“While objective thought is indifferent to the thinking subject and his ixistence, the subjective thinker is as an existing individual essecntially interested in his own tninking, existing as he does in his thought. His thinking has therefore a different type of reflection, namely the reflection of inwardness, of possession, by virtue of which it belongs of the thinking subject and to no one else. . . . The difference between subejective and objective thinking must express itself also in the form of communication suitable to each. That is to say,  the subjective thinker will from the beginning have his attention called to the requiremnet that this form should embody artistically as much of reflrction as he himself has when existing in his thought. ”

– Soren Kierkegaard: “Indirect communication” The Modern Tradition (ed’Ellmann & Feidelson)

ಕ್ರೌಂಚವಧದುದ್ವೇಗದಳಲ ಬತ್ತಲೆ ಸುತ್ತ ರಾಮಾಯಣಶ್ಲೋಕ ರೇಷ್ಮೆ ತೊಗಲು
“ಹದ್ದು” – ಗೋಪಾಲಕೃಷ್ಣ ಅಡಿಗ

ತಮ್ಮ ವ್ಯಕ್ತಿತ್ವವನ್ನು ಸಂಸ್ಕೃತಿಗೆ ಅಳ್ಳಕಗೊಳಿಸಿಕೊಳ್ಳದ ಬರಹಗಾರರು ಮಾತ್ರ ಕನ್ನಡದಲ್ಲಿ ಇನ್ನೂ ಜೀವಂತವಾಗಿ ಉಳಿದಿದ್ದಾರೆ ಎಂಬುದು ಗಮನಿಸಬೇಕಾದ ವಿಷಯ. ನಾನು ಕಾರಂತರನ್ನು ನಮ್ಮ ಯುಗದ ಅತ್ಯಂತ ಮಹತ್ವದ ವ್ಯಕ್ತಿಯೆಂದು ತಿಳಿದಿರಲು ಕಾರಣ ಅರವತ್ತು ದಾಟಿಯೂ ಇವರು ನಮ್ಮ ಸಂಸ್ಕೃತಿಯ ನಿರ್ಜೀವ ಧ್ವನಿವರ್ಧಕರಾಗದೆ ತಮ್ಮ ವೈಯಕ್ತಿಕತೆಯನ್ನು ಈಗಲೂ ಚುರುಕಾಗಿ ಆವರಣದ ಜೊತೆ ತೊಡಗಿಸಬಲ್ಲರು ಎಂಬುದು. ಅರವಿಂದ – ಸಾಯಿಬಾಬ – ಮಹೇಶಯೋಗಿಗಳ ಪೂರ್ಣ ದೃಷ್ಟಿಕಲ್ಯಾಣದೃಷ್ಟಿಗಳಲ್ಲಿ ಪತ್ತೆ ಇಲ್ಲದ ಹಾಗೆ ತನ್ನತನವನ್ನು ಕಳೆದುಕೊಳ್ಳದಿರಲೆಂದೇ ಇವರು ವೈಜ್ಞಾನಿಕ ದೃಷ್ಟಿಗೆ ಆತುಕೊಂಡಿದ್ದಾರೆ ಎನ್ನಿಸುತ್ತದೆ. ನಮ್ಮ ಸಂಸ್ಕೃತಿಯ ಭೋಳೆತನದ ಪ್ರವೃತ್ತಿಗಳಿಂದ ಉದ್ದೇಶಪೂರ್ವಕವಾಗಿ ಹಠದಲ್ಲಿ ಹೊರಗೆ ನಿಂತ ಇವರ ದೃಷ್ಟಿ ಮನುಷ್ಯಸ್ವಭಾವದಲ್ಲಿ ತರ್ಕಾತೀತವಾದ್ದನ್ನು, ಆಧ್ಯಾತ್ಮಿಕ ಒಳನೋಟ ಮಾತ್ರ ಗುರುತಿಸಬಲ್ಲ ಗಹನ ಆಳಗಳನ್ನು ಬೆದಕಲು ಅಂಜುತ್ತದೆಯೇನೊ ಎಂದು ಒಮ್ಮೆಮ್ಮೆ ಅನುಮಾನವಾಗಬಹುದು. ಇವರ ಉದ್ದೇಶಬದ್ಧ ಕೃತಿಗಳಲ್ಲಿ ಕುವೆಂಪು ಕಾದಂಬರಿಗಳಲ್ಲಿ ಚೆಲ್ಲಿಕೊಂಡಿರುವ ಚೈತನ್ಯವಾಗಲಿ ಸಮೃದ್ಧಿಯಾಗಲಿ ಕಾಣಿಸುವುದಿಲ್ಲ ; ಗುರಿಯತ್ತ ಧಾವಿಸುವ ಇವರ ಕಾದಂಬರಿಯ ವಿವರಗಳ ಲೋಕದಲ್ಲಿ, ಕುವೆಂಪು ಕಾದಂಬರಿಗಳಲ್ಲಿ ಕಾಣಿಸುವ ಮೈ ಮರೆತು ನಿಲ್ಲುವ ಭಾಗಗಳೇ ಇಲ್ಲ. ಕುವೆಂಪು ಕಾರಂತರಿಗಿಂತ ಉತ್ತಮ ‘ಕಲಾವಿದರು’; ಆದರೆ ಕಾರಂತರು ಹೆಚ್ಚು ಸೀರಿಯಸ್‌ ದೃಷ್ಟಿಯುಳ್ಳ ಬರಹಗಾರರು. ಸ್ಪಷ್ಟ ದೃಷ್ಟಿಕೋನವಿಲ್ಲದ ತನ್ಮಯಶೀಲ ಕುವೆಂಪುರವರ ಪ್ರತಿಭೆ ಅಸ್ತವ್ಯಸ್ತ ಪ್ರಪಂಚವನ್ನು ಸೃಷ್ಟಿಸುತ್ತದೆ; ಆದರೆ ವೈಯಕ್ತಿಕ ದೃಷ್ಟಿಕೋನದ ಪರಿಮಿತ ದರ್ಶನಕ್ಕೆ ಬದ್ಧರಾದ ಕಾರಂತರು ಖಚಿತವಾದ ಸಾಮಾಜಿಕ ಪ್ರಪಂಚವನ್ನು ಸೃಷ್ಟಿಸುತ್ತಾರೆ. ಕುವೆಂಪುರವರ ಅಸಾಧಾರಣವಾದ ಕಲಾವಿದ ಚೈತನ್ಯ ‘ದರ್ಶನ’ಕ್ಕೆ ಕಟ್ಟುಬಿದ್ದೂ ಯಾಕೆ ನಿಜವಾಗಿ ದಾರ್ಶನಿಕವಾಗಲಾರದೆ ಹೋಗುತ್ತದೆ; ಲೌಕಿಕ ಅನುಭವದ ವಿವರಗಳ ಲೋಕವನ್ನು ಕ್ಷುದ್ರವೆಂದು ಕಂಡು, ಅಲೌಕಿಕ ಅನುಭವವನ್ನು ಲೌಕಿಕದ ಜೊತೆ ಅರ್ಥಪೂರ್ಣವಾಗಿ ತೊಡಗಿಸಲಾರದೆ ಸುಲಭವಾಗಿ ದ್ರವಿಸುವ ಅತಿಭಾವುಕತೆಯಾಗಿ ಬಿಡುತ್ತದೆ ಎಂಬುದನ್ನು ಈ ಹಿಂದೆಯೇ ನಾನು ಚರ್ಚಿಸಿದ್ದೇನೆ. ಹಾಗೆಯೇ ಕಾರಂತರ ಅಥೆಂಟಿಕ್‌ ಪ್ರಪಂಚದ ಕೊರತೆಗಳನ್ನು ಇನ್ನೊಂದು ಲೇಖನದಲ್ಲಿ (“ಕಾರಂತರ ಅಥೆಂಟಿಕ್‌ ಪ್ರಪಂಚ”) ಎತ್ತಿದ್ದೇನೆ. ಈ ಇಬ್ಬರು ಲೇಖಕರನ್ನೂ ಈ ದೃಷ್ಟಿಯಿಂದ ನೋಡಿದಾಗ ನಮ್ಮ ಸಾಹಿತ್ಯ ಪರಂಪರೆಯಲ್ಲಿ ಏಳುವ ಸಂಸ್ಕೃತಿ – ಲೇಖಕ ಸಂಬಂಧದ ಕೆಲವು ಮುಖ್ಯ ಸಮಸ್ಯೆಗಳು ಸ್ಪಷ್ಟವಾದಾವೆಂದು ನಾನು ನಂಬಿದ್ದೇನೆ.

ಕಾರಂತರನ್ನು ಅವರ ವೈಯಕ್ತಿಕ ದೃಷ್ಟಿಕೋನ ನಮ್ಮ ಸಂಸ್ಕೃತಿಯ ಭೋಳೆತನದಿಂದ ಹೇಗೆ ಕಾಪಾಡಿದೆಯೊ, ಹಾಗೆಯೆ ಅಡಿಗರನ್ನೂ ಸಹ ಅವರ ವೈಯಕ್ತಿಕತೆಯ ಘಾಟು ಜೀವಂತವಾಗಿ ಉಳಿಸಿದೆ. ಆದರೆ ಇಬ್ಬರ ನಡುವೆ ಇರುವ ಮುಖ್ಯ ವ್ಯತ್ಯಾಸವೆಂದರೆ ಕಾರಂತರಿಗಿಂತ ಹೆಚ್ಚಾಗಿ ಅಡಿಗರು ನಮ್ಮ ಸಂಸ್ಕೃತಿಯ ಮೂಲಭೂತ ಪ್ರವೃತ್ತಿಗಳಿಂದ ಆಕರ್ಷಿತರಾದವರು ಎಂಬುದು. ಹೀಗೆ ಎಲ್ಲ ಸಂವೇದನೆಗಳಿಗೂ ಮುಕ್ತವಾಗಿ ತೆರೆದುಕೊಂಡ ವ್ಯಕ್ತಿತ್ವ ಇವರದ್ದಾದ್ದರಿಂದಲೇ ಅಡಿಗರಲ್ಲಿ ಕೊನೆಗೂ ಬೆರೆಯದೆ ಉಳಿಯುವ ತನ್ನತನ ಅರ್ಥಪೂರ್ಣವಾಗುತ್ತದೆ. ಸಂಸ್ಕೃತಿಯ ಅಬ್ಬರದಲ್ಲಿ ವ್ಯಕ್ತಿಯ ಸಣ್ಣಧ್ವನಿ ಎಂದೂ ಅಡಗುವುದಿಲ್ಲ. ಸುಲಭವಾಗಿ ನಂಬುವ, ಸುಲಭವಾಗಿ ಆಕರ್ಷಿತವಾಗುವ ಬಹುಬೇಗ ಕರಗಬಲ್ಲ, ಭಾವನೆಯ ಉಬ್ಬರಕ್ಕಾಗಿ ಹಂಬಲಿಸುವ ಪ್ರವೃತ್ತಿಗಳು ಅಡಿಗರ ಕಾವ್ಯ ವ್ಯಕ್ತಿತ್ವಕ್ಕಿದೆ. ಬೇಂದ್ರೆಯಂತೆಯೇ ಸೃಷ್ಟಿಯಲ್ಲಿ ಬಿರುಸಿನಿಂದ ತನ್ಮಯವಾಗಬಲ್ಲ ಶಕ್ತಿ ಅಡಿಗರಿಗೆ ಇದೆ: ಇಬ್ಬರ ಕಾವ್ಯದ ಅಂತರಂಗದಲ್ಲೂ ಅಡಗಿರುವ ಕಾಮಪ್ರಕೃತಿಯಲ್ಲಿ ಇದು ವ್ಯಕ್ತವಾಗುತ್ತದೆ. ಆದರೆ ಅಡಿಗರು ಮಾತ್ರ ಯಾವತ್ತೂ ಸಂಪೂರ್ನ ತನ್ಮಯರಾಗುವುದೇ ಇಲ್ಲ; ಮುಜುಗರದಲ್ಲಿ ಹೊರಗುಳಿದು ಬಿಡುತ್ತಾರೆ. ಅನುಭವಗಳ ಆಘಾತ್ಕ್ಕೆ ಮೈಯೊಡ್ಡಿ ನಿಂತಾಗಲೂ ತನ್ನ ವೈಯಕ್ತಿಕ ವಾಸ್ತವತೆಯನ್ನು ಮರೆಯದೆ ಇರುವುದರಿಂದ ಕೀರ್ತನೆಯ ಧಾಟಿಯಲ್ಲಿ ಅನುಭವವನ್ನು ದ್ರವಿಸಗೊಡದಂತೆ ಪರೀಕ್ಷಿಸುವ ಕಣ್ಣು ಕೃತಿಯಲ್ಲಿ ತೆರೆದುಕೊಂಡೇ ಇರುತ್ತದೆ.

ಅಡಿಗರ ಕಾವ್ಯದ ವ್ಯಗ್ರ ತೀವ್ರತೆ, ಇಬ್ಬಂದಿತನದ ಕಟುವಾದ ಧಾಟಿ ಹೇಗೆ ಕುವೆಂಪು ಬರವಣಿಗೆಯ ರೀತಿಗೆ ಅಸಾಧ್ಯವಾದದ್ದೊ, ಹಾಗೆಯೇ ಅಡಿಗರಿಗೆ ಕುವೆಂಪು ತಮ್ಮ ಕಾದಂಬರಿಗಳಲ್ಲಿ ಕೆಲವೆಡೆಗಳಲ್ಲಿ ಸಾಧಿಸುವ ನಿರ್ಲಿಪ್ತ ಸಮೃದ್ಧಿ, ನಿರುದ್ದೇಶವಾದ ಜೀವಂತಿಕೆ, ಸೊಗಸು ಅಸಾಧ್ಯವಾದದ್ದು. ಅಡಿಗರ ಕಾವ್ಯದ ಪ್ರಪಂಚದ ಆಸಕ್ತಿಗಳು ಹಿಂದಿನ ಪೀಳಿಗೆಯ ಲೇಖಕರಲ್ಲಿ ಕಾಣುವುದಕ್ಕಿಂತ ಕಡಿಮೆ; ಆದರೆ ಈ ಕಾರಣದಿಂದಲೇ ಅಡಿಗರು ನವೋದಯ ಕಾಲದ ಲೇಖಕರಿಗಿಂತ ಹೆಚ್ಚಿನ ತೀವ್ರತೆಯನ್ನೂ ಸಮಗ್ರತೆಯನ್ನೂ ಸಾಧಿಸಿಕೊಳ್ಳುವುದು ಸಾಧ್ಯವಾಯಿತು ಎಂದೂ ಅನ್ನಿಸುತ್ತದೆ.

ನಮ್ಮ ಸಂಸ್ಕೃತಿಯ ಮೂಲಭೂತ ಪ್ರವೃತ್ತಿಗಳ ಬಗ್ಗೆ ಅಡಿಗರಿಗಿರುವ ಆಕರ್ಷಣೆ – ವಿಕರ್ಷಣೆಯ ದ್ವಂದ್ವ ಅವರ ಕಾವ್ಯದ ಮುಖ್ಯ ಆಸಕ್ತಿಗಳಲ್ಲಿ ಒಂದು ಎನ್ನಬಹುದು. ಆಚಾರದಲ್ಲಿರುವ ಸಂಸ್ಕೃತಿಗೆ ಇವರ ಕಾವ್ಯ ಮೊದಲಿನಿಂದಲೂ ವಿರೋಧಿಯಾಗಿರುವುದು ಈ ಜನಾಂಗಕ್ಕೆ ಅಡಿಗರು ಆಕರ್ಷಕ ವ್ಯಕ್ತಿಯಾಗಿರುವುದಕ್ಕೆ ಮುಖ್ಯ ಕಾರಣ. ನಮ್ಮ ಸಂಸ್ಕೃತಿಯ ಭೋಳೆತನದ ಬಗ್ಗೆ ಇವರು ವ್ಯಕ್ತಪಡಿಸುವ ಭಾವನೆ ಅತ್ಯಂತ ಕಟುವಾದದ್ದು. ಯಾಕೆಂದರೆ ಕವಿಯ ಪರೀಕ್ಷೆಗೆ ತೀಕ್ಷ್ಣವಾಗಿ ಒಳಗಾಗುವ ಇವರ ಕವನಗಳ ನಾಯಕ ಸ್ವತಃ ಭೋಳೆ ವ್ಯಕ್ತಿ. ಈ ವಿಚಾರವನ್ನು ಇನ್ನಷ್ಟು ದೀರ್ಘವಾಗಿ ಚರ್ಚಿಸುವುದು ಅವಶ್ಯ. ಆದರೆ ಅದಕ್ಕಿಂತ ಮುಂಚೆ ಕೆಲವೊಂದು ವೈಯಕ್ತಿಕ ಮಾತುಗಳನ್ನು ಹೇಳಲು ನಿಮ್ಮ ಅನುಮತಿ ಬೇಡುತ್ತೇನೆ.

ಆತ್ಮನಿಷ್ಠೆಯ ಅಗತ್ಯವನ್ನು, ಉದ್ದೇಶಪೂರ್ವಕವಾಗಿಯೊ ಅನುದ್ದಿಷ್ಟವಾಗಿಯೊ ಸಾಹಿತ್ಯರಚನೆಯಲ್ಲಿ ಹುಟ್ಟಿಬರುವ ಮೋಸವನ್ನು ಗುರುತಿಸುವ ಕ್ರಮವನ್ನು ನಮ್ಮ ಜನಾಂಗಿಕ್ಕೆ ಕಲಿಸಿಕೊಟ್ಟವರು ಅಡಿಗರು; ಎಲ್ಲದಕ್ಕೂ ತಲೆದೂಗುವ ಸುಲಭ ತಾದಾತ್ಮ್ಯತೆಯ ಭೋಳೆ, ಅಥವಾ ವಂಛಕ ಭಂಗಿಗಳಿಂದ ಯುವಕರನ್ನು ಎಚ್ಚರಿಸಿ ಏನನ್ನಾದರೂ ನೆಟ್ಟು ನೋಡಬೇಕೆನ್ನುವ ಪರೀಕ್ಷಕ ದೃಷ್ಟಿಯನ್ನು ಸಾಹಿತ್ಯ ವಿಮರ್ಶೆಯಲ್ಲಿ ಕಲ್ಪಿಸಿಕೊಟ್ಟವರು ಅಡಿಗರು. ನನ್ನಂಥವರಿಗೆ ವಯಸ್ಸಿನಲ್ಲಿ ಹಿರಿಯರಾದ ಇವರ ಬಗೆಗಿದ್ದ ಆಕರ್ಷಣೆಗೆ ಮುಖ್ಯಕಾರಣ: ನಮ್ಮ ವ್ಯಕ್ತಿತ್ವದ ಪ್ರತ್ಯೇಕತೆಯನ್ನು ಇವರು ಗೌರವಿಸುತ್ತಾರೆ ಎಂಬುದು; ಇವರನ್ನು ಟೀಕಿಸಿಯೂ ಸ್ನೇಹದಿಂದುಳಿಯುವುದು ಸಾಧ್ಯ ಎಂಬುದು; ತಮ್ಮ ಕಾವ್ಯದ ಬಗ್ಗೆಯೇ ಸದಾ ಬೋರ್ ಹೊಡೆಯುತ್ತಿರದೆ ನಮ್ಮೆಲ್ಲರಿಗೂ ಮುಖ್ಯವಾದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ವಿಷಯಗಳಲ್ಲೆಲ್ಲ ಇವರು ಆಸಕ್ತಿ ತೋರಿಸಿ ಮಾತನಾಡುತ್ತಾರೆ ಎಂಬುದು. ಇವರ ಜೊತೆ ಕೊಡುಕೊಳ್ಳುವಿಕೆ ಸಮಾನರ ನಡುವಿನ ಕೊಡುಕೊಳ್ಳುವಿಕೆಯಂತೆ ಪ್ರಬುದ್ಧವಾಗಿರುತ್ತದೆಯೇ ವಿನಾ ನಮ್ಮ ಸಂಸ್ಕೃತಿಗೆ ಸಹಜವಾದ ಗುರು – ಶಿಷ್ಯ ವೃತ್ತಿಯ ಅಪ್ರಬುದ್ಧ ಪೂಜೆಯಾಗಿ ಪರಿಣಮಿಸುವುದಿಲ್ಲ. ಇದರಿಂದಾಗಿ ನಾವು ನಮ್ಮ ಸಂಸ್ಕೃತಿಯ ಅಪಾಯಕಾರಿ ಪ್ರವೃತ್ತಿಗಳ ವಿರುದ್ಧ ನಿಲ್ಲುವುದು ಸಾಧ್ಯವಾಯಿತು ಎಂಬುದು ಈ ಲೇಖನದ ಸಂದರ್ಭದಲ್ಲಿ ಹೇಳುವುದು ಅವಶ್ಯವೆಂದು ಬಗೆಯ ಈ ಮಾತುಗಳನ್ನು ಎತ್ತಿದ್ದೇನೆ – ಅಷ್ಟೆ.

ನಮ್ಮ ಸಂಸ್ಕೃತಿಯ ಮೂಲತತ್ವಗಳನ್ನು ಅಡಿಗರು ಎತ್ತಿಹಿಡಿಯುವಾಗಲೂ ಆಚಾರದಲ್ಲಿರುವ ಸಂಸ್ಕೃತಿ ಸಂದರ್ಭ ಇವರ ಗಮನದಲ್ಲಿದ್ದೇ ಇರುತ್ತದೆ. ಆದ್ದರಿಂದ ಕವನದ ಧೋರಣೆಯಲ್ಲಿ ಹಳೆಯದನ್ನು ಹೊಗಳುವ, ಅಥವಾ ಕಳೆದುದಕ್ಕಾಗಿ ಹಳಹಳಿಸುವ ಕೀರ್ತನಧಾಟಿಗೆ ಬದಲಾಗಿ, ಇರುವುದರ ಅಪಾಯಕಾರಿ ಸ್ವರೂಪದ ಬಗೆಗೇ ಹೆಚ್ಚು ಕಾಳಜಿ ವ್ಯಕ್ತವಾಗುತ್ತದೆ. ತತ್ವ ಮತ್ತು ಮಾತಿನ ಮಟ್ಟದಲ್ಲೇ ಉಳಿದು ಜೀವನಾನುಭವದಲ್ಲಿ ವ್ಯಕ್ತವಾಗದ, ವ್ಯಕ್ತವಾಗಬೇಕೆಂಬ ಅಪೇಕ್ಷೆಯಿಲ್ಲದ ನಮ್ಮ ಸಂಸ್ಕೃತಿಯ ಆಡಂಬರವನ್ನು ಹೇಗೆ ಅವರು ತೀವ್ರವಾಗಿ ಟೀಕಿಸುತ್ತಾರೆಂಬ ಬಗ್ಗೆ ನಾನು ಈ ಹಿಂದೆಯೇ ಬರೆದಿದ್ದೇನೆ.

[1] ಅಡಿಗರ ಕಾವ್ಯವ್ಯಕ್ತಿತ್ವ ಅಸ್ತಿತ್ವವಾದಿಯಾದ ಕರ್ಕೆಗಾರ್ಡನ ಉತ್ಕಟ ಒಳತೋಟಯನ್ನು ನೆನಪಿಗೆ ತರುವಂತಹುದು. ನಮ್ಮ ಸಂಸ್ಕೃತಿಯ ಭೋಳೆತನಕ್ಕೆ – “ವಾಗ್ರೂಪದಲ್ಲಿ ಹಾಲಿನ ಹಳ್ಳ” ಹರಿಸುವ ಕನಸುಗಾರಿಕೆಗೆ – ಒಂದು ರೂಪಕವಾಗಿ ಇವರ ನೆಹರೂ ನಿಲ್ಲುತ್ತಾನೆ. ಇದಕ್ಕೆ ತದ್ವಿರುದ್ಧವಾದ ರೂಪಕವೆಂದರೆ “ಶ್ರೀರಾಮನವಮಿಯ ದಿವಸ’ದ ಶ್ರೀರಾಮ: “ಗರಿಷ್ಠ ತೇಜದ ಮೊನೆ ಕೆಳಪಟ್ಟು ಮಣ್ಣುಟ್ಟು ನಿಂತ ಘಟನೆ,” ಇವರ ಅವತಾರ: ವಾಲ್ಮೀಕಿಯ “ಹುತ್ತಗಟ್ಟಿದ್ದ ಕೈ ಕಡೆದ ನೋಟ”  ಇವನು.

ಆದರೆ ನನ್ನ ದೃಷ್ಟಿಯಲ್ಲಿ ಮಹತ್ವದ ವಿಷಯವೆಂದರೆ ನಮ್ಮ ಸಂಸ್ಕೃತಿಯಲ್ಲಿನ ಆದರ್ಶವಾದಿತನಕ್ಕೆ ಅಡಿಗರು ತೋರಿಸುವ ವಿರೋಧ ಇಬ್ಬಂದಿತನದಿಂದ ಕೂಡಿದ್ದು ಎನ್ನುವುದು. ಇವರ ನೆಹರೂ ಕೂಡ ಕವಿಗೆ ಹತ್ತಿರದವರಾದ ಕಟ್ಟುವೆವು ನಾವು ಕವನಗಳ ನಾಯಕನಿಗೆ, ‘ಗೊಂದಪುರ’ದ ಮೋಸಹೋದ ನಾಯಕನಿಗೆ ಸಂಬಂಧಿ. ಆದ್ದರಿಂದ ಇವರ ಕವನದಲ್ಲಿ ಆದರ್ಶವಾದಿತ್ವಕ್ಕೂ, ಕ್ರಾಂತಿಕಾರತೆಗೂ, ನಮ್ಮ ಸಂಸ್ಕೃತಿಯ ಭೋಳೆತನಕ್ಕೂ, ಅನುಭಾವಕ್ಕೂ ಸ್ವಂತ ಭಾವನೆಗಳ ವಿಕಾಸಕ್ಕೂ ಸಂಕೀರ್ಣವಾದ ಸಂಬಂಧವೇರ್ಪಡುತ್ತದೆ. ಅಡಿಗರಿಗೂ ಸಂಸ್ಕೃತಿಗೂ ಇರುವ ಸಂಬಂಧ ಒಂದಕ್ಕೊಂದು ಹೆಣೆದುಕೊಂಡ ಟೆನ್ಯನ್ನಿನದು ಎಂಬುದನ್ನು ನಾವು ಯಾವತ್ತೂ ಮರೆಯದೆ ಅವರ ಕವನಗಳನ್ನು ಓದಬೇಕು, ಏಕೆಂದರೆ ಈ ಬಗೆಯ ಸಂಬಂಧವಿಲ್ಲದಿದ್ದಲ್ಲಿ ಅವರ ವ್ಯಂಗ್ಯಕ್ಕೆ,  ಕಟುತ್ವಕ್ಕೆ ಬೆಲೆ ಬರುತ್ತಿರಲಿಲ್ಲ, ಹೊರಗಿನ ವಾಸ್ತವತೆಯನ್ನು ಇವರು ಟೀಕಿಸುತ್ತಿದ್ದಾರೊ, ತನ್ನನ್ನೆ ತಾನು ಟೀಕಿಸಿಕೊಳ್ಳುತ್ತಿದ್ದಾರೋ ಎಂಬುದನ್ನು ಸ್ಪಷ್ಟವಾಗಿ ವಿಂಗಡಿಸಲಾರದಷ್ಟು (‘ನೆಹರೂ ನಿವೃತ್ತರಾಗುವುದಿಲ್ಲ’ ಎನ್ನುವ ಕವನದಲ್ಲಿ ಕೂಡ) ಇವರ ಕಾವ್ಯ ಸಂಕೀರ್ಣತೆಯನ್ನು ಪಡೆದಿದೆ.

ಮನುಷ್ಯ ತನ್ನ ವೈಯಕ್ತಿಕತೆಯ ಮೇರೆಗಳನ್ನು ಮೀರುವುದು ಮುಖ್ಯವಾಗಿ ರಾಜಕೀಯ ಕ್ರಾಂತಿಯಲ್ಲಿ, ಆದರ್ಶವಾದದಲ್ಲಿ ಮತ್ತು ಧಾರ್ಮಿಕ ಅನುಭಾವದಲ್ಲಿ. ಕ್ರಾಂತಿಯ ಸಂದರ್ಭದಲ್ಲಿ ಪ್ರತ್ಯೇಕ ವ್ಯಕ್ತಿಗಳ ಗುಂಪು ಒಂದು ಉದ್ದೇಶದಿಂದ ಪ್ರೇರಿತವಾಗುವುದರಿಂದ ತಮ್ಮ ತಮ್ಮ ಪ್ರತ್ಯೇಕತೆಗಳನ್ನು ಮೀರಿ ಒಂದು ಕುಟುಂಬ ಪ್ರಜ್ಞೆಯಂತೆ ಕೆಲಸಮಾಡುತ್ತದೆ. ಹೀಗೆ ರಾಜಕೀಯ ಕ್ರಾಂತಿಯಲ್ಲಿ ವ್ಯಕ್ತಿ ತನ್ನ ವೈಯಕ್ತಿಕ ಮೇರೆಗಳನ್ನು ಮೀರಿ ನಿಲ್ಲುವಂತೆಯೇ, ಸಮಾಜ ಕೂಡ ತನ್ನ ಸದ್ಯದ ವಾಸ್ತವತೆಯನ್ನು ಮೀರಲು ಪ್ರಯತ್ನಿಸುತ್ತದೆ. ಈ ಮೀರುವ ಪ್ರಯತ್ನ ರಾಜಕೀಯ ಕ್ರಾಂತಿಯಲ್ಲಿ ಮಾತ್ರವಲ್ಲದೆ ಆದರ್ಶವಾದದಲ್ಲಿಯೂ ಇದೆ, ಧಾರ್ಮಿಕ ಅನುಭಾವದಲ್ಲಿಯೂ ಇದೆ. ವೈಯಕ್ತಿಕ ಸಂಕೋಚಗಳನ್ನು ಕಳೆದುಕೊಳ್ಳಬೇಕೆಂಬ ವಾಂಛೆ (ರಾಜಕೀಯ ಕ್ರಾಂತಿಯಾಗಿ, ಅನುಭಾವವಾಗಿ, ಆದರ್ಶ ವಾದವಾಗಿ) ಅಡಿಗರ ಕಾವ್ಯದಲ್ಲಿ ಮೊದಲಿನಿಂದಲೂ ಹೇಗೆ ಕೆಲಸ ಮಾಡುತ್ತದೆ, ಯಾವ ಕರ್ಷಣದಲ್ಲಿ ಅವರ ವೈಯಕ್ತಿಕತೆಯನ್ನು ತೊಡಗಿಸುತ್ತದೆ ಎಂಬುದು ಮುಖ್ಯವಾದ ಒಂದು ಒಳನೋಟವನ್ನು ಅವರ ಕಾವ್ಯಕ್ರಿಯೆಯ ಬಗ್ಗೆ ಒದಗಿಸುತ್ತದೆ.

ಮೇಲ್ನೋಟಕ್ಕೆ ಕಟ್ಟುವೆವು ನಾವು ಸಂಕಲನದಲ್ಲಿ ಅಡಿಗರ ಕ್ರಾಂತಿಕಾರಕ ಮನಸ್ಸು ಸರಳ ಜಾತಿಯದು. ಆದರೆ ಈ ಕ್ರಾಂತಿಕಾರಕ ನಿಲುವು ಕೂಡ ತನ್ನ ಹೊರಗಿರುವ ದೊಡ್ಡದೊಂಡು ಸತ್ಯಕ್ಕಾಗಿ ತನ್ನನ್ನು ಸಮರ್ಪಿಸಿಕೊಳ್ಳುವ ರೀತಿಯದಲ್ಲ; ಇದು ತನ್ನ ಪ್ರತ್ಯೇಕತೆಯನ್ನು ಸ್ಥಾಪಿಸಿಕೊಳ್ಳುವ ಬಂಡಾಯದ ರೀತಿಯದು. ಅಂದರೆ ಇದು ಮುಖ್ಯವಾಗಿ “ನನ್ನ ಕ್ರಾಂತಿಕಾರತೆಯನ್ನು ನೋಡು” ಎನ್ನುವ ನಾರ್ಸಿಸಸ್‌ ಭಂಗಿ. ‘ಸಮಾಜ ಭೈರವ’ ಪದ್ಯದಲ್ಲಿ ತನ್ನ ವೈಯಕ್ತಿಕತೆಯನ್ನು ಉಳಿಸಿಕೊಳ್ಳುವ ಛಲ ಕಾಣಿಸಿಕೊಳ್ಳುತ್ತದೆ:

ಹುಲ್ಲಿಗಿಲ್ಲ, ಕಳ್ಳಿಗಿಲ್ಲ,
ಹೂವಿಗೇಕೆ ಸೌಸವ?
ಎಂದು ಹಿಸುಕಬೇಡದವನು
ಅದನು ಅದರ ಲಸನಕೆ
ತನ್ನತನದ ತನನಕೆ
ಬಿಟ್ಟುಬಿಡು, ಬಿಟ್ಟುಬಿಡು,
ಸಮಾಜ ಭೈರವ!

ತನ್ನ ಕ್ರಾಂತಿಕಾರಕತೆ ಪ್ರಪಂಚದ ನೈಜತೆಯ ಅರಿವಿಲ್ಲದೆ ತಾಳಿದ ನಿಲುವು ಹೇಗೋ, ಹಾಗೆಯೇ ತನ್ನ ನಿಜ ವ್ಯಕ್ತಿತ್ವದ ಸೀಮೆಗಳನ್ನು ಅರಿಯದೆ ಮಾಡಿದ ಉಲ್ಲಂಘನ ಪ್ರಯತ್ನ ಕೂಡ ಎನ್ನುವ ಅರಿವು ನಂತರದ ಅಡಿಗರ ಕಾವ್ಯದಲ್ಲಿ ಒಂದು ಹೊಸ ಸೂಕ್ಷ್ಮತೆಯನ್ನು ತರುತ್ತದೆ. ವೈಯಕ್ತಿಕತೆಯನ್ನು ಸ್ಥಾಪಿಸಿಕೊಳ್ಳುವ ಬಂಡಾಯ ಪ್ರವೃತ್ತಿಯನ್ನೂ ಕ್ರಾಂತಿಕಾರಕತೆಯ ತನ್ಮಯತೆಯನ್ನೂ ಸ್ವಮನಸ್ಕತೆಯಲ್ಲಿ (Self – conscious) ಇನ್ನು ಮುಂದೆ ಅವರು ಗ್ರಹಿಸುತ್ತಾ ಹೋಗುತ್ತಾರೆ. ‘ಹಿಮಗಿರಿಯ ಕಂದರ’ದಲ್ಲಿ:

ಕಾಲನಿಟ್ಟಲ್ಲಲ್ಲಿ ಕೀಲುಗುದುರೆ ಸವಾರಿ,
ಕೈಚಾಚಿದಲ್ಲೆಲ್ಲ ಸ್ವಿಚ್ಚು ಸ್ವಿಚ್ಚು;
ಎಲ್ಲಿ ತಿರುಗಿದರಲ್ಲಿ ಅಮೃತ ಸೂಸುವ ನಲ್ಲಿ
ಕಛೇರಿಗೆ ಮನೆಗೆ ಬೆಂಕಿ ಹಚ್ಚು

ಎಂದು ಮೀರುವ ಪ್ರಯತ್ನ ವಿಡಂಬನೆಗೆ ಈಡಾಗುತ್ತದೆ. ‘ಭೂಮಿಗೀತ’ ದಲ್ಲಿ “ಬರಿದೆ ನಕ್ಷತ್ರಲೋಕಕ್ಕೂ ರೈಲು ಬಿಟ್ಟೆ” ಎಂದು ಮೀರುವ ಪ್ರಯತ್ನ ಕಟುತ್ವದ ಧಾಟಿಯಲ್ಲಿ ವ್ಯಕ್ತವಾಗುತ್ತದೆ. ‘ಗೊಂದಪುರ’ದಲ್ಲಿ ತನ್ನ ಹಿಂದಿನ ಕ್ರಾಂತಿಕಾರಕತೆ ಕಾಗದಗಳನ್ನು ಗಬ್ಬಮಾಡುವ ಹುಂಬತನವಾಗಿ ಕಾಣಿಸುತ್ತದೆ.

ಆದರೆ ಇದೇ ವಿಷಯ ‘ಕೂಪಮಂಡೂಕ’ದಲ್ಲಿ ಹೇಗೆ ವ್ಯಕ್ತವಾಗಿದೆಯೆಂಬುದು ಅತ್ಯಂತ ಮಹತ್ವಪೂರ್ಣವಾದದ್ದು. ಬೇರೆ ಕವನಗಳಲ್ಲಿ ವ್ಯಂಗ್ಯಕ್ಕೀಡಾದ ಈ ‘ಮೀರುವ’ ಪ್ರವೃತ್ತಿ ಈ ಕವನದಲ್ಲಿ ಮಾತ್ರ ತನ್ನ ಸೃಷ್ಟ್ಯಾತ್ಮಕತೆ೪ಗೆ ಅವಶ್ಯವಾಗಿದ್ದ ಒಂದು ಅಂಶವಾಗಿ,  ಇದನ್ನು ಕಳೆದುಕೊಂಡ ತಾನು ಫಲಪ್ರದನಾಗಿದ್ದರೂ ಜಡ್ಡುಗಟ್ಟಿ ಹೋದವನಂತೆ ಕವಿಗೆ ಕಾಣುತ್ತದೆ. ವೈಯಕ್ತಿಕತೆಯ ಮೇರೆಗಳನ್ನು ಮೀರಿಸುವ ಈ ಪ್ರವೃತ್ತಿಗಳು – ರಾಜಕೀಯದಲ್ಲಿ ಕ್ರಾಂತಿಕಾರಕತೆಯಾಗಿ, ಆಧ್ಯಾತ್ಮದಲ್ಲಿ ಅನುಭಾವವಾಗಿ, ಕಾವ್ಯದಲ್ಲಿ ರೊಮ್ಯಾಂಟಿಸಿ ಸಮಾಗಿ ಕಾಣಿಸಿಕೊಳ್ಳುವ ಈ ಪ್ರವೃತ್ತಿಗಳು – ತನ್ನ ಜೀವನಕ್ಕೆ ಅಗತ್ಯವಾದ ಒಂದಂಶವಾಗಿ ಇವರಿಗೆ ಈ ಪದ್ಯದಲ್ಲಿ ಕಾಣಿಸುವುದು ಗಮನಾರ್ಹ;

ಗೊನೆಯಾಗಿ ಬಾಳೆ ಜೀವನ್ಮುಕ್ತ ಹಳಸುತಿದೆ
ಹಿಂಡು ಹಿಳ್ಳುಗಳಲ್ಲಿ ಪ್ರಾಣವೂರಿ.

ಅಡಿಗರ ಹಿಂದಿನ ಕ್ರಾಂತಿಕಾರಕತೆಯಂತೆಯೇ, ಅವರ ಈಗಿನ ನಿಲುವಾದ ಕನ್ಸರ್ವೇಟಿಸಂ ಕೂಡ ಬಂಡಾಯವೆ. ಅವರ ಗದ್ಯದಲ್ಲಂತೂ ವ್ಯಕ್ತವಾಗುವ ಕನ್ಸರ್ವೇಟಿವ್‌ ಧೋರಣೆ ಭಾರತದ ಈಗಿನ ಸಂಸ್ಕೃತಿಯಲ್ಲಿ ಕಾಣಿಸಿಕೊಂಡಿರುವ ಭೋಳೆ ಆದರ್ಶವಾದಿತನಕ್ಕೆ ಅವರು ತೋರಿಸುವ ವಿರೋಧ.

ಅನೇಕ ಸಾರಿ ಈ ವಿರೋಧ ಸರಳವಾದದ್ದು, ಸಂಕುಚಿತವಾದದ್ದು ಎಂದು ಅಡಿಗರ ಗದ್ಯದಲ್ಲಿ ಅನ್ನಿಸಿದರೂ ‘ಕೂಪಮಂಡೂಕ’ ಕವನದಲ್ಲಿ ಮತ್ರ ವ್ಯಕ್ತಿ ತನ್ನ ಪರಿಮಿತಿಗಳನ್ನು ಮೀರುವ ವ್ಯರ್ಥ ಪ್ರಯತ್ನ ಮಾಡದೆ ಖಾಸಗಿಯಾಗಿ ಬದುಕಬೇಕೆನ್ನುವ ಅವನ ಕನ್ಸರ್ವೇಟಿವ್‌ ನಿಲುವಾಗಲಿ, ಅನುಭಾವದಲ್ಲಿ ವ್ಯಕ್ತಿತ್ವದ ಎಲ್ಲೆಗಳನ್ನು ಮೀರಿ ನಿಲ್ಲಲು ಅಪೇಕ್ಷಿಸುವ ಅವನ ಆದರ್ಶವಾದಿತ್ವವಾಗಲಿ ಬರಿಯ ಹುರುಪಿನಲ್ಲೂ ಅಲ್ಲದೆ, ಅಥವಾ ಬರಿಯ ವ್ಯಂಗ್ಯದಲ್ಲೂ ಅಲ್ಲದೆ ವಿರುದ್ಧ ಆಕಾಂಕ್ಷೆಗಳಾಗಿ ಹೆಣೆದುಕೊಂಡು ವ್ಯಕ್ತವಾಗುವ ಕವನದ ಧಾಟಿಯ ಹದ ಆಶ್ಚರ್ಯಕರವಾದುದು.

ಅಡಿಗರ ಕಾವ್ಯದ ಹಿಂದಿರುವ ಚಿಂತನದಲ್ಲಿ ವ್ಯಕ್ತಿಪ್ರಜ್ಞೆ ಮತ್ತು ಪರಿಸರ ಒಂದನ್ನಿನ್ನೊಂದು ಗುರುತಿಸಿಕೊಳ್ಳಲು, ಒಪ್ಪಿಕೊಳ್ಳಲು ನಡೆಸುವ ಹೋರಾಟ ಇನ್ನೂ ಸಂಕೀರ್ಣವಾದುದು, ಕ್ರಾಂತಿಕಾರಕತೆಯಲ್ಲಿ ಪರಿಸರದ ವಾಸ್ತವತೆಯನ್ನು ಬದಲಾಯಿಸಿ ತನ್ನ ಕನಸಿಗೆ ಸರಿಯಾಗಿ ಪುನರ್ನಿರ್ಮಿಸಲು ವೈಯಕ್ತಿಕತೆಯನ್ನು ಹಿರಿದಾದ ಉದ್ದೇಶಕ್ಕೆ ಅರ್ಪಿಸಿಕೊಳ್ಳಬೇಕಾಗುತ್ತದೆ. ಆದರೆ ಇದು ಬರಿ ಕನಸುಗಾರಿಕೆಯಾದಾಗ, ‘ನೆಹರೂ’ ಪದ್ಯದಲ್ಲಿಯಂತೆ ಹುರುಳಿಲ್ಲದ ಬಂಡಾಯದ ಉಲ್ಬಣಗೊಂಡ ನಾರ್ಸಿಸಸ್ ವೈಯಕ್ತಿಕತೆಯಾಗುತ್ತದೆ. ಆಗ ಅಡಿಗರು ವ್ಯಕ್ತಿ ಮತ್ತು ಪ್ರಪಂಚದ ವಾಸ್ತವದ ಪ್ರಜ್ಞೆಯಿಂದ ಹುಟ್ಟಿದ ಕನ್ಸರ್ವೇಟಿವ್‌ ಧೋರಣೆಯಿಂದ ವೈಯಕ್ತಿಕತೆಯ ಆಟಾಟೋಪವನ್ನು ವಿರೋಧಿಸುತ್ತಾರೆ. ಆದರೆ ಕನ್ಸರ್ವೇ‍ಟಿವ್‌ ನಿಲುವಿಗೆ ಕೂಡ ಕ್ರಾಂತಿಕಾರತೆಗೆ ಅವಶ್ಯವಾದಂತೆಯೇ ವೈಯಕ್ತಿಕತೆಯ ತ್ಯಾಗ ಅವಶ್ಯವಾಗುತ್ತದೆ. ಅಂದರೆ ವ್ಯಕ್ತಿ ‘ಕೂಪಮಂಡೂಕ’ ಕವನದ ಕಪ್ಪೆಯ ಹಾಗೆ ತನ್ನ ಪರಿಮಿತ ಜ್ಞಾನದಲ್ಲೇ ಧನ್ಯತೆ ಕಂಡು ಬದುಕಬೇಕಾಗುತ್ತದೆ. ಆದರೆ ಇದೂ ಕೂಡ ಮೀರಿನಂತ ಮೂಹರ್ತಗಳ ನೈಜವಾದ ಸುಖದ ನೆನಪಿನಿಂದ ಬಾಧಿತವಾದ ನಿರ್ಧಾರವಾಗಿದೆ ಎಂಬುದು ಕವನದಲ್ಲಿ ಮರೆಯುವಂತಿಲ್ಲ. ಕವನದ ನಿರ್ಧಾರದ ಕೊನೆಯನ್ನು ನಾವು ಮುಟ್ಟಿದಾಗಲೂ ಈ ಸಾಲುಗಳು ಕೊಡುವ ಅನುಭವ ಕವನದ ಇನ್ನೊಂದು ಮೈಯಾಗಿ ನಮ್ಮ ಮನಸ್ಸನ್ನು ಕಾಡುತ್ತದೆ:

ಹಾಜರಾಗುತ್ತಿದ್ದೆ ಆಗ ಪ್ರತಿ ಹೊತ್ತಾರೆ,
ಹೊಯಿಗೆಗೆರೆ ತುದಿಗೆ ತುದಿಗಾಲ ದಿಗಿಲು
ನಾನಿರಲು ಕಡಲ ನೊರೆ ಬಗೆವ ಬಂಗಾರಗೆರೆ;
ತೇರೆ ತುದಿಕಳಶ ಮುನ್ನುಗ್ಗುತಿರಲು;

ಸಣ್ಣ ಪಾತಿಗೆ ಪುಟ್ಟ ಕೂವೆಗೆ ಪುಟಾಣಿ ಪಟ,
ಹುಟ್ಟಾಡಿಸುತ್ತಾ ನೀ ತಕ್ಕ ತಕ್ಕ;
ಸರಳ ರಭಸದ ತರುಣಿ ತಾಗಿಸಿ ದಡಕ್ಕೆ ಗಜಕ್ಕನೆ,
ಮೈ ಕೊಂಕಿ ಕೈಚಾಚಿ ಬಾಚಿ ನನ್ನ;

ಏಳು ಕಡಲುಗಳ ತೆರಿಯೇರಿ ಕಮರಿಗಳಲ್ಲಿ
ತೇಕಿದೆವು ಹಗಲಿಡೀ ಜೀಕಿ, ಜೀಕಿ;
ಹೊತ್ತ ಮಳೆಬಿಲ್ಲು ಮಣಿಸರಕುಗಳ ಭಾರಕ್ಕೆ
ಸುಸ್ತಾಗಿ ತರಣಿಗೆ ಕಿನಾರೆ ತಾಗಿ;

ಕತ್ತಲ  ಕಡಲ ನಡುವೆ ನಡುಗಡ್ಡೆ ಮನೆಯಲ್ಲಿ
ಇರುಳಿಡೀ ತಳಮುಳುಗು ಬತ್ತಲಾಟ;
ನಾನು ನೀನಿಡಿಯಾಗಿ ಹೆತ್ತ ಚಿನ್ನದ ತತ್ತಿ
ತತ್ತಿಗೂ ನಿನ್ನದೇ ಮೊಹರುಟಂಕ.

ಹೀಗೆಯೇ ‘ಭೂಮಿಗೀತ’ದಲ್ಲೂ ಕೊನೆಯ ತೀರ್ಮಾನ (“ನೆಲತಾಯಿ ಮಲತಾಯಿ”; “ಕತ್ತಲಲ್ಲಿ ಕಣ್ಣು ಕಾಣದ ಬೀದಿಯಿಕ್ಕಟ್ಟಿನಲ್ಲಲಿ ಗೋಡೆ ತಡಕುತ ಇನ್ನು ತೆವಳಬೇಕು. ”) – ಇದು ಕೊನೆಗೂ ಬರೆಯಲಾರದೆ ಉಳಿಯುವ ತನ್ನ ಏಕಾಕಿತನವನ್ನು ಒಪ್ಪಿಕೊಳ್ಳುವ ಕವಿಯ ನಿಲುವು – ಪದ್ಯದ ಪ್ರಾರಂಭದಲ್ಲಿ ಬರುವ ಉತ್ಕರ್ಷದ ಮುಹೂರ್ತಗಳ ನೆನಪುಗಳಿಂದ ಬಾಧಿತವಾಗುತ್ತದೆ:

ತೆಂಗುಗರಿಗಳ ಬೀಸಿ ಕೈ ಚಾಚಿ ಕೆರದಳು;
ಅಡಿಕೆಗೊನೆಗಿಲಕಿ ಹಿಡಿದಾಡಿಸಿದಳು.
. . . . . . . . . . . . . . . . . . .
ಆಕಾಶದಲ್ಲಿ ಮೋಡದ ವಿಶ್ವರೂಪಕ್ಕೆ ಜೀವಜ್ಯೋತಿ ಕೂಡಿಸಿದಳು.

ಅನುಭವದ ಅಂತರಂಗದಲ್ಲಿರುವ ಸುಖ, ನೋವು, ಸಂಕಟಗಳನ್ನು ಒಟ್ಟಿಗೇ ವ್ಯಕ್ತಪಡಿಸುವ, ಒಂದನ್ನು ಇನ್ನೊಂದು ಅಳಿಸದಂತೆ ದ್ವಂದ್ವ ಅವಸ್ಥೆಗಳನ್ನು ಒಂದನ್ನಿನ್ನೊಂದಕ್ಕೆ ಎದುರಾಗಿಸಿ ಆತ್ಮಶೋಧ ಮಾಡಿಕೊಳ್ಳುವ ಈ ಕವನಗಳ ಅಭಿವ್ಯಕ್ತಿ ವಿಧಾನ ಪಾರದರ್ಶಕವಾದದ್ದಲ್ಲ; ದಟ್ಟವಾದದ್ದು. ಇಮ್ಮೈಪಡೆದ ಈ ಕವನಗಳು (‘ಭೂಮಿಗೀತ’, ‘ಕೂಪಮಂಡೂಕ’) ಕವನದ ಅರ್ಥವನ್ನು ಕವನದ ಶಬ್ದ ದೇಹದಲ್ಲೇ ನೇಯ್ದುಬಿಡುತ್ತವೆ. ಅಸ್ತಿತ್ವದ ಸ್ತರದಿಂದ ಅನುಭವವನ್ನು ಶೋಧಿಸಿಕೊಂಡಾಗ ಈ ಇಬ್ಬಂದಿತನದ ಕಟುತ್ವ ಎಲ್ಲ ಉತ್ಕಟ ಅನುಭವಗಳ ಮೂಲಭೂತ ಗುಣವೆನ್ನಿಸುವುದರಿಂದ ಅನುಭವದ ಎಲ್ಲ ಮೈಗಳನ್ನೂ ಕವನದಲ್ಲಿ ಒಟ್ಟಾಗಿ ಇಡಿಯಾಗಿ ಜೀವಂತಗೊಳಿಸುವ ಅಡಿಗರ ವಿಧಾನ ಕವನಕ್ಕೆ ನಿಜವಾದ ಸಂಕೀರ್ಣತೆಯನ್ನು – ಶಾಸ್ತ್ರಗಳಿಗೆ ನಿಲುಕಲಾರದ ಸಂಕೀರ್ಣತೆಯನ್ನು – ತಂದುಕೊಡುತ್ತದೆ.

ಅಡಿಗರು ಅನುಭವದ ಪೂರ್ನ ಆಘಾತಕ್ಕೆ ತಮ್ಮನ್ನು ತಾವು ಒಡ್ಡಿಕೊಂಡಾಗಲೂ, ತಮ್ಮ ಮೈ ಎಚ್ಚರವನ್ನು ಕಳೆದುಕೊಳ್ಳದಿರುವುದರಿಂದಲೇ ಅವರ ಕಾವ್ಯದ ಈ ಸಂಕೀರ್ಣ ಹೆಣಿಗೆ ಸಾಧ್ಯವಾಯಿತೆಂದು ನಾನು ಮತ್ತೆ ಹೇಳಬೇಕಾಗಿಲ್ಲ. ಆದರೆ ಅವರ ಪ್ರಕೃತಿ ತೀವ್ರ ಭಾವುಕತನದ್ದಾದರೂ ಈ ವೈಯಕ್ತಿಕತೆಯ ಘಾಟನ್ನು ಯಾವ ಕಾರಣದಿಂದಾಗಿ ಕಳೆದುಕೊಳ್ಳುವುದೇ ಇಲ್ಲ ಎನ್ನುವುದು ಚಿಂತಿಸಬೇಕಾದ ವಿಷಯ. ಈ ಬಗ್ಗೆ ನನ್ನ ಒಂದು ಯೋಚನೆಯನ್ನು ನಿಮ್ಮ ಅವಗಾಹನೆಗೆ ತರಲು ಇಷ್ಟಪಡುತ್ತೇನೆ. ನಮ್ಮೆಲ್ಲರಿಗೂ ಒಂದಲ್ಲ ಒಂದು ಸಲ ಇದು ಅನ್ನಿಸಿರಬಹುದು: ನಮ್ಮ ನಮ್ಮ ವೈಯಕ್ತಿಕ ಪ್ರತ್ಯೇಕತೆ ನಮಗೆ ತೀವ್ರವಾಗಿ ಅನುಭವಕ್ಕೆ ಬರುವುದು ವಂಚಿತ ಭಾವನೆಯಲ್ಲಿ ಮತ್ತು ಅವಮಾನದಲ್ಲಿ. ಅಡಿಗರ ವೈಯಕ್ತಿಕತೆ ಅವರ ಕಾವ್ಯದಲ್ಲಿ ಉಳಿದೇ ಇರುವುದಕ್ಕೆ ಒಂದು ಕಾರಣ: ಅವರಿಗಿರುವ ವಂಚಿತಭಾವನೆ. ‘ಹಿಮಗಿರಿಯ ಕಂದರ’ದ ನಾಯಕ ಮುಹೂರ್ತಮಾತ್ರವಾದ ಕಂದರದ ಕರೆಯಿಂದ ವಂಚಿತನಾದವನು; ‘ಗೊಂದಲಪುರ’ದ ನಾಯಕ ಕ್ರಾಂತಿಕಾರನ ಮೋಸದಿಂದ ವಂಚಿತನಾದವನು. ಈ ವಂಚಿತ ಭಾವನೆ ಅತ್ಯಂತ ಸಂಕೀರ್ಣವಾಗಿ ವ್ಯಕ್ತವಾಗುವುದು ‘ಭೂಮಿಗೀತ’ದ ನಾಯಕನ ಪ್ರಜ್ಞೆಯಲ್ಲಿ: ಭೂಮಿಯಿಂದಲೂ ಆಕಾಶದಿಂದಲೂ ವಂಚಿತನಾದ ನಾಯಕ ಇವನು. ಯಾರನ್ನೋ ತಾಯಿಯೆಂದು ನಂಬಿ, ಅದು ಅಲ್ಲವೆಂದು ದುಃಖಕ್ಕೀಡಾದವನು ಇವನು. ಎಲ್ಲವನ್ನೂ ತೊರೆದುನಿಂತ ‘ಸರೀಕ’ರ ಜೊತೆ ತಲೆಯೆತ್ತಿ ನಡೆಯಲಾರದ ಮುಜುಗರದವನು ಇವನು. ಹೀಗೆಯೇ ಭಾವೋತ್ಕರ್ಷದ ಹುಂಬತನದಲ್ಲಿ ತನ್ನನ್ನೆ ಮೀರಲು ಹೋಗಿ ಮೋಸಹೋದ ನಾಯಕನ ಚಿತ್ರ ‘ಕೂಪಮಂಡೂಕ’ದಲ್ಲಿ ಹೃದಯಸ್ಪರ್ಶಿಯಾಗಿ ಬರುತ್ತದೆ:

ಆದರೂ ನೀ ದಗಾಖೋರ, ನಾ ಬಲ್ಲೆ; ಹಳ್ಳಿಯ ಶಾಲೆ,
ಮೇಸ್ಟರಿಲ್ಲದ ವೇಳೆ ತಾಳ ಹಿಡಿದು
ನೀ ಭಾಗವತ ಬಾರಿಸಿದೆ; ನಾನು ಬಲಭೀಮ
ರೌದ್ರಾವತಾರಕ್ಕೆ ರೂಲು ದೊಣ್ಣೆ

ಗದೆಹಿಡಿದು ತಿರುವಿ ಹೂಂಕರಿಸಿದ್ದೆ; ಇಪ್ಪತ್ತೈದು
ಕುಮ್ಮುಚಟ್ಟುಗಳು ಮುಗಿವಷ್ಟರೊಳಗೆ
ಹೂಜೆ ಬರಿಹೋಳು; ತರಗತಿಯ ಭೋರ್ನಗೆ ಹೊಯಿಲು;
ಬೆನ್ನ ಬಸುಂಡೆಯೇ ಮಾಯದ ಕಥೆ.

ಈ ವಂಚಿತ ಭಾವನೆ ಮತ್ತು ಅವಮಾನ ಅಡಿಗರ ವೈಯಕ್ತಿಕತೆಯನ್ನು ಅರ್ಥಪೂರ್ಣವಾಗುವಂತೆ ಕಾಯುತ್ತದೆ ಎಂಬುದು ಮುಖ್ಯ. ಯಾಕೆಂದರೆ ಆತ್ಮಜ್ಞಾನವಿಲ್ಲದ ಲೇಖಕನಲ್ಲಿ ಈ ಭಾವನೆಗಳು ಶೆಲ್ಲಿಯ ಕಾವ್ಯದಲ್ಲಿಯಂತೆ ಅಳುಬುರುಕುತನಕ್ಕೆ ಮತ್ತು ಆತ್ಮ ಮರುಕಕ್ಕೆ ಎಡೆಮಾಡಿಕೊಡಬಹುದು.

ಬೆರೆಯುವುದು, ಸ್ವರೂಪಹೀನವಾಗುವುದು ಸುಲಭಸಾಧ್ಯವಾದ ನಮ್ಮ ಸಂಸ್ಕೃತಿಯ ಸಂದರ್ಭದಲ್ಲಿ ಅಡಿಗರ ಮೈ ಎಚ್ಚರ ಅವರ ಕಾವ್ಯಕ್ಕೆ ಬೇರೆ ಯಾರಲ್ಲೂ ಕಾಣದ ಒಂದು ವಿಶಿಷ್ಟತೆಯನ್ನು ತಂದುಕೊಟ್ಟಿದೆ ಎಂಬುದೇ ನನ್ನ ವಾದದ ತಿರುಳು. ತನ್ನ ವೈಯಕ್ತಿಕತೆಯನ್ನು ತನ್ನ ಕೃತಿಯೊಳಕ್ಕೆ ತಂದು ಹೇಗೆ ಉಪಯೋಗಿಸಿಕೊಳ್ಳಬೇಕೆಂಬುದು ಎಲ್ಲ ಲೇಖಕರಿಗಿರುವ ಸಮಸ್ಯೆಯೆಂಬುದನ್ನು ನಾನು ಈ ಮೊದಲೇ ಸೂಚಿಸಿದ್ದೇನೆ. ಭಾವುಕರಾಗಿ ತಮ್ಮ ಕೃತಿಗಳೊಳಕ್ಕೆ ಬರುವ ಕುವೆಂಪು ಹೇಗೆ ಯಾಕೆ ಸೋಲುತ್ತಾರೆಂಬುದನ್ನೂ ಚರ್ಚಿಸಿದ್ದೇನೆ. ಮಾಸ್ತಿ ಮತ್ತು ಕಾರಂತರು ಸಹಾನುಭೂತಿಯುಳ್ಳ ಉದಾರವಾದಿಗಳಾಗಿ ತಮ್ಮ ಕೃತಿಗಳ ಒಳಕ್ಕೆ ಪ್ರವೇಶಿಸುತ್ತಾರೆ. ಆದರೆ ಇವರು ಕೃತಿಯೊಳಕ್ಕೆ ತರುವ ಈ ಕೇಂದ್ರ ಪ್ರಜ್ಞೆಗೆ ಉತ್ಕಟವಾದ ಭಾವನೆಗಳನ್ನು ನಿರ್ವಹಿಸುವ ಶಕ್ತಿಯಿಲ್ಲದೆ ಹೋಗುತದೆ. ಅಡಿಗರ ಕಾವ್ಯದೊಳಕ್ಕೆ ಪ್ರವೇಶಿಸುವ ಅಡಿಗರ ವ್ಯಕ್ತಿತ್ವ, ಈ ದೃಷ್ಟಿಯಿಂದ ನೋಡಿದಾಗ, ಉತ್ಕಟ ಭಾವನೆಗಳನ್ನು ಹೊಮ್ಮಿಸುವ ಶಕ್ತಿಯುಳ್ಳದ್ದು. ಇದಕ್ಕೆ ಕಾರಣ: ಭಾವುಕತನ ಕೋಡಂಗಿತನ ಎರಡನ್ನೂ ಪಡೆದು ಕೊಂಡ (ಅಂದರೆ ಹಾಗೆ ತನ್ನನ್ನು ತಾನೆ ಗುರುತಿಸಿಕೊಳ್ಳುವ) ವ್ಯಕ್ತಿತ್ವವೊಂದು ಇವರ ಅನೇಕ ಮುಖ್ಯ ಕವನಗಳಲ್ಲಿ ಕಾಣುವುದೇ ಆಗಿದೆ. ‘ಭೂಮಿಗೀತ’ದ ನಾಯಕ ಮುಗ್ಧ, ಬಂಡಾಯಗಾರ, ಭಾವುಕ – ಜೊತೆಗೇ ಕೋಡಂಗಿ:

ಹಣೆಗೆ ತುಪ್ಪವ ಹಚ್ಚಿಬಿಟ್ಟ ಬೆಕ್ಕಿನ ತರಹೆ ಬುಗುರಿ ತಿರುಗಿದೆ
ಬಾಲ ನಿಮಿರಿಸುತ್ತ,
. . . . . . . . . . . . . . . . . . . .
ಬರಿದೆ ನಕ್ಷತ್ರಲೋಕಕ್ಕು ರೈಲು ಬಿಟ್ಟೆ.
. . . . . . . . . . . . . . . . . .
ಮಂತ್ರವಾದಿಯ ಕುತಂತ್ರದ ರಗಳೆ ಜೋರಾಗಿ ರೇಗಿದೆನು ನಾ ಬರಿದೆ
ನನ್ನ ಮೇಲೆ.

‘ಪ್ರಾರ್ಥನೆ’ ಪದ್ಯದ ನಾಯಕ ಕೆಲವೊಮ್ಮೆ ತನ್ನ ಅಟ್ಟಹಾಸವನ್ನೆ ಹಾಸ್ಯ ಮಾಡಿಕೊಳ್ಳುವ ಕೋಡಂಗಿ:

ಸಣ್ಣ ದೊಂದಿಯನ್ನೆತ್ತಿ ಹೊತ್ತಿನ ಮುಖಕ್ಕೆ
ಬೆಳಕು ಹರಿದದ್ದು ತನ್ನಿಂದಲೇ ಎಂದು ತನ್ನೊಳಗೆ
ಮುಖಕರಿವ, ನೆಣಬಿರಿವ, ಬಗ್ಗಲಾರದ ಬೊಜ್ಜು,
ಕೋಲು ನಡಿಗೆ ಕವಾತು ಕಲಿತ ಕೊಬ್ಬಿದ ಹುಂಜ.

‘ಕೂಪಮಂಡೂಕ’ದಲ್ಲಿ ಮೇಷ್ಟರಿಲ್ಲದ ವೇಳೆ ಕಮ್ಮುಚಟ್ಟು ಹಾಕಿ ಏಟುತಿಂದು ನಗೆಗೀಡಾಗುವವನೂ ಒಂದು ರೀತಿಯಲ್ಲಿ ಚಾಪ್ಲಿನ್‌ನಂತಹ ಕೋಡಂಗಿಯೆ. ತನ್ನ ಉದಾತ್ತತೆಯಿಂದ ತಾನೇ ನಾರ್ಸಿಸಸ್ಸಿನ ತರಹ ಮೋಹಿತನಾದ ಕುವೆಂಪು ನಾಯಕನಿಗಿಂತ ಅಡಿಗರ ಕೇಂದ್ರಪ್ರಜ್ಞೆಯಾದ ಈ ಭಾವುಕ – ಕೋಡಂಗಿ ಭಿನ್ನನಾಗಿರುವುದರಿಂದಲೇ ಅಡಿಗರ ಅನುಭವದ ಹಾಸ್ಯ – ಕರುಣದ ಎಲ್ಲ ಮೈಗಳನ್ನೂ ಒಟ್ಟಿಗೇ ಗ್ರಹಿಸುವುದು ಸಾಧ್ಯವಾಗುತ್ತದೆ. ‘ಶ್ರೀರಾಮನವಮಿಯ ದಿವ’ ಎನ್ನುವ ಇತ್ತೀಚಿನ ಅವರ ಪದ್ಯದಲ್ಲೂ ಅಡಿಗರು ಪದ್ಯದ ಕೊನೆಯಲ್ಲಿ ಚಾಪ್ಲಿನ್‌ನಂತಹ ಸಣ್ಣ ಮನುಷ್ಯನಾಗಿ ಕಾಣಿಸಿಕೊಳ್ಳುತ್ತಾರೆ ಎಂಬುದು ಈ ಕವನದಲ್ಲಿ ಕಾಣುವ ‘ಪಾಸಿಟಿವ್‌’ ಎನ್ನಿಸುವ ಧಾಟಿಯ ಸಂದರ್ಭದಲ್ಲಿ ಗಮನಾರ್ಹ.

ಚಕಮಕಿ ಕಲ್ಲನುಜ್ಜುತ್ತ
ಕೂತುಕೊಂಡಿದ್ದೇನೆ ಕತ್ತಲೊಳಗೆ,
ಪನಿವಾರ ತಿಂದು ಪಾನಕ ಕುಡಿದು ನೋನುತ್ತ
ಸ್ಫೋಟಕ್ಕೆ ಕಾದು ಕಿವಿ ಕಂಪಿಸುತ್ತ.

ಹೀಗೆ ಕೋಡಂಗಿಯಾಗಿಯೂ ತನ್ನ ಕಾವ್ಯದ ಅನುಭವದ ಲೋಕದೊಳಕ್ಕೆ ಅಡಿಗರು ಪ್ರವೇಶಿಸುವುದರಿಂದಲೇ ಯಾವ ಉತ್ಕಟ ಕ್ಷಣದಲ್ಲೂ ತನ್ನನ್ನು ತಾನು ಮರೆಯದಂತೆ, ಕಂಡ ಸತ್ಯವನ್ನು ಪರೀಕ್ಷಿಸುವ ಕಣ್ಣಿನ ಸದ್ಯದ ವಾಸ್ತವ್ಯದ ಪ್ರಜ್ಞೆಯ ಹತೋಟಿಯಲ್ಲಿ ಉಳಿಸಿಕೊಳ್ಳುವುದು ಸಾಧ್ಯವಾಗುತ್ತದೆ ಎಂಬುದು ನನ್ನ ವಾದದ ತಿರುಳು. ಹೀಗೆ ಯಾವ ಉತ್ಕಟ ಕ್ಷಣದಲ್ಲೂ ತನ್ನನ್ನು ತಾನು ಮರೆಯದೆ ಉಳಿಯುವ ಕವನದ ನಾಯಕನ ಸ್ವಪ್ರಜ್ಞೆ ಅಡಿಗರ ಕಾವ್ಯಸೃಷ್ಟಿಗೆ ಮೂಲಭೂತವಾದುದು:

ಕ್ರೌಂಚವಧುದುದ್ವೇಗದಳಲ ಬತ್ತಲೆ ಸುತ್ತ ರಾಮಾಯಣ
ಶ್ಲೋಕ ರೇಷ್ಮೆ ತೊಗಲು

ಅಸ್ತಿತ್ವದ ಅಂತರಂಗದಲ್ಲಿರುವ ನೋವು ಮರೆಯುವುದೆ ಇಲ್ಲ; ಅದು ಬತ್ತಲೆಯಾಗಿಯೇ, ಅಂದರೆ Vulnerable ಆಗಿಯೇ ಉಳಿದುರುತ್ತದೆ. ಈ ಮಾಯದ ನೋವಿನ ಸುತ್ತ ಕಾವ್ಯ ಬೆಳೆದುಕೊಳ್ಳುತ್ತದೆ. ಮೇಲೆ ಉದ್ದೃತವಾದ ಮಾತಿನಲ್ಲಿ ‘ಬತ್ತಲೆ’ ಎನ್ನುವ ಶಬ್ದ ಅತ್ಯಂತ ಮಹತ್ವಪೂರ್ಣವಾದುದು.

‘ಭೂತ’, ‘ಹದ್ದು’ ಮತ್ತು ‘ಶ್ರೀರಾಮನವಮಿಯ ದಿವಸ’ – ಈ ಕವನಗಳಲ್ಲಿ ಮಾತ್ರ ಅಡಿಗರ ವೈಯಕ್ತಿಕತೆಯ ಘಾಟು ಪ್ರತ್ಯಕ್ಷವಾಗಿ ಹೊಡೆಯುವುದಿಲ್ಲ. ಅಡಿಗರ ಕಾವ್ಯದ ಒಟ್ಟು ಚಲನೆಯನ್ನೇ ಒಂದು ರೂಪಕವಾಗಿ ಗ್ರಹಿಸುವುದಾದರೆ ಅದನ್ನು ‘ಮೀರು’ವ ಪ್ರಯತ್ನ ಮತ್ತು ವಾಸ್ತವತೆಯನ್ನು ಒಪ್ಪಿಕೊಳ್ಳುವ ವ್ರತ ಎನ್ನಬಹುದು. ‘ಮೀರು’ವ ಪ್ರಯತ್ನ ಇವರ ಕಾವ್ಯದಲ್ಲಿ ಅನುಭವ, ಆದರ್ಶಪ್ರಿಯತೆ, ರೊಮಾಂಟಿಸಿಸಂ ಮತ್ತು ರಾಜಕೀಯ ಕ್ರಾಂತಿಕಾರತೆಗಳಾಗಿ ಕಾಣಿಸಿಕೊಳ್ಳುತ್ತದೆ. ವಾಸ್ತವತೆಯನ್ನು ಒಪ್ಪಿಕೊಳ್ಳುವ ಪ್ರಯತ್ನ; ಮಣ್ಣಿನ ವಾಸನೆ, ವ್ಯಕ್ತಿ – ಸಮಾಜಗಳ ಪರಿಮಿತಿಗಳನ್ನು ಅರಿತು ಅವುಗಳ ಮೇರೆಯಲ್ಲಿಯೇ ಮಾಗುವ ವಿವೇಕ, ಕೃತಿಯಲ್ಲಿ ಮೈಗೂಡಬಲ್ಲಷ್ಟೇ ಆದರ್ಶ ಮತ್ತು ಭಾಷೆಯಲ್ಲಿ ಸಂಭವಿಸಬಲ್ಲಷ್ಟೇ ಭಾವನೆಗಳು ಎನ್ನುವ ನಿಷ್ಠುರ ಕನ್ಸ್ರೇಟಿವ್‌ ವ್ರತಗಳಾಗಿ ಕಾಣಿಸಿಕೊಳ್ಳುತ್ತವೆ. ಈ ಎರಡು ಸೆಳೆತಗಳ ನಡುವೆ ನಡೆಯುವ ದ್ವಂದ್ವಾತ್ಮಕ ತಿಕ್ಕಾಟವೇ ಇವರ ಕಾವ್ಯವಸ್ತುವೆನ್ನಬಹುದಾದರೆ ಇವರ ‘ಮ್ಯಾನಿಫೆಸ್ಟೊ’, ‘ಪ್ರಾರ್ಥನೆ’ಯಲ್ಲಿದೆ: ಆದರೆ ‘ಕ್ಲಾಸಿಕಲ್‌’ ಎನ್ನಬಹುದಾದ ಇದರ ಅಭಿವ್ಯಕ್ತಿ ‘ಭೂತ’ ಪದ್ಯದ ನಿಷ್ಠುರ ಪ್ರತೀಕವಿನ್ಯಾಸದಲ್ಲಿ ಇದೆ.

ಆದರೆ ‘ಭೂತ’ದಲ್ಲಿಯೂ ಸಹ ಸಂಸ್ಕೃತಿಯ ಔನ್ನತ್ಯದ ಸಾಧ್ಯತೆಯನ್ನು ಸೂಚಿಸುವ ಕೊನೆಯ ಭಾಗದಲ್ಲಿ ಕಾಲಸೂಚಕ ಕ್ರಿಯಾಪದಗಳಿಲ್ಲದಿರುವುದು ಮತ್ತು ಪದ್ಯದ ಪ್ರಾರಂಭದಲ್ಲಿ ಭೂತಚೇಷ್ಟೆಯಿಂದ ವಿಹ್ವಲನಾದ ನಾಯಕ ಬರುವುದು ಈ ಕವನದೊಳಕ್ಕೂ ಪ್ರವೇಶಿಸುವ ಅಡಿಗರ ಸ್ವಮನಸ್ಕತೆಗೆ ಉದಾಹರಣೆ. ವ್ಯಕ್ತಿಯ ಶ್ರಮದಿಂದ – ಈ ಪದ್ಯದಲ್ಲಿ ಮೀರುವ ಪ್ರಯತ್ನದಿಂದಲ್ಲ, ನೆಲವನ್ನು ಅಗೆಯುವ,  ಬಗೆಯುವ ಶ್ರಮದಿಂದ ಎಂಬುದು ಮುಖ್ಯ – ವ್ಯಕ್ತಿಗೂ ಸಂಸ್ಕೃತಿಯೂ ಒಟ್ಟಿಗೇ ಧನ್ಯತೆ ಪಡೆಯುವ ಸೂಚನೆಗಳಿರುವುದರಿಂದ ಅಡಿಗರ ದ್ವಂದ್ವಾತ್ಮಕ ಕಾಳಜಿಗಳಿಗೆ ಒಂದು ನಿಲುಗಡೆ ಸಿಕ್ಕಿರಬಹುದು ಎನ್ನಿಸುತ್ತದೆ. ಈ ಪದ್ಯದಲ್ಲಿ ಅಡಿಗರನ್ನು ನಮ್ಮ ಜನಾಂಗ ಮೆಚ್ಚಿಕೊಂಡಿರುವುದಕ್ಕೆ ಕಾರಣವಾದ ಅವರು ‘ಕಾವು’ ಇಲ್ಲವೆಂದೂ ನಿಜವೆ. ಅಂತೆಯೇ ‘ಶ್ರೀರಾಮನವಮಿಯ ದಿವಸ’ದಲ್ಲೂ ಕಾವು ಕಡಿಮೆ. ಆದರೆ ನೆಹರೂ ರೂಪಕಕ್ಕೆ ಸಂಪೂರ್ಣ ವ್ಯತಿರಿಕ್ತವಾದ ಇಲ್ಲಿನ ಶ್ರೀರಾಮ ರೂಪಕದಲ್ಲಿ ಅಡಿಗರು ತನ್ನ ನೆಲ – ಆಕಾಶ ದ್ವಂದ್ವಕ್ಕೆ ಒಂದು ಅರ್ಥಪೂರ್ಣ ಸಮನ್ವಯವನ್ನು ಸೂಚಿಸಿದ್ದಾರೆ. ರಾಮನ ಅವತಾರ ‘ಪ್ರಾರ್ಥನೆ’ ಪದ್ಯದಲ್ಲಿ ಅಂತರ್ಮುಖಿಯಾಗಲು ಬಯಸುವಂಥವನ ತಪಸ್ಸಿನ ಫಲ. “ಊರ್ಧ್ವರೇತಸ್ಕನಾ ಗೊಬ್ಬಂಟಿ ಮೇಲು ಮಾಳಿಗೆಯ ಕಿರುಕೋಣೆ”ಯಲ್ಲಿ “ಮೈಮರೆವ” ಅಪೇಕ್ಷೆ ಇಲ್ಲಿ ವಾಲ್ಮೀಕಿಯ,

ಮತ್ಸ್ಯ ಕೂರ್ಮವರಾಹ ಮೆಟ್ಟಲುಗಳೇರುತ್ತ
ಹುತ್ತಗಟ್ಟಿದ್ದ ಕೈ ಕಡೆದ ನೋಟ

ವಾಗುತ್ತದೆ. ಶ್ರೀರಾಮ: “ಗರಿಷ್ಠತೇಜದ ಮೊನೆ ಕೆಳಪಟ್ಟು ಮಣ್ಣುಟ್ಟು ನಿಂತ ಘಟನೆ”ಯಾಗುತ್ತಾನೆ. ವಾಲ್ಮೀಕಿಯ ಅಂತರ್ಮುಖ ತಪಸ್ಸಿನ ಫಲವಾದ ಇವನು

ಕೌಸಲ್ಯೆದಶರಥರ ಪುತ್ರಕಾಮೇಷ್ಟಿಗೆರೆ
ಹಠಾತ್ತಾಗಿ ತಾಗಿರೆ ತ್ರಿಕಾಲ ಚಕ್ರ

ಸಂಭವಿಸಿದವನು ಕೂಡ. ಅಂದರೆ ದಂಪತಿಗಳ ಸಾಂಸಾರಿಕ ಐಹಿಕ ಆಕಾಂಕ್ಷೆ, ಋಷಿಯ ವಿಕಾಸಾತ್ಮಕವಾದ ಪಾರಮಾರ್ಥಿಕ ತಪಸ್ಸು ಮತ್ತು ವರ್ತಮಾನಕಾಲ ತ್ರಿಕಾಲಗಳ ಆಕಸ್ಮಿಕ ಸಂಯೋಗಗಳು ಒಂದಕ್ಕೊಂದು ಹೊಂದಿ ಉದ್ಭವವಾದ ಆಚಾರವನ್ನೇ ಪರಮಧರ್ಮವೆಂದು ಬಗೆದ ನೀತಿ – ನಿಯಮಬದ್ಧ ವ್ಯಕ್ತಿತ್ವ – ಶ್ರೀರಾಮನದು. ಸಮಾಜಕ್ಕೆ ಹೊರತಾದ, ಅಥವಾ ಅತೀತವಾದ ಆದರ್ಶ ರಾಮನದಲ್ಲ; ಇವನ ಆಧ್ಯಾತ್ಮಿಕತೆ ಸಂಪೂರ್ಣ ಸಾಮಾಜಿಕ ಆಚಾರವಾಗಿ ವ್ಯಕ್ತವಾದದ್ದು.

ಅಂತರಂಗದ ಸುರುಳಿ ಬಿಚ್ಚಿ ಸರ್ಚ್ಲೈಟಲ್ಲಿ
ಹೆದ್ದಾರಿ ಹಾಸಿದ್ದ ರಾಮಚರಿತ.

ಎಷ್ಟರ ಮಟ್ಟಿಗೆ ಶ್ರೀರಠಾಮ ಸಾಮಾಜಿಕ – ಮಾನವೀಯ ಮೌಲ್ಯಗಳ ಪ್ರತಿನಿಧಿ ಎಂದರೆ “ಮಣ್ಣಿನಣುಗಿಯ ಸೆಳವಿನಲ್ಲಿ” – ಅಂದರೆ ಸಾಂಸಾರಿಕ ಮೂರ್ತ ಕ್ರಿಯೆಯ ಮುಖಾಂತರ – ಲಂಕೆಗೆ ಬೆಂಕಿಯಿಟ್ಟವನು; ಅಲ್ಲದೆ ತನಗೆ ಸಮ್ಮತವಾದದ್ದು ಸಮಾಜಕ್ಕೂ ಸಮ್ಮತವಾಗಬೇಕೆಂದು ಸೀತೆಯನ್ನು ‘ಸುಟ್ಟಲ್ಲದೇ ಮುಟ್ಟೆ’ನೆಂಬ ‘ಉಡಾಫೆ’ ತೋರಿಸಿದವನು;

ಸಂಕಲ್ಪಬಲದ ಜಾಗರಣೆ: ಕತ್ತಲಿನೆದೆಗೆ
ಕಣೆ; ದಂಡಕಾರಣ್ಯಕ್ಕೆ ಹಗಲ ದೊಣ್ಣೆ;
ಮಣ್ಣಿನಣುಗಿಯ ಸೆಳವಿನಲ್ಲಿ ಲಂಕೆಗೆ ಬೆಂಕಿ;
ಸುಟ್ಟಲ್ಲದೇ ಮುಟ್ಟೆನೆಂಬುಡಾಫೆ.

‘ಈವಿಲ್‌’ ಶಾಶ್ವತವೆಂದು ತಿಳಿದರೂ, ರಾವಣನ ತಲೆ “ಕತ್ತರಿಸಿದರೆ ಬೆಳೆವ, ಬೆಳೆದು ಕತ್ತಿಗೆ ಬರುವ ಅನಾದಿ” ಎಂದು ಅರಿತರೂ, ಶ್ರೀರಾಮ “ದಂಡಕಾರಣ್ಯಕ್ಕೆ ಹಗಲ ದೊಣ್ಣೆ” ಹೊತ್ತು ಹೊರಟವನು. ಸಾಮಾಜಿಕ ಮೌಲ್ಯಗಳಾಗಿ ಪರಿವರ್ತಿತವಾಗುವ ವ್ಯಕ್ತಿ ತಪಸ್ಸು – ಶ್ರೀರಾಮನದು. ಮೂರ್ತಕ್ರಿಯೆಯ ಮುಖಾಂತರ ಧನ್ಯತೆಯನ್ನು ಪಡೆಯುವ ರಾಮನ ರೀತಿ ‘ಸ್ವಾತಂತ್ಯ್ರ’ ೧೯೫೮ರ ಪಾಠ’ ಪದ್ಯದ ಈ ಸಾಲುಗಳನ್ನು ನೆನಪಿಗೆ ತರುತ್ತದೆ:

ಪ್ರಾಣವೋ ಅಸ್ಥಿಪಂಜರ ಬದ್ಧ; ಮೋಡವೇ
ಇಳಿವಾಗ ತನುರೂಪಿ ಬಿಂದು. . .
. . . . . . . . . . . . . . . . . . . . .
ನೋಡೀ ನುಗ್ಗೆ:
ನಿಲ್ಲಲೊಂದಿಷ್ಟು ಲಂಗೋಟಿಯುಗಲದ ಜಾಗ,
ಆಕಾರತಳೆದ ಆಭೋಗ.

ಮೂರ್ತ ಕ್ರಿಯೆಯ ಮುಖಾಂತರ ಪುರುಷಾರ್ಥಗಳನ್ನು ಸಫಲಗೊಳಿಸಿಕೊಳ್ಳುವ, ವೈಯಕ್ತಿಕ ಸಾಂಸಾರಿಕ ಜವಾಬ್ದಾರಿಗಳಲ್ಲಿ ಬೇರುಬಿಟ್ಟು ಸಾಮಾಜಿಕ ಹಿತವನ್ನು ಸಾಧಿಸುವ ಶ್ರೀರಾಮ ಅಡಿಗರ ಕನ್ಸರ್ವೇಟಿವ್‌ ಕಾಳಜಿಗಳು ಪಡೆದ ಒಂದು ಘಟ್ಟವಾಗಿ ಬರುತ್ತಾನೆ. ಅಂತರ್ಮುಖತೆ ಬಹಿರ್ಮುಖತೆಗಳು ಹದವಾಗಿ ಸಂಗಮಿಸಿದ ವ್ಯಕ್ತಿತ್ವ ಶ್ರೀರಾಮನದ್ದಾದರೆ, ನೆಹರೂ ಆಡಂಬರದ ಬಹಿರಂಗವನ್ನು ಮಾತ್ರ ಪಡೆದ ಕನಸುಗಾರಿಕೆಯ ಕ್ರಾಂತಿಕಾರ. ಹೊರಗಿನ ಮುಗಿಲ ಬಣ್ಣದಲ್ಲಿ ಮಗ್ನನಾಗಿ ಮೃತ್ಯುಪ್ರಜ್ಞೆಯಿಂದ ಬಾಧಿತನಾಗದ ಎಳಸುತನದ ರೊಮಾಂಟಿಕ್‌;

ಅಳಿವೆ ಬಳಿ ಬುಗುರಿ ಗಿರಗಿರ ದೋಣಿಗಳ ಮೇಲೆ
ಉದ್ಭಾಹು ನಿಗಚುವನು ಮುಗಿಲ ಫಲಕೆ.
ಅಳಿವೆಯಾಚೆಗೆ ಕಪ್ಪುಕಡಲೆ? ಅಸಂಬದ್ಧ!
ಎಷ್ಟು ಚೆನ್ನಾಗಿದೆಯೊ ಮುಗಿಲ ಬಣ್ಣ.

ಪದ್ಯದುದ್ದಕ್ಕೂ ಸಾಂಸಾರಿಕ ಜವಾಬ್ದಾರಿಯಾಗಿ ಬೆಳೇದು ಸಫಲವಾಗುವ ವೈಯಕ್ತಿಕತೆ, ಸಾಮಾಜಿಕ ಕ್ರಿಯೆಯಾಗುವ ಸಾಂಸಾರಿಕ ನಿಷ್ಠೆ, ವ್ಯಕ್ತಿ, ಗೃಹಸ್ಥ ಸಮಾಜನಾಯಕ – ಈ ಸ್ತರಗಳಲ್ಲಿ ವಿಕಾಸಗೊಳ್ಳುವ ನೈತಿಕ ಆಸ್ಥೆಗಳು ಹೇಗೆ ಕಾಣಿಸಿಕೊಳ್ಳುತ್ತವೊ, ಹಾಗೆಯೇ ವೈಯಕ್ತಿಕ ಪ್ರತ್ಯೇಕತೆಯನ್ನು ಅಲೌಕಿಕವಾದ ಅನುಭವದಲ್ಲಿ ಮೀರಿ ನಿಲ್ಲುವ ಆಕಾಂಕ್ಷೆಯೂ ಯೋಗದ ಸಹಸ್ರಾರದ ಸಂಕೇತದಲ್ಲಿ (ತನ್ನ ಸಾಧ್ಯತೆಯ ಪ್ರಶ್ನೆಯಾಗಿ, ಆದರೆ ಶ್ರೀರಾಮನಂಥವನಲ್ಲಿ (“ಪುರುಷೋತ್ತಮ”) ಸಫಲವಾದ ಸಾಧ್ಯತೆಯಾಗಿ) ಬರುತ್ತದೆ. ಅಂದರೆ ಆಗಬೇಕಾದ ವಿಕಾಸ ಈ ಕ್ರಮದಲ್ಲಿ; ವ್ಯಕ್ತಿ ಗೃಹಸ್ಥ, ಸಮಾಜನಾಯಕ, ಅನುಭಾವಿ – ಹೀಗೆ. ಪದ್ಯದುದ್ದಕ್ಕೂ ಇದು ಸಾಧ್ಯವಾಗುವುದು ವ್ರತ ಮತ್ತು ನಿಷ್ಠೆಯಿಂದ ಕೂಡಿದ ಕ್ರಿಯೆಗಳ ಮುಖಾಂತರ ಎನ್ನುವುದಕ್ಕೆ ಸೂಚನೆಗಳಿವೆ. ‘ವ್ಯಕ್ತ ಮಧ್ಯಕ್ಕೆ ಬಂದುರಿವ ಶಬರಿ’, ‘ಹುತ್ತಗಟ್ಟಿ’ ಕೂತ ವಾಲ್ಮೀಕಿ ‘ಪುತ್ರಕಾಮೇಷ್ಟಿ’ ವ್ರತಹಿಡಿದ ಕೌಸಲ್ಯೆ ದಶರಥರು, ‘ಸಂಕಲ್ಪ ಬಲದ ಜಾಗರಣೆ’ಯ ಶ್ರೀರಾಮ, ಕೊನೆಯಲ್ಲಿ ‘ಪನಿವಾರ ತಿಂದು ಪಾನಕ ಕುಡಿದು ನೋನುತ್ತ’ ಕೂತಿರುವ ಕವಿ – ಎಲ್ಲರೂ ವ್ರತಿಗಳೆ. ಅಂತಮುಖತೆಯ ತಪೋಬಲವಿಲ್ಲದ ಬಹಿರ್ಮುಖತೆ (“ಪ್ರಾರ್ಥನೆ’ಯಲ್ಲಿ ‘ಫರಂಗಿರೋಗ’ ಆದಂತೆ) ಈ ಪದ್ಯದಲ್ಲಿ ವಿಜ್ಞಾನ ಯುಗದ “ರಾಕೆಟ್ಟು ಜಗಿದುಗುಳಿ ತಿಂಗಳಿಗೆ ಬಡಿವಾಧುನಿಕ ವಿಕಾರ”ವಾಗಿ ಬರುತ್ತದೆ. ಪದ್ಯದುದ್ದಕ್ಕೂ ಆಧುನಿಕ, ಹಾಗೂ ರಾಮ – ರಾವಣ ಯುದ್ಧದ ಪ್ರತೀಕಗಳು – ಬಹುರ್ಮುಖವಾದ ಘರ್ಷಣೆಯ ಚಿತ್ರಗಳು – ಬರುತ್ತವೆ. ಆದರೆ ಇದೇ ರಾಕೆಟ್ಟು “ಕೆಳಪಟ್ಟು ಮಣ್ಣುಟ್ಟು” ಶ್ರೀರಾಮನೂ ಆಗುತ್ತದೆ; ಹಾಗೆಯೇ ಷಟ್ಚಕ್ರಗಳನ್ನು ಏರಿ ಸಹಸ್ರಾರವನ್ನು ತಲುಪುವ ಅಂತರ್ಮುಖ ಯೋಗದ ಪರಮಹಂಸ ಮುಕ್ತ ಸ್ಥಿತಿಯೂ ಆಗಿ ಸೂಚಿತವಾಗುತ್ತದೆ. ಹೀಗೆ ಸೂಚಿಸುವುದನ್ನು ಅಡಿಗರು ಪ್ರಶ್ನೆಯಾಗಿ ಕೇಳುತ್ತಾರೆಂಬುದನ್ನು ಗಮನಿಸಬೇಕು:

ಷಟ್ಚಕ್ರ ರಾಕೆಟ್ಟುಗಳ ಹಂತಹಂತಕ್ಕೆ
ಅಂಚೆ ತಲುಪೀತೆ ಸಹಸ್ರಾರಕೆ?

“ಸ್ಫೋಟಕ್ಕೆ ಕಾದು ಕಿವಿ ಕಂಪಿಸುತ್ತ” ಕೂತ ಕವಿಗೆ ಈ ಅರಿವು ಮಾತ್ರ ಇದ್ದೇ ಇದೆ;

ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು
ಪುರುಷೋತ್ತಮನ ಅಂಥ ರೂಪರೇಖೆ?

ಬಹುರ್ಮುಖಕ್ರಿಯೆ, ಅಂತರ್ಮುಖ ತಪಸ್ಸುಗಳು ಹೀಗೆ ಹೆಣೆದುಕೊಂಡು ಹುಟ್ಟಿರುವ ಈ ಪದ್ಯದಲ್ಲಿ ಅಡಿಗರು ವ್ಯಕ್ತಿ – ಸಂಸ್ಕೃತಿ ಸಂಬಂಧದ್ಲಿ ಉದ್ಭವವಾಗುವ ಕ್ರಾಂತಿ, ಆದರ್ಶ, ಅನುಭಾವ, ವೈಯಕ್ತಿಕತೆ, ಕನ್ಸರ್ವೇಟಿವಿಸಂ ಇತ್ಯಾದಿ ವಿಚಾರಗಳಿಗೆ ಶ್ರೀರಾಮನ ಆದರ್ಶ ರೂಪಕದಲ್ಲಿ ಒಂದು ಸಮನ್ವಯವನ್ನು ಸೂಚಿಸಿದ್ದಾರೆ ಎನ್ನಬಹುದು. [2]

ನಮ್ಮ ಸಂಸ್ಕೃತಿಯ ಆದರ್ಶಗಳಿಂದ ಆಕರ್ಷಿತರಾಗಿಯೂ ತಮ್ಮ ವೈಯಕ್ತಿಕ ದೃಷ್ಟಿಕೋನವನ್ನು ಕಳೆದುಕೊಳ್ಳದಂತೆ ಪಕ್ವವಾಗುತ್ತ ಹೋದ ಅಡಿಗರ ಕಾವ್ಯದ ಒಂದು ಸ್ಥೂಲ ವಿವೇಚನೆಯಿಂದ ನನ್ನ ಈ ಚರ್ಚೆಯನ್ನು ಕೊನೆಮಾಡುತ್ತಿರುವುದರ ಉದ್ದೇಶ: ಸಂಸ್ಕೃತಿ – ಲೇಖಕ ಸಂಬಂಧ ತುಂಬ ಸಂಕೀರ್ಣವಾದುದು ಎಂಬುದಕ್ಕೆ ತಾತ್ವಿಕ ವಿಶ್ಲೇಷಣೆಗಿಂತ ಸಾಹಿತ್ಯಕೃತಿಯ ವಿವೇಚನೆಯೇ ಹೆಚ್ಚು ಸಹಾಯಕವಾದದ್ದು ಎನ್ನುವ ನಂಬಿಕೆ. ನಮ್ಮ ಸಂಸ್ಕೃತಿಯ ಪರಿಸರದಲ್ಲಿ ವಿನಾಯಕ, ಬೇಂದ್ರೆ, ಕುವೆಂಪು, ಇಂಡೋ ಆಂಗ್ಲಿಯನ್‌ ಲೇಖಕರು, ನವ್ಯರು, ಕಾರಂತ ಮತ್ತು ಅಡಿಗ ಇವರನ್ನು ನಾನು ಚರ್ಚಿಸಿರುವ ಕ್ರಮದಿಂದ ಒಂದು ಸ್ಪಷ್ಟವಿಚಾರವಲ್ಲದಿದ್ದರೂ, ಸ್ವತಃ ಲೇಖಕನಾದವನೊಬ್ಬನ ಮನಸ್ಸಿನ ಗೊಂದಲ ಅರ್ಥಪೂರ್ಣವೆನ್ನಿಸುವಂತೆ ವ್ಯಕ್ತವಾಗಿದ್ದರೆ ನಾನು ತೃಪ್ತನಾಗುತ್ತೇನೆ.

*

[‘ಪ್ರಜ್ಞೆ ಮತ್ತು ಪರಿಸರ’ (೧೯೭೧) ಸಂಕಲನದಲ್ಲಿ ಪ್ರಕಟವಾಗಿರುವಭಾರತೀಯ ಸಂಸ್ಕೃತಿ ಮತ್ತು ಲೇಖಕಎಂಬ ಲೇಖನದ ಆಯ್ದ ಭಾಗ. ]

* * *


[1] ಹಳೆ ಮನೆಯ ಮಂದಿಯವರಾದ ಕವಿಗಳ “ನೊಲಿಲ್ಲದೆ ಅರಿವೆ ನೇಯುವ ಆತ್ಮದ ಮಗ್ಗ”ವನ್ನು ಲೇವಡಿಮಾಡಿ, ಅವರ “ಸತ್ಯ ಶಿವ ಸುಂದರದ ಜಳ್ಳಿನುಪ್ಪಿಟ್ಟಿಗೆ” ಹೇಸಿ ಅಪ್ಪಟ ಯುರೋಪ್‌ ಮಾದರಿ ಹೋಟೆಲೇ ಸರಿ ಎಂದು ತೀರ್ಮಾನಕ್ಕೆ ಬರುವ ಕವನವನ್ನಿಲ್ಲಿ ನೆನೆಯಬಹುದು. ಆಚಾರದಲ್ಲಿರುವ ಸಂಸ್ಕೃತಿಗೆ ಇವರು ಮೊದಲಿನಿಂದಲೂ ಹೀಗೆ ತೋರಿಸುತ್ತಾ ಬಂದಿರುವ ವಿರೋಧ ಸ್ಪಷ್ಟವಾಗಿ ಮೇಲಕ್ಕೆ ಕಾಣಿಸುವಂತಹುದು.

[2] ಅಡಿಗರ ಈಚಿನ ಕವನವಾದ ‘ವರ್ಧಮಾನ’ದಲ್ಲೂ ಸಹ ಕನ್ಸರ್ವೇಟಿವ್‌ ಮತ್ತು ಕ್ರಾಂತಿಕಾರರ ಮುಖಾಮುಖಿಯಾಗುವುದನ್ನು ನೋಡಬಹುದು. ಇಲ್ಲಿಯ ಕ್ರಾಂತಿಕಾರ ಹುಂಬ ಹಿಪ್ಪಿ; ಆದರೆ ಬೆಳೆಯಬಲ್ಲ ಜೀವಸತ್ವವನ್ನು ಪಡೆದವನು. ಇವನ ತಂದೆ ಮಿತಿಗಳನ್ನು ಅರಿತ ವಿವೇಕಶಾಲಿ; ಆದರೆ ಮಗನಸತ್ತ್ವ ಇವನಲ್ಲಿಲ್ಲ. ಕೈಮೀರಿದ ಮಗನಿಗಾಗಿ ಇವನು ಹಲುಬುತ್ತಾನೆ. ‘ಕೂಪಮಂಡೂಕ’ದಲ್ಲಿ ಮೀರಿನಿಂತ ಮುಹೂರ್ತಗಳ ಅನುಭವವುಳ್ಳ ನಾಯಕ, ಆದರೆ ಅವುಗಳಿಂದ ವಂಚಿತನಾಗಿ ತನ್ನ ಮಿತಿಗಳನ್ನು ಒಪ್ಪಿಕೊಳ್ಳುವ ಹೊಸ ಠರಾವು ಮಾಡಿದ ನಾಯಕ ಹೀಗೆಯೇ ಕವಿಯಲ್ಲಿರುವ ಕ್ರಾಂತಿಕಾರಕತೆ ಮತ್ತು ಕನ್ಸರ್ವೇಟಿಸಂಗಳ ಇನ್ನೊಂದು ಬಗೆಯ ಮುಖಾಮುಖಿಯಾಗಿದೆ. )