ಕನ್ನಡ ಲಲಿತ ಸಾಹಿತ್ಯ ಪ್ರಕಾರಗಳಲ್ಲಿ ಕೈಯಾಡಿಸಿದ ಆನಂದಕಂದರು ಸಂಶೋಧನೆ ವಿಮರ್ಶೆ, ಸಮೀಕ್ಷೆ ಮೊದಲಾದ ಕ್ಷೇತ್ರಗಳಲ್ಲಿಯೂ ದೃಷ್ಟಿ ಹರಿಸಿದ್ದಾರೆ. ‘ಕರ್ನಾಟಕ ಜನಜೀವನ’ (೧೯೩೯), ‘ಸಾಹಿತ್ಯವು ಸಾಗಿರುವ ದಾರಿ’(೧೯೬೧), ‘ನಮ್ಮ ಸಂಸ್ಕೃತಿ ಪರಂಪರೆ’ (೧೯೬೬), ‘ಸಾಹಿತ್ಯ ವಿಹಾರ’(೧೯೮೧) ಈ ಕೃತಿಗಳು ಆನಂದಕಂದರ ಸಂಶೋಧನೆ, ವಿಮರ್ಶೆ, ಸಮೀಕ್ಷೆ ಹಾಗೂ ಸಂಸ್ಕೃತಿಯ ಪರಿಚಯಕ್ಕೆ ಸಾಕ್ಷಿಯಾಗಿವೆ.

ಹಳಗನ್ನಡ ಕಾವ್ಯಗಳಲ್ಲಿ ಒಡಮೂಡಿ ಬಂದ ಕನ್ನಡ ಜನಜೀವನದ ವಿಶೇಷತೆಗಳನ್ನು ಆಯ್ದು ಪರಿಚಯಿಸಿದ್ದು ‘ಕರ್ನಾಟಕದ ಜನಜೀವನ’ದ ವೈಶಿಷ್ಟ್ಯ. ಹಿಂದಿನ ಕೋಟೆ-ಕೊತ್ತಲಗಳ ಬಗೆಗಿನ ಸವಿವರ, ಯುದ್ಧದ ಸಿದ್ಧತೆ, ಕನಕದಾಸರು ಕಂಡ ವಿಜಯನಗರ, ಚಾರಣಕವಿ ಗೋವಿಂದ ವೈದ್ಯ ನ ಹಿನ್ನೆಲೆಯಲ್ಲಿ ಅಂದಿನ ಮೈಸೂರಿನ ಪರಿಚಯ, ಇವೆಲ್ಲವುಗಳನ್ನು ಅಚ್ಚುಕಟ್ಟಾಗಿ ಚಿತ್ರಿಸಿದ್ದಾರೆ. ಇದಕ್ಕೆ ಮುಂಬೈ ಸರಕಾರದ ಸಂಶೋಧನ ಬಹುಮಾನ ದೊರೆಯಿತು.

‘ನಮ್ಮ ಸಂಸ್ಕೃತಿ ಪರಂಪರೆ’ಯಲ್ಲಿ ಚೈತ್ರಮಾಸದಿಂದ ಫಾಲ್ಗುಣ ಮಾಸದವರೆಗಿನ ಹನ್ನೆರಡು ತಿಂಗಳುಗಳಲ್ಲಿ ಜರುಗುವ ಕರ್ನಾಟಕದ ಸಂಸ್ಕೃತಿಯ ಹಿನ್ನೆಲೆಯ ವಿವಿಧ ಕಾರ್ಯಚಟುವಟಿಕೆಗಳ, ಹಬ್ಬ ಹರಿದಿನಗಳ, ಜಾನಪದ ಸಂಪ್ರದಾಯಗಳ, ಪೌರಾಣಿಕ ಪರಂಪರೆಯ ಹಿನ್ನೆಲೆಯಲ್ಲಿ ಹನ್ನೆರಡು ಪ್ರಬಂಧಗಳನ್ನು ಬರೆದಿದ್ದಾರೆ. ಆನಂದಕಂದರು ಕರ್ನಾಟಕ ಜನಜೀವನದ ಇಡೀ ವರ್ಷದ ಸಾಂಸ್ಕೃತಿ ಪರಂಪರೆಗಳ ವಿವಿಧ ಮುಖಗಳನ್ನು ಅಭ್ಯಾಸಪೂರ್ಣವಾಗಿ ಮಂಡಿಸಿದ್ದಾರೆ. ಆನಂದಕಂದರ ಆಳವಾದ ಸಂಶೋಧನೆಗೆ ಇದೊಂದು ಆಕರವಾಗಿದೆ.

ಸಾಹಿತ್ಯ ವಿಮರ್ಶೆ, ಸಮೀಕ್ಷೆಗಳನ್ನೊಳಗೊಂಡ ಲೇಖನಗಳ ಸಂಕಲನವು ‘ಸಾಹಿತ್ಯವು ಸಾಗಿರುವ ದಾರಿ’. ನಮ್ಮ ಸಾಹಿತ್ಯವು ಸಾಗಿ ಬಂದಿರುವ ದಾರಿಯನ್ನು ನಿರ್ದೇಶಿಸುತ್ತ, ಸಮತೂಕದ ಸಾಹಿತ್ಯ ವಿಮರ್ಶೆ, ಸಾಹಿತ್ಯದಲ್ಲಿ ಅಶ್ಲೀಲತೆ, ಪ್ರಣಯ ವಿಷಯಗಳಲ್ಲಿರಬೇಕಾದ ಸಮನ್ವಯತೆ, ದಾರಿ ತಪ್ಪುತ್ತಿರುವ ಕಾವ್ಯ, ಕಾದಂಬರಿಗಳ ಪಾತ್ರ ಪರಿಪೋಷಣೆ, ಕನ್ನಡ ಸಣ್ಣ ಕಥೆಗಳ ಸಮೀಕ್ಷೆ, ಜನಪದ ಸಾಹಿತ್ಯದ ಸ್ವರೂಪ ದರ್ಶನ, ಜಾನಪದ ವಿನೋದ, ಜಾನಪದ ಒಗಟುಗಳಲು, ಜನಪದ ಕಥೆಗಳು ಹೀಗೆ ವಿವಿಧ ವಿಷಯಗಳನ್ನು ಕುರಿತು ಮಂಡಿಸಿದ ಪ್ರಬಂಧಗಳು ಆನಂದಕಂದರ ವಿಮರ್ಶಾ ದೃಷ್ಟಿಗೆ ಪಕ್ಕಾಗಿವೆ. ಸಾಹಿತ್ಯಾಭ್ಯಾಸಿಗಳಿಗೆ ಇದೊಂದು ಮಾರ್ಗದರ್ಶಿ ಕೃತಿಯಾಗಿದೆ.

‘ಸಾಹಿತ್ಯ ವಿಹಾರ’ದಲ್ಲಿ ವಿವಿಧ ವಿಷಯಗಳನ್ನು ಕುರಿತಾದ ಪ್ರಬಂಧಗಳಿವೆ. ಹಳಗನ್ನಡ ಕಾವ್ಯಗಳಲ್ಲಿ ಕಾಣಿಸಿದ ಕನ್ನಡಿಗರ ತರತರದ ಊಟ-ತಿಂಡಿ ತಿನಿಸುಗಳು, ನಾಡಿನ ಬಗೆ ಬಗೆಯ ಹೂಗಳು, ಕನ್ನಡದಲ್ಲಿ ರಾಷ್ಟ್ರೀಯ ಸಾಹಿತ್ಯ, ಕುಮಾರವ್ಯಾಸನ ಕಾಲಮಾನ, ಪುರಂದರದಾಸ ಹಾಗೂ ಕನಕದಾಸರ ಕೃತಿಗಳ ತೌಲನಿಕ ಸಮೀಕ್ಷೆ, ಜಗನ್ನಾಥದಾಸರ ವಿಸ್ತೃತ ಪರಿಚಯ, ಗಳಗನಾಥ ಹಾಗೂ ಪಂಡಿತ ಮ.ಪ್ರ. ಪೂಜಾರ ಅವರ ಸಾಹಿತ್ಯಿಕ ಪರಿಚಯ, ಜಾನಪದ ರಂಗಭೂಮಿ, ಜಾನಪದ ಶಿಶುಸಾಹಿತ್ಯ ಮುಂತಾದ ಭಿನ್ನರುಚಿಯ ಮಹತ್ವದ ಲೇಖನಗಳು ಈ ಸಂಕಲನದಲ್ಲಿ ಅಡಕವಾಗಿವೆ.