ಇತ್ತ ಪಾರಿಜಾತಪುರದಿಂದ ಬಿಸಿಲಿನಲ್ಲಿ ಹಸಿವಿನಲ್ಲಿ ಹರಿ ಹರಿ ಎಂದು ನಡೆದುಬಂದು ಮನೆಯಲ್ಲಷ್ಟು ವಿಶ್ರಮಿಸಿಕೊಳ್ಳೋಣೆಂದರೆ ಬ್ರಾಹ್ಮಣರಿಗೆ ಅವರ ಕಾಂತೆಯರ ಪ್ರಭುಸಂಮಿತಿ ಪ್ರಾರಂಭವಾಯಿತು. ಮುಖ್ಯವಾಗಿ ಗರುಡಾಚಾರ್ಯ, ಲಕ್ಷ್ಮಣಾಚಾರ್ಯರಿಗೆ.

ಗರುಡಚಾರ್ಯನ ಏಕಮಾತ್ರ ಸಂತಾನವಾದ ಅವನ ಮಗ ಶ್ಯಾಮ ಮನೆಯಿಂದ ಓಡಿಬಿಟ್ಟು ಮಿಲಿಟರಿ ಸೇರಿದ್ದಕ್ಕೆ ಬಗೆಬಗೆಯ ಕಾರಣಗಳನ್ನು ಅಗ್ರಹಾರದಲ್ಲಿ ಹೇಳುತ್ತಾರೆ. ತಂದೆಯ ಶಿಕ್ಷೆ ತಡೆಯಲಾರದೆ ಹೋದ ಎಂದು ಗರುಡಾಚಾರ್ಯನನ್ನು ಕಂಡರೆ ಆಗದವರು ಅಂದರೆ, ನಾರಣಪ್ಪನನ್ನು ಕಂಡರೆ ಆಗದ ಎಲ್ಲರೂ ಅವನ ಪ್ರೇರಣೆಯಿಂದ ಮಿಲಿಟರಿ ಸೇರಿದ ಎಂದು ಅನ್ನುತ್ತಾರೆ. ಅಲ್ಲದೆ ಪ್ರಾಣೇಶಾಚಾರ್ಯರಿಂದ ಪಾಠ ಹೇಳಿಸಿಕೊಂಡೂ ಹೀಗೆ ಅವ ಓಡಿಹೋಗುವ ದುರ್ಬುದ್ಧಿ ಮಾಡಿರಬೇಕಾದರೆ – ಲಕ್ಷ್ಮಣಾಚಾರ್ಯನ ಮತ – ಗರುಡ ನಾರಣಪ್ಪನ ತಂದೆಯ ಮೇಲೆ ಮಾಡಿಸಿದ ಮಾಟ ಈಗ ಗರುಡನ ಮೇಲೆಯೇ ತಿರುಗಿಬಿದ್ದದ್ದು. ಸೃಷ್ಟಿಸಿದವನನ್ನೆ ಸುಟ್ಟು ಬಿಡಲು ಹೋದ ಭಸ್ಮಾಸುರನಂತೆ ಈ ಮಾಟ ಮಂತ್ರಗಳು. ಗರುಡ ಮಾಟ ಮಾಡಿಸದಿದ್ದರೆ, ‘ಸತ್ಕುಲದಲ್ಲಿ ಹುಟ್ಟಿದ ನಾರಣಪ್ಪ ಹೀಗೇಕೆ ಚಾಂಡಾಲನಾಗುತ್ತಿದ್ದ’ ಎಂದು ತನ್ನ ತಾಯಿಯ ಕುಲಕ್ಕೆ ಕಳಂಕ ತಟ್ಟಿತೆಂದು ನೋಯುತ್ತಿದ್ದ ಲಕ್ಷ್ಮಣಾಚಾರ್ಯನ ಹೆಂಡತಿ ಅನಸೂಯ ಹೇಳುತ್ತಾಳೆ.

ಚಾಂಡಲ ನಾರಣಪ್ಪನ ಪ್ರೇರಣೆಯಿಂದ ಕೈಗೆ ಬಂದ ಮಗ ಕೆಟ್ಟು ಓಡಿದನೆಂದು ಗರುಡಾಚಾರ್ಯನ ಹೆಂಡತಿ ಸೀತಾದೇವಿ ಅನ್ನ ನೀರು ಬಿಟ್ಟು ಸೊರಗಿ, ಮಮ್ಮಲ ಮರುಗಿ, ಹಗಲು ರಾತ್ರೆ ದಾರಿ ಕಾದು, ಮೂರು ತಿಂಗಳಾದ ಮೇಲೆ, ಶ್ಯಾಮನಿಂದ – ತಾನು ಪುಣೆಯಲ್ಲಿರುವುದಾಗಿಯೂ, ಮಿಲಿಟರಿ ಸೇರಿರುವುದಗಿಯೂ, ಪತ್ರ ಬರೆದುಕೊಟ್ಟು ಸೇರಿದ ಮೇಲೆ ಆರುನೂರು ರೂಪಾಯಿಗಳನ್ನು ಕೊಡದ ಹೊರ್ತು ಬಿಟ್ಟು ಬರುವಂತಿಲ್ಲವೆಂದೂ – ತಾಯಿಗೆ ಕಾಗದ ಬಂದಿತ್ತು. ಸೀತಾದೇವಿ ಸೊಂಟದ ಮೇಲೆ ಕೈಯಿಟ್ಟು , ನಾರಣಪ್ಪನನ್ನು ದಾರಿಯಲ್ಲಿ ನಿಲ್ಲಿಸಿ ಬಯ್ದು, ಅತ್ತು, ಮಗನಿಗೆ ‘ಮಾಂಸಹಾರ ಮಾಡಬೇಡ, ಸ್ನಾನ ಸಂಧ್ಯಾವಂದನೆ ಬಿಡಬೇಡ’ ವೆಂದು ಕಾಗದ ಬರೆಸಿದ್ದಳು. ಮಗನಿಗೆ ಒಳ್ಳೆಯ ಬುದ್ಧಿಬರಲೆಂದು ಶುಕ್ರವಾರದ ರಾತ್ರೆಯ ಊಟ ಬಿಟ್ಟಳು. ಗರುಡಾಚಾರ್ಯರು ದೂರ್ವಾಸ ಕೋಪತಾಳಿ, ‘ಅವನು ಸತ್ತಂತೆ ನನ್ನ ಪಾಲಿಗೆ, ಈ ಸೂರಿನೊಳಕ್ಕೆ ಅವನು ತಲೆಯಿಕ್ಕಲಿ, ಸೀಳಿಬಿಡುತ್ತೇನೆ’ ಎಂದು ಕೆಂಜಗದ ಇರುವೆ ಮೈಗೆ ಹತ್ತಿದವರಂತೆ ಕುಣಿದರು. ಸೀತಾದೇವಿ, ‘ಗಂಡನಿಗೊಂದಷ್ಟು ಸಮಾಧಾನ ಕೊಡಪ್ಪ, ಮಗನ ಮೇಲಿನ ಪ್ರೀತಿ ಉಳಿಸಪ್ಪ’ ಎಂದು ತುಳಸಿಯನ್ನು ಪ್ರಾರ್ಥಿಸಿ ಶನಿವಾರವೂ  ಒಪ್ಪತ್ತು ಮಾಡತೊಡಗಿದಳು. ಉರಿಯುವ ಬೆಂಕಿಗೆ ತುಪ್ಪ ಹಾಕುವೋಪಾದಿಯಲ್ಲಿ ಮಾಧ್ವದ್ವೇಷಿ ದುರ್ಗಾಭಟ್ಟ, ‘ಮಿಲಿಟರಿಯಲ್ಲಿ ಸ್ನಾನ ಸಂಧ್ಯಾವಂದನೆ ಮಾಡುವಂತಿಲ್ಲ. ಬಲಾತ್ಕಾರವಾಗಿ ಮಾಂಸ ತಿನ್ನಿಸುತ್ತಾರೆ’೦ದು ಹೇಳಿ ಗರುಡಾಚಾರ್ಯನಿಗೆ ತಲೆ ಎತ್ತದಂತೆ ಮಾಡಿದ್ದ.

ಮನೆಗೆ ಬಂದ ಸೀತಾದೇವಿ ಚಂದ್ರಿಯ ಆಭರಣ ತಮಗೆ ಸೇರಿದ್ದೇ ಆದರೆ ಮಗನನ್ನು ಮಿಲಿಟರಿಯಿಂದ ಬಿಡಿಸಿಕೊಳ್ಳಲು ಒಂದು ಮಾರ್ಗವಾದಂತಾಗುವುದೆಂದು ಹಿಗ್ಗಿದಳು. ತನ್ನ ಯಜಮಾನರು ನಾರಣಪ್ಪನ ಶವಸಂಸ್ಕಾರ ಮಾಡೋದು ಸಾಧ್ಯವಿರಲಿಕ್ಕೇ ಬೇಕು ಧರ್ಮಶಾಸ್ತ್ರದ ಪ್ರಕಾರ. ತನ್ನ ಗಂಡನಿಗಿಂತ ಮುಂಚೆ ಎಲ್ಲಿಯಾದರೂ ಲಕ್ಷ್ಮಣಾಚಾರ್ಯ ಒಪ್ಪಿಬಿಟ್ಟರೆ? ಅಥವ ಆ ಮಡಿಮೈಲಿಗೆಯಿಲ್ಲದ ಪಾರಿಜಾತಪುರದವರು ಒಪ್ಪಿಬಿಟ್ಟರೆ? ಚಡಪಡಿಸಿದಳು. ಮಾರುತಿಗೆ ಹಣ್ಣು ಕಾಯಿಯ ಹರಕೆ ಹೇಳಿಕೊಂಡಳು – ‘ದೇವರೇ ನನ್ನ ಗಂಡನೇ ಸಂಸ್ಕಾರ ಮಾಡುವಂತಾಗಲಪ್ಪ.’ ಈಗ ಅವಳ ಕಣ್ಣಿಗೆ ನಾರಣಪ್ಪ ಮಾಂಸಾಹಾರ ಮಾಡಿದ್ದು ಅಂತಹ ಭಯಂಕರ ಪಾಪದ ಹಾಗೆ ಕಾಣಲಿಲ್ಲ. ನಾಳೆ ತನ್ನ ಮಗನೇನಾದರೂ ಮನೆಗೆ ಹಿಂದಕ್ಕೆ ಬಂದರೆ ಅಗ್ರಹಾರದ ಅನ್ಯಾಯದ ನಾಲಿಗೆಗಳು ಅವನ ಮೇಲೆಯೂ ಹೇಳದೆ ಇರುತ್ತವೊ? ತನ್ನ ಮಗನಿಗೇನಾದರೂ ಬಹಿಷ್ಕಾರ ಹಾಕಿದಲ್ಲಿ ಏನು ಗತಿ?  ನಾರಣಪ್ಪನ ಮೇಲೆ ಬಹಿಷ್ಕಾರ ಹಾಕಿಸಲು  ಮುಂದೆ ಬಾರದಿದ್ದ ಪ್ರಾಣೇಶಾಚಾರ್ಯರನ್ನು ಹಿಂದೆ ದೂರುತ್ತಿದ್ದವಳು ಈಗ ಗೌರವದಿಂದ ಸ್ಮರಿಸಿದಳು : ಅವರು ಕರುಣಾವಂತರು; ನನ್ನ ಮಗನ ಪಾಪವನ್ನೂ ಹೊಟ್ಟೆಯಲ್ಲಿ ಹಾಕಿಕೊಂಡು ಖಂಡಿತಾ ಸಲಹುತ್ತಾರೆ; ಸಂಶಯವಿಲ್ಲ.

ಮನೆಗೆ ಬಂದಮೇಲೆ ನೆಲದ ಮೇಲೆ ಒರಗುತ್ತಿದ್ದಂತೆ, ಕಣ್ಣೀರಿಡುತ್ತ ಕಾಡಿದ ಸೀತಾದೇವಿಗೆ ಗರುಡಾಚಾರ್ಯರು ‘ಅವನು ನನ್ನ ಪಾಲಿಗೆ ಸತ್ತಂತೆ, ಆ ದುಷ್ಟನ ಮಾತೆತ್ತಬೇಡ’ ಎಂದುಬಿಟ್ಟರು. ಆದರೆ ಹೆಂಡತಿಯ ಸೂಚನೆ ತೊಣಚಿಯಂತೆ ಅವರನ್ನು ಹೊಕ್ಕು ಕಾಡಿತು. ಏನೇ ನಾಶವಾಗಲಿ, ಪುತ್ರನಾಶ ಬೇಕಾದರೂ ಆಗಲಿ, ತನ್ನ ಬ್ರಾಹ್ಮಣ್ಯದ ನಾಶಕ್ಕೆ ತಾನು ತಯಾರಿಲ್ಲ. ಅದರೆ ಪ್ರಾಣೇಶಾಚಾರ್ಯರೇನಾದರೂ ಸೈ ಎಂದರೆ ಎಲ್ಲ ಸುಗಮವಾಗಿಬಿಡುತ್ತದೆ. ತಾನು ಸತ್ತಮೇಲೆ ತನಗೆ ಪಿಂಡ ಹಾಕಬಲ್ಲ ಏಕಮಾತ್ರ ಪುತ್ರನನ್ನು ಆಗ ಮಿಲಿಟರಿಯಿಂದ ಬಿಡಿಸಿಕೊಳ್ಳಬಹುದು.

ಹೆಂಡತಿಗೆ ‘ಅದು ಆಗದ ಮಾತು. ಬಾಯಿ ಮುಚ್ಚು’ ಎಂದು ಗದರಿಸಿ ಕಳ್ಳನ ಹಾಗೆ ಪ್ರಾಣೇಶಾಚಾರ್ಯರ ಮನೆಗೆ ಗರುಡಾಚಾರ್ಯ ನಡೆದ. ಅಂಗಳದಲ್ಲಿ ಕೂತಿದ್ದ ಚಂದ್ರಿಯ ಮುಖ ನೋಡದೆ ಆಚಾರ್ಯರ ನಡುಮನೆಗೆ ಬಂದ. ಪ್ರಾಣೇಶಾಚಾರ್ಯರು ತಲೆ ಎತ್ತದೆ ತಾಳೆಗರಿ ಗ್ರಂಥಗಳನ್ನು ಓದುತ್ತ ಕೂತವರು:

‘ಕೂತುಕೊ ಗರುಡ. ಪಾರಿಜಾತಪುರದವರು ಧರ್ಮಶಾಸ್ತ್ರದಲ್ಲಿ ಹೇಳಿದಂತೆ ಮಾಡೋಣ ಎಂದಂತೆ. ಒಂದು ಲೆಖ್ಖಕ್ಕೆ ಅವರು ಅಂದದ್ದು ಸರಿ’ ಎಂದು ತಿರುಗಿ ಓದುತ್ತ ಕೂತರು. ಗರುಡ ಗಂಟಲು ಕೆರೆದುಕೊಂಡು,

‘ಮನುಸ್ಮೃತಿ ಏನೆನ್ನುತ್ತೆ, ಆಚಾರ್ಯರೇ…?’ ಎಂದ.

ಪ್ರಾಣೇಶಾಚಾರ್ಯ ತಲೆಯಾಡಿಸಿದರು.

‘ಧರ್ಮಶಾಸ್ತ್ರದಲ್ಲಿ ತಮಗೆ ತಿಳಿಯದೇ ಇರೋದು ಏನಿದೆ? ಅದಕ್ಕಲ್ಲ ನಾನು ಅನ್ನೋದು. ಏನು. ಅವತ್ತು – ಏನು – ಟೀಕಾಚಾರ್ಯರ ಪುಣ್ಯದಿನ – ಮಠದಲ್ಲಿ ಶ್ರೀಗುರುಗಳ ಎದುರು ಕಂಬದ ಎಲೆಯಲ್ಲಿ ತಾವು ಕೂತು ವ್ಯಾಸರಾಯ ಮಠದ ಆ ಮಹಾಪಂಡಿತರ ಜೊತೆ – ಏನು – ತಾವು ವಾದಿಸಿದ್ದನ್ನ ನಾನು ಕೇಳಿಲ್ಲವೆ? ‘ಬಿಂಬೋಸಿ, ಪ್ರತಿಬಿಂಬೋಸ್ಮಿ’ ಎಂಬೋದನ್ನ ಮಧ್ವಮತದ ಪ್ರಕಾರ ಅರ್ಥಮಾಡಿ ಹೇಳಿ ಅಂತ ನೀವು ಹಾಕಿದ ಸವಾಲಿಗೆ ಅವರು ತತ್ತರಿಸಿಹೋದರು. ಏನು. ನಾಲ್ಕು ಗಂಟೆಕಾಲ ನಡೀತು ಅವತ್ತಿನ ಊಟ. ಆದ್ದರಿಂದ ತಮಗೆ ಸೂಚನೆ ಕೊಡಲಿಕ್ಕೆ ಬಂದಂತೆ ತಾವು ಭಾವಿಸಬಾರದು. ತಮ್ಮ ಎದುರು ನಾನು ಸಿಂಗಲೀಕ. ಏನು.’

ತಮ್ಮನ್ನು  ಮೆಚ್ಚಿಸಿ ತನ್ನ ಕಡೆಗೆ ಎಳೆದುಕೊಳ್ಳಲು ಗರುಡ ಯತ್ನಿಸುತ್ತಿರೋದು ನೋಡಿ ಆಚಾರ್ಯರಿಗೆ ಅಸಹ್ಯವಾಯಿತು. ಧರ್ಮಶಾಸ್ತ್ರದಲ್ಲಿ ಏನಿದೆ, ಏನಿಲ್ಲ ಇವನಿಗೆ ಬೇಡ. ತನ್ನ ಬಾಯಿಂದ ಆಗಲಿ ಎಂದು ಬಂದರೆ ಸಾಕು, ಆಗ ಯಾರೂ ದೋಷ ಹುಡುಕೋದಿಲ್ಲವಲ್ಲ – ಎಂದು ತಿಳಿದು ಹೀಗೆ ತನ್ನನ್ನು ಅಟ್ಟಕ್ಕೇರಿಸುತ್ತಿದ್ದಾನೆ. ಅದಕ್ಕೆ ಕಾರಣ : ಆ ಬಂಗಾರ, ಔದಾರ್ಯದ ಫಲ ಅದರ ತದ್ವಿರುದ್ಧ. ನಾರಣಪ್ಪ ಹೇಳಿದ ಹಾಗೆ ಈಗ ತಾನು ಮರುಕಕ್ಕೆ ಕರಗಿ ಬಿಡಬಾರದು. ಗಟ್ಟಿಯಾಗಿ ನಿಂತು ಧರ್ಮಶಾಸ್ತ್ರ ಏನೆನ್ನುತ್ತದೋ ಹಾಗೆ ಮಾಡಬೇಕು.

‘ತ್ರಿಕಾಲಜ್ಞರಾದ ಋಷಿಗಳು ಇದನ್ನು ಯೋಚಿಸದೆ ಹೋಗಿರೋದು ಸಾಧ್ಯವೇ? ಏನು.’ ಗರುಡನ ಮಾತಿಗೆ ಉತ್ತರ ಕೊಡದೆ ಆಚಾರ್ಯರು ಓದುತ್ತಲೇ ಹೋದರು.

‘ವೇದಾಂತವೆಂದು ಕರೆಯಲು ಕಾರಣ, ಇದರ ತತ್ವದ ಅಂತ್ಯ ಅಂತ ತಾವೇ ಅಪ್ಪಣೆ ಕೊಡಿಸಿದ್ದಿರಿ ಅಲ್ಲವೆ, ಆಚಾರ್ಯರೆ? ವೇದಾಂತದಲ್ಲಿ ಉತ್ತರವಿಲ್ಲದೆ ಇರೋಕ್ಕೆ ಸಾಧ್ಯವೊ? ಒಬ್ಬ ಬ್ರಾಹ್ಮಣನ ಶವ ಅಗ್ರಹಾರದಲ್ಲಿದ್ದ ಮೇಲೆ, ಏನು, ಕೇರಿಯ ಬ್ರಾಹ್ಮಣರು ತಮ್ಮ ಬ್ರಾಹ್ಮಣ್ಯದ ವಿಧಿನಿಯಮಗಳನ್ನು ಸಾಂಗವಾಗಿ ನಡೆಸಿಕೊಂಡು ಹೋಗೋದಕ್ಕೆ ಅಡ್ಡಿಯಾದ ಮೇಲೆ, ಏನು, ಬರೇ ಊಟಮಾಡುವಂತಿಲ್ಲಾವೆಂದು ನಾನು ಈ ಪ್ರಶ್ನೇನ ಎತ್ತುತ್ತೇನೆಂದಲ್ಲ… ಏನು.’

ಪ್ರಾಣೇಶಾಚಾರ್ಯರು ಇದಕ್ಕೂ ಉತ್ತರ ಕೊಡಲಿಲ್ಲ. ತಾನು ಹೇಳಿಕೊಟ್ಟ ವೇದಾಂತ, ಪುರಾಣ, ತತ್ವ ಎಲ್ಲವನ್ನೂ ಈಗ ತನಗೆ ವಾಪಸ್ಸು ಒಪ್ಪಿಸುತ್ತಿದ್ದಾನೆ ಗರುಡ. ಕಾರಣ? ಹೊನ್ನು! ಅಯ್ಯೋ ಮನುಷ್ಯನ ಬಾಳೇ ಎನ್ನಿಸಿತು.

‘ಅಲ್ಲದೆ ತಾವು ಹೇಳಿದ್ದು ನಿಜ ಅನ್ನಿಸಿತು ನನಗೆ. ಅವನು ಬ್ರಾಹ್ಮಣ್ಯ ಬಿಟ್ಟರೂ ಬ್ರಾಹ್ಮಣ್ಯ ಅವನನ್ನು ಬಿಟ್ಟಂತಲ್ಲವಲ್ಲ! ಅವನಿಗೆ ನಾವು ಬಹಿಷ್ಕಾರ ಹಾಕಿಸಲಿಲ್ಲವಲ್ಲ. ಏನು.ಬಹಿಷ್ಕಾರವನ್ನೇನಾದರೂ ಹಾಕಿಬಿಟ್ಟಿದ್ದರೆ ಅವ ತುರುಕಾ ಆಗಿ ನಾವೆಲ್ಲ ಈ ಅಗ್ರಹಾರಾನ್ನ ಬಿಡಬೇಕಾಗಿ ಬಂದು ಬಿಡ್ತಿತ್ತಲ್ಲ; ಏನು.’

‘ಧರ್ಮಶಾಸ್ತ್ರ ಏನು ಅನ್ನುತ್ತೋ ಹಾಗೆ ಮಾಡೋದೂಂತ ನನ್ನ ನಿರ್ಧಾರ, ಗರುಡ’ ಎಂದು ಅವನ ಮಾತನ್ನು ನಿಲ್ಲಿಸಲು ಗ್ರಂಥದಿಂದ ತಮ್ಮ ಕಣ್ಣುಗಳನ್ನೆತ್ತಿ ಹೇಳಿ ಮತ್ತೆ ಓದಲು ಪ್ರಾರಂಭಿಸಿದರು.

‘ಧರ್ಮಶಾಸ್ತ್ರದಲ್ಲಿ ಪಶ್ಚಾತ್ ಉತ್ತರ ಸಿಗಲಿಲ್ಲ ಎನ್ನಿ. ಸಿಗಲಿಕ್ಕಿಲ್ಲ ಎಂದಲ್ಲ ನನ್ನ ಮಾತು. ಏನು. ಒಂದು ವೇಳೆ ಸಿಕ್ಕದೆ ಹೋದರೆ ಆಪದ್ಧರ್ಮ ಅಂತ ಒಂದು ಇದೇಂತ ತಾವು ಹಿಂದೊಮ್ಮೆ ಅಪ್ಪಣೆ ಕೊಡಿಸಿದ್ದುಂಟುಲ್ಲ. ಒಬ್ಬ ಮನುಷ್ಯನ ಪ್ರಾಣಾ ಉಳಿಸಲು ಗೋಮಾಂಸಾನ್ನ ಕೊಡಬೇಕಾಗಿ ಬಂದರೆ ಗೋಮಾಂಸಕ್ಕೂ ದೋಷವಿಲ್ಲಾಂತ – ಏನು – ತಾವೇ ಹೇಳಿದ್ದಿಲ್ಲವೆ? ಏನು – ತಾವು ಹೇಳಿದ ಒಂದು ಕತೆಯ ಪ್ರಕಾರ ವಿಶ್ವಾಮಿತ್ರ ಋಷಿ ಭೂಮಿಯಲ್ಲಿ ಕ್ಷಾಮ ತಲೆದೋರಿದಾಗ ಒಮ್ಮೆ , ಹಸಿವು ತಾಳದಾಗಿ, ಜೀವಾನ ಉಳಿಸಿಕೊಳ್ಳೋದೇ ಪರಮಧರ್ಮ ಅಂತ, ಏನು, ಸತ್ತ ನಾಯಿಯ ಮಾಂಸಾನ್ನೂ ತಿನ್ನಹೋದನೆಂದು, ಏನು…’

‘ತಿಳಿಯಿತು ಗರುಡ. ಈಗ ನಿನ್ನ ಮನಸ್ಸಿನಲ್ಲಿರೋದು ಹೇಳಿಬಿಡು’

ಎಂದು ಪ್ರಾಣೇಶಾಚಾರ್ಯರು ತಲೆಬೇಸರ ಬಂದು ತಾಳೆಗರಿ-ಗ್ರಂಥಗಳನ್ನು ಮುಚ್ಚಿ ಕೇಳಿದರು.

‘ಏನೂ ಇಲ್ಲಪ್ಪ’ ಎಂದು ಗರುಡಾಚಾರ್ಯ ನೆಲ ನೋಡಿದ. ಮತ್ತೆ ಆಚಾರ್ಯರಿಗೆ ಉದ್ದಂಡ ನಮಸ್ಕಾರ ಮಾಡಿ ಎದ್ದು ಕೂತು:

‘ಶ್ಯಾಮನನ್ನು ಮಿಲಿಟರಿಯಿಂದ ಬಿಡಿಸಿಕೊಳ್ಳದಿದ್ದರೆ ನನ್ನ ಶವಸಂಸ್ಕಾರ ಮಾಡೋರು ಯಾರು ಹೇಳಿ, ಆಚಾರ್ಯರೆ. ತಮ್ಮ ಅನುಮತಿ ದೊರಕಿಬಿಟ್ಟರೆ, ಏನು…’ ಎಂದು ಅನ್ನುತ್ತಿರುವಂತೆ ಲಕ್ಷ್ಮಣಾಚಾರ್ಯ ಬಂದು ನಿಂತಿದ್ದ.

* * *

ತನ್ನ ತಂಗಿಯ ಕೊರಳಿನಲ್ಲಿರಬೇಕಾಗಿದ್ದ ಆಭರಣ ಪರವಶವಾಯಿತೆಂದು, ಈ ಸೂಳೆಯಿಂದಾಗಿ ಅವಳು  ಸತ್ತಳೆಂದು ಕಣ್ಣೀರಿಡುತ್ತ ಮನೆಗೆ ಬಂದ ಲಕ್ಷ್ಮಣಾಚಾರ್ಯನ ಹೆಂಡತಿ ಅನಸೂಯಳಿಗೆ ಕಣ್ಣೀರು ಕ್ರಮೇಣ ನಾರಣಪ್ಪನ ಬಗ್ಗೆಯೂ ಹರಿಯಹತ್ತಿತ್ತು. ಎಷ್ಟೆಂದರೂ ಅವ ತನ್ನ ಸೋದರಮಾವನ ಮಗನಲ್ಲವೆ? ಮಾವ ಬದುಕಿದ್ದರೆ, ತಂಗಿ ಜೀವದಿಂದಿದ್ದರೆ ಆ ಗರುಡ ಮಾಟ ಮಾಡಿಸಿರದಿದ್ದರೆ, ನಮ್ಮ ನಾರಣಪ್ಪ ಹೀಗೆ ಬುದ್ಧಿ ಕೆಟ್ಟು, ಅಷ್ಟೊಂದು ಚಿನ್ನವನ್ನ ಪರಭಾರೆ ಮಾಡಿ, ಹೀಗೆ ಪರದೇಶಿಯಂತೆ, ನಿರ್ಗತಿಕನಂತೆ ಸತ್ತು, ಶವಸಂಸ್ಕಾರವಿಲ್ಲದೆ ಕೊಳೆಯ ಬೇಕಾಗಿತ್ತೇ ಎಂದು ಗೋಳೋ ಎಂದು ಅಳಾಹತ್ತಿದಳು. ‘ಅವನು ಏನೇ ಮಾಡಲಿ, ಕರುಳಿನ ಬಳ್ಳಿ ಕಡಿಯುತ್ತದ ಪರಮಾತ್ಮ’ ಎಂದು ಗೋಡೆಗೊರಗಿ ಕಣ್ಣೀರು ಹಾಕಿದಳು.  ಆದರೆ ಮರುಕ್ಷಣ ಕಣ್ಣೆದುರು ಮೋಟು ಜಡೆಯನ್ನು  ಬಿಗಿಯಾಗಿ ಕಟ್ಟಿ, ಬುಗುಡಿ ಮೂಗುಬಟ್ಟು ಧರಿಸಿ, ಉದ್ದ ಕುಂಕುಮವಿಟ್ಟು ಕುಳ್ಳಗೆ ಗುಂಡಗೆ ಇದ್ದ ಮಗಳು ಲೀಲಾವತಿ ಸುಳಿದು ಎದೆ ಕಲ್ಲಾಯಿತು:

‘ಶ್ರೀಪತಿ ಯಾವತ್ತು ಬರುತ್ತೇನೆಂದು ಹೇಳಿ ಹೋದನೆ?’

ಎಂದು ಹತ್ತನೆಯ ಬಾರಿಗೆ ಕೇಳಿದಳು. ಲೀಲಾವತಿ ‘ಗೊತ್ತಿಲ್ಲ’ ಎಂದುಬಿಟ್ಟಳು. ಪರದೇಶಿ ಹುಡುಗಾಂತ ಅವನಿಗೆ ಮಗಳನ್ನು ಕೊಟ್ಟು ಮದುವೆ ಮಾಡಿದರೆ ತನ್ನ ಒಡಹುಟ್ಟಾದ ನಾರಣಪ್ಪನೇ ಅವನ ತಲೆ ತಿರುಗಿಸಿಬಿಡಬೇಕೇ? ತನ್ನ ಮೊಟ್ಟೆಯನ್ನ ತಾನೇ ತಿನ್ನುವ ಸರ್ಪವಾದ  ಅವ ತನ್ನ ಪಾಲಿಗೆ. ಏನೇನು ಹಚ್ಚಿದನೊ ತನ್ನ ಅಳಿಯನ ತಲೆಗೆ? ಮನೆಯಲ್ಲಿ ತಿಂಗಳಿಗೆ ಎರಡು ದಿನ ನಿಲ್ಲುವುದಿಲ್ಲ. ಯಕ್ಷಗಾನದ ಮೇಳಗಳ ಬೆನ್ನುಹತ್ತಿ ಊರೂರು ಅಲೆಯುತ್ತಾನೆ. ಪಾರಿಜಾತಪುರದ ಹುಡುಗರ ಸಹವಾಸಮಾಡುತ್ತಾನೆ. ಅಲ್ಲೊಂದು ಇಲ್ಲೊಂದು   ಅವನಿಗೆ ಸೂಳೆಗಳಿವೆಯೆಂದು ಅವಳಿಗೆ ದುರ್ಗಾಭಟ್ಟರ ಹೆಂಡತಿಯಿಂದ ಸುದ್ದಿ ತಲ್ಪಿದೆ. ಕದ್ದು ಮುಚ್ಚಿ ಶ್ರೀಪತಿ ನಾರಣಪ್ಪನ ಮನೆಗೆ ಹೋಗಿ ಬಂದಾಗಲೇ ಗೊತ್ತಾಯ್ತು ಅವಳಿಗೆ – ಕೆಟ್ಟ ಅಂತ. ಕೆಟ್ಟ ದಾರಿ ಹಿಡಿದ ಅಂತ. ಪ್ರಾರಬ್ಧ, ಏನೇನನ್ನು ಅವನು ಅಲ್ಲಿ ಕುಡಿದನೋ, ತಿಂದನೋ! ಆ ಚಂದ್ರಿಯ ವಯ್ಯಾರಕ್ಕೆ ಬಲಿಯಾಗದವರು ಇಲ್ಲ. ಅಳಿಯನಿಗೆ ತಕ್ಕ ಬುದ್ಧಿ ಕಲಿಸಲೆಂದು ಅನಸೂಯ ಮಗಳಿಗೆ ಹಚ್ಚಿಕೊಟ್ಟಳು: ‘ನಿನ್ನ ಗಂಡನಿಗೆ ಒಪ್ಪಬೇಡ. ಹೀಗೆ ತೊಡೆಯನ್ನ ಗಂಟುಹಾಕಿಕೊಂಡು ಕೌಂಚಿ ಮಲಗಿಬಿಡು. ಬುದ್ಧಿ ಬರಲಿ.’ ಲೀಲಾವತಿ ಹಾಗೆಯೇ ಮಾಡಿದಳು. ಗಂಡ ರಾತ್ರೆ ತನ್ನನ್ನು ಬಳಚಲು ಬಂದರೆ ‘ಚೂಟಿದರು, ಕಚ್ಚಿದರು’ ಎಂದು ಅಳುತ್ತ ತಾಯಿಯ ಮಗ್ಗುಲಿನಲ್ಲಿ ಬಂದು ಮಲಗಲು ಪ್ರಾರಂಭಿಸಿದಳು.

ಶ್ರೀಪತಿಗೆ ಇದರಿಂದ ಬುದ್ಧಿ ಬಂದಂತೆ ಕಾಣಲಿಲ್ಲ. ತಾನು ತನ್ನ ಗಂಡನಿಂದ ಮನಸ್ಸಿನ ಇಷ್ಟವನ್ನು ನಡೆಸಿಕೊಂಡ ಹಾಗೆ ಈಗ ನಡೆಯಲಿಲ್ಲ. ಶ್ರೀಪತಿ ಜುಟ್ಟನ್ನು ತೆಗೆಸಿ ನಾರಣಪ್ಪನಂತೆ ಕ್ರಾಪು ಬಿಟ್ಟ. ಕೈಯಲ್ಲಿ ಒಟ್ಟಾದ ದಕ್ಷಿಣೆ ದುಡ್ಡಿನಲ್ಲಿ ಒಂದು ಬ್ಯಾಟರಿಯನ್ನು ಕೊಂಡುಕೊಂಡ. ಸಂಜೆಯ ಹೊತ್ತು ಶಿಳ್ಳೆಹಾಕಿ ಅಗ್ರಹಾರ ಸುತ್ತುವುದಕ್ಕೆ ಶುರುಮಾಡಿದ.

ಮೊದಲೇ ಜ್ವರಗಡ್ಡೆಯಿಂದ ಕೃಶನಾಗಿ, ಕಣ್ಣುಗಳು ಹೂತುಬಿದ್ದು ಇವತ್ತೋ ನಾಳಯೋ ಎನ್ನುವಂತೆ ಕಾಣುತ್ತಿದ್ದ ಲಕ್ಷ್ಮಣಾಚಾರ್ಯ ಬಿಸಿಲು ಮತ್ತು ಹಸಿವಿನಿಂದ ಇನ್ನಷ್ಟು ನರಪೇತಾಲನಾಗಿ ಮನೆಗೆ ಬಂದು ಬಿದ್ದದ್ದೇ ತಡ ಅನಸೂಯ ಅವನನ್ನು ಕಾಡತೊಡಗಿದಳು : ತನ್ನ ಸೋದರಮಾವನ ಮಗ ತಾನೇ ನಾರಣಪ್ಪ? ಅವನು ಏನೇ ಕುಲಗೆಡಲಿ, ಅವನ ಹೆಣಾನ್ನ ಶೂದ್ರರು ಎತ್ತಿ ಸಾಗಿಸಿದ್ದೇ ಆದರೆ ತಾನು ಪ್ರಾಣ ಇಟ್ಟಕೊಳ್ಳುವವಳಲ್ಲ. ಪ್ರಾಣೇಶಾಚಾರ್ಯರದು ಮೃದುಸ್ವಭಾವ. ಗರುಡ ಊರು ಹಾಳುಮಾಡುವ ಪ್ರಚಂಡ, ಗಟ್ಟಿಗ, ನಿಮ್ಮ ಹಾಗೆ ಭೋಳೇ ಅಲ್ಲ. ಅವನೆಲ್ಲಾದರೂ ಶವಸಂಸ್ಕಾರಕ್ಕೆ ಅಪ್ಪಣೆ ಪಡೆದುಬಿಟ್ಟರೆ  ಆಭರಣವೆಲ್ಲ ಮೊದಲೆ ಗರ್ವದಿಂದ ತಿರುಗೋ ಸೀತಾದೇವಿಗೆ ಸೇರಿಬಿಡುತ್ತೆ. ಅವರ ಅನಿಷ್ಟ ಬುಧ್ಧಿಗೆ ದೇವರು ತಕ್ಕದು ಮಾಡಿದಾ ಎನ್ನಿ.  ಇಲ್ಲದಿದ್ದರೆ ಶ್ಯಾಮ ಮನೆ ಬಿಟ್ಟೋಡಿ ಮಿಲಿಟರಿ ಸೇರುತ್ತಿದ್ದನೆ? ಈಗ ನನ್ನ ಅಳಿಯನ ಮೇಲೆ, ನನ್ನ ಸೋದರಮಾವನ ಮಗ ನಾರಣಪ್ಪನ ಮೇಲೆ ಅನ್ನುತ್ತಾರಲ್ಲಾ- ಇವರು-ಇವರ ಮಗ ಶ್ಯಾಮ ಆಚಾರಾನ್ನ ನಡೆಸಿಕೊಂಡು ಬರುತ್ತಿದ್ದಾನೆಂಬೋದು ಏನು ಖಾತ್ರಿ. ಗರುಡಾ ಹೋಗಿ ಪ್ರಾಣೇಶಾಚಾರ್ಯರ ಮನಸ್ಸನ್ನ ಒಲಿಸಿಕೊಳ್ಳಲಿಕ್ಕೆ ಬಿಡಬೇಡಿ. ನೀವೂ ಹೋಗಿ. ಅವನು ಈಗ ಅಲ್ಲಿ ಹಾಜರು – ನೀವಿಲ್ಲಿ ದಂಡಕ್ಕೆ ಬಿದ್ದುಕೊಂಡಿರೋವಾಗ – ನನಗೆ ಗೊತ್ತಿಲ್ಲವ? ಎಂದು ಹೊರಕ್ಕೆ ಬಂದು ಗರುಡಾಚಾರ್ಯನ ಮನೆಯ ಮುಂಭಾಗ ಹಿಂಭಾಗವನ್ನೆಲ್ಲ ಪರೀಕ್ಷಿಸಿ ಗಂಡನನ್ನು ಬಲಾತ್ಕಾರವಾಗಿ ದೂಡಿದ್ದಳು.

* * *

ಶಿವಪೂಜೆಯ ನಡುವೆ ಕರಡಿ ಬಿಟ್ಟಂತೆ ಬಂದ ಕುಚೇಲಸ್ವರೂಪದ ಲಕ್ಷ್ಮಣಾಚಾರ್ಯನನ್ನು ಕಂಡು ಗರುಡಾಚಾರ್ಯನಿಗೆ ರೋಷಾತಿರೋಷವಾಯಿತು. ಉಸ್ ಉಸ್ ಎನ್ನುತ್ತ ಮುಂಭಾಗದ ಹೊಟ್ಟೆಯನ್ನು ಒಂದು ಕೈಯಿಂದ ಹಿಡಿದು, ಇನ್ನೊಂದು ಕೈಯಿಂದ ನೆಲವನ್ನು ಊರಿ ಕೂತವನನ್ನು ನುಂಗಿಬಿಡುವಂತೆ ನೋಡಿದ. ಜುಗ್ಗಾತಿಜುಗ್ಗ, ಜಿಪುಣಾಗ್ರೇಸರ, ತಾಯಿಗ್ಗಂಡ ಎಂದೆಲ್ಲ ಅನ್ನಬೇಕೆಂಬ ಆಸೆಯನ್ನು ಪ್ರಾಣೇಶಾಚಾರ್ಯರು ಎದುರಿದ್ದಾರಲ್ಲ ಎಂದು ಅದುಮಿಕೊಂಡ. ಎರೆದುಕೊಳ್ಳಲು ಒಂದು ಚಮಚಾ ಎಳ್ಳಣ್ಣೆಯನ್ನೂ ಕೊಳ್ಳದಂತಹ ವಜ್ರಮುಷ್ಟಿಯ ಬ್ರಾಹ್ಮಣಧಮ ಇವ. ಅಗ್ರಹಾರದಲ್ಲಿ ಯಾರಿಗೆ ತಿಳಿದಿಲ್ಲ? ಎರೆದುಕೊಳ್ಳಿ ಎಂದು ಹೆಂಡತಿ ಕಾಡಿದರೆ ಬೆಳಿಗ್ಗೆ ಎದ್ದು ನಾಲ್ಕು ಮೈಲಿ ನಡೆದು ಕೊಂಕಣಿಯ ಅಂಗಡಿಗೆ ಹೋಗುತ್ತಾನೆ. ‘ಏನೋ ಕಾಮತ, ಒಳ್ಳೆಣ್ಣೆ ತರಿಸಿದ್ದೀಯ ಹೇಗೆ? ಏನು ಬೆಲೆ? ಮಾಲು ಹೇಗಿದೆ? ಮುಗ್ಗಲೋ ಹೇಗೆ, ನೋಡುವ’ ಎಂದು ಕೈಯ್ಯೊಡ್ಡಿ ಎರಡು ಚಮಚಾ ಹಾಕಿಸಿಕೊಂಡು ಮೂಸಿದಂತೆ ನಟಿಸಿ ‘ಚಿಂತೆಯಿಲ್ಲ. ಆದರೂ ಬೆರಕೆ ಕಣಯ್ಯ, ಯಾವತ್ತು ಹೊಸ ಮಾಲು ಬರೋದು ಹೇಳು, ನಮ್ಮ ಮನೆಗೊಂದು ಡಬ್ಬ ಆಗಬೇಕು’ ಎಂದು ತಲೆಗೆ ಅದನ್ನು ಸವರಿಕೊಳ್ಳುತ್ತಾನೆ. ಮತ್ತೆ ಮೆಣಸಿನಕಾಯಿ ಚೀಲಕ್ಕೆ ಕೈಹಾಕಿ ‘ಒಂದು ಮಣಕ್ಕೇನು ಬೆಲೆ’ ಎಂದು ವಿಚಾರಿಸಿ ಒಂದು ಮುಷ್ಟಿ ಮೆಣಸಿನಕಾಯನ್ನು ಲೋಕಾಭಿರಾಮವಾಗಿ ಮಾತನಾಡುತ್ತ ತನ್ನ ಚೀಲಕ್ಕೆ ಸಾಗಿಸುತ್ತಾನೆ. ಅಲ್ಲಿಂದ ಸೀದ ಇನ್ನೊಂದು ಮೈಲಿ ನಡೆದು ಶೆಣೈ ಅಂಗಡಿಯಲ್ಲಿ ‘ಕಾಮತನಂಗಡಿಯಲ್ಲಿ ಎಷ್ಟು ದುಬಾರಿಯಪ್ಪ’ ಎಂದು ಕಾಮತನನ್ನು ಹಳಿದು, ಇನ್ನೆರಡು ಚಮಚಾ ಎಳ್ಳೆಣ್ಣೆ, ಮುಷ್ಟಿ ಮೆಣಸಿನಕಾಯಿ. ಮನೆಗೆ ಬಂದು ಸ್ನಾನ, ಅಡಿಗೆ. ಮತ್ತೆ ಅವರಿವರ ತೋಟಕ್ಕೆ ಹೋಗಿ ಬಾಳೆಲೆ ಕೊಯ್ದು ತಂದು, ಅದನ್ನು ಒಣಗಿಸಿ ದೊನ್ನೆ ಮಾಡಿ ಮಾರಿ ಒಂದಿಷ್ಟು ಕಾಸು ಸಂಪಾದನೆ. ಜನಿವಾರ ಮಾರಿ ಇನ್ನಷ್ಟು ಕಾಸು. ಊಟದ ಕರೆಗೆಂದು ಹದ್ದಿನ ಹಾಗೆ ಕಾದಿರುತ್ತಾನೆ. ಈಗ ಬಂಗಾರದ ಮೇಲೆ ಇವನ ಕಣ್ಣು ನೆಟ್ಟಿದೆ. ಏನಾದರೂ ಸೈ –  ಇವನಿಗೆ ಅದು ದಕ್ಕದಂತೆ ಮಾಡಬೇಕು.

‘ನಾರಾಯಣ ನಾರಾಯಣ’ ಎನ್ನುತ್ತ, ಏದುಸಿರುಬಿಡುತ್ತ, ಬೆವರನ್ನು ಒರೆಸಿಕೊಂಡು ಲಕ್ಷ್ಮಣಾಚಾರ್ಯ:

‘ಆಚಾರ್ಯರೇ, ಧರ್ಮಶಸ್ತ್ರದ ಪ್ರಕಾರ ಅಡ್ಡಿಇಲ್ಲವಾದರೆ ಶವಸಂಸ್ಕಾರ ಮಾಡೋಕ್ಕೆ ನನ್ನದೇನೂ ಅಡ್ಡಿಯಿಲ್ಲ. ಎಷ್ಟೆಂದರೂ ಅವ ನನ್ನ ಷಡ್ಡಕ ಅಲ್ಲವೆ? ತಮ್ಮ ಅಪ್ಪಣೆಯಾದರೆ ಶವಸಂಸ್ಕಾರ ಹಕ್ಕು ನನಗಲ್ಲದೆ ಬೇರೆ ಯಾರಿಗೂ ಇಲ್ಲ’ ಎಂದು ಮುಚ್ಚಿದ ಕಣ್ಣನ್ನು ಬಿಟ್ಟ.

ಗರುಡಾಚಾರ್ಯ ಪೆಚ್ಚಾದ. ಇದಕ್ಕೆ ಯಾವ ಅಸ್ತ್ರವಿದೆ ತನ್ನಲ್ಲಿ?

‘ಶವಸಂಸ್ಕಾರ ಮಾಡೋ ಅರ್ಹತೆಯ ಪ್ರಶ್ನೆ ಬಂದರೆ – ಏನು – ನನ್ನದೇನೂ ಅಡ್ಡಿಯಿಲ್ಲ. ನೀನೇ ಮಾಡಂತೆ. ಬೇರೆಯವರ ಪಾಪಾನ್ನ ಸ್ವೀಕರಿಸಲಿಲ್ಲ ಎಂದೇ ಬ್ರಾಹ್ಮಣಜನ್ಮ ಬಂದಿರೋದು ತಾನೆ? ಆದರೆ ಆ ಬಂಗಾರ ಮಾತ್ರ ಕೋರ್ಟಿಗೆ ಹೋಗಬೇಕು. ಅಥವಾ ಧರ್ಮಸ್ಥಳದ ನ್ಯಾಯದ ಪ್ರಕಾರ ನನಗೆ ಸೇರಬೇಕು.’

ಪ್ರಾಣೇಶಾಚಾರ್ಯರು ಅತ್ಯಂತ ವ್ಯಥಿತರಾದರು. ಒಂದುವೇಳೆ ಶವಸಂಸ್ಕಾರದ ಪ್ರಶ್ನೆ ಇತ್ಯರ್ಥವಾದರೂ ಈ ಬಂಗಾರದ ಪ್ರಶ್ನೆ ಇತ್ಯರ್ಥ ಮಾಡೋದು ಸುಲಭವಲ್ಲ. ಘಳಿಗೆ ಘಳಿಗೆಗೂ ತನ್ನ ಜವಾಬ್ದಾರಿ ಹೆಚ್ಚುತ್ತಿದೆ. ನಾರಣಪ್ಪನ ಸವಾಲು ತ್ರಿವಿಕ್ರಮ ಪಾದವಾಗಿ ಬೆಳೆಯುತ್ತಿದೆ… ಅಷ್ಟರಲ್ಲಿ ಬಡವ ದಾಸಾಚಾರ್ಯನ ನಾಯಕತ್ವದಲ್ಲಿ ಉಳಿದ ಬಡ ಬ್ರಾಹ್ಮಣರು ಬಂದು ಸೇರಿದರು.

‘ಆಚಾರ್ಯರೆ…’ ದಾಸಾಚಾರ್ಯ ಹೊಟ್ಟೆಯನ್ನು – ಆಳುವ ಮಕ್ಕಳ ಬೆನ್ನನ್ನು ತಾಯಿ ಸವರುರಂತೆ – ಸವರುತ್ತ ಹೇಳಿದ : ‘ನನಗೆ ಆರೋಗ್ಯ ನೆಟ್ಟಗಿಲ್ಲ – ನಿಮಗೆ ಗೊತ್ತು. ಆಹಾರವಿಲ್ಲದೇ ಇದ್ದರೆ ನನ್ನ ಪ್ರಾಣಕ್ಕೇ ಅಪಾಯ. ನೀವು ಒಂದು ಮಾರ್ಗ ತೋರಿಸಬೇಕು. ಅಥವಾ ಆ ಅಪದ್ಧರ್ಮದ ಪ್ರಕಾರ ಏನು ಮಾಡಬಹುದೆಂದಾದರೂ ಆಜ್ಞೆ ಮಾಡಬೇಕು. ಹೆಣವನ್ನು ಅಗ್ರಹಾರದಲ್ಲಿಟ್ಟುಕೊಂಡು ಊಟ ಮಾಡಬಹುದೋ ಹೇಗೋ ಹೇಳಿ. ಅಲ್ಲದೆ ಇದು ನಡುಬೇಸಗೆ. ಇನ್ನೊಂದು ದಿನದೊಳಗೆ ಹೆಣ ವಾಸನೆ ಬಂದು ನಾರೋದು ಖಂಡಿತ. ನನ್ನ ಮನೆಯೋ ಅವನದ್ದಕ್ಕೆ ಹತ್ತಿರ. ಯಾರಿಗೂ ಅದು ಒಳ್ಳೆಯದಲ್ಲ. ಅಗ್ರಹಾರದ ಹಿತದ ದೃಷ್ಟಿಯಿಂದ ಲಕ್ಷ್ಮಣಾಚಾರ್ಯ ಅಥವಾ ಗರುಡಾಚಾರ್ಯ ಒಂದು ತೀರ್ಮಾನಕ್ಕೆ ಬರಬೇಕು.’

ಎಂದು ಮಾತು ನಿಲ್ಲಿಸಿ ಸುತ್ತಲು ನೊಡಿದ. ನಾರಣಪ್ಪನೆಗೆ ಕಾಮವಿದ್ದಂತೆ ದಾಸಾಚಾರ್ಯನಿಗೆ ಹಸಿವು. ಹಸಿವು ಅವನನ್ನು ಈ ಕ್ಷಣ ಕಾಪಾಡಿತು. ದೊಡ್ಡಬುದ್ದಿಯನ್ನು ಕೊಟ್ಟು ಮಾತಾಡಿಸಿತು:

‘ನೀವು ಅಂದುಬಿಟ್ಟರೆ ಸಾಕು, ಆಚಾರ್ಯರೆ, ನಿಮ್ಮ ವಾಕ್ಯವೇ ವೇದವಾಕ್ಯ. ನಮಗೆ ಬಂಗಾರವೂ ಬೇಡ – ಏನೂ ಬೇಡ. ನೀವು ಹೇಳಿ. ನಾವು ನಲ್ವರು ಜನ ಈ ಕ್ಷಣ ಆ ಹೆಣವನ್ನು ಎತ್ತಿ ತೆಗೆದುಕೊಂಡು ಹೋಗಿ ಸಂಸ್ಕಾರ ಮಾಡಿ ಬರುತ್ತೇವೆ. ಆ ಬಂಗಾರಾನ್ನ ನಮ್ಮ ಸೇವಾರ್ಥವಾಗಿ ಮಾರುತಿಗೆ ಕಿರೀಟ ಮಾಡಿ ಹಾಕಿಸಿರಿ.’

ಪ್ರಾಣೇಶಾಚಾರ್ಯರೊಳಗೆ ಥಟ್ಟನೆ ಸಾತ್ವಿಕಶಕ್ತಿ ಚಲಿಸಿತು. ಗರುಡಾಚಾರ್ಯ ಲಕ್ಷ್ಮಣಾಚಾರ್ಯ ಮಾತ್ರ ಹತಾಶರಾದರು. ಗರುಡಾಚಾರ್ಯ ತನ್ನ ಗಟ್ಟಿತನವನ್ನೆಲ್ಲ ವೆಚ್ಚಮಾಡಿ ಈ ಸಂಧರ್ಭದಲ್ಲಿ ಏನೆನ್ನಬೇಕೆಂಬುದನ್ನು ಚಿಂತಿಸಿದ. ಮಾರುತಿಗೆ ಬಂಗಾರ ಸೇರಲಿ ಎಂದು ದಾಸಾಚಾರ್ಯ ಅಂದ ಮಾತಿಗೆ ಎದುರಾಡುವುದು ಪರಮ ಪಾಪ. ಆದ್ದರಿಂದ ಈಗ ತಾನೇನು ಹೇಳುವುದು ಉಚಿತ?

‘ಪಾಪ, ಆಚಾರ್ಯರು ಧರ್ಮಶಾಸ್ತ್ರದಲ್ಲಿ ಹೇಳಿದಂತೆ ಮಾಡಲಿ. ಆಗದವರು ಇದ್ದೇ ಇರುತ್ತಾರಲ್ಲ. ಆಚಾರ್ಯರೇನಾದರೂ ದುಡುಕಿದರೆ – ಏನು – ಗುರುಳಿಗೆ ಅದು ತಪ್ಪು ಎನಿಸಿಬಿಟ್ಟರೆ – ಏನು – ನಮ್ಮೆಲ್ಲರ ಗತಿ ಏನು ಹೇಳು. ನಾವು ಪಾಪ, ಆಚಾರ್ಯರ ಖ್ಯಾತಿಗೂ ಚ್ಯುತಿಯಾಗದಂತೆ ನೋಡಿಕೋಬೇಕು. ಏನು. ಪಾರಿಜಾತಪುರದವರನ್ನು ದೂರವಿಟ್ಟಂತೆ ಆಮೇಲಿಂದ ಎಲ್ಲಾದರೂ ನಮ್ಮನ್ನ ಮತದ ಬ್ರಾಹ್ಮಣರು ದೂರಾ ಇಟ್ಟರೆ…’

ಎಂದು ಗರುಡಾಚಾರ್ಯರ ಬಹಳ ಮೃದವಾಗಿ ನಗುತ್ತ ದಾಸಾಚಾರ್ಯನ ಮಾತಿಗೆ ತಾನು ಒಪ್ಪಿದೆ ಎನ್ನುವಂತೆ ನಟಿಸುತ್ತ ಹೇಳಿದ. ಇದರಿಂದ ಮಾಲೀಸಿನ ಮಾತು ಗೊತ್ತಿಲ್ಲದ ಲಕ್ಷ್ಮಣಾಚಾರ್ಯನಿಗೂ ಸಂತೋಷವಾಯಿತು.

‘ಈಗ ನೀವೆಲ್ಲ ಮನೆಗೆ ಹೋಗಿರಿ, ಆಚಾರ್ಯರೇ. ನಾನು ಧರ್ಮಶಾಸ್ತ್ರನೆಲ್ಲ ಬುಡ ಮೇಲು ಮಾಡಿ ಇದಕ್ಕೇನು ಉತ್ತರಾಂತ ಪತ್ತೆಮಾಡುತ್ತೇನೆ – ಇವತ್ತು ರಾತ್ರೆಯೆಲ್ಲಾ ಕೂತು.’

ಎಂದು ಪ್ರಾಣೇಶಾಚಾರ್ಯರು ತುಂಬ ಬಳಲಿ ಅಂದರು.

* * *

ಸಂಜೆಯಾಯಿತು. ಆದರೆ ಸಂಧ್ಯಾವಂದನವಿಲ್ಲ, ಊಟವೂ ಇಲ್ಲ. ಪ್ರಾಣೇಶಾಚಾರ್ಯರಿಗೆ ಕೈಗೇನೂ ಕೆಲಸವಿಲ್ಲದೆ ರಗಳೆಯಾದಂತಾಗಿ ಒಳಗಿಂದ ಹೊರಕ್ಕೆ, ಹೊರಿಗಿಂದ ಒಳಕ್ಕೆ, ಓಡಾಡಿದರು. ಅಂಗಳದಲ್ಲಿ ಕೂತಿದ್ದ ಚಂದ್ರಿಗೆ ‘ಮೇಲೆ ಬಂದು ಕೂತುಕೊ’ ಎಂದರು. ಹೆಂಡತಿಯನ್ನು ಮಗುವಿನಂತೆ ಎರಡು ಕೈಯಲ್ಲಿ ಹಿತ್ತಲಿಗೆ ಎತ್ತಿಕೊಂಡು ಹೋಗಿ ಮೂತ್ರ ಹೊಯ್ಯಿಸಿ, ತಿರುಗಿ ಎತ್ತಿ ತಂದು ಹಾಸಿಗೆಯ ಮೇಲೆ ಮಲಗಿಸಿದರು. ಸಂಜೆಯ ಔಷಧವನ್ನು ಕುಡಿಸಿ, ತಿರುಗಿ ನಡುಮನೆಗೆ ಬಂದು ಲಾಟೀನಿನ ಬೆಳಕಿನಲ್ಲಿ ಶಾಸ್ತ್ರಗಳನ್ನು ತಿರುವಿಹಾಕುತ್ತ ಕೂತರು