ಪ್ರಸಾದಕ್ಕೆಂದು ಕಾಯುತ್ತ ಕೂತ ಪ್ರಾಣೇಶಾಚಾರ್ಯರು ಕಂಗೆಟ್ಟರು. ‘ಸಂಸ್ಕಾರವಿಲ್ಲದೆ ಶವ ಕೊಳೆಯುತ್ತಿದೆ; ಮಾರುತಿ, ಎಷ್ಟು ಹೊತ್ತು ನಿನ್ನ ಪರೀಕ್ಷೆ’ ಎಂದು ಯಾಚಿಸಿದರು. ‘ಕೂಡದು ಎಂದು ನಿನ್ನ ಮತವಾದರೆ ಎಡ ಪ್ರಸಾದವನ್ನಾದರೂ ದಯಮಾಡು’ ಎಂದು ಬೇಡಿದರು. ಕಾಡಿದರು. ದೇವರನ್ನು ಒಲಿಸುವ ಪ್ರೇಮಭಾವದ ಕೀರ್ತನೆಗಳನ್ನು ಹಾಡಿದರು. ಮಗುವಾದರು. ಹೆಂಡತಿಯಾದರು. ತಾಯಿಯಾದರು. ಮತ್ತೆ ದೇವರನ್ನು ದೂರುವ, ಅವನ ನೋರೊಂದು ತಪ್ಪಗಳನ್ನು ಹೇಳಿ ಕೊಂಡಾಡುವ ಕೀರ್ತನೆಗಳನ್ನೆಲ್ಲ ನೆನೆದರು. ಆಳೆತ್ತರದ ಮಾರುತಿ ಅಂಗೈ ಮೇಲೆ ಲಕ್ಷ್ಮಣನ ಪ್ರಾಣವನ್ನುಳಿಸುವ ಸಂಜೀವಿನಿ ಮೂಲಿಕೆಯುಳ್ಳ ಪರ್ವತವನ್ನೆತ್ತಿ ನಿಶ್ಚಲ ನಿಂತ. ಉದ್ದಂಡ ಎರಗಿ ಪ್ರಾಣೇಶಾಚಾರ್ಯರು ಹಲುಬಿದರು. ಜಗ್ಗಲಿಲ್ಲ; ಎಡಪ್ರಸಾದವನ್ನೂ ಕೊಡಲಿಲ್ಲ, ಬಲಪ್ರಸಾದವನ್ನೂ ಕೊಡಲಿಲ್ಲ. ‘ಧರ್ಮಶಸ್ತ್ರದಲ್ಲೂ ನನಗೆ ಉತ್ತರ ಸಿಗಲಿಲ್ಲ, ನಿನ್ನಿಂದಲೂ ಸಿಗಲಿಲ್ಲ – ನಾನು ಅಪಾತ್ರನೇನು ಹಾಗಾದರೆ’ ಎಂದು ಸಂಶಯಪಟ್ಟರು. ಯಾವ ಮುಖದಿಂದ ನನ್ನ ಮೇಲೆ ನಂಬಿಕೆಯಿಟ್ಟವರನ್ನು ಹೋಗಿ ನೋಡಲಿ’ ಎಂದು ಅವಮಾನಿತರಾದರು. ‘ನನ್ನನ್ನೇ ಪರೀಕ್ಷಿಸುತ್ತಿದ್ದೀಯಲ್ಲ’ ಎಂದು ಮಾರುತಿಯನ್ನು ಬಯ್ದರು. ಕತ್ತಲು ಗಾಢವಾದಂತೆ, ಇದು ಕೃಷ್ಣಪಕ್ಷ ಎಂದು ಅರಿತು – ಇದನ್ನು ನನ್ನ ಪರೀಕ್ಷೆಯೆಂದು ಅರಿಯಬೇಡಪ್ಪ, ಕೊಳೆಯುತ್ತಿರುವ ಶವವನ್ನು ನೆನಪಿಟ್ಟುಕೊ – ಎಂದು ಬುದ್ಧಿ ಹೇಳಿದರು. ಮಾರುತಿ ಯಾವುದಕ್ಕೂ ಜಗ್ಗದೆ ಪರ್ವತದ ಕಡೆ ಮುಖ ತಿರುಗಿಸಿ ನಿಂತ. ಆಚಾರ್ಯರಿಗೆ ಥಟ್ಟನೆ ತನ್ನ ಹೆಂಡತಿಗೆ ಔಷಧ ಕೊಡಬೇಕೆಂದು ನೆನಪಾಯಿತು. ಕಣ್ಣುಗಳಲ್ಲಿ ನೀರು ಬರುವುದೊಂದು ಬಾಕಿ – ನಿರಾಶೆಯಿಂದ ಎದ್ದುನಿಂತರು. ಕಾಲು ಕೂತು ಮರಗಟ್ಟಿತ್ತು. ಕ್ಷೀಣರಾಗಿ ಮೆಲ್ಲಮೆಲ್ಲನೆ ನಡೆದರು.

ಸ್ವಲ್ಪ ದೂರ ನಡೆದಮೇಲೆ ದಟ್ಟವಾದ ಕತ್ತಲಿನ ಕಾಡಿನಲ್ಲಿ ಹಿಂದಿನಿಂದ ಹೆಜ್ಜೆ ಸಪ್ಪಳವಾದಂತಾಗಿ ನಿಂತರು. ಕೈಬಳೆಯ ಶಬ್ದ. ಆಲಿಸಿದರು. ‘ಯಾರು?’ ಎಂದರು. ಕಾದರು.

‘ನಾನು’ ಎಂದಳು ಸಂಕೋಚದಲ್ಲಿ ಸಣ್ಣಗಾಗಿ ಚಂದ್ರಿ.

ಪ್ರಾಣೇಶಾಚಾರ್ಯರಿಗೆ ಒಮ್ಮೆಲೆ ಕಾಡು ಕತ್ತಲಿನಲ್ಲಿ ಹೀಗೆ ಹೆಣ್ಣೊಬ್ಬಳು ಬಳಿ ನಿಂತಿರುವುದರಿಂದ ಒಂದು ತರಹವಾಯಿತು. ಏನಾದರೂ ಅನ್ನಬೇಕೆಂದ ಮಾತು ಹುಡುಕಿ, ತನ್ನ ಪಾಡು ನೆನೆದು ದುಃಖವಾಗಿ, ‘ಮಾರುತಿ, ಮಾರುತಿ…’ ಎನ್ನುತ್ತ ನಿಂತರು.

ಚಂದ್ರಿಗೆ ಅವರ ಮೃದವಾದ, ಗದ್ಗದಿತವಾದ ಧ್ವನಿಕೇಳಿ ತುಂಬ ಮರುಕ ಉಕ್ಕಿತು. ಪಾಪ, ಹಸಿದು, ಕಂಗೆಟ್ಟು, ತನಗಾಗಿ ಒದ್ದಾಡಿ ಬಡವಾಗಿದ್ದಾನೆ ಬ್ರಾಹ್ಮಣ. ಅವರ ಕಾಲನ್ನು ಭದ್ರವಾಗಿ ಹಿಡಿದು ನಮಸ್ಕಾರ ಮಾಡಬೇಕೆನ್ನಿಸಿತು. ಮರುಕ್ಷಣವೇ ಮುಂದೆ ಬಂದು ಬಿದ್ದಳು ಕತ್ತಲೆಯಲ್ಲಿ ಕಣ್ಣು ಕಾಣಿಸದ್ದರಿಂದ, ಉಮ್ಮಳದಲ್ಲೆಂಬಂತೆ ಅವಳು ಬಾಗಿದ್ದರಿಂದ, ಪಾದದ ಬದಲು ಅವರ ಮೊಣಕಾಲು ಅವಳ ಎದೆಗೆ ತಾಕಿತು. ಮುಗ್ಗರಿಸಿದ ವೇಗಕ್ಕೆ ಕುಪ್ಪಸದ ಗುಂಡಿಗಳು ಹರಿದವು. ಅವಾಕ್ಕಾಗಿ ಅವರ ತೊಡೆಯ ಮೇಲೆ ತಲೆಯಿಟ್ಟು ಕಾಲುಗಳನ್ನು ತಬ್ಬಿಕೊಂಡಳು. ಉಕ್ಕಿಬಂದ ಭಕ್ತಿ, ಹೆಣ್ಣಿನ ಸುಖವನ್ನೇ ಕಾಣದ ಬ್ರಾಹ್ಮಣ ಎನ್ನುವ ಮರುಕ, ಈ ಅಗ್ರಹಾರದಲ್ಲಿ ನೀವಲ್ಲದೆ ನನ್ನ ಹಿತಚಿಂತಕರು ಯಾರು ಇಲ್ಲ ಎನ್ನುವ ನಿಸ್ಸಹಾಯಕತೆ – ಒಟ್ಟಿಗೇ ಕೂಡಿ ಅತ್ತಳು. ಪ್ರಾಣೇಶಾಚಾರ್ಯರಿಗೆ ಪಶ್ಚಾತ್ತಾಪ, ಥಟ್ಟನೇ ಪರಕೀಯಳಾದ ಯೌವನದ ಹೆಣ್ಣೊಬ್ಬಳ ಬಿಗಿಯಾದ ಸ್ಪರ್ಶದಿಂದ ತಬ್ಬಿಬ್ಬೆನಿಸಿ ಆಶೀರ್ವದಿಸಲೆಂದು ಬಾಗಿ ಕೈ ನೀಡಿದರು. ಚಾಚಿದ ಕೈಗೆ ಅವಳ ಬಿಸಿ ಉಸಿರು, ಕಣ್ಣೀರು ತಾಗಿ, ರೋಮಾಂಚದ ಮಾರ್ದವ ಉಕ್ಕಿ, ಅವಳ ಚೆಲ್ಲಿದ ಕೂದಲನ್ನು ಸವರಿದರು. ಆಶೀರ್ವಾದದ ಸಂಸ್ಕೃತ ಮಾತು ಬಾಯಿಂದ ಹೊರಡಲಿಲ್ಲ. ತನ್ನ ತಲೆಗೂದಲಿನ ಮೇಲೆ ಅವರ ಕೈ ಆಡಿದ್ದರಿಂದ ಚಂದ್ರಿಗೆ ಇನ್ನಷ್ಟು ಆವೇಗವಾಗಿ, ಅವರ ಕೈಗಳನ್ನು ಭದ್ರವಾಗಿ ಹಿಡಿದು, ಎದ್ದುನಿಂತು, ಪಾರಿವಾಳದ ಹಾಗೆ ಡವಗುಟ್ಟುತ್ತಿದ್ದ ತನ್ನ ಎದೆಗಳಿಗೆ ಒತ್ತಿಕೊಂಡಳು.

ತನ್ನ ಕೈಗೆಳೆಂದೂ ಸ್ಪರ್ಶಿಸಿದ ಪುಷ್ಟವಾದ ಮೊಲೆಗಳನ್ನು ಮುಟ್ಟಿದ ಕ್ಷಣ ಪ್ರಾಣೇಶಾಚಾರ್ಯರಿಗೆ ಬವಳಿ ಬಂದಂತಾಯಿತು. ಕನಸಿನಲ್ಲೆಂಬಂತೆ ಮೊಲೆಗಳನ್ನು ಒತ್ತಿದರು. ಕೂಡಲೇ ಚಂದ್ರಿ, ಕಾಲು ಬತ್ತಿಬಂದ ಆಚಾರ್ಯರನ್ನು ಅವಚಿಕೊಂಡು ಮೆತ್ತಗೆ ಕೂರಿಸಿದಳು. ಆಚಾರ್ಯರಿಗೆ ಇಷ್ಟು ಹೊತ್ತೂ ಮನಸ್ಸಿಗೆ ಬಾರದಿದ್ದ ಹೊಟ್ಟೆಯ ಹಸಿವು ಜಗ್ಗನೆ ಎದ್ದು ಸಂಕಟವಾಗಿ ‘ಅಮ್ಮ’ ಎಂದರು. ಚಂದ್ರಿ ಅವರನ್ನು ಎದೆಗನಿಸಿಕೊಂಡು, ಮಡಿಲಿನಿಂದ ರಸಬಾಳೆಹಣ್ಣುಗಳನ್ನು ತೆಗೆದು, ಸುಲಿದು ತಿನ್ನಿಸಿದಳು. ನಂತರ ಸೀರೆಯನ್ನು ಬಿಚ್ಚಿ ಹಾಸಿ ಪ್ರಾಣೇಶಾಚಾರ್ಯರನ್ನು ತಬ್ಬಿಕೊಂಡು ಮಲಗಿ ಗಳಗಳನೆ ಅತ್ತುಬಿಟ್ಟಳು.