“ಕ್ಷಣೇ ಕ್ಷಣೇ ಯನ್ನವತಾಮುಪೈತಿ
ತದೇವ ರೂಪಂ ರಮಣೀಯತಾಯಾಃ”

“ಸಂಸ್ಕೃತ ಕವಿಗಳಲ್ಲಿ ಮಾಘಕವಿಯ ಹೊರತು ಇನ್ನಾರೂ ಇಷ್ಟು ಹಿತಮಿತವಾಗಿ ಸೌಂದರ‍್ಯದ ಸೂತ್ರವನ್ನು ಹೇಳಿದವರಿಲ್ಲ. ಮಾಘಕವಿ ಸೌಂದರ‍್ಯವನ್ನು ಕುರಿತು ಯಾವ ವ್ಯಾಖ್ಯೆಯನ್ನೂ ಬರೆದಿಲ್ಲ. ‘ಕ್ಷಣಕ್ಷಣವೂ ಯಾವುದು ನವನವತ್ವವನ್ನು ಹೊಂದುವುದೋ ಅದೇ ಸೌಂದರ‍್ಯ ಅಥವಾ ರಮಣೀಯತೆ’ – ಎನ್ನುವ ಒಂದು ಸೂತ್ರದಲ್ಲಿ ಸೌಂದರ‍್ಯದ ಮುಖ್ಯ ಲಕ್ಷಣವನ್ನು ಸ್ಪಷ್ಟಪಡಿಸಿದ್ದಾನೆ”.[1]

ನವತ್ವ ಎಂದರೆ ಕ್ಷಣಕ್ಷಣವೂ ಹೊಸ ಹೊಸತನವನ್ನು ತಾಳುವ ಶಕ್ತಿ. ನಾವು ದಿನ ದಿನವೂ ಕಾಣುವ ವಸ್ತುಗಳ ಸೌಂದರ‍್ಯ ಚಣಚಣವೂ ಹೊಸದೆಂಬಂತೆ ತೋರದಿದ್ದ ಪಕ್ಷದಲ್ಲಿ ಅವುಗಳ ಬಗೆಗೆ ಮೊದಲೊಮ್ಮೆ ನಮ್ಮಲ್ಲಿ ಮೂಡಿದ ವಿಸ್ಮಯ ಕ್ರಮೇಣ ಬೇಸರವಾಗಿ ಪರಿಣಮಿಸುತ್ತಿತ್ತೋ ಏನೋ! ವಸ್ತುಗಳಲ್ಲಿ ಗೋಚರಿಸುವ ಈ ನವತ್ವ ಎನ್ನುವುದು ನಮ್ಮ ವಿಸ್ಮಯವನ್ನು ಪೋಷಿಸುವ ಗುಣಮಾತ್ರವಲ್ಲ; ವಸ್ತು, ವ್ಯಕ್ತಿಯ ಅಂತರಂಗದಲ್ಲಿ ಅನುಭವಕ್ಕೆ ಬರುವ ಒಂದು ರೀತಿಯೂ ಹೌದು. ಮಾಘಕವಿ ಸೌಂದರ‍್ಯದ ಈ ಲಕ್ಷಣವನ್ನು ಹೇಳಿರುವ ಸಂದರ್ಭವನ್ನು ಗಮನಿಸಿದರೆ ಇದರ ಅರ್ಥ ಇನ್ನೂ ಸ್ಪಷ್ಟವಾಗುತ್ತದೆ:

ದೃಷ್ಟೋಪಿಶೈಲಃ ಸ ಮುಹುರ್ ಮುರಾರೇಃ
ಅಪೂರ್ವವದ್ವಿಸ್ಮಯಮಾತತಾನ |
ಕ್ಷಣೇ ಕ್ಷಣೇ ಯನ್ನವತಾಮುಪೈತಿ
ತದೇವ ರೂಪಂ ರಮಣೀಯತಾಯಾಃ      (ಶಿಶುಪಾಲ ವಧಾ. ೪-೧೭)

ರೈವತ ಪರ್ವತವು ಮುರಾರಿಯಿಂದ ಎಷ್ಟೋ ಸಲ ನೋಡಲ್ಪಟ್ಟಿದೆಯಾದರೂ ಅದು ಪ್ರತಿಸಲವೂ ಅಪೂರ್ವವಾದ ವಿಸ್ಮಯವನ್ನುಂಟುಮಾಡುತ್ತದೆ. ಈ ಕಾರಣದಿಂದ ಯಾವುದು ಕ್ಷಣಕ್ಷಣವೂ ನವತ್ವವನ್ನು ಪಡೆಯುವುದೊ ಅಂತಹ ರೂಪವೇ ರಮಣೀಯತೆ. ಒಂದು ವಸ್ತು ರಮಣೀಯವಾಗಬೇಕಾದರೆ ಅದು ನಿತ್ಯನೂತನವಾಗಬೇಕು; ಅದು ನಿತ್ಯ ನೂತನ ಎಂದು ಅನುಭವಕ್ಕೆ ಬರಲು ಕಾರಣ ಆ ವಸ್ತು ನಮ್ಮಲ್ಲಿ ಉಕ್ಕಿಸುವ ಅಪೂರ್ವ ವಿಸ್ಮಯ.  ವಸ್ತು ನಮ್ಮಲ್ಲಿ ವಿಸ್ಮಯವನ್ನುಕ್ಕಿಸಲು ಅದರ ನಿರಂತರ ಪರಿವರ್ತನ ಸ್ವಭಾವವೇ ಕಾರಣ. ಕ್ಷಣಕ್ಷಣಕ್ಕೂ ಬದಲಾವಣೆ ಹೊಂದುವುದೇ ಸೌಂದರ‍್ಯದ, ನವತ್ವದ ರಹಸ್ಯ. ನಮಗೆ ಅರಿವಿರಲಿ ಇಲ್ಲದಿರಲಿ ವಸ್ತುಗಳ ಸೌಂದರ‍್ಯದಲ್ಲಿ ನಿರಂತರ ಚಲನೆ, ಪರಿವರ್ತನೆ ಇದೆ. ಅಲ್ಲಿ  ಮೇಲೆ ನೋಡಲು ಸ್ಥಾವರತ್ವ ಕಂಡರೂ ಅದು ನಿರಂತರ ಜಂಗಮದ ಒಂದು ಭಂಗಿ ಮಾತ್ರ. ಈ ಕಾರಣದಿಂದ ಸೌಂದರ‍್ಯ ನಮ್ಮಲ್ಲಿ ‘ಇದೆ ಮೊದಲೆಂಬಂತೆ’ ತೋರಿ ಅಪೂರ್ವ ವಿಸ್ಮಯವನ್ನುಂಟು ಮಾಡುತ್ತದೆ. ವಸ್ತುವಿನ ನವತ್ವವೂ ನಮ್ಮಲ್ಲಿ ನವಭಾವಗಳನ್ನುದ್ದೀಪಿಸುತ್ತದೆ. ವಸ್ತುವಿನಲ್ಲಿ ಗೋಚರಿಸುವ ನವತ್ವಕ್ಕೆ ಕಾರಣ, ವಸ್ತುವಿನಲ್ಲಿ ನಿರಂತರವೂ ಪ್ರಕಾಶಿಸುವ ನಿತ್ಯಶಕ್ತಿಯ ನವತ್ವವೇ.

ನಮಗೆ ಆಗುವ ಲೋಕಾನುಭವ ಐದು ರೀತಿಯಿಂದಾಗುತ್ತದೆ. ಅದನ್ನು ‘ಶಬ್ದ ಸ್ಪರ್ಶರೂಪ ರಸ ಗಂಧ’ ಎಂದು ನಮ್ಮವರು ಹೇಳಿದ್ದಾರೆ. ಇವುಗಳಲ್ಲಿ ದೃಗ್ಗೋಚರವಾಗುವ ರೂಪದ ಬಗ್ಗೆ ಮಹಾಭಾರತದಲ್ಲಿ ಕವಿ ವ್ಯಾಸರು ಹೀಗೆ ವ್ಯಾಖ್ಯಾನಿಸಿದ್ದಾರೆ: “ತೇಜಸ್ಸೆಂಬ ತತ್ವವು ಶಬ್ದ ಸ್ಪರ್ಶರೂಪವೆಂದು ಮೂರುಬಗೆ. ಆ ತೇಜಸ್ಸಿನ ಶಕ್ತಿಯಿಂದಲೇ ರೂಪಗ್ರಹಣವಾಗುವುದು. ಆ ರೂಪ ಹದಿನೆಂಟು ಬಗೆ: ಹ್ರಸ್ವ, ದೀರ್ಘ, ಸ್ಥೂಲ, ಚತುರಸ್ರ, ಅಣು, ವರ್ತುಲ – ಎಂಬ ಆರು ಆಕಾರಗಳು; ಬಿಳುಪು, ಕಪ್ಪು, ಕೆಂಪು, ಹಳದಿ, ನೀಲಿ, ಬೆಳರ್ಗೆಂಪು ಎಂಬ ಆರು ವರ್ಣಗಳು ಒರಟು, ಮೃದು, ನಯ, ಘನ, ಜಿಡ್ಡು, ಕಠಿಣ – ಎಂಬು ಆರು ಗುಣಗಳು”.[2] ಯಾವ ಪರತತ್ವ ಪಂಚಭೂತಾತ್ಮಕವಾದ ಸೃಷ್ಟಿಯಾಗಿ ವಿನ್ಯಾಸಗೊಂಡಿದೆಯೋ, ಅದರ ಒಂದು ಮುಖವಾದ ತೇಜಸ್ಸೇ ಈ ರೂಪವಾಗಿದೆ. ಆ ತೇಜಸ್ಸಿನ ಶಕ್ತಿಯಿಂದಲೇ ನಮ್ಮಲ್ಲಿ ರೂಪಗ್ರಹಣವಾಗುವುದೂ ಕೂಡ. ಆದುದರಿಂದ  ಯಾವುದು ಸೌಂದರ‍್ಯವಾಗಿ ಮೈದೋರಿದೆಯೋ, ಅದೇ ಅರಿಯುವ ಶಕ್ತಿಯೂ ಆಗಿದೆ. ಈ ಸತ್-ಚಿತ್‌ಗಳ ಸಾಮರಸ್ಯದಿಂದಲೇ ಆನಂದರೂಪವಾದ ಸೌಂದರ‍್ಯಬೋಧೆ ನಮ್ಮಲ್ಲಿ ಉಂಟಾಗುತ್ತದೆ. ಆ ಸೌಂದರ‍್ಯ ತೇಜೋರೂಪವಾದುದು – ಎಂದರೆ ಎಲ್ಲದರಲ್ಲಿಯೂ ಬೆಳಗುವ ಒಂದು ಬೆಳಗು. ಆ ತೇಜಸ್ಸಿನ ಪ್ರಕಾಶದಿಂದಲೇ ವಸ್ತು ನಮಗೆ ನವನವವಾಗಿ ತೋರುತ್ತದೆ.

ಸುಂದರವಾದ ವಸ್ತು ಅಪೂರ್ವವಾದ ವಿಸ್ಮಯದಿಂದ ಕ್ಷಣಕ್ಷಣವೂ ನವ ನವವಾಗಿ ಕಾಣಿಸುತ್ತದೆ. ಆದರೆ ಎಲ್ಲರಿಗೂ, ಎಲ್ಲವೂ, ಎಲ್ಲ ಕಾಲದಲ್ಲಿಯೂ ಹೀಗೆಯೇ ಕಾಣಿಸುತ್ತದೆಯೇ? ಒಬ್ಬನಿಗೆ ಸುಂದರವಾಗಿ ಕಂಡದ್ದು ಮತ್ತೊಬ್ಬನಿಗೆ ಸುಂದರವಾಗಿ ಕಾಣದೆ ಹೋಗಬಹುದು. ಈ ಸೌಂದರ‍್ಯ ಅನುಭವಿಸುವವನ ಮನಸ್ಸಿಗೆ ಸಂಬಂಧಿಸಿದ್ದಲ್ಲವೆ? ಈ ಸಂಗತಿಯನ್ನೂ ಸಂಸ್ಕೃತ ಕವಿಗಳು ಹೇಳದೆ ಹೋಗಿಲ್ಲ. ಪಂಚತಂತ್ರದಲ್ಲಿ ಒಂದೆಡೆ ಹೀಗೆ ಹೇಳಲಾಗಿದೆ.

ನಾಸ್ತಿ ಕಿಂಚಿತ್ ಸ್ವಭಾವೇನ ಸುಂದರಂ ವಾಪ್ಯಸುಂದರಂ
ಯದ್‌ಯಸ್ಯ ರೋಚತೇ ತಸ್ಮೈಭವೇತ್ ತತ್ ತಸ್ಯತ್ ಸುಂದರಂ
[3]

‘ಸ್ವಭಾವತಃ ಸುಂದರ ಅಥವಾ ಅಸುಂದರವೆಂಬುದಾವುದೂ ಇಲ್ಲ; ಯಾರಿಗೆ ಯಾವುದು ರುಚಿಸುತ್ತದೆಯೋ ಅದು ಅವನಿಗೆ ಸುಂದರವಾಗಿಯೇ ತೋರುತ್ತದೆ.’ ಇಲ್ಲಿ ಸೌಂದರ‍್ಯವೆನ್ನುವುದು ವ್ಯಕ್ತಿಯ ಅಂತರಂಗದಲ್ಲಿ ಆಗುವ ಒಂದು ಪ್ರಿಯವಾದ ಅನುಭವ; ಅವನಿಗೆ ಆ ವಸ್ತು ರುಚಿಸುವುದರಿಂದ ಅದು ಸುಂದರವಾಗಿ ತೋರುತ್ತದೆ. – ಎನ್ನುವಲ್ಲಿ ಸೌಂದರ‍್ಯ ವ್ಯಕ್ತಿನಿಷ್ಠವಾದ ಅನುಭವ ಎನ್ನುವುದು ವ್ಯಕ್ತವಾಗಿದೆ. ವಸ್ತುವಿಗೆ ನವನವತ್ವವನ್ನು ತಾಳಿ ನಮ್ಮನ್ನು ವಿಸ್ಮಯಗೊಳಿಸುವ ಶಕ್ತಿ ಇರುವುದರಿಂದ ಮಾತ್ರ ಅದು ಸುಂದರವಾಗಿ ತೋರುವುದಿಲ್ಲ; ಅದರಲ್ಲಿ ನವತ್ವವನ್ನು ಕಾಣುವ ರುಚಿಯೂ ನಮ್ಮಲ್ಲಿರುವುದರಿಂದ ಸುಂದರವಾಗಿ ತೋರುತ್ತದೆ.

ಸಂಸ್ಕೃತ ಕವಿಗಳು ಗುರುತಿಸಿದ ಮತ್ತೊಂದು ಅಂಶವೆಂದರೆ, ಸೌಂದರ‍್ಯದ ಸ್ವಸಂಪೂರ್ಣತೆ. ಸುಂದರವಾದ ವಸ್ತು ತನಗೆ ತಾನೇ ಪೂರ್ಣವಾದುದು; ಅದನ್ನು ಬೇರೆ ಅಲಂಕಾರಗಳಿಂದ ಹೆಚ್ಚುಮಾಡಲೆಳಸುವುದು ಅನಗತ್ಯ. ಭಾರವಿ ಕಿರಾತಾರ್ಜುನೀಯದಲ್ಲಿ ಹೇಳುತ್ತಾನೆ:

ಪತಂತಿ ನಾಸ್ಮಿನ್ ವಿಶದಾಃ ಪತತ್ರಿಣೋ ಧೃತೇಂದ್ರ-
ಚಾಪಾನ ಪಯೋದ ಪಂಕ್ತಯಃ |
ತಥಾಪಿ ಪುಷ್ಣಾತಿ ನಭಃ ಶ್ರೀಯಂ ಪರಾಂ ನರಮ್ಯ-
ಮಾಹಾರ್ಯಮಪೇಕ್ಷತೇ ಗುಣಮ್ ||
(ಕಿರಾತಾರ್ಜುನೀಯ : ೪-೨೩)

ಪಕ್ಷಿಗಳು ಹಾರಾಡುತ್ತಿಲ್ಲ, ಕಾಮಧನುವನ್ನು ಧರಿಸಿದ ಮೋಡಗಳ ಸಾಲೂ ತೇಲುತ್ತಿಲ್ಲ. ಆದರೂ ಆಕಾಶ ಎಷ್ಟು ಮನೋಜ್ಞವಾಗಿದೆ! ಸಹಜವಾಗಿಯೇ ಶ್ರೀ (ಸುಂದರ) ಯುತವಾದ ವಸ್ತುವಿಗೆ ಯಾವ ಬೇರೆಯ ಅಲಂಕಾರಗಳೂ ಗುಣವನ್ನು ಹೆಚ್ಚಿಸಲಾರವು – ಎಂದು.

ಮಹಾಕವಿ ಕಾಳಿದಾಸನು ಇದೇ ಅಭಿಪ್ರಾಯವನ್ನು ಶಕುಂತಲೆಯ ಸೌಂದರ‍್ಯವನ್ನು ಕುರಿತ ಈ ವರ್ಣನೆಯಲ್ಲಿ ಹೇಳಿದ್ದಾನೆ :

ಶೈವಲದಿಂದೆ ತಾವರೆ ಮುಸುಕಿದೊಡಂ ರಮಣೀಯಂ ಇಂದುವಿಂ
ಗೀವುದು ಕಾಂತಿಯಂ ಮಲಿನಮಾದೊಡೆಯೇಂ ಕರೆ ವಲ್ಕಲದಿಂದವ
ಪ್ರಾವೃತೆಯಾದೊಡಂ ಬಹುಮನೋಜ್ಞೆ, ಮನೋಹರವಾದ ರೂಪುಗ
ಳ್ಗಾವುದು ತಾನೆ ತಾಳಿದೊಡೆ ಭೂಷಣಮಾಗದೆ ಪೋಪುದುರ್ವಿಯೋಳ್||

(ಶಾಕುಂತಲ : ೧-೧೮. ಬಸವಪ್ಪಶಾಸ್ತ್ರಿ)

‘ತಾವರೆ ಪಾಚಿಯಿಂದ ಆವೃತವಾಗಿದ್ದರೂ ರಮಣೀಯವಾಗಿ ತೋರುತ್ತದೆ. ಚಂದ್ರನು ಕರೆಯಿಂದ ಮಲಿನವಾಗಿದ್ದರೂ ಕಾಂತಿಯನ್ನೇ ಬೀರುತ್ತಾನೆ. ಈ ಶಕುಂತಲೆ ವಲ್ಕಲವನ್ನು ಧರಿಸಿಯೂ ಮನೋಜ್ಞಳಾಗಿಯೇ ತೋರುತ್ತಾಳೆ. ಈ ಲೋಕದಲ್ಲಿ ಮನೋಹರವಾದ ರೂಪಗಳೊಡನೆ ಸೇರಿದ ಯಾವುದು ತಾನೆ ಭೂಷಣವಾಗದೆ ಹೋಗುತ್ತದೆ.’ ಆದುದರಿಂದ ವಸ್ತುವಿನ ಸಹಜ ಸೌಂದರ‍್ಯಕ್ಕೆ ಯಾವ ಭೂಷಣವೂ ಅನಗತ್ಯ; ಸುಂದರವಾದ ವಸ್ತುವಿನ ಸಂಸರ್ಗಕ್ಕೆ ಸಿಕ್ಕಿದ ಯಾವುದಾದರೂ ಭೂಷಣವಾಗಬಲ್ಲುದು. ಕುಮಾರಸಂಭವದಲ್ಲಿ  ಬೇರೊಂದೆಡೆ ಕಾಳಿದಾಸನು ಮತ್ತೆ ಮೇಲಿನ ಮತವನ್ನೇ ಸಮರ್ಥಿಸಿದ್ದಾನೆ. ಹರನೊಡನೆ ಮದುವೆಗೆ ಸಿದ್ಧಳಾದ ಪಾರ್ವತಿಯನ್ನು ಪಸಾಯಿತೆಯರು ಸಿಂಗರಿಸಿದರಂತೆ:

ಒಳ್ಳೆಯೆಡೆಯೊಗೆದಿರುವ ನೈದಿಲೆಯ ತೆರದ
ಕಂಗಳನು ನೋಡಿದ ಪಸಾಯಿತೆಯರಂದು
ಕಾಳಾಂಜನವನವಳಿಗಿಟ್ಟುದದರೊಂದು
ಶೋಭಾತಿಶಯಕಲ್ತು, ಮಂಗಳವದೆಂದು.
(ಕುಂಸಂ. ೭.೨೦)[4]

‘ಪಾರ್ವತಿಯ ಕಣ್ಣಿಗೆ ಪಸಾಯಿತೆಯರು ಕಾಳಾಂಜನವನ್ನು ಲೇಪಿಸಿದರು – ಕಣ್ಣಿನ  ಅಲಂಕಾರವನ್ನು ಹೆಚ್ಚಿಸಲೆಂದಲ್ಲ; ಹಾಗೆ ಅಂಜನವನ್ನು ಹಚ್ಚುವುದು ಮಂಗಳವೆಂದು ತಿಳಿದು’! ವಿಕ್ರಮೋರ್ವಶೀಯದಲ್ಲಿ ಪುರೂರವನು ಊರ್ವಶಿಯ ಲಾವಣ್ಯವನ್ನು ವರ್ಣಿಸುವಲ್ಲಿ “ಸಿಂಗರಕೆ ಸಿಂಗರವು ತೊಡವಿಂಗೆ ತೊಡವವಳು” (ವಿಕ್ರಮೋರ್ವಶೀಯ. ೨-೩) ಎಂದು ಹೇಳುತ್ತಾನೆ. ಕುಸುಮದೇವನೆಂಬ ಕವಿ ‘ದೃಷ್ಟಾಂತ ಶತಕ” (ಶ್ಲೋಕ ೪೯)ದಲ್ಲಿ “ಸ್ವಭಾವ ಸುಂದರಂ ವಸ್ತು ನ ಸಂಸ್ಕಾರಮಪೇಕ್ಷತೇ’‘ ಎನ್ನುತ್ತಾನೆ. ಭಾಸ ಮಹಾಕವಿ “ಸರ‍್ವ ಶೋಭನೀಯಂ ಸುರೂಪಂ ನಾಮ” (ಸುರೂಪವೆನ್ನುವುದು ಸರ್ವ ಶೋಭನೀಯವಾದುದು), ಎಂದು ಪ್ರತಿಮಾನಾಟಕದಲ್ಲಿ ಹೇಳಿದ್ದಾನೆ. ಹೀಗೇ ಸಂಸ್ಕೃತ ಕವಿಗಳು ಸೌಂದರ‍್ಯ ಎನ್ನುವುದು ಸ್ವಸಂಪೂರ್ಣವಾದುದು: ಅನ್ಯಾಲಂಕಾರ ನಿರಪೇಕ್ಷಣೀಯವಾದುದು ಎನ್ನುವ ಅಂಶವನ್ನು ಗುರುತಿಸಿದ್ದಾರೆ.

ಸುಂದರವಾದ ವಸ್ತು ಸರ್ವಕಾಲದಲ್ಲಿಯೂ ಸುಂದರವಾಗಿಯೇ ತೋರುತ್ತದೆ. ಕೀಟ್ಸ್ ಕವಿ ಹೇಳಿದ, ‘A thing of Beauty is a joy for every’  ಎಂಬುದನ್ನು ಇಲ್ಲಿ ನೆನೆಯಬಹುದು. ಕಾಳಿದಾಸನ ಶಾಕುಂತಲ ನಾಟಕದಲ್ಲಿ, ಶಕುಂತಲೆಯ ವಿರಹದಿಂದ ಕೃಶನಾದ ರಾಜನನ್ನು ನೋಡಿ ಕಂಚುಕಿಯು ‘ಸರ್ವಾವಸ್ಥೆಗಳಲ್ಲಿಯೂ ಸೌಂದರ‍್ಯಶಾಲಿಗಳ ಆಕೃತಿಯು ರಮಣೀಯವಾದುದು’ (ಶಾಕುಂತಲ ೮ನೇ ಅಂಕ) ಎನ್ನುತ್ತಾನೆ. ಈ ಮಾತಿನಲ್ಲಿ ಕಾಳಿದಾಸ ಸೌಂದರ‍್ಯದ ನಿರಂತರ ಆನಂದದಾಯಕವಾದ ಗುಣದ ವಿಚಾರವನ್ನು ಸೂಚಿಸಿದ್ದಾನೆ.

ಪಾರ್ವತಿಯ ದಿವ್ಯ ಸೌಂದರ‍್ಯವನ್ನು ವರ್ಣಿಸುತ್ತಾ, ಕವಿ ಕಾಳಿದಾಸ ಹೀಗೆ ಹೇಳುತ್ತಾನೆ:

ಚಂದಿರನ ಹೊಂದಿದಂದರವಿಂದ ಗುಣದೊರೆಯ
ದರವಿಂದದೊಳು ದೊರೆಯದಿಂದುಕಾಂತಿ
ಎಂದು ಚಂಚಲೆ ಲಕ್ಷ್ಮಿ ಉಭಯಕಾಂತಿಯನುಮೆಯ
ಮೊಗದಿ ನೆಲಸಿದಳಲ್ಲಿ ನೆಲಸಿದಂದು.     (ಕು.ಸಂ. ೧.೪೩)

ಚಂದ್ರನನ್ನು ಸೇರಿದರೆ ಅರವಿಂದದ ಕಾಂತಿಯೂ, ಅರವಿಂದವನ್ನು ಹೊಂದಿದರೆ ಚಂದ್ರನ ಕಾಂತಿಯೂ ದೊರೆಯದೆಂದು – ಅವೆರಡನ್ನೂ ಚಂಚಲೆಯಾದ ಲಕ್ಷ್ಮಿ ಉಮೆಯ ಮುಖದಲ್ಲಿ ನೆಲಸಿ ಪಡೆದಳಂತೆ! ಕಾಳಿದಾಸನ ಇದೇ ಭಾವವನ್ನು ಶ್ರೀ ಹರ್ಷನು ನೈಷಧೀಯ ಚರಿತೆಯಲ್ಲಿ ದಮಯಂತಿಯ ವರ್ಣನೆಯನ್ನು ಮಾಡುವಾಗ ಬಹು ಚಮತ್ಕಾರವಾದ ರೀತಿಯಲ್ಲಿ ಬಳಸಿಕೊಂಡಿದ್ದಾನೆ:

ದಿವಾರಜನ್ಯೋ ರವಿಸೋಮಭೀತೇ
ಚಂದ್ರಾಂಬುಜೇ ನಿಕ್ಷಿಪ್ತಃ ಸ್ವಲಕ್ಷ್ಮೀಮ್
ಅಸ್ಯಾಯದಾಸ್ತೇನತದಾತಯೋಃ ಶ್ರೀರೇಕಶ್ರೀಯೇದಂತು ನ ಕಾಂತಮ್ |

(ನೈಷಧೀಯ ಚರಿತೆ : ೭.೫೫)

ಚಂದ್ರನೂ ಕಮಲವೂ ರವಿ ಸೋಮಭೀತರು, ಆದ್ದರಿಂದ ಅವರು ತಮ್ಮ ಸೌಂದರ‍್ಯ ಎಲ್ಲಿ ಹೋದೀತೋ ಎಂದು ದಮಯಂತಿಯ ಮುಖದ ಸೌಂದರ‍್ಯದಲ್ಲಿ ತಮ್ಮ ಸೌಂದರ‍್ಯವನ್ನು ಇಟ್ಟಿದ್ದಾರೆ. ಈ ಕಾರಣದಿಂದ ಅವಳ ಮುಖ ಸರ್ವದಾ ಸುಂದರವಾಗಿದೆ!

ಮೇಲೆ ಹೇಳಿದ ಎರಡು ಉದಾಹರಣೆಗಳಲ್ಲಿ ಗಮನಿಸಬೇಕಾದ ಒಂದು ಅಂಶವಿದೆ. ಸಂಸ್ಕೃತ ಕವಿಗಳು ಸೌಂದರ‍್ಯವನ್ನು ಸೂಚಿಸಲು ಶ್ರೀ, ಲಕ್ಷ್ಮೀ, ಕಾಂತಿ ಎಂಬ ಮಾತುಗಳನ್ನು ಬಳಸಿದ್ದಾರೆ. ಚಂದ್ರ ಮತ್ತು ಕಮಲ ಎರಡೂ ಲಕ್ಷ್ಮಿಯ ಎಂದರೆ ಸೌಂದರ‍್ಯದ ನಿವಾಸ ಎನ್ನುವುದು ಸಂಸ್ಕೃತಕವಿಗಳ ಅಭಿಪ್ರಾಯ. ಹೆಣ್ಣಿನ ಚೆಲುವನ್ನು ವರ್ಣಿಸಬೇಕಾದರೆ ನಮ್ಮ ಸಂಸ್ಕೃತ ಕವಿಗಳ ಕಾವ್ಯದಲ್ಲಿ ಚಂದ್ರ ಮತ್ತು ಕಮಲಗಳಿಲ್ಲದೆ ಸಾಧ್ಯವೇ ಆಗಿಲ್ಲ.[5]

ಅಷ್ಟೇ ಅಲ್ಲ, ಸಂಸ್ಕೃತ ಕವಿಗಳ ದೃಷ್ಟಿಗೆ ಚಂದ್ರನೇ ಸೌಂದರ‍್ಯದ ಸಾರ; ಅವನೇ ಸೌಂದರ‍್ಯದ ಅಧ್ಯಕ್ಷ. ಸಂಸ್ಕೃತ ಕಾವ್ಯಗಳಲ್ಲಿ ಚಂದ್ರನನ್ನು ‘ರಸಾತ್ಮಕ’ನೆಂದು ಕರೆಯಲಾಗಿದೆ. ಭಗವದ್ಗೀತೆಯಲ್ಲೂ ‘ಪುಷ್ಣಾಮಿ ಚೌಷಧೀಸ್ಸರ್ವಾಃಸೋಮೋ ಭೂತ್ವ ರಸಾತ್ಮಕಃ’ (ಗೀತ XV-೧೩) ‘ನಾನು ಚಂದ್ರನಲ್ಲಿ ರಸಾತ್ಮಕನಾಗಿ ಓಷಧಿಗಳನ್ನು ತುಂಬುತ್ತೇನೆ’ ಎಂಬ ಮಾತು ದೊರೆಯುತ್ತದೆ. ಕಾಳಿದಾಸನ ಕುಮಾರ ಸಂಭವದಲ್ಲಿ ‘ಆ ರಸಾತ್ಮಕನೆನಿಸಿದುಡುಪತಿಯ ಕಿರಣಂ’ (ಕು.ಸಂ. ೫-೨೨) ಎಂಬ ಪ್ರಯೋಗವಿದೆ. ಚಂದ್ರನು ರಸಾತ್ಮಕನಾದುದರಿಂದ ಬೆಳುದಿಂಗಳು ಸೌಂದರ‍್ಯದ ಒಂದು ಪ್ರಧಾನ ಸಾಮಗ್ರಿ ಎಂದು ಪರಿಗಣಿತವಾಗಿದೆ. “ಚಂದ್ರನನ್ನು ರಸಾತ್ಮಕನೆಂದು ಕರೆದಿರುವುದರಲ್ಲಿ, ‘ರಸಾತ್ಮಕ’ ಎನ್ನುವುದರ ಅರ್ಥವೇನೇ ಇರಲಿ, ಚಂದ್ರನನ್ನು ಸೌಂದರ್ಯದ ಅಧಿದೇವತೆ ಎಂದು ಗುರುತಿಸಿರುವುದು ಗಮನಾರ್ಹವಾದ ಅಂಶ.”[6]

ನವತ್ವ, ಸ್ವಸಂಪೂರ್ಣತೆ, ಮತ್ತು ನಿರಂತರಾನಂದದಾಯಕತ್ವ – ಇವು ಮೂರು ಸೌಂದರ‍್ಯದ ಮುಖ್ಯ ಲಕ್ಷಣಗಳು ಎಂಬುದನ್ನು ಸಂಸ್ಕೃತ ಕವಿಗಳು ಗುರುತಿಸಿದ್ದಾರೆ.

ಸುಂದರವಾದ ವಸ್ತುಗಳಲ್ಲಿ ದೃಗ್ಗೋಚರವಾದ ಚೆಲುವಿನ ವಿವರಗಳಿಗೆ ಆದಿಕವಿ ವಾಲ್ಮೀಕಿ ಎತ್ತಿದ ಕೈ. ರಾಮಾಯಣದಲ್ಲಿ ಕಾಣುವ ಗಿರಿವನಗಳ ನಿಸರ್ಗ ರಮ್ಯತೆಯನ್ನು, ಬಗೆ ಬಗೆಯ ಋತುಗಳಲ್ಲಿ ಪ್ರಕೃತಿಯಲ್ಲಾಗುವ ಮಾರ್ಪಾಟುಗಳನ್ನೂ ಸಹಜ ಸುಂದರವಾದ ರೀತಿಯಲ್ಲಿ ಆದಿಕವಿ ಚಿತ್ರಿಸಿದ್ದಾನೆ. ಕಾಳಿದಾಸಾದಿ ಕವಿಗಳಿಗೂ ಆದಿಕವಿಯಿಂದಲೇ ಸ್ಫೂರ್ತಿ. ವಸ್ತುವಷ್ಟನ್ನೇ ತೆಗೆದುಕೊಂಡರೆ ಅಲ್ಲಿ ಗೋಚರಿಸುವ ಲಾಲಿತ್ಯ, ಮಾರ್ದವತೆ, ವರ್ಣವಿನ್ಯಾಸ, ಇತ್ಯಾದಿಗಳನ್ನು ಸಂಸ್ಕೃತ ಕವಿಗಳು ವರ್ಣಿಸಿದ್ದಾರೆ. ಕಾಳಿದಾಸನ ‘ಋತುಸಂಹಾರ’ದಲ್ಲಾಗಲೀ, ‘ಮೇಘದೂತ’ದಲ್ಲಾಗಲೀ ಎಂತಹ ರಮ್ಯವಾದ ವರ್ಣನೆಯ ಹೊಳೆ ಹರಿದಿದೆ! ಮಾನವ ಸೌಂದರ‍್ಯವನ್ನು ಬಣ್ಣಿಸುವಲ್ಲಿ ಅದು ಪ್ರಕೃತಿಯ ಚೆಲುವಿಗೂ ಮಿಗಿಲಾದುದು ಎಂಬಂತೆ ಈ ಕವಿಗಳು ಚಿತ್ರಿಸಿದ್ದಾರೆ. ಕಾಳಿದಾಸನು ಪಾರ್ವತಿಯ ಸೌಂದರ‍್ಯವನ್ನು ಅಡಿಯಿಂದ ಮುಡಿಯವರೆಗೂ ಹದಿನಾರು ಪದ್ಯಗಳಲ್ಲಿ ವರ್ಣಿಸಿದ್ದಾನೆ. ಮೇಘದೂತದಲ್ಲಿ ಯಕ್ಷನು ತನ್ನ ಸತಿಯ ಸೌಂದರ‍್ಯವನ್ನು ವರ್ಣಿಸುವ ಚಿತ್ರಣವೂ ಕಣ್ಣಿಗೆ ಕಟ್ಟುವಂತಿದೆ. ಮಾನವಸೌಂದರ‍್ಯ, ಅಪ್ಸರಸೌಂದರ‍್ಯ, ದೇವಸೌಂದರ‍್ಯ, ಮತ್ತು ನಿಸರ್ಗಸೌಂದರ‍್ಯಗಳನ್ನು ಕಾಳಿದಾಸ ವರ್ಣಿಸಿದ್ದಾನೆ. ಪಾರ್ವತಿಯನ್ನು ಕುರಿತು ಮಾಡುವ ಒಂದೊಂದು ವರ್ಣನೆಯಲ್ಲಿಯೂ ಕವಿ ದಿವ್ಯ ಸೌಂದರ‍್ಯದ ಒಂದೊಂದು ಕಿರಣವನ್ನು ತೆರೆಯುತ್ತಾನೆ. ಸೌಂದರ‍್ಯ ಎನ್ನುವುದು ಕೇವಲ ಸುಂದರವಾದ ಅವಯವಗಳ ಸಮುಚ್ಚಯವಲ್ಲ; ಅವುಗಳ ಸಾಮರಸ್ಯದಿಂದ ಹೊರ ಹೊಮ್ಮುವ, ಅಶೃಂಖಲವಾದ ಒಂದು ಚೈತನ್ಯ. ಪಾರ್ವತಿಯ ಸೌಂದರ‍್ಯ –

ಸೂರ‍್ಯಾಂಶುವರಳಿಸುವ ಅರವಿಂದದರಲಿನೊಲು
ಕುಂಚವುನ್ಮೀಲಿಸುವ ಚಿತ್ರದವೊಲು
ನವರುಚಿರ ಯೌವನವು ಸುವ್ಯಕ್ತಗೊಳಿಸಿರಲು
ಚತುರಸ್ರ ಶೋಭಿಯಾಯ್ತವಳ ವಪುವು.  (ಕು.ಸಂ. ೧.೩೩)

ಎನ್ನುತ್ತಾನೆ. ಸೌಂದರ‍್ಯವೆಂಬುದೊಂದು ಕಲಾಸೃಷ್ಟಿಯಂತೆ. ಲೋಕದ ಚೆಲುವು ಕೇವಲ ವಸ್ತುವಿನಲ್ಲಿದ್ದುದಲ್ಲ; ಅದು ಬೇರೊಂದು ಶಕ್ತಿಯ ಸ್ಪರ್ಶದಿಂದ ಉನ್ಮೀಲನಗೊಂಡದ್ದು. ಬ್ರಹ್ಮನು ಪಾರ್ವತಿಯನ್ನು ಸೃಷ್ಟಿಸುವಾಗ ಹೀಗೆ ಮಾಡಿದನಂತೆ;

ಎಲ್ಲ ತೆರನುಪಮಾನಕರಣಗಳನಳವಡಿಸಿ
ಎಡೆಯರಿಯುತನುಗೊಳಿಸಿ ನೋಂತು ಶ್ರಮಿಸಿ
ವಿಧಿಯವಳ ಸೃಜಿಸಿದನು ಸರ್ವಸೌಂದರ‍್ಯವನು
ಒಂದೆಡೆಯೆ ತಾನೊಮ್ಮೆ ನೋಡಲೆಳಸಿ.   (ಕುಂ. ಸಂ. ೧-೪೯)

ಲೋಕದ ಸಮಸ್ತ ಸೌಂದರ‍್ಯವನ್ನೂ ಒಂದೆಡೆಯಲ್ಲಿ ನೋಡಬೇಕೆಂಬ ಬಯಕೆಯಿಂದ, ಬ್ರಹ್ಮನು ಇವಳನ್ನು ಸೃಷ್ಟಿಸಿದನಂತೆ. ಹಾಗೆ ಮಾಡುವಲ್ಲಿ ಸಕಲ ಸೌಂದರ‍್ಯವನ್ನೂ ಒಂದೆಡೆ ಸೇರಿಸಿದ್ದರಿಂದ ಪಾರ್ವತಿಯ ಚೆಲುವು ಮೂಡಲಿಲ್ಲ; ಸೌಂದರ‍್ಯವನ್ನು ಬ್ರಹ್ಮನು ಪರಿಭಾವಿಸಿ, ವಿಶೇಷಶ್ರಮದಿಂದ ‘ಎಡೆಯರಿಯುತನುಗೊಳಿಸಿ’ದನಂತೆ. ಎಂದರೆ ಉಚಿತವಾಗಿ ಅವುಗಳನ್ನು ಹೊಂದಿಸಿದನಂತೆ. ಎಂದರೆ ಸೌಂದರ‍್ಯ ನಿರ್ಮಾಣ ಎನ್ನುವುದು ಪರಿಭಾವನೆಯಿಂದ ಮತ್ತು ಶ್ರಮದಿಂದ, ಔಚಿತ್ಯವರಿತು ಮಾಡಿದ ಮಾಟ. ಶಕುಂತಲೆಯ ಸೌಂದರ‍್ಯವನ್ನು ದುಷ್ಯಂತನ ಮಾತಿನಲ್ಲಿ ವರ್ಣಿಸುವಲ್ಲಿ ಕವಿ ಇದೇ ಅಭಿಪ್ರಾಯವನ್ನು ಸ್ಪಷ್ಟಗೊಳಿಸಿದ್ದಾನೆ-

ಪ್ರಾಣಂಬೊಯ್ದನೊ ಚಿತ್ರಿಸುತ್ತಮವಳಂ ಸೌಂದರ‍್ಯಸಾರಂಗಳಿಂ
ವಾಣೀವಲ್ಲಭನೋವೊ ನಿರ್ಮಿಸಿದನೋ ಮೇಣ್ ಚಿತ್ತದಿಂ ಗೆಯ್ದನೋ
ಜಾಣಂ ಬ್ರಹ್ಮನುಮತ್ತಮಾಕೆಯೊಡಲಂ ನೋಡಲ್ಕದೇನೆಂದಪೆಂ
ಕ್ಷೋಣೀ ಭಾಗದೆ ಬೇರೆ ತೋರ್ಕುಮೆನಗಾಸ್ತ್ರೀರತ್ನಸೃಷ್ಟಿಕ್ರಮಂ
(ಶಾಕುಂತಲ : ೨.೪೪. ಬಸವಪ್ಪಶಾಸ್ತ್ರಿಗಳ ಅನುವಾದ)

ವಿಕ್ರಮೋರ್ವಶೀಯದಲ್ಲಿ ಕವಿ ಇನ್ನೂ ಒಂದು ಹೆಜ್ಜೆ ಮುಂದುವರಿದು, ಊರ್ವಶಿಯ ಸೌಂದರ‍್ಯವನ್ನು ವರ್ಣಿಸುವಲ್ಲಿ ಇಂತಹ ಸೌಂದರ‍್ಯವನ್ನು ಸೃಷ್ಟಿಸಲು ವೇದಾಭ್ಯಾಸ ಜಡನಾದ ಬ್ರಹ್ಮನಿಂದ ಎಲ್ಲಿ ಸಾಧ್ಯ ಎನ್ನುತ್ತಾನೆ ಕಾಳಿದಾಸ. ಭವಭೂತಿ ‘ಮಾಲತೀ ಮಾಧವ’ದಲ್ಲಿ ಮಾಲತಿಯ ಸೌಂದರ‍್ಯವನ್ನು ಕುರಿತು :-

ಸಾರಾಮಣೀಯಕ ನಿಧೇರಧಿದೇವತಾ ವಾ
ಸೌಂದರ‍್ಯಸಾರ ಸಮುದಾಯ ನಿಕೇತನಂ ವಾ
ತಸ್ಯಾಃ ಸಖೇನಿಯತಮಿಂದು ಸುಧಾಮೃಣಾಲ
ಜ್ಯೋತ್ಸ್ನಾದಿ ಕಾರಣಮಭೂನ್ಮದನಶ್ಚವೇಧಾಃ          (ಅಂಕ ೧,೨೧)

ಇವಳು ಸೌಂದರ‍್ಯ ಅಧಿದೇವತೆಯೋ, ಸೌಂದರ‍್ಯ ಸಾರಸಮುದಾಯನಿಕೇತನವೋ, ಸಖೀ ಇವಳು ನಿಜವಾಗಿಯೂ ಚಂದ್ರಸುಧಾ ಮೃಣಾಲಗಳಿಂದ ಆ ಮದನನಿಂದಲೇ ಸೃಷ್ಟಿ ಸಲ್ಪಟ್ಟಿರಬೇಕು – ಎಂದು ಹೇಳಿಸಿದ್ದಾನೆ. ಹೀಗೆ ಸಂಸ್ಕೃತ ಕವಿಗಳು ಸಮಸ್ತ ಪ್ರಕೃತಿಯ ಚೆಲುವಿನ ಸಾರವನ್ನು ಹೆಣ್ಣಿನ ಮೈ ಚೆಲುವಿನಲ್ಲಿ ಚಿತ್ರಿಸಿದ್ದಾರೆ. ಸೌಂದರ‍್ಯ ಎನ್ನುವುದು ವಸ್ತುಗಳಲ್ಲಿರುವ ಮನಮೋಹಕವಾದ ಒಂದು ಗುಣವಲ್ಲ. ಅದು ಲೋಕದ ಸಮಸ್ತ  ಸೌಂದರ‍್ಯದ ಸಂಯೋಜನೆಯಿಂದ, ಪರಬ್ರಹ್ಮನ ಪರಿಭಾವನೆಯ ಪ್ರತಿಭಾ ಸೃಷ್ಟಿ. ಅದು ಕೇವಲ ಮರ್ತ್ಯವಲ್ಲ; ದೈವಿಕವಾದುದು. ಆದುದರಿಂದಲೇ ಅದು ನಿರಂತರ ಆನಂದದಾಯಕವಾದುದು – ಎನ್ನುವ ಅಂಶವನ್ನು ಪ್ರಕಟಪಡಿಸಿದ್ದಾರೆ.

ಲೋಕದ ಈ ಸುಂದರವಾದ ಆವರಣದಲ್ಲಿ ಈ ಜೀವ ಜನ್ಮ ಜನ್ಮಾಂತರಗಳಿಂದಲೂ ಹರಿದು ಬರುತ್ತಿದೆ. ಈ ಕಾರಣದಿಂದ ಲೋಕದ ವಸ್ತುಗಳಿಗೂ ಈ ಜೀವಕ್ಕೂ ಜನನಾಂತರ ಸೌಹೃದವಿದೆ. ಆದ್ದರಿಂದಲೇ ಸುಂದರವಾದ ಗಾನವನ್ನಾಲಿಸಿದಾಗ, ಸುಂದರವಾದ ನೋಟವನ್ನು ನೋಡಿದಾಗ, ನಮ್ಮಲ್ಲಿ ಒಂದು ಬಗೆಯ ತನ್ಮಯತೆ, ಅಪೂರ್ವವಾದ ಬಾಂಧವ್ಯದ ಅನುಭವ ಉಂಟಾಗುತ್ತದೆ – ಎನ್ನುವ ಅಂಶವನ್ನು ಕಾಳಿದಾಸನು ‘ಭಾವಸ್ಥಿರಾಣಿ ಜನನಾಂತರ ಸೌಹೃದಾನಿ’ (ಶಾಕುಂತಲ) ಎಂಬ ಮಾತಿನಲ್ಲಿ ಸೂಚಿಸಿದ್ದಾನೆ. ಮಾನವನಲ್ಲಿ ಆಗುವ ಸೌಂದರ‍್ಯಬೋಧೆಗೆ ಕಾರಣ ಅವನಿಗೂ ಈ ಲೋಕದ ವಸ್ತುಗಳಿಗೂ ಇರುವ ಅಬೋಧ ಪೂರ್ವವಾದ ಜನನಾಂತರ ಸೌಹೃದ.

ವಸ್ತುವೊಂದು ಸುಂದರವಾಗಿದೆ ಎಂದು ತೋರುವುದು ಅದರ ವರ್ಣಗಳ ಮೂಲಕ. ವರ್ಣವೇ ಸೌಂದರ‍್ಯದ ಭಾಷೆ. ನಮ್ಮ ಇಂದ್ರಿಯಗಳಿಗೆ ಅದರಲ್ಲೂ ಚಕ್ಷುಸ್ಸಿಗೆ ಅದು ಗೋಚರವಾಗುವುದು ವರ್ಣದಿಂದ. ಸೌಂದರ‍್ಯದ ಮುಖ್ಯಲಕ್ಷಣವಾದ ಈ ವರ್ಣವಿಲಾಸವನ್ನು ಕಾಳಿದಾಸ ಮತ್ತು ಬಾಣ ಇವರಿಬ್ಬರು ಗುರುತಿಸಿರುವಷ್ಟು ವಿವರವಾಗಿ ಉಳಿದವರಾರೂ ಗುರುತಿಸಿಲ್ಲವೆನ್ನಬಹುದು. ಕಾಳಿದಾಸನು ಮಾಡುವ ಈ ಸಂಧ್ಯಾ ಸೌಂದರ‍್ಯವನ್ನು ನೋಡಿ:

ಕೆಂಪು ಅರಿಸಿನ ಕಂದು ಬಣ್ಣ ಬಣ್ಣದೊಳಿಂದು
ಮೋಡಗಳ ತುದಿನೋಡು ಹೊಳೆಯುತಿಹುದು.
ಬೈಗು ಕುಂಚವ ಪಿಡಿದು ಬರೆದವೋಲಿರುವುದಿದು
ಹೇ ಕುಟಿಲ ಕೇಶಿ ನೀ ನೋಡಲೆಂದು           (ಕು.ಸಂ.೮.೪೫)

ಸಿಂಹಕೇಸರದ ಸಟೆಗಳಲ್ಲಿ ಚಿಗುರೆಲೆಗಳಿಡಿದಿರುವ
ಮರಗಳಲಿ ಧಾತು ಗಿರಿಯಗ್ರಗಳಲಿ,
ಅಸ್ತಗಿರಿ ತಾನೆಯೆ ವಿಭಾಗಿಸಿದ ವೋಲಿಹದು
ನೋಡುತ್ತ ಚೆಲ್ಲಿರುವ ಬೈಗುಗೆಂಪು !           (ಕು.ಸಂ. ೮.೪೬)

ಇಲ್ಲಿ ಸಂಧ್ಯೆಯ ಕುಂಚದಿಂದ ಆದ ವರ್ಣ ವಿಲಾಸವನ್ನು ಕವಿ ರಮ್ಯವಾಗಿ ಚಿತ್ರಿಸಿದ್ದಾನೆ. ಸಂಸ್ಕೃತ ಕವಿಗಳಲ್ಲಿ ಈ ವರ್ಣಸೌಂದರ‍್ಯದ ಚಿತ್ರಣದಲ್ಲಿ ಬಾಣಕವಿ ಅಗ್ರಗಣ್ಯ. ಬಾಣ ಅದ್ಭುತ ವರ್ಣಶಿಲ್ಪಿ. ಅವನು ತೋರುವಂತಹ ವರ್ಣಸೌಂದರ‍್ಯದ ತರಂಗಗಳನ್ನು ಮತ್ತಾವ ಸಂಸ್ಕೃತ ಕವಿಯೂ ತೋರಿಲ್ಲ. “ಸಂಸ್ಕೃತ ಕವಿಗಳು ಕೆಂಪುಬಣ್ಣವನ್ನು ಕೆಂಪುಬಣ್ಣವೆಂದು ಹೇಳಿ ತೃಪ್ತರಾಗುತ್ತಾರೆ. ಆದರೆ ಕಾದಂಬರೀಕಾರನ ಕೆಂಪು ಬಣ್ಣದಲ್ಲಿ ಇರುವ ಭೇದಗಳಿಗೆ ಮಿತಿಯೇ ಇಲ್ಲ. ಒಂದು ಕೆಂಪುಬಣ್ಣವು ಅರಗಿನಂತೆ ಕೆಂಪಾದುದು, ಇನ್ನೊಂದು ಪಾರಿವಾಳದ ಕಾಲಿನ ಬಣ್ಣದಂತಿರುವುದು. ಮತ್ತೊಂದು ರಕ್ತದಲ್ಲಿ ತೊಯ್ದ ಸಿಂಹದ ಉಗುರುಗಳಿಗೆ ಸಮಾನವಾದುದು :

“ಏಕದಾತು ಪ್ರಭಾತ ಸಂಧ್ಯಾರಾಗ ಲೋಹಿತೇ ಗಗನತಲೇ ಕಮಲಿನೀ ಮಧುರಕ್ತ ಪಕ್ಷ ಸಂಪುಟೀ ವೃದ್ಧಹಂಸೇ ಇವ ಮಂದಾಕಿನೀ ಪುಲಿನಾದಪರ ಜಲನಿಧಿ ತಟಮವತರತಿ ಚಂದ್ರಮಸಿಪರಿಣತ ರಂಕುರೋಮಪಾಂಡುನಿ ವ್ರಜತಿ ವಿಶಾಲ ತಾಮಾಶಾಚಕ್ರವಾಲೇ, ಗಜರುಧಿರ ರಕ್ತಹರಿಸಟಾಲೋಮ ಲೋಹಿನೀಭಿಃ ಆತಪ್ತ ಲಾಕ್ಷಿಕ ತಂತುಪಾಟಲಾಭಿಃ ಆ ಯಾಮಿನೀಭಿರ ಶಿಶಿರ ಕಿರಣ ದೀಧಿತಿಭಿಃ ಪದ್ಮರಾಗ ಶಲಾಕಸಮ್ಮಾರ್ಜನೀಭಿರಿವ ಸಮುತ್ಸಾರ್ಯಮಾಣೇ ಗಗನಕುಟ್ಟಿಮ ಕುಸುಮ ಪ್ರಕರೇ ತಾರಾಗಣೇ”

ಒಂದು ದಿನ ಆಕಾಶವು ಪ್ರಭಾತ ಸಂಧ್ಯಾರಾಗದಿಂದ ಕೆಂಪೇರಿದಾಗ, ಚಂದ್ರನು ಕಮಲದ ಮಕರಂದದಿಂದ ಕೆಂಪಾದ ರೆಕ್ಕೆಗಳುಳ್ಳ ವೃದ್ಧಹಂಸದಂತೆ ಗಂಗಾನದಿಯ ಮರಳುದಿಣ್ಣೆಗಳಿಂದ ಪಶ್ಚಿಮ ಸಮುದ್ರ ತಟಕ್ಕೆ ಇಳಿಯುತ್ತಿದ್ದನು; ಎಲ್ಲಾ ಕಡೆಗಳಲ್ಲಿಯೂ ವೃದ್ಧರಂಕುಮೃಗದ ತುಪ್ಪಟದ ಬಣ್ಣವುಳ್ಳ ಬಿಳುಪು ಕ್ರಮ ಕ್ರಮವಾಗಿ ಹರಡುತ್ತಿತ್ತು; ಆನೆಯ ರಕ್ತದಿಂದ ಕೆಂಪಾದ ಸಿಂಹದ ಕೇಸರದಂತೆ ಲೋಹಿತವಾಗಿಯೂ ಸ್ವಲ್ಪ ಕಾಸಿದ ಲಾಕ್ಷಾಂತತುವಿನಂತೆ ಪಾಟಲವರ್ಣವಾಗಿಯೂ ಇದ್ದ ದೀರ್ಘವಾದ ಸೂರ‍್ಯಕಿರಣಗಳು, ಪದ್ಮರಾಗದ ಹಿಡಿಯುಳ್ಳ ಸಮ್ಮಾರ್ಜನಿಯಿಂದ ನಕ್ಷತ್ರಗಳೆಲ್ಲವನ್ನೂ ಗಗನತಳದಿಂದ ಉದುರಿಸುತ್ತಿದ್ದುವು.

ಬಣ್ಣವನ್ನು ಪ್ರದರ್ಶಿಸುವುದರಲ್ಲಿ ಕವಿಗೆ ಎಷ್ಟು ಆನಂದ ! ಅವನಿಗೆ ಆಯಾಸವಾಗಲೀ ತೃಪ್ತಿಯಾಗಲೀ ಇರುವುದಿಲ್ಲ ! ಆ ಬಣ್ಣವು ಕೇವಲ ಚಿತ್ರಪಟದ ಬಣ್ಣವಲ್ಲ; ಅದರಲ್ಲಿ ಕವಿತ್ವದ, ಎಂದರೆ ಭಾವದ ಬಣ್ಣವಿದೆ… ಇಂತಹ ವರ್ಣ ಸೌಂದರ‍್ಯ ವಿಕಾಸ ಶಕ್ತಿಯನ್ನು ಮತ್ತಾವ ಸಂಸ್ಕೃತ ಕವಿಯೂ ತೋರಿಸಿಲ್ಲ.”[7]

ಕಾಳಿದಾಸ ಕವಿಕುಲಗುರು. ಅವನು ಸಂಸ್ಕೃತ ಸಾಹಿತ್ಯದ ಸೌಂದರ್ಯ ಬೋಧೆಯ ಅತ್ಯುತ್ತಮ ಪ್ರತಿನಿಧಿ. ಅವನು ಪ್ರಧಾನವಾಗಿ ಸೌಂದರ‍್ಯದ ಕವಿ. “ಹಿರಿಯ ಕವಿಗಳ ದಿವ್ಯ ಪ್ರತಿಭೆಗೆ ಮಾತ್ರ ಸಾಧ್ಯವಾದ ಒಂದು ದರ್ಶನಶಕ್ತಿ ಕಾಳಿದಾಸನಲ್ಲಿದ್ದು, ವಸ್ತು ಸೌಂದರ‍್ಯವನ್ನು ಸುಸ್ಪಷ್ಟಮೂರ್ತರೂಪಗಳಲ್ಲಿ ಹಿಡಿದಿಡುವ ಒಂದು ಪ್ರಬಲ ಶಕ್ತಿಯೂ ವರ್ಣ ಸೌಂದರ‍್ಯದ ಮತ್ತು ಆಕೃತಿಸೌಂದರ‍್ಯದ ಬಗೆಗೆ ಒಂದು ರಾಜರುಚಿಯೂ ಕಾಳಿದಾಸನ ವಿಶಿಷ್ಟತೆಯನ್ನು ತೋರಿಸುತ್ತದೆ… ಕಣ್ಣಿನ ಆನಂದ, ಕಿವಿಯ ಆನಂದ, ಗಂಧ, ರುಚಿ, ಸ್ಪರ್ಶ, ಕಲ್ಪನೆ ಮತ್ತು ಆಸ್ವಾದದ ಒಂದು ತೃಪ್ತಿ – ಇವು ಅವನ ಕಾವ್ಯದ ಸಾಮಗ್ರಿಗಳಾಗಿವೆ. ಇದರಿಂದ ಅವನು ಅತ್ಯಂತ ಸುಂದರವಾದ ಭಾವ ಕುಸುಮಗಳನ್ನು ಮತ್ತು ಸೌಂದರ‍್ಯದ ಅಥವಾ ಚಿತ್ತದ ಆದರ್ಶಗಳನ್ನು ಅರಳಿಸಿದ್ದಾನೆ. ಅವನ ಕೃತಿಲೋಕದ ದೃಶ್ಯಗಳೆಲ್ಲವೂ ಸುಂದರ ವಸ್ತುಗಳ ಒಂದು ಸ್ವರ್ಗ; ಅಲ್ಲಿ ಪ್ರತಿಯೊಂದೂ ಈ ಮರ್ತ್ಯಲಾವಣ್ಯದ ನಿಯಮವನ್ನು ಒಪ್ಪಿಕೊಂಡಿವೆ.”[8] ಪ್ರತಿಯೊಂದನ್ನೂ ಮನೋಗೋಚರವನ್ನಾಗಿ ಮಾಡಬಲ್ಲ ಶಕ್ತಿ ಅವನಿಗಿದೆ. ಸೌಂದರ‍್ಯದ ವಿವಿಧ ತರಂಗಗಳನ್ನು ಅವನು ತೋರಿಸಿದ್ದಾನೆ. ರಘುವಂಶ ಮತ್ತು ಮಾಲವಿಕಾಗ್ನಿಮಿತ್ರದಲ್ಲಿ ಮಾನವ ಸೌಂದರ್ಯವನ್ನು, ವಿಕ್ರಮೋರ್ವಶೀಯದಲ್ಲಿ ಅಪ್ಸರ ಸೌಂದರ‍್ಯವನ್ನು, ಮೇಘದೂತದಲ್ಲಿ ಯಕ್ಷಸೌಂದರ‍್ಯವನ್ನು, ಶಾಕುಂತಲದಲ್ಲಿ ದೇವಮಾನವ ಸೌಂದರ‍್ಯವನ್ನು, ಕುಮಾರ ಸಂಭವದಲ್ಲಿ ಸೌಂದರ‍್ಯದ ಅಧಿದೇವತೆಯಾದ ಆದರ್ಶಮೂರ್ತಿಯಾದ ಜಗನ್ಮಾತೆಯಾದ ಉಮೆಯ ಸೌಂದರ‍್ಯವನ್ನು ಹಾಡಿದ್ದಾನೆ. ಈ ಎಲ್ಲ ಸೌಂದರ‍್ಯದ ನೃತ್ಯರಂಗವಾದ ಪ್ರಕೃತಿ ಸೌಂದರ‍್ಯದ ವಿವರಗಳನ್ನು ‘ಋತು ಸಂಹಾರ’ದಲ್ಲಿ ಕಂಡರಿಸಿದ್ದಾನೆ. ರಾಮಗಿರ‍್ಯಾಶ್ರಮದಿಂದ ದೂರ ಅಲಕೆಯವರೆಗೂ ವಿರಹಿ ಯಕ್ಷನು ಬೀಸಿದ ಆ ನೆನಪಿನ ಸೇತುವೆಯ ಮೇಲೆ ಪಯಣ ಹೊರಟವರಿಗೆ ಗೊತ್ತಾಗುತ್ತದೆ ಕಾಳಿದಾಸನು ಹೇಗೆ ಪ್ರಕೃತಿಯ ರಸಸ್ಥಾನಗಳ ಸೊಬಗನ್ನು ಬಣ್ಣಿಸಿದ್ದಾನೆಂಬುದು.

ಕಾಳಿದಾಸನ ಸೌಂದರ‍್ಯದೃಷ್ಟಿಯಲ್ಲಿ ನಾವು ಲಾಲಿತ್ಯದಿಂದ ಹಿಡಿದು ಭವ್ಯತೆಯವರೆಗಿನ ಹಲವು ಸೋಪಾನಗಳನ್ನು ಕಾಣಬಹುದು. ಅವನಲ್ಲಿ ಕಂಡುಬರುವ ಉನ್ನತಾದರ್ಶಗಳ ಮತ್ತು ಆಲೋಚನೆಗಳ ಒಲವು ಸೌಂದರ‍್ಯಾನುಭವ ಸಂಬಂಧಿಯಾದುದು. ಜೀವನದ ಎಲ್ಲ ಮುಖದ ಚೆಲುವನ್ನೂ ಅವನು ಕಂಡಿದ್ದಾನೆ. ಆ ಒಲವು ಎಷ್ಟರ ಮಟ್ಟಿಗೆ ಮೈದೋರಿದೆ ಎಂದರೆ, ಹಲವರು ಕಾಳಿದಾಸನ ಒಲವು ಇಂದ್ರಿಯ ಸೌಂದರ‍್ಯದಿಂದ ಪ್ರಮತ್ತವಾಗಿದೆ ಎಂದು ಹೇಳುವಷ್ಟು ದೂರ. ಕಾಳಿದಾಸನ ಸೌಂದರ‍್ಯ ದೃಷ್ಟಿ ಇಂದ್ರಿಯ ಸೌಂದರ‍್ಯದಲ್ಲಿ ರಮಿಸಿದರೂ ಅಲ್ಲಿಯೇ ವಿರಮಿಸುವುದಿಲ್ಲ. ಅದರ ಗುರಿ ದೈವೀಪರವಾದುದು; ಶಿವಮುಖವಾದುದು. ನಿಜವಾದ ಸೌಂದರ‍್ಯ ಇಂದ್ರಿಯ ನಂದನದಲ್ಲೇ ಭ್ರಮಿಸುವಂತೆ ಮಾಡುವುದಲ್ಲ; ಅದು ಶ್ರೇಯೋಮುಖವಾದ ಉದ್ಧಾರಕ ಶಕ್ತಿ. ಅವನ ದೃಷ್ಟಿಗೆ ಬಾಹ್ಯರೂಪವೇ ಸೌಂದರ‍್ಯವಲ್ಲ. ಕೇವಲ ಪ್ರೇಯಸ್ಸನ್ನು ಒಳಗೊಂಡ ರೂಪ ದೇವಮಾನ್ಯವಾಗುವುದಿಲ್ಲ. ಶ್ರೇಯಸ್ಸನ್ನು ಒಳಗೊಂಡಾಗಲೇ ಅದು ದಿವ್ಯವಾಗುತ್ತದೆ. ಶಾಕುಂತಲ ಕುಮಾರಸಂಭವಗಳ ಜೀವಾಳವೇ ಇದು. ‘ಕುಮಾರಸಂಭವ’ದಲ್ಲಿ ತನ್ನ ರೂಪಯೌವನಗಳಿಂದ ಪಿನಾಕಿಯನ್ನು ಒಲಿಸಲು ಅಸಮರ್ಥಳಾದ ಪಾರ್ವತಿ ತನ್ನ ರೂಪವನ್ನು ತಾನೇ ನಿಂದಿಸಿಕೊಂಡು,

ಆಶ್ರಯಿಸುತಾ ಸಮಾಧಿಯನಾಕೆ ತಪದಿಂದೆ
ಇಚ್ಛಿಸಿದಳಾತ್ಮರೂಪದೊಳವಂದ್ಯತೆಯ            (ಕು. ಸಂ. ೫-೨)

ತನ್ನ ರೂಪವನ್ನು ಸಫಲ ಮಾಡಬೇಕೆಂದು ಇಚ್ಛಿಸಿದಳು. ರೂಪವನ್ನು ಸಫಲ ಮಾಡುವುದು ವೇಷಭೂಷಣಗಳಿಂದ ಅಲ್ಲ; ತಪಸ್ಸಿನಿಂದ. ಯಾವಾಗ ಅವಳು ಘೋರವಾದ ತಪಸ್ಸನ್ನು ಮಾಡಿದಳೋ ಆಗ ಅವಳು ಕೃಶಾಂಗಿಯಾಗಿದ್ದರೂ, ನಿರಾಭರಣಳಾದರೂ, ನಾರುಡೆಯನ್ನುಟ್ಟರೂ – ಆ ಸೌಂದರ‍್ಯಕ್ಕೆ ಶಿವನು ಒಲಿದು ಬರುತ್ತಾನೆ. ಹೀಗೆ ತಾರುಣ್ಯದ ಸರಳ ಸೌಂದರ‍್ಯ ತಪಸ್ಸಿನಿಂದ ಶುದ್ಧವಾದ ನಂತರ ಶಾಶ್ವತವೂ, ಪೂಜ್ಯವೂ ಆಗುತ್ತದೆ. ದೇಹದ ರೂಪ ಏನಿದ್ದರೂ ಕ್ಷಣಿಕವಾದುದು, ಬಂಧನಕ್ಕೆ ಒಳಪಡಿಸುವಂಥದ್ದು. ಆದರೆ ಅದು ಶಿವಪರವಾದಾಗ, ನಿಜವಾದ ಆತ್ಮಸೌಂದರ‍್ಯದ ಹೊಳಹು ಗೋಚರಿಸುತ್ತದೆ. ಆದುದರಿಂದ ನಿಜವಾದ ಅಂತರಂಗದ ಸೌಂದರ‍್ಯವೇ ಎಲ್ಲ ಚೆಲುವಿಗೂ ಹಿರಿಯದು ಎನ್ನುವ ಅಂಶವನ್ನು ಕಾಳಿದಾಸ ಪ್ರಕಟಪಡಿಸಿದ್ದಾನೆ.

ಸದ್ಗುಣವೇ ಸೌಂದರ‍್ಯದ ಮಾಪಕವೆಂಬ ಅಭಿಪ್ರಾಯವನ್ನು ಸಂಸ್ಕೃತ ಕವಿಗಳು ಹೇಳಿದ್ದಾರೆ. ಯಾವ ವಸ್ತುವಿನಲ್ಲೆ ಆಗಲಿ ಹೊರಗೆ ಕಾಣುವ ರೂಪವೇ ಸೌಂದರ‍್ಯವಲ್ಲ. ಅದರ ಸದ್ಗುಣವೇ ನಿಜವಾದ ಚೆಲುವು. ಮಾನವಸೌಂದರ‍್ಯದ ಪ್ರಶ್ನೆ ಬಂದಾಗಲೂ ನಮ್ಮ ಸಂಸ್ಕೃತ ಕವಿಗಳು ಗಮನಕೊಟ್ಟಿರುವುದು ಚಾರಿತ್ರಶುದ್ಧಿಯ ಕಡೆಗೆ. ಚರಿತ್ರಹೀನರಾದ ವ್ಯಕ್ತಿಗಳು ಎಷ್ಟೇ ಸುಂದರವಾಗಿ ತೋರಿದರೂ, ಅವರನ್ನು ‘ಸುಂದರ’ವೆಂದು ಹೇಳಲಾಗುವುದಿಲ್ಲ. ಒಂದು ವೇಳೆ ಬಹಿರಂಗದಲ್ಲಿ ಸೌಂದರ‍್ಯವಿಲ್ಲದಿದ್ದರೂ,  ಅವರ ಗುಣವೇ ಸೌಂದರ‍್ಯಶೋಭೆಯನ್ನು ನೀಡುತ್ತದೆ. ರೂಪವನ್ನು ಕುರಿತು ‘ಚಾಣಕ್ಯ ನೀತಿ ದರ್ಪಣ’ದಲ್ಲಿ ಬರುವ ಈ ವಿವರಣೆಯನ್ನು ನೋಡಿ;

ಕೋಕಿಲಾನಾಂ ಸ್ವರೋರೂಪಂ | ಸ್ತ್ರೀಣಾಂ ರೂಪಂ ಪತಿವ್ರತಂ |
ವಿದ್ಯಾರೂಪಂ ಕುರೂಪಾಣಾಂ | ಕ್ಷಮಾರೂಪಂ ತಪಸ್ವಿನಾಂ |     (೩-೯)

ಆದರೆ ನಿಜವಾದ ಸೌಂದರ‍್ಯ ಯಾವಾಗಲೂ ಪಾಪದೂರವಾದುದೆಂದೇ ಕವಿಕಾಳಿದಾಸ ಹೇಳುತ್ತಾನೆ. ಪಾರ್ವತಿಯ ಪರಮಸೌಂದರ‍್ಯವನ್ನು ಕುರಿತು ಕವಿ ಹೀಗೇ ಹೇಳಿಸಿದ್ದಾನೆ.

‘ಪಾಪವೃತ್ತಿಯೊಳಿರದು ರೂಪತಾನೆನುವರೌ
ತದ್ವಚನವಪ್ಪುದವ್ಯಭಿಚಾರಿ ಗೌರಿ’               (ಕು.ಸಂ. ೫-೩೬)

ನಿಜವಾದ ಸೌಂದರ‍್ಯ ಎಂದಿಗೂ ಪಾಪವೃತ್ತಿಯಲ್ಲಿರದು. ಅಂತಹ ನಿರ್ಮಲವಾದ ಸೌಂದರ‍್ಯ, ಉಳಿದವರನ್ನೂ ನಿರ್ಮಲಗೊಳಿಸತಕ್ಕದು. ಪಾರ್ವತಿಯನ್ನು ಕುರಿತು :

ಕುಡಿಯ ಕೆಂಗಾಂತಿಯಿಂದೆಸೆವ ಹೆಜ್ಜೊಡರಂತೆ
ದಿವಿಜ ನದಿಯಿಂದೆಸೆವ ಗಂಗೆಯಂತೆ
ನುಡಿಯ ಸಂಸ್ಕಾರದಿಂದೆಸೆವ ಪಂಡಿತನಂತೆ
ತನು ವಿಭೂಷಿತನು ಮಗಳ ಪಿತನು.            (ಕು.ಸಂ. ೧-೨೮)

ಎಂದು ಹೇಳಿರುವಲ್ಲಿ ಮೊದಲ ಮೂರು ಪಂಕ್ತಿಗಳು ದಿವ್ಯ ಸೌಂದರ‍್ಯದ ಶಕ್ತಿಯನ್ನು ವಿವರಿಸುತ್ತವೆ. ದೀಪಶಿಖಿ ದೀಪವನ್ನು ಅಲಂಕೃತಗೊಳಿಸುವುದೂ ಅಲ್ಲದೆ ಸುತ್ತಣ ಆವರಣವನ್ನು ಬೆಳಗುತ್ತದೆ; ದಿವಿಜನದಿ ಗಗನವನ್ನು ಸುಂದರಗೊಳಿಸುವುದೂ ಅಲ್ಲದೆ ನಿರ್ಮಲಗೊಳಿಸುತ್ತದೆ; ಸರಿಯಾದ ಮಾತು ಪಂಡಿತನಿಗೆ ಶೋಭಾಕರವಾಗುವುದರ ಜೊತೆಗೆ ಸಂಸ್ಕಾರಗೊಳಿಸುತ್ತದೆ. ಸೌಂದರ್ಯ ಇಂಥ ಶಕ್ತಿಯುಳ್ಳದ್ದು. ಅದರ ನಿಜವಾದ ಲಕ್ಷಣ ನಿರ್ಮಲತ್ವ ಮತ್ತು ಮನಸ್ಸನ್ನು ಸಂಸ್ಕಾರಗೊಳಿಸುವಂಥದು.

ಸಂಸ್ಕೃತ ಕವಿಗಳ ದೃಷ್ಟಿಗೆ ಸರಸ್ವತಿ ನಿರ್ಮಲ ಸೌಂದರ‍್ಯದ ಮೂರ್ತಿ. ಸರಸ್ವತಿಯ ಶರದಭ್ರಶುಭ್ರವಾದ ನಿರ್ಮಲ ಸೌಂದರ‍್ಯವನ್ನು ಧ್ಯಾನಿಸಿ ಕವಿಗಳು ಕಾವ್ಯಸೌಂದರ‍್ಯ ಸೃಷ್ಟಿಯಲ್ಲಿ ತೊಡಗಿದ್ದಾರೆ. ರಾಜಶೇಖರನು ತನ್ನ ಕಾವ್ಯಮೀಮಾಂಸೆಯಲ್ಲಿ “ಶುಚಿಶೀಲರಿಗೆ ಸರಸ್ವತಿ ಒಲಿಯುತ್ತಾಳೆ” ಎನ್ನುತ್ತಾನೆ. ದಂಡಿ ಸರಸ್ವತಿಯನ್ನು ಕುರಿತು “ಸರ್ವಶುಕ್ಲಾಸರಸ್ವತೀ” ಎನ್ನುತ್ತಾನೆ. ಈ ಸರ್ವಶುಕ್ಲತೆಯೇ ಪರಮಸೌಂದರ‍್ಯ. ಉಪನಿಷತ್ ಋಷಿಗಳ ದರ್ಶನಕ್ಕೆ ಕಂಡಂತೆ ನಿಜವಾದ ಪರಮಸೌಂದರ‍್ಯ ಅವರ್ಣ ಮತ್ತು ಅವರ್ಣನೀಯ. ಲೋಕಸೌಂದರ‍್ಯವನ್ನು ನಮ್ಮ ಕವಿಗಳು ವರ್ಣಿಸುವಾಗ, ಇಂದ್ರಿಯಗೋಚರವಾದ ಸೌಂದರ‍್ಯದ ವರ್ಣವೈವಿಧ್ಯವನ್ನು ತೋರಿದರೂ ಸರಸ್ವತಿಯನ್ನು ‘ಸರ್ವಶುಕ್ಲಾ’ ಎಂದು ಪರಿಭಾವಿಸುವಲ್ಲಿ, ಈ ಎಲ್ಲದರ ಉಗಮ ಮತ್ತು ಸಂಗಮ ಶ್ವೇತ ಶುಭ್ರ ಆತ್ಮಸೌಂದರ‍್ಯವೇ ಎಂಬ ಭಾವನೆಯಲ್ಲಿ, ಇವರ ಸೌಂದರ‍್ಯ ದರ್ಶನ ವೇದಋಷಿದರ್ಶನದಿಂದ ದೀಪ್ತವಾದುದು ಎನ್ನಿಸುತ್ತದೆ.

* * *

 


[1] A.C. Sastry, Studies in Sanskrit Aesthetics: p. 21.

[2] ಮಹಾಭಾರತ : ಶಾಂತಿಪರ್ವದಲ್ಲಿ ‘ಮೋಕ್ಷಧರ್ಮ ಪರ್ವ (ಅಧ್ಯಾಯ ೧೮೨) –
ಅಳಸಿಂಗಾಚಾರ‍್ಯರ ಕನ್ನಡ ಅನುವಾದ. ಪು : ೭೭೯-೭೮೦.

[3] Quoted by Bhagavandas : ‘The Science of Emotions”: Chap. VII

[4] ಈ ಪ್ರಬಂಧದಲ್ಲಿ ಉದ್ದಕ್ಕೂ ಶ್ರೀ ಎಸ್.ವಿ. ಪರಮೇಶ್ವರ ಭಟ್ಟರ ‘ಕುಮಾರ ಸಂಭವ’ದ ಅನುವಾದದಿಂದ ಪದ್ಯಗಳನ್ನು ಉದ್ಧರಿಸಲಾಗಿದೆ.

[5] ಚಂದ್ರಾರವಿಂದ ರಾಜವದನಾದಯೋ ಲಕ್ಷ್ಮೀನಿವಾಸ ಸ್ಥಾನಾನಿ ಇತಿ ಪ್ರಸಿದ್ಧಿಃ – ರಘುವಂಶದ ೬೭ನೇ ಶ್ಲೋಕಕ್ಕೆ ಮಲ್ಲಿನಾಥನು ಬರೆದ ಟೀಕೆ.

[6] A.C. Sastry : Studies in Sanskrit Aesthetics : p. 153.

[7] ಅನು : ಟಿ.ಎಸ್. ವೆಂಕಣ್ಣಯ್ಯ : ಪ್ರಾಚೀನ ಸಾಹಿತ್ಯ : ರವೀಂದ್ರನಾಥ ಠಾಕೂರ್ ಪು. ೭೨.೭೩

[8] Sri Aurobindo : Kalidasa, p. 15, 16 and 20.