ಹುಟ್ಟು:

ಮಲೆಘಟ್ಟ ಸೋಪಾನ ಕೆಳಪಟ್ಟಿಯಲಿ;
ಉರುಳು, – ಮೂರೇ ಉರುಳು, – ಕಡಲ ಕುದಿತದ ಎಣ್ಣೆಕಪ್ಪರಿಗೆಗೆ.
ತೆಂಗುಗರಿಗಳ ಬೀಸಿ ಕೈಚಾಚಿ ಕರೆದಳು;
ಅಡಿಕೆಗೊನೆಗಿಲಕಿ ಹಿಡಿದಾಡಿಸಿದಳು.
ಕಬ್ಬಿನಾಲೆಯ ತಿರುಪಿನಲ್ಲಿ ಕುಳಿತೆರೆದಳು ಅಜಸ್ರಧಾರೆಯ ಕರುಳ ತುಡಿತವನ್ನು;
ಭತ್ತ ಗೋಧುವೆ ರಾಗಿ ಜೋಳ ಮೊರಮೊರಮೌರಿಯಲ್ಲಿ ಮಾಂಸದ
ಹಾಡನೂಡಿಸಿದಳು;
ಗಂಟಿ ಗೋರಟೆ ಜಾಜಿ ಮಂದಾರ ಮಲ್ಲಿಗೆಯ ಗಂಧಗಿರಿಶಿಖರದಲಿ ಮಲಗಿಸಿದಳು;
ಹಕ್ಕಿಗೊರಳಿಂದುಗುವ, ತುಂಬಿ ಮರ್ಮರಮೊರೆವ, ಜಾಮೂನುನಾದದಲಿ
ಜಾಳಿಸಿದಳು;
ಆಕಾಶದಲ್ಲಿ ಮೋಡದ ವಿಶ್ವರೂಪಕ್ಕೆ ಕೆಳಗೆ ಜೀವಜ್ಜ್ಯೋತಿ ಕೂಡಿಸಿದಳು. ೧೦

ಎಳಹರೆಯ:
ಹಾಡಿಯಲಿ ಮರಮರದ ಕೆಳಗೆ ಧೂಪದ ದಟ್ಟಕಾಯಿ ಚಿಗಿತೆಳಮೊಳಕೆ,
ನರಳು ಕೇಕೆ;
ಮಳೆಮಂತ್ರದಂಡ ಮುಟ್ಟಿದ ತಿಟ್ಟುನಿಟ್ಟಿನಲಿ ನೆಲವೆಲ್ಲ ಮೊಳೆ, ಮೊಳಕೆ, ಕೊನರು,
ಸಸಿ, ಗಿಡ, ಹುಲ್ಲು;
ತೋಟಗೋರಟಿಗೆ ಮೈಯೆಲ್ಲ ಕಾಮನ ಬಿಲ್ಲ ಬಲ್ಬುಮಾದಕದೀಪ, ಚೆಲ್ಲು, ಗುಲ್ಲು.
ನಂದಬಟ್ಟಲನೆತ್ತಿ ತುಟಿಗಿಟ್ಟು ನರ್ತಿಸಿತು ಅಂದುಗೆಯನಾಡಿಸುತ ಬಂದ ಭೃಂಗ;
ಹಿತ್ತಲ ಜಗಲಿಮೇಲೆ ಕುಳಿತು ಧುಮ್ಮಿಕ್ಕಿದೆನು ಕೆಳಗೆ ಮತ್ತೂ ಕೆಳಗೆ, ತಳಕೆ ಕುಂಗ.
ಹಸುರುತೆರೆ ಅಪ್ಪಳಿಸುತಿರೆ ಮೇಲೆ ನೊರೆ ಕಾರಿ, ಬೀಸುತಿರೆ ಬಿರುಗಾಳಿ,
ಗುಡುಗು ಮೊಳಗೆ;
ತಳದಾಣಿಮುತ್ತುಗಳ ಮತ್ತ ದೀಪ್ತಿಗೆ ಕಣ್ಣು ಕುಕ್ಕಿ ಕುರುಡಾಡಿದೆನು ಸಂಜೆವರೆಗೆ –
ಬುಂಡೆಗಂಟಿದ್ದ ತುಟಿ ಕಿತ್ತರೂ ಕಲ್ಪನೆ ಹೆಂಡಹೊಂಡದ ಸೆಲೆಯ ಹುಡುಕುತ್ತಿತ್ತು.

ಬೇಲಿ ಮೇಗಡೆ, ಗದ್ದೆಯಂಚಲ್ಲಿ, ತೋಪುಗಳ ಅಂಗುಲಂಗುಲದಲ್ಲಿ ತೋಟದೊಳಗೆ               ೨೦

ಎಲ್ಲೆಲ್ಲು ಹೆರಿಗೆಮನೆ: ಬೇನೆ,ಸಂಕಟ, ನಗೆ;ಕೊರಡು ಚಿಗುರಿದ ಚೆಲುವು, ಚೀರು, ಕೇಕೆ.
ನರ್ಸುಗಳು ಡಾಕ್ಟರರು ಹೆರಿಗೆಮನೆಯೊಳಹೊರಗೆ.
ಅವರ ಬೆನ್ನಿಗೆ ಸದಾ ನಾಲ್ಕು ಮಂದಿ;
ತೊಟ್ಟಿಲಂಗಡಿಯಲ್ಲಿ ಬೊಂಬು ತುಂಬಾ ಅಗ್ಗ;
ಜಾತಕರ್ಮದಿ ನಿರತ ಈ ಪುರೋಹಿತಭಟ್ಟ ಅಪರಪ್ರಯೋಗದಲಿ ಪಾರಂಗತ.
ಹೊಟ್ಟೆಹೊಸೆದುವು ಜಾರುತೊಗಟೆಯಲ್ಲಿ;
ರೆಕ್ಕೆ ಬಡಿದುವು ಶೂನ್ಯ ಬೀದಿಯಲಿ, ಚಪ್ಪಾಳೆಯಿಕ್ಕಿ ಕುಣಿದುವು ಮೋರಿ
ಮೋರಿಯಲಿಲ –
ಮಧ್ಯಾಹ್ನದುರಿಬಿಸಿಲು ಹೆತ್ತ ಹೆಣಬಣಬೆಗೂ ಪಾಚಿಗಟ್ಟಿದ ಜಿಗಣೆ – ಜೀವ
ಹಲವು ೩೦

ಆಹ, ಪ್ರಾತಃಕಾಲದಲ್ಲಿ ಬೆಳಕಿನ ದಾಹ:
ಯಮುನಾಂಭದಲ್ಲಿ ಕಾಳಿಂದಿ ಹೆಡೆಮಣಿಯಾಟ.
ಕದಕದಕೆ ಕಿಟಕಿ ಕಿಟಿಕಿಗೆ ಕಣ್ಣು, ಮನೆ ಕಣ್ಣು, ಊರೆಲ್ಲ ಕಣ್ಣು, ಕಾಡೆಲ್ಲ ಕಣ್ಣು:
ತಿರುಗಿತ್ತು ಮಗುಮಾದರಿಯ ಕ್ಯಾಮರಾ ಕಣ್ಣು;
ರೀಲುರೀಲನು ಜಡಿದು ಗಿಡದ ಕತ್ತಲೆ ಕೊಠಡಿಮೇಲೆ ಮಸ್ಲಿನ್‌ಫರದೆ ಹಾಸುತಿತ್ತು.
ಒಳಹೊರಗುಗಳ ಅಳಿವೆಯಲ್ಲಿ ಮೊರೆವ ತರಂಗಮಾಲೆಯಲಿ
ಮುತ್ತು, ಬಂಗಾರ, ಹೀರಕ, ಪುಷ್ಯರಾಗ, ಗೋಮೇಧಿಕ, ಕೆಂಪು, ಹಳದಿ.
ಎಲ್ಲಿ ಬಿದ್ದರೆ ಅಲ್ಲಿ ಅಲ್ಲಿ ನಾಗರ ಬಂಧ; ತುಟಿಗಗಸ್ತ್ಯಾಧರದ ತುರುಸು – ತೋಟಿ;
ಕಣ್ಣುಬಿಟ್ಟರೆ ಬಣ್ಣಬಣ್ಣ ಗೊಗ್ಗರು ಗಲಭೆ; ಕಿವಿತುಂಬ ಹಸುರು, ಬಿಳಿ, ಹಳದಿ, ಕೆಂಪು.
ಹಣೆಗೆ ತುಪ್ಪವ ಹಚ್ಚಿ ಬಿಟ್ಟ ಬೆಕ್ಕಿನ ತರಹೆ ಬುಗುರಿ ತಿರುಗಿದೆ ಬಾಲ ನಿಮಿರಿಸುತ್ತ                  ೪೦

ತಾಯಿಗೂ ಮಿಗಿಲಾಗಿ ಎದೆಗವಚಿಕೊಂಡಳೋ;
ತಿರುತಿರುಗಿ ತನ್ನ ಬಸಿರಲ್ಲಿಟ್ಟು ನವೆದಳೋ;
ಹಕ್ಕಿ ಕೊರಳನು ಹಿಚುಕಿ ಲಾಲಿ ಹಾಡಿದಳು;
ಸಸಿಕೊರಳ ಕೊಯ್ದು ತಿಂಡಿಯನು ತಿನಿಸಿದಳು.

ಪ್ರೇಮ ಧೃತರಾಷ್ಟ್ರನಪ್ಪಿಗೆ ಭಗ್ನ ಬಲಭೀಮ; ಎಲ್ಲು ಕೃಷ್ಣನ ಕಾಪು ಕಾಣಲಿಲ್ಲ.
ಇವಳೆದೆಗೆ ಬೇರಿಳಿದ ಕಾಲು ನನ್ನದು; ಬರಿದೆ ನಕ್ಷತ್ರಲೋಕಕ್ಕು ರೈಲುಬಿಟ್ಟೆ.
ಹೆಂಕುಳಿಯ ಹಾಗೆ ನರಸತ್ತು ಹುಡುಕಿದೆ ಮನದ ಬಚ್ಚಲಲಿ ಕೊನೆಯಿರದ ಕೊನೆಯ ಬಟ್ಟೆ.

ಈಡಿಪಸ್ಸಿನ ಗೂಡ ಪಾಪಲೇಪಿತ ನಾನು;
ಟ್ಯ್ರಾಕ್ಟರನ್ನೇರಿದೆನು; ಉತ್ತೆ, ಸಿಗಿದೆ.
ಬಿತ್ತಿದೆನು, ಬೆಳೆದೆ ಆಟಂಬಾಂಬು ಕಾಳುಗಳ;
ಮಾರಕಕ್ರಿಮಿಪೈರ ಗೋರಿ ನಲಿದೆ.               ೫೦

ಕರೆಯುವುವು ಮತ್ತು ಮತ್ತೂ ಬಾನ ಹಕ್ಕಿಗಳು;
ಗಾಳಿದರಬಾರಿಗರವತ್ತು ಕರೆಯೋಲೆ;
ಕಿವಿಸುತ್ತ ಬಂದು ಕರ್ಣಪಿಶಾಚಿ ಪಿಸುಗುಟ್ಟಿ ಕಾಡಿದುವು ಮೇಲೆ, ಮೇಲೆ.
ಮಂತ್ರವಾದಿಯ ಕುತಂತ್ರದ ರಗಳೆ ಜೋರಾಗಿ ರೇಗಿದನು ನಾ ಬರಿದೆ ನನ್ನ ಮೇಲೆ;
ಢಿಕ್ಕಿ ಹೊಡೆದನು ಪಂಜರದ ಕಂಭ, ಮಾಡಕ್ಕೆ;
ಚೀರಿ ಬಡಿದೆನು ರೆಕ್ಕೆ, ಕುಕ್ಕಿ ಪುಕ್ಕವ, ಕಿತ್ತು ರಾಶಿ ಹಾಕಿದೆ ತಿಂಡಿತಟ್ಟೆಯೊಳಗೆ.

ಮರಿಕುದುರೆ ಕೆನೆದು ಕುಣಿದಿತ್ತು; ಸುತ್ತಲು ಹುಲ್ಲು, ಹುರುಳಿ;
ಬಂಗಾರದ ಕಡಿವಾಣ, ರನ್ನ ಲಗಾಮು;
ತಲೆಮೇಲೆ ಮೂರು ಬಣ್ಣದ ಮಕುಟಗರಿ ಬೆಡಗು;
ಹಿಂದೆ ಕರಕರಕಟರು ಷಾಃಪಸಂದಿನ ತೊಡವು. ೬೦
ನಡಮುರಿವ ತನಕ ನಡದದ್ದೆ ಸುಗ್ಗಿಯ ಕುಣಿತ,
ಆ ಬಳಿಕ:
ಮೈಯೆ ಭಾರ, ಮನವೆ ಭಾರ
ತ್ತಾತ್ತಿಕಿಟೋ ತಿಮ್ಮಣ್ಣಾ,
ಅತ್ತೆಮನೆಗೆ ಸೊಸೆ ಹೋಗುವುದ್ಹ್ಯಾಂಗೋ ತಿಮ್ಮಣ್ಣಾ?
ತಿರುಪತಿ ತಮ್ಮಪ್ಪನ ಪಾದವೇ ಗತಿ ಅಣ್ಣಾ.
ಕಾಸು ಕೊಟ್ಟವರಿಗೆ ಕೈಲಾಸ ತೋರ್ಪಳು ಈಚಲ ಮರದವ್ವ, ನಮ್ಮವ್ವ
ವೇದ, ಶಾಸ್ತ್ರ, ಪುರಾಣ, ಭಜನೆ, ಹರಿಕಥೆ – ಪೂಜೆ,
ಎಣ್ಣೆ ತೀರುತ್ತಲಿರೆ ಒಡಕು ಹಣತೆಯ ಮುಂದೆ ಬತ್ತಿ ಹೊಸೆತ.
ಆಗಲೂ ಬಿಡಳಿವಳು ತಾಯಿ; ಮೆಣಸಿನಕಾಯಿ ಹೊಗೆ ಹಾಕಿ ತುರಿಯುವಳು;
ಎದೆಯ ಗರಟಿ.
ಬಿದಿರುಮೇಣೆಯ ಮೇಲೆ ಕುಳಿತು ಸಾಗುವ ವೇಳೆ – ಹೊರಬರಳು;
ಅವಳಿಗಿನ್ನೊಂದು ಹೆರಿಗೆ.
ನೆಲತಾಯಿ ಮಾಯಕದ ಅರಗಿನರಮನೆಯಲ್ಲಿ
ಹಸ್ತಿನಾಪುರದ ಸ್ಮೃತಿ ಹೊತ್ತಲಿಲ್ಲ.
ಮಯನಿರ್ಮಿತವೊ, ಸುಯೋಧನ ರಚಿತವೋ ಅಂತು ಕಡ್ಡಿ ಗೀರುವ ತನಕ ಶಂಕೆ ಇಲ್ಲ.

ನಾನಲ್ಲಿ ನಲಿದೆ; ನುಣ್ಣನೆ ನೆಲದಿ ಜಾರಿದೆನು: –
ಹೊರಜಗಲಿಯಿಂದ ಒಳಮನೆಯ ಕತ್ತಲೆವರೆಗೆ.

ಯಾರು ನಿಂದವರಲ್ಲಿ? ತಾಯೆ?” ಎಂದೆ
ತಾಯಿ? ಏನೀ ಭ್ರಾಂತಿ? ಹೋಗು, ಪೆದ್ದೆ!”
ಚಂಡಿ, ಚಾಮುಂಡಿ ಪೇಳ್‌, ಬೇಕಾದುದೇನು?”
ಗಂಡುಸಾದರೆ ನನ್ನ ಬಲಿಕೊಡುವೆಯೇನು?”೮೦

ಇವಳ ಹೊಟ್ಟೆಚರಂಡಿಗಾರು ಕುಕ್ಕಿದರಯ್ಯ, ಕಳ್ಳಬಸುರಿನ ಯಾವ ಜಾಣ ರಂಭೆ?
ಗಂಗೆಯಲಿ ತೇಲಿ ಬಂದನು ಕರ್ಣ, ರಾಧೇಯ; ಸಾಯಿಸಲಿಕಲ್ಲದೇ ಬರಳು ಕುಂತಿ.
ಮೈಯೆಲ್ಲ ಹೆರಿಗೆಮನೆಮಸಣ ಇವಳಿಗೆ, ಸ್ವರತಿಸಂಪ್ರೀತೆ;
ಹುಲಿ, ಚಿರತೆ, ಆನೆ, ಹಸು, ಆಡು, ಕೋಡಗ, ಕತ್ತೆ;
ಮಾವು, ನೇರಳೆ, ಹಲಸು, ಜಾಲಿ, ಜಾಜಿ –
ಇವು ಇವಳ ಸಹಜಸಂತಾನ;
ಈ ಪೆಡಂಭೂತ ನಾ ಬರುವ ಗಳಿಗೆಯೋಳೀಕೆಗೇಕೆ ಹುಟ್ಟಿತೊ ವಿಷಮರತಿ ದುರಾಶೆ!

ಬಿಟ್ಟರೋ ಕಾಡಲ್ಲಿ ಕಣ್ಣುಕಟ್ಟಿ;
ಸುತ್ತಲೂ ಬಿಗಿದಿಟ್ಟು ಮುಳ್ಳು – ತಂತಿ:
ಕುಡಿಯಲುಪ್ಪಿನ ನೀರು; ತಿನ್ನಲು ಬೆಂಕಿಯ ಚೂರು;
ಕುಣಿಯಲೆಂದೇ ಬೇಡಿ ಕಾಲ ತೊಡವು.                      ೯೦

ಆಗಂತುಕನು ನಾನು ಅತಿಥಿ ಸತ್ಕಾರಕ್ಕೆ ಸಾಗಿ ಬಂದರು ಆರು ಮಂದಿ ಸಖರು;
ಉರಿವ ಮೇಣದ ಬತ್ತಿ; ಸುತ್ತ ಮೇಣದ ಗಡ್ಡೆ ಹೊಳೆ;
ಬತ್ತಿಯೂ ಕೊನೆಗೆ ಕರಕು, ಕರಕು.

ನೆಲತಾಯಿ ಮಲತಾಯಿ.
ಉತ್ತಾನಪಾದನಿಗೆ ಸುರುಚಿ; ಧ್ರುವನಕ್ಷತ್ರಕ್ಕೆ
ಕಾಡ ಮೂಲಕವೆ ಪಥ ಆಗಸಕ್ಕೆ
ಅರಣ್ಯಕರ ಮೌನಮಂತ್ರ ಬಿಚ್ಚಿದ ಬಟ್ಟೆ.

ತೆಗೆದುಕೋ ನೀ ಕೊಟ್ಟ ಎಲ್ಲ ವಸ್ತ್ರವಿಲಾಸ;
ಈ ಕೋಟು, ಈ ಶರಟು, ಈ ಶರಾಯಿ; ೧೦೦
ಈ ಭಗ್ನ ಜೋಪಡಿಯು ನಿನ್ನದೇ; ತೆಗೆದುಕೋ;
ಬತ್ತಲಾಗದೆ ಬಯಲು ಸಿಕ್ಕದಿಲ್ಲಿ.
ಅಲ್ಲದಿರೆ ಬೀದಿಯಲಿ ನಾ ಸರೀಕರ ಕೊಡೆ ತಲೆಯೆತ್ತಿ ನಡೆಯಲಾರೆ;
ಬತ್ತಲಾಗದೆ ಕತ್ತಿ ಕಿತ್ತೆಸೆಯ ಬಲ್ಲುದೇ ಕವಚ ಕುಂಡಲ ಹೃದಯದಮೃತಕಲಶ?

ವಿಶ್ವಾಮಿತ್ರ ಹೇಳಿದ; “ತ್ರಿಶಂಕು, ನಡೆ ಸ್ವರ್ಗಕ್ಕೆ. ”
ತೊಗಲುಬಾವಲಿ ಮರದ ಜೋಲುತೊಗಟೆ.
ಕೆಸರಲ್ಲಿ ಹುಗಿದ ಕಾಲನ್ನು ಕೀಳುವುದೆಷ್ಟು ಕಷ್ಟ ಅಷ್ಟೇ ಕಷ್ಟ –
ಆಕಾಶಪಂಜರದ ಹೊನ್ನ ಸರಿಗೆಯ ನಡುವೆ ನಡೆವ ಹಗರಣ ಕೂಡ.
ಕೆಸರೋ ಅಸಹ್ಯ; ಹುಟ್ಟಿದ ಕೂಡಲೇ ಕೊಳೆವ ಎಳಕಸದಪಸ್ಮಾರ ಬಾಲಲೀಲೆಯ
ಚಟ್ಟ –                                                    ೧೧೦
ಮಣ್ಣು, ಪೂರಾ ಮಣ್ಣುಬೊಂಬೆಯಾಗಿದ್ದರದು ಒಂದು ತೆರ;
ಈ ಬೊಂಬೆಯಲ್ಲು ಉಸುರಿನ ತಂತ್ರ;
ತಂತ್ರದಾಚೆಗೆ ಶುದ್ಧ ಬೆಳಕುಮಂತ್ರ – ಫಿತೂರಿ.
ಹೆಜ್ಜೆ ಮೂಡದ ಹಾದಿ ಗಾಳಿಬೀದಿ.
ಇದು ನೋಡು, ಇದು ಕಷ್ಟ: ಧೂಳು ಧೂಳಿಗೆ ಸೇರಿ,
ಗಾಳಿ ಗಾಳಿಗೆ ಕೂಡಿ,
ಬೆಂಕಿ ಬೆಂಕಿಯ ಕೂಡಿ,
ಗಾಳಿಯಲ್ಲುಲುಹು, ಆಕಾಶದಲ್ಲಾಕಾಶ ಬೆರೆತು ಹೋದರೆ ಇದಕ್ಕೇನು ಧಾಡಿ?
ಏನೊ ಉಳಿವುದು ಮತ್ತೆ:
ಒಂದು ವಿದ್ಯುತ್ತಂತಿ –
ತಾರೆ ನೀಹಾರಿಕೆಗಳಾಚೆಯ ಸಮಾಚಾರ;                 ೧೨೦
ಪಾತಾಳದಾಳದಿಂದೆದ್ದು ಬರುವ ವಿಕಾರ;
ಒಂದನೊಂದಕೆ ಕೂಡಿಸಾಡಿಸುವ, ಕುಣಿಸುವ ಚಮತ್ಕಾರ
ಕೆಲರು ಹೇಳುವರು ಸ್ವಿಚ್ಚೆಲ್ಲೋ ತಿಳಿಯದೆಂದು:
ಮೂಲದ ಕಛೇರಿಯ ವಿಳಾಸ ಮರೆತಿದೆ ಎಂದು;
ಇಲ್ಲೆ ಎಲ್ಲೋ ಇರುವುದೆನ್ನುವರು ಉಳಿದವರು.
ಕತ್ತಲಲ್ಲಿ, ಕಣ್ಣು ಕಾಣದ ಬೀದಿಯಿಕ್ಕಟ್ಟಿನಲಿ
ಗೋಡೆ ತಡಕುತ ಇನ್ನು ತೆವಳಬೇಕು.
ಹೆಳವನ ಹೆಗಲ ಮೇಲೆ ಕುರುಡ ಕೂತಿದ್ದಾನೆ;
ದಾರಿ ಸಾಗುವುದೆಂತೊ ನೋಡಬೇಕು.                     ೧೨೯

(ಆಗಸ್ಟ್‌, ೧೯೫೪)

* * *