ರಾತ್ರೆ ಬಹಳ ಹೊತ್ತಾದಮೇಲೂ ಪ್ರಾಣೇಶಾಚಾರ್ಯರು ಬರದಿದ್ದುದನ್ನು ಕಂಡು ಕಂಗಾಲಾದ ಬ್ರಾಹ್ಮಣರು ಬಾಗಿಲು ಕಿಟಕಿಗಳನ್ನೆಲ್ಲ ಭದ್ರವಾಗಿ ಮುಚ್ಚಿ, ಕರುಳನ್ನು ಕಿತ್ತು ಬಾಯಿಗೆ ತರುವ ನಾತದಲ್ಲಿ ಮೂಗು ಮುಚ್ಚಿಕೊಂಡು ಮಲಗಿದರು. ನಿದ್ದೆ ಬರಲಿಲ್ಲ. ಹಸಿವಿನಲ್ಲಿ, ಭೀತಿಯಲ್ಲಿ ತಣ್ಣನೆಯ ನೆಲದ ಮೇಲೆ ಹೊರಳಿದರು. ಇನ್ನೊಂದು ಲೋಕದಿಂದೆಂಬಂತೆ ರಾತ್ರೋ ರಾತ್ರಿ ಹೆಜ್ಜೆಗಳ ಸಪ್ಪಳ, ಗಾಡಿಯ ಗಾಲಿಯ ಶಬ್ದ, ಲಕ್ಷ್ಮೀದೇವಮ್ಮನ ಈಳಿಡುವ ನಾಯಿಯ ಹಾಗಿನ ದಾರುಣವಾದ ಕೂಗು, ತೇಗು – ಪ್ರಾಣ ಕಂಪಿಸಿದಂತೆ, ಅಗ್ರಹಾರ ನಿರ್ಜನ ಅರಣ್ಯವಾದಂತೆ, ಕಾಯುವ ದೈವ ಕೈಬಿಟ್ಟ ಹಾಗೆ ಎಂದೆಲ್ಲ ಅನ್ನಿಸಿ ಮನೆಮನೆಯಲ್ಲೂ ಮಕ್ಕಳು, ತಾಯಿ, ತಂದೆಯವರು ಒಂದೊಂದು ಮುದ್ದೆಯಾಗಿ ಒಬ್ಬರನ್ನೊಬ್ಬರು ತಬ್ಬಿಕೊಂಡು ಕತ್ತಲ್ಲಲ್ಲಿ ನಡುಗಿದರು. ಕತ್ತಲು ಕಳೆದು ಸೂರ್ಯರಶ್ಮಿ ಸೂರಿನ ತೂತುಗಳಿಂದ ಇಳಿದು, ಕತ್ತಲಿನ ಮನೆಗಳಲ್ಲಿ ಬೆಳಕಿನ ಪುಟ್ಟಪುಟ್ಟ ವೃತ್ತಗಳಾಗಿ ಧೈರ್ಯವನ್ನು ತಂದಮೇಲೆ ಎಲ್ಲರೂ ಮೆತ್ತಗೆ ಎದ್ದು, ಅಗಳಿ ಸರಿಸಿ ಬಾಗಿಲುಗಳಿಂದ ಇಣುಕಿದರು, ಹದ್ದು, ರಣಹದ್ದು. ಮತ್ತೆ ಮನೆಮನೆಯ ಮೇಲೂ ಕಾಗೆಗಳನ್ನು ಅಟ್ಟುತ್ತ ಪಟ್ಟುಹಿಡಿದು ಕೂತ ಹದ್ದು. ಉಸ್ಸೆಂದರು. ಚಪ್ಪಾಳೆ ತಟ್ಟಿದರು. ಏನು ಮಾಡಿದರೂ ಜಗ್ಗದಿದ್ದುದನ್ನು ಕಂಡು ಹತಾಶರಾಗಿ ಶಂಖಗಳನ್ನೂದಿ ಕಂಚಿನ ಗಂಟೆ ಬಾರಿಸಿದರು. ದ್ವಾದಶಿಯ ಹಾಗೆ ಬೆಳಗಿನ ಜಾವ ಮಂಗಳ ಸ್ವರ ಕೇಳಿ ಪ್ರಾಣೇಶಾಚಾರ್ಯ ಹೊರಗೆ ಬಂದು ನೋಡಿ ವಿಹ್ವಲಿತರಾದರು : ತನಗೆ ಪತ್ತೆಯಾಗದ ಗಡಿಬಿಡಿಯಲ್ಲಿ, ಏನು ಮಾಡಲಿ ಏನು ಮಾಡಲಿ ಎಂದು ಬೆರಳುಗಳನ್ನು ಮುರಿಯುತ್ತ ಒಳಗಿನಿಂದ ಹೊರಕ್ಕೆ, ಹೊರಗಿನಿಂದ ಒಳಕ್ಕೆ, ಸಂಚರಿಸಿದರು, ಊಟದ ಮನೆಯಲ್ಲಿ ನರಳುತ್ತಿದ್ದ ಹೆಂಡತಿಗೆ ಯಥಾ ರೀತಿ ಔಷಧಿಯನ್ನು ಕೊಡುವಾಗ ಕೈ ನಡುಗಿ ಔಷಧಿ ಚೆಲ್ಲಿತ್ತು. ಸ್ವಪ್ನದಲ್ಲಿ ರುಯ್ಯನೆ ತಳವಿಲ್ಲದ ಪಾತಾಳಕ್ಕೆ ಕಂತುತ್ತಿದ್ದೇನೆ ಎನ್ನುವ ಅನುಭವವಾದಾಗ ಸರಕ್ಕನೆ ನಿದ್ದೆಯಲ್ಲಿ ಕಾಲುಗಳನ್ನು ಮೇಲಕ್ಕೆಳೆದುಕೊಂಡು ಮಡಚಿಕೊಳ್ಳುವಂತಹ ಅನುಭವವಾಯಿತು. ತನ್ನ ಕರ್ತವ್ಯದ, ಗೃಹಸ್ಥ ಧರ್ಮದ, ಆತ್ಮ ತ್ಯಾಗದ ಸಂಕೇತವಾಗಿದ್ದ ಜರ್ಜರಳಾದ ಹೆಂಡತಿಯ ಗುಳಿಬಿದ್ದ ಕಣ್ಣುಗಳ ದೃಷ್ಟಿ, ದಿಕ್ಕಿಲ್ಲದೆ ನೋಟವನ್ನು, ಅವಳ ತುಟಿಗೆ ಮದ್ದನ್ನು ಹಿಡಿದಾಗ ಕಂಡು ಕಾಲು ಶತಮಾನದ ರೋಗಿ-ವೈದ್ಯಬಾಂಧವ್ಯದ ಪಶ್ಚತ್ತಾಪದ ಸವೆದ ಹಾದಿಯ ಕೊನಿಯಲ್ಲೊಂದು ಪಾತಾಳ ಕಂಡಂತಾಯಿತು. ಹೇಸಿಗೆಯಲ್ಲಿ ಕಂಪಿಸಿದರು, ಮೂಗಿಗಡರಿದ್ದ ದುರ್ನಾತವೆಲ್ಲ ಈ ಮೂಲದಿಂದಲೇ ಬರುತ್ತಿದೆಯೇನೋ ಎಂದು ಭ್ರಮಿಸಿದರು. ಅವಚಿಕೊಂಡಿದ್ದ ತಾಯಿಯ ಹೊಟ್ಟೆಯಿಂದ ಟೊಂಗೆಗೆ ಹಾರುವಾಗ ಕೈ ತಪ್ಪಿದ ಮಂಗನ ಮರಿಯಂತೆ – ತಾನು ಇಷ್ಟರವರೆಗೆ ಅವಚಿಕೊಂಡಿದ್ದ ಸಂಸ್ಕಾರ ಕರ್ಮಗಳಿಂದ ಕಳಚಿಬಿದ್ದೆ ಎನ್ನಿಸಿತು. ನಿರ್ಜೀವಿಯಾಗಿ, ದೈನ್ಯದ ಭಿಕ್ಷುಕಿಯಾಗಿ ಅಲ್ಲಿ ಹಾಸಿಗೆ ಹಿಡಿದು ಮಲಗಿದ್ದ ಹೆಂಡತಿಯನ್ನು ರಕ್ಷಸುವುದಕ್ಕೆಂದು ಧರ್ಮವನ್ನು ನಾನಾಗಿ ಅವಚಿಕೊಂಡನೋ ಅಥವಾ ಸಂಸ್ಕಾರದಿಂದ ಕರ್ಮದಿಂದ ಬಂದ ಧರ್ಮ ಕೈಹಿಡಿದು ನನ್ನನ್ನು ಈ ದಾರಿಯಲ್ಲಿ ನಡೆಸಿತೋ ಎಂದು ಅನುಮಾನವಾಯಿತು. ಇವಳನ್ನು ಮದುವೆಯಾದಾಗ ನನಗೆ ಹದಿನಾರು ವರ್ಷ. ಅವಳಿಗೆ ಹನ್ನೆರಡು ವರ್ಷ. ಸನ್ಯಾಸಿಯಾಗಬೇಕು. ಇಲ್ಲವೆ ತ್ಯಾಗದ ಬಾಳನ್ನು ನಡೆಸಬೇಕೆಂಬ ಹುಳಿ ಛಲದ ಬಾಲಕ ಬೇಕೆಂದೇ ಹುಟ್ಟಿನಿಂದ ರೋಗಿಯಾಗಿದ್ದ ಅವಳನ್ನು ಮದುವೆಯಾದೆ. ಕೃತಜ್ಞರಾದ ಮಾವನ ಮನೆಯಲ್ಲೆ ಅವಳನ್ನು ಬಿಟ್ಟು, ಕಾಶಿಗೆ ಹೋಗಿ ವೇದಾಂತ ಶಿರೋಮಣಿಯಾಗಿ ಹಿಂದಕ್ಕೆ ಬಂದೆ. ನಿಷ್ಕಾಮಕರ್ಮದ ಜೀವನಾನ್ನ ನಡೆಸಲಿಕ್ಕೆ ತನಗೆ ತಾಕತ್ತುಂಟೋ ಇಲ್ಲವೋ ಎಂದು ಪರೀಕ್ಷಿಸಲಿಕ್ಕೆಂದು ಭಗವಂತ ಇಲ್ಲಿ ಇವಳನ್ನು ರೋಗಿಯಾಗಿ ಮಾಡಿ ನನ್ನ ಕೈಯಲ್ಲಿಟ್ಟಿದ್ದಾನೆಂದು ತಿಳಿದು ಹರ್ಷದಿಂದ ಅವಳ ಸೇವೆಯಲ್ಲಿ ತೊಡಗಿದೆ. ತಾನೇ ಅಡಿಗೆ ಮಾಡಿ, ಅವಳಿಗೆ ರವೆ ಗಂಜಿ ಮಾಡಿ ಕುಡಿಸಿ, ದೇವರ ಪೂಜೆ ಇತ್ಯಾದಿಗಳನ್ನು ಸಾಂಗವಾಗಿ ನಡೆಸಿ, ನಿತ್ಯ ಸಾಯಂಕಾಲ ರಾಮಾಯಣ, ಭಾರತ-ಭಾಗವತಾದಿಗಳನ್ನು ಬ್ರಾಹ್ಮಣರಿಗೆ ಓದಿ ವಿವರಿಸಿ ತನ್ನ ತಪಸ್ಸನ್ನು ಜಿಪುಣನಂತೆ ಕೂಡಿಸುತ್ತ ಬಂದೆ. ಈ ತಿಂಗಳು ಲಕ್ಷ ಗಾಯತ್ರಿ, ಮುಂದಿನ ತಿಂಗಳು ಇನ್ನೊಂದು ಲಕ್ಷ ಗಾಯತ್ರಿ, ಏಕಾದಶಿ ಇನ್ನೆರಡು ಲಕ್ಷ-ಕೋಟಿಕೋಟಿ ಹೀಗೆ ತುಳಸಿಮಣಿಸರದಲ್ಲಿ ಮಣಿಮಣಿಗೆ ತಪಸ್ಸಿನ ಲೆಖ್ಖ ಮಾಡಿದೆ. ಒಬ್ಬ ಸ್ಮಾರ್ತ ಪಂಡಿತ ಒಮ್ಮೆ ಬಂದು ವಾದಿಸಿದ್ದ: ಸಾತ್ವಿಕರಿಗೆ ಮಾತ್ರ ಮೋಕ್ಷಪ್ರಾಪ್ತಿ ಎನ್ನುವ ಭೇದಭಾವದ ನಿಮ್ಮ ಮತ ನಿರಾಶಾವಾದವಲ್ಲವೆ? ಅದಕ್ಕೆ ಆಚಾರ್ಯರು ತರ್ಕಮಾಡಿದ್ದರು: ನಿರಾಶಾ ಎಂದರೆ ಏನು? ಯಾವುದಕ್ಕಾದರೂ ಆಸೆಪಟ್ಟು ಅದು ಸಿಗದೇ ಹೋಗೋದು ತಾನೆ? ತಾಮಸ ಪ್ರವೃತ್ತಿಗೆ ಮೋಕ್ಷದ ಆಸೆಯೇ ಇಲ್ಲದ್ದರಿಂದ ಅವನಿಗೆ ಮೋಕ್ಷಪ್ರಾಪ್ತಿಯಾಗದೇ ಹೋಗೋದು ನಿರಾಶಾ ಅಲ್ಲ. ನಾನು ಸಾತ್ವಿಕ ಆಗುತ್ತೇನೆ ಎಂಬೋದು ಸುಳ್ಳು; ನಾನು ಸಾತ್ವಿಕ ಆಗಿದ್ದೇನೆ ಎಂಬೋದು ಮಾತ್ರ ನಿಜ. ಪರಮಾತ್ಮನ ದಯಾಕ್ಕೆ ಹಲುಬೋರು ಈ ಸಾತ್ವಿಕ ಸ್ವಭಾವದವರು ಮಾತ್ರ.

ಹಾಗೇ ತಾನು ಸಾತ್ವಿಕನಾಗಿ ಹುಟ್ಟಿದ್ದೇನೆ, ಈ ರೋಗಗ್ರಸ್ತ ಹೆಂಡತಿ ತನ್ನ ಸಾತ್ವಿಕತೆಯ ಯಜ್ಞಭೂಮಿ ಎಂದು ತಿಳಿದು ಅವರು ಮೋಕ್ಷದ ಕೃಷಿಯಲ್ಲಿ ತೊಡಗಿದ್ದರು. ಹಾಗೇ ನಾರಣಪ್ಪ ತಮ್ಮ ಸಾತ್ವಿಕತೆಗೊಂದು ಪರೀಕ್ಷೆ ಎಂದು ತಿಳಿದಿದ್ದರು. ಈಗ ಅವರಿಗೆ ತನ್ನ ಸರ್ವಸ್ವ ನಂಬಿಕೆಗಳು ಬುಡಮೇಲಾಗಿ ಹದಿನಾರನೇ ವಯಸ್ಸಿನಲ್ಲಿ ತಾನು ಹೊರಟಲ್ಲಿಗೇ ಹಿಂದಕ್ಕೆ ಬಂದಂತೆ ಅನ್ನಿಸುತ್ತಿದೆ. ಎಲ್ಲಿ ದಾರಿ?

ಪಾತಾಳದ ಅಂಚಿಗೆ ಒಯ್ಯದಂತಹ ದಾರಿ ಎಲ್ಲಿ? ಕಸಿವಿಯಾಗಿ ಹೆಂಡತಿಯ ಪಕ್ಕದಲ್ಲಿ ಕೂತು ಸ್ನಾನ ಮಾಡಿಸಲೆ ಎಂದು ನಿತ್ಯದಂತೆ ಎತ್ತಿ, ಶಂಖ ಜಾಗಟೆಗಳ ಅಪದ್ಧ ಕ್ರಿಯೆಯಿಂದ ಬಾಧಿತರಾಗಿ, ಬಚ್ಚಲಿಗೆ ತೆಗೆದುಕೊಂಡು ಹೋಗಿ ನಿರನ್ನು ಹೊಯ್ಯುವಾಗ ಅವಳ ಬತ್ತಿದ ಎದೆ, ಗುಜ್ಜು-ಮೂಗು, ಮೋಟು-ಜಡೆ ಕಂಡು ಅಸಹ್ಯವಾಯಿತು. ಹದ್ದುಗಳನ್ನು ಅಟ್ಟಲೆಂದು ಶಂಖಜಾಗಟೆಗಳ ಮಂಗಳ ಶಬ್ದ ಮಾಡುತ್ತಿದ್ದ ಬ್ರಾಹ್ಮಣರಿಗೆ ‘ನಿಲ್ಲಿಸಿ ನಿಲ್ಲಿಸಿ’ ಎಂದು ಕಿರುಚಿಬಿಡಬೇಕೆನ್ನಿಸಿತು. ಪ್ರಥಮ ಬಾರಿಗೆ ತನ್ನ ಕಣ್ಣಿಗೆ ಸುಂದರ-ಅಸುಂದರದ ಕಲ್ಪನೆ ಬರಹತ್ತಿದೆ. ಈ ತನಕ ಕಾವ್ಯದಲ್ಲಿ ಓದಿದ್ದ ಸೌಂದರ್ಯವನ್ನ ಅವರು ಜೇವನದಲ್ಲಿ ಅಪೇಕ್ಷಿಸಿದ್ದಿಲ್ಲ. ಸುಗಂಧವೆಲ್ಲ ದೇವರ ಮುಡಿಯನ್ನು ಸೇರವ ಹೂವಿನದ್ದು, ಸ್ತ್ರೀಸೌಂದರ್ಯವೆಲ್ಲ ನಾರಾಯಣನ ಪಾದಸೇವೆಯನ್ನು ಮಾಡುವ ಲಕ್ಷ್ಮಿಯದ್ದು, ರತಿಯೆಲ್ಲ ವಸ್ತ್ರಾಪಹರಣದ ಕೃಷ್ಣನದ್ದು ಎಂದುಕೊಂಡಿದ್ದರು. ಅವೆಲ್ಲದರಲ್ಲಿ  ಒಂದು ಪಾಲು ಈಗ ತನಗೂ ಬೇಕೆನ್ನಿಸುತ್ತದೆ. ಹೆಂಡತಿಯ ಮೈಯನ್ನು ಒರಸಿ, ಹಾಸಿಗೆ ಮಾಡಿ ಮಲಗಿಸಿ ಮತ್ತೆ ಚಿಟ್ಟೆಗೆ ಬಂದರು. ಶಂಖ ಜಾಗಟೆಗಳ ಶಬ್ದ ಗಕ್ಕನೆ ನಿಂತು ಕಿವಿ ಗೊಯ್ಯೆಂದು ಮೌನದ ಮಡುವಿಗೆ ಇಳಿದಂತಾಯಿತು. ಇಲ್ಲಿಗೆ ಯಾಕೆ ಬಂದೆ? ಚಂದ್ರಿ ಇಲ್ಲಿದ್ದಾಳೋ ಎಂದು ಬಯಸಿ ಬಂದನೆ? ಆದರೆ ಚಂದ್ರಿ ಅಲ್ಲಿ ಇರಲಿಲ್ಲ. ಹಾಸಿಗೆ ಹಿಡಿದವಳು, ಕಾಡಿನಲ್ಲಿ ಗಕ್ಕನೆ ನನ್ನ ಕೈಯನ್ನು ಮೊಲೆಗೊತ್ತಿಕೊಂಡವಳು- ಇಬ್ಬರೂ ನನ್ನನ್ನು ಬಿಟ್ಟುಹೋದರೆ? ಪ್ರಥಮ ಬಾರಿಗೆ, ಅತಂತ್ರ ಅನಾಥ ಭಾವ ಅವರ ಅಂತರಂಗವನ್ನು ಹೊಕ್ಕಿತು.

ಹದ್ದುಗಳನ್ನು ಓಡಿಸಿದ ಬ್ರಾಹ್ಮಣರೆ ಪ್ರೇತಕಳೆಯ ತಮ್ಮ ಮುಖಗಳನ್ನು ಎತ್ತಿ, ಒಟ್ಟಾಗಿ ಬಂದು ಚಿಟ್ಟೆಯನ್ನು ಹತ್ತಿ ಪ್ರಶ್ನಾರ್ಥಕವಾಗಿ ಪ್ರಾಣೇಶಾಚಾರ್ಯರ ಮುಖ ನೋಡಿದರು. ಆಚಾರ್ಯರು ಉತ್ತರಿಸದೆ ವಿಲಂಬ ಮಾಡುತ್ತಿದ್ದುದು ಕಂಡು ಅವರಿಗೆ ದಿಗಿಲಾಯಿತು. ತನ್ನಿಂದ ಮಾರ್ಗದರ್ಶನವನ್ನು ಬಯಸಿ, ತಮ್ಮ ಬ್ರಾಹ್ಮಣ್ಯವನ್ನೆಲ್ಲ ಗಂಟುಕಟ್ಟಿ ತನ್ನ ತಲೆಯ ಮೇಲೆ ಹೊರೆಸಿ – ಅನಾಥರಂತೆ ತನ್ನನ್ನು ನೋಡುತ್ತಿದ್ದ ಕಣ್ಣುಗಳನ್ನು ಕಂಡು ಆಚಾರ್ಯರಿಗೆ ಪಶ್ಚಾತ್ತಾಪದ ಜೊತೆಗೆ ಮಾರ್ಗದರ್ಶನ ಮಾಡಬೇಕಾದ ತನ್ನ ಜವಾಬ್ದಾರಿ, ಅಧಿಕಾರ ನಾಶವಾಗಿ ತಾನು ಸ್ವತಂತ್ರನಾದೆ ಎಂದು ಹಗುರೆನ್ನಿಸಿತು. ನಾನು ಯಾತರವ? ನಿಮ್ಮ ಹಾಗೇ ಒಬ್ಬ ಕೇವಲ ಮನುಷ್ಯ – ರಾಗ ದ್ವೇಷಯುಕ್ತವಾದ ಪ್ರಾಣಿ – ಎನ್ನಿಸಿ ಹರ್ಷವಾಯಿತು. ಇದು ವಿನಯವೇ,  ಅಹಂಕಾರ ಭಂಗವಾದ ಲಕ್ಷಣವೇ, ತನ್ನ ಮೊದಲನೆಯ ಪಾಠವೇ – ಆಶೋದಯವಾದಂತಾಯಿತು, ‘ಚಂದ್ರಿ – ಇಲ್ಲಿ ಬಾ, ಹೇಳು. ನನ್ನನ್ನು ಸಂಕೋಲೆಗಳಿಂದ ಪಾರುಮಾಡು. ಗುರುತ್ವದ ಹೊರೆ ಇಳಿಸು’  ಎಂದು ಮನಸ್ಸಿನಲ್ಲೇ ಅಂದುಕೊಂಡು ಸುತ್ತ ಹುಡುಕಿದರು. ಇಲ್ಲ – ಅವಳು ಇಲ್ಲ. ಇಲ್ಲಿ ಎಲ್ಲೂ ಇಲ್ಲ. ಊರ್ವಶಿಯ ಹಾಗೆ ನಡೆದುಬಿಟ್ಟಳು. ತಾನಾಗಿ ಬಾಯಿಬಿಟ್ಟು ಹೇಳಲು, ನಾರಣಪ್ಪ ಪಟ್ಟ ಸುಖದಲ್ಲಿ ನಾನೂ ಪಾಲು ಪಡೆದೆ ಎಂದು ಬಾಯಾರೆ ಅಂದುಬಿಡಲು ದಿಗಿಲಾಯಿತು. ಕೈ ಬೆವತು ತಣ್ಣಗಾಯಿತು. ಮನುಷ್ಯ ಮಾತ್ರದವನಿಗೆ ಸಹಜವಾದ ಸುಳ್ಳು ಹೇಳಬೇಕು, ಮುಚ್ಚಿಟ್ಟುಕೊಳ್ಳಬೇಕು, ಸ್ವಕ್ಷೇಮ ಚಿಂತನೆ ಮಾಡಿಕೊಳ್ಳಬೇಕು ಎಂಬ ಆಸೆ ಪ್ರಥಮ ಬಾರಿಗೆ ಉತ್ಪನ್ನವಾಯಿತು.  ಇವರು ನನ್ನಲ್ಲಿ  ಇಟ್ಟ ನಂಬಿಕೆ, ಗೌರವಗಳನ್ನು ಆಘಾತಗೊಳಿಸುವ ದೈರ್ಯ ಒಳಗೆ ಇಲ್ಲ. ಇದು ಪಶ್ಚಾತ್ತಾಪವೋ, ಸ್ವಕ್ಷೇಮ ಚಿಂತನೆಯೋ, ರೂಢಿಯೋ, ತಮಸ್ಸೋ, ದಗವೋ – ಹೃದ್ಗತವಾದ ಅಭ್ಯಾಸ ಬಿದ್ದ ಮಂತ್ರ ಮನಸ್ಸನ್ನು ಸುಳಿಯಿತು: ‘ಪಾಪೋಹಂ, ಪಾಪಕರ್ಮೋಹಂ, ಪಾಪಾತ್ಮಾ, ಪಾಪ ಸಂಭವಃ.’ ಇಲ್ಲ ಇಲ್ಲ, ಅದು ಕೂಡ ಸುಳ್ಳು. ಮೊದಲು ಹೃದ್ಗತವಾದ ಮಂತ್ರಳನ್ನೆಲ್ಲ ಮರೆಯಬೇಕು; ಬಾಲಕನಂತೆ ಜಳಜಳ ಮನಸ್ಸಿನವನಾಗಬೇಕು. ಚಂದ್ರಿಯ ಮೊಲೆಗಳನ್ನು ಹಿಸುಕುವಾಗ ಪಾಪೋಹಂ ಎಂದು ಅನಿಸಲಿಲ್ಲ. ಈಗ ಚಂದ್ರಿ ಇಲ್ಲಿ ತನ್ನ ಮಾನ ತೆಗೆಯಲು ಇಲ್ಲವೆಂದು ಸಂತೋಷವೇ ಆಗುತ್ತಿದೆ. ಎಚ್ಚೆತ್ತಮೇಲೆ ಬರುವ ಭಾವನೆ ಬೇರೆ, ಎಚ್ಚರ ತಪ್ಪಿದಾಗ ಅನ್ನಿಸುವುದು ಬೇರೆ. ಇಬ್ಬಂದಿ ಈ ಬಾಳೆಂದು ಅರಿವಾಯಿತು. ಈಗ ನಾನುನಿಜವಾಗಿ ಕರ್ಮಚಕ್ರದಲ್ಲಿ ತೊಡಗಿದ್ದೇನೆ ಎನ್ನಿಸಿತು. ಈ ಸಂಕಟ ನಿವಾರಣೆಗೆ ಮತ್ತೆ ಅರಿವುಗೆಟ್ಟು ಅವುಗಳನ್ನು ಅವುಚಿಕೋಬೇಕು, ಸಂಕಟದಲ್ಲಿ ಎಚ್ಚರವಾಗಬೇಕು, ನಿವಾರಣೆಗೆ ಅವಳ ಬಳಿಯೇ ಹೋಗಬೇಕು. ಚಕ್ರ, ಕರ್ಮಚಕ್ರ. ಇದು ರಜಸ್ಸು. ಕಾಮವನ್ನು ನಾನು ಬಿಟ್ಟರೂ ಕಾಮ ನನ್ನನ್ನು ಬಿಡಲಿಲ್ಲ.

ಕಸಿವಿಸಿಯಾಗಿ ಬಾಯಲ್ಲಿ ಮಾತು ಹೊರಡದೆ, ಕೂತ ಬ್ರಾಹ್ಮಣರನ್ನೆಲ್ಲ ಬಿಟ್ಟು, ದೇವರ ಕೋಣೆಗೆ ಹೋದರು. ನಾಮಸ್ಮರಣೆ ಮಾಡಿದರು- ಅಭ್ಯಾಸದಂತೆ, ನಿಜ ಹೇಳದಿದ್ದರೆ – ಮಡಿಲಿನಲ್ಲಿ ಕಟ್ಟಿಕೊಂಡ ಕೆಂಡದಂತುರಿದರೆ… ಇನ್ನು ಮುಂದೆ ನಾನೆಂದೂ ಮಾರುತಿಯ ಮುಖ ನೋಡಲಾರೆ, ನಿಷ್ಕಲ್ಮಷ ಮನಸ್ಸಿನಿಂದ ರೋಗಗ್ರಸ್ತಳನ್ನು ಉಪಚರಿಸಲಾರೆ, ದೇವರೇ, ಈ ತಳಮಳದಿಂದ ಪಾರುಮಾಡಪ್ಪ, ಚಂದ್ರಿ ಬಂದಿದ್ದಾಳೋ, ಹೇಳಿಬಿಡುತ್ತಾಳೋ – ಎಂದು ಕಾತರದಿಂದ, ಭಯದಿಂದ ಹೊರಗೆ ಬಂದರು. ಬ್ರಾಹ್ಮಣರು ಕಾದೇ ಇದ್ದರು. ಮತ್ತೆ ರಣಹದ್ದುಗಳು ಬಂದು ಮನೆಗಳಮೇಲೆ  ಕೂತಿದ್ದವು. ಆಚಾರ್ಯರು ಕಣ್ಣು ಮುಚ್ಚಿ ಉಸಿರೆಳೆದು ಧೈರ್ಯ ತಂದುಕೊಂಡರು. ಆದರೆ ಹೊರಟ ಮಾತು ಮಾತ್ರ:

‘ನಾನು ಸೋತೆ, ಮರುತಿಯ ಅಪ್ಪಣೆ ದೊರೆಯಲಿಲ್ಲ. ನನಗೆ ಏನೂ ತಿಳಿಯದು. ಈಗ ನೀವು ನಿಮ್ಮ ಮನಸ್ಸಿಗೆ ಅನ್ನಿಸಿದಂತೆ ಮಾಡಿ.’

ಬ್ರಾಹ್ಮಣರೆಲ್ಲರೂ ಅವಾಕ್ಕಾಗಿ ‘ಹಾ’ ಎಂದರು. ‘ಛೆ ಛೆ’ ಎಂದ ಗರುಡಾಚಾರ್ಯ. ಹಿಂದಿನ ದಿನ ಹೊಟ್ಟೆ ತುಂಬ ಉಂಡಿದ್ದರಿಂದ ಸ್ವಲ್ಪ ಜೀವವಿದ್ದ ದಾಸಾಚಾರ್ಯ ಹೇಳಿದ:

‘ಏನು ಮಾಡೋಣ ಹಾಗಾದರೆ? ಕೈಮರದ ಅಗ್ರಹಾರಕ್ಕೆ ಹೋಗುವ. ಅಲ್ಲಿ ಪಂಡಿತ ಸುಬ್ಬಣ್ಣಾಚಾರ್ಯರನ್ನು ಕೇಳಿ ನೋಡುವ. ನಮ್ಮ ಆಚಾರ್ಯರಿಗೆ ತಿಳಿಯದಿದ್ದುದು ಅವರಿಗೆ ತಿಳಿಯುತ್ತೆ ಎಂದಲ್ಲ. ಅವರಿಗೂ ತಿಳಿಯದೇ ಹೋದ ಪಕ್ಷದಲ್ಲಿ ನಡೆದು ಸೀದ ಮಠಕ್ಕೆ ಹೋಗಿ ಸ್ವಾಮಿಗಳನ್ನೇ ಕೇಳಿಬಿಡುವ. ಈ ದುರ್ನಾತದಲ್ಲಿ ಶವಾನ್ನ ಇಟ್ಟುಕೊಂಡು ಊಟ ಉಪಾಹಾರವಿಲ್ಲದೆ ಅಗ್ರಹಾರದಲ್ಲಿ ಬಿದ್ದಿರಲಿಕ್ಕಾಗುತ್ತದ? ಗುರುದರ್ಶನವಾದ ಹಾಗೂ  ಆಯಿತು. ಅಲ್ಲದೆ ತ್ರಯೋದಶಿ ದಿನ ಮಠದಲ್ಲಿ ಆರಾಧನೆ ಬೇರೆ ಇದೆ. ಏನೂಂತೀರ? ಕೈಮರಕ್ಕೆ ನಡೆದು ಯಜ್ಞೋಪವೀತ ಬದಲಾಯಿಸುವ.  ಅಲ್ಲಿ ಬ್ರಾಹ್ಮಣರು ಊಟಕ್ಕೇಳಿ ಎನ್ನದೇ ಇರುತ್ತಾರ? ಹೆಣವಿರುವ ಅಗ್ರಹಾರದಲ್ಲಿ ಊಟಮಾಡಬಾರದೆಂದು ನಿಯಮವೇ ಹೊರತು ಕೈಮರದಲ್ಲಿ ಏನು ದೋಷ? ಏನೂಂತೀರ?’

ಎಲ್ಲ ಬ್ರಾಹ್ಮಣರೂ ಸರಿ ಸರಿ ಎಂದು ಒಪ್ಪಿದರು. ಲಕ್ಷ್ಮಣಾಚಾರ್ಯ ನೆನೆಸಿಕೊಂಡ : ಕೈಮರದಲ್ಲಿ ವೆಂಕಣ್ಣಾಚಾರ್ಯ ಒಂದು ನೂರ ದೊನ್ನೆ ಒಂದು ಸಾವಿರ  ಒಣಗಿದೆಲೆ ಬೇಕು ಎಂದಿದ್ದ. ತೆಗೆದುಕೊಂಡು ಹೋಗಿ ಕೊಟ್ಟ ಹಾಗೂ ಆಯಿತು. ಗರುಡಾಚಾರ್ಯನಿಗೂ ಶ್ರೀಗುರುಗಳ ಹತ್ತಿರ ಸ್ವಲ್ಪ ವ್ಯವಹಾರದ ಮಾತೂ ಇತ್ತು. ಪ್ರಾಣೇಶಾಚಾರ್ಯರಿಗೆ ಈ ಸೂಚನೆಯಿಂದ ದೊಡ್ಡದೊಂದು ಭರ ಇಳಿದು ಆಯಾಸ ಪರಿಹಾರವಾದಂತಾಯಿತು.

ದಾಸಾಚಾರ್ಯ ತನ್ನ ಮಾತನ್ನು ಎಲ್ಲರೂ ಒಪ್ಪಿದ್ದು ಕಂಡು ಹರ್ಷಿತನಾಗಿ ಎಂದ:

‘ಮೂರು ದಿನವಾದರೂ ನಾವು ಅಗ್ರಹಾರ ಬಿಟ್ಟಿರಬೇಕಾಗುತ್ತೆ. ಹೆಂಗಸರು ಮಕ್ಕಳ ಗತಿ ಏನು. ಸದ್ಯಕ್ಕೆ ಅವರನ್ನು ತೌರಿಗೆ ಕಳಿಸುವ?’

ಇದಕ್ಕೆ ಎಲ್ಲರೂ ಒಪ್ಪಿದರು.