ಬ್ರಾಹ್ಮಣರೆಲ್ಲರೂ ಪಾರಿಜಾತಪುರಕ್ಕೆ ಹೊರಟುಹೋದ ಮೇಲೆ ಪ್ರಾಣೇಶಾಚಾರ್ಯರು ಕರುಣೆಯಿಂದ ಚಂದ್ರಿಗೆ ‘ಕೂತುಕೊ’ ಎಂದು ಹೇಳಿ ತನ್ನ ಹೆಂಡತಿ ಮಲಗಿದ್ದ ಊಟದ ಮನೆಗೆ ಬಂದರು. ‘ಇವಳೇ, ಚಂದ್ರಿಯದು ತುಂಬ ನಿಷ್ಕಲ್ಮಷ ಹೃದಯ ಕಣೇ’ ಎಂದು ಅವಳು ಬಂಗಾರವನ್ನು ಕೊಟ್ಟದ್ದು, ಅದರಿಂದ ಉದ್ಭವಿಸಿದ ಹೊಸ ಸಮಸ್ಯೆಯನ್ನು ವಿವರಿಸಿ, ತಾಳೆಗರಿ – ಗ್ರಂಥಗಳನ್ನೆಲ್ಲ ಬಿಚ್ಚಿ ಧರ್ಮಶಾಸ್ತ್ರವೇನೆನ್ನುತ್ತದೆಂದು ಹುಡುಕುತ್ತ ಕೂತರು. ಯಾವತ್ತಿನಿಂದಲೂ ಈ ನಾರಣಪ್ಪ ತನಗೆ ಸಮಸ್ಯೆಯಾಗಿಯೇ ಉಳಿದ. ಅಗ್ರಹಾರದಲ್ಲಿ ಕೊನೆಗೆ ಗೆಲ್ಲವುದು ಸನಾತನ ಧರ್ಮವನ್ನು ಹಿಡಿದ ತನ್ನ ತಪಸ್ಸೋ ಅಥವಾ ಅವನ ರಾಕ್ಷಸ ಸ್ವಭಾವವೋ ಎಂದು ಅವರ ಹಟ. ಯಾವ ಶನಿಕಾಟದಿಂದ ಅವನು ಹೀಗಾದನೋ ಎಂದು ನೊಂದು, ದೇವರ ದಯದಿಂದ ಅವನು ಉದ್ಧಾರವಾಗಲಿ ಎಂದು ಅವರು ವಾರದಲ್ಲಿ ಎರಡು ದಿನ ರಾತ್ತೆ ಊಟ ಬಿಟ್ಟು ಒಪ್ಪತ್ತು ಮಾಡುತ್ತಿದ್ದರು. ಅಲ್ಲದೆ ಅವನ ಬಗ್ಗೆ ಅವರ ಹೃದಯದಲ್ಲಷ್ಟು ಪಶ್ಚಾತ್ತಾಪ, ಕಳವಳ ಇರೋಕ್ಕೆ ಕಾರಣ ಅವನ ತಾಯಿಗೆ ತಾನು ಕೊಟ್ಟಿದ್ದ ವಚನ : ‘ನಿನ್ನ ಮಗನ ಹಿತಾನ್ನ ಕಾಯುತ್ತೇನೆ, ಅವನನ್ನು ಒಳ್ಳೆಯ ಮಾರ್ಗಕ್ಕೆ ತರುತ್ತೇನೆ’ – ಹೀಗೆ ಸಾಯುವ ಮುದುಕಿಗೆ ಧೈರ್ಯ ಹೇಳಿದ್ದರು. ಆದರೆ ನಾರಣಪ್ಪ ಮಾರ್ಗ ಹತ್ತಲಿಲ್ಲ; ಬುದ್ಧಿವಾದ ಕಿವಿಗೆ ಹಾಕಿಕೊಳ್ಳಲಿಲ್ಲ. ತಾನು ವೇದ ಹೇಳಿ, ಮಂತ್ರಗಳನ್ನು ಬಾಯಿಪಾಠ ಮಾಡಿಸಿ ಬೆಳೆಸಿದ ಗರುಡನ ಮಗ ಶ್ಯಾಮ, ಲಕ್ಷ್ಮಣನ ಅಳಿಯ ಶ್ರೀಪತಿ – ಇಬ್ಬರನ್ನೂ ತನ್ನ ವರ್ಚಸ್ಸಿನಿಂದ ಕಸಿದುಕೊಂಡ. ಶ್ಯಾಮನಿಗೆ ಮನೆ ಬಿಟ್ಟು ಓಡಿಸಿ ಮಿಲಿಟರಿ ಸೇರಲು ಪ್ರೇರೇಪಸಿದ. ಗರುಡ ಲಕ್ಷ್ಮಣರು ತಂದ ದೂರುಗಳನ್ನು ಕೇಳಿ ಕೇಳಿ ಸಾಕಾಗಿ ಅವರು ಒಂದು ದಿನ ಅವನಲ್ಲಿಗೆ ಹೋಗಿದ್ದರು. ಸುಪ್ಪತ್ತಿಗೆಯ ಮೇಲೆ ಮಲಗಿದ್ದವ ತನ್ನನ್ನು ಕಂಡು, ಎದ್ದು ಕೂರುವಷ್ಟು ಮರ್ಯಾದೆ ತೋರಿಸಿದ. ಆದರೆ ಹಿತಾ ಹೇಳಲು ಹೋದರೆ ಯದ್ವಾತದ್ವ ಮಾತಾಡಿದ. ಬ್ರಾಹ್ಮಣದ ಧರ್ಮವನ್ನ ಜರಿದ : ‘ಇನ್ನು ನಿಮ್ಮ ಶಾಸ್ತ್ರ ನಡೆಯೋದಿಲ್ಲ. ಮುಂದೆ ಬರೋದು ಕಾಂಗ್ರಸ್ಸು. ಪಂಚಮರನ್ನ ದೇವಸ್ಥಾನದೊಳಕ್ಕೆ ಬಿಡಬೇಕು’ ಎಂದೆಲ್ಲ ಏನೇನೊ, ಅಸಂಬದ್ಧ ಪ್ರಲಾಪಿಸಿದ. ಬೇಡವೋ ಎಂದೆ ಆ ಶ್ರೀಪತಿಯನ್ನು ಅವನ ಹೆಂಡತಿಯಿಂದ ದೂರ ಮಾಡಬೇಡವೋ ಎಂದೆ. ಅಹಹಾ ಎಂದು ನಕ್ಕುಬಿಟ್ಟ. ಸುಖ ಕೊಡದ ಹುಡುಗಿಯ ಕೂಡ ಯಾರು ತಾನೇ ಸಂಸಾರ ಮಾಡುತ್ತಾರೆ ಆಚಾರ್ಯರೆ, ಗೊಡ್ಡು ಬ್ರಾಹ್ಮಣರನ್ನು ಬಿಟ್ಟರೆ – ಎಂದು ಮೂದಲಿಸಿದ. ‘ಸಂಬಂಧಾಂತ ನನಗೆ ಭ್ರಾಂತಿ ಹಿಡಿದ ಹುಡುಗಿನ್ನ ಕಟ್ಟಿ ಹಾಳುಮಾಡಬೇಕೂಂತ ಇದ್ದೀರಲ್ಲ – ನೀವು – ಬ್ರಾಹ್ಮಣರು – ನಿಮ್ಮ ಧರ್ಮ ನಿಮಗೇ ಇರಲಿ – ಇರೋದು ಒಂದು ಆಯುಷ್ಯ. ನಾನು ಚಾರ್ವಾಕವಂಶದವ – ‘ಋಣಂ ಕೃತ್ವಾ ಘೃತಂ ಪಿಬೇತ್’ – ಎಂದ.’ ಈ ಭೌತಶರೀರ ಶಾಶ್ವತವಲ್ಲಪ್ಪ ಎಂದು ಬೋದಿಸಿದೆ; ಬೇಡಿದೆ; ‘ನೀನು ಏನೇ ಮಾಡು, ಹುಡುಗರನ್ನಾದರೂ ಹಾಳುಮಾಡಬೇಡ’ ಎಂದು ಅಂಗಲಾಚಿದೆ. ಅದಕ್ಕೂ ನಕ್ಕುಬಿಟ್ಟ. ‘ಮುಂಡೆಯರ ಆಸ್ತಿಗೆ ಮಟ್ಟಗೋಲು ಹಾಕಿ, ಮಾಟಮಂತ್ರಮಾಡಿಸಿ, ಕೆಟ್ಟದ್ದ ಬಗೆಯುವ ಗರುಡ ನಿಮ್ಮ ಪ್ರಕಾರ ಬ್ರಾಹ್ಮಣನೋ?’ ಎಂದು ಗೇಲಿ ಮಾಡಿದ. ‘ಕೊನೆಯಲ್ಲಿ ಗೆಲ್ಲೋದು ನಾನೋ, ನೀವೋ? ನೋಡುವ ಆಚಾರ್ಯರೆ, ಎಷ್ಟು ದಿನ ಈ ಬ್ರಾಹ್ಮಣ್ಯ ಉಳಿಯುತ್ತೆ ಅಂತ? ಈ ಬ್ರಾಹ್ಮಣ್ಯದ ಮರ್ಯಾದೇನೆಲ್ಲ ನಾನು ಬೇಕಾದರೆ ಒಂದು ಹೆಣ್ಣಿನ ಸುಖಕ್ಕೆ ಸುಳಿದು ಹಾಕಿಬಿಡುತ್ತೇನೆ. ನೀವಿನ್ನು ಹೊರಡಿ. ಹೆಚ್ಚಿಗೆ ಮಾತಾಡಿ ನಿಮ್ಮನ್ನ ನೋಯಿಸೋಕ್ಕೆ ಇಷ್ಟವಿಲ್ಲ. ‘ಎಂದುಬಿಟ್ಟಿದ್ದ. ಇಂತಹ ಪ್ರಾಣಿಗೆ ಬಹಿಷ್ಕಾರ ಹಾಕಿಸೋಕೆ ನಾನು ಯಾಕೆ ಅಡ್ಡಬಂದೆ? ಭೀತಿಯೋ? ಪಶ್ಚಾತ್ತಪವೋ ಕೊನೆಗೆ ನಾನೇ ಗೆಲ್ಲುವೆನೆಂಬ ಹಟವೋ? ಅಂತೂ ಅವನು ಅಂದ ಹಾಗೆ – ಬದುಕಿದ್ದಾಗ ಹೇಗೋ ಹಾಗೆ ಈಗ ಸತ್ತು ನನ್ನ ಬ್ರಾಹ್ಮಣ್ಯದ ಸತ್ವಪರೀಕ್ಷೆ ಮಾಡುತ್ತಿದ್ದಾನೆ.

ಕೊನೆಯ ಸಾರಿ ನಾರಣಪ್ಪನನ್ನು ನೋಡಿದ್ದೆಂದರೆ ಮೂರು ತಿಂಗಳ ಹಿಂದೆ ಚತುರ್ದಶಿಯ ಒಂದು ಸಂಜೆ. ಅವತ್ತು ಬೆಳಿಗ್ಗೆ ಅವ ಮುಸಲ್ಮಾನರನ್ನ ಕರೆದುಕೊಂಡು ಹೋಗಿ, ಗಣಪತಿ ದೇವಸ್ತಾನದ ಹೊಳೆಯ ದೇವರ ಮೀನನ್ನು ಹಿಡಿದು, ಅಗ್ರಹಾರದಲ್ಲಿ ಎಲ್ಲರ ಕಣ್ಣೆದುರು ಎತ್ತಿಕೊಂಡು ಹೋದ ಎಂದು ಗರುಡಾಚಾರ್ಯ ದೂರು ತಂದಿದ್ದ. ಮೇಲಕ್ಕೆ ಬಂದು ಕೈಯಿಂದ ಅಕ್ಕಿಯನ್ನು ತಿಂದು, ಹೊಳೆಯಲ್ಲಿ ನಿರಂಬಳ ಕ್ರೀಡಿಸುವ ಆ ಆಳೆತ್ತರದ ಮೀನುಗಳನ್ನು ಹಿಡಿದರೆ ರಕ್ತಕಾರಿ ಸಾಯುತ್ತಾರೆಂಬ ನಂಬಿಕೆಯನ್ನು ನಾರಣಪ್ಪ ನಿರ್ಲಕ್ಷಿಸಿದನೆಂದು ಪ್ರಾಣೇಶಾಚಾರ್ಯರಿಗೆ ಗಾಬರಿಯಾಯಿತು : ಇವ ಹೀಗೆ ದಾರಿ ಹಾಕಿಕೊಟ್ಟ ಮೇಲೆ ಶೂದ್ರಾದಿಗಳಾಗಿ ಎಲ್ಲರಿಗೂ ನ್ಯಾಯಧರ್ಮದ ಅಂಕೆ ತಪ್ಪಿಹೋಗದೆ ಇರುತ್ತದೋ? ದೈವ ಭಯದಿಂದಲಾದರೂ ಸಾಮಾನ್ಯರಲ್ಲಿ ಇಷ್ಟಾದರೂ ಧರ್ಮಬುದ್ಧಿ ಈ ಕಲಿಗಾಲದಲ್ಲಿ ಉಳಿದಿರೋದು. ಅದೂ ನಾಶವಾದರೆ? ಈ ಭೂಮಿಯನ್ನು ಎತ್ತಿ ಹಿಡಿಯೋ ಶಕ್ತಿ ಇನ್ನೆಲ್ಲಿ ಉಳಿದಿರತ್ತೆ? ಈಗ ತಾನು ಸುಮ್ಮನಿರೋದು ಅತ್ಯಂತ ಅನುಚಿತವೆಂದು ದಡದಡನೆ ನಡೆದು ನಾರಣಪ್ಪನ ಮುಖಕ್ಕೆ ಮುಖಕೊಟ್ಟು ಅವನ ಪಡಸಾಲೆಯಲ್ಲಿ ನಿಂತರು.

ಕುಡಿದಿದ್ದ ಎಂದು ಕಾಣುತ್ತದೆ : ಕಣ್ಣು ಕೆಂಪಾಗಿತ್ತು, ಕ್ರಾಪು ಕೆದರಿತ್ತು….

ಆಗ – ತನ್ನನ್ನು ಕಂಡೊಡನೆ ಧಡ್ಡನೆದ್ದು ಬಟ್ಟೆಯಿಂದ ಬಾಯಿ ಮುಚ್ಚಿಕೊಂಡನಲ್ಲವೆ?

ಅವನ ಸ್ವಭಾವ ಚಕ್ರವ್ಯೂಹದಂತೆಂದು, ಅದರೊಳಕ್ಕೆ ತನಗೆ ಹೊಗಲು ಪ್ರಾಯಶಃ ಎಡೆಯಿಲ್ಲವೆಂದು ಕೆಲವೊಮ್ಮೆ ಪರಿತಪಿಸುತ್ತಿದ್ದ ಆಚಾರ್ಯರಿಗೆ, ಅವನ ಗರ್ವದ ರಾವಣತ್ವದಲ್ಲಿ ತನ್ನನ್ನು ಕಂಡು ಅಂಜುವಷ್ಟಾದರೂ ಬಿರುಕು ಬಿಟ್ಟಿದ್ದು ನೋಡಿ, ಒಳಗಿನಿಂದ ಸಾತ್ವಿಕಶಕ್ತಿ ನಿಗ್ಗಿದಂತಾಗಿ ಆಶೋದಯವಾಯಿತು.

ಈಗ ಮಾತು ವ್ಯರ್ಥವೆಂದು ಅವರಿಗೆ ಗೊತ್ತು. ತನ್ನೊಳಗಿನ ಸಾತ್ವಿಕ ಗಂಗಾಜಲ ಅವನೊಳಕ್ಕೆ ಮೌನವಾಗಿ ನುಗ್ಗದ ಹೊರ್ತು ಅವನು ಅರಳುವವನಲ್ಲವೆಂದು ಅವರಿಗೆ ಗೊತ್ತು. ಗರುಡನಂತೆರಗಿ ಅವನನ್ನು ಜರ್ಜರಗೊಳಿಸಿ ಒಳಗಿನ ಅಮೃತವನ್ನು ಪುಟಿಸಬೇಕೆಂದು ಕಾಮದಂತಹ ಆಸೆಯೆದ್ದಿತು.

ಕಠೋರವಾಗಿ ನೋಡಿದರು. ಸಾಮಾನ್ಯ ಪಾಪಿ ಅಂಜಿ, ಹೇಸಿ, ಭೂಗತವಾಗಭೇಕು – ಹಾಗೆ ನೋಡಿದರು. ಇವನ ಕಣ್ಣಿಂದ ಪಶ್ಚಾತ್ತಾಪದ ಎರಡು ಹನಿ ನೀರು ಬೀಳಲಿ ಸಾಕು. ತನಗಿಂತ ಐದು ವರ್ಷ ಕಿರಿಯವನಾದ ನಾರಣಪ್ಪನನ್ನು ಭ್ರಾತೃವಾತ್ಸಲ್ಯದಿಂದ ಹಿಡಿದಪ್ಪಿಬಿಡುತ್ತೇನೆಂದು ಕಾಮಿಸಿ ನೋಡಿದರು.

ನಾರಣಪ್ಪ ತಲೆ ತಗ್ಗಿಸಿದ. ಭರ್ರನೆ ಹಾರಿ ಕವಿದುಕೊಂಡ ಗರುಡನ ತೊಡೆಗೆ ಸಿಕ್ಕಿದವನಂತೆ, ಕ್ಷಣ ಹುಳುವಾದಂತೆ, ಮುಚ್ಚಿದ ಬಾಗಿಲೊಂದನ್ನು ತುಸು ತೆರೆದು ಇಣುಕಿ ತಬ್ಬಿಬ್ಬಾದ ಹಾಗೆ – ಕಂಡ…

ಇಲ್ಲ, ಬಾಯಿಂದ ಬಟ್ಟೆಯನ್ನು ತೆಗೆದು, ಕುರ್ಚಿಯ ಮೇಲೆ ಬಿಸಾಕಿ, ಗಹಗಹಸಿ ನಕ್ಕ:

‘ಚಂದ್ರಿ, ಎಲ್ಲಿ ಬಾಟಲು? ಆಚಾರ್ಯರಿಗಷ್ಟು ತೀರ್ಥ ಕೊಡು.’

‘ಬಾಯಿ ಮುಚ್ಚು!’ ಪ್ರಾಣೇಶಚಾರ್ಯರು ಸರ್ವಾಂಗ ಕಂಪಿಸುತ್ತ, ತಮ್ಮ ವರ್ಚಸ್ಸಿನಿಂದ ಥಟ್ಟನೆ ನುಣುಚಿಕೊಂಡವನನ್ನು ಕಂಡು, ಮೆಟ್ಟಲಿಳಿಯುವಾಗ ಪಾದ ತಪ್ಪಿದವರಂತೆ ಹತಾಶರಾದರು.

‘ಆಹಾ! ಆಚಾರ್ಯರಿಗೂ ಸಿಟ್ಟು ಬರುತ್ತದಲ್ಲವೆ? ಕಾಮಕ್ರೋಧಾದಿಗಳು ನಮ್ಮಂತಹವರಿಗೆ ಮಾತ್ರವೆಂದು ತಿಳಿದಿದ್ದೆ. ಕಾಮಾನ ತುಳಿದವನಿಗೆ ಕೋಪ ಮೂಗಿನ ತುದೀಲೇ ಇರುತ್ತಂತೆ…. ದೂರ್ವಾಸ, ಪರಾಶರ, ಭೃಗು, ಕಾಶ್ಯಪ – ಚಂದ್ರೀ, ಎಲ್ಲಿ ಬಾಟಲು? ಅಲ್ಲ ಆಚಾರ್ಯರೇ, ನಿಮ್ಮ ಋಷಿಗಳು ಸೈ ಬೇಕಾದರೆ. ಮೀನಿನ ವಾಸನೆಯವಳನ್ನ ದೋಣಿಯಲ್ಲೆ ಕೆಡಸಿ ಸುಗಂಧಿ ಮಾಡಿದವನ ಹೆಸರೇನು? ಅಂತಹ ಪರಂಪರೇಲಿ ಬಂದ ಈ ಅಗ್ರಹಾರದ ಬಡ ಬ್ರಾಹ್ಮಣರನ್ನ ನೋಡಿರಪ್ಪ….’

‘ನಾರಣಪ್ಪ, ಬಾಯಿ ಮುಚ್ಚು’ ಎಂದೆ.

ಚಂದ್ರಿ ಬಾಟಲು ತರದಿದ್ದುದನ್ನು ಕಂಡು ನಾರಣಪ್ಪ ರೇಗಿ ಸ್ವತಃ ಉಪ್ಪರಿಗೆಗೆ ದಡದಡನೆ ಹತ್ತಿ ಸರಾಯಿಯನ್ನು ತಂದು ಬಟ್ಟಲು ತುಂಬಿಸಿದ. ಚಂದ್ರಿ ಬೇಡವೆಂದು ಅವನ ಕೈ ಹಿಡಿಯಹೋದರೆ ಅವಳನ್ನೂ ನೂಕಿದ. ಪ್ರಾಣೇಶಾಚಾರ್ಯರು ಕಣ್ಣುಮುಚ್ಚಿ ಹೊರಡಲೆಂದು ಬೆನ್ನು ತಿರುಗಿಸಿದರು.

‘ಆಚಾರ್ಯರೆ, ಸ್ವಲ್ಪ ನಿಲ್ಲಿ’ ಎಂದ. ತಾನೀಗ ಹೊರಟುಬಿಟ್ಟರೆ ಭೀತನಂತೆ ಕಾಣಿಸುವೆನೆಂದು ಹೆದರಿ ಪ್ರಾಣೇಶಾಚಾರ್ಯರು ಯಾಂತ್ರಿಕವಾಗಿ ನಿಂತರು. ಸರಾಯಿಯ ವಾಸನೆ ಅಸಹ್ಯವಾಯಿತು. ‘ಕೇಳಿ’ ಎಂದು ನಾರಣಪ್ಪ ಆಜ್ಞೆಮಾಡಿ, ಬಟ್ಟಲಿನಿಂದ ಒಂದು ಗುಟುಕು ಕುಡಿದು ವಕ್ರವಾಗಿ ನಗುತ್ತ ಹೇಳಿದ:

‘ಕೊನೆಗೆ ಗೆಲ್ಲೋದು ನಾನೋ ನೀವೋ – ನೋಡುವ. ನಾನು ಬ್ರಾಹ್ಮಣ್ಯದ ನಾಶಮಾಡ್ತೇನೆ. ಮಾಡಿಯೇ ತೀರ್ತೇನೆ. ನನ್ನ ದುಃಖವೆಂದರೆ ನಾಶ ಮಾಡೋಕ್ಕೆ ಈ ಅಗ್ರಹಾರದಲ್ಲಿ ಬ್ರಾಹ್ಮಣ್ಯಾನೇ ಉಳಿದಿಲ್ಲಲ್ಲಾಂತ – ನಿಮ್ಮೋಬ್ಬರನ್ನ ಬಿಟ್ಟರೆ, ಗರುಡ, ಲಕ್ಷ್ಮಣ, ದುರ್ಗಾಭಟ್ಟ – ಅಹಹಾ – ಎಂಥ ಬ್ರಾಹ್ಮಣರಯ್ಯ? ನಾನೇನಾದರೂ ಬ್ರಾಹ್ಮಣನಾಗಿ ಉಳಿದಿದ್ದರೆ ನಿಮ್ಮ ಗರುಡಾಚಾರ್ಯ ನನ್ನನ್ನ ಆಪೋಶನಾ ತಗೊಂಡುಬಿಡ್ತಿದ್ದ. ಅಥವಾ ಆಸ್ತಿ ಮೇಲಿನ ಆಸೆಗೆ – ಹೇಲಿನಲ್ಲಿ ಬಿದ್ದಿರೋ ಕಾಸನ್ನ ನಾಲಗೇಂದ ನೆಕ್ಕಿ ತೆಗಿಯೋ ಆ ಲಕ್ಷ್ಮಣ ತನ್ನ ಇನ್ನೊಂದು ನರಪೇತಲ ನಾದಿನಿಯನ್ನ ನನಗೆ ಕಟ್ಟಿರುತ್ತಿದ್ದ. ಒಟ್ಟಿನಲ್ಲಿ-ಜುಟ್ಟು ಬಿಟ್ಟು, ಅಂಗಾರ ಹಾಕಿ ನಿಮ್ಮ ಕಟ್ಟೇ ಮೇಲೆ ಕೂತು, ನೀವು ಹೇಳೋ ಪುರಾಣಾನ್ನ ಕೇಳಿಸಿಕೊಡು ಇರಬೇಕಾಗಿತ್ತು…’ ನಾರಣಪ್ಪ ಇನ್ನೊಂದು ಗುಟುಕು ಕುಡಿದು ತೇಗಿದ. ಒಳಗಿನಿಂದ ಭಯಗ್ರಸ್ಥಳಾಗಿ ನೋಡುತ್ತ ನಿಂತಿದ್ದ ಚಂದ್ರಿ ಕೈಮುಗಿದು ಹೋಗಿರೆನ್ನುವಂತೆ ಸಂಜ್ಞೆಮಾಡಿದಳು. ಪ್ರಾಣೇಶಾಚಾರ್ಯರು ಮತ್ತೆ ತಿರುಗಿದರು – ಕುಡುಕನ ಜೊತೆ ಏನು ಹರಟೆ ಅಂತ.

‘ಆಚಾರ್ಯರೆ, ಕೇಳಿ ಇಲ್ಲಿ. ನಿಮ್ಮ ಮಾತನ್ನೇ ಯಾವತ್ತೂ ಅಗ್ರಹಾರ ಕೇಳ್ತಾ ಇರಬೇಕೆಂದು ಯಾಕೆ ಗರ್ವ? ಸ್ವಲ್ಪ ನನ್ನ ಮಾತನ್ನೂ ಕಿವಿಗೆ ಹಾಕಿಕೊಳ್ಳಿ. ನಾನೊಂದು ಪುರಾಣ ಹೇಳ್ತೇನೆ. ಕೇಳಿ!’

‘ಒಂದು ಅಗ್ರಹಾರದಲ್ಲಿ ಒಬ್ಬ ಪರಮಪೂಜ್ಯ ಆಚಾರಿಯಿದ್ದ – ಒಂದಾನೊಂದು ಕಾಲದಲ್ಲಿ. ಅವನ ಹೆಂಡತಿ ಸದಾ ರೋಗಿಯಾದ್ದರಿಂದ ಸ್ತ್ರೀಸುಖವೇನೆಂದು ತಿಳಿಯದ ಅವನ ತೇಜಸ್ಸು – ಅಂದರೆ ಅವನ ಖ್ಯಾತಿ – ಊರೂರು ಹರಡಿತ್ತು. ಅಗ್ರಹಾರದಲ್ಲಿ ಉಳಿದ ಬ್ರಾಹ್ಮಣರು ಪರಮಪಾಪಿಗಳು. ಅನ್ನಮೂಲ, ಕಾಂಚನಮೂಲವಾದ ಸರ್ವಪಾಪಗಳನ್ನೂ ಮಾಡಿದವರು. ಆದರೆ ತಮ್ಮ ಪಾಪಾನ್ನ ಹೇಗೂ ಆ ಆಚಾರಿ ಮಾಡುವ ಪುಣ್ಯ ಮುಚ್ಚುತ್ತಲ್ಲಾಂತ ಅವರು ಇನ್ನಷ್ಟು ಪಾಪಾನ್ನ ಸಲೀಸಾಗಿ ಮಾಡತೊಡಗಿದರು. ಹೀಗೆ ಆಚಾರಿಯ ಪುಣ್ಯ ಏರಿದಷ್ಟೂ ಅವರ ಪಾಪಾನೂ ಏರಿತು. ಒಂದು ದಿನ ಒಂದು ತಮಾಷೆಯಾಯ್ತು. ಏನು ಆಚಾರ್ಯರೆ, ಕೇಳಿಸಿಕೊಳ್ಳುತ್ತಿದ್ದಿರೇನು? ನಾವು ಮಾಡೋ ಕರ್ಮಕ್ಕೆಲ್ಲ ತದ್ರೂಪವಾದ ಫಲ ಹೇಗೋ ಹಾಗೆ ತದ್ವಿರುದ್ಧವಾದ ಫಲಾನೂ ಪ್ರಾಪ್ತವಾಗುತ್ತದೆ ಎಂಬೋದು ನನ್ನ ಕತೆಯ ನೀತಿ. ಕೇಳಿಸಿಕೊಂಡು ಉಳಿದ ಬ್ರಾಹ್ಮಣರಿಗೂ ಹೇಳಿ.’

‘ಏನದು ತಮಾಷೇಂದರೆ ಆ ಅಗ್ರಹಾರದಲ್ಲಿ ಒಬ್ಬ ಯುವಕನಿದ್ದ. ಅವನ ಕೈಹಿಡಿದ ಹೆಂಡತಿ ಅವನ ಜೊತೆ ಮಲಗ್ತಾ ಇರಲಿಲ್ಲ – ಮಾತೃವಾಕ್ಯ ಪರಿಪಾಲನಾರ್ಥವಾಗಿ. ಆ ಯುವಕ ಈ ಆಚಾರಿ ಪುರಾಣ ಓದೋದನ್ನ ಕೇಳಲಿಕ್ಕೆಂದು ಪ್ರತಿ ಸಂಜೆಯೂ ಹಾಜರು. ಕಾರಣ – ಜೀವನದಲ್ಲಿ ಅನುಭವ ಇಲ್ಲದಿದ್ದರೂ ಈ ಆಚಾರಿ ಕಾವ್ಯಗೀವ್ಯಾಂದರೆ ಬಲೇ ರಸಿಕ. ಒಂದು ದಿನ ಕಾಳಿದಾಸನ ಶಕುಂತಲೆಯ ವರ್ಣನೆ ನಡೆದಿತ್ತು. ಮುಟ್ಟ ಹೋದರೆ ಚಿಗುಟಿದಾಂತ ತಾಯಿಯ ಹತ್ತಿರ ಹೋಗಿ ದೂರು ಹೇಳುವ ಹೆಂಡತಿಯಿಂದ ಬೇಸತ್ತ ಈ ಯುವಕನಿಗೆ ಆಚಾರಿಯ ವರ್ಣನೆಯಿಂದ ತನ್ನ ಮೈಯೊಳಗೆ ಒಂದು ಹೆಣ್ಣು ಬೆಳೆದಂತಾಗಿ, ತೊಡೇಲಿ ಕಿಚ್ಚು ಉರಿದು – ಅಂದರೆ  ಏನೂ ಅಂತ ನಿಮಗೆ ಗೊತ್ತೆ, ಆಚಾರ್ಯರೇ? – ಆಚಾರಿ ಜಗುಲಿಂದ ಜಿಗಿದ, ಓಡಿದ. ಹೆಚ್ಚು ಕೇಳಿಸಿಕೊಳ್ಳೊ ಸಹನೆಯಿಲ್ಲದೆ ಸೀದ ಹೊಳೆಗೆ  ತಣ್ಣೀರಿನಲ್ಲಿ ಮೀಯಲೆಂದು ಓಡಿದ. ಪುಣ್ಯವಶಾತ್ ಅಲ್ಲೊಬ್ಬಳು ಹೊಲತಿ. ಬೆಳದಿಂಗಳು. ಪುಣ್ಯವಶಾತ್  ಅವಳ ಮೈಮೇಲೆ ಅಷ್ಟೇನೂ ವಸ್ತ್ರವಿಲ್ಲದೆ ನೋಡಬೇಕೆಂದು ಅವನು ಬಯಸಿದ ಅಂಗಾಂಗಗಳೆಲ್ಲ ನಿರಾಯಾಸವಾಗಿ ಕಣ್ಣಿನ ಎದುರಿನಲ್ಲೆ. ನಿಮ್ಮ ಋಷಿ ಒಲಿದ ಮತ್ಸ್ಯಗಂಧೀ ತರಹದವಳು ಅವಳು. ಇವಳೇ ಶಕುಂತಳಾಂತ ಭ್ರಮಿಸಿ ಈ ಬ್ರಾಹ್ಮಣ ಯುವಕ ಅವಳನ್ನ ಅಲ್ಲೇ ಸಂಭೋಗಿಸಿಬಿಟ್ಟ – ಚಂದ್ರಸಾಕ್ಷಿಯಾಗಿ.’

‘ಈಗ, ಅರ್ಥಮಾಡಿ ಹೇಳಿ, ಆಚಾರ್ಯರೆ : ಆ ಆಚರೀನೇ ಊರಿನ ಬ್ರಾಹ್ಮಣ್ಯಾನ್ನ ಹಾಳುಮಾಡಿದಂತೆ – ಹೌದೋ ಅಲ್ಲವೊ? ಅದಕ್ಕೆ ಹಿರಿಯರು ಹೇಳ್ತಾ ಇದ್ದದ್ದು : ವೇದ ಪುರಾಣ ಓದಿರೊ, ಅದರೆ ಅದಕ್ಕೆ ಅರ್ಥಮಾಡಲಿಕ್ಕೆ ಹೋಗಬೇಡಿರೊ – ಅಂತ. ಕಾಶಿಗೆ ಹೋಗಿ ಬಂದವರಲ್ಲವ ನೀವು? ನೀವೇ ಹೇಳಿ? ಬ್ರಾಹ್ಮಣ್ಯ ಯಾರಿಂದ ಕೆಟ್ಟಿತು?’

ನಾರಣಪ್ಪನ ಮಾತನ್ನು ನಿಶ್ಚಲವಾಗಿ ನಿಂತು ಕೇಳುತ್ತ ಕೇಳುತ್ತ ಪ್ರಾಣೇಶಾಚಾರ್ಯರಿಗೆ ಕಳವಳವಾಯಿತು : ಕುಡುಕನ ತಲೆ ಕೆಟ್ಟ ಮಾತೋ? ನಿಜವೋ, ತನ್ನಿಂದ ಅಂತಹ ಪ್ರಮಾದವಾಗಿರೋದು ಶಕ್ಯವೋ?

‘ಪುಣ್ಯಕ್ಕೆ ನಾಲಿಗೆಯಿಲ್ಲಪ್ಪ, ಪಾಪಕ್ಕಿದೆ.’ ಪ್ರಾಣೇಶಾಚಾರ್ಯರು ನಿಟ್ಟುಸಿರಿಟ್ಟು, ‘ದೇವರೇ ನಿನಗೆ ಕರುಣೆ ತೋರಿಸಬೇಕು – ಅಷ್ಟೇ’ ಎಂದರು.

‘ನೀವು ರಸಾಭರಿತವಾದ ಪುರಾಣ ಓದುತ್ತೀರಿ : ಆದರೆ ಗೊಡ್ಡಾಗಿ ಬಾಳೂಂತ ಬೋಧಿಸ್ತೀರಿ. ಆದರೆ ನನ್ನ ಮಾತಿಗೆ ಒಂದೇ ಅರ್ಥ : ಹೆಣ್ಣಿನ ಜೊತೆ ಮಲಗು ಎಂದರೆ ಹೆಣ್ಣಿನ ಜೊತೆ ಮಲಗು; ಮೀನು ತಿನ್ನು ಎಂದರೆ ಮೀನು ತಿನ್ನು. ನಿಮಗೆಲ್ಲ ಒಂದು ಬುದ್ಧಿವಾದದ ಮಾತು ಹೇಳಲಾ, ಆಚಾರ್ಯರೆ? ಮೊದಲು ನಿಮ್ಮಗಳ ಆ ರೋಗಗ್ರಸ್ತ ಹೆಂಡಿರನ್ನ ಹೊಳೆಗೆ ನೂಕಿ. ಪುರಾಣದ ಋಷಿಗಳಂತೆ ಒಳ್ಳೆ ಮೀನುಸಾರು ಮಾಡಬಲ್ಲ ಒಬ್ಬ ಮತ್ಸ್ಯಗಂಧೀನ್ನ ತಬ್ಬಿಕೊಂಡು ಮಲಗಿ. ಕಣ್ಣುಬಿಟ್ಟು ನೋಡಿದಾಗ ನಿಮಗೆ ಪರಮಾತ್ಮನ ಅನುಭವ ಆಗಿರದಿದ್ದರೆ ನನ್ನ ಹೆಸರು ನಾರಣಪ್ಪನಲ್ಲ’ ಎಂದು ತೇಗಿದ.

ತನ್ನ ರೋಗಗ್ರಸ್ತ ಹೆಂಡತೀನ್ನ ಇವ ಹೀಗೆ ಚುಚ್ಚುತ್ತಿರಬಹುದೆಂದು ಆಚಾರ್ಯರು  ಪೂರ್ಣ ವ್ಯಗ್ರರಾಗಿ ‘ಥೂ ನೀಚ’ ಎಂದು ಬೈದು ಮನೆಗೆ ಬಂದುಬಿಟ್ಟರು. ಅವತ್ತು ರಾತ್ರೆ ಜಪಕ್ಕೆ ಕೂತರೆ ಚಿತ್ತವೃತ್ತಿಯ ನಿರೋಧ ಸಾಧ್ಯವಾಗಲಿಲ್ಲ. ಪರಮಾತ್ಮ ಎಂದು ಕಳವಳಪಟ್ಟರು. ಸಂಜೆ ಹೊತ್ತು ರಸಭರಿತ ಕತೆಗಳನ್ನ ಓದೋದು ಬಿಟ್ಟು ವ್ರತದ ನೀತಿಕತೆಗಳನ್ನು ಹೇಳತೊಡಗಿದರು. ಪರಿಣಾಮ-ತನಗೆ ಪುರಾಣ ಹೇಳುವುದರಲ್ಲಿದ್ದ ಹುಮ್ಮಸ್ಸೇ ಮಾಯವಾಯಿತು. ಜೀವ ತುಂಬಿದ ಕಣ್ಣುಗಳಿಂದ ನೋಡುತ್ತ, ಕೇಳುತ್ತ ತನ್ನ ಹೃದಯಕ್ಕಷ್ಟು ಗೆಲವು ತರುತ್ತಿದ್ದ ಹುಡುಗರು ಬರೋದನ್ನ ನಿಲ್ಲಿಸಿದರು. ಪುಣ್ಯಸಂಪಾದನಾಕಾಂಕ್ಷಿಗಳಾದ, ಕತೆಯ ಮಧ್ಯದಲ್ಲಿ ಆಕಳಿಸುತ್ತ ಹರಿನಾಮಸ್ಮರಣೆ ಮಾಡುವ ವಿಧವೆಯರು, ವೃದ್ಧರು ಮಾತ್ರ ಬರಹತ್ತಿದರು.

ತಾಳೆಗರಿ ಓಲೆಗಳನ್ನು ಓದುತ್ತ, ಚಿಂತಿಸುತ್ತ ಕೂತಿದ್ದ ಪ್ರಾಣೇಶಾಚಾರ್ಯರು ಹೆಂಡತಿ ನರಳಿದ್ದನ್ನು ಗಮನಿಸಿ, ಮಧ್ಯಾಹ್ನದ ಔಷಧಿ ಇನ್ನೂ ಕೊಟ್ಟಿಲ್ಲ ಅಲ್ಲವೆ ಎಂದು ಬಟ್ಟಲಲ್ಲಿ ಮದ್ದನ್ನು ತಂದು, ಹೆಂಡತಿಯನ್ನು ಎತ್ತಿ ಎದೆಗಾನಿಸಿಕೊಂಡು ಅವಳ ಬಾಯಲ್ಲಿ ಹೊಯ್ದ, ‘ಮಲಗು ನಿದ್ದೆ ಮಾಡು’ ಎಂದರು. ನಡುಮನೆಗೆ ಬಂದು ‘ಧರ್ಮಶಾಸ್ತ್ರದಲ್ಲಿ ಇದಕ್ಕೆ ಉತ್ತರವಿಲ್ಲ ಅಂದರೆ ಏನು ಅರ್ಥ’ ಎಂದು ಹಟತೊಟ್ಟು ಓದತೊಡಗಿದರು.