ಶ್ರೀ ಗೋಪಾಲಕೃಷ್ಣ ಅಡಿಗರು ನಮ್ಮ ಕಾಲದ ಕನ್ನಡದ ಅಗ್ರಗಣ್ಯ ಕವಿ, ನೆಹರೂ ಯುಗದ ಆದರ್ಶವಾದವನ್ನು ಶಿವರಾಮ ಕಾರಂತರನ್ನು ಬಿಟ್ಟು ನಮ್ಮ ಉಳಿದ ಹಿರಿಯ ಲೇಖಕರಿಗೆಲ್ಲ ಅದು ಆಕರ್ಷಕವಾಗಿದ್ದಾಗಲೇ ವಿರೋಧಿಸಿದವರು. ಕನ್ನಡದಲ್ಲಿ ನವ್ಯ ಸಾಹಿತ್ಯದ ಪ್ರವರ್ತಕರಾದ ಅಡಿಗರು ಹೀಗೆ ಕಾವ್ಯದಲ್ಲಿ ಭಾವನೆಯ ನೈಜತೆಯನ್ನು ಸಾಧಿಸಿದರು. ಶುದ್ಧವಾದ ನಿಷ್ಠುರವಾದ ದೃಷ್ಟಿಯಿಂದ ನಮ್ಮ ಕಾಲದ ಅನುಭವವನ್ನು ಅರಿತುಕೊಳ್ಳಲು ಸಾಧ್ಯವಾಗಬೇಕಾದರೆ ನಮ್ಮನ್ನು ಮೋಸಗೊಳಿಸುವ ರುಚಿಯಾದ ಧೋರಣೆಗಳಿಂದ ಮುಕ್ತರಾಗಬೇಕೆಂಬುದನ್ನು ನಮ್ಮ ಜನಾಂಗ ಕಲಿತದ್ದು  ಅಡಿಗರಿಂದ. ಅಡಿಗರ ವಿಚಾರವನ್ನು ನಾವು ಒಪ್ಪಲಿ ಬಿಡಲಿ, ಲೇಖಕ ತನ್ನ ಅರಿಯುವ ಕೇಂದ್ರವನ್ನು ಶುಚಿಯಾಗಿಟ್ಟುಕೊಳ್ಳುವುದು ಎಷ್ಟು ಮುಖ್ಯ, ಈ ಅನುಭವದ ಪ್ರಾಮಾಣ್ಯದಿಂದ ಹುಟ್ಟುವ ಅನ್ನಿಸಿಕೆಗಳಿಗೆ ರೂಪಕೊಡುವ ಸಾಹಿತ್ಯದ ಕಸಬುಗಾರಿಕೆ ಎಷ್ಟು ಕಷ್ಟಸಾಧ್ಯವಾದದ್ದು – ಎಂಬ ಅಡಿಗರ ತಿಳಿವು ನವ್ಯ ಸಾಹಿತ್ಯದ ಪ್ರೇರಕಶಕ್ತಿಯಾಗಿ ಕೆಲಸಮಾಡಿದೆ. ಲೇಖಕನ ಜೀವನದೃಷ್ಟಿಯನ್ನು ರೂಪಿಸುವ ವರ್ಗಸಮಾಜ ಆಚರಣೆಯಲ್ಲಿ  ಮತ್ತು ವಿಚಾರದಲ್ಲಿ ಸುಳ್ಳಾಗುತ್ತ ಹೋದಂತೆ ಲೇಖಕ ವ್ಯಕ್ತಿವಾದಿಯಾಗಿ ಪ್ರತಿಭಟಿಸುತ್ತಾನೆ. ತನ್ನ ಅತ್ಯಂತ ವೈಯಕ್ತಿಕವಾದ ಅನ್ನಿಸಿಕೆಗಳೇ ನಮ್ಮ ಕಾಲದ ಸತ್ಯವನ್ನು ತಿಳಿಯಲು ನಮಗೆ ಉಳಿದಿರುವ ಉಪಾಯವೆಂದು ಹೀಗೆ ವ್ಯಕ್ತಿವಾದಿಯಾಗಿ ಅಡಿಗರು ತಮ್ಮ ಕಾವ್ಯದಲ್ಲಿ ನಂಬಿದ್ದು ಇವತ್ತಿಗೂ ನಮಗೆ ನಿಜವಾಗಿ ಉಳಿದಿದೆ. ಎಲ್ಲ ಗುಂಪುಗಳೂ ಪರಿಮಿತ ಹಿತಾಸಕ್ತಿಗಳನ್ನು ಎತ್ತಿ ಹಿಡಿಯುವಾಗ ಲೇಖಕ ತನ್ನ ಅಂತರಂಗದ ಅನ್ನಿಸಿಕೆಗಳಿಗೇ ಆತುಬೀಳಬೇಕಾಗುತ್ತದೆ. ಆದರೆ ಈ ವ್ಯಕ್ತಿಗತವಾದ ಅನ್ನಿಸಿಕೆಗಳು ಮಾತ್ರ ಸಾಲದು ಎಂದು ಈಚೆಗೆ ಯೋಚಿಸುತ್ತಿರುವವರಲ್ಲಿ ನಾನೂ ಒಬ್ಬ. ಸಾಲದು ನಿಜ – ಆದರೆ ನಮ್ಮ ಬದುಕನ್ನು ಸೃಷ್ಟಿಶೀಲವಾಗಿ ಮಾಡಬಲ್ಲಂತಹ ಛಲವುಳ್ಳ ಧರ್ಮ ಎಲ್ಲಿದೆ? ಪಕ್ಷ ಎಲ್ಲಿದೆ? ನಾವು ಅಂತರಂಗ ಸಾಕ್ಷಿಯಿಂದ ಕಂಡದ್ದನ್ನು ಸುಳ್ಳಾಗಿಸಿಕೊಳ್ಳದಂತೆ ಅನುಸರಿಸಬಲ್ಲ ಮಾರ್ಗ ಎಲ್ಲಿದೆ? – ನಮ್ಮ ನಡುವೆ, ನಾವು ಪ್ರತಿಕ್ರಿಯಿಸಬೇಕಾದ ಈ ಪರಿಸರದಲ್ಲೆ? – ಈ ಪ್ರಶ್ನೆಗಳು ಇನ್ನೂ ನಿಜವಾಗಿಯೇ ಉಳಿದಿವೆ.

ಸ್ವಾತಂತ್ಯ್ರವಿಲ್ಲದೆ ಸೃಷ್ಟಿಯಿಲ್ಲ. ಪರಸ್ಪರ ದಮನದ ಮೇಲೆ ನಿಂತ ಸಮಾಜ ವ್ಯಕ್ತಿಯ ವಿಕಾಸಕ್ಕೆ ಬೇಕಾದ ಸ್ವಾತಂತ್ಯ್ರವನ್ನು ಅಪಹರಿಸಿ ಇಡೀ ಸಮಾಜದ ಸೃಷ್ಟಿಶೀಲತೆಯನ್ನು ಮೊಟಕುಮಾಡುತ್ತದೆ. ಇದನ್ನು ಅತ್ಯಂತ ನೋವಿನಿಂದ ಅರಿಯಬಲ್ಲವನು ಸಾಹಿತಿ. ಆದ್ದರಿಂದಲೇ ಅವನು ಎಲ್ಲ ಬಗೆಯ ದಮನಕ್ಕೂ, ಆಕ್ರಮಣಕ್ಕೂ, ಶೋಷಣೆಗೂ ವಿರೋಧಿಯಾಗುತ್ತಾನೆ; ಎಲ್ಲ ಕಾಲದಲ್ಲೂ ವ್ಯಕ್ತಿಗಳ ಪರಸ್ಪರ ಸೃಷ್ಟಿಶೀಲ ಸಂಬಂಧಕ್ಕಾಗಿ ಕ್ರಾಂತಿಕಾರಿಯಾಗುತ್ತಾನೆ. ಈ ದಮನದ ಮೂಲವೆಲ್ಲಿದೆ? – ಈ ಪ್ರಶ್ನೆಯನ್ನು ಸಾಹಿತಿ ಈಗ ಸ್ಪಷ್ಟವಾಗಿ ಕೇಳಿಕೊಳ್ಳಬೇಕಾಗಿ ಬಂದಿದೆ. ಮನುಷ್ಯನ ಮೂಲ ಪ್ರವೃತ್ತಿಯಲ್ಲೆ? ಜಾತಿಪದ್ಧತಿಯಲ್ಲೆ? ಆರ್ಥಿಕ ವ್ಯವಸ್ಥೆಯಲ್ಲೆ? ನಮ್ಮ ಸಂಶ್ಕೃತಿಯ ಆದರ್ಶಗಳಲ್ಲೆ? – ಅಥವಾ ಇವೆಲ್ಲವೂ ಕೂಡಿ ಕೆಲಸಮಾಡುವ ಅದೃಶ್ಯ ಸಂಚಿನಲ್ಲೆ? ಈ ಪ್ರಶ್ನೆಗಳಿಗೆ ಈಚೆಗೆ ಸರಳವಾದ ಉತ್ತರಗಳನ್ನು ಕೊಡುವ ಪಂಥಗಳು ಹುಟ್ಟಿಕೊಂಡಿವೆ. ಕೆಲವರಿಗೆ ನಮ್ಮ ಧರ್ಮದ ಪುನರುತ್ಥಾನವಾದರೆ ಸಾಕಲು. ಇನ್ನು ಕೆಲವರಿಗೆ ಬ್ರಾಹ್ಮಣೇತರರಾದ ಜಮೀನುದಾರಿ ಜಾತಿಗಳು ಸರ್ಕಾರ ರಚಿಸಿದರೆ ಸಾಕು. ಒಂದು ಬಗೆಯ ದಮನದ ಬದಲು ಇನ್ನೊಂದು ಬಗೆಯ ದಮನಕ್ಕಾಗಿ ಹಲ್ಲು ಮಸೆಯುವ ಈ ಪಂಥಗಳನ್ನು ಒಪ್ಪಿಕೊಂಡು ಹೊರಟ ಸಾಹಿತಿ ಆತ್ಮಹತ್ಯೆ ಮಾಡಿಕೊಂಡಂಥೆ. ಮಂತ್ರೋಕ್ತವಾಗಿ ಬೆರಳಲ್ಲಿ ಧರಿಸಿದ ದರ್ಭೆಯ ಭ್ರಮೆಯಲ್ಲಿರುವ ವೈದಿಕರು, ಕೋವಿಯೋ, ಲಾಠಿಯೋ ಬಾಯಿ ಮುಚ್ಚಿಸಬಲ್ಲ ರಾಜಕೀಯು ಶಕ್ತಿಯೋ ತಮ್ಮ ಬಳಿಯಿದೆಯೆಂದು ತಿಳಿದ ಆಸ್ತಿವಂತ ಬ್ರಾಹ್ಮಣೇತರರು, ಕೇಂದ್ರದಲ್ಲಿ ತಮ್ಮವರು ಅಧಿಕಾರದಲ್ಲಿದ್ದಾರೆ ಎಂದು ಹಿಗ್ಗುವ ನೌಕರಶಾಹೀ ಲೌಕಿಕ ಬ್ರಾಹ್ಮಣರು – ಈ ಜನ ಕಟ್ಟುವ ಪಂಥಗಳಿಂದ ಲೇಖಕ ಹೊರಗುಳಿಯದಿದ್ದರೆ ಅವನ ಅಂತರಂಗ ಕಲುಷಿತವಾಗುತ್ತದೆ. ನಿಜವಾದ ಲೇಖಕನ ಪ್ರೀತಿಗೆ ಅರ್ಹರಾದವರು ಎಲ್ಲ ಜಾತಿಯ ಎಲ್ಲ ದೇಶದ ನೊಂದವರು, ಸೂಕ್ಷ್ಮರು, ತಮ್ಮ ಸೃಷ್ಟಿಶಕ್ತಿಗೆ ಅವಕಾಶವಿಲ್ಲದಂತೆ ಬಾಯಿ ಕಟ್ಟಿದವರು. ಈ ಜನರ ಸಂಕಟ, ಒಳಗುದಿ ತನ್ನ ಸಾಹಿತ್ಯ ಸೃಷ್ಟಿಗೆ ಪ್ರೇರಕವಾದಾಗ ನಮ್ಮ ಸಾಹಿತ್ಯ ಹೆಚ್ಚು ಶ್ರೀಮಂತವಾದೀತು ಎಂದು ತಿಳಿಯುವ ಲೇಖಕರು ಇವತ್ತಿನ ಸಾಹಿತ್ಯ ಮತ್ತು ರಾಜಕೀಯ ಸಂದರ್ಭದಲ್ಲಿ ಶೀಘ್ರ ಯಶಸ್ಸಿಗೆ ಆಸೆಪಡದಂತೆ ಒಳಗಿನಿಂದ  ಮಾಗುವ ತಾಳ್ಮೆ ತೋರಿಸಬೇಕು.

ಅಡಿಗರ ಅತ್ಯುತ್ತಮ ಕಾವ್ಯ ಇದನ್ನೇ ಹೇಳುತ್ತದೆ:

ಕೌಸಲ್ಯೆ ದಶರಥರ ಪುತ್ರಕಾಮೇಷ್ಟಿಗೆರೆ
ಹಠಾತ್ತಾಗಿ ತಾಗಿದೆ ತ್ರಿಕಾಲ ಚಕ್ರ,
ಆಸ್ಫೋಟಿಸಿತ್ತು ಸಿಡಿತಲೆ; ಗರಿಷ್ಠ ತೇಜದ ಮೊನೆ
ಕೆಳಪಟ್ಟು ಮಣ್ಣುಟ್ಟುನಿಂತ ಘಟನೆ;
. . . . . . . . . . . . . . .
ಅಂತರಂಗದ ಸುರುಳಿಬಿಚ್ಚಿ ಸರ್ಚ್ಲೈಟಲ್ಲಿ
ಹೆದ್ದಾರಿ ಹಾಸಿದ್ದ ರಾಮಚರಿತ.

 – ರಾಮನವಮಿಯ ದಿವಸ. ಈ ಒಳ ಹೊರಗುಗಳ ಅನ್ವಯಕ್ಕೆ, ವ್ಯಕ್ತಿಯ ವಿಕಾಸಕ್ಕೂ ಸಮಾಜಕ್ಕೂ ಇರುವ ಅನ್ಯೋನ್ಯತೆಯನ್ನು ಸಾಧಿಸುವುದಕ್ಕಾಗಿ ಅಡಿಗರು ಕೇಳುತ್ತಾರೆ:

ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು
ಪುರುಷೋತ್ತಮನ ಅಂಥ ರೂಪರೇಖೆ?

ಮನುಷ್ಯನ ಆಂತರಿಕ ವಿಕಾಸಕ್ಕೂ ಸಮಾಜಜೀವಿಯಾದ ಅವನ ಒಟ್ಟು ಸತ್ಯಕ್ಕೂ ಇರುವ ಸಂಬಂಧಗಳನ್ನು ಅಡಿಗರು ಉತ್ತಮ ಕಾವ್ಯ ಎಂದೂ ಕಡೆಗಾಣಿಸಿದ್ದಿಲ್ಲ. ಅಡಿಗರು ಸೂಚಿಸುವ ಪರಿಹಾರಗಳಿಗಿಂತ ಅವರ ಕಾವ್ಯ ಗಮನಿಸುವ ಈ ಸಂಬಂಧ ಮುಖ್ಯ. ಎಲ್ಲವೂ ವ್ಯಕ್ತಿಗತ ಎಂದು ತಿಳಿದ ಅಬ್ಸರ್ಡ್ ಹಿಂಬಾಲಕರಾಗಿದ್ದವರು ಈಗ ಒಂದು ಸಣ್ಣ ಗುಂಪಿನ ಹಿತಾಸಕ್ತಿ ಇಡೀ ಸಮಾಜದ ಆಸಕ್ತಿ ಎಂದು ಭ್ರಮಿಸುತ್ತಿರುವಾಗ ಮನುಷ್ಯನ ಅಂತರಂಗದ  ವಿಕಾಸಕ್ಕೂ ಸಮಾಜಕ್ಕೂ ಇರುವ ಸೂಕ್ಷ್ಮ ಸಂಬಂಧಗಳ ಕೊಂಡಿಗಳನ್ನು  ಕಂಡುಕೊಳ್ಳುವ ಸಾಹಿತ್ಯದ ಒಳದನಿಗಳಿಗೆ ಕಿವುಡಾಗದ ಎಚ್ಚರ ಈಗ ಅತ್ಯವಶ್ಯ.

ಇಂಥ ಒಂದು ಮಾನಸಿಕ ಸಾಂಸ್ಕೃತಿಕ ಸಂದರ್ಭದಲ್ಲಿ ಅಡಿಗರ ಸದ್ಯದ ವಿಚಾರವನ್ನು ತಿಳಿಯಲೆಂದು ಅವರಿಗೆ ಈ ಪ್ರಶ್ನೆಗಳನ್ನು ನಾನು ಕೇಳಿದ್ದೇನೆ.

ಶ್ರೀ ಅಡಿಗರಿಗೆ ಪ್ರಶ್ನೆಗಳು:

೧. ನಿಮ್ಮ ಬಾಲ್ಯದ ನೆನಪುಗಳು ಈಗಲೂ ನಿಮ್ಮ ಕಾವ್ಯದಲ್ಲಿ ಸಜೀವವಾಗಿ ಚಿತ್ರ ಪಡೆಯುತ್ತವೆ. ಇದಕ್ಕೇನು ಕಾರಣವಿರಬಹುದು?

೨. ನಿಮ್ಮನ್ನು ಬಾಲ್ಯದಲ್ಲಿ ಗಾಢವಾಗಿ ಕಲಕಿದ ಯಾವುದಾದರೊಂದು ಘಟನೆಯನ್ನು – ನಿಮ್ಮ ಕಾವ್ಯಸೃಷ್ಟಿಯ ದೃಷ್ಟಿಯಿಂದ ಅಗತ್ಯವಾದ ಅನುಭವವನ್ನು – ದಯಮಾಡಿ ತಿಳಿಸಿ.

೩. ‘ಚಂಡೆಮದ್ದಳೆ’ ಸಂಕಲನದಲ್ಲಿ ನಗರಜೀವನದ ಪ್ರತೀಕಗಳು ಹೆಚ್ಚಾಗಿದ್ದುವು. ಆದರೆ ಅನಂತರದ ಕಾವ್ಯದಲ್ಲಿ ನಿಮ್ಮ ಕಾವ್ಯದ ಭೂಮಿಕೆ ಹೆಚ್ಚುಹೆಚ್ಚಾಗಿ ಹಳ್ಳಿಯ ಪರಿಸರವೇ ಆಗಿದೆ. ಇದಕ್ಕೇನು ಕಾರಣ? ಮೇಲಿನ ಎರಡು ಪ್ರಶ್ನೆಗಳಿಗೂ ಇದಕ್ಕೂ ಸಂಬಂಧವಿದೆಯೆ? ಕನ್ನಡ ಭಾಷೆಯ ಸ್ಥಿತಿಗೂ ಇದಕ್ಕೂ ಸಂಬಂಧವಿದೆಯೆ?

೪. ನಿಮ್ಮ ಕಾವ್ಯದಲ್ಲಿ ಈಚೆಗೆ ವೈದಿಕಧರ್ಮದ ಕರ್ಮಕಾಂಡಗಳನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದೀರಿ. ಆದ್ದರಿಂದ ಕೆಲವು ವಿಮರ್ಶಕರು ನಿಮಗೆ ವೈದಿಕ ಧರ್ಮದಲ್ಲಿ ಸದ್ಯದ ಭಾರತೀಯ ಸಮಸ್ಯೆಗಳಿಗೆ ಉತ್ತರ ಕಂಡಿದೆಯೆಂದು ತಿಳಿದಿದ್ದಾರೆ. ಇದು ಸರಿಯೆ? ನಮ್ಮ ಧರ್ಮವನ್ನು ಪುನರುಜ್ಜೀವನಗೊಳಿಸುವುದರ ಮೂಲಕ ನಮ್ಮ ದೇಶದ ಸಮಸ್ಯೆಘಳನ್ನು ಬಿಡಿಸುವುದು ಸಾಧ್ಯವೆ?

೫. ಜನರಿಗೆ ಸುಲಭವಾಗಿ ಮುಟ್ಟುವಂತಹ ಕಾವ್ಯವನ್ನು ಬರೆಯಬೇಕೆಂದು ಈಚೆಗೆ ನಿಮಗೆ ಅನ್ನಿಸುತ್ತಿದೆಯೆ? ಯಾಕೆ?

೬. ಈಚಿನ ಬರಹಗಾರರಲ್ಲಿ ಯಾರು ನಿಮಗೆ ಭರವಸೆ ಹುಟ್ಟಿಸಿದ್ದಾರೆ?

೭. ನಿಮ್ಮ ಕಾವ್ಯದಲ್ಲಿ ವ್ಯಕ್ತಿಗಳ ಸಂಬಂಧಕ್ಕೆ, ಮುಖ್ಯವಾಗಿ ದಾಂಪತ್ಯಪ್ರೇಮಕ್ಕೆ, ಸಾಕಷ್ಟು ಪ್ರಾಶಸ್ತ್ಯವಿಲ್ಲ ಎನ್ನುತ್ತಾರೆ. ಯಾಕೆ?

೮. ನಿಮ್ಮ ಮೇಲೆ ಪ್ರಭಾವ ಬೀರಿದ ಚಿಂತಕರು, ಲೇಖಕರು ಯಾರು?

೯. ಕನ್ನಡದ ಸದ್ಯದ ಸಾಹಿತ್ಯಕಸಂದರ್ಭ ನಿಮಗೆ ಆಶಾದಾಯಕವೆನ್ನಿಸುತ್ತಿದೆಯೆ?

೧೦. ‘ರಾಮಾಯಣ’ ‘ಭಾರತ’ಗಳ ನಂತರ ಭಾರತೀಯ ಸಾಹಿತ್ಯ ಅತ್ಯುತ್ತಮವಾದ್ದನ್ನು ಸಾಧಿಸಿಲ್ಲ  ಎಂದು ನೀವು ಹಿಂದೊಮ್ಮೆ ಹೇಳಲಿದ ನೆನಪು. ಇದಕ್ಕೇನು ಕಾರಣವಿದ್ದೀತು?

ಉತ್ತರ: ಒಂದು

ನಿಮ್ಮ ಈ ಪ್ರಶ್ನೆ ಸಹಜವಾದುದಾದರೂ ಉತ್ತರಿಸಲು ಅಷ್ಟು ಸುಲಭವಲ್ಲ. ಇದು ಮನಃಶಾಸ್ತ್ರಕ್ಕೆ ಸಂಬಂಧಪಟ್ಟ ಪ್ರಶ್ನೆ ಎಂದು ತೋರುತ್ತದೆ. ಆದರೆ ಪ್ರಶ್ನೆ ಯೋಚಿಸಲು ತಕ್ಕುದಾದುದರಿಂದ ಅದಕ್ಕೆ ಉತ್ತರ ಹುಡುಕಲು ಯತ್ನಿಸಬಹುದು.

ಬಾಲ್ಯದಲ್ಲಿ ಪ್ರಜ್ಞೆ ಇನ್ನೂ ಮೂಡದೆ ಇರುವಾಗ ಮನಸ್ಸು ಏಕಾಗ್ರವಾಗಿ ಕೆಲಸ ಮಾಡುವುದಲ್ಲದೆ ಅದು ಮೇಣದ ಮುದ್ದೆಯ ಹಾಗಿದ್ದು ಹೊರಜಗತ್ತಿನ ವಿದ್ಯಮಾನಗಳ ಮುದ್ರೆ ಅದರ ಮೇಲೆ ನಿರಂತರವಾಗಿ ಬೀಳುತ್ತಲೇ ಇರುತ್ತದಲ್ಲವೆ? ಅಲ್ಲದೆ ಎಳೆಹರೆಯದಲ್ಲಿ ಪ್ರತಿಯೊಂದು ಹೊಸತಾಗಿಯೇ ಇರುವುದೂ, ನಮ್ಮ ಮನಸ್ಸು ನಿರಂತರ ಕೂತೂಹಲಭರಿತವಾಗಿಯೇ ಇರುವುದೂ ಸಹಜ. ಅಂಥ ಅನುಭವ ಮುದ್ರೆಗಳು ಮನಸ್ಸಿನ ತಳದಲ್ಲಿ ಕುಳಿತು ಕಾಯುತ್ತ ಇರುತ್ತವೆಂದು ನನ್ನ ಭಾವನೆ. ತಕ್ಕ ಸಮಯ ಬಂದಾಗ ಅವು ಪ್ರಜ್ಞೆಯ ವೃತ್ತದೊಳಕ್ಕೆ ನುಗ್ಗಿ ಪುನಃ ನಮ್ಮ ಅರಿವಿಗೆ ಬೆರೆತು ಅದಕ್ಕೊಂದು ಹೊಸ ಆಯಾಮವನ್ನು ನೀಡುತ್ತದೆ. ಈ ಕ್ರಿಯೆ ಪ್ರತಿಯೊಬ್ಬ ಮನುಷ್ಯನಿಗೂ ಸಹಜವಾದದು. ಆದರೂ ಸೃಷ್ಟಿಪರ ಕಲ್ಪನೆಯುಳ್ಳ ಕಲೆಗಾರನಲ್ಲಿ ಈ ಕ್ರಿಯೆ ಸೃಜನಕಾಲದಲ್ಲೇ ನಡೆದು ಬರೆದದ್ದು, ಬಣ್ಣಿಸಿದ್ದು ಅಥವಾ ಕೆತ್ತಿದ್ದು ಯಾವುದೋ ಅದಕ್ಕೆ ವಾಸ್ತವವನ್ನು ಮೀರಿದ, ವರ್ತಮಾನವನ್ನೂ ದೇಶವನ್ನೂ ಅತಿಕ್ರಮಿಸುವ ಇನ್ನೊಂದು ಪದರು ಚಿಗುರುತ್ತದೆ. ನನ್ನ ಸಫಲ ಕವನಗಳಲ್ಲಿ ಇಂಥದೊಂದು ಕ್ರಿಯೆ ನಡೆದಿರಬಹುದು.

ಅಲ್ಲದೆ, ನಾನು ತುಂಬ ವೈವಿಧ್ಯಭರಿತವಾದೊಂದು ಹಳ್ಳಿಯಲ್ಲಿ ಹುಟ್ಟಿ ಬಂದವನು. ನನ್ನ ಬದುಕಿನಲ್ಲಿ ಮೊದಲ ಹದಿನಾರು ವರ್ಷಗಳು ಹೆಚ್ಚುಕಡಿಮೆ ಅಲ್ಲಿಯೇ ಕಳೆದದ್ದು. ಸುತ್ತಮುತ್ತಲೂ ಹಾಡಿಗಳು, ಮನೆಯ ಸುತ್ತಲೂ ಹೂ ಹಣ್ಣು ಕಾಯಿಗಳಿಂದ ತುಂಬಿದ ತೆಂಗು ಬಾಳೆ ಹಲಸು ಮಾವುಗಳ,ನಿಂಬೆ ಸೀಬೆ ಮಲ್ಲಿಗೆ ಅಡಕೆ ಜಾಜಿ ಮಂದಾರಗಳ ತೋಟ. ಎದುರು ಗದ್ದೆಗಳು; ಎಡ ದಿಕ್ಕಿನಲ್ಲಿ ಕೆರೆ, ಬಲಕ್ಕೆ ಅರ್ಧ ಫರ್ಲಾಂಗು ದೂರದಲ್ಲೆ ಊರಿನ ದೇವಾಲಯ; ಮೇಲೆ ನೋಡಿದರೇ ಸಾಕು ನಾನಾ ವರ್ಣರಂಜಿತವೂ ಸಂಚಲನ ಶೀಲವಾಗಿಯೂ ಇದ್ದ ಹಾಗೇ ಇರುತ್ತಿದ್ದ ಸ್ಥಿರ ಚಂಚಲ ಆಕಾಶ – ಇಂಥ ಪರಿಸರದ ನಡುವೆ ಇದ್ದವನು ನಾನು. ಅವುಗಳ ಛಾಪು ಈ ತನಕವೂ ಅಚ್ಚಳಿಯದೆ ಇದ್ದದ್ದಕ್ಕಾಗಿ ನಾನು ಆ ಪರಿಸರಕ್ಕೆ ತುಂಬ ಕೃತಜ್ಞ.

ಅಲ್ಲದೆ, ನಮ್ಮ ನಿಜವಾದ, ಮೂರ್ತ ವಸ್ತುಗಳ ಹೆಸರುಗಳಿಂದ ಕೂಡಿದ ಕನ್ನಡ ಭಾಷೆ, ಭಾವಭರಿತವಾಗಿ, ಸ್ಮೃತಿಗಳಿಂದ ಉಜ್ವಲವಾಗಿ ಇರುವುದು ಹಳ್ಳಿಗಳಲ್ಲೇ ಅಲ್ಲವೆ? ಪೇಟೆ – ಪಟ್ಟಣಗಳಲ್ಲಿ ಅತ್ತ ಇಂಗ್ಲಿಷೂ ಅಲ್ಲದ, ಇತ್ತ ಕನ್ನಡವೂ ಅಲ್ಲದ, ಕಾಣದ ಕೇಳದ ಅನುಭವಿಸದ ವಸ್ತುಗಳ ಹೆಸರುಗಳಿಂದ ತುಂಬಿದ ‘ನಾಗರಿಕ’ ಭಾಷೆ ಯಾರದ್ದು? ಯಾವ ಮಟ್ಟದ್ದು? ಕಾವ್ಯಕ್ಕೆ ಬೇಕಾಗುವ ಮೂರ್ತಭಾಷೆ ನಗರಗಳಲ್ಲಿ ಇನ್ನೂ ಸಿದ್ಧಿಸಬೇಕಾಗಿದೆ. ಅಲ್ಲಿಯೇ ಹುಟ್ಟಿ ಬೆಳೆದು ಅಲ್ಲಿನ ವಸ್ತುವಿನೊಡನೆ ಭಾವಸಂಬಂಧವನ್ನು ಬೆಳೆಸಿಕೊಂಡಂಥ ಕವಿಗಳು ನಮ್ಮಲ್ಲಿ ಇನ್ನೂ ಬರಬೇಕಾಗಿದೆಯಲ್ಲವೆ? ಹೀಗಾಗಿ ಮೂರ್ತ ಭಾಷೆ ಅತ್ಯಗತ್ಯವಾದ ಕಾವ್ಯಕ್ರಿಯೆಯಲ್ಲಿ ತೊಡಗಿದಾಗ ನನ್ನ ಕವನಗಳುದ್ದಕ್ಕೂ ಬಾಲ್ಯದ ನೆನಪಿನ ಚಿತ್ರಗಳು ಕಾಣುವುದು ಸಹಜವೇ ಎಂದು ನನಗೆ ಅನ್ನಿಸುತ್ತದೆ.

ಉತ್ತರ: ಎರಡು

ನನ್ನನ್ನು ಬಾಲ್ಯದಲ್ಲಿ ಆಳವಾಗಿ ಕಲಕಿದ್ದ ಅನೇಕ ಘಟನೆಗಳು ನೆನಪಿಗೆ ನುಗ್ಗಿ ಬರುತ್ತವೆ – ತತ್‌ಕ್ಷಣ. ಇವುಗಳಲ್ಲಿ ಹೆಚ್ಚಿನವು ನನ್ನ ಕಾವ್ಯಸೃಷ್ಟಿಯಲ್ಲಿ ಬಂದು ಸೇರಿಕೊಂಡಿವೆ. ಒಂದಲ್ಲ ಒಂದು ಸಲ. ಇವುಗಳಲ್ಲಿ ಯಾವುದು ಹೆಚ್ಚು ಮಹತ್ವದ್ದು ಎಂದು ಹೇಳುವುದು ಕಷ್ಟ. ಹಿಂದಕ್ಕೆ ಮನಸ್ಸು ಹಾಯಿಸಿದ ತತ್‌ಕ್ಷಣ ಕೇಳಿಬರುವುದು – ಕಾಗೆಯ ಕೊಕ್ಕಿನಲ್ಲಿ ಸಿಕ್ಕಿ ತಪ್ಪಸಿಕೊಳ್ಳಲಾರದೆ ಅರಚುತ್ತಿರುವ ಬಡಪಾಯಿ ಕಪ್ಪೆಯಿಂದ ಕರುಳು ಹರಿಯುವಂಥ ಆಕ್ರಂದನ; ಎಷ್ಟು ಕಷ್ಟಪಟ್ಟು ಎಗರಾಡಿದರೂ ಆ ಕಪ್ಪೆಯನ್ನು ಬದುಕಿಸಲಾರದ ನನ್ನ ಎದೆಯ ವ್ಯರ್ಥ ಡವಗುಟ್ಟುವಿಕೆ; ಮೊದಲ ಮಳೆ ಬಿದ್ದೊಡನೆಯೇ ನಮ್ಮ ಮನೆಯ ನೆರೆಯಲ್ಲೇ ಇದ್ದು, ನಾವು ಕೆರೆಯೆಂದು ಕರೆಯುತ್ತಿದ್ದ ಒಂದು ದೊಡ್ಡ ಹೊಂಡದಲ್ಲಿ ಕೊಂಚ ನೀರೂರಿದೊಡನೇ ತಂಡತಂಡವಾಗಿ ಪಂತಿಪಂತಿಯಾಗಿ ಕುಳಿತು ಅರಸಿನ ಅರಸಿನವಾಗಿ ವಟಗುಟ್ಟುತ್ತಿದ್ದ ದೊಡ್ಡ ದೊಡ್ಡ ಕಪ್ಪೆಗಳ ಸಮ್ಮೇಳನದ, ಸಂವಾದದ ದೃಶ್ಯ ಮತ್ತು ಶ್ರವಣ – ಹೀಗೆ ಪಟ್ಟಿ ಮಾಡತೊಡಗಿದರೆ ಒಂದರ ಮೇಲೊಂದು ನೆನಪು ಕೆರಳಿ ಉರಿಯುತ್ತವೆ.

ಇವುಗಳಲ್ಲೆಲ್ಲ ಹೆಚ್ಚು ಮಹತ್ವದ್ದು ಯಾವುದು ಎಂದು ಹೇಳುವುದು ಕಷ್ಟ ಎಂದೆ. ಒಂದೊಂದು ಹಂತದಲ್ಲಿ ಒಂದೊಂದು ಹೆಚ್ಚು ಮಹತ್ವದ್ದಾಗಿ ಕಂಡುಬಂದಿದೆ. ಇತ್ತೀಚಿನ ‘ಇದನ್ನು ಬಯಸಿರಲಿಲ್ಲ’ ಎಂಬ ಕವನದಲ್ಲಿ ಬಳಸಲಾಗಿರುವ ನೀರಿನಲ್ಲಿ ಮುಳುಗಿ ಸಾವಿನ ಅಂಚನ್ನು ಮುಟ್ಟಿ ಬಂದ ಅನುಭವ ಅತ್ಯಂತ ಮಹತ್ವದ್ದಿರಬಹುದೇ ಎಂಬ ಶಂಕೆ ಈಗ ಮೂಡುತ್ತಿದೆ. ಆ ಅನುಭವವನ್ನು ಕೊಂಚ ವಿಸ್ತಾರವಾಗಿ ಹೇಳಿಬಿಡಬಹುದೋ ಏನೋ.

ಮಳೆಗಾಲ. ನಮ್ಮ ಕೆರೆಯಲ್ಲಿ ನೀರು ತುಂಬಿದ್ದು ನಮ್ಮ ಮನೆಯ ತರುಣರೆಲ್ಲರೂ ಈಜಲು ಕೆರೆಗೆ ಧುಮುಕಿದರು ಒಂದು ದಿನ. ಆಗ ನನಗೆ ಎಂಟೊಂಬತ್ತು ವರ್ಷವಿದ್ದಿರಬೇಕು. ಈಜುವವರನ್ನು ಕಂಡು ನನಗೂ ಸ್ಫೂರ್ತಿ ಬಂತು. ಈಜು ಮಾತ್ರ ತಿಳಿಯದು. ಈಜುವುದೆಂದರೆ ನೀರಿನಲ್ಲಿ ಬಿದ್ದು ಕೈಗಳನ್ನು ಬಡಿಯುವುದು ಎಂದು ನನಗೆ ಅನ್ನಿಸಿರಬೇಕು. ಅವರೆಲ್ಲ ಈಜಾಟದಲ್ಲಿ ಮಗ್ನರಾಗಿದ್ದಾಗ ನಾನು ನೀರಿಗಿಳಿದು ನಮ್ಮ ಸೋದರಮಾವನ ಬಡಿಯುತ್ತಿದ್ದ ಕಾಲಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಬಲವಾಗಿ ಕಾಲು ಬಡಿಯತೊಡಗಿದೆ. ಈಜಾಡುತ್ತಿದ್ದ ಆತ ಅಕಸ್ಮಾತ್ತಾಗಿ ಬಂದ ಈ ತಡೆಯನ್ನು ಝಾಡಿಸಿ ಕಳೆದು ಮುಂದೆ ಈಜತೊಡಗಿದ. ಈ ಗೊಂದಲದಲ್ಲಿ, ಇದ್ದ ಆಸರೆ ತಪ್ಪಿ ನನ್ನ ಆಯ ತಪ್ಪಿತು. ಕೆರೆ ಇಳಿಜಾರಾಗಿದ್ದದ್ದರಿಂದ ನಾನು ಸ್ಥಿರವಾಗಿ ನಿಲ್ಲಲಾರದೆ ಕೊಂಚಕೊಂಚವಾಗಿ ಅದರ ಆಳದ ಕಡೆಗೆ ಸರಿಯತೊಡಗಿದೆ. ಆದರೂ ಕೈ ಬಡಿಯುತ್ತಲೇ ಇದ್ದೆನಂತೆ. ನೀರಿನಲ್ಲಿ ಕೊಂಚಕೊಂಚವಾಗಿ ಮುಳುಗಿ ಹೋಗುತ್ತಿದ್ದರೂ ಬಡಿಯುತ್ತಿದ್ದ ಕೈಗಳು ಕಾಣುತ್ತಿದ್ದದ್ದರಿಂದ ನಮ್ಮ ಅಣ್ಣ ನಾನು ಈಜಾಡುತ್ತಲೇ ಇದ್ದೆನೆಂದು ತಿಳಿದವನಂತೆ. ಆದರೆ ಕ್ರಮೇಣ ಬಾಯಿತನಕವೂ ನೀರು ಬಂದು ಕೇವಲ ಕೈಬೆರಳುಗಳು ಮಾತ್ರ ಕಾಣಿಸುತ್ತಿದ್ದದ್ದರಿಂದ ನನ್ನ ಕಡೆಯೇ ದೈವವಶಾತ್‌ ನೋಡುತ್ತಿದ್ದ ನಮ್ಮಣ್ಣನಿಗೆ ಈ ವಿಚಿತ್ರ ಈಜಾಟದ ಅರ್ಥ ಆಗಿರಬೇಕು. ನನ್ನ ಕಡೆಗೆ ನುಗ್ಗಿ ನನ್ನನ್ನು ಹಿಡಿದೆತ್ತಿ ನೀರಿನ ಹೊರಕ್ಕೆ ತಂದು ಒಂದು ಬಾರಿಸಿದನಂತೆ. ಹೀಗೆ ನಾನು ಬದುಕಿದೆ. ಆ ವಿಚಿತ್ರಾನುಭವದ ಭಯದ ಕಂಪ ನೆನದಾಗಲೆಲ್ಲ ಮರುಕೊಳಿಸುತ್ತದೆ. ಅದರ ಪರಿಣಾಮವೋ ಅಥವಾ ಆ ಕೊಳಕು ಕೆರೆಯ ನೀರು ಕುಡಿದದ್ದರಿಂದಲೋ ಅಂತೂ ಅನಂತರ ಎರಡು ವರ್ಷಗಳ ಕಾಲ ನನಗೆ ಜ್ವರ ತಪ್ಪಲಿಲ್ಲ: ಪ್ರತಿದಿನ, ದಿನ ಬಿಟ್ಟು ದಿನ, ಮೂರು ಬಾರಿ – ಹೀಗೆ. ಅನಂತರ ಗೋಕರ್ಣ ಯಾತ್ರೆಗೆ ಹೋಗುತ್ತಿದ್ದ ನಮ್ಮ ಚಿಕ್ಕಪ್ಪ, ಚಿಕ್ಕಮ್ಮ ಮತ್ತು ನಮ್ಮ ಸೋದರ ಅತ್ತೆಯವರ ಜೊತೆಗೆ ನಾನೂ ಯಾತ್ರೆ ಹೋಗಿ ಅಲ್ಲಿ ಕೋಟಿತೀರ್ಥದಲ್ಲಿ ಮುಳುಗುಹಾಕಿ ಬಂದೆ. ಅನಂತರ ಜ್ವರ ಬರಲಿಲ್ಲ. ಜ್ವರ ಮತ್ತೆ ಬಾರದೆ ಇದ್ದದ್ದಕ್ಕೆ ಕೋಟಿತೀರ್ಥ, ಸಮುದ್ರ ಸ್ನಾನಗಳೇ ಕಾರಣ ಎಂದು ನಮ್ಮ ಅತ್ತೆ ಕೊನೆಯ ತನಕವೂ ಹೇಳುತ್ತಿದ್ದರು.

ಉತ್ತರ: ಮೂರು

ಅನಂತಮೂರ್ತಿ, ನಿಮ್ಮ ಈ ಪ್ರಶ್ನೆ ಕಾವ್ಯಾಭ್ಯಾಸದ ದೃಷ್ಟಿಯಿಂದ ತುಂಬ ಮಹತ್ವದ್ದಿರಬೇಕು. ಉತ್ತಮ ವಿಮರ್ಶಕರು ಈ ಪ್ರಶ್ನೆಗೆ ಉತ್ತರ ಕೊಡಲು ಸಮರ್ಥರು. ನಿಮಗೂ ಈ ಪ್ರಶ್ನೆಗೆ ಉತ್ತರ ಗೊತ್ತಿರಬಹುದು. ನೀವು ಹೇಳಿದ ಹಾಗೆ ಮಾಡಿಲ್ಲವಾಗಿ ಆಗಿರುವುದು ಹೌದು ಅನ್ನಿಸುತ್ತದೆ. ನನ್ನ ಕಾವ್ಯವನ್ನು ನಾನು ಅಭ್ಯಾಸ ಮಾಡಿಲ್ಲವಾಗಿ ಪ್ರಶ್ನೆಗೆ ಉತ್ತರ ಹೇಳುವುದು ನನಗೆ ಕೊಂಚ ಕಷ್ಟವಾಗುತ್ತದೆ. ಪ್ರಯತ್ನಿಸಿ ನೋಡುತ್ತೇನೆ. ಆಗಬಹುದು – ತಾನೆ?

ಚಂಡೆಮದ್ದಳೆಯಲ್ಲಿನ ಪದ್ಯಗಳನ್ನು ರಚಿಸಿದ ಕಾಲದಲ್ಲಿದ್ದ ನನ್ನ ಮನಃಸ್ಥಿತಿಯನ್ನು ನೆನೆಸಿಕೊಂಡಾಗ ಆಗ ನನ್ನ ಮನಸ್ಸು ಆ ಕಾಲಕ್ಕೆ ತೀರ ಸಮೀಪದ ಭೂತಕಾಲದ ವಿರುದ್ಧ ದಂಗೆಯ ಗುಂಗಿನಲ್ಲಿದ್ದಂತೆ ತೋರುತ್ತದೆ. ಕಾವ್ಯದ ಬಗ್ಗೆ ಒಂದು ಹೊಸ ಧೋರಣೆಯೂ ರೂಪುಗೊಳ್ಳುತ್ತಿದ್ದ ಕಾಲ ಅದು. ಆಗ್ಗೆ ರಚಿತವಾದ ಪದ್ಯಗಳಲ್ಲಿ ಪ್ರಜ್ಞೆಯ ಮೇಲೇ ಹೆಚ್ಚು ಒತ್ತು ಬಿತ್ತೋ ಏನೋ. ನಿನ್ನೆಯಿಂದ ಸಂಪೂರ್ಣ ವಿಮೋಚನೆ ಪಡೆಯಬೇಕೆಂಬ ಆವೇಶದಲ್ಲಿ ಆಗ ನನ್ನ ಪ್ರಜ್ಞೆಯನ್ನು ತುಂಬಿದ್ದ ನಗರ ಜೀವನದ ಪ್ರತಿಮೆಗಳು ಕಾವ್ಯದಲ್ಲಿ ಎದ್ದುಕಾಣುವ ಹಾಗೆ ಆಗಿರಬೇಕು. ಪಾಶ್ಚಾತ್ಯ ದೇಶಗಳಲ್ಲಿ ಆಧುನಿಕತೆಯ ಮುಖ್ಯ ಲಕ್ಷಣ ನಗರಪ್ರಜ್ಞೆಯೇ ಆಗಿದ್ದು ಇಂಗ್ಲಿಷ್‌ ಕಾವ್ಯದ ಪ್ರಭಾವದಿಂದ ಅದರ ಮೇಲೇ ಘಾತ ಬಿದ್ದಿರಬಹುದು. ಆದರೆ ಕಾವ್ಯ ಕೇವಲ ಪ್ರಜ್ಞೆಯ ಕೆಲಸವೇನೂ ಅಲ್ಲ. ಪ್ರಜ್ಞೆ ಮತ್ತು ಮನಸ್ಸಿನ ಒಳತಳಗಳಿಂದೇಳುವ ವಿಸ್ಮೃತಾನುಭವ ಪ್ರತಿಮೆಗಳ ಹಠಾತ್‌ ಸಂಯೋಗವೇ ಕಾವ್ಯದ ಮೂಲವಲ್ಲವೆ? ಕಾವ್ಯದ ಕೆಲಸ ಹಾಗೆ ನಡೆಯುತ್ತ ಬಂದಾಗ ಮನಸ್ಸಿನ ಮೇಲು ಪದರಗಳಲ್ಲೆ ತುಂಬಿದ್ದ ನಗರ ಪ್ರತಿಮೆಗಳ ರಭಸ ಪ್ರಯೋಗ ಕ್ರಮೇಣ ಕಡಿಮೆಯಾಗುತ್ತ ಬಂದಿರಬೇಕು ಅನ್ನಿಸುತ್ತದೆ. ನಮ್ಮಲ್ಲಿ ನಗರಜೀವನ ಇನ್ನೂ ಹಳ್ಳಿಯ ಸಂಸ್ಕೃತಿಯ ಮೂಲ ಪೊರೆಯನ್ನು ಕಳಚಿಕೊಂಡು ತನ್ನದೇ ಆದ ವೈಶಿಷ್ಟ್ಯಗಳನ್ನು ಬೆಳೆಸಿಕೊಂಡ ವಿಶಿಷ್ಟ ಸಂಸ್ಕೃತಿ ರೂಪವಾಗಿ ಮಾರ್ಪಾಟುಗೊಂಡಿಲ್ಲ. ನಗರದ ಬದುಕು ಅಸ್ಥಿರವೂ ಚಂಚಲವೂ ಮೌಲ್ಯರಹಿತವೂ ಆಗಿ ಹಬ್ಬಿಕೊಳ್ಳುತ್ತ ಬಂದಿರುವುದರಿಂದ ನಿಜವಾದ ಬದುಕಿನ ಸೆಲೆಗಳನ್ನು ಇನ್ನೂ ಹಳ್ಳಿಯಲ್ಲೇ – ಹಳ್ಳಿ ಎಷ್ಟೇ ಅವನತಿ ಹೊಂದಿದ್ದರೂ – ಕಾಣಬೇಕಾಗಿದೆ. ಕಾವ್ಯಕ್ಕೆ ತಕ್ಕ ಭಾಷೆಯನ್ನೂ ಪ್ರತಿಮೆಗಳನ್ನೂ ಹಳ್ಳಿಯಿಂದ ಬಂದವನು ತನ್ನ ಮೂಲದಲ್ಲೇ ಅರಸುವುದು ಸಹಜ. ಅಲ್ಲದೆ ನಗರದಲ್ಲಿ ನಾವು ಈಗ ಕೇಳುತ್ತಿರುವುದು ಮನಸ್ಸಿನ ಆಳಗಳನ್ನು ಪಡಿನುಡಿಯ ಲಾರದ ಇಂಗ್ಲಿಷ್‌ – ಕನ್ನಡಗಳ ಕಲಬೆರಕೆಯ ಭಾಷೆ ತಾತ್ಕಾಲಿಕವಾದೊಂದು ಸಂಪರ್ಕ ವ್ಯವಸ್ಥೆಗಿಂತ ಹೆಚ್ಚಿನದು ಅಲ್ಲ.

ಕನ್ನಡದ ಪ್ರಕೃತ ಸ್ಥಿತಿಗೂ ಈ ಪ್ರಶ್ನೆಗೂ ಸಂಬಂಧವಿದೆ. ಕೇವಲ ಕಾವ್ಯೋಪಯೋಗಿಯಾಗಿ ಬೆಳೆದ ನಮ್ಮ ನಮ್ಮ ಗ್ರಾಂಥಿಕ ಭಾಷೆ, ಆಡುಮಾತು, ಆಧುನಿಕ ಜ್ಞಾನ – ವಿಜ್ಞಾನಗಳಿಂದ ಬಂದ ನಮ್ಮ ಮನಸ್ಸಿನಲ್ಲಿ ತುಂಬಿಕೊಂಡಿರುವ ನೂತನ ವಿಚಾರ ಕಲ್ಪನೆಗಳು – ಈ ಮೂರರ ಮಧ್ಯೆ ನಡೆಯುತ್ತಿರುವ ತುಮುಲವೇ ಇಂದಿನ ನಮ್ಮ ಸಾಹಿತ್ಯ ಜೀವನದ ಸಾರಾಂಶ. ಕನ್ನಡ ಭಾಷೆಯಲ್ಲಿ ಆಧುನಿಕ ಜ್ಞಾನವಿಜ್ಞಾನಗಳ ಬಗ್ಗೆ ಸ್ವತಂತ್ರ ಪ್ರಯೋಗದಿಂದ ಬರಬೇಕಾದ ಸ್ವತಂತ್ರ ಕೃತಿಗಳು ಇನ್ನೂ ಬರಬೇಕು. ಚಿಂತನಕ್ಕೆ ತಕ್ಕ ಭಾಷೆ ಇನ್ನೂ ಸಿದ್ಧವಾಗದೆ ಇರುವುದರಿಂದ ನಿಜವಾದ ಕನ್ನಡದಲ್ಲಿ ಬರೆಯಬೇಕೆಂಬ ಕವಿ, ತನ್ನ ಮನಸ್ಸಿನ ಆಳಗಳನ್ನು ಇಂದಿನ ವಿಶಿಷ್ಟ ಜ್ಞಾನಾನುಭವದ ಸಂದರ್ಭದಲ್ಲಿ ತೆರೆದು ತೋರಲು ಯತ್ನಿಸುವಾಗ ದೊಡ್ಡ ಹೋರಾಟವನ್ನು ನಡೆಸಬೇಕಾಗುತ್ತದೆ. ಈ ಹೋರಾಟದಲ್ಲಿ ಕವಿಗೆ ಬೆಂಬಲವಾಗಬಲ್ಲುದು ಅತ್ಯಂತ ಸಹಜವೂ ಆತನಿಗೆ ಅತ್ಯಂತ ವಾಸ್ತವವೂ ಆದ ಹಳ್ಳಿಯ ಅನುಭವ, ಅದರ ಭಾಷೆ.

ಉತ್ತರ: ನಾಲ್ಕು

ಬದುಕಿನ ಅನಂತ ವೈವಿಧ್ಯವನ್ನು ಗುರುತಿಸಿ ಮನ್ನಿಸುವುದು ಸಾಹಿತ್ಯ ಪ್ರಜ್ಞೆಯ ಮೂಲ ಲಕ್ಷಣ. ಇದನ್ನು ಮರೆತು ಸಾಹಿತ್ಯಕ್ಕೆ ಸಂಬಂಧಪಡದ ಹಾಗೆ ಆಡುವ ಮಾತುಗಳನ್ನೂ, ಸ್ವಾರ್ಥದಿಂದಲೂ ವ್ಯಕ್ತಿದ್ವೇಷದಿಂದಲೂ ಪ್ರೇರಿತವಾದ ವಿಮರ್ಶೆಯೆಂಬ ಆಪಾದನೆಗಳನ್ನೂ ಲಕ್ಷಿಸಬೇಕಾಗಿಲ್ಲ. ತಾತ್ಕಾಲಿಕ ಘೋಷಣೆಗಳ ಸಂತೆ ಗದ್ದಲದಲ್ಲಿ ಬುದ್ಧಿಪೂರ್ವಕವಾಗಿ ಬೆರೆತು ಅದೇ ಸತ್ಯವೆಂದು ಸಾರುತ್ತ, ಅದನ್ನೇ ಎಲ್ಲರ ಮೇಲೂ ಹೇರುವ ಪ್ರಯತ್ನವನ್ನು ನಡೆಸುವ, ತನ್ನ ಹಾಗೇ ಇನ್ನೊಬ್ಬನಿಗೂ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ಯ್ರ ಇದೆ ಎಂಬುದನ್ನು ಎಂದೂ ಮನ್ನಿಸಲಾರದ ಫ್ಯಾಸಿಸ್ಟರ ವಾದ ಸತ್ಯಸ್ಥಿತಿಯನ್ನು ಕಲಕಬಹುದಲ್ಲದೆ ತೊಡೆದುಹಾಕಲಾರದು ಎಂದು ನನ್ನ ನಂಬಿಕೆ. ಅಂಥ ವ್ಯಕ್ತಿ ದ್ವೇಷಪ್ರೇರಿತವೂ ಪೂರಿತವೂ ಆದ ಆಪಾದನೆಗಳ ಬಗ್ಗೆ ನನಗೆ ತಿರಸ್ಕಾರ.

ನಮ್ಮ ಸಂಸ್ಕೃತಿ ವೈದಿಕ, ಜೈನ, ಬೌದ್ಧ ಮತಗಳ ಸಮನ್ವಯವಾದದ್ದಲ್ಲದೇ ಕೇವಲ ವೈದಿಕವೇನೂ ಅಲ್ಲ ಎಂಬ ಸಂಗತಿ ಇತಿಹಾಸ ಬಲ್ಲವರಿಗೆ ತಿಳಿದಿದೆ. ಸಂಪ್ರದಾಯಸಿದ್ಧವಾಗಿ ಬಂದ ನಮ್ಮ ಭಾಷೆಯೂ ಅಂಥ ಸಂಸ್ಕೃತಿಯ ವ್ಯವಹಾರ ರೂಪ. ಅದನ್ನು ವೈದಿಕವೆಂದರೆ ಈಗ ಕನ್ನಡ ಭಾಷೆಯನ್ನು ಬಳಸುತ್ತಿರುವವರೆಲ್ಲರೂ ವೈದಿಕರೇ ಸರಿ – ತಾವು ಅವೈದಿಕರೆಂದು ಸಾರುವವರೂ ಸೇರಿ. ಸಿದ್ಧವಾಗಿರುವ ಭಾಷೆ, ಸಿದ್ಧವಾಗಿರುವ ಸಂಸ್ಕೃತಿ ಇವುಗಳ ಮೂಲಕವೇ ಹೊಸ ಅಭಿಪ್ರಾಯಗಳನ್ನೂ ಅನುಭವಗಳನ್ನೂ ಹೊಸ ಹೊಸ ರೀತಿಯಲ್ಲಿ ಹೇಳುತ್ತ ಕ್ರಮ ಕ್ರಮವಾಗಿ ಸಿದ್ಧಭಾಷೆಗೆ ಹೊಸ ಪದರುಗಳನ್ನು ಹುಟ್ಟಿಸಬೇಕು. ಪ್ರತಿಯೊಬ್ಬ ಕವಿಯೂ ತಾನು ಇಂದ್ರಿಯಗಳ ಮೂಲಕ ಅನುಭವಿಸಿದ್ದು, ಮನಸ್ಸಿನ ಮೂಲಕ ಯೋಚಿಸಿದ್ದು, ಓದಿ ಅರಗಿಸಿಕೊಂಡಿದ್ದು, ಕನಸುಕಂಡಿದ್ದು ಇವುಗಳ ಮೂಲಕವಲ್ಲದೆ ಬೇರೆ ಹೇಗೆ ತಾನೆ ಅಭಿವ್ಯಕ್ತಿಯನ್ನು ಸಾಧಿಸಬಲ್ಲ? ಪ್ರತಿಯೊಬ್ಬನ ವಿಶಿಷ್ಟ ಭಾಷೆಯೂ ಅಂತರಂಗದ ತುಡಿತವೇ ಸರಿ. ಈ ಅಂತರ್ಭಾಷೆಗೂ ಎಲ್ಲರೂ ಉಪಯೋಗಿಸುವ ಸಿದ್ಧಭಾಷೆಗೂ ಸಾಂಗತ್ಯ ತಂದಾಗಲೇ ಕವಿ ಸಫಲನಾಗಬಲ್ಲ. ಆಗಲೇ ವೈಯಕ್ತಿಕವಾದದ್ದು ಸಾರ್ವತ್ರಿಕವಾಗುತ್ತದೆ; ತಾತ್ಕಾಲಿಕ ಸಾರ್ವಕಾಲಿಕವಾಗಿ ನಿಲ್ಲುತ್ತದೆ. ಆದಕಾರಣವೇ ಇಂದಿನ ಬದುಕಿಗೆ ತಕ್ಕ ಮೌಲ್ಯಗಳನ್ನು ಸೃಷ್ಟಿಸಬೇಕಾದಾಗ ಅದಕ್ಕೆ ತಕ್ಕ ಪ್ರತಿಮೆಗಳಾಗಿ ನಮ್ಮ ಸಂಸ್ಕೃತಿಯಲ್ಲಿ ಹೊಸ ಸೃಷ್ಟಿಯ ಕಾಲದಲ್ಲಿ ರಚಿತವಾಗಿದ್ದ ವೇದಗಳಿಂದ, ಇತರ ಸಂಸ್ಕೃತಿ ಶಿಖರಗಳಿಂದ ನಾನು ತಕ್ಕ ಪ್ರತೀಕಗಳನ್ನು ಬಳಸಿಕೊಳ್ಳುತ್ತೇನೆ. ಇಂದು ನಾವು ಮುಂಗಾಣುತ್ತಿರುವ ಹೊಸ ಬದುಕಿನ ಕಟ್ಟಡ ನಮ್ಮ ಪರಂಪರಾಗತ ಜೀವನದಲ್ಲಿ ಅಂತರ್ಗತವಾಗಿರುವ ಸಾರ್ವಕಾಲಿಕ ಮೌಲ್ಯಗಳ ಫಲವಾಗಿ, ನಮ್ಮ ಸಂಪ್ರದಾಯದ ನೆಲಗಟ್ಟಿನಮೇಲೇ ರೂಪುಗೊಳ್ಳುವಂಥದಲ್ಲದೇ ಆಕಾಶದಿಂದ ಕಳಚಿ ಬೀಳುವಂಥದಲ್ಲ.

ನನ್ನ ಕಾವ್ಯವನ್ನು ಓದಿ ತಿಳಿದಂಥವರಿಗೆ ಅಲ್ಲಿ ಇತ್ತೀಚಿನ ವರ್ಷಗಳಲ್ಲಿ ಒತ್ತು ಬೀಳುತ್ತಿರುವುದು ವ್ಯಕ್ತಿತ್ವದ ವೈಶಿಷ್ಟ್ಯ ಘನತೆಗಳ ಮೇಲೆ,ಕಾಯಕದ ಮೇಲೆ ಎನ್ನುವುದು ತಿಳಿದಿರಬೇಕು. ಹೇಗೆ ಋಷಿಗಳು ತಾವು ತಮ್ಮ ಮನಸ್ಸಿನ ಮೂಲಕ ಕಂಡ ದೇವತೆಗೆ ತಕ್ಕ ದೃಶ್ಯರೂಪವಾಗಿ ಒಂದು ‘ಕರ್ಮ’ವನ್ನು ಕಂಡು ನಡೆಸಿದರೋ ಅದೇ ರೀತಿ ನಾವು ಇಂದು ವ್ಯಕ್ತಿತ್ವದ ಘನತೆ, ಸಮಾನತೆ, ಸ್ವಾತಂತ್ಯ್ರ,ವಿಚಾರಶೀಲತೆ ಈ ಮಂತ್ರ ದೇವತೆಗಳಿಗೆ ತಕ್ಕ ರೂಪುಗಳನ್ನು ‘ಕೃತಿ’ಯಲ್ಲಿ ಪಡೆಯುವುದು ಅಗತ್ಯ ಎನ್ನುವುದಕ್ಕೆ ಪ್ರತಿಮೆಯಾಗಿ ನಮ್ಮ ಸಂಸ್ಕೃತಿಯವೇ ಆದ ಉದಾಹರಣೆಗಳಾಗಿ, ಸಂಸ್ಕೃತಿ ಸಾತತ್ಯದ ಕುರುಹಾಗಿ ನನ್ನ ಕಾವ್ಯದಲ್ಲಿ ಕರ್ಮಕಾಂಡದ ಕೆಲವು ಉದಾಹರಣೆಗಳನ್ನು ಇತರ ಆಧುನಿಕ ಪ್ರತಿಮೆಗಳ ಜೊತೆಗೇ ಬಳಸಲಾಗಿದೆ. ಕಾವ್ಯದಲ್ಲಿ ಸೃಷ್ಟಿಕ್ರಿಯೆ ನಡೆಯಬೇಕಾದದ್ದು ಹೀಗೆಯೇ ಅಲ್ಲವೆ?

ಬದುಕು ಎಂದೂ ಪುನರಾವೃತ್ತಿಗೊಳ್ಳುವಂಥದಲ್ಲ. ಅದರ ವೈವಿಧ್ಯ ಅನೂಹ್ಯ ಎಂದು ತಿಳಿದ ನನಗೆ ಹಿಂದಿನ ಯಾವುದೇ ಕಾಲದ ವಿಶಿಷ್ಟ ಸಮಾಜ ವ್ಯವಸ್ಥೆಯನ್ನು ಮತ್ತೆ ಸ್ಥಾಪಿಸಲು ಆಗುವುದಿಲ್ಲ, ಹಾಗೆ ಪ್ರಯತ್ನಪಟ್ಟರೂ ಅದು ಬೇರೆ ರೀತಿಯದೇ ಆಗುತ್ತದೆ ಎಂಬುದು ಚೆನ್ನಾಗಿ ಗೊತ್ತಿದೆ. ನಮ್ಮ ಸಂಸ್ಕೃತಿಯ ಮೂಲ ಸ್ಫೂರ್ತಿಗಳಾದ ಅಮೂರ್ತ ಶಕ್ತಿಗಳು ಕೆಲವು ಇರುವುದಾಗಿ ಅವು ನಮ್ಮ ಅವು ನಮ್ಮ ಮುಂದಿನ ಸಮಾಜದಲ್ಲಿ ಇಂದಿನ ಸಂದರ್ಭ, ಸಮಸ್ಯೆ, ಅಗತ್ಯಗಳಿಗೆ ಅನುಸಾರವಾಗಿ ತಕ್ಕ ರೂಪದಲ್ಲಿ ವ್ಯಕ್ತಗೊಳ್ಳುತ್ತವೆಂದು ನನ್ನ ಅಭಿಪ್ರಾಯ. ನಮ್ಮ ಈಗಿನ ಸಂಪ್ರದಾಯ ಜಡ್ಡುಕಟ್ಟಿ ಜಡವಾಗಿ ತನ್ನ ಸೃಜನಶೀಲತೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದೆಯಾಗಿ ಉಪಚಾರಕ್ಕಾಗಿ ಅಥವಾ ತಮಾಷೆಗಾಗಿ ಕೂಡ ವೈದಿಕ ಎನ್ನಬಹುದಾದ ಧರ್ಮವಾಗಲಿ, ಸಂಸ್ಕೃತಿಯಾಗಲಿ ಈಗ ಉಳಿದಿಲ್ಲ. ಕೆಲವು ಆಚಾರಗಳು ಮಾತ್ರ ಅವಶೇಷವಾಗಿ ಜಡವಾಗಿ ಉಳಿದಿವೆ. ಇಂದಿನ ಆರ್ಥಿಕ ಪರಿಸ್ಥಿತಿಯಿಂದಾಗಿ, ಸ್ವಾತಂತ್ಯ್ರ ಸಮಾನತೆ ಎಂಬ ಹೊಸ ಮೌಲ್ಯಗಳ ಪ್ರಭಾವದಿಂದಾಗಿ ಕ್ರಮೇಣ ಅವೂ ನಾಶವಾಗಿ ಹೋಗುತ್ತವೆ. ಹೊಸ ಬದುಕಿನ ಹೊಸ ವಾತಾವರಣಕ್ಕನುಗುಣವಾಗಿ ಹೊಸ ರೀತಿಯಲ್ಲಿ ನಮ್ಮ ಸಮಾಜ ರೂಪುಗೊಳ್ಳುತ್ತದೆ – ನಿಧಾನವಾಗಿ. ಇದು ಮಾನವನ ಇತಿಹಾಸದಲ್ಲಿ ನಡೆಯುತ್ತಾ ಬಂದಿರುವ ಸಹಜವಾದ ಕ್ರಿಯೆ. ಆದರೆ ಇನ್ನೂ ಅಮೂರ್ತವಾಗಿ, ಆದರೆ ಬಹುಶಃ ನಮ್ಮ ಜಾಯಮಾನಕ್ಕೆ ಸಹಜವಾಗಿ ಉಳಿದಿರುವ ನಮ್ಮ ಸಂಸ್ಕೃತಿಯ ಮೂಲ ಪ್ರೇರಣೆಗಳಲ್ಲಿ ಹಲವು ನಮ್ಮ ಹೊಸ ಸಂಸ್ಕೃತಿಯಲ್ಲೂ ಮೈಗೂಡುತ್ತವೆ ಎಂದೂ ನನಗೆ ನಂಬಿಕೆ ಇದೆ. ಮನುಷ್ಯನು ಸಮಾಜದ ವ್ಯವಸ್ಥೆಗಾಗಿ ಮಾಡಿಕೊಲ್ಳುವ ಏರ್ಪಾಟುಗಳ ರೂಪ ಬದಲಾಗುವುದಲ್ಲದೆ ಮನುಷ್ಯನ ಮೂಲ ಚೇತನದ ಪ್ರಕೃತಿಸಿದ್ದ ಗುಣಗಳು ಹಾಗೆ ಬದಲಾಗುವುದಿಲ್ಲ. ಪ್ರತಿಯೊಂದು ಯುಗ ಯುಗವೂ ತನ್ನ ತನ್ನ ಸಮಸ್ಯೆಗಳಿಗೆ ತಕ್ಕ ಹೊಸ ಪರಿಹಾರಗಳನ್ನು ಕಂಡುಕೊಳ್ಳಬೇಕು. ಹಾಗೆಯೇ ನಾವು ನಮ್ಮ ಪರಿಹಾರಗಳು ಪರಿಪೂರ್ಣ ಆಗುವುದಿಲ್ಲ, ಮುಂದಿನ ಯುಗ ಅವುಗಳನ್ನೂ ಬದಲಿಸಬೇಕಾಗುತ್ತದೆ ಎನ್ನುವುದನ್ನು ಮಾತ್ರ ಮರೆಯಬಾರದು. ಅದೇ ರೀತಿ ಹಿಂದೆ ಯಾವ ಯುಗದಲ್ಲೂ ಇಂಥ ಸಮಸ್ಯೆಗಳು ಹುಟ್ಟಿಯೇ ಇಲ್ಲವೆಂದಾಗಲೀ ಅವುಗಳ ಪರಿಹಾರಗಳನ್ನು ಅಂದಿನ ಉದ್ಯೋಗ ವ್ಯವಸ್ಥೆಯ ಅಗತ್ಯಗಳಿಗನುಸಾರವಾಗಿ ಅಂದಿನವರು ಕಂಡುಕೊಂಡಿಲ್ಲ ಎಂದಾಗಲೀ ಹೇಳಿದರೆ ಅದು ಇತಿಹಾಸದ ಮತ್ತು ಸಮಾಜಶಾಸ್ತ್ರದ ತಿಳಿವಿಗೆ ವಿರುದ್ಧವಾಗುತ್ತದೆ. ನಮ್ಮ ಇಂದಿನ ವೈಜ್ಞಾನಿಕ ರಾಶ್ಯುತ್ಪನ್ನದ ಯಂತ್ರ ನಾಗರಿಕತೆಯ ಸಂದರ್ಭದಲ್ಲಿ ನಾವು ಈಗ ಕಂಡುಕೊಳ್ಳುವ ಪರಿಹಾರದ ರೂಪುರೇಖೆಗಳು ಬೇರಾಗುತ್ತವೆ – ನಿಜ; ಆದರೆ ಅವುಗಳ ಮೂಲಸೂತ್ರಗಳೂ ಬೇರಾಗಲಾರವು. ಆದಕಾರಣ ನಾವು ಇಂದಿನ ವಿಜ್ಞಾನದಿಂದ ಕಲಿಯಬೇಕಾದಷ್ಟೇ ಹಿಂದಿನ ಜ್ಞಾನದಿಂದಲೂ ಕಲಿಯಬೇಕಾದದ್ದು ಬಹಳವಿದೆ. ಏಕೆಂದರೆ ಮಾನವಸಂಬಂಧಗಳಲು ಯಾವಾಗಲೂ ಒಂದೇ ಪರಿಯವು. ಪ್ರೀತಿ, ದ್ವೇಷ, ಅಸೂಯೆ, ಅನುಕಂಪ, ಸಹಕಾರ, ವಿರೋಧ – ಈ ಮೊದಲಾದುವು ಸ್ಥಾಯೀ ಸಂಬಂಧಗಳು.

ಉತ್ತರ: ಐದು

ಜನರಿಗೆ ಎಂದ ಕೂಡಲೇ ಯಾವ ಜನರಿಗೆ ಎಂಬ ಪ್ರಶ್ನೆ ಥಟ್ಟನೆ ಹುಟ್ಟುತ್ತದೆಂದು ನೀವು ಬಲ್ಲಿರಿ. ಯಾವ ಕಲೆಯೂ ಹಾಗೆ ಜನರನ್ನು ಸುಲಭವಾಗಿ ಮುಟ್ಟುವುದಿಲ್ಲ. ಸಾಮಾನ್ಯ ಜನರಲ್ಲಿ ಮಾತ್ರವಲ್ಲ, ವಿದ್ಯಾವಂತರೆನಿಸಿಕೊಂಡವರಲ್ಲೂ ಸಂವೇದನೆ ಗಡ್ಡೆಕಟ್ಟಿಕೊಂಡಿರುವುದು ನಮ್ಮ ಅನುಭವಕ್ಕೆ ಮತ್ತೂ ಮತ್ತೂ ಬರುವುದಿಲ್ಲವೆ? ಸುಗಮ ಸರಳ ಅನುಭವಗಳೂ ಹಾಗೆಯೇ ಸುಗಮವಾಗಿ ಮೂರ್ತಗೊಳ್ಳಬೇಕಾದ್ದು ಅಗತ್ಯ. ಅದೇ ರೀತಿ ಅಷ್ಟು ಸುಗಮವೂ ಸರಳವೂ ಅಲ್ಲದೆ ಹಲವು ಎಳೆಗಳುಳ್ಳ ಅನುಭವ ಅದಕ್ಕೆ ತಕ್ಕ ರೂಪದಲ್ಲಿ ವ್ಯಕ್ತವಾಗಬೇಕಾದ್ದು ಸಹಜ. ಸುಗಮವಾದರೇ ಕಾವ್ಯ ಎನ್ನುವುದು ಎಷ್ಟು ತಪ್ಪೋ ಅಷ್ಟೇ ತಪ್ಪು ದುರ್ಗಮವಾದರೇ ಕಾವ್ಯ ಎನ್ನುವ ಮಾತೂ ಕೂಡ. ನನಗೆ ಈಚೆಗೆ ಅನ್ನಿಸುತ್ತಿರುವುದು ಹೀಗೆ: ಒಂದು ಪ್ರಕಾರದಲ್ಲಿ, ಛಂದೋರೂಪದಲ್ಲಿ, ಬಂಧದಲ್ಲಿ ಬಿಗಿಯನ್ನು ಸಾಧಿಸಿದ ಬಳಿಕ ಮತ್ತೆ ಶಿಥಿಲೀಕರಣಕ್ರಿಯೆ ನಡೆಯಬೇಕು. ಆದರೆ ಸಡಿಲು ತನವೇ ಒಂದು ಗುರಿ ಆಗಲಾರದು. ಬಿಗಿತ ಸಡಲುವುದು ಮತ್ತೊಮ್ಮೆ ಮತ್ತೊಂದು ರೀತಿಯಲ್ಲಿ ಬಿಗಿಯನ್ನೂ ಶಿಲ್ಪವನ್ನೂ ಕಂಡುಕೊಳ್ಳುವುದಕ್ಕಾಗಿ.

ಜನರನ್ನು ಮುಟ್ಟುವ ಅಗತ್ಯ ಈಗ, ಈ ಪ್ರಜಾತಂತ್ರದ ವಿಶಿಷ್ಟ ಸಂದರ್ಭದಲ್ಲಿ ಜರೂರಾಗಿದೆ ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ ಅದು ನಡೆಯಬೇಕಾದ್ದು ಉತ್ತಮ ಶಿಕ್ಷಣದ ಮೂಲಕ, ರೇಡಿಯೋ, ವೃತ್ತಪತ್ರಿಕೆ ಮುಂತಾದ ಸಂಪರ್ಕ ಸಾಧನಗಳ ಸರಿಯಾದ ಉಪಯೋಗದಿಂದ, ತಕ್ಕ ವಿಚಾರ ಸಾಹಿತ್ಯದ ಸೃಷ್ಟಿಯಿಂದ.

ಉತ್ತರ: ಆರು

ಈಚಿನ ಬರಹಗಾರರಲ್ಲಿ ಮುಖ್ಯವಾಗಿ ಹಾ. ಮು. ಪಟೇಲ, ಜಯಂತ ಕಾಯ್ಕಿಣಿ, ದೇವನೂರು ಮಹಾದೇವ ಇವರು ಹೊಸ ಭರವಸೆಯನ್ನು ಹುಟ್ಟಿಸುತ್ತಾರೆ. ಅವರ ಬೆಳವಣಿಗೆಯನ್ನು ಆಸಕ್ತಿಯಿಂದ ಗಮನಿಸುತ್ತ ಇದ್ದೇನೆ.

ಉತ್ತರ: ಏಳು

ನಾನೊಂದು ಹೊಸ ರೀತಿಯಲ್ಲಿ ಬರೆಯವುದು ಅನಿವಾರ್ಯವಾಗಿ ಒಂದು ಹೊಸ ಮಾರ್ಗವನ್ನು ರಚಿಸಿಕೊಳ್ಳಬೇಕಾಗಿ ಬಂದಿದ್ದರಿಂದ ಅಂಥ ಮಾರ್ಗ ನಿರ್ಮಾಣದಲ್ಲೆ ನನ್ನ ಶಕ್ತಿಯನ್ನು ಕೇಂದ್ರೀಕರಿಸಬೇಕಾಗಿತ್ತು. ಯಾವ ಹೊಸ ಮಾರ್ಗವೇ ಆಗಲಿ, ಭದ್ರ ವ್ಯಕ್ತಿತ್ವದ ಬುನಾದಿಯ ಮೇಲೆ ಅಲ್ಲದೆ ಬೇರೆ ನಿರ್ಮಾಣವಾಗಲಾರದು. ಅಂಥ ವ್ಯಕ್ತಿತ್ವದ ಆವಿಷ್ಕಾರದ ಕಡೆಗೇ ನನ್ನ ಲಕ್ಷ್ಯ ಬಹಳ ಕಾಲ ನೆಟ್ಟಿತ್ತು. ದಾಂಪತ್ಯ ಮಾನವ ಸಂಬಂಧಗಳ ಎಳೆಗಳೂ ನನ್ನ ಕವನಗಳಲ್ಲಿ ಸೇರಿವೆ ಎಂದು ನನ್ನ ಭಾವನೆ. ಅವುಗಳನ್ನು ಮುಖ್ಯವಾಗಿಟ್ಟುಕೊಂಡು ಬರೆದ ಕವನಗಳೂ ನನ್ನ ಮೊದಲ ಸಂಕಲನಗಳಲ್ಲಿ ಇವೆ. ಅದೇ ರೀತಿಯಲ್ಲಿ ಮತ್ತೆ ಮತ್ತೆ ಬರೆಯುವುದು ಸಲ್ಲದು. ಮನಸ್ಸು ಸಂಪೂರ್ಣ ಪಕ್ವವಾಗದೆ ಮಾನವಸಂಬಂಧಗಳ ಬಗ್ಗೆ ಬರೆದರೆ ಅಭಾಸವಾಗುವುದೇ ಹೆಚ್ಚು. ಇದಕ್ಕೆ ನಮ್ಮ ಅನೇಕ ಹಿರಿಯ ಕವಿಗಳಿಂದ ಉದಾಹರಣೆಗಳನ್ನು ಕೊಡಬಹುದು. ಅಂಥ ಪಕ್ವತೆಗಾಗಿ ನಾನು ಕಾಯುತ್ತಾ ಇದ್ದೇನೆ. ಅಂಥ ಕವನಗಳನ್ನು ರಚಿಸಲೂ ನನಗೆ ತಕ್ಕಷ್ಟು ಅವಕಾಶ ಇನ್ನೂ ಇದೆ ಎಂದು ನನ್ನ ನಂಬಿಕೆ. ಒಂದು ದೃಷ್ಟಿಯಲ್ಲಿ ನನ್ನ ಕಾವ್ಯಜೀವನ ಇದೀಗ ಆರಂಭವಾಗಿದೆ ಎಂತಲೂ ಕೆಲವು ಸಹ ಅನ್ನಿಸುತ್ತದೆ. ಇನ್ನೂ ಅಷ್ಟು ವೈವಿಧ್ಯಪೂರ್ಣವಾಗಿ ಬರೆಯಲು ಬೇಕಾದ ಆಯುಷ್ಯವೂ ಇದೆ ಎಂದು ನನ್ನ ವಿಶ್ವಾಸ.

ಉತ್ತರ: ಎಂಟು

ನನ್ನ ಮೇಲೆ ಕನ್ನಡ ಸಂಸ್ಕೃತ ಇಂಗ್ಲಿಷ್‌ ಭಾಷೆಗಳ ಅನೇಕಾನೇಕ ಕವಿಗಳೂ, ಸಾಹಿತಿಗಳೂ, ದಾರ್ಶನಿಕರೂ, ಚಿಂತಕರೂ ಪ್ರಭಾವ ಬೀರುತ್ತ ಬಂದಿದ್ದಾರೆ. ಯಾರೊಬ್ಬರ ಪ್ರಭಾವಕ್ಕೂ ಮೂಲಭೂತವಾಗಿ ಪರವಶನಾಗದೆ ಇರಲು ಯತ್ನಿಸುತ್ತ ಬಂದಿದ್ದೇನೆ. ಕೆಲವು ಕಾಲಗಳಲ್ಲಿ ಕೆಲವು ಲೇಖಕರ, ಪ್ರಭಾವ ಹೆಚ್ಚಾಗಿರಬಹುದಾದರೂ ಒಟ್ಟಿನಲ್ಲಿಕ ಯಾರ ಪ್ರಭಾವ ಹೆಚ್ಚು ಎಂದು ಹೇಳುವುದು ಕಷ್ಟವಾಗುತ್ತದೆ. ಓದುತ್ತ ಹೋಗುವುದು, ಓದುವಾಗ ಬೇರೆ ಬೇರೆ ವಿಚಾರಗಳಿಗೆ ಮನಸ್ಸನ್ನು ತೆರವು ಬಿಡುವುದು, ಆದರೆ ಯಾವೊಬ್ಬ ಚಿಂತಕನ ಅಥವಾ ಲೇಖಕನ ಕೃತಿಯನ್ನೇ ಆಗಲಿ ಆಮೂಲಾಗ್ರವಾಗಿ ಓದಿ ಕರಗತಮಾಡಿಕೊಳ್ಳುವ ಪ್ರಯತ್ನವನ್ನು ಮಾಡದೆ ಇರುವುದು ನನ್ನ ಪದ್ಧತಿ. ಪಾಂಡಿತ್ಯ ಸಂಪಾದನ ದೃಷ್ಟಿಯಿಂದ ನನ್ನ ಈ ಪದ್ಧತಿ ಸರಿಯಲ್ಲವಾದರೂ ನನ್ನತನವನ್ನು ಕಾದಿಟ್ಟುಕೊಳ್ಳುವ ದೃಷ್ಟಿಯಿಂದ ಬಹುಶಃ ನನ್ನ ಈ ಧೋರಣೆ ಸರಿಯೇ ಇದ್ದರೂ ಇರಬಹುದು. ಹೀಗಿರುವುದರಿಂದ ಇರುವ ಅನೇಕ ಗುರುಗಳಲ್ಲಿ ಯಾರನೇ ಆಗಲಿ ಹೆಸರಿಸುವುದು ಅಸಾಧ್ಯ.

ಉತ್ತರ: ಒಂಬತ್ತು

ಕನ್ನಡದ ಸದ್ಯದ ಸಾಹಿತ್ಯ ಸಂದರ್ಭ ಆಶಾದಾಯಕವಾಗಿಲ್ಲ ಎಂದು ನನಗೆ ಅನ್ನಿಸುತ್ತದೆ. ಉತ್ತಮವಾದುದನ್ನೆಲ್ಲ ಕೊಂದು ತಿಂದು ಹಬ್ಬುತ್ತಿರುವ ರಾಜಕೀಯದ ಅರ್ಬುದ ಸಾಹಿತ್ಯಕ್ಕೂ ಈಗ ವ್ಯಾಪಿಸಿಬಿಟ್ಟು ಸಾಹಿತ್ಯ ರಾಜಕೀಯ ದುರ್ಗಂಧದಲ್ಲಿ ಸೃಜನಶೀಲತೆಗೆ ಉಸುರುಕಟ್ಟುತ್ತಿದೆ. ಸಂಖ್ಯಾಬಲದಿಂದ ಸಾಹಿತ್ಯದ ಗುಣವನ್ನು ಬಹುಮತದಿಂದ ನಿರ್ಧರಿಸುತ್ತೇವೆಂಬ ಈ ಸಾಹಿತ್ಯ ರಾಜಕಾರಣಿಗಳ ಅಶ್ಲೀಲವ್ಯವಹಾರ ಪ್ರಭಾವಗಳಿಂದ ತಾತ್ಕಾಲಿಕವಾಗಿ ಸಾಹಿತ್ಯದ ವಾತಾವರಣ ಕೆಟ್ಟಿದೆ. ಬದಲಾವಣೆ ಅತ್ಯವಶ್ಯವಾಗಿದ್ದರೂ, ಅಗತ್ಯದ ಅರಿವು ನಿಚ್ಚಳವಾಗುತ್ತ ಬರುತ್ತಿದ್ದರೂ, ಪರಿವರ್ತನೆ ಯಾವ ಗುರಿಯ ಕಡೆಗೆ ಯಾವ ದಿಕ್ಕಿನಲ್ಲಿ ಸಾಗಬೇಕೆಂದು ನಿರ್ಧರಿಸಲಾರದ ಚೈತನ್ಯ ಹೀನ ದೇಶ ಸಣ್ಣಪುಟ್ಟ ಜಗಳಗಳಲ್ಲಿ ಚಿಲ್ಲರೆ ತರಲೆಗಳಲ್ಲಿ, ಬೀದಿ ಕೂಗಿನ ಕ್ಷಣಿಕ ಆವೇಶಗಳಲ್ಲಿ, ತನ್ನತನವನ್ನು ವ್ಯಕ್ತಪಡಿಸಲು ಬಯಸುತ್ತಾ ಬೀದಿವರಿಯುವ ಹಾಸ್ಯಾಸ್ಪದ ವಿದ್ಯಮಾನದ ದುರ್ಧರ ಪರಿಸ್ಥಿತಿ ಈಗ ನಮ್ಮ ದೇಶದಲ್ಲಿ ಇದೆ. ಇಂಥ ಕಾಲಗಳಲ್ಲಿ ಚಿಲ್ಲರೆ ಮನುಷ್ಯರು ತಾವೆ: ಮಹಾಸಾಹಿತಿಗಳೆಂದು ಸಾರುತ್ತ ಸಮಾಜದ ಧುರೀಣರ ಸೋಗುಹಾಕಿಕೊಂಡು ಸಾಹಿತ್ಯಕ್ಕೆ ಸಲ್ಲದ ರೀತಿಯಲ್ಲಿ ಭಾಷೆಯನ್ನು ದುರುಪಯೋಗಪಡಿಸುತ್ತ ವಿಚಾರಹೀನ ಅಂಧಶ್ರದ್ಧೆಯನ್ನು ಹಬ್ಬಿಸಲು ಯತ್ನಿಸುತ್ತ, ಕೂಗಾಡುತ್ತಿರುವ ಈ ಸಂತೆಗದ್ದಲಗಳಲ್ಲಿ ಉತ್ತಮ ಕೃತಿ ಬರಲು ತಕ್ಕ ವಾತಾವರಣ ಇಲ್ಲವೋ ಎನ್ನಿಸುತ್ತದೆ.

ಸಾಹಿತ್ಯದ ಮೌಲ್ಯಗಳನ್ನೆಲ್ಲ ಧ್ವಂಸಮಾಡಲು ಯತ್ನಿಸುತ್ತಾ ತಾವೇ ಕಟ್ಟಿದ್ದ ಮನೆಗಳಲ್ಲಿ ಸಜೀವ ದಹಗೊಳ್ಳಲು ತುಡಿಯುತ್ತಿರುವ ಈ ಕೆಲವು ಸಾಹಿತಿಗಳು ನಿಜವಾಗಿಯೂ ಕರುಣೆಗೆ ಪಾತ್ರರೋ ಏನೋ. ಸಣ್ಣಪುಟ್ಟ ಜಗಳಕ್ಕೆ ಹೊಟ್ಟೆಕಿಚ್ಚಿನ ಹೊಗೆಯೊಳಕ್ಕೆ ಸಜ್ಜನರಾದ ಸಾಹಿತಿಗಳನ್ನು ಎಳೆದುಕೊಂಡು ಅವರನ್ನು ನಿರ್ಣಾಮಮಾಡಲು ವ್ಯೂಹ ರಚಿಸುತ್ತಿರುವ ಈ ಕೆಲವು ಸಾಹಿತಿಗಳು ತಕ್ಕಷ್ಟು ಧೂಳೆಬ್ಬಿಸಿರುವುದು ನಿಜ. ಅನೇಕ ದಶಕಗಳಿಂದ ಸ್ನೇಹ – ಪ್ರೀತಿ – ವಿಶ್ವಾಸಗಳ ತೋರಿಕೆಯ ಒಳಗಡೆ ಅಡಗಿದ್ದ ವಿಷ ಈ ರೀತಿ ಅನಿರೀಕ್ಷಿತವಾಗಿ ಹೊರಕ್ಕೆ ಬಂದುಬಿಡುವುದು ನಮ್ಮ ಒಟ್ಟು ಸಮಾಜದ ಆರೋಗ್ಯ ದೃಷ್ಟಿಯಿಂದ ಒಳ್ಳೆಯದೇ ಇರಬಹುದು. ಆದರೆ ಇದರಿಂದ ಚಂಚಲರಾದರೆ ನಮ್ಮ ನಮ್ಮ ವಿವೇಕವನ್ನೂ ಔದಾರ್ಯವನ್ನೂ ಸೌಜನ್ಯವನ್ನೂ ದ್ವೇಷಕ್ಕೆ ಬಲಿಕೊಡದೆ ಸಮಚಿತ್ತದಿಂದ ತಾಳಿ ಇರುವುದು ಸೂಕ್ತ ಎಂದು ನನಗೆ ತೋರುತ್ತದೆ.

ಉತ್ತರ: ಹತ್ತು

ರಾಮಾಯಣ ಮಹಾಭಾರತಗಳ ಕಾಲದ ಬಳಿಕ ನಮ್ಮಲ್ಲಿ ಪ್ರತಿಯೊಂದು ಜಾತಿಯೂ ಒಂದೊಂದು ಪ್ರತ್ಯೇಕ ಲೋಕವೇ ಆಗಿ ಘನಿಸಿ, ಜನರ ನಡುವೆ ಸತ್ವವಿನಿಮಯ ಸಾಧ್ಯವಾಗದೇ ಇರುವ ರೀತಿಯಲ್ಲಿ ಜಾತಿಪದ್ಧತಿ ಇಲ್ಲಿ ಹೆಪ್ಪುಗಟ್ಟಿದ್ದೇ ಕಾರಣ ಎಂದು ನನಗೆ ತೋರುತ್ತದೆ. ವರ್ಗಕಲಹದ ನಿರಂತರ ಹೋರಾಟದ ತೀವ್ರತೆಯನ್ನು ತಾಳಲಾರದ ಪರಿಸ್ಥಿತಿ ಬಂದಾಗ ಪ್ರತಿಯೊಂದು ದೇಶದಲ್ಲೂ ಯುಗದಲ್ಲೂ ಜನತೆ ಜಾತಿ ಒದಗಿಸಬಲ್ಲ ಶಾಂತಿ ಸುಸ್ಥಿತಿಗಳ ಕಡೆಗೆ ತುಯ್ಯುತ್ತದೆ ಎಂದು ಇತಿಹಾಸ ನಮಗೆ ಹೇಳುತ್ತದೆ. ಆದರೆ ಯಾವ ದೇಶದಲ್ಲೂ ನಮ್ಮ ದೇಶದಲ್ಲಿಯಂತೆ ಜಾತಿ ಇಷ್ಟು ಜಡವಾಗಿ ಚಲನ ಶೂನ್ಯವಾಗಿ ಹೋಗಲಿಲ್ಲ. ಈ ಜಾತಿ ಜಡತ್ವದಿಂದ ಉತ್ತಮ ಜಾತಿ ಎನ್ನಿಸಿಕೊಂಡವರು ಮೂರ್ತವಾಸ್ತವಕ್ಕೆ ಎರವಾದರೆ, ಕೆಳಜಾತಿಯವರು ಅಮೂರ್ತ ತತ್ವಗಳಿಗೂ ಚಿಂತನಕ್ಕೂ ಎರವಾದರು. ಇದರಿಂದ ದೇಶದಲ್ಲಿ ನೂತನ ಸೃಷ್ಟಿಶಕ್ತಿ ಲೋಪಗೊಂಡಿತು. ಇಡೀ ದೇಶವೇ ಕ್ರಿಯಾಶೂನ್ಯವಾಗಿ ಕೊಳೆಯತೊಡಗಿತು. ಅದರ ದುರ್ಗಂಧವೇ ಈಗ ನಮ್ಮ ಮೂಗಿಗೆ ಬಡಿಯುತ್ತಿರುವುದು. ಜಾತಿಯ ಅಂಕುರಗಳು ಮಹಾಭಾರತ – ರಾಮಾಯಣಗಳಲ್ಲೇ ಕಂಡರೂ ಅದು ಬಲಿತು ಮಾರಕವಾಗತೊಡಗಿದ್ದು ಗುಪ್ತರ ಸಮಾಜ್ರಾಜ್ಯಕಾಲದಲ್ಲಿ ಎಂದು ಅನ್ನಿಸುತ್ತದೆ. ಸುಸ್ಥಿತಿಯ ಕಶಳವನ್ನೇರಿ ಒಂದು ರೀತಿಯಲ್ಲಿ ಸ್ವರ್ಣಯುಗವೆಂಬಂತೆ ಕಾಣುವ ಆ ಕಾಲವೇ ನಮ್ಮ ಅವನತಿಯ ಆರಂಭಕಾಲವೂ ಎಂದು ನನಗೆ ತೋರುತ್ತದೆ. ಅಂದಿನಿಂದ ಇಂದಿನವರೆಗೆ ಇಲ್ಲಿ ಪ್ರಥಮ ವರ್ಗದ ಜನಕಗುಣವುಳ್ಳ, ಜೀವಪೂರ್ವ ಜೀವದಾಯಕ ಸಾಹಿತ್ಯಸೃಷ್ಟಿ ಆಗದೆ ಹೋಯಿತು – ಬದ್ಧ ಸಾಹಿತ್ಯಪರಂಪರೆಯೊಂದು ಮುಂದುವರಿದುಕೊಂಡು ಬಂತೆನ್ನುವುದು ನಿಜವಾದರೂ, ಉತ್ತಮವರ್ಗ ಕೆಳವರ್ಗ ಇವು ಒಂದರೊಡನೊಂದು ಬೆರೆಯುತ್ತ, ಒಂದು ಇನ್ನೊಂದಾಗಿ ಮಾರ್ಪಡುತ್ತ ಹೋಗುವುದು ಮೂರ್ತ ಅಮೂರ್ತಗಳ ಸಫಲ ಸಂಗಮದಂತೆ,ಅಥವಾ ಪ್ರಜ್ಞೆ ಮತ್ತು ಸುಪ್ತಪ್ರಜ್ಞೆಗಳ ಪರಸ್ಪರ ಸಂಯೋಗದಂಥೆ ಫಲವತ್ತಾಗುವ ದಾರಿ. ಆ ದಾರಿಯನ್ನು ಕಳೆದುಕೊಂಡು ನಮ್ಮಲ್ಲಿನ ವಿದ್ಯಾವಂತಜಾತಿ ಕೇವಲ ವಾಚಾಳಿತನವನ್ನೇ ದೇಶದ ಆದರ್ಶವನ್ನಾಗಿ ಮಾಡಿ ಅವಿದ್ಯಾವಂತರಲ್ಲಿದ್ದ ಅನುಭವವಸ್ತು ನಿಷ್ಫಲವಾಗುವಂತೆ ಮಾಡಿತು. ಇದರಿಂದ ಕೆಟ್ಟದ್ದು ಕೆಳಜಾತಿಯವರು ಮಾತ್ರವಲ್ಲ,ಉತ್ತಮ ಜಾತಿಯವರೂ ಕೂಡಾ. ಇದರ ಫಲವಾಗಿ ಇಡೀ ದೇಶವೇ ಕೆಟ್ಟಿತು.

*

[‘ಉದಯವಾಣಿ’ – ದೀಪಾವಳಿ ವಿಶೇಷಾಂಕ; ‘ಸಮಕ್ಷಮ’ – ೧೯೮೦]

* * *