ಅಗ್ರಹಾರದಲ್ಲೆ ಹಿರಿಯವಳಾದ ಅರವತ್ತು ದಾಟಿ ದಶಕ ಕಳೆದ ಅಜ್ಜಿ ಲಕ್ಷ್ಮೀದೇವಮ್ಮ, ಹೆಬ್ಬಾಗಿಲನ್ನು ‘ಢರ್ರೋ’ ಎಂದು ತೆಗೆದು ‘ಹೇಯ್’ ಎಂದು ತೇಗಿದಳು. ಅಗ್ರಹಾರದ ಬೀದಿಗಿಳಿದು, ಕೋಲೂರಿ ನಿಂತು, ಇನ್ನೊಮ್ಮೆ ‘ಹೇಯ್’ ಎಂದು ತೇಗಿದಳು. ನಿದ್ದೆ ಬರದಿದ್ದ ಪಕ್ಷದಲ್ಲಿ, ಅಥವಾ ಮನಸ್ಸು ವ್ಯಗ್ರಗೊಂಡಾಗ ಹೀಗೆ ಅವಳು ರಾತ್ರಾನುರಾತ್ರೆ ಅಗ್ರಹಾರದ ಬೀದಿಗೆ ಬಂದು, ಮೂರು ಸರ್ತಿ ಮೇಲಿಂದ ಕೆಳಕ್ಕೆ ಕೆಳಗಿನಿಂದ ಮೇಲಕ್ಕೆ ಅಲೆದು, ಗರುಡಾಚಾರ್ಯನ ಮನೆಯ ಎದುರು ನಿಂತು, ಅವನ ಪುತ್ರ-ಪೌತ್ರ-ಪಿತೃಗಳನ್ನೆಲ್ಲ ಕರೆದು, ದೈವ-ದೇವತೆಗಳನ್ನೆಲ್ಲ ಸಾಕ್ಷಿಗೆಳೆದು, ಹಿಡಿಹಿಡಿ ಶಾಪ ಹಾಕಿ, ತಿರುಗಿ ತನ್ನ ಮನೆಗೆ ಬಂದು ‘ಢರ್ರೋ’ ಎಂದು ಮರದ ಹೆಬ್ಬಾಗಿಲನ್ನು ಎಳೆದುಕೊಂಡು ಮಲಗುವುದು ಪದ್ಧತಿ. ಅದರಲ್ಲೂ ಅಮಾಸೆ ಹುಣ್ಣಿಮೆಗಳು ಹತ್ತಿರವಾದಂತೆ ಅವಳ ಶಪಿಸುವ ಚಟ ಉಬ್ಬರಕ್ಕೇರುತ್ತದೆ. ಅಗ್ರಹಾರದಲ್ಲಿ ಪ್ರಸಿದ್ಧವಾದ ವಿಷಯ : ಅವಳ ಬಾಗಿಲು, ಅವಳ ತೇಗು. ಎರಡೂ ಈ ತುದಿಯಿಂದ ಆ ತುದಿಗೆ ಕೇಳುತ್ತವೆ. ಅವಳ ಕೀರ್ತಿ ನಾಲ್ಕು ದಿಕ್ಕಿನಲ್ಲಿರುವ ಎಲ್ಲ ಬ್ರಾಹ್ಮಣ ಅಗ್ರಹಾರಗಳಲ್ಲೂ ಹಬ್ಬಿತ್ತು. ಬಾಲವಿಧವೆಯಾದ ಅವಳನ್ನು ಕೆಲವರು ಅವಲಕ್ಷಣದ ಲಕ್ಷ್ಮೀದೇವಮ್ಮನೆಂದು ಕರೆಯುತ್ತಾರೆ. ಅವಳು ಎದುರಾದರೆ ನಾಲ್ಕು ಹೆಜ್ಜೆ ಹಿಂದಕ್ಕೆ ನಡೆದು ಮತ್ತೆ ಪ್ರಯಾಣದಲ್ಲಿ ತೊಡಗುವ ತುಂಟ ಹುಡುಗರನ್ನು ಮತ್ತು ಬ್ರಾಹ್ಮಣರನ್ನು ಅವಳು ಕೋಲು ಬೀಸಿ ಅಟ್ಟುತ್ತಾಳೆ. ಶಾಪ ಹಾಕುತ್ತಾಳೆ. ಆದರೆ ಅವಳ ಮಾತನ್ನು ಯಾರೂ ಎಗ್ಗಿಗೆ ತೆಗೆದುಕೊಳ್ಳುವುದಿಲ್ಲ. ಹುಡುಗರು ಇವಳನ್ನು ಹುಳಿತೇಗಿನ ಲಕ್ಷ್ಮೀದೇವಮ್ಮನೆಂದು ಕರೆಯುತ್ತಾರೆ. ಆದರೆ ಪ್ರಸಿದ್ಧವಾದ ಅವಳ ಹೆಸರು ಅರೆಮರಳು ಲಕ್ಷ್ಮೀದೇವಮ್ಮನೆಂದು. ಅವಳದ್ದೊಂದು ಪರಾಣವೆ : ಎಂಟರ ಹುಡುಗಿಗೆ ಮದುವೆ. ಹತ್ತರಲ್ಲಿ ಪತಿ ವಿಯೋಗ. ಹದಿನೈದರಲ್ಲಿ ಅತ್ತೆ-ಮಾವ ಸತ್ತರು. ಅನಿಷ್ಟದ ನಕ್ಷತ್ರದವಳೆಂದು ಅಗ್ರಹಾರ ಜರಿಯಿತು. ಅವಳಿಗಿಪ್ಪತ್ತು ತುಂಬುವುದರೊಳಗೆ ಅವಳಪ್ಪ ಅಮ್ಮನೂ ‘ಗುಟಕ್’ ಎಂದುಬಿಟ್ಟರು. ಆಯಿತ? ಆಮೇಲೆ ಅವಳಿಗಿದ್ದ ಒಂದಿಷ್ಟು ಆಸ್ತಿ, ನಗ, ಗರುಡಾಚಾರ್ಯನ ತಂದೆ ವಹಿಸಿಕೊಂಡ. ತನ್ನ ಮನೆಗೇ ಅಜ್ಜಿಯನ್ನು ಕರೆಸಿಕೊಂಡು ಸಾಕಿದ. ಅವನದ್ದೆಲ್ಲ ಇಂಥದೇ ಕಾರುಭಾರು. ನಾರಣಪ್ಪನ ತಂದೆಗೆ ವಿವೇಕ ಅಷ್ಟಷ್ಟರಲ್ಲೇ ಎಂದು ಅವನ ಆಸ್ತಿಯ ವಹಿವಾಟನ್ನೂ ಹೀಗೆಯೇ ನಡೆಸಿದ್ದ. ಹೀಗೆ ಇಪ್ಪತ್ತೈದು ವರ್ಷ ಲಕ್ಷ್ಮೀದೇವಮ್ಮ ಕಾಲಯಾಪನ ಮಾಡಿದಳು. ಆಮೇಲೆ ತಂದೆ ಸತ್ತಮೇಲೆ ಗರುಡನ ಕಾರುಬಾರು ಪ್ರಾರಂಭವಾಯಿತು. ಅವನ ಹೆಂಡತಿಯೋ : ಅರೆಹೊಟ್ಟೆ ಊಟ ಹಾಕುವ ಜಿಪುಣಿ. ಲಕ್ಷ್ಮೀದೇವಮ್ಮನಿಗೂ ಅವಳಿಗೂ ಕಟಿಪಿಟ ಹತ್ತಿ ಕೈ ಕೈಯೂ ಆಯಿತು. ಗಂಡ ಹೆಂಡತಿ ಸೇರಿ ಲಕ್ಷ್ಮೀದೇವಮ್ಮನನ್ನು ಹೊರಗೆ ಹಾಕಿದರು. ಹಾಳುಬಿದ್ದ ಅವಳ ಗಂಡನ ಮನೆಗೆ ತಳ್ಳಿದರು. ಅಂದಿನಿಂದ ಒಂಟಿಯಾಗಿ ಅಲ್ಲಿ ಲಕ್ಷ್ಮೀದೇವಮ್ಮನ ವಾಸ, ವಸತಿ. ಪ್ರಾಣೇಶಾಚಾರ್ಯರ ಹತ್ತಿರ ಲಕ್ಷ್ಮೀದೇವಮ್ಮ ದೂರು ಒಯ್ದಳು. ಅವರು ಗರುಡನನ್ನು ಕರೆಸಿ ಬೋಧಿಸಿದರು. ಆಮೇಲಿಂದ ಅವ ಅವಳಿಗೆ ತಿಂಗಳಿಗೊಂದು ರೂಪಾಯಿಯಂತೆ ಕೊಡುತ್ತ ಬಂದ. ಆ ದುಡ್ಡು ಅವಳಿಗೆ ಯಾವ ಮೂಲೆಗೂ ಸಾಲದು. ಹೀಗಾಗಿ ತನ್ನ ನಗನಾಣ್ಯವನ್ನು ನುಂಗಿದವನ ಮೇಲೆ ವಿಷವಾದಳು. ಪ್ರಾಣೇಶಾಚಾರ್ಯರು ಆಗಾಗ್ಗೆ ಅಗ್ರಹಾರದ ಬ್ರಾಹ್ಮಣರಿಗೆಲ್ಲ ಬುದ್ಧಿ ಹೇಳಿ ಅವಳಿಗಷ್ಟು ಅಕ್ಕಿ ಕೊಡಿಸುತ್ತಾರೆ. ಆದರೂ ಲಕ್ಷ್ಮೀದೇವಮ್ಮನಿಗೆ ವಯಸ್ಸಾಗುತ್ತ ಬಂದಂತೆ ಮಾನವ ದ್ವೇಷ ನಂಜಿನಂತೆ ಏರುತ್ತ ಹೋಯಿತು.

ಲಕ್ಷ್ಮೀದೇವಮ್ಮ ತೇಗುತ್ತ ಗರುಡಾಚಾರ್ಯನ ಮನೆಯ ಮುಂದೆ ನಿಂತು ನಿಯತಿಯಂತೆ ತನ್ನ ಬೈಗಳಗಳನ್ನು ಪ್ರಾರಂಭಿಸಿದಳು:

‘ನಿನ್ನ ಮನೆ ಹಾಳಾಗ; ನಿನ್ನ ಕಣ್ಣು ಹೊಟ್ಟಿ ಹೋಗ; ಊರು ಹಾಳು ಮಾಡಿದವನೇ, ನಾರಣಪ್ಪನ ತಂದೆಯ ಮೇಲೆ ಮಾಟಮಾಡಿಸಿದ ಮುಂಡೇಗಂಡಾ. ಮರ್ಯಾದೆ ಇದ್ದರೆ ಎದ್ದು ಬಾರೊ. ಬಡಮುಂಡೆಯ ನಗನಾಣ್ಯವನ್ನು ನುಂಗಿದೆಯಲ್ಲ? ದಕ್ಕುತ್ತೆಂದು ತಿಳಿದ್ಯಾ? ಸತ್ತಮೇಲೆ ಭೂತವಾಗಿ ನಿನ್ನ ಮನೆ ಮಕ್ಕಳನ್ನು ಕಾಡುವವಳು ನಾನು – ತಿಳೀತ?’

ಉಸಿರೆಳೆದು ತೇಗಿ ಮತ್ತೆ ಪ್ರಾರಂಭಿಸದಳು:

‘ನಿನ್ನ ಕೃತ್ರಿಮದಿಂದ ಬಂಗಾರದಂಥ ನಾರಣಪ್ಪ ಚಾಂಡಾಲನಾದ. ಸೂಳೇನ ಕಟ್ಟಿಕೊಂಡ. ನಾವು ಬ್ರಾಹ್ಮಣರು ನಾವು ಬ್ರಾಹ್ಮಣರು ಅಂತ ಹೇಳತಿರೋರೆಲ್ಲ ಈಗ ಅವನ ಹೆಣಾನ್ನ ತೆಗೀದೇ ಕೂತಿದೀರಲ್ಲೋ. ಎಲ್ಲಿಗೆ ಹೋಯಿತೋ ನಿಮ್ಮ ಬ್ರಾಹ್ಮಣ್ಯ? ಚಾಂಡಾಲರ – ರೌರವ ನರಕಕ್ಕೆ ನೀವು ಬಿದ್ದು ಸಾಯ್ತೀರಿ, ತಿಳೀತ? ಈ ಅಗ್ರಹಾರದಲ್ಲೆ ನಾನು ಕಂಡ ಹಾಗೆ ಒಂದು ಹೆಣವನ್ನು ರಾತ್ತೆಯಲ್ಲ ಸಂಸ್ಕಾರಮಾಡದೆ ಇಟ್ಟುಕೊಂಡದ್ದು ಉಂಟ? ರಾಮ ರಾಮ! ಕಾಲ ಕೆಟ್ಟಿತಪ್ಪ ಕೆಟ್ಟಿತು. ಬ್ರಾಹ್ಮಣ್ಯ ನಾಶವಾಯಿತು. ತಲೆ ಬೋಳಿಸಿಕೊಂಡು ಮುಸಲ್ಮಾನರಾಗಿರಿ. ನಿಮಗ್ಯಾಕೆ ಬ್ರಾಹ್ಮಣ್ಯ!’

ಎಂದು ಕೋಲನ್ನು ನೆಲಕ್ಕೆ ಕುಟ್ಟಿ ಮತ್ತೆ ಉಸಿರೆಳೆದು ‘ಹೇಯ್’ ಎಂದು ತೇಗಿದಳು.

* * *

ಅಯ್ಯಯ್ಯೋ ಎಂದು ಶ್ರೀಪತಿ ನಾರಣಪ್ಪನ ಮನೆ ಜಗಲಿಯಿಂದ ಬಾಗಿಲನ್ನು ಹಾಕಿಕೊಳ್ಳಲೂ ಮರೆತು, ಜಿಗಿದು ಬೀದಿಯಲ್ಲಿ ಓಡಿದ.

ನೋಡಿರೋ ನೋಡಿರೋ ನೋಡಿರೋ ನಾರಣಪ್ಪನ ಪ್ರೇತ, ಪ್ರೇತ ಎಂದ ಅರೆಮರುಳು ಲಕ್ಷ್ಮೀದೇವಮ್ಮ ಪ್ರತಿಮನೆಯ ಕದ ತಟ್ಟಿ ಸಾರುತ್ತ ಕೋಲೂರಿಕೊಂಡು ಓಡಿದಳು. ಜೀವವನ್ನು ಕೈಯಲ್ಲಿ ಹಿಡಿದು ಹೊಳೆ ಹಾಯ್ದ ಶ್ರೀಪತಿ ಪಾರಿಜಾತಪುರದ ನಾಗರಾಜನ ಮನೆಗೆ ಓಡಿದ.

* * *

ಓಡಿಹೋದವ ಶ್ರೀಪತಿಯೆಂದು ತಿಳಿದವಳೆಂದರೆ ಪ್ರಾಣೇಶಾಚಾರ್ಯರ ಜಗುಲಿಯ ಮೇಲೆ ಮಲಗಿದ್ದ ಚಂದ್ರಿ. ಹಸಿವಿನಿಂದ ಅವಳಿಗೆ ನಿದ್ದೆ ಹತ್ತಿರಲಿಲ್ಲ. ಅವಳು ಜನ್ಮೇಪಿ ಉಪವಾಸ ಮಾಡಿದವಳಲ್ಲ; ಒಂಟಿಯಾಗಿ ಜಗಲಿ ಮೇಲೆ ಮಲಗಿದವಳಲ್ಲ; ಕುಂದಾಪುರದ ಮನೆ ಬಿಟ್ಟು ನಾರಣಪ್ಪನನ್ನು ಕೂಡಿದಮೇಲೆ, ಸದಾ ಊದುಬತ್ತಿಯಿಂದ ಗಮಗಮಿಸುವ ಕೋಣೆಯಲ್ಲಿ ಸುಪ್ಪತ್ತಿಗೆ ಮೇಲೆ ಸುಖಿಸಿದವಳು. ಈಗ ಹಸಿವು ತಾಳಲಾರದೆ ಎದ್ದು ಹಿತ್ತಲಿನ ದಾರಿಯಿಂದ ತಮ್ಮ ತೋಟಕ್ಕೆ ಹೋದಳು. ಹಣ್ಣಾಗಲೆಂದು ಅವಿತಿಟ್ಟಿದ ರಸಬಾಳೆಗೊನಿಯನ್ನು ತೆಗೆದು ಹೊಟ್ಟೆ ತುಂಬುವಷ್ಟು ತಿಂದಳು. ನದಿಗೆ ಹೋಗಿ ನೀರು ಕುಡಿದಳು. ತನ್ನ ಮನೆಗೆ ಹೋಗಲು ಭಯವಾಯಿತು – ಅವಳು ಹುಟ್ಟಿದಮೇಲೆ ಶವದ ಮುಖ ನೋಡಿದವಳಲ್ಲ. ಒಂದು ವೇಳೆ ನಾರಣಪ್ಪನ ಶವದ ಸಂಸ್ಕಾರವಾಗಿಬಿಟ್ಟದ್ದರೆ ಅವನ ಮೇಲೆದ್ದ ಎಲ್ಲ ಪ್ರೀತಿಯೂ ಉಕ್ಕೇರಿಬಂದು ಮನಸಾರ ಅತ್ತುಬಿಡುತ್ತಿದ್ದಳು. ಈಗ ಭೀತಿಯೊಂದೇ ಅವಳ ಹೃದಯದಲ್ಲಿ. ಭೀತಿ ಮತ್ತು ಕಳವಳ. ನಾರಣಪ್ಪನೆಗೆ ಉಚಿತ ರೀತಿಯಲ್ಲಿ ಶವಸಂಸ್ಕಾರವಾಗದಿದ್ದರೆ ಅವನು ಪ್ರೇತವಾಗಿ ಬಿಡಬಹುದು. ಅಲ್ಲದೆ ಅವನ ಕೂಡ ಹತ್ತು ವರ್ಷದ ಸುಖವುಂಡು ಈಗ ಅವನ ಶವಕ್ಕೆ ತಕ್ಕ ಸಂಸ್ಕಾರ ಮಾಡಿಸದಿದ್ದರೆ…. ಮನಸ್ಸು ಒಪ್ಪುವುದಿಲ್ಲ. ನಾರಣಪ್ಪ ಬ್ರಾಹ್ಮಣ್ಯ ಬಿಟ್ಟ – ನಿಜ. ಮುಸಲ್ಮಾನರ ಜೊತೆ ಊಟಮಾಡಿದ. ತಾನೂ ಮಾಡಿದೆ. ಆದರೆ ತನಗೆ ಅಡ್ಡಿಯಿಲ್ಲ, ದೋಷ ತಟ್ಟುವುದಿಲ್ಲ. ಸೂಳೆಯಾಗಿ ಹುಟ್ಟಿದ ತಾನು ಈ ನಿಯಮಕ್ಕೆಲ್ಲ ವಿನಾಯಿತಿ; ವೈಧವ್ಯವಿಲ್ಲದ ನಿತ್ಯಮುತ್ತೈದೆ. ಹರಿಯುವ ಹೊಳೆಗೆ ದೋಷವುಂಟೆ? ಬಾಯಾರಿಕೆಗೂ ಸೈ, ಮೈಯ ಮಲ ತೊಳೆಯಲಿಕ್ಕೂ ಸೈ, ದೇವರ ತಲೆಯ ಅಭಿಷೇಕ್ಕೂ ಸೈ, ಎಲ್ಲದಕ್ಕೂ ‘ಹೂ’; ‘ಉಹೂ’ ಎಂಬೋದೇ ಇಲ್ಲ, ನನ್ನ ಹಾಗೆ. ಬತ್ತುವುದಿಲ್ಲ; ಬಾಡುವುದಿಲ್ಲ. ಎರಡು ಹೆತ್ತರೆ ಸಾಕು; ಬಚ್ಚುಗಲ್ಲದ ಗುಳಿಕಣ್ಣಿನ ಬ್ರಾಹ್ಮಣ ಹೆಂಗಸರಂತೆ ತನ್ನ ಮೊಲೆ ಜೋತುಬಿದ್ದಿಲ್ಲ. ತಾನು ಬತ್ತದ, ಬಾಡದ, ಬಳಲದ, ಜಳಜಳ ತುಂಗೆ. ಹತ್ತು ವರ್ಷ ಮಗುವಿನಂತೆ ಉಂಡ. ಜೇನಿನ ಗೂಡಿಗೆಂದು ಬರುವ ಆಸೆಬುರುಕ ಕರಡಿಯಂತೆ ಹರಿದು ಉಂಡ. ಕೆಲವೊಮ್ಮೆ ರೋಷದ ಪಟ್ಟೆಹುಲಿಯ ಹಾಗೆ ಕುಣಿದ. ಈಗ ಅವನಿಗೊಂದು ಸಂಸ್ಕಾರವಾಗಿಬಿಡಲಿ ಸಾಕು, ಕುಂದಾಪುರಕ್ಕೆ ಹೊರಟು ಹೋಗುತ್ತೇನೆ. ಅಲ್ಲಿ ಕೂತು ಮನಸಾರೆ ಅತ್ತುಬಿಡುತ್ತೇನೆ. ಈ ಬ್ರಾಹ್ಮಣರ ಕೈಯಿಂದಲೇ ಮಾಡಿಸಬೇಕು. ನಾರಣಪ್ಪ ಬ್ರಾಹ್ಮಣ್ಯ ಬಿಟ್ಟರೂ ಬ್ರಾಹ್ಮಣ್ಯ ಅವನನ್ನು ಬಿಟ್ಟಿತೆ? ಕಡುಕೋಪಿ, ಹಟವಾದಿ, ಹುಚ್ಚ – ಬಹಿಷ್ಕಾರ ಹಾಕಿಸಿದರೆ ಮುಸಲ್ಮಾನನಾಗಿ ಬಿಡುತ್ತೇನೆಂದು ಲಾಗಹಾಕಿ ಕುಣಿದವ. ಆಂತರ್ಯದಲ್ಲಿ ಏನಿತ್ತೋ – ನಾನು ತಿಳಿಯೆ. ಎಷ್ಟೇ ಕುಣಿಯಲಿ, ತನ್ನ ಜೊತೆ ಪ್ರಾಣೇಶಾಚಾರ್ಯರೊಬ್ಬರನ್ನು ಅವನು ನೀಚ ಮಾತಲ್ಲಿ ಹಳಿದಿದ್ದಿಲ್ಲ. ದುಡುಕಿ ಅವತ್ತು ಮಾತಾಡಿದ್ದು ನಿಜ. ಆದರೆ ಒಳಗೊಳಗೇ ನಡುಗಿದ್ದ. ಈಗ ಜಗಳವಾಡಿ ಆಮೇಲೆ ಮರೆತುಬಿಡುವ, ಅಸೂಯೆಯೊಂದೇ ಗಟ್ಟಿಯಾದ ಭಾವವಾದ ತನ್ನಂತಹ ಹೆಂಗಸಿಗೆ ಈ ದ್ವೇಷದ ಆಳ ಯಾವ ಗರುಡಪಾತಾಳಿಗೂ ಸಿಗುವಂಥದಲ್ಲ. ಅವನನ್ನು ಬಂದು ಕೂಡಿದ ಮೊದಮೊದಲು ಬೇಡಿಕೊಂಡೆ : ನನ್ನ ಕೈಯಡಿಗೆ ಊಟ ಮಾಡಬೇಡಿ, ಮಾಂಸ ತಿನ್ನಬೇಡಿ – ನಾ ಬೇಕಾದರೂ ಬಿಟ್ಟುಬಿಡುವೆ; ಹಾಗೆ ಮನಸ್ಸಾದರೆ ಶೆಟ್ಟರ ಮನೆಗೆ ಹೊಗಿ ಮೀನು ತಿಂದು ಬರುವೆ; ಅಗ್ರಹಾರದಲ್ಲಿ ಬೇಡ. ಕೇಳುವ ಮನುಷ್ಯನೋ ಅವ? ಹಟಾಂದರೆ ಹಟ. ಭ್ರಾಂತಿ ಹಿಡಿದ ಅವನ ಹೆಂಡತಿ ಎಂದೂ ಅವನ ಹಟವನ್ನು ತಾಳಿ ತನ್ನ ಹಾಗೆ ಬಾಳುವ ಸಾಹಸವಿದ್ದವಳಲ್ಲ. ತೌರಿಗೆ ಹೋಗಿ, ತನಗೆ ಶಾಪ ಹಾಕಿ ಸತ್ತಳು. ಇನ್ನು ಯಾರಿಗೆ ಬೇಕು ಈ ಗೊಂದಲ? ಸಂಸ್ಕಾರವಾದರೆ ಸಾಕು, ನಮಸ್ಕಾರ ಹಾಕಿ ಹೋಗಿಬಿಡುವೆ.

ವಿಚಿತ್ರವೆಂದರೆ, ತನ್ನನ್ನೀಗ ಕೊರೆಯುತ್ತಿರೋ ವಿಷಯವೆಂದರೆ, ಒಂದು ದಿನ ಸಹಿತ ಒಂದು ದೇವರಿಗೂ ಕೈಮುಗಿಯದ ನಾರಣಪ್ಪ ಜ್ವರ ನೆತ್ತಿಗೆ ಏರಿದ್ದೇ ಹೇಗೆ ಹಲುಬಲು ಪ್ರಾರಂಭಿಸದ! ಜ್ಞಾನ ತಪ್ಪುವತನಕ ‘ಅಮ್ಮ ಭಗವಂತ ರಾಮಚಂದ್ರ ನಾರಾಯಣ’ ಎನ್ನುತ್ತಿದ್ದ. ‘ರಾಮ ರಾಮಾ’ ಎಂದು ಕಿರಿಚಿದ. ಪಾಪಿಯ ಬಾಯಲ್ಲಿ, ಚಾಂಡಾಲನ ಬಾಯಲ್ಲಿ ಬರುವ ಮಾತಲ್ಲ ಅದು. ಅವನ ಒಳಗೆ ಗುಪ್ತವಾಗಿ ಏನು ಇತ್ತೋ ಏನು ಕತೆಯೋ ನನ್ನ ಆಳಕ್ಕೆ ತಿಳಿಯಲಿಲ್ಲ. ಈಗ ಶಾಸ್ತ್ರೋಕ್ತ ವಿಧಿಯಾಗದಿದ್ದಲ್ಲಿ ಖಂಡಿತ ಪ್ರೇತವಾಗುತ್ತಾನೆ. ಅವನ ಉಪ್ಪುಂಡ ನಾನು…

ಎಲ್ಲ ಪ್ರಾಣೇಶಾಚಾರ್ಯರ ಮೇಲೆ ನಿಂತಿದೆ. ಎಂತಹ ಸೌಮ್ಯ, ಕರುಣೆ, ಮೇಳದವರ ಆಟದಲ್ಲಿ ದ್ರೌಪದಿ ಕರೆದಾಗ ನಗುನಗುತ್ತ ಬರುವ ಶ್ರೀಕೃಷ್ಣನಂತೆ ಏನು ರೂಪ, ಏನು ನಿಲುವು, ಏನು ತೇಜ. ಪಾಪ ಅವರಿಗೆ ಮೈಸುಖವೇನೆಂದು ಗೊತ್ತೇ ಇರಲಿಕ್ಕಿಲ್ಲ. ಒಣಗಿದ ಕಟ್ಟಿಗೆ ಹಾಗೆ ಬಿದ್ದಿರುತ್ತಾರೆ ಅವರ ಹೆಂಡತಿ – ಪುಣ್ಯಾತಿಗಿತ್ತಿ. ಆದರೂ ಏನು ತಾಳ್ಮೆ, ಏನು ವರ್ಚಸ್ಸು, – ಒಂದು ದಿನ ತನ್ನನ್ನ ಕಣ್ಣೆತ್ತಿ ನೋಡಿದವರಲ್ಲ. ಅಮ್ಮ ಹೇಳುತ್ತಿದ್ದಳಲ್ಲ – ಗರ್ಭದಾನಾನ ಸೂಳೆಯರು ಎಂಥವರಿಂದ ಮಾಡಿಸಕೋಬೇಕು ಅಂತ – ಅಂತಹ ರೂಪ ಗುಣ ವರ್ಚಸ್ಸು ಆಚಾರ್ಯರದ್ದು. ಪಡೆದು ಬಂದಿರಬೇಕು ಅಷ್ಟೇ, ಅಂಥಾದ್ದು ಒದಗಿಬರೋಕ್ಕೆ…

ರಸಬಾಳೆಯ ಹಣ್ಣನ್ನು ಹೊಟ್ಟೆತುಂಬ ತಿಂದಿದ್ದರಿಂದ ಚಂದ್ರಿಗೆ ಕಣ್ಣು ಬಾಡಿ, ನಿದ್ದೆ ಹತ್ತಿರ ಹತ್ತಿರ ಸುಳಿದು, ಹಾರಿ, ಸುಳಿದು, ಹಾರಿ, ಆಟವಾಡತೊಡಗಿತು. ಪ್ರಾಣೇಶಾಚಾರ್ಯರು ಇನ್ನೂ ಎಚ್ಚರವಾಗಿದ್ದು ನಡುಮನೆಯಲ್ಲಿ ಓಡಾಡುವುದು, ಮಂತ್ರಗಳನ್ನು ಗಟ್ಟಿಯಾಗಿ ಓದುವುದು ನಡುನಡುವೆ ಕಿವಿಗೆ ಬಿದ್ದು – ಅವರು ಎಚ್ಚರವಾಗಿದ್ದಾಗ ತಾನೇನು ನಿದ್ದೆಮಾಡುವುದೆಂದು – ಸೆಳೆಯುವ ನಿದ್ದೆಯನ್ನು ದೂಡುತ್ತ, ಚಿಂತಿಸುತ್ತ, ಚಾವಡಿಯ ಮೇಲೆ ಕೈದಿಂಬುಮಾಡಿ, ನಾಚಿಕೆಯಲ್ಲಿ ತೊಡೆಗಳನ್ನು ಹೊಟ್ಟೆಗೆ ಮಡಿಸಿ ಮುದುರಿ ಸೆರಗಳೆದು ಮಲಗಿದಳು.

* * *

ಎಲ್ಲ ತಾಳೆಗರಿ-ಗ್ರಂಥಗಳನ್ನೂ ಆಮೂಲಾಗ್ರ ಶೋಧಿಸಿದ್ದಾಯಿತು : ತನ್ನ ಅಂತರಂಗಕ್ಕೆ ಒಪ್ಪಿಗೆಯಾಗುವಂತಹ ಉತ್ತರ ಮಾತ್ರ ಇಲ್ಲ. ಧರ್ಮಶಾಸ್ತ್ರದಲ್ಲಿ ಈ ಸಂದಿಗ್ಧಕ್ಕೆ ತನಗೆ ಸಂಪೂರ್ಣ ಸಮರ್ಪಕವೆನ್ನಿಸುವಂತಹ ಉತ್ತರವಿಲ್ಲವೆಂದು ಒಪ್ಪಿಕೊಳ್ಳಲು ಪ್ರಾಣೇಶಾಚಾರ್ಯರಿಗೆ ಭಯ. ಮಠದ ಉಳಿದ ಪಂಡಿತರು ನಿಮಗೆ ತಿಳಿದಿರೋದು ಇಷ್ಟೇಯೊ ಎಂದು ಮೂದಲಿಸಿದರೆ ಎನ್ನುವ ಅಂಜಿಕೆಯೂ ಅವರನ್ನೂ ಸುಳಿಯದೇ ಇರಲಿಲ್ಲ. ಸುಧಾ ಪಾಠವಾದ ನಿನ್ನ ಜ್ಞಾನ ಇಷ್ಟೆಯೋ ಎಂದರೆ ಏನು ಹೇಳಬೇಕು. ಏನು ಹೋದರೂ ಮಾನ ಹೋಗಬಾರದು, ಹೋದ ಮಾನ ಹಿಂದಕ್ಕೆ ಬರದು – ಎಂದು ಯೋಚಿಸುತ್ತ ಕೂತು ತನ್ನ ಯೋಚನೆಗೆ ನಾಚಿದರು. ಇಂತಹ ಪರಿಸ್ಥಿತಿಯಲ್ಲೂ ನನ್ನ ಖ್ಯಾತಿಯ ಬಗ್ಗೆಯೇ ನಾನು ಯೋಚಿಸುತ್ತಿದ್ದೇನಲ್ಲ, ನನ್ನ ಅಹಂಕಾರಕ್ಕಷ್ಟು ಬೆಂಕಿಯಿಟ್ಟಿತು ಎಂದು ಭಕ್ತಿಯಲ್ಲಿ ಮತ್ತೆ ತಾಳೆಗರಿ-ಗ್ರಂಥಗಳನ್ನು ಬಿಚ್ಚಿ, ಕಣ್ಣು ಮುಚ್ಚಿ ಧ್ಯಾನಿಸಿ ಒಂದು ಓಲೆಯನ್ನು ಹಾಗೆ ಎತ್ತಿದರು, ಇಲ್ಲ, ಅಡಿಗೆಮನೆಯಲ್ಲಿ ಮಲಗಿದ್ದ ಹೆಂಡತಿ ನರಳಿದಳು. ಎದ್ದು ಹೋಗಿ ಆಕೆಯನ್ನು ಎಬ್ಬಿಸಿ ಮೈಗಾನಿಸಿಕೊಂಡು ನಿಂಬೆಹಣ್ಣಿನ ರಸದ ಎರಡು ಗುಟುಕನ್ನು ಕುಡಿಸಿದರು. ‘ನಾರಣಪ್ಪನ ಬದಲು ನಾನೇ ಯಾಕೆ ಕಣ್ಣು ಮುಚ್ಚಬಾರದಿತ್ತೋ! ನನಗೆ ಯಾಕೆ ಸಾವು ಬರಬಾರದೊ! ಮುತ್ತೈದೆಯಾಗಿ…’ ಎಂದು ಕೊರಗಿದ ಹೆಂಡತಿಗೆ ‘ಒಳಿತು’ ಎನ್ನು ಎಂದು ಸಮಾಧಾನಿಸಿ ಮತ್ತೆ ನಡುಮನೆಗೆ ಬಂದು ಲಾಟೀನಿನ ಬೆಳಕಿನಲ್ಲಿ ಆರ್ತರಾಗಿ ಕುಳಿತರು. ಸನಾತನ ಧರ್ಮದಲ್ಲಿ ಉತ್ತರವಿಲ್ಲವೆಂದರೆ ನಾರಣಪ್ಪನೇ ಗೆದ್ದಂತೆ, ತಾವು ಸೋತಹಾಗೆ. ಮೂಲದಲ್ಲಿರುವ ಪ್ರಶ್ನೆ ನಾರಣಪ್ಪ ಬದುಕಿದ್ದಾಗ ಅವನಿಗೆ ತಾವು ಬಹಿಷ್ಕಾರ ಹಾಕಿಸಲಿಲ್ಲ ಎಂಬುವುದು. ಅದಕ್ಕೆ ಕಾರಣ ಅವನು ಹಾಕಿದ ಬೆದರಿಕೆ. ಆ ಬೆದರಿಕೆಗೆ ಜಗ್ಗಿದಾಗಲೆ ಧರ್ಮಶಾಸ್ತ್ರವನ್ನು ಧಿಕ್ಕರಿಸಿದಂತಾಗಿಬಿಟ್ಟಿತು. ಬ್ರಾಹ್ಮಣರ ತಪ:ಶಕ್ತಿ ಜಗತ್ತನ್ನು ಆಳುತ್ತಿದ್ದ ಕಾಲದಲ್ಲಿ ಅಂತಹ ಬೆದರಿಕೆಗೆ ಜಗ್ಗಬೇಕಾಗಿರಲಿಲ್ಲ. ಕಾಲ ಕೆಡುತ್ತ ಬಂದಿದ್ದರಿಂದ ತಾನೆ ಇಂತಹ ಸಂದಿಗ್ಧಗಳು ಪ್ರಾಪ್ತವಾಗಿರೋದು…

ಹಾಗೆ ನೋಡಿದರೆ ತಾನು ಮುಸಲ್ಮಾನನಾಗುತ್ತೇನೆಂದು, ಮುಸಲ್ಮಾನನಾಗಿ ಅಗ್ರಹಾರದಲ್ಲಿ ಉಳಿಯುತ್ತೇನೆಂದು ಅವನು ಹಾಕಿದ ಬೆದರಿಕೆಯೊಂದೇ ಕಾರಣವೇ ಬಹಿಷ್ಕಾರ ಹಾಕಿಸದೇ ಇದ್ದುದಕ್ಕೆ? ಇಲ್ಲ ಮರುಕವೂ ಅದರಲ್ಲಿತ್ತು. ತನ್ನ ಹೃದಯದಲ್ಲಿರುವ ಅಪಾರವಾದ ಕರುಣ… ಎಂಬ ಯೋಚನೆ ಹೊಳೆಯುತ್ತಿದ್ದಂತೆ ಪ್ರಾಣೇಶಾಚಾರ್ಯರು ‘ಛೆ, ಛೆ’ ಇದು ಆತ್ಮವಂಚನೆಯೆಂದು ತನ್ನನ್ನು ಜರಿದುಕೊಂಡರು. ಅದು ನಿಷ್ಕಲ್ಮಷ ಮರುಕವಲ್ಲ. ಅದರ ಹಿಂದೆ ಭಯಂಕರವಾದ ಹಟವೂ ಇತ್ತು. ನಾರಣಪ್ಪನ ಹಟಕ್ಕೇನೂ ಬಿಟ್ಟುಕೊಡುವಂತಹ ಹಟವಲ್ಲ ತನ್ನದು : ಅವನನ್ನು ದಾರಿಗೆ ತಂದೇ ತರುತ್ತೇನೆ – ನನ್ನ ಪುಣ್ಯಶಕ್ತಿಯಿಂದ, ತಪ:ಶಕ್ತಿಯಿಂದ, ವಾರದಲ್ಲಿ ಮಾಡುವ ಎರಡು ದಿನಗಳ ಒಪ್ಪತ್ತುಗಳಿಂದ, ಅವನನ್ನು ವಿವೇಕಕ್ಕೆಳೆದೇ ಎಳೆಯುತ್ತೇನೆ ಎನ್ನುವ ನನ್ನ ಅದಮ್ಯ ಹಟ.

ಈ ಹಟ ತಾಳಿದ ರೂಪ : ನನ್ನ ಪ್ರೇಮದಿಂದ, ಮರುಕದಿಂದ, ತಪ:ಶಕ್ತಿಯಿಂದ ನಿನ್ನನ್ನು ದಾರಿಗೆ ಹಚ್ಚುತ್ತೇನೆ ಎನ್ನುವ ಸಂಕಲ್ಪ. ಹಟವೆಷ್ಟು ಪಾಲು, ಕರುಳಿನ ಮರುಕವೆಷ್ಟು ಪಾಲು ಈ ಸಂಕಲ್ಪದಲ್ಲಿ? ತನ್ನ ಸ್ವಭಾವದ ಮೂಲಧರ್ಮ ಮರುಕವೆಂದು ಅನಿಸುತ್ತದೆ. ಈ ದೇಹ ಜರಾಜೀರ್ಣವಾದ ಬಳಿಕ ಕಾಮ ಇದನ್ನು ಬಿಟ್ಟುಹೋಗುತ್ತದೆ. ಆದರ ಮರುಕ ಬಿಡುವುದಿಲ್ಲ. ಆದುದರಿಂದ ಮರುಕ ಮಾನವನಿಗೆ ಕಾಮಕ್ಕಿಂತಲೂ ಪ್ರಜ್ವಲವಾದ ಬೇರು ಬಿಟ್ಟ ಪ್ರವೃತ್ತಿ. ಮರುಕ ಹೀಗೆ ಆಳವಾಗಿ ನನ್ನಲ್ಲಿಲ್ಲದಿದ್ದರೆ ಮದುವೆಯಾದಾಗ್ಗಿನಿಂದ ಹಾಸಿಗೆ ಹಿಡಿದ ಹೆಂಡತಿಯ ಬಗ್ಗೆ ಪಿರಿಪಿರಿ ಎನ್ನಿಸಿ ಪರನಾರೀ ಮೋಹಕ್ಕೆ ಬಲಿಯಾಗದೇ ಇರುತ್ತಿದ್ದೆನೆ? ಇಲಲ. ಮರುಕವೇ ಬಗ್ಗೆ ಮಾನವ್ಯದ ಬ್ರಾಹ್ಮಣ್ಯದ ರಕ್ಷಣೆ ಮಾಡಿದೆ.

ಮರುಕ-ಧರ್ಮ-ಮಾನವ್ಯ-ಬ್ರಾಹ್ಮಣ್ಯ ಎಲ್ಲ ಕಗಂಟಾಗಿ ಕಾಡುತ್ತದೆ. ಮೂಲದಲ್ಲಿರುವ ಪ್ರಶ್ನೆ ನಾರಣಪ್ಪ ಯಾಕೆ ಹುಳಿಯಾದ, ವಿಷವಾದ? ಪೂರ್ವಜನ್ಮದ ಪುಣ್ಯವಿಲ್ಲದೆ ಬ್ರಾಹ್ಮಣ್ಯ ಪ್ರಾಪ್ತವಾಗುವುದಿಲ್ಲವೆನ್ನುತ್ತದೆ ಶಾಸ್ತ್ರ. ಹಾಗಿದ್ದರೆ ಯಾಕೆ ನಾರಣಪ್ಪ ಕೈಯಾರೆ ತನ್ನ ಬ್ರಾಹ್ಮಣ್ಯವನ್ನ ಚರಂಡಿಗೆ ಎಸೆದ? ಇದು ಆಶ್ಚರ್ಯ. ಕೊನೆಗೂ ನಮ್ಮ ಸ್ವಭಾವಕ್ಕೆ ನಾವು ಶರಣು. ಋಗ್ವೇದದ ಕತೆಯೊಂದು ಪ್ರಾಣೇಶಾಚಾರ್ಯರಿಗೆ ನೆನಪಾಗುತ್ತದೆ:

ಆ ಬ್ರಾಹ್ಮಣರಿಗೆ ಜೂಜಿನ ಮೋಹ. ತನ್ನ ಸ್ವಭಾವವನ್ನವನು ಏನಕೇನ ಮೀರಲಾರ. ಒಮ್ಮೆ ಒಂದು ಯಜ್ಞಶಾಲೆಯೊಳಕ್ಕೆ ಕುಲೀನ ಬ್ರಾಹ್ಮಣರು ಯಾರೂ ಅವನನ್ನು ಬಿಡಲಿಲ್ಲ. ಛೀ ಛೀ ಎಂದು ಅಟ್ಟಿಬಿಟ್ಟರು – ನಾಯಿಯನ್ನು ಹೊರಕ್ಕೆ ಅಟ್ಟುವ ಹಾಗೆ. ಅವನು ದೇವದೇವತೆಗಳನ್ನು ಕರೆದು ಅತ್ತ : ದೇವರೇ, ಯಾಕೆ ನನ್ನನ್ನು ನೀನು ಜೂಜುಗಾರನನ್ನಾಗಿ ಮಾಡಿದೆ? ಯಾಕೆ ಇಂತಹ ಮೋಹವನ್ನು ನನಗೆ ಕೊಟ್ಟೆ? ಅಷ್ಟದಿಕ್ಪಾಲಕರೇ ಉತ್ತರ ಹೇಳಿ. ಇಂದ್ರ ಯಮ ವರುಣಾದಿಗಳೇ ಬನ್ನಿ, ಉತ್ತರ ಹೇಳಿ.

ಇತ್ತ ಯಜ್ಞಶಾಲೆಯಲ್ಲಿ ಹವಿಸ್ಸನ್ನು ಹಿಡಿದು ದ್ವಿಜರು ಅಗ್ನಿ, ಇಂದ್ರ, ಯಮ, ವರುಣಾದಿಗಳನ್ನು ಕರೆದರು : ಬನ್ನಿ, ನಮ್ಮ ಹವಿಸ್ಸನ್ನು ಸ್ವೀಕರಿಸಿ.

ಆದರೆ ದೇವತೆಗಳು ಹೋದದ್ದು ಆ ಜೂಜುಗಾರ ಕರೆದಲ್ಲಿಗೆ. ಆಗ ತಮ್ಮ ಬ್ರಾಹ್ಮಣ್ಯದ ಹಮ್ಮು ತೊರೆದು ದ್ವಿಜರೆಲ್ಲರೂ ಅಲ್ಲಿಗೇ ಧಾವಿಸಬೇಕಾಯಿತು – ಅಧಮನ ಬಳಿಗೆ. ಧರ್ಮದ ಆಂತರ್ಯ ತಿಳಿಯೋದು ಕಠಿಣ. ಮತ್ತೆ ಆ ಮಹಾಪಾಪಿ ಚಾಂಡಾಲ, ಸಾಯುವಾಗ ‘ನಾರಯಾಣ’ ಎಂದು ಪರಮಪದ ಮುಕ್ತಿಯನ್ನು ಗಿಟ್ಟಿಸಿಕೊಂಡ. ಏಳು ಜನ್ಮ ಭಕ್ತರಾಗಿ ಹುಟ್ಟುತ್ತೀರೋ, ಮೂರು ಜನ್ಮ ವೈರಿಗಳಾಗಿ ನನ್ನನ್ನು ಬಂದು ಸೇರುತ್ತೀರೋ ಎಂದರೆ ಜಯ-ವಿಜಯರು ವೈರಿಗಳಾಗಿ ಬೇಗ ಪರಮಪದ ಸೇರಲು ಆಶಿಸಿದವರಂತೆ. ಪೂಜೆ ಪುನಸ್ಕಾರಾದಿ ಕರ್ಮಗಳಲ್ಲಿ ಗಂಧದ ಹಾಗೆ ತೇಯುವ ನಮ್ಮಂತಹವರ ಬಾಳಿಗೆ ಮುಕ್ತಿ ದೊರೆಯಲು ಜನ್ಮದ ಮೇಲೆ ಜನ್ಮ. ಧರ್ಮದ ಅಂತರಾರ್ಥ ತಿಳಿಯುವುದಿಲ್ಲ. ನಾರಣಪ್ಪನ ಅಂತಃಪ್ರಾಣ ಯಾವ ಸಾಧನೆಯಲ್ಲಿ ತೊಡಗಿತ್ತೋ! ಕುಣಿದು ಕುಪ್ಪಳಿಸಿ ‘ಲಕ್’ ಎಂದು ಪ್ರಾಣಬಿಟ್ಟ.

ಈ ಸಂದಿಗ್ಧದಲ್ಲಿ ಅಪದ್ಧರ್ಮವೇನೆಂದು ತಿಳಿಯುವ ಶಕ್ತಿಯನ್ನು ದೇವರು ನನಗೆ ಕೊಟ್ಟರೆ… ಪ್ರಾಣೇಶಾಚಾರ್ಯರೆಗೆ ಥಟ್ಟನೆ ಅವ್ಯಕ್ತದಿಂದ ಒಂದು ಸನ್ನೆ ಕಾಣಿಸಿಕೊಂಡ ಹಾಗೆ ಒಂದು ಯೋಚನೆ ಹೊಳೆದು ರೋಮಾಂಚಿತರಾದರು. ಬೆಳಗ್ಗೆ ಎದ್ದು ಸ್ನಾನಾದಿಗಳನ್ನು ಮಾಡಿ ಹೋಗಿ ಮಾರುತಿಯಲ್ಲಿ ಕೇಳುವುದು : ವಾಯುಪುತ್ರ, ಏನು ಸರಿ ಇಂತಹ ಸಂದಿಗ್ದದಲ್ಲಿ? ಗೆಲುವಾಗಿ ಒಳಮನೆಯಲ್ಲಿ ಅತ್ತಿಂದಿತ್ತ ತಿರುಗಿದರು. ಛೆ, ಪ್ರಾಯದ ಹೆಣ್ಣುಮಗಳೊಬ್ಬಳು ಚಾಪೆ ಇಲ್ಲದೆ ಚಾವಡಿಯಲ್ಲಿ ಮಲಗಿದ್ದಾಳಲ್ಲ ಎಂದು ಮರುಕವಾಗಿ ಒಂದು ಹೊದಿಕೆ, ಚಾಪೆ, ದಿಂಬನ್ನು ತಂದು ಹರಗೆ ಬಂದು ‘ಚಂದ್ರೀ’ ಎಂದರು. ತನ್ನ ತಾಯಿ ಹೇಳಿದ್ದ ಮಾತನ್ನು ನೆನೆಯುತ್ತಿದ್ದ ಚಂದ್ರಿ ಧಿಗ್ಗನೆ ಎದ್ದು ಕೂತು, ನಾಚಿಕೆಯಿಂದ ತಲೆಯ ಮೇಲೆ ಸೆರಗೆಳೆದುಕೊಂಡಳು. ಕತ್ತಲೆಯಲ್ಲಿ ಹೀಗೆ ಹೆಣ್ಣೊಬ್ಬಳ ಎದರು ನಿಂತಿರುವುದು ಅಸಮಂಜಸವೆನ್ನಿಸಿ ಪ್ರಾಣೇಶಾಚಾರ್ಯರು ‘ಈ ಚಾಪೆ ದಿಂಬುಗಳನ್ನು ತಗೊ’ ಎಂದು ತಿರುಗಿದರು. ಚಂದ್ರಿಗೆ ಮಾತೇ ಬರಲಿಲ್ಲ. ಹೊಸ್ತಿಲು ದಾಟುತ್ತಿದ್ದ ಪ್ರಾಣೇಶಾಚಾರ್ಯರು ನಿಂತು, ಕೈಯಲ್ಲಿ ಹಿಡಿದಿದ್ದ ಲಾಟೀನಿನ ಬೆಳಕಿನಲ್ಲಿ ಮೊಗ್ಗಿನ ಹಾಗೆ ಸಂಕೋಚದಿಂದ ಕೂತ ಹೆಣ್ಣನ್ನು ಕಂಡು, ಮಾರುತಿಯ ಅಪ್ಪಣೆ ಪಡೆಯುವ ತಮ್ಮ ನಿರ್ಧಾರವನ್ನು ಗೆಲುವಿನಿಂದ ತಿಳಿಸಿ ನಡುಮನೆಗೆ ಹೋದರು. ಒಳಗೆ ಬಂದಾಕ್ಷಣ ಥಟ್ಟನೆ ಇನ್ನೊಂದು ಯೋಚನೆ ಅವರಿಗೆ ಹೊಳೆಯಿತು. ಚಂದ್ರಿ ಬಿಚ್ಚಿಕೊಟ್ಟಿದ್ದ ಆಭರಣಗಳ ಗಂಟನ್ನು ಮತ್ತೆ ಹೊರಗೆ ತಂದು ‘ಚಂದ್ರಿ’ ಎಂದರು. ಚಂದ್ರಿ ಮತ್ತೆ ಚಂಗನೆ ತವಕದಿಂದ ಎದ್ದು ಕೂತಳು.

‘ಇಕೊ ಚಂದ್ರಿ. ನಿನ್ನ ಔದಾರ್ಯದಿಂದ ಶವಸಂಸ್ಕಾರದ ಪ್ರಶ್ನೆ ಇನ್ನಷ್ಟು ಕಠಿಣವಾಗಿ ಬಿಟ್ಟಿತು. ಆಪದ್ಧರ್ಮದ ಪ್ರಕಾರ ನಡೆದುಕೊಳ್ಳೋದು ಬ್ರಾಹ್ಮಣರ ಕರ್ತವ್ಯ. ಈ ಬಂಗಾರ ನಿನ್ನಲ್ಲೆ ಇರಲಿ. ಅವನು ತೀರಿಹೋದ ಮೇಲೆ ಪಾಪ ನಿನ್ನ ಜೀವನವೂ ಸಾಗಬೇಕಲ್ಲ.’

ಎಂದು ಅವಳ ಸನಿಯ ಲಾಟೀನು ಹಿಡಿದು ನಿಂತು, ಬೆಳಕಿನಲ್ಲಿ ಬಾಗಿ, ತಮ್ಮ ಮುಖದ  ಕಡೆ ಆರ್ತತೆಯಿಂದ ಎತ್ತಿದ ವಿಶಾಲವಾದ ಕಪ್ಪಾದ ಅವಳ ಕಣ್ಣುಗಳನ್ನು ಕರುಣೆಯಿಂದ ನೋಡಿ, ಬಂಗಾರವನ್ನು ಅವಳ ಕೈಮೇಲೆ ಇಟ್ಟು ಒಳಗೆ ಹೋದರು.