ದೇವಸ್ಥಾನದ ಸಮೀಪದಲ್ಲಿ ನಿಂತರು. ಕುರುಡನೊಬ್ಬ ಶ್ರುತಿಪೆಟ್ಟಿಗೆ ಹಿಡಿದು ‘ಹೇಗೆ ಮೆಚ್ಚಿಸಲಿ, ಅರ್ಚಿಸಲಿ ನಿನ್ನ’ ಎಂದು ದಾಸರ ಪದವನ್ನು ಹಾಡುತ್ತಿದ್ದ. ಪುಟ್ಟ ಅವನ ತಟ್ಟೆಗೆ ಬಿಲ್ಲೆ ಹಾಕಿದ್ದನ್ನು ಕಂಡು, ಮೋಟು ಕೈಕಾಲಿನ ಇನ್ನೊಬ್ಬ ಬಿಕ್ಷುಕ ತೆವಳುತ್ತ ಬಂದು ಮೊಂಡುಕೈಯನ್ನು ಆಡಿಸುತ್ತ ‘ಕೈಕಾಲಿಲ್ಲದವ’, ‘ಕೈಕಾಲಿಲ್ಲದವ’ ಎಂದು ಗೋಗರೆದು, ಅಂಗಾತ ಮಲಗಿ, ಕಾಲೆತ್ತಿ ಕೈಯೆತ್ತಿ ಬಡಿದುಕೊಳ್ಳುತ್ತ, ಬೆರಳುಗಳು ಕೊಳೆತು ಗುಜ್ಜಾದ ಜಾಗಗಳನ್ನು ಪ್ರದರ್ಶಿಸಿದ. ಪ್ರಾಣೇಶಾಚಾರ್ಯರಿಗೆ ತೊನ್ನಿನಲ್ಲಿ ಕರಗಿಹೋಗುತ್ತಿದ್ದ ದೇಹವನ್ನು ಕಂಡು ನಾರಣಪ್ಪನ ಸಂಸ್ಕಾರವಿಲ್ಲದ ಕೊಳೆಯುವ ಹೆಣ ಮರುಕಳಿಸಿತು. ಪುಟ್ಟ ಇನ್ನೊಂದು ಬಿಲ್ಲೆಯೊಗೆದ. ಇನ್ನಷ್ಟು ದೇಹಗಳು ಮಗುಚುತ್ತ ತೆವಳುತ್ತ ಹೊಟ್ಟೆ ಹೊಡೆದುಕೊಳ್ಳುತ್ತ ಬಾಯಿ ಬಡಿದುಕೊಳ್ಳುತ್ತ ನುಗ್ಗಿ ಬಂದವು. ‘ಹೋಗುವ, ಹೋಗುವ’ ಎಂದರು ಆಚಾರ್ಯರು.

‘ನೀವು ಹೋಗಿ ಊಟ ಮಾಡಿ ಬನ್ನಿ’ ಎಂದು ಪುಟ್ಟ.

‘ನೀನೂ ಬಾ’ ಎಂದರು ಪ್ರಾಣೇಶಾಚಾರ್ಯರು. ಥಟ್ಟನೇ ಅವರಿಗೆ ಜೊತೆ ಯಲ್ಲೊಬ್ಬನಿಲ್ಲದೆ ದೇವಸ್ಥಾನದ ಪ್ರಾಂಗಣದಲ್ಲಿ ಊಟಕ್ಕೆ ಕೂತ ಬ್ರಾಹ್ಮಣರ ಕಣ್ಣಿಗೆ ಬೀಳಲು ದಿಗಿಲಾಯಿತು. ಜೊತೆಗೆ ಪುಟ್ಟನಿಲ್ಲದೆ ಕದಲಲಾರೆ ಎನ್ನಿಸಿತು. ಹೀಗೇ ಒಂಟಿಯಾಗಿಲಾರೆ ಎಂದೆನ್ನಿಸಿದ್ದೆ ಇಲ್ಲ ಅವರಿಗೆ ಈ ಮುಂಚೆ.

‘ಒಳ್ಳೆ ಹೇಳುತ್ತೀರಿ. ಮಾಲೇರರವ ನಾನೆಂಬುದನ್ನು ಮರತೇಬಿಟ್ಟಿರ’ ಎಂದ ಪುಟ್ಟ ಅದಕ್ಕೆ.

‘ಚಿಂತೆಯಲ್ಲ, ಬಾ’ ಎಂದರು.

‘ಹಾಸ್ಯ ಮಾಡುತ್ತಿರೋ ಹೇಗೆ? ಈ ಮೇಳಿಗೆ ತುಂಬ ನನ್ನ ಪರಿಚಯದವರು ಮಾರಾಯರೆ. ಇಲ್ಲವಾದರೆ ಒಂದು ಕೈ ನೋಡಿಬಿಡುತ್ತಿದ್ದೆ. ಓಯ್, ನಾನು ಇದ್ದನ್ನ ಮಾಡಿದ್ದಿಲ್ಲವೆಂದುಕೊಳ್ಳಬೇಡಿ. ಉಡುಪಿಯಲ್ಲಿ ಚೌಕಿಯ ಊಟಮಾಡಿದ್ದುಂಟು. ಅಲ್ಲಿ ಕೇಳೋವರು ಯಾರು? ಓಯ್, ಸೋನೆಗಾರನ ಹುಡುಗನೊಬ್ಬ ಸುಳ್ಳು ಹೇಳಿ ಮಠದಲ್ಲಿ ಕೆಲಸಕ್ಕೆ ಸೇರಿದ್ದು ಗೊತ್ತಲ್ಲವೆ ನಿಮಗೆ. ಹಾಗೆ ನೋಡಿದರೆ ನಮಗೇನು ಜನಿವಾರವಿಲ್ಲವೆ? ಮಾತಿಗೆ ಹೇಳಿದೆ ಅಷ್ಟೆ. ನಿಮ್ಮ ಜೊತೆ ಊಟಮಾಡುವಲ್ಲಪ್ಪ ನಾನು. ನೀವು ಹೋಗಿಬನ್ನಿ. ನಾನು ಇಲ್ಲೆ ಕಾದಿರುವೆ.’

ಮುತ್ತಿದ್ದ ಭಿಕ್ಷುಕರ ಅಲಾಪವನ್ನು ಸಹಿಸಲಾರದೆ ಪ್ರಾಣೇಶಾಚಾರ್ಯರು ದಿಗ್ಭ್ರಮೆಯಲ್ಲಿ ಒಳಗೆ ನಡೆದುಬಿಟ್ಟರು.

ದೇವಸ್ಥಾನದ ನಾಲ್ಕು ಜಗುಲಿಯ ಮೇಲೂ ಬಾಳೆಲೆ ಹಾಕಿತ್ತು. ಎಲೆಯೊಂದರ ಮುಂದೆಯಂತೆ ಅಶನಾರ್ಥಿ ಬ್ರಾಹ್ಮಣರು ಕೂತಿದ್ದರು. ಅವರೆಲ್ಲರ ಮುಖಗಳನ್ನು ನೋಡುತ್ತಿದ್ದಂತೆ ಪ್ರಾಣೇಶಾಚಾರ್ಯರ ಎದೆ ಧಸಕ್ಕೆಂದುಬಿಟ್ಟತು. ಪತ್ತೆಯಾಗಿಬಿಟ್ಟರೆ? ಓಡಿಹೋಗಿಬಿಡುವ ಎನ್ನಿಸಿತು. ಆದರೆ ಕಾಲನ್ನೆತ್ತಲೂ ಸಾಧ್ಯಾವಾಗಲಿಲ್ಲ. ನಿಶ್ಚೇಷ್ಟಿತರಾಗಿ ನಿಂತು ಯೋಚಿಸಿದರು : ನಾನೇನು ಮಾಡುತ್ತಿದ್ದೇನೆ? ಎಂತಹ ಚಾಂಡಾಲ ಕೃತ್ಯ ಮಾಡುತ್ತಿದ್ದೇನೆ? ಸೂತಕದಲ್ಲಿರುವ ನಾನು ತಿಳಿದೂ ತಿಳಿದೂ ಈ ಬ್ರಾಹ್ಮಣರ ಜೊತೆ ಊಟ ಮಾಡಲೆ? ಅವರೆಲ್ಲರಿಗೆ ಮೈಲಿಗೆ ಮಾಡಲೆ? ಮೈಲಿಗೆಯಾದರೆ ರಥ ಮುಂದಕ್ಕೆ ಹೋಗುವುದಿಲ್ಲೆಂದು ನಂಬಿದ ಜನ ಇವರು. ಈಗ ನಾನಿಲ್ಲಿ ಕೂತು ಊಟಮಾಡಿದರೆ ನಾರಣಪ್ಪ ಗಣಪತಿಯ ಮೀನನ್ನು ಹಿಡಿದು ಬ್ರಾಹ್ಮಣ್ಯ ನಾಶಮಾಡಿದಷ್ಟೇ ಭ್ರಷ್ಟ ಕೆಲಸಮಾಡಿದಂತೆ. ಊಟ ಮಾಡುತ್ತಿರುವಾಗಲೆಲ್ಲಾದರೂ ತಾನು ಪ್ರಾಣೇಶಾಚಾರ್ಯನೆಂದು ಪತ್ತೆಯಾಗಿಬಿಟ್ಟರೆ… ತನಗೆ ಸೂತಕವೆಂದು ತಿಳಿದುಬಿಟ್ಟರೆ… ಕೋಲಾಹಲವಾಗಿಬಿಡುತ್ತದೆ. ಇಡಿಯ ರಥೋತ್ಸವವೇ ನಿಂತುಬಿಡುತ್ತದೆ. ಸಾವಿರ ಕಣ್ಣುಗಳು ನನ್ನನ್ನು ನುಂಗಿಬಿಡುತ್ತವೆ. ‘ಇಲ್ಲೊಂದು ಎಲೆಯಿದೆ. ಬನ್ನಿ, ಬನ್ನಿ.’ ಬೆಚ್ಚಿದರು. ನೋಡಿದರು. ತುದಿಯಲ್ಲಿ ಕೂತ ಬ್ರಾಹ್ಮಣನೊಬ್ಬ ಕರೆಯುತ್ತಿದ್ದಾನೆ, ಏನು ಮಾಡಲಿ? ಪರಮಾತ್ಮ, ಏನು ಮಾಡಲಿ? ನಿಂತೇ ಇದ್ದರು. ‘ಕರೆದದ್ದು ಕೇಳಿಸಲಿಲ್ಲವೆ?’ ಕರೆದ ಬ್ರಾಹ್ಮಣ ನಗುತ್ತ ಹಿಡಿದ. ಖಾಲಿಯಿರುವ ಎಲೆ ತೋರಿಸಿದ. ‘ನೋಡಿ, ನಿಮಗೆಂದು ಎಲೆಯ ಮೇಲೆ ಲೋಟವನ್ನಿಟ್ಟು ಬಂದೆ. ಇಲ್ಲವಾದರೆ ಮುಂದಿನ ಪಂಕ್ತಿಗೆ ನೀವು ಕಾಯಬೇಕಾಗಿತ್ತು’ ಎಂದ. ಆಚಾರ್ಯರು ಯಾಂತ್ರಿಕವಾಗಿ ಅವನ ಜೊತೆ ಹೊಗಿ ಕೂತರು. ತಲೆ ಸುತ್ತತೊಡಗಿತು.

ಮನಸ್ಸನ್ನು ಸ್ತಿಮಿತಕ್ಕೆ ತರಲು ಯತ್ನಿಸುತ್ತ ಯೋಚಿಸಿರು:

ದೇವರೆ, ಈ ಭೀತಿಯ ಮೂಲವೆಲ್ಲಿ? ಪುನರ್ಜನ್ಮದ ಮೊದಲಿನ ಯಾತನೆಯೆ ಇದು? ಯಾರಾದರೂ ಕಂಡುಬಿಟ್ಟರೆ ಎನ್ನುವ ಆತಂಕವೇ? ಈ ಭೀತಿಯನ್ನು ಹೇಗೆ ನಿರ್ಮೂಲಗೊಳಿಸಲಿ? ಪದ್ಮಾವತಿಯ ಜೊತೆ ಈ ರಾತ್ರೆ ಮಲಗಿದರೆ ತೀರುವ ಭೀತಿಯೇ ಇದು? ಚಂದ್ರಿಯ ಸಂಗಡ ಹೋಗಿ ಬಾಳಿಬಿಟ್ಟರೆ ತೀರುವ ಭೀತಿಯೆ ಇದು? ನನ್ನ ನಿಶ್ಚಯದ ಬೆಲೆ ಏನು? ಯಾವ ನಿಶ್ಚಯವನ್ನು ಮಾಡಲಾರದೆ ಪ್ರೇತತ್ವವೇ ನನಗೆ ಖಾತ್ರಿಯಾದ ಸ್ಥಿತಿಯೇ? ಈಗ ಪುಟ್ಟನಿರಬೇಕಿತ್ತು. ಎದ್ದುಬಿಡಲೆ? ಏನೆಂದುಕೊಂಡಾನು ಪಕ್ಕದಲ್ಲಿ ಇರುವ ಬ್ರಾಹ್ಮಣ?

ಒಬ್ಬ ಬ್ರಾಹ್ಮಣ ಅಭಿಗಾರವನ್ನು ಎಲೆಯ ತುದಿಗೆ ಸೋಕಿಸುತ್ತ ನಡೆದ. ಅವನ ಹಿಂದೊಬ್ಬ ಪಾಯಸವನ್ನು ಎಲೆಯ ಅಂಚಿಗೆ ಚಮಚದಿಂದ ಸುರಿಯುತ್ತ ನಡೆದ. ಅವನ ಹಿಂದಿನಿಂದ ಇಬ್ಬರು ದಾರ್ಢ್ಯ ಬ್ರಾಹ್ಮಣರು ಅನ್ನವನ್ನು ಬಡಿಸುತ್ತ ‘ದಾರಿ ದಾರಿ ದಾರಿ’ ಎಂದರು. ಮತ್ತೆ ಕೋಸಂಬರಿ. ಸೌತೆಕಾಯಿ ಪಲ್ಯ. ಬಡಿಸಲು ಬರುವ ಪ್ರತಿಯೊಂದು ಹೊಸ ಮುಖ ಕಂಡು ಹೆದರಿಕೆ. ನಾನು ಇವನಿಗೆ ಪರಿಚಯವಿದ್ದಬಿಟ್ಟರೆ –

ಪಕ್ಕದಲ್ಲಿ –  ತನಗೆ ಎಲೆ ಕೊಟ್ಟವ – ಭೀಮಸೇನನಂತಹ ಕಾಯದ ಕಪ್ಪು ಬಣ್ಣದ ಬ್ರಾಹ್ಮಣ. ನೊಸಲಿಗೆ ಗಂಧವನ್ನು ಅಡ್ಡಲಾಗಿ ಎಳೆದ ಸ್ಮಾರ್ತ. ಅವನನ್ನು ಕಂಡೇ ಆಚಾರ್ಯರಿಗೆ ದಿಗಿಲಾಗಿತ್ತು. ಮತ್ತೆ ಅವನ ಪ್ರಶ್ನೆಗಳೆಲ್ಲವೂ ಅವರನ್ನು ತಬ್ಬಿಬ್ಬಾಗಿ ಮಾಡಿದವು:

‘ಯಾವ ಕಡೆಯವರೊ?’

‘ಘಟ್ಟದ ಕೆಳಗೆ.’

‘ನಾನು ಈ ಊರವನೆ. ಘಟ್ಟದ ಕೆಳಗೆ ಎಲ್ಲೋ?’

‘ಕುಂದಾಪುರ….’

‘ಯಾವ ಜನವೋ?’

‘ವೈಷ್ಣವ.’

‘ಯಾವ ಪಂಗಡವೋ?’

‘ಶಿವಳ್ಳಿ.’

‘ನಾವು ಕೋಟದವರು. ನಿಮ್ಮ ಗೋತ್ರ?’

‘ಭಾರದ್ವಾಜ.’

‘ನಾವು ಆಂಗೀರಸ ಗೋತ್ರದವರು. ಮಹಾರಾಯರೆ, ನಿಮ್ಮ ಪರಿಚಯವಾದ್ದು ಬಹಳ ಸಂತೋಷವಾಯ್ತು. ನಮ್ಮದೊಂದು ಹುಡುಗಿಯಿದೆ, ಸ್ವಾಮಿ. ಇನ್ನೇನು ಒಂದೆರಡು ವರ್ಷಕ್ಕೆ ನೆರೆದುಬಿಡುವಳು. ಮೈನೆರೆಯುವ ತನಕ ಮದುವೆ ಮಾಡದಷ್ಟು ನಾವಿನ್ನೂ ಕೆಟ್ಟಿಲ್ಲ. ಆದಕಾರಣ ಹುಡುಗಿಗೊಂದು ಅನುರೂಪನಾದ ವರನನ್ನು ಹುಡುಕುತ್ತಿದ್ದೇನೆ. ನಿಮ್ಮ ಕಡೆಯೊಂದು ಎಲ್ಲಾದರೂ ಗಂಡಿದ್ದರೆ ತಿಳಿಸಿ, ಮಹಾರಾಯರೆ. ಕನ್ಯಾಹೊರೆ ಕಳೆದು ಉಪಕಾರವಾದಂತೆ. ಊಟ ಮುಗಿದಮೇಲೆ ಮನೆಗೆ ಹೋಗುವ ಬನ್ನಿ. ನಿಮ್ಮ ಕೈಯಲ್ಲಿ ಜಾತಕದ ಪ್ರತಿಯೊಂದು ಕೊಡುತ್ತೇನೆ. ಇವತ್ತು ನಮ್ಮಲ್ಲೆ ಇಳಿದಿದ್ದರಾಯಿತು.’

ಪ್ರಾಣೇಶಾಚಾರ್ಯರು ದೊನ್ನೆಗೆ ಸಾರು ಹಾಕಿಸಿಕೊಳ್ಳುತ್ತ ತಲೆ ಎತ್ತಿ ನೋಡಿದರು. ಸಾರನ್ನು ಬಡಿಸುವಾತ ಇವರ ಮುಖವನ್ನೇ ನೋಡುತ್ತಿದ್ದ. ಕ್ಷಣ ನಿಂತ. ಮತ್ತೆ ಮುಂದಕ್ಕೆ ಹೋದ.

‘ಆಗಲಿ’ ಎಂದರು ಪ್ರಾಣೇಶಾಚಾರ್ಯರು ಅಲ್ಲಿಗೇ ಮಾತನ್ನು ಸಾಕು ಮಾಡಲು. ಈ ಸಾರು ಬಡಿಸಲು ಬಂದವನಿಗೆ ನನ್ನ ಪರಿಚಯವಿರಬಹುದೇ? ಹಣೆಯ ಮೇಲೆ ಅಂಗಾರವಿತ್ತು. ಮಾಧ್ವರವ. ನನ್ನ ಪರಿಚಯವಿರಲಿಕ್ಕೆ ಸಾಕು. ಎದ್ದುಬಿಡುವ ಎಂದರೆ ಪರಿಷಂಚನೆ ಕಟ್ಟಿಯಾಗಿದೆ. ಕೈಯಲ್ಲಿ ತೀರ್ಥ ಹಿಡಿದಾಗಿದೆ. ‘ಶ್ರೀಮದ್ ರಮಾರಮಣ ಗೋವಿಂದಾ ಗೋವಿಂದ’ ಎಂದು ಕುಡಿದೂ ಆಗಿದೆ. ಬಿಸಿಬಿಸಿ ಅನ್ನಕ್ಕೆ ಸಾರನ್ನು ಕಲಿಸಿ ತಿಂದರು. ಎಷ್ಟು ದಿನವಾಗಿಬಿಟ್ಟಿತ್ತು ಊಟ ಮಾಡಿ? ಪ್ರಮಾತ್ಮ. ಈ ಗಂಡಾಂತರದಿಂದ ಪಾರುಮಾಡು. ಇವತ್ತಷ್ಟಕ್ಕೆ ನಾನು ಪತ್ತೆಯಾಗದಂತೆ ನೋಡಿಕೊ. ನನ್ನ ನಿಶ್ಚಯ ಇದು ಎಂದು ನಾನು ನಿಶ್ಚಯ ಮಾಡಲಾರೆ, ನನ್ನ ನಿಶ್ಚಯದಲ್ಲಿ ಉಳಿದವರೂ ಭಾಗಿಯಾಗಿಬಿಡುತ್ತಾರೆ. ಇಷ್ಟೆಲ್ಲ ಆದಮೇಲೆ ನಾರಣಪ್ಪನ ಶವದ ಸಂಸ್ಕಾರ ನಾನು ಮಾಡಬೇಕಿತ್ತು. ಆದರೆ ಒಬ್ಬನೇ ಹೇಗೆ ಮಾಡಲಿ? ಹೆಣವನ್ನು ಎತ್ತಿಹಾಕಲು ಇನ್ನು ಮೂವರು ಬೇಕು. ಆ ಮೂವರಿಗೆ ನಾನು ಹೇಳಬೇಕು. ಹೇಳಿದರೆ ಅವರ ಬ್ರಾಹ್ಮಣ್ಯವನ್ನು ನನ್ನ ನಿಶ್ಚಯಕ್ಕೆ ಒಳಪಡಿಸಿಬಿಟ್ಟಂತೆ. ಇದೇ ನನ್ನ ಆತಂಕದ, ಸಂಕಟದ ಮೂಲ. ಆದರೆ ಕಂಡರಿಯದಂತೆ ಚಂದ್ರಿಯ ಜೊತೆ ಕೂಡಿದಾಗಲೂ ಅಗ್ರಹಾರದ ಬಾಳನ್ನು ನನ್ನ ಕ್ರಿಯೆಗೆ ಒಳಪಡಿಸಿಬಿಟ್ಟೆ. ಪರಿಣಾಮವಾಗಿ ನನ್ನ ಬಾಳು ಲೋಕದ ಕಣ್ಣಿಗೆ ತೆರಿದಿಟ್ಟುಬಿಟ್ಟ ಪದಾರ್ಥವಾಗಿಬಿಟ್ಟಿತು. ಸಾರನ್ನು ಬಡಿಸಿದವ ಇನ್ನೊಮ್ಮೆ ‘ಸಾರು ಸಾರು’ ಎಂದು ಕೂಗುತ್ತ ಬಂದ. ಮತ್ತೆ ತನ್ನ ಎಲೆಯ ಎದುರು ನಿಂತು ‘ಸಾರು’ ಎಂದ. ಹೆದುರುತ್ತ ಆಚಾರ್ಯರು ಕಣ್ಣೆತಿದರು.

‘ನಿಮ್ಮನ್ನೆಲ್ಲೋ ನೋಡಿದ್ದೀನಿ’ ಎಂದ ಅವ.

‘ಇರಬಹುದು’ ಎಂದರು ಆಚಾರ್ಯರು. ಮತ್ತೆ ಅವ ದೇವರ ದಯದಿಂದ ಇನ್ನೊಂದು ಸಾಲಿಗೆ ಸಾರನ್ನು ಬಡಿಸುತ್ತ ಹೋದ. ಅವನ ಕಣ್ಣುಗಳು ತನ್ನನ್ನೇ ನೆನೆಯುತ್ತಿವೆ; ಮನಸ್ಸಿನೊಳಗೆ ನನ್ನ ಬಿಂಬವನ್ನು ಕಳಿಸಿ ಪತ್ತೆ ಹಚ್ಚುತ್ತಿವೆ. ಚಂದ್ರಿಯ ಜೊತೆ ಹೋಗಿದ್ದರೂ ಯಾರಾದರೊಬ್ಬ ನನ್ನನ್ನು ಸಂಧಿಸಿ ‘ನೀವು ಯಾರು’ ಎನ್ನುತ್ತಾನೆ. ಯಾವ ಗೋತ್ರ? ಯಾವ ಪಂಗಡ? ಬ್ರಾಹ್ಮಣ್ಯವನ್ನು ಸಂಪೂರ್ಣ ತೊರೆದು ನಿಲ್ಲದ ಹೊರತು ಇದರಿಂದ ಸ್ವತಂತ್ರನಾಗಲಾರೆ. ತೊರೆದರೆ ಕೋಳಿ ಅಂಕದ ಆ ವ್ಯಘ್ರಲೋಕಕ್ಕೆ ಹುಳದಂತೆ ಬಿದ್ದು ಸುಟ್ಟುಬಿಡುವೆ. ಈ ಭೇತಾಳತನದಿಂದ ಹೇಗೆ ಪಾರಾಗಲಿ?

‘ಎರಡನೇ ಸಾರಿ ಬಡಿಸಿದ ಸಾರಿಗೆ ನೀರು ಬೆರಸಿಬಿಟ್ಟಿದ್ದಾರೆ’ ಎಂದು ಪಕ್ಕದಲ್ಲಿ ಕೂತ ಬ್ರಾಹ್ಮಣ. ‘ಏನು ಬರೀ ಸಾರಿನಲ್ಲಿ ಹೊಟ್ಟೆ ತುಂಬಿಸಿಕೊಳ್ಳುತ್ತೀದ್ದೀರಲ್ಲ. ಭಕ್ಷ್ಯ-ಭೋಜ್ಯಗಳು ಬರುವುದಿದೆ. ಕಾಯಿರಿ’ ಎಂದು ಹೇಳಿದ.

ಸಾರನ್ನು ತಂದವನೇ ಮತ್ತೆ ಹುಳಿಯನ್ನು ಬಡಿಸುತ್ತ ಅದೇ ಸಾಲಿಗೆ ಬಂದ, ಎದುರು ನಿಂತು,

‘ಎಲ್ಲೆಂದು ನೆನಪೇ ಆಗುತ್ತಿಲ್ಲ. ಮಠದಲ್ಲಿ ಇರಬಹುದೇ? ಆರಾಧನೆಗೆ ಒಮ್ಮೊಮ್ಮೆ ನಾನು ಅಡಿಗೆ ಕೆಲಸಕ್ಕೆ ಹೋಗುವುದುಂಟು. ನಮ್ಮ ಅಗ್ರಹಾರ ಹೊಳೆಯಾಚೆಯಾಯಿತು. ಮೊನ್ನೆ ಮಠದಲ್ಲಿ ಆರಾಧನೆಯ ಅಡಿಗೆ ಮಾಡಿ ಇಲ್ಲಿಗೆ ಬಂದೆ’

ಎಂದು ಮತ್ತೆ ಅವಸರದಲ್ಲಿ ‘ಹುಳೀ ಹುಳೀ ಹುಳೀ’ ಎಂದು ಸಾರುತ್ತ, ಇನ್ನೊಂದು ಪಂಕ್ತಿಗೆ ಬಡಿಸುತ್ತ ನಡೆದ.

ತಾನೀಗ ಎದ್ದು ನಡೆದುಬಿಡಬೇಕೆಂದುಕೊಂಡರು. ಆದರೆ ಕಾಲು ಮರಗಟ್ಟಿಬಿಟ್ಟಿತ್ತು. ಪಕ್ಕದಲ್ಲಿ ಕೂತ ಬ್ರಾಹ್ಮಣ,

‘ನಮ್ಮ ಹುಡುಗಿ ಅಡಿಗೆ ಕೆಲಸದಲ್ಲಿ ಜಾಣಳು. ಹಿರಿಯರಿಗೆ ವಿಧೇಯಳಾಗಿ ನಡೆಯುತ್ತಾಳೆ. ಅತ್ತೆ ಮಾವ ಇರುವ ದೊಡ್ಡದೊಂದು ಕುಲೀನರ ಮನೆಗೆ ಸೇರಿಸಬೇಕೆಂದು ನಮ್ಮ ಹಂಬಲ’ ಎಂದ.

ಈ ಭೀತಿಯಿಂದ ಪಾರಾಗಲು ಇರುವುದು ಒಂದೇ ಮಾರ್ಗ. ನಾರಣಪ್ಪನ ಶವ ಸಂಸ್ಕಾರದ ಹೊಣೆ ಹೊರಬೇಕು. ನಾನು ಉದಾತ್ತವಾಗಿ ಬೆಳೆದ ಅಗ್ರಹಾರದ ಬ್ರಾಹ್ಮಣರ ಕಣ್ಣೆದುರಿನಲ್ಲೇ ನಿಲ್ಲಬೇಕು. ಗರುಡ, ಲಕ್ಷ್ಮಣರನ್ನು ಕರೆದು ಹೇಳಬೇಕು : ಹೀಗೀಗಾಯಿತು. ನನ್ನ ನಿಶ್ಚಯ ಹೀಗೆ, ನಿಮ್ಮ ಕಣ್ಣೆದುರಿನಲ್ಲಿ ಬೆಳೆದ ಉದಾತ್ತ ವ್ಯಕ್ತಿತ್ವವನ್ನು ತೊರೆದುಬಿಡುತ್ತೇನೆ. ನಿಮ್ಮ ಕಣ್ಣಿನ ಎದುರೇ ಅದನ್ನು ಬಿಸಾಕಲೆಂದು ಬಂದಿದ್ದೇನೆ. ಇಲ್ಲವೇ ನನ್ನ ಈ ಭೀತಿ ತಪ್ಪಿದ್ದಲ್ಲ, ನನಗೆ ಸ್ವಾತಂತ್ರ್ಯವಿಲ್ಲ.

ಆಗ – ಗಣಪತಿಯ ಮೀನನ್ನು ಹಿಡಿದು ಅಗ್ರಹಾರದ ಜೀವನವನ್ನು ತಲೆಕೆಳಗು ಮಾಡಿದ ನಾರಣಪ್ಪನಂತೆಯೇ ನಾನು ಬ್ರಾಹ್ಮಣರ ಬಾಳನ್ನು ಬುಡಮೇಲು ಮಾಡಿಬಿಟ್ಟಂತಾಗುತ್ತದೆ. ಅವರಲಿದ್ದ ನಂಬಿಕೆಗೆ ವಜ್ರಾಘಾತವಾಗಿಬಿಡುತ್ತದೆ. ಏನೆಂದು ಹೇಳಲಿ? ಚಂದ್ರಿಯನ್ನು ಕೂಡಿದೆ. ಹೆಂಡತಿಯನ್ನು ಕಂಡು ಹೇಸಿದೆ. ಹೋಟೆಲಲ್ಲಿ ಕಾಫಿ ಕುಡಿದೆ. ಕೋಳಿ ಅಂಕಕ್ಕೆ ಹೋದೆ. ಪದ್ಮಾವತಿಯಿಂದ ಆಕರ್ಷಿತನಾದೆ. ಕೊನೆಗೆ ಸೂತಕದಲ್ಲಿದ್ದಾಗಲೂ ದೇವಸ್ಥಾನದಲ್ಲಿ ಬ್ರಾಹ್ಮಣರ ಜೊತೆ ಕೂತು ಊಟಮಾಡಿದೆ. ಮಾಲೇರರ ಹುಡುಗನೊಬ್ಬನನ್ನೂ ಜೊತೆಗೆ ಊಟಮಾಡಲಿಕ್ಕೆ ಕರೆದೆ. ನನ್ನ ಪಾಲಿನ ಸತ್ಯ ಇದು. ತಪ್ಪೊಪ್ಪಿಗೆಯಲ್ಲ ಇದು. ನಾನು ಪಾಪಿ ಎಂಬ ಪಶ್ಚಾತ್ತಾಪವಲ್ಲ ಇದು. ಬರಿ ಕಠೋರ ಸತ್ಯ. ನನ್ನ ಒಳಬಾಳಿನ ಸತ್ಯ. ಆದ್ದರಿಂದ ಇದು ನನ್ನ ನಿಶ್ಚಯ. ಈ ನಿಶ್ಚಯದ ಮೂಲಕ ಇಗೋ ಕಡಿದುಕೊಂಡೆ.

‘ಒಂದಿಷ್ಟು ಬೇಕಾದರೆ ವರದಕ್ಷಿಣೆಯನ್ನೂ ಕೊಡಲಿಕ್ಕೆ ಅಡ್ಡಿಯಿಲ್ಲ, ಮಹಾಶಯರೆ, ಏಕೆಂದರೆ ಇತ್ತೀಚಿಗೆ ಕಾಲ ಕೆಟ್ಟು ಕಪ್ಪುಬಣ್ಣದ ಹುಡುಗಿಯರಿಗೆ ಮದುವೆಯಾಗೋದೇ ಕಷ್ಟಕ್ಕಿಟ್ಟುಕೊಂಡುಬಿಟ್ಟಿದೆ. ನೀವು ಬಂದು ಹುಡುಗಿಯನ್ನು ನೋಡಿ ಬೇಕಾದರೆ. ಕಪ್ಪೆಂದು ಒಂದು ಊನವೇ ಹೊರತು ಕಣ್ಣು ಮೂಗು ಲಕ್ಷಣವಾಗಿದೆ. ಜಾತಕದ ಪ್ರಕಾರ ಗಜಕೇಸರಿ ಯೋಗವಿದೆ. ಕಾಲಿಟ್ಟ ಮನೆಗೆ ಲಕ್ಷ್ಮಿಯಾಗುತ್ತಾಳೆ.’

ಹುಳಿಯನ್ನವನ್ನು ಉಣ್ಣುತ್ತ ಪಕ್ಕದ ಬ್ರಾಹ್ಮಣ ಹೇಳಿದ.

ಆದರೆ ಅಗ್ರಹಾರದ ಬ್ರಾಹ್ಮಣರಿಗೆ ಹೇಳದಿದ್ದರೆ, ನಾರಣಪ್ಪನ ಶವಸಂಸ್ಕಾರ ಮಾಡದಿದ್ದರೆ ಭೀತಿ ತಪ್ಪಿದ್ದಲ್ಲ. ತಿಳಿಸದೇ ಚಂದ್ರಿಯ ಜೊತೆ ಬದುಕುವ ನಿಶ್ಚಯ ಮಾಡಿದರೆ ಪೂರ್ತಿಯಾದಂತಲ್ಲ. ನಾನೀಗ ಪೂರ್ಣ ನಿಶ್ಚಯಮಾಡಿ ಬಿಡಬೇಕು. ಪರೋಕ್ಷವಾದದ್ದೆಲ್ಲ ಪ್ರತ್ಯಕ್ಷವಾಗಿಬಿಡಬೇಕು. ಕಣ್ಣಿಗೆ ನೆಟ್ಟುಬಿಡಬೇಕು. ಆದರೆ ಹಾಗೂ ಸಂಕಟ, ಹೀಗೂ ಸಂಕಟ : ಮುಚ್ಚಿಟ್ಟುಕೊಂಡರೆ ಬದುಕಿನುದ್ದಕ್ಕೂ ಯಾರ ಕಣ್ಣಿಗೂ ಬಿದ್ದುಬಿಡುವೆನೆಂಬ ಸಂಕಟ; ನನ್ನ ಬ್ರಾಹ್ಮಣ್ಯ ಸೃಷ್ಟಿಯಾದ ಕಣ್ಣಗುಳ ಎದುರು ಸತ್ಯವನ್ನು ಬಿಚ್ಚಿ ತೋರಿಸಿದಲ್ಲಿ ಅವರ ಬದುಕು ಇದರಿಂದ ಪರಿಭ್ರಮಿತವಾಗಬಹುದೆಂಬ ಸಂಕಟ; ಇನ್ನೊಂದು ಬಾಳನ್ನು ನನ್ನ ನಿಶ್ಚಯಕ್ಕೆ ಒಳಪಡಿಸುವ ಅಧಿಕಾರ ನನಗಿದೆಯೇ ಎಂಬ ಸಂಕಟ. ಅಧೈರ್ಯ. ದೇವರೇ, ನಿಶ್ಚಯ ಮಾಡುವ ಜವಾಬ್ದಾರಿಯನ್ನು ತಪ್ಪಿಸಿಬಿಡು. ಕಾಡಿನಲ್ಲಿ ಕತ್ತಲಿನಲ್ಲಿ ಅವಾಕ್ಕಾಗಿ ಆಗಿಬಿಟ್ಟಂತೆ ಈ ನಿಶ್ಚಯವೂ ಆಗಿಬಿಡಲಿ. ಕಣ್ಣು ಮುಚ್ಚಿಬಿಡುವುದರೊಳಗೆ ಹೊಸ ಜನ್ಮ ಬಂದುಬಿಡಲಿ. ನಾರಣಪ್ಪ, ನಿನಗೆ ಈ ಸಂಕಟವಿತ್ತೇ? ಮಹಾಬಲ, ನೀನೂ ಪಟ್ಟೆಯ? ಕೇಳಬೇಕು.

ಸಾರು ಬಡಿಸಿದವನೇ ಮತ್ತೆ ಬುಟ್ಟಿಯಲ್ಲಿ ಲಾಡು ತುಂಬಿ ಬಡಿಸುತ್ತ ಬಂದ. ಪಕ್ಕದ ಬ್ರಾಹ್ಮಣ ಲಾಡುವನ್ನು ಎಲೆಗೆ ಹಾಕಿಸಿಕೊಳ್ಳದೆ ಎಡಗೈಯಲ್ಲಿ ಇಸಕೊಂಡು ಪಕ್ಕದಲ್ಲಿಟ್ಟುಕೊಂಡ. ಮತ್ತೆ ಅವ ತನ್ನೆಲೆಯ ಎದುರು ನಿಂತ. ಎದೆ ಜಗ್ಗೆಂದಿತು.

‘ಅಲ್ಲ, ನನ್ನ ಹಾಳು ಮರೆವಿಗೆ ಏನು ಹೇಳಬೇಕು? ನೀವು ದೂರ್ವಾಸಪುರದ ಪ್ರಾಣೇಶಾಚಾರ್ಯರಲ್ಲವೇ? ತಮ್ಮಂಥವರು ಇಲ್ಲಿ ಬಂದು ಊಟಕ್ಕೆ ಕೂರುವುದೇ? ಸಾಹುಕಾರರ ಮನೆಯಲ್ಲಿ ಚಿರೋಟಿ ಊಟವಿತ್ತು. ದೊಡ್ಡವರಿಗೆಲ್ಲ ಅಲ್ಲೇ ಸಂತರ್ಪಣೆ. ನಿಮ್ಮ ಹಣೆಯ ಮೇಲೆ ಅಂಗಾರ ಅಕ್ಷತೆ ಇಲ್ಲದ್ದರಿಂದ ನನಗೆ ಥಟ್ಟನೆ ಪತ್ತೆಯೇ ಆಗಲಿಲ್ಲ. ನೀವೂ ಹೇಳಲಿಲ್ಲ. ಸಾಹುಕಾರರಿಗೆ ಹೇಳದಿದ್ದರೆ ನನಗೆ ತಕ್ಕ ಶಾಸ್ತಿಯಾಗಿಬಿಡುತ್ತದೆ – ಮಹಾಪಂಡಿತರೊಬ್ಬರಿಗೆ ಕಂದಲೆಯ ಊಟ ಹಾಕಿದ ಅಂತ. ಒಂದು ಕ್ಷಣದಲ್ಲಿ ಬರುವೆ ಇರಿ.’

ಎಂದು ಅವ ಲಾಡಿನ ಬುಟ್ಟಿಯನ್ನಲ್ಲೇ ಇಟ್ಟು ಓಡಿದ. ಪ್ರಾಣೇಶಾಚಾರ್ಯರು ಆಪೋಶನ ತೆಗೆದುಕೊಂಡು ಚಂಗನೆ ಎದ್ದು ಅಲ್ಲಿಂದ ನಡೆದುಬಿಟ್ಟರು. ‘ಸ್ವಾಮಿ, ಸ್ವಾಮಿ, ಇನ್ನೂ ಪಾಯಸ ಬರುವುದಿದೆ’ ಎಂದು ಪಕ್ಕದ ಬ್ರಾಹ್ಮಣ ಕೂಗಿದ. ತಿರುಗಿ ನೋಡದೆ ದೇವಸ್ಥಾನದ ಹೊರಗೆ ಬಂದುಬಿಟ್ಟರು. ತೊಳೆಯದ ಕೈಯಲ್ಲೆ ಓಡಿದರು ಜನರಿಂದ ದೂರ, ದೂರ. ಅಷ್ಟು ದೂರ ಹೋಗುವುದರೊಳಗೆ ಕೇಳಿಸಿತು : ‘ಆಚಾರ್ರೇ… ಆಚಾರ್ರೇ…’ ಪುಟ್ಟನ ಧ್ವನಿ. ಓಡಿ ಬಂದು ಜೊತೆಗೆ ನಿಂತ ಪ್ರಾಣೇಶಾಚಾರ್ಯ ಸರಸರನೆ ಕಾಲು ಹಾಕತೊಡಗಿದರು.

‘ಇದೇನು ಮಾರಾಯರೆ, ಮಾತಿಲ್ಲ, ಕತೆಯಿಲ್ಲ. ಓಡುತ್ತಿದ್ದೀರಿ – ಒಳ್ಳೆ ಒಂದಕ್ಕೊ ಎರಡಕ್ಕೊ ಅವಸರವಾದವರ ಹಾಗೆ’ ಎಂದು ಪುಟ್ಟ ನಕ್ಕ. ಜನರಿಂದ ದೂರವಾದ ಮೇಲೆ ಪ್ರಾಣೇಶಾಚಾರ್ಯರು ನಿಂತರು. ತಮ್ಮ ಎಂಜಲು ಕೈಯನ್ನು ನೋಡಿಕೊಂಡು ಹೇಸಿದರು.

‘ಏನು, ಕೈ ತೊಳೆಯಲಿಕ್ಕೂ ಅವಸರವಾಗಿಬಿಟ್ಟತ, ಮಾರಾಯರೆ, ನನಗೂ ಹಾಗಾಗಿದ್ದುಂಟು. ಬನ್ನಿ, ಕೆರೆಗೆ ಹೋಗುವ.’

ಕರೆಯ ಕಡೆ ನಡೆದದ್ದಾಯಿತು. ದಾರಿಯಲ್ಲಿ ಪುಟ್ಟ ಹೇಳಿದ:

‘ನಾನೊಂದು ನಿಶ್ಚಯಮಾಡಿಬಿಟ್ಟೆ, ಆಚಾರ್ರೆ – ನಿಮ್ಮ ಜೊತೆಗೇ ನಾಳೆ ಬೆಳಿಗ್ಗೆ ಕುಂದಾಪುರಕ್ಕೂ ಬಂದುಬಿಡುವು ಅಂತ. ನಿಮಗೆ ಹೇಳಲಿಲ್ಲ ನಾನು. ನನ್ನ ಹೆಂಡತಿ ಮಕ್ಕಳು ತೌರಿಗೆ ಹೋಗಿ ತಿಂಗಳಾಯಿತು. ಕಾಗದ ಇಲ್ಲ. ಬುದ್ಧಿ ಹೇಳಿ ಕರೆದುಕೊಂಡು ಬರಬೇಕು. ನೀವು ಹಿರಿಯರು ಬ್ರಾಹ್ಮಣರಲ್ಲವೆ? ಒಂದು ಉಪಕಾರ ಮಾಡಿ. ನನ್ನ ಹೆಂಡತಿಗಷ್ಟು ಬುದ್ಧಿವಾದ ಹೇಳಿ. ನಿಮ್ಮ ಮಾತು ಕೇಳಿಯಾಳು. ಒಂದು ದಿನದಲ್ಲೆ ನೀವು ನನ್ನ ಪ್ರಾಣಮಿತ್ರರಾಗಿಬಿಟ್ಟಿರಿ. ಇನ್ನೊಂದು ಮಾತು ಆಚಾರ್ರೆ, ನನ್ನಲ್ಲಿ ಚಾಡಿಛಿದ್ರದ ಸ್ವಭಾವವಿಲ್ಲ; ನೀವು ಪದ್ಮಾವತೀ ಮನೆಯಲ್ಲಿ ಮಲಗಿದ್ದನ್ನ ನಾನು ತಾಯಿಯ ಆಣೆ – ಯಾರಿಗೂ ಹೇಳುವವನಲ್ಲ. ನಾನಲ್ಲಿ ಮಂಗನ ಕುಣಿತ ನೋಡುತ್ತ ನಿಂತಿದ್ದೆ ಮಾರಾಯರೆ, ನೀವು ಓಡೋದು ನೋಡಿ ನಗೆ ಬಂದುಬಿಟ್ಟಿತು. ಊಟ ಮಾಡುತ್ತಿದ್ದಂತೆ ಅವಸರವಾಗುವುದು ಉಂಟಲ್ಲವೆ? ಇರಬಹುದೆಂದು ನಕ್ಕುಬಿಟ್ಟೆ.’

ಪ್ರಾಣೇಶಾಚಾರ್ಯ ಕೆರೆಯಲ್ಲಿಳಿದು ಕೈತೊಳೆದುಕೊಣಡರು. ಮೇಲೆ ಕಟ್ಟೆಯ ಮೇಲೆ ಬೆನ್ನುಹಾಕಿ ನಿಂಟ ಪುಟ್ಟ, ಕೈತೊಳೆದ ಪಕ್ಕದಲ್ಲಿ ಬಂದು ನಿಂತ ಪ್ರಾಣೇಶಾಚಾರ್ಯರಿಗೆ:

‘ಏನು ಇಷ್ಟು ಬೇಗ?’ ಎಂದ.

‘ಒಂದು ವಿಷಯ, ಪುಟ್ಟ.’

ಪ್ರಾಣೇಶಾಚಾರ್ಯರು ಮೇಲಕ್ಕೆ ನೋಡಿದರು : ಬೇಸಗೆಯ ದೀರ್ಘ ಸಂಜೆ. ಪಶ್ಚಿಮದಲ್ಲಿ ಕೆಂಪು ಓಕುಳಿ ಚೆಲ್ಲಿದೆ. ಬೆಳ್ಳಕ್ಕಿಗಳ ಸಾಲು ಸಾಲು ಗೂಡಿನ ದಾರಿ ಹಿಡಿದಿವೆ. ಕೆಳಗೆ ಕೆರೆಯ ಅಂಚಿನಲ್ಲಿ ಬಕ ಕುರುಗುತ್ತಿದೆ. ಇನ್ನೇನು ದೀಪ ಹಚ್ಚುವ ಹೊತ್ತು ಸಮೀಪ. ಅಗ್ರಹಾರದಲ್ಲಿ ದೀಪ ಹಚ್ಚಿ ಎಷ್ಟು ದಿನವಾಯಿತೊ. ಸಂಜೆ ಕೊಟ್ಟಿಗೆಗೆ ಬಂದ ದನಕರುಗಳನ್ನು ಕಟ್ಟಿ ಕರೆಸಿ, ದೇವರಿಗೆ ನೈವೇದ್ಯ ಮಾಡಿ ಎಷ್ಟು ದಿನವಾಯಿತೊ. ಕನಸಿನಲ್ಲಿ ಕರಗುತ್ತಿರುವ ಲೋಕದಂತೆ ಪಶ್ಚಿಮಘಟ್ಟದ ದಿಗಂತದ ಸ್ಪಷ್ಟರೂಪಗಳು ಮಸುಕಾಗುತ್ತಿವೆ. ಈಗಿನ ರಂಗು ಇನ್ನೊಂದು ಕ್ಷಣಕ್ಕೆ ಇಲ್ಲದೆ ಬಾನು ಬೆತ್ತಲಾಗುತ್ತಿದೆ. ಅಮಾವಾಸ್ಯ ಕಳೆದಿರಬೇಕು – ಇನ್ನೆಷ್ಟು ಹೊತ್ತಿನಲ್ಲಿ ಚಂದ್ರನ ಗೆರ ಬೆಟ್ಟಗುಡ್ಡಗಳ ನೆತ್ತಿಯ ಮೇಲೆ ಅಭಿಷೇಕಕ್ಕೆ ಬಗ್ಗಿಸಿದ ಬೆಳ್ಳಿಯ ಬಟ್ಟಲಿನ ಅಂಚಿನಂತೆ ಕಾಣುತ್ತೆ. ಬೆಟ್ಟಗಳ ಸಂದಿಯ ಕಣಿವೆಗಳಲ್ಲಿ ಮೌನ ಗಾಢವಾಗಿ ಕವಿದುಬಿಡುತ್ತದೆ. ರಾತ್ರೆಯ ಅರ್ಚನೆ ಮುಗಿಯುತ್ತಿದ್ದಂತೆ, ಹತ್ತಿಸಿದ ದೊಂದಿಗಳು ಮಂಕಾಗಿ ಜಾತ್ರೆಯ ಗಲಿಬಿಲಿ ಕಡಿಮೆಯಾಗುತ್ತದೆ. ಮತ್ತೆ ಮೇಳದವರ ಚಂಡೆಯ ಧ್ವನಿ ಉಕ್ಕೇರಿ ಹರಡುತ್ತದೆ. ಈಗ ನಡೆದುಬಿಟ್ಟರೆ. ಅರ್ಧರಾತ್ರೆಯ ಹೊತ್ತಿಗೆ ಅಗ್ರಹಾರ ಸೇರುತ್ತೇನೆ – ಈ ಲೋಕದಿಂದ ದೂರನಾಗಿ. ಭಯಗ್ರಸ್ತ ಬ್ರಾಹ್ಮಣರ ದೃಷ್ಟಿಯಲ್ಲಿ ಹಸಿಹಸಿ ಪ್ರಾಣದಂತೆ ತೊರೆದು ನಿಂತು, ಅವರ ನಡುವಿನ ಹಳಬ ನಡುರಾತ್ರೆಯಲ್ಲಿ ಹೊಸಬನಾಗುತ್ತೇನೆ. ಪ್ರಾಯಶಃ, ಅವನ ಶವದ ಸುತ್ತ ಬೆಂಕಿ ನೆಗೆದಾಡಿದರೆ ಒಂದು ಸಮಾಧಾನ. ಹೇಳುವಾಗ ಪಶ್ಚಾತ್ತಾಪದ ಸೋಂಕಿರಕೂಡದು, ತಾನು ಪಾಪಿಯಾಗಿ ಬೆಟ್ಟೆನೆಂಬ ದುಃಖವಿರಕೂಡದು. ಇಲ್ಲವೇ ದ್ವಂದ್ವ ಕಳೆಯದು. ಮಹಾಬಲನನ್ನು ನೋಡಬೇಕು. ನಮ್ಮ ನಿಶ್ಚಯದಲ್ಲಿ ನಾವು ಗಳಿಸಿಕೊಳ್ಳುವ ಸ್ವರೂಪ ಮಾತ್ರ ಖಾತ್ರಿಯಾಗಿ ನಮ್ಮದೆಂದು ಅವನಿಗೆ ಹೇಳಬೇಕು ಎಂಬುದಾದರೂ ನಿಜವೇ? ಹಾಗಾದರೆ ನಿನಗೇನೂ ಈಗ ದೇವರ ಹಂಬಲವೇ ಇಲ್ಲವೇ ಎಂದು ಕೇಳಬೇಕು. ‘ಲಲಿತ ಲವಂಗ ಲತಾಪರಿಶೀಲನ ಕೋಮಲ ಮಲಯ ಸಮೀರೇ…’ ಪ್ರಾಣೇಶಾಚಾರ್ಯರಿಗೆ ಅತ್ಯಂತ ವ್ಯಾಕುಲವಾಗಿಬಿಟ್ಟಿತು. ಪ್ರೇಮ ಬಂದುಬಿಟ್ಟಿತು. ಪುಟ್ಟನ ಹೆಗಲಿನ ಮೇಲೆ ಪ್ರಥಮ ಬಾರಿಗೆ ಕೈಹಾಕಿದರು. ಬರಸೆಲೆದರು. ಅವನ ಭುಜವನ್ನು ತಟ್ಟುತ್ತ ‘ಏನೋ ಹೇಳಹೊರಟಿದ್ದೇನಲ್ಲ’ ಎಂದರು.

‘ಅಲ್ಲ ಮಾರಾಯರೆ, ದಾರಿಯಲ್ಲಿ ನೀವು ಸಿಕ್ಕಾಗ ನಿಮ್ಮ ಮಾತಿನ ಬಿಗಿ ನೋಡಿ, ಇವರೇನು ನನ್ನಂಥವನ ಜೊತೆ ಸ್ನೇಹ ಮಾಡುವವರಲ್ಲವೆಂದುಕೊಂಡುಬಿಟ್ಟಿದ್ದೆ’ ಎಂದು ಪುಟ್ಟ ಆಚಾರ್ಯರ ಹೆಗಲ ಮೇಲೆ ಕೈಹಾಕಿದರೆಂದು ಹರ್ಷಿತನಾಗಿ ಹೇಳಿದ.

‘ನೋಡು ಪುಟ್ಟ, ನಾನು ಯಾಕೆ ಅವಸರದಲ್ಲಿ ಊಟ ಬಿಟ್ಟು ಬಂದೆ ನಿನಗೆ ಗೊತ್ತ? ಈ ಕ್ಷಣವೇ ನಾನು ದೂರ್ವಾಸಪುರಕ್ಕೆ ಹೋಗಿಬಿಡಬೇಕು.’

‘ಓಹೊ, ಅದೆಲ್ಲಿ ಸಾಧ್ಯ, ಮಾರಾಯರೆ? ನಿಮ್ಮ ಪದ್ಮಾವತಿ ಅಲ್ಲಿ ಸುಪ್ಪತ್ತಿಗೆ ಸಿದ್ಧಪಡಿಸಿ ಊದುಬತ್ತಿ ಹಚ್ಚಿ ಹೂಮುಡಿದು ಕಾದಿರುತ್ತಾಳೆ. ನೀವು ಜೊತೆಯಲ್ಲಿಲ್ಲದೆ ಅವಳಿಗೆ ಹೇಗೆ ಮುಖ ತೋರಿಸಲಿ? ಎಷ್ಟೇ ನಿರ್ವಾಹವಿರಲಿ ಅವಸರವಿರಲಿ, ಈ ರಾತ್ರಿ ತಂಗಿದ್ದು ಬೆಳಗ್ಗೆಯೇ ನೀವು ಹೋಗೋದು. ಈಗ ಹೊರಟರೆ ನನ್ನಾಣೆ’

ಎಂದು ಪುಟ್ಟ ಪ್ರಾಣೇಶಾಚಾರ್ಯರನ್ನು ಜಗ್ಗಿದ. ಪ್ರಾಣೇಶಾಚಾರ್ಯರಿಗೆ ಭಯವಾಯಿತು. ತನ್ನ ನಿಶ್ಚಯದಿಂದ ತಾನು ಕರಗಿಬಿಡಬಹುದೆಂದು ಅನುಮಾನವಾಯಿತು. ಈ ಪುಟ್ಟನಿಂದ ಪಾರಾಗಬೇಕು.

‘ಇಲ್ಲ, ಪುಟ್ಟ. ಖಂಡಿತ ಸಾಧ್ಯವಿಲ್ಲ. ನಿಜ ಹೇಳಲೆ? ನಿನ್ನ ಮನಸ್ಸಿಗೆ ಯಾಕೆ ರಗಳೆ ಹಚ್ಚುವುದೆಂದು ಹೇಳಲಿಲ್ಲ’. ಏನು ಹೇಳಲೆಂದು ಕ್ಷಣ ಚಿಂತಿಸಿ ಒಂದು ಸುಳ್ಳು ಹೇಳಿಬಿಡುವುದೇ ಕ್ಷೇಮವೆಂದು ಅಂದರು : ‘ನನ್ನ ಸೋದರ ದೂರ್ವಾಸಪುರದಲ್ಲಿ ಸಕತ್ ಕಾಹಿಲೆಯಾಗಿ ಮಲಗಿದ್ದಾನೇಂತ ನಾನು ಊಟಕ್ಕೆ ಕೂತಿದ್ದಾಗ ತಿಳಿಯಿತು. ಅವ ಈಗಲೋ ಇನ್ನೊಂದು ಘಳಿಗೆಯೋ ಎಂದಿರುವಾಗ ನಾನು ಹೇಗೆ…’

ಪುಟ್ಟ ನಿಟ್ಟುಸಿರುಟ್ಟ ನಿರಾಶೆಯಿಂದ.

‘ಸರಿ ಹಾಗಾದರೆ’ ಎಂದ.

ಪ್ರಾಣೇಶಾಚಾರ್ಯರು ಹೊರಡಲುದ್ಯುಕ್ತರಾಗಿ,

‘ಇನ್ನೊಮ್ಮೆ ಎಂದು ನೋಡೋದು ನಿನ್ನ? ಕುಂದಾಪುರಕ್ಕೆ ಹೋಗುವ ಮಾರ್ಗ ಪದ್ಮಾವತಿಯನ್ನು ನೋಡುವೆನೆಂದು ಹೇಳು. ನಾನು ಹೊರಡಲೆ ಇನ್ನು?’ ಎಂದರು. ಪುಟ್ಟ ಚಿಂತಿಸುತ್ತ ನಿಂತವನು,

‘ನಿಮ್ಮೊಬ್ಬರನ್ನೇ ಈ ಕತ್ತಲಿನಲ್ಲಿ ಕಾಡಿನ ಮಾರ್ಗ ಹೇಗೆ ಕಳಿಸಲಿ? ನಾನೂ ಬಂದುಬಿಡುವೆ’ ಎಂದ.

ಈಗ ಪ್ರಾಣೇಶಾಚಾರ್ಯರು ಅಪ್ರತಿಭರಾಗಿಬಿಟ್ಟರು. ಯಾವ ಯುಕ್ತಿಯಿಂದಲು ಇನ್ನು ಇವನನ್ನು ತಾವು ಅಟ್ಟುವಂತಿಲ್ಲ, ನನ್ನಿಂದ ಸುಮ್ಮನೇ ತೊಂದರೆ, ಬೇಡವೆಂದರು. ಪುಟ್ಟ ಜಗ್ಗಲಿಲ್ಲ.

‘ತೊಂದರೆಯೂ ಇಲ್ಲ. ತಾಪತ್ರಯಾನೂ ಇಲ್ಲ. ದೂರ್ವಾಸಪುರದಲ್ಲಿ ನನ್ನದೂ ಒಂದು ಕೆಲಸವಿದೆ. ಪಾರಿಜಾತಪುರದಲ್ಲಿ ನನ್ನ ಜ್ಞಾತಿಗಳಿದ್ದಾರೆ. ನಾರಣಪ್ಪನವರ ಪರಿಚಯ ನಿಮಗಿರಲಿಕ್ಕೆ ಸಾಕು. ಪಾರಿಜಾತಪುರಕ್ಕೊಮ್ಮೆ ಹೋದಾಗ ನಿಮ್ಮ ಪರಿಚಯವಾದ ಹಾಗೇ ಅವರ ಪರಿಚಯವಾಯಿತು. ಅಲ್ಲ ಮಾರಾಯರೆ, ಒಳ್ಳೇದಾಯಿತು ನೆನಪಾದ್ದು. ಊರಿಗೇ ಗೊತ್ತಲ್ಲ ಹೇಗೆ ನಾರಣಪ್ಪನವರ ಆಸ್ತಿ ಪೋಲಾಯ್ತು ಅಂತ. ಸೀರೆಯುಟ್ಟದೊಂದು ಸುಳಿದರೆ ಬಾಯಿಬಿಡುವ ಪೈಕಿ ಅವರು. ನಿಮ್ಮಲ್ಲೆ ಇರಲಿ ಮಾರಾಯರೆ. ಅವರೇನಾದರೂ ನಿಮಗೆ ಪರಿಚಯವಿದ್ದಲ್ಲಿ ದಯಮಾಡಿ ನಿಮ್ಮನ್ನ ಪದ್ಮಾವತಿ ಕರೆದ ವಿಷಯ ತಿಳಿಸಬೇಡಿ. ನಿಮ್ಮ ಹತ್ತಿರ ಯಾಕೆ ಮುಚ್ಚುಮರೆ? ನಾರಣಪ್ಪನವರು ಪರಿಚಯವಾದ್ದೇ ನನಗೆ ಗಂಟುಬಿದ್ದುಬಿಟ್ಟರು : ಪದ್ಮಾವತೀನ್ನ ಗುರುತುಮಾಡಿಸಿಕೊಡು ಅಂತ. ನಾನು ಹಾಗೆಲ್ಲ ತೀರ ಹಡೆಯಲ್ಲ ನೋಡಿ. ಆದರೂ ಬ್ರಾಹ್ಮಣನೊಬ್ಬ ಗಂಟುಬಿದ್ದಮೇಲೆ ಏನು ಮಾಡಲಿಕ್ಕೆ ಶಕ್ಯ? ಆದರೆ ಪದ್ಮಾವತಿಗೆ ಅವರ ಮರ್ಜಿ ಸರಿಬೀಳಲಿಲ್ಲ, ಶುದ್ಧ ಕುಡುಕ ಅವರೂಂತ ‘ಇನ್ನು ಮುಂದೆ ಇಲ್ಲಿಗವರನ್ನು ಕರಕೊಂಡು ಬರಬೇಡ’ ಎಂದುಬಿಟ್ಟಳು. ಎಲ್ಲ ನಿಮ್ಮಲ್ಲೆ ಇರಲಿ ಮಾರಾಯರೆ. ಏನೋ ಹೇಳಹೋಗಿ ಮಾತು ಎತ್ತಲೊ ಹರಿದುಬಿಟ್ಟಿತು. ನಿಮಗೆ ಹೇಳಿದೆನಲ್ಲ. ತೀರ್ಥಹಳ್ಳಿಯ ಆಚೆ ನಮ್ಮ ಗ್ರಾಮ ಅಂತ. ಅಲ್ಲಿ ನಾರಣಪ್ಪನವರದ್ದೊಂದು ತೋಟವಿದೆ. ಹಾಳುಬಿದ್ದು ನೆಲಸಮವಾಗಿದೆ. ಅವರಿಗೆ ಅವರ ಗೇಣಿಯ ಒಂದಡಕೆ ಸೇರದೆ ವರ್ಷಗಳಾಗಿ ಹೋದವು. ಪರಿಚಯವಲ್ಲವೆ. ನನಗೆ ಇಲ್ಲವೆನ್ನುತ್ತಾರ, ಕೇಳಿ ನೋಡುವ ಎಂದ ಒಂದು ಆಸೆ. ತೋಟವನ್ನು ಗುತ್ತಿಗೆಗೆ ಕೊಡಿ. ಊರ್ಜಿತಗೊಳಿಸಿ ನಿಮಗೂ ಒಂದು ಗೇಣಿಯ ದಾರಿ ಮಾಡಿ ಕೊಡುತ್ತೇನೆ, ಅಂತ. ಅದಕ್ಕೆ ಅಂದೆ – ನಿಮಗೂ ಕತ್ತಲಲ್ಲಿ ದಾರಿಗೊಂದು ಜನವಾಯಿತು. ನನಗೂ ಕೆಲಸವಾದ ಹಾಗೆ ಆಯಿತು ಅಂತ.’

ಪ್ರಾಣೇಶಾಚಾರ್ಯರು ಒದ್ದಾಡಿಕೊಳ್ಳುತ್ತ ಪುಟ್ಟನ ಮಾತನ್ನು ಕೇಳಿಸಿಕೊಂಡರು. ನಾರಣಪ್ಪ ಸತ್ತನೆಂದು ಹೇಳಲೆ? ನನ್ನ ನಿಜವಾದ ಸಮಸ್ಯೆಯನ್ನು ತಿಳಿಸಿಬಿಡಲೆ? ಆದರೆ ಇಷ್ಟೊಂದು ಸರಳ ಮನಸ್ಸಿನಲ್ಲಿ ದೊಡ್ಡ ಗೊಂದಲವೆಬ್ಬಿಸುವ ಮನಸ್ಸಾಗಲಿಲ್ಲ. ಒಂದು ವೇಳೆ ಅವನೇನಾದರೂ ಜೊತೆಗೆ ನಡದೇಬಿಟ್ಟರೆ ಹೇಳದೇ ಇರುವುದು ಅಶಕ್ಯ – ಹೀಗೆ ಯೋಚಿಸುತ್ತಿದ್ದಂತೆ ಪ್ರಾಣೇಶಾಚಾರ್ಯರಿಗೆ ಥಟ್ಟನೆ ಪುಟ್ಟ ತನ್ನ ಜೊತೆಗಿದ್ದರೆ ವಾಸಿ ಎನ್ನಿಸಿತು. ಒಂಟಿಯಾಗಿ ಹೇಗೆ ಆ ಬ್ರಾಹ್ಮಣರೆನ್ನೆಲ್ಲ ಎದುರಿಸಲಿ? ಮೊದಲು, ಪರಮಾಪ್ತನಾಗಿಬಿಟ್ಟ ಪುಟ್ಟನಿಗೆ ಹೇಳಿನೋಡುವುದು. ಅವನ ಕಣ್ಣಲ್ಲಿ ತಾನೇನಾಗುತ್ತೇನೆಂದು ತಿಳಿಯುವುದು – ಅದೂ ಒಂದು ಒಳ್ಳೆಯ ಉಪಾಯ. ಈಗ ಬಾನು ಪೂರ್ಣ ಬೆತ್ತಲಾಗಿಬಿಟ್ಟಿತು. ದೇವಸ್ಥಾನದಲ್ಲಿ ಶಂಖ ಜಾಗಟೆಗಳನ್ನು ಬಾರಿಸಿದ ಶಬ್ದ. ಬೇಗ ಹೊಗಬೇಕು. ಇಲ್ಲೆ ನಿಂತಿದ್ದರೆ ತನ್ನನ್ನು ಪತ್ತೆಮಾಡಿದಾತ ಹುಡುಕಿಕೊಂಡು ಬಂದುಬಿಟ್ಟಾನು. ‘ಹೋಗುವ ಹಾಗಾದರೆ’ ಎಂದರು.

ಆ ವೇಳೆಗೆ ಸರಿಯಾಗಿ ಅವರ ಮಾರ್ಗವಾಗಿ ಒಂದು ಕಮಾನುಗಾಡಿ ಬಂದಿತು. ‘ಸ್ವಲ್ಪ ನಿಲ್ಲಿರಿ’ ಎಂದು ಪುಟ್ಟ ಆಚಾರ್ಯರನ್ನು ನಿಲ್ಲಿಸಿ. ಕೈ ಅಡ್ಡಮಾಡಿ ಗಾಡಿಯನ್ನು ತಡೆದ. ಗಾಡಿಯಿಂದೊಬ್ಬರು ಜರಿಶಲ್ಲೆ ಹೊದ್ದ ಬ್ರಾಹ್ಮಣರು ತಲೆಹಾಕಿ ‘ಏನು?’ ಅಂದರು.

‘ನಿಮ್ಮ ಗಾಡಿ ಏನಾದಾರೂ ಆಗುಂಬೆ ಮಾರ್ಗವಾಗಿ ಹೋಗುವದೋ?’ ಎಂದು ಪುಟ್ಟ ಕೇಳಿದ.

‘ಹಾ’ ಎಂದರು ಗಾಡಿಯೊಳಗಿಂದ ಶಲ್ಲೆ ಹೊದ್ದವರು.

‘ಇಬ್ಬರಿಗೆ ಜಾಗವುಂಟೋ? ದೂರ್ವಾಸಪುರದ ಮಾರ್ಗ ಹೊರಟವರು ನಾವು’ ಎಂದ ಪುಟ್ಟ.

‘ಒಬ್ಬರಿಗೆ ಮಾತ್ರ ಜಾಗವಿದೆಯಲ್ಲ.’

ಪುಟ್ಟ ಪ್ರಾಣೇಶಾಚಾರ್ಯರ ಕೈಹಿಡಿದು, ‘ನೀವು ಹೋಗಿ, ಆಚಾರ್ಯರೆ’ ಎಂದು ‘ಬೇಡ, ಇಬ್ಬರೂ ಒಟ್ಟಿಗೆ ನಡೆದು ಹೊಗುವ’ ಎಂದರು ಆಚಾರ್ಯರು. ‘ಛೆ ಛೆ, ಅಷ್ಟುದೂರದ ನಡೆದು ದಣಿಯುವುದು ಬೇಡ. ನಾಳೆ ಬಂದು ನೊಡುತ್ತೇನೆ’ ಎಂದ ಪುಟ್ಟ. ಶಲ್ಲೆ ಹೊದ್ದವರು ಅವಸರ ಮಾಡಿದರು : ‘ಏನು ಹಾಗಾದರೆ? ಬರುವವರೊ? ನಾವು ದೂರ್ವಾಸಪುರದ ಹತ್ತಿರ ಒಂದೆರಡು ಮೈಲಿಯಾಚೆ ತಿರುಗಿಬಿಡುತ್ತೇವೆ. ಒಬ್ಬರು ಬೇಕಾದರೆ ಬನ್ನಿ. ಬೇಗ ಬನ್ನಿ.’

ಪುಟ್ಟ ಪ್ರಾಣೇಶಾಚಾರ್ಯರನ್ನು ಒತ್ತಾಯಪೂರ್ವಕ ತಳ್ಳಿದ. ಪ್ರಾಣೇಶಾಚಾರ್ಯರು ನಿರ್ವಾಹವಿಲ್ಲದೆ ಗಾಡಿಯನ್ನು ಹತ್ತಿ ಒಳಕ್ಕೆ ಕೂತರು. ಗಾಡಿ ಹೊರಟಿತು. ‘ನಾಳೆ ನಿಮ್ಮನ್ನು ನೋಡುತ್ತೇನೆ’ ಎಂದ ಪುಟ್ಟ. ‘ಆಗಲಿ’ ಎಂದರು ಪ್ರಾಣೇಶಾಚಾರ್ಯರು.

ಆಯಿತು. ಇನ್ನು ನಾಲ್ಕೈದು ಗಂಟೆಗಳ ಪ್ರಯಾಣ. ಮತ್ತೆ?

ಈಗ ಆಕಾಶದಲ್ಲಿ ನಕ್ಷತ್ರಗಳು. ಗೆರೆ ಚಂದ್ರ ದಿಟ್ಟಗೆ ನಿಂತ ಸಪ್ತರ್ಷಿ ಮಂಡಳ. ಇದ್ದಕ್ಕಿದ್ದಂತೆ ಚಂಡೆಯ ಶಬ್ದ. ಅಲ್ಲೊಂದು ಇಲ್ಲೊಂದು ಕೊಳ್ಳಿಯ ಬೆಂಕಿ. ಗುಡ್ಡ ಹತ್ತುವ ಎತ್ತಿನ ಉಸಿರು. ಕೊರಳಿನ ಗೆಜ್ಜೆ. ನಾಲ್ಕೈದು ಗಂಟೆಗಳ ಪ್ರಯಾಣ. ಮತ್ತೆ?

ಪ್ರಾಣೇಶಾಚಾರ್ಯರು ನಿರೀಕ್ಷೆಯಲ್ಲಿ, ಆತಂಕದಲ್ಲಿ ಕಾದರು.

ಬರ್ಮಿಂಗಂ
ಏಪ್ರಿಲ್ ೨೮, ೧೯೬೫