ಶಿರ್ನಾಳಿಗೆ ಹಿಂದಿನ ರಾತ್ರೆ ಕೆಳೂರು ಮೇಳದವರ ಜಾಂಬುವಂತಿ-ಕಲ್ಯಾಣ ನೋಡಹೋಗಿದ್ದ ಶ್ರೀಪತಿಗೆ ನಾರಣಪ್ಪ ಶಿವಮೊಗ್ಗೆಯಿಂದ ಬಂದವನು ಹಾಸಿಗೆ ಹಿಡಿದು ಮಲಗಿದ್ದೂ ತಿಳಿಯದು, ಸತ್ತದ್ದೂ ತಿಳಿಯದು. ತಿಳಿದಿದ್ದರೆ ಅಗ್ರಹಾರದಲ್ಲೆಲ್ಲ ಗುಪ್ತವಾಗಿ ತನಗೆ ಆಪ್ತನಾದ ಗೆಳೆಯನೊಬ್ಬನ ಸಾವಿನಿಂದಾಗಿ ಅವನಿಗೆ ವ್ಯಥೆಯಾಗುತ್ತಿತ್ತು. ಅವನು ಮನೆ ಬಿಟ್ಟು ಹೊರಟು ವಾರದ ಮೇಲಾಗಿದೆ. ಕೇಳೂರು ಮೇಳದ ಭಾಗವತನ ಸ್ನೇಹಮಾಡಿ ಅವನು ಬಿಡಾರ ಬಿಟ್ಟಲ್ಲಿ ಆಟದವರ ಜೊತೆ ತಂಗಿ, ಊಟಮಾಡಿ, ರಾತ್ರೆ ಆಟ ನೋಡಿ, ಹಗಲು ನಿದ್ದೆಮಾಡಿ, ಬಿಡುವಿನಲ್ಲಿ ಅಕ್ಕಪಕ್ಕದ ಹಳ್ಳಿಯ ಜನರಲ್ಲಿಗೆ ಹೋಗಿ ಮೇಳದವರಿಗೆ ವೀಳ್ಯಕೊಟ್ಟು ಸ್ವಾಗತಿಸುವಂತೆ ಪ್ರಚಾರಮಾಡಿ, ಸರಸ-ಕುಶಲ-ಸಂಭಾಷಣೆಯಲ್ಲಿ ಲೋಕವನ್ನು ಒಂದು ವಾರ ಮರೆತಿದ್ದು, ಇವತ್ತು ರಾತ್ರೆ ಕೈಯಲ್ಲಿ ಬ್ಯಾಟರಿ ಹಿಡಿದು ಕಾಡಿನ ಕತ್ತಲಲ್ಲಿ ತನ್ನ ಧೈರ್ಯಕ್ಕಾಗಿ ಗಟ್ಟಿಯಾಗಿ ಒಂದು ಪದ ಹೇಳುತ್ತ ಬರುತ್ತಿದ್ದಾನೆ. ಮೇಲಕ್ಕೆ ಬಾಚಿದ ಅವನ ಕ್ರಾಪಿನ ಕೂದಲು ಕ್ಷೌರವಿಲ್ಲದೆ ಕತ್ತಿನ ತನಕ ಬೆಳೆದಿರಲು ಕಾರಣ ತನಗೊಂದು ಸ್ತ್ರೀವೇಷವನ್ನು ಮುಂದಿನ ವರ್ಷ ಕೊಡುವುದಾಗಿ ಭಾಗವತ ಕೊಟ್ಟ ಆಶ್ವಾಸನೆ. ಎಷ್ಟೆಂದರೂ ಪ್ರಾಣೇಶಾಚಾರ್ಯರು ತಿದ್ದಿದ ನಾಲಿಗೆ ತಾನೇ? ನಿನ್ನ ವಾಕ್ಯಸರಣಿ ಗಂಟಲು ಪರಿಶುದ್ಧವಾಗಿದೆಯೆಂದು ಭಾಗವತ ಮೆಚ್ಚಿದ್ದ. ಅಲ್ಲದೆ ಆಚಾರ್ಯರಿಂದ ಒಂದಿಷ್ಟು ಸಂಸ್ಕೃತ ತರ್ಕ ಪುರಾಣ ಕೇಳಿ ಯಕ್ಷಗಾನದ ಗಹನವಾದ ಸಂಭಾಷಣೆಗೆ ಅವಶ್ಯವಾದ ಸಂಸ್ಕೃತಿಯೂ ಇದೆ ತನ್ನಲ್ಲಿ. ಮೇಳದಲ್ಲೊಂದು ಪಾರ್ಟು ಸಿಕ್ಕಿದ ಮೆಲೆ ಬೊಜ್ಜದ ಒಡೆ, ಬೊಜ್ಜದ ಪಾಯಸ ಹಲಸಿನ ಹಣ್ಣಿನ ಮುಳಕಕ್ಕೆಂದು ಬದುಕುವ ಬ್ರಾಹ್ಮಣರ ಕೊಂಪೆಯಿಂದ ಪಾರಾಗಬಹುದು ಎಂದು ಶ್ರೀಪತಿಗೆ ಹರ್ಷ ತುಂಬಿ ಕತ್ತಲೆಯಲ್ಲಿ ಕಾಡಿನಲ್ಲಿ ಭಯವಾಗುತ್ತಿಲ್ಲ. ಅಲ್ಲದೆ ಪೂಜಾರಿ ಶೀನನ ಗುಡಿಸಲಿನಲ್ಲಿ ಕುಡಿದಿದ್ದ ಹೆಂಡ ಹಿತವಾಗಿ ತಲೆಗೆ ಏರಿ ಕಾಡಿನ ಗಾಢವಾದ ಮೌನ ಅವನಲ್ಲಿ ನಡುಕ ಹುಟ್ಟಿಸುತ್ತಿಲ್ಲ. ಎರಡು ಸೀಸೆ ಹೆಂಡ; ಒತ್ತಿದೊಡನೆ ಬೆಳಕು ಚಿಲ್ಲುವ, ಹಳ್ಳಿಯ ಜನರಿಗೆ ಪರಮಾಶ್ಚರ್ಯ ವಸ್ತುವಾದ ಬ್ಯಾಟರಿ – ಹೀಗೆ ಸಶಸ್ತ್ರನಾಗಿ ಹೊರಟಮೇಲೆ ದೆವ್ವವೆಲ್ಲಿ, ಭೂತವೆಲ್ಲಿ? ದೂರ್ವಾಸಪುರ ಹತ್ತಿರವಾದಂತೆ ಅವನ ಮೈ ತನಗೆ ಕಾದಿರುವ ಸುಖದ ಕಲ್ಪನೆಯಿಂದ ಬೆಚ್ಚಗಾಯಿತು. ಅವನ ಹೆಂಡತಿ ತೊಡೆಯನ್ನು ಗಂಟು ಹಾಕಿ ಕೌಂಚಿ ಮಲಗಿದರೇನಂತೆ? ಬೆಳ್ಳಿಯಿದ್ದಾಳಲ್ಲ. ಬೆಳ್ಳಿ ಹೊಲತಿಯಾದರೇನಂತೆ? ನಾರಣಪ್ಪ ಹೇಳುವುದಿಲ್ಲವೆ – ಕಾಳಿಯಾದರೇನು? ಬೋಳಿಯಾದರೇನು? ಬೆಳ್ಳಿ ಕಾಳಿಯೂ ಅಲ್ಲ, ಬೋಳಿಯೂ ಅಲ್ಲ. ಬಚ್ಚ-ಗಲ್ಲದ, ಬತ್ತಿದ ಮೊಲೆಯ, ಬೇಳೆಹುಳಿ ವಾಸನೆ ಬರುವ ಬಾಯಿಯ ಯಾವ ಬ್ರಾಹ್ಮಣ ಹುಡುಗಿ ಅವಳಿಗೆ ಸಮ? ಕೈಗೆ ತೊಡೆಗೆ ಭರ್ತಿಯಾಗಿ ಸಿಗುವ, ಮರಳಿನಲ್ಲಿ ಮಣ್ಣಿನಲ್ಲಿ ಯಣೆಯಾಡುವ ಹಾವಿನಂತೆ ತನ್ನ ಜೊತೆ ಹೊರಳುವ ಬೆಳ್ಳಿಗೇನು ಕೊರತೆ? ಎಷ್ಟು ಹೊತ್ತಿಗೆ ಅವಳು ಗುಡಿಸಲಿನ ಎದರು ಮಡಕೆಯಲ್ಲಿ ಕಾಯಿಸಿದ ಬಿಸಿನೀರು ಸ್ನಾನ ಮಾಡಿ, ಅವಳಪ್ಪ ತಂದ ಹುಳಿ ಹೆಂಡವನ್ನಷ್ಟು ಕುಡಿದು ಬೆಚ್ಚಗೆ ಹದವಾಗಿರುತ್ತಾಳೆ : ಶ್ರುತಿ ಮಾಡಿದ ಮೃದಂಗದಂತೆ. ಅಚ್ಚಕಪ್ಪೂ ಅಲ್ಲ, ಬಿಳುಚಿದ ಬಿಳಿಯೂ ಅಲ್ಲ – ಬೀಜಕ್ಕೆ ಫಲವತ್ತಾದ ಎಳೆಬಿಸಿಲಿನಲ್ಲಿ ಕಾದ ಮಣ್ಣಿನ ಬಣ್ಣ ಅವಳ ಮೈ; ಶ್ರೀಪತಿಯ ನಡೆಯುವ ಹೆಜ್ಜೆ ನಿಲ್ಲುತ್ತದೆ. ಖುಷಿಗೆ ಬ್ಯಾಟರಿಯೊತ್ತಿ ಬೆಳಕು ಮಾಡಿ ಆರಿಸುತ್ತಾನೆ. ಮತ್ತೆ ಹೊತ್ತಿಸಿ ಅರಣ್ಯದ ಸುತ್ತ ಬೆಳಕನ್ನು ಚೆಲ್ಲಿ ರಾಕ್ಷಸವೇಷ ಹಾಕಿ ಬಂದ ಆಟದವನಂತೆ ಹಿಗ್ಗುತ್ತಾನೆ. ಥೈ ಥೈ ತಕಥೈ ಥೈಥೈಥೈ : ಕುಣಿಯುತ್ತಾನೆ. ಕುಮ್ಮಚಟ್ಟು ಹಾಕಿ ಹಾಕಿ ತನಗೆ ಮಂಡಿಯ ಮೇಲೆ ಸುತ್ತುವುದಕ್ಕೆ ಬರುತ್ತದೊ ನೋಡುವ ಎಂದು ಪ್ರಯತ್ನಿಸಿ ಮಂಡಿಗೆ ಪೆಟ್ಟಾಗಿ ಎದ್ದು ನಿಲ್ಲುತ್ತಾನೆ. ಅರಣ್ಯದ ನಿರ್ಜನತೆ, ಬ್ಯಾಟರಿಯ ಬೆಳಕಿಗೆ ಗಾಬರಿಯಾದ ಹಕ್ಕಿಗಳ ರೆಕ್ಕೆಯ ಪಟಪಟದಿಂದ ಅವನೆಗೆ ಇನ್ನಷ್ಟು ಮದವುಕ್ಕುತ್ತದೆ. ಕರೆದ ಕೂಡಲೆ ಹಾಜರಾಗುತ್ತವೆ : ನವರಸಭಾವಗಳು. ಕೋಪವೇ, ಬೀಭತ್ಸವೇ, ರೌದ್ರವೇ, ಭಕ್ತಿಯೇ, ಶೃಂಗಾರವೇ – ಒಂದರಿಂದೊಂದಕ್ಕೆ ಸಲೀಸಾಗಿ ಜಾರುತ್ತದೆ ಅವನ ಕಲ್ಪನೆ. ಈಗ ಲಕ್ಷ್ಮೀದೇವಿ ನಸುಕಿನಲ್ಲೆದ್ದು ಯಕ್ಷಗಾನದ ಧಾಟಿಯಲ್ಲಿ ಉದಯರಾಗದ ಕೀರ್ತನೆಯನ್ನು ಶೇಷಾಶಾಯಿಗೆ ಹಾಡುತ್ತಿದ್ದಾಳೆ….

            ಏಳುನಾರಾssಯಣನ
          ಏಳು ಲಕ್ಷ್ಮೀರಮಣss
ಏಳಯ್ಯss ಬೆಳssಗಾಯಿತೂ

ಶ್ರೀಪತಿ ಕಣ್ಣಿನಲ್ಲಿ ನೀರೇ ಬಂದುಬಿಡುತ್ತದೆ. ಗರುಡ ಬಂದು ಎಬ್ಬಿಸುತ್ತಾನೆ – ‘ಏಳು ನಾರಾಯಣನೆ.’ ನಾರದ ಬಂದು ತಂಬೂರಿ ಬಾರಿಸುತ್ತ ಎಬ್ಬಿಸುತ್ತಾನೆ – ‘ಏಳು ಲಕ್ಷ್ಮೀರಮಣ.’ ಸಮಸ್ತ ಪಶುಪಕ್ಷಿಗಳು, ವಾನರ, ಕಿನ್ನರ, ಯಕ್ಷ, ಗಂಧರ್ವಾದಿಗಳು ಬೇಡಿಕೊಳ್ಳುತ್ತಾರೆ – ‘ಏಳಯ್ಯ ಬೆಳssಗಾಯಿತು.’ ಶ್ರೀಪತಿ ಮತ್ತೆ ಲಾಸ್ಯದಲ್ಲಿ ಉಟ್ಟ ಪಂಚೆಯನ್ನು ಸೀರೆಯಂತೆ ಹಿಡಿದು ಕೈಯಾಡಿಸಿ, ಕತ್ತು ಕೊಂಕಿಸಿ ಕುಣಿದ. ಶೀನನ ಹೆಂಡ ಏರೇ ಬಿಟ್ಟಿತಲ್ಲ, ನಾರಣಪ್ಪನಲ್ಲಿಗೆ ಹೋಗಿ ಇನ್ನಷ್ಟು ಏರಿಸಿಬಿಡಬೇಕೆಂದುಕೊಂಡ. ಯಕ್ಷಗಾನದ ಸ್ತ್ರೀಪಾತ್ರಗಳೆಲ್ಲ ನೆನಪಾಗುತ್ತವೆ. ಪುರಾಣಗಳಲ್ಲಿ ಹಣ್ಣಿನ ಮೋಹಕ್ಕೆ ಬಲಿಯಾಗದ ಋಷಿಯೇ ಇಲ್ಲ. ವಿಶ್ವಾಮಿತ್ರನ ತಪೋಭಂಗ ಮಾಡಿದ ಮೇನಕೆ – ಹೇಗಿದ್ದಿರಬೇಕು ಅವಳು? ಚಂದ್ರಿಗಿಂತ ಸುಂದರಿಯಿದ್ದಿರಬೇಕು. ಯಾರ ಕಣ್ಣಿಗೂ ಹರಕು ತುಂಡುಟ್ಟು ಗೊಬ್ಬರ ಎತ್ತಲು ಬರುವ ಬೆಳ್ಳಿಯ ರೂಪು ಬೀಳದಿದ್ದುದು ಪರಮಾಶ್ಚರ್ಯ. ಅದರಲ್ಲಿ ಆಶ್ಚರ್ಯವೂ ಇಲ್ಲ ಎನ್ನಿ. ಬ್ರಾಹ್ಮಣಾರ್ಥದ ಗೊಡ್ಡುಗಳ ಕಣ್ಣಿಗೆ ಏನು ತಾನೆ ಕಂಡೀತು? ಸಾರಿ ಸಾರಿ ಮಕ್ಕಳಿಗೆನ್ನುವಂತೆ ಪ್ರಾಣೇಶಾಚಾರ್ಯರು ವಿವರಿಸುತ್ತಾರೆ : ವೇದವ್ಯಾಸರು ಎಷ್ಟು ಪುಳಕಿತರಾಗಿರಬೇಕು! ಉದಯಕಾಲದಲ್ಲಿ ಅವರು ಎದ್ದು ಉಷೆಯನ್ನು ಕಂಡಾಗ ಭಗವಂತ ಈ ಮಾತುಗಳನ್ನು ಅವರ ಬಾಯಿಂದ ಆಡಿಸಿದಾಗ ‘ಸ್ನಾನ ಮಾಡಿ ಶುಭ್ರಳಾದ ಪುಷ್ಪವತಿಯ ತೊಡೆಗಳ ಹಾಗೆ’ : ಆಹಾ ಎಂತಹ ಧೀರ ಕಲ್ಪನೆ, ಸುಂದರ ಉಪಮೆ. ಆದರೆ ಬ್ರಾಹ್ಮಣರಿಗೆ ಅದು ಬರಿಯ ಮಂತ್ರ, ಉದ್ಯೋಗಕ್ಕೊಂದು ಮಾರ್ಗ. ರಾಜನ ವೇಷ ಹಾಕುವ ಕುಂದಾಪುರದ ನಾಗಪ್ಪ ಎಷ್ಟೊಂದು ಗಮ್ಮತ್ತಿನಲ್ಲಿ ಮಾತನ್ನಾಡುತ್ತಾನೆ : ಈ ದುಂಬಿಗಳೂ, ಈ ಪಾರಿಜಾತ, ಸಂಪಿಗೆ, ಮಲ್ಲಿಗೆ, ಕೇದಗೆ ಬೆಳೆದ ಈ ವನವೋ, ಇಲ್ಲಿ ಏಕಾಂಗಿಯಾಗಿ, ಅವನತವದನೆಯಾಗಿ, ದಃಖದಿಂದ ಬಾಧಿತಳಾಗಿ ಕಾಣುವ ಎಲೈ ರಮಣಿ, ನೀನು ಯಾರು? ಶ್ರೀಪತಿ ಮುಗುಳ್ನಗುತ್ತ ನಡಿಯುತ್ತಾನೆ. ಅಗ್ರಹಾರದಲ್ಲೆಲ್ಲ ಸೌಂದರ್ಯವನ್ನು ಕಾಣುವ ಕಣ್ಣಿರುವುದೆಂದರೆ ಇಬ್ಬರಿಗೆ ಮಾತ್ರ : ನಾರಣಪ್ಪನಿಗೆ, ಚಂದ್ರಿಗೆ, ಮಹಾ ರೂಪವತಿಯೆಂದರೆ ಚಂದ್ರಿ. ಈ ನೂರು ಮೈಲಿ ವಿಸ್ತೀರ್ಣದಲ್ಲಿ ಅಂಥದೊಂದು ಪುತ್ತಳಿಯನ್ನು ತೋರಿಸಿ. ಸೈ ಎಂದುಬಿಡುತ್ತೇನೆ. ದುರ್ಗಾಭಟ್ಟನಿಗೂ ಅಲ್ಪಸ್ವಲ್ಪ ರಸಿಕತೆ ಇಲ್ಲವೆಂದಲ್ಲ. ಆದರೆ ಅಲ್ಲೊಂದು ಇಲ್ಲೊಂದು ಶೆಟ್ಟರ ಹೆಂಗಸಿನ ಮೊಲೆಯ ಮೇಲೆ ಕೈಯಾಡಿಸೋದಕ್ಕಿಂತ ಹೆಚ್ಚಿನ ತಾಕತ್ತಿಲ್ಲ ಅವನಿಗೆ. ಹಾಗೆ ನೋಡಿದರೆ ನಿಜವಾದ ರಸಿಕರೆಂದರೆ ಪ್ರಾಣೇಶಚಾರ್ಯರು. ಸಾವಿರಕ್ಕೊಂದು ಜನ ಅಂಥವರು. ಅವರು ನಿತ್ಯ ಸಂಜೆ ಪುರಾಣವನ್ನೋದುತ್ತ ಆ ಶ್ಲೋಕಗಳಿಗೆ ರಮ್ಯವಾಗಿ ಅರ್ಥ ಹೇಳುವ ಗತ್ತು ಕೇಳಿದರೆ ಎಂತಹ ಮಹಾಮಹಾ ಭಾಗವತನಿಗೂ ನಾಚಿಕೆಯಾಗಬೇಕು. ಎಂತಹ ನಯವಾದ ಮಾತು, ಮೃದವಾದ ನಗು, ಕಣ್ಣಿಗೆ ಕಟ್ಟುವ ರೂಪು, ಜುಟ್ಟು, ಅಂಗಾರ, ಅಕ್ಷತೆ, ಜರೀಶಾಲು ಒಪ್ಪುವುದೆಂದರೆ ಅವರಿಗೊಬ್ಬರಿಗೇನೇ. ಅಷ್ಟಮಠಗಳಲ್ಲಿ, ದಕ್ಷಿಣದ ಮಹಾಪಂಡಿತರ ಜೊತೆ ವಾದಿಸಿ ಗೆದ್ದುಬಂದ ಅವರಲ್ಲಿ ಹದಿನೈದು ಜರೀ ಶಾಲುಗಳಿವೆಯಂತೆ. ಆದರೆ ಅವರು ಕೊಚ್ಚಿಕೊಳ್ಳುವವರಲ್ಲ. ಪಾಪ ಅವರ ಹೆಂಡತಿ ನಿತ್ಯರೋಗಿ – ಮಕ್ಕಳಿಲ್ಲ ಮರಿಯಿಲ್ಲ. ಅಷ್ಟೊಂದು ರಮ್ಯವಾಗಿ ಕಾಳಿದಾಸನ ಸ್ತ್ರೀವರ್ಣನೆಗಳನ್ನು ವಿವರಿಸುತ್ತಾರಲ್ಲ ಅವರಿಗೆ ಸ್ವತಃ ಆಸೆಯಾಗುವುದಿಲ್ಲವೆ? ತಾನು ಪ್ರಥಮಬಾರಿಗೆ ಹೊಳೆಗೆ ನೀರೆಗೆಂದು ಬಂದಿದ್ದ ಬೆಳ್ಳಿಯನ್ನು ಸಂಭೋಗಿಸದ್ದು ಆಚಾರ್ಯರು ಓದಿದ ಶಾಕುಂತಲ ಕೇಳಿ. ತಡೆಯಲಾರದೇ ಎದ್ದು ಹೋದೆ. ಮಡಕೆಯಲ್ಲಿ ನೀರು ತುಂಬಿ ತಲೆಯ ಮೇಲೆ ಹೊತ್ತು, ಉಟ್ಟ ತುಂಡಿನ ಸರಗು ಜಾರಿ ಬೆಳದಿಂಗಲಿನಲ್ಲಿ ಮಣ್ಣಿನ ಬಣ್ಣದ ಮೊಲೆಗಳನ್ನು ಕುಣಿಸುತ್ತ ಹೆಜ್ಜೆ ಹಾಕಿದವಳು ಶಕುಂತಲೆಯಂತೆ ಕಂಡಳು. ಆಚಾರ್ಯರು ವರ್ಣನೆಯನ್ನು ಖುದ್ದು ಆಸ್ವಾದಿಸಿದ್ದಾಯಿತು.

ಶ್ರೀಪತಿ ಒಳದಾರಿಯಿಂದ ಸೀದ ಗುಡ್ಡದ ಮೇಲಿದ್ದ ಹೊಲೆಯರ ಗುಡ್ಡಗಳ ಕಡೆ ನಡೆದ. ಅಮಾಸೆ ಎದುರಿನ ಕಡುಕಪ್ಪು ರಾತ್ರೆಯಲ್ಲಿ ಒಂದು ಗುಡಿಗೆ ಬೆಂಕಿ ಹತ್ತಿ ಉರಿಯೋದು ಕಂಡಿತು. ಅದರ ಬೆಳಕಿನ ಆವೃತ್ತದಲ್ಲಿ ಮಸಿ ಮಸಿ ರೂಪಗಳು. ದೂರದಲ್ಲಿ ನಿಂತು ನೋಡಿದ, ಆಲಿಸಿದ. ಯಾರೂ ಗುಡಿಗೆ ಹತ್ತಿದ ಬೆಂಕಿಯನ್ನು ಆರಿಸುವ ಯತ್ನದಲ್ಲಿದ್ದಂತೆ ಕಾಣಿಸಲಿಲ್ಲ. ಆಶ್ಚರ್ಯಪಟ್ಟು ಒಂದು ಮೊಟ್ಟಿನ ಸಂದಿ ನಿಂತು ಕಾದ. ಬಿದಿರಿನ ಗಳದಿಂದ ಕಟ್ಟಿ ಚಾಪೆ ಹೊದಿಸಿ, ಸೋಗೆ ಹಚ್ಚಿದ ಗುಡಿ ಬೇಸಗೆಯಾದ್ದರಿಂದ ಕ್ಷಣದಲ್ಲಿ ಧಗಧಗ ಉರಿದು ನೆಲಸಮವಾಯಿತು. ಮಸಿರೂಪಗಳು ತಮ್ಮ ಗುಡಿಗಳಿಗೆ ಮರಳಿದವು. ಎದ್ದ ಬೆಂಕಿಯ ಝಳಕ್ಕೆ ಗೂಡುಗಳನ್ನು ಬಿಟ್ಟು ಕಾತರದಿಂದ ಕೂಗಿದ ಹಕ್ಕಿಗಳು ಮರಳಿ ಗೂಡು ಸೇರಿದವು. ಶ್ರೀಪತಿ ಮೆಲ್ಲಗೆ ಹೆಜ್ಜೆಯಿಟ್ಟು ಹೋಗಿ, ಬೆಳ್ಳಿಯ ಗುಡಿಯಿಂದ ಸ್ವಲ್ಪ ದೂರ ನಿಂತು ಚಪ್ಪಾಳೆ ತಟ್ಟಿದ.

ತಲೆಗೆ ಬಿಸಿನೀರು ಸ್ನಾನ ಮಾಡಿ, ಸೆರಗಿನಲ್ಲಿ ಬರಿಯ ತುಂಡುಟ್ಟು, ಸೊಂಟದ ಮೇಲೆ ಬತ್ತಲೆಯಾಗಿ, ಕಪ್ಪು ಕೂದಲಿನ ರಾಶಿಯನ್ನು ಬೆನ್ನಿನ ಮೇಲೆ ಮುಖದ ಮೇಲೆ ಚೆಲ್ಲಿಕೊಂಡಿದ್ದ ಬೆಳ್ಳಿ ಬೆತ್ತಗೆ ಗುಡಿಯಿಂದ ಹೊರಬಂದು, ಸದ್ದು ಮಾಡದೆ ದೂರದಿಂದ ಪೊದರಿನ ಸಂದಿ ಮರೆಯಾದಳು. ಅವಳು ಮರೆಯಾಗುವವರೆಗೆ ಮರವೊಂದರ ಹಿಂದೆ ನಿಂತು ಕಾದ ಶ್ರೀಪತಿ ಅತ್ತ ಇತ್ತ ಕಣ್ಣುಹರಿಸಿ ನೋಡಿ, ಯಾರೂ ಸುಳಿದಾಡುತ್ತಿಲ್ಲವೆಂದು ಖಚಿತ ಮಾಡಿಕೊಂಡು, ಬೆಳ್ಳಿ ಅಡಗಿದ ಮೊಟ್ಟಿಗೆ ಹೋಗಿ ಬ್ಯಾಟರಿ ಹಾಕಿ – ಆರಿಸಿ – ಅವಳನ್ನು ತಬ್ಬಿ ಆತುರದಿಂದ ಸಿರಾಡಿದ.

‘ಅಯ್ಯ, ಇವತ್ತು ಬ್ಯಾಡಯ್ಯ.’

ಬೆಳ್ಳಿ ಹೀಗೆ ನುಡಿದದ್ದೇ ಇಲ್ಲ. ಶ್ರೀಪತಿಗೆ ಆಶ್ಚರ್ಯವಾಯಿತು. ಆದರೆ ಅವಳ ಮಾತನ್ನು ಲೆಕ್ಕಕ್ಕೆ ತರದೆ ಸೊಂಟಕ್ಕೆ ಸುತ್ತಿದ್ದ ಅವಳ ತುಂಡನ್ನು ಬಿಚ್ಚಿದ.

‘ಪಿಳ್ಳ ಮತ್ತು ಆತನ ಹೊಲತಿ ದೆಯ್ಯ ಮೆಟ್ಟಿಯೋ ಏನು ಕತೆಯೋ ಸತ್ತವು ಅಯ್ಯ ಇವತ್ತು.’

ಶ್ರೀಪತಿಗೆ ಈಗ ಮಾತು ಬೇಡ. ದುಂಡಗೆ ನಿಂತಿದ್ದವಳನ್ನು ನೆಲಕ್ಕೆಳೆದ. ‘ಎಲ್ಡೂ ಸತ್ತುಬಿಟ್ಟವೆಂದು ಶವಾನ್ನ ಅಲ್ಲೆ ಬಿಟ್ಟು ಗುಡಿಗೇ ಬೆಂಕಿ ಕೊಟ್ಟು ಬಿಟ್ಟವು. ಜರಾ ಬಂದು ಸತ್ತವು ಮುಚ್ಚಿದ್ದ ಕಣ್ಣು ಬಿಚ್ಚಲಿಲ್ಲ.’

ಶ್ರೀಪತಿಗೆ ಅಸಹನೆ. ಏನೋ ಆಡುತ್ತಿದ್ದಾಳೆ. ಎಲ್ಲಿಯೋ ಇದ್ದಾಳೆ, ಅಷ್ಟೊಂದು ಕಾತರಿಸಿ ಬಂದರೆ ಯಾರೋ ಸತ್ತವೆಂದು ಹರಟುತ್ತಿದ್ದಾಳೆ. ಈ ಸಮಯ ಹೀಗೆ ಮಾತನಾಡುವವಳೇ ಅಲ್ಲ ಅವಳು. ಬೀಳುವ ಮಳೆಗೆ ಬಾಗುವ ಪೈರಿನಂತೆ ಇವಳು…

ಬೆಳ್ಳಿ ತುಂಡುಟ್ಟುಕೊಳ್ಳುತ್ತ –

‘ಅಯ್ಯ, ಒಂದು ವಿಶ್ಯ. ಅಂಥದೊಂದು ಆಶ್ಚರ್ಯ ನಾ ಕಂಡೇ ಇಲ್ಲ. ನಮ್ಮ ಗುಡೀಗೆ ಏನುಣ್ಣಕ್ಕಿರುತ್ತೇಂತ ಇಲಿ ಹೆಗ್ಗಣ ಬರಬೇಕು?  ಬ್ರಾಂಬ್ರ ಮನೇಲಿ ಇದ್ದ ಹಾಗೇನು ನಮ್ಮ ಗುಡಿ? ಈಗ ನೆಂಟರ ಹಾಗೆ ಬಂದು ನೆಲಸಲಿಕ್ಕೆ ಹತ್ತಾವೆ. ಸೂರಿನಿಂದ ತಪತಪ ಉದುರಿ ಗಿರಗಿರ ಸುತ್ತಿ ಸಾಯಕ್ಕೆ ಹತ್ತಾವೆ. ಬೆಂಕಿಬಿದ್ದ ಗುಡೀಂದ ಪ್ರಾಣ ಹಿಡಿದು ಓಡೋರಂಗೆ ಕಾಡು ಬಿದ್ದು ಓಡಲಿಕ್ಕೆ ಹತ್ತಾವ. ಇಂಥಾ ಪಾಡು ನಾ ಕಂಡಿಲ್ಲ. ದೆಯ್ಯದವನನ್ನು ಗಣಾ ಬರಿಸಿ ಕ್ಯಾಳಬಾಕು. ಹೊಲೇರ ಗುಡಿಗೆ ಇಲಿ ಬರೋದೇನು, ಹೊಲೆಯ ಕಟ್ಟಿಗೆ ಮುರಿದಂತೆ ಲಕ್ಕ ಸಾಯೋದುಂದ್ರೇನು – ಕ್ಯಾಳಬಾಕು.’

ಶ್ರೀಪತಿ ಪಂಚೆಯುಟ್ಟು, ಅಂಗಿ ತೊಟ್ಟು, ಕಿಸೆಯಿಂದ ಬಾಚಣಿಗೆ ತೆಗೆದು ಕ್ರಾಪು ಬಾಚಿ, ಬ್ಯಾಟರಿ ಹತ್ತಿಸಿ ನೋಡುತ್ತ ಅವಸರದಲ್ಲಿ ಓಡಿ ಬಿಟ್ಟ. ಬೆಳ್ಳಿ ಮಲಗಲಿಕ್ಕೆ ಸರಿಯೇ ಹೊರ್ತು ಮಾತಾಡಲಿಕ್ಕಲ್ಲ, ಬಾಯಿ ಬಿಟ್ಟರೆ ಅವಳದ್ದು ಗಣ, ದೆಯ್ಯ.

ನಾರಾಣಪ್ಪನನ್ನು ನೋಡುವ ಅವಸರದಿಂದ ಪಂಚೆಯನ್ನು ಮೇಲೆಕ್ಕೆತ್ತಿ ಕಟ್ಟಿ ಗುಡ್ಡವನ್ನಿಳಿದ. ಸರಾಯಿ ಕುಡಿದು ಇವತ್ತು ರಾತ್ರೆ ಅಲ್ಲೆ ಮಲಗಿ ಬೆಳಗ್ಗೆ ಎದ್ದು ಪಾರಿಜಾತಪುರದ ನಾಗರಾಜನ ಮನೆಗೆ ಹೋದರೆ ಸರಿ. ಮೆತ್ತಗೆ ನಾರಣಪ್ಪನ ಮನೆಯ ಬಾಗಿಲಿನ ಎದರು ನಿಂತು ಬಾಗಿಲನ್ನು ತಳ್ಳಿದ. ಅಗಳಿ ಹಾಕಿರಲಿಲ್ಲ. ಇನ್ನೂ ಎದ್ದಿರಬೇಕು ಅವ ಎಂದು ಖುಷಿಯಾಗಿ ಒಳಗೆ ಹೋದ. ಬ್ಯಾಟರಿ ಹಾಕಿ, ‘ನಾರಣಪ್ಪ, ನಾರಣಪ್ಪ’ ಎಂದು ಕರೆದ. ಉತ್ತರವಿರಲಿಲ್ಲ. ಕೆಟ್ಟನಾತ ಬಂದ ಹಾಗಾಯಿತು; ಹೊಟ್ಟೆ ತೊಳೆಸಿ ಬರುವಂತಹ ಕೊಳೆಯುವ ನಾತ. ಉಪ್ಪರಿಗೆ ಹತ್ತಿ ಬಾಗಿಲು ತಟ್ಟಿ ನೋಡುವುದೆಂದು ಕತ್ತಲಿನಲ್ಲೆ ತನಗೆ ಪರಿಚಿತವಾದ ಮೆಟ್ಟಲುಗಳ ಕಡೆ ನಡೆದ. ಮೂಲೆ ತಿರುಗುವಲ್ಲಿ ಬರಿಗಾಲಿನಲ್ಲಿ ಮೆತ್ತಗೆ ತಣ್ಣಗೆ ಇದ್ದುದೊಂದನ್ನ ಪಿಚಕ್ಕನೆ ತುಳಿದಂತಾಗಿ ಹೌಹಾರಿ ಬ್ಯಾಟರಿ ಹಾಕಿ ನೋಡಿದ. ಇಶ್ಯಿ! ಇಲಿ. ಕಾಲು ಮೇಲೆ ಮಾಡಿ ಅಂಗಾತನೆ ಸತ್ತು ಬಿದ್ದ ಇಲಿ. ಅದರ ಮೇಲೆ ಕೂತ ನೊಣ ಬ್ಯಾಟರಿ ಬೆಳಕಿಗೆ ಗುಯ್ಯೆಂದು ಎದ್ದವು. ದಿಡಿದಿಡಿ ಮೆಟ್ಟಲು ಹತ್ತಿ ಉಪ್ಪರಿಗೆಗೆ ಹೋಗಿ ಬ್ಯಾಟರಿ ಹಾಕಿದ. ನೆಲದ ಮ್ಯಾಲೆ ಯಾಕೆ ಹೀಗೆ ಮುಸುಕೆಳೆದು ನಾರಣಪ್ಪ ಮಲಗಿದ್ದಾನೆ – ಮೂಗಿನ ಮಟ್ಟ ಹಾಕ್ಕೊಂಡಿರಬೇಕೆಂದು ನಸುನಗುತ್ತ ಮುಸುಕೆಳೆದು ‘ನಾರಣಪ್ಪ, ನಾರಣಪ್ಪ’ ಎಂದು ಅಲುಗಿಸಿದ. ಮತ್ತೆ ಇಲಿಯನ್ನು ತುಳಿದಾಗಿನಂತೆ ತಣ್ಣಗಿನ ಸ್ಪರ್ಶವಾಗಿ ಸಟ್ಟನೆ ಕೈಯೆಳೆದುಕೊಂಡು ಬ್ಯಾಟರಿ ಹತ್ತಿಸಿದ. ಮೇಲಕ್ಕೆ ಸಿಕ್ಕಿದ ದೃಷ್ಟಿಯಿಲ್ಲದ ರೆಪ್ಪೆ ತೆರೆದ ಕಣ್ಣುಗಳು. ಬ್ಯಾಟರಿಯ ಬೆಳಕಿನ ವೃತ್ತದಲ್ಲಿ ನೊಣ, ನುಸಿ, ನಾತ.