ದಾಸಾಚಾರ್ಯ ಹಸಿವು ತಾಳಲಾರದೆ ಸಂಕಟದಿಂದ ನಾರಣ ನಾರಣ ಎನ್ನುತ್ತ, ಉಶ್ ಉಶ್ ಎಂದು ಹೊಟ್ಟೆಯುಜ್ಜಿಕೊಳ್ಳುತ್ತ, ಹಾಸಿಗೆಯಲ್ಲಿ ಹೊರಳಿದ. ಅವನ ಮಗ ನಿದ್ದೆ ಬರದೆ ತಾಯನ್ನ ಎಬ್ಬಿಸಿದ. ‘ಅಮ್ಮ ದುರ್ನಾತ, ದುರ್ನಾತ’ ಎಂದ. ಹಸಿವಿನ ಸಂಕಟದಲ್ಲಿದ್ದ ದಾಸಾಚಾರ್ಯನಿಗೆ ಯಾವ ನಾತವೂ ಬರಲಿಲ್ಲ. ಆದರೆ ಅವನ ಹೆಂಡತಿ ‘ಹೌದಲ್ಲ’ ಎಂದಳು ‘ಇವರೇ, ದುರ್ನಾತ’ ಎಂದು ಗಂಡನನ್ನು ತಟ್ಟಿ ತಟ್ಟಿ ಹೇಳಿದಳು, ‘ಬೇಸಗೆ – ಹೆಣ ಕೊಳೆತು, ನಾತ ಇಡೀ ಅಗ್ರಹಾರಕ್ಕಡರುತ್ತಿದೆ’ ಎಂದಳು. ಅರೆಮರಳು ಲಕ್ಷ್ಮೀದೇವಮ್ಮ ‘ನಾರಣಪ್ಪನ ಪ್ರೇತ ಪ್ರೇತ’ವೆಂದು ಕೂಗಿದ್ದು ಕೇಳಿ ಕಿರಚಿಕೊಂಡಳು. ಶವದ ಪ್ರೇತವೇನಾದರೂ ಅಡ್ಡಾಡುತ್ತ ದುರ್ನಾತ ಹರಡುತ್ತಿದೆಯೋ ಎಂದು ಕಂಪಿಸಿದಳು.

* * *

ಗುಡಿಯಲ್ಲಿ ದುರ್ನಾತವಾಗಿ ಬೆಳ್ಳಿಗೆ ನಿದ್ದೆ ಬರದೆ ಎದ್ದು ಕೂತಳು. ಕಪ್ಪು ಕತ್ತಲಲ್ಲಿ ಏನೂ ಕಾಣದು. ಹೊರಗೆ ಬಂದಳು. ಹೊಲೆಯ ಹೊಲತಿಯರನ್ನು ಬೆಂಕಿ ಕೊಟ್ಟು ಗುಡಿ ಸುಟ್ಟು ಬೂದಿಯಾಗಿ ಬೂದಿಯಲ್ಲಿ ಬೆಂಕಿಯ ಕಿಡಿ ಗಾಳಿಗೆ ಮಿನುಗುತ್ತಿತ್ತು. ದೂರದ ಪೊದೆಯಲ್ಲೊಂದು ರಾಶಿ ಮಿಣುಕು ಹುಳುಗಳು ಮಿನುಗುತ್ತಿದ್ದುದನ್ನು ಕಂಡು ಮೆತ್ತಗೆ ಅವುಗಳ ಬಳಿ ಹೋಗಿ, ಉಟ್ಟ ತುಂಡನ್ನು ಬಿಚ್ಚಿ, ತಣ್ಣಗಿನ ಗಾಳಿಯಲ್ಲಿ ಹಿತವಾಗಿ ಬೆತ್ತಲೆ ನಿಂತು, ತುಂಡನ್ನು ಜೋಕೆಯಾಗಿ ಬೀಸಿ, ಮಿಣಕ್ ಮಿಣಕ್ಕೆಂದು ಬೆಳಕನ್ನು ಚಿಮ್ಮುವ ಮಿಂಚುಹುಳುಗಳನ್ನು ತುಂಡಿನಲ್ಲಿ ಹಿಡಿದು, ದಿಡ ದಿಡ ಓಡಿ ತನ್ನ ಗುಡಿಗೆ ಬಂದು, ಗುಡಿಯಲ್ಲಿ ಅವನ್ನು ಕೊಡವಿದಳು. ಮಿಣಕ್ ಮಿಣಕ್ ಎಂದು ಅವು ಗುಡಿಯಲ್ಲಿ ಅಸ್ಪಷ್ಟವಾದ ಬೆಳಕನ್ನು ಮಾಡುತ್ತ ಹಾರಾಡಿದವು. ಬೆಳ್ಳಿ ಕೈಯಲ್ಲಿ ನೆಲವನ್ನು ಪರದಾಡುತ್ತ ಹುಡುಕಿದಳು. ನರಳುತ್ತಿದ್ದ ಅವಳ ಅಪ್ಪ ಅಮ್ಮ ಬೆಳ್ಳಿಯ ಬಳಚುವ ಕೈ ತಗಲಿ ‘ಇಶ್ಯಿ! ಈ ಹೊತ್ತಲ್ಲಿ ಈ ಕುರ್ದೆಯೇನು ಮಾಡ್ತಿದೆ’ ಎಂದು ಗೊಣಗಿದರು. ‘ಇಲಿ ಸತ್ತು ದುರ್ನಾತ – ಇಶ್ಯಿ’ ಎಂದು ಬೆಳ್ಳಿ ತಡಕಾಡಿ, ಮೂಲೆಯಲ್ಲಿ ತಣ್ಣನೆ ಕೊರಿಯುತ್ತಿದ್ದ ಇಲಿಯನ್ನು ಮಿಣುಕುಹುಳುಗಳ ಬೆಳಕಲ್ಲಿ ಕಂಡು – ‘ಅಯಯ್ಯಪಾ’ ಎಂದು ಒದರಿ, ಬಾಲದಿಂದ ಅದನ್ನೆತ್ತಿ ಹೊರಗೆಸೆದು ಬಂದು : ‘ಈ ಪಾಡು ಓಡಲಿಕ್ಕೆ ಸಾಯಲಿಕ್ಕೆ ಏನಾಗಿವೆಯೋ ಈ ಇಲಿಗಳಿಗೆ ರಂಡೆ ಕುರ್ದೆಗಳು’ – ಎಂದು ಶಪಿಸಿ, ತುಂಡುಟ್ಟು, ನೆಲಕ್ಕೊರಗಿ ಮಲಗಿ, ನಿದ್ದೆಹೋದಳು.

* * *

ಹೊಟ್ಟೆಯಲ್ಲಿ ತಪತಪವೆನ್ನುವ ಹಸಿವಿನಿಂದ ನಿದ್ದೆ ಬರದೆ ಕೆಂಗಣ್ಣಾದ ದಾಸಾಚಾರ್ಯ, ವೆಂಕಟರಮಣಾಚಾರ್ಯ, ಶ್ರೀನಿವಾಸಾಚಾರ್ಯ, ಗುಂಡಾಚಾರ್ಯ, ಹನುಮಂತಾಚಾರ್ಯ, ಲಕ್ಷ್ಮಣಾಚಾರ್ಯ, ಗರುಡಾಚಾರ್ಯ, ದುರ್ಗಾಭಟ್ಟ ಬೆಳಿಗ್ಗೆ ಎದ್ದು ಮುಖ ತೊಳೆದು ಅಗ್ರಹಾರಕ್ಕೆಂತಹ ಅನಿಷ್ಟ ಬಂತಪ್ಪ ಎಂದು ನಾರಣಪ್ಪನನ್ನು ಶಪಿಸುತ್ತ ಚಾವಡಿಗೆ ಬಂದರು. ಮನೆಯೊಳಗೆ ದುರ್ನಾತವೆಂದು ಮಕ್ಕಳು ಅಂಗಳದಲ್ಲಿ, ಹಿತ್ತಲಿನಲ್ಲಿ, ಕುಣಿಯುತ್ತಿದ್ದರು. ಹೆಂಗಸಿರಿಗೆ ಭೀತಿ : ಬೀದಿಯಲ್ಲಿ ಅಲೆಯುವ ನಾರಣಪ್ಪನ ಪ್ರೇತ ಮಕ್ಕಳನ್ನೆಲ್ಲಾದರೂ ಮೆಟ್ಟಿದರೆ ಏನು ಗತಿ? ಒಳಗೆ ಬರಲೊಪ್ಪದ ಮಕ್ಕಳಿಗೆ ಎರಡೆರಡು ಬಾರಿಸಿ ಒಳಕ್ಕೆ ನೂಕಿ ಬಾಗಿಲು ಹಾಕಿದ್ದಾಯಿತು. ಹೀಗೆ ಹಾಡುಹಗಲಿನಲ್ಲಿ ಮನೆಯ ಬಾಗಿಲನ್ನು ಎಂದೂ ಮುಚ್ಚುವುದಿಲ್ಲ. ಹೊಸಲಿಗೆ ರಂಗವಲ್ಲಿಯಿಲ್ಲದೆ, ಅಂಗಳಕ್ಕೆ ಸಗಣಿನೀರಿಲ್ಲದೆ, ಬೆಳಗಾದರೂ ಅಗ್ರಹಾರ ಬೆಳಗಾದಂತೆ ಕಾಣುತ್ತಿರಲಿಲ್ಲ. ಬಿಕೋ ಎನ್ನುತ್ತಿತ್ತು. ಪ್ರತಿ ಮನೆಯ ಕತ್ತಲೆ ಕೋಣೆಯಲ್ಲೆಲ್ಲೊ ಒಂದು ಶವವಿದ್ದಂತೆ ಭಾವ. ಚಾವಡಿಯ ಮೇಲೆ ತಲೆಮೇಲೆ ಕೈ ಹೊತ್ತು ಕೂತು ಬ್ರಾಹ್ಮಣರಿಗೆ ಏನೂ ಮಾಡಲೂ ಕಾಲೇ ಬಾರದು.

ವೆಂಕಟರಮಣಾಚಾರ್ಯನ ತುಂಟ ಮಕ್ಕಳು ಮಾತ್ರ ತಾಯಿಯ ಆಜ್ಞೆಯನ್ನು ಧಿಕ್ಕರಿಸಿ ಹಿತ್ತಲಿನಲ್ಲಿ ನಿಂತು, ಗುಡುಗುಡು ಎಂದು ಉಗ್ರಾಣದಿಂದ ಹಿತ್ತಲಿಗೆ ಜಿಗಿಯುತ್ತದ್ದ ಇಲಿಗಳನ್ನು ಎಣಿಸುತ್ತ ಚಪ್ಪಾಳೆಯಿಡುತ್ತ ಕುಣಿದರು. ಕೊಳಗದಲ್ಲಿ ಅಪ್ಪಯ್ಯ ಭತ್ತವನ್ನು ಅಳೆಯುವಾಗ ಎಣಿಸುವ ಮರ್ಜಿಯಲ್ಲಿ ಅವರ ಲೆಕ್ಕ ನಡೆದಿತ್ತು!

ಲಾಭ ಲಾಭ
ಎರಡೋ ಎರಡು…
ಮೂರೋ ಮೂರು…
ನಾಲ್ಕೋ ನಾಲ್ಕು…
ಐದೋ ಐದು…
ಆರೋ ಆರು…
ಮತ್ತೋಂದೋ ಮತ್ತೋಂದು…

ಬರಲು ತೆಗೆದುಕೊಂಡು ಬಾರಿಸಲು ಬಂದ ತಾಯಿಗೆ ‘ನೋಡಮ್ಮ ನೋಡು, ಎಂಟೋ ಎಂಟು, ಒಂಬತ್ತೋ ಒಂಬತ್ತು, ಹತ್ತೋ ಹತ್ತು, ಹತ್ತು’ ಎಂದು ಚಪ್ಪಾಳೆ ತಟ್ಟಿ ಕುಣಿಯುತ್ತ, ‘ನೋಡಮ್ಮ ನೋಡು, ಹತ್ತು ಇಲಿ’ ಎಂದು ಕೇಕೇಹಾಕಿದರು.

ತಾಯಿ ಅದಕ್ಕೆ ಕುಪಿತಳಾಗಿ:

‘ತಿಂದ ಅನ್ನ ನಿಮಗೆ ನೆತ್ತಿಗೇರಿದೆ ಅಲ್ಲವ? ಪ್ರಾರಬ್ಧ ಇಲಿಗಳನ್ನೇನು ಎಣಿಸೋದು? ಒಳಗೆ ನಡೀರಿ – ಇಲ್ಲವೆ ಬಾಸುಂಡೆ ಬರುವಂತೆ ಥಳಿಸಿ ಬಿಡುತ್ತೇನೆ. ಉಗ್ರಾಣದ ತುಂಬ ಇವೆ ಅನಿಷ್ಟದವು. ಅಕ್ಕಿ ಬೇಳೆಯಲ್ಲೆಲ್ಲ ಅವುಗಳ ಹಿಕ್ಕೆ ತುಂಬಿರುತ್ತದೆ.’

ಎಂದು ಗೊಣಗುತ್ತ ಮಕ್ಕಳನ್ನು ಅಟ್ಟಿ ಒಳಗೆ ತಳ್ಳಿ ಕೂಡಿದಳು. ಒಳಗೊಂದು ಇಲಿ ತಟ್ಟನೆ ಪ್ರತ್ಯಕ್ಷವಾಗಿ, ಮಕ್ಕಳು ಆಟದಲ್ಲಿ ಮಾಡುವ ಹಾಗೆ ಸುತ್ತ ಸುತ್ತ ಸುತ್ತಿ, ಅಂಗಾತ್ತನೆ ಒರಗಿದ್ದನ್ನು ಕಂಡು ಹುಡುಗರು ಹಿರಿಹಿರಿ ಹಿಗ್ಗಿದರು.

* * *

ಮೆಲ್ಲನೆ ಬ್ರಾಹ್ಮಣರು ತಮ್ಮ ತಮ್ಮ ಚಿಟ್ಟೆಯಿಂದಿಳಿದು, ಮೂಗು ಮುಚ್ಚಿಕೊಂಡು ಪ್ರಾಣೇಶಾಚಾರ್ಯರ ಮನೆಯತ್ತ ನಡೆದರು. ದುರ್ಗಾಭಟ್ಟ ಎಲ್ಲರನ್ನೂ ನಿಲ್ಲಿಸಿ, ‘ಅರೆಮರುಳು ಅಜ್ಜಿ ಕೂಗಿದ್ದು ನಿಜವಿರಲಿಕ್ಕೂ ಸಾಕಲ್ಲವೇ, ಆಚಾರ್ಯರೇ’ ಎಂದ. ಬ್ರಾಹ್ಮಣರೆಲ್ಲ ಅದಕ್ಕೆ ಪುಕ್ಕಾಗಿ ‘ಏನೋ ನೊಡುವ’ ಎಂದು ಮೆಲ್ಲಗೆ ನಾರಣಪ್ಪನ ಮನೆಯೆದುರು ಬಂದು ನಿಂತು ತೆರದ ಹೆಬ್ಬಾಗಿಲನ್ನು ನೋಡಿ ಭಯಗ್ರಸ್ಥರಾದರು. ಅವನ ಹೆಣ ಪ್ರೇತದಂತೆ ಅಲೆಯುತ್ತಿರೋದು ಖಡಾಖಂಡಿತ. ಅವನಿಗೆ ಸಂಸ್ಕಾರವಾಗದಿದ್ದಲ್ಲಿ ಅವ ಬ್ರಹ್ಮ ರಾಕ್ಷಸನಾಗಿ ಅಗ್ರಹಾರವನ್ನು ಕಾಡೋದು ನಿಶ್ಚಯ. ದಾಸಾಚಾರ್ಯ ನೀರ್ದುಂಬಿದ ಕಣ್ಣುಗಳಿಂದ ಬ್ರಾಹ್ಮಣರನ್ನು ದೂರುತ್ತ ಅಂದ:

‘ಬಂಗಾರದ ಆಸೇಲಿ ನಾವು ಕೆಟ್ಟೆವಪ್ಪ. ಹೇಳಲಿಲ್ಲವ ನಾನು? ಅದು ಬ್ರಾಹ್ಮಣ ಶವ, ವಿಧಿಯುಕ್ತ ಶ್ರಾದ್ಧವಾಗದ ಹೊರತು ಪ್ರೇತವಾಗುತ್ತೆ ಅಂತ. ಬಡವನ ಮಾತು ಯಾರ ಎಗ್ಗಿಗೆ ಬರಬೇಕು ಹೇಳಿ. ಈ ಬೇಸಗೇಲಿ ಅದು ಕೊಳೆತು ನಾರದೇ ಇರುತ್ತದ? ಎಷ್ಟು ದಿನಾಂತ ಉಪವಾಸ ಮಾಡಿ ನಮಗೆ ಸಾಯಲಿಕ್ಕೆ ಸಾಧ್ಯ – ಹೆಣವನ್ನಿಟ್ಟುಕೊಂಡು…’

ಹಸಿವಿನಿಂದ ಕುಪಿತರಾದ ದುರ್ಗಾಭಟ್ಟರು ಅಂದರು:

‘ಏನು ಮಾಧ್ವರೋ ನೀವು? ಏನು ಆಚಾರವೋ ನಿಮ್ಮದು? ಇಂತಹ ಸಂದರ್ಭದಲ್ಲೊಂದು ನಿಮ್ಮ ತಲೆಗೆ ಉಪಾಯ ಹೊಳೆಯದೇ ಹೋಯಿತಲ್ಲ.’

ಮೆತ್ತಗಾದ ಗರುಡ:

‘ನನ್ನದೇನೂ ಅಡ್ಡಿಯಿಲ್ಲಪ್ಪ, ಪ್ರಾಣೇಶಾಚಾರ್ಯರು ಸೈ ಎಂದರಾಯಿತು. ಏನು. ಬಂಗಾರದ ಪ್ರಶ್ನೆ ಒತ್ತಟ್ಟಿಗಿಟ್ಟುಬಿಡುವ. ಏನು. ಮೊದಲು ಹೆಣವನ್ನ ಸ್ಮಶಾನಕ್ಕೆ ಸಾಗಿಸಿ ಬಿಡುವ… ಏನು… ನಮ್ಮ ಬ್ರಾಹ್ಮಣ್ಯನ ಪ್ರಾಣೇಶಾಚಾರ್ಯರು ರಕ್ಷಿಸಿಬಿಟ್ಟರೆ ಸರಿ…’ ಎಂದ.

ಎಲ್ಲರೂ ಕೂಡಿ ಪ್ರಾಣೇಶಾಚಾರ್ಯರಲ್ಲಿ ಹೋಗಿ ನಡುಮನೆಯಲ್ಲಿ ದೈನ್ಯದಿಂದ ನಿಂತರು. ಆಚಾರ್ಯರು ಹೆಂಡತಿಯನ್ನು ಎತ್ತಿ ಹಿತ್ತಲಿಗೆ ಒಯ್ದು ಮೂತ್ರ ಹೊಯ್ಯಿಸಿ, ಮುಖ ತೊಳೆಸಿ, ಔಷಧಿ ಕುಡಿಸಿ ಹೊರಬಂದರು. ನೆರಿದಿದ್ದ ಬ್ರಾಹ್ಮಣರನ್ನು ಕಂಡು ತಾವು ರಾತ್ರೆ ಮಾಡಿದ ನಿರ್ಧಾರವನ್ನು ವಿವರಿಸಿದರು. ಗರುಡ ಆರ್ತಸ್ವರದಿಂದ – ‘ನಮ್ಮ ಬ್ರಾಹ್ಮಣ್ಯ ತಮ್ಮ ಕೈಯಲ್ಲಿದೆಯಪ್ಪ. ಹೆಣವನ್ನು ತೆಗೆಯಲಿಲ್ಲ ಎಂದೋ, ಏನು, ಅಥವಾ ತೆಗೆದುಬಿಟ್ಟರು ಎಂದೋ, ಏನು, ಒಟ್ಟಿನಲ್ಲಿ ನಮ್ಮ ಮೇಲೆ ಅಪವಾದ ಬರದಂತೆ ರಕ್ಷಿಸಬೇಕು. ಮಾರುತಿಯ ಅಪ್ಪಣೆ ತಾವು ತರೋವರೆಗೆ ನಾವಿಲ್ಲಿ ಕಾದಿರುತ್ತೇವೆ’ ಎಂದು ಬ್ರಾಹ್ಮಣರೆಲ್ಲರ ಅಭಿಪ್ರಾಯವನ್ನು ನಿವೇದಿಸಿದ. ಆಚಾರ್ಯರು ಹೊರಟು – ‘ಮಕ್ಕಳಿಗೆ ಅಡ್ಡಿಯಿಲ್ಲ, ಊಟ ಮಾಡಬಹುದು. ಗೊತ್ತು ತಾನೆ?’ ಎಂದರು.

ಕೈಯಲ್ಲಿ ಬುಟ್ಟಿ ಹಿಡಿದು ಅಗ್ರಹಾರದ ವೃಕ್ಷಗಳಿಂದ ಪಾರಿಜಾತ, ಮಲ್ಲಿಗೆ, ಸಂಪಿಗೆ ಹೂಗಳನ್ನು ಕೊಯ್ದು ತುಂಬಿಸಿದರು. ಬುಟ್ಟಿ ತುಂಬ ತುಳಸಿಯನ್ನು ತುಂಬಿಕೊಂಡರು. ಹೊಳೆಯಲ್ಲಿ ಸ್ನಾನಮಾಡಿ, ಒದ್ದೆವಸ್ತ್ರ ಉಟ್ಟು ಯಜ್ಞೋಪವೀತವನ್ನು ಬದಲಾಯಿಸಿಕೊಂಡರು. ಹೊಳೆ ದಾಟಿ, ಕಾಡು ಹೊಕ್ಕು ನಡೆದು, ಎರಡು ಮೈಲಿಯಾಚೆ ಅರಣ್ಯದ ಮೌನದಲ್ಲಿ ಪ್ರಶಾಂತವಾಗಿದ್ದ ಮಾರುತಿಯ ಗುಡಿಗೆ ಬಂದರು. ಗುಡಿಯ ಬಾವಿಯಿಂದ ನೀರು ಸೇದಿ, ದಾರಿಯಲ್ಲೆಲ್ಲಾದರೂ ಮೈಲಿಗೆ ತಟ್ಟಿರಬಹುದೆಂದು ಎರಡು ಕೊಡ ನೀರನ್ನು ಸುರಿದುಕೊಂಡರು. ಇನ್ನೊಂದು ಕೊಡ ನೀರೆತ್ತಿಕೊಂಡು ಹೋಗಿ, ಆಳೆತ್ತರದ ಮಾರುತಿಯ ವಿಗ್ರಹದ ಮೇಲಿದ್ದ ಒಣಗಿದ ತುಳಸಿ ಪುಷ್ಟಗಳನ್ನು ತೆಗೆದು, ನೀರಿನಿಂದ ಶುಭ್ರವಾಗಿ ತೊಳೆದರು. ನಂತರ ಕೂತು ಒಂದು ಗಂಟೆಕಾಲ ಮಂತ್ರೋಚ್ಚಾರಣೆ ಮಾಡುತ್ತ ಗಂಧವನ್ನು ತೇದರು. ತೇದ ಗಂಧವನ್ನು ಮಾರುತಿಯ ಮೈಗೆ ಹಚ್ಚಿ, ಹೂವು ತೊಳಸಿಗಳಿಂದ ಇಡಿಯ ವಿಗ್ರಹವನ್ನು ಶೃಂಗರಿಸಿದರು. ಕಣ್ಣು ಮುಚ್ಚಿ ಧ್ಯಾನಿಸಿ, ತಮ್ಮ ಮನಸ್ಸಿನ ಸಂಕಟಗಳನ್ನೆಲ್ಲ ನಿವೇದಿಸಿ – ‘ಆಗಲಿ ಎಂದು ನಿನ್ನ ಆಜ್ಞೆಯಾದರೆ ಬಲಗಡೆಯ ಪ್ರಸಾದವನ್ನು ನೀಡಪ್ಪ; ಶವಸಂಸ್ಕಾರ ನಿಷೇಧವಾದರೆ ಎಡಗಡೆಯ ಪ್ರಸಾದವನ್ನು ದಯಪಾಲಿಸಪ್ಪ. ಅಲ್ಪಮತಿಯಾದ್ದರಿಂದ ಆಪದ್ಧರ್ಮವೇನೆಂದು ಅರಿಯದೆ ನಿನ್ನ ಬಳಿ ಬಂದೆ’ ಎಂದು ಕಣ್ಣುಮುಚ್ಚಿದವರು ಭಕ್ತಿಯಿಂದ ಸಂಕಲ್ಪಿಸಿಕೊಂಡು, ನೀಲಾಂಜನದ ಬೆಳಕಿನಲ್ಲಿ ಮಾರುತಿಯನ್ನು ನೋಡುತ್ತ ಕುಳಿತರು.

ಬೆಳಿಗ್ಗೆ ಹತ್ತು ಗಂಟೆಯ ಒಳಗೇ ಭಯಂಕರ ಬಿಸಿಲಾದ್ದರಿಂದ ಗುಡಿಯ ಕತ್ತಲಿನಲ್ಲೂ ಸೆಖೆಯಾಗಿ, ಬೆವರಿ, ಆಚಾರ್ಯರು ಮತ್ತೊಂದು ಕೊಡ ನೀರು ಸುರಿದುಕೊಂಡು ಒದ್ದೆ ಮೈಯಲ್ಲಿ ಕೂತರು. ‘ನಿನ್ನ ಅಪ್ಪಣೆಯಾಗುವವರೆಗೆ ನಾನು ಏಳುವುದಿಲ್ಲ’ ಎಂದರು.

ಪ್ರಾಣೇಶಾಚಾರ್ಯರು ಮನೆ ಬಿಟ್ಟ ಕ್ಷಣ, ಉಳಿದ ಬ್ರಾಹ್ಮಣರ ಸಿಡುಕು ಮುಖಗಳನ್ನು ನೋಡಲು ಅಂಜಿದ ಚಂದ್ರಿ, ತಿರುಗಿ ತೋಟಕ್ಕೆ ಹೋಗಿ ಮಡಿಲಿನ ತುಂಬ ರಸಬಾಳೆ ಹಣ್ಣುಗಳನ್ನು ಕಟ್ಟಿಕೊಂಡು, ಹೊಳೆಯಲ್ಲಿ ಶುಭ್ರವಾಗಿ ಸ್ನಾನಮಾಡಿ, ತನ್ನ ಕಪ್ಪು ನುಣಪು ಕೂದಲಿನ ರಾಶಿಯನ್ನು ಒದ್ದೆಯಾದ ಮೈಮೇಲೆ ಇಳಿಬಿಟ್ಟು, ಮೈಗೆ ಹತ್ತಿದ ಒದ್ದೆ ಸೀರೆಯಲ್ಲಿ ನಡೆದು ಮಾರುತಿಯ ಗುಡಿಯಿಂದ ಸ್ವಲ್ಪ ದೂರದಲ್ಲೊಂದು ಮರಕ್ಕೊರಗಿ ಕೂತಳು. ದೂರದ ಗುಡಿಯಿಂದ ಆಚಾರ್ಯರು ಬಾರಿಸಿದ ಗಂಟೆ ಕಿವಿಗೆ ಬಿದ್ದಿತು. ಗುಡಿಯ ಗಂಟೆಯ ಪವಿತ್ರ ಧ್ವನಿಯಿಂದಾಗಿ ಹಿಂದಿನ ರಾತ್ರೆ ತನ್ನನ್ನು ಅವಾಕ್ಕಾಗಿ ಮಾಡಿದ ಅನುಭವ ಮರುಕೊಳಿಸಿತು. ತನ್ನ ಅಮ್ಮ ಹೇಳಿದ ಮಾತನ್ನು ತಾನು ನೆನೆಯುತ್ತಿರುವಾಗಲೆ ಕತ್ತಲೆಯಲ್ಲಿ ಲಾಟೀನು ಹಿಡಿದು, ಚಾಪೆ ದಿಂಬುಗಳನ್ನು ತಂದು, ಆಚಾರ್ಯರು ಮೃದುವಾಗಿ ‘ಚಂದ್ರೀ’ ಎಂದು ಕರೆಯಬೇಕೆ? ಮತ್ತೆ ಥಟ್ಟನೆ ತನಗೀಗ ಮೂವ್ವತ್ತು ತುಂಬಿದೆ, ನಾರಣಪ್ಪನ ಜೊತೆ ಹತ್ತು ವರ್ಷ ಬಾಳಿಯೂ ಸಂತಾನ ಪ್ರಾಪ್ತವಾಗಲಿಲ್ಲ ಎಂದು ಕೊರಗಿದಳು. ಮಗನಿದ್ದಿದ್ದರೆ ಅವನನ್ನೊಬ್ಬ ದೊಡ್ಡ ಸಂಗೀತಗಾರನನ್ನಾಗಿ ಮಾಡಬಹುದಿತ್ತು. ಮಗಳಿದ್ದಿದ್ದರೆ ಭರತನಾಟ್ಯ ಕಲಿಸಬಹುದಿತ್ತು –  ಎಲ್ಲ ಇದ್ದೂ ತನಗೆ ಏನೂ ಇಲ್ಲವಾಯಿತು ಎಂದು ಮರಗಳ ಮೇಲೆ ಪುರ್ರ್ ಎಂದು ಹಾರಿ ಬಂದು ಕೂತ ಪುಟ್ಟಪುಟ್ಟ ಹಕ್ಕಿಗಳನ್ನು ನೋಡುತ್ತ ಕೂತಳು.