ಸಾಹಿತ್ಯ ಸೃಷ್ಟಿಯ ಅಸಲು ಕಸುಬಿನ ಬಗ್ಗೆ ಅಡಿಗರು ತೋರಿಸುತ್ತಿರುವ ಶ್ರದ್ಧೆ ಅವರನ್ನು ನಮ್ಮ ತಲೆಮಾರಿನ ಪ್ರಮುಖ ಕವಿಯಾಗಿ ಮಾಡಿದೆ. ಇವರಲ್ಲಿ ಕಲೆಗಾಗಿ ಕಲೆ ಎನ್ನುವ ಅಪ್ರಬುದ್ಧ ಸೌಂದರ್ಯೋಪಾಸನೆಯೂ ಇಲ್ಲ; ಭಾಷೆ ಮತ್ತು ಸ್ವಾನುಭವದ ತೆಕ್ಕೆಗೊಗ್ಗದ ತತ್ವಗಳ ಪ್ರಚಾರಕ್ಕಾಗಿ ಪದ್ಯರಚನೆಯ ಕಲೆಯನ್ನು ವಾಹಕವಾಗಿಮಾಡುವ ಆತ್ಮವಂಚನೆಯೂ ಇಲ್ಲ. ಜೀವನದ ಬಗ್ಗೆ ಎಷ್ಟೋ ಪದ್ಯರಚನೆಯ ಬಗ್ಗೆಯೂ ಅಷ್ಟೇ ಆಸಕ್ತಿ ತೋರಿಸುವ, ಅಂತಃಕರಣದ ಪ್ರಾಮಾಣ್ಯವಿಲ್ಲದೆ ಯಾವ ಮಾತನ್ನೂ ಆಡದ ಇವರ ಪ್ರವೃತ್ತಿ ವಿಮರ್ಶೆಯೇ ದುರ್ಲಭವಾದ ನಮ್ಮ ನಾಡಿನಲ್ಲಿ ಆಶ್ಚರ್ಯದ ಸಂಗತಿ.

ಅಡಿಗರ ಕಾವ್ಯದಲ್ಲಿ ಸಾಹಿತ್ಯ ವಿಮರ್ಶಕನಿಗೆ ಥಟ್ಟನೆ ಹೊಳೆಯುವ ಗುಣ – ಈ ಕವಿ ಕನ್ನಡ ಭಾಷೆಯನ್ನು ಬಳಸಿಕೊಳ್ಳುವ ಕ್ರಮ. ಬೇಂದ್ರೆಯವರಂತೆ ಅಡಿಗರೂ ಶ್ರೇಷ್ಠ ಕವಿ ಎನ್ನಲು ಇದು ಮುಖ್ಯ ಕಾರಣ. ನಮ್ಮ ಕಾವ್ಯಭಾಷೆ ಯಾವುದಾಗಬೇಕೆಂಬ ಬಗೆಗೆ ಅಡಿಗರ ನಿಲುವು ಮೊದಲಿನಿಂದಲೂ ಶ್ರೀ ಬೇಂದ್ರೆ ‘ಗರಿ’ಯ ಮುನ್ನುಡಿಯಲ್ಲಿ ಸೂಚಿಸಿದಂತಹುದು. ನಾವು ಆಡುವ ಮಾತಿನ ಪರಿಪಾಖದ ಪರಿಮಿತಿಯಲ್ಲಿ ತಮ್ಮ ಅನುಭವದ ಪರಿಪೂರ್ಣಾವತಾರಕ್ಕೆ ಈ ಕವಿ ನಡೆಸುವ ಪ್ರಯತ್ನ ಸದ್ಯದ ಕನ್ನಡ ಸಾಹಿತ್ಯದಲ್ಲಿ ಅನನ್ಯ ರೀತಿಯದು. ಭಾಷೆಯಲ್ಲಿ ಸಂಭವಿಸದುದು ಕಾವ್ಯವಲ್ಲ ಎಂಬ ಕಲಾಸೃಷ್ಟಿಯ ಅಗ್ನಿದಿವ್ಯವನ್ನು ಒಪ್ಪಿಕೊಂಡ ಈ ಕವಿ ಎಂದೂ ಅಪ್ರಾಮಾಣಿಕನಾಗಲಾರ. ಎಂದರೆ ಭಾಷೆಯ ಬಗ್ಗೆ ಈ ತೀವ್ರದೃಷ್ಟಿ ತಾಳಿದವನು ಅಂತಃಕರಣ ಪ್ರಾಮಾಣ್ಯ ಇಲ್ಲದ, ಎರವಲು ತಂದ ಅನುಭವಗಳನ್ನು ಸುಂದರವೆನ್ನಿಸುವ ಅಥವಾ ಭವ್ಯವೆನ್ನುವ ಭ್ರಮೆ ಹುಟ್ಟಿಸುವ ಶೈಲಿಯ ಮುಸುಕೆಳೆದು ಕಾವ್ಯವೆಂದು ವಂಚಿಸಲಾರ. ಈ ವಂಚನೆ ಪರವಂಚನೆಗಿಂತ ಹೆಚ್ಚಾಗಿ ಆತ್ಮವಂಚನೆ. ಆದ್ದರಿಂದ ಅಡಿಗರ ಪ್ರಯತ್ನ ಸಾರ್ಥಕವಾಗಲೀ, ಸೋಲಲಿ, ಸಾಹಿತ್ಯ ವಿಮರ್ಶಕ ಇಂತಹ ಕವಿಯ ಹೋರಾಟವನ್ನು ಎಚ್ಚರದಿಂದ ಪರಿಶೀಲಿಸುತ್ತಾನೆ.

ಈ ಸಂಕಲನದಲ್ಲಿರುವ ಏಳು ಕವನಗಳ ಬಗ್ಗೆ ‘ಸಾಹಿತ್ಯ ವಿಮರ್ಶೆ’ ಎಂದು ಕರೆಸಿಕೊಳ್ಳಬಹುದಾದಂತಹ ವಿಮರ್ಶೆಗೆ ತೊಡಗುವ ಮೊದಲು ಅಡಿಗರ ಕಾವ್ಯದ ಬಗ್ಗೆ ಅಲ್ಪ ತಿಳುವಳಿಕೆಯಿಂದ ಬಂದ ಕೆಲವು ಅವಸರದ ತೀರ್ಮಾನಗಳನ್ನು ಕುರಿತು ವಿವೇಚಿಸುವುದು ಅವಶ್ಯಕ. ಹೀಗೆ ಮಾಡುವಾಗ ಅಡಿಗರ ಕಾವ್ಯವನ್ನು ವಿವೇಕಯುತವಾಗಿ ಓದಿದವರಿಗೆಲ್ಲ ಸುಲಭವಾಗಿ ವೇದ್ಯವಾದ ಕೆಲವೊಂದು ಮಾತುಗಳನ್ನು ಇಲ್ಲಿ ವಿವರಿಸಿ ಹೇಳಬೇಕಾದುದು ಅನಿವಾರ್ಯವಾಗುತ್ತದೆ. ಅದಕ್ಕಾಗಿ ತಿಳಿದವರ ಕ್ಷಮೆ ಅವಶ್ಯ.

ಚಂಡೆ ಮದ್ದಳೆಸಂಕಲನದಲ್ಲಿ ಕೆಲವೊಂದು ಭಾಗಗಳು ಚೆನ್ನಾಗಿಲ್ಲವೆಂದು ಅಡಿಗರನ್ನು ಶ್ರೇಷ್ಠಕವಿಯೆಂದು ತಿಳಿದವನೂ ಒಪ್ಪುತ್ತಾನೆ. ಅದಕ್ಕೆ ಕಾರಣ ‘ಹಿಮಗಿರಿಯ ಕಂದರ’, ‘ಗೊಂದಲಪುರ’ದ ಕೆಲವು ಭಾಗಗಳಲ್ಲಿ ಅನಾವಶ್ಯಕವೆನ್ನುವಷ್ಟು ಇರುವ ಬೀಭತ್ಸ. ಜೀವನದ ಪ್ರತಿಯೊಂದು ಘಟನೆಯಲ್ಲಿಯೂ ಸುಂದರವನ್ನೇ ಕಾಣುವ, ಬರೆದ ಎಲ್ಲಾ ಕವನದ ಕೊನೆಯೆರಡು ಸಾಲುಗಳಲ್ಲಿ ಕಡ್ಡಾಯವಾಗಿ ಆಶಾಕಿರಣವನ್ನು ಸೂಚಿಸುವ ಅಪ್ರಾಮಾಣಿಕ, ಇಲ್ಲವೇ ಅಲ್ಪ ತಿಳಿವಳಿಕೆಯಿಂದ ಬಂದ ಸಮನ್ವಯ ದೃಷ್ಟಿ, ಪೂರ್ಣ ದೃಷ್ಟಿ, ಜೀವನ ಸಂತೋಷ – ಇವು ಒಂದು ವಿಪರೀತ. ಅಡಿಗರಲ್ಲಿ ಬೀಭತ್ಸರಸ ಇದನ್ನು ಬೇಕೆಂತಲೇ ವಿರೋಧಿಸಲೆಂದೋ ಏನೋ ಇನ್ನೊಂದು ವಿಪರೀತಕ್ಕೆ ಹೋಯಿತು. ಪರಂಪರಾನುಗತವಾದ ಜಡತೆಗೆ “Shock” ಕೊಡಲು ಅಡಿಗರು ಹೀಗೆ ಮಾಡಿದರೋ, ಏನೇ ಇರಲಿ, ಈ ಬೀಭತ್ಸವೇ ಅಡಿಗರ ಕಾವ್ಯದ ಹಿರಿಮೆಗಾಗಲಿ ಕಿರಿಮೆಗಾಗಲಿ ಕಾರಣವಾಗಲಾರದು. ಮನಸ್ಸು ಎಚ್ಚರವಾಗಿರದಾಗ ವ್ಯಕ್ತವಾಗುವ, ಜೀವಕ್ಕೆ ಅಭ್ಯಾಸವಾಗಿಹೋದ ಕೆಲವೊಂದು ಅಂಗಚೇಷ್ಟೆ ಯಂತೆ, ಬೀಭತ್ಸವೇ ಅಡಿಗರ ಕಾವ್ಯದ ಹಿರಿಮೆಗಾಗಲಿ ಕಿರಿಮೆಗಾಗಲಿ ಕಾರಣವಾಗಲಾರದು. ಮನಸ್ಸು ಎಚ್ಚರವಾಗಿರದಾಗ ವ್ಯಕ್ತವಾಗುವ, ಜೀವಕ್ಕೆ ಅಭ್ಯಾಸವಾಗಿಹೋದ ಕೆಲವೊಂದು ಅಂಗಚೇಷ್ಟೆ ಯಂತೆ, ಬೀಭತ್ಸರಸ ಹೇಗೋ ಹಾಗೆ ಸಮನ್ವಯ ದೃಷ್ಟಿಯೂ ಕವಿಗೆ ಬಿಡಿಸಿಕೊಳ್ಳಲಾಗದ ಅಭ್ಯಾಸವಾಗಬಹುದು. ಹೀಗಾದರೆ ಕವಿ ಜೀವಂತವಾಗಿ ಅನುಭವಿಸುತ್ತಿಲ್ಲ ಎಂದರ್ಥ, ಕವನ  ಹೊಸೆಯುವುದು ಇವನಿಗೆ ಸುಲಭವಾಯಿತು ಎಂದರ್ಥ. ಆದರೆ ಅಡಿಗರು ಇದನ್ನು ಗಮನಿಸಿ ಒಂದೇ ಜಾಡಿನಲ್ಲಿ ತಮ್ಮ ಕವನವನ್ನು ಹರಿಯಗೊಡಲಿಲ್ಲವೆನ್ನುವುದಕ್ಕೆ, ‘ಚಂಡೆ ಮದ್ದಳೆ’ಯಿಂದಲೇ ಉದಾಹರಿಸಬಹುದು. ಥಟ್ಟನೆ ಮನಸ್ಸಿಗೆ ಬರುವ ‘ಗೊಂದಲಪುರ’ದ ಗಿಣಿಯು ಪಂಜರದೊಳಗಿಲ್ಲ’ ಎನ್ನುವ ಭಾವ. ‘ದೀಪಾವಳಿ’, ‘ಏನಾದರೂ ಮಾಡುತಿರು ತಮ್ಮ’ ಎನ್ನುವ ಕವನಗಳು ಈ ಮಾತನ್ನು ಸ್ಪಷ್ಟಪಡಿಸಿಯಾವು.

ಬೀಭತ್ಸದಂತೆಯೆ ದೋಷಪೂರಿತವಾದ ಇನ್ನೊಂದು ವಿಷಯವನ್ನು ‘ಚಂಡೆ ಮದ್ದಳೆ’ಯಲ್ಲಿ ಗುರುತಿಸಬಹುದು. ಬೀಭತ್ಸಕ್ಕೂ ಬಹುಶಃ ಅದೇ ಕಾರಣವೆನ್ನಬಹುದು. ಅಡಿಗರ ಮಾತಿನ ಧೋರಣೆ ಸಾಮಾನ್ಯವಾಗಿ ತನ್ನ ಬಗ್ಗೆ ಸಹಾನುಭೂತಿಯಿಲ್ಲದವರನ್ನು ಉದ್ದೇಶಿಸಿ ಹೇಳುವಂತಿದೆ ಎನ್ನಿಸುತ್ತದೆ. ‘ಶರದ್ಗೀತ’ದ ಮೊದಲನೆಯ ಭಾಗದಲ್ಲಿ ಈ ಭಾವನೆಯನ್ನು ಹುಟ್ಟಿಸುವಂತಹ, ಓದುಗನನ್ನು ಉದ್ದೇಶಿಸಿ ಹೇಳಿದ ಮಾತುಗಳಿವೆ. ಓದುಗನಿಗೂ ಕವಿಗೂ ನಡುವೆ ದೊಡ್ಡ ಕಂದರವಿರುವುದು ನಮ್ಮ ನಾಗರಿಕತೆಯ ಒಂದು ದುರಂತ. ಅಡಿಗರ ಕಾವ್ಯದುದ್ದಕ್ಕೂ ಸೂತ್ರರೂಪವಾಗಿ ಅನುಭವಿಸುವ ನಾಯಕ ಮೃತ್ಯುಮುಖ ಬದುಕಿನಿಂದ ದೂರ ಸರಿದು ನಿಲ್ಲಲು ಅಸಾಮಾನ್ಯ ಸಾಹಸ ಮಾಡುವಂಥವನು. ಅವನಲ್ಲಿರುವ ಒಂದು ಚಿಕ್ಕ ದೋಷ, ಕೆಲವು ಸಾರಿ ಇವನು ಸಿಟ್ಟಿನಲ್ಲಿ ಮೈ ಪರಚಿ ಕೊಳ್ಳುವಂತೆ ಮಾತನಾಡುತ್ತಾನೆಂಬುದು. ಉತ್ತಮ ಕಾವ್ಯದಲ್ಲಿ, ಕವಿ ತನಗೆ ತಾನೇ ಮಾತನಾಡಿಕೊಳ್ಳುತ್ತಿದ್ದಾನೆ ಎನ್ನಿಸುತ್ತದೆ, ಅಥವಾ ತನ್ನಂಥವರ ಜೊತೆ ಮಾತನಾಡುತ್ತಿದ್ದಾಣೆ ಎಂದೆನ್ನಿಸುತ್ತದೆ. ಇನ್ನೂ ಉತ್ತಮ ಕಾವ್ಯದಲ್ಲಿ, ಇಲ್ಲಿ ಈ ಕವನದಲ್ಲಿಯೇ, ಕವಿ ತಾನು ಭಾವಿಸುವ ಕ್ರಮವನ್ನು ಅಭಿನಯಿಸಿ ತೋರಿಸುತ್ತಿದ್ದಾನೆ ಎಂದೆನ್ನಿಸುತ್ತದೆ. ಕವಿ ತನ್ನ ಅಂತರಂಗವನ್ನು ಜೀವದ ಅಂತರಾಳಗಳಲ್ಲಿ ಹುದುಗಿರುವ ಸತ್ಯವನ್ನು ಅನ್ವೇಷಿಸುವ, ಬಗೆಯುವ ರೀತಿಯದು. ಭಾಷೆಯಲ್ಲಿ ಭಾವಾಭಿನಯವಾಗಬೇಕು, ಭಾಷೆಯಲ್ಲಿ ಕಾವ್ಯ ಸಂಭವಿಸಬೇಕು ಎನ್ನುವ ಮಾತಿನ ಅರ್ಥವಿದು. ಅಡಿಗರ ಉತ್ತಮ ಕಾವ್ಯವೆಲ್ಲಾ ಈ ರೀತಿಯದು, ಉಳಿದುದೆಲ್ಲಾ ಮಾತಿನ ದುಂದುಗಾರಿಕೆಯೆನಿಸುವ ಶರದ್ಗೀತ, ಗೊಂದಲಪುರದ ಕೆಲವೊಂದು ಭಾಗಗಳ ಭಾಷಣ ವೈಖರಿಯದು.

ಅಡಿಗರ ಕಾವ್ಯದಲ್ಲಿ ಜೀವನ ಸಂತೋಷವಿಲ್ಲ ಎನ್ನುವ ಇನ್ನೊಂದು ಅಪವಾದವನ್ನು ಪರೀಕ್ಷಿಸೋಣ. ಸಂಸಾರದ ಒಲವು – ನಲಿವುಗಳ ರಸನಿಮಿಷಗಳ – ಶ್ರೀ ಕೆ. ಎಸ್‌. ನರಸಿಂಹಸ್ವಾಮಿಗಳ ಕವನಗಳಲ್ಲಿ ಸತ್ವಪೂರ್ಣವಾಗಿ ಚಿತ್ರಿತವಾಗುವಂತಹ – ಜೀವನದ ಇನ್ನೊಂದು ಮುಖವನ್ನು ಇವರ ಕಾವ್ಯ ಒಳಗೊಂಡಿಲ್ಲವೆಂಬುದು ನಿಜ. ಬರೀ ಹಸೆಮಣೆಯ, ಅಥವಾ ಬರೀ ಬಿದಿರ ಮೇಣೆಯ ಕಾವ್ಯ ಯಾರಿಗೆ ತಾನೆ ಬೇಸರತರದಿದ್ದೀತು? ಎಣ್ಣೆಬಂದಾಗ ಕಣ್ಣು ಮುಚ್ಚಿಕೊಳ್ಳುವ, ಮುಖ ಸೊಟ್ಟಗೆ ಮಾಡಿಕೊಳ್ಳುವುದನ್ನೇ ಹವ್ಯಾಸ ಮಾಡಿಕೊಂಡಾಗ ಕವಿಗೆ ಸಂಸಾರದ ಒಲವು ನಲಿವಿನಲ್ಲಿ, ಎರಡು ಹೊತ್ತು ಪುಷ್ಕಳವಾಗಿ ಸಿಗುವ ಊಟ ಉಪಚಾರದಲ್ಲಿ, ಜೀವನ ಸಂತೋಷವಿಲ್ಲವೇ? – ಎಂದು ಕಿವಿಹಿಡಿದು ಕೇಳುವುದು ಹಿರಿಯರಾದ ರೂಪಾರಾಧಾಕರ ಕರ್ತವ್ಯವೆನ್ನುವುದನ್ನು ಒಪ್ಪಿಕೊಳ್ಳಲೇಬೇಕು. ಆದರೆ ಅಡಿಗರ ಅತೃಪ್ತಿ ಅಭಾವಜನ್ಯವಾದದ್ದು ಎಂಬ ಖಂಡನೆ ಮಾತು ಜೀವನದ ದುರಂತಸತ್ಯಗಳನ್ನು ಎದುರಿಸಲು ಹಿಂಜರಿಯುವ ಉಷ್ಟ್ರಪಕ್ಷಿ ರೀತಿಯದೆಂದು ನನ್ನ ಭಾವನೆ. ಅಡಿಗರ ಕಾವ್ಯದಲ್ಲಿ ತಿಳಿಹಾಸ್ಯವಾಗಲೀ ಸಂಸಾರ ಜೀವನದ ರಸನಿಮಿಷಗಳಾಗಲೀ, ಚಿತ್ರಿತವಾಗದಿರುವುದು ಒಂದು ಕೊರತೆಯ ವಿಚಾರ. ಆದರೆ ಆ ಅಂಶವನ್ನು ಒಳಗೊಂಡಿದ್ದರೆ ಇದರ ದೃಷ್ಟಿ ಬೇರೆಯಾಗಬಹುದಿತ್ತು ಎನ್ನುವುದು ಊಹೆಯ ಮಾತು. ರಸನಿಮಿಷ ತಾರಾಕ್ಷೀರಪಥವಾಗಬೇಕು, ಈ ಬಾಳು ಪೂರ್ಣಶುದ್ಧಿಯನ್ನು ಪಡೆಯಬೇಕು ಎಂದು ಬಯಸುವ ಇವರ ಕಾವ್ಯ ಮುಖ್ಯವಾಗಿ religious. (ಅಂದರೆ, ಅಡಿಗರ ಕಾವ್ಯ ನಿಷ್ಕಲ್ಮಷ. ಪವಿತ್ರಾತ್ಮದಿಂದ ಹೊರಸೂಸುವ ಸಾತ್ವಿಕ ಭಾವನಾಲಹರಿ ಎಂದರ್ಥವಲ್ಲ. ) ಇವರ ಕಾವ್ಯದಲ್ಲಿ ಎಲ್ಲೆಲ್ಲೂ ಸತ್ವ – ತಮಗಳ ನಡುವಿನ religious ಎನ್ನಿಸುವಂತಹ ಹೋರಾಟವನ್ನು ನೋಡಬಹುದು.

ಇನ್ನೊಂದು ಅಪವಾದವನ್ನು ಪರೀಕ್ಷಿಸೋಣ. ಅದು ಅಡಿಗರು ಚಂಡೆ ಮದ್ದಳೆಯಿಂದ ಎಲಿಯೆಟ್‌ ಕಾವ್ಯದೃಷ್ಟಿಗೆ ಮತಾಂತರಹೊಂದಿ ಅಧೋಗತಿಗಿಳಿದರು, ಅತಿ ವಾಸ್ರತವವಾದಿಗಳಾಗಿ ಹಳೆಯ ರೀತಿನೀತಿಗಳ ಕಟ್ಟುಗಳನ್ನು ಬಲವಾಗಿ ವಿರೋಧಿಸಿದರು; ಇವರಿಗೆ ಪರಂಪರೆ ಕೆಲಸಕ್ಕೆ ಬಾರದ ಅಮೃತಶಿಲೆಯ ಗೋರಿಯಂತೆ ಕಂಡಿತು – ಎನ್ನುವುದು. ಈ ವಾದ ವಿನಾಯಕರ ಸಮನ್ವಯ, ಶ್ರೀ ಆಡಿಗರ “Big show of animal instincts” ಗಿಂತ ಹೇಗೆ ಹೆಚ್ಚು ಗ್ರಾಹ್ಯ. ಉತ್ಕೃಷ್ಟ ಎನ್ನುವುದನ್ನು ತೋರಿಸಲು ಒಡ್ಡಿದುದು. (ಶ್ರೀ ವಿನಾಯಕರ ಸಾಹಿತ್ಯ ಸಮೀಕ್ಷೆ ಗ್ರಂಥದಲ್ಲಿ ಶ್ರೀ ಎಸ್‌. ಬಿ. ಮಿಣಜಿಗಿ ಅವರ ಲೇಖನವನ್ನು ನೋಡಿ. ) ‘ಭೂತ’ ಪದ್ಯವನ್ನು ಓದಿದ ಮೇಲೂ ಅಡಿಗರು ಸಂಪ್ರದಾಯವನ್ನು ಅಲ್ಲಗಳೆಯುವವರು ಎಂದು ಹೇಳಲು ಸಾಧ್ಯವೇ?

“ಅಮೃತಶಿಲೆಯ ಗೋರಿ”ಯ ಪ್ರತೀಕವನ್ನು ಈ ವಿಮರ್ಶಕರು ಅರ್ಥಮಾಡಿಕೊಂಡ ಕ್ರಮ ಸರಿಯೇ? ವಿನಾಯಕರನ್ನು ಯೇಟ್ಸ್ ಕವಿಗೂ ಅಡಿಗರನ್ನು ಎಲಿಯೆಟ್‌ಗೂ ಹೋಲಿಸುವ ಈ ವಿಮರ್ಶಕರು, ಯೆಟ್ಸ್‌ ಮತ್ತು ಎಲಿಯೆಟ್‌ರ ಕಾವ್ಯ ವಿನಾಯಕ ಮತ್ತು ಅಡಿಗರ ಕಾವ್ಯಕ್ಕಿಂತ ಶ್ರೇಷ್ಠತರವಾದುದೆಂದು ತಿಳಿಯುವಷ್ಟು ವಿವೇಕಶಾಲಿಗಳಿರಲೇಬೇಕೆಂದು ನಮ್ಮ ನಂಬಿಕೆ. ಹೋಲಿಕೆ ಅನಗತ್ಯವಾಗಿತ್ತು. ಇರಲಿ. ‘ಭಾವತರಂಗ’ದಿಂದ ‘ಭೂಮಿಗೀತ’ದವರೆಗೆ ಅಭಿವ್ಯಕ್ತವಾದ ಕವಿ ಜೀವ ಒಂದೇ ಎಂಬುದು ಬಹುಮುಖ್ಯವಾಗಿ ಗಮನಿಸಬೇಕಾದ್ದು. ಕವಿ ಶಕ್ತಿಯ ಪೂರ್ಣಾವಿಷ್ಕರಣಕ್ಕಾಗಿ ಇವರ ಕವನ ರಚಿಸುವ ಕ್ರಮದಲ್ಲಾದ ಬದಲಾವಣೆ ಎಲ್ಲ ಶ್ರೇಷ್ಠಕವಿಗಳಲ್ಲೂ ಆಗಬೇಕಾದ್ದೆ. ಆದರೆ ನಮಗೆ ಆಧುನಿಕ ಕನ್ನಡ ಕಾವ್ಯ ಬೇಸರತರುತ್ತದೆ, ಇಂಗ್ಲೆಂಡಿನಲ್ಲಿ ಬರುತ್ತಿರುವಂತಹ ನವ್ಯಕಾವ್ಯ ಬೇಕು – ಎನ್ನುವ ಕಾರಣದಿಂದ ಅಡಿಗರ ಈಚಿನ ಕವನಗಳನ್ನು ಸ್ವಾಗತಿಸಿದವರು ಇವರನ್ನು ವಿರೋಧಿಸಿದವರಷ್ಟೆ ಖಂಡನೆಗೆ ಅರ್ಹರು. ನವ್ಯಕಾವ್ಯದ ಪ್ರಕಾರದ ಬಗ್ಗೆ ಕೆಲವರು ಅತಿ ಉತ್ಸಾಹದಲ್ಲಿ ಎಬ್ಬಿಸಿದ ಗೊಂದಲ, ಇಂಗ್ಲೆಂಡಿನ ಕವಿಗಳ ಜೊತೆ ಕನ್ನಡ ಕವಿಗಳನ್ನು ಮೆಚ್ಚಿಗೆ ವ್ಯಕ್ತಪಡಿಸಲು ಮಾತ್ರ ಹೋಲಿಸುವ ಹಾಸ್ಯಾಸ್ಪದ ಹವ್ಯಾಸ. ಅಡಿಗರು ಈಗ ಬರೆಯುತ್ತಿರುವುದು ಅವರ ಕಾವ್ಯದ ಸಂಕ್ರಾಂತಿಯ ದೃಷ್ಟಿಯಿಂದ ಏಕೆ ಅನಿವಾರ್ಯ ಎನ್ನುವುದನ್ನು ಮರೆಸಿತು. ‘ಭಾವತರಂಗ’ ಮತ್ತು ‘ಭೂಮಿಗೀತ’ಗಳ ಮೂಲ ಕಾವ್ಯವಸ್ತುಗಳು ಬೇರೆಯಲ್ಲ. ಆದರೆ ಅನುಭವದ ಸಂಕೀರ್ಣತೆ ಬೆಳೆದಿದೆ ಎಂಬುದನ್ನು ಗಮನಿಸುವಷ್ಟು ಸಾವಧಾನವಿರುವ ವಿಮರ್ಶಕ, ಅಡಿಗರು ಎಲಿಯಟ್ಟನ ಪುರಸ್ಕರ್ತರಾಗಿ ಮತಾಂತರ ಹೊಂದಿದರು ಎನ್ನಲಾರ. ಇಂಗ್ಲೆಂಡಿನ ನವ್ಯ ಕಾವ್ಯ ಪರಂಪರೆಯನ್ನಷ್ಟೇ ಅರಿತವನಿಗೆ ಅಡಿಗರ ಈಗಿನ ಕವನಗಳಲ್ಲಿ ಶೇಕಡಾ ಹತ್ತರಷ್ಟು ಮಾತ್ರ ಅರ್ಥವಾದೀತು. ಉಳಿದ ತೊಂಬತ್ತಂಶ ತಿಳಿಯಲು ನಮ್ಮ ಆರ್ಯ ಸಂಪ್ರದಾಯ ಅರ್ಥವಾಗಿರಲೇಬೇಕು. ಅಡಿಗರದ್ದು ಮುಖ್ಯವಾಗಿ ಆರ್ಷದೃಷ್ಟಿ.

ಇನ್ನು ಪೂರ್ಣದೃಷ್ಟಿ ಸಮನ್ವಯದೃಷ್ಟಿಗಳ ಮಾತು. ಇದರ ಬಗ್ಗೆ ಹೆಚ್ಚು ಹೇಳದಿರುವುದೇ ಒಳ್ಳೆಯದು. ದಾರಿ ನಡೆಯದೆ ಗುರಿಮುಟ್ಟುವ, ಸಾಧಿಸದೆ ಸಿದ್ಧಿಸಿತು ಎನ್ನಿಸುವ, ಯಾವ ಒಳತೋಟಿಗೂ ಒಳಗಾಗದ, “ಇಹದ ತಳಹದಿಯಿಂದ ದಿಟದ ದರ್ಶನವರಳಿ ಹಂಬಲಿಸಿ ಹಾಡಾಗದ” ಸಮನ್ವಯದೃಷ್ಟಿ, ಪೂರ್ಣ ದೃಷ್ಟಿ, ಎರವಲು ತಂದದ್ದು ಜೀವನದ ಅನಿವಾರ್ಯತೆಯನ್ನು. ಸಂಧಿಕಾಲಗಳ ಸಂದಿಗ್ಧತೆಯನ್ನು ಎದುರಿಸಲಾಗದೆ ಅಥವಾ ಎದುರಿಸಿದ ಅನುಭವವಿಲ್ಲದ ಅಲ್ಪ ತಿಳಿವಳಿಕೆಯಿಂದ ಬಂದದ್ದು. ಆದ್ದರಿಂದ ಪೂರ್ಣತೆಯ, ಪ್ರಗತಿಯ ಭ್ರಮೆಯನ್ನು ಹುಟ್ಟಿಸಿ ಬದುಕನ್ನು ಸರಳ ಮಾಡಿಸುವ ಕಾವ್ಯಕ್ಕಿಂತ, ಅಪೂರ್ಣತೆಯ ಪ್ರಜ್ಞೆಯನ್ನು ಉಳಿಸಿ, ನೋಯಿಸಿ, ಕುದಿಸಿ, ಬೆಳಕನ್ನು ಕಾಣಲು ಕತ್ತಲಲ್ಲೇ ತಡಕುತ್ತ ನಡೆಯಬೇಕಾದ ಅನಿವಾರ್ಯತೆಯನ್ನು ಜೀವಕ್ಕೆ ಕಲಿಸುವ ಕಾವ್ಯ ಶ್ರೇಷ್ಠವಾದುದು. ಅಡಿಗರ ಕಾವ್ಯ ಹೀಗೆ ತೀವ್ರ ಅನುಭವಗಳ ಸಂವೇದನೆಗೆ ಜೀವವನ್ನು ಸಿದ್ಧಪಡಿಸಿ ಜೀವೋಪಯೋಗಿಯಾಗುತ್ತದೆ. ಇಂತಹ ಕಾವ್ಯದಲ್ಲಿ ನಿರಾಸೆಯೇ ಹೆಚ್ಚು ಎನ್ನುವ ಅಪವಾದ ತಪ್ಪು. ಸಂಪೂರ್ಣ ನಿರಾಸೆಯೂ ಸರಳ ಬುದ್ಧಿಗೆ ಮಾತ್ರ ಸಾಧ್ಯ. ನಿರಾಸೆಯಲ್ಲಿಯೇ ಮುಳುಗಿ ತೇಲುವ ಪ್ರವೃತ್ತಿಗೆ ಒಂದು ಬಗೆಯ ಸುಖ ದೊರಕಬಹುದು. ಅಡಿಗರಲ್ಲಿ ಕಾಣುವುದು ಮಾತಿನ ಋಷಿಗಾಗಿಯೇ ಬರುವ ನಿರಾಸೆಯಲ್ಲ. ಆದರೆ ಅವರಲ್ಲಿ ನಿರಾಸೆಯಂತೆ ಕಾಣಬಹುದಾದದ್ದು, ಧಾರ್ಮಿಕ ಅನುಭವದ ಒಂದು ಹಂತದಲ್ಲಿ ಎನ್ನಿಸುವ ಉತ್ಕಟವಾದೊಂದು ಭಾವನೆ. ಇದನ್ನು ‘ವಿಷಾದಯೋಗ’ ಎಂದು ಕರೆಯಬಹುದು.

ಈ ಮಾತುಗಳ ಹಿನ್ನೆಲೆಯಲ್ಲಿ ಅಡಿಗರ ಕಾವ್ಯವಸ್ತು ಯಾವುದು ಎಂದು ಪರೀಕ್ಷಿಸಿ, ಅವರ ಮನೋಭೂಮಿಕೆಯ ಸೂಕ್ಷ್ಮ ಪರಿಚಯ ಮಾಡಿಕೊಳ್ಳೋಣ. ಅಡಿಗರನ್ನು ತಪ್ಪಾಗಿ ಅರ್ಥಮಾಡಿಕೊಂಡ, ಅಥವಾ ಅರ್ಥವಾಗಲಾರದೆ ಕವನಗಳನ್ನು ಓದಿದ, ಓದುಗರನ್ನು ಗಮನದಲ್ಲಿಟ್ಟುಕೊಂಡು ಬರೆದ ಈ ಭಾಗದಲ್ಲಿ ಕವನಗಳ ಸಂಕೀರ್ಣತೆಯನ್ನು ನನ್ನ ವ್ಯಾಖ್ಯೆಗೊಗ್ಗಿಸಲು ಸರಳಮಾಡ ಲಾಗಿದೆ. ಆದರೆ ಈ ಅಪರಾಧ ಕ್ಷಮಾರ್ಹವೆಂದು ಭಾವಿಸುತ್ತೇನೆ.

ಅಡಿಗರ ಹಿಂದಿನ ಕವನಗಳು ‘ಆತ್ಮವಂಜಕ’ ಮತ್ತು ‘ಸಾಮಾಜಿಕ’ ಎಂದು ವಿಭಾಗಿಸಬಹುದಾದಷ್ಟು ಸರಳವಾಗಿರುತ್ತಿದ್ದವು. ಸಾಮಾಜಿಕ ಪ್ರಜ್ಞೆ ಹೇಗೆ ಪೂರ್ಣ ಬಾಹ್ಯವಲ್ಲವೋ, ಆತ್ಮವ್ಯಂಜಕವೂ ಅಷ್ಟೇ ಅಂತರಂಗ ಮಾತ್ರಕ್ಕೆ ಸಂಬಂಧಪಟ್ಟದ್ದಲ್ಲವಾದ್ದರಿಂದ ಈ ಸಂಕಲನದಲ್ಲಿರುವ ಕವನಗಳ ಸಂಕೀರ್ಣತೆ ಹೆಚ್ಚಿದೆ. ‘ಭೂಮಿಗೀತ’ದ ನಾಯಕ, ‘ಓಡಲೆಳಸುತಿಹುದು ಜೀವ’, ‘ಒಳತೋಟಿ’, ‘ಮೋಹನ ಮುರಲಿ’, ‘ಅತಿಥಿಗಳು’,. ‘ಹಿಮಗಿರಿಯ ಕಂದರ’ಪದ್ಯಗಳಲ್ಲಿ “ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವ” ನಾಯಕನೆ. ಆದರೆ ಹಿಂದಿಗಿಂತ ಹೆಚ್ಚು ಅನುಭವ ಪಡೆದವನು. ಎಳೆಹರೆಯದ ಮುಗ್ಧತೆಯಲ್ಲಿ ಭೂಮಿತಾಯಿ: “ತೆಂಗುಗರಿಗಳ ಬೀಸಿ ಕೈಚಾಚಿ ಕರೆದಳಲು, ಅಡಿಕೆ ಗೊನೆ ಗಿಲುಕಿ ಹಿಡಿದಾಡಿಸಿದಳು. ” ಭೂರಮೆಯ ಕೈದೊಟ್ಟಿಲಿನಲ್ಲಿ ‘ಮಧುರ’ ಬೆಳೆದದ್ದನ್ನು ‘ಒಳತೋಟಿ’ಯ ಮೊದಲನೆಯ ಹದಿನೈದು ಪದ್ಯಗಳಲ್ಲಿ ವರ್ಣಿಸಿದ ಬಗೆಯೊಂದಿಗೆ ‘ಭೂಮಿಗೀತ’ದ ಈ ಭಾಗವನ್ನು ಹೋಲಿಸಬಹುದು; ಹಾಗೆಯೇ ‘ಗಿಣಿಯು ಪಂಜರದೊಳಿಲ್ಲ’ ಭಾಗದ ಮೊದಲಿನ ಹದಿನಾರು ಸಾಲುಗಳ ಜೊತೆಗೂ ಹೋಲಿಸಬಹುದು. ಕವಿಯ ಬೆಳವಣಿಗೆಯ ದೃಷ್ಟಿಯಿಂದ ಈ ಹೋಲಿಕೆ ಬೆಳಕು ಚೆಲ್ಲೀತು. ಬಾಲ್ಯದ ಎಳೆಹರೆಯದ ಮುಗ್ಧತೆಯಲ್ಲಿ ಮಾತ್ರ ಈ ಕವಿ ತನ್ನ ಆವರಣದಲ್ಲಿ ತನ್ಮಯನಾಗಿ ಆನಂದವನ್ನು ಕಾಣುತ್ತಾನೆ. ಅನಂತರ ನೋವೇ ಜೀವಕ್ಕೆ ಮೀಸಲು; “ಎಲ್ಲೆಲ್ಲು ಹೆರಿಗೆ ಮನೆ; ಬೇನೆ, ಸಂಕಟ, ನಗೆ. ” ಭೂಮಿತಾಯಿಯ ‘ಪ್ರೇಮ ಧೃತರಾಷ್ಟ್ರನಪ್ಪಿಗೆ ಭಗ್ನ ಬಲಭೀಮ’ನಾಗುತ್ತಾನೆ. ಅಲ್ಲಿಯೂ ಸಲ್ಲದೆ, ಇಲ್ಲಿಯೂ ಸಲ್ಲದೆ ತನ್ನನ್ನೇ ತಾನು ಹಿಂಸಿಸಿಕೊಳ್ಳುತ್ತಾನೆ. ವಯಸ್ಸಾದ ಮೇಲೆ ವೇದ, ಶಾಸ್ತ್ರ, ಪುರಾಣವೆಲ್ಲ “ಎಣ್ಣೆ ತೀರುತ್ತಲಿರೆ ಒಡಕು ಹಣತೆಯ ಮುಂದೆ ಬತ್ತಿ ಹೊಸೆತ. ” ಮರಣ ಸನ್ನಿಹಿತವಾದಾಗ ಭೂಜಮಿತಾಯಿಯ ಪ್ರೀತಿಯೆಲ್ಲಿ? “ಬಿದಿರು ಮೇಣೆಯ ಮೇಲೆ ಕುಳಿತು ಸಾಗುವ ವೇಳೆ ಹೊರಬರಳು, ಅವಳಿಗಿನ್ನೊಂದು ಹೆರಿಗೆ. ” ಜನನ ಮರಣದ ಈ ದುಃಖಚಕದ್ರದಿಂದ ಬಿಡುಗಡೆ ಹೇಗೆ? ಭೂಮಿತಾಯಿ ಕೇಳುತ್ತಾಳೆ: “ಗಂಡುಸಾದರೆ ನನ್ನ ಬಲಿ ಕೊಡುವಿಯೇನು?” ರಾಧೇಯ ಕರ್ಣನನ್ನು ಸಾಯಿಸಲೆಂದೇ ಬರುವ ಕುಂತಿಯಿವಳು: “ಮೈಯೆಲ್ಲ ಹೆರಿಗೆ ಮನೆ ಮಸಣ ಇವಳಿಗೆ. ” ಇವಳ ಸ್ವರತಿಯಿಂದಲೇ ಹುಟ್ಟಿದವು ಇರಬೇಕು, “ಹುಲಿ, ಚಿರತೆ, ಆನೆ, ಹಸು, ಆಡು, ಕೋಡಗ, ಕತ್ತೆ, ಮಾವು, ನೇರಿಳೆ, ಹಲಸು, ಜಾಲಿ, ಜಾಜಿ. ” ಆದ್ದರಿಂದಲೇ ಇವು ಅವಳ ‘ಸಹಜ ಸಂತಾನ’; ಲಾರೆನ್ಸ್‌ `Snake’ ಎಂಬ ಪದ್ಯದಲ್ಲಿ ಹೇಳುವಂತೆ ‘Lords of Lifre’. ಮನುಷ್ಯನಾದರೊ ಭೂಮಿಯ ವಿಷಮ ರತಿ ದುರಾಸೆಯಿಂದ ಹುಟ್ಟಿದವನು; ಭೂಮಿ ಆಕಾಶ – ಈ ಎರಡು ಗುಣಗಳಿಂದ ಕೂಡಿ ವಿರುದ್ಧ ಪ್ರವೃತ್ತಿಗಳ ಸೆಳೆತಕ್ಕೆ ಸಿಕ್ಕಿ ಅಸುಖಿ. ಇವನಿಗೆ ‘ಕಾಡ ಮೂಲಕವೆ ಪಥ ಆಗಸಕ್ಕೆ. ’ ‘ಬತ್ತಲಾಗದೆ ಬಯಲು ಸಿಕ್ಕದಿಲ್ಲಿ’.

‘ಹಳೆಮನೆಯ ಮಂದಿ’ಯಲ್ಲಿರುವ ವಿಡಂಬನೆ ಅಡಿಗರು ಯಾವ ರೀತಿಯ ಕಾವ್ಯ ಬರೆಯಲು ಬಯಸುತ್ತಾರೆ ಎಂಬುದರ ಬಗ್ಗೆ ಬೆಳಕು ಚೆಲ್ಲುತ್ತದೆ. ಇದರ ಬಗ್ಗೆ ಚಿಂತನೆ “ಪುಷ್ಪ ಕವಿಯ ಪರಾಕಿ” ನಲ್ಲೂ ಇದೆ. “ಹುಟ್ಟು ಸಾವಿನ ಕೋಟಲೆಗಳ ಮೀಟುವ ತಂತಿ ಹಳೆ ಮನೆಯ ಮುರುಕು ಜಂತಿ” ಎಂದು ತಿಳಿಯುವ ಪುಷ್ಪ ಕವಿಯ ಹಗುರವಾದ ಮನಸ್ಸನ್ನು ಅಲ್ಲಿ ಗೇಲಿ ಮಾಡಿದ್ದರೆ, ಇಲ್ಲಿ ‘ಬಿಗಿತ ತಿಕ್ಕಾಟ ಸುಖ ಸೊನ್ನೆ’ಯಾದ ‘ಸರಳ ನಿರಪಾಯ’ವಾದ ‘ಸುಸೂತ್ರ ಸಾರಿಗೆ’ಯ, ‘ಹಳೆ ಗಂಡಹೆಂಡಿರೊಡನಾಟ’ ದಂತಹ ಸತ್ವಹೀನ ಷಾಣ್ಮಾಸಿಕ ಕಾವ್ಯವನ್ನು ತೀಕ್ಷ್ಣವಾಗಿ ಖಂಡಿಸಿದ್ದಾರೆ. ಈ ಬಗ್ಗೆ ಚಿಂತನೆ ‘ಪ್ರಾರ್ಥನೆ’ಯಲ್ಲಿಯೂ ಇದೆ: “ಅರಗದಂಥ ಕಚ್ಚಾ ಗಾಳಿ ಗೀಳುಗಳ ಕಾಗದದ ಮೇಲೆಲ್ಲ ಕಾರಿಕೊಳ್ಳದ ಹಾಗೆ ಏರ್ಪಡಿಸು ಸಹಜ ಹೊರದಾರಿಗಳ”. ‘ಶರದ್ಗೀತ’ದಲ್ಲಿ ಭಾಷೆಯ ಬಗ್ಗೆ ಕಾವ್ಯದ ಬಗ್ಗೆ ಮತ್ತೆ ಚಿಂತಿಸಿದ್ದಾರೆ:

ಮಾತು ದೂರದ ಮಿಂಚು ತಂತಿಗಳಿರುವ ಹಾಗೆ.
ಒದೆಸಿಕೊಳ್ಳದೆ ಒಳಗು ಮಿಂಚು ಬಲ ತಿಳಿಯದು.
ಆದ ಕಾರಣವೆ ಮಾತಿನಲ್ಲಿದು ಸಾಚ ಇದು ಮೋಸ
ಎಂದು ಹೇಳುವುದು ಬಡಪಾಯಿ ಕಿವಿಗಲ್ಲ ಸುಲಭ”.

ಉತ್ತಮ ಕಲಾಕೃತಿಯಾಗಲಿ, ಆದರ್ಶ ಮೈಗೊಂಡ ಜೀವವಾಗಲಿ “ನಾಭಿ ಕುಹರದ ಕತ್ತಲೊತ್ತುವಿದ್ದಲ ಚೂರು ಯಾವ ಕಾಲಕ್ಕೂ ಹರಳಾಗುವ” ಹಾಗೆ.

‘ನೆಹರೂ ನಿವೃತ್ತರಾಗುವುದಿಲ್ಲ’ ಎನ್ನುವ ವಿಡಂಬನೆಯಲ್ಲಿಯೂ ಇದೇ ರೀತಿಯ ಚಿಂತನೆಯ ಇನ್ನೊಂದು ಮುಖವಿದೆ. ನೆಹರೂ ವಾಗ್ರೂಪದಲ್ಲಿ ಹಾಲಿನ ಹಳ್ಳ ಹರಿಸುತ್ತಿದದಾರೆ. ‘ಉದ್ದುದ್ದ ಜಮಾತುಗಳ ಕೊಂಡಿ ಕೊಂಡಿ ನಿಚ್ಚಣಿಕೆ ತುದಿ’ ಕುಬೇರನ ಖಜಾನೆಯನ್ನು ‘ಮೂಸುತ್ತದೆ’ – ಅಷ್ಟೆ. ಮಾತು ಕೃತಿಯಲ್ಲಿ ಮೈ ಪಡೆಯುವುದಿಲ್ಲ: “ಹೊತ್ತು ಸುತ್ತುತ್ತಾನೆ ಬಲು ಭಾರಿ ಭೂಗೋಳ”, ಭಾಷೆಯ ತೆಕ್ಕೆಗೊಗ್ಗದ ಭಾವ, ವಸ್ತು ಪ್ರತಿರೂಪದಲ್ಲಿ ಸಂಪೂರ್ಣ ಅಭಿವ್ಯಕ್ತವಾಗದ ಅನುಭವದ ಬಗ್ಗೆ ಕವಿ ಸಾಹಿತ್ಯ ವಿಮರ್ಶಕನಾಗಿ ಯಾವ ಅಭಿಪ್ರಾಯ ತಳೆದಿದ್ದಾನೋ, ಅದೇ ಅಭಿಪ್ರಾಯವನ್ನು ಕೃತಿಯಾಗದ ಬರಿಯ ಕಲ್ಪನೆಯಲ್ಲಿ ಸಂತೋಷ ಕೊಡುವ ಅಪ್ರಮಾಣಿಕ ಆದರ್ಶಗಳ ಬಗ್ಗೆಯೂ ತಳೆಯುತ್ತಾನೆ:

ಬೆಳೆಸಿಕೊಂಡೇ ತಮಗೆ ತಕ್ಕ ಮಾಂಸವ, ತೊಗಲ
ಬರಲಿ ಅತಿಥಿಗಳೆಲ್ಲಾ ಮನೆಗೆ, ಬಂದವರಲ್ಲಿ
ತೊಗಲನೊಲ್ಲದ ಅತಿಥಿ ತುರಿಕೆ ಕಳೆಯೋ ತಂದೆ”.

ಇವರ ಕಾವ್ಯ ಸಿದ್ಧಾಂತ, ಜೀವನ ಸಿದ್ಧಾಂತ ಒಂದೇ ಕೇಂದ್ರದಿಂದ ಬಂದುವು. ಈ ದೃಷ್ಟಿಯಿಂದ “ಪ್ರಾರ್ಥನೆ” ಪದ್ಯ ಅಡಿಗರ ‘manifesto’ ಎಂದು ಕರೆಯಬಹುದು.

ಅಡಿಗರ ಕಾವ್ಯವಸ್ತು ಸಮಕಾಲೀನ ಜೀವನದ ಸಮಸ್ಯೆಗಳ ಆವರಣದಲ್ಲಿ ನಮ್ಮ ಜನಾಂಗದ ದೃಷ್ಟಿಯಿಂದ ಮಹತ್ವಪೂರ್ಣವಾಗುತ್ತದೆ. ‘೧೯೫೮ರ ಪಾಠ’ದಲ್ಲಿ ವಿಶ್ವಭಾವ ಬೆಳೆಯುವ ಕ್ರಮ ಹೇಗಿರಬೇಕೆಂದು ಚಿಂತಿಸುತ್ತಾರೆ. ಕಲ್ಪನೆಯೊಳಗೆ ಬೀಜವೊಂದೇ ಹಬ್ಬಿ ಅಖಿಲಾಂಡ ಕೋಟಿಯನ್ನು ತಬ್ಬಹುದು. ಆದರೆ “ಪ್ರಾಣವೋ ಅಸ್ಥಿಪಂಜರ ಬದ್ಧ”. ವ್ಯಕ್ತಿಯ ಪರಿಮಿತಿಯನ್ನರಿತ ವಿಕಾಸವೇ ಯೋಗ್ಯವಾದುದು, ಪ್ರಾಮಾಣಿಕವಾದುದು. ಮನೆಗೆ ತೊದಲಿನ ರಕ್ಷೆಯಿಲ್ಲದಿದ್ದರೂ ಸರಿಯೇ, ಸಾಕುಮಕ್ಕಳ ಜಿಗಣೆಯೊಲುಮೆ ಬೇಡ. ನೆಲದಲ್ಲಿ ಬೇರು ಬಿಟ್ಟು, ಊರ್ಧ್ವಮುಖಿಯಾಗಿ ಆಕಾಶದಲ್ಲಿ ಹರಡುವ ಮರ, ವ್ಯಕ್ತಿಯಲ್ಲಿಯೂ ವಿಶ್ವಭಾವ ಬೆಳೆಯಬಹುದಾದ ಕ್ರಮಕ್ಕೆ ಸಂಕೇತ. ತನ್ನತನವನ್ನು ಕಳೆದುಕೊಂಡ ಅಪ್ರಬುದ್ಧ ವಿಶ್ವಭಾವ, ಭಾರತೀಯತೆಯನ್ನು ಮಾರಿಕೊಂಡ ಪಾಶದ್ಚಾತ್ಯೀಕರಣದಲ್ಲಿ ಪರ ವಸಾನವಾಗಬಹುದು. (“ಬಿಳಿದೊಗಲ ಚಿಣ್ಣರ ಕಂಡು ಕರಿದೊಗಲಿನವ ನಾಚಿದ. ”) “ಆಮದು – ರಫ್ತು” ಎಷ್ಟಾಗುತ್ತಿದ್ದರೆ ನಮಗೆ ಹಿತ ಎನ್ನುವುದರ ಬಗ್ಗೆ “ಪ್ರಾರ್ಥನೆ”ಯಲ್ಲಿಯೂ ಕೆಲವು ಮಾತಿವೆ. ಶರದ್ಗೀತ creative minorityಯ ಬಗ್ಗೆ ಅಡಿಗರ ಕವನ; (ಅಡಿಗರ ವಿಚಾರಗಳಿಗೂ, ಟಾಯನ್ಬಿಯ ‘creative minority’ ಇತ್ಯಾದಿ ವಿಚಾರಗಳಿಗೂ ಇರುವ ಸಾಮ್ಯ ಅರ್ಥಪೂರ್ಣವಾಗಿದೆ. ) ಜಲಪ್ರಳಯದಲ್ಲೂ ಹೊಸ ಸೃಷ್ಟಿಗೆ ಸಾವಧಾನದಿಂದ ಕಾಯುತ್ತಾ ಕುಳಿತಿರುವ ನೋಹನಂತಹ ತಿಮಿಂಗಿಲ ವೃತ್ತಿಯ ಶರದೃತುವಿನಲ್ಲಿ ಕವಿ ಆಶಾಕಿರಣವನ್ನು ಕಾಣುತ್ತಾನೆ. ಗೊಂದಲಾಸುರನ ರಾಜ್ಯಭಾರದಲ್ಲೂ “ಅಷ್ಟಕಿಷ್ಟಕೆ ಮಣಿಯದ” ಋಷಿ ನಿರ್ಮಿತ ಸೇತುವೆ ಮುರಿದರೂ ವೈಕುಂಠಕ್ಕೆ ಕಾಲುದಾರಿಯನ್ನು ಬಲ್ಲ “ಶೇಕಡಾ ಏಳರ ಖಳ”ರು ಇಂಥವರು.

‘ಭೂತ’ದಲ್ಲಿ ‘ಹದ್ದು’ವಿನಲ್ಲಿ ಬೇರೊಂದು ಧಾಟಿಯಿದೆ. ‘ಭೂತ’ ಮನುಷ್ಯನ ಮನಸ್ಸು, ಸಂಪ್ರದಾಯ, ಕಾಲ – ಈ ಎಲ್ಲವನ್ನೂ ಕುರಿತಾದ ಕವನ, ಒಂದು ಜೀವದ ಹದ್ದಿನೊಳಗೆ ನೂರಾರಕ್ಕೆ ಹದ್ದಿರುವ, ತನ್ನ ಹದ್ದನ್ನು ಮೀರಲಾರದ ಕ್ರಮಬದ್ಧ ಪರಿಧಿ ಪ್ರಪಂಚದ ಬಗ್ಗೆ ಚಿಂತನೆಯ ‘ಹದ್ದು;’ವಿನ ವಸ್ತು.