ಬೆಳ್ಳಿಯ ಬದಲು ಅವತ್ತು ಚಿನ್ನಿ ಸಗಣಿ ಎತ್ತಲು ಬಂದಳು. ಕಾರಣ, ‘ಬೆಳ್ಳಿಯ ಅಪ್ಪ ಅವ್ವ ಎಲ್ಡೂ ಜಡ ತಗುಲಿ ಮಲಗಿಬಿಟ್ಟಿವೆ’ ಎಂದಳು – ಅಗ್ರಹಾರದ ಹೆಂಗಸರಿಗೆ. ತಮ್ಮ ಪಾಡೇ ತಮಗಾದ ಬ್ರಾಹ್ಮಣ ಹೆಂಗಸರು ಚಿನ್ನಿಯ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಆದರೆ ಚಿನ್ನಿ ಗೊಬ್ಬರವೆತ್ತುತ್ತ ಯಾರು ಕೇಳಿಸಿಕೊಳ್ಳಲಿ ಬಿಡಲಿ, ತಮ್ಮ ಕೇರಿಯ ಕಥೇನ ಆಡಿಕೊಂಡಳು. ‘ಚೌಡ ಸತ್ತ, ಅವನ ಹೊಲತಿಯೂ ಸತ್ತಿತ್ತು. ಗುಡೀಗೆ ಬೆಂಕಿಯಿಟ್ಟು ಅವರ್ನ್ ಸುಟ್ಟುದಾಯ್ತವ್ವ. ದಯ್ಯಕ್ಕೆ ಕ್ವಾಪ ಬಂದಯ್ತೋ ಏನು ಕತೆಯೋ’. ಗರುಡಾಚಾರ್ಯರ ಹೆಂಡತಿ ಸೀತಾದೇವಿ ಸೊಟದ ಮೇಲೆ ಕೈಯಿಟ್ಟು ತನ್ನ ಮಗನ ಬಗ್ಗೆಯೇ ಚಿಂತಿಸುತ್ತಿದ್ದಳು : ಮಿಲಿಟರಿ ಸೇರಿದ ಪರದೇಶಿಗೆ ಏನಾದರೂ ಆದರೆ ಏನು ಗತಿ? ಚಿನ್ನಿ ದೂರದಲ್ಲಿ ನಿಂತು : ‘ಅವ್ವಾ ಅವ್ವಾ, ಬಾಯಿಗಷ್ಟು ಕವಳಾ ಎಸೀರವ್ವಾ’ ಎಂದು ಬೇಡಿದಳು. ಸೀತಾದೇವಿ ಒಳಗೆ ಹೋಗಿ ಎಲೆ, ಅಡಿಕೆ, ಹೊಗೆಸೊಪ್ಪನ್ನ ಎಸೆದು ಅಲ್ಲೇ ನಿಂತಳು – ಹಿಂದಿನದೇ ಯೋಚನೆಯಲ್ಲಿ. ಚಿನ್ನಿ ಹೊಗೆಸೊಪ್ಪು ಎಲೆಯಡಿಕೆಯನ್ನು ತನ್ನ ಮಡಿಲಿಗೆ ಸಿಕ್ಕೆಸಿಕೊಳ್ಳುತ್ತ:

‘ಅವ್ವಾ, ಯಾಪಟ್ಟು ಇಲಿಗಳು ಹೆಂಗೆ ಹೊಂಡವೆ ಹ್ವರಗೆ! ಒಳ್ಳೆ ದಿಬ್ಬಣಕ್ಕೆ ಹ್ವಂಟಂಗೆ. ಏನು ಕಾರುಭಾರೋ ಅವಕ್ಕೆ’ ಎಂದು ಬುಟ್ಟಿಯಲ್ಲಿ ಸಗಣಿ ಹೊತ್ತು ನಡೆದಳು.

ಗುಡಿಗೆ ಹಿಂದಕ್ಕೆ ಬಂದವಳು ಬೆಳ್ಳಿಗಷ್ಟು ಹೊಗೆಸೊಪ್ಪನ್ನು ಮುರಿದು ಕೊಡುವ ಎಂದು ಅವಳ ಗುಡಿ ಕಡೆ ನಡೆದಳು. ದೂರದಿಂದಲೇ ಬೆಳ್ಳಿಯ ಗುಡಿಯಲ್ಲಿ ಅವಳ ಅಪ್ಪ ಅವ್ವ ಕಿರುಚುವುದು ಕೇಳಿತು. ‘ಅಯ್ಯಾ! ಜಡ ಬಂದರೆ ಯಾಪಟ್ಟು ಕಿರುಚುತ್ತಾನೆ ಅವ. ಇವನನ್ನೂ ದಯ್ಯ ಮೆಟ್ಟಿತೊ ಕಾಣೆ’ ಎಂದು ‘ಬೆಳ್ಳೀ’ ಎಂದು ಕರೆಯುತ್ತ ಬಂದು ನೋಡಿದರೆ ಬೆಳ್ಳಿ ಅಪ್ಪ ಅವ್ವನ ಬಳಿ ತಲೆಮೇಲೆ ಕೈ ಹೊತ್ತು ಕೂತಿದ್ದಳು. ಅಗ್ರಹಾರದಾಗೂ ಹೆಂಗೆ ಇಲಿ ದಿಬ್ಬಣ ಹೊಂಟವೆ’ ಎಂದು ಹೇಳಬಂದಳು. ಅವಕ್ಕಾಗಿ ನಿಂತಳು. ಹೊಗೆಸೊಪ್ಪನ್ನು ಮುರಿದು ‘ತಗೆ ಬಾಯಿಗೆ. ಅವ್ವ ಕೊಟ್ಟರು’ ಎಂದು ಕೂತಳು. ಬೆಳ್ಳಿ ಹೊಗೆಸೊಪ್ಪನ್ನು ತಿಕ್ಕಿ ಬಾಯಿಗೆ ಹಾಕಿಕೊಂಡು:

‘ಪಿಳ್ಳಗಿವತ್ತು ಮೈಮೇಲೆ ಗಣಾ ಬಂದರೆ ಕ್ಯಾಳಬಾಕು. ನಂಗ್ಯಾಕೊ ಭಯವಾತೈತೆ ಕಣೇ. ಇಲಿ ಹಿಂಗೆ ಹೊಲೇರ ಗುಡೀಗೆ ದಂಡು ಬರೋದೆಂದ್ರೇನು, ಚೌಡ ಅವನ ಹೊಲತಿ ಲಕ್ ಎಂದು ಪರಾಣ ಬಿಡೋದೆಂದ್ರೇನು, ನನ್ನಪ್ಪ ಅವ್ವನನ್ನ ಹೀಗೆ ದಯ್ಯ ಮೆಟ್ಟೋದೆಂದ್ರೇನು – ಕ್ಯಾಳಬಾಕು’ ಎಂದಳು.

‘ಅಯ್, ನಿಂದೊಂದು. ಸುಮ್ಕಿರು’ ಎಂದು ಚಿನ್ನಿ ಬೆಳ್ಳಗೆ ಸಮಾಧಾನ ಹೇಳಿದಳು.

* * *

ಮಧ್ಯಾಹ್ನ ಎರಡು ಗಂಟೆಯ ಹೊತ್ತಿಗೆ ಸೂರ್ಯ, ಧಗಧಗನೆ ನೆತ್ತಿಯ ಮೇಲೆ ಪಶುಪತಿ ಕೋಪದಲ್ಲಿ ತೆರೆದ ಹಣೆಗಣ್ಣಿನಂತೆ ಉರಿದು, ಹಸಿವಿನಿಂದ ಅರ್ಧಜೀವರಾದ ಬ್ರಾಹ್ಮಣರನ್ನು ದಿಙ್ಮೂಢರನ್ನಾಗಿ ಮಾಡಿ ಕುಕ್ಕರಿಸಿದ. ಪ್ರಾಣೇಶಾಚಾರ್ಯರ ಆಗಮನವನ್ನು ನಿರೀಕ್ಷಿಸುತ್ತ, ಪೆದ್ದು ಪೆದ್ದಾಗಿ ಬೀದಿಯ ಝಳ ಝಳ ಬಿಸಿಲನ್ನು ನೋಡುತ್ತ ಕೂತ ಕಣ್ಣುಗಳ ಎದುರು ಬಿಸಿಲು ಕುದುರೆಗಳು ನರ್ತಿಸಿದವು. ಉತ್ಕಟವಾಗಿದ್ದ ಭೀತಿ ಮತ್ತು ಹಸಿವು ಹೊಟ್ಟೆಯಲ್ಲಿ ಗುಮ್ಮನಂತೆ ಅಡಗಿ, ನಿರಾಕಾರವಾದ ಕಳವಳ ಮಾತ್ರವಾಗಿ – ಮಾರುತಿಯ ಅಪ್ಪಣೆಯನ್ನು ಪಡೆಯಹೋದ ಪ್ರಾಣೇಶಾಚಾರ್ಯರ ವ್ಯಕ್ತಿತ್ವದ ಸುತ್ತ ಬ್ರಾಹ್ಮಣರ ಜೀವಗಳು ಬಾವಲಿಗಳಂತೆ ನೇತುಬಿದ್ದವು. ಏನೋ ಭರವಸೆ : ಇನ್ನೊಂದು ರಾತ್ರೆ ನಾರಾಣಪ್ಪನ ಹೆಣವನ್ನಿಟ್ಟುಕೊಂಡಿರಬೇಕಾದ ಪ್ರಮೇಯ ಬರಲಿಕ್ಕಿಲ್ಲವೆಂಬ ನಂಬಿಕೆ. ಉಗ್ರಾಣದ ಅಕ್ಕಿಯ ಗೋಣಿಯಲ್ಲಿ ಸತ್ತುಬಿದ್ದಿದ್ದ ಇಲಿಯನ್ನು ಬಾಲದಿಂದೆತ್ತಿ, ಸೆರಗಿನಿಂದ ಮೂಗು ಮುಚ್ಚಿಕೊಂಡು ಹೊರಗೆಸೆಯಲೆಂದು ಹೋದ ಸೀತಾದೇವಿ, ಗವ್ವೆಂದು ಒಂದು ಹದ್ದು ಈಸಿ ಬಂದು ತಮ್ಮ ಮನೆಯ ಸೂರಿನ ಮೇಲೆ ಬಂದು ಕೂತಿದ್ದು ಕಂಡು, ‘ಅಯ್ಯಯ್ಯೋ, ಇವರೇ ಇವರೇ’ ಎಂದು ಕಿರುಚಿದಳು. ಹದ್ದು ಹೀಗೆ ಮನೆಯ ಮೇಲೆ ಬಂದು ಕೂರೋದು ಸಾವಿನ ಶಕುನ. ಹಿಂದೆ ಎಂದೂ ಹೀಗಾದ್ದಿಲ್ಲ. ಗರುಡಾಚಾರ್ಯ ಓಡಿಬಂದು ಹದ್ದನ್ನು ನೋಡಿ ಕುಸಿದುಬಿಟ್ಟ. ಸೀತಾದೇವಿ ‘ಅಯ್ಯೋ, ನನ್ನ ಮಗನಿಗೆ ಏನಾಗಿಬಿಟ್ಟಿತೋ…’ ಎಂದು ಅಳಲು ಪ್ರಾರಂಭಿಸಿದಳು. ಗರುಡಾಚಾರ್ಯ ತಾನು ಹಿಂದಿನ ದಿನ ಮಾರುತಿಗೆ ಬಂಗಾರ ಸೇರಲೆಂದು ದಾಸಾಚಾರ್ಯ ಹೇಳಿದ ಮಾತನ್ನು ಮನಸ್ಸಿನೊಳಗೆ ನಿರಾಕರಿಸಿದ್ದರಿಂದ ಹೀಗಾಗಿರಬೇಕೆಂದು ಅತ್ಯಂತ ಭಯದಲ್ಲಿ ಹೆಂಡತಿಯ ಕೈ ಹಿಡಿದು ಎದ್ದು ಒಳಗೆ ಬಂದು, ಕಾಣಿಕೆಯನ್ನು ದೇವರ ಎದುರಿಟ್ಟು, ನಮಸ್ಕಾರ ಮಾಡಿ ‘ತಪ್ಪಾಯಿತಪ್ಪ. ನಿನ್ನ ಬಂಗಾರ ನಿನಗೇ ಇರಲಿ, ಮನ್ನಿಸಿಬಿಡು’ ಎಂದು ಪ್ರಾರ್ಥಿಸಿದ. ಮತ್ತೆ ಹೊರಗೆ ಬಂದು ಹದ್ದನ್ನು ಹಾರಿಸಲೆಂದು ‘ಉಶ್ ಉಶ್’ ಎಂದ. ಸೀತಾದೇವಿ ಎಸೆದಿದ್ದ ಇಲಿಯನ್ನು ಸೂರಿಗೆತ್ತಿಕೊಂಡು ಹೋಗಿ ಉಣ್ಣುತ್ತಿದ್ದ ಹದ್ದು ನಿರ್ಭಯವಾಗಿ, ನಾಚಿಗೆಟ್ಟ ನೆಂಟನ ಹಾಗೆ, ಕೂತೇಬಿಟ್ಟಿತು. ಗರುಡಾಚಾರ್ಯ ಕಣ್ಣುಕುಕ್ಕುವ ಬಿಸಿನಲ್ಲಿ ಕತ್ತೆತ್ತಿ ನೋಡುತ್ತಾನೆ – ಏನು ನೋಡೋದು – ಹದ್ದು, ಹದ್ದು, ಹದ್ದು, ಆಕಾಶದ ನೀಲಿಯ ತುಂಬ ತೇಲಾಡುವ, ಓಲಾಡುವ, ವೃತ್ತವೃತ್ತ ಸುತ್ತಿ ಕೆಳಗೆ ಬರುತ್ತಿರುವ ಹದ್ದುಗಳು. ‘ಇವಳೇ, ನೋಡೇ ಇಲ್ಲಿ’ ಎಂದು ಕೂಗಿದ. ಸೀತಾದೇವೆ ಓಡಿಬಂದು ಹಣೆಗೆ ಕೈ ಮಾಡಿ ಕಣ್ಣುಗಳನ್ನೆತ್ತಿ ‘ಉಶ್’ ಎಂದು ನಿಟ್ಟುಸಿರೆಳೆದಳು. ಅವರು ನೋಡುತ್ತಿದ್ದಂತೆ ತಮ್ಮ ಮನೆಯ ಮೇಲೆ ಕೂತ ಹದ್ದು ನರ್ತಕಿಯಂತೆ ಕತ್ತು ಕೊಂಕಿಸಿ, ಸುತ್ತ ನೋಡಿ, ‘ಭರ್ರ್’ ಎಂದು ಅವರ ಕಾಲುಬುಡಕ್ಕೆ ಎಗರಿ, ಉಗ್ರಾಣದಿಂದ ಹಿತ್ತಲಿಗೆ ಓಡಿಬರುತ್ತಿದ್ದ ಇಲಿಯೊಂದನ್ನು ಕುಕ್ಕಿ, ಮತ್ತೆ ಹಾರಿ ಮನೆಯ ಮೇಲೆ ಕೂತಿತು. ದಂಪತಿಗಳ ಪ್ರಾಣ ಒಂದು ಕ್ಷಣ ಜೊತೆಯಾಗಿ ಎಂದೂ ಕಂಪಿಸದ ಹಾಗೆ ಕಂಪಿಸಿ – ಇಬ್ಬರೂ ಕೂತುಬಿಟ್ಟರು. ಆಕಾಶದಲ್ಲಿ ಹಾರಾಡುತ್ತಿದ್ದ ಹದ್ದುಗಳಲ್ಲಿ ಒಂದು ಇಳಿದು ನಾರಣಪ್ಪನ ಮನೆಯ ಮೇಲೆ ಕುತಿತು. ಕತ್ತನ್ನು ಎತ್ತಿ ಅದರ ದೈತ್ಯ ರೆಕ್ಕೆಗಳನ್ನು ಪಟಪಟನೆ ಬಡಿದು, ಸಮತೂಕಕ್ಕೆ ಬಂದು, ಅಗ್ರಹಾರವನ್ನೆಲ್ಲ ಹದ್ದುಗಣ್ಣಿನಲ್ಲಿ ಈಕ್ಷಿಸಿತು. ತದನಂತರ ಹಾರುತ್ತಿದ್ದ ಹದ್ದುಗಳೆಲ್ಲ ಇಳಿದು ಮನೆಗೆ ಎರಡೆರಡರಂತೆ, ಮೊದಲೇ ನಿಶ್ಚಯಮಾಡಿಕೊಂಡವಂತೆ ಬಂದು ಕೂತವು. ‘ರವ್ವನೆ’ನೇ ಕೆಳಗೆ ಹಾರುವುವು; ಇಲಿಯೊಂದನ್ನು ಕೊಕ್ಕಿನಿಂದೆತ್ತಿ ಸೂರಿನ ಮೇಲೆ ಕೂತು ಕುಕ್ಕುತ್ತ ತಿನ್ನುವುವು – ಸ್ಮಶಾನದಲ್ಲಿರಬೇಕಾದ ರಣಹದ್ದುಗಳು ಹೀಗೆ, ಪ್ರಳಯಕಾಲದಲ್ಲೆಂಬಂತೆ, ಅಗ್ರಹಾರಕ್ಕೆ ಎರಗಿದ್ದನ್ನು ಕಂಡು ಅಗ್ರಹಾರದ ಸಮಸ್ತರೂ ಬಾಯಿಬಡಿದವರಂತೆ ಬಂದು ಬೀದಿಯಲ್ಲಿ ನೆರೆದರು. ಎಲ್ಲರ ಮನೆಯ ಮೇಲೂ ಹದ್ದಗಳು ತಂಗಿದ್ದು ಕಂಡು ಸೀತಾದೇವಿ, ‘ಇದು ಬರೀ ನನ್ನ ಮಗನ ಕ್ಷೇಮದ ಬಗ್ಗೆ ಶಕುನವಲ್ಲ’ ಎಂದು ಸಮಾಧಾನಿತಳಾದಳು. ವಾಚ್ಯಾತೀತವಾದ ಭಯದಿಂದ ಅಗ್ರಹಾರದ ಬ್ರಾಹ್ಮಣರು, ಹೆಂಗಸರು, ಮಕ್ಕಳು ನಿಂತಿದ್ದು ಕ್ಷಣ ಮಾತ್ರ : ಮೊದಲು ದುರ್ಗಾಭಟ್ಟ ಹದ್ದುಗಳನ್ನು ಹೆದರಿಸಲೆಂದು ‘ಹೋ ಹೋ ಹೋ’ ಎಂದು ಕೂಗಿದ. ನಡೆಯಲಿಲ್ಲ. ಎಲ್ಲ ಬ್ರಾಹ್ಮಣರೂ ಒಕ್ಕೊರಲಿನಿಂದ ಕೂಗಿದರು. ಅದೂ ನಡೆಯಲಿಲ್ಲ. ಉಪ್ಪಿಟ್ಟು ತಿಂದು ಆಗತಾನೆ ಪ್ರಸನ್ನನಾಗಿ ಹಿಂದೆ ಬಂದ ದಾಸಾಚಾರ್ಯನಿಗೊಂದು ಉಪಾಯ ಹೊಳೆಯಿತು. ‘ಜಾಗಟೆ ತಂದು ಬಾರಿಸಿ’ ಎಂದ. ಹುಡುಗರಿಗೆ ಗೆಲುವಾಗಿ, ದೇವರ ಮನೆಯೊಳಕ್ಕೋಡಿ, ಕಂಚಿನ ಜಾಗಟೆಗಳ ಜೊತೆ ಶಂಖವನ್ನೂ ತಂದರು. ಮಹಾ ಮಂಗಳಾರತಿಯ ವೇಳೆಯಲ್ಲಿ ಮಾಡುವ ಭಯಂಕರ ಮಂಗಳಶಬ್ದ ಮಧ್ಯಾಹ್ನದ ರುದ್ರಮೌನವನ್ನು ರಣಭೇರಿಯಂತೆ ನುರಿದು ನುಚ್ಚುನೂರು ಮಾಡಿತು. ಐದಾರು ಮೈಲಿ ಮಿಸ್ತೀರ್ಣದಲ್ಲಿದ್ದ ಅಗ್ರಹಾರದ ಜನರಿಗೆ ದೂರ್ವಾಸವನದಲ್ಲಿ ನಗಾರಿ, ಪೂಜೆ, ಮಂಗಳಾರತಿ ನಡೆಯುತ್ತಿರಬೇಕೆಂಬ ಭ್ರಾಂತಿಯನ್ನು ಕವಿಸಿತು. ರಣಹದ್ದುಗಳು ಆಶ್ಚರ್ಯಪಟ್ಟವರಂತೆ ಅತ್ತ ಇತ್ತ ನೋಡಿ, ರೆಕ್ಕೆಗಳನ್ನು ಬಿಚ್ಚಿ, ಇಲಿಗಳನ್ನು ಕಚ್ದಿಕೊಂಡು ಹಾರಿದವು. ಆಕಾಶದಲ್ಲಿ ತೇಲುತ್ತ ಹೊಳೆಯುವ ಚುಕ್ಕೆಗಳಾದವು. ‘ನಾರಾಯಣ’ ಎಂದು ಸುಸ್ತಾದ ಬ್ರಾಹ್ಮಣರು ಚಾವಡಿ ಏರಿ, ಹೊದ್ದ ವಸ್ತ್ರದಿಂದ ಮೂಗು ಮುಚ್ಚಿಕೊಂಡು, ಬೆವರೊರಸಿಕೊಂಡರು. ಸೀತಾದೇವಿ ಮತ್ತು ಅನುಸೂಯ ಅವರ ಗಂಡಂದಿರ ಬಳಿ ಹೋಗಿ, ‘ಬಂಗಾರ ವಿಷಯ ಹಾಳಾಗಲಿ. ಕಂಡವರ ಆಸ್ತಿ ನಮಗೇಕೆ. ಮೊದಲು ಶವವನ್ನು ತೆಗೆದು ಸಂಸ್ಕಾರ ಮಾಡಿ. ನಾರಣಪ್ಪನ ಪ್ರೇತವೇ ಈ ಹದ್ದುಗಳನ್ನು ಕರೆಯುತ್ತಿದೆ’ ಎಂದು ಕಣ್ಣೀರಿಟ್ಟು ಬೇಡಿದರು. ಗಾಳಿ ಬೀಸುತ್ತಿರಲಿಲ್ಲವಾದ್ದರಿಂದ ಮನೆಮನೆಯಲ್ಲೂ ಮಡುವುಗಟ್ಟಿ ನಿಂತ ಧಗೆ, ಭೀತಿ, ಹಸಿವಿನಲ್ಲಿದ್ದವರನ್ನು ನಿರಾಕಾರ ಪ್ರೇತದಂತೆ ಕಾಡಿತು. ಜನ್ಮಜನ್ಮಾಪಿ ಕಳೆದುಕೊಳ್ಳಲಾರದ ಅಶುಚಿಯಲ್ಲಿದ್ದಂತೆನಿಸಿ, ನೇಮ ನಿಷ್ಠೆಯ ಬ್ರಾಹ್ಮಣರು ಕಂಗಾಲಾದರು.

* * *

ಮಧ್ಯಾಹ್ನ ಉರಿ ಏರಿ ಮರದ ನೆರಳಿನಲ್ಲಿ ಕೂತಿದ್ದ ಚಂದ್ರಿಗೆ ತುಂಬ ದಣಿವಾಯಿತು. ಮಡಿಲಿನಲ್ಲಿದ್ದ ರಸಬಾಳೆಹಣ್ಣಿಗೆ ಕೈಹಾಕಿದವಳು ಗುಡಿಯಲ್ಲಿ ಪ್ರಾಣೇಶಾಚಾರ್ಯರು ಹಸಿದು ಪೂಜೆಯಲ್ಲಿ ಕೂತಿದ್ದಾಗ ತಾನೇನು ತಿನ್ನುವುದೆಂದು ಸುಮ್ಮನಾದಳು. ದೂರದಿಂದ ಶಂಖ ಜಾಗಟೆಯ ಧ್ವನಿ ಕೇಳಿ ಆಶ್ಚರ್ಯವಾಯಿತು : ಸುತ್ತ ಕಣ್ಣು ಹಾಯಿಸಿದಳು. ಗಾಳಿ ನಿಶ್ಚಲವಾಗಿ ಮರದೆಲೆಗಳೂ ಅಲುಗುತ್ತಿರಲಿಲ್ಲ. ಅಲ್ಲಾಡುವುದೆಂದರೆ ದೂರದ ಶುಭ್ರ ತಿಳಿನೀಲಿಯಲ್ಲಿ ಓಲಾಡುವ ಹದ್ದುಗಳು ಮಾತ್ರ. ಪ್ರಾಣೇಶಾಚಾರ್ಯರು ಮತ್ತೊಂದು ಕೊಡ ನೀರನ್ನು ಬಳಬಳನೆ ಮೈಗೆ ಸುರಿದುಕೊಂಡದ್ದು ಕಂಡು ‘ನನ್ನಿಂದೆಷ್ಟು ತೊಂದರೆ’ ಎಂದು ಯಾತನೆಯಾಯಿತು ಅವಳು ಅರಿಯುವುದರೊಳಗೆ ಕೈ ಬಾಳೆಹಣ್ಣೊಂದನ್ನು ಸುಲಿದು ನಾಜೂಕಾಗಿ, ತೆರೆದ ಅವಳ ಬಾಯಲ್ಲಿಟ್ಟಿತ್ತು. ‘ನನಗೆ ದೋಷವಿಲ್ಲ’ ಎಂದು ಸಮಾಧಾನ ಹೇಳಿಕೊಂಡಳು.

* * *

ತಿರುಗಿ ತಿರುಗಿ ಹದ್ದುಗಳು ಹಟಹಿಡಿದು ಬಂದು ಕೂತವು! ಬ್ರಾಹ್ಮಣರು ಮತ್ತೆ ಹೊರಬಂದು ಚಾಗಟೆ ಬಾರಿಸಿ ಶಂಖ ಊದಿದರು. ಸಂಜೆಯವರೆಗೂ ಈ ಕಾಳಗ ನಡೆಯಿತು. ದಣಿದವರೆಂದರೆ ಬ್ರಾಹ್ಮಣರು ಮಾತ್ರ; ಆರ್ತರಾಗಿ ಕಾದರೂ ಪ್ರಾಣೇಶಾಚಾರ್ಯರ ಸುಳಿವೇ ಇಲ್ಲವಲ್ಲ! ಇನ್ನೊಂದು ರಾತ್ರೆಯನ್ನು ಹೇಗೆ ಕಳೆಯುವುದಪ್ಪ ಎಂಬ ಉತ್ಕಟ ಸಂಕಟ ಮರಳಿ – ಅಗ್ರಹಾರದಲ್ಲಿ ಕತ್ತಲಾಗಿ – ಹದ್ದುಗಳು ಮರೆಯಾದವು.