ಇತ್ತ ಪಾರಿಜಾತಪುರದಲ್ಲಿ ಸಾಹುಕಾರ ಮಂಜಯ್ಯನ ವಿಶಾಲವಾದ ಮಹಡಿಯಲ್ಲಿ ಶ್ರೀಪತಿ, ಗಣೇಶ, ಗಂಗಣ್ಣ, ಮಂಜುನಾಥ ಮತ್ತು ನಾಲ್ಕೈದು ಅಗ್ರಹಾರದ ಯುವಕರು ಗುಲೇಬಕಾವಲಿ ನಾಟಕದ ತಯಾರಿಕೆಯಲ್ಲಿ ತೊಡಗಿದ್ದರು. ಅವರ ನಡುವೆ ಇದ್ದ ಹಾರ್ಮೋನಿಯಂ ನಾರಣಪ್ಪ ತಮ್ಮ ನಾಟಕ ಕಂಪೆನಿಯ ಉಪಯೋಗಕ್ಕೆಂದು ಕೊಟ್ಟಿದ್ದು. ಪ್ರತಿ ನಾಟಕಕ್ಕೂ ಅವನು ಹಾಜರಿರಲೇಬೇಕು. ಅವನ ಪ್ರೋತ್ಸಾಹವಿಲ್ಲದಿದ್ದರೆ ಪಾರಿಜಾತ ಮಂಡಳಿ ಹುಟ್ಟುತ್ತಿರಲೇ ಇರಲಿಲ್ಲ. ಹುರಿದುಂಬಿಸಿದವ ಅವ; ಅಲ್ಲದೆ ಯುವಕರು ಒಟ್ಟುಮಾಡಿದ ದುಡ್ಡಿಗೆ ತನ್ನದಷ್ಟು ಸೇರಿಸಿ ಶಿವಮೊಗ್ಗಯಿಂದ ಸೀನರಿಗಳನ್ನು ತಂದುಕೊಟ್ಟವ ಅವ. ನಾಟಕದ ಗತ್ತು ಇತ್ಯಾದಿಗಳ ಬಗ್ಗೆಯೂ ಸೂಚನೆ ಕೊಡುತ್ತಿದ್ದವನೂ ಅವನೆ… ಆಸುಪಾಸಿನಲ್ಲೆಲ್ಲ ಗ್ರಾಮೊಫೋನ್ ಇದ್ದುದೆಂದರೆ ಅವನ ಹತ್ತಿರ. ಹಿರಣ್ಣಯ್ಯನ ಕಂಪನಿಯ ನಾಟಕ ಹಾಡುಗಳ ಪ್ಲೇಟುಗಳೆಲ್ಲ ಅವನ ಹತ್ತಿರವಿದ್ದವು. ಅದನ್ನೆಲ್ಲ ಈ ಯುವಕರಿಗೆ ಕೀಕೊಟ್ಟು ತಿರುಗಿಸಿ ಕೇಳಿಸಿದ್ದ. ಅಷ್ಟಿಷ್ಟು ಕಾಂಗ್ರೆಸ್ ವಿಷಯಗಳನ್ನು ಅಲ್ಲಿಂದ ಇಲ್ಲಿಂದ ಕಿವಿಯ ಮೇಲೆ ಹಾಕಿಕೊಂಡು ಬಂದು ಯುವಕರಿಗೆ ಖಾದಿ ಜುಬ್ಬ ಪಾಯಜಾಮ, ಬಿಳಿ ಟೋಪಿಯ ಫ್ಯಾಶನ್ ಕಲಿಸಿದ್ದ. ಈಗ ಯುವಕರಿಗೆಲ್ಲ ಅವನ ಸಾವಿನಿಂದಾಗಿ ತುಂಬ ವ್ಯಥೆಯಾಗಿದೆ. ಆದರೆ ಹಿರಿಯರ ಭಯದಿಂದ ಎಲ್ಲ ಸಮ್ಮನಿದ್ದಾರೆ. ಎಲ್ಲ ಬಾಗಿಲುಗಳನ್ನೂ ಜಡಿದು ಪಾಸಿಂಗ್ ಷೋ ಸಿಗರೇಟು ಹತ್ತಿಸಿ ಸೇದುತ್ತ ಅರೆಮನಸ್ಸಿನಲ್ಲಿ ಪ್ರಾಕ್ಟೀಸು ನಡೆದಿತ್ತು. ಯಕ್ಷಗಾನದ ಮೇಲೆ ಮರ್ಜಿಯಿದ್ದ ಶ್ರೀಪತೆಗೆ ಈ ನಾಟಕದಲ್ಲಿ ಪಾತ್ರವಿರದಿದ್ದರೂ ಬಣ್ಣ ಹಾಕಿ ನಡೆಯುವ ಸಮಸ್ತ ಕ್ರಿಯೆಯೂ ಅವನಿಗೆ ಖಯಾಲಿ. ‘ಪ್ರಾಕ್ಟೀಸು’ ನಡೆಯುತ್ತಿದ್ದಂತೆ ಒಂದು ಮರಿಗೆಯ ತುಂಬ ತುಂಬಿಟ್ಟ ಒಗ್ಗರಣೆ ಅವಲಕ್ಕಿ, ಕಡಾಯಿ ತುಂಬ ಬಿಸಿಬಿಸಿ ಕಾಫಿಯ ಸೇವನೆಯೂ ನಡೆದಿತ್ತು. ರಾತ್ರಿ ಹನ್ನೆರಡು ಗಂಟೆಯವರೆಗೂ ನಡುನಡುವೆ ನಾರಣಪ್ಪನನ್ನು ನೆನೆಯುತ್ತ ಅವಲಕ್ಕಿ ಕಾಫಿಯ ಸೇವನೆ ಮಾಡುತ್ತ, ‘ಪ್ರಾಕ್ಟೀಸು’ ಸಾಗಿತು. ಮುಗಿದ ಮೇಲೆ ನಾಗರಾಜ ಗಣೇಶನಿಗೆ ಕಣ್ಣು ಮಿಟುಕಿಸಿದ. ಗಣೇಶ ಪಕ್ಕದಲ್ಲಿ ಕೂತಿದ್ದ ಸ್ತ್ರೀಪಾತ್ರದ ಮಂಜುನಾಥನನ್ನು ಚೂಟಿದ. ಮಂಜುನಾಥ ಅದನ್ನು ಮಾಲೇರರ ರಂಗಣ್ಣನಿಗೆ ದಾಟಿಸಿದ. ಗಂಗಣ್ಣ ಶ್ರೀಪತಿಯ ಪಂಚೆಯನ್ನು ಹಿಡಿದು ಜಗ್ಗಿದ. ಈ ಒಳ ಸಂಜ್ಞೆಯಾದ ಮೇಲೆ ಉಳಿದ ತರುಣರನ್ನು ಇವತ್ತಿನ ‘ಪ್ರಾಕ್ಟೀಸು’ ಸಾಕೆಂದು ಸಾಗಿಸಿದ್ದಾಯಿತು. ಎಲ್ಲ ಹೋಗಿಯಾದ ಮೇಲೆ ನಾಗರಾಜ ಬಾಗಿಲನ್ನು ಮುಚ್ಚಿ ಲಗುಬಗೆಯಿಂದ ಟ್ರಂಕಿನ ಮುಚ್ಚಳ ತೆರೆದು ಎರಡು ಸೀಸೆ ಸರಾಯಿಯನ್ನು ಎತ್ತಿ ಹಿಡಿದ. ನಮ್ಮ ಮಾಸ್ತರರಾದ ನಾರಣಪ್ಪನ ನೆನಪಿಗೆ ಎಂದು ತಮ್ಮ ಮೆಚ್ಚಿನ ನಟ ಹಿರಣ್ಣಯ್ಯನ ಹಾಡನ್ನು ಮೆಲಕುಹಾಕಿದ. ಆಮೇಲಿಂದ ಗುಟ್ಟಾಗಿ ಸೀಸೆಗಳನ್ನು ಒಂದು ಚೀಲದಲ್ಲಿ ಇಟ್ಟಿದ್ದಾಯಿತು. ಬಾಳೆಲೆಯಲ್ಲಿ ಅವಲಕ್ಕಿಯನ್ನು ಕಟ್ಟಿಕೊಂಡದ್ದಾಯಿತು. ಮೆತ್ತಗೆ ಸದ್ದಾಗದಂತೆ ಗ್ಲಾಸುಗಳನ್ನು ತುಂಬಿಕೊಂಡದ್ದಾಯಿತು. ‘ರೆಡಿ’ ಎಂದ ನಾಗರಾಜ. ‘ರೆಡಿ’ ಎಂದರು ಉಳಿದವರು. ಒಬ್ಬೊಬ್ಬರಾಗಿ ಮೆಟ್ಟಲನ್ನು ಇಳಿಯುತ್ತಿದ್ದಂತೆ ಮಂಜುನಾಥ ‘ಹೋಲ್ಡಾನ್’ ಎಂದು ಕತ್ತರಿಸಿದ ಒಂದು ಲಿಂಬೆಹಣ್ಣನ್ನು ಜೇಬಿಗೆ ಹಾಕಿಕೊಂಡ.

ತರುಣರು ಮೆತ್ತಗೆ ಬಾಗಿಲೆಳೆದುಕೊಂಡು ಅಗ್ರಹಾರ ದಾಟಿ, ತಮ್ಮ ಕಳ್ಳತನದ ವ್ಯಾಪಾರಕ್ಕೆ ಹಿಗ್ಗುತ್ತ ಕದ್ದಿಂಗಳಿನಲ್ಲಿ ಶ್ರೀಪತಿ ಬ್ಯಾಟರಿ ಬೆಳಕಿನಲ್ಲಿ ಹೊಳೆಯ ಕಡೆ ನಡೆದರು. ‘ಏನು ಮಾರಾಯ, ನಿಮ್ಮ ಗುರುಗಳು ಒಂದು ಬಾಟ್ಲಿ ಕುಡಿದೂ ಲಯ ತಪ್ಪದ ಹಾಗೆ ತಬಲ ನುಡಿಸುತ್ತಿದ್ದರಲ್ಲ’ ಎಂದು ನಾರಣಪ್ಪನನ್ನು ನಾಗರಾಜ ದಾರಿಯಲ್ಲಿ ಸ್ಮರಿಸಿದ. ವಿಶಾಲವಾದ ಮರಳಿನ ರಾಶಿಯ ಮೇಲೆ ಬಂದು ಸುತ್ತಾಗಿ ಕೂತು, ನಡವೆ ಬಾಟ್ಲಿ ಗ್ಲಾಸು ಅವಲಕ್ಕಿಗಳನ್ನಿಟ್ಟುಕೊಂಡರು. ತಾವು ಐವರೇ ಈ ಲೋಕಕ್ಕೆಲ್ಲ ಇದ್ದಂತೆ ಅನ್ನಿಸಿ, ನಕ್ಷತ್ರ ಸಾಕ್ಷಿಯಲ್ಲಿ, ಅಗ್ರಹಾರದ ತಮ್ಮ ವಾಮನತ್ವವನ್ನು ಸರಾಯಿಯಿಂದ ಕಳೆದುಕೊಂಡು ತ್ರಿವಿಕ್ರಮರಾಗಲು ಸನ್ನದ್ದತೆ ನಡೆಸಿದರು. ಹೊಳೆ ಜುಳುಜುಳು ಎಂದು ಅವರ ಮಾತಿನ ನಡುವಿನ ಮೌನದಲ್ಲಿ ಹರಿದು ಯುವಕರಿಗೆ ತಮ್ಮ ಏಕಾಂತದ ಬಗ್ಗೆ ದೈರ್ಯವನ್ನು ಹೇಳಿತು.

ಸರಾಯಿ ಹಿತವಾಗಿ ನೆತ್ತಿಗೇರುತ್ತಿದ್ದಂತೆ ಶ್ರೀಪತಿ ಗದ್ಗದಿತನಾಗಿ ಎಂದ:

‘ನಮ್ಮ ಅಪ್ಪನೊಬ್ಬ ಸತ್ತನಲ್ಲಯ್ಯ’

‘ಹೌದಲ್ಲಯ್ಯ’, ನಾಗರಾಜ ಅವಲಕ್ಕಿಗೆ ಕೈಹಾಕಿ ಹೇಳಿದ: ‘ನಮ್ಮ ಕಂಪನಿಯ ಒಂದು ಕಂಬವೇ ಮುರಿದಂತೆ ನಮಗೆ, ಅವನ ಹಾಗೆ ತಬಲದ ಮೇಲೆ ತಾಳ ಹಿಡಿಯುವವರು ಯಾರು ಆ ಆಸುಪಾಸಿನಲ್ಲಿ?’

ಎಷ್ಟು ನಿಂಬೆಹಣ್ಣನ್ನು ಹಿಂಡಿಕೊಂಡಿದ್ದರೂ ತಲೆಗೇರಿಬಿಟ್ಟಿದ್ದ ಮಂಜುನಾಥ ಏನನ್ನೋ ಹೇಳಲು ಯತ್ನಿಸುತ್ತ, ‘ಚಂದ್ರಿ, ಚಂದ್ರಿ’ ಎಂದ.

ಶ್ರೀಪತಿಗೆ ಹುರುಪಾಯಿತು. ‘ಯಾರು ಏನೇ ಅನ್ನಲಿ, ಯಾವ ಬ್ರಾಹ್ಮಣ ಏನೇ ಬೊಗಳಲಿ – ಗೊತ್ತಾಯ್ತ – ಆಣೆ ಹಾಕಿ ಹೇಳ್ತೀನಿ – ಏನೂಂತೀರ? – ಚಂದ್ರಿಯಂಥ ಚೆಲುವೆ, ಗಟ್ಟಿಗೆ, ಒಳ್ಳೆಯ ಹೆಂಗಸು ಈ ನೂರು ಮೈಲಿಯಲ್ಲಿ ಇದ್ದಳಾ ಎಣಿಸಿಬಿಡಿ. ಇದ್ದರೆ ಜಾತಿ ಬಿಟ್ಟುಬಿಡುವೆ. ಸೂಳೆಯಾದರೆ ಏನಯ್ಯ? ನಾರಣಪ್ಪನಿಗೆ ಅವಳು ಹೆಂಡತಿಗಿಂತ ಹೆಚ್ಚಾಗಿ ನಡಕೊಂಡಳೊ ಇಲ್ಲವೋ ಹೇಳಿ ನೋಡುವ. ಅವನು ಕುಡಿದು ವಾಂತಿ ಮಾಡಿಕೊಂಡರೆ ಬಾಚಿದಳು. ಅಲ್ಲದೆ ನಮ್ಮ ವಾಂತೀನೂ ಬಾಚಿದಳಲ್ಲಯ್ಯ! ಅರ್ಧರಾತ್ರೆ ಅವನು ಬಂದು ಎಬ್ಬಿಸಲಿ – ತುಟಿಪಿಟಕ್ಕೆನ್ನದೆ – ನಗ್ತನಗ್ತ ಅಡಿಗೆ ಮಾಡಿ ಬಡಿಸ್ತಿದ್ದಳು. ಯಾವ ಬ್ರಾಹ್ಮಣ ಹೆಂಗಸು ಅಷ್ಟು ಮಾಡ್ತಾಳಯ್ಯ? ಎಲ್ಲ ಪಿರಿಪಿರಿ ಮುಂಡೇರು. ಥತ್’ ಎಂದ.

ಮಂಜುನಾಥ ತನಗೆ ಗೊತ್ತಿದ್ದ ಮೂರು ಇಂಗ್ಲೀಷ್ ಶಬ್ದಗಳಲ್ಲಿ ಒಂದಾದ ‘ಯಸ್’, ‘ಯಸ್’, ಎಂದ.

‘ಕುಡಿದದ್ದೆ ಮಂಜುನಾಥನಿಗೆ ಇಂಗ್ಲೀಷ್ ಬಂದುಬಿಡ್ತದೆ’ – ಎಂದು ನಾಗರಾಜ ನಕ್ಕ.

ಮಾತು ಮತ್ತೆ ಹುಡಗೀರ ಕಡೆ ಹೊರಳಿತು. ಶೂದ್ರ ಹೆಣ್ಣಗಳಲ್ಲಿ ಯಾವು ಯಾವುವು ಚೆನ್ನಾಗಿವೆಯೆಂದು ಲೆಖ್ಖಹಾಕಿದರು. ಬೆಳ್ಳಿ ಮತ್ತು ತನ್ನ ವಿಷಯ ನಾರಣಪ್ಪನೊಬ್ಬನಿಗೆ ಮಾತ್ರ ತಿಳಿದಿತ್ತಾದ್ದರಿಂದ ಶ್ರೀಪತಿ ಸಮಾಧಾನದಿಂದ ಅವರ ಮಾತು ಕೇಳಿದ. ಬೆಳ್ಳಿ ಇವರ ಕಣ್ಣಿಗೆ ಬೀಳದಿದ್ದುದು ಹೆಚ್ಚು. ಬಿದ್ದರೂ ಹೊಲತಿಯೆಂದು ಹೆದರುತ್ತಾರೆ, ಲಾಯಕ್ಕೇ ಆಯಿತು.

ಇನ್ನೊಂದು ಸೀಸೆ ಗಿದ್ನ ತೆರೆಯುತ್ತಿದ್ದಂತೆ ಶ್ರೀಪತಿ:

‘ನಮ್ಮ ದೋಸ್ತು ಸತ್ತು ಸಂಸ್ಕಾರಾ ಇಲ್ಲದೆ ಕೊಳೀತಾ ಬಿದ್ದಿರೋವಾಗ ನಮ್ಮದೆಂತಹ ಮಜವಯ್ಯ’ ಎಂದು ಅಳಲು ಪ್ರಾರಂಭಿಸಿದ. ಎಲ್ಲ ಯುವಕರಿಗೂ ಅಳು ಸಾಂಕ್ರಾಮಿಕವಾಗಿ ಅವನಿಂದ ಹರಡಿತು. ಒಬ್ಬರನ್ನೊಬ್ಬರು ತಬ್ಬಿಕೊಂಡರು.

ಶ್ರೀಪತಿ ಹೇಳಿದ:

‘ಯಾರು ಯಾರು ಗಂಡಸರು ಇಲ್ಲಿ ಹೇಳಿ.’

‘ನಾನು ನಾನು ನಾನು ನಾನು’ ಎಂದು ನಾಲ್ವರೂ ಉದ್ಗರಿಸಿದರು. ಹೆಣ್ಣಿನ ಪಾತ್ರದ ಹೆಣ್ಣಿನ ಮುಖದ ಮಂಜುನಾಥನಿಗೆ ನಾಗರಾಜ ‘ಛೆ ಛೇ, ನೀನು ಸದಾರಮೆ, ನೀನು ಶಕುಂತಳೆ’ ಎಂದು ಮುತ್ತುಕೊಟ್ಟ.

‘ನೀವು ಗಂಡಸರಾದರೆ ನನ್ನದೊಂದು ಮಾತು. ಒಪ್ಪಿದರೆ ‘ಭೇಷ್’ ಎನ್ನುವೆ. ಗೊತ್ತಾಯ್ತ. ನಮ್ಮ ಗೆಳೆಯ ಅವ. ಅವನು ಕೊಟ್ಟಿದ್ದಕ್ಕೆ ನಾವೇನು ಅವನಿಗೆ ಕೊಟ್ಟಿದ್ದೇವೆ? ಆ ಶವಾನ್ನ ಪತ್ತೆಯಾಗದಂತೆ ಸಾಗಿಸಿ ಸುಟ್ಟುಬಿಡುವ ಏನೆನ್ನುತ್ತೀರಿ? ಏಳಿ’ ಎಂದು ಶ್ರೀಪತಿ ಹುರಿದುಂಬಿಸಿ ಮಾತನ್ನಾಡಿ ಎಲ್ಲರ ಗ್ಲಾಸಿಗೂ ಸರಾಯಿ ತುಂಬಿಸಿದ. ಎಲ್ಲರೂ ಅದನ್ನು ಗಟಗಟನೆ ಕುಡಿದು, ಯೋಚಿಸದೆ ಬ್ಯಾಟರಿಯ ಬೆಳಕನ್ನು ಚೆಲ್ಲುತ್ತ ನಡೆದ ಶ್ರೀಪತಿಯ ನೇತೃತ್ವದಲ್ಲಿ ಓಲಾಡುತ್ತ ಓಲಾಡುತ್ತ ಹೊಳೆ ದಾಟಿದರು. ಕದ್ದಿಂಗಳಿನಲ್ಲಿ ಒಂದು ಪಿಳ್ಳೆಯೂ ಕಾಣಲಿಲ್ಲ. ಕುಡಿದ ಸರಾಯಿ ನೆತ್ತಿಗೇರಿ, ಉನ್ಮಾದದಿಂದ ಅಗ್ರಹಾರವನ್ನು ಹೊಕ್ಕು, ನಾರಣಪ್ಪನ ಮನೆಗೆ ಹೋಗಿ ಬಾಗಿಲು ದೂಡಿದರು. ನೇರ ನಿರ್ಭಯ ಒಳಕ್ಕೆ ಹೋದರು. ಸರಾಯಿಯ ಪ್ರಭಾವದಲ್ಲಿ ದುರ್ನಾತ ಲೆಖ್ಖಕ್ಕೆ ಬರದೆ ಸೀದ ಮಹಡಿ ಹತ್ತಿದರು. ಶ್ರೀಪತಿ ಬ್ಯಾಟರಿ ಬಿಟ್ಟ ಎಲ್ಲಿ? ಎಲ್ಲಿ? ನಾರಣಪ್ಪನ ಶವವೇ ಪತ್ತೆಯಿಲ್ಲ. ಐವರಿಗೂ ಇದ್ದಕಿದ್ದಂತೆ ಪ್ರಾಣಭಯವಾಯಿತು. ‘ಹಾ! ನಾರಣಪ್ಪ ಪ್ರೇತವಾಗಿ ನಡೆದುಬಿಟ್ಟ’ ಎಂದ ನಾಗರಾಜ. ಅವನು ಅಂದದ್ದೆ ತಡ ಸರಾಯಿ ಸೀಸೆಯ ಚೀಲವನ್ನಲ್ಲೆ ಎಸೆದು, ಬಿದ್ದೆವೋ ಕೆಟ್ಟೆವೋ ಎನ್ನುತ್ತ ಐವರೂ ಹೊರಗೆ ಓಡಿಬಿಟ್ಟರು.

ನಿದ್ದೆ ಬಾರದೆ ‘ಢರ್ರೆ’ನ್ನುವ ಬಾಗಿಲು ತೆರೆದು ಶಪಿಸಲೆಂದು ಅಗ್ರಹಾರದ ಬೀದಿಗೆ ಬಂದಿದ್ದ ಅರೆಮರಳು ಲಕ್ಷ್ಮೀದೇವಮ್ಮ ‘ಪ್ರೇತಗಳನ್ನು ನೋಡಿರೋ ನೋಡಿರೋ’ ಎಂದು ಕಿರುಚಿ ‘ಹೇಯ್’ ಎಂದು ತೇಗಿದಳು.