ಕಾವ್ಯವನ್ನು ಒಂದು ಕನ್ನಡಿಯಂತೆಯೂ ಅಥವಾ ದೀಪದಂತೆಯೂ ಗ್ರಹಿಸಬಹುದೆಂಬ ಒಂದು ಮಾತಿದೆ. ಅದು ಒಂದು ಕನ್ನಡಿಯಾದಲ್ಲಿ ನಾವು ಪ್ರಜ್ಞಾಪೂರ್ವಕವಾಗಿ ಗ್ರಹಿಸದೆ ಇರುವುದನ್ನು ಕೆಲವೊಮ್ಮೆ ಗುಮಾನಿಯಲ್ಲಿ ಮಾತ್ರ ತಿಳಿದಿರುವುದನ್ನು ನಮಗೆ ಎದುರುಗೊಳಿಸುವ ಕನ್ನಡಿ ಅದಾಗುತ್ತದೆ.

ಕಾವ್ಯ ಎಂದರೆ ನನ್ನ ಅರ್ಥದಲ್ಲಿ ಎಲ್ಲಾ ಬಗೆಯ ಸೂಕ್ಷ್ಮ ಗ್ರಹಿಕೆಯ ಸಾಹಿತ್ಯ. ನಾನು ಬೆಳೆಯುತ್ತಿದ್ದ ಕಾಲದಲ್ಲಿ ಅಡಿಗರ ಕಾವ್ಯ ನನಗೆ ಈ ರೀತಿಯಲ್ಲಿ ಕನ್ನಡಿಯಾಯಿತು. ನನ್ನ ಗ್ರಹಿಕೆಗಳನ್ನು ಚುರುಕುಗೊಳಿಸಿದ ಅಡಿಗರ ಬಗ್ಗೆ ವೈಯಕ್ತಿಕವಾಗಿ ಕೆಲವು ಮಾತುಗಳನ್ನಿಲ್ಲಿ ನಾನು ಹೇಳಬೇಕು.

ಅವರನ್ನು ನೋಡಲು ನನ್ನನ್ನು ಮೊದಲು ಕರೆದುಕೊಂಡು ಹೋದದ್ದು ಗೆಳೆಯ ಬಿಳಿಗಿರಿ. ಮೈಸೂರಿನಲ್ಲಿ ತುಂಬಾ ಕೃತಕವಾಗಿ ಕಾಣುತ್ತಿದ್ದ ಸಾಹಿತಿಗಳ ನಡುವೆ ಬಿಳಿಗಿರಿ ಒಬ್ಬ. ಋಷಿಯಾದ ಪುಂಡನಂತೆ ಓಡಾಡಿಕೊಂಡಿದ್ದರು. ಆದರೆ ಆಳವಾದ ಅರ್ಥದಲ್ಲಿ ಬಿಳಿಗಿರಿ ಭಾವುಕರೇ ಆಗಿದ್ದರು. ನಾನು “ಇಂಟರ್ ಮೀಡಿಯಟ್‌” ಓದುತ್ತಿದ್ದಾಗ ಶಿವಮೊಗ್ಗದಲ್ಲಿ ನನಗೆ ಪು. ತಿ. ನ. ಮತ್ತು ಅಡಿಗರ ಕಾವ್ಯದ ಹುಚ್ಚನ್ನು ರಾಯ್‌ವಾದದಲ್ಲಿ ಇರುವ ಕ್ರಾಂತಿಯ ರಾಜಕೀಯದ ಬಗೆಗಿನ ಅನುಮಾನಗಳನ್ನು ಬೆಳೆಯುವಂತೆ ಮಾಡಿದವರು ಬಿಳಿಗಿರಿ. ಶಾರದಾ ವಿಲಾಸ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದ ಅಡಿಗರು ಆಗ ತಾವು ಬರೆಯುತ್ತಿದ್ದ ಪದ್ಯಗಳನ್ನು ಮೊದಲ ಭೇಟಿಯಲ್ಲೇ ನಮಗೆ ಓದಿಹೇಳಿ ಅನಂತರ ಬಲ್ಲಾಳ್‌ ಹೋಟೆಲ್ಲಿಗೆ ಕರೆದುಕೊಂಡು ಒಂದು ಕಾಫಿ ಕುಡಿಸಿದ್ದರೆಂದು ನೆನಪು. ತನ್ನಲ್ಲಿನ್ನೂ ಉಳಿದ ಹಸಿತನ ಮತ್ತು ಅನುಮಾನಗಳ ಬಗ್ಗೆ ಬರೆಯುತ್ತಲಿದ್ದ ಅಡಿಗರು ಮೈಸೂರಿನ ಇತರ ಸಾಹಿತಿಗಳಿಗಿಂತ ಬಹಳ ಭಿನ್ನವಾಗಿ ನಮಗೆ ಕಂಡಿದ್ದರು. ತಾವೆಲ್ಲಾ ಅರವಿಂದರ ಮರಿಗಳು ಎಂದು ತಿಳಿದವರಂತೆ ಮೈಸೂರಿನ ನವೋದಯ ಪಂಥದವರು ನಮಗೆ ಕಾಣುತ್ತಿದ್ದರು. ತಾನು ಕವಿಯಾದ್ದರಿಂದ ಸಾಮಾನ್ಯ ಮನುಷ್ಯನಲ್ಲ ಎಂದು ಅವರ ಭಾವನೆ ಇದ್ದಿರಬಹುದು. ಆದ್ದರಿಂದ ಬೇಂದ್ರೆ ಹಾಗೆ ಮೈಮರೆತು ಇರುವುದು, ಕುವೆಂಪುವಿನಂಥೆ ನಡುವೆ ಬೈತಲೆ ತೆಗೆಯುವುದು ಕಣ್ಣನ್ನು ಮೇಲಕ್ಕೆತ್ತಿ ನಡೆಯುವುದು ಎಳೆಪ್ರಾಯದ ನಮಗೆ ಹಾಸ್ಯದ ವಿಷಯವಾಗಿತ್ತು. ನಮ್ಮ ನಮ್ಮ ನಡುವೆ ಈ ಕವಿಗಳನ್ನು ನಾವು “ಆಕಾಶರಾಯರು” ಎಂದು ಕರೆಯುತ್ತಿದ್ದೆವು. ಕಡ ಪಡೆದ ಅನುಭಾವದಲ್ಲಿ ಮೆರೆಯುತ್ತಿದ್ದ ಇಂಥವರ ನಡುವೆ ಅಡಿಗರು “ಮಣ್ಣಿನವಾಸನೆ”ಯ ವಿಷಯ ಮಾತನಾಡಿದ್ದು. ಈಗ ನಾನು ನವೋದಯದ ಬಗ್ಗೆ ಉತ್ಪ್ರೇಕ್ಷಿಸಿ ಮಾತನಾಡುತ್ತಿರಬಹುದೆಂದು ನನಗೆ ಗೊತ್ತಿದೆ. ನಮ್ಮ ನಡುವಿನ ಕವಿಗಳಿಗೆ ಆದರ್ಶಪ್ರಾಯರಾದ ಕುವೆಂಪುರವರೇ “ಮಲೆಗಳಲ್ಲಿ ಮದುವೆಗಳು” ನಂತಹ ಪ್ರಾಣಶಕ್ತಿಯನ್ನು ಪಡೆದ ಕಾದಂಬರಿಯನ್ನು ಬರೆದವರು. ಬೇಂದ್ರೆಯ ಕಾವ್ಯದ ಜೀವಾಳ ಇರುವುದು ಅನುರಕ್ತಿಯಲ್ಲಿ ಮತ್ತು ರತಿಯಲ್ಲಿ. ಪು. ತಿ. ನ. ಅವರು ಯಾವತ್ತೂ ಪ್ರೇಮ ಮತ್ತು ಸೌಂದರ್ಯದ ಶ್ರದ್ಧೆಯುಳ್ಳವರು. ಆದರೆ ಎಲ್ಲಾ ಹಿಂಬಾಲಕರಂತೆ ಈ ಲೇಖಕರ ಹಿಂಬಾಲಕರೂ ಕೂಡಾ ತಮ್ಮ ಗುರುಗಳಲ್ಲಿ ಹೊರಗೆ ಕಾಣುವಂತೆ ಸುಲಭವಾಗಿ ಅನುಕರಿಸಬಲ್ಲದ್ದನ್ನು ಮಾತ್ರ ಅಂಗೀಕರಿಸಿದ್ದರು. ಕ್ರಮೇಣ ಕಾಲ ಬದಲಾಯಿತು. ನಾವು ತಮಾಷೆಮಾಡುತ್ತಿದ್ದ ಲೇಖಕರೂ ಕೂಡಾ ಬದಲಾದರು.

ಈ ಸಂದರ್ಭದಲ್ಲಿ ನನ್ನ ಮನಸ್ಸು ಕೂಡಾ ಅಷ್ಟು ತಿಳಿಯಾಗಿರಲಿಲ್ಲ. ಧಾರ್ಮಿಕವಾದ ಅನುಭವದಲ್ಲಿ ನನಗೆ ಸಂಶಯವಿದ್ದರೂ ಶೈಲಿಯ ಕ್ರಾಂತಿಕಾರಕವಾದ ರಾಜಕೀಯ ಆಯಾಮವನ್ನು ಪಡೆದ ಅನುಭಾವವನ್ನು ನಾನು ಬಹಳ ಮೆಚ್ಚಿಕೊಂಡಿದ್ದೆ. ಆದ್ದರಿಂದ ಅಡಿಗರ ಕಾವ್ಯ ನನಗೆ ಮೊದಮೊದಲು  ಒರಟಾದ್ದು ಎನ್ನಿಸಿತು. ಆಗ ನನಗೆ ದಿನಚರಿಯನ್ನು ಬರೆವ ಪರಿಪಾಠವಿತ್ತು. ಅವುಗಳಲ್ಲಿ ಅನೇಕ ಕಡೆ ಅಡಿಗರ ಬಗ್ಗೆ ನನಗಿದ್ದ ಆಕರ್ಷಣೆಯನ್ನು ಮತ್ತು ಅನುಮಾನಗಳನ್ನು ಬರೆದುಕೊಂಡಿದ್ದೇನೆ.

ಅಡಿಗರ ಕಾವ್ಯದ ಜೊತೆಗಿನ ನಮ್ಮ ಸಂಬಂಧಕ್ಕೂ ಆಗಿನ ಕಾಲದ ರಾಜಕೀಯ ಉದ್ಯಮಗಳಿಗೂ ಬಹಳ ಹತ್ತಿರದ ಸಂಬಂಧವಿದೆ. ನೆಹರೂ ಆದರ್ಶವಾದದಲ್ಲಿ ನಮಗೆ ನಂಬಿಕೆ ಕಡಿಮೆಯಾದಂತೆ ಅಡಿಗರ ಕಾವ್ಯ ಹೆಚ್ಚು ಹಿಡಿಸುತ್ತಾ ಹೋಯಿತು. ಸ್ಟಾಲಿನ್‌ನ ಬಗ್ಗೆ ನಿಜ ತಿಳಿಯುತ್ತಿದ್ದಂತೆಯೇ ಅಡಿಗರ ಆಕ್ರೋಶಪೂರಿತವಾದ ಕಮ್ಯುನಿಸ್ಟ್‌ ವಿರೋಧ ಪ್ರಿಯವಾಗತೊಡಗಿತು. ಆದರೂ  “ಗೊಂದಲಪುರ”ದಂತಹ ಕವನ ಮಾವೋ ರೀತಿಯ ನೈಜವೂ ಅವಶ್ಯವೂ ಆದ ಕ್ರಾಂತಿಕಾರತೆಯನ್ನು ಅಲ್ಲಗಳೆಯುತ್ತದೆಂಬ ಅನುಮಾನ ಬಹಳ ಕಾಲದವರೆಗೆ ನನಗೆ ಇತ್ತು. ಆದರೆ ಈ ನಮ್ಮ ಕಾಲ ಹೇಗಿದೆಯೆಂದರೆ ಅಂಥ ಭಾವನೆ ಕೂಡಾ ಈಗ ಉಳಿಯದಂತೆ ನಮ್ಮ ಕಣ್ಣೆದುರೇ ಎಲ್ಲಾ ಬದಲಾಗಿಬಿಟ್ಟಿದೆ. ಆದರೆ ಈವತ್ತಿಗೂ ಅಡಿಗರ ರೀತಿಯ ಮನಸ್ಸಿನ ತೀವ್ರತೆಯ ಬಗ್ಗೆ ಒಂದು ಅನುಮಾನ ಮಾತ್ರ ನನಗೆ ಉಳಿದೇ ಇದೆ. ಕಮ್ಯುನಿಸ್ಟರನ್ನು ವಿರೋಧಿಸುವ ಮನಸ್ಸು ಕೆಲವೊಮ್ಮೆ ತನ್ನ ವಿರೋಧದಲ್ಲಿ ಯಾವ ನೆಲೆಗೆ ಹೋಗಬಹುದೆಂದರೆ ಅದು “ಫ್ಯಾಸಿಸಂ”ನ್ನು ಒಪ್ಪಿಕೊಳ್ಳಬಹುದೆಂದೂ ಅನ್ನಿಸುತ್ತದೆ. ಕೊನೆಕೊನೆಯಲ್ಲಿ ಅಡಿಗರ ಸಿಟ್ಟು ಅಂಥ ಒಂದು ನಿಲುವಿನಲ್ಲಿ ಅವರನ್ನು ನಮಗೆ ಒಪ್ಪಿಗೆಯಾಗದಂಥೆ ನಿಲ್ಲಿಸುತ್ತದೆ ಎಂದು ಈಗಲೂ ನನಗೆ ಅನ್ನಿಸುತ್ತದೆ. ಆದರೆ ಈ ದೌರ್ಬಲ್ಯವನ್ನು ಅವರು ಮೀರುವ ಕವಿ ಎಂದು ನಮಗೆ ಗೊತ್ತಿದೆ. ನಾವು ಇಷ್ಟಪಡುವ ಯಾವುದಾದರೂ ಜಾರಿಗೆ ಒಂದು ಪ್ರತ್ಯಕ್ಷವಾದಾಗ ಮಾತ್ರ ಅದರ ನಿಜಸ್ವರೂಪ ನಮಗೆ ಗೊತ್ತಾಗುತ್ತದೆ.

ಐವತ್ತರ ದಶಕದಲ್ಲಿ ನಾನು ಆನರ್ಸ್ ವಿದ್ಯಾರ್ಥಿ ಮೈಸೂರಿನಲ್ಲಿ. ಆಗಿನ ನನ್ನ ಮನಸ್ಥಿತಿಯಲ್ಲಿ ಅಡಿಗರನ್ನು ಮೆಚ್ಚುತ್ತಲೇ ಅವರ ಧೋರಣೆಯನ್ನು ಸಂಶಯದಿಂದ ಕಾಣುತ್ತಿದ್ದೆ ಎಂದು ಹೇಳಿದೆ. ಈ ನನ್ನ ಸಂಶಯದ ಹಿಂದೆ ನಿರಂಜನರ ಪ್ರಭಾವವೂ ಇತ್ತು. ಆ ಕಾಲದ “ಜನಪ್ರಗತಿ”, “ಚಿತ್ರಗುಪ್ತ” ಪತ್ರಿಕೆಗಳಲ್ಲಿ ಅಡಿಗರಿಗೆ ವಿರೋಧವಾಗಿ ಬಂದ ಲೇಖನಗಳನ್ನು ಯಾರಾದರೂ ಸಂಗ್ರಹಿಸಬೇಕು. ಆ ಕಾಲ ಹೇಗಿತ್ತೆಂಬುದು ಸಾಹಿತ್ಯ ಚರಿತ್ರೆಯ ದೃಷ್ಟಿಯಿಂದ ಆಗ ಗೊತ್ತಾಗುತ್ತದೆ. ನಮ್ಮನ್ನೂ ಕೂಡ ನಿರಂಜನರು ನವ್ಯವನ್ನು ವಿರೋಧಿಸಿ ಇಂಗ್ಲಿಷ್‌ ರೊಮ್ಯಾಂಟಿಕ್‌ ಕವಿಗಳ ಪರವಾಗಿ ಒಂದಷ್ಟು ಲೇಖನಗಳನ್ನು ಬರೆಯುವಂತೆ ಹಚ್ಚಿದ್ದರು. ನಾನೊಂದು ಲೇಖನಮಾಲೆಯನ್ನು ಸಿದ್ಧಪಡಿಸಿ ಕೊಂಡಿದ್ದೆ ಕೂಡಾ. ನಾನು ಆಗ ಚಾಮುಂಡೀಪುರಂನಲ್ಲಿದ್ದ ಸಾರ್ವಜನಿಕ ವಿದ್ಯಾರ್ಥಿನಿಲಯದಲ್ಲಿ ಸದಾ ಹಸಿದುಕೊಂಡಿರುತ್ತಿದ್ದ ವಿದ್ಯಾರ್ಥಿ. “ಭಾರತೀ ಸದನ” ಎಂಬಲ್ಲಿ ನನ್ನದೊಂದು ಪುಟ್ಟ ರೂಮ್‌. ಅಲ್ಲಿ ನಾನು ಕೂಡ ನಾನು ದ್ವೇಷಿಸುವೆ ಎಂದುಕೊಂಡಿದ್ದ ಎಲಿಯಟ್‌ನ ಎಂಬ ಪದ್ಯವನ್ನು ನನ್ನಷ್ಟಕ್ಕೇ ಒಂದು ದಿನ ಓದಿಕೊಂಡೆ. ಇದ್ದಕ್ಕಿದ್ದಂತೆ ಈ ಪದ್ಯ ನನ್ನನ್ನು ಆಳವಾಗಿ ಕಲಕಿತು.

ನನ್ನ ಎಲ್ಲಾ ಧೋರಣೆಗಳನ್ನು ಬದಿಗೆ ನೂಕಿ ಈ ಸಾಲುಗಳು ನನ್ನನ್ನು ಹಿಡಿದುಬಿಟ್ಟವು. ನಾನು ತೀರ್ಥಹಳ್ಳಿ ಹೈಸ್ಕೂಲಿನಲ್ಲಿ ಬೇಂದ್ರೆಯವರ “ಬೆಳಗು” ಪದ್ಯವನ್ನು ಹೀಗೆಯೇ ಕೇಳಿಸಿಕೊಂಡು ಕಾವ್ಯದ ಶಕ್ತಿಯನ್ನು ಪ್ರಥಮ ಬಾರಿಗೆ ಪ್ರಜ್ಞಾಪೂರ್ವಕವಾಗಿ ಅನುಭವಿಸಿದ್ದೆ. ಆದಾದಮೇಲೆ ಕಾವ್ಯಕ್ಕಿರುವ ಇನ್ನೊಂದು ರುಚಿ ನನಗೆ ತಟ್ಟಿದ್ದು ಈ ಸಾಲುಗಳನ್ನು ಓದಿಯಾದ ಮೇಲೆಯೇ. ನನ್ನ ಲೇಖನಗಳನ್ನು ಪ್ರಕಟಣೆಗೆ ಕೊಡುವುದಿಲ್ಲ, ನಾನು ಬದಲಾಗಿದ್ದೇನೆ ಎಂದು ನಾನು ನಿರಂಜನರಿಗೆ ಕಾಗದ ಬರೆದೆ. ಅಡಿಗರನ್ನು ಮತ್ತೆ ಓದಲು ಪ್ರಾರಂಭಿಸಿದೆ.

ಕಾಳನಾಗರ ನೇತ್ರಭೀತ ಪರವಶಪಕ್ಷಿ
ಮತ್ತೆ ರೆಕ್ಕೆಯ ಬಿಚ್ಚಿ ಗರಿಗಟ್ಟಿದೆ

ಅವರ ಇಂತಹ ಸಾಲುಗಳನ್ನು ಅನುಭವಿಸಲು ಹೊಸ ಸಂವೇದನೆಯ ಅಗತ್ಯವಿರಲಿಲ್ಲ.

ಹಾಗೆಯೇ ನನಗಿಷ್ಟವಾದ ಇನ್ನೊಂದು ಕವನ ‘ದೀಪಾವಳಿ’

ಇವೆಲ್ಲವೂ ನವ್ಯವಾಗಿತ್ತು. ಆದರೆ ತೋರುವ ರೀತಿಯಲ್ಲಿ ನವ್ಯವಾಗಿತ್ತು. ನವ್ಯ ಮನಸ್ಸನ್ನು ಹಿಡಿದಿತ್ತು. ಆದರೆ ನವೋದಯ ಅತ್ಯುತ್ತಮ ಪದ್ಯಗಳಿಗಿಂತ ತೀರಾ ಭಿನ್ನವಾಗಿ ಓದುವಂತೆ ಇವೂ ಒತ್ತಾಯಿಸುತ್ತಿರಲಿಲ್ಲ. ಈ ಬಗೆಯ ಒತ್ತಾಯ ಒಂದಷ್ಟು ಅವರ ಭೂಮಿಗೀತಸಂಕಲನದಲ್ಲಿ.

ಆಗಿನ ಕಾಲದಲ್ಲಿ ನನ್ನ ಮನಸ್ಥಿತಿ ಹೇಗಿತ್ತೆಂಬ ಪ್ರಶ್ನೆಗೆ ಮತ್ತೆ ಬರುತ್ತೇನೆ. ನಾನು ಅದಾಗಲೇ ಕಥೆಗಳನ್ನು ಬರೆಯಲು ಪ್ರಾರಂಭಿಸಿದ್ದೆ. ಹೆಚ್ಚು ಪಾಲಿನವು ಪ್ರಗತಿಶೀಲ ಕಥೆಗಳು. ಇವುಗಳನ್ನು ಬರೆಯಲೆಂದು ಪ್ರಗತಿಶೀಲ ಲೇಖಕರಂತೆಯೇ ವೇಶ್ಯೆಯರು ವಾಸ – ಮಾಡುತ್ತಿದ್ದ ಮೈಸೂರಿನ ಬೀದಿಗಳಲ್ಲಿ ಓಡಾಡಿಯೂ ಇದ್ದೆ. ಹಾಗೇ ನೋಡಿದರೆ ಅಡಿಗರು ಸಹ ನಮ್ಮ ಹಾಗೆಯೇ ದೊಡ್ಡದನಿಯ ಪ್ರಗತಿಶೀಲತೆಯಿಂದ ಅನುಮಾನದ ನವ್ಯಕ್ಕೆ ಬಂದವರು. ಆಗ  ನಾನು ಬರೆದ ಕಥೆಗಳನ್ನು ಓದಲೆಂದು ಹಿರಿಯರಾದ ಆನಂದರಿಗೆ ಕೊಟ್ಟಿದ್ದೆ. ಆನಂದರು ನನ್ನ ಈ ಕಥೆಗಳ ಮೇಲೆ ತಮ್ಮ ಟೀಕೆಗಳನ್ನು ಧಾರಾಳವಾಗಿ ಬರೆದಿದ್ದರು. ಒಂದು ತುದಿಯಲ್ಲಿ ಕೆಂಪನ್ನೂ ಇನ್ನೊಂದು ತುದಿಯಲ್ಲಿ ನೀಲಿಯ ಲೆಡ್‌ನ್ನು ಪಡೆದ ಪೆನ್ಸಿಲ್‌ನ್ನು ಉಪಯೋಗಿಸಿದ್ದರು. ಅವರ ಕೆಲವೇ ಕೆಲವು ಮೆಚ್ಚಿಗೆಗಳಿಗೆ ನೀಲಿಯ ತುದಿ ಉಪಯೋಗಕ್ಕೆ ಬಂತೆಂಬುದೊಂದ ಸಮಾಧಾನ. ಆದರೆ ಹೆಚ್ಚು ಉಪಯೋಗಕ್ಕೆ ಬಂದುದು ಕೆಂಪುತುದಿ. ಆಗ ನಾನು ನವ್ಯದ ವಿರೋಧಿಯಾಗಿದ್ದರೂ ಆನಂದರು ತಮ್ಮ ಕೆಂಪು ತುದಿಯಲ್ಲಿ ನನ್ನನ್ನು ನವ್ಯದವನೆಂದು ಗೇಲಿಮಾಡಿದ್ದರು. “ಇವು ನವ್ಯ ಕತೆಗಳು ಇವುಗಳ ಅರ್ಥದ ಬೀಗವನ್ನು ತೆರೆಯಲು ಲೇಖಕರಿಂದಲೇ ಕೀಲಿಯನ್ನು ಪಡೆಯಬೇಕಾಗಿದೆ” ಎಂದು ಇಂಗ್ಲಿಷ್‌ನಲ್ಲಿ ಬರೆದಿದ್ದರು. ನಾನು ಆಶ್ಚರ್ಯಚಕಿತನಾಗಿ ನನಗೆ ಗೊತ್ತಿಲ್ಲದಂತೆ ನಾನು ನವ್ಯನಾದೆನೇ ಎಂಬ ಸಂಶಯದಲ್ಲಿದ್ದಾಗಲೇ ನಾನು ಎಲಿಯಟ್‌ನನ್ನು ಓದಿದ್ದು. ಮತ್ತೆ ಮತ್ತೆ ನನ್ನ ಮನಸ್ಥಿತಿಯನ್ನು ನನಗೆ ತಿಳಿಯಲು ಅಡಿಗರು ನನಗೆ ಕನ್ನಡಿಯಾದರು.

ಅದೊಂದು ವಿಚಿತ್ರವಾದ ಕಾಲವಾಗಿತ್ತು. ಎಲ್ಲಾ ಶ್ರೇಷ್ಠ ಸಾಹಿತ್ಯ ಹುಟ್ಟಲು ಹೊಸ ವಿಚಾರಗಳ ಅಲೆಗಳಲ್ಲಿ ನಾವು ಬದುಕಬೇಕು. ಜೊತೆಗೇ ಆಳವಾದ ಪರಂಪರೆಯಲ್ಲಿ ಬೇರೂರಿರಬೇಕು. ಆದರೆ  ಈ ಪರಂಪರೆ ತೋರುವ ಮುಖದ ಸಲೀಸಾದ ಭಂಗಿಯಾಗಿರಬೇಕು. ವಿಚಾರಗಳ ಮಂಥನ ನಮ್ಮಲ್ಲಿ ಆಳವಾದ ಅನುಮಾನವನ್ನೂ ಮತ್ತು ನಂಬಿಕೆಯ ಹಸಿವನ್ನೂ ಉಂಟು ಮಾಡಿರಬೇಕು. ಬರೀ ಅನುಮಾನ ಸಿನಿಕತನವಾಗಿ ಬಿಡುತ್ತದೆ. ಇಂಥ ಮನಸ್ಥಿತಿಯಲ್ಲಿ ಹೊಸಕಾವ್ಯ ಕನ್ನಡಿಯೂ ಆಗುತ್ತದೆ, ದೀಪ ಇದು.

ಆ ದಿನಗಳಲ್ಲಿ ಆನರ್ಸ್‌ಗಿಂತ ಮೊದಲು ನಾನು ಶಿವಮೊಗ್ಗದಲ್ಲಿ ಸಮಾಜವಾದಿ ಪರಂಪರೆಯಲ್ಲಿ ಬೆಳೆದವರಾದ್ದರಿಂದ ಮತ್ತು ಗೋಪಾಲಗೌಡರ ಸ್ನೇಹದಲ್ಲಿ ಇದ್ದವನಾದ್ದರಿಂದ, ಯಾವುದು ಕಾವ್ಯಾನುಭವ ಯಾವುದು ರಾಜಕೀಯ ವಿಚಾರದಿಂದ ಉತ್ಪನ್ನವಾದ ಬೌದ್ಧಿಸಂಕಟ ಎಂಬುದು ಗೊತ್ತಾಗದಂತೆ ಒಂದರಿಂದ ಇನ್ನೊಂದಕ್ಕೆ ಗಲಿಬಿಲಿಗೊಳ್ಳುತ್ತಾ ಓಡಾಡುತ್ತಿದ್ದೆ. ಮತ್ತೆ ಮತ್ತೆ ಮಾರ್ಕ್ಸ್‌ವಾದದಲ್ಲಿ ಶ್ರದ್ಧೆಯನ್ನು ಬೆಳೆಸಿಕೊಳ್ಳಲು ಹೊಯ್ದಾಡುವ ನನಗಾದೊಂದು ಅನುಭವವನ್ನು ಇಲ್ಲಿ ಹೇಳಲೇಬೇಕು.

ನಿರಂಜನರು ಕೆಲವೊಮ್ಮೆ ನನ್ನ ರೂಮಿನಲ್ಲಿ ಇರುತ್ತಿದ್ದರು. ಅವರು ನನಗೆ ಅಷ್ಟು ಆತ್ಮೀಯರಾಗಿದ್ದರು. ಸ್ಟಾಲಿನ್‌ ತೀರಿಹೋದನಂತರ ‘ಬೆರಿಯಾ’ ನನ್ನು ದ್ರೋಹದ ಆಪಾದನೆಯ ಮೇಲೆ ಬಂಧಿಸಲಾಯಿತು. ಸಮಾಜವಾದಿ ವ್ಯವಸ್ಥೆ ಎಷ್ಟು ಕರಾಳವಾದದ್ದೆಂದು ರಜೆಯಲ್ಲಿ ತೀರ್ಥಹಳ್ಳಿಗೆ ಹೋಗಿದ್ದ ನಾನು ಹೇಸಿಗೆಪಟ್ಟಿದ್ದೆ. ನಾನು  ಮತ್ತೆ ಮೈಸೂರಿಗೆ ಬಂದಾಗ ನನ್ನ ರೂಮನ್ನು ಪೋಲೀಸರು ಸರ್ಚ್‌ಮಾಡಿದ್ದರು ಎಂದು ಗೊತ್ತಾಯಿತು. ನಾನು ಸೀದಾ ಪೋಲೀಸ್‌ ಠಾಣೆಗೆ ಸಿಟ್ಟಿನಲ್ಲಿ ಹೋಗಿದ್ದೆ. ಅಲ್ಲಿ ನನ್ನದೊಂದು ಫೋಟೋ ಮತ್ತು ನನ್ನ ಕಂಗೋಡು ಸತ್ಯಾಗ್ರಹದ ದಿನಗಳ ಪೂರ್ವೇತಿಹಾಸ ಎಲ್ಲವೂ ಇದ್ದುವು. ನಾನು ಇನ್ನು ಮುಂದೆ ಕಮ್ಯುನಿಸ್ಟ್‌ ಪಕ್ಷಪಾತಿಯಲ್ಲ ಎಂದು ಪೋಲೀಸರಿಗೆ ಹೇಳಿದಾಗ ಅಳುಕಿನಲ್ಲಿ ನಾನು ಹಾಗೆ ಹೇಳಿದ್ದೆಂದು ಅವರು ತಿಳಿದಿರಬೇಕು.

ಅಡಿಗರು ಮಾತ್ರ ಸಾಮೂಹಿಕವಾದ ಶಕ್ತಿ ಸಂಘಟನೆಯ ಮೂಲಕ ಹಿಂಸಾತ್ಮಕವಾಗಿ ಅಧಿಕಾರಕ್ಕೆ ಬರುವ ಕ್ರಾಂತಿಕಾರತೆಯ ತತ್ವವನ್ನೇ ಮೊದಲು ಒಪ್ಪಿದವರಂತೆ ಕಾಣುತ್ತಿದ್ದು ಅನಂತರದಲ್ಲಿ ಸಂಪೂರ್ಣ ಅಲ್ಲಗಳೆದವರಾದ್ದರಿಂದ ನಮ್ಮ ಮನಸ್ಸಿನ ಎಲ್ಲಾ ಹೊಯ್ದಾಟಗಳಲ್ಲೂ ಅವರು ನಮಗೊಂದು ರೆಫರೆನ್ಸ್‌ ಪಾಯಿಂಟ್‌ ಆಗಿಬಿಟ್ಟರು. ಅವರ ಎಲ್ಲಾ ಪದ್ಯಗಳನ್ನು ನಾನು ಓದಿರುವ ಕ್ರಮದಲ್ಲೂ ಈ ವೈಚಾರಿಕ ತುಮುಲದ ಛಾಯೆ ಕಾಣುತ್ತದೆ ಎಂಧು ಭಾವಿಸಿದ್ದೇನೆ. ನನ್ನ ಮುಂದಿನ ಕೆಲವು ಮಾತುಗಳಲ್ಲಿ ನಾನು ಅಡಿಗರ ಕಾವ್ಯವನ್ನು ಗ್ರಹಿಸುವ ಕ್ರಮದಲ್ಲೇ ಇದು ಇನ್ನಷ್ಟು ಸ್ಪಷ್ಟವಾಗಬಹುದು.

ಕವಿ ಬ್ಕೇಕ್‌ನ ಬಗ್ಗೆ ಒಂದು ಮಾತಿದೆ. ಅವನಿಗೆ ತಾನು ಹೇಳಬೇಕಾದ್ದೆಲ್ಲಾವನ್ನೂ ರೂಪಕವಾಗಿ ಅದು ತತ್ ಕ್ಷಣದ ಗ್ರಹಿಕೆಯೇ ಎಂಬಂತೆ ಹೇಳುವ ಶಕ್ತಿ ಇತ್ತು. ಹೇಳಬೇಕಾದ್ದನ್ನು ಪೂರ್ಣವಾಗಿ ಹೇಳಿದ್ದಾನೆ ಎನ್ನಿಸುವಂತೆಯೇ ಅದರ ಎಲ್ಲಾ ಅರ್ಥಗಳೂ ಅವನ ಶಬ್ದಗಳನ್ನು ಮೆಲುಕುಹಾಕುವ ನಮ್ಮ ಮನಸ್ಸಿನಲ್ಲಿ ಅರ್ಥಗಳನ್ನು ಕ್ರಮೇಣ ಬಿಚ್ಚಿಕೊಳ್ಳುವ ಮಾಂತ್ರಿಕತೆ ಇದೆ ಎನ್ನಿಸುವಂತಿರುತ್ತದೆ.

ಕನ್ನಡದಲ್ಲಿ ಅಲ್ಲಮ ಮತ್ತು ಬೇಂದ್ರೆಯವರಿಗೆ ಅಪಾರವಾದ ಈ ಶಕ್ತಿ ಇದೆ. ಅಡಿಗರಲ್ಲಿ ರೂಪಕವಾದ್ದೂ ಕೂಡಾ ಅವರ ಹಿಂದಿನ ಚಿಂತನೆಯ ಸಮರ್ಥನೆಯನ್ನು ಬೇಡುವಂತಿರುತ್ತದೆ. ಆದರೆ ಮಾತ್ರ ಅವರು ಮುಖ್ಯವಾದ ಪದ್ಯಗಳಲ್ಲಿ ತಾನು ಆತನಕ ತಿಳಿದಿದ್ದನ್ನ ತನ್ನ ಲೆಕ್ಕ ಚುಕ್ತಾ ಆಗುವಂತೆ ಬರೆದುಕೊಂಡು ಬಿಟ್ಟಿರುತ್ತಾರೆ. ‘ಭೂಮಿಗೀತ’ ಪದ್ಯವನ್ನು ಬರೆಯುತ್ತಿದ್ದಾಗ ಅವರು ನನ್ನ ಹತ್ತಿರ ಕಾವ್ಯದ ಪ್ರತಿಮೆಗಳಾಗಿ ಬದಲಾದವು ಎಂಬುದನ್ನು ನಾನು ಕಂಡಿದ್ದೇನೆ. ಆ ದಿನಗಳಲ್ಲಿ ನಾನು ಕವಿಯ ಜೀವನದ ಚರಿತ್ರೆಯನ್ನು ಅವನ ಕಾವ್ಯಾಭ್ಯಾಸದೊಳಗೆ ತರಕೂಡದೆಂಬ ಮತದವನಾದದ್ದರಿಂದ ನನಗೆ ಗೊತ್ತಿರುವುದನ್ನು ಮುಜುಗರದಿಂದಾಗಿಯೂ ಬಳಸಿಕೊಳ್ಳಲಾರದೆ ಹೋಗಿದ್ದೆ. ಈಗ ಅಂಥಹ ವಿಷಯಗಳನ್ನು ಹೇಳಬಹುದೆಂದು ಕೊಂಡಿದ್ದೇನೆ.

ನನಗೆ ಎಲ್ಲಾ ವಿವರಗಳು ಸ್ಪಷ್ಟವಾಗಿ ತಿಳಿಯದು. ಆದರೆ ಅಡಿಗರು ತಮ್ಮ ಬಾಲ್ಯಜೀವನದ ಬಗ್ಗೆ ಮಾತನಾಡುತ್ತಾ ಬಾಲ್ಯದ ದಿಗ್ಭ್ರಮೆಯೊಂದನ್ನು ಹೇಳಿದ್ದರು. ಮನೆಯಲ್ಲಿ ಅವರ ಮೇಲೆ ವಿಶೇಷ ಪ್ರಭಾವ ಮಾಡಿದ ಒಬ್ಬರು ಹೆಂಗಸು ಇದ್ದರು. ಪ್ರಾಯಶಃ ಅದು ಅವರ ಅತ್ತೆ. ತಂದೆಯ ಸೋದರಿ ಇರಬಹುದು. ಆಕೆ ಇವರಲ್ಲಿ ಕಾವ್ಯದ ರುಚಿಯನ್ನು ಹತ್ತಿಸಿದ ವಿಧವೆ. ಬಹಳ ಕಾಲ ಅವರು ಆಕೆಯನ್ನು ತಮ್ಮ ತಾಯಿ ಎಂದು ತಿಳಿದಿದ್ದರು. ಹೀಗೆ ತಿಳಿದಿದ್ದರಿಂದ ತನ್ನ ತಾಯಿಯ ಬಗ್ಗೆ ತೋರಿಸಬೇಕಾದ ಪ್ರೀತಿಸಲಿಲ್ಲವೆಂದು ಅವರು ಬಾಲ್ಯದಲ್ಲಿ ತುಂಬಾ ಬಂಧಿತರಾಗಿದ್ದರಂತೆ.

ಅಡಿಗರ ಎಲ್ಲಾ ಕವನಗಳಲ್ಲೂ ತಾನು ಮೋಸಹೋದೆ ಎಂಬ ಭಾವನೆ ಬಹಳ ಮುಖ್ಯವಾದ್ದು. ನಿಜಜೀವನದಲ್ಲೂ ಅಷ್ಟೇ. ಅವರು ಏನನ್ನಾದರೂ ಬಹಳ ಸಹಿಸಿಕೊಂಡಿದ್ದು ಥಟ್ಟನೆ ಸಿಡಿದೇಳುತ್ತಿದ್ದರು.

ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿದ್ದು ಆಮೇಲೆ ಬಿಟ್ಟಿದ್ದು, ಸಾಗರ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿದ್ದು ಆಮೇಲೆ ಬಿಟ್ಟಿದ್ದು ಇದಕ್ಕೆ ಪ್ರತ್ಯಕ್ಷ ಉದಾಹರಣೆಗಳು. ಹಾಗೆಯೇ ಕಮ್ಯುನಿಸ್ಟ್‌ ಪಕ್ಷವನ್ನು ತಾನು ನಂಬಿಕೊಂಡು  ಆಮೇಲೆ ಮೋಸಹೋದ್ದು. ‘ಗೊಂದಲಪುರ’ದ ಖಳನಾಯಕ ಹೀಗೆ ಮೋಸಗೊಳಿಸುವವನು. ದ್ವೇಷಕ್ಕೆ ಮಾತ್ರವಲ್ಲದೆ ಪ್ರೀತಿಗೂ ಇದು ಅನ್ವಯಿಸುತ್ತದೆ. ‘ಕೂಪಮಂಡೂಕ’ ಪದ್ಯದ ಸಖ ಹೀಗೆಯೇ ಕೈಕೊಡುವವನು.

ಟಾಂಗ್ಕೊಟ್ಟು ಕಮಂಗಿ ಕಣ್ಣು ಬಿಡುವಷ್ಟಕ್ಕೆ
ಕಂಬಿಕಿತ್ತೆ ವಿಶಾಲ ನೀಲದೆಡೆಗೆ

ಮೈಮರೆತಿದ್ದಾಗ ಈ ಮೋಸ ತಿಳಿಯದು.

ಕುಳಿತಿದ್ದೆವಾಗ ಟಿಕ್ಕಾಟಿಕ್ಕಿಯೆರಡು ಕಡೆ;
ನಿನ್ನ ಕಡೆಯೇ ಕೊನೆಗು ಕೊಂಚ ಹಗುರ
ಆದರೂ ಆಗಾಗ್ಗೆ ಮೈಗೂಡಿ ಸಮತೂಕ
ಒಜ್ಜೆ ಎನಿಸಿರಲಿಲ್ಲ ಇಟ್ಟಿ ಹೆಜ್ಜೆ

ಆದರೆ ಈಗ ಮಾತ್ರ ಅವನು ಏತದ ಒಂದು ತುದಿಯಲ್ಲಿದ್ದೂ ಬಾವಿ ಮಣ್ಣಿನಲ್ಲಿ ಹೂತುಬಿದ್ದಿದ್ದಾನೆ. ತನ್ನಿಂದ ನೀರನ್ನು ಎತ್ತುತ್ತಿದ್ದ ಸಖ ಮೇಲಿದ್ದಾನೆ. ಬಾವಿಯ ತಳದಿಂದ ಅವನ ಮೋರೆ ನೋಡಲು ಹೋದರೆ ಕಾಣಿಸದು.

ಏತದ ನನ್ನ
ತುದಿ, ಮಣ್ಣು ತಿನ್ನುತಿದೆ ಅತ್ತಕಡೆಗೆ
ನೀ ಹತ್ತಿ ಕುಳಿತಿದ್ದ ತುದಿ ಅಂತರಾಳಕ್ಕೆ
ಚಾಳೇಶ, ಕಾಣಿಸದು ನಿನ್ನ ಚಹರೆ

‘ಭೂಮಿಗೀತ’ದಲ್ಲೂ ಅಷ್ಟೇ.

‘ನೆಲತಾಯಿ ಮಲತಾಯಿ’ ಅವಳನ್ನು ತಾಯಿಯೆಂದು ತಿಳಿದದ್ದು ತಪ್ಪಾಯಿತು. ಅವಳು ಹಾಕುವ ಚಾಲೇಂಜ್‌ ಬೇಂದ್ರೆಯ ಕವನದಲ್ಲಿರುವಂತೆ ಆತ್ಮಾರ್ಪಣದ್ದಲ್ಲ. ಅವಳು ಕೇಳುತ್ತಾಳೆ – “ಗಂಡಸಾದರೆ ನನ್ನ ಬಲಿಕೊಡುವಿಯೇನು’. ಅಡಿಗರು ಯಾವತ್ತೂ ತನ್ನ ಲೆಕ್ಕಾ ಚುಕ್ತಾ ಆಗುವಂತೆ ಬರೆಯುತ್ತಿದ್ದರು ಎಂದೆ. ನನ್ನ ಇನ್ನೊಂದು ನೆನಪನ್ನು ಹೇಳುತ್ತೇನೆ. ಅಡಿಗರು ಕೈಯಲ್ಲೊಂದು ಖಾಲಿ ಬ್ಯಾಗ ಹಿಡಿದು ಅವರು ವಾಸಿಸುತ್ತಿದ್ದ ನರಸಿಂಹರಾಜ ಮೊಹಲ್ಲಾದ ಇಂದ ಮೈಸೂರು ಸಿಟಿಗೆ ಬರುವುದು, ನಾವೆಲ್ಲಾ ಕೂಡಿ “ಕಾಫಿಹೌಸಿಗೆ” ಹೋಗಿ ಗಂಟಗಟ್ಟಲೆ ಹರಟುವುದು. ನಾನು ಆಗ ವಿದ್ಯಾರ್ಥಿಯಾದ್ದರಿಂದ ಕಾಫಿಯ ಬಿಲ್‌ ಕೊಡುವುದು ಅಡಿಗರೇ. ಕಾಫಿಹೌಸಿನ ಚರ್ಚೆ ಮುಗಿದ ನಂತರ ಮಾರ್ಕೇಟಿಗೆ ಹೋಗಿ ತರಕಾರಿ ಕೊಂಡು “ಇಂಧ್ರಭವನ”ದ ಎದುರಿಗಿದ್ದ ಅಂಗಡಿಯಲ್ಲಿ ಸಿಹಿತಿಂಡಿಯನ್ನು ಕೊಂಡು ಬಸ್ಸಿಗಾಗಿ ಕಾಯುತ್ತಿದ್ದರು. ಊರಿನ ಮಧ್ಯದಲ್ಲಿಯೇ ಆಗ ಬಸ್‌ಸ್ಟ್ಯಾಂಡ್‌. ಈಗ “ಗೀತಾಬುಕ್‌ ಹೌಸ್‌” ಇರುವ ಅಂಗಡಿಗೆ ಹತ್ತಿರದಲ್ಲಿ. ಒಮ್ಮೆ ಅವರು ಕೈಯಲ್ಲಿ ಬ್ಯಾಗ್‌ ಹಿಡಿದು ಬಸ್‌ಗಾಗಿ ಕಾಯುತ್ತಿದ್ದಾಗ ನಾನೊಬ್ಬನೇ ಅವರ ಜೊತೆಯಲ್ಲಿ. ತನ್ನ ಕಾವ್ಯವನ್ನು ವಿವರಿಸಿ ಎಂದೂ ಹೆಚ್ಚು ಮಾತಾಡದವರು ಅಡಿಗರು. ಆವತ್ತು ಬಹಳ ಹೊತ್ತು ಸುಮ್ಮನೆ ನಿಂತಿದ್ದ ಅವರು ಥಟ್ಟನೆ ನನಗೆ ಹೇಳಿದರು. “ಇನ್ನುಮುಂದೆ ನನಗೆ ಕಾವ್ಯವನ್ನು ಬರೆಯುವುದೇ ಸಾಧ್ಯವಿಲ್ಲ ಎನ್ನಿಸುತ್ತಿದೆ. ”

ಇದಾದ ಒಂದು ವಾರದ ನಂತರ ಕಾಫಿಹೌಸಿನಲ್ಲಿ ಕೂತಿದ್ದಾಗ ಅದೊಂದು ಸಾಮಾನ್ಯ ವಿಷಯವೆಂಬಂತೆ ತಮ್ಮ ಚೀಲದಿಂದ ಹಸ್ತಪ್ರತಿಯೊಂದನ್ನು ಎತ್ತಿ ನನಗೆ ಕೊಟ್ಟರು. ಅದೇ ಅವರ ಪದ್ಯ ‘ಕೂಪಮಂಡೂಕ’ ತನ್ನ ಸ್ಫೂರ್ತಿಯ ಚಿಲುಮೆಗಳು ಬತ್ತಿಹೋಗಿವೆ ಎಂಬ ಬಗ್ಗೆಯೇ ಇರುವ ಪದ್ಯ ಇದು.

ಅಡಿಗರು ಸಾಗರದಲ್ಲಿ ಪ್ರಿನ್ಸಿಪಾಲರಾಗಿದ್ದಾಗ ಕೂಡ ಅಷ್ಟೇ. ರಾಜಕೀಯವಾಗಿ ಅವರು ಕಾಲೇಜನ್ನು ನಡೆಸುತ್ತಿರುವವರಿಂದ ಎಷ್ಟು ಭಿನ್ನರಾಗಿದ್ದರೆಂದರೆ ಸಹಜವಾಗಿ ಮ್ಯಾನೇಜ್‌ಮೆಂಟ್‌ ಅಡಿಗರಿಗೆ ವಿರೋಧ ಆಯಿತು. ಎಷ್ಟೆಂದರೂ ಸಾಗರ ಸಣ್ಣ ಊರು ಆಗ. ಈ ಭಿನ್ನಾಭಿಪ್ರಾಯ ಒಂದು ಕಾಳಗದ ಸ್ವರೂಪ ತಾಳಿತು. ಅದೊಂದು ಸಾಮಾನ್ಯ ವಿಶ್ಲೇಷಣೆಯಲ್ಲಿ ಎರಡೂ ಕಡೆಯೂ ಸರಿತಪ್ಪುಗಳನ್ನು ಕಾಣಬಹುದಾದ ಸಂದರ್ಭ. ಆದರೆ ಈ ಘಟನೆ ಅಡಿಗರ ಒಳಮನಸ್ಸಿನಲ್ಲಿ ರೂಪಾಂತರ ಹೊಂದಿ ಇವಿಲ್‌ ವಿರುದ್ಧದ ಶ್ರೀ ರಾಮಚಂದ್ರನ ವಿಫಲವಾದರೂ ಸತತವಾಗಿರಬೇಕಾದ ಹೋರಾಟದ ರೂಪಕವಾಗಿ ಬಿಟ್ಟಿತು.

ಕತ್ತಲಿಗೆ
ಹತ್ತೆ ತಲೆ? ನೂರಾರೇ? ಅದು ಅಸಂಖ್ಯ;
ಕತ್ತರಿಸಿದರೆ ಬೆಳೆವ ಬೆಳೆದು ಕತ್ತಿಗೆ ಬರುವ
ಅನಾದಿ; ಕೋದಂಡ ದಂಡವೂ ಹೀಗೆ ದಂಡ”;

ಅಡಿಗರು ಆ ದಿನಗಳಲ್ಲಿ ರಾಕ್ಷಸ ಎಂದು ಭಾವಿಸಿ ಉಲ್ಬಣಿಸಿಕೊಂಡು ಪರಿಭವಿಸಿದ ವ್ಯಕ್ತಿ ಈಚೆಗೆ ತನ್ನ ಉತ್ತಮ ಸಂಕಲನವೊಂದನ್ನು ಅಡಿಗರಿಗೆ ಅರ್ಪಿಸಿದ್ದೇ ಅಲ್ಲ; ಅವರಿಗೆ ಕಷ್ಟವಿದ್ದ ಕಾಲದಲ್ಲಿ ಸರಕಾರದಿಂದ ಲೇಖಕರಿಗೆ ಕೊಡುವ ಪೆನ್ಷನ್‌ ಕೊಡಿಸಿದ್ದರು. ಯಾವುದಾದರೂ ವಸ್ತುವಿನ ಗ್ರಹಿಕೆ ಸರಿಯೋ ತಪ್ಪೋ ಎಂಬ ಪ್ರಶ್ನೆಯಲ್ಲಿ ವಸ್ತುಸ್ಥಿತಿಯ ಜೊತೆ ಅವರ ಪ್ರತಿಕ್ರಿಯೆ ಕೆಲವೊಮ್ಮೆ ಅದೃಷ್ಟವಶಾತ್‌ ಇನ್ನೊಂದು ಆಯಾಮವನ್ನು ಪಡೆಯುವಂತೆ ಅವರ ಒಳಮನಸ್ಸನ್ನು ಪ್ರೇರೇಪಿಸಬಲ್ಲುದಾಗಿತ್ತು ಎಂಬುದೇ ನಮಗೆ ಮುಖ್ಯವಾದ್ದು.

*

[ ಸಂಕಲನಕ್ಕಾಗಿ ಬರೆದ ಲೇಖನ೧೯೯೫]

* * *