ಮಜ್ಜಿಗೆ-ಬೀರಿನಲ್ಲಿ ಜಿರಳೆ; ಉಗ್ರಾಣದಲ್ಲಿ  ಹೆಗ್ಗಣ; ನಡುಮನೆಯಲ್ಲಿ ಹಗ್ಗದ ಮೇಲೆ ಮಡಿಸೀರೆ, ಮಡಿವಸ್ತ್ರ; ಅಂಗಳದಲ್ಲಿ ಒಣಗಲೆಂದು ಚಾಪೆಯ ಮೇಲೆ ಹಾಕಿದ ಹಪ್ಪಳ, ಸಂಡಿಗೆ, ಬಾಳಕದ ಮೆಣಸಿನಕಾಯಿ; ಹಿತ್ತಲಿನಲ್ಲಿ ತುಳಸಿ – ಇವು ಅಗ್ರಹಾರದ ಮನೆಮನೆಗೂ ಸಾಮನ್ಯ. ವಿನಾಯಿತಿ ಎಂದರೆ ಹಿತ್ತಲಲ್ಲಿ ಬೆಳೆಸಿದ ಬಗೆ ಬಗೆಯ ಪುಷ್ಪವೃಕ್ಷಗಳು; ಭೀಮಚಾರ್ಯನ ಹಿತ್ತಲಿನಲ್ಲಿ ಪಾರಿಜಾತ, ಪದ್ಮನಾಭಾಚಾರ್ಯನಲ್ಲಿ ಮಲ್ಲಿಗೆ, ಲಕ್ಷ್ಮಣಾಚಾರ್ಯನಲ್ಲಿ ಕೆಂಡಸಂಪಿಗೆ, ಗರುಡಾಚಾರ್ಯನಲ್ಲಿ ರಂಜ, ದಾಸಾಚಾರ್ಯನಲ್ಲಿ ಮಂದಾರ, ದುರ್ಗಾಭಟ್ಟನಲ್ಲಿ ಶಂಖಪುಷ್ಪ, ಬಿಲ್ವಪತ್ರೆ. ದೇವರ ಪೂಜೆಗೆಂದು ಪ್ರತಿನಿತ್ಯ ಪ್ರತಿಯೊಬ್ಬನ ಮನೆಯಿಂದಲೂ  ಪ್ರತಿಯೊಬ್ಬನೂ ಹೂವನ್ನಾರಿಸಲು ಹೋಗುವನು; ಕುಶಲಪ್ರಶ್ನೆ ಮಾಡುವನು. ನಾರಣಪ್ಪನ ಮನೆಯಲ್ಲಿ ಬಿಟ್ಟ ಹೂ ಮಾತ್ರ ಚಂದ್ರಿಯ ತುರುಬಿಗೆ, ಮಲಗುವ ಕೋಣೆಯಲ್ಲಿದ್ದ ಹೂದಾನಿಗೆ.  ಸಾಲದೆನ್ನುವುದಕ್ಕೆ ಮನೆಯ ಮುಂದೆಯೇ ಸರ್ಪಗಳಿಗೆ ಪ್ರಿಯವಾದ, ದೇವರ ಮುಡಿಗೆ ಅನರ್ಹವಾದ ತಾಮಸ ಪುಷ್ಪ – ರಾತ್ರೆರಾಣಿ. ಅದರ ಗೊಂಚಲು ಗೊಂಚಲು ಹೂವಿನ ರಾಶಿ ಕತ್ತಲಿನಲ್ಲಿ ಮದದಂತೆ ಅಡರಿ ಅದರ ನಿಶಾಚರ ವಾಸನೆಯನ್ನು ಚೆಲ್ಲುತ್ತದೆ; ಸರ್ಪಬಂಧನದಲ್ಲೆಂಬಂತೆ ಅಗ್ರಹಾರಕ್ಕೆ ಅಗ್ರಹಾರವೇ ತತ್ತರಿಸುತ್ತದೆ; ಸೂಕ್ಷ್ಮ ಮೂಗಿನವರು ತಲೆಬೇನೆ ಬರುತ್ತದೆಂದು ಪಂಚೆಯಿಂದ ಮೂಗು ಮುಚ್ಚಿ ನಡೆಯುತ್ತಾರೆ. ಕೂಡಿಟ್ಟ ಬಂಗಾರವನ್ನು ಕದಿಯಲು ಕಳ್ಳರು ಬರದಿರಲೆಂದು ಸರ್ಪಗಾವಲಿಗೆ ಅದನ್ನು ಬೆಳೆಸಿದ್ದಾನೆ ಎಂದು ಬುದ್ಧಿವಂತರು ಅನ್ನುವುದೂ ಉಂಟು. ಮೋಟು ಜಡೆಯ ಸೊರಗಿದ ಮೋರೆಯ ಮುತ್ತೈದೆಯರು ಮಂದಾರ ಮಲ್ಲಿಗೆ ಮುಡಿದರೆ ಕಪ್ಪು ನಾಗರದಂತಹ ಕೂದಲಿನ ಚಂದ್ರಿ ತುರುಬು ಹಾಕಿ ಕೆಂಡಸಂಪಿಗೆ, ಕೇದಗೆ ಮುಡಿಯುತ್ತಾಳೆ. ಕತ್ತಲಾದರೆ ಅಗ್ರಹಾರದ ಮೇಲೆ ರಾತ್ರೆರಾಣಿಯ ರಾಜ್ಯಭಾರವಾದರೆ, ಹಗಲು ಬ್ರಾಹ್ಮಣರು ಮೈಗೆ ಹಚ್ಚಿದ ಗಂಧದ, ಪಾರಿಜಾತ ಇತ್ಯಾದಿ ಮೃದು ಪುಷ್ಪಗಳ ಸೌಮ್ಯವಾಸನೆ. ಹೀಗೆಯೇ ಒಂದೊಂದು ಮನೆಯ ಹಿತ್ತಲಿನಲ್ಲಿ ಒಂದೊಂದು ರುಚಿಯ ಹಲಸು, ಮಾವು. ‘ಹಣ್ಣನ್ನು  ಹಂಚಿ ತಿನ್ನು, ಹೂವನ್ನು ಕೊಟ್ಟು ಮುಡಿ’ ಎಂಬ ನಾಣ್ನುಡಿಯ ಮೇರೆಗೆ ಫಲ ಪುಷ್ಪದ ಹಂಚಿಕೆ ನಡೆಯುತ್ತದೆ. ಲಕ್ಷ್ಮಣಾಚಾರ್ಯ ಮಾತ್ರ ಮರದಲ್ಲಿ ಬಿಟ್ಟ ಹಣ್ಣನ್ನು ಗುಪ್ತವಾಗಿ ಅರ್ಧಕ್ಕರ್ಧ ಸಾಗಿಸಿ ಅಂಗಡಿ ಕೊಂಕಣಿಯರಿಗೆ ಮಾರುತ್ತಾನೆ. ಅವನದ್ದು ಬಲು ಜಿಪುಣ ಪ್ರಾಣ. ಹೆಂಡತಿಯ ತೌರಿನ ಕಡೆಯವರು ಬಂದಾಗ ಹದ್ದಿನ ಕಣ್ಣಿನಿಂದ ಹೆಂಡತಿಯ ಕೈಯನ್ನು ಕಾಯುತ್ತಾನೆ; ಎಲ್ಲಿ ಏನನ್ನು ತೌರಿಗೆ ಕದ್ದುಕೊಡುತ್ತಾಳೋ ಎಂದು. ಚೈತ್ರ ವೈಶಾಖದಲ್ಲಿ ಪ್ರತಿ ಮನೆಯಲ್ಲೂ ಕೋಸುಂಬರಿ ಪಾನಕದ  ದಾನ ನಡೆಯುತ್ತದೆ; ಕಾರ್ತಿಕದಲ್ಲಿ ದೀಪಾರತಿಗೆ ಪರಸ್ಪರ ಕರೆಯುತ್ತಾರೆ. ನಾರಯಣಪ್ಪನೊಬ್ಬ ಇವಕ್ಕೆಲ್ಲ ವಿನಾಯಿತಿ. ಅಗ್ರಹಾರದ ಬೀದಿಯ ಎರಡು ಪಕ್ಕಕ್ಕೂ ಒಟ್ಟು ಹತ್ತು ಮನೆಗಳು. ಎಲ್ಲದಕ್ಕಿಂತ ದೊಡ್ಡಮನೆ ನಾರಣಪ್ಪನದು – ಒಂದು ತುದಿಯಲ್ಲಿ. ಒಂದು ಪಕ್ಕದ ಮನೆಯವರ ಹಿತ್ತಲಿಗೆ ಹತ್ತಿಕೊಂಡ ತುಂಗೆ. ನದಿಗೆ ಇಳಿಯಲು ಹಿಂದಿನ ಪುಣ್ಯಾತ್ಮರು ಕಟ್ಟಿಸಿದ ಮೆಟ್ಟಲುಗಳು.ಶ್ರಾವಣದಲ್ಲಿ ತುಂಗೆ ಏರಿ, ಅಗ್ರಹಾರಕ್ಕೆ ನುಗ್ಗಿಬಿಡುವವಳಂತೆ  ಮೂರು ನಾಲ್ಕು ದಿನ ಅಬ್ಬರಿಸಿ, ಮಕ್ಕಳ ಕಣ್ಣಿಗೆ ಕಿವಿಗೆ ಗೌಜಿನ ಹಬ್ಬವಾಗಿ, ಮತ್ತೆ ಇಳಿದು, ನಡುಬೇಸಗೆಯಲ್ಲಿ ಮೂರು ಸೀಳಿನ ಜಳಜಳ ಹೊಳೆಯಾಗುತ್ತಾಳೆ. ಆಗ ಬ್ರಾಹ್ಮಣರು ಮರಳಿನಲ್ಲಿ ಬಣ್ಣದ ಸೌತೆ, ಕಲ್ಲಂಗಡಿ ಹಣ್ಣನ್ನು ಬೆಳದು ಮಳೆಗಾಲಕ್ಕಷ್ಟು ತರಕಾರಿ ಮಾಡಿಕೊಳ್ಳುತ್ತಾರೆ. ವರ್ಷದಲ್ಲಿ ಹನ್ನೆರಡು ತಿಂಗಳ ಕಾಲವೂ ಬಾಳೆಹಗ್ಗದಲ್ಲಿ ಈ ಬಣ್ಣದ ಸೌತೆಕಾಯಿಗಳು ಮಾಡಿಗೆ ತೂಗುಬಿದ್ದಿರುತ್ತವೆ. ಮಳೆಗಾಲದಲ್ಲಿ ಅದರದ್ದೆ ಪಲ್ಯ, ಹುಳಿ, ಗೊಜ್ಜು, ಅದರ ಬೀಜದ ಸಾರು; ಬಸರಿಯರಂತೆ ಬ್ರಾಹ್ಮಣರು ಹುಳಿಮಾವಿನ ಗೊಜ್ಜು ಸಾರಿಗೆ ಹಾತೊರೆಯುತ್ತಾರೆ. ಹನ್ನೆರಡು ತಿಂಗಳೂ ವ್ರತ, ಬ್ರಾಹ್ಮಣಾರ್ಥ, ಮದುವೆ, ಮುಂಜಿ, ಶ್ರಾದ್ಧದ ಕರೆಗಳು. ಆರಾಧನೆ, ಟೀಕಾಚಾರ್ಯರ ಪುಣ್ಯದಿನ ಇತ್ಯಾದಿ ದೊಡ್ಡ ಹಬ್ಬಗಳಿಗೆ ಮೂವತ್ತು ಮೈಲಿ ದೂರದಲ್ಲಿದ್ದ ಮಠದಲ್ಲಿ ಊಟ – ಬ್ರಾಹ್ಮಣರ ಜೀವನ ಸಾಂಗವಾಗಿ ಸಾಗುತ್ತದೆ.

ಈ ಅಗ್ರಹಾರದ ಹೆಸರು ದೂರ್ವಾಸಪುರ. ಅದರ ಹಿಂದೊಂದು ಸ್ಥಳಪುರಾಣವುಂಟು. ಹರಿಯುವ ತುಂಗಾನದಿಯ ಮಧ್ಯದಲ್ಲಿ ಪುಟ್ಟ ದ್ವೀಪದೋಪಾದಿಯಲ್ಲಿ ವೃಕ್ಷಗಳಿಂದ ಕಗ್ಗಂಟಾದ ಒಂದು ಗುಡ್ಡವಿದೆ. ಅಲ್ಲಿ ದೂರ್ವಾಸರು ತಪ್ಪಸ್ಸು ಮಾಡುತ್ತಿದ್ದರೆಂದು ಪ್ರತೀತಿ. ದ್ವಾಪರ ಯುಗದಲ್ಲಿ ಒಂದು ವಿಶೇಷ ಘಟನೆ ನಡೆಯಿತು. ಇಲ್ಲಿಂದ ಹತ್ತು ಮೈಲಿ ದೂರದಲ್ಲಿರುವ ಕೈಮರದಲ್ಲಿ ಪಂಚಪಾಂಡವರು ಅರಣ್ಯವಾಸ ಮಾಡುತ್ತಿದ್ದರಂತೆ – ಸ್ವಲ್ಪ ಕಾಲ. ಒಮ್ಮೆ ದ್ರೌಪದಿದೇವಿಗೆ ನೀರಿನಲ್ಲಿ ಈಜಬೇಕೆಂದು ಮನಸ್ಸಾಯಿತಂತೆ. ಕೈಹಿಡಿದವಳ ಸರ್ವ ಆಸೆಯನ್ನೂ ಈಡೇರಿಸುವ ಭೀಮಸೇನ ತುಂಗಾನದಿಗೆ ಕಟ್ಟುಹಾಕಿದ. ಇತ್ತ ಬೆಳಿಗ್ಗೆ ದೂರ್ವಾಸ ಮುನಿಗಳು ಸ್ನಾನ ಸಂಧ್ಯಾವಂದನಾದಿ ಕಾರ್ಯಗಳಿಗೆಂದು ಎದ್ದು ನೋಡುತ್ತಾರೆ! –  ತುಂಗೆಯಲ್ಲಿ ನೀರೆ ಇಲ್ಲ. ಕುಪಿತರಾದರು. ಧರ್ಮಜನಿಗೆ ಇದು ತಕ್ಷಣ ದಿವ್ಯದೃಷ್ಟಿಯಿಂದ ಹೊಳೆದು ಭೀಮಸೇನನಿಗೆ ಬುದ್ಧಿ ಹೇಳಿದ. ಸರ್ವದಾ ಅಣ್ಣನ ಮಾತಿಗೆ ಬದ್ಧನಾದ ವಾಯುಪುತ್ರ ತಾನು ಹಾಕಿದ ಕಟ್ಟೆಯನ್ನು ಮೂರು ಕಡೆ ಒಡೆದು ನೀರು ಬೆಟ್ಟ. ಈಗಲೂ ಕೈಮರದಲ್ಲಿ ಕಟ್ಟೆಯಿಂದ ಮೂರು ಸೀಳಾಗಿ ನದಿ ಹರಿಯುತ್ತದೆ. ದೂರ್ವಾಸಪುರದ ಬ್ರಾಹ್ಮಣರು ಅಕ್ಕಪಕ್ಕದ ಅಗ್ರಹಾರಗಳ ಬ್ರಾಹ್ಮಣರಿಗೆ ಹೇಳುವುದುಂಟು: ದ್ವಾದಶಿಯ ದಿನ ಪ್ರಾತಃಕಾಲ ಪುಣ್ಯಾತ್ಮರಿಗೆ ದೂರ್ವಾಸ ವನದಿಂದ ಶಂಖಧ್ವನಿ ಕೇಳಿಸುವುದೆಂಬ ಪ್ರತೀತಿ ಇದೆ –  ಅಂತ. ಆದರೆ ಅಗ್ರಹಾರದ ಬ್ರಾಹ್ಮಣರು ಯಾರೂ ತಾವದನ್ನು ಕೇಳಿದ್ದೇವೆ ಎನ್ನುವ ಅವಿನಯ ತೋರಿಸುವುದಿಲ್ಲ.

ಹೀಗೆ ಸ್ಥಳಪುರಾಣದಿಂದ; ಮಹಾತಪಸ್ವಿ, ಜ್ಞಾನಿ ವೇದಾಂತ ಶಿರೋಮಣಿ ಪ್ರಾಣೇಶಚಾರ್ಯರು ಬಂದು ನೆಲಸಿದ್ದರಿಂದ; ಚಾಂಡಲ ನಾರಣಪ್ಪನ ದೆಸೆಯಿಂದ, ದಶದಿಕ್ಕುಗಳಲ್ಲೂ ಅಗ್ರಹಾರ ಪ್ರಖ್ಯಾತವಾಗಿತ್ತು. ಆಚಾರ್ಯರು ಪುರಾಣ ಕೇಳಲೆಂದಂತೂ ಅಕ್ಕಪಕ್ಕದ ಅಗ್ರಹಾರದವರು ರಾಮನವಮಿ ಇತ್ಯಾದಿ ದಿನಗಳಲ್ಲಿ ಕಿಕ್ಕಿರಿಯುತ್ತಾರೆ. ಪ್ರಾಣೇಶಾಚಾರ್ಯರಿಗೆ ನಾಣಪ್ಪ ದೊಡ್ಡದೊಂದು ಸಮಸ್ಯೆ. ದೇವರ ದಯನ್ನ ಸಮರ್ಥಿಸಬೇಕೆಂದು ರೋಗಿಯಾದ ಹೆಂಡತಿಯ ಸೇವೆಯನ್ನ ಮಾಡುತ್ತ, ಅರ್ಥ ಗೊತ್ತಿರದ ದುರ್ನಡತೆಯನ್ನು ತಾಳ್ವೆಯುಂದ ಹೊಟ್ಟೆಯಲ್ಲಿ ಹಾಕಿಕೊಳ್ಳತ್ತ. ಅರ್ಥ ಗೊತ್ತಿರದ ಮಂತ್ರಗಳಿಂದ ತುಂಬಿದ ಬ್ರಾಹ್ಮಣರ ತಲೆಯ ಕತ್ತಲನ್ನು ಮಂತ್ರಗಳನ್ನು ಮಿವರಿಸುವುದರ ಮೂಲಕ ತುಸುತುಸುವೇ ದೂಡುತ್ತ, ಅವರ ಗ್ರಹಸ್ಥಧರ್ಮದ ಗಂಧ ತೇಯುತ್ತದೆ….

ಇತ್ತ ಬ್ರಾಹ್ಮಣರು ಭತ್ತ ಉದುರಿದರೆ ಅರಳಾಗುವಷ್ಟು ಕಾದ ಅಗ್ರಹಾರದ ಬೀದಿಯಲ್ಲಿ ತಲೆಯನ್ನು ಅಂಗವಸ್ತ್ರದಿಂದ ಮುಚ್ಚಿ ಹೊಟ್ಟೆಯ ಹಸಿವಿಗೆ ನಿತ್ರಾಣರಾಗಿ ನಡೆದು, ಮೂರು ಸೀಳಾದ ತುಂಗಾನದಿಯನ್ನು ದಾಟಿ ತಂಪಾದ ಕಾಡು ಹೊಕ್ಕು ಒಂದು ಗಂಟೆ ಕಾಲೆಳೆದು ಪಾರಿಜಾತಪುರ ತಲ್ಪಿದರು. ಬಿಸಿಲಿಗೆ ನಿಲದ ತಂಪನ್ನು ಎತ್ತಿ ಹಿಡಿದ ಅಡಿಕೆತೋಟದ ಹಸಿರು ಗಾಳಿಯಿಲ್ಲದೆ ತೂಗಲಿಲ್ಲ. ಸುಡುವ ಧೂಳಿನಲ್ಲಿ ಬ್ರಾಹ್ಮಣರ ಬರಿಗಾಲು ಚುರುಚುರು ಸುಟ್ಟಿತು. ನಾರಾಯಣ ಸ್ಮರಣೆ ಮಾಡುತ್ತ ಬ್ರಾಹ್ಮಣರು ತಾವೆಂದೂ ಕಾಲಿಡದ ಸಾಹುಕಾರ ಮಂಜಯ್ಯನ ಮನೆಯೊಳಕ್ಕೆ ಬಂದರು. ಜಮಾ-ಖರ್ಚು ಬರೆಯುತ್ತ ಕೂತಿದ್ದ ವ್ಯವಹಾರಕುಶಲ ಸಾಹುಕಾರರು:

‘ಓಹೋಹೋ ಏನು ಬ್ರಾಹ್ಮಣರ ಗುಂಪಿಗೆ ಗುಂಪೇ ಇತ್ತ ಕಾಲುಬೆಳಿಸಿತಲ್ಲ, ಓಹೋಹೋ ಬರೋಣವಾಗಲಿ, ಕೂರೋಣವಾಗಲಿ, ಆಯಾಸ ಪರಿಹಾರ ಮಾಡಿಕೊಳ್ಳೋಣವಾಗಲಿ, ಕಾಲು ತೊಳೆಯುತ್ತೀರ. ಇವಳೇ ಒಂದಿಷ್ಟು ಬಾಳೆಹಣ್ಣನ್ನು ತನ್ನೇ…’

ಎಂದೂ ಸಾಂಗವಾಗಿ ಉಪಚಾರ ಹೇಳಿದರು. ಅವರ ಮಡದಿ ತಟ್ಟೆಯಲ್ಲಿ ಹಣ್ಣನ್ನು ತಂದು ‘ಬಂದಿರಾ’ ಎಂದು ಹೇಳಿ ಒಳಗೆ ಹೋದಳು. ಗರುಡಾಚಾರ್ಯ ಉಸ್ಸೆಂದು ಕೂತು ನಾರಣಪ್ಪ ಸತ್ತ ವಿಷಯವನ್ನು ತಿಳಿಸಿದ.

‘ಅಯ್ಯೋ ಭಗವಂತ – ಆತನಿಗೇನಾಗಿತ್ತಪ್ಪ? ಎಂಟು ಹತ್ತು ದಿನಗಳ ಕೆಳಗೆ ವ್ಯವಹಾರಕ್ಕೆಂದು ಇತ್ತ ಬಂದಿದ್ದ, ಶಿವಮೊಗ್ಗೆಗೆ ಹೋಗಿ ಬರುತ್ತೇನೆಂದ. ನಿಮ್ಮದೇನಾದರೂ ಕೆಲಸವಿದೆಯೆ ಎಂದು ಕೇಳಿದ. ಮಂಡಿಯಲ್ಲಿ ಅಡಿಕೆ ಮಾರಾಟವಾಯಿತೆ ತಿಳಿದು ಬಾ ಎಂದಿದ್ದೆ. ಶಿವ ಶಿವಾ… ಬೃಹಸ್ಪತಿವಾರ ಹಿಂದಕ್ಕೆ ಬರುತ್ತೇನೆಂದಿದ್ದ… ಏನು ಕಾಯಿಲೆಯಂತೆ?’

‘ನಾಲ್ಕು ದಿನದ ಜ್ವರ ಅಷ್ಟೆ – ಬಾವು ಎದ್ದಿತ್ತಂತೆ’ ಎಂದು ಹೇಳಿದ ದಾಸಾಚಾರ್ಯ.

‘ಶಿವ ಶಿವಾ’ ಎಂದು ಮಂಜಯ್ಯ ಕಣ್ಣು ಮುಚ್ಚಿ ಬೀಸಣಿಗೆಯಿಂದ ಗಾಳಿ ಹಾಕಿಕೊಂಡರು. ಶಿವಮೊಗ್ಗೆಗೆ ಅಗಾಗ್ಗೆ ಹೋಗಿಬರುತ್ತಿದ್ದ ಅವರಿಗೆ ಎರಡಕ್ಷರದ ಭಯಂಕರ ರೋಗದ ಹೆಸರು ಮನಸ್ಸಿಗೆ ಬಂದು ಅದನ್ನು ತನಗೆ ಸ್ಪಷ್ಟವಾಗಿ ಹೇಳಿಕೊಳ್ಳಲೂ ಭೀತಿಯಾಗಿ – ‘ಶಿವ ಶಿವಾ’ ಎಂದರು.

ಕ್ಷಣಮಾತ್ತದಲ್ಲಿ ಪಾರಿಜಾತಪುರದ ಅಡ್ಡಪಂಕ್ತಿ ಬ್ರಾಹ್ಮಣರೆಲ್ಲ ಕಟ್ಟೆಯ ಮೇಲೆ ಕೂಡಿದರು.

‘ನಿಮಗೆಲ್ಲ ಗೊತ್ತುಂಟಲ್ಲ’ – ವ್ಯವಹಾರದಲ್ಲಿ ಗಟ್ಟಿಗನಾದ ಗರುಡಾಚಾರ್ಯ ಹೇಳಿದ: ‘ಅಗ್ರಹಾರದ ನಮಗೂ ಅವನಿಗೂ ಜಗಳವಾಗಿ ಅನ್ನ ನೀರು ಇರಲಿಲ್ಲ. ನೀವೆಲ್ಲ ಅವನ ಮಿತ್ರರಾಗಿದ್ದಿರಲ್ಲ ಎಂದು, ಏನು. ಈಗ ಅವನ ಶವಸಂಸ್ಕಾರದ ಪ್ರಶ್ನೆ ಎದ್ದಿದ್ದರಿಂದ, ಏನು…?’

ಪಾರಿಜಾತಪುರದವರಿಗೆ ಮಿತ್ರವಿಯೋಗದಿಂದ ವ್ಯಥೆಯಾಯಿತು; ಮೇಲು ಜಾತಿಯ ಬ್ರಾಹ್ಮಣನೊಬ್ಬನ ಶವಸಂಸ್ಕಾರದ ಸಂದರ್ಭ ದೊರೆಯಿತೆಂದು ಸಂತೋಷವೂ ಆಯಿತು. ನಾರಣಪ್ಪ ತಮ್ಮಗಳ ಮನೆಯಲ್ಲಿ ಎಗ್ಗಿಲ್ಲದೆ ಊಟಮಾಡುತ್ತಾನಲ್ಲ ಎಂಬುದೇ ಅವರಿಗೆ ಅವನ ಮೇಲೆ ಇದ್ದ ಪ್ರೀತಿಗೆ ಅರ್ಧ ಕಾರಣ.

ಪಾರಿಜಾತಪುರದ ಬ್ರಾಹ್ಮಣರಿಗೆ ಪುರೋಹಿತರಾದ ಶಂಕರಯ್ಯನವರು ಹೇಳಿದರು:

‘ಬ್ರಾಹ್ಮಣರ ಧರ್ಮದ ಪ್ರಕಾರ ಸರ್ಪವೂ ದ್ವಿಜ ಎಂದಿದೆ. ಅರ್ಥಾತ್ ಸರ್ಪದ ಹೆಣ ಕಣ್ಣಿಗೆ ಬಿದ್ದರೆ ಅದಕ್ಕೆ ಯಥೋಚಿತ ಸಂಸ್ಕಾರ ಮಾಡಬೇಕು. ಇಲ್ಲವೆ ಊಟ ಮಾಡುವಂತಿಲ್ಲ ಎಂಬ ವಿಧಿಯಿದೆ. ಇಂತಹ ಪ್ರಸಂಗದಲ್ಲಿ ಬ್ರಾಹ್ಮಣನೊಬ್ಬ ದೈವಾಧೀನನಾದಾಗ ನಾವು ಕೈಕಟ್ಟಿ ಕೂರುವುದು ಏನಕೇನ ಸರಿಯಲ್ಲ. ಏನೂಂತೀರಿ?’

ಎಂದವರು ತಮಗೂ ಶಾಸ್ತ್ರ ಗೊತ್ತಿದೆ, ನಿಮಗಿಂತ ನಾವು ಕೀಳಲ್ಲ ಎಂದು ಮಾಧ್ವರ ಗರ್ವ ಇಳಿಸಲು ಹೇಳಿದರು.

ಇದರಿಂದ ದುರ್ಗಾಭಟ್ಟರಿಗೆ ಅತೀವ ಕಳವಳವಾಯಿತು : ಈ ಭೋಳೇ ಬ್ರಾಹ್ಮಣ ದುಡುಕಿಬಿಟ್ಟು ಸ್ಮಾರ್ತರಿಗೇ ಅಪಕೀರ್ತಿ ಬರುವಂತೆ ಮಾಡಿಬಿಟ್ಟನಲ್ಲ ಎಂದು ವಕ್ರವಾಗಿ ಮಾತನ್ನಾಡಿದ :

‘ಸರಿ ಸರಿ ಒಪ್ಪಿದೆ. ಪ್ರಾಣೇಶಚಾರ್ಯರು ಇದೇ ಹೇಳೋದು. ಆದರೆ ನಮಗೆ ಬಂದಿರೋ ಸಂದಿಗ್ಧ : ಮದ್ಯಮಾಂಸಾದಿಗಳನ್ನು ಮಾಡಿ ಸಾಲಿಗ್ರಾಮವನ್ನು ನೀರಿಗೆಸೆದ ನಾರಣಪ್ಪ ಬ್ರಾಹ್ಮಣ ಹೌದೆ ಅಲ್ಲವೆ ಎಂಬುದು. ಜಾತಿ ಕೆಡಲಿಕ್ಕೆ ಯಾರು ತಯ್ಯಾರು ಹೇಳಿ? ಆದರೆ ಬ್ರಾಹ್ಮಣನೊಬ್ಬನ ಶವಾನ್ನ ತೆಗೆಯದಿರೋದು ಅಧರ್ಮ ಎಂಬೋದನ್ನ ನಾನು ಸಂಪೂರ್ಣ ಒಪ್ಪುತ್ತೇನೆ.’

ಶಂಕರಯ್ಯನಿಗೆ ಎದೆ ಜಗ್ಗೆಂದು ಭೀತಿಯಾಯಿತು. ಮೊದಲೇ ಕೀಳೆಂದು ಜರಿಸಿಕೊಂಡು ತಮ್ಮವರು ಈ ಕೃತ್ಯದಿಂದ ಇನ್ನಷ್ಟು ಅಪಖ್ಯಾತರಾಗುವುದು ಅವರ ಮನಸ್ಸಿಗೆ ಸರಿಬರದೆ:

‘ಹಾಗಿದ್ದಲ್ಲಿ, ಛಿ-ಛಿ-ಛಿ ನಾವು ದುಡುಕುವುದಿಲ್ಲಪ್ಪ. ನಿಮ್ಮಲ್ಲಿ ದಕ್ಷಿಣಕ್ಕೆ ಖ್ಯಾತರಾದ ಪ್ರಾಣೇಶಾಚಾರ್ಯರು ಇದ್ದಾರಲ್ಲ. ಅವರು ಆಪದ್ಧರ್ಮವೇನು, ಧರ್ಮಸೂಕ್ಷ್ಮವೇನು ಎಂಬೋದನ್ನ ತಿಳಿದು ಹೇಳಲಿ. ನಾವು ಖಂಡಿತ ನಾರಣಪ್ಪನ ಶವಸಂಸ್ಕಾರ, ವೈಕುಂಠ ಸಮಾರಾಧನೆಯನ್ನು ನಡೆಸೋಕ್ಕೆ ಸಿದ್ಧರಿದ್ದೇವೆ’ ಎಂದರು.

ಮಂಜಯ್ಯ – ‘ಖರ್ಚಿನ ಚಿಂತೆಯೇನೂ ಬೇಡ. ನನ್ನ ಮಿತ್ರನಲ್ಲವೆ ಅವ? ನಾನೇ ಸ್ವತಃ ದಾನ ಇತ್ಯಾದಿಗಳನ್ನು ಮಾಡಿಸುತ್ತೇನೆ’ ಎಂದು ಜಿಪುಣ ಮಾಧ್ವರಿಗೆ ಚುಚ್ಚಲೆಂದು ಹೇಳಿದರು.