ಮನೆಗೆ ಮರಳಿದ ದುರ್ಗಾಭಟ್ಟ ಈ ಮಾಧ್ವ ಮುಂಡೇಗಂಡರ ಸಹವಾಸದಲ್ಲಿ ಕೆಟ್ಟೆನೆಂದು ಕೊಂಡು, ಗಾಡಿ ಕಟ್ಟಿಸಿ ಹೆಂಡತಿಮಕ್ಕಳ ಜೊತೆ ಅವನ ಅತ್ತೆಯ ಊರಿಗೆ ಹೋಗಿಬಿಟ್ಟ. ಲಕ್ಷ್ಮಣಾಚಾರ್ಯ ಬಾಳೆಲೆ ದೊನ್ನೆಗಳನ್ನು ಕಟ್ಟಿಕೊಂಡು, ದಾಸಾಚಾರ್ಯ ದಾರಿಗೆಂದು ಅರಳು ಕಟ್ಟಿಕೊಂಡು, ಹೆಂಗಸರು ಮಕ್ಕಳನ್ನು ತೌರಿಗೆಂದು ಎಬ್ಬಿಸಿ, ಲಕ್ಷ್ಮೀದೇವಮ್ಮನನ್ನು ಲಕ್ಷ್ಮಣನ ಅತ್ತೆಯ ಮನೆಗೆ ಹೊರಡಿಸಿ, ಬ್ರಾಹ್ಮಣರೆಲ್ಲರೂ ಪ್ರಾಣೇಶಾಚಾರ್ಯ ಜಗುಲಿ ಸೇರುವವೇಳೆಗೆ ಆಚಾರ್ಯರ ಹೆಂಡತಿ ಮುಟ್ಟಾಗಿಬಿಟ್ಟಿದ್ದಳು. ‘ಹಾಸಿಗೆ ಹಿಡಿದವಳನ್ನು ನಾನು ಬಿಟ್ಟು ಬರುವಂತಿಲ್ಲ, ನೀವು ಹೋಗಿ’ ಎಂದರು ಆಚಾರ್ಯರು.  ಸರಿ ಎಂದು ಬ್ರಾಹ್ಮಣರು ಹೊರಬಂದು, ಮನೆಗಳ ಮೇಲೆ ಕೂತ ಹದ್ದುಗಳನ್ನು ಲೆಕ್ಕಿಸದೆ ಆತುರವಾಗಿ ಕೈಮರದ ಮಾರ್ಗದಲ್ಲಿ ನಡೆದುಬಿಟ್ಟರು.

ಕೈಮರ ಸೇರುವಾಗ ಮಧ್ಯಾಹ್ನದ ಧಗೆ ಆರಿ ಸಂಜೆಯಾಗಿತ್ತು. ಸ್ನಾನಮಾಡಿ, ಯಜ್ಞೋಪವೀತ ಬದಲಾಯಿಸಿ, ಗೋಪಿಚಂದನಗಳನ್ನು ಧರಿಸಿ ಸುಬ್ಬಣ್ಣಾಚಾರ್ಯರ ಜಗುಲಿಯ ಮೇಲೆ ಕೂತರು. ಮೊದಲು ಊಟವಾಗಲಿ ಎಂದರು ಪಂಡಿತರು . ಅದೇ ಸೂಚನೆಗೆಂದು ಕಾದ ಬ್ರಾಹ್ಮಣರು ಬಿಸಿ ಬಿಸಿ ಅನ್ನಸಾರನ್ನು ಒಳಗಿನ ಪರಮಾತ್ಮನಿಗೆ ತಾಗುವಂತೆ ಸುರಿದು, ಹಿತವಾದ ಆಯಾಸದಲ್ಲಿ ಸುಬ್ಬಣ್ಣಾಚಾರ್ಯರ ಸುತ್ತನೆರೆದರು. ಸುಬ್ಬಣ್ಣಾಚಾರ್ಯರು  ಜ್ಯೋತಿಷಿಗಳಾದ್ದರಿಂದ ನಾರಣಪ್ಪ ಸತ್ತ ವೇಳೆ ಅಮೃತವೋ ವಿಷವೋ ಎಂದು ತಿಳಿದರೆ ಸಂಸ್ಕಾರದ ಅರ್ಹತೆ ಅನರ್ಹತೆಯ ಬಗ್ಗೆ ಹೊಳೆಯಬಹುದೆಂದು, ಕನ್ನಡಕ ಧರಿಸಿ ಪಂಚಾಂಗ ನೋಡಿ, ಕವಡೆಗಳನ್ನು ಎಣಿಸಿ – ‘ವಿಷ’ ಎಂದರು, ‘ಪ್ರಾಣೇಶಾಚಾರ್ಯರಿಗೆ ತಿಳಿಯದಿದ್ದನ್ನು ನಾನು ಹೇಗೆ ಹೇಳಲಿ’ ಎಂದು ತಲೆಯಾಡಿಸಿದರು. ದಾಸಾಚಾರ್ಯನಿಗೆ ಇದರಿಂದ ಸಂತೋಷವೇ ಆಯಿತು; ಹೊರಟವರು ಹಾಗೆ, ಮಠಕ್ಕೂ ಹೋಗಿ ಆರಾಧನೆಯ ಪ್ರಸಾದ ಸ್ವೀಕರಿಸಿ ಬಂದುಬಿಡಬಹುದಲ್ಲ ಎಂದು.

‘ಕತ್ತಲೆಯಾಯಿತಲ್ಲ. ಇವತ್ತು ರಾತ್ರೆ ಇಲ್ಲೇ ತಂಗಿ, ನಸುಕಿನಲ್ಲೆದ್ದು ಮುಂದೆ ಹೊರಡಿ’ ಎಂದು ಕೈಮರದವರು ಮಾಡಿದ ಉಪಚಾರಕ್ಕೆ ಬ್ರಾಹ್ಮಣರು ಬೇಡವೆನ್ನಲಿಲ್ಲ. ಆದರೆ ನಸುಕಿನಲ್ಲೆದ್ದಾಗ ದಾಸಾಚಾರ್ಯ ಜ್ವರ ಬಂದು ಹಾಸಿಗೆ ಹಿಡಿದ್ದ. ಎಬ್ಬಿಸಹೋದರೆ ಅವನಿಗೆ ಧ್ಯಾಸವೇ ಇರಲಿಲ್ಲ. ತುಂಬ ಉಂಡು ಅಜೀರ್ಣವಾಗಿರಬೇಕೆಂದು ಗರುಡಾಚಾರ್ಯ ಸಮಾಧಾನ ಹೇಳಿದ. ಪಾಪ! ಅವನಿಗೆ ಆರಾಧನೆಯ ಊಟ ತಪ್ಪಿತಲ್ಲ ಎಂದು ಬಡ ಬ್ರಾಹ್ಮಣರು ಕೊರಗಿದರು. ಅವಸರವಾಗಿ ಎದ್ದು ಮುಖ ತೊಳೆದು ಅವಲಕ್ಕಿ-ಮೊಸರು ತಿಂದು, ನಿಧಾನವಾಗಿ ಇಪತ್ತು ಮೈಲಿನಡೆದು ಕತ್ತಲಾಗುವ ಹೊತ್ತಿಗೆ ಇನ್ನೊಂದು ಅಗ್ರಹಾರವನ್ನು ತಲ್ಪಿದರು. ಅವತ್ತು ರಾತ್ರೆ ಅಲ್ಲೇ ಊಟಮಾಡಿ ನಸಿಕಿನಲ್ಲೆದ್ದಾಗ ಪದ್ಮನಾಭಾಚಾರ್ಯ ಜ್ವರ ಏರಿ ಮಲಗಿದ್ದ. ನಡೆದ ಆಯಾಸವಿರಬೇಕೆಂದು ಅವನನ್ನು ಅಲ್ಲೆ ಬಿಟ್ಟು ಮತ್ತೆ ಹತ್ತು ಮೈಲಿ ನಡೆದು ಮಠವನ್ನು ತಲ್ಪುವಾಗ ಮಧ್ಯಾಹ್ನದ ಪೂಜೆಗೆ ನಗಾರಿಬಾರಿಸುತ್ತಿತ್ತು.