ಹಾಸಿಗೆ ಹಿಡಿದು ಜ್ವರ ಬಂದು ಬಹಿಷ್ಠೆತಾದ ಹೆಂಡತಿಯನ್ನು ಬಿಟ್ಟರೆ, ಹದ್ದು, ಕಾಗೆಗಳನ್ನುಳಿದ  ನರಪ್ರಾಣಿ ಕಣ್ಣಿಗೆ ಬೀಳದಿದ್ದ ಅಗ್ರಾಹಾರದಲ್ಲಿ ಪ್ರಾಣೇಶಾಚಾರ್ಯರು ಒಬ್ಬರೇ ಉಳಿದರು. ಪೂಜೆಪುನಸ್ಕಾರಾದಿ ಕರ್ಮಗಳು ನಿಂತು ಭಣಗುಟ್ಟುವ ಭಯಂಕರ ಶೂನ್ಯ ಕವಿದುಬಿಟ್ಟಿತ್ತು. ಮೂಗಿಗೆ ಅಡರಿ ಪ್ರಾಣಸ್ಥವಾಗಿ ನಿಂತ ದುರ್ವಾಸನೆ, ಮನೆಮನೆಗೂ ಕೂತ ಹದ್ದುಗಳು ನಾರಣಪ್ಪನ ಶವವನ್ನು ಮರೆಯಲು ಬಿಡದಂತೆ ಕಾಡಿದವು. ದೇವರ ಕೋಣೆಗೆ ಹೋದ ಪ್ರಾಣೇಶಾಚಾರ್ಯರು – ಇಲಿಯೊಂದು ಬಂದು ಅಪ್ರದಕ್ಷಿಣೆ ಸುತ್ತಿ ಅಂಗಾತ್ತನೆ ಬಿದ್ದು ನಿಶ್ಚೇಷ್ಟಿತವಾದ್ದನ್ನು ಕಂಡು, ಹೇಸಿ, ಬಾಲದಿಂದೆತ್ತಿ ಹದ್ದಿಗೆ ಹಾಕಿ ಬಂದರು. ಒಳಗೆ ಬಂದರೆ ಕಾಗೆಹದ್ದುಗಳ ಕರ್ಕಶ ಗದ್ದಲಕ್ಕೆ ಭೀತರಾಗಿ ಹೊರಬಂದರು. ಮಧ್ಯಾಹ್ನದ ಯಮಮೌನದ ಬಿಸಿಲಿಗೆ ಕಣ್ಣನ್ನು ಮೇಲೆತ್ತಲಾರದೆ ‘ಹುಶ್’, ‘ಹುಶ್’. ಎಂದು ಬರಿದೇ ಕೂಗಿಕೊಂಡರು. ಹೊಟ್ಟೆಯ ಸಂಕಟ ತಡೆಯಾಲಾರದೆ ಪೇಚಾಡಿ, ಧೋತ್ರದಲ್ಲಷ್ಟು ರಸಬಾಳೆ ಹಣ್ಣುಗಳನ್ನು ಕಟ್ಟಿಕೊಂಡು, ಸ್ನಾನಮಡಿ, ಹೊಳೆ ದಾಟಿ, ಮರದ ನೆರಳಿನಲ್ಲಿ ಕೂತು ತಿಂದರು. ನೆಮ್ಮದಿಯಾಯಿತು. ಚಂದ್ರಿ ತನ್ನ ಮಡಿಲಿನ ಹಣ್ಣನ್ನು ತಿನ್ನಿಸಿದ ಕತ್ತಲಿನ ನೆನಪಾಯಿತು.

ಆಗ ತಾನು ಅವಳನ್ನು ಮುಟ್ಟಿದ್ದು ಪಶ್ಚಾತ್ತಾಪದಿಂದಲೋ? – ಅನುಮಾನವಾಯಿತು. ಪಶ್ಚಾತ್ತಾಪದ, ಮರುಕದ ರೂಪತಾಳಿ ನನ್ನನ್ನು ಇಷ್ಟು ದಿನ ನಡೆಸಿಕೊಂಡು ಬಂದಿದ್ದ ಧರ್ಮ, ಪಳಗಿಸಿಟ್ಟ ಹಲಿಯಂತಹ ಕಾಮ ಇದ್ದಿರಬೇಕು – ಅಷ್ಟೆ. ಚಂದ್ರಿಯ ಮೊಲೆ ತಾಗಿದಾಕ್ಷಣ ಚಂಗನೆ ಸ್ವಧರ್ಮಕ್ಕೆ ನೆಗೆದು ಹಲ್ಲು ತೋರಿಸಿಬಿಟ್ಟಿತು. ನಾರಣಪ್ಪ ಹೇಳಿದ ಮಾತು ನೆನಪಾಯಿತು: ‘ಗೆಲ್ಲುವುದು ನಾನೊ ನೀವೊ ನೋಡುವ… ಮತ್ಸ್ಯಗಂಧೀನ್ನ ತಬ್ಬಿಕೊಂಡು ಮಲಗಿ’… ನಮ್ಮ ಕರ್ಮಕ್ಕೆಲ್ಲ ತದ್ವಿರುದ್ಧ ಫಲ ದೊರೆಯುತ್ತದೆಂಬುದಕ್ಕೊಂದು ಕತೆ ಹೇಳಿದ್ದ. ನಾನು ಶಾಕುಂತಳ ಓದಿದಾಗ ಅವನು ಅಂದ ಹಾಗೇ ಆಗಿರಬೇಕು. ನಾರಣಪ್ಪನಿಂದಲ್ಲ – ನನ್ನ  ಹಟದಿಂದ ನನ್ನ ಕರ್ಮದಿಂದ ಈ ಅಗ್ರಹಾರದ ಬಾಳು ಬುಡಮೇಲಾಗಿಬಿಟ್ಟಿರಬಹುದು. ಯಾವ ಯುವಕ ಹಾಗೆ ನದಿಗೆ ಹೋಗಿ ಹೊಲತಿಯೊಬ್ಬಳನ್ನು ತಬ್ಬಿಕೊಂಡುದ್ದಿರಬಹದು? ನನ್ನ ವರ್ಣನೆ ಕೇಳಿ? ಶಕುಂತಳೆಯನ್ನು ಮನಸ್ಸಿಗೆ ತರುವಂತಹ ಹೊಲೆಯರ ಹುಡುಗಿ ಯಾರಿದ್ದಿರಬಹುದು? ಆಚಾರ್ಯರ ಕಲ್ಪನೆ – ಮೊದಲ ಬಾರಿಗೆ – ತಾನೆಂದೂ ಗಮನಿಸದಿದ್ದ ಅಸ್ಪೃಶ್ಯ ಹುಡುಗಿಯರೆನ್ನೆಲ್ಲ ಎಳೆದು ತಂದು ನಿರ್ವಸ್ತ್ರಗೊಳಿಸಿ ನೋಡಿತು. ಯಾರು? ಯಾರು? ಬೆಳ್ಳಿ? ಹೌದು ಬೆಳ್ಳಿ. ತಾನು ಹಿಂದೆಂದೂ ಲೆಖ್ಖಕ್ಕೆ ತಾರದ ಅವಳ ಮಣ್ಣಿನ ಬಣ್ಣದ ಮೊಲೆಗಳ ಕಲ್ಪನೆಯಾಗಿ ಮೈ ಜುಮ್ಮೆಂದಿತು. ತನ್ನ ಕಲ್ಪನೆಗೆ ತಾನೇ ಕಂಗಾಲಾದರು. ನಾರಣಪ್ಪ ಗೇಲಿಗೆ ಹೇಳಿದ್ದ: ಬ್ರಾಹ್ಮಣ್ಯ ಉಳಿಯಲು ವೇದ ಪುರಾಣಗಳನ್ನು ಅರ್ಥ ತಿಳಿಯದೆ ಓದಬೆಕು ಅಂತ. ತನ್ನಲ್ಲಿದ್ದ ಮರುಕದಲ್ಲಿ, ಜ್ಞಾನದಲ್ಲಿ ಉಳಿದ ಬ್ರಾಹ್ಮಣರ ಮೌಢ್ಯದಲ್ಲಿರದಂತಹ ಒಂದು ಸಿಡಿಯುವ ಕಿಡಿ ಹುದುಗಿದ್ದಿರಬೇಕು. ಈಗ ಚಂಗನೆ ಪಳಗಿಸಿಟ್ಟ ಹುಲಿ ನೆಗೆದು ಹಲ್ಲು ತೋರಿಸುತ್ತಿದೆ –

ಬೆಳ್ಳಿಯ ಮೊಲೆಗಳನ್ನೂ ಹೋಗಿ ಮೃದುವಾಗಿ ಅಮುಕಬೇಕೆನ್ನಿಸುತ್ತಿದೆ. ಅನುಭವಕ್ಕಾಗಿ ದಾಹವಾಗುತ್ತಿದೆ. ಇಷ್ಟು ದಿನ ತಾನು ಬದುಕಲೇ ಇಲ್ಲ : ಮಾಡಿದ್ದನ್ನೆಮಾಡಿಕೊಂಡಿದ್ದು, ಹೇಳಿದ  ಗಾಯತ್ರಿಯನ್ನೇ ಹೇಳಿಕೊಂಡಿದ್ದು, ನಿರನುಭವಿಯಾಗಿ ಉಳಿದುಬಿಟ್ಟೆ. ಅನುಭವ ಎಂದರೆ ಆಘಾತ. ಇರದೇ ಇದ್ದುದೊಂದು ಕತ್ತಲಿನಲ್ಲಿ, ಕಾಡಿನಲ್ಲಿ ನಿರಪೇಕ್ಷಿತವಾಗಿ ಬಂದು ಸೇರಿಕೊಳ್ಳೋದು. ಬಯಸಿದ್ದು ಕೈಗೂಡೋದು ಪರಮ ಅನುಭವಾಂತ ತಿಳಿದಿದ್ದೆ : ನಾವು ಕಾಣದಿದ್ದುದು ನಮ್ಮ ಜೀವಕ್ಕೆ ಮೊಲೆಗಳಂತೆ ಒಡ್ಡಿ ಬಂದು ಹೊಕ್ಕುಬಿಡೋದು ಅನುಭವಾಂತ ಈಗ ಅನ್ನಿಸುತ್ತೆ. ನನಗೆ ಹೆಣ್ಣಿನ ಸ್ಪರ್ಶವಾದಂತೆ ನಾರಣಪ್ಪನಿಗೆ ಕತ್ತಲಿನಲ್ಲಿ ನಿರಪೇಕ್ಷಿತವಾಗಿ ಪರಮಾತ್ಮ ಸ್ಪರ್ಶವಾಗಿದ್ದರೆ – ಬಿದ್ದ ಮಳೆಗೆ ಮೃದುವಾಗಿ, ಒತ್ತಿದ ಮಣ್ಣಿಗೆ ಪುಳಕಿತವಾಗಿ ಓಟೆ ಒಡೆದು ಸಸಿಯಾಗುತ್ತದೆ : ಹಟ ಮಾಡಿದರೆ ಗೊರಟವಾಗಿ ಒಣಗುತ್ತದೆ. ನಾರಣಪ್ಪ ಹಟದ ಗೊರಟವಾಗಿದ್ದು ಈಗ ಸತ್ತು ನಾರುತ್ತಿದ್ದಾನೆ. ಚಂದ್ರಿಯನ್ನು ಮುಟ್ಟುವವರೆಗೆ ನಾನು ಅವನಿಗೆ ‘ಪ್ರತಿಹಟ’ದ ಗೊರಟವಾಗಿ ಉಳಿದೆ… ನಾನು ಕಾಮಾನ್ನ ಬಿಟ್ಟರೂ ಕಾಮ ನನ್ನನ್ನು ಬಿಡದಷ್ಟೇ ಸಹಜವಾಗಿ ಯಾಕೆ ಪರಮಾತ್ಮ ನಮ್ಮನ್ನು ಬಂದು ಮುಟ್ಟಿಬಿಡಬಾರದು?

ಈಗ ಚಂದ್ರಿ ಎಲ್ಲಿ? ನನಗೆ ಕಷ್ಟವಾಗಬಾರದೆಂದು ಶವದ ಜೊತೆ ಹೋಗಿ ಕೂತುಬಿಟ್ಟಳೋ, ಆ ದುರ್ನಾತವನ್ನು ಹೇಗೆ ಸಹಿಸುವಳೋ – ಕಳವಳವಾಯಿತು. ಹೊಳೆಯಾ ನೀರಿಗೆ ಬಿದ್ದು ಈಜಿದರು. ಇಲ್ಲೆ, ಹೀಗೆ, ಈಜುತ್ತ ಇದ್ದುಬಿಡುವ ಎನ್ನಿಸಿತು. ತಾಯಿಯ ಕಣ್ಣು ತಪ್ಪಿಸಿ ಹೊಳೆಯಲ್ಲೀಜಲು ತಾನು ಬಾಲಕನಾಗಿದ್ದಾಗ ಓಡುತ್ತಿದ್ದ ದಿನಗಳು ನೆನಪಾದುವು. ಎಷ್ಟು ವರ್ಷಗಳ ನಂತರ ನನ್ನಬಾಲ್ಯದ ಆಸೆ ಹೀಗೆ ಮರುಕಳಿಸಿಬಿಟ್ಟಿತಲ್ಲ ಎಂದು ಆಶ್ಚರ್ಯವಾಯಿತು. ತಾಯಿಗೆ ತಿಳಿಯದಿರಲೆಂದು ಈಜಿ, ಮರಳಿನಲ್ಲಿ ಮಲಗಿ ಮೈಯೊಣಗಿಸಿಕೊಂಡು ಹೋಗುತ್ತಿದ್ದೆ. ತಣ್ಣೀರಿನಲ್ಲಿ ಈಸಿದ ನಂತರ ಕಾದ ಮರಳಿನಲ್ಲಿ ಹೊರಳುವುದಕ್ಕೆ ಸಮನಾದ ಸುಖ ಇನ್ನೆಲ್ಲಿದೆ? ಅಗ್ರಹಾರಕ್ಕೆ ಮರಳಲು ಮನಸ್ಸಾಗಲಿಲ್ಲ. ದಡಕ್ಕೆದ್ದು ಬಂದು ಮರಳಿನಲ್ಲಿ ಮಲಗಿದರು. ಮಧ್ಯಾಹ್ನದ ಧಗೆಗೆ ಕ್ಷಣದಲ್ಲಿ ಮೈ ಅರಿ ಬೆನ್ನು ಸುಡಹತ್ತಿತು.

ಥಟ್ಟನೊಂದು ಹೊಳೆದು ಎದ್ದರು. ಮಣ್ಣಿಗೆ ಮೂಗಿಟ್ಟು ನಡೆಯುವ ಮೃಗದಂತೆ ತಾನು ಚಂದ್ರಿಯನ್ನು ಕೂಡಿದ ಕಾಡು ಹೊಕ್ಕರು. ಹಾಡು ಹಗಲಿನಲ್ಲೂ ಮಬ್ಬು ಮಬ್ಬು. ಜೀರ್ರೆನುವ ಕತ್ತಲು ಮೊಟ್ಟುಪೊದೆಗಳಲ್ಲಿ, ತನ್ನ ಬಾಳು ಹೊರಳಿಕೊಂಡ ಜಾಗದಲ್ಲಿ-ಅಂತಃಪ್ರೇರಣೆಯಿಂದೆಂಬಂತೆ – ಬಂದು ನಿಂತರು. ಹಸಿರಾದ ಹುಲ್ಲಿನ ಮೇಲೆ ಒತ್ತಿದ ಮೈಯ ಆಕಾರ ಇನ್ನೂ ಉಳಿದಿತ್ತು. ಕೂತರು. ಮಂಕಾದವರಂತೆ ಹುಲ್ಲಿನ ಗರಿಕೆಗಳನ್ನು ಕಿತ್ತು ಮೂಸಿನೋಡಿದರು. ಅಸಹ್ಯವಾಗಿ ನಾರುವ ಅಗ್ರಹಾರದಿಂದ ಬಂದವರಿಗೆ ಮೃದು ಹಸಿಮಣ್ಣು ಹತ್ತಿಕೊಂಡ ಹುಲ್ಲಿನ ಬೇರಿನ ವಾಸನೆ ಚಟದಂತೆ ಕಾಡಿತು. ನೆಲವನ್ನು ಹೆಕ್ಕುವ ಕೋಳಿಯಂತೆ ಕೈಗೆ ಸಿಕ್ಕಿದ್ದನ್ನು ಕಿತ್ತು ಕಿತ್ತು ಮೂಸಿದರು. ಹೀಗೆ ಮರದ ನೆರಳಿನಲ್ಲಿ ತಂಪಾಗಿ ಕೂತಿರುವುದೇ ಒಂದು ಪುರುಷಾರ್ಥವೆನ್ನಿಸಿತು. ಇದ್ದುಬಿಡುವುದು. ಹುಲ್ಲಿಗೆ, ಹಸಿರಿಗೆ, ಹೂವಿಗೆ, ನೋವಿಗೆ, ಬಿಸಿಲಿಗೆ, ತಂಪಿಗೆ ಚುರುಕಾಗಿ ಇದ್ದುಬಿಡುವುದು. ಕಾಮ ಪುರುಷಾರ್ಥಗಳೆರಡನ್ನೂ ಸರಿಸಿಬಿಟ್ಟು – ಉದ್ಬಾಹುವಿನಂತೆ ನೆಗೆಯುತ್ತಿರದೆ –  ಬರಿದೇ ಇದ್ದುಬಿಡುವುದು. ‘ಇಕೊ’ ಎಂದು ಅವ್ಯಕ್ತದಿಂದ ಬಂದದ್ದನ್ನ ಕೃತಜ್ಞತೆಯಿಂದ ಸ್ವೀಕರಿಸುವುದು. ಧರೆ ಹತ್ತುವ ಪರದಾಟ ಬೇಡ. ಕೈಗೊಂದು ಸುಗಂಧಿ ಸಸಿ ತಾಗಿತು. ಎಳೆದರು. ಭದ್ರವಾಗಿ ಬೇರು ನೆಟ್ಟು ನೀಳಬಳ್ಳಿಯಾದ ಸುಗಂಧಿ ಜಗ್ಗಲಿಲ್ಲ. ಹುಲ್ಲಿನಂತಲ್ಲದೆ, ಹುದುಗಲು ಹಸಿ ಮಣ್ಣಿನಾಚೆ ಗಟ್ಟಿನೆಲದಲ್ಲಿ ಅದರ ಚೂಪು ಚುರುಕು ಬೇರು ನೆಟ್ಟಿತ್ತು. ಎದ್ದುಕೂತು ಎರಡು ಕೈಯಲ್ಲೂ  ಜಗ್ಗಿದರು. ತಾಯಿಬೇರು ಅರ್ಧಕಡಿದುಕೊಂಡು ಬಳ್ಳಿಯಾಗಿ ಬೆಳೆದ ಸುಗಂಧಿ ಕೈಗೆ ಬಂತು. ಮೂಸಿದರು. ದೀರ್ಘವಾಗಿ ಉಸಿರನ್ನೆಳೆದುಕೊಳ್ಳುತ್ತ ಬೇರನ್ನು ಮೂಸಿದರು. ಮಣ್ಣು ಮತ್ತು ಆಕಾಶದ, ತಂಪು ಮತ್ತು ಬಿಸಿಲಿನ ಎಣೆಯಗಿ, ಗಂಟಾಗಿ, ನೆಂಟಾಗಿ ಸುಗಂಧಿಯ ಬೇರು ಪಡೆದ ವಾಸನೆ ಪಂಚಪ್ರಾಣಕ್ಕಿಳಿಯಿತು. ಆಸೆಬುರುಕನಂತೆ ಮೂಸುತ್ತಲೇ ಕೂತರು. ಸುಗಂಧ ಮೂಗಿನಲ್ಲಿ ನಿಂತು, ಸುವಾಸನೆ ಪ್ರಾಣಗತವಾಗಿ, ಪರಿಮಳದ ಆನುಭವ ಮಾಯವಾಗಿ ಅತೃಪ್ತಿಯಾಯಿತು. ಬೇರನ್ನು ಮೂಗಿನಿಂದ ದೂರವಿಟ್ಟು, ಕಾಡಿನ ವಾಸನೆಯನ್ನು ಆಘ್ರಾಣಿಸುತ್ತದ್ದು, ಮತ್ತೆ ನವ್ಯವಾದ  ಸುಗಂಧಿಯನ್ನು ಮೂಸಿದರು. ಎದ್ದು ಕಾಡು ಬಿಟ್ಟು ಹೊರಗೆ ಬಂದು, ನೆರಳಿನಲ್ಲಿ ನೀಲಮಣಿಗಳಾದ ವಿಷ್ಣುಕಾಂತಿಯ ತುಣುಕುಮಿಣುಕುಗಳನ್ನು – ನೋಡುವುದೇ ಪರಮೈಶ್ವರ್ಯವೆನ್ನುವಂತೆ – ನೋಡುತ್ತಾ ನಿಂತರು. ತಿರುಗಿ ಹೊಳೆಯಲ್ಲಿಳಿದು ಈಜಿದರು. ಕಂಠದವರೆಗೆ ನೀರಿರುವ ಮಡುವಿನಲ್ಲಿ ಬಂದು ನಿಂತರು. ಮೀನುಗಳು ಮುತ್ತಿ ಕಚಕುಳಿಯ ಅವರ ಕಾಲುಬೆರಳಿನ ಸಂದಿಗಳನ್ನು, ಕಂಕುಳನ್ನು ಪಕ್ಕೆಗಳನ್ನು ಚುಚ್ಚಿದವು. ಪ್ರಾಣೇಶಾಚಾರ್ಯರು ಅಹಹಾ ಎನ್ನುತ್ತ ಕಚಕುಳಿಗೆ ಓಡುವ ಬಾಲಕನಂತೆ ನೀರಿಗೆ ಈಸುಬಿದ್ದು, ದಡ ಸೇರಿ, ಬಿಸಿಲಿನಲ್ಲಿ ನಿಂತು ಒಣಗಿಸಿಕೊಂಡರು. ಹೆಂಡತಿಗೆ ಗಂಜಿ ಕೊಡುವ ಹೊತ್ತಾಯಿತೆಂದು ಅರಿವಾಗಿ ಬೇಗ ಬೇಗ ನಡೆದು ಅಗ್ರಹಾರಕ್ಕೆ ಬಂದರು.

ಥಟ್ಟನೆ ಕಾಗೆ ರಣಹದ್ದುಗಳನ್ನು ಕಂಡು ಕಪಾಳಕ್ಕೆ ಫಟೀರನೆ ಏಟು ಬಿದ್ದಂತಾಯಿತು. ಮನೆಗೆ ಬಂದು ನೋಡಿದರೆ ಹೆಂಡತಿಯ ಮುಖ ಕೆಂಪಾಗಿ ಕುದಿಯುತ್ತಿತ್ತು. ‘ಇವಳೇ ಇವಳೇ’ ಎಂದು ಕೂಗಿದರು. ಉತ್ತರವಿಲ್ಲ. ಜ್ವರ ಏರಿರಬಹುದೇ? ಬಹಿಷ್ಠೆಯಾದವಳನ್ನು ಮುಟ್ಟುವುದು ಹೇಗೆ? ‘ಛೆ’ ಎಂದು ತಮ್ಮ ಜಾಡು ಹಿಡಿದ ಸಂಕೋಚಕ್ಕೆ ಹೇಸಿ, ಅವಳ  ಮುಟ್ಟಿದವರು ಸರಕ್ಕನೆ ಕೈಯೆಳೆದುಕೊಂಡರು. ದಿಕ್ಕು ತೋಚದಂತಾಗಿ ಹಣೆಗೆ ಒದ್ದೆಬಟ್ಟೆ ಹಾಕಿ,  ಅನುಮಾನದಿಂದ ಅವಳ ಹೊದ್ದಿಕೆ ಎಳೆದು ಮೈಯನ್ನು ಪರೀಕ್ಷಿಸಿದರು. ಪಕ್ಕದಲ್ಲಿ ಗಡ್ಡೆ. ನಾರಣಪ್ಪನನ್ನು ನಂಗಿದ ಜ್ವರವೆ? ಗೊತ್ತಿದ್ದ ಮೂಲಿಕೆಗಳನ್ನೆಲ್ಲ ತೇದು, ಅವಳ ಬಾಯನ್ನು ಬಿಡಿಸಿ ಹೊಯ್ದರು. ಯಾವ  ಔಷಧವೂ ಗಂಟಲನ್ನಿಳಿಯಲಿಲ್ಲ. ಇದು ಯಾವ ರೀತಿಯ ಪರೀಕ್ಷೆಯೆಂದು ಹಂಬಲಿಸುತ್ತ ಅತ್ತಿಂದಿತ್ತ ಅಲೆದರು ಕಾಗೆ ಹದ್ದುಗಳ ಕಿರುಚಾಟ ಅತಿಯಾಗಿ, ದುರ್ನಾತದಲ್ಲಿ ಬದ್ಧಿಭ್ರಮಣೆಯಾದಂತಾಗಿ ಹಿತ್ತಲಿಗೆ ಓಡಿದರು. ಮಂಕಾಗಿ ನಿಂತರು. ಕಾಲ ಹೋದದ್ದು ತಿಳಿಯಲೇ ಇಲ್ಲ. ಸಂಜೆಯಾಯಿತು. ಕಾಗೆ ಹದ್ದುಗಳೆಲ್ಲ ಹಾರಿ ಹೋದದ್ದನ್ನು ಕಂಡು ಸಮಾಧಾನವಾಗಿ – ಜ್ವರದಲ್ಲಿರುವ ಹೆಂಡತಿಯನ್ನು ಹೀಗೆ ಬಿಟ್ಟುಬಂದೆನಲ್ಲ ಎಂದು ಕಸಿವಿಸಿಯಾಗಿ – ಮನೆಯ ಹಿಂದಕ್ಕೆ ಬಂದರು. ದಿಗಿಲಾಯಿತು. ದೀಪ ಹತ್ತಿಸಿ ‘ಇವಳೇ ಇವಳೇ’ ಎಂದರು. ಉತ್ತರವಿಲ್ಲ. ಬಿಕೋ ಎನ್ನತೊಡಗಿತು. ನಂತರ ಅವಾಕ್ಕಾಗುವಂತೆ ಹೆಂಡತಿ ಕಿಟಾರನೆ ಕಿರುಚಿಕೊಂಡಳು. ದೀರ್ಘದಾರುಣ ಕರ್ಕಶಸ್ವರ ಅವಳ ಗಂಟಲಿನಿಂದ ಬಂದದ್ದು ಕೇಳಿ ಹಸಿಹಸಿ ಪ್ರಾಣವನ್ನು ಮುಟ್ಟಿದಂತಾಗಿ ಆಚಾರ್ಯರು ಥತ್ತರ ನಡುಗಿದರು. ಊಳಿದಂತಹ ಧ್ವನಿ ನಿಂತೊಡನೆ ಮಿಂಚು ಥಳಿಸಿ ಕತ್ತಲಾದಂತಾಯಿತು. ಇಲ್ಲಿ ನಾನೊಬ್ಬನೆ ಇರಲಾರೆ ಎನ್ನಿಸಿತು. ತಾನೇನು ಮಾಡುತ್ತಿದ್ದೇನೆಂದು ತಿಳಿಯುವುದರೊಳಗೆ ‘ಚಂದ್ರಿ’ ಎಂದು ಕರೆಯುತ್ತ ನಾರಣಪ್ಪನ ಮನೆಗೆ ಓಡಿದರು. ‘ಚಂದ್ರೀ ಚಂದ್ರೀ ‘ ಎಂದು ಕರೆದರೆ ಉತ್ತರವಿಲ್ಲ. ಒಳಗೆ ಹೋದರು. ಕತ್ತಲು. ನಡುಮನೆ, ಅಡಿಗೆಮನೆ ಹುಡುಕಿದರು. ಇಲ್ಲ. ಮಹಡಿ ಮೆಟ್ಟಲನ್ನು ಇನ್ನೇನು ಹತ್ತಬೇಕು ಎನ್ನುವುದರೊಳಗೆ, ಅಲ್ಲಿ ಶವವಿದೆ ಎನ್ನಿಸಿ, ತಾನು ಹುಡುಗನಾಗಿದ್ದಾಗ ಕತ್ತಲಿನ ಕೋಣಯೊಳಕ್ಕೆ ಹೋಗುವ ಮುನ್ನ ಗುಮ್ಮನಿದ್ದಾನೆಂಬ ಭಯವಾಗುತ್ತಿದ್ದಂತಹ ದಿಗಿಲು ಮರುಕಳಿಸಿ ಓಡುತ್ತೋಡುತ್ತ ತಮ್ಮಾ ಮನೆಗೆ ಬಂದರು. ಹೆಂಡತಿಯ ಹಣೆ ಮುಟ್ಟಿ ನೋಡಿದರು : ತಣ್ಣಗೆ ಕೊರೆಯುತ್ತಿತ್ತು.

ರಾತ್ರಾನುರಾತ್ರೆ ಲಾಟೀನು ಹಿಡಿದು ನಡೆದು ಕೈಮರಕ್ಕೆ ಹೋಗಿ ಸುಬ್ಬಣ್ಣಾಚಾರ್ಯರ ಮನೆ ಹೊಗುತ್ತಿದ್ದಂತೆ, ಅವರ ಬೆನ್ನ ಹಿಂದೆಯೇ ದಾಸಾಚಾರ್ಯನನ್ನು ಸುಟ್ಟು ಹಿಂದಿರುಗಿದ ನಾಲ್ಕು ಬ್ರಾಹ್ಮಣರು ಒದ್ದೆ ಪಾಣಿಪಂಚೆಯನ್ನು ತಲೆಯ ಮೇಲೆ ಧರಿಸಿ ‘ನಾರಾಯಣ ನಾರಾಯಣ’. ಎಂದರು. ಆ ಬ್ರಾಹ್ಮಣರನ್ನೆ ಜೊತೆಗೆ ಕರೆದುಕೊಂಡು ಬಂದು, ಹೆಂಡತಿಯ ಹೆಣ ಸಾಗಿಸಿ , ನಸುಕಾಗುವುದರೊಳಗೆ ಬೆಂಕಿ ಕೊಟ್ಟಿದ್ದಾಯ್ತು. ಬ್ರಾಹ್ಮಣರ ಹತ್ತಿರ ‘ಅಗ್ರಹಾರದಲ್ಲಿ ಸಂಸ್ಕಾರವಾಗಬೇಕಾದ ಇನ್ನೊಂದು ಹೆಣವಿದೆ’ ಎಂದು ತನ್ನೊಳಗೆ ಆಡಿಕೊಂಡವರಂತೆ ಅಂದರು. ‘ನಾಳೆ ಆ ಬಗ್ಗೆ ಗುರುಗಳ ಹತ್ತಿರ ಇತ್ಯರ್ಥವಾಗುತ್ತದಲ್ಲ’ ಎಂದು ನುಡಿದು ಬ್ರಾಹ್ಮಣರಿಗೆ ‘ನೀವಿನ್ನು ಹೊರಡಿ’ ಎಂದರು. ತನ್ನ ತಪೋಭೂಮಿಯಾಗಿದ್ದ ಒಂದು ಹಿಡಿಜೀವದ ಹೆಂಡತಿ ಧಗಧಗನೆ ಉರಿಯುವುದನ್ನು ನೋಡುತ್ತ, ಬಂದ ಕಣ್ಣೀರನ್ನು ತಡೆದುಕೊಳ್ಳಲು ಪ್ರಯತ್ನಿಸದೆ, ಆಯಾಸವೆಲ್ಲ ಪರಿಹಾರವಾಗುವಷ್ಟು ಅತ್ತುಬಿಟ್ಟರು.