಒಂದೇ ಬಗೆಯ ಆಲೋಚನೆಗಳು ಇವೆ’ ಎಂದು ಗ್ರಹಿಸಿರುವ ರೂಢಿ ಇದೆ. ಆದರೆ ಒಬ್ಬರು ಬರಹಗಾರರಲ್ಲಿ ಆಲೋಚನೆಗಳ ಅಥವಾ ಸೃಜನಶೀಲತೆಯ ಬೆಳವಣಿಗೆ ನಡೆದಿರುತ್ತದೆ. ಹಾಗಾಗಿಯೇ ಒಬ್ಬರು ಲೇಖಕರು ತಮ್ಮ ಅಭಿವ್ಯಕ್ತಿಗೆ ಹಲವು ಪ್ರಕಾರಗಳನ್ನು ಆರಿಸಿಕೊಳ್ಳುತ್ತಾರೆ. ಒಂದೇ ಪ್ರಕಾರದಲ್ಲಿ ಹಲವು ಬದಲಾವಣೆಗಳನ್ನು ಮಾಡುತ್ತಾರೆ. ಸಾಮಾಜಿಕ, ಸಾಂಸ್ಕೃತಿಕ ವಸ್ತುಸ್ಥಿತಿಗಳು ಬದಲಾಗುತ್ತ ಹೋದಂತೆ ಅವನ್ನು ಗ್ರಹಿಸುವ ಮತ್ತು ಅಭಿವ್ಯಕ್ತಿಸುವ ಕ್ರಮಗಳು ಬದಲಾಗುತ್ತ ಹೋಗುತ್ತವೆ. ಆ ಮೂಲಕ ಸಾಹಿತ್ಯದ ಸೃಜನಶೀಲತೆಯ ಒಳಗೆ ಹಲವು ಬದಲಾವಣೆಗಳು ನಡೆಯುತ್ತವೆ. ಈ ಸೂಕ್ಷ್ಮಗಳನ್ನು ಪರಿಶೀಲಿಸದೆ ‘ಇಂತಹ ಬರಹಗಾರರ ವಿಚಾರ ಇಷ್ಟು’ ಎಂದು ಯಾಂತ್ರಿಕವಾಗಿ ಸರಳೀಕರಿಸಲು ಬರುವುದಿಲ್ಲ.

ಸೃಜನಶೀಲತೆಯ ಭಿನ್ನ ನೆಲೆಗಳು ಮತ್ತು ಆ ಮೂಲಕ ಸೃಷ್ಟಿಯಾಗುವ ಆಲೋಚನ ವಿಧಾನಗಳು ಸಾಹಿತ್ಯದಲ್ಲಿ ಎಲ್ಲ ಓದುಗರಿಗೂ ಒಂದೇ ರೀತಿಯಲ್ಲಿ ಕಾಣಬೇಕಿಲ್ಲ; ಕಾಣುವುದೂ ಇಲ್ಲ. ಪ್ರತಿಯೊಬ್ಬ ಓದುಗರೂ ತಮ್ಮ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧೋರಣೆಗಳ ಹಿನ್ನೆಲೆಗಳಲ್ಲಿ ಓದುತ್ತಾರೆ. ಬೇರೆಬೇರೆ ಉದ್ದೇಶಗಳಿಗಾಗಿ ಓದುತ್ತಾರೆ. ಬೇರೆ ಬೇರೆ ಸಂದರ್ಭಗಳಲ್ಲಿ ಓದುತ್ತಾರೆ. ಓದುವ ಧೋರಣೆ, ಸಂದರ್ಭ ಮತ್ತು ಉದ್ದೇಶ ಬದಲಾದಂತೆ ಅದರಿಂದ ನಿಷ್ಪನ್ನಗೊಳ್ಳುವ ಹೊಳಹುಗಳೂ ಬದಲಾಗುತ್ತವೆ. ಸಾಹಿತ್ಯ ಓದಿನ ಸ್ಥಿರೀಕೃತ ನಿಲುವುಗಳನ್ನು, ತೀರ್ಮಾನಗಳನ್ನು ಸಂಶೋಧನೆಯ ಓದು ಏಕಮುಖವಾಗಿ ಒಪ್ಪಿಕೊಳ್ಳಬೇಕಾಗಿಲ್ಲ. ಸಾಹಿತ್ಯ ಕೃತಿಯೊಂದನ್ನು ಈಗಾಗಲೆ ಓದಲಾಗಿರುವ ಹಳೆಯ ಜಾಡಿನಲ್ಲೆ ಓದಬೇಕಾಗಿಯೂ ಇಲ್ಲ. ಈ ಹಿನ್ನೆಲೆಯಲ್ಲಿ ಸಂಶೋಧನೆಯ ಸಾಹಿತ್ಯಕ ಓದು ಎಂಬುದು ಎಲ್ಲ ಸ್ಥಾಪಿತ ಓದುಗಳನ್ನು ಮತ್ತು ಅವುಗಳ ನಿಲುವುಗಳನ್ನು ಬದಿಗೆ ಸರಿಸಿ, ತನ್ನದೇ ಆದ ಹೊಸ ದಾರಿಗಳನ್ನು ಕಂಡು ಕೊಳ್ಳುವುದೇ ಆಗಿದೆ. ಈ ದೃಷ್ಟಿಯಿಂದ ಈಗಾಗಲೆ ಸ್ಥಾಪಿತವಾಗಿರುವ ಓದಿನ ವಿಧಾನಗಳಿಗೆ, ನಿಲುವುಗಳಿಗೆ ಭಿನ್ನಮತವನ್ನು ಹೂಡಬೇಕಾಗಿದೆ. ಭಿನ್ನಮತವನ್ನು ಹೂಡದ ಹೊರತು ಹೊಸ ದಾರಿ ಕಾಣುವುದಿಲ್ಲ.

ಈ ಬಗೆಯ ಓದಿನ ಕ್ರಮವನ್ನು ಇನ್ನಷ್ಟು ಚರ್ಚಿಸುವ ಅಗತ್ಯವಿದೆ. ಒಂದು ಕೃತಿ, ಒಬ್ಬರು ಬರಹಗಾರರು ಮತ್ತು ಒಂದು ‘ಸಾಹಿತ್ಯ ಪಂಥ’ ಇವುಗಳ ಬಗ್ಗೆ ಸ್ಥಾಪಿತವಾಗಿರುವ ನಿಲುವುಗಳಿಗೆ ಭಿನ್ನಮತವನ್ನು ಹೂಡಬೇಕು. ಕೇವಲ ಉದ್ದೇಶಪೂರ್ವಕವಾಗಿ ಭಿನ್ನಮತವನ್ನು ಹೂಡಬೇಕಾಗಿಲ್ಲ. ಪಠ್ಯವನ್ನು ಭಿನ್ನವಾಗಿ ಓದಿ, ಆ ಮೂಲಕ ಸ್ಥಾಪಿತ ಹೇಳಿಕೆಗಳಿಗೆ ಭಿನ್ನಮತ ಹೂಡಬೇಕಾಗಿದೆ. ಈ ಬಗೆಯ ಓದು ಒಂದು ಬಗೆಯಲ್ಲಿ ವೈಚಾರಿಕ ಸಂಘರ್ಷದಿಂದ ಕೂಡಿರುತ್ತದೆ. ಕನ್ನಡ ಸಾಹಿತ್ಯ ವಿಮರ್ಶೆಯಲ್ಲಿ ಇದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ‘ಗೋವಿನ ಹಾಡಿ’ನ ಬಗ್ಗೆ, ‘ಉಳ್ಳವರು ಶಿವಾಲಯವ ಮಾಡುವರು’ ಎಂಬ ವಚನದ ಬಗ್ಗೆ, ‘ನೆತ್ತಮನಾಡಿ ಭಾನುಮತಿ ಸೋಲ್ತೊಡೆ’ ಎಂಬ ಪದ್ಯಭಾಗದ ಬಗ್ಗೆ, ‘ಯಶೋಧರ ಚರಿತೆ’ಯ ಬಗ್ಗೆ, ‘ಕುಸುಮಬಾಲೆ’ಯ ಬಗ್ಗೆ ಹೀಗೆ ಈ ಪಟ್ಟಿ ಇನ್ನೂ ಬೆಳೆಯುತ್ತದೆ. ಇಂತಹ ಕೃತಿಗಳ ಬಗ್ಗೆ ನಡೆದಿರುವ ವಿಮರ್ಶೆಗಳು ಸಾಕಷ್ಟು ವೈಚಾರಿಕ ಸಂಘರ್ಷವನ್ನು ಹುಟ್ಟುಹಾಕಿವೆ. ಈ ಬಗೆಯ ವೈಚಾರಿಕ ಸಂಘರ್ಷಮಯ ವಿಭಿನ್ನ ಧೋರಣೆಗಳ ಸಾಹಿತ್ಯದ ಓದೇ ಸಾಹಿತ್ಯ ಅಧ್ಯಯನವನ್ನು ಕ್ರಿಯಾಶೀಲವಾಗಿ, ಜೀವಂತವಾಗಿ ಮತ್ತು ಸೃಜನಶೀಲವಾಗಿ ಮುಂದುವರಿಸಿದೆ. ಇದು ಸಾಹಿತ್ಯವನ್ನು ಓದುವ ಹಲವು ದಾರಿಗಳನ್ನು, ವಿಭಿನ್ನ ಸಾಧ್ಯತೆಗಳನ್ನು ರೂಪಿಸಿದೆ; ರೂಪಿಸುತ್ತದೆ.

‘ಒಂದು ಸಾಹಿತ್ಯ ಕೃತಿ, ಒಬ್ಬರು ಬರಹಗಾರರು ಮತ್ತು ಒಂದು ಸಾಹಿತ್ಯ ಪಂಥ ಇವುಗಳಲ್ಲಿ ಒಂದು ಧೋರಣೆ, ಒಂದು ಮೌಲ್ಯ ಇರುತ್ತದೆ’ ಎಂಬ ಹೇಳಿಕೆಯನ್ನು ಮರುವಿಮರ್ಶಿಸಬೇಕು. ಇದು ವೈಚಾರಿಕ ಕೇಂದ್ರೀಕರಣವನ್ನು ಸೂಚಿಸುತ್ತಿದೆ. ಈ ಓದು ಸಾಹಿತ್ಯ ಕೃತಿಗೆ ಒಂದೇ ವೈಚಾರಿಕ ಕೇಂದ್ರ, ಒಂದೇ ವೈಚಾರಿಕ ಧೋರಣೆ ಇರುತ್ತದೆ ಎಂಬುದನ್ನು ನಂಬುತ್ತದೆ. ಸಾಹಿತ್ಯ ಕೃತಿಯಲ್ಲಿ ಪ್ರಧಾನ ಧೋರಣೆಯೊಂದಿದ್ದು, ಅದು ಆ ಕೃತಿಯ ಯಜಮಾನಿಕೆಯ ಧೋರಣೆಯಾಗಿರುತ್ತದೆ ಎಂದೂ ಹೇಳಲಾಗುತ್ತದೆ. ಈ ಯಜಮಾನಿಕೆಯ ಧೋರಣೆಯ ಸ್ವರೂಪವನ್ನು ಸಾಹಿತ್ಯ ಕೃತಿಯಲ್ಲಿ ಹುಡುಕುವುದೇ ಸಾಹಿತ್ಯ ವಿಮರ್ಶೆಯ ಕೆಲಸ ಎಂದೂ ಹೇಳಲಾಗುತ್ತದೆ. ಈ ಚರ್ಚೆಯಲ್ಲಿ ಸಾಹಿತ್ಯ ಕೃತಿ ಎಂಬುದನ್ನು ಸಮಾಜ, ರಾಜಕೀಯ, ಆರ್ಥಿಕ, ಮಾರುಕಟ್ಟೆ ಎಂದು ಭಾಷಾಂತರಿಸಿ ಕೊಳ್ಳುವ ಅಗತ್ಯವಿದೆ. ಆಗ ಈ ಚರ್ಚೆಯ ರಾಜಕೀಯ ಸ್ವರೂಪ ಸ್ಪಷ್ಟವಾಗುತ್ತದೆ. ಅದಕ್ಕೆ ಮೇಲಿನ ಹೇಳಿಕೆಯನ್ನು ಸೂಚಿತ ವ್ಯವಸ್ಥೆಗಳಿಗೆ ಅನ್ವಯಿಸುತ್ತ ಹೋಗಬೇಕು. ಸಮಾಜ, ರಾಜಕೀಯ, ಆರ್ಥಿಕ, ಮಾರುಕಟ್ಟೆ ಇವುಗಳಲ್ಲಿ ಒಂದು ಧೋರಣೆ ಮತ್ತು ಒಂದು ಮೌಲ್ಯ ಇದೆ ಎಂದು ಹೇಳಿದಂತೆ ಆಯಿತು. ಹಾಗಿದ್ದರೆ ಇದನ್ನು ಒಪ್ಪಬಹುದೆ? ಸಮಾಜದಲ್ಲಿ ಒಂದು ಧೋರಣೆ, ಒಂದು ಮೌಲ್ಯ ಇದೆ ಎನ್ನುವುದಾದರೆ ಅದು ಶೋಷಕ ಜಾತಿಗಳದ್ದೊ, ಶೋಷಿತ ಜಾತಿಗಳದ್ದೊ? ರಾಜಕೀಯದಲ್ಲಿ ಒಂದು ಧೋರಣೆ, ಒಂದು ಮೌಲ್ಯ ಇದೆ ಎನ್ನುವುದಾದರೆ ಅದು ಪ್ರಭುತ್ವದ್ದೊ, ಜನತೆಯದೊ? ಆರ್ಥಿಕ ವಲಯದಲ್ಲಿ ಒಂದು ಧೋರಣೆ, ಒಂದು ಮೌಲ್ಯ ಇದೆ ಎನ್ನುವುದಾದರೆ ಅದು ಮಾಲೀಕರದ್ದೊ, ಕಾರ್ಮಿಕರದ್ದೊ? ಮಾರುಕಟ್ಟೆಯಲ್ಲಿ ಒಂದು ಧೋರಣೆ, ಒಂದು ಮೌಲ್ಯ ಇದೆ ಎನ್ನುವುದಾದರೆ ಅದು ಬಂಡವಾಳಗಾರದ್ದೊ, ಗ್ರಾಹಕರದ್ದೊ? ಪ್ರತಿಯೊಂದು ವ್ಯವಸ್ಥೆಗೂ ಒಂದೇ ಆಯಾಮ, ಒಂದೇ ಮುಖ ಇರುವುದಿಲ್ಲ. ಆದರೆ ಒಂದೇ ಧೋರಣೆ ಇದೆ ಎಂದು ಗುರುತಿಸಲಾಗಿದೆ. ಪ್ರತಿಯೊಂದು ವ್ಯವಸ್ಥೆಯಲ್ಲೂ ಒಂದಕ್ಕಿಂತ ಹೆಚ್ಚು ಆಯಾಮಗಳು, ಒಂದಕ್ಕಿಂತ ಹೆಚ್ಚು ಧೋರಣೆಗಳು, ಹಿತಾಸಕ್ತಿಗಳು, ಮೌಲ್ಯಗಳು ಇರುತ್ತವೆ. ಈ ವಿಭಿನ್ನ ಧೋರಣೆ, ಹಿತಾಸಕ್ತಿ, ಮೌಲ್ಯಗಳು ತಮ್ಮೊಳಗೆ ಬೇರೆಬೇರೆ ಸಂಬಂಧಗಳನ್ನು ಹೊಂದಿರುತ್ತವೆ. ಇವುಗಳ ನಡುವೆ ಸಹಮತ, ಭಿನ್ನಮತ ಮತ್ತು ಸಂಘರ್ಷಗಳು ಸದಾ ನಡೆಯುತ್ತಲೆ ಇರುತ್ತವೆ. ಈ ಕಾರಣದಂದ ಅವು ನಿರಂತರವಾಗಿ ಚಲನಶೀಲವಾಗಿರುತ್ತವೆ. ಸಮಾಜ, ರಾಜಕೀಯ ಮುಂತಾದ ವಲಯಗಳಲ್ಲಿ ಇದನ್ನು ನಿತ್ಯ ಕಾಣುತ್ತೇವೆ. ಅಂದರೆ ಅವುಗಳಲ್ಲಿ ಒಂದು ಧೋರಣೆ, ಒಂದು ಮೌಲ್ಯ ಇಲ್ಲ.  ಮತ್ತು ಅವು ನಿರಂತರವಾಗಿ ಚಲನಶೀಲವಾಗಿರುತ್ತವೆ ಎಂದಾಯಿತು. ಈಗ ಈ ವಲಯಗಳ ಚಲನಶೀಲ ಸ್ವರೂಪವನ್ನು ಸಾಹಿತ್ಯಕ್ಕೆ ಮತ್ತು ಸಾಹಿತ್ಯ ಕೃತಿಗೆ ಭಾಷಾಂತರಿಸಿಕೊಳ್ಳೋಣ. ಸಾಹಿತ್ಯ ಹಾಗೂ ಸಾಹಿತ್ಯ ಕೃತಿಯಲ್ಲಿಯೂ ಕೂಡ ಒಂದು ಧೋರಣೆ, ಒಂದು ಮೌಲ್ಯ ಎಂಬುವು ಇರುವುದಿಲ್ಲ. ಅವುಗಳಲ್ಲಿ ಹಲವು ಧೋರಣೆಗಳು, ಹಲವು ಮೌಲ್ಯಗಳಿದ್ದು, ಅವುಗಳ ನಡುವೆ ಸಹಮತ, ಭಿನ್ನಮತ ಮತ್ತು ಸಂಘರ್ಷಗಳು ನಡೆಯುತ್ತಲೆ ಇರುತ್ತವೆ. ಈ ದೃಷ್ಟಿಯಿಂದ ಅವು ಚಲನಶೀಲವಾಗಿರುತ್ತವೆ. ಅವು ಚಲನಶೀಲವಾಗಿರುವುದರಿಂದಲೆ ಒಂದೊಂದು ಕಾಲದ ಮತ್ತು ಒಂದೊಂದು ಧೋರಣೆಯ ಓದುಗರಿಗೆ ಒಂದೊಂದು ಬಗೆಯಲ್ಲಿ ಕಾಣುತ್ತವೆ. ಹೀಗೆ ಒಬ್ಬೊಬ್ಬ ಓದುಗರಿಗೆ ಒಂದೊಂದು ಬಗೆಯಲ್ಲಿ ಕಾಣುವುದರಿಂದಲೆ ಅವು ತಮ್ಮ ಚಲನಶೀಲತೆಯನ್ನು ಮುಂದುವರಿಸುತ್ತವೆ. ಆದರೆ ಒಂದು ಸಾಹಿತ್ಯದಲ್ಲಿ ಮತ್ತು ಒಂದು ವ್ಯವಸ್ಥೆಯಲ್ಲಿ ಒಂದೇ ಧೋರಣೆ ಇರುತ್ತದೆ ಎಂದು ಗುರುತಿಸುವುದು ಯಾಂತ್ರಿಕ ವಿಧಾನವಾಗುತ್ತದೆ. ಅದು ಶೋಷಕ ದೃಷ್ಟಿಕೋನಕ್ಕೆ ಸಮೀಪದ್ದಾಗುತ್ತದೆ. ಈ ದೃಷ್ಟಿ ಕೋನದಿಂದಲೇ ಸಿ. ವೀರಣ್ಣ ಅವರು ತಮ್ಮ ‘ಕನ್ನಡ ಸಾಹಿತ್ಯ : ಚಾರಿತ್ರಿಕ ಬೆಳವಣಿಗೆ’ ಕೃತಿಯಲ್ಲಿ, ಆರಂಭ ಕಾಲದ ಕನ್ನಡ ಸಾಹಿತ್ಯವನ್ನು ಕುರಿತು, ‘ಪ್ರಾಚೀನ ಸಾಹಿತ್ಯ : ರಾಜಸತ್ತೆಯ ವೈಭವದ ಕಾಲ’ ಎಂದು ಸರಳೀಕರಿಸುವಂತೆ ಆಯಿತು. ಅದನ್ನು ಮಾರ್ಕ್ಸ್‌ವಾದಿ ಅಧ್ಯಯನ ಎಂದು ತಪ್ಪಾಗಿ ಹೆಸರಿಸುವಂತೆಯೂ ಆಯಿತು.

ಸಾಹಿತ್ಯ ಸಂಶೋಧನೆಯಲ್ಲಿ ಭಿನ್ನಮತಗಳ ನಿರ್ಮಾಣ ಎಂಬುದು ಸಾಮಾಜಿಕ, ರಾಜಕೀಯ ಮುಂತಾದ ವ್ಯವಸ್ಥೆಗಳು ನಿರಂತರವಾಗಿ ಚಲನಶೀಲವಾಗಿರುತ್ತವೆ ಎಂಬ ಪ್ರಾಥಮಿಕ ಮತ್ತು ಮೂಲಭೂತ ಗ್ರಹಿಕೆಯಿಂದ ಶುರುವಾಗುತ್ತದೆ. ಪ್ರತಿಯೊಂದು ವ್ಯವಸ್ಥೆ, ಘಟಕ, ಸಂಸ್ಥೆ, ಕುಟುಂಬ ಮುಂತಾದುವು ತಮ್ಮೊಳಗೆ ಅನೇಕ ಭಿನ್ನಮತಗಳನ್ನು ಹೊಂದಿರುತ್ತವೆ. ಆ ಭಿನ್ನಮತಗಳು ಸಂದರ್ಭಗಳಿಗೆ ಅನುಗುಣವಾಗಿ ಕ್ರಿಯಾಶೀಲವಾಗುತ್ತವೆ. ಆಗ ಅವುಗಳೊಳಗಿನ ವೈರುಧ್ಯಗಳು ಕಾಣಲು ಶುರುವಾಗುತ್ತವೆ. ಇದು ಒಂದು ಬಗೆ. ಇನ್ನು ಪ್ರತಿಯೊಂದು ವ್ಯವಸ್ಥೆ, ಘಟಕ, ಸಂಸ್ಥೆ, ಕುಟುಂಬ ಮುಂತಾದುವು ತಮ್ಮೊಳಗಿನ ಆಂತರಿಕ ವೈರುಧ್ಯಗಳಿಂದ ಚಲನಶೀಲವಾಗುವುದರ ಜೊತೆಗೆ ಹೊರಗಿನದರ ಸಂಪರ್ಕ ಮತ್ತು ಪ್ರಭಾವದ ಮತ್ತೊಂದು ರೀತಿಯ ವೈರುಧ್ಯಗಳನ್ನು ಎದುರಿಸುತ್ತವೆ. ಇದು ಎರಡನೆ ಬಗೆ. ಇದೇ ಮಾತನ್ನು ಬೇರೆ ವಲಯಗಳಿಗೆ ಭಾಷಾಂತರಿಸಿಕೊಳ್ಳಬೇಕು. ಸಿದ್ಧಾಂತ, ಧೋರಣೆ, ತಾತ್ವಿಕತೆ, ಆಲೋಚನೆ, ಚಿಂತನೆ, ಗ್ರಹಿಕೆ, ನಿರೂಪಣೆ, ಅಭಿವ್ಯಕ್ತಿ ಅವಗಾಹನೆ, ಮೌಲ್ಯಮಾಪನ ಮುಂತಾದುವು ನಿರಂತರವಾಗಿ ಚಲನಶೀಲವಾಗಿರುತ್ತವೆ. ಇವು ಹೊರಗಿನ ಪ್ರಭಾವ ಮತ್ತು ಒಳಗಿನ ಒತ್ತಡಗಳಿಂದ ತಮ್ಮನ್ನು ತಾವು ಬದಲಿಸಿಕೊಳ್ಳುತ್ತ ಸಾಗುತ್ತವೆ. ಸಮಾಜ, ಸಂಸ್ಕೃತಿ, ಸಾಹಿತ್ಯ ಮುಂತಾದುವನ್ನು ಅರಿಯುವ ಗ್ರಹಿಕೆಗಳನ್ನು ಬದಲಿಸುತ್ತ ಸಾಗುತ್ತವೆ.  ಸಾಹಿತ್ಯವೂ ಕೂಡ ತನ್ನ ವಸ್ತು, ಆಶಯ, ನಿರೂಪಣೆ ಮತ್ತು ಅಭಿವ್ಯಕ್ತಿಗಳಲ್ಲಿ ಇದೇ ನಿರಂತರ ಬದಲಾವಣೆ ಮಾಡಿಕೊಂಡೇ ಬಂದಿದೆ. ಆ ಮೂಲಕ ಪರೋಕ್ಷವಾಗಿ ತನ್ನನ್ನು ಅರಿಯುವ ಮತ್ತು ಗ್ರಹಿಸುವ ಹೊಸ ದಾರಿಗಳನ್ನು ಕಂಡುಕೊಳ್ಳಲು ನಿವೇದಿಸುತ್ತಲೆ ಬಂದಿದೆ. ಸಾಹಿತ್ಯ ಗ್ರಹಿಕೆಯಲ್ಲಿ ಮುಖ್ಯವಾಗಿ ಎರಡು ಆಯಾಮಗಳಿವೆ. ಸಾಹಿತ್ಯವನ್ನು ಅರಿಯುವುದು, ವಿಶ್ಲೇಷಿಸಿ ವ್ಯಾಖ್ಯಾನಿಸುವುದು ಮತ್ತು ಅದನ್ನು ಮೌಲ್ಯಮಾಪನ ಮಾಡುವುದು. ಇವೆರಡೂ ಗೆರೆ ಕೊರೆದಂತೆ ಪ್ರತ್ಯೇಕವಲ್ಲ. ಆದರೆ ಅವುಗಳ ನಡುವಿನ ತೆಳು ಗೆರೆಯನ್ನು ಗುರುತಿಸಬಹುದು. ಮೌಲ್ಯಮಾಪನವೇ ಮುಖ್ಯವಾದರೆ ಅರಿಯುವಿಕೆ ಕುಗ್ಗುತ್ತದೆ; ಅರಿಯುವಿಕೆ ಮುಖ್ಯವಾದರೆ ಅದರಿಂದ ಮೌಲ್ಯಮಾಪನ ಹುಟ್ಟುತ್ತದೆ. ಮೌಲ್ಯಮಾಪನಕ್ಕೆ ಸಿದ್ಧಮಾನ ದಂಡಗಳು ಇರಬಹುದು; ಸಿಗಬಹುದು. ಆದರೆ ಅರಿಯುವಿಕೆಯು ಕಂಡುಕೊಳ್ಳಬೇಕಾದ ದಾರಿ; ಅದು ಹೊಸ ನಿರ್ಮಾಣದ ಕೆಲಸ. ಅಲ್ಲಮನ ವಚನದ ಸಾಲನ್ನು ಪ್ರಯೋಗಿಸಿ ಹೇಳುವುದಾದರೆ ಇದು ‘ನೋಡುವುದ ನೋಡಲರಿಯುವ’ ಹೊಸ ನೋಟ.

* * *