ಡಾ| ಯು. ಆರ್. ಅನಂತಮೂರ್ತಿಯವರು ಮೊಗೇರಿ ಗೋಪಾಲಕೃಷ್ಣ ಅಡಿಗರ ಕಾವ್ಯವನ್ನು ಚೆನ್ನಾಗಿ ಅರ್ಥಮಾಡಿಕೊಂಡವರು, ಮಾತ್ರವಲ್ಲ, ಅವರ ಕಾವ್ಯವನ್ನು ಕನ್ನಡ ಜನತೆಗೆ ಅರ್ಥಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದವರು. ಕೇವಲ ಅಡಿಗರ ಕಾವ್ಯಗಳನ್ನಷ್ಟೆ ಅಲ್ಲ ಅವರ ಮನೋಭಾವಗಳನ್ನೂ ಅವರ ವ್ಯಕ್ತಿತ್ವವನ್ನೂ ಹತ್ತಿರದಿಂದ ನೋಡಿ ಬಲ್ಲವರು. ಡಾ| ಅನಂತಮೂರ್ತಿಯವರು ಭಿನ್ನಭಿನ್ನ ಸಂದರ್ಭಗಳಲ್ಲಿ ಬರೆದು ಸಾದರಪಡಿಸಿದ ಅಡಿಗರ ಕಾವ್ಯವಿಮರ್ಶೆಯ ಬಿಡಿಬಿಡಿ ಲೇಖನಗಳ ಪುಂಜವೊಂದನ್ನು ಒಂದಾಗಿ ಹೆಣೆದು ಪ್ರಕಟನೆಗೆ ಅಣಿಗೊಳಿಸಿದವರು ಪ್ರೊ| ಮುರಳೀಧರ ಉಪಾಧ್ಯರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರೂ, ಭಾರತೀಯ ಜ್ಞಾನಪೀಠ ಪ್ರಶಸ್ತಿ ವಿಜೇತರೂ ಆದ ಡಾ| ಯು. ಆರ್. ಅನಂತ ಮೂರ್ತಿಯವರ ಈ ಕಿರು ಹೊತ್ತಗೆಯನ್ನು ನಮ್ಮ ಕೇಂದ್ರದ ಪ್ರಕಟಣೆಗಳಲ್ಲಿ ಒಂದಾಗಿ ಹೊರತರಲು ನಾವು ಬಯಸಿದಾಗ ಪ್ರೀತಿಯಿಂದ ಒಪ್ಪಿಗೆ ನೀಡಿ ಹರಸಿದವರು ಡಾ| ಯು. ಆರ್. ಅನಂತಮೂರ್ತಿಯವರು. ಅವರಿಗೆ ನಾವು ಕೃತಜ್ಞರು. ಸಂಪಾದಿಸಿದ ಪ್ರೊ| ಮುರಳೀಧರ ಉಪಾಧ್ಯರಿಗೂ, ದಿವಂಗತ ಅಡಿಗರ ನಾಲ್ಕು ಕವನಗಳನ್ನು ಈ ಪುಸ್ತಕದಲ್ಲಿ ಪ್ರಕಟಿಸಲು ಅನುಮತಿ ನೀಡಿದ ಶ್ರೀಮತಿ ಲಲಿತಾ ಅಡಿಗರಿಗೂ, ಅಂದವಾಗಿ ಮುದ್ರಿಸಿದ ಮಣಿಪಾಲ ಪವರ್ ಪ್ರೆಸ್‌ನವರಿಗೂ ನಾವು ಕೃತಜ್ಞತೆಯನ್ನು ಅರ್ಪಿಸುವೆವು.

ಹೆರಂಜೆ ಕೃಷ್ಣ ಭಟ್ಟ
ನಿರ್ದೇಶಕ
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ
ಉಡುಪಿ – ೫೭೬ ೧೦೨
ದಿನಾಂಕ: ೧ – ೧೧ – ೧೯೯೬