ಆರಾಧನೆಯ ಊಟವಾಗುವ ತನಕ ಅಮಂಗಳವನ್ನು ಆಡಕೂಡದೆಂದು ಬ್ರಾಹ್ಮಣರು ಮೌನವಾಗಿದ್ದು ಸ್ವಾಮಿಗಳಿಂದ ತೀರ್ಥ ಪಡೆದು, ಭಕ್ಷ್ಯಭೋಜ್ಯ ಪಾಯಸದ ಊಟವನ್ನು ಮಾಡಿ ಮುಗಿಸಿದರು. ಬರೇ ಒಂದೊಂದಾಣೆ ದಕ್ಷಿಣೆಯನ್ನು ಗುರುಗಳು ಕೊಟ್ಟಿದ್ದರಿಂದ ಲಕ್ಷ್ಮಣಾಚಾರ್ಯನಿಗೆ ನಿರಾಶೆಯಾಯಿತು – ಏನು ಜಿಪುಣರು ಈ ಯತಿ ಎಂದು ಗೊಣಗಿಕೊಳ್ಳುತ್ತ ಸೊಂಟಕ್ಕೆ ಸಿಕ್ಕಿಸಿಕೊಂಡ. ಮಕ್ಕಳಿಲ್ಲ, ಮರಿಯಿಲ್ಲ; ಆದರೂ ದುಡ್ಡೆಂದರೆ ಪ್ರಾಣಬಿಡುತ್ತಾರೆ. ಊಟ ಮುಗಿದಮೇಲೆ ಮಠದ ಪ್ರಾಂಗಣದಲ್ಲಿ ತಂಪಾದ ಸಿಮೆಂಟು ನೆಲದ ಮೇಲೆ ಕೂತ ಬ್ರಾಹ್ಮಣರ ನಡುವೆ ಕುರ್ಚಿಯ ಮೇಲೆ ಸ್ವಾಮಿಗಳು ಕಾವಿ ಶಾಟಿಯುಟ್ಟು, ತುಳಸಿಮಣಿಸರ ಧರಿಸಿ ಅಂಗಾರ ಅಕ್ಷತೆಯಿಟ್ಟು ರಕ್ತದಲ್ಲಿ ಪುಟಿಯುವ ಗುಂಡಗಿನ ಗೊಂಬೆಯಂತೆ ಕೂತು, ತಮ್ಮ ಪುಟ್ಟ ಪುಟ್ಟ ಪಾದಗಳನ್ನು ಉಜ್ಜಿಕೊಳುತ್ತ ಕುಶಲಪ್ರಶ್ನೆ ಮಾಡಿದರು – ‘ಪ್ರಾಣೇಶಾಚಾರ್ಯ ಯಾಕೆ ಬರಲಿಲ್ಲ? ಹೇಗಿದ್ದಾರೆ: ಆರೋಗ್ಯವೇ? ಏನು, ಹೇಳಿಕೆ ತಲ್ಪಲಿಲ್ಲವೆ ಅವರಿಗೆ?’

ಗರುಡಾಚಾರ್ಯ ಗಂಟಲನ್ನು ಸರಿಮಾಡಿಕೊಂಡು ಅಮೂಲಾಗ್ರ ವಿಷಯವನ್ನು ನಿವೇದಿಸಿದ. ಗುರುಗಳು ಸಮಾಧಾನದಿಂದ ಎಲ್ಲವನ್ನೂ ಕೇಳಿಸಿಕೊಂಡು ಅನುಮಾನವೇ ಇಲ್ಲವೆಂಬಂತೆ ಅಂದರು:

‘ಅವನು ಬ್ರಾಹ್ಮಣ್ಯ ಬಿಟ್ಟರೂ ಬ್ರಾಹ್ಮಣ್ಯ ಅವನನ್ನು ಬಿಟ್ಟಂತಲ್ಲ. ಅರ್ಥಾತ್ ಶವಸಂಸ್ಕಾರ ಮಾಡೋದು ಉಚಿತವಾದ ಯೋಗ್ಯವಾದ ಕರ್ತವ್ಯ. ಆದರೆ ದೋಷ ಪರಿಹಾರಾನೂ ಆಗಬೇಕು. ತತ್ಕಾರಣವಗಿ ಅವನ ಆಸ್ತಿಪಾಸ್ತಿ ಬೆಳ್ಳಿಬಂಗಾರಗಳೆಲ್ಲ ಶ್ರೀಮಠದ ಕೃಷ್ಣದೇವರಿಗೆ ಸೇರಬೇಕು.’

ಗರುಡ ಧೈರ್ಯಮಾಡಿ ಧೋತ್ರದಿಂದ ಮುಖವನ್ನೊರಸಿಕೊಂಡ:

‘ಬುದ್ದಿ, ನನಗೂ ಅವನ ತಂದೆಗೂ ಇದ್ದ ವ್ಯಾಜ್ಯದ ವಿಷಯ ತಮಗೆ ಗೊತ್ತುಂಟಲ್ಲ, ಅವನ ತೋಟದ ಮುನ್ನೂರು ಅಡಿಕೆಮರ ಹಾಗೆ ನ್ಯಾಯವಾಗಿ ನನಗೇ…’

ಲಕ್ಷ್ಮಣಾಚಾರ್ಯ ‘ಹ್ಹ’ ಎಂದು ನಡುವೆ ಬಾಯಿಹಾಕಿದ:

‘ಬುದ್ಧಿ, ಇದರಲ್ಲೊಂದು ನ್ಯಾಯಧರ್ಮ ಬೇಡವ? ತಮಗೆ ತಿಳಿದಂತೆ ನಾರಣಪ್ಪನ ಹೆಂಡತಿಯೂ ನನ್ನ ಮನೆಯವಳೂ ಅಕ್ಕತಂಗಿಯರು…’

ಕೆಂಪಗೆ ದುಂಡಗೆ ಇದ್ದ ಸ್ವಾಮಿಗಳ ಮುಖದಲ್ಲಿ ಸಟ್ಟನೆ ಕೋಪ ಕಾಣಿಸಿಕೊಂಡಿತು:

‘ಎಂತಹ ನೀಚರಯ್ಯ ನೀವು. ದೇವರ ಸೇವೆಗೆ ಅನಾಥರ ಆಸ್ತಿಯೆಲ್ಲ ಸೇರಬೇಕಾದ್ದೆಂದು ಹಿಂದಿನಿಂದ ಬಂದ ನೇಮ. ಅವನ ಶವಸಂಸ್ಕಾರಕ್ಕೆ ನಾವು ನಿಮಗೆ ಅಪ್ಪಣೆ ಕೊಡದಿದ್ದರೆ ನೀವು ಅಗ್ರಹಾರನ್ನೇ ಬಿಡಬೇಕಾಗುತ್ತೆಂದು ನೆನಪಿಟ್ಟುಕೊಳ್ಳಿ’ ಎಂದು ಗುಡುಗಿದರು.

ತಪ್ಪಾಯಿತೆಂದು ಕ್ಷಮಾ ಯಾಚಿಸಿ ಇಬ್ಬರು ಬ್ರಾಹ್ಮಣರೂ ಉಳಿದವರ ಜೊತೆ ಸ್ವಾಮಿಗಳಿಗೆ ಅಡ್ಡಬಿದ್ದು ನಿಂತು, ತಮ್ಮೊಡನಿದ್ದ ಗುಂಡಾಚಾರ್ಯನ ಮುಖ ಕಾಣಿಸದೆ ಹುಡುಕಿದರು. ನೋಡುವಾಗ ಅವನು ಊಟ ಸಹ ಮಾಡದೆ ಜ್ವರ ಬಂದು ಮಠದ ಅಟ್ಟದ ಮೇಲೆ ಮಲಗಿಬಿಟ್ಟಿದ್ದಾನೆಂದು ತಿಳಿಯಿತು. ಶವಸಂಸ್ಕಾರದ ಅವಸರವಿದ್ದುದರಿಂದ ಊರಿನ ಮಾರ್ಗ ಹಿಡಿದು – ಗುಂಡಾಚಾರ್ಯನನ್ನು ಅಲ್ಲೇ ಬಿಟ್ಟು – ಬ್ರಾಹ್ಮಣರು ನಡೆದುಬಿಟ್ಟರು.

* * *

ಹೆಂಡತಿಯ ಶವಸಂಸ್ಕಾರದ ಮೇಲೆ ಅಗ್ರಹಾರಕ್ಕೆ ಆಚಾರ್ಯರು ಮರಳಲಿಲ್ಲ, ತಮ್ಮ ಪೆಟ್ಟಿಗೆಯಲ್ಲಿದ್ದ ಹದಿನೈದು ಜರಿಯ ಶಾಲಾಗಲಿ, ಕೂಡಿಟ್ಟ ಇನ್ನೂರು ರೂಪಾಯಿಗಳಾಗಲಿ, ಮಠದಲ್ಲಿ ಕೊಟ್ಟ ಬಂಗಾರದಲ್ಲಿ ಕಟ್ಟಿಸಿದ ತೊಳಸಿಮಣಿಸರವಾಗಲಿ ಅವರ ಧ್ಯಾನಕ್ಕೇ ಬರಲಿಲ್ಲ.

ಕಾಲು ಕೊಂಡಲ್ಲಿಗೆ ನಡೆದುಬಿಡುವುದೆಂದು ಉಟ್ಟ ವಸ್ತ್ರದಲ್ಲೆ ಪೂರ್ವಾಭಿಮುಖವಾಗಿ ನಡೆದುಬಿಟ್ಟರು.