ಆಚಾರ್ಯರಿಗೆ ಎಚ್ಚರವಾದಾಗ ನಡುರಾತ್ರೆ. ಅವರ ತಲೆ ಚಂದ್ರಿಯ ತೊಡೆಗಳ ಮೇಲಿತ್ತು. ಕೆನ್ನೆ ಅವಳ ನಗ್ನ ಕಿಬ್ಬೊಟ್ಟೆಗೆ ಒತ್ತಿಕೊಂಡಿತ್ತು. ಚಂದ್ರಿ ತನ್ನ ಬೆರಳುಗಳಿಂದ ಅವರ ತಲೆ ಕಿವಿ ಕೆನ್ನೆಗಳನ್ನು ಸವರುತ್ತಿದ್ದಳು.

ತಾನೆ ತನಗೆ ಥಟ್ಟನೆ ಅಪರಿಚಿತನಾಗಿಬಿಟ್ಟಿಂತಾಗಿ ಕಣ್ಣು ಬಿಟ್ಟು ಆಚಾರ್ಯರು ಯೋಚಿಸಿದರು. ಎಲ್ಲಿದ್ದೇನೆ? ಇಲ್ಲಿಗೆ ಹೇಗೆ ಬಂದೆ? ಇದು ಯಾವ ಕತ್ತಲು? ಇದು ಯಾವ ಕಾಡು? ಇವಳು ಯಾರು?

ತನ್ನ ಬಾಲ್ಯಕ್ಕೊಮ್ಮೆಗೆ ಮಗುಚಿಕೊಂಡುಬಿಟ್ಟಂತೆನಿಸಿ ಅಮ್ಮನ ತೊಡೆಯ ಮೇಲೆ ಮಲಗಿ ದಣಿವು ಕಳೆದುಕೊಳ್ಳುತ್ತಿದ್ದುದು ಮರುಕಳಿಸಿತು. ಬೆರಗಿನಿಂದ ನೋಡಿದರು: ಗರಿ ಬಿಚ್ಚಿದ ನವಿಲಿನಂತಹ ಅಕ್ಷಯ ನಕ್ಷತ್ರದ ರಾತ್ರಿ; ಸಪ್ತಋಷಿಗಳ ಮಂಡಲ; ವಸಿಷ್ಠರ ಪಕ್ಕದಲ್ಲಿ ನಾಚಿ ಮಿನುಗುವ ಅರುಂಧತಿ. ಕೆಳಗೆ ಹುಲ್ಲಿನ, ಹಸಿಮಣ್ಣಿನ, ವಿಷ್ಣುಕಾಂತಿಯ, ಸುಗಂಧಿಯ, ಹೆಣ್ಣಿನ ಬೆವರಿದ ಮೈಯ ವಾಸನೆ. ಕತ್ತಲು ಆಕಾಶ, ನೆಮ್ಮದಿಯಿಂದ ನಿಂತ ವೃಕ್ಷಗಳು. ಕನಸೋ ಎಂದು ಕಣ್ಣುಜ್ಜಿಕೊಂಡರು. ಎಲ್ಲಿಂದ ಇಲ್ಲಿಗೆ ಬಂದೆ, ಎಲ್ಲಿಗೆ ಹೋಗಬೇಕೆಂದು ಬಂದು ಮರೆತುಬಿಟ್ಟೆ ಎಂದು ಕಳವಳಿಸಿದರು. ‘ಚಂದ್ರಿ’ ಎಂದು ಕರೆದು ಪೂರ್ಣ ಎಚ್ಚರೆವಾದರು. ಆಲಿಸಿದರು. ಕಾಡಿನಲ್ಲಿ, ಮೌನದಲ್ಲಿ, ಗುಟ್ಟುಗಳನ್ನು ಹೇಳುತ್ತಿರುವಂತಹ ಚಿಲಿಚಿಲಿ ಎನ್ನುವ ಕತ್ತಲು. ಚಿಲಿಪಿಲಿ ಎನ್ನುವ ಶಬ್ದ ‘ಮಿಣಕ್, ಮಿಣಕ್’ ಎನ್ನುವ ಬೆಳಕಾಗಿ, ರಾಶಿರಾಶಿಯಾದ ಮಿಣುಕುಹುಳುಗಳು ತೇರಿನಂತೆ ಏರಿಬಂದು ಪೊದೆಯಿಂದ ಹೊರಗೆ ಪ್ರತ್ಯಕ್ಷವಾದವು. ಕಣ್ಣು ತುಂಬುವಂತೆ, ಕಿವಿ ತುಂಬುವಂತೆ ಆಲಿಸುತ್ತ ನೋಡಿದರು : ಸುತ್ತಲೂ ಮಿಣುಕು ಹುಳುಗಳ ರಾಶಿರಾಶಿ ತೇರು. ‘ಚಂದ್ರಿ’ ಎಂದು ಅವಳ ಹೊಟ್ಟೆಯನ್ನು ಮುಟ್ಟಿ ಎದ್ದು ಕೂತರು.

ಪ್ರಾಣೇಶಾಚಾರ್ಯರು ತನ್ನನ್ನೆಲ್ಲಿ ಬಯ್ದುಬಿಡುವರೋ, ಹಳಿದು ಬಿಡುವರೋ ಎಂದು ಚಂದ್ರಿಗೆ ಭಯ. ಅಲ್ಲದೆ ತಾನು ಫಲವತಿಯಗಿರಬಹುದೇನೋ ಎನ್ನುವ ಆಸೆ. ತಾನು ಪುಣ್ಯಾತಿಗಿತ್ತಿಯಾದೆ ಎನ್ನುವ ಕೃತಜ್ಞತೆ. ಆದರೆ ಅವಳು ಮಾತಾಡಲಿಲ್ಲ.

ಪ್ರಾಣೇಶಾಚಾರ್ಯರು ಬಹಳ ಹೊತ್ತು ಮಾತಾಡಲಿಲ್ಲ. ಕೊನೆಗೆ ಎದ್ದು ನಿಂತು ಅಂದರು:

‘ಚಂದ್ರಿ, ಏಳು ಹೋಗುವ. ನಾಳೆ ಬೆಳಿಗ್ಗೆ ಬ್ರಾಹ್ಮಣರು ಸೇರಿದಾಗ ಹೀಗಾಯಿತೆಂದು ಹೇಳಿಬಿಡುವ. ನೀನೇ ಹೇಳಿಬಿಡು. ಅಗ್ರಹಾರಕ್ಕೆ ಒಂದು ನಿಶ್ಚಯ ಮಾಡಿ ಹೇಳುವ ಅಧಿಕಾರವನ್ನ ನಾನು…’

ಏನು ಹೇಳುವುದು ಸರಿಯೆಂದು ತಿಳಿಯದೆ ಪ್ರಾಣೇಶಾಚಾರ್ಯರು ತತ್ತರಿಸಿ ನಿಂತರು:

‘ಕಳೆದುಕೊಂಡೆ. ನಾಳೆ ನನಗೆ ಧೈರ್ಯ ಬಾರದಿದ್ದರೆ ನೀನೇ ಹೇಳಿಬಿಡಬೇಕು. ನನ್ನ ಮಟ್ಟಿಗೆ ಸಂಸ್ಕಾರ ಮಾಡಲು ನಾನು ಸಿದ್ದ. ಉಳಿದ ಬ್ರಾಹ್ಮಣರಿಗೆ ಹೇಳುವ ಅಧಿಕಾರ ನನಗೆ ಇಲ್ಲ. ಅಷ್ಟೆ.’

ಮಾತನಾಡಿಬಿಟ್ಟಮೇಲೆ ಪ್ರಾಣೇಶಾಚಾರ್ಯರಿಗೆ ತಮ್ಮ ದಣಿವೆಲ್ಲ ಕಳೆದು ಬಿಟ್ಟಂತಾಯಿತು.

* * *

ಒಟ್ಟಿಗೆ ಹೊಳೆ ದಾಟಿ, ನಾಚಿಕೆಯಾದ್ದರಿಂದ ಪ್ರಾಣೇಶಾಚಾರ್ಯರನ್ನು ಮುಂದೆ ಬಿಟ್ಟು ತಾನು ಹಿಂದಾಗಿ, ಅಗ್ರಹಾರವನ್ನು ಸೇರಿದಮೇಲೆ ಚಂದ್ರಿಗೆ ಕಳವಳವಾಯಿತು : ತಾನು ಮಾಡಿದ್ದೆಲ್ಲ ಹೀಗಾಗುತ್ತದಲ್ಲ! ಒಳ್ಳೆ ಬುದ್ಧಿಯಿಂದ ಬಂಗಾರ ಕೊಟ್ಟೆ; ಹಾಗಾಯ್ತು. ಈಗ ಅವರ ಸಂಸ್ಕಾರ ಮಾಡಲಿಕ್ಕೆಂದು ಪ್ರಯತ್ನಿಸುತ್ತಿದ್ದ ಆಚಾರ್ಯರನ್ನು… ಆದರೆ ಸ್ವಭಾವತಃ ಸುಖಿಯಾದ ಚಂದ್ರಿಗೆ ಆತ್ಮಾವಹೇಳನದ ಪದ್ದತಿಯ ಮಾತುಗಳ ಪರಿಚಯವಿರಲಿಲ್ಲ. ಕತ್ತಲೆಯಲ್ಲಿ ಅಗ್ರಹಾರದ ಬೀದಿ ನಡೆಯುತ್ತಿದ್ದಂತೆ ಆ ಕತ್ತಲಿನ ಕಾಡಿನಲ್ಲಿ – ನಿಂತದ್ದು, ಬಾಗಿದ್ದು, ಕೊಟ್ಟಿದ್ದು, ಕೊಂಡದ್ದು, ಬಚ್ಚಿಟ್ಟುಕೊಂಡ ಪರಿಮಳದ ಹೂವಿನಂತೆ ಧನ್ಯ ಭಾವವನ್ನು ಮಾತ್ರ ತರುತ್ತದೆ. ಪಾಪ ಆಚಾರ್ಯರಿಗೆ ಹೀಗೆನ್ನಿಸುತ್ತದೋ, ಇಲ್ಲವೋ. ಇನ್ನು ಅವರ ಜಗುಲಿಗೆ ಮತ್ತೆ ಹೋಗಿ ಅವರ ಮನಸ್ಸಿಗೆ ನೋವುಂಟುಮಾಡಬಾರದು. ಅಲ್ಲದೆ ತನ್ನ ಬಾಳಿಗೆ ಅಕಸ್ಮಾತ್ತಾಗಿ ನುಗ್ಗಿ ಬಂದ ಈ ಅದೃಷ್ಟವನ್ನ ಆಚಾರ್ಯರು ಹೇಳಿದ ಹಾಗೆ ಅಗ್ರಹಾರದ ಗೊಡ್ಡು ಬ್ರಾಹ್ಮಣರ ಎದುರಿನಲ್ಲಿ ಹೇಳಿ, ಬೀದಿಗೆಳೆದು, ಆಚಾರ್ಯರ ಮಾನ ಕಳೆಯುವಂಥವಳೇ ತಾನು? ಸರಿ – ಆದರೆ ಈಗ ನನ್ನ ಗತಿ? ಆಚಾರ್ಯರಲ್ಲಿಗೆ ಹೋಗೋದು ಸರಿಯಲ್ಲ; ಈಗ ಶವವಾದ ತನ್ನ ಯಜಮಾನನ ಮನೆಗೆ ಹೋಗುಲು ಭಯ. ಏನು ಮಾಡಲಿ?

ಎಷ್ಟೆಂದರೂ ತನ್ನ ಕೂಡ ಸಹವಾಸ ಮಾಡಿದರಲ್ಲವೆ ಎಂದು ಧೈರ್ಯ ತಂದುಕೊಂಡಳು. ಅಲ್ಲಿಗೆ ಹೋಗಿ ನೋಡೋದು, ಧೈರ್ಯವಾದರೆ ಚಾವಡಿಯಲ್ಲಿ ಮಲಗಿರೋದು, ಇಲ್ಲವೆ ಆಚಾರ್ಯರ ಜಗುಲಿಗೇ ಮತ್ತೆ ಬರೋದು, ಏನು ಮಾಡಲಿಕ್ಕಾಗುತ್ತೆ ಆಪತ್ತಿನಲ್ಲಿ – ಎಂದು ವಾದಿಸಿಕೊಂಡು ಸೀದ ತನ್ನ ಮನೆಗೆ ಹೋದಳು. ಚಪ್ಪರದ ಕೆಳಗೆ ನಿಂತು ಆಲಿಸಿದಳು. ನಾಯಿ ಬೊಗಳಿದ ಶಬ್ದ ಕೇಳಿ ಎಲ್ಲ ರಾತ್ರೆಯ ಹಾಗೆ ಇದೂ ಒಂದು ರಾತ್ರೆ ಎನ್ನಿಸಿ ಚಾವಡಿಯ ಮೆಟ್ಟಲನ್ನು ಹತ್ತಿದಳು. ಚಾಚಿದ ಕೈಗೆ ಬಾಗಿಲು ತೆರೆದದ್ದು ತಿಳಿದು : ‘ಅಯ್ಯೋ ಪರಮಾತ್ಮ, ನರಿ ನಾಯಿಯೇನಾದರೂ ನುಗ್ಗಿ ಅವನ ಶವವನ್ನು…’ ಎಂದು ತಾಪವಾಗಿ ಭಯವನ್ನೆಲ್ಲ ಮರೆತು, ಕ್ಷಣದಲ್ಲಿ ಒಳನುಗ್ಗಿ, ಅಭ್ಯಾಸಬಲದಿಂದ ಗೂಡಿನಲ್ಲಿದ್ದ ಬೆಂಕಿಪೊಟ್ಟಣ ತೆರೆದು ಲಾಟೀನು ಹತ್ತಿಸಿದಳು. ದುರ್ವಾಸನೆ. ಸತ್ತು ಕೊಳೆಯುತ್ತಿದ್ದ ಇಲಿ. ತನಗಾಗಿ ಅಗ್ರಹಾರದಲ್ಲೆಲ್ಲ ನಿಷ್ಟುರ ಕಟ್ಟಿಕೊಂಡ ನಾರಣಪ್ಪನ ಶವವನ್ನು ಅನಾಥವಾಗಿಬಿಟ್ಟೆನಲ್ಲ ಎಂದು ದುಃಖವಾಗಿ ಮಹಡಿ ಹತ್ತಿ ಹೋದಳು. ಲೋಭಾನದ ಹೊಗೆ ಹಾಕಬೇಕೆಂದುಕೊಂಡಳು. ಹೆಣ ನಾರುತ್ತಿತ್ತು. ಬಾತುಕೊಂಡು ವಿಕಾರವಾಗಿ ವಿರೂಪವಾದ ಶವದ ಮುಖ ಕಂಡು ಹೊಟ್ಟೆಯೆಲ್ಲ ಕಲಸಿ, ಕಿಟಾರನೆ ಕಿರುಚಿ ಹೊರಕ್ಕೋಡಿದಳು. ಅಲ್ಲಿ ಮೇಲಿರುವುದಕ್ಕೂ, ತನ್ನನ್ನು ಒಲಿದಿದ್ದವನಿಗೂ ಯಾವ ಸಂಬಂಧವೂ ಇಲ್ಲ, ಇಲ್ಲ ಎಂದು ಅವಳ ಜೀವ ಕೂಗಿತು. ಲಾಟೀನು ಹಿಡಿದು ಆವೇಶದಲ್ಲೆಂಬಂತೆ ಚಂದ್ರಿ ಒಂದೇ ವೇಗದಲ್ಲಿ ಮೈಲಿ ನಡೆದು ಗೌಡರು ಕೇರಿಗೆ ಹೋದಳು. ತಮ್ಮ ಮನೆಗೆ ಕೋಳಿಮೊಟ್ಟೆಯನ್ನು ತಂದುಕೊಡುತ್ತಿದ್ದ ಗಾಡಿ ಶೇಷಪ್ಪನ ಮನೆಯನ್ನು ಅಂಗಳದಲ್ಲಿ ಕಟ್ಟಿದ ಬಿಳಿಯ ಎತ್ತುಗಳಿಂದ ಗುರುತಿಸಿ ಒಳಕ್ಕೆ ಹೋದಳು. ಎತ್ತುಗಳು ಅಪರಿಚಿತ ರೂಪವೊಂದನ್ನು ಕಂಡು ಎದ್ದುನಿಂತು ಬುಸ್ ಎಂದು ಉಸಿರಾಡಿ ಹಗ್ಗವನ್ನು ಜಗ್ಗಿದವು. ನಾಯಿ ಬೊಗಳಿತು. ಶೇಷಪ್ಪ ಎದ್ದು ಬಂದ. ಚಂದ್ರಿ ಆತುರವಾಗಿ ನಡೆದದ್ದನ್ನು ವಿವರಿಸಿ, ‘ನೀನು ಗಾಡಿ ಕಟ್ಟಿಕೊಂಡು ಬಂದು ಹೆಣವನ್ನು ಸ್ಮಶಾನಕ್ಕೆ ಸಾಗಿಸಬೇಕು, ಮನೆಯಲ್ಲಿಯೇ ಕಟ್ಟಿಗೆಯಿದೆ – ಸುಟ್ಟುಬಿಡಬಹುದು’ ಎಂದು ಕೇಳಿದಳು.

ಹೆಂಡವನ್ನು ಹೀರಿ ಮಜದಲ್ಲಿ ನಿದ್ದೆ ಮಾಡಿದ್ದ ಶೇಷಪ್ಪ ಗಾಬರಿಯಾಗಿ,

‘ಚಂದ್ರಮ್ಮ ಸಾಧ್ಯವಿಲ್ಲವ್ವ. ಬ್ರಾಂಬ್ರ ಶವಾನ ನಾನು ಮುಟ್ಟಿ ನರಕಕ್ಕೆ ಹೋಗಲ? ಅಷ್ಟ್ಯೆಶ್ವರ್ಯ ಕ್ವಟ್ಟರೂ ಬ್ಯಾಡಮ್ಮ… ಭಯವಾದರೆ ಈ ಬಡವನ ಗುಡಿಸಲಲ್ಲಿ ಮಲಗಿದ್ದು ನಸುಕಿನಲ್ಲಿ ಎದ್ದು ಹೋಗಿರವ್ವ’ ಎಂದು ಉಪಚರಿಸಿದ.

ಚಂದ್ರಿ ಮಾತನ್ನಾಡದೆ ಬೀದೆಗೆ ಬಂದು ನಿಂತಳು. ಏನು ಮಾಡಲಿ? ಒಂದೇ ಒಂದು ಯೋಚನೆ ಅವಳಿಗೆ ಸ್ಪಷ್ಟವಾಯಿತು : ಅಲ್ಲಿ ಅದು ಕೊಳೆಯುತ್ತಿದೆ. ನಾರುತ್ತದೆ. ಬಾತುಕೊಂಡಿದೆ. ಅದು ತಾನು ಒಲಿದ ನಾರಣಪ್ಪನಲ್ಲ. ಬ್ರಾಹ್ಮಣನೂ ಅಲ್ಲ. ಶೂದ್ರನೂ ಅಲ್ಲ. ಹೆಣ. ಕೊಳೆಯುವ ನಾರುವ ಹೆಣ.

ಸೀದ ನಡೆದು ಮುಸಲ್ಮಾನರಿದ್ದ ಕೇರಿಗೆ ಹೋದಳು. ಹಣ ಕೊಡವೆನೆಂದಳು. ಬಂಗಡೇ ಮೀನಿನ ವ್ಯಾಪಾರ ಮಾಡುತ್ತಿದ್ದ ಅಹ್ಮದ್ ಬ್ಯಾರಿ – ಕೈಯಲ್ಲಿ ಒಮ್ಮೆ ಕಾಸಿಲ್ಲದಾಗ ಎತ್ತುಗಳನ್ನು ಕೊಳ್ಳಲು ಸಾಲಕೊಟ್ಟ ಒಡೇರು ಅವರು ಎಂದು ನೆನೆದು – ಎಗ್ಗಿಲ್ಲದೆ ಗುಟ್ಟಾಗಿ ಗಾಡಿ ಕಟ್ಟಿಕೊಂಡು ಬಂದು ಶವವನ್ನು ಕಟ್ಟಿಗೆಯನ್ನೂ ಒಟ್ಟಿಗೇ ತುಂಬಿ, ಯಾರಿಗೂ ಪತ್ತೆಯಾಗದಂತೆ ಮಸಣಕ್ಕೊಯ್ದ, ಕತ್ತಲೆಯಲ್ಲಿ ಧಗಧಗ ಬೆಂಕಿಯೆಬ್ಬಿಸಿ ಬೂದಿಮಾಡಿ ನಡೆದುಬಿಟ್ಟ – ಹೈ ಹೈ ಎಂದು ಎತ್ತಿನ ಬಾಲ ತಿರುಪಿ. ಚಂದ್ರಿ ಎರಡು ತೊಟ್ಟು ಕಣ್ಣೀರು ಹಾಕಿ, ಮನೆಗೆ ಹಿಂದಕ್ಕೆ ಬಂದು, ಚೀಲದಲ್ಲಿ ತನ್ನದೊಂದಿಷ್ಟು ರೇಷ್ಮೆಯ ಸೀರೆಗಳನ್ನು, ಪೆಟ್ಟಿಗೆಯಲ್ಲಿದ್ದ ನಗದು ಹಣವನ್ನು ಮತ್ತು ಆಚಾರ್ಯರು ಹಿದಕ್ಕೆ ಕೊಟ್ಟ ಬಂಗಾರವನ್ನು ಗಂಟುಕಟ್ಟಿಕೊಂಡು ಹೊರಬಂದಳು. ಪ್ರಾಣೇಶಾಚಾರ್ಯರನ್ನು ಎಬ್ಬಿಸಿ ಅವರ ಕಾಲಿಗೆರಗಿ ಹೋಗಬೇಕೆಂಬ ತನ್ನ ಆಸೆಯನ್ನು ಅದುಮಿಕೊಂಡು, ಬೆಳಿಗ್ಗೆ ಕುಂದಾಪುರಕ್ಕೆ ಮೋಟಾರು ಹಿಡಿಯುವುದೆಂದು ಮೋಟಾರಿನ ದಾರಿಯ ಕಡೆ ಕಾಡುದಾರಿಯಲ್ಲಿ ಗಂಟು ಹಿಡಿದು ನಡೆದುಬಿಟ್ಟಳು.