ದಾಸಾಚಾರ್ಯನಿಗೆ ತಾನಿನ್ನು ಊಟ ಮಾಡದಿದ್ದರೆ ಸತ್ತುಬಿಡಬಹುದೆಂದು ಭಯವಾಯಿತು. ಉರಿಯುವ ಬೆಂಕಿಗೆ ಹೊಯ್ದ ತುಪ್ಪದ ಹಾಗೆ ಮಕ್ಕಳಿಗೆಂದು ಬೇಯಿಸುತ್ತಿದ್ದ ಗಂಜಿಯ ವಾಸನೆ ಬೇರೆ. ಬಾಯಲ್ಲಿನ ಉಗುಳನ್ನು ತುಪ್ಪಿದ, ನುಂಗಿದ – ಕೊನೆಗೆ ಸಹಿಸಲಾರದೆ ಎದ್ದು ಹೊರಟ. ಯಾರ ಕಣ್ಣಿಗೂ ಬೀಳದಂತೆ ಬಿಸಿಲಿನ ಉರಿಯಲ್ಲಿ ತುಂಗಾನದಿಗೆ ಇಳಿದು ಸ್ನಾನ ಮಾಡಿ, ಪಾರಿಜಾತಪುರಾಭಿಮುಖನಾಗಿ ನಡೆದ. ಸಾಹುಕಾರ ಮಂಜಯ್ಯನ ಚಪ್ಪರದ ನೆರಳಿನಲ್ಲಿ ನಿಂತ. ಹೇಗೆ ಬಾಯಾರ ಹೇಳಿಕೊಳ್ಳೋದು? ಜನ್ಮಾಪಿ ಅವನು ಈ ಅಡ್ಡಪಂಕ್ತಿಯವರ ಮನೆಗಳಲ್ಲಿ ನೀರು ಮುಟ್ಟಿದವನಲ್ಲ. ತತ್ರಾಪಿ ತಾನು ಬ್ರಾಹ್ಮಣಾರ್ಥದಿಂದ ಹೊಟ್ಟೆ ಹೊರಿಯಬೇಕಾದ ಬ್ರಾಹ್ಮಣ. ಉಳಿದವರಿಗೆ ತಿಳಿದರೆ ಏನು ಗತಿ? ಆದರೆ ಯೋಚನೆಗಿಂತ ಶೀಘ್ರವಾಗಿ ಅವನ ಕಾಲುಗಳು ಅವನನ್ನು ಅವಲಕ್ಕಿ ಉಪ್ಪಿಟ್ಟು ತಿನ್ನುತ್ತಿದ್ದ ಮಂಜಯ್ಯನ ಎದುರು ತಂದು ನಿಲ್ಲಿಸಿತ್ತು.

‘ಓಹೋಹೋ ಬರೋಣಾಗಲಿ ಬರೋಣಾಗಲಿ, ಆಚಾರ್ಯರೆ. ಏನು ಇತ್ತ ಕಾಲು ಬೆಳಸಿದಿರಲ್ಲ? ಪ್ರಾಣೇಶಾಚಾರ್ಯರೇನಾದರೂ ಒಂದು ನಿರ್ಧಾರಕ್ಕೆ ಬಂದರ – ಏನು ಕತೆ? ಪಾಪ, ಅವನ ಶವ ತೆಗೆಯದ ಹೊರ್ತು ನಿಮಗೆ ಯಾರಿಗೂ ಊಟವಿಲ್ಲ, ಅಲ್ಲವೆ? ಕೂರೋಣಾಗಲಿ, ಆಯಾಸ ಪರಿಹಾರ ಮಾಡಿಕೊಳ್ಳೋಣಾಗಲಿ, ಇವಳೇ ಆಚಾರ್ಯರಿಗೆ ಮಣೆ ಹಾಕೇ’

ಎಂದು ಮಂಜಯ್ಯ ಉಪಚರಿಸಿದರು.

ಉಪ್ಪಿಟ್ಟನ್ನೇ ನೋಡುತ್ತ ಧ್ಯಾಸವಿಲ್ಲದವನಂತೆ ದಾಸಾಚಾರ್ಯ ನಿಂತುಬಿಟ್ಟ. ಮಂಜಯ್ಯ ಅವನನ್ನು ಕರುಣೆಯಿಂದ ನೋಡಿದರು:

‘ತಲೆ ಸುತ್ತುತ್ತಿದೆಯೆ, ಆಚಾರ್ಯರೇ. ಸ್ವಲ್ಪ ಪಾನಕ ಮಾಡಿಸಲೆ?’

ದಾಸಾಚಾರ್ಯ ಹೂ ಎನ್ನದೆ ಊಹೂ ಎನ್ನದೆ, ಹಾಕಿದ ಮಣೆಯ ಮೇಲೆ ಕುಕ್ಕುರುಗಾಲಿನಲ್ಲಿ ಕೂತು ಯೋಚಿಸಿದ. ಹೇಗೆ, ಹೇಗೆ ಬಾಯಾರೆ ಕೇಳುವುದು? ಧೈರ್ಯ ತಂದು ಸುತ್ತಿಸುತ್ತಿ ಮಾತಾಡಲು ಪ್ರಾರಂಭಿಸಿದ. ಮಂಜಯ್ಯನವರು ಉಪ್ಪಿಟ್ಟನ್ನು ತಿನ್ನುತ್ತ ಕೇಳಿಸಿಕೊಂಡರು.

‘ನಿನ್ನೆ ನಮ್ಮವರು ಇಲ್ಲಿ ಆಡಿದ ರೀತಿ ನನಗಂತೂ ಸರಿಬರಲಿಲ್ಲ ಮಂಜಯ್ಯ.’

‘ಛೆ ಛೆ ಛೆ, ಹಾಗೆನ್ನಬಾರದು ನೀವು’ ಎಂದರು ಮಂಜಯ್ಯ, ವಿನಯಕ್ಕಾಗಿ.

‘ಹಾಗೆ ನೋಡಿದರೆ ಈ ಕಲಿಯುಗದಲ್ಲಿ ನಿಜವಾದ ಬ್ರಾಹ್ಮಣರು ಎಷ್ಟು ಜನರಿದ್ದಾರೆ ಹೇಳಿ ಮಂಜಯ್ಯ?’

‘ಒಪ್ಪಿದೆ, ಒಪ್ಪಿದೆ ಆಚಾರ್ಯರೇ, ಕಾಲ ಕೆಟ್ಟುಹೋಯಿತು –  ನಿಜ.’

‘ಯಾಕೆಂದೆನೆಂದರೆ –  ನೇಮ-ನಿಷ್ಠೆಯಲ್ಲಿ ಯಾವ ಬ್ರಾಹ್ಮಣರಿಗೆ ನೀವು ಕಡಿಮೇಂತ ನಾನು ಕೇಳೋದು, ಮಂಜಯ್ಯನವರೆ. ಕಾಸು ಕೊಳ್ಳದೆ ಸಂಸ್ಕಾರ ಮಾಡ್ತೀನಿ ಅಂತ ತಾವು ಅಂದರೆ, ನಮ್ಮ ಅಗ್ರಹಾರದ ಗರುಡ, ಲಕ್ಷ್ಮಣ ಕಾಗೆಗಳ ಹಾಗೆ ಬಂಗಾರಕ್ಕೆಂದು ಜಗಳವಾಡುತ್ತಾರೆ…’

‘ಅಯ್ಯೊ ಅಯ್ಯೊ, ಅಲ್ಲವೆ?’ ಎಂದು ಯಾವ ನಿಷ್ಠರವನ್ನೂ ಕಟ್ಟಿಕೊಳ್ಳಲು ಆಶಿಸದ ಮಂಜಯ್ಯ ತೇಲಿಸಿ ಆಡಿದರು.

‘ಗುಟ್ಟಾಗಿ ನಿಮ್ಮ ಹತ್ತಿರ ಮಾತ್ರ ಒಂದು ಮಾತು, ಮಂಜಯ್ಯ : ಎಲ್ಲಾ ಅಂಬೋದು ಏನು ಅಂದರೆ ಗರುಡ ಮಾಟ ಮಾಡಿಸಿ ಹಾಗೆ ನಾರಣಪ್ಪ ದಾರಿಗೆಟ್ಟ ಅಂತ. ಅದರ ಫಲವಾಗಿ ಈಗ ಅವನ ಸ್ವಂತ ಮಗನೇ ಮಿಲಿಟರಿ ಸೇರಿಬಿಟ್ಟ ಅಂತ. ಆ ಪಾಪದ ಲಕ್ಷ್ಮೀದೇವಮ್ಮನ ನಗನಾಣ್ಯವನ್ನೂ ಮುಟ್ಟುಗೋಲು ಹಾಕಿಬಿಟ್ಟನಲ್ಲ…’

ಮಂಜಯ್ಯನವರಿಗೆ ಸಂತೋಷವಾದರೂ ಮಾತಾಡಲಿಲ್ಲ.

‘ಈಗ ಯಾರು ನಿಜವಾದ ಬ್ರಾಹ್ಮಣರಿದ್ದಾರೆ ಎಂಬೊದಕ್ಕೆ ಈ ಮಾತನ್ನಾಡಿದೆನೆ ಹೊರತು ಗರುಡನ ಮೇಲೇನೂ ನನಗೆ ದ್ವೇಷವಿಲ್ಲ. ವರ್ಷಕ್ಕೊಮ್ಮೆ ಗುರುಗಳ ಹತ್ತಿರ ಪಂಚಮುದ್ರ ಧಾರಣೆ ಮಾಡಿಸಿಕೊಂಡ ಕ್ಷಣ ಎಲ್ಲ ಪಾಪವೂ ಸುಟ್ಟುಬಿಡುತ್ತದ? ತಾವು ಮಾಡದ ಕೆಲಸವನ್ನ ನಿಮ್ಮ ಹತ್ತಿರ ಮಾಡಿಸಬೇಕೆಂದು ಅವರು ಬಗೆದದ್ದು ನನಗೆ ಸರ್ವಥಾ ಒಪ್ಪಿಗೆಯಾಗಲಿಲ್ಲ. ನೀವು ಏನೇ ಹೇಳಿ ಮಂಜಯ್ಯ, ನಿಜವಾದ ಬ್ರಾಹ್ಮಣರೆಂದರೆ ನಮ್ಮ ಪ್ರಾಣೇಶಾಚಾರ್ಯರು. ಅದೇನು ತೇಜಸ್ಸು! ಅದೇನು ತಪಸ್ಸು! ತು, ತು, ತು, ತು…’

‘ಅಲ್ಲವೆ, ಅಲ್ಲವೆ, ಅಲ್ಲವೆ…’ ಎಂದು ಮಂಜಯ್ಯ ಒಪ್ಪಿ, ‘ಸ್ನಾನ ಮಾಡಿದ್ದೀರ, ಆಚಾರ್ಯರೆ?’ ಎಂದು ಕೇಳಿದರು.

ದಾಸಾಚಾರ್ಯನಿಗೆ ಮುಖ ಚಿರೋಟಿಯಗಲ ಹರಡಿ ಹರ್ಷವಾಯಿತು.

‘ಓಹೋ. ನದಿಯಲ್ಲಿ ಮಾಡಿಯೇ ಇತ್ತ ಬಂದೆ’ ಎಂದ.

‘ಹಾಗಿದ್ದರೆ ಏನನ್ನಾದರೂ ತೆಗೆದುಕೊಳ್ಳಿ, ಆಚಾರ್ಯರೆ.’

‘ನನಗೇನೂ ನಿಮ್ಮಲ್ಲಿ ಆಹಾರ ಸ್ವೀಕರಿಸಲು ಅಡ್ಡಿಯಿಲ್ಲ. ಆದರೆ ನಮ್ಮ ಅಗ್ರಹಾರದ ಕಿಡಿಗೇಡಿಗಳಿಗೇನಾದರೂ ತಿಳಿದರೆ ನನ್ನ ಬ್ರಾಹ್ಮಣಾರ್ಥಕ್ಕೆ ಮುಟ್ಟುಗೋಲು ಹಾಕಿಬಿಡುತ್ತಾರಲ್ಲ, ಮಂಜಯ್ಯ?’

ಆರ್ತನಾಗಿ ದಾಸಾಚಾರ್ಯ ಹೇಳಿದ ಮಾತಿಗೆ ಮಂಜಯ್ಯನವರು ಗುಟ್ಟಾಗಿ ಹತ್ತಿರ ಬಂದು, ಇನ್ನೊಬ್ಬ ಅಗ್ರಹಾರದ ಬ್ರಾಹ್ಮಣ ತಮ್ಮಲ್ಲಿ ಬಂದನಲ್ಲ ಎಂದು ಅತಿ ಹರ್ಷರಾಗಿ:

‘ನೀವು ಇಲ್ಲಿ ಉಂಡಿರೆಂದು ನಾವು ಯಾಕೆ ಹೇಳಬೇಕು, ಆಚಾರ್ಯರೆ? ಏಳಿ, ಏಳಿ. ಕಾಲು ತೊಳೆದುಕೊಳ್ಳಿ. ಏ ಇವಳೇ, ಇಲ್ಲೊಂದಷ್ಟು ಉಪ್ಪಿಟ್ಟು…’

ಉಪ್ಪಿಟ್ಟಿನ ಶಬ್ದವೆತ್ತಿದೊಡನೆಯೇ ದಾಸಾಚಾರ್ಯನ ಹೊಟ್ಟೆಯೊಳಗೆ ಗೊಳ್ ಗೊಳ್ ಗೊಟರ್ ಎಂದು ಕರುಳು ಹೊರಳಿತು. ಆದರೆ ಬೇಯಿಸಿದ ಪದಾರ್ಥವನ್ನು ಮುಟ್ಟಲು ದಾಸಾಚಾರ್ಯ ಹೆದರಿ:

‘ಬೇಡಿ, ಬೇಡಿ, ನನ್ನ ಆರೋಗ್ಯಕ್ಕೆ ಉಪ್ಪಿಟ್ಟು ಸರಿಬರೋದಿಲ್ಲ. ಒಂದಿಷ್ಟು ಖಾಲಿ ಅವಲಕ್ಕಿ, ಬೆಲ್ಲ, ಹಾಲಾದರೆ ಸಾಕು’ ಎಂದರು.

ಮಂಜಯ್ಯನವರಿಗೆ ಅರ್ಥವಾಗಿ ನಗೆ ಬಂದು, ಆಚಾರ್ಯರಿಗೆ ಕಾಲು ತೊಳೆಯಲು ನೀರುಕೊಟ್ಟು, ಗುಟ್ಟಾಗಿ ಅಡಿಗೆಮನೆಯಲ್ಲಿ ಕೂರಿಸಿ ಖದ್ದಾಗಿ ತಾವೇ ಕೂತು ಉಪಚರಿಸುತ್ತ ಹಾಲು, ಬೆಲ್ಲ, ಅವಲಕ್ಕಿ, ಬಾಳೆಹಣ್ಣು, ಜೇನುತುಪ್ಪ ತಿನ್ನಿಸಿದರು. ತಿಂದ ಹಾಗೆ ಹಿಗ್ಗುತ್ತ ಬಂದಿದ್ದ ದಾಸಾಚಾರ್ಯನಿಗೆ ಕೊನೆಯಲ್ಲಿ ಒತ್ತಾಯ ಮಾಡಿ ‘ಒಂದು ಚಮಚಕ್ಕೇನೆಂದು’ ಒಂದು ಚಮಚ ಉಪ್ಪಿಟ್ಟು ತಿನ್ನಿಸಿದರು. ಆಮೇಲಿಂದ ಮತ್ತೆ ನಾಲ್ಕು ಚಮಚ ಉಪ್ಪಿಟ್ಟನ್ನು ಖುಷಿಯಿಂದ ಮಂಜಯ್ಯನವರ ಹೆಂಡತಿ ಬಡಿಸಿದರೆ ‘ಪರಮಾತ್ಮ’ ಎಂದು ಹೊಟ್ಟೆಯುಜ್ಜಿಕೊಳ್ಳುತ್ತ ದಾಸಾಚಾರ್ಯ ‘ಬೇಡ’ ಎನ್ನಲಿಲ್ಲ. ದಾಕ್ಷಿಣ್ಯಕ್ಕೆ ಅನ್ನಲೇಬೇಕಾದಂತೆ ‘ಸಾಕು, ಸಾಕು, ನಿಮಗಿರಲಿ’ ಎಂದು ಕೈಯನ್ನು ಎಲೆಗೆ ಅಡ್ಡ ಮಾಡುವಂತೆ ನಟಿಸಿದ ಅಷ್ಟೆ.